Friday, 16 May 2014

ಸ್ವಾಭಿಮಾನ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ...

                                                            -ರಘೋತ್ತಮ ಹೊ.ಬ


  ”ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ ಬಗ್ಗೆ ಅಂಬೇಡ್ಕರರು ತಲೆಕೆಡಿಸಿಕೊಂಡಷ್ಟು ಈ ವಿಶ್ವದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅದರಲ್ಲೂ ದಲಿತರ ಸ್ವಾಭಿಮಾನದ ಪ್ರಶ್ನೆ? ಹಾಗೆಯೇ ದಲಿತ ಮಹಿಳೆಯ ಸ್ವಾಭಿಮಾನದ ಪ್ರಶ್ನೆ? ಇಂತಹ ಪ್ರಶ್ನೆಗಳಿಗೆ ಉತ್ತರ  ಹುಡುಕುವುದರಲ್ಲಿಯೇ, ಶೋಷಿತರಿಗೆ ಸ್ವಾಭಿಮಾನದ ಪಾಠ ಕಲಿಸುವುದರಲ್ಲಿಯೇ, ಆತ್ಮಗೌರವ ತಂದುಕೊಡುವುದರಲ್ಲಿಯೇ ಅಂಬೇಡ್ಕರ್‍ರವರು ತಮ್ಮ ಜೀವನವಿಡೀ ಶ್ರಮಿಸಿದರು. ಒಂದರ್ಥದಲ್ಲಿ ಅವರು ಸ್ವಾಭಿಮಾನದ ಕಿಡಿ.
 
  ಕಿಡಿ ಅಥವಾ ಕೋಪ, ಹಾಗೆಂದಾಕ್ಷಣ ಅಂಬೇಡ್ಕರರು ಇದ್ದಕ್ಕಿದ್ದ ಹಾಗೆಯೇ ದಲಿತರ ಸ್ವಾಭಿಮಾನದ ಬಗ್ಗೆ ಈ ಪರಿ ತಲೆಕೆಡಿಸಿಕೊಂಡರೆ ಅಥವಾ  ಯಾರದೋ  ಮೇಲಿನ ದ್ವೇಷಕ್ಕೆ  ಹಾಗೆ  ನಿರ್ಧಾರಕ್ಕೆ ಬಂದರೆ? ಖಂಡಿತ ಇಲ್ಲ. ಹಾಗಿದ್ದರೆ? 1935 ಅಕ್ಟೋಬರ್ 13ರಂದು ನಾಸಿಕ್‍ನ ಈಯೋಲಾ ಎಂಬಲ್ಲಿ ಅಂಬೇಡ್ಕರರು  ಕೇಳುವ ಪ್ರಶ್ನೆಗಳನ್ನು ನೋಡಿ1.
1.ಈ ಭಾರತದಲ್ಲಿ ನೀವೊಬ್ಬರೇ(ದಲಿತರು) ಯಾಕೆ ಶೋಷಣೆಗೊಳಗಾಗುತ್ತಿದ್ದೀರಿ?
2.ಹಿಂದೂ ಧರ್ಮ ನಿಮಗೆ ಕರುಣೆ ತೋರಿಸುತ್ತಿಲ್ಲವೇಕೆ?
3.ಹಿಂದುತ್ವದಲ್ಲಿ ನಿಮಗೆ ಸಮಾನತೆ ಇದೆಯೇ?
4.ಹಿಂದುತ್ವದಲ್ಲಿ ನಿಮಗೆ ಸ್ವಾತಂತ್ರ್ಯವಿದೆಯೇ?
   
  ಬಹುಶಃ ಈ ಪ್ರಶ್ನೆಗಳು ಹಿಂದೂಗಳಿಗೆ ಎಲ್‍ಕೆಜಿ ಮಕ್ಕಳ ಪ್ರಶ್ನೆಗಳ ಹಾಗೆ  ಕಾಣಬಹುದು. ಆದರೆ ಶೋಷಿತರಿಗೆ? ಅವು ಅಂಬೇಡ್ಕರರ ಸ್ವಾಭಿಮಾನದ ಕಿಡಿಯ ಸಣ್ಣ ಕಣಗಳಂತೆ ಕಂಡರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ  ಅಂಬೇಡ್ಕರರಿಂದ ಇಂತಹ ಪ್ರಶ್ನೆಗಳನ್ನು ಎದುರಿಸಿದ  ಯಾವುದೇ ದಲಿತನಾದರೂ “ತನ್ನೊಬ್ಬನ ಮೇಲೆ  ಯಾಕೆ  ದೌರ್ಜನ್ಯ ನಡೆಯುತ್ತಿದೆ? ಯಾಕೆಂದರೆ  ನಾನು ಕೀಳು ಜಾತಿಯವನು. ಹಿಂದೂಗಳೆಲ್ಲ ನಮಗೆ ಕರುಣೆ  ತೋರಿಸುತ್ತಿಲ್ಲ, ಯಾಕೆಂದÀರೆ ನಾವು ಕರುಣೆಗೆ ಅರ್ಹರಲ್ಲ.  ಹಿಂದೂಗಳೆಲ್ಲ ನಮಗೆ ಸಮಾನತೆ ನೀಡುತ್ತಿಲ್ಲ, ಯಾಕೆಂದರೆ ನಾವು ಸಮಾನತೆಗೆ ಅರ್ಹರಲ್ಲ.  ಹಿಂದುತ್ವದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ, ಯಾಕೆಂದರೆ ನಾವು ಸ್ವಾತಂತ್ರ್ಯಕ್ಕೂ ಕೂಡ ಅರ್ಹರಲ್ಲ” ಎಂದುಕೊಳ್ಳುತ್ತಾನೆಯೇ? ಖಂಡಿತ ಇಲ್ಲ. ಬದಲಿಗೆ ಆತ  ಅಂಬೇಡ್ಕರರ ಪ್ರಶ್ನೆಗಳ ಬಗ್ಗೆ ಗಹನವಾಗಿ ಚಿಂತಿಸುತ್ತಾನೆ. ನಾನು ಯಾರು? ನಾನೇಕೆ ಹೀಗಾದೆ? ನನ್ನ ಹೀನಾಯ ಸ್ಥಿತಿಗೆ ಕಾರಣರಾರು? ಎಂದು ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಒಮ್ಮೆ ಆತ ಪ್ರಶ್ನಿಸಿಕೊಳ್ಳಲು  ಪ್ರಾರಂಭಿಸಿದನೆಂದರೆ  ಮುಗಿಯಿತು ಆತ ಸ್ವಾಭಿಮಾನಿಯಾದನೆಂದೇ ಅರ್ಥ. ಅಂದಹಾಗೆ ಅಂಬೇಡ್ಕರರು ಬಯಸಿದ್ದು ಇದನ್ನೆ!
   ಹಾಗೆ ಹೇಳುವುದಾದರೆ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಅವರ ಆತ್ಮಕತೆಯ ಪುಟಗಳತ್ತ ಚಿತ್ತಹರಿಸುವುದಾದರೆ, ಅಂಬೇಡ್ಕರರು  1936 ಮೇ 17ರಂದು ಥಾಣೆ ಜಿಲ್ಲೆಯ ಕಲ್ಯಾಣ್ ಎಂಬಲ್ಲಿ ತನ್ನ  ಸ್ವಾಭಿಮಾನವನ್ನು ಕೆಣಕಿದ ಬಾಲ್ಯದ ಕೆಟ್ಟ ಘಟನೆಯನ್ನು ಹೀಗೆ ವಿವರಿಸುತ್ತಾರೆ2 “ನಾನು ಇಂಧೋರ್ ಸಮೀಪದ ಮಹೌ ಎಂಬಲ್ಲಿ ಹುಟ್ಟಿದೆ. ನನ್ನ ತಂದೆ ಮಹೌನಲ್ಲಿ ಸೇನೆಯ ಸುಬೇದಾರ್ ಹುದ್ದೆಯಲ್ಲಿದ್ದರು. ನಾವು ಅಲ್ಲಿದ್ದಷ್ಟು ದಿನ ಅಂದರೆ ಸೇನೆಯ ಕ್ವಾರ್ಟರ್ಸ್‍ನ ಕಾರ್ಯಸ್ಥಾನದಲ್ಲಿಷ್ಟೂ ದಿನ ನಮಗೆ ಅಸ್ಪøಶ್ಯತೆಯ  ಗಂಧ ಗಾಳಿಯು ತಿಳಿದಿರಲಿಲ್ಲ. ಆದರೆ  ನನ್ನ ತಂದೆ  ಸೇನೆಯಿಂದ ನಿವೃತ್ತರಾಗಿ ಸತಾರಕ್ಕೆ ಬಂದಾಗ ನನಗೆ ಅಸ್ಪøಶ್ಯತೆಯ ಪ್ರಥಮ ಅನುಭವವಾಯಿತು. ಮುಖ್ಯವಾಗಿ ಅದು ಕ್ಷೌರಕ್ಕೆ ಸಂಬಂಧಪಟ್ಟಂತೆ. ಯಾಕೆಂದರೆ  ಸತಾರದÀಲ್ಲಿ  ಅಷ್ಟೊಂದು ಕ್ಷೌರಿಕರಿದ್ದರೂ ಯಾವುದೇ ಕ್ಷೌರಿಕನೂ ನಮ್ಮ ತಲೆಕೂದಲು ಕತ್ತರಿಸಲು ಮುಂದೆ ಬರುತ್ತಿರಲಿಲ್ಲ.  ಈ ಕಾರಣಕ್ಕಾಗಿ ದುರಂತವೆಂದರೆ ನಮ್ಮ ಹಿರಿಯ ಅಕ್ಕನೇ  ನಮ್ಮನ್ನು ಮನೆಯ  ಹೊರಗಡೆ ಕೂರಿಸಿ  ನಮ್ಮ ತಲೆಗೂದಲನ್ನು ಕತ್ತರಿಸಬೇಕಾಗುತ್ತಿತ್ತು! ಒಂದರ್ಥದಲಿ ಇದು ನನ್ನನ್ನು ವಿಚಲಿತಗೊಳಿಸಿತು. ಯಾಕೆ ಹೀಗೆ ಇಷ್ಟೊಂದು ಕ್ಷೌರಿಕರಿದ್ದರೂ ನಮ್ಮ ಕೂದಲನ್ನು ಕತ್ತರಿಸಲು ಅವರು ಮುಂದೆ ಬರುತ್ತಿಲ್ಲವೇಕೆ? ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು”.
 
  ಮತ್ತೊಂದು ಘಟನೆ3: “ನಮ್ಮ ತಂದೆ ಗೋರೆಗಾಂವ್‍ನಲ್ಲಿರಬೇಕಾದರೆ ಅವರು ಒಮ್ಮೆ ನಮ್ಮನ್ನು  ಗೋರೆಗಾಂವ್‍ಗೆ ಬನ್ನಿ ಎಂದು ಕರೆದರು. ಹಾಗೆಯೇ ಪ್ರಯಾಣದ ಖರ್ಚಿಗೆ  ಎಂದು ಅವರು ಸ್ವಲ್ಪ ಹಣವನ್ನೂ ಕಳುಹಿಸಿದ್ದರು. ಆ ಹಣದಿಂದ  ಹೊಸಬಟ್ಟೆ ಖರೀದಿಸಿ, ರೈಲಿನಲ್ಲಿ ಪಯಣಿಸುವ ಕನಸು ಕಾಣುತ್ತಾ  ಖುಷಿಯಿಂದ ನಾನು, ನನ್ನ ಸಹೋದರ ಮತ್ತು  ನನ್ನ ಅಕ್ಕನ ಮಗಳು ಮೂವರು ಗೋರೆಗಾಂವ್‍ನತ್ತ ಹೊರಟೆವು.  ಹಾಗೆಯೇ ನಾವು ಬರುವುದಾಗಿ ಅದಾಗಲೇ ನಮ್ಮ ತಂದೆಯವರಿಗೆ ಪತ್ರವೊಂದನ್ನು ಸಹ ಕಳುಹಿಸಿದ್ದೆವು. ಆದರೆ ಅದು ಅವರಿಗೆ  ತಲುಪಿರಲಿಲ್ಲ. ಆ ಕಾರಣಕ್ಕಾಗಿ ನಾವು ಗೋರೆಗಾಂವ್ ತಲುಪಿದಾಗ  ನಮ್ಮ ತಂದೆಯವರು ಕಳುಹಿಸಿರಬಹುದೆನ್ನುವ ಸೇವಕನಿಗಾಗಿ ನಾವು ಹುಡುಕಿದರೂ ಆತ ನಮಗೆ ಕಾಣಲಿಲ್ಲ. ವಿಧಿಯಿಲ್ಲದೆ  ಮುಕ್ಕಾಲು ಗಂಟೆ ನಾವು ಸ್ಟೇಷನ್‍ನಲ್ಲಿಯೇ ಕಳೆದೆವು. ಯಾರಾದರೂ ಬರಬಹುದು ನಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ  ಕುಳಿತೆವು. ಅದೇ ಸಮಯಕ್ಕೆ ಅಲ್ಲಿಗೆ ಬಂದ  ಸ್ಟೇಷನ್ ಮಾಸ್ಟರ್ ’ನೀವು ಯಾರಿಗಾಗಿ ಕಾಯುತ್ತಿದ್ದೀರಿ? ಯಾವ ಜಾತಿ? ಎಲ್ಲಿಗೆ ಹೋಗಬೇಕು?’ ಎಂದೆಲ್ಲ ಕೇಳಿದ. ನಾನು ಅವನಿಗೆ ‘ನಾವು ಮಹಾರ್ ಜಾತಿಗೆ ಸೇರಿದವರು’ ಎಂದು ನೇರವಾಗಿಯೇ ಹೇಳಿದೆ. ನಾನು ಹಾಗೆನ್ನುತ್ತಲೇ ಆತ ಆಘಾತಕ್ಕೊಳಗಾದ! ತಕ್ಷಣ ನಮ್ಮಿಂದ ಐದು ಹೆಜ್ಜೆ ಹಿಂದೆ ಸರಿದ! ಆದರೆ ನಾವು ಉತ್ತಮವಾಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ಉತ್ತಮ ಕುಲಕ್ಕೆ ಸೇರಿದವರಿರಬಹುದೆಂದುಕೊಂಡು ಎತ್ತಿನಗಾಡಿಯೊಂದನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ. ಆದರೆ ನಾವು ಮಹಾರ್ ಜಾತಿಯವರಾಗಿದ್ದರಿಂದ ಯಾವುದೇ ಎತ್ತಿನಗಾಡಿಯವನು ನಮ್ಮನ್ನು ಕೂರಿಸಿಕೊಂಡು ಹೋಗಲು ಮುಂದೆ ಬರಲಿಲ್ಲ. ಕಡೆಗೂ ಒಬ್ಬ ಒಪ್ಪಿಕೊಂಡನಾದರೂ  ಆತನ ಕಂಡೀಷನ್ ಏನೆಂದರೆ ‘ನಾನು ಗಾಡಿ ಚಲಾಯಿಸುವುದಿಲ್ಲ. ನಿಮ್ಮಲ್ಲೆ ಯಾರಾದರೊಬ್ಬರು ಗಾಡಿ  ಚಲಾಯಿಸಿ. ನಾನು ನಿಮ್ಮ ಜೊತೆ ಬರುತ್ತೇನೆ’ ಎಂಬುದಾಗಿತ್ತು! ಅಂದಹಾಗೆ ಆತ ಹಾಗೆ ಬರುತ್ತೇನೆ
ಎಂದಾಗ ಸಮಯ ಸಂಜೆ ಏಳು ಗಂಟೆಯಾಗಿತ್ತು. ಹಾಗೆಯೇ ಮಿಲಿಟರಿ  ಏರಿಯಾದವನಾದ್ದರಿಂದ ನನಗೆ ಗಾಡಿ ಚಲಾಯಿಸುವುದು  ಕಷ್ಟವೇನಿರಲಿಲ್ಲ. ಅವನ ಕಂಡೀಷನ್‍ಗೆ ಒಪ್ಪಿಕೊಂಡು  ನಾನು ಮತ್ತು ಉಳಿದ ಮಕ್ಕಳೆಲ್ಲ ಗಾಡಿಯಲ್ಲಿ ಗೋರೆಗಾಂವ್ ಕಡೆ ಹೊರಟೆವು”.
  “ಸ್ವಲ್ಪ ದೂರ ಹೋದನಂತರ ಒಂದು ಊರಿನ ಹೊರಗಡೆ ಒಂದು ಕೊಳ ಕಂಡೆವು. ‘ಮುಂದೆ ಎಲ್ಲಿಯೂ ನಿಮಗೆ ನೀರು ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ನೀವು ಇಲ್ಲಿಯೇ ನಿಮ್ಮ ಊಟವನ್ನು ಮಾಡಬಹುದು’ ಎಂದು  ಗಾಡಿಯವನು ನಮಗೆ ಸೂಚಿಸಿದ. ಅವನು ಹೇಳಿದ ಹಾಗೆ ಗಾಡಿಯಿಂದ ಇಳಿದ ನಾವು, ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ತಿಂದು ಕೆಸರು ಕೆಸರಾದ ಗಬ್ಬುನಾರುತ್ತಿದ್ದ ಆ ಕೊಳದ ನೀರನ್ನೆ ಕುಡಿದೆವು. ಗಾಡಿಯವ ಗ್ರಾಮದ ಒಳಕ್ಕೆ ಹೋಗಿ ಅಚ್ಚುಕಟ್ಟಾಗಿ ತನ್ನ ಊಟ ಮುಗಿಸಿ ಮತ್ತೆ  ನಮ್ಮ ಬಳಿ ಬಂದ”!  
  “ಇತ್ತ ನಮ್ಮ ಪ್ರಯಾಣ ಮುಂದುವರಿದ ಹಾಗೇ  ಕತ್ತಲು ಹೆಚ್ಚಾಗತೊಡಗಿತ್ತು. ಯಾವುದೇ ಬೀದಿ ದೀಪವಾಗಲೀ ಬೆಳಕಿನ ಸಣ್ಣ ತುಣುಕಾಗಲೀ ನಮಗೆ ಕಾಣಲಿಲ್ಲ. ಈ ಕಾರಣಕ್ಕಾಗಿ  ಭಯಗೊಂಡ ನಾವು ಕತ್ತಲೆ ಮತ್ತು ಒಂಟಿತನದಿಂದಾಗಿ ಹೆದರಿ ಜೋರಾಗಿ ಅಳಲಾರಂಭಿಸಿದೆವು. ಅಷ್ಟೊತ್ತಿಗಾಗಲೇ ಅರ್ಧರಾತ್ರಿಯಾಗಿತ್ತು. ಆ ಸಂದರ್ಭದಲ್ಲಿ  ನಾವು ಎಂತಹ ಸ್ಥಿತಿ ತಲುಪಿದ್ದೆವೆಂದರೆ ‘ನಾವು, ನಮ್ಮಪ್ಪರಾಣೆಗೂ ಗೋರೆಗಾಂವ್ ತಲುಪುವುದಿಲ್ಲ’ ಎಂದು ಹತಾಶೆಗೊಂಡೆವು. ಹಾಗೆ ಮುನ್ನಡೆಯುತ್ತಲೇ ನಾವು ಒಂದು ಚೆಕ್‍ಪೋಸ್ಟ್ ತಲುಪಿದೆವು. ಚೆಕ್‍ಪೋಸ್ಟ್‍ನ ಕಾವಲುಗಾರನನ್ನು ನಾನು ‘ಇಲ್ಲಿ ಎಲ್ಲಾದರೂ, ತಿನ್ನಲು ಏನಾದರೂ ಸಿಗುತ್ತದೆಯಾ?’ ಎಂದು ಕೇಳಿದೆ. ಕಾವಲುಗಾರ ಪರ್ಷಿಯನ್ ಭಾಷೆ ಮಾತನಾಡುತ್ತಿದ್ದನಾದ್ದರಿಂದ ಅವನ ಜೊತೆ ಪರ್ಷಿಯನ್ ಭಾಷೆಯಲ್ಲಿಯೇ ಮಾತನಾಡಿದೆ. ನಮ್ಮ ಹಿನ್ನೆಲೆ ತಿಳಿದ ಆತ ಕೂಡ ಅಷ್ಟೆ, ಅಷ್ಟೆ ಕ್ರೂರವಾಗಿ ಉತ್ತರಿಸಿದ ಹಾಗೂ ಸಮೀಪದಲ್ಲಿ ಬೆಟ್ಟವೊಂದಿದೆ ಅಲ್ಲಿ ನಿಮಗೆ ಏನಾದರೂ ಸಿಗುತ್ತದೆಂಬಂತೆ ಸಮೀಪದಲ್ಲೇ ಇದ್ದ ಬೆಟ್ಟದತ್ತ ಕೈತೋರಿಸಿದ. ವಿಧಿಯಿಲ್ಲದೆ ಹೇಗೋ ಆ ರಾತ್ರಿಯನ್ನು ನಾವು ಅಲ್ಲೇ ಆ ಬೆಟ್ಟದ ಪಕ್ಕದಲ್ಲಿಯೇ ಇದ್ದ ಕೊರಕಲೊಂದರಲ್ಲಿ ಕಳೆದೆವು! ಹಾಗೆಯೇ ಬೆಳಿಗ್ಗೆಯಾದದ್ದೆ ತಡ ಗೋರೆಗಾಂವ್‍ನತ್ತ ಮತ್ತೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಹೀಗೆ ಸಾಗಿದ ನಮ್ಮ ಪ್ರಯಾಣ ಕೊನೆಗೊಂಡದ್ದು ಮಧ್ಯಾಹ್ನಕ್ಕೆ. ಏಕೆಂದರೆ ಆ ದಿನ ನಾವು ಗೋರೆಗಾಂವ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಅದೂ ವಿಪರೀತ ಸುಸ್ತಾಗಿದ್ದೆವು. ಒಂದರ್ಥದಲ್ಲಿ ಅರ್ಧ ಸತ್ತಿದ್ದೆವು ಎಂದರೆ ಅತಿಶಯೋಕ್ತಿಯೆನಲ್ಲ”!”
 
  ಮರದಡಿಯಲ್ಲಿ ಗಳಗಳನೆ ಅತ್ತದ್ದು4! “ಮೂರನೆಯ ಘಟನೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅದು ನಾನು ಬರೋಡ ರಾಜ್ಯದಲ್ಲಿ ಹುದ್ದೆಯಲ್ಲಿದ್ದ ಸಂದರ್ಭ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವಾಗ ಬರೋಡ ರಾಜ್ಯದಿಂದ ನಾನು ವಿದ್ಯಾರ್ಥಿ ವೇತನ ಪಡೆದಿದ್ದೆ. ಆ ಸಂಧರ್ಭದಲ್ಲಿ ಆದ ಒಪ್ಪಂದದಂತೆ ಇಂಗ್ಲೆಂಡಿನಿಂದ ಹಿಂದಿರುಗಿ ಬಂದಾಗ ಒಪ್ಪಂದದಂತೆ ಬರೋಡ ಸಂಸ್ಥಾನದಲ್ಲಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿಕೊಂಡೆ. ದುರಂತವೆಂದರೆ ಆ ಸಂದರ್ಭದಲ್ಲಿ ಬರೋಡದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಕೂಡ ಸಿಗಲಿಲ್ಲ. ಬರೋಡದಂಥ ಆ ಮಹಾನಗರದಲ್ಲಿ ಒಬ್ಬ ಹಿಂದೂವಿರಬಹುದು, ಮುಸಲ್ಮಾನನಿರಬಹುದು ಯಾರೊಬ್ಬರೂ ನನಗೆ ಬಾಡಿಗೆಗೆ ಮನೆ ಕೊಡಲು ಮುಂದೆಬರಲಿಲ್ಲ. ಕಡೆಗೆ ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆ. ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಹಿಂದಿರುಗಿ ಬಂದಿದ್ದವನಾದ್ದರಿಂದ ನನ್ನ ಮೈ ಬಣ್ಣ ಸುಂದರವಾಗಿತ್ತು! ಹಾಗೆಯೇ ಆಕರ್ಷಕ ವ್ಯಕ್ತಿತ್ವ ಕೂಡ ನನ್ನದಾಗಿತ್ತು. ಆ ಕಾರಣಕ್ಕಾಗಿ ನನಗೆ ನಾನೇ ಒಂದು ಪಾರ್ಸಿ ಹೆಸರನ್ನು ಇಟ್ಟುಕೊಂಡು ಆ ಧರ್ಮಛತ್ರದಲ್ಲಿ ವಾಸಿಸಲು ಪ್ರಾರಂಭಿಸಿದೆ! ಅಂದಹಾಗೆ ಆಗ ನಾನು ಇಟ್ಟುಕೊಂಡ ಹೆಸರು ‘ಅಡಲ್ಜಿ ಸೊರಾಬ್ಜಿ’ ಎಂಬುದಾಗಿತ್ತು! ನನ್ನನ್ನು ಪಾರ್ಸಿ ಎಂದು ನÀಂಬಿದ  ಆ ಧರ್ಮಛತ್ರದ  ಪಾರ್ಸಿ ಜನಾಂಗದ ಮ್ಯಾನೇಜರ್  ನನಗೆ ದಿನವೊಂದಕ್ಕೆ 2ರೂ ಬಾಡಿಗೆಯಂತೆ ಮನೆ ನೀಡಿದ. ಆದರೆ ಸತ್ಯ ಗೊತ್ತಾಗಲೇಬೇಕಲ್ಲವೆ? ಯಾಕೆಂದÀರೆ ಬರೋಡದ ರಾಜಶ್ರೇಷ್ಠ ಗಾಯಕವಾಡ ಮಹಾರಾಜರು ತನ್ನ ಆಸ್ಥಾನದಲ್ಲಿ ಮಹಾರ್ ಹುಡುಗನೊಬ್ಬನನ್ನು ಅಧಿಕಾರಿಯಾಗಿ ನೇಮಿಸಿಕೊಂಡಿರುವ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು! ಮತ್ತು ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಸುಳ್ಳು ಹೆಸರಿನಲ್ಲಿ ಉಳಿದುಕೊಂಡಿದ್ದು  ಕೂಡ ಅನುಮಾನಕ್ಕೆ ಕಾರಣವಾಗಿತ್ತು. ಕಡೆಗೂ ನನ್ನ ಗುಟ್ಟು ಹೊರಬಿತ್ತು”.

    “ಏಕೆಂದರೆ ಅಲ್ಲಿ ನಾನು ಉಳಿದುಕೊಂಡಿದÀ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳಲು  ಪ್ರಾರಂಭಿಸುತ್ತಿದ್ದಂತೆ ದೊಣ್ಣೆಗಳನ್ನು ಹಿಡಿದಿದ್ದ ಹದಿನೈದರಿಂದ ಇಪ್ಪತ್ತು ಜನರಷ್ಟಿದ್ದ ಪಾರ್ಸಿ ಜನರ ಗುಂಪೊಂದು ನನ್ನ ಮೇಲೆ ಧಾಳಿ ಮಾಡಿತು. ನನ್ನನ್ನು ಕೊಲ್ಲುವುದಾಗಿ ಕೂಗಾಡಿದ ಆ ಗುಂಪು ನಾನು ಯಾರೆಂದು ಪ್ರಶ್ನಿಸಿತು.  ನಾನು ಸಾವಧಾನವಾಗಿ ’ನಾನೊಬ್ಬ ಹಿಂದೂ’ ಎಂದು ಉತ್ತರಿಸಿದೆ. ಆದರೆ ನನ್ನ ಉತ್ತರದಿಂದ ತೃಪ್ತರಾಗದ ಉದ್ರಿಕ್ತ ಆ ಗುಂಪು ನನ್ನ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿತು ಮತ್ತು ನನ್ನನ್ನು ತಕ್ಷಣವೇ ಕೊಠಡಿ ಖಾಲಿ ಮಾಡುವಂತೆ ಆ ಗುಂಪು ಕೂಗಿ ಹೇಳಿತು. ನಿಜಕ್ಕೂ ಹೇಳುವುದಾದರೆ ನನ್ನ ದೃಢಮನಸ್ಸು ಮತ್ತು ನಾನು ಗಳಿಸಿದ ಜ್ಞಾನ ಆ ಸಂದರ್ಭವನ್ನು ನಾನು ಧೈರ್ಯದಿಂದ ಎದುರಿಸಲು ನನಗೆ ಬಲ ನೀಡಿತು ಎನ್ನಬಹುದು. ಏಕೆಂದರೆ ನಮ್ರತೆಯಿಂದ ಆ ಗುಂಪನ್ನು ನಾನು ನನಗೆ ಎಂಟು ಗಂಟೆಗಳ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡೆ.  ಹಾಗೆಯೇ ಆ ದಿನ ಪೂರ್ತಿ ನಾನು ಉಳಿದುಕೊಳ್ಳಲು ಮನೆಯೊಂದನ್ನು ಹುಡುಕುವಲ್ಲಿಯೇ ಕಳೆದೆ. ಆದರೆ ‘ನನ್ನ ತಲೆಯನ್ನು ಅಡಗಿಸಿಕೊಳ್ಳಲು’’ಸ್ಥಳವೊಂದನ್ನು ಪಡೆಯುವಲ್ಲಿ ಕಡೆಗೂ ನಾನು ವಿಫಲನಾದೆ! ನನ್ನ ಬಹುತೇಕ ಸ್ನೇಹಿತರನ್ನು ಈ ಸಂದರ್ಭದಲ್ಲಿ ನಾನು ಸಂಪರ್ಕಿಸಿದೆ. ಆದರೆ ಅವರೆಲ್ಲರೂ ನನ್ನ ಬೇಡಿಕೆಗೆ ನಕಾರಾತ್ಮಕವಾಗಿ ಉತ್ತರ ನೀಡಿದರು. ನನಗೆ ವಸತಿ  ಒದಗಿಸಿಕೊಡುವಲ್ಲಿ  ತಮ್ಮ ಅಸಹಾಯಕತೆಯನ್ನು ಅವರು ಪ್ರದರ್ಶಿಸಿದರು. ನಾನು ತೀವ್ರವಾಗಿ ನಿರಾಶಗೊಂಡೆ ಮತ್ತು ಒಂದರ್ಥದಲಿ ಹತಾಶನಾದೆ. ಮುಂದೇನು ಮಾಡಲಿ? ನನಗೆ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ನಿರಾಶ ಮತ್ತು ಹತಾಶ ಮನಸ್ಥಿತಿಯಲ್ಲಿ  ಒಂದೆಡೆ  ಮರದ ನೆರಳಲ್ಲಿ ಕುಳಿತೆ. ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ದುಖಃ ತಡೆಯಲಾರದೆ ಗಳಗಳನೆ ಅತ್ತೆ. ಕಡೆಗೆ ಮನೆ ದೊರೆಯುವ ಯಾವ  ಭರವಸೆಯೂ ಇಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕೆಲಸ ಬಿಡಲು ನಿರ್ಧರಿಸಿದೆ ಮತ್ತು ನನ್ನ ಹುದ್ದೆಗೆ ರಾಜೀನಾಮೆ ಇತ್ತು ಆ ರಾತ್ರಿಯೇ ರೈಲಿನಲ್ಲಿ ವಾಪಸ್ ಮುಂಬೈಗೆ ಪ್ರಯಾಣ ಬೆಳೆಸಿದೆ”.
 
   ಪರಮಶ್ರೇಷ್ಠ, ಅಪ್ಪಟ ಸ್ವಾಭಿಮಾನಿ ಎದುರಿಸಿದ  ಘೋರ ಕ್ಷಣಗಳಿವು. ಯಾವ ಜ್ಞಾನಿ ವಿದೇಶಗಳಿಂದ ಸಾಲು ಸಾಲು ಪದವಿಗಳಿಸಿ  ಜ್ಞಾನದ ಹೊರೆಯನ್ನೇ ಹೊತ್ತುತಂದನೋ  ಅಂತಹ  ವಿಶ್ವಜ್ಞಾನಿಗೆ  ಭಾರತದಲ್ಲಿ ಸಂದ ಮರ್ಯಾದೆಯಿದು! ಹಾಗೆಯೇ ಜಾತಿಯ ಕೂಪಕ್ಕೆ ಸಿಕ್ಕು ಸಮಾಜ ತಲುಪಿರುವ ದಯನೀಯ  ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇದು. ಅಂಬೇಡ್ಕರ್‍ರಂತಹ ಮಹಾನ್ ಜ್ಞಾನಿಗೇ  ಈ ಸಮಾಜ ಮನೆ ಕೊಡಲು ನಿರಾಕರಿಸಿತೆಂದರೆ ಇನ್ನು ನಮ್ಮಂತಹ ಸಾಮಾನ್ಯ ಅಸ್ಪøಶ್ಯರ ಪಾಡೇನಾಗಬೇಡ! ಅದೂ ಅಂಬೇಡ್ಕರರು  ಈ ಜಾತಿವಾದಿಗಳಿಗೋಸ್ಕರ  ತಮ್ಮ  ಹೆಸರನ್ನು ’ಅಡಲ್ಜಿ ಸೊರಾಬ್ಜಿ’ ಎಂದು ಸುಳ್ಳು ಕೂಡ ಹೇಳಬೇಕಾಯ್ತು!
 
    ಅಂದಹಾಗೆ ಈಗ ಬೇರೆ ಏನು? ದಲಿತರಿಗೆ ಮೇಲ್ಜಾತಿಗಳವರು ಮನೆಕೊಡುತ್ತಾರೆಯೇ?  ಖಂಡಿತ ಇಲ್ಲ. ಅದೂ ಕೊಟ್ಟರೂ  ದಲಿತರು ಸುಳ್ಳು ಜಾತಿ ಹೇಳಬೇಕಷ್ಟೆ. ಮಹದೇವಯ್ಯ ಎಂಬ ತಮ್ಮ ಹೆಸರನ್ನು  ಮಹದೇವೇಗೌಡ, ಮಹದೇವಪ್ಪ, ಮಹದೇವಾಚಾರ್, ಮಹದೇವ ಶೆಟ್ಟಿ ಹೀಗೆ ಬದಲಿಸಿಕೊಂಡು ಸುಳ್ಳು ಹೇಳಬೇಕಷ್ಟೆ! ಅಕಸ್ಮಾತ್  ಮೇಲ್ಜಾತಿ ಜನರಿಗೆ  ಇವರ ಒರಿಜಿನಲ್ ಜಾತಿ ಗೊತ್ತಾದರೆ? ಇವರ ಪರಿಸ್ಥಿತಿ ಅಂಬೇಡ್ಕರರಿಗಿಂತೇನು ಭಿನ್ನವಾಗಿರಲಿಕ್ಕಿಲ್ಲ. ಒಂದಂತು ನಿಜ, ಸ್ವಾಭಿಮಾನದ ಜ್ಯೋತಿ ಎದುರಿಸಿದ ಕಷ್ಟದ ಕ್ಷಣಗಳವು.
 
  ಗೋರೆಗಾಂವ್‍ಗೆ ಹೋಗುವಾಗ ಆ ಕಾಡುಗತ್ತಲಲ್ಲಿ  ಬಾಬಾಸಾಹೇಬರ  ಆ ಸುಂದರ ದೇಹ, ಮಗುವಿನ ಮನಸ್ಸು ಅದೆಷ್ಟು ನೊಂದಿರಬೇಡ? ನೀರು ಆಹಾರ ಇಲ್ಲದೆ ಅದೆಷ್ಟು ದಣಿದಿರಬೇಡ? ಹಿಂದೂ ಜಾತಿವ್ಯವಸ್ಥೆ ಕಂಡರೆ  ಸಿಟ್ಟು ಬರುವುದು  ಈ ಕಾರಣಕ್ಕೆ.  ಮೇಲು-ಕೀಳು ವ್ಯವಸ್ಥೆ  ಸೃಷ್ಟಿಸಿ, ಸ್ಪøಶ್ಯ-ಅಸ್ಪøಶ್ಯ ಎಂಬ ಅಂತರ ಸೃಷ್ಟಿಸಿ  ತಮ್ಮೊಳಗೇ ಇರುವ  ಕೆಲವರನ್ನು  ಪ್ರಾಣಿಗಳಿಗಿಂತ ಹೀನಾಯವಾಗಿ  ಕಂಡು ನಿರÀಂತರ ದೌರ್ಜನ್ಯ  ಎಸಗುತ್ತಿರುವ ಅಮಾನವೀಯ ಸಂಸ್ಕøತಿಯದು. ಇಂತಹ ಅಮಾನವೀಯ ಸಂಸ್ಕøತಿಯು ಮಾನವೀಯತೆಯ  ಸಾಕಾರದಂತಿರುವ ಅಂಬೇಡ್ಕರರ ವಿರುದ್ಧ  ನಡೆಸಿರುವ ದೌರ್ಜನ್ಯವಿದೆಯಲ್ಲಾ ಅದು ಎಂದೂ ಕ್ಷಮಿಸಲಾರದಂಥದ್ದು. ಶೋಷಿತ ಸಮುದಾಯ, ತನ್ನ ನಾಯಕನಿಗೆ  ಅಪಮಾನ  ಎಸಗಿರುವ ಆ ಅನಾಗರೀಕ ಸಮಾಜವನ್ನು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮಿಸಲೂ ಬಾರದು. ಹಾಗಿದ್ದರೆ ಆ ಅನಾಗರೀಕ ಸಮಾಜಕ್ಕೆ,  ಅದು ಎಸಗಿರುವ ಪಾಪಕ್ಕೆ ಶಿಕ್ಷೆ?  ಶೋಷಿತರು ಸ್ವಾಭಿಮಾನಿಗಳಾಗುವುದು. ಅಂಬೇಡ್ಕರರ  ಮಾರ್ಗದಲ್ಲಿ ಉತ್ತಮ ಶಿಕ್ಷಣ ಪಡೆದು  ಶೋಷಿತ ಸಮುದಾಯಗಳು  ಸ್ವಾಭಿಮಾನದ  ಮೇರು ಪರ್ವತಗಳಾಗುವುದು. ಯಾಕೆಂದರೆ ನಮ್ಮನ್ನು ಕಂಡರೆ ಆಗದವರ ಎದುರಲ್ಲಿ ನಾವು ಇನ್ನೂ ಉತ್ತಮ ಮಟ್ಟದಲ್ಲಿ  ಬದುಕುವುದಿದೆಯಲ್ಲಾ, ಅವರಿಗಿಂತ ಎಲ್ಲದರಲ್ಲೂ ಒಂದು ಕೈ ಮೇಲೆನಿಸಿಕೊಳ್ಳುವುದಿದೆಯಲ್ಲಾ ದೌರ್ಜನ್ಯಕೋರರನ್ನು ಅದಕ್ಕಿಂತ ಮಾನಸಿಕವಾಗಿ ಕುಗ್ಗಿಸುವ ಅಂಶ ಬೇರೊಂದಿರಲಿಕ್ಕಿಲ್ಲ. ಅವರು ಕುಗ್ಗಿದರೆಂದರೆ ಅಂಬೇಡ್ಕರ್ ಗೆದ್ದರೆಂದೇ ಅರ್ಥ. ಈ ನಿಟ್ಟಿನಲಿ ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳಲಿ. ತನ್ನ ಎದೆಯಲ್ಲಿ ಅಂಬೇಡ್ಕರರ ಸ್ವಾಭಿಮಾನದ ಕೆಚ್ಚನ್ನು ತುಂಬಿಕೊಳ್ಳಲಿ. ತನ್ಮೂಲಕ  ದೌರ್ಜನ್ಯಕೋರರಿಗೆ ತಕ್ಕ ಉತ್ತರ ನೀಡಲಿ.

1. Dr.Babasaheb Ambedkar writings and speeches (vol.17. part III, P.120,123,124,127)
2. Ibid,P.108
3. Ibid,P.108
4. Ibid,P.109, 110


No comments:

Post a Comment