ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್
-ರಘೋತ್ತಮ ಹೊ.ಬ
1881 ರಲ್ಲೆ ವಿಲಿಯಂ ಹಂಟರ್ ಎಂಬುವವರು ಭಾರತದಲ್ಲಿ ಬೌದ್ಧಧರ್ಮ ಪುನರುತ್ಥಾನವಾಗುವುದೆಂದು ಸೂಚಿಸಿದ್ದರು. ವಿಶ್ವಕವಿ ರವೀಂದ್ರನಾಥ ಠಾಗೋರ್ ಕೂಡ ತಮ್ಮ “ಬುದ್ಧದೇವೋ” ಎಂಬ ಪದ್ಯದಲ್ಲಿ ಬೌದ್ಧಧರ್ಮ ಪುನಾರುತ್ಥಾನವಾಗುವುದೆಂದು ನಿರೀಕ್ಷಿಸಿದ್ದರು. ಅದರೆ? ನಿಜಕ್ಕೂ ಅದರ ಪುನರುತ್ಥಾನಕ್ಕೆ ಶ್ರಮಿಸಿದ್ದು? ಭಾರತದಲ್ಲಿ ಮತ್ತೆ ಬುದ್ಧ ಮಂತ್ರ ಪಠಣದ ಕ್ರಿಯೆಗೆ ಮುನ್ನುಡಿ ಬರೆದದ್ದು? ನಿಸ್ಸಂಶಯವಾಗಿ ಅದು ಅಂಬೇಡ್ಕರ್. ಅಂಬೇಡ್ಕರ್ 1956 ಅಕ್ಟೋಬರ್ 14 ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮ ಸ್ವೀಕರಿಸಿದ್ದು ಇಡೀ ವಿಶ್ವದ ಇತಿಹಾಸದಲ್ಲಿ ಚಿರನೆನಪಿನಲ್ಲಿ ಉಳಿದುಕೊಳ್ಳುವಂತಹ ಘಟನೆ. ಯಾಕೆಂದರೆ ಎಲ್ಲರೂ ಮತಾಂತರ ಮತಾಂತರ ಎನ್ನುತ್ತಾರೆ ಆದರೆ ಒಂದೇ ದಿನ ಅಷ್ಟೊಂದು ಬೃಹತ್ ಜನ ಒಂದೇ ವೇದಿಕೆಯಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಿದ್ದು? ಹಿಂದೆ ಎಂದೂ ನಡೆದಿರಲಿಲ್ಲ! ಆದರೆ ಅಂಬೇಡ್ಕರ್ ಮೂಲಕ ಅದು ನಡೆಸಲ್ಪಟ್ಟಿತ್ತು. ಯಾವ ಬೌದ್ಧಧರ್ಮ ಭಾರತದಿಂದ ಕಣ್ಮರೆಯಾಗಿತ್ತೋ ಅದು ಅಂಬೇಡ್ಕರ್ ಮೂಲಕ ಭಾರತದಲ್ಲಿ ಮತ್ತೆ ಜೀವ ಪಡೆದಿತ್ತು. ಈ ನಿಟ್ಟಿನಲಿ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಅಂಬೇಡ್ಕರ್ ಮುನ್ನುಡಿ ಬರೆದಿದ್ದರು.
ಹಾಗಿದ್ದರೆ ಬೌದ್ಧಧರ್ಮಕ್ಕೆ ಮತಾಂತರ ಹೊಂದುವ ಅಂಬೇಡ್ಕರರ ನಿರ್ಧಾರ ದಿಢೀರನೆ ತೆಗೆದುಕೊಂಡದ್ದೆ? ಅಥವಾ ಯಾವುದಾದರೂ ಆಮಿಷಕ್ಕೊಳಗಾಗಿ ಅವರು ಮತಾಂತರ ಹೊಂದಿದರೆ? ಖಂಡಿತ ಇಲ್ಲ. ಬೌದ್ಧಧರ್ಮ ಸ್ವೀಕಾರದ ಅವರ ನಿರ್ಧಾರ ಅವರ ಜೀವನದ ಅಂತಿಮಗಳಿಗೆಯದ್ದಲ್ಲ ಅಥವಾ ಯಾವುದೇ ಆಸೆ ಆಮಿಷದ್ದೂ ಅಲ್ಲ. ಯಾಕೆಂದರೆ ತಮ್ಮ ಜೀವಿತದ ಬಹಳ ಹಿಂದೆಯೇ ಅಂದರೆ 1936, ಮೇ13 ರ ಬುದ್ಧ ಜಯಂತಿಯಂದೆ ಮುಂಬೈನಲ್ಲಿ ತಮ್ಮ ಸುಪ್ರಸಿದ್ಧ “ ಮುಕ್ತಿಯ ಮಾರ್ಗ ಯಾವುದು?” ಎಂಬ ಭಾಷಣದಲ್ಲಿ ಅವರು ತಮ್ಮ ಸ್ಪಷ್ಟ ಗುರಿ ಬೌದ್ಧಧರ್ಮ ಎಂಬುದನ್ನು ಬಹಳ ನಿಖರವಾಗಿಯೇ, ನಿಶ್ಚಿತವಾಗಿಯೇ ಹೇಳಿದ್ದರು.
ಯಾಕೆಂದರೆ ಅಂಬೇಡ್ಕರ್ ಹಿಂದೂಧರ್ಮ ಟೀಕಿಸುತ್ತಿದ್ದರು ಎಂದರೆ ಅದಕ್ಕೆ ಪರ್ಯಾಯವನ್ನು ಹುಡುಕಿಕೊಂಡಿದ್ದರೆಂದೇ ಅಲ್ಲವೆ? ಹೌದು, ಜೀವನದುದ್ದಕ್ಕೂ ಹಿಂದೂ ಧರ್ಮವನ್ನು, ಮತ್ತದರ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಅವರು ಹಾಗೆ ಟೀಕಿಸುತ್ತಾ, ಟೀಕಿಸುತ್ತಾ ಬುದ್ಧನನ್ನು ತನ್ನೆಡೆಗೆ ಎಳೆದುಕೊಂಡಿದ್ದರು. ಅಂದಹಾಗೆ 1936 ರ ಸಮಯದಲ್ಲಿ ಅವರು ಬೌದ್ಧಧರ್ಮದಲ್ಲಿ ತನ್ನ ಭವಿಷ್ಯ ಎಂದಾಗ ಮೂಂಜೆ ಎಂಬ ಹಿಂದೂ ಮಹಾಸಭಾದ ಮುಖಂಡರು ಅಂಬೇಡ್ಕರರಿಗೆ ಸಲಹೆ ನೀಡಿದ್ದು “ಮುಸ್ಲಿಂ ಧರ್ಮವನ್ನು ಪರ್ಯಾಯವಾಗಿ ಎದುರಿಸಲು ದಲಿತರು ಸಿಖ್ ಧರ್ಮಕ್ಕೆ ಮತಾಂತರಗೊಳ್ಳಲಿ” ಎಂದು. ಆದರೆ ಅಂಬೇಡ್ಕರರು ಹಿಂದೂ ಧರ್ಮದ ನಾಯಕರುಗಳ ಆ ಸಲಹೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮಷ್ಟಕ್ಕೆ ತಾವು ಬುದ್ಧನತ್ತ ಚಲಿಸತೊಡಗಿದ್ದರು. 1950ರಲ್ಲಿ “ಷೆಡ್ಯೂಲ್ಡ್ ಕ್ಯಾಸ್ಟ್ ಫಡರೇಷನ್” ಎಂಬ ತಮ್ಮ ನೇತೃತ್ವದ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಅಂಬೇಡ್ಕರರು ಬುದ್ಧ ಜಯಂತಿಯನ್ನು ಆಚರಿಸುವಂತೆ ಕೂಡ ಕರೆನೀಡಿದ್ದರು. ಕೋಲ್ಕತ್ತಾದ ಮಹಾಬೋಧಿ ಸೊಸೈಟಿಯವರು ಹೊರತಂದಿದ್ದ ವಿಶೇಷ ಸಂಚಿಕೆಯೊಂದರಲ್ಲಿ ಅವರು 1950ರಲ್ಲೇ “ಭಗವಾನ್ ಬುದ್ಧ ಮತ್ತು ಆತನ ಧಮ್ಮದ ಭವಿಷ್ಯ”ಎಂಬ ಲೇಖನ ಬರೆದಿದ್ದರು. ಆ ಮೂಲಕ ಬೌದ್ಧದರ್ಮಕ್ಕೆ ‘ಉಜ್ವಲ ಭವಿಷ್ಯ’ವಿದೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದರು . ಈ ನಡುವೆ 1954ರಲ್ಲಿ ಬರ್ಮಾದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿಯೂ ಕೂಡ ಅಂಬೇಡ್ಕರ್ ರವರು ಭಾಗವಹಿಸಿದ್ದರು. ಒಟ್ಟಾರೆ ತಮ್ಮ ಅವಿರತ ಸಾಮಾಜಿಕ, ರಾಜಕೀಯ ಹೋರಾಟದ ನಡುವೆ ಅಂಬೇಡ್ಕರರು ನಿಧಾನವಾಗಿ ಚಲಿಸುತ್ತಿದ್ದದ್ದು ಬೌದ್ಧದರ್ಮದ ಕಡೆಗೆ .
ಯಾಕೆಂದರೆ ಅವರಿಗೆ ತಿಳಿದಿತ್ತು , ಒಂದು ಸಮುದಾಯಕ್ಕೆ ಸಾಮಾಜಿಕ ರಾಜಕೀಯ ಜಾಗೃತಿ ಮೂಡಿಸಿ ಅದಕ್ಕೆ ಧಾರ್ಮಿಕ ದಿಕ್ಕನ್ನು ತೋರಿಸದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದು. ಈ ಕಾರಣಕ್ಕಾಗಿಯೇ ಅವರು ತಮ್ಮ ಹದಗೆಡುತ್ತಿದ್ದ ಆರೋಗ್ಯದ ಮಧ್ಯೆ ಸ್ವೀಕರಿಸಿದ್ದು ಬೌದ್ಧಧರ್ಮ ಮತ್ತು ಅಂಥ ಮುನ್ಸೂಚನೆ ಸಿಕ್ಕಿದ್ದರಿಂದಲೇ ಅಂದರೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿದ್ದರಿಂದಲೆ ಅವರು ತಾವು ಪುನರುತ್ಥಾನಗೊಳಿಸಿದ ಅಂತಹ ಧರ್ಮದ ನೆಲೆಗಟ್ಟಾಗಿ ಬುದ್ಧಧರ್ಮವನ್ನು ಕುರಿತು “ ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿ ಬರೆದದ್ದು. ಯಾಕೆಂದರೆ ಅದಾಗಲೆ ಮಹಾಬೋಧಿ ಸೊಸೈಟಿ ಮತ್ತು ಮತ್ತಿತರ ಬೌದ್ಧ ಸೊಸೈಟಿಗಳು ಭಾರತದಲ್ಲಿ ಇದ್ದವಾದರು ಅವ್ಯಾವುದಕ್ಕೂ ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನಕ್ಕೆ ಸ್ಪಷ್ಟ ರೂಪುರೇಷೆ ಅಥವಾ ಟಾರ್ಗೆಟ್ ಗ್ರೂಪ್ ಇರಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಬೌದ್ಧಧರ್ಮವನ್ನು ಈ ರಾಷ್ಟ್ರದ ಜನಮಾನಸದ ಧರ್ಮವಾಗಿ ಬೆಳೆಸುವ ಆಲೋಚನೆ ಇತ್ತು. ಬರೀ ದಲಿತರಿಗೆ ಮಾತ್ರ ಆ ಧರ್ಮ ಎಂಬಂತೆಯಲ್ಲ. ಸಮಸ್ತ ಭಾರತೀಯರಿಗೂ ಆ ಧರ್ಮದ ಆಶಯಗಳನ್ನು ತಲುಪಿಸಬೇಕೆಂಬ ಆಶಯವಿತ್ತು ಅಂಬೇಡ್ಕರರಿಗೆ . ಹಾಗಂತ ಅಂಬೇಡ್ಕರರು ತಮ್ಮ ಆಪ್ತ ಅನುಯಾಯಿಗಳಲ್ಲಿ ಹೇಳಿಕೊಂಡಿದ್ದರು. ಅವರ ಈ ಆಶಯಗಳನ್ನು ಉಲ್ಲೇಖಿಸುತ್ತ ಅವರ ಸಹಪಾಠಿಯಾಗಿದ್ದ ಭಗವಾನ್‍ದಾಸ್‍ರವರು ತಮ್ಮ “ಇನ್ ಪಸ್ರ್ಯೂಟ್ ಆಫ್ ಅಂಬೇಡ್ಕರ್” ಕೃತಿಯಲ್ಲಿ ಹೀಗೆ ಹೇಳುತ್ತಾರೆ “ಅವರು( ಅಂಬೇಡ್ಕರ್) ಬೌದ್ಧಧರ್ಮ ಅಸ್ಪøಶ್ಯರ ಏಕಾಧಿಪತ್ಯಕ್ಕೆ ಒಳಪಡುವುದರ ಪರ ಇರಲಿಲ್ಲ. ಬದಲಿಗೆ ಅದು ಇಡೀ ಪ್ರಪಂಚದಲ್ಲೇ ಮಾನವತೆ ಮತ್ತು ಸಹೋದರತೆಯನ್ನು ಪ್ರಚುರಪಡಿಸುವ ಸಾಧನವಾಗಬೇಕು” ಎಂದು ಆಶಿಸಿದ್ದರು ಎನ್ನುತ್ತಾರೆ ಭಗವಾನ್‍ದಾಸ್‍ರವರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಇನ್ನಷ್ಟೂ ಆಶಯಗಳನ್ನು ಅವರು ಉಲ್ಲೇಖಿಸುತ್ತಾರೆ ಅವುಗಳೆಂದರೆ
1. ಪ್ರತಿಯೊಬ್ಬ ಬೌದ್ಧನು ತನ್ನ ಬಳಿ ಬೌದ್ಧಧರ್ಮದ ಧರ್ಮ ಗ್ರಂಥವೊಂದನ್ನು ಇಟ್ಟುಕೊಳ್ಳಬೇಕು ಮತ್ತು ಆ ಗ್ರಂಥ ಬುದ್ಧನ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಬಿಂಬಿಸಬೇಕು.
2. ಹೇಗೆ ಕ್ರಿಶ್ಚಿಯನ್ನರು ಒಂದು ಅಧಿಕಾರಯುತ ಮತಾಂತರ ಪದ್ಧತಿಯನ್ನು ಇಟ್ಟುಕೊಂಡಿದ್ದಾರೋ ಅಂತಹದ್ದೆ ಮಾದರಿಯ ಮತಾಂತರ ಪದ್ಧತಿಯನ್ನು ಬೌದ್ಧರು ಕೂಡ ಹೊಂದಬೇಕು. ಅಂದಹಾಗೆ ಅಂತಹ ಮತಾಂತರದಲ್ಲಿ ಬರೀ ಬೌದ್ಧ ಪಂಚಶೀಲಗಳಷ್ಟೆ ಅಲ್ಲ ಬದಲಿಗೆ ಭಾರತದಲ್ಲಿ ಬೌದ್ಧಧರ್ಮ ಸ್ವೀಕರಿಸಿದ ವ್ಯಕ್ತಿಯೊಬ್ಬ “ಇನ್ನುಮುಂದೆ ನಾನು ಹಿಂದೂ ಅಲ್ಲ, ನಾನೊಬ್ಬ ಹೊಸ ಮನುಷ್ಯ” ಎಂಬ ಭಾವನೆ ಮೂಡಬೇಕು ಎನ್ನುತ್ತಾರೆ ಅಂಬೇಡ್ಕರ್‍ರವರು . ಈ ಕಾರಣಕ್ಕೆ ತಮ್ಮದೇ 22 ದೀಕ್ಷಾ ವಿಧಿಗಳನ್ನು ಸಹ ಅಂಬೇಡ್ಕರರು ಪ್ರತಿಷ್ಠಾಪಿಸುತ್ತಾರೆ. ಅವುಗಳಲ್ಲಿ ನಾನು ಹಿಂದೂ ದೇವರುಗಳನ್ನು ನಂಬುವುದಿಲ್ಲ, ಬ್ರಹ್ಮ, ವಿಷ್ಣು, ಶಿವ ಇವರುಗಳನ್ನು ನಂಬುವುದಿಲ್ಲ, ಬುದ್ಧ ವಿಷ್ಣುವಿನ ಅವತಾರ ಎಂದು ನಂಬುವುದಿಲ್ಲ ಎಂಬಿತ್ಯಾದಿ ಅಂಶಗಳಿವೆ.
3. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಉಪಾಸಕರನ್ನು ನೇಮಿಸಿಕೊಳ್ಳಬೇಕು ಮತ್ತು ಅವರು ವಿವಾಹಿತರಾಗಿರಬೇಕು. ಅಲ್ಲದೆ ಧರ್ಮ ಪ್ರಚಾರ ಮಾಡುವ ಅವರಿಗೆ ಸೂಕ್ತ ವೇತನ ನೀಡಬೇಕು ಮತ್ತು ಅವರು ಬೌದ್ಧ ಧರ್ಮ ಪ್ರಚಾರ ಕಾರ್ಯವನ್ನು ಪಾರ್ಟ್‍ಟೈಮ್ ವೃತ್ತಿಯಾಗಿ ಸ್ವೀಕರಿಸಬೇಕು.
4. ಬೌದ್ಧ ಧರ್ಮ ಪ್ರಚಾರಕ್ಕಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತಹ ಕೇಂದ್ರಗಳಲ್ಲಿ ಉಪಾಸಕರಿಗೆ ತರಬೇತಿ ನೀಡುವ, ಬೇರೆ ಧರ್ಮಗಳ ಬಗ್ಗೆ ತಿಳಿದು ಕೊಳ್ಳುವ ವ್ಯವಸ್ಥೆಯಾಗಬೇಕು.
5. ಪ್ರತಿ ಭಾನುವಾರ ಜನರು ಬೌದ್ಧ ವಿಹಾರವೊಂದರಲ್ಲಿ ಸೇರಬೇಕು ಮತ್ತು ಅಲ್ಲಿ ಅವರು ಬುದ್ಧನ್ನು ಪೂಜಿಸಬೇಕು ಹಾಗೆಯೇ ಅಲ್ಲಿ ಬುದ್ಧನ ಕುರಿತು ಉಪನ್ಯಾಸವಿರಬೇಕು.
ಹೀಗೆ ಅಂಬೇಡ್ಕರರ ಆಶಯಗಳನ್ನು ಹೇಳುತ್ತಾ ಹೋಗುತ್ತಾರೆ ಭಗವಾನ್‍ದಾಸ್‍ರವರು. ಒಂದಂತು ನಿಜ, ಬೌದ್ಧ ಧರ್ಮದ ಪ್ರಚಾರಕ್ಕಾಗಿ ಅಂಬೇಡ್ಕರರು ತುಂಬಾ ಸೀರಿಯಸ್ ಆಗಿದ್ದರು. ಧರ್ಮ ಸ್ವೀಕಾರ ಮತ್ತು ಪ್ರಚಾರವನ್ನು ಅವರು ಹಗುರವಾಗಿ ತೆಗೆದುಕೊಂಡಿರಲಿಲ್ಲ. ಏನಾದರೂ ಅವರು ಇನ್ನೊಂದಿಷ್ಟು ವರುಷ ಬದುಕಿದ್ದೇ ಆದರೆ ಇಡೀ ಭಾರತವನ್ನು ಬೌದ್ಧ ಭಾರತ ಮಾಡಿ ಬಿಡುತ್ತಿದ್ದರು. ಆದರೆ ಜೀವನದ ಅಂತ್ಯ ಅವರಿಗೆ ಅಂತಹ ಅವಕಾಶ ಕೊಡಲಿಲ್ಲ. ಅದೇನೆ ಇರಲಿ, ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾರಕರೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿ ಹೋಗಿದೆ. ಈ ನಿಟ್ಟಿನಲಿ ಅವರ ಆ ಧರ್ಮ ಪುನರುತ್ಥಾನದ ಧಾರ್ಮಿಕ ಪ್ರಕ್ರಿಯೆಯ ನಿರಂತರತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಷ್ಟೆ.
No comments:
Post a Comment