ಪ್ರತ್ಯೇಕ ಧರ್ಮ: ಅದು ಅಷ್ಟು ಸುಲಭದ ಕೆಲಸವಲ್ಲ!
“ವೀರಶೈವ ಪ್ರತ್ಯೇಕ ಧರ್ಮವಾಗಲಿ” ಇದು ವೀರಶೈವ ಮಹಾಸಭೆಯ ಹಲವು ದಿನಗಳ ಒತ್ತಾಯ. ಖಂಡಿತ ಮಹಾಸಭೆಯ ಈ ಒತ್ತಾಯ ನಿಜಕ್ಕೂ ಸ್ವಾಗತಾರ್ಹವಾದುದು. ಆದರೆ ಪ್ರಶ್ನೆ ಏನೆಂದರೆ ಪ್ರತ್ಯೇಕ ಧರ್ಮ; ಅದು ಅಷ್ಟು ಸುಲಭದ ಕೆಲಸವೇ ಎಂಬುದು?
ಯಾಕೆಂದರೆ ಪ್ರತ್ಯೇಕ ಧರ್ಮವಾಗುವುದೆಂದರೆ ಅದು ಹೊಸದಾಗಿ ಧರ್ಮ ಕಟ್ಟುವುದೆಂದರ್ಥ! ಹಾಗೆಯೇ ಭಾರತದ ಪ್ರಸಕ್ತ ಧಾರ್ಮಿಕ ವಾತಾವರಣದಲ್ಲಿ ಅದು ಅಷ್ಟು ಸುಲಭವಲ್ಲ. ಉದಾಹರಣೆಗೆ ಜೈನಧರ್ಮವನ್ನು ಪರಿಗಣಿಸುವುದಾದರೆ ಅದು ಪ್ರತ್ಯೇಕ ಧರ್ಮವಾಗಿದ್ದರೂ ಭಾರತದ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಅದು ಹಿಂದೂ ಧರ್ಮದ ಭಾಗವಾಗಿಯೇ ಹೋಗಿದೆ ಅಥವಾ ಅದರ ಮತ್ತೊಂದು ಜಾತಿರೂಪ ತಾಳಿದೆ. ಹೀಗಿರುವಾಗ ಇಂತಹ ವ್ಯವಸ್ಥೆಯಲ್ಲಿ ಪ್ರತ್ಯೇಕ ಧರ್ಮದ ಅಸ್ತಿತ್ವ ಪಡೆಯಬೇಕೆಂದರೆ? ಖಂಡಿತ, ಅದಕ್ಕೂ ಮೊದಲು ಪ್ರಸಕ್ತ ವ್ಯವಸ್ಥೆಯಿಂದ ದೂರಗೊಳ್ಳುವ ಪ್ರಕ್ರಿಯೆ ನಡೆಯಬೇಕು. ಪೊಳ್ಳು ನಂಬಿಕೆಗಳು, ಪೂಜೆ-ಸಂಪ್ರದಾಯಗಳು ಇದೆಲ್ಲವನ್ನು ತ್ಯಜಿಸುವ ಅಥವಾ ತಾತ್ವಿಕವಾಗಿ ಪ್ರಶ್ನಿಸುವ ಕ್ರಿಯೆ ನಡೆಯಬೇಕು.
ಅಂದಹಾಗೆ ಇಂತಹದ್ದೆಲ್ಲವನ್ನು ಮಾಡಿ ಅಂದರೆ ಹಿಂದೂ ಧರ್ಮದ ಸಂಪ್ರದಾಯಗಳು, ಆಚಾರ-ವಿಚಾರಗಳನ್ನು ಉಗ್ರವಾಗಿ ಟೀಕಿಸಿ, ತನ್ಮೂಲಕ ತನ್ನ ಜನರನ್ನು ಅಂತಹ ನಂಬಿಕೆಗಳಿಂದ ಬಿಡಿಸಿ, ಪೊರೆ ಕಳಚಿ, ಹಾಗೆಯೇ ತನ್ನವರಿಗೆ ‘ಅಸ್ಪøಶ್ಯರು ತಾವು ಮೂಲ ಬೌದ್ಧರು’ ಎಂದು ಮನವರಿಕೆ ಮಾಡಿಸಿ ಅವರೆಲ್ಲರನ್ನು ಅದರಲ್ಲಿ ಸೇರುವಂತೆ ಮಾಡಿ, ಬೌದ್ಧಧರ್ಮ ಎಂಬ ಭಾರತದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಧರ್ಮವನ್ನು ಪುನರ್‍ಕಟ್ಟುವ ಕ್ರಿಯೆಯಲ್ಲಿ ಯಶಸ್ಸು ಕಂಡವರೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್‍ರವರು ಮಾತ್ರ. ಈ ನಿಟ್ಟಿನಲ್ಲಿ ಅಂಬೇಡ್ಕರ್‍ರವರು ನಡೆಸಿರುವ ಪ್ರಕ್ರಿಯೆ, ಹೋರಾಟ ವೀರಶೈವ ಮುಖಂಡರಲ್ಲಿ, ಬಂಧುಗಳಲ್ಲಿ ಎಲ್ಲಿದೆ ಎಂಬುದು? ಯಾಕೆಂದರೆ ವೀರಶೈವರು ಅದೇ ಹಿಂದೂ ದೇವರು-ದೇವತೆಗಳನ್ನು ಪೂಜಿಸುತ್ತಾರೆ. ಆಚಾರ, ವಿಚಾರ, ಸಂಪ್ರದಾಯಗಳನ್ನು ‘ಸಂಪ್ರದಾಯಬದ್ಧವಾಗಿ’ ಪಾಲಿಸುತ್ತಾರೆ. ಹೀಗಿರುವಾಗ ಇಲ್ಲಿ ‘ಪೊರೆ ಕಳಚುವ ಪ್ರಕ್ರಿಯೆ’ ಎಲ್ಲಿ ಮತ್ತು ಹಾಗೆ ಪೊರೆ ಕಳಚಿ ಹೊರಬರದಿದ್ದರೆ ‘ಹೊಸ ಮಹಾಮನೆ’ ಕಟ್ಟಲು ಸಾಧ್ಯವೆ? ಎಂಬುದು. ಈ ದಿಸೆಯಲ್ಲಿ ಪ್ರತ್ಯೇಕ ಧರ್ಮದ ಮಾತನ್ನಾಡುತ್ತಿರುವ ವೀರಶೈವ ಬಂಧುಗಳು ಚಿಂತಿಸಲಿ. ಪ್ರತ್ಯೇಕ ಧರ್ಮ, ‘ಧರ್ಮದ ಕಾಲಂನಲ್ಲಿ ಬೇರೆ ಹೆಸರು ಬರೆಸುಕೊಳ್ಳುವುದರಲ್ಲಿಲ್ಲ’ ಬದಲಿಗೆ ‘ಪೊರೆ ಕಳಚುವ ಪ್ರಕ್ರಿಯೆ’ಯಲ್ಲಿದೆ ಎಂಬುದನ್ನು ತಿಳಿಯಲಿ ಎಂಬುದೇ ಸಧ್ಯದ ಕಳಕಳಿ.
-ರಘೋತ್ತಮ ಹೊ.ಬ
No comments:
Post a Comment