ದಲಿತರು ಮತ್ತು ಬಾಳಾ ಠಾಕ್ರೆ
-ರಘೋತ್ತಮ ಹೊ.ಬ
ಬಾಳಾಠಾಕ್ರೆಯನ್ನು ಎಲ್ಲರೂ ಮುಸ್ಲಿಂ ವಿರೋಧಿ, ಬಿಹಾರಿಗಳ ವಿರೋಧಿ, ಕನ್ನಡಿಗರ ವಿರೋಧಿ ಹಾಗೆ ಹೀಗೆ ಎಂದೇ ಬಿಂಬಿಸುತ್ತಾರೆ. ಆದರೆ ದಲಿತ ವಿರೋಧಿ? ಠಾಕ್ರೆಯೊಳಗಿದ್ದ ಆ ಹಿಂದೂ ಸಾಮ್ರಾಜ್ಯ ಶಾಹಿಯ ಆ ಹಮ್ಮು? ಅಸ್ಪøಶ್ಯತಾಚರಣೆಯ ಆ ಹೆಪ್ಪುಗಟ್ಟಿದ ರಕ್ತ? ಹೌದು, ಮುಂಬೈನಲ್ಲಿ ಇನ್ನಿಲ್ಲವಾದ ಬಾಳಾಠಾಕ್ರೆ (ಕೆಲವರು ಹೇಳುವ ಹಾಗೆ ‘ಹುಲಿ’)ಯ ಬೇಟೆಯ ಪ್ರಮುಖ ಬಲಿಪಶುಗಳು ದಲಿತರು.Infact ದಲಿತರನ್ನು violent ಆಗಿ ವಿರೋಧಿಸಲೆಂಬಂತೆಯೇ ಬಾಳಾಠಾಕ್ರೆ ತನ್ನ ಶಿವ ’ಸೇನೆ’ ಕಟ್ಟಿದ್ದು!ಹೌದು, 70 ರ ದಶಕದಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್(ದಲಿತ ಚಿರತೆಗಳು) ಕಾರ್ಯಕರ್ತರಿಗೂ, ಶಿವಸೇನೆಯ ಕಾರ್ಯಕರ್ತರಿಗೂ ನಡೆದ deadly gangwarಗಳು ಠಾಕ್ರೆಯ ರಕ್ತ ಸಿಕ್ತ ರಾಜಕಾರಣದ ಪ್ರಾರಂಭವಷ್ಟೆ. 1974ರಲ್ಲಿ ದಲಿತ ನಾಯಕ ಭಾಗವತ್ ಜಾಧವ್‍ರನ್ನು ಕ್ರೂರವಾಗಿ ಕೊಲ್ಲಿಸುವ ಮೂಲಕ ಠಾಕ್ರೆಯ ಈ ಅಧ್ಯಾಯ ಪ್ರಾರಂಭವಾಯಿತು. ಅದು ಎಂತಹ ಅಧ್ಯಾಯವೆಂದರೆ ದಲಿತ ಪ್ಯಾಂಥರ್ಸ್ ಮತ್ತು ಶಿವಸೇನೆಯ ಕಾರ್ಯಕರ್ತರು ಮುಂಬಯಿಯ ಬೀದಿಬೀದಿಗಳಲ್ಲಿ ಚಾಕು, ಕಲ್ಲು ತೂರಾಟದ ಮೂಲಕ ಪರಸ್ಪರ ಹಿಂಸಾತ್ಮಕವಾಗಿ ಕಾದಾಡುವ ಮಟ್ಟಕ್ಕೆ ಇಳಿಯುವ ಮಟ್ಟಿಗೆ. ಹೆಸರು ಹೇಳಲಿಚ್ಚಿಸದ ಆ ಕಾಲದ ದಲಿತ ಮುಖಂಡರೊಬ್ಬರು ಹೇಳುವ ಹಾಗೆ “ಆ ಕಾಲದಲ್ಲಿ ದಲಿತ ಪ್ಯಾಂಥರ್ಸ್ ಮತ್ತು ಶಿವಸೇನೆಯ ಈ ಕಾದಾಟಕ್ಕೆ ಮುಂಬೈ ಮಹಾನಗರ ಕೆಲದಿನಗಳ ಮಟ್ಟಿಗೆ ಅಕ್ಷರಶಃ ಸ್ತಬ್ಧವಾಗಿತ್ತು! ಭಗವತ್ ಜಾಧವರ ಸಾವಿಗೆ ಸೇಡು ತೀರಿಸಿಕೊಳ್ಳಲು ಕಾದಿದ್ದ ದಲಿತಪ್ಯಾಂಥರ್ಸ್ ಹುಡುಗರು ಇಡೀ ಮುಂಬೈ ನಗರವನ್ನೇ ತಮ್ಮ ವಶಕ್ಕೆ ಪಡೆದಿದ್ದರು”! ಈ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರ ಬಾಬಾಸಾಹೇಬ್ ಅಂಬೇಡ್ಕರರ “ಹಿಂದೂ ಧರ್ಮದ ಒಗಟುಗಳು” ಕೃತಿಯನ್ನು ಪ್ರಕಟಿಸಲು ಮುಂದಾದಾಗ ಉರಿಯುವ ಬೆಂಕಿಗೆ ತುಪ್ಪಸುರಿಯಲೆಂಬಂತೆ ಠಾಕ್ರೆ ಅದರ ವಿರುದ್ಧವೂ ದನಿ ಎತ್ತಿದ್ದ! ರೊಚ್ಚಿಗೆದ್ದ ಪ್ಯಾಂಥರ್ಸ್ ಹುಡುಗರು ಠಾಕ್ರೆಯ ವಿರುದ್ಧ ಬುಸುಗುಡಲಾರಂಭಿಸಿದ್ದರು. ಖಂಡಿತ, ಆ ಸಂಧರ್ಭದಲ್ಲಿ ಹೆಚ್ಚು ಕಮ್ಮಿಯಾಗಿದ್ದಿದ್ದರೆ ಪರಸ್ಪರ ಬಣದ ಸಾವಿರಾರು ಕಾರ್ಯಕರ್ತರು, ನಾಗರೀಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು. ಈ ಸಮಯದಲ್ಲಿ “ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ನಾವು ಇಂತಹದಕ್ಕೆ ಅವಕಾಶ ಕೊಡಬಾರದು” ಎಂದು ದಲಿತ ಮುಖಂಡರುಗಳು ಠಾಕ್ರೆಯನ್ನು ಕುದ್ದು ಭೇಟಿಮಾಡಿ ಹೇಳಿದಾಗಲೆ ಪರಿಸ್ಥಿತಿ ತಿಳಿಯಾದದ್ದು.
ಅಂದಹಾಗೆ ದಲಿತ ಚಳುವಳಿಯ ಕಾರ್ಯಕರ್ತರ ಮೇಲೆ, ಬಾಬಾಸಾಹೇಬ್ ಅಂಬೇಡ್ಕರರ ಮೇಲೆ ಠಾಕ್ರೆಯ ಸಿಟ್ಟು ಇದಿಷ್ಟಕ್ಕೆ ಕಮ್ಮಿಯಾಗಲಿಲ್ಲ. 1980 ರ ಸಮಯದಲ್ಲಂತೂ ದಲಿತರ ಮನೆಗಳ ಮೇಲೆ ದಾಳಿ ಮಾಡುವಂತೆ, ಕಂಡಕಂಡಲ್ಲಿ ಸುಡುವಂತೆ ಠಾಕ್ರೆ ತನ್ನ ಕಾರ್ಯಕರ್ತರಿಗೆ ಅಜ್ಞಾಪಿಸಿದ. ದುರಂತವೆಂದರೆ ಅಂದಿನ ಆಡಳಿತರೂಢ ಕಾಂಗ್ರೆಸ್ ಠಾಕ್ರೆಯ ಇಂತಹ ಹೀನ ಕೃತ್ಯಗಳಿಗೆಲ್ಲ ಬೆಂಗಾವಲಾಗಿತ್ತು!
ಇನ್ನು ಮರಾಠವಾಡ ವಿವಿಗೆ ಅಂಬೇಡ್ಕರ್ ಹೆಸರಿಡಬೇಕೆಂದು ನಡೆಸಿದ ಹೋರಾಟವಂತೂ ಎಂಥವರನ್ನು ಬೆಚ್ಚಿಬೀಳಿಸುವಂಥದ್ದು. ಯೂನಿವರ್ಸಿಟಿಯೊಂದಕ್ಕೆ ಹೆಸರು ಇಡುವುದೇನೋ ದೊಡ್ಡ ಕೆಲಸವಲ್ಲ. ಆದರೆ ಬಾಳಾಠಾಕ್ರೆ ದಲಿತರ ಇಂತಹ ಆತ್ಮಗೌರವದ ಬೇಡಿಕೆಯ ವಿರುದ್ಧವೂ ಯುದ್ಧ ಸಾರಿದ. ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂಬ ಹೆಸರಿಡಬಾರದೆಂದು ಖಂಡತುಂಡವಾಗಿ ವಿರೋಧಿಸಿ ಚಳುವಳಿಯನ್ನು ಠಾಕ್ರೆ ವಿಷಮಗೊಳಿಸಿದ. 1984ರ ಸಮಯದಲ್ಲಂತೂ ವಿಧರ್ಭ ಪ್ರಾಂತ್ಯದ ಸಾವಿರಾರು ದಲಿತರ ಗುಡಿಸಲುಗಳು ಠಾಕ್ರೆಯ ಗೂಂಡಾಗಳ ದಾಳಿಗೆ ಸುಟ್ಟು ಭಸ್ಮವಾದವು. ಲಕ್ಷಾಂತರ ದಲಿತ ರೈತರ ಬೆಳೆಗಳು ಕ್ಷಣದಲ್ಲೇ ನಾಶವಾದವು. ಠಾಕ್ರೆಯ ದಲಿತ ವಿರೋಧಿ, ದೌರ್ಜನ್ಯದ ಆದೇಶವನ್ನು ಅವನ ಕಾರ್ಯಕರ್ತರು ಚಾಚೂ ತಪ್ಪದೆ ಪಾಲಿಸಿದ್ದರು!
Infact ಠಾಕ್ರೆಯ ಪಕ್ಷದ ಚಿಹ್ನೆ ‘ಹುಲಿ’. ಠಾಕ್ರೆ ಇದನ್ನು ಆರಿಸಿದ್ದು ಕೂಡ ದಲಿತ ಪ್ಯಾಂಥರ್ಸ್‍ನ ಚಿರತೆ ಚಿಹ್ನೆಗೆ ವಿರುದ್ಧವಾಗಿ! ದಲಿತರು ಚಿರತೆಗಳಾದರೆ ನಾವು ಹುಲಿಗಳೆಂದು ಆತ ಅಬ್ಬರಿಸಿದ. ಇಂತಹ ಅಬ್ಬರಿಸುವವನ ಪಾಲಿಗೆ 1995 ರಲ್ಲಿ ಆ ರಾಜ್ಯದ ಅಧಿಕಾರ ಕೂಡ ಬಂತು. ಸಾಮಾಜಿಕ ಪೋಲಿಸರಿಗೆ ಗವರ್ನಮೆಂಟ್ ಪೋಲೀಸ್ ಕೂಡ ಸಿಕ್ಕರೆ? ಹೌದು, 1997 ರಲ್ಲಿ ಶಿವಸೇನೆ - ಬಿಜೆಪಿ ನೇತೃತ್ವದ ಸರ್ಕಾರ ಮುಂಬಯಿಯ ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಸಶ್ತ್ರಾಸ್ತ್ರ ರಹಿತ ಅಮಾಯಕ 10 ಜನ ದಲಿತರನ್ನು ಗುಂಡಿಕ್ಕಿ ಕೊಲ್ಲಿಸಿತು. 30ಜನರು ತೀವ್ರವಾಗಿ ಗಾಯಗೊಂಡರು. ಅದರಲ್ಲಿ ಮಕ್ಕಳೂ, ಮಹಿಳೆಯರೂ ಇದ್ದರೆಂದರೆ ಠಾಕ್ರೆಯ ಪಾತಕತನವನ್ನು ಯಾರಾದರೂ ಊಹಿಸಬಹುದು! ಸಾಲದಕ್ಕೆ ಈ ಸಮಯದಲ್ಲಿ ಠಾಕ್ರೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ ಸವರ್ಣೀಯರ ವಿರುದ್ಧ ದಾಖಲಾಗಿದ್ದ 1,100 ಕ್ಕೂ ಹೆಚ್ಚು “ದಲಿತ ದೌರ್ಜನ್ಯದ ಪ್ರಕರಣ”ಗಳನ್ನು ವಾಪಸ್ ತೆಗೆಸಿದ. ಆ ಮೂಲಕ ದೌರ್ಜನ್ಯ ಕೋರರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ!
ಖಂಡಿತ, ಠಾಕ್ರೆಯ ಇಂತಹ ದಲಿತ ವಿರೋಧಿ ಕೃತ್ಯಗಳನ್ನು ಹೇಳುತ್ತಾ ಹೋದರೆ ಎಂತಹವರ ಎದೆಯೂ ನಡುಗುತ್ತದೆ. ಅಂದಹಾಗೆ ಠಾಕ್ರೆಯ ಇಂತಹ ‘ಸಾಧನೆ’ಗಳನ್ನು ಯಾವ ಪತ್ರಿಕೆಯಾಗಲೀ, ಟಿವಿಯಾಗಲೀ, facebook ಆಗಲೀ ಮುಚ್ಚಿಡಲು ಸಾಧ್ಯವಿಲ್ಲ. ಯಾಕೆಂದರೆ ಅದೆಲ್ಲ ಮಹಾರಾಷ್ಟ್ರದ ಪ್ರತಿಯೊಬ್ಬ ದಲಿತನಿಗೂ ತಿಳಿದ open truth. ಸ್ವತಃ ಅಂಬೇಡ್ಕರರ ಮೊಮ್ಮಗ ಪ್ರಕಾಶ್ ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ “1970-80 ರ ಸಮಯದ ದಲಿತ ಪ್ಯಾಂಥರ್ಸ್- ಶಿವಸೇನೆಯ ನಡುವಿನ ಯುದ್ಧ ಅಕ್ಷರಶಃ ಕ್ರೂರವಾದದ್ದು. ಸಹಸ್ರಾರು ಮುಗ್ಧ ದಲಿತರು ಈ ಸಂಧರ್ಭದಲ್ಲಿ ಮಾರಣಹೋಮವಾಗಬೇಕಾಯಿತು” ಎನ್ನುತ್ತಾರೆ. ಈ ನಿಟ್ಟಿನಲಿ ದಲಿತರ ವಿರುದ್ಧ ಇಂತಹ ಹಿಂಸಾತ್ಮಕ ದಂಗೆ ನಡೆಸಿದ, ಅಂತಹ ಹಿಂಸೆಯಲ್ಲಿ ಮುಸ್ಲೀಮರು, ಬಿಹಾರಿಗಳು, ಕನ್ನಡಿಗರು ಸೇರಿದಂತೆ ಬೇರೆ ಬೇರೆ ಸಂಧರ್ಬದಲ್ಲಿ ಮಹಾರಾಷ್ಟ್ರದ ಪ್ರತಿಯೊಬ್ಬರನ್ನೂ ಕಾಡಿದ ಬಾಳಾಠಾಕ್ರೆ ಖಂಡಿತ ಕ್ಷಮೆಗೆ ಅರ್ಹನಲ್ಲ. ಇಂತಹದ್ದೆನ್ನಲ್ಲ ನೋಡಿದರೆ ಎಲ್ಲೋ ಒಂದೆಡೆ ಬಾಬಾಸಾಹೇಬ್ ಅಂಬೇಡ್ಕರರ ಸಿಧ್ಧಾಂತವನ್ನು ವಿಫಲಗೊಳೀಸಲೆಂದೇ ಠಾಕ್ರೆ ಮಹಾರಾಷ್ಟ್ರದಲ್ಲಿ ಈ ಥರ ಶುರುವಚ್ಚಿಕೊಂಡನೆನಿಸುತ್ತದೆ.
ಅಂದಹಾಗೆ ಇತ್ತೀಚೆಗೆ ಕೂಡ ಠಾಕ್ರೆ ತನ್ನ ಇಂತಹ ದಲಿತ ವಿರೊಧಿತನವನ್ನು ಬಿಟ್ಟಿರಲಿಲ್ಲ. ಮುಂಬೈನ ದಾದರ್‍ನ ರೈಲು ನಿಲ್ದಾಣಕ್ಕೆ “ ಚೈತ್ಯಭೂಮಿ ನಿಲ್ದಾಣ’ ಎಂದು ಹೆಸರಿಡಬೇಕೆಂದು ದಲಿತರು ಒತ್ತಾಯಿಸಿದಾಗ ಠಾಕ್ರೆ ಹೇಳಿದ್ದೇನು ಗೊತ್ತೇ? “ದಾದರ್ ರೈಲು ನಿಲ್ದಾಣದ ಹೆಸರು ದಾದರ್ ಆಗಿಯೇ ಮುಂದುವರಿಯಲಿದೆ. ಹೆಸರು ಬದಲಾಯಿಸುವುದರಿಂದ ನಿಮ್ಮ(ದಲಿತ)ಜೀವನದ ಮೇಲೆ ಏನು ಪರಿಣಾಮ ಉಂಟಾಗುತ್ತದೆ?” ಎಂದು. ಇದಕ್ಕೆ ಆರ್.ಪಿ.ಐ. ನಾಯಕ ಜೋಗೇಂದ್ರ ಕಾವಡೆ ಠಾಕ್ರೆಯನ್ನು ಅಷ್ಟೆ ಖಾರವಾಗಿ “ಹಾಗಿದ್ದರೆ ನೀವು ಔರಂಗಾಬಾದ್ ಅನ್ನು ಸಾಂಬಾಜಿನಗರ ಎಂತಲೂ, ಮುಂಬೈನ ವಿಕ್ಟೋರಿಯಾ ಟರ್ಮಿನಸ್ ( ರೈಲು ನಿಲ್ದಾಣ)ಅನ್ನು ಛತ್ರಪತಿ ಶಿವಾಜಿ ಟರ್ಮಿನಸ್ ಎಂದೂ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದ್ದೀರಿ. ಅದರಿಂರ ನಿಮ್ಮ ಜೀವನದಲ್ಲೇನಾದರೂ ಬದಲಾವಣೆಯಾಗುತ್ತದಾ?” ಎಂದು.
ಅಂದಹಾಗೆ ಠಾಕ್ರೆ ಸತ್ತ ನಂತರವೂ ತನ್ನ ಇಂತಹ ದಲಿತರನ್ನು ಕೆಣಕುವ ಬುದ್ಧಿ ಬಿಟ್ಟಿಲ್ಲ! ಯಾಕೆಂದರೆ ಠಾಕ್ರೆ ಸತ್ತ ನಂತರ ಅವನ ಅನುಯಾಯಿಗಳು ಬಹುತೇಕ ದಲಿತರೇ ಹೆಚ್ಚಾಗಿ ವಾಸಿಸುವ, ಬಾಬಾಸಾಹೇಬ್ ಅಂಬೇಡ್ಕರರ ಸ್ಮಾರಕ ಸ್ಥಳ ಇರುವ ಪ್ರದೇಶದಲ್ಲಿಯೇ ಠಾಕ್ರೆ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಠಾಕ್ರೆಯ ಆ ಹೀನ ಕೃತ್ಯವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದ್ದಾರೆ ಅವನ ಹಿಂಬಾಲಕರು.
ಅದೇನೆ ಇರಲಿ, ಠಾಕ್ರೆ ಹಿಂದುತ್ವವಾದಿ. ಹಿಂದುತ್ವವಾದಿಯ ಪ್ರಮುಖ ಲಕ್ಷಣ ಮುಸ್ಲಿಂ ವಿರೋಧವಾದರೂ ಮೂಲ ಲಕ್ಷಣ ದಲಿತ ವಿರೋಧಿ ನೀತಿ. ಠಾಕ್ರೆ ಹೇಳಿದ್ದು, ಹೇಳದಿದ್ದದ್ದು, ಬೆಳೆದದ್ದು ಎಲ್ಲವೂ ದಲಿತರ ಹೆಣಗಳ ಮೇಲೆ, ಅವರ ಭಾವನೆಗಳ ಜೊತೆ ಚೆಲ್ಲಾಟದ ಜೊತೆಜೊತೆಗೆ. ಈ ನಿಟ್ಟಿನಲಿ ಇಂತಹ ಈ ಶತಮಾನದ ದೌರ್ಜನ್ಯಕೋರನನ್ನು ಮಹಾರಾಷ್ಟ್ರದ ಸರ್ಕಾರ ಏನೂ ಮಾಡಲಿಲ್ಲವೆಂದರೆ ಆಳುವ ಸರ್ಕಾರ (ಕಾಂಗ್ರೆಸ್)ಗಳು ಅವನಿಗೆ ನೀಡಿದ್ದ ಬೆಂಬಲವನ್ನು ಯಾರಾದರೂ ಊಹಿಸಬಹುದು. ಈ ನಿಟ್ಟಿನಲಿ ಕಾಂಗ್ರೆಸ್ ಕೂಡ ಕ್ಷಮೆಗೆ ಅರ್ಹವಲ್ಲ.
ಸದ್ಯ ನೆಮ್ಮದಿಯ ವಿಷಯವೇನೆಂದರೆ (ನಿಜ, ಹಾಗೆ ಹೇಳುವುದು ತಪ್ಪು. ಆದರೆ...) ಠಾಕ್ರೆ ಇನ್ನಿಲ್ಲ. ದೂರದಿಂದ ಮಹಾರಾಷ್ಟ್ರದ ದಲಿತರ ಮೇಲೆ, ಬಾಬಾಸಾಹೇಬ್ ಅಂಬೇಡ್ಕರರ ಸಿದ್ಧಾಂತದ ಮೇಲೆ ಆತ ನಡೆಸುತ್ತಿದ್ದ ದೌರ್ಜನ್ಯವನ್ನು ದಬ್ಬಾಳಿಕೆಯನ್ನು ಕೇಳಿ ಕೇಳಿ ರೋಸಿಹೋಗಿದ್ದ ನಮ್ಮಂಥವರಿಗೆ ಈಗ ಸ್ವಲ್ಪವಾದರೂ ನೆಮ್ಮದಿಯಾಗಿದೆ. ಇತಿಹಾಸದಲ್ಲಿ ಇಂತಹ ‘ಕ್ರಿಮಿ’ಗಳು ಇನ್ನೆಂದೂ ಹುಟ್ಟದಿರಲಿ.
No comments:
Post a Comment