ಕಾವೇರಿಯನು ಹರಿಯಲು ಬಿಟ್ಟು
ಕೃಷ್ಣರಾಜ ಒಡೆಯರ್ ಶ್ರಮ ಪಡದಿದ್ದರೆ ..
-ರಘೋತ್ತಮ ಹೊ.ಬ
ಒಂದಷ್ಟು ಪ್ರಶ್ನೆಗಳು: ತಾಜ್‍ಮಹಲ್ ಕಟ್ಟಿದ್ದು ಯಾರು? ಉತ್ತರ: ಷಹಜಹಾನ್. ವಿಧಾನಸೌಧ ಕಟ್ಟಿದ್ದು ಯಾರು? ಉತ್ತರ: ಕೆಂಗಲ್ ಹನುಮಂತಯ್ಯ. ಕೆ.ಆರ್.ಎಸ್. ಕಟ್ಟಿದ್ದು ಯಾರು? ಉತ್ತರ: ವಿಶ್ವೇಶ್ವರಯ್ಯ!ಅರೆ! ಇದೇನಿದು? ತಾಜ್‍ಮಹಲ್ ಕಟ್ಟಿದ್ದು ಆಗಿನ ಮೊಗಲ್ ಸಾಮ್ರಾಜ್ಯದ ಅರಸ ಷಹಜಹಾನ್. ವಿಧಾನಸೌಧ ಕಟ್ಟಿದ್ದು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಅದೇ ಕೆ.ಆರ್.ಎಸ್. ಕಟ್ಟಿದ್ದು ಅಂದಿನ ದಿವಾನರಾದ ವಿಶ್ವೇಶ್ವರಯ್ಯ! ಹಾಗಿದ್ದರೆ ಅಂದಿನ ಅರಸ ಕೃಷ್ಣರಾಜ ಒಡೆಯರ್? ಕೆ.ಆರ್.ಎಸ್ ಕಟ್ಟಿದ ಅಷ್ಟೂ ವರ್ಷ(1911ರಿಂದ 1932ರವರೆಗೆ)ರಾಜರಾಗಿದ್ದ ರಾಜರ್ಷಿ ನಾಲ್ವಡಿ? ಯಾಕೆ ಅವರು ಕೆ.ಆರ್.ಎಸ್ ನಿರ್ಮಾತೃವಾಗಲಿಲ್ಲ?
ಹೌದು, ಇತಿಹಾಸದಲ್ಲಿ ಕೆ.ಆರ್.ಎಸ್ ನಿರ್ಮಾಣದ ವಿಷಯದಲ್ಲಿ ಸೃಷ್ಟಿಸಲ್ಪಟ್ಟಿರುವ ಅತಿ ದೊಡ್ಡ ಸುಳ್ಳು ಎಂದರೆ ಇದೇ. ಇಂತಹ ಸುಳ್ಳಿಗೆ “ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ...” ಎಂಬ ಹಾಡಿನ ಒಗ್ಗರಣೆ ಬೇರೆ! ಮೊನ್ನೆ ಕಾರ್ಯಕ್ರಮವೊಂದರಲ್ಲಿ ಹಿರಿಯ ಸಾಹಿತಿ ಕೆ.ಎಸ್.ಭಗವಾನ್‍ರವರು ನಿಷೇಧಿಸಿ ಎಂದು ಹೇಳಿದ್ದೆ ಇಂತಹ ಹಸಿಸುಳ್ಳಿನ ಇತಿಹಾಸವನ್ನು ಮತ್ತು ಆ ಸುಳ್ಳನ್ನು ಪ್ರೋತ್ಸಾಹಿಸುವ ಅಂತಹ ಒಗ್ಗರಣೆಯ ಹಾಡನ್ನು.
ಈ ನಿಟ್ಟಿನಲಿ ಅಂದರೆ ಈ ಸುಳ್ಳಿನ ಸತ್ಯವನ್ನರಿಯುವ ನಿಟ್ಟಿನಲಿ ಆಸಕ್ತಿಯುಳ್ಳವರು ಜಲಾಶಯದಲ್ಲಿ ಈಗಲೂ ಜೀವಂತವಾಗಿರುವ ಜಲಾಶಯದ ಸ್ಥಾಪನಾಫಲಕವನ್ನು ನೋಡಬಹುದು. ಆ ಸ್ಥಾಪನಾ ಫಲಕದಲ್ಲಿ ಅಣೆಕಟ್ಟೆಯ ನಿರ್ಮಾಣ ಕೃಷ್ಣರಾಜೇಂದ್ರ ಒಡೆಯರ್ ಬಹದ್ದೂರ್‍ರವರ ಆಡಳಿತದಲ್ಲಿ ಆಯಿತು ಎಂದು ಬರೆದಿದೆ. ಸಾಲದ್ದಕ್ಕೆ 21 ವರ್ಷಗಳ ಅದರ ಸುದೀರ್ಘ ನಿರ್ಮಾಣ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಷ್ಟೂ ಜನ ದಿವಾನರುಗಳ ಅಂದರೆ ಟಿ, ಮಾಧವರಾವ್, ಸರ್.ಎಮ್.ವಿಶ್ವೇಶ್ವರಯ್ಯ, ಸರ್.ಕಾಂತರಾಜ ಅರಸ್, ಸರ್.ಬ್ಯಾನರ್ಜಿ, ಸರ್.ಮಿರ್ಜಾ ಇಸ್ಮಾಯಿಲ್‍ರವರುಗಳ ಹೆಸರುಗಳನ್ನು ಅದರ ಮೇಲೆ ಕೆತ್ತಲಾಗಿದೆ. ಅಂದಹಾಗೆ ಆ ಸ್ಥಾಪನಾ ಫಲಕದಲ್ಲಿ ತಪ್ಪಿಯೂ ಕೂಡ ಕೆ.ಆರ್.ಎಸ್. ನಿರ್ಮಾತೃ ವಿಶ್ವೇಶ್ವರಯ್ಯ ಎಂದು ದಾಖಲಾಗಿಲ್ಲ! ನಿಜಾಂಶವೆಂದರೆ ಜಲಾಶಯದ ಪ್ಲ್ಯಾನಿಂಗ್ ರೂಪಿಸಿದ್ದು ಮ್ಯಾಕ್‍ಹಚ್ ಎಂಬ ಬ್ರಿಟಿಷ್ ಎಂಜಿನಿಯರ್! ಅಲ್ಲದೆ ಅದರ ನಿರ್ಮಾಣದ ಅಂತಿಮ ವರ್ಷಗಳಲ್ಲಿ ದಿವಾನರಾಗಿದ್ದವರು ಸರ್.ಮಿರ್ಜಾ ಇಸ್ಮಾಯಿಲ್. ವಾಸ್ತವ ಹೀಗಿರುವಾಗ ಕೆ.ಆರ್.ಎಸ್. ನಿರ್ಮಾಣದ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಅದರ ನಿರ್ಮಾಣದ ಅವಧಿಯಲ್ಲಿ ಮಂತ್ರಿಗಳಾಗಿದ್ದ, ಎಂಜಿನಿಯರ್‍ಗಳಾಗಿದ್ದ ಕೆಲಸಗಾರರಿಗೋ ಅಥವಾ ಷಹಜಹಾನ್‍ನ ಹಾಗೆ ಅದನ್ನು ಕಷ್ಟಪಟ್ಟು ಕಟ್ಟಿದ ಮಹಾರಾಜರಿಗೋ? ಖಂಡಿತ ಮಹಾರಾಜರಿಗೆ. ತಮ್ಮ ತನು, ಮನ, ಧನ, ಅರ್ಪಿಸಿ, ಕಷ್ಟಕಾಲದಲ್ಲಿ ಜಲಾಶಯದ ನಿಮಾಣಕ್ಕಾಗಿ ಅರಮನೆಯ ಒಡವೆಗಳನ್ನೂ ಅಡಯಿಟ್ಟ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ಗೆ.
ಈ ನಿಟ್ಟಿನಲಿ ಈಗಲಾದರೂ ಕೃಷ್ಣರಾಜ ಒಡೆಯರ್‍ರವರಿಗೆ ಅವರ ಆ ಶ್ರೇಷ್ಠ ಸಾಧನೆಯ ಶ್ರೇಯಸ್ಸು ತಡವಾದರೂ ಸಲ್ಲಬೇಕು. ಅಂದಹಾಗೆ ಅದು ಸಾಧ್ಯವಾಗಬೇಕಾದರೆ ವಿಶ್ವೇಶ್ವರಯ್ಯನವರು ಕೆ.ಆರ್.ಎಸ್. ನಿರ್ಮಾತೃ ಎಂದು ಸಾರುವ ಎಲ್ಲಾ ಸಾಹಿತ್ಯವೂ ನಾಶವಾಗಬೇಕು. ಹಾಗೆ ಆ ಸಾಹಿತ್ಯವನ್ನು ಸಂಗೀತವಾಗಿ ಹಾಡುವ “ ಕಾವೇರಿಯನು ಹರಿಯಲು ಬಿಟ್ಟು..” ಎಂಬ ‘ಬಂಗಾರದ ಮನುóಷ್ಯ’ ಚಿತ್ರದ ಆ ಹಾಡು ಕೂಡ ನಿಷೇಧಕ್ಕೊಳಗಾಗಬೇಕು ಮತ್ತು ಅದರ ಬದಲು “ಕಾವೇರಿಯನು ಹರಿಯಲು ಬಿಟ್ಟು ಕೃಷ್ಣರಾಜ ಒಡೆಯರ್ ಶ್ರಮಪಡದಿದ್ದರೆ... ಕನ್ನಂಬಾಡಿಯ ಕಟ್ಟದಿದ್ದರೆ...” ಎಂಬ ಹಾಡು ಚಾಲ್ತಿಗೆ ಬರಬೇಕು ಮತ್ತು ಸತ್ಯ ಸಾಕಾರಗೊಳ್ಳಬೇಕು ಎಂಬುದಷ್ಟೆ ಸಧ್ಯದ ಕಳಕಳಿ.
No comments:
Post a Comment