ದೇವನೂರರ ರಾಜಕೀಯ ನಿಲುವು ಕುರಿತು...
“ಕಾಂಗ್ರೆಸ್ ಎಂಬುದು ಉರಿಯುವ ಮನೆ. ಅದನ್ನು ಹೊಕ್ಕಿರಾದರೇ ಸುಟ್ಟು ಭಸ್ಮವಾಗುವಿರಿ” ಇದು ದಲಿತ ಐಕಾನ್ ಬಾಬಾಸಾಹೇಬ್ ಅಂಬೇಡ್ಕರರ ಜನಪ್ರಿಯ ಹಾಗೂ ಜನಜನಿತ ಹೇಳಿಕೆ. ಇದನ್ನು ಅಂಬೇಡ್ಕರ್ ಸುಮ್ಮನೇ ಹೇಳಲಿಲ್ಲ.! ಕಾಂಗ್ರೆಸ್ ಅಂಬೇಡ್ಕರಿಗೆ ಅವರ ಜೀವಿತಾವಧಿಯಲ್ಲಿ ಅಂತಹ ಕಿರುಕುಳ ಕೊಟ್ಟಿದೆ. 1952, 1954ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ಉಪಚುನಾವಣೆಗಳೆರಡರಲ್ಲಿಯೂ ಕಾಂಗ್ರೆಸ್ ಅವರನ್ನು ತಂತ್ರಗೈದು ಸೋಲಿಸಿದೆ. 1952ರಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಅಭ್ಯರ್ಥಿಯ ಎದುರು ಸೋತಾಗ ಅವರ ಸೋಲಿನ ಅಂತರ ಸುಮಾರು 20000ಕ್ಕಿಂತ ಕಡಿಮೆ ಮತಗಳಷ್ಟೆ. ಅಂದಹಾಗೆ ಅಂಬೇಡ್ಕರರು ಸ್ಪರ್ಧಿಸಿದ್ದ ಆ ಚುನಾವಣೆಯಲ್ಲಿ ಸುಮಾರು 50000 ಮತಗಳು ಕುಲಗೆಟ್ಟಿದವು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆ ಕಾಲದಲ್ಲಿ ಅನಕ್ಷರಸ್ಥ ದಲಿತರಲ್ಲಿ ಗೊಂದಲಮೂಡಿಸಿ ಬೇಕೆಂತಲೇ 50ಸಾವಿರ ಮತಗಳು ಕುಲಗೆಡುವಂತೆ ಮಾಡಿ ಅಂಬೇಡ್ಕರರ ಸೋಲಿಗೆ ಕಾರಣರಾಗಿದ್ದರು.
ಇನ್ನು ಸ್ವಾತಂತ್ರ ಪೂರ್ವದಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗುವಾಗಲೂ ಅಂಬೇಡ್ಕರರು ತಮ್ಮದೆ ಸ್ವಂತ ರಾಜಕೀಯ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ದ ವತಿಯಿಂದ ಸ್ಪರ್ಧಿಸಿ ಬಂಗಾಳದ ಜಯಸೂರ್ ಮತ್ತು ಕುಲ್ನ ಎಂಬ ಕ್ಷೇತ್ರದಿಂದ ಗೆದ್ದಾಗ ಅಂಬೇಡ್ಕರ್ ಎಲ್ಲಿ ಸಂವಿಧಾನ ಸಭೆಗೆ ಬಂದು ಬಿಡುತ್ತಾರೊ ಎಂದು ಅಸಹನೆಗೊಂಡ ಕಾಂಗ್ರೆಸ್ ದೇಶ ವಿಭಜನೆಯ ಸಂದರ್ಭದಲ್ಲಿ ನಿಯಮದ ಪ್ರಕಾರ ಬಹುತೇಕ ಹಿಂದೂಗಳೇ ಇದ್ದರೂ ಅಂಬೇಡ್ಕರ್ ಗೆದ್ದಿದ್ದ ಆ ಕ್ಷೇತ್ರವನ್ನು ಅಂದಿನ ಪಾಕಿಸ್ಥಾನಕ್ಕೆ (ಪೂರ್ವ ಪಾಕಿಸ್ಥಾನ, ಇಂದಿನ ಬಾಂಗ್ಲಾದೇಶ) ನೀಡಿತು. ತತ್ಪರಿಣಾಮ ಅಂಬೇಡ್ಕರರು ಪಾಕಿಸ್ಥಾನ ಸಂವಿಧಾನ ಸಭೆಗೆ ಹೋಗುವಂತಹ ಪರಿಸ್ಥಿತಿ ಉಂಟಾಗಿತ್ತು! ಆದರೆ ಹೆದರದ ಅಂಬೇಡ್ಕರ್ ಕಾಂಗ್ರೆಸ್‍ನ ಇಂತಹ ತಂತ್ರದ ವಿರುದ್ಧ ಬ್ರಿಟೀಷರಿಗೆ ಮನವರಿಕೆ ಮಾಡಿಕೊಟ್ಟ ಫಲವಾಗಿ ಅಂಬೇಡ್ಕರರು ಅಂದು ಭಾರತದ ಸಂವಿಧಾನದ ಸಭೆಗೆ ಆಯ್ಕೆಯಾಗುವಂತಾಯಿತು.
ಅಂಬೇಡ್ಕರರಿಗೆ ಕಾಂಗ್ರೆಸ್‍ನಿಂದ ಈ ಕಿರುಕುಳ ಸ್ವಾತಂತ್ರ್ಯ ಸಮಯದಲ್ಲಷ್ಟೆ ಅಲ್ಲ, 1932ರ ಕುಖ್ಯಾತ ‘ಪೂನಾ ಒಪ್ಪಂದ’ದ ಸಂದರ್ಭದಲ್ಲಿ ದಲಿತರ ಪ್ರತ್ಯೇಕ ಮತದಾನ ಪದ್ಧತಿ ಮತ್ತು ಇತರ ಅನೂಕೂಲಗಳ ವಿರುದ್ಧ ಇದೆ ಕಾಂಗ್ರೆಸ್ ಪಕ್ಷ ಗಾಂಧೀಜಿಯವರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿಸಿ ಅದು ರದ್ದಾಗುವಂತೆ ನೋಡಿಕೊಂಡಿತ್ತು ಈ ಸಂದರ್ಭದಲ್ಲಿ ಗಾಂಧೀಜಿ ಮತ್ತು ಕಾಂಗ್ರೆಸ್‍ನ ಎಲ್ಲಾ ನಡವಳಿಕೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ ಅಂಬೇಡ್ಕರ್ ಕಾಂಗ್ರೆಸ್ ವಿರುದ್ದ “ ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡÀನ್ ಟು ಅನ್‍ಟಚಬಲ್ಸ್” ಎಂಬ ಉದ್ಗ್ರಂಥವನ್ನೇ ಬರೆದರು! ಈ ನಿಟ್ಟೀನಲ್ಲಿ ಆಸಕ್ತÀರು ಈಗಲೂ ಲಭ್ಯವಿರುವ ಅಂಬೇಡ್ಕರರ ಆ ಕೃತಿಯನ್ನು ಓದಿದರೆ ಅಂಬೇಡ್ಕರರಿಗೆ ಕಾಂಗ್ರೆಸ್ ಪಕ್ಷ ಅಡಿಗಡಿಗೂ ಯಾವ ಪರಿ ಕಾಟ ಕೊಟ್ಟಿದೆ ಎಂದು ಅರ್ಥವಾಗುತ್ತದೆ. ಒಟ್ಟಾರೆ ಇಂತಹ ಕಾಂಗ್ರೆಸ್‍ನ ಇಂತಹ ನಿರಂತರ ದಲಿತ ವಿರೋಧಿ ನಿಲುವಿನ ಕಾರಣಕ್ಕಾಗಿಯೇ ಅಂಬೇಡ್ಕರರು ಅದನ್ನು ಉರಿಯುವ ಮನೆ ಎಂದದ್ದು! ಹಾಗೇಯೇ ತನ್ನ ಜನರಿಗೆ ಅಲ್ಲಿ ಪ್ರವೇಶಿಸಿದರೆ ಸುಟ್ಟು ಭಸ್ಮವಾಗುವಿರಿ ಎಂದದ್ದು.
ದುರಂತವೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರ ಮಹಾದೇವ ಅಂಬೇಡ್ಕರರ ಇಂತಹ ಕಾಂಗ್ರೆಸ್ ವಿರೋಧಿ ಧೋರಣೆಗೆ ವಿರುದ್ದವಾಗಿ “7 ಕ್ಷೇತ್ರಗಳಲ್ಲಿ ಎಎಪಿಗೆ, ಇನ್ನುಳಿದ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ತಮ್ಮ ಬೆಂಬಲ” ಎಂದು ಘೋಷಿಸಿದರು. ಈ ನಿಟ್ಟಿನಲ್ಲಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಎಂದರೆ ಅವರ ಒಟ್ಟ್ಟಾರೆ ಬಹುಮತದ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಎಂದಾಯಿತು. ಪ್ರಶ್ನೆ ಏನೆಂದರೆ ಅಂಬೇಡ್ಕರ್ ದಲಿತರಿಂದ, ಪ್ರಜ್ಞಾವಂತ ದಲಿತ ಸಾಹಿತಿಗಳಿಂದ ಇಂತಹದ್ದನ್ನು ನಿರಿಕ್ಷಿಸಿದ್ದರೆ ಎಂಬುದು? ಯಾಕೆಂದರೆ ಯಾವ ಮನೆಯನ್ನು ಅಂಬೇಡ್ಕರ್ ಉರಿಯುವ ಮನೆ ಎಂದರೊ ಅದೇ ಮನೆಗೆ ದೇವನೂರರು ಬೆಂಬಲ ಘೋಷಿಸಿದರೆ?. ಪ್ರವೇಶಿಸಿ ಎಂದರೆ?
ನಿಜ, ದೇವನೂರರು ಈ ಸಂದರ್ಭದಲ್ಲಿ ಬಿಟ್ಟ ಗುಮ್ಮ ನರೇಂದ್ರಮೋದಿಯವರದ್ದು. ನರೇಂದ್ರಮೋದಿ ಭ್ರಷ್ಟಾಚಾರ ಮಾಡಿದನಂತೆ, ಜಮೀನು ಕಡಿಮೆ ದರಕ್ಕೆ ಮಾರಿದನಂತೆ, ಗೋಧ್ರೋತ್ತÀರ ಹಿಂಸೆಗೆ ಕಾರಣನಾದನಂತೆ... ಹೀಗೆ...!!! ಪ್ರಶ್ನೆ ಏನೆಂದರೆ ಇದನ್ನೆಲ್ಲ ಕಾಂಗ್ರೆಸ್ ಪಕ್ಷದವರು ನೋಡಿಕೊಳ್ಳುತ್ತಾರೆ ಅಥವಾ ಇನ್ನಾವುದಾದರೂ ಪಕ್ಷದವರು ನೋಡಿಕೊಳ್ಳುತ್ತಾರೆ. ಇಲ್ಲಿ ದೇವನೂರರಿಗೇನು ಕೆಲಸ ಎಂಬುದು? ಇರಲಿ, ನರೇಂದ್ರಮೋದಿ ಅದು ಮಾಡಿದ, ಇದು ಮಾಡಿದ, ಹಾಗಿದ್ದರೆ ಕಾಂಗ್ರೆಸ್‍ನವರು ಏನು ಮಾಡಿದರು? ಯಾಕೆ ಅವರು ದಲಿತನೋರ್ವನನ್ನು ಕಳೆದ ಬಾರಿ ಮುಖ್ಯಮಂತ್ರಿ ಮಾಡಲ್ಲಿಲ್ಲ? ಕೇಂದ್ರ ಸರ್ಕಾರದಲ್ಲಿ ಯಾಕೆ ಅವರು ದಲಿತರ ಬಡ್ತಿ ಮೀಸಲು ಮಸೂದೆಯನ್ನು ಅಂಗೀಕರಿಸಲ್ಲಿಲ್ಲ? ದಲಿತ ಮಂತ್ರಿ ಎ. ರಾಜಾರನ್ನೇಕೆ ಕಾಂಗ್ರೇಸ್ 2-ಜಿ ತರಂಗ ಹಗರಣದಲ್ಲಿ ಬಲಿಪಶು ಮಾಡಿತು? ಖಂಡಿತ, ಕಾಂಗ್ರೆಸ್‍ನಲ್ಲಿನ ದಲಿತರಿಗೆ ಸಂಬಂಧಪಟ್ಟ ಇಂತಹ ಪ್ರಶ್ನೆಗಳಿಗೆ ದೇವನೂರರು ಉತ್ತರ ಕೊಡುವುದಿಲ್ಲ! ಸುಮ್ಮನೆ ಮೋದಿ... ಮೋದಿ... ಮೋದಿ... ಅರೇ ಮೋದಿ ಕಥೆ ಇರಲಿ. ಕಾಂಗ್ರೆಸ್ ಕಥೆÉ? ದಲಿತರನ್ನು ಕಾಂಗ್ರೆಸ್ ಯಾಕೆ ಮುಖ್ಯಮಂತ್ರಿ ಮಾಡಲ್ಲಿಲ್ಲ, ದೇವನೂರರು ಇದನ್ನು ಯಾಕೆ ಪ್ರಶ್ನಿಸುವುದಿಲ್ಲ? ಹೀಗಿರುವಾಗ ದೇವನೂರರಿಂದ ಕಾಂಗ್ರೆಸ್ ಬೆಂಬಲಿಸುವ ಇಂತಹ ಹೇಳಿಕೆ, ಲೇಖನ, ಕಥೆ, ಕವನಗಳ್ಯಾಕೆ ಎಂಬುದು?
ಖಂಡಿತ, ಕಾಂಗ್ರೆಸ್ ಪಕ್ಷವನ್ನು ಸಿಎಂ ಸ್ಥಾನವನ್ನು ನೀಡಿ ಎಂದು ದಲಿತರು ಕೇಳಲೇಬೇಕಾಗಿದೆ. ಯಾಕೆಂದರೆ ಕಳೆದ 65ವರ್ಷಗಳಿಂದ ಕಾಂಗ್ರೆಸ್ ದಲಿತರ ಮತಗಳನ್ನು ಹೋಲ್‍ಸೇಲ್ ಆಗಿ ನುಂಗಿದೆ. ಮತಬ್ಯಾಂಕ್ ಆಗಿ ಬಳಸಿಕೊಂಡಿದೆ. ಹೀಗಿರುವಾಗ ಅವರಿಗೆ ಆಯಾ ಕಾಲಮಾನದಲ್ಲಿ ಸೂಕ್ತ ಸ್ಥಾನಮಾನ ಬೇಡವೇ? ದುರಂತÀವೆಂದರೆ ದೇವನೂರರಲ್ಲಿ ಇಂಥದ್ದೊಂದು ಕಾಳಜಿಯ ಪ್ರಶ್ನೆಯೇ ಇಲ್ಲ! ಮೋದಿ ಕೋಮುವಾದಿಯಂತೆ. ಅದಕ್ಕೆ ದಲಿತರು ಕಾಂಗ್ರೆಸ್ ಅನ್ನು ಬೆಂಬಲಿಸಬೇಂಕಂತೇ! ಹಾಗಿದ್ದರೆ ಕಾಂಗ್ರೆಸ್ ಯಾವ ವಾದಿ ಎಂದು ದೇವನೂರರು ಹೇಳಬೇಕಲ್ಲವೇ ಅಥವಾ ಕೇಳಬೇಕಲ್ಲವೇ?
ನಿಜಕ್ಕೂ ಈ ನಿಟ್ಟಿನಲ್ಲಿ ದೇವನೂರರಿಗೆ ದಲಿತರಿಗೆ ಏನಾದರೂ ಮಾಡಬೇಕೆಂದಿದ್ದರೆ, ಏನಾದರೂ ನೀಡಬೇಕೆಂದಿದ್ದರೆ ಅವರು ಉತ್ತರಭಾರತದ ಕಾನ್ಷೀರಾಮ್‍ರವರನ್ನು ಗಮನಿಸಬೇಕು. ಕಾನ್ಷೀರಾಮ್‍ರವರು 1984 ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಬಿಎಸ್‍ಪಿ ಸ್ಥಾಪಿಸಿದರು. ಹಾಗೆ ಪಕ್ಷ ಸ್ಥಾಪಿಸಿದ ಕಾನ್ಷೀರಾಮ್‍ಜೀ ದೇವನೂರರ ಹಾಗೆ ತಮ್ಮ ಬೆಂಬಲ ಕಾಂಗ್ರೆಸ್‍ಗೆ ಎಂದು ಘೋಷಿಸಲಿಲ್ಲ. ಬದಲಿಗೆ ಆ ಪಕ್ಷದ ಮತ ಬ್ಯಾಂಕ್ ಅನ್ನು ಕುಗ್ಗಿಸುತ್ತಾ, ಬಿಎಸ್‍ಪಿಯ ಮತ ಬ್ಯಾಂಕ್ ಏರಿಸುತ್ತಾ ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ರಾಜ್ಯವಾಳಿದರು! ಅಂದಹಾಗೆ ನಮ್ಮ ದೇವನೂರರ ಹಾಗೆ “ಸರ್ವೊದಯ ಕರ್ನಾಟಕ ಪಕ್ಷ” ಎಂಬ ಪಕ್ಷ ಕಟ್ಟಿಯೂ “ನಮ್ಮ ಬೆಂಬಲ ಕಾಂಗ್ರೆಸ್‍ಗೆ” ಎಂದು ಕಾನ್ಷೀರಾಮ್‍ರವರು ಕುಳಿತಿದ್ದರೆ? ದಲಿತರು ರಾಜ್ಯವಾಳಲು ಸಾಧ್ಯವಿತ್ತೆ? ಮಾಯಾವತಿ ಪ್ರಧಾನಿ ಸ್ಥಾನಕ್ಕೆ ಬಿಂಬಿತವಾಗಲು ಸಾಧ್ಯವಿತ್ತೆ? ಯಾರಿಗÉ್ಗೂತ್ತು ಅತಂತ್ರ ಲೋಕಸಭೆಯಾದರೆ ಮಾಯಾವತಿಯವರು ಪ್ರಧಾನಿಯಾದರೂ ಆಗಬಹುದು, “ನನ್ನ ಜನ ಈ ದೇಶದ ಆಳುವ ವರ್ಗವಾಗಬೇಕು” ಎಂಬ ಅಂಬೇಡ್ಕರರ ಕನಸು ಕೂಡ ನನಸಾಗಬಹುದು.
ಈ ನಿಟ್ಟಿನಲ್ಲಿ ಹೇಳುವುದಾದರೆ ದೇವನೂರ ಮಹಾದೇವರಿಗೆ ಕಾನ್ಷೀರಾಮ್‍ಜೀ ತೋರಿಸಿದ ಅಂತಹ ರಾಜಕೀಯ ಮಾದರಿಯ ದಾರಿ ಮುಕ್ತವಾಗಿದೆ. ಅದು ಬಿಟ್ಟು “ಮೋದಿಗೆ ಓಟ್ ಹಾಕ್ಬೇಡಿ, ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ, ಕಾಂಗ್ರೆಸ್ ಬೆಂಬಲಿಸಿ” ಎಂಬ ದುರ್ಬಲ ಹೇಳಿಕೆ ಕೊಟ್ಟರೆ? ದಲಿತರು ಸಬಲರಾಗುವುದು ಯಾವಾಗ? ಸಿಎಂ, ಡಿಸಿಎಂ ಆಗುವುದು ಯಾವಾಗ? “ಅಲ್ರೀ, 65 ವರ್ಷಗಳಿಂದ ಕಾಂಗ್ರೆಸ್‍ಗೆ ದಲಿತರು ಬೆಂಬಲ ಕೊಟ್ಟು ಕೊಟ್ಟು ಸಾಕ್‍ಸಾಕಾಗಿ ಹೋಗಿದೆ. ಆದ್ರೇ ಕಾಂಗ್ರೆಸ್ ದಲಿತರಿಗೇನು ನೀಡಿದೆ?” ಅಂತ ದೇವನೂರರು ಪ್ರಶ್ನಿಸಬಾರದೆ? ಬದಲಿಗೆ ಮೋದಿಯ ವಿರುದ್ದ ತುತ್ತೂರಿಗೆ ನಿಂತರೆ? ಅಂದಹಾಗೆ ಅದನ್ನು ಮಾಡಬೇಕಾದವರು ಯಾರು? ದಲಿತ ಸಾಹಿತಿಗಳೊ ಯಾ ಕಾಂಗ್ರೆಸ್ ವಕ್ತಾರರೋ
ಖಂಡಿತ, ಬೇರೆ ಸಾಹಿತಿಗಳು ಹೀಗೆ ಕಾಂಗ್ರೆಸ್ ಬೆಂಬಲಿಸಿ ಎಂದಾಗ ಅದರಲ್ಲಿ ಯಾವ ದೋಷವೂ ಇರುವುದಿಲ್ಲ. ಯಾಕೆಂದರೆ ಮುಂದುವರಿದ ಜಾತಿಗಳ ಅಂತಹ ಸಾಹಿತಿಗಳಿಗೆ ಅಂತಹ ಸಾಮಾಜಿಕ ಜವಾಬ್ದಾರಿಗಳಾವುವೂ ಇರುವುದಿಲ್ಲ. ಆದರೆ ದೇವನೂರ ಮಹದೇವರಂತಹ ದಲಿತ ಸಾಹಿತಿಗೆ? ಅನ್ಯಾಯ, ಅಕ್ರಮಕ್ಕೊಳಾಗುತ್ತಿರುವ, ನಿರಂತರ ಅಸ್ಪøಶ್ಯತೆಯ ನೋವನ್ನು ಅನುಭವಿಸುತ್ತಿರುವ ದಮನಿತ ಸಹೋದರರನ್ನು ಮೇಲೆತ್ತುವ ಜವಾಬ್ದಾರಿ ಇದೆ. ಎಷ್ಟೋ ಜನ ದಲಿತ ವಿದ್ಯಾವಂತರು “ಎಲ್ಲವನ್ನು ನಮ್ಮ ಮಹಾದೇವಣ್ಣ ನೋಡ್ಕತ್ತಾನೆ” ಎಂದು ಸುಮ್ಮನಾಗುವವರೂ ಇದ್ದಾರೆ. ಆದರೆ ಅದೇ ಮಹಾದೇವಣ್ಣ ವಿನಾಕಾರಣ ಸಮುದಾಯಕ್ಕೇನೂ ಲಾಭವಿಲ್ಲದೆ ಕಾಂಗ್ರೆಸ್ ಬೆಂಬಲಿಸಿ ಎಂದರೆ? ಈ ನಿಟ್ಟಿನಲ್ಲಿ ದೇವನೂರರೇ ಇರÀಲಿ, ಮತ್ಯಾರೇ ದಲಿತ ಕವಿಗಳಾಗಲಿ, ಕಾಂಗ್ರೆಸ್ ಬೆಂಬಲಿಸಿ ಎಂದರೆ ಅಂತಹವರು ದಲಿತ ಸಮುದಾಯದ ಗೌರವಾನ್ವಿತ ಸಾಹಿತಿಗಳಾಗುವುದಿಲ್ಲ. ಬದಲಿಗೆ ಕ್ಷುದ್ರ ರಾಜಕಾರಣಿಗಳಾಗಿ ಬಂಡವಾಳಶಾಹಿ ಕಾಂಗ್ರೆಸ್‍ನ ಏಜೆಂಟರಾಗುವ ಅಪಾಯವಿದೆ.
-ಆರ್.ಹೊಬ.
No comments:
Post a Comment