Sunday, 11 May 2014

  ವಿಧಾನ ಪರಿಷತ್ ಚುನಾವಣೆ: ಮೀಸಲಾತಿ ಏಕಿಲ್ಲ?
                                     -ರಘೋತ್ತಮ ಹೊ.ಬ
   
  ಮತ್ತೊಮ್ಮೆ  ಚುನಾವಣೆಗಳು  ಬಂದಿವೆ. ಅಂದಹಾಗೆ ಈ ಚುನಾವಣೆ ನಡೆಯುತ್ತಿರುವುದು  ರಾಜ್ಯ ವಿಧಾನಪರಿಷತ್ತಿಗೆ. ರಾಜ್ಯ ವಿಧಾನಸಭೆಯಿಂದ ಮತ್ತು ವಿವಿಧ ಮತದಾರ ಸಮೂಹ ಕ್ಷೇತ್ರಗಳಿಂದ  ಈ ಚುನಾವಣೆ ನಡೆಯುತ್ತಿದೆ. ದುರಂತವೆಂದರೆ ಈ ಚುನಾವಣೆಯಲ್ಲಿ ಪರಿಶಿಷ್ಟಜಾತಿ  ಮತ್ತು ವರ್ಗಗಳ ಪಾತ್ರ  ಬರೀ ಮತದಾನ ಮಾತ್ರ! ಸ್ಪರ್ಧೆ? ಹೌದು, ಪರಿಷತ್ತಿನ ಈ ಚುನಾವಣೆಯಲ್ಲಿ ಪರಿಶಿಷ್ಟಜಾತಿ/ವರ್ಗದ ಅಭ್ಯರ್ಥಿಗಳನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಕ್ಷಮಿಸಿ, ಗೆಲ್ಲುವವರು ಮಾತ್ರ ಯಾರು ಇರಲಿಕ್ಕಿಲ್ಲ! ಏಕೆಂದರೆ “ಪರಿಶಿಷ್ಟರು”  ಅವರೂ ಕೂಡ ಸ್ಪರ್ಧಿಸಿದ್ದಾರೆ ಅವರನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಆಯ್ಕೆಮಾಡಬೇಕು  ಎಂಬ ಸಾಮಾಜಿಕ ನ್ಯಾಯದ ಮನಸ್ಥಿತಿಗೆ  ಇನ್ನೂ ಈ ದೇಶದ “ಸಾಮಾನ್ಯ” ಜನವರ್ಗ ಬಂದಿಲ್ಲ ಅದಕ್ಕೆ.
 
  ಹಾಗಿದ್ದರೆ ಪರಿಶಿಷ್ಠರು  ವಿಧಾನ ಪರಿಷತ್ತಿಗೆ ಆಯ್ಕೆಯಾಗುವುದು ಬೇಡವೆ? ಯಾಕೆಂದರೆ   ರಾಜ್ಯ ಶಾಸಕಾಂಗದಲ್ಲಿ ಒಬ್ಬ ವಿಧಾನಸಭೆಯ ಸದಸ್ಯನಿಗೆ ಎಷ್ಟು ಹಕ್ಕು ಅಧಿಕಾರ ಇರುತ್ತದೆಯೋ ಅಷ್ಟೆ  ಹಕ್ಕು ಆಧಿಕಾರ ಪರಿಷತ್ತಿನ ಆ ಸದಸ್ಯನಿಗೂ ಇದೆ. ಇರಬಹುದು ಕೆಲವು ಹಕ್ಕು ಅಧಿಕಾರಗಳು ಅಂದರೆ ಸರ್ಕಾರ ಬೀಳಿಸುವ  ಅಥವಾ ಉಳಿಸುವ ಹಾಗೆಯೇ ಕೆಲವು ಹಣಕಾಸು ಮಸೂದೆಗಳನ್ನು ಅಂಗೀಕರಿಸುವ ಅಧಿಕಾರಗಳು ಇಲ್ಲದಿರಬಹುದು. ಆದರೆ?  ಪರಿಷತ್ತಿನ ಸದಸ್ಯನೊಬ್ಬ ಶಾಸಕಾಂಗದ ಒಳಗೆ ಅಕ್ಷರಶಃ ಜನಪ್ರತಿನಿಧಿಯಾಗಬಲ್ಲ, ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ಹೇಳಬಲ್ಲ, ಅವರ ನೋವಿಗೆ ದನಿಯಾಗಬಲ್ಲ. ಹಾಗೆಯೇ ಆಡಳಿತ ವ್ಯವಸ್ಥೆಯ ಮೇಲೆ  ತನ್ನದೇ ಆದ ನಿಯಂತ್ರಣವನ್ನು ಸಹ ಆತ ಹೊಂದಬಲ್ಲ.  ಸಾಲದಕ್ಕೆ ಆತ ಮಂತ್ರಿ, ಮುಖ್ಯಮಂತ್ರಿ ಕೂಡ ಆಗ ಬಲ್ಲ!
     
  ಇಷ್ಟು ಹೇಳಿದ ಮೇಲೆ ಮುಗಿದುಹೋಯಿತು. ಪರಿಷತ್ತಿನ ಸದಸ್ಯನ ಅಧಿಕಾರ ವ್ಯಾಪ್ತಿ ಏನು ಎಂಬುದಕ್ಕೆ. ಅಂದಹಾಗೆ ಅಂತಹ ಸದಸ್ಯ  ಮೇಲ್ಜಾತಿ, ಮೇಲ್ವರ್ಗಕ್ಕೆ ಸೇರಿದವನಾದರೆ?(ಬಹುತೇಕರು ಅದೇ ವರ್ಗದವರೇ!) ಖಂಡಿತ, ಆತ ಹೇಳುವುದು ಅಥವಾ  ಪ್ರಶ್ನೆ ಕೇಳುವುದು ಆ ತನ್ನ ಮೇಲ್ಜಾತಿ, ಮೇಲ್ವರ್ಗದ  ಜನರ ಪರ ಮಾತ್ರ.  ಜಾತಿ ಎಂಬ ರೋಗಗ್ರಸ್ತ  ಈ ಭಾರತದಲ್ಲಿ  ಮೇಲ್ಜಾತಿ ಸದಸ್ಯನೊಬ್ಬ ಸಮಾಜದ ಎಲ್ಲಾ ವರ್ಗದ ಪರ ನಿಲ್ಲುತ್ತಾನೆ ಎಂದರೆ ಅದನ್ನು ನಂಬಲಿಕ್ಕೆ  ಪರಿಶಿಷ್ಟರೇನು ಗುಗ್ಗುಗಳಲ್ಲ.  ಈ ನಿಟ್ಟಿನಲಿ ಪರಿಶಿಷ್ಟ ಜಾತಿ/ವರ್ಗದವರಿಗೆ ವಿಧಾನ ಪರಿಷತ್ತಿನಲ್ಲೂ ಮೀಸಲಾತಿ ಜಾರಿಯಾಗಬೇಕು ತನ್ಮೂಲಕ ಅವರ ಪರ ದನಿ ಎತ್ತುವವರಿಗೆ ಪರಿಷತ್ತಿನಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕಷ್ಟೆ.
                                     
                                      

No comments:

Post a Comment