ಅಸ್ಪಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ
-ರಘೋತ್ತಮ ಹೊ.ಬ
ಒಂದು ವಯಕ್ತಿಕ ಅನುಭವ: ಮೊನ್ನೆ ಮೈಸೂರು ನಗರದ ಬೀದಿಯಲ್ಲಿ ನಮ್ಮೂರಿನ ಹಳ್ಳಿಯ ಹೆಂಗಸೊಬ್ಬರು ಸಿಕ್ಕಿದ್ದರು. ಕೆದರಿದ ಕೂದಲು, ಬಾಚದ ಎಣ್ಣೆಕಾಣದ ತಲೆ, ಉಟ್ಟಿದ್ದ ಗಲೀಜು ಸೀರೆ, ನಮ್ಮೂರಿನ ಮೇಲ್ಜಾತಿಗೆ ಸೇರಿದ ಆಕೆ ಮೈಸೂರಿನ ಆ ಬೀದಿಯಲ್ಲಿ ಕಡ್ಲೆಕಾಯಿ ಮಾರುತ್ತಿದ್ದರು. ಹಾಗೇ ಉಭಯಕುಶಲೋಪರಿ ವಿಚಾರಿಸಿದ ಆಕೆ ಅಚ್ಚುಕಟ್ಟಾಗಿ, ಒಗೆದು ಇಸ್ತ್ರಿ ಮಾಡಿದ ಪ್ಯಾಂಟು-ಶರ್ಟು ಧರಿಸಿದ, ಹಾಗೆಯೇ ಉತ್ತಮ ಸಂಬಳದ ನೌಕರಿಯಲ್ಲಿರುವ ನನ್ನನ್ನು ಏಕವಚನದಲ್ಲಿಯೇ “ನೀನೇನ್ ಮಾಡ್ತಿದ್ದೀಯಾ? ನಿನಗೆಷ್ಟು ಮಕ್ಳು? ನಿನ್ ಹೆಡ್ತಿ ಎಲ್ಲಿ? ಅವ್ಳೇನ್ ಮಾಡ್ತಿದ್ದಳು?” ಹೀಗೆ ಮತನಾಡುತ್ತಾ ಹೋದಳು. ಒಟ್ಟಾರೆ ಆಫ್ರಿಕಾದ ನೀಗ್ರೊಗಳಿಗಿಂತ ತುಸು ಬೆಳ್ಳಗಿದ್ದ ಆಕೆಯಲ್ಲಿ ತಾನು ಮೇಲ್ಜಾತಿ, ತಾನೆಷ್ಟೇ ಗಲೀಜಾಗಿದ್ದರೂ, ಎಂತಹದ್ದೆ ಕೀಳು ವೃತ್ತಿ ಮಾಡುತ್ತಿದ್ದರೂ ತಾನು ಮೇಲು, ಹಾಗೆಯೇ ನಾನೆಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವಳ ಮುಂದೆ ನಾನು ಕೀಳು ಎಂಬ ಭಾವನೆ ಸಹಜವಾಗಿ ಎದ್ದು ಕಾಣುತ್ತಿತ್ತು. ಖಂಡಿತ, ಊರು ಬಿಟ್ಟು ಮೈಸೂರಿನಂತಹ ಮಹಾನಗರ ಸೇರಿ 20 ವರ್ಷವಾದರೂ ನನ್ನನ್ನು ಆಕೆ ನಮ್ಮೂರಿನ ಹೊಲಗೇರಿಯ/ಮಾದಿಗಕೇರಿಯ ಯುವಕನಂತೆ ನೋಡಿದಳೇ ಹೊರತು, "ಇಲ್ಲ, ಈತನೂ ಓದಿಕೊಂಡಿದ್ದಾನೆ, ಉತ್ತಮ ನೌಕರಿಯಲ್ಲಿದ್ದಾನೆ, ಈತನಿಗೂ ಗೌರವ ಕೊಡಬೇಕು, ಘನತೆಯಿಂದ ಕಾಣಬೇಕು” ಎಂಬ ಭಾವನೆ ಆಕೆಯಲ್ಲಿ ಮೂಡಲೇ ಇಲ್ಲ!ಮನದಲ್ಲೇ ಯೋಚಿಸುತ್ತಾ (ನನ್ನ ಸ್ಥಿತಿ ನೆನೆದು) ಹಾಗೆಯೇ ಮನೆ ಕಡೆ ಕಾಲಿಟ್ಟೆ. ಅಷ್ಟೊತ್ತಿಗಾಗಲೇ ನನ್ನ ಮನೆಯ ಗೇಟಿನ ಮೇಲೆ ನಾನು ತರಿಸುವ The Economic Times ಬಂದು ಬಿದ್ದಿತ್ತು. ಹಾಗೆಯೇ ಹೆಡ್‍ಲೈನ್ಸ್‍ನತ್ತ ಕಣ್ಣಾಯಿಸುತ್ತಾ ಹೋದೆ BJP Bomb shell: Quota no more for 3rd gen SC’s ಎಂದಿತ್ತು! ಅರೆ ಇದೇನಿದು ಎಂದು ಓದುತ್ತಾ ಹೋದಂಗೆ ``ಮೀಸಲಾತಿ ಫಲಾನುಭವದ ಮೂರನೇ ತಲೆಮಾರಿಗೆ ಅದರ ಅವಕಾಶ ಸಿಗಬಾರದು. ಅಂತಹ ಎರಡು ತಲೆಮಾರು ಮೀಸಲಾತಿ ಅನುಕೂಲ ಪಡೆದ ಕುಟುಂಬಗಳನ್ನು ಮೀಸಲಾತಿ ಪರಿಧಿಯಿಂದ ಹೊರಗಿಡಲಾಗುವುದು ಎಂಬುದರ ಬಗ್ಗೆ ಬಿಜೆಪಿ ಚಿಂತಿಸುತ್ತದೆ” ಎಂದು ಸುದ್ದಿ ವಿವರವಿತ್ತು. ಓದುತ್ತಾ ಹೋದಂಗೆ ದಂಗಾದೆ. ವಯಕ್ತಿಕವಾಗಿ ನಾನು ಮೀಸಲಾತಿಯ ಎರಡನೇ ತಲೆಮಾರಿನ ಫಲಾನುಭವಿ. ``ಬಿಜೆಪಿಯವರ ಪ್ರಕಾರ ನನ್ನ ಮೂರನೇ ತಲೆಮಾರಿಗೆ ಅಂದರೆ ನನ್ನ ಮಕ್ಕಳಿಗೆ ಮೀಸಲಾತಿ ಸೌಲಭ್ಯವಿಲ್ಲ” ಓದುತ್ತಿದ್ದಂಗೆ ಶಾಕ್ ಮೇಲೆ ಶಾಕ್ ಆಗುತ್ತಾ ಹೋಯಿತು. ಹಾಗೆಯೇ ಈ ಸುದ್ದಿಯನ್ನು ಈಗ ತಾನೆ ನನ್ನನ್ನು ಕೀಳಾಗಿ ಕಂಡ ನಮ್ಮೂರ ಮಹಿಳೆಯ ವರ್ತನೆ ಜೊತೆ ಹೋಲಿಸುತ್ತಾ ಹೋದೆ. ಆಕೆ ನಾನು ಮೀಸಲಾತಿ ಪಡೆದು ಉನ್ನತ ಮಟ್ಟದ್ದಲ್ಲಿದ್ದರೂ ನನ್ನನ್ನು ಯಕಶ್ಚಿತ್ ಓರ್ವ ಅಸ್ಫøಶ್ಯನ ದೃಷ್ಟಿಯಲ್ಲಷ್ಟೆ ನೋಡಿದಳು. ಅದೇ ಹಳೇ ಹೊರಗಿಡುವ ಮಾದರಿಯಲ್ಲೇ ನನ್ನನ್ನು ಮಾತನಾಡಿಸಿದಳು, ಆದರೆ ಇಲ್ಲಿ ನೋಡಿದರೆ ಬಿಜೆಪಿ 2ನೇ ತಲೆಮಾರಿಗೆ ಮಾತ್ರ ಮೀಸಲಾತಿ ಸಾಕೆನ್ನುತ್ತಿದೆ. ಹಾಗಿದ್ದರೆ ಮೀಸಲಾತಿಯಿಂದ ನಾನು ಗಳಿಸಿದ್ದಾದರೂ ಏನು? ಬಿಜೆಪಿಯವರು ಅದನ್ನು ನನ್ನ ಮುಂದಿನ ಪೀಳಿಗೆಗೆ ನಿರಾಕರಿಸುತ್ತಿರುವುದಾದರೂ ಯಾಕೆ? ಒಂದಕ್ಕೊಂದು ಸಂಬಂಧವಿಲ್ಲ ಎನಿಸಿತು. ಆದರೆ ಇದನ್ನು ಬಿಡಿಸಿ ಹೇಳುವುದು ಹೇಗೆ?
ಖಂಡಿತ, ಮೀಸಲಾತಿ ನೀತಿಗೂ ತಲೆಮಾರಿಗೂ ಸಂಬಂಧವಿಲ್ಲ. ಹಾಗೆಯೇ ಸಂವೀಧಾನದಲ್ಲಿ ಅಂತಹ ಯಾವುದೇ ಪ್ರಸ್ತಾಪ ಕೂಡ ಇಲ್ಲ. ಇರುವುದಿಷ್ಟೆ ಸಮಾಜದಲ್ಲಿ ಅಸ್ಪøಶ್ಯತೆ ಇದೆ. ಅದಕ್ಕಾಗಿ ಅದರ ನೋವನ್ನು ಅನುಭವಿಸುತ್ತಿರುವ ಜಾತಿಗಳವರನ್ನು ಒಂದು ವಿಶೇಷ ಪಟ್ಟಿಮಾಡಿ ಅದನ್ನು scheduled ಎಂದು ಕರೆದು ಅಂತಹ ಜಾತಿಗಳನ್ನು scheduled caste(SC) ಗಳೆನ್ನಲಾಯಿತು. ಹಾಗೆಯೇ ಅವರಿಗೆ ಅಂತಹ ತಾರತಮ್ಯದ ವಿರುದ್ಧ ರಕ್ಷಣೆಯಾಗಿ ಮೀಸಲಾತಿ ನೀತಿ ಜಾರಿಗೊಳಿಸಲಾಯಿತು. ಆದರೆ ಈಗ ನೋಡಿದರೆ ಬಿಜೆಪಿ ದಲಿತರ 3ನೇ ತಲೆಮಾರಿಗೆ ಅಂತ್ಯಗೊಳಿಸುವ ಅಂದರೆ ತಂದೆ, ಮಗ ಇಬ್ಬರೂ ಮೀಸಲಾತಿಯಡಿ ಸರ್ಕಾರಿ ನೌಕರಿ ಪಡೆದಿದ್ದರೆ ಅವರ ಮುಂದಿನ ಜನರೇಷನ್‍ಗೆ ಅಂದರೆ ಮಕ್ಕಳು ಮೊಮ್ಮಕ್ಕಳಿಗೆ ಅದನ್ನು ಕೊನೆಗೊಳಿಸುವ ಮಾತನ್ನಾಡುತ್ತಿದೆ! ಈ ನಿಟ್ಟಿನಲಿ ಪ್ರಶ್ನೆಯೇನೆಂದರೆ ಮೀಸಲಾತಿ ಪಡೆದ ದಲಿತರ ಮೂರನೇ ತಲೆಮಾರಿಗೆ ಅಸ್ಪøಶ್ಯತೆ ಕೊನೆಯಾಗಿದೆಯೇ ಎಂಬುದು? ಖಂಡಿತ, ಮೇಲಿನ ನನ್ನ ವಯಕ್ತಿಕ ಉದಾಹರಣೆಯಲ್ಲೇ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಅಸ್ಪøಶ್ಯತೆ ಕೊನೆಯಾಗಿಲ್ಲ, ಹಾಗೆಯೇ ಆಗುವುದೂ ಇಲ್ಲ ಎಂಬುದು. ಯಾಕೆಂದರೆ ಜ್ಞಾನ ಹೆಚ್ಚಿದಂತೆ ದಿನೇ ದಿನೇ ಅಸ್ಪøಶ್ಯತೆ ಘನೀಭವಿಸುತ್ತಿದೆ. ಅನಿಲ ರೂಪ, ದ್ರವರೂಪದಲ್ಲಿದ್ದ ಅದು ಈಗ ಘನರೂಪಕ್ಕೆ ತಿರುಗಿದೆ. ಮೊದಲು ಬರೇ ದೈಹಿಕ ಮುಟ್ಟಿಸುಕೊಳ್ಳುವಿಕೆ/ ಹೊರದೂಡುವಿಕೆಯಲ್ಲೇ ಇದ್ದ ಅದು ಈಗ ಮೇಲ್ಜಾತಿಗಳ ಮನಸ್ಸಿನ ಆಳಕ್ಕೆ ಇಳಿದುಬಿಟ್ಟಿದೆ.
ಅಂದಹಾಗೆ ಇದು ಬಿಜೆಪಿಯಲ್ಲಷ್ಟೆ ಅಲ್ಲ, ಜನಾರ್ಧನ ದ್ವಿವೇದಿ ಎಂಬ ಕಾಂಗ್ರೆಸ್ ನಾಯಕ ಕೂಡ ಮೀಸಲಾತಿಯನ್ನು 2ನೇ ತಲೆಮಾರಿಗೆ ಕೊನೆಗೊಳಿಸುವ ಮಾತನ್ನಾಡುತ್ತಾರೆ. ಇನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ``ತಾನು ಮೀಸಲಾತಿ ನೀತಿ ಕೊನೆಗೊಳಿಸುವುದಾಗಿ” ಅಬ್ಬರಿಸುತ್ತಾನೆ! ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ದಲಿತರನ್ನು ಅವರ ಮೀಸಲು ಅನುಕೂಲಗಳನ್ನು ದಲಿತೇತರರಿಗೆ ತೋರಿಸಿ, ಪ್ರಚೋದಿಸಿ ಅವರ ಓಟುಗಳನ್ನು ಪಡೆಯುವುದು. ಅಧಿಕಾರದ ಗದ್ದುಗೆ ಏರುವುದು. ಇದಕ್ಕೆ, ಇಂತಹ ಯಶಸ್ಸಿಗೆ ತಾಜಾ ಉದಾಹರಣೆ ಎಂದರೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಕಂಡ ಯಶಸ್ಸು. ಈ ಕಾರಣಕ್ಕಾಗಿ ಇದರಿಂದ ಸ್ಪೂರ್ತಿಗೊಂಡ ಬಿಜೆಪಿ, ಕಾಂಗ್ರೆಸ್ ಎರಡೂ ದಲಿತರ ಮೀಸಲಿನ ಹಕ್ಕನ್ನು ಮುಂದಿನ ತಲೆಮಾರಿಗೆ ಕಿತ್ತುಕೊಳ್ಳುವ ತಂತ್ರ, ಷಡ್ಯಂತ್ರ ರೂಪಿಸುತ್ತಿವೆ.
ದುರಂತವೆಂದರೆ ಒಂದೆಡೆ ಖಾಸಗಿ ವಲಯದ ಏರಿಕೆಯಿಂದ ಮಿಸಲಾತಿ ನೀತಿ ಅರ್ಥಕಳೆದುಕೊಳ್ಳುತ್ತಿದ್ದರೆ ಅದೇ ಕಾಲಕ್ಕೆ ದಲಿತರೂ ಕೂಡ ಖಾಸಗಿ ವಲಯದಲ್ಲಿ ಮೀಸಲಾತಿ ಕೇಳುತ್ತಿದ್ದಾರೆ. ಕೆಲವರು ತಾವು ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಅದನ್ನು ಜಾರಿಗೊಳಿಸಿಯೂ ಇದ್ದಾರೆ (ಉದಾ: ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಜಾರಿಗೊಳಿಸಿದ್ದು). ಆದರೆ ಇಂತಹ ಖಾಸಗಿ ಮೀಸಲಿನ ದಲಿತರ ಬೇಡಿಕೆಗೆ ಸದ್ಯಕ್ಕೆ ಮೆಲ್ಜಾತಿ ಕಾರ್ಪೊರೇಟ್ ಪಿತೂರಿಯೆಂದರೆ ದಲಿತರ ಅಂತಹ ಸರ್ಕಾರಿ ಮೀಸಲು ಕೋಟಾದ ಕುತ್ತಿಗೆಗೇ ಕೈಹಾಕುವುದು! ಈ ಕಾರಣಕ್ಕಾಗಿ ಬಂಡವಾಳಶಾಹಿ ಬೆಂಬಲದ ಆಮ್ ಆದ್ಮಿ ಪಕ್ಷದ ಉದಯ, ತಾತ್ಕಾಲಿಕ ಯಶಸ್ಸು ಮತ್ತು ಅಂತಹ ಯಶಸ್ಸಿನಿಂದ ಕಾಂಗ್ರೆಸ್, ಬಿಜೆಪಿಗಳಲ್ಲೂ ಮೀಸಲು ನೀತಿ ವಿರುದ್ಧ ಸಂಚು ರೂಪಿಸಲ್ಪಡುತ್ತಿರುವುದು, ಇತ್ಯಾದಿ.
ಒಟ್ಟಾರೆ ಮುಂದಿನ ದಿನಗಳು ದಲಿತರಿಗೆ ಸಂತಸದ ದಿನಗಳು ಖಂಡಿತ ಆಗಿರಲಿಕ್ಕಿಲ್ಲ. ಹಿಂದೆ 1932ರಲ್ಲಿ ಅಂಬೇಡ್ಕರರು ನಡೆಸಿದ ಮಾದರಿಯ ಹೋರಾಟ ರೂಪಿಸಬೇಕಾಗುತ್ತದೆ. ಯಾರಿಗೆ ಗೊತ್ತು ``ಗೋಧ್ರಾ ನಂತರ ಮೋದಿ ಮತ್ತೊಂದು ಮಾರಣ ಹೋಮಕ್ಕೆ” ತಯಾರಾಗುತ್ತಿರಬಹುದು. ಖಂಡಿತ, ಆ ತಂತ್ರದ ಭಾಗವಾಗಿಯೇ ಬಿಜೆಪಿಯಿಂದ ಸದ್ಯ ``ದಲಿತರಿಗೆ 3ನೇ ತಲೆಮಾರಿಗೆ ಮೀಸಲಾತಿ ರದ್ದುಗೊಳಿಸುವ” ಸಂಚಿನ ಸುದ್ದಿ ಹೊರಬಿದ್ದಿರುವುದು. ಅಂದಹಾಗೆ ಈ ಸಂದಿಗ್ಧ ಸಮಯದಲ್ಲಿ ದಲಿತರು ಇದಕ್ಕೆ ಹೇಗೆ ಸ್ಪಂಧಿಸಬೇಕು? ಅಸ್ಪøಶ್ಯತೆ ಇನ್ನೂ ಗಟ್ಟಿಗೊಳ್ಳುತ್ತಿರುವ ಈ ದಿನಗಳಲ್ಲಿ ಮೇಲ್ಜಾತಿ ರಾಜಕೀಯ ಪಕ್ಷಗಳ ಇಂತಹ ಮೀಸಲು ರದ್ದಿನ ಹುನ್ನಾರಕ್ಕೆ ಹೇಗೆ ಉತ್ತರಿಸಬೇಕು? ಹಾಗೆಯೇ ಮೀಸಲು ನೀತಿ ಉಳಿಸಿಉಕೊಳ್ಳಲು ಹೇಗೆ ತಯಾರಿಯಾಗಬೇಕು? ಅಂಬೇಡ್ಕರ್ ಹೇಳಿದ ರಾಜಕೀಯ ಮಾರ್ಗವೋ ಅಥವಾ ಬೀದಿ ಹೋರಾಟದ ಮಾರ್ಗವೋ? ಸಂದಿಗ್ಧ ಸ್ಥಿತಿ ಇದು.
ಈ ನಿಟ್ಟಿನಲಿ ಶೋಷಿತ ಸಮುದಾಯಗಳು ತಡಮಾಡದೆ ಎಚ್ಚತ್ತುಕೊಳ್ಳಬೇಕು. ಮಹಾತ್ಮ ಜ್ಯೋತಿಬಾಫುಲೆ, ಛತ್ರಪತಿ ಶಾಹು ಮಹಾರಾಜ್, ಬಾಬಾಸಾಹೇಬ್ ಅಂಬೆಡ್ಕರ್ ಹೀಗೆ ಶೋಷಿತ ಸಮುದಾಯಗಳ ಮಹನೀಯರುಗಳು ಗಳಿಸಕೊಟ್ಟ ಮೀಸಲುನೀತಿಯನ್ನು ಉಳಿಸಿಕೊಳ್ಳಬೇಕು. ``ಮೊದಲು ಅಸ್ಪøಶ್ಯತೆ 100ಕ್ಕೆ 100 ಕೊನೆಗೊಳ್ಳಲಿ. ಆ ಮೇಲೆ ನಾವೇ ಆ ನೀತಿಯಿಂದ ಹೊರಬರುತ್ತೇವೆ” ಎಂದು ಮೇಲ್ವರ್ಗಗಳಿಗೆ ಬಿಡಿಸಿ ಹೇಳಬೇಕು. ಯಾಕೆದರೆ ವಯಕ್ತಿಕವಾಗಿ ನಾನಿನ್ನೂ ನೌಕರಿಯಲ್ಲಿದ್ದರೂ ನನ್ನೂರಿನ ಆ ಮೇಲ್ಜಾತಿ ಕಡ್ಲೆಕಾಯಿ ಮಹಿಳೆ ನನಗೆ ಗೌರವ ಕೊಡಲಿಲ್ಲ. ಅಸ್ಪøಶ್ಯತಾಚರಣೆಯ ದೃಷ್ಟಿಯಿಂದಲೇ ಆಕೆ ನನ್ನನ್ನು ಕಂಡಳು. ಇನ್ನು ಆಕೆ ಮೀಸಲಾತಿ ಕೊನೆಗೊಳ್ಳುವ ನನ್ನ ಮುಯಂದಿನ ತಲೆಮಾರಿಗೆ ಮತ್ತು ಹಾಗೆ ಮೀಸಲಾತಿ ಕೊನೆಗೊಂಡು ಅವಳ ಹಾಗೆ ಕಡ್ಲೆಕಾಯಿ ಮಾರುವ ಸ್ಥಿತಿಗೆ ಬರುವ ನನ್ನ ಮುಂದಿನ ತಲೆಮಾರಿಗೆ, ವಯಕ್ತಿಕವಾಗಿ ನನ್ನಿಬ್ಬರು ಮಕ್ಕಳಿಗೆ ಆಕೆ ಗೌರವ ಕೊಡುವಳೇ? ಸ್ಫøಶ್ಯ ಮನೋಭಾವದಿಂದ ಕಾಣುವಳೇ? ಎಂಬುದು. ಶೋಷಿತ ಸಮುದಾಯಗಳು ಈ ನಿಟ್ಟಿನಲಿ ಗಂಭೀರವಾಗಿ ಚಿಂತಿಸಲಿ, ಮುಂದೊದಗುವ ಅಪಾಯದಿಂದ ಪಾರಾಗಲೀ, ಹೋರಾಟಕ್ಕೆ ಅಣಿಯಾಗಲಿ ಎಂಬುದೇ ಸದ್ಯದ ಕಳಕಳಿ.
No comments:
Post a Comment