ಅಂಬೇಡ್ಕರರ ಸ್ವಾಭಿಮಾನಿ ರಾಜಕಾರಣ
-ರಘೋತ್ತಮ ಹೊ.ಬ
ಇತ್ತೀಚೆಗೆ ಕೆಲವು ಸ್ವಾರ್ಥಪರ ದಲಿತ ರಾಜಕಾರಣಿಗಳಿಂದ ಪ್ರಚಾರವೊಂದು ನಡೆಯುತ್ತಿದೆ. ಅಂಬೇಡ್ಕರರು ರಾಜಕಾರಣಿಯಲ್ಲ, ಧಾರ್ಮಿಕ ನಾಯಕ! ಆಧ್ಯಾತ್ಮಿಕ ನಾಯಕ!! ಎಂಬುದೇ ಆ ಪ್ರಚಾರ. ಅರ್ಥಾತ್ ಅಪಪ್ರಚಾರ. ಅಂಬೇಡ್ಕರ್ ಧಾರ್ಮಿಕ ನಾಯಕರು ಎಂದರೇನು? ಅದು ಇನ್ನೂ ಶ್ರೇಷ್ಠವಲ್ಲವೇ? ಎಂದು ಒಂದಷ್ಟು ಮಂದಿ ಖುಷಿಯಾಗಬಹುದು. ಆದರೆ? ಅಂತಹ ಖುಷಿಯಲ್ಲಿ ಅಂಬೇಡ್ಕರರಂತಹ ನೈಜ ಪ್ರಜಾಪ್ರಭುತ್ವವಾದಿಯನ್ನೇ, ಅಂತಹ ಪ್ರಜಾಪ್ರಭುತ್ವದ ಆಧಾರದ ಮೇಲೆ ಈ ದೇಶದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕೆಂದವರನ್ನೆ ಬಲಿಕೊಟ್ಟರೆ? ತಮ್ಮ ಸ್ವಾರ್ಥಕ್ಕೆ ಅಂಬೇಡ್ಕರ್‍ರವರ ವಿಚಾರಗಳನ್ನು, ಅವರ ಒಟ್ಟಾರೆ ಸಮಗ್ರ ಚಿಂತನೆಯನ್ನು, ಹೋರಾಟವನ್ನು ಬಲಿಕೊಟ್ಟರೆ? ಅಂಬೇಡ್ಕರ್ ಎಂಬ ರಾಜಕಾರಣಿಯನ್ನು ಆಧ್ಯಾತ್ಮಿಕ ನಾಯಕ ಎನ್ನುವುದರಿಂದ ಆಗುತ್ತಿರುವುದೇ ಇದು. ತಮ್ಮ ಸ್ವಾರ್ಥಕ್ಕೆ ಅಂಬೇಡ್ಕರರ ಸಿದ್ಧಾಂತಗಳ ಬಲಿ. ಒಟ್ಟಾರೆ ಅಂಬೇಡ್ಕರರ ಹೋರಾಟದ ಕೆಚ್ಚಿನ ಬೆನ್ನೆಲುಬು ಮುರಿಯುವಂಥ ಹೀನ ಕೃತ್ಯ.
ಹಾಗಿದ್ದರೆ ಅಂಬೇಡ್ಕರರ ಹೋರಾಟದ ನೈಜ ತಿರುಳಾದರೂ ಏನು? ಉತ್ತರ: ರಾಜಕೀಯ. ರಾಜಕೀಯವೆಂದರೆ ಅದು ಈಗಿನ third class politician ಗಳು ಮಾಡುವಂಥದ್ದಲ್ಲ. ಹೆಂಡ ಕೊಟ್ಟು, ಸಾರಾಯಿ ಕೊಟ್ಟು, ಓಟು ಕಿತ್ತು ಗೆದ್ದು ಹೈಕಮಾಂಡ್‍ಗಳ ತಲೆ ಹಿಡಿಯುವಂತಹದ್ದಲ್ಲ. ಸ್ವಾಭಿಮಾನದ್ದು. ಅಪ್ಪನಿಗುಟ್ಟಿದ್ದು ಅಂತಾರಲ್ಲ ಅಂತಹದ್ದು. ಬಹುಶಃ ಅಂತಹ ರಾಜಕಾರಣ ಈ ದೇಶದಲ್ಲಿ ಹಿಂದೆ ಯಾರೂ ಮಾಡಿರಲಾರರು. ಮುಂದೆ ಯಾರೂ ಕೂಡ ಮಾಡಲಾರರು. ಸಾಕ್ಷಾತ್ ಮಹಾತ್ಮ ಗಾಂಧೀಜಿ ಎನಿಸಿಕೊಂಡ ಗಾಂಧೀಜಿಯನ್ನೇ ಅಂತಹ ಹೋರಾಟದಲ್ಲಿ ಅಂದರೆ ರಾಜಕೀಯ ಹೋರಾಟದಲ್ಲಿ ಸೋಲಿಸಿದ ಕೀರ್ತಿ ಅಂಬೇಡ್ಕರರದ್ದು. ಅಂತಹ king of combative politics ಅನ್ನು ಈ ದೇಶದ ಕೆಲ ರಾಜಕಾರಣಿಗಳು, ವಿಶೇಷವಾಗಿ ಕೆಲ ಸ್ವಾರ್ಥಪರ ದಲಿತ ರಾಜಕಾರಣಿಗಳು ‘ಅಂಬೇಡ್ಕರ್ ರಾಜಕಾರಣಿಯೇ ಅಲ್ಲ’ ಎಂದರೆ? ಬಹುಶಃ ಅದು ಸೂರ್ಯನಲ್ಲಿ ಬೆಳಕೇ ಇಲ್ಲ ಎಂದಂತೆ. ಚಂದ್ರನಲ್ಲಿ ಕಾಂತಿಯೇ ಇಲ್ಲ ಎಂದಂತೆ.
ಹಾಗಾದರೆ ಅವರ ಸ್ವಾಭಿಮಾನದ ರಾಜಕಾರಣದ ಝಲಕ್? ಸ್ವತಃ ಅಂಬೇಡ್ಕರರೇ ಹೇಳುವ ಹಾಗೆ ಅವರು ಎಂ.ಎ, ಪಿ.ಎಚ್‍ಡಿ, ಡಿ.ಎಸ್ಸಿ, ಪದವಿಗಳನ್ನು ಮುಗಿಸಿ ಬಂದಾಗ ಈ ದೇಶದ ಪ್ರಮುಖ ಯೂನಿವರ್ಸಿಟಿಗಳು ಅವರಿಗೆ professor ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಆಹ್ವಾನಿಸಿದವು. ಆಗಿನ ಕಾಲಕ್ಕೆ ಸಾವಿರವೋ ಹತ್ತು ಸಾವಿರವೋ ಸಂಬಳ ಪಡೆದು ಅಂಬೇಡ್ಕರರು ಖುಷಿಯಾಗಿ ತಮ್ಮ family ಜೊತೆ ಕಾರು ಬಂಗಲೆ ಎಂದು ಐಷಾರಾಮಿ ಜೀವನ ನಡೆಸಬಹುದಿತ್ತು. ಒಂದಲ್ಲ, ಎರಡಲ್ಲ, ಮೂರು ಮನೆ ಕಟ್ಟಿಕೊಂಡು ಒಂದಷ್ಟು ವಿವಿಗಳಿಗೆ ಕುಲಪತಿಯೋ ಮತ್ತೊಂದೋ ಆಗಿ ಹಾಯಾಗಿರಬಹುದಿತ್ತು. ಆದರೆ? ಕೋಟು ಹಾಕಿಕೊಂಡು ಪಾಠ ಮಾಡಬೇಕಾದ ಪ್ರೊಫೆಸರ್ ಅದೇ ಕೋಟು ಹಾಕಿಕೊಂಡು ಧಿಕ್ಕಾರ ಎಂದು ನಿಂತದ್ದು ಬೀದಿಯಲ್ಲಿ! ತನ್ನ ಜನರ ಹೀನ ಸ್ಥಿತಿ ಕಂಡು ಅವರ ಉದ್ಧಾರಕ್ಕೆ ಪಣ ತೊಟ್ಟು ಧರಣಿ ಕುಳಿತದ್ದು ಈ ದೇಶದ ಕೆರೆ, ಕಟ್ಟೆ, ದೇವಸ್ಥಾನ, ಶಾಲೆಗಳೆಂಬ ಸಾರ್ವಜನಿಕ ಸ್ಥಳಗಳಲ್ಲಿ.
ಸ್ವಂತ ಭಾಷೆಯನ್ನು ಓದಲು ಬರೆಯಲು ಬಾರದವರಿಗೆ ಇಂಗ್ಲೀಷು, ಫ್ರೆಂಚು, ಪಾರ್ಸಿ, ಮರಾಠಿ, ಹಿಂದಿ ಇತ್ಯಾದಿ ಭಾಷೆಗಳನ್ನು ಕಲಿತು ಬ್ರಿಟೀಷ್ ಕಮೀಷನ್‍ಗಳ ಮುಂದೆ, ಈ ದೇಶದ ಪಟ್ಟಭದ್ರ ಹಿಂದೂಗಳ ಮುಂದೆ 30 ಕೋಟಿ ದಲಿತರ ಪರವಾಗಿ ಒಂದೇ ದನಿಯಾಗಿ ವಿವಿಧ ವೇದಿಕೆಗಳಲ್ಲಿ, ಅಸೆಂಬ್ಲಿ, ಪಾರ್ಲಿಮೆಂಟುಗಳಲ್ಲಿ ಕೂಗಾಡಿ ಹೋರಾಡಿ ಸಹಸ್ರಾರು ವರ್ಷಗಳಿಂದ ಕಳೆದುಕೊಂಡಿದ್ದ ಮಾನ ಮರ್ಯಾದೆ ಆಸ್ತಿ ಆಧಿಕಾರ ಎಲ್ಲವನ್ನು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ತಂದು ಕೊಟ್ಟವರು ಅಂಬೇಡ್ಕರರು.(ಅಂಬೇಡ್ಕರರು ಎಂದು ಹೆಸರೇ ಹೇಳಬೇಕಾಗಿದೆ. ಏಕೆಂದರೆ ಅವರು ಎಂದಾಕ್ಷಣ ಬೇರೆಯವರು ಎಂದೇ ತಪ್ಪು ತಿಳಿದುಬಿಡುವ, ತಿಳಿಸಿಬಿಡುವ ಅಪಾಯ ಇದೆ! ವಿಶೇಷವಾಗಿ ಸ್ವಾರ್ಥಪರ ದಲಿತ ರಾಜಕಾರಣಿಗಳಿಂದ).ಇಂತಹ ತಮ್ಮ ರಾಜಕೀಯ ಹೋರಾಟವನ್ನು ಅಂಬೇಡ್ಕರರು ರಾಜಕೀಯ ಪಕ್ಷಗಳ ಮೂಲಕವೇ ಮಾಡಿರಬೇಕಲ್ಲವೆ? ಹೌದು, ರಾಜಕಾರಣಿ ಎಂದಾಕ್ಷಣ ರಾಜಕೀಯ ಪಕ್ಷ ಬೇಕೆಬೇಕು. ಏಕೆಂದರೆ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಲಕ್ಷಣ. ಅದಕ್ಕೋಸ್ಕರ ಆ ಕಾಲದಲ್ಲಿ ಅಂಬೇಡ್ಕರರು ಸ್ಥಾಪಿಸಿದ್ದು ಒಂದಲ್ಲ ಎರಡಲ್ಲ ಮೂರು ರಾಜಕೀಯ ಪಕ್ಷಗಳನ್ನು. I.L.P(Independent Labour Party), S.C.F(Scheduled Caste Federation), R.P.I(Republican Party of India).ಎಂಬುವುವೇ ಆ ಮೂರು ರಾಜಕೀಯ ಪಕ್ಷಗಳು.
ಭಾರತೀಯ ರಾಜಕಾರಣ ಎಂದಾಕ್ಷಣ ಕಾಂಗ್ರೆಸ್ ಎಂದು ಗಿಳಿಪಾಠ ಹೇಳುವವರಿಗೆ ಅಂಬೇಡ್ಕರರ ಈ ಸ್ವಾಭಿಮಾನಿ ಹಿನ್ನಲೆಯ ರಾಜಕೀಯ ಪಕ್ಷಗಳು ಮತ್ತು ಅದರ ಮೂಲಕ ಅವರು ಎದುರಿಸಿದ ಚುನಾವಣೆಗಳು ಗೊತ್ತಿಲ್ಲದಿರಬಹುದು. ಆದರೆ ಇತಿಹಾಸ ಇತಿಹಾಸವೇ ಅಲ್ಲವೆ? ಯಾಕೆ ಅಂಬೇಡ್ಕರರು ಹೇಳುವ ಹಾಗೆ ಕೊಂದವ (ಬೇಟೆಗಾರ) ಹೇಳಿದ್ದೆ ಮಾತ್ರ ಇತಿಹಾಸವೆ? ಆ ಬೇಟೆಗಾರನಿಂದ ಹತನಾದ ಸಿಂಹಕ್ಕೆ ಯಾವುದೇ ಇತಿಹಾಸವಿಲ್ಲವೆ? ಸಿಂಹಗಳ ಬಾಯಿಯಿಂದಲೂ ಇತಿಹಾಸ ಹೇಳಿಸುವ ಅಥವಾ ಇತಿಹಾಸ ಬರೆಸುವ ತನ್ಮೂಲಕ ಬೇಟೆಗಾರ(ಹಿಂದೂಗಳು)ನ ಸಂಚನ್ನು ವಿಫಲಗೊಳಿಸುವ ಕೆಲಸವನ್ನು ಇಂದಿನ ದಲಿತರು ವಿಶೇಷವಾಗಿ ಅಂಬೇಡ್ಕರ್‍ವಾದಿಗಳು ಮಾಡಬೇಕಾಗಿದೆ.
ಸ್ವತಂತ್ರಪೂರ್ವ ನಡೆದಿರುವ ವಿವಿಧ ಚುನಾವಣೆಗಳನ್ನು ಅಂಬೇಡ್ಕರರು I.L.P., S.C.F., ವತಿಯಿಂದ ಸ್ಪರ್ಧಿಸಿದ್ದಾರೆ. ಅದೂ S.C.F ನ ವತಿಯಲ್ಲಿ ಅವರು ಸ್ಪರ್ಧಿಸಿದ್ದು ಆನೆ ಗುರುತಿನ ಮೂಲಕ. ‘ಆನೆ’ ಎಂದಾಕ್ಷಣ ಈಗಿನ ಬಿಎಸ್‍ಪಿ ಪಕ್ಷವನ್ನು ಕಲ್ಪಿಸಿಕೊಳ್ಳುವುದು ಬೇಡ. ಹೆಚ್ಚೆಂದರೆ ಅಂಬೇಡ್ಕರ್‍ರವರು ‘ಆನೆ’ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದರೆಂಬ ಗೌರವಕ್ಕೆ ಆ ಪಕ್ಷದ ಸಂಸ್ಥಾಪಕರಾದ ಮಾನ್ಯ ಕಾನ್ಷೀರಾಂರವರು ಆನೆ ಚಿಹ್ನೆಯನ್ನು ತಮ್ಮ ಪಕ್ಷದ ಚಿಹ್ನೆಯಾಗಿಸಿಕೊಂಡಿರಬಹುದಷ್ಟೆ. ಅಂದಹಾಗೆ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್‍ರವರು ಆ ಚುನಾವಣೆಗಳಲ್ಲಿ ದೇಶದಾದ್ಯಂತ ಪ್ರಚಾರವನ್ನು ಕೂಡ ಮಾಡಿದ್ದಾರೆ. ಲಕ್ನೋ, ಪಂಜಾಬ್, ಬಂಗಾಳ, ಮಧ್ಯಪ್ರದೇಶ ಹೀಗೆ ವಿವಿದೆಡೆ ಅವರು ಮಾಡಿರುವ ಚುನಾವಣಾ ಭಾಷಣಗಳು ಇತಿಹಾಸದಲ್ಲಿ ದಾಖಲಾಗಿವೆ.
ಹಾಗೆ ರಾಜಕೀಯ ಎಂದಾಕ್ಷಣ ಬೇರೆ ರಾಜಕೀಯ ಪಕ್ಷಗಳನ್ನು ಟೀಕಿಸಿರಬೇಕಲ್ಲವೇ? ಹೌದು, ಅಂಬೇಡ್ಕರರು ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಗುಮ್ಮನಂತೆ ಕಾಡಿದ್ದಾರೆ. ಕಮ್ಯುನಿಸ್ಟರನ್ನು ಹೀನಾಯವಾಗಿ ಹಂಗಿಸಿದ್ದಾರೆ. ಹಿಂದೂ ಮಹಾಸಭಾ(ಇಂದಿನ ಬಿಜೆಪಿ)ಯನ್ನು ಕೂಡ ಉಗ್ರವಾಗಿ ಟೀಕಿಸಿದ್ದಾರೆ. ಅಂದಹಾಗೆ ಗಾಂಧೀಜಿಯವರನ್ನು ತಮ್ಮ ಜೀವನದುದ್ದಕ್ಕೂ ಅವರು ಕಾಡಿರುವ ಪರಿ ಈ ದೇಶದ ಇತಿಹಾಸ ಒಟ್ಟಾರೆ ಇಡೀ ಪ್ರಪಂಚದ ಇತಿಹಾಸ ಇನ್ನು ಜನ್ಮ ಜನ್ಮಾಂತರಕ್ಕೂ ನೆನೆಸಿಕೊಳ್ಳುವಂತಹದ್ದು. ಈಗಿನ ರಾಜಕಾರಣಿಗಳು ಪರಸ್ಪರ ಟೀಕಿಸುವುದೇನು ಬಂತು? ಅಂಬೇಡ್ಕರ್ ಗಾಂಧೀಜಿಯವರನ್ನು ಆಗ ಟೀಕಿಸಿದ್ದಾರಲ್ಲ ಅದು ರಾಜಕೀಯ. ಅವರ ವಿರುದ್ಧ “what congress and Gandhi have done to untouchables?”ಎಂದು ಪುಸ್ತಕ ಬರೆದು ಪ್ರಕಟಿಸಿದ್ದಾರಲ್ಲಾ ಅದು ರಾಜಕೀಯ. ದೇವೇಗೌಡರು ಆಗಾಗ ಪುಸ್ತಕ ಬರೆಯುತ್ತಾರಲ್ಲ ಅದಲ್ಲ. ಈವಾಗ ಏನೋ ನೆಟ್ ಇದೆ. ಕಂಪ್ಯೂಟರ್ ಇದೆ. ಫ್ಯಾಕ್ಸ್, ಟಿವಿ, ಮೊಬೈಲ್ ಸಮೂಹ ಮಾಧ್ಯಮಗಳ ಬರಪೂರ ಬೆಂಬಲವೇ ಇದೆ. ಆದರೆ ಆಗ ಅಂಬೇಡ್ಕರರಿಗೆ ಏನಿತ್ತು? ನಿಜ, ಗಾಂಧೀಜಿಯವರಿಗೆ ಏನಿತ್ತು ಎಂದು ಕೇಳಬಹುದು. ಆದರೆ ಅವರಿಗೆ ಸಮಸ್ತ ಹಿಂದೂಗಳ ಬೆಂಬಲವಿತ್ತು! ಆದರೆ ಅಂಬೇಡ್ಕರರಿಗೆ? ಎಷ್ಟೋ ಸಂದರ್ಭದಲ್ಲಿ ಅಂಬೇಡ್ಕರರು ದಲಿತರ ಪರ ಹೋರಾಡುತ್ತಿದ್ದಾಗಲೂ ಕೂಡ ಅವರು ದಲಿತರ ವಿರುದ್ಧವೇ ಹೋರಾಡುತ್ತಿದ್ದಾರೆ, ಗಾಂಧೀಜಿಯವರೇ ನಮ್ಮ ಪರ ಹೋರಾಡುತ್ತಿರುವುದು ಎಂದು ಈ ದೇಶದ ಅಜ್ಞಾನಿ ದಲಿತರು ಅಂದು ಕೊಂಡದ್ದು ಉಂಟು! ವಿಶೇಷವಾಗಿ ಪೂನಾ ಒಪ್ಪಂದದ ಸಂಧರ್ಭದಲ್ಲಿ. ಅಂದಹಾಗೆ ಅಂತಹ ದಲಿತರು ಈಗಲೂ ಇದ್ದಾರೆ ಎಂದರೆ ಬಹುತೇಕರಿಗೆ ಅಚ್ಚರಿಯಾಗಬಹುದು. ವಿಶೇಷವಾಗಿ ತಮ್ಮನ್ನೇ ತಾವು ಗಾಂಧೀವಾದಿಗಳೆಂದು ಕರೆದುಕೊಳ್ಳುವ ದಲಿತರು ಅಂತಹ ಅಜ್ಞಾನಿಗಳೆನ್ನಬಹುದು.
ಇರಲಿ, ಚುನಾವಣೆಗಳಲ್ಲಿ ಅಂಬೇಡ್ಕರರು ಸ್ಪರ್ಧಿಸಿದ್ದರೆಂಬ ಮಾತ್ರಕ್ಕೆ ಅವರು ಅಲ್ಲಿ ಗೆದ್ದಿರಲೇಬೇಕಲ್ಲವೇ? ಗೆದ್ದು ಮತ್ರಿಯಾಗಿರಬೇಕಲ್ಲವೆ? ಹೌದು, 1937ರಲ್ಲಿ ಮುಂಬೈ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಸ್ವತಃ ಅವರನ್ನೂ ಸೇರಿಸಿಕೊಂಡು ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’(ಸ್ವತಃ ಅಂಬೇಡ್ಕರರೇ ಸ್ಥಾಪಿಸಿದ್ದ ಪಕ್ಷ)ಯ ವತಿಯಿಂದ 17 ಸ್ಥಾನಗಳನ್ನು ಗೆದ್ದಿರುವ ಅವರು ನಂತರ 1942ರಲ್ಲಿ ಇಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿಯಲ್ಲಿ ಮಂತ್ರಿಯೂ ಆಗಿದ್ದಾರೆ! ಅದೂ ಎಷ್ಟು ವರ್ಷಗಳವರೆಗೆ? 1942ರಿಂದ 1946ರವರೆಗೆ ಸತತ ನಾಲ್ಕು ವರ್ಷಗಳು! 1942ರಲ್ಲಿ ಮಂತ್ರಿಯಾದಾಗ ಅವರಿಗೆ ಈ ದೇಶದಲ್ಲಿ ಭವ್ಯವಾದ ಸ್ವಾಗತ ಸಿಕ್ಕಿರಬೇಕಲ್ಲವೇ? ಹೌದು, ಸಹಸ್ರಾರು ವರ್ಷಗಳಿಂದ ಈ ದೇಶದ ಎಲ್ಲಾ ರಾಜರುಗಳ ಅಥವಾ ಮತ್ತವರ ಆಸ್ಥಾನದತ್ತ ಕಣ್ಣೆತ್ತಿಯೂ ನೋಡಲಾಗದಂತ ದಲಿತರು ಅಂಬೇಡ್ಕರ್ ಮೂಲಕ ದಿಲ್ಲಿಯಲ್ಲಿ ಬ್ರಿಟಿಷ್ ಮಂತ್ರಿಮಂಡಲದಲ್ಲಿ 1942ರಲ್ಲಿ ಪ್ರಪ್ರಥಮವಾಗಿ ಮಂತ್ರಿಗಳಾಗುತ್ತಾರೆ! ತನ್ಮೂಲಕ ಅಂಬೇಡ್ಕರರು ದಲಿತರಿಗೆ ಹಿಡಿದಿದ್ದ ‘ಅಧಿಕಾರ ಗ್ರಹಣ’ ಬಿಡಿಸುತ್ತಾರೆ. ಹಾಗೆ ಮಂತ್ರಿಯಾಗಿ ಅವರು ಮುಂಬೈಗೆ ಬಂದಿಳಿದಾಗ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತದೆ. ಮುಂಬೈ ಸಿಟಿ ಪೂರಾ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಧ್ವಜಗಳಿಂದ ರಾರಾಜಿಸುತ್ತಿರುತ್ತದೆ. ಹೆಂಗಸರು ಮಕ್ಕಳೆನ್ನದೆ ವಯೋವೃದ್ಧರಾದಿಯಾಗಿ ಎಲ್ಲರೂ ತಮ್ಮ ಈ ಧೀರ ನಾಯಕನನ್ನು ರಾಜಮರ್ಯಾದೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸುತ್ತಾರೆ. ಆ ಮೂಲಕ ಅಂಬೇಡ್ಕರರಿಗೆ ಅಭೂತಪೂರ್ವ ಗೌರವವನ್ನು ಆಗಿನ ದಲಿತರು ಸಲ್ಲಿಸುತ್ತಾರೆ.
ಅಂದಹಾಗೆ ಆಗಿನ ರಾಜಕಾರಣ ಎಂದಾಕ್ಷಣ ಬಹುತೇಕರು ಕಾಂಗ್ರೆಸ್ ಪಕ್ಷ ಎಂದಷ್ಟೆ ತಿಳಿದುಕೊಂಡಿದ್ದಾರೆಂದು ಮತ್ತೊಮ್ಮೆ ಹೇಳುಳುತ್ತಿದ್ದೇನೆ. ಆದರೆ ಅದು ಸುಳ್ಳು. ಒಟ್ಟಾರೆ ಬ್ರಿಟಿಷರ ವಿರುದ್ಧ ನಡೆದ ಸ್ಪರ್ಧೆ ತ್ರಿಕೋನ ಸ್ಪರ್ಧೆ ಎಂದುಕೊಳ್ಳಬಹುದು. ಏಕೆಂದರೆ ಒಂದೆಡೆ ಹಿಂದೂಗಳ ನೇತೃತ್ವದ ಕಾಂಗ್ರೆಸ್ ಇದ್ದರೆ ಮತ್ತೊಂದೆಡೆ ಮುಸ್ಲಿಮರ ನೇತೃತ್ವದ ಮುಸ್ಲಿಂ ಲೀಗ್, ಇವೆರಡರ ನಡುವೆ struggle for independence ಎಂಬ ಆ political warನಲ್ಲಿ ಸ್ಪರ್ಧೆಗಿಳಿದದ್ದು ಅಂಬೇಡ್ಕರ್ ನೇತೃತ್ವದ ‘ಪರಿಶಿಷ್ಟ ಜಾತಿಗಳ ಒಕ್ಕೂಟ” ಅಥವಾ SCF. ನೆನಪಿರಲಿ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ ಸ್ಟ್ರೈಕು, ಧರಣಿ ನಡೆಸಲು ಕಟ್ಟಿಕೊಂಡ ಸಂಘವಲ್ಲ! ಅದೊಂದು ರಾಜಕೀಯ ಪಕ್ಷ. ಹೆಸರು ಸಂಘದ ಹಾಗೆ ಕಾಣುತ್ತದಷ್ಟೆ. ಹಾಗಿದ್ದರೆ ಸ್ವಾತಂತ್ರ್ಯ ಬಂದಾಗ ಈ ಮೂರು ಗುಂಪುಗಳಿಗೆ ಅಂದರೆ ಕಾಂಗ್ರೆಸ್‍ಗೆ, ಮುಸ್ಲಿಂ ಲೀಗ್‍ಗೆ, ಪರಿಶಿಷ್ಟ ಜಾತಿ ಒಕ್ಕೂಟದವರಿಗೆ ಅವರವರ ಪಾಲು ಸಿಕ್ಕಿತಾ? ಖಂಡಿತ. ಕಾಂಗ್ರೆಸ್‍ಗೆ ಈ ದೇಶದ ಅಧಿಕಾರ ಸಿಕ್ಕಿತು. ಮುಸ್ಲಿಂ ಲೀಗಿಗೆ ಪಾಕಿಸ್ತಾನ ಸಿಕ್ಕಿತು. ಹಾಗೆಯೇ ಪರಿಶಿಷ್ಟ ಜಾತಿ ಒಕ್ಕೂಟಕ್ಕೆ ಈ ದೇಶದ ಸಂವಿಧಾನ ಬರೆಯುವ, ಆ ಸಂವಿಧಾನದ ಮೂಲಕ ತಮ್ಮ ಹಕ್ಕು ಅಧಿಕಾರಗಳನ್ನು ಸೂಕ್ತ ಕಲಂಗಳಡಿಯಲ್ಲಿ ಪಡೆಯುವ ಅವಕಾಶ ಸಿಕ್ಕಿತು. ಹಾಗೆಯೇ ಅಂಬೇಡ್ಕರರು ಅಂತಹ ಸಂಧರ್ಭವನ್ನು ಸಮರ್ಥವಾಗಿ ಬಳಸಿಕೊಂಡರೂ ಕೂಡ.
ಅಂದಹಾಗೆ ಮತ್ತೊಮ್ಮೆ ಹೇಳುವುದಾದರೆ ಅಂಬೇಡ್ಕರ್‍ರವರು ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐ.ಎಲ್.ಪಿ.)’ ಕಟ್ಟದಿದ್ದರೆ 1937ರಲ್ಲಿ ಮುಂಬೈ ಅಸೆಂಬ್ಲಿಗೆ ಗೆಲ್ಲಲಾಗುತ್ತಿತ್ತೆ? ಗೆಲ್ಲದೇ ಇದ್ದರೆ 1942ರಲ್ಲಿ ಮಂತ್ರಿಯಾಗುತ್ತಿದ್ದರೆ? ಮಂತ್ರಿಯಾಗದೇ ಇದ್ದರೆ, ‘ಪರಿಶಿಷ್ಟ ಜಾತಿಗಳ ಒಕ್ಕೂಟ’ ಎಂಬ ಮತ್ತೊಂದು ರಾಜಕೀಯ ಪಕ್ಷ ಕಟ್ಟದೆ ಇದ್ದರೆ ಸಂವಿಧಾನ ಸಭೆಯ ಸದಸ್ಯರಾಗುತ್ತಿದ್ದರೆ? (ನೆನಪಿರಲಿ, ಅಂಬೇಡ್ಕರರು ಸಂವಿಧಾನಸಭೆಗೆ ಆಯ್ಕೆಯಾದದ್ದು ಕೂಡ ಬಂಗಾಳದ ಜೈಸೂರ್ ಮತ್ತು ಕುಲ್ನಾ ಎಂಬ ಕ್ಷೇತ್ರಗಳಿಂದ. “ಪರಿಶಿಷ್ಟ ಜಾತಿಗಳ ಒಕ್ಕೂಟ” ಪಕ್ಷದ ವತಿಯಿಂದ ಸ್ಪರ್ಧಿಸಿ!) ಸಂವಿಧಾನ ಸಭೆಯ ಸದಸ್ಯರಾಗದಿದ್ದರೆ ಸಂವಿಧಾನ ಶಿಲ್ಪಿಯಾಗುತ್ತಿದ್ದರೆ? ಊಹ್ಞೂಂ, ಅಂಬೇಡ್ಕರ್ ರಾಜಕೀಯ ಹೋರಾಟ ಮಾಡದೇ I.L.P., S.C.F., ಎಂಬ ರಾಜಕೀಯ ಪಕ್ಷಗಳನ್ನು ಕಟ್ಟದೆ ಇದ್ದರೆ ಅವರು ಸಂವಿಧಾನ ಶಿಲ್ಪಿಯಿರಲಿ ಸಂವಿಧಾನದ ಹತ್ತಿರ ಸುಳಿಯಲೂ ಸಾಧ್ಯವಿರುತ್ತಿರಲಿಲ್ಲ. ಹಾಗಿದ್ದರೆ ಅವರು ಕಾಂಗ್ರೆಸ್ ಪಕ್ಷ ಸೇರಿಯೆ ಇಷ್ಟೆಲ್ಲವನ್ನು ಪಡೆಯಬಹುದಿತ್ತಲ್ಲ ಎಂದು ಯಾರಾದರೂ ಪ್ರಶ್ನಿಸಬಹುದು. ಆದರೆ ಅದು ಅಂದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರರ ಸ್ವಂತ ಮನೆಯಾಗುತ್ತಿತ್ತೆ? ಖಂಡಿತ ಇಲ್ಲ. ಹೆಚ್ಚೆಂದರೆ ಬಾಡಿಗೆ ಮನೆಯಂತಿರುತ್ತಿತ್ತು ತಾನೆ? ಆ ಬಾಡಿಗೆ ಮನೆಯಲ್ಲಿ ಹೈಕಮಾಂಡ್ ಎಂಬ ಮಾಲೀಕನ ಹಂಗಿನಲ್ಲಿ, ಅಸ್ಪøಶ್ಯತೆ ಎಂಬ ಸಂಧಿಗ್ಧ ಸಂದರ್ಭದಲ್ಲಿ ಅಂಬೇಡ್ಕರರು ಸ್ವಾಭಿಮಾನಿ ಮತ್ತು ಸ್ವಾವಲಂಬಿ ರಾಜಕಾರಣ ಮಾಡಲು ಸಾಧ್ಯವಿತ್ತೆ? 8 ವರ್ಷ ಮಂತ್ರಿಯಾಗಿರಲು ಸಾಧ್ಯವಿತ್ತೆ? ಖಂಡಿತ ಇಲ್ಲ. ಒಂದು ಮಾತು ಅವರ ಆ 8ವರ್ಷಗಳ ಮಂತ್ರಿಗಿರಿಯಲ್ಲಿ ಸ್ವಾತಂತ್ರ್ಯ ಬಂದ ನಂತರ 4ವರ್ಷ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಿರಬಹುದು. ಆದರೆ ಅದು ಕಾಂಗ್ರೆಸ್ ನೀಡಿದ ಬಳುವಳಿಯಲ್ಲ. ಬದಲಿಗೆ ಸ್ವಾತಂತ್ರ್ಯ ಹಸ್ತಾಂತರ ಸಂದರ್ಭದಲ್ಲಿ ಬ್ರಿಟಿಷರು ನೆಹರೂ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ‘ಪರಿಶಿಷ್ಟ ಜಾತಿ ಒಕ್ಕೂಟ’ದ ಪ್ರತಿನಿಧಿಯಾಗಿ ಅಂಬೇಡ್ಕರರನ್ನು ಸೇರಿಸಿಕೊಳ್ಳಲೇಬೇಕೆಂಬ ಒತ್ತಡ ತಂದಿದ್ದರಿಂದ ಅಂಬೇಡ್ಕರ್ ಮಂತ್ರಿಯಾದರೆ ಹೊರತು ಕಾಂಗ್ರೆಸ್ ಮತ್ತು ಗಾಂಧಿ ಹೇಳಿದರು ಎಂದಲ್ಲ. ಬೇಕಿದ್ದರೆ ಆಸಕ್ತರು ಅಧಿಕಾರ ಹಸ್ತಾಂತರ ಸಂಧರ್ಭದಲ್ಲಿ S.C.F.,ಮೂಲಕ ಅಂಬೇಡ್ಕರ್ ದೇಶಾದ್ಯಂತ ನಡೆಸಿದ ಉಗ್ರ ಹೋರಾಟವನ್ನು ಸುದೀಪ್ ಬಂದೋಪಧ್ಯಾಯ ಎಂಬುವವರು ಬರೆದಿರುವ “1945ರಿಂದ 1947ರ ವರೆಗಿನ ಬೆಳವಣಿಗೆಗಳು” ಎಂಬ ಕೃತಿಯನ್ನು ಓದುವುದರ ಮೂಲಕ ತಿಳಿದುಕೊಳ್ಳಬಹುದು.
ಒಂದಂತು ನಿಜ, ಅಂಬೇಡ್ಕರ್‍ರವರು ತಮ್ಮ ಜೀವನದುದ್ದಕ್ಕೂ ಈ ದೇಶದ ಪ್ರತಿಯೊಬ್ಬರ ವಿಶೇಷವಾಗಿ ದಲಿತರ ಪ್ರತಿಯೊಂದು ಸಮಸ್ಯೆಗಳಿಗೆ ರಾಜಕೀಯ ಅಧಿಕಾರದಲ್ಲಿಯೇ ಪರಿಹಾರವಿದೆಯೆಂದು ನಂಬಿದವರು. ರಾಜಕೀಯವನ್ನೇ ತಮ್ಮ ಉಸಿರಾಗಿ ಇಟ್ಟುಕೊಂಡು ಹೋರಾಟ ಮಾಡಿದವರು. ಹಾಗಂತ ಅವರು ಆಗ ಅಸ್ತಿತ್ವದಲ್ಲಿದ್ದ ಬೇರೆ ಪಕ್ಷಗಳಲ್ಲಿ ‘ಜೀ ಹುಜೂರ್’ ಎಂದು ಚಮಚಾ ರಾಜಕಾರಣ ಮಾಡಿದವರಲ್ಲ. ಭ್ರಷ್ಟಾಚಾರವಂತೂ ಅವರತ್ತ ಸುಳಿಯಲೇ ಇಲ್ಲ. “ಗೆದ್ದರೆ ಅಧಿಕಾರ, ಸೊತರೆ ವೀರ ಸ್ವರ್ಗ” ಎಂಬಂತೆ ಅವರು ಸ್ವಾಭಿಮಾನಿ ರಾಜಕಾರಣ ನಡೆಸಿದರು. ಇಂತಹ ಸ್ವಾಭಿಮಾನಿ ರಾಜಕೀಯವನ್ನು ತಿಳಿಯದೆ, ಸ್ವಾಭಿಮಾನಿ ಇತಿಹಾಸವನ್ನು ಓದದೆ ಅಂಬೇಡ್ಕರ್ ರಾಜಕಾರಣಿಯೇ ಅಲ್ಲ, ರಾಜಕೀಯಕ್ಕೂ ಅವರಿಗೂ ಸಂಬಂಧವೇ ಇಲ್ಲ ಎನ್ನುವುದು? ಅದು ಅಪ್ಪಟ ಪ್ರಜಾಪ್ರಭುತ್ವವಾದಿಗೆ ಎಸಗುವ ದ್ರೋಹ.
ಅಂತಹ ದ್ರೋಹವನ್ನು ನಾವು ಅಂದರೆ ದಲಿತರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಮನೆಗಳ ಜೀತಗಾರಿಕೆ ಮಾಡಲು ಎಸಗಬೇಕೆ? ಬೇಡ, ಖಂಡಿತ ಬೇಡ. ನಮ್ಮಗಳ ಸ್ವಾರ್ಥಕ್ಕಾಗಿ ನಾವು ಅಂಬೇಡ್ಕರರ ವಿಚಾರಗಳಿಗೆ ಅವರ ಸ್ವಾಭಿಮಾನಿ ರಾಜಕಾರಣಕ್ಕೆ ಚ್ಯುತಿ ತರುವುದು ಬೇಡ. ಅವರ ವಿಚಾರಗಳನ್ನು ದಿಕ್ಕುತಪ್ಪಿಸುವುದು ಬೇಡ. ಅಕಸ್ಮಾತ್ ಕೆಲವು ದಲಿತ ರಾಜಕಾರಣಿಗಳು ಬೇರೆಬೇರೆ ಪಕ್ಷಗಳಲ್ಲಿದ್ದರೆ ಅಲ್ಲಿಯ ಹೈಕಮಾಂಡ್ ಹೇಳಿದ ಹಾಗೆ ಕೇಳಬೇಕೆಂದಿದ್ದರೆ ಅದು ಅವರ ಕರ್ಮ.ಅದಕ್ಕೆ ಅಂಬೇಡ್ಕರರೇನು ಮಾಡಲಿಕ್ಕಾಗುತ್ತದೆ? ಅವರ ವಿಚಾರಗಳಾದರೂ ಏನು ಮಾಡಲಿಕ್ಕಾಗುತ್ತದೆ? ಅಂತಹ ರಾಜಕಾರಣಿಗಳು ಅವರ ಪಾಡಿಗೆ ಅವರು ಆ ಪಕ್ಷಗಳಲ್ಲಿರಲಿ. ಅಲ್ಲಿಯ ಜೀತಗಾರಿಕೆ ಮಾಡಲಿ. ಅದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಆದರೆ ಯಾವುದೇ ಕಾರಣಕ್ಕೂ ಅಂತಹವರು ಅಂಬೇಡ್ಕರ್ ಹೆಸರನ್ನು ಎತ್ತಬಾರದು. ಅಕಸ್ಮಾತ್ ಹೇಳಲೇಬೇಕಾದುದಾದರೆ “ಅಂಬೇಡ್ಕರ್ ದಲಿತರಿಗೆ ಕಾಂಗ್ರೆಸ್ ಎಂಬುದು ಉರಿಯುವ ಮನೆ, ಅದರಲ್ಲಿ ಹೊಕ್ಕುವಿರಾದರೆ ಸುಟ್ಟು ಭಸ್ಮವಾಗುವಿರಿ” ಎಂದು ಸತ್ಯವನ್ನೇ ಹೇಳಬೇಕು. ಮತ್ತು ಹಾಗೆ ಹೇಳಿ ಅಂತಹವರು ಅದದೇ ಪಕ್ಷಗಳಲ್ಲಿರಲಿ. ಅದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಒಂದರ್ಥದಲಿ ಅದು ‘ಸ್ವಾಭಿಮಾನ’ದ, ‘ಅವಮಾನಕ್ಕೆ ಅಂಜದ’ ರಾಜಕಾರಣವಾಗುತ್ತದೆ. ಅದು ಬಿಟ್ಟು ಅಂಬೇಡ್ಕರರು ರಾಜಕಾರಣಿಯೇ ಅಲ್ಲ ಎನ್ನುವುದು? ರಾಜಕೀಯದ ಸೋಂಕೇ ಇಲ್ಲ ಎನ್ನುವುದು?
ಬೇಡ. ನಮ್ಮಗಳ ಸ್ವಾರ್ಥಕ್ಕೆ ನಾವು ಅಂಬೇಡ್ಕರರನ್ನು ಅವರ ಸ್ವಾಭಿಮಾನಿ ರಾಜಕಾರಣವನ್ನು ದಿಕ್ಕುತಪ್ಪಿಸುವುದು, ತಪ್ಪು ಪ್ರಚಾರ ಮಾಡುವುದು ಅಂಬೇಡ್ಕರ್ ಮೊಮ್ಮಕ್ಕಳಾದ ದಲಿತರಿಗೆ ಬೇಡ. ಅಕಸ್ಮಾತ್ ಹಾಗೇನಾದರೂ ಮಾಡಿದ್ದೆ ಮತ್ತು ಹಾಗೆ ಮಾಡುವುದನ್ನು ಮುಂದುವರಿಸಿದ್ದೇ ಆದರೆ ಅದು ‘ನಮ್ಮ ತಂದೆಗೆ’ ಮತ್ತು ಅವರು ಕಟ್ಟಿದ ಆ ಸ್ವಾಭಿಮಾನದ ಸ್ವಂತ ಮನೆಗೆ ಎಸಗುವ ದ್ರೋಹವಾಗುತ್ತದಷ್ಟೆ.
No comments:
Post a Comment