ಅವರು ಕಾಡಿದರು ನಿರಂತರ “ಮಹಾ ಒಗಟಾಗಿ”
- ರಘೋತ್ತಮ ಹೊ ಬ
ಚಿ.ಮೂ. ರವರನ್ನು ಚಂಪಾ ತಮ್ಮ
ಲೇಖನಿಯ ದಾಳಿಗೆ ಸಿಲುಕಿಸಿದ್ದು ಮತ್ತು ಕೆ.ಹೆಚ್. ನರಸಿಂಹಮೂರ್ತಿಯವರು ಚಂಪಾರವರನ್ನು ಪ್ರತಿದಾಳಿಗೆ ಸಿಲುಕಿಸಿದ ಸಂಧರ್ಭ ವೈಚಾರಿಕ ಅನುಸಂಧಾನಕ್ಕೆ ಇತ್ತೀಚಿನ ದಿನಗಳಲ್ಲಿ "ವಿ, ಕ" ಒದಗಿಸಿದ ಸ್ಪಷ್ಟ ವೇದಿಕೆ.
ಸ್ವಾಗತಾರ್ಹವೆಂದರೆ ಅಂತಹ ಅನುಸಂಧಾನದಲ್ಲಿ ಅಂಬೇಡ್ಕರ್ ವಿಚಾರಗಳ ಪ್ರಸ್ತಾಪವಾಗಿದ್ದು, ತನ್ಮೂಲಕ ಅವರ ವಿಚಾರಗಳ ಚರ್ಚೆಗೆ ಸೂಕ್ತ ಸಂಧಭ ಸೃಷ್ಟಿಸಿದ್ದು.
ಜಾತೀಯತೆ, ಅಸ್ಪøಶ್ಯತೆಯನ್ನು ಪ್ರಶ್ನಿಸುವ ಭರದಲ್ಲಿ ಚಂಪಾರವರು ಚಿ.ಮೂ ರವರನ್ನು "ಡಾ|| ಅಂಬೇಡ್ಕರ್ ರವರು ಮನುಸ್ಮøತಿಯನ್ನು ಸುಟ್ಟಿದ್ದು ತಪ್ಪೆ?" ಎಂದು ಪ್ರಶ್ನಿನಿಸಿದ್ದಾರೆ. ಕೆ. ಹೆಚ್. ನರಸಿಂಹಮೂರ್ತಿರವರು ಚಿ.ಮೂ ರವರನ್ನು ಸಮರ್ಥಿಸುವ ಭರದಲ್ಲಿ “ಅಂಬೇಡ್ಕರ್ ಮನೂಸ್ಮøತಿಯನ್ನು ಸುಟ್ಟರೂ ಇತರ ದಾರ್ಮಿಕ ಗ್ರಂಥಗಳನ್ನು ಅವರೇಕೆ ಸುಟ್ಟುಹಾಕಲಿಲ್ಲ?” ಎಂದು ಪ್ರಶ್ನಿಸುವ ಮೂಲಕ ಹಿಂದೂ ಧರ್ಮದ ಇತರ ಧಾರ್ಮಿಕ ಗ್ರಂಥಗಳಾದ ವೇದ, ಉಪನಿಷತ್, ಭಗವದ್ಗೀತೆಗಳ ಬಗ್ಗೆ ಅಂಬೇಡ್ಕರ್ರಿಗೆ ಗೌರವವಿತ್ತೆಂಬ ಭಾವನೆ ಬರುವಂತೆ ಮಾತಾನಾಡಿದ್ದಾರೆ. ಇದು ನಿಜಾನಾ? ಖಂಡಿತಾ ಒಪ್ಪತಕ್ಕದ್ದಲ್ಲ ವಾಸ್ತವವೆಂದರೆ ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಮನುಸ್ಮøತಿಯನ್ನು ಒಳಗೊಂಡಂತೆ ಹಿಂದೂ ಧರ್ಮದ ಎಲ್ಲಾ ಗ್ರಂಥಗಳನ್ನು, ಒಟ್ಟಾರೆ ಹಿಂದೂ ಧರ್ಮವನ್ನು ಬಿಡದೆ ಕಾಡಿದ್ದಾರೆ, ಒಂದು ರೀತಿಯ ಒಗಟಾಗಿ!
ಅವರ ಈ ಕಾಡುವಿಕೆಯ ಪ್ರಕ್ರಿಯೆಯು ದಿಡೀರನೇ ಹುಟ್ಟಿದ್ದಲ್ಲ. ಅದು ಸಮಗ್ರ ಸಂಶೋಧನೆಯ ಮೂಲಕ ಕಂಡುಕೊಂಡದ್ದು. ಅಂತಹ ಸಂಶೋಧನೆಯ ಭರದಲ್ಲಿ "ಭಾರತದಲ್ಲಿ ಜಾತಿಗಳು", "ಜಾತಿ ನಿರ್ಮೂಲನೆ", "ಅಸ್ಪøಶ್ಯರು ಯಾರು? ಅವರೇಕೆ ಅಸ್ಪøಶ್ಯರಾದರು?", "ಶೂದ್ರರು ಯಾರು?" ಎಂಬ ಕೃತಿಗಳನ್ನು ಬರೆಯುವ ಅವರು ಕಡೆಗೆ "ಹಿಂದೂ ಧರ್ಮದ ಒಗಟುಗಳು” ಎಂಬ ಕೃತಿಯಲ್ಲಿ ಹಿಂದೂ ಧರ್ಮವನ್ನು ಕುರಿತು 24 ಒಗಟುಗಳನ್ನು ಕೇಳುತ್ತಾರೆ!
ಹಾಗಿದ್ದರೆ ಅಂಬೇಡ್ಕರ್‍ರ ಈ ಕಾಡುವ ಪ್ರಕ್ರಿಯೆಗೆ ಕಾರಣವಾದರೂ ಏನಿತ್ತು? ಅದು ಯಾರದಾದರೂ ಮೇಲಿನ ವೈಯಕ್ತಿಕ ದ್ವೇಷದಿಂದಲೇ? ಅಥವಾ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಲೆ? ಖಂಡಿತ ಇಲ್ಲ. ಅಂಬೇಡ್ಕರ್‍ರ ಈ ಪ್ರಕ್ರಿಯೆಯ ಹಿಂದೆ ಎರಡು ಸಾವಿರ ವರ್ಷಗಳ
ನೋವಿನ ಇತಿಹಾಸವಿದೆ. ಇಂತಹ ಇತಿಹಾಸದಲ್ಲಿ ತನ್ನ ಜನರನ್ನು ಕ್ಷಣ ಕ್ಷಣಕ್ಕೂ ತುಳಿದಿರುವ, ಈಗಲೂ ತುಳಿಯುತ್ತಿರುವ ಬಗ್ಗೆ ನಿರಂತರ ನೋವಿತ್ತು, ದ್ವೇಷವಿತ್ತು, ಅಕ್ರೋಶವಿತ್ತು. ಇಂತಹ ನೋವೆ, ದ್ವೇಷವೇ, ಆಕ್ರೋಶವೇ ಅಂಬೇಡ್ಕರ್‍ರನ್ನು ಈ ಪ್ರಕ್ರಿಯೆಗೆ ಕೈಹಚ್ಚುವಂತೆ ಮಾಡಿದ್ದು. ಹಾಗಂತ ಇದು ಸುಲಬದ್ದಾಗಿರಲಿಲ್ಲ, ಒಂದರ್ಥದಲ್ಲಿ ಕಠಿಣತಮ ಪ್ರಕ್ರಿಯೆ. ಅಚ್ಚರಿಯ ವಿಷಯವೆಂದರೆ ಅದರಲ್ಲಿ ಅವರು ಯಶಸ್ಸು ಸಾಧಿಸಿರುವುದು.
1920ರಲ್ಲೇ ಅವರು "ಹಿಂದೂ ಸಮಾಜ ಅಸಮಾನತೆಯ ತವರು. ಅದು ಏಣಿ ಇಲ್ಲದ ಪ್ರವೇಶ ದ್ವಾರವಿಲ್ಲದ ಅನೇಕ ಮಹಡಿಗಳುಳ್ಳ ಗೋಪುರ. ಒಂದು ಮಹಡಿಯಲ್ಲಿ ಹುಟ್ಟಿದ ಜನ ಅಲ್ಲಿಯೇ ಸತ್ತು ಕೊಳೆಯ ಬೇಕು" ಎಂದು ಶ್ರೇಣಿಕೃತ ಜಾತಿವ್ಯವಸ್ಥೆಯ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗೆ ಅಭಿಪ್ರಾಯ ವ್ಯಕ್ತಪಡಿಸುವ ಅವರು ಇದಕ್ಕೆ ಕಾರಣ ಯಾರು? ಎಂದು ಹುಡುಕುತ್ತಾ ಉತ್ತರ ಕಂಡುಕೊಳ್ಳುವುದು ಮನುಸ್ಮøತಿಯಲ್ಲಿ! "ಮನು ಧರ್ಮ ಶಾಸ್ತ್ರದ ವಿಧಿಗಳಿಗಿಂತ ಹೆಚ್ಚು ಕುಖ್ಯಾತವಾದ (ಸಾಮಾಜಿಕ ಹಕ್ಕುಬಾದ್ಯತೆಯುಳ್ಳ) ವಿಧಿಗಳು ಜಗತ್ತಿನಲ್ಲಿ ಇನ್ನೆಲ್ಲಿಯೂ ಇಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ನಡೆದಿರಬಹುದಾದ ಸಾಮಾಜಿಕ ಅನ್ಯಾಯವು ಈ ಅನ್ಯಾಯದ ಮುಂದೆ ಪೇಲವವಾಗಿ ಕಾಣುತ್ತದೆ" ಎಂದು ಮನುಧರ್ಮ ಶಾಸ್ತ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವ ಅವರು "ಮನುಷ್ಯತ್ವವನ್ನು ಮನುಷ್ಯನಿಗೆ ನಿರಾಕರಿಸುವುದಷ್ಟಕ್ಕೆ ಮನು ಸುಮ್ಮನಿರುವುದಿಲ್ಲ, ಮನುಷ್ಯ ನ ವ್ಯಕ್ತಿತ್ವವನ್ನು ಉದ್ದೇಶಪೂರ್ವಕವಾಗಿ ಹೀನಾಯಗೊಳಿಸುವುದನ್ನು ಅವನು ಸಮರ್ಥಿಸುತ್ತಾನೆ" ಎನ್ನುತ್ತಾರೆ. ಮುಂದುವರಿದು ಅವರು "ಯಾವುದೇ ಸಮಾಜವು ತನ್ನ ಜನರನ್ನು ಜ್ಞಾನ ಸಂಪಾದನೆ ಮಾಡದಂತೆ ಸಾಮೂಹಿಕವಾಗಿ ತಡೆದಿರುವ ಪಾಪಕೃತ್ಯವನ್ನು ಮಾಡಿಲ್ಲ ಮತ್ತು ಜ್ಞಾನ ಸಂಪಾದನೆಯನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷಿಸುವುದನ್ನು ಯಾವುದೇ ಸಮಾಜವು ಮಾಡಿಲ್ಲ. ಇಡೀ ಜಗತ್ತಿನಲ್ಲಿ ಧಾರ್ಮಿಕ ಕಟ್ಟಳೆಗಳ ಮೂಲಕ ಜ್ಞಾನ ಸಂಪಾದನೆಯನ್ನು ನಿರಾಕರಿಸಿದ ಏಕೈಕ ವ್ಯಕ್ತಿ ಮನು" ಎನ್ನುತ್ತಾರೆ. ಮತ್ತು ಅಂತಿಮವಾಗಿ ಅಂಬೇಡ್ಕರ್ರವರು ಮನುವಿನ ಧರ್ಮವನ್ನು ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ರಹಿತ ಧರ್ಮವೆಂದು ಸಾರುತ್ತಾರೆ. ದುರದೃಷ್ಟಕರವೆಂದರೆ ನರಸಿಂಹಮೂರ್ತಿಯವರು ಇದನ್ನು ಮನು ಧರ್ಮ ಶಾಸ್ತ್ರದ ಲೋಪದೋಷಗಳೆಂದು ಪರಿಗಣಿಸಿ ಅದನ್ನು ಯಕಶ್ಚಿತ್ ಆಚಾರ ಸಂಹಿತೆ ಎಂದಿರುವುದು. ಹಾಗಿದ್ದರೆ ಇಂತಹ "ಲೋಪದೋಷಗಳು" ಮತ್ತು "ಆಚಾರ ಸಂಹಿತೆ" ಇಂತಹ ಹೀನ ಅಸಮಾನತೆಗೆ ಕಾರಣವಾಗಿರುವುದು ಸುಳ್ಳೆ? ಮತ್ತು ಅದನ್ನು ಖಂಡಿಸುವುದು, ಅಂತಿಮವಾಗಿ ಅಂಬೇಡ್ಕರ್‍ರವರು ಆ ಕಾಲದಲ್ಲೇ ಅದನ್ನು ಸುಟ್ಟಿದ್ದು ತಪ್ಪೇ?
ಇರಲಿ, ಮನು ಧರ್ಮ ಶಾಸ್ತ್ರದ ಬಗ್ಗೆ ಇಂತಹ ನಿಲುವು ತಳೆಯುವ ಅಂಬೇಡ್ಕರ್ರವರು ಹಿಂದೂ ಧರ್ಮದ ಇತರ ಧಾರ್ಮಿಕ ಗ್ರಂಥಗಳಾದ ವೇದ, ಉಪನಿಷತ್ತು ಮತ್ತು ಭಗವದ್ಗೀತೆಗಳ ಬಗ್ಗೆ ಯಾವ ನಿಲುವು ತಳೆಯುತ್ತಾರೆ? ಒಂದಂತೂ ನಿಜ ಅವರು ಅವುಗಳ ಬಗ್ಗೆ "ಯಾವುದೇ ಮಲತಾಯಿಧೋರಣೆ ತೋರಲು ಹೋಗಿಲ್ಲ"! ಮನುಧರ್ಮ ಶಾಸ್ತ್ರವನ್ನು ಯಾವ ದೃಷ್ಟಿಯಲ್ಲಿ ನೋಡಿದ್ದಾರೋ ಅದೇ ದೃಷ್ಟಿಯಲ್ಲಿ ಅವುಗಳನ್ನು ಕೂಡ ನೋಡಿದ್ದಾರೆ.! ಸಾಂಕೇತಿಕವಾಗಿ ಮನುಧರ್ಮಶಾಸ್ತ್ರವನ್ನು ಸುಟ್ಟಿದ್ದಾರೆ ಅಷ್ಟೆ.
ತಮ್ಮ "ಹಿಂದೂ ಧರ್ಮದ ಒಗಟುಗಳು" ಕೃತಿಯಲ್ಲಿ ಅಂಬೇಡ್ಕರ್ರವರು ವೇದ, ಉಪನಿಷತ್ತು, ಭಗದ್ಗೀತೆಗಳ ಮೇಲೆ ಒಗಟಿನ ರೂಪದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಒಬ್ಬ ವ್ಯಕ್ತಿ ಹಿಂದೂ ಏಕೆ ಆಗಿದ್ದಾನೆ? ವೇದಗಳು ಹುಟ್ಟಿದ್ದು ಹೇಗೆ? ವೇದಗಳನ್ನು ಮಾನವರಾಗಲಿ ದೇವರಾಗಲಿ ರಚಿಸಲಿಲ್ಲವೆಂದು ಘೋಷಿಸಿದ್ದು ಏಕೆ? ಉಪನಿಷತ್ತುಗಳು ವೇದಗಳ ಮೇಲೆಕೆ ಯುದ್ಧ ಸಾರಿದವು? ಉಪನಿಷತ್ತುಗಳನ್ನು ವೇದಗಳಿಗೆ ಹೇಗೆ ಅಧೀನವನ್ನಾಗಿ ಮಾಡಲಾಯಿತು? ಹಿಂದೂ ದೈವಗಳು ಏಳು ಬೀಳುಗಳನ್ನು ಅನುಭವಿಸುವಂತೆ ಏಕೆ ಮಾಡಿದರು? ದೇವರುಗಳನ್ನು ಪದಚ್ಯುತಗೊಳಿಸಿ
ದೇವಿಯರನ್ನೇಕೆ ಮೇಲೇರಿಸಲಾಯಿತು? ಕಲಿಯುಗವನ್ನು ಅನಂತವಾಗಿಸದಿಸಿದ್ದೇಕೆ? ರಾಮಕೃಷ್ಣ ಎಂಬ ಒಗಟುಗಳು? ಇವಿಷ್ಟು ಅಂಬೇಡ್ಕರ್ ಕೇಳುವ ಅಂತಹ ಒಗಟಿನ ರೂಪದ ಪ್ರಶ್ನೆಗಳ ಸ್ಯಾಂಪಲ್ ಅಷ್ಟೇ.
ಈ ಕೃತಿಯ ಆರಂಭದಲ್ಲೇ ಅವರು ”ವೇದಗಳು ಯೋಗ್ಯತೆ ಇಲ್ಲದ ಪುಸ್ತಕಗಳು, ಅವುಗಳನ್ನು ದೋಷರಹಿತವೆಂದಾಗಲೀ, ಪವಿತ್ರವೆಂದಾಗಲೀ ಕರೆಯಲು ಕಾರಣವೇ ಇಲ್ಲ” ಎನ್ನುತ್ತಾ ಮುಂದುವರೆದು “ನಿಜವಾಗಿಯೂ ವೇದಗಳಿಗೆ ಏನಾದರೂ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯವಿದೆಯೇ?” ಎಂದು ಪ್ರಶ್ನಿಸುತ್ತಾರೆ! ಹಾಗೆಯೇ ಅವರು ವೇದ ಮತ್ತು ಉಪನಿಷತ್ತುಗಳು ಪರಸ್ಪರ ವಿರುದ್ದ ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಾ, ಉಪನಿಷತ್ತು ಮತ್ತು ವೇದಾಂತ ಬೇರೆ ಬೇರೆ ಎಂಬ ಸ್ಪಷ್ಟೀಕರಣ ನೀಡುತ್ತಾ, ವೇದಗಳನ್ನು ಉಪನಿಷತ್ತುಗಳಲ್ಲಿ ಮಿಳಿತಗೊಳಿಸಿ ಅದನ್ನು ಉನ್ನತೀಕರಿಸುವ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲುತ್ತಾರೆ.
ಅಂತಿಮವಾಗಿ ಭಗವದ್ಗೀತೆಯನ್ನು ಪ್ರಶ್ನಿಸುವ ಅಂಬೇಡ್ಕರ್‍ರವರು “ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದೂ ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ ಅತ್ಯಂತ ಕನಿಷ್ಟವಾಗಿ ಹೇಳುವುದಾದರೆ ಬಾಲಿಶವಾಗಿದೆ. ಕೊಂದರೆ ಕೊಲೆಯಲ್ಲ, ಕೊಲೆಯಾಗುವದು ದೇಹ ಆತ್ಮವಲ್ಲ ಎಂದು ಹೇಳುವುದು ಎಲ್ಲಿಯೂ ಕೇಳರಿಯದಂತಹ ಕೊಲೆಯ ಕ್ರೂರ ಸಮರ್ಥನೆಯಾಗಿದೆ” ಎನ್ನುತ್ತಾ ಅದರ ತಾತ್ವಿಕ ತಳಹದಿಯನ್ನೇ ಅಲುಗಾಡಿಸುತ್ತಾರೆ.
ಒಟ್ಟಿನಲ್ಲಿ ಹೀಗೆ ಅಂಬೇಡ್ಕರ್ರವರು ಹಿಂದೂ ಧರ್ಮವನ್ನು ನಿರಂತರವಾಗಿ ಕಾಡುತ್ತಾರೆ. “ ತಾವಿರುವ ಕತ್ತಲೆಯನ್ನು ಅರಿಯದವರು ಬೆಳಕಿಗಾಗಿ ಎಂದೂ ಹುಡುಕಾಡುವುದಿಲ್ಲ” ಎಂದು ಆ ಕಾಡುವಿಕೆಯ ಪ್ರಕ್ರಿಯೆಗೆ ಸಮರ್ಥನೆಯನ್ನು ಕೂಡ ಕೊಡುತ್ತಾರೆ. ಅಂಬೇಡ್ಕರ್‍ರ ಈ ಪ್ರಕ್ರಿಯೆಯಲ್ಲಿ ಚಂಪಾರವರು ಕೇಳುವ ಪ್ರಶ್ನೆ ಮತ್ತು ಅದಕ್ಕೆ ನರಸಿಂಹಮೂರ್ತಿಯವರು ಕೇಳುವ ಉಪಪ್ರಶ್ನೆ ಎರಡಕ್ಕೂ ಕೂಡ ಉತ್ತರ ಸಿಕ್ಕೇ ಸಿಕ್ಕುತ್ತದೆ. ತಮ್ಮ ಜೀವನದ ಅಂತಿಮ ದಿನಗಳಲ್ಲಿ ಒಂದು ಧೃಢ ನಿರ್ಧಾರಕ್ಕೆ ಬರುವ ಅಂಬೇಡ್ಕರ್ರವರು 1956 ಅಕ್ಟೋಬರ್ 14 ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಭೌಧ್ದ ಧರ್ಮ ಸ್ವೀಕರಿಸುತ್ತಾರೆ. ಒಗಟುಗಳನ್ನು ಕೇಳಿ ತಾವೇ ಮಹಾ ಒಗಟಾಗಿ ಆ ಮಹಾ ಒಗಟಿಗೆ ಉತ್ತರ ರೂಪದಲ್ಲಿ ಬುದ್ಧನನ್ನು ತೋರಿಸುತ್ತಾರೆ. ತನ್ಮೂಲಕ ತಮ್ಮ ಕಾಡುವಿಕೆಯ ಪ್ರಕ್ರಿಯೆಗೆ ಯಾರೂ ಊಹಿಸಲಾಗದ ನಂಬಲಸಾಧ್ಯವಾದ ಒಂದು “ಅಪರೂಪದ ಅಂತ್ಯ” ಕೊಡುತ್ತಾರೆ. ಸಧ್ಯ ಅಂಬೇಡ್ಕರ್‍ರರನ್ನು ಆ “ಅಪರೂಪದ ಅಂತ್ಯ”ದ ದೃಷ್ಟಿಯಲ್ಲಿ ಮಾತ್ರ ನೋಡಬೇಕಷ್ಟೆ.
No comments:
Post a Comment