ಗಾಂಧೀಜಿಯವರ ದಲಿತೋದ್ಧಾರದ “ಸಾಕ್ಷಿಗಳು”!
- -ರಘೋತ್ತಮ ಹೊ.ಬ
ವೈಯಕ್ತಿಕ ಅನುಭವದೊಂದಿಗೆ ಈ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ. ಅದು ಇಪ್ಪತ್ತು ವರ್ಷದ ಹಿಂದಿನ ಘಟನೆ ಅಂದರೆ 1992ನೇ ಇಸವಿ. ಬಾಬ್ರಿಮಸೀದಿ ಧ್ವಂಸದ ಸಮಯ. ಅದೇ ಕಾಲಕ್ಕೆ ನಾನು ಆರ್.ಎಸ್.ಎಸ್ ಕ್ಯಾಂಪ್ ಒಂದನ್ನು ಅಟೆಂಡ್ ಮಾಡಿದ್ದೆ. ಕ್ಯಾಂಪ್‍ನಲ್ಲಿ ನಡೆದ ಒಂದು ಘಟನೆ ಅಕ್ಷರಶಃ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಆ ಘಟನೆ ಏನೆಂದರೆ, ಮೀಸಲಾತಿಯ ಬಗೆಗಿನ ಚರ್ಚೆಯ ಒಂದು ಸಂದರ್ಭದಲ್ಲಿ ದಲಿತ ಯುವಕನೋರ್ವನೊಡನೆ ಇಬ್ಬರು ಆರ್.ಎಸ್.ಎಸ್ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದರು. ಆ ದಡ್ಡ ದಲಿತಯುವಕ ತಾನು ಬಂದಿರುವುದು ಆರ್.ಎಸ್.ಎಸ್ ಕ್ಯಾಂಪಿಗೆ ಎಂಬ ಸಾಮಾನ್ಯ ಜ್ಞಾನದ ಅರಿವೂ ಇಲ್ಲದೇ ಸಂಘಪರಿವಾರದ ಆ ಯುವಕರೊಂದಿಗೆ ಮೀಸಲಾತಿಯ ಪರವಾಗಿ ಚರ್ಚೆಗೆ ಇಳಿದಿದ್ದ. ಅವನ ಜೊತೆ ಚರ್ಚೆಗೆ ಅಷ್ಟೆ ಜಿದ್ದಿನಿಂದ ಇಳಿದಿದ್ದ ಆ ಆರ್.ಎಸ್.ಎಸ್ ಕಾರ್ಯಕರ್ತರು ಹೇಳುತ್ತಿದ್ದುದು ಒಂದೇ ಮಾತು “ಮೀಸಲಾತಿ ನೀಡುವುದರಿಂದ ದಲಿತರು ಮತ್ತು ಹಿಂದೂಗಳ ನಡುವೆ ಶಾಶ್ವತವಾದ ಪ್ರತ್ಯೇಕತೆ ಉಂಟಾಗುತ್ತದೆ, ಹಿಂದೂಧರ್ಮ ಹೋಳಾಗುತ್ತದೆದೆ”ಎಂದು. ಅಂದಹಾಗೆ ಆ ದಲಿತ ಯುವಕನಿಗೆ ಆರ್.ಎಸ್.ಎಸ್ ಕಾರ್ಯಕರ್ತರ ವಿವರಣೆ ಕಿರಿಕಿರಿತರಿಸುತಿತ್ತು. ಎಷ್ಟೇ ಹೇಳಿದರು ಇವರು ಬಗ್ಗುವುದಿಲ್ಲವೆಂದು ಆತ ಕೋಪಗೊಂಡಿದ್ದ, ಅದೃಷ್ಟವಶಾತ್ ಆ ಚರ್ಚೆಯ ಸಂದರ್ಭದಲ್ಲಿ ನಾನು ಅಲ್ಲಿಗೆ ಎಂಟ್ರಿ ಕೊಟ್ಟಿದ್ದರಿಂದ ಚರ್ಚೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ ಆ ನನ್ನ ಸಹಪಾಠಿ ದಲಿತನಿಗೆ ಆರ್.ಎಸ್.ಎಸ್ ನ ಸಿದ್ಧಾಂತ, ಹೋರಾಟ, ಹಿನ್ನೆಲೆ, ಎಲ್ಲವನ್ನು ಕ್ಷಣ ಮಾತ್ರದಲ್ಲಿ ವಿವರಿಸಿ ಬಾಯಿ ಮುಚ್ಚಿ ಕೂರುವಂತೆ ತಿಳಿಸಿದೆ. ಆಶ್ಚರ್ಯಕರವೆಂದರೆ ಇಂತಹದ್ದೇ ಚರ್ಚೆ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ 80 ವರ್ಷಗಳ ಹಿಂದೆ ನಡೆದಿದೆ! ಆಗ ಗಾಂಧೀಜಿಯವರು ಕೂಡ ಈಗ ಆರ್.ಎಸ್.ಎಸ್ ಕಾರ್ಯಕರ್ತರು ಏನು ಹೇಳುತ್ತಿದ್ದಾರೋ ಅದೇ ಡೈಲಾಗನ್ನು ಅಂದರೆ “ಅಸ್ಪøಶ್ಯರಿಗೆ ಪ್ರತ್ಯೇಕ ಮತದಾನ (ಮೀಸಲಾತಿ) ನೀಡುವುದರಿಂದ ಹಿಂದೂಗಳು ಮತ್ತು ಅಸ್ಪøಶ್ಯರ ನಡುವೆ ಶಾಶ್ವತವಾದ ಪ್ರತ್ಯೇಕತೆ ಏರ್ಪಡುತ್ತದೆ. ಹಿಂದೂಧರ್ಮ ಹೋಳಾಗುತ್ತದೆ” ಎಂದಿದ್ದಾರೆ. ಹಾಗಿದ್ದರೆ ‘ಗಾಂಧೀಜಿ’ ಮತ್ತು ‘ಆರ್.ಎಸ್.ಎಸ್ ಕಾರ್ಯಕರ್ತರು’ ಇಬ್ಬರೂ ಒಂದೇನಾ? ಈ ನಿಟ್ಟಿನಲ್ಲಿ ಗಾಂಧೀಜಿಯವರ ಅಸ್ಪøಶ್ಯೋದ್ಧಾರದ “ಮೊದಲ ಸಾಕ್ಷಿ” ಇದು!
ಇನ್ನು ಎರಡನೇಯ ಸಾಕ್ಷಿಯೊಂದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಅದು 1937ರಲ್ಲಿ ಕೇಂದ್ರೀಯ ಪ್ರಾಂತ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಡಾ|| ಖೇರ್ ಎಂಬುವರಿಗೆ ಸಂಬಂಧಪಟ್ಟಿದ್ದು. ಹಾಗಿದ್ದರೆ ಡಾ|| ಖೇರ್‍ರವರು ಮಾಡಿದ್ದ ತಪ್ಪಾದರೂ ಏನು? ಉತ್ತರ: ದಲಿತನೋರ್ವನನ್ನು ಅವರು ಮಂತ್ರಿಯಾಗಿ ಮಾಡಿದ್ದುದ್ದು! ಹೌದು, ದಲಿತನೋರ್ವನನ್ನು ಅವರು ಮಂತ್ರಿಯಾಗಿ ಮಾಡಿದುದ್ದಕ್ಕೆ ಗಾಂಧೀಜಿ ವ್ಯಗ್ರಗೊಂಡಿದ್ದರು. ಅದು ಯಾವ ಪರಿ ಎಂದರೆ “ಅಸ್ಪøಶ್ಯರಿಗೆ ಈ ರೀತಿ ಅಧಿಕಾರದ ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್‍ಗೆ ನೀನು (ಡಾ|| ಖೇರ್) ದ್ರೋಹ ಬಗೆದಿದ್ದೀಯ” ಎಂದು ಆರೋಪಿಸಿ ಪತ್ರ ಬರೆಯುವಷ್ಟು! ಅಂದಹಾಗೆ ಗಾಂಧೀಜಿಯವರು ಬರೆದ ಆ ಪತ್ರ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಡಾ|| ಖೇರ್‍ರವರು ತತಕ್ಷಣವೇ ರಾಜೀನಾಮೆ ನೀಡಬೇಕಾಯಿತು. ಹಾಗೆಯೇ ಮಂತ್ರಿಯಾಗಿ ನೇಮಿಸಲ್ಪಟ್ಟಿದ್ದ ಆ ದಲಿತ ವ್ಯಕ್ತಿಯಿಂದಲೂ ಕೂಡ ತಕ್ಷಣ ರಾಜೀನಾಮೆ ಪಡೆಯಲಾಯಿತು! ಅಂದರೆ ಗಾಂಧೀಜಿಯವರ ದೆಸೆಯಿಂದಾಗಿ ದಲಿತ ಮಂತ್ರಿಯೊಬ್ಬ ಅಧಿಕಾರ ಕಳೆದುಕೊಂಡ. ಅದೂ ಆತ ಅಧಿಕಾರದಲ್ಲಿದ್ದದ್ದು ಎಷ್ಟು ದಿನ? ಕೇವಲ ಒಂದೇ ದಿನ! ಈ ನಿಟ್ಟಿನಲ್ಲಿ ಹೇಳುವುದಾದರೆ ‘ಗಾಂಧೀಜಿಯವರ ಅಸ್ಪøಶ್ಯೋದ್ಧಾರದ ಎರಡನೇ ಸಾಕ್ಷಿ’ ಇದು!
ಇನ್ನು ಮೂರನೇ ಸಾಕ್ಷಿ ದಲಿತ ಹೆಣ್ಣು ಮಗಳೊಬ್ಬಳಿಗೆ ಸಂಬಂಧಪಟ್ಟಿದ್ದು. ಬಾಚುಮ ಎಂಬ ಆ ಹೆಣ್ಣುಮಗಳನ್ನು ಮೂರು ಜನ ಮೇಲ್ಜಾತಿ ಅಧಿಕಾರಿಗಳು, ಓರ್ವ ಸಬ್‍ಇನ್ಸ್‍ಪೆಕ್ಟರ್, ಮತ್ತೋರ್ವ ಶಿಕ್ಷಣ ಇಲಾಖೆ ಇನ್ಸ್‍ಪೆಕ್ಟರ್, ಮಗದೊಬ್ಬ ವಕೀಲ ಮೂವರೂ ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಘಟನೆ ಬೆಳಕಿಗೆ ಬಂದು ಸಹಜವಾಗಿ ಆ ಮೂವರ ಮೇಲೆ ಕೇಸು ದಾಖಲಾಗಿ ನ್ಯಾಯಾಲಯದ ಮೂಲಕ ಆ ಮೂವರು ಶಿಕ್ಷೆಗೀಡಾದರು. ದುರಂತವೆಂದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮಂತ್ರಿಯೊಬ್ಬ ಈ ಮೂವರಿಗೆ ಗೌರ್ನರ್ ಜನರಲ್‍ರಿಂದ ಕ್ಷಮಾದಾನ ಕೊಡಿಸಲು ಯತ್ನಿಸಿದ ಮತ್ತು ಈ ಕಾರಣಕ್ಕಾಗಿ ಮಂತ್ರಿಯ ಈ ನಡೆ ವ್ಯಾಪಕ ಟೀಕೆಗೆ ಒಳಗಾಯಿತು. ತತ್ಪರಿಣಾಮವಾಗಿ ಆತ ರಾಜೀನಾಮೆ ಕೂಡ ನೀಡಬೇಕಾಗಿ ಬಂತು. ಆಶ್ಚರ್ಯಕರವೆಂದರೆ ಗಾಂಧೀಜಿಯವರು ಸದರಿ ಮಂತ್ರಿಯ ಬಗ್ಗೆ ಮತ್ತು ಆತನ ದಲಿತ ವಿರೋಧಿ ಕೃತ್ಯದ ಬಗ್ಗೆ ತುಟಿಪಿಟಿಕ್ಕೆನ್ನಲಿಲ್ಲ. ಬದಲಿಗೆ ಪದಚ್ಯುತ ಆ ಮಂತ್ರಿಯನ್ನು ಅವರು ಮತ್ತೆ ಅದೇ ಹುದ್ದೆಗೆ ನೇಮಿಸಲು ಯತ್ನಿಸಿದರು! ಅಂದಹಾಗೆ ದಲಿತ ಮಹಿಳೆಯ ಮೇಲೆ ಆ ಮಂತ್ರಿಯ ಶಿಷÀ್ಯರು ನಡೆಸಿದ ಅತ್ಯಾಚಾರ ಗಾಂಧೀಜಿಯವರ ಕಣ್ಣಿಗೆ ಕಾಣಲಿಲ್ಲವೆ? ಗಾಂಧೀಜಿಯವರ ಅಸ್ಪøಶ್ಯೋದ್ಧಾರದ “ಮೂರನೇ ಸಾಕ್ಷಿ” ಇದು!
ಇನ್ನು ನಾಲ್ಕನೇ ಸಾಕ್ಷಿ ಅಸ್ಪøಶ್ಯರ ದೇವಾಲಯ ಪ್ರವೇಶಕ್ಕೆ ಸಂಬಧಪಟ್ಟಿದ್ದು. ಈ ಸಾಕ್ಷಿ ಅಂಬೇಡ್ಕರÀರ “ ಕಾಂಗ್ರೆಸ್ ಮತ್ತು ಗಾಂಧಿ ಅಸ್ಪøಶ್ಯರಿಗೆ ಮಾಡಿದ್ದೇನು?” ಕೃತಿಯಲ್ಲಿ ಉಲ್ಲೇಖವಾಗಿದೆ. ದಲಿತರ ದೇವಳ ಪ್ರವೇಶ ಚಳುವಳಿಗೆ ಸಂಬಂಧಿಸಿದ ಗಾಂಧೀಜಿಯವರ ಆ ಹೇಳಿಕೆ ಇಂತಿದೆ, ”ಅಂತ್ಯಜರಿಗೆ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ಕೊಡಲು ಹೇಗೆ ಸಾಧ್ಯ? ಹಿಂದೂ ಧರ್ಮದಲ್ಲಿ ಜಾತಿ , ವರ್ಣಾಶ್ರಮಗಳಿಗೆ ಎಲ್ಲಿವಯವರೆಗೆ ಸ್ಥಾನವಿರುತ್ತದೋ ಅಲ್ಲಿಯವರೆಗೆ ಪ್ರತಿ ಹಿಂದೂವು ಎಲ್ಲಾ ದೇವಸ್ಥಾನಗಳನ್ನು ಪ್ರವೇಶಿಸಬಲ್ಲ ಎನ್ನುವುದು ಅಸಾಧ್ಯದ ಮಾತು”! ಹೇಗಿದೆ ನೋಡಿ ಗಾಂಧೀಜಿಯವರ ಹೇಳಿಕೆ. ಹಾಗಿದ್ದರೆ ಗಾಂಧೀಜಿಯವರ ಪ್ರಕಾರ ದÀಲಿತರಿಗೆ ಹಿಂದೂ ದೇವಾಲಯಗಳ ಪ್ರವೇಶ ಅಸಾಧ್ಯದ ಮಾತು ಮತ್ತು ಗಾಂಧೀಜಿಯವರ ಈ ನಿಲುವಿನ ಪ್ರಕಾರ ದಲಿತರು ಹಿಂದೂ ದೇವಾಲಯಗಳಿಗೆ ಪ್ರವೇಶಿಸಲು ಯತ್ನಿಸಲೇಬಾರದು! ದೇವಳ ಪ್ರವೇಶಿಸುವ ತಮ್ಮ ಚಳುವಳಿಯನ್ನು ದಲಿತರು ಕೈಬಿಡಲೇಬೇಕು!! ಈ ನಿಟ್ಟಿನಲಿ ಗಾಂಧೀಜಿಯವರ ಅಸ್ಪøಶ್ಯೋದ್ಧಾರದ “ನಾಲ್ಕನೇ ಸಾಕ್ಷಿ” ಇದು!
ಕ್ಷಮಿಸಿ, ಇನ್ನು ಮುಂದಿನ ಸಾಕ್ಷಿಗಳನ್ನು ಹೇಳಲು ಮನಸ್ಸಾಗುತ್ತಿಲ್ಲ. ಯಾಕೆಂದರೆ ಹಿಂದೂ ನ್ಯಾಯಾಲಯದಲ್ಲಿ ಇಂತಹ ಸಾಕ್ಷಿಗಳಿಗೆ ಬೆಲೆ ಏನೆಂದು ನಮಗೆ ಗೊತ್ತು. ಯಾಕೆಂದರೆ ಈ ಸಾಕ್ಷಿಗಳನ್ನು ಮೂಲತಃ ಹೇಳಿದ್ದು ಬಾಬಾಸಾಹೇಬ್ ಅಂಬೇಡ್ಕರ್‍ರವರು. ಅವರ ಬರಹಗಳು ಮತ್ತು ಭಾಷಣಗಳ ಪುಟಪುಟದಲ್ಲೂ ಇಂತಹ ಸಾಕ್ಷಿಗಳು ಹೇರಳವಾಗಿ ಸಿಗುತ್ತವೆ. ಪ್ರಶ್ನೆ ಏನೆಂದರೆ ಇಷ್ಟೆಲ್ಲಾ”ಸಾಕ್ಷಿಗಳಿದ್ದೂ” ಗಾಂಧೀಜಿಯವರನ್ನು ದಲಿತರ ಉದ್ಧಾರಕ ಎಂದು ಒಪ್ಪಿಕೊಳ್ಳಬೇಕೆ? ಅಥವಾ ಹಾಗೆ ಹೇಳುವವರ ಮಾತನ್ನು ಒಪ್ಪಬೇಕೆ? ಖಂಡಿತ ಸಾಧ್ಯವಿಲ್ಲ. ಏಕೆÀಂದರೆ ಗಾಂಧೀಜಿಯವರ ಇಂತಹ ‘ಸಾಕ್ಷ್ಯಗಳನ್ನು” ದಲಿತೋದ್ಧಾರದ ಕೃತ್ಯಗಳು ಎಂದು ಒಪ್ಪಿಕೊಳ್ಳಲು ದಲಿತರೇನು ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ಯಕೆಂದರೆ ಬಾಚುಮಳಿಗೆ ಅನ್ಯಾಯವಾದ ಸಂಧರ್ಭದಲ್ಲೇ “ ಅತ್ಯಾಚಾರಕ್ಕೆ ಒಳಗಾದ ಆ ಅಸ್ಪøಶ್ಯ ಹುಡುಗಿಯ (ಬಾಚುಮ) ಜಾಗದಲ್ಲಿ ಒಂದು ವೇಳೆ ಗಾಂಧೀಜಿಯ ಮಗಳೇ ಇದ್ದಿದ್ದರೆ ಗಾಂಧೀಜಿ ಆಗಲೂ ಹೀಗೆ ಸುಮ್ಮನಿದ್ದುಬಿಡುತ್ತಿದ್ದರೆ?” ಎಂದು ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‍ರವರೇ ಪ್ರಶ್ನಿಸಿದ್ದಾರೆ. ಈ ನಿಟ್ಟಿನಲಿ ಅಂಬೇಡ್ಕರ್‍ರವರ ಅಂತಹ ಪ್ರಶ್ನೆಯ ಬೆಳಕು ದಲಿತರ ಮುಂದಿರುವಾಗ ಗಾಂದೀಜಿಯವರನ್ನು ದಲಿತೋದ್ಧಾರಕ ಎಂದು ದಲಿತರು ನಂಬಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಅಕಸ್ಮಾತ್ ಯಾರಾದರೂ ಹಾಗೆ ಅಂದರೆ “ ಗಾಂಧೀಜಿಯವರನ್ನು ದಲಿತೋದ್ಧಾರಕ” ಎಂದು ನಂಬಿದ್ದೇ ಆದರೆ ಅಂತಹವರು ಗಾಂಧೀಜಿಯ, ಆ ಮೂಲಕ ಅವರು ಪ್ರತಿಪಾದಿಸಿದ ಹಿಂದುತ್ವದ ಶಾಶ್ವತ ಗುಲಾಮರಾಗುತ್ತಾರಷ್ಟೆ.
-
No comments:
Post a Comment