ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್
-ರಘೋತ್ತಮ ಹೊ.ಬ
ಕಾಮಾಟಿಪುರ, ಮುಂಬೈ ನಗರದ ಈ ಏರಿಯಾ ವೇಶ್ಯಾವಾಟಿಕೆಗೆ ಕುಪ್ರಸಿದ್ಧ ಸ್ಥಳ. ದುರಂತವೆಂದರೆ ಆ ಏರಿಯಾದ ಬಹುತೇಕರು ದಲಿತರು. ಅದರಲ್ಲೂ ದಲಿತ ಮಹಾರ್ ಜಾತಿಯವರು.
ಹೌದು, ಮನುಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಜಾತಿಗೊಂದರಂತೆ ಮೀಸಲಿವೆ. ದುರಂತವೆಂದರೆ ಹಾಗೆ ಜಾತಿಗೊಂದರಂತೆ ಕೆಲಸವನ್ನು ಮೀಸಲಿಟ್ಟಿರುವ ವಿಚ್ಛಿಧ್ರಕಾರಿ ವ್ಯವಸ್ಥೆ ವೇಶ್ಯಾವಾಟಿಕೆಯನ್ನೂ ಸಹ ಬಿಟ್ಟಿಲ್ಲ. ಅದನ್ನೂ ಕೂಡ ಸಮಾಜದ ಕೆಲ ವರ್ಗಗಳಿಗೆ ಸೀಮಿತಗೊಳಿಸಿಬಿಟ್ಟಿದೆ ಮತ್ತು ಅವರನ್ನು ದೇವದಾಸಿ, ಜೋಗತಿ, ಬಸವಿ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದೆ. ಅಂದಹಾಗೆ ಸೂಳೆಗಾರಿಕೆಯನ್ನೂ ಸಾಮಾಜಿಕ ಚೌಕಟ್ಟಿಗೆ, ಆರ್ಥಿಕ ನೀತಿನಿಯಮಕ್ಕೆ ಒಳಪಡಿಸಿದ್ದು ನಮ್ಮಲ್ಲೇ ಇರಬೇಕು! ಅಷ್ಟೊಂದು ಎಕ್ಕುಟ್ಟಿ ಹೋಗಿದ್ದು, ಹೇಳಲು ಹೇಸಿಗೆಯಾಗುವಂತಹದ್ದು ನಮ್ಮ ಈ ಕ್ರೂರ ಪರಂಪರೆ. ಉದಾಹರಣೆÉಗೆ ದಾವಣಗೆರೆಯ ಸಮೀಪ ಉಚ್ಛಂಗಿದುರ್ಗ ಎಂಬಲ್ಲಿ ಪ್ರತಿವರ್ಷ ‘ಮುತ್ತು ಕಟ್ಟುವ ಹಬ್ಬ’ ಮಾಡಲಾಗುತ್ತದೆ. ಆ ಹಬ್ಬದಲ್ಲಿ ಮೇಲ್ಜಾತಿ ಮಹಿಳೆಯರಿಗೆ ‘ಗರತಿ ಮುತ್ತು’ ಕಟ್ಟಲ್ಪಟ್ಟರೆ ದಲಿತ ಮಹಿಳೆಯರಿಗೆ 'ಸೂಳೆ ಮುತ್ತು’ ಕಟ್ಟಲಾಗುತ್ತದೆ! ಅಂದರೆ ಮೇಲ್ಜಾತಿ ಮಹಿಳೆಯರನ್ನು ಗರತಿಯರ ಹಾಗೆ ಮನೆಯಲ್ಲಿ ಇರಿಸಿಕೊಳ್ಳುವುದು ದಲಿತ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ವೇಶ್ಯಾವಾಟಿಕೆಗೆ ದೂಡುವುದು! ಇದು ಕೆಲವರಿಗೆ ಶ್ರೇಷ್ಠ ಪರಂಪರೆಯಂತೆ! ಯಾಕೆಂದರೆ ಅಂತಹವರಿಗೆ ಅಂತಹ ಪರಂಪರೆಯ ಹೆಸರಿನಲ್ಲಿ ಎಲ್ಲವೂ ಸಿಗುತ್ತದಲ್ಲ! ವೇಶ್ಯಾವಾಟಿಕೆಯೂ ಕೂಡ ದೇವದಾಸಿ ಹೆಸರಿನಲ್ಲಿ ಫ್ರೀ! ದೇವರಿಗೆ ಬಿಡುವ ಬಸವಿ ಹೆಸರಿನಲ್ಲಿ ಮುಕ್ತ...ಮುಕ್ತ...!
ಈ ನಿಟ್ಟಿನಲಿ ಇಂತಹ ಯಕ್ಕುಟ್ಟಿಹೋದ ಸಮಾಜವನ್ನು ಸರಿಪಡಿಸಲು ಬರೀ ಒಂದು ಶತಕವಲ್ಲ ಯುಗಯುಗಗಳೇ ಬೇಕೆನ್ನಬಹುದು. ಹೌದು, ಈ ಯುಗದ ಯುಗಪುರುಷ ಬಾಬಾಸಾಹೇಬ್ ಅಂಬೇಡ್ಕರ್ ಇಂತಹ ಕ್ರೂರ ಪದ್ಧತಿಯ ವಿರುದ್ಧ, ಹಾಗೇ ಆ ಪದ್ಧತಿಯಲ್ಲಿ ಸಿಲುಕಿಸಲ್ಪಟ್ಟ ತನ್ನ ಸಮುದಾಯದ ಮಹಿಳೆಯರ ಬಗ್ಗೆ ಮಾತನ್ನಾಡಿದ್ದಾರೆ, ಹಾಗೇ ಅವರಿಗೆ ಬುದ್ಧಿ ಹೇಳಿದ್ದಾರೆ. ಅಂದಹಾಗೆ ಅವರ ಆ ಬುದ್ಧಿ ಮಾತು ಕೇಳಿದ, ಅದನ್ನು ಓದಿದ ಯಾರಾದರೂ ಇನ್ನೆಂದು ಅಂತಹ ದಂಧೆಯಲ್ಲಿ ಕೈ ಹಾಕುವುದಿಲ್ಲ ಎಂಬ ನಿಲುವು ತಳೆದರೆ ಅದು ಅಂಬೇಡ್ಕರ್ ಎಂಬ ಅಂತಹ ಜವಾಬ್ದಾರಿಯುತ ತಂದೆಯ ಮಾತಿಗೆ ಕೊಡುವ ಗೌರವವಾಗುತ್ತದೆ.
ಹೌದು, ಅದು 1936 ಜೂನ್ 16ನೇ ರಾತ್ರಿ. ಬಾಬಾಸಾಹೇಬ್ ಅಂಬೇಡ್ಕರ್ ಅಂದು ಮುಂಬಯಿಯ ದಾಮೋದರ್ ಥ್ಯಾಕರೆ ಹಾಲ್‍ನಲ್ಲಿ ಶೋಷಿತ ವರ್ಗಗಳ ಸಮ್ಮೇಳನವನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಆಶ್ಚರ್ಯಕರವೆಂದರೆ ಬಾಬಾಸಾಹೇಬರು ಭಾಗವಹಿಸಿದ್ದ ಆ ಸಮ್ಮೇಳನದಲ್ಲಿ ಮುಂಬಯಿಯ ಕಾಮಾಟಿಪುರ ಏರಿಯಾದ ಬಹುತೇಕರು ಅಂದು ಹಾಜರಿದ್ದರು. ಅವರೆಲ್ಲ ದೇವದಾಸಿ, ಪೋತರಾಜೆ, ಭೂತೆ, ಆರಾಧಿ ಮತ್ತು ಜೋಗಿಣಿ ಪಂಥಕ್ಕೆ ಸೇರಿದವರು. ಒಟ್ಟಾರೆ ಬಹುತೇಕ ಅವರು ಶೋಷಿತ ಮಹಾರ್ ಸಮುದಾಯಕ್ಕೆ ಸೇರಿದವರಾಗಿದ್ದರು.
ಅಂದಹಾಗೆ ಅಂಬೇಡ್ಕರರೇನು ದೇವದಾಸಿ ಪದ್ಧತಿ ಬಿಟ್ಟುಬಿಡಿ, ವೇಶ್ಯಾವಾಟಿಕೆ ಬೇಡ ಎಂದು ಹೇಳಲಲ್ಲ ಆ ಸಮ್ಮೇಳನ ಕರೆದಿದ್ದು. ಅವರ ಉದ್ದೇಶ ಇದ್ದದ್ದು ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸುವ ನಿಟ್ಟಿನಲಿ ಅವರ ಮನಸ್ಸುಗಳನ್ನು ತಯಾರು ಮಾಡುವುದಾಗಿತ್ತು. ಯಾಕೆಂದರೆ ಆಗಷ್ಟೆ ಅಂದರೆ 1935 ಅಂಕ್ಟೋಬರ್ 13, ಅವರು ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ "ದುರದೃಷ್ಟಾವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಖಂಡಿತ ಸಾಯಲಾರೆ” ಎಂದು ಗುಡುಗಿದ್ದರು(Ambedkar writings and speeches.vol,17.PartIII.P,94). ಆ ಮೂಲಕ ಮತಾಂತರ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
ಮೊದಲಿಗೆ ಆ ಸಮ್ಮೇಳನದಲ್ಲಿ ಮಾತನಾಡಿದ ಬಹುತೇಕರು ಮಾತಾಡಿದ್ದು ಅಂಬೇಡ್ಕರರು ಪ್ರಸ್ತಾಪಿಸಿದ್ದ ಮತಾಂತರದ ಬಗ್ಗೆ ಮಾತ್ರ. ಆದರೆ ತಮ್ಮ ಸರದಿ ಬಂದಾಗ ಎದ್ದು ನಿಂತ ಅಂಬೇಡ್ಕರರಿಗೆ ಅಂದು ಕಂಡದ್ದು ಅಲ್ಲಿ ಉಪಸ್ಥಿತರಿದ್ದ ಮುಂಬಯಿಯ ಕಾಮಾಟಿಪುರದ ಮಹಿಳೆಯರು ಮತ್ತವರ ವೃತ್ತಿ. ಅವರನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು(Ambedkar writings and speeches.vol,17. PartIII. P,150) “ನಮ್ಮ ಜೊತೆ ನೀವು ಮತಾಂತರವಾಗಿ ಅಥವಾ ಬಿಡಿ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಾನು ಒತ್ತಿ ಹೇಳುವುದೇನೆಂದರೆ ನನ್ನ ಮತ್ತು ನನ್ನಂತಹ ಇತರರ ಜೊತೆ ನೀವು ಬದುಕಬೇಕೆಂದರೆ ನಿಮ್ಮ ಅಪಮಾನಕರ ಜೀವನವನ್ನು ನೀವು ಕೈಬಿಡಲೇ ಬೇಕು. ಕಾಮಾಟಿಪುರದ ಮಹಾರ್ ಮಹಿಳೆಯರು ಇಡೀ ಸಮುದಾಯಕ್ಕೆ ಅಪಮಾನಕಾರಿಯಾಗಿದ್ದಾರೆ. ಈ ಕಾರಣಕ್ಕಾಗಿ ನಿಮ್ಮ ದಾರಿಯನ್ನು ನೀವು ಬದಲಿಸಿಕೊಳ್ಳದಿದ್ದರೆ ನಿಮ್ಮ ಜೊತೆ ವ್ಯವಹರಿಸಲಿಕ್ಕೆ ನಮಗೆ ಏನೂ ಇರುವುದಿಲ್ಲ. ಹಾಗೆಯೇ ನಮ್ಮಿಂದ ನಿಮಗೆ ಯಾವ ಸಹಾಯವೂ ಕೂಡ ಸಿಗಲಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ನಿಮಗೆ ಕೇವಲ ಎರಡು ದಾರಿಗಳು ಮಾತ್ರ ಮುಕ್ತವಾಗಿವೆ. ಒಂದು ಈಗ ನೀವು ಎಲ್ಲಿದ್ದೀರೋ ಅಲ್ಲಿಯೇ ನಮ್ಮಿಂದ ತಿರಸ್ಕರಿಸಲ್ಪಟ್ಟು ದೂರ ಇರುವುದು, ಎರಡನೆಯದು ನಿಮ್ಮ ಅಪಮಾನಕರ ವೃತ್ತಿಯನ್ನು ಬಿಟ್ಟು ನಮ್ಮ ಜೊತೆ ಬರುವುದು”.
“ಹಾಗಿದ್ದರೆ ನಮ್ಮ ಮುಂದಿನ ಜೀವನಕ್ಕೆ ಏನು ಮಾಡುವುದು ಎಂದು ನೀವು ನನ್ನನ್ನು ಕೇಳಬಹುದು. ಆದರೆ ಅದರ ಬಗ್ಗೆ ನಾನು ನಿಮಗೆ ಏನನ್ನೂ ಹೇಳುವುದಿಲ್ಲ. ಯಾಕೆಂದರೆ ಬದುಕಲಿಕ್ಕೆ ನೂರಾರು ದಾರಿಗಳಿವೆ. ಆದರೆ ನನ್ನ ಒತ್ತಾಯವೆಂದರೆ ಮೊದಲು ನೀವು ಇಂತಹ ಕೆಳದರ್ಜೆಯ ಜೀವನವನ್ನು ಜೀವಿಸುವುದನ್ನು ಬಿಡಿ. ಬೇರೆ ಮಹಿಳೆಯರ ಹಾಗೆ ನೀವು ಕೂಡ ಮದುವೆ ಮಾಡಿಕೊಳ್ಳಿ. ಕೌಟುಂಬಿಕ ಜೀವನದಲ್ಲಿ ನೆಲೆಗೊಳ್ಳಿ. ವಿನಾಕಾರಣವಾಗಿ ವೇಶ್ಯಾವಾಟಿಕೆÉಗೆ ದೂಡಲ್ಪಡುವ ಇಂತಹ ಸ್ಥಿತಿಯಲ್ಲಿ ಬದುಕುವುದನ್ನು ಮೊದಲು ನಿಲ್ಲಿಸಿ”. ಬಾಬಾಸಾಹೇಬ್ ಅಂಬೇಡ್ಕರ್ ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಹೇಳಿದ ವಾಸ್ತವದ ಮಾತುಗಳಿವು. ಬಹುಶಃ ಅಂಬೇಡ್ಕರರ ಈ ಮಾತುಗಳು ಪ್ರವಾದಿಯೋರ್ವನ ಮಾತುಗಳ ಹಾಗೆ ಕಂಡರೂ ಅಚ್ಚರಿ ಇಲ್ಲ. ಖಂಡಿತ, ಅಂಬೇಡ್ಕರ್ ದಲಿತರ ಪಾಲಿಗೆ ಪ್ರವಾದಿಯೇ. ಯಾಕೆಂದರೆ ವೃತ್ತಿಬದ್ಧ ಶ್ರೇಣೀಕೃತ ಈ ಜಾತಿವ್ಯವಸ್ಥೆಯನ್ನು ಬಗೆದು ಬಗೆದು ತೋರಿಸಿದ್ದು ಮತ್ತು ಅಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ್ದ ತನ್ನವರನ್ನೂ ಎಚ್ಚರಿಸಿದ್ದು, ಸೂಕ್ತ ಮಾರ್ಗದಲ್ಲಿ ಚಲಿಸುವಂತೆ ಹೇಳಿದ್ದು. ಖಂಡಿತ ಪ್ರವಾದಿಯೋರ್ವನಿಗೆ ಮಾತ್ರ ಅಂತಹದ್ದು ಸಾಧ್ಯ. ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿದ ಅಂಬೇಡ್ಕರರ ಮಾತುಗಳಲ್ಲಿ ಅನುರಣಿಸುವ ಇಂತಹ ಮಾನವಪರ ಕಾಳಜಿಯನ್ನು, ಜೀವಪರಧೋರಣೆಯನ್ನು ಎಂಥವರಾದರೂ ಗುರುತಿಸಬಹುದು. ಅಂಬೇಡ್ಕರರ ಆ ಮಾತುಗಳು ಅದು ಅಂದಿಗೂ ಪ್ರಸ್ತುತ. ಇಂದಿಗೂ ಪ್ರಸ್ತುತ. ಈ ನಿಟ್ಟಿನಲಿ ಅಂತಹ ವೃತ್ತಿಯಲ್ಲಿ ಇರುವ ಯಾರೇ ಆಗಲಿ ಅಂಬೇಡ್ಕರರ ಮಾತುಗಳನ್ನು ಒಮ್ಮೆ ಓದಲಿ, ಕೇಳಲಿ ಮತ್ತು ಅಂತಹ ಹೀನ ಬದುಕಿನಿಂದ ಹೊರಬರಲಿ ಎಂಬುದೇ ಸಧ್ಯದ ಕಳಕಳಿ.
ಬಾಬಾಸಾಹೇಬರ ಮಾತುಗಳು ಬಹಳ ಆಪ್ತವಾಗಿ ಕಾಡುತ್ತವೆ....
ReplyDeleteಜೀವವಿಲ್ಲದ ದೇವರನ್ನು ಪೂಜಿಸುವ ರೂಡಿಯನ್ನು ತ್ಸಾಜಿಸಬೇಕು
ReplyDeleteಬಾಬಾಸಾಹೇಬರು ನಿಜವಾಗಿಯೂ ದಲಿತರ ಪಾಲಿಗೆ ಮಹಾನ್ ಪ್ರವಾದಿ...!!!
ReplyDelete