Sunday, 11 May 2014

ಅಂಬೇಡ್ಕರರ ಹೋರಾಟವನ್ನು ‘ಖರೀದಿಸ ಬಂದಿದ್ದ’ ಬಿರ್ಲಾ!

                                                                                   -ರಘೋತ್ತಮ ಹೊ.ಬ

   
jugal kishore birla
babasaheb ambedkar


birla temple

periyar
          ಹಿಂದುತ್ವದ ವಿರುದ್ಧ ಅಂಬೇಡ್ಕರರ ಹೋರಾಟ ಎಲ್ಲರಿಗೂ ತಿಳಿದದ್ದೇ. ಹಿಂದೂ ಜಾತಿ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್ ದನಿ ಎತ್ತದಿದ್ದರೆ, ಕಾನೂನು ಕಟ್ಟಳೆಗಳ ರೂಪಿಸದಿದ್ದರೆ ಬಹುಶಃ ಈ ದೇಶ ಈ ಪರಿ ತಕ್ಕಮಟ್ಟಿಗೆ ಬದಲಾಗಲು ಸಾಧ್ಯವೇ ಇರುತ್ತಿರಲಿಲ್ಲ. ಆಶ್ಚರ್ಯಕರವೆಂದರೆ ಇಂತಹ ಅಂಬೇಡ್ಕರರನ್ನು ಹಿಂದುತ್ವದ ವಿರುದ್ಧ ದನಿ ಎತ್ತಬಾರದೆಂಬ ಕಾರಣಕ್ಕಾಗಿ ಖರೀದಿಸುವ ಯತ್ನ ಕೂಡ ನಡೆದಿದೆ! ಅಂದಹಾಗೆ ಅಂತಹದ್ದೊಂದು ‘ಅಂಬೇಡ್ಕರರನ್ನು ಖರೀದಿಸುವ ಯತ್ನ’ದ ಪ್ರಕರಣದ ಉಲ್ಲೇಖ ಅಂಬೇಡ್ಕರರ ಆಪ್ತ ಅನುಯಾಯಿ ಮೂಲ ಕರ್ನಾಟಕದವರೇ ಆದ ಮೋಚಿ ಸಮುದಾಯದ ಶಂಕರಾನಂದ ಶಾಸ್ತ್ರಿ ಎಂಬುವವರು ಬರೆದಿರುವ  My Experiences and Memoirs of Dr.Babasaheb Ambedkar   ಕೃತಿಯ ಪುಟ ಸಂಖ್ಯೆ 62, 63 ರಲ್ಲಿ ಕಂಡು ಬರುತ್ತದೆ. ಹಾಗೆ ಓದುತ್ತಾ ಕಂಡುಕೊಂಡ ಈ ಕುತೂಹಲಕರ ಘಟನೆಯ ಸವಿವರ ಎಂತಹವರನ್ನು ಚಣ ಕಾಲ ದಂಗುಬಡಿಸುತ್ತದೆ. ಹಾಗೆಯೇ ಬಾಬಾಸಾಹೇಬರ ಶಕ್ತಿಯನ್ನು ಆ ಘಟನೆ ಅಚ್ಚೊತ್ತಿ ಹೇಳುತ್ತದೆ.
   
ಹೌದು, ಅದು 1950 ಮಾರ್ಚ್ 31ರ ದಿನ. ಆ ದಿನ ಇಂದಿಗೂ ಟಾಟಾ ಬಿರ್ಲಾ ಎಂದೇ ಖ್ಯಾತಿ ಪಡೆದಿರುವ ಬಿರ್ಲಾ ಸಮೂಹದ ಜಿ.ಡಿ.ಬಿರ್ಲಾರ ಸಹೋದರ ಜೆ.ಕೆ.ಬಿರ್ಲಾ(ಜುಗಲ್ ಕಿಶೋರ್ ಬಿರ್ಲಾ, ಜೆ.ಕೆ.ಟೈರ್ಸ್ ನೆನಪಿಸಿಕೊಳ್ಳಿ) ಅಂಬೇಡ್ಕರರನ್ನು ಭೇಟಿ ಮಾಡಲು ಬಂದರು. ಬಿರ್ಲಾ ಸುಮ್ಮನೆ ಹಾಗೆ ಅಂಬೇಡ್ಕರರನ್ನು ಭೇಟಿ ಮಾಡಲು ಬಂದಿರಲಿಲ್ಲ. ಅದಕ್ಕೆ ಮೊದಲು ಅಂದರೆ ಕೆಲ ದಿನಗಳ ಹಿಂದೆ ಅಂಬೇಡ್ಕರ್ ಆಗ ತಾನೇ ತಮಿಳುನಾಡಿನ ಮಧುರೈನಲ್ಲಿ ಬ್ರಾಹ್ಮಣೇತರರ ಸಮ್ಮೇಳನದಲ್ಲಿ ಭಾಗವಹಿಸಿ ಭಗವದ್ಗೀತೆಯನ್ನು ಟೀಕಿಸಿದ್ದರು. ಖುದ್ದು ಪೆರಿಯಾರ್ ರಾಮಸ್ವಾಮಿ ನಾಯ್ಕರ್‍ರವರೇ ಭಾಗವಹಿಸಿದ್ದ ಆ ಸಮ್ಮೇಳನದ ಅಂಬೇಡ್ಕರರ ಭಗವದ್ಗೀತೆಯ ಟೀಕೆಯ ಭಾಷಣದ ವರದಿ ದೇಶದಾದ್ಯಂತ ಎಲ್ಲ ದಿನಪತ್ರಿಕೆಗಳಲ್ಲೂ ಪ್ರಕಟವಾಗಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿತ್ತು.  ಅಂದಹಾಗೆ ಅಂತಹ ಅಲ್ಲೋಲ ಕಲ್ಲೋಲದ ಭಾಗವಾಗಿಯೇ ಸ್ವತಃ ಜೆ.ಕೆ.ಬಿರ್ಲಾ ಅಂಬೇಡ್ಕರರನ್ನು ಭೇಟಿಮಾಡಲು, ಅವರನ್ನು ಖರೀದಿಸಲು ಬಂದದ್ದು!
 
 ಹಾಗೆ ಮಾತಿಗೆ ಶುರುವಿಟ್ಟುಕೊಂಡ ಬಿರ್ಲಾ “ಯಾಕೆ ನೀವು, ಹಿಂದೂಗಳ ಪವಿತ್ರ ಧಾರ್ಮಿಕ ಗ್ರಂಥವಾದ ಭಗವದ್ಗೀತೆಯನ್ನು ಟೀಕಿಸಿದಿರಿ? ಅಂತಹ ಟೀಕೆಯಿಂದ ನನ್ನಂತಹ ನೂರಾರು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಬೇಕಿದ್ದರೆ ಅಸ್ಪøಶ್ಯತೆಯ ನಿರ್ಮೂಲನೆಯ ಸಂಬಂಧ ನಾನು 10 ಲಕ್ಷ ರೂ. ಕೊಡಲು ಸಿದ್ಧನಿರುವೆ. ಆ ಕಾರಣದಿಂದ ಅಂಬೇಡ್ಕರರು (ಈ ಹಣ ಪಡೆದು) ಭಗವದ್ಗೀತೆಯನ್ನು ಟೀಕಿಸುವುದನ್ನು ನಿಲ್ಲಿಸಿ, ಹಿಂದೂ ಧರ್ಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಚಿಂತಿಸಬೇಕು...” ಬಿರ್ಲಾ ಹೇಳುತ್ತಾ ಹೋದರು.
 
  ಅಂಬೇಡ್ಕರರು ನಕ್ಕರು. ಅವರು ಹೇಳಿದರು “ಭಗವದ್ಗೀತೆ ಅದೊಂದು ಧಾರ್ಮಿಕ ಪುಸ್ತಕವಲ್ಲ, ಅದೊಂದು ರಾಜಕೀಯ ಕೃತಿ. ಅದು ಜಾತಿಯನ್ನು ಬಿಟ್ಟು ಬೇರೇನನ್ನು ಬೋಧಿಸುವುದಿಲ್ಲ. ಈ ಕೃತಿಯ ಮುಖ್ಯ ಗುರಿ ಪುರೋಹಿತಶಾಹಿ ವರ್ಗಕ್ಕೆ ಪ್ರಮುಖ ಪ್ರಾಧಾನ್ಯತೆ ನೀಡುವುದಾಗಿದೆ ಹೊರತು ಬೇರೇನಲ್ಲ. ಈ ಕಾರಣದಿಂದ ಈ ಕೃತಿಯನ್ನು ಎಲ್ಲಿಯವರೆಗೆ ಓದಲಾಗುತ್ತದೆಯೋ, ಅಲ್ಲಿಯ ಮಂತ್ರಗಳನ್ನು ಎಲ್ಲಿಯವರೆಗೇ ಉಚ್ಛರಿಸಲಾಗುತ್ತದೆಯೋ ಅಲ್ಲಿಯವರೆಗೂ ಹಿಂದೂಗಳಲ್ಲಿ ಐಕ್ಯತೆ ಸಾಧ್ಯವಿಲ್ಲ. ಸಾಂಖ್ಯ, ಕರ್ಮ ಮತ್ತು ಜ್ಞಾನಕ್ಕೆ ಸಂಬಂಧಿಸಿದ ಅದರ ವ್ಯಾಖ್ಯೆಯು ಜನರನ್ನು ದಿಕ್ಕುತಪ್ಪಿಸುತ್ತದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡುವುದಾದರೆ ಭಗವದ್ಗೀತೆಯ ಕರ್ಮ ಸಿದ್ಧಾಂತ ಅಪಾಯಕಾರಿ. ಆ ಕೃತಿಯಲ್ಲಿ ಹೊಸದೇನು ಇಲ್ಲ. ಆಧ್ಯಾತ್ಮವನ್ನು ಬೋಧಿಸದ ಅದು ಜನಸಮೂಹವನ್ನು ಅಜ್ಞಾನ ಮತ್ತು ಮೌಢ್ಯದಲ್ಲಿ ಇರಿಸಲು ಅಗತ್ಯವಾದ ‘ರಾಜಕೀಯ’ವನ್ನು ಬೋಧಿಸುತ್ತದೆ. ಗೀತೆಯ ಪ್ರಕಾರ ‘ಕರ್ಮ’ವೆಂದರೆ ಅದು ಬೇರೇನಲ್ಲ ‘ಜಾತಿ’ ಎಂದರ್ಥ. ತನ್ನ ಜಾತಿಗೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿರುವ ಅಮಾಯಕ ಜನರನ್ನು ಯಾವುದೇ ರೀತಿ ಅಸ್ಥಿರಗೊಳಿಸದಂತೆ ಅದು ತನ್ನ ಹಿಂಬಾಲಕರಿಗೆ ಹೇಳುತ್ತದೆ. ಈ ಕಾರಣಕ್ಕಾಗಿ ಹಾಗೇ ಅಮಾಯಕ ಜನರ ಮನಸ್ಸನ್ನು ಅಸ್ಥಿರಗೊಳಿಸಿದ್ದೇ ಆದರೆ ಅದು ‘ಶ್ರೇಣೀಕೃತ ಜಾತಿ ವ್ಯವಸ್ಥೆ’ಯನ್ನು ನಾಶಗೊಳಿಸುತ್ತದೆ ಎಂದೂ ಕೂಡ ಭಗವದ್ಗೀತೆ ಹೇಳುತ್ತದೆ (ಶ್ಲೋಕ,3-26)”. ಹಾಗೆಯೇ ಈ ಸಂದರ್ಭದಲ್ಲಿ ತಮಗೆ 10ಲಕ್ಷ ‘ಲಂಚ’ ನೀಡಿ ತಮ್ಮನ್ನು ಸುಮ್ಮನಿರುವಂತೆ ಹೇಳಲು ಬಂದ ಬಿರ್ಲಾಗೆ ಮರು ಉತ್ತರಿಸುತ್ತಾ ಅಂಬೇಡ್ಕರರು “ನಾನು ನನ್ನನ್ನು ನಾನು ಯಾರಿಗೂ ಮಾರಿಕೊಳ್ಳಲು ಹುಟ್ಟಿಲ್ಲ. ನನಗೆ ಬೇರೆಲ್ಲದಕ್ಕಿಂತ ನನ್ನ ದೇಶ ಮತ್ತು ನನ್ನ ಜನರಷ್ಟೇ ಮುಖ್ಯ. ಭಗವದ್ಗೀತೆ ಸಮಾಜದ ವಿಭಜನೆಯನ್ನು ಪ್ರೋತ್ಸಾಹಿಸುತ್ತದೆ. ಅದರ ಎಲ್ಲಾ ಅಧ್ಯಾಯಗಳು ದ್ವೇಷವನ್ನು ತುಂಬಿಕೊಂಡಿವೆ. ಆ ಕಾರಣಕ್ಕಾಗಿ ನಾನು ಅದರ ವಿರುದ್ಧ ಮಾತಾಡಬೇಕಾಯಿತು” ಎಂದರು.
 
ಅಂದಹಾಗೆ ಅಂಬೇಡ್ಕರರ ಜೊತೆ ಅಲ್ಲಿಯೇ ಇದ್ದ ಕೃತಿಯ ಲೇಖಕ ಶಂಕರಾನಂದ ಶಾಸ್ತ್ರಿಯವರು ಬಿರ್ಲಾರಿಗೆ “ವೈಶ್ಯ ಸಮುದಾಯದ ನೀವು ಬ್ರಾಹ್ಮಣರಿಗಿಂತ ಕೀಳು. ಭಗವದ್ಗೀತೆಯ ಶ್ಲೋಕ 9-32 ರಲ್ಲಿ ವ್ಯಾಪಾರಿಯು ಪಾಪದಿಂದ ಹುಟ್ಟಿದ್ದು ಎಂದಿದೆ” ಎಂದಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಇದ್ಯಾವುದನ್ನೂ ಕೇಳಲು ಸಿದ್ಧರಿರದ ಬಿರ್ಲಾ, ಶಾಸ್ತ್ರಿಯವರ ಆ ನುಡಿಯನ್ನು ಉದಾಸೀನತೆಯಿಂದ ಕಾಣುತ್ತಾರೆ. ಹಾಗೆಯೇ ಮುಂದುವರಿದು ಸ್ವತಃ ಅಂಬೇಡ್ಕರರೇ ಬಿರ್ಲಾರಿಗೆ “ಭಗವದ್ಗೀತೆ ರಾಜಕೀಯ ಪುಸ್ತಕ” ಎಂಬ ಬಗ್ಗೆ ಅನೇಕ ಶ್ಲೋಕಗಳನ್ನು ಉಲ್ಲೇಖಿಸುತ್ತಾ “ಭಾವನಾತ್ಮಕ ಮಾತುಗಳ ಮೂಲಕ ನನ್ನನ್ನು ಹಿಂದುತ್ವದತ್ತ ಸೆಳೆಯುವುದಾಗಲೀ, ಅಥವಾ ನನ್ನನ್ನು ಖರೀದಿಸುವುದಾಗಲೀ ಸಾಧ್ಯವೇ ಇಲ್ಲ” ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಬಿರ್ಲಾ ಅಂಬೇಡ್ಕರರಿಗೆ ಬೌದ್ಧ ಮತ್ತು ಹಿಂದೂ ಧರ್ಮ ಎರಡೂ ಒಂದೇ ಎಂಬ ಕಾರಣ ನೀಡಿ ತಾನು ದೆಹಲಿಯಲ್ಲಿ ಮಾತ್ರವಲ್ಲದೇ ಬೌದ್ಧ ಯಾತ್ರಾ ಸ್ಥಳಗಳಲ್ಲೆಲ್ಲ ಬೌದ್ಧ ಮಂದಿರಗಳನ್ನು ನಿರ್ಮಿಸಿರುವುದಾಗಿ ತಿಳಿಸುತ್ತಾರೆ. ಇದಕ್ಕೆ ಅಂದರೆ ಬಿರ್ಲಾರ ಈ ದಾನಶೀಲ ಗುಣಕ್ಕೆ ವಂದನೆಗಳನ್ನು ತಿಳಿಸುತ್ತಾ ಅಂಬೇಡ್ಕರರು “ದಿಲ್ಲಿಯಲ್ಲಿ ನೀವು ಕಟ್ಟಿಸಿರುವ ಬೌದ್ಧ ದೇಗುಲ ನೀವೇ ಕಟ್ಟಿಸಿರುವ ಬಿರ್ಲಾ ಮಂದಿರ(ರಾಮನ ಹೆಸರಲ್ಲಿ)ದ ಔಟ್ ಹೌಸ್‍ನಂತಿದೆ” ಎಂದು ಬಿರ್ಲಾರ ಆ ಬೌದ್ಧ ಮಂದಿರ ಹೇಳಿಕೆಯನ್ನು ಮೂದಲಿಸುತ್ತಾರೆ. ಯಾಕೆಂದರೆ ಇದೇ ಬಿರ್ಲಾ ಅನ್ಯಾಯ ಮತ್ತು ಅಸಮಾನತೆಯನ್ನು ಸಮರ್ಥಿಸುವ ಶ್ರೀರಾಮನ ಹೆಸರಲ್ಲಿ ಬೃಹತ್ ಮಂದಿರವೊಂದನ್ನು ಅದೇ ದಿಲ್ಲಿಯಲ್ಲಿ ಕಟ್ಟಿಸಿದ್ದಾರೆ ಮತ್ತು ಅದು ಬಿರ್ಲಾ ಮಂದಿರ ಎಂದೂ ಕೂಡ ಹೆಸರು ಪಡೆದಿದೆ. ಪ್ರಶ್ನೆ ಏನೆಂದರೆ ಅದೇ ಬಿರ್ಲಾ ಕಟ್ಟಿಸಿರುವ ಬೌದ್ಧ ದೇವಾಲಯ ಯಾರಿಗೆ ತಿಳಿದಿದೆ ಎಂಬುದು? ಅಂದಹಾಗೆ ಅದನ್ನು ಅಂಬೇಡ್ಕರ್ ಔಟ್‍ಹೌಸ್ ಎಂದದ್ದು ಈ ಕಾರಣಕ್ಕೇ! ಹಾಗೆ ಅಂಬೇಡ್ಕರರ ಈ ಮಾತಿಗೆ ನಿರುತ್ತರರಾದ ಜೆ.ಕೆ.ಬಿರ್ಲಾ ಅಸ್ಪøಶ್ಯತೆ ನಿವಾರಿಸಲು ಅಂಬೇಡ್ಕರರು ನಡೆಸಿದ ಹೋರಾಟ ಮತ್ತು ದೇಶಕ್ಕಾಗಿ ಗಣತಾಂತ್ರಿಕ ಸಂವಿಧಾನವೊಂದನ್ನು ನೀಡಿದ ಅವರ ಕೊಡುಗೆಯನ್ನು ಶ್ಲಾಘಿಸುತ್ತಾರೆ. ಕಡೆಗೆ ಉಭಯ ಕುಶಲೋಪರಿಯೊಂದಿಗೆ ಅಂಬೇಡ್ಕರ್ ಮತ್ತು ಬಿರ್ಲಾರ ಆ ಭೇಟಿ ಕೊನೆಗೊಳ್ಳುತ್ತದೆ.
 
 ಒಂದಂತು ನಿಜ, ಯಾವ ಅಂಬೇಡ್ಕರರನ್ನು ಮತ್ತವರ ಹಿಂದುತ್ವ ವಿರೋಧಿ ಸಿದ್ಧಾಂತವನ್ನು 10 ಲಕ್ಷ ‘ಲಂಚ’ ಮತ್ತು ತಾವು ಕಟ್ಟಿಸಿರುವ ಒಂದೆರಡು ಬೌದ್ಧ ಮಂದಿರಗಳ  sentiment ಮೂಲಕ ಖರೀದಿಸಲು ಬಂದರೋ ಅಂತಹ ಹಿಂದೂ ಉದ್ಯಮಿ ಬಿರ್ಲಾರನ್ನು ಅಂಬೇಡ್ಕರ್ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸಾಗಹಾಕುತ್ತಾರೆ. ಈ ನಿಟ್ಟಿನಲಿ ಅಂಬೇಡ್ಕರ್-ಬಿರ್ಲಾರ ಈ ಭೇಟಿ ಅಂಬೇಡ್ಕರರ ಸೈದ್ಧಾಂತಿಕ ದೃಢತೆಯನ್ನು , ಅದರೆಡೆಗಿನ ಅÀವರ ಅಖಂಡ ಬದ್ಧತೆಯನ್ನು ಇಂಚಿಂಚೂ ಸಾರಿ ಹೇಳುತ್ತದೆ. ಹಾಗೆಯೇ ಅವರನ್ನು ಖರೀದಿಸಲು ಬಂದ ಬಿರ್ಲಾರ ವ್ಯಾಪಾರಿ ಕೀಳು ಮನಸ್ಥಿತಿಯನ್ನೂ ಕೂಡ ಈ ಭೇಟಿ ಜಗಜ್ಜಾಹೀರುಗೊಳಿಸುತ್ತದೆ ಎಂದರೆ ಅದು ಅತಿಶಯೋಕ್ತಿಯೆನಿಸದು.

No comments:

Post a Comment