ದಲಿತರ ದೇವಾಲಯ ಪ್ರವೇಶ: ಮೇಲುಗೈ ಸಾಧಿಸಿದ ದೈವತ್ವದ ಆಜ್ಞೆ!
-ರಘೋತ್ತಮ ಹೊ.ಬ.
ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ದಲಿತ ಸಂಸದ ರಮೇಶ್ ಜಿಗಜಿಣಗಿಯವರಿಂದ ‘ಯಾವುದೇ ದೇವಾಲಯ ಪ್ರವೇಶಿಸಲ್ಲ’ ಎಂಬ ಹೇಳಿಕೆ ಪ್ರಕಟವಾಗಿತ್ತು. ಹಾಗೆಯೇ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮೋಹನ್ ಕುಮಾರ್ ಎಂಬ ದಲಿತ ಯುವಕ ದೇವಸ್ಥಾನ ಪ್ರವೇಶಿಸಿ ಅದು ಕೂಡ ವಿವಾದಕ್ಕೆ ಕಾರಣವಾಗಿದೆ. ಈ ನಿಟ್ಟಿನಲಿ ರಮೇಶ್ ಜಿಗಜಿಣಗಿಯವರ ಆ ಮಾತು, ಹಾಗೆಯೇ ಹಾಸನದ ಜಿಲ್ಲೆಯ ಆ ಘಟನೆ, ಎಂತಹದ್ದು? ಮತ್ತೆ ಮತ್ತೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಹೃದಯ ಚುಚ್ಚುವಂಥದ್ದು! ಹಾಗೆಯೇ ಅಸ್ಪøಶ್ಯತೆಯ ನೋವಿನಲ್ಲಿ ಬೇಯುತ್ತಿರುವ ದಲಿತರ ಅಸಹಾಯಕ ಮನಸ್ಥಿತಿಯ ಪ್ರತಿರೂಪದ್ದು. ಖಂಡಿತ ಇಂತಹದ್ದರ ಬಗ್ಗೆ ಬರೆಯಲು ನೋವೆನಿಸುತ್ತದೆ. ಅದರೂ ಬರೆಯದೇ ವಿಧಿಯಿಲ್ಲ. ಯಾಕೆಂದರೆ ನೋವು ಎಂದಿದ್ದರೂ, ಹೇಗಿದ್ದರೂ ಅದು ನೋವೆ.
ಹಾಗೆ ಹೇಳುವುದಾದರೆ ಭಾರತೀಯ ಸಮಾಜ, ಇದರಲ್ಲಿ ಯಾರು ಹೀಗೆ ಮೇಲು-ಕೀಳು ಎಂದು ತಾರತಮ್ಯ ಎಂದು ಸೃಷ್ಟಿಸಿದರೋ ಗೊತ್ತಿಲ್ಲ. ಬಹುಶಃ ಅದರ ಮೂಲ ಹುಡುಕುವುದು ಗೊಂದಲಕಾರಿ ಹಾಗೆಯೇ ಅಪಾಯಕಾರಿ ಕೂಡ, ಆದರೆ ಅಸ್ತಿತ್ವ ಮಾತ್ರ ಸತ್ಯ. ಅಕ್ಷರದಲ್ಲಿ ಕೆಲ ವರ್ಷಗಳಿಂದೀಚೆಗೆ ಅದು ದಾಖಲೀಕರಣವಾಗುತ್ತಿದೆಯೇ ಹೊರತು ಬಹುಪಾಲು ಅದು ಸಮಾಜದಲ್ಲಿ ಬೇಕೆಂತಲೇ ಉಪೇಕ್ಷೆಗೊಳಪಟ್ಟಿದೆ ಅಥವಾ ಉಪೇಕ್ಷೆಗೊಳಪಡಿಸಲಾಗಿದೆ. ಅದರಲ್ಲೂ ಹಿಂದೂ ದೇವಾಲಯ ಪ್ರವೇಶ? ಈ ದಿಸೆಯಲ್ಲಿ ಇತಿಹಾಸದಲ್ಲಿ ದಾಖಲಾಗಿರುವ ಅಂತಹ ಹಿಂದೂ ದೇವಾಲಯ ಪ್ರವೇಶದ ಒಂದು ದಾಖಲೀಕರಣವನ್ನು (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.9, ಪು.317, 318) ಉಲ್ಲೇಖಿಸುವುದಾದರೆ 1936 ನವೆಂಬರ್ 26ರಂದು ಕೇರಳದ ತಿರುವಾಂಕೂರಿನ ಅಂದಿನ ಅರಸ, ಅಲ್ಲಿನ ಈಳವ ಸಮಾಜದ ಹೋರಾಟಕ್ಕೆ ಮಣಿದು “ಇನ್ನು ಮುಂದೆ ನಮ್ಮ ಹಿಂದೂ ಧರ್ಮದ ಯಾವುದೇ ಪ್ರಜೆಗಳನ್ನು ಅವರ ಜನ್ಮ, ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಅವರು ಹಿಂದೂ ತತ್ವದಲ್ಲಿ ನೆಮ್ಮದಿ ಕಾಣುವಂತಾಗಲು, ಪರಿಹಾರ ಕಂಡುಕೊಳ್ಳುವಂತಾಗಲು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದಕ್ಕಾಗಿ ಇಂದಿನಿಂದ ಹೊರಡಿಸುವ ಆದೇಶವೆಂದರೆ ಜನ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ಹಿಂದೂವು ಯಾವುದೇ ದೇವಸ್ಥಾನವನ್ನು ಪ್ರವೇಶಿಸುವ ಅಥವಾ ಪೂಜಿಸಲ್ಪಡುವುದಕ್ಕೆ ಯವುದೇ ನಿರ್ಬಂಧವಿರುವುದಿಲ್ಲ” ಎಂದು ಆಜ್ಞೆ ಹೊರಡಿಸಿದರು. ಅಂದಹಾಗೆ ತಿರುವಾಂಕೂರು ಅರಸರ ಅಂದಿನ ಆ ಆದೇಶಕ್ಕೆ ಕಾರಣ 1932ರಲ್ಲಿ ಅದೇ ತಿರುವಾಂಕೂರು ಪ್ರಾಂತ್ಯದ ಗುರುವಾಯೂರು ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿಯವರು ವಿವಾದ ಹುಟ್ಟುಹಾಕಿದ್ದು. ಪರಿಣಾಮ ದೇವಾಲಯದ ಈ ಪ್ರವೇಶಕ್ಕೆ ಸಂಬಂಧಿಸಿದಂತೆ ಆಗ ಪರ-ವಿರೋಧ ಚರ್ಚೆಗಳು ಹುಟ್ಟುಕೊಂಡು, ಈಳವರಿಗೆ ದೇವಸ್ಥಾನ ಪ್ರವೇಶದ ನಿಲುವಿನ ವಿರುದ್ಧವಿದ್ದ ಅಂದಿನ ತಿರುವಾಂಕೂರು ಪ್ರಾಂತ್ಯದ ಪ್ರಧಾನಮಂತ್ರಿ ಶ್ರೀ ಸಿ.ಪಿ.ರಾಮಸ್ವಾಮಿ ಅಯ್ಯರ್‍ವರು ಆ ಸಂದರ್ಭದಲ್ಲಿ ಹೇಳಿದ್ದೇನೆಂದರೆ “ವಯಕ್ತಿಕವಾಗಿ ನಾನು ಜಾತಿ ನಿಯಮಗಳನ್ನು ಆಚರಿಸುವುದಿಲ್ಲ. ಆದರೆ ನನಗೆ ತಿಳಿದಿರುವಂತೆ ದೇವಸ್ಥಾನ ಪೂಜೆಗೆ ಸಂಬಂಧಿಸಿದ ಪ್ರಸ್ತುತದ ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಅಂಶಗಳೆಲ್ಲವೂ ದೈವತ್ವದ ಆಜ್ಞೆಯ ಆಧಾರದ ಮೇಲೆ ರೂಪಿತಗೊಂಡಿವೆ ಎಂಬುದು ಮತ್ತು ಇದು ನನ್ನೊಬ್ಬನದೇ ಅಲ್ಲ ಬಹುತೇಕರ ಮನಸ್ಸಿನ ಪ್ರಬಲ ಭಾವನೆ ಮತ್ತು ನಂಬಿಕೆ ಕೂಡ ಆಗಿದೆ” ಎಂದು! ತನ್ಮೂಲಕ ರಾಮಸ್ವಾಮಿ ಅಯ್ಯರ್‍ರವರು ದೇವಸ್ಥಾನ ಪ್ರವೇಶದ ಈ ಪ್ರಕ್ರಿಯೆಯನ್ನು ದೈವತ್ವದ ಆಜ್ಞೆಗೆ ಹೋಲಿಸಿದ್ದರು.
ಅಂದಹಾಗೆ ಇದು 1936ರ ಪ್ರಕ್ರಿಯೆ. ಆದರೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೂತನ ಸಂವಿಧಾನ ರಚಿಸುವ ಪ್ರಕ್ರಿಯೆ ಜರುಗುತ್ತದೆ. ಅದರಲ್ಲೂ ಸಂವಿಧಾನದ ಡ್ರಾಫ್ಟ್ ರಚಿಸುವ ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅಧ್ಯಕ್ಷತೆಯಲ್ಲಿ ಸಲ್ಲಿಸಿದ ಆ ಡ್ರಾಫ್ಟ್‍ನಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಮೂಲಭೂತ ಹಕ್ಕನ್ನು ರೂಪಿಸುತ್ತಾರೆ. ಅದೆಂದರೆ “ಹಿಂದೂ ಧರ್ಮದ ಯಾವುದೇ ಧಾರ್ಮಿಕ ಸಂಸ್ಥೆಯನ್ನು ಪ್ರವೇಶಿಸಲು ಹಿಂದೂ ಧರ್ಮದ ಯಾವುದೇ ಜನಾಂಗವನ್ನಾಗಲೀ, ಜಾತಿಯನ್ನಾಗಲೀ ಜಾತಿ ಮತ್ತು ಜನ್ಮದ ಆಧಾರದ ಮೇಲೆ ನಿರ್ಬಂಧಿಸುವಂತಿಲ್ಲ” ಎಂದು (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.13, ಪು.113). ಹಾಗೆಯೇ 1950 ಜನವರಿ 26ರಂದು ಜಾರಿಯಾದ ಭಾರತದ ಸಂವಿಧಾನ ಕೂಡ ಅನುಚ್ಛೇದ 15ರ ಮೂಲಕ “ಧರ್ಮ, ಜನಾಂಗ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಅಧಾರದ ಮೇಲೆ ವ್ಯಕ್ತಿಯೋರ್ವನ ಮೇಲೆ ಯಾವುದೇ ಕಾರಣಕ್ಕೂ ರಾಜ್ಯವು ತಾರತಮ್ಯ ಮಾಡುವಂತಿಲ್ಲ” ಎಂದು ಘೋಷಿಸಿತು. ಅಂತೆಯೇ ಅನುಚ್ಛೇದ 17ರ ಮೂಲಕ ಅದೇ ಭಾರತದ ಸಂವಿಧಾನ ಅಸ್ಪøಶ್ಯತಾಚರಣೆಯನ್ನು ಕೂಡ ನಿಷೇಧಿಸಿತು.
ದುರಂತವೆಂದರೆ ಇದೆಲ್ಲ ಘಟಿಸಿ ಈಗ್ಗೆ 64 ವರ್ಷಗಳು ಉರುಳುತ್ತಾ ಬಂದಿವೆ. ಆದರೆ ದಲಿತರಿಗೆ ದೇವಸ್ಥಾನ ಪ್ರವೇಶ ಎಲ್ಲಿ ಸಾಧÀ್ಯವಾಗಿದೆ ಎಂಬುದು? ಯಾಕೆಂದರೆ ಇಲ್ಲಿ ಅಂದರೆ ಪ್ರಸ್ತುತದ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿಯವರು “ನಾನು ದೇವಸ್ಥಾನದ ಹತ್ತಿರಕ್ಕೇ ಹೋಗುವುದಿಲ್ಲ, ನಾನು ಹಿಂದೂ ಧರ್ಮದತ್ತ ತಿರುಗಿಯೇ ನೋಡುವುದಿಲ್ಲ” ಎಂದವರಲ್ಲ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೂ ಕೂಡ. ಬದಲಿಗೆ ಜಿಗಜಿಣಗಿಯವರೇ ಹೇಳಿರುವಂತೆ “ಅವರು ಎಲ್ಲಾ ದೇವಸ್ಥಾನಗಳಿಗೂ ಹೋಗುತ್ತಾರೆ. ಆದರೆ ಹೊರಗಡೆ ನಿಂತು ಪೂಜೆ ಸಲ್ಲಿಸುತ್ತಾರೆ”! ಹಾಗಿದ್ದರೆ ಇಂತಹ ಸ್ಥಿತಿಗೆ ಕಾರಣವೇನು? ಹಾಗೆಯೇ ಇಲ್ಲಿ ಮೇಲುಗೈಯಾಗಿರುವುದಾದರೂ ಯಾವುದು? ಅಂಬೇಡ್ಕರರು ರಚಿಸಿದ, ಭಾರತದ ಸಂವಿಧಾನ ರೂಪಿಸಿದ ಅನುಚ್ಛೇದ ನಿಯಮಗಳೋ ಅಥವಾ ಇಲ್ಲಿ ಉಲ್ಲೇಖಿಸಿರುವ ಸಿ.ಪಿ.ರಾಮಸ್ವಾಮಿ ಅಯ್ಯರ್‍ರವರ ಹೇಳಿಕೆಯಾದ ದೈವತ್ವದ ಆಜ್ಞೆಯೋ ಎಂಬುದು? ಖಂಡಿತ, ದೈವತ್ವದ ಆಜ್ಞೆಯೇ ಮೇಲುಗೈ ಸಾಧಿಸಿದೆ ಹಾಗೆಯೇ ಮುಂದೆಯೂ ಕೂಡ ಸಾಧಿಸುತ್ತದೆ! ಯಾಕೆಂದರೆ ಇದು ಸಂಸದ ರಮೇಶ ಜಿಗಜಿಣಗಿಯವರೊಬ್ಬರ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೊಬ್ಬನ ಸಮಸ್ಯೆಯಲ್ಲ, ಈ ದೇಶದ ಮೂಲೆ ಮೂಲೆಯಲ್ಲಿರುವ ದಲಿತನ ಸಮಸ್ಯೆ.
ಅನುಭವದಂತೆ ಹಾಗೆಯೇ ನೋಡಿ ತಿಳಿದಿರುವಂತೆ ಯಾವುದೇ ದಲಿತ ಆತ ವಯಕ್ತಿಕವಾಗಿ ದೇವಸ್ಥಾನ ಪ್ರವೇಶಿಸುವ ಆಸೆ ಹೊಂದಿರದೆ ಇರಲಾರ. ಯಾಕೆಂದರೆ ಭಾರತ ದೈವತ್ವದ ನಾಡು. ಇಲ್ಲಿ ದೇವಾಲಯಗಳು ಯಥೇಚ್ಛವಾಗಿವೆ. ಹಳ್ಳಿಗೊಂದು, ಎರಡರಂತೆ ದೇವಸ್ಥಾನಗಳು ಇದ್ದೇ ಇವೆ. ಹಾಗೆ ಆ ಹಳ್ಳಿಯ ಭಾಗವಾಗಿರುವ ದಲಿತರು? ದಲಿತ ಬಾಲಕರು? ದೇವಸ್ಥಾನವನ್ನು ಪ್ರವೇಶಿಸದೆ ಇರುತ್ತಾರೆಯೇ? ಖಂಡಿತ, ಬಹುತೇಕರು ಜಿಗಜಿಣಗಿಯವರಂತೆ ದೇವಸ್ಥಾನ ಪ್ರವೇಶಿಸಿರುತ್ತಾರೆ. ಯಾಕೆಂದರೆ ಎಲ್ಲರೂ ಪ್ರವೇಶಿಸುತ್ತಾರೆ ಎಂಬ ಸಾಮಾನ್ಯ ನೋಟದಿಂದ. ಆದರೆ ‘ತಾವು ಕೀಳು ಜಾತಿಯವರು’ ಎಂದು ಗೊತ್ತಾಗುವುದು ‘ಏಯ್! ದೂರ ಹೋಗು’ ಎಂದಾಗ! ಅಂದಹಾಗೆ ಇಂತಹ ‘ದೂರ ಹೋಗು’ ಎಂಬ ಆಜ್ಞೆಗಳನ್ನು ಮೀರಿ ದೇವಸ್ಥಾನ ಪ್ರವೇಶಿಸಿದ ಬಾಲಕರಿದ್ದಾರೆ (ಹಾಸನದ ಆ ಯುವಕ ಮಾಡಿದಂತೆ). ಅಂತಹ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ಅಲ್ಲಿ ಕೋಮುಗಲಭೆಗಳಾಗಿವೆ ಅಥವಾ ‘ತುಂಡುಡುಗ ಅವನಿಗೇನು ಗೊತ್ತು’ ಎಂದು ಬಿಟ್ಟುಕಳುಹಿಸಿರುವ ಪ್ರಸಂಗಗಳೂ ಇವೆ. ಪ್ರಶ್ನೆ ಏನೆಂದರೆ ಇಂತಹ ದೇವಸ್ಥಾನ ಪ್ರವೇಶ ನಿರಾಕರಿಸುವ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ದಲಿತ ಬಾಲಕ/ಬಾಲಕಿಯರ ಮೇಲೆ, ಒಟ್ಟಾರೆ ಆ ಸಮಾಜದ ಮೇಲೆ ಬೀರುವ ಪರಿಣಾಮ? ಖಂಡಿತ, ಈ ಕಾರಣಕ್ಕೆ ದಲಿತರು ಅನ್ಯ ಧರ್ಮದೆಡೆ ಆಕರ್ಷಿತರಾಗುವುದು. ಸ್ವತಃ ಅಂಬೇಡ್ಕರರ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ 1930 ಮಾರ್ಚ್ 2ರಂದು “ಹಿಂದೂಗಳ ಹೃದಯ ಪರಿವರ್ತನೆ ಮಾಡಲು ನಾವು ಈ ಕಾಳಾರಾಮ್ ದೇವಸ್ಥಾನ ಪ್ರವೇಶ ಸತ್ಯಾಗ್ರಹ ಮಾಡುತ್ತಿದ್ದೇವೆ” (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ 1. ಪು.182) ಎಂದವರು ಅದರಲ್ಲಿ ವಿಫಲಗೊಳ್ಳುತ್ತಲೇ ಮುಂದೆ 1934 ನವೆಂಬರ್ 19 ರಂದು ಆ ದೇವಾಲಯ ಪ್ರವೇಶ ಚಳುವಳಿಯನ್ನು ಕೈಬಿಡುತ್ತಾ “ಹಿಂದೂ ಸಮಾಜದಲ್ಲಿ ನಮ್ಮ ನೈಜ ಸ್ಥಿತಿ ಏನು ಎಂಬುದು ಈ ಮೂಲಕ ತಿಳಿಯಿತು” (ಅದೇ ಕೃತಿ. ಪು.203) ಎಂದರು! ಮುಂದೆ 1935 ಅಕ್ಟೋಬರ್ 13ರಂದು ಅದೇ ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ “ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ” (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ 3. ಪು.94) ಎಂದು ಘೋಷಿಸಿದ ಅವರು ಅಂತೆಯೇ 1956 ಅಕ್ಟೋಬರ್ 14 ರಂದು ತಮ್ಮ ಐದು ಲಕ್ಷ ಅನುಯಾಯಿಗಳೊಡನೆ ಹಿಂದೂಧರ್ಮ ತ್ಯಜಿಸಿ ಬೌದ್ಧಧರ್ಮ ಸೇರುತ್ತಾರೆ, ತನ್ಮೂಲಕ ಅಂಬೇಡ್ಕರ್ ಹಿಂದೂ ದೇವಸ್ಥಾನ ಪ್ರವೇಶಿಸುವ ಸಂದರ್ಭವನ್ನೇ ತಪ್ಪಿಸಿಕೊಳ್ಳುತ್ತಾರೆ.
ಪ್ರಶ್ನೆ ಏನೆಂದರೆ ಎಷ್ಟು ದಲಿತರು ಅಂಬೇಡ್ಕರರ ಈ ಕ್ರಾಂತಿಕಾರಿ ಮಾರ್ಗದಲ್ಲಿ ಸಾಗುವುದು ಸಾಧ್ಯ? ಎಂಬುದು. ಹಾಗಿದ್ದರೆ ದಲಿತರಿಗೆ ಹಿಂದೂ ದೇವಾಲಯಗಳನ್ನು ಮುಕ್ತವಾಗಿ ತೆರೆಯಬೇಕಲ್ಲವೆ? ಎಲ್ಲಾ ಹಿಂದೂಗಳು ಎಲ್ಲಾ ದಲಿತರನ್ನು “ಬನ್ನಿ, ನಮ್ಮ ದೇವಸ್ಥಾನಕ್ಕೆ” ಎಂದು ಪ್ರೀತಿಯಿಂದ ಅಥವಾ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯಾದರೂ ಕರೆದುಕೊಂಡು ಹೋಗಬೇಕಲ್ಲವೆ? ದುರಂತವೆಂದರೆ ಐದು ಬಾರಿ ಸಂಸದ, ನಾಲ್ಕು ಬಾರಿ ವಿಧಾನಸಭಾ ಸದಸ್ಯ, ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ ಗೌರವಾನ್ವಿತ ಶೋಷಿತ ಸಮುದಾಯದ ಸದಸ್ಯರಾದ ರಮೇಶ ಜಿಗಜಿಣಗಿಯವರಿಗೆ ಇಂತಹ ಹೀನ ಪರಿಸ್ಥಿತಿ. ಇನ್ನು ಹಳ್ಳಿಗಳಲ್ಲಿ, ಪಟ್ಟಣಗಳ ಕೊಳಗೇರಿಗಳಲ್ಲಿ ಬದುಕುವ ಸಾಮಾನ್ಯ ದಲಿತರ ಪಾಡು ಹೇಗಿರಬೇಡ? ನಿಜ ಹೇಳಬೇಕೆಂದರೆ ಇಂದಿಗೂ ಕೂಡ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಬಹುತೇಕ ದಲಿತರ ಸ್ಥಿತಿ ಅಸಹಾಯಕ, ಹಾಗೆಯೇ ಅತಂತ್ರ.
No comments:
Post a Comment