Friday, 23 May 2014

ತಳ ಸಮುದಾಯಗಳ  ವಿರೋಧಿಯಾಗಿದ್ದ ಸರ್ದಾರ್ ಪಟೇಲ್
                          -ರಘೋತ್ತಮ ಹೊ.ಬ


 
   ಸರ್ದಾರ್ ವಲ್ಲಭಭಾಯ್ ಪಟೇಲ್‍ರ ಬೃಹತ್ ಪ್ರತಿಮೆಯನ್ನು ನಿರ್ಮಿಸಲು ನರೇಂದ್ರಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಿಜೆಪಿಯ ನರೇಂದ್ರ ಮೋದಿಗೆ ಕಾಂಗ್ರೆಸ್‍ನ ಸರ್ದಾರ್ ವಲ್ಲಭಭಾಯ್ ಪಟೇಲರ ಬಗ್ಗೆ ಯಾಕಿಷ್ಟು ಮೋಹ? ಎಂಬ ಪ್ರಶ್ನೆ ಈ  ಸಂದರ್ಭದಲ್ಲಿ ಪ್ರಜ್ಞಾವಂತರನ್ನು ಖಂಡಿತ ಕಾಡುತ್ತದೆ. ಈ ನಿಟ್ಟಿನಲ್ಲಿ ಪಟೇಲರ ವ್ಯಕ್ತಿತ್ವದ ಮತ್ತೊಂದು ಮುಖವನ್ನು, ಮೋದಿಯವರ ಇಂತಹ ಪಟೇಲ್ ಪ್ರೇಮದ ಹಿನ್ನೆಲೆಯಲ್ಲಿ ಪರಿಚಯ ಮಾಡಿಕೊಡಲೇಬೇಕಾಗುತ್ತದೆ. ಖಂಡಿತ, ಅದು ಸರ್ದಾರ್ ಪಟೇಲರು ತಳ ಸಮುದಾಯಗಳ ವಿರೋಧಿಯಾಗಿದ್ದರು ಎನ್ನುವುದು! ಹಾಗೆಯೇ ಯಾಕೆ ಮನುವಾದಿಗಳಿಗೆ ಹಾಗೂ ಮೋದಿವಾದಿಗಳಿಗೆ  ಸರ್ದಾರ್ ಪಟೇಲರ ಬಗ್ಗೆ ಇನ್ನಿಲ್ಲದ ಮೋಹ ಎನ್ನುವುದನ್ನೂ ಕೂಡ ಈ ಹಿನ್ನೆಲೆಯಲ್ಲಿ ನಾವು ಮನಗಾಣಬಹುದು!
     
   ಇದಕ್ಕೆ ಸಾಕ್ಷಿಯನ್ನು ನಾವು ತುಂಬಾ ದೂರ ಹುಡುಕಬೇಕಿಲ್ಲ. ಸ್ವತಃ ಡಾ. ಅಂಬೇಡ್ಕರ್‍ರವರೇ ತಮ್ಮ  “What Congress and Gandhi have done to untouchables?”ಕೃತಿಯಲ್ಲಿ ಸರ್ದಾರ್ ಪಟೇಲರ ‘ಇಂತಹ ಗುಣ’ವನ್ನು ಹೀಗೆ ವಿವರಿಸುತ್ತಾರೆ. “1942ರಲ್ಲಿ ಲಾರ್ಡ್ ಲೆನ್‍ಲಿತ್‍ಗೋರವರು 2ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಭಾರತೀಯರ ಸಹಕಾರ ಮತ್ತು ಅನುಕಂಪ ಗಳಿಸಲು ಹಾಗೂ ಕೇಂದ್ರ ಸರ್ಕಾರವನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ 52 ಪ್ರಮುಖ ಭಾರತೀಯರನ್ನು ಆಹ್ವಾನಿಸಿದರು ಮತ್ತು ಹಾಗೆ ಆಹ್ವಾನಿತಗೊಂಡವರಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸದಸ್ಯರೂ ಇದ್ದರು. ಆದರೆ ಇಂತಹ ಕೀಳು ವ್ಯಕ್ತಿಗಳ ಗುಂಪನ್ನು ಕರೆಯುವ ವೈಸರಾಯರ ಯೋಜನೆ ಬಗ್ಗೆ ಶ್ರೀ ವಲ್ಲಭಭಾಯಿ ಪಟೇಲರಿಗೆ ತಡೆದುಕೊಳ್ಳಲಾಗಲಿಲ್ಲ. ಈ ಸಂದರ್ಭದಲ್ಲಿ ಇದರ ಬಗ್ಗೆ  ಅಹಮದಾಬಾದಿನಲ್ಲಿ ಮಾತಾನಾಡುತ್ತಾ ಶ್ರೀ ವಲ್ಲಭಭಾಯಿ ಪಟೇಲರು ‘ವೈಸರಾಯ್‍ರವರು ಹಿಂದೂ ಮಹಾಸಭೆಯ ನಾಯಕರುಗಳನ್ನು ಆಹ್ವಾನಿಸಿದರು, ಮುಸ್ಲಿಂಲೀಗ್‍ನ  ನಾಯಕರುಗಳನ್ನು ಆಹ್ವಾನಿಸಿದು, ಅಲ್ಲದೆ ಅವರು ಗಣಚಿಗಳು, ಮೋಚಿಗಳು (ಚಮ್ಮಾರರು) ಮತ್ತು ಇತರರನ್ನು ಕೂಡ  ಆಹ್ವಾನಿಸಿದರು’ ಎಂದರು! (ಪುಟ,20)  (ಅಂದಹಾಗೆ  ಗಣಚಿಗಳು ಎಂದರೆ ಎಣ್ಣೆತೆಗೆಯುವವರು ಎಂದರ್ಥ. ಆಶ್ಚರ್ಯಕರವೆಂದರೆ  ನರೇಂದ್ರ ಮೋದಿ ಕೂಡ ಇದೇ ಜಾತಿಗೆ ಸೇರಿದವರು!) ಪಟೇಲರ ಈ ಮಾತಿನ ಬಗ್ಗೆ ಅಂಬೇಡ್ಕರರು  “ಖಂಡಿತ, ತಮ್ಮ ಈ ದುರುದ್ದೇಶಪೂರಿತ, ವಿನಾಶಕಾರಿ ಮತ್ತು ಚುಚ್ಚುವ ಪದಗಳಲ್ಲಿ ಶ್ರೀ ವಲ್ಲಭಭಾಯಿ ಪಟೇಲರು ಗಣಚಿಗಳು ಮತ್ತು ಮೋಚಿಗಳನ್ನು ಮಾತ್ರ ಪ್ರಸ್ತಾಪಿಸಿದರಾದರೂ ಅವರ ಒಟ್ಟಾರೆ ಆ ಮಾತಿನಲ್ಲಿ ಈ ದೇಶದ ಶೋಷಿತವರ್ಗಗಳ ಬಗೆಗಿನ ಅವರ ಅಸಹನೆ ಬಿಂಬಿತವಾಗಿತ್ತು” ಎಂದಿದ್ದಾರೆ.
 
    ಅಂದಹಾಗೆ ಅಂಬೇಡ್ಕರರ ಆ ಕೃತಿಯಲ್ಲಿ ಪಟೇಲರ ಇದಿಷ್ಟೆ ಗುಣದ  ಉಲ್ಲೇಖವಲ್ಲ, 1932ರಲ್ಲಿ ಸ್ವಾಮಿ ಶ್ರದ್ಧಾನಂದ  ಸನ್ಯಾಸಿ ಎಂಬುವವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯಲ್ಲಿ ಅಸ್ಪøಶ್ಯರ ಉದ್ಧಾರಕ್ಕಾಗಿ ಪ್ರತ್ಯೇಕ ಸಮಿತಿ ಒಳಗೊಂಡಂತೆ, 5ಲಕ್ಷ ರೂ ಹಣ ನೀಡುವಂತೆ ಒತ್ತಾಯಿಸಿ ಹಲವಾರು ಯೋಜನೆ ಹಾಕಿಕೊಂಡು ಅದರ ಅನುಮೋದನೆಗೆ ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ದಾರ್ ಪಟೇಲರಿಗೆ ಪತ್ರ ಬರೆದಾಗ, ಶ್ರದ್ಧಾನಂದ ಸನ್ಯಾಸಿಗಳ ಅಂತಹ 5ಲಕ್ಷದ ಬೇಡಿಕೆಗೆ ಪಟೇಲರು ನೀಡುವುದು ಅರ್ಥಾತ್ ‘ಅಂದಿನ ಸಮಸ್ತ ಭಾರತದ 6ಕೋಟಿ ಅಸ್ಪøಶ್ಯರಿಗೆ’ ಅವರು ನೀಡಲು ಒಪ್ಪುವುದು ಕೇವಲ 2ಲಕ್ಷ ಮಾತ್ರ! ಅಲ್ಲದೆ ಅಸ್ಪøಶ್ಯರ ಏಳಿಗೆಗಾಗಿ ಪ್ರಾಯೋಗಿಕ ರೂಪುರೇಷೆಗಳನ್ನು ರೂಪಿಸುವಂತಹ ಅಂಥ ಮಹತ್ವದ ಸಮಿತಿಗೆ ಅಸ್ಪøಶ್ಯರ ಬಗ್ಗೆ ಕಳಕಳಿಯುಳ್ಳ ಶ್ರದ್ಧಾನಂದ ಸನ್ಯಾಸಿಗಳು ಸಂಚಾಲಕರಾಗಲು ಬಯಸಿರುತ್ತಾರೆ ಮತ್ತು ಆ ಸಮಿತಿಯಲ್ಲಿ ಶ್ರದ್ಧಾನಂದ ಸನ್ಯಾಸಿಗಳಲ್ಲದೆ ಶ್ರೀಮತಿ ಸರೋಜಿನಿನಾಯ್ಡು, ಜಿ.ಬಿ.ದೇಶಪಾಂಡೆ ಮತ್ತು ವೈ.ಕೆ.ಯಾಜ್ಞಿಕ್ ಎಂಬುವವರು ಕೂಡ ಸದಸ್ಯರಿರುತ್ತಾರೆ. ಸಮಿತಿಯ ಇತರೆ ಸದಸ್ಯರು  ಕೂಡ ಅಸ್ಪøಶ್ಯರ ಬಗ್ಗೆ ಕಾಳಜಿಯುಳ್ಳ ಶ್ರೀಶ್ರದ್ಧಾನಂದ ಸನ್ಯಾಸಿಗಳನ್ನೇ ಅಸ್ಪøಶ್ಯರ ಬಗೆಗಿನ ಆ ಸಮಿತಿಯ ಸಂಚಾಲಕರಾಗಿ ನೇಮಿಸಿ ನಿರ್ಣಯ ಕೈಗೊಳ್ಳುವಂತೆ ವಲ್ಲಭಭಾಯಿ ಪಟೇಲರನ್ನು ಒತ್ತಾಯಿಸುತ್ತಾರೆ. ಇಂತಹ ಒತ್ತಾಯದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಸರ್ದಾರ್ ಪಟೇಲರಿಗೆ ನಿಜಕ್ಕೂ  ಅಸ್ಪøಶ್ಯರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಶ್ರದ್ಧಾನಂದರನ್ನು ಅವರು ಅದರ ಸಂಚಾಲಕರಾಗುವಂತೆ ನಿಯುಕ್ತಿಗೊಳಿಸಿ ಅಸ್ಫøಶ್ಯೋದ್ಧಾರದ ಅಂತಹ ಮಹತ್ವದ ಕೆಲಸಕ್ಕೆ ಚಾಲನೆ ನೀಡಬಹುದಿತ್ತು. ಆದರೆ ಅಸ್ಪøಶ್ಯರ ಬಗ್ಗೆ ಕಾಳಜಿ ಇಲ್ಲದ ಪಟೇಲರು ಪ್ರತಿಕ್ರಿಯಿಸುವುದು ಹೀಗೆ “ಸಮಿತಿಯಲ್ಲಿ ಸ್ವಾಮಿ ಶ್ರದ್ಧಾನಂದರ ಹೆಸರೇ ಮೊದಲಿರುವುದರಿಂದ  ಸ್ವಾಭಾವಿಕವಾಗಿ ಅವರೇ ಅದರ ಸಂಚಾಲಕರಾಗುತ್ತಾರೆ. ಆದ್ದರಿಂದ ಪ್ರತ್ಯೇಕ ನಿರ್ಣಯ ಮಂಡಿಸುವ ಅಗತ್ಯವಿಲ್ಲ” ಎಂದು! ಒಟ್ಟಾರೆ ಪಟೇಲರಿಗೆ ಸ್ವಾಮಿ ಶ್ರದ್ಧಾನಂದರನ್ನು ಅಂತಹ ಸಮಿತಿಯಿಂದ ದೂರ ಇಡುವ ಮನಸ್ಥಿತಿಯಿತ್ತು. ಹಾಗೆಯೇ ಅದು ನೆರವೇರಿತು ಕೂಡ! ಯಾಕೆಂದರೆ ನಂತರ ತಿಳಿದು ಬರುವುದೇನೆಂದರೆ ಅಸ್ಪøಶ್ಯರ ಕುರಿತಾದ ಆ ಮಹತ್ವದ ಸಮಿತಿಗೆ ಸ್ವಾಮಿ ಶ್ರದ್ಧಾನಂದ ಸನ್ಯಾಸಿಗಳ ಬದಲು ಶ್ರೀ ಜಿ.ಬಿ. ದೇಶಪಾಂಡೆ ಸಂಚಾಲಕರಾದರು. ತನ್ಮೂಲಕ ಅಸ್ಪøಶ್ಯೋದ್ಧಾರದ ಕಾಳಜಿಯ ಶ್ರದ್ಧಾನಂದರನ್ನು ಪಟೇಲರು ಕಡೆಗಣಿಸಿದರು. ಅಲ್ಲದೆ ಇದಿಷ್ಟೇ ಅಲ್ಲ ಯಾವ ಅಸ್ಪøಶ್ಯರ ಉದ್ಧಾರಕ್ಕಾಗಿ ಶ್ರದ್ಧಾನಂದರು 5ಲಕ್ಷ ಕೇಳಿದರೋ ಅಂತಹ ಮಹತ್ವದ ಕಾರ್ಯಕ್ಕೆ ಪಟೇಲರು ಆಗ ಮಂಜೂರು ಮಾಡಿÀದ್ದು ಬರೇ ಹತ್ತುಸಾವಿರ! ಕಡೆಗೆ  ಇದೆಲ್ಲದರಿಂದ ಮತ್ತು ಪಟೇಲರ ಇಂತಹ ಧೋರಣೆಯಿಂದ ಬೇಸತ್ತ ಸ್ವಾಮಿ ಶ್ರದ್ದಾನಂದ ಸನ್ಯಾಸಿಗಳು ಅಸ್ಪøಶ್ಯರ ಏಳಿಗೆಗಾಗಿನ ಎಐಸಿಸಿಯ ಆ ಮಹತ್ವದ ಸಮಿತಿಯಿಂದ ರಾಜೀನಾಮೆ ಇತ್ತು ಹೊರಬರುತ್ತಾರೆ. ಈ ನಿಟ್ಟಿನಲಿ ‘ಸ್ವಾಮಿಶ್ರದ್ಧಾನಂದ ಸನ್ಯಾಸಿಗಳ ಪ್ರಕರಣ’ದ ಇಂತಹ ವಿವರಣೆಯನ್ನು ನಾವು ಅಂಬೇಡ್ಕರರ ಅದೇ  “What Congress and Gandhi have done to untouchables?” ಕೃತಿಯ 298 ರಿಂದ 303ರವರೆಗಿನ ಪುಟಗಳಲ್ಲಿ ಕಾಣಬಹುದು. ಒಟ್ಟಾರೆ ಅಂಬೇಡ್ಕರರ ಕೃತಿಯ ಈ ವಿವರಣೆ ಒದಗಿಸುವುದಿಷ್ಟೆ  ಸರ್ದಾರ್ ವಲ್ಲಭಭಾಯ್ ಪಟೇಲರು ಈ ದೇಶದ ತಳ ಸಮುದಾಯಗಳ ವಿರೋಧಿಯಾಗಿದ್ದರು ಎಂಬುದನ್ನು.
 
  ದುರಂತವೆಂದರೆ ಮೋದಿ ಇಂತಹ ಪಟೇಲರ ಅತಿ ಎತ್ತರದ ಪ್ರತಿಮೆ ನಿರ್ಮಿಸಹೊರಟಿದ್ದಾರೆ. ಹಾಗೆಯೇ ಅಡ್ವಾಣಿಯವರನ್ನೂ ಒಳಗೊಂಡಂತೆ ಸಂಘಪರಿವಾರದ ಸಮಸ್ತ ಮಂದಿ ‘ಇಂತಹ ತಳ ಸಮುದಾಯಗಳ ವಿರೋಧಿ ಪಟೇಲ’ರ ತುತ್ತೂರಿಗೆ ನಿಂತಿದ್ದಾರೆ. ಅಂದಹಾಗೆ ಇಂತಹ ಪಟೇಲರ ಪ್ರತಿಮೆ ನಿರ್ಮಾಣಗೊಂಡರೆ ಅದರಿಂದ ಯಾವುದರ ಮೇಲುಗೈಯಾಗುತ್ತದೆ? ಖಂಡಿತ, ಅಸಮಾನತೆಯದ್ದು. ಯಾಕೆಂದರೆ ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆಗಳಿರುವುದು  ಭಗವಾನ್  ಬುದ್ಧನದ್ದು  ಚೀನಾದ ಹೆನಾನ್ ಪ್ರಾಂತ್ಯದಲ್ಲಿ (ಸ್ಪ್ರಿಂಗ್ ಟೆಂಪಲ್ ಬುದ್ಧ, 153ಮೀ) ಮತ್ತು ಜಪಾನ್‍ನಲ್ಲಿ (ಉಶಿಕು ದೈಬುತ್ಸು ಬುದ್ಧ, 120ಮೀ). ಎಲ್ಲರಿಗೂ ತಿಳಿದಿರುವಂತೆ ಬುದ್ಧ ಸಮಾನತೆಯ ಪ್ರತೀಕ. ಆತನ ಪ್ರತಿಮೆ ಅದೆಷ್ಟೇ ಎತ್ತರವಿರಲಿ ಅದು ಸಮಾನತೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ. ಆದರೆ ತಳ ಸಮುದಾಯಗಳ ಪ್ರಾತಿನಿಧ್ಯ ವಿರೋಧಿಸಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್? ಅಸಮಾನತೆಯ ಪ್ರತೀಕ. ಈ ನಿಟ್ಟಿನಲ್ಲಿ ಹಾಗೆ ನಿರ್ಮಾಣಗೊಳ್ಳುವ ಅವರ ಪ್ರತಿಮೆ?(182ಮೀ ಅಂತೆ) ಅದೆಷ್ಟೇ ಎತ್ತರವಾಗಲಿ ಅದು ಅಸಮಾನತೆಯ ಧ್ಯೋತಕವಾಗುತ್ತದಷ್ಟೆ.
                                                                 
                             

No comments:

Post a Comment