Thursday, 19 June 2014


ಉತ್ತರಪ್ರದೇಶದ ಬದೌನ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುತ್ತ...

                   -ರಘೋತ್ತಮ ಹೊ.ಬ


 “ಆಕೆ ನನ್ನ ಸರ್ವಸ್ವ. ನನ್ನ ಪ್ರಪಂಚವೇ ಆಕೆಯಾಗಿದ್ದಳು. ಆದರೆ ಇಂದು ಆ ನನ್ನ ಪ್ರಪಂಚ ಕೊನೆಗೊಂಡಿದೆ” ತನ್ನ 12 ವರ್ಷದ ಕಂದಮ್ಮನನ್ನು ಪಾಪಿಗಳ ಲೈಂಗಿಕ ತೃಷೆಗೆ ಕಳೆದುಕೊಂಡ ಉತ್ತರಪ್ರದೇಶದ ಬದೌನ್ ಜಿಲ್ಲೆಯ ಕಾತ್ರ ಸಾದತ್‍ಗಂಜ್ ಗ್ರಾಮದ ದಲಿತ ತಂದೆಯ ಆಕ್ರಂಧನದ ನುಡಿಗಳಿವು. ಹೌದು, ಕಳೆದ ಮೇ 27ರ ಮಂಗಳವಾರ ಸಂಜೆ 12 ಮತ್ತು 14ರ ಮಯೋಮಾನದ ಇಬ್ಬರು ಅಕ್ಕತಂಗಿಯರು, ಮೂರ್ತಿ ಮತ್ತು ಪುಷ್ಪ, ಬಹಿರ್ದೆಶೆಗೆಂದು ಹೊಲಕ್ಕೆ ಹೋದವರು ಮತ್ತೆ ಮರಳಿ ಬರಲೇ ಇಲ್ಲ!

   ಬಹಿರ್ದೆಶೆಗೆಂದು ಹೋದವರು ಬಹು ಹೊತ್ತಾದರೂ ಮರಳಿ ಬಾರದಿದ್ದನ್ನು ಗಮನಿಸಿದ ಬಾಲೆಯರ ಪೋಷಕರು ಗ್ರಾಮದಲ್ಲಿ ಹುಡುಕಲು ಆರಂಭಿಸಿದರಾದರೂ ಸುಳಿವು ಸಿಗಲೇ ಇಲ್ಲ. ಕಡೆಗೆ ಆ ಮಕ್ಕಳ ತಂದೆಯ ಸಹೋದರನೊಬ್ಬ “ಹೊಲದಲ್ಲಿ ಮಕ್ಕಳ ಕಿರುಚಾಟವನ್ನು ತಾನೂ ಕೇಳಿದ್ದಾಗಿಯೂ, ಬಳಿಗೆ ಹೋಗಿ ಅವರನ್ನು ಹೊತ್ತೊಯ್ದು ದೈಹಿಕವಾಗಿ ಹಿಂಸಿಸುತ್ತಿದ್ದ ಐದು ಜನ ದುರುಳರನ್ನು ‘ಅವರನ್ನು ಬಿಟ್ಟುಬಿಡುವಂತೆ’ ಕೇಳಿದ್ದಾಗಿಯೂ, ಅವರ ಜೊತೆ ಹೋರಾಟ ನಡೆಸಿದ್ದಾಗಿಯೂ, ಪರಿಣಾಮ ಅವರು ನನ್ನನ್ನು ಶೂಟ್ ಮಾಡುವುದಾಗಿ ಬೆದರಿಸಿದ್ದಾಗಿ” ಅಣ್ಣನಿಗೆ ವಿವರಿಸಿದ. ಗಾಭರಿ ಬಿದ್ದ ಆ ಪೋಷಕರು ಕೂಡಲೇ ಸಮೀಪದಲ್ಲಿದ್ದ ಬದೌನ್ ಪೊಲೀಸ್ ಠಾಣೆಯತ್ತ ದೌಡಾಯಿಸಿದರು. ಆದರೆ ಅಲ್ಲಿ ಠಾಣೆಯಲ್ಲಿ ಆ ಪೊಲೀಸರಿಂದ ಬಂದ ಉತ್ತರವೇನೆಂದರೆ “ಹೇ! ಆ ಹುಡುಗಿಯರು ಊರಿನ ಕೆಲವು ಮೇಲ್ಜಾತಿ ಗಂಡಸರ ಜೊತೆ ಹೋಗಿದ್ದಾರೆ. ಕೆಲವೇ ಗಂಟೆಗಳಲ್ಲಿ ವಾಪಸ್ ಬರುತ್ತಾರೆ. ಅದಕ್ಕೆಲ್ಲ ತಲೆಕೆಸಿಕೊಳ್ಳಬೇಡಿ” ಎಂದು! ಅದರೆ ಆ ಬಾಲೆಯರು ಪೊಲೀಸರು ಹೇಳಿದ ಹಾಗೆ ವಾಪಸ್? ಊಹ್ಞೂಂ, ರಾತ್ರಿಯೆಲ್ಲಾ ತಮ್ಮ ಮಕ್ಕಳಿಗಾಗಿ ಹುಡುಕಾಡಿದ ಆ ಪೋಷಕರಿಗೆ ಮಾರನೇ ದಿನ ಬೆಳಿಗ್ಗೆ ಮಹಿಳೆಯೋರ್ವಳಿಂದ ತಿಳಿದ ಸಿಡಿಲಿನ ಸುದ್ದಿಯೆಂದರೆ “ನಿಮ್ಮ ಮಕ್ಕಳ ಹೆಣಗಳು ಸಮೀಪದ ಮಾವಿನ ತೋಪೊಂದರಲ್ಲಿ ನೇತಾಡುತ್ತಿವೆ” ಎಂದು!

   ಹೌದು, ಬಹಿರ್ದೆಶೆಗೆಂದು ಹೊರಟಿದ್ದ ಆ ದಲಿತ ಪುಟ್ಟ ಕಂದಮ್ಮಗಳನ್ನು ಆ ಊರಿನ 5 ಜನ ಮೇಲ್ಜಾತಿಯವರು ಹೊತ್ತೊಯ್ದು ರಾತ್ರಿಯೆಲ್ಲಾ ಕ್ರೂರವಾಗಿ ಅತ್ಯಾಚಾರ ಮಾಡಿ ಸುದ್ದಿ ಹೊರಬರುತ್ತದೆ ಎಂದು ಆ ಮಕ್ಕಳನ್ನು ಬದುಕಲೂ ಬಿಡದೇ ಜೀವಂತವಾಗಿ ಹಗ್ಗ ಬಿಗಿದು ಮಾವಿನ ಮರವೊಂದಕ್ಕೆ ನೇಣುಹಾಕಿದ್ದರು. ಆತ್ಮಹತ್ಯೆ ಎಂದು ಬಿಂಬಿಸಲು! ಅಂದಹಾಗೆ ಖುದ್ದು ಮಕ್ಕಳನ್ನು ಹೊತ್ತೊಯ್ದಿದ್ದನ್ನು ಗಮನಿಸಿದ್ದ ಆ ಪೊಲೀಸರು ಉತ್ತರಿಸಿದ್ದು? “ಹುಡುಗಿಯರು, ಮೇಲ್ಜಾತಿ ಗಂಡಸರ ಜೊತೆ ಹೋಗಿದ್ದಾರೆ, ವಾಪಸ್ ಬರುತ್ತಾರೆ!” ಆದರೆ ಬಂದದ್ದು? ನೇತಾಡುವ ಶವಗಳಾಗಿ!

   ಖಂಡಿತ, ಉತ್ತರ ಪ್ರದೇಶವಿಂದು ಅತ್ಯಾಚಾರಿಗಳ ಸ್ವರ್ಗ. ಯಾಕೆಂದರೆ ಅಲ್ಲಿ ಆಳುತ್ತಿರುವುದು ಅಖಿಲೇಶ್ ಯಾದವ್ ಎಂಬ ಅದೇ ‘ಸ್ವರ್ಗದ ಒಡೆಯ’! ಹಾಗೆಯೇ ಸದರಿ ಪ್ರಕರಣದ ಆ 5 ಜನ ಮೇಲ್ಜಾತಿ ಗಂಡಸರು ಅದೇ ಅಖಿಲೇಶ್‍ನ ಸ್ವಜಾತಿ ಯಾದವ ಜಾತಿಯವರು. ‘ದಲಿತ ಆ ಹೆಣ್ಣು ಮಕ್ಕಳು’ ಆಮೇಲೆ ಬರುತ್ತಾರೆ ಎಂದು, ವಿಷಯ ಗೊತ್ತಿದ್ದೂ, ಅದು ಅಂದರೆ ಅತ್ಯಾಚಾರ ಮತ್ತು ಕೊಲೆ ನಡೆಯಲು ಅನುವುಮಾಡಿಕೊಟ್ಟ (ಇಲ್ಲಿ ಕಾಪಾಡುವ ಮಾತೇ ಇಲ್ಲ!) ಬದೌನ್ ನ ಆ ಪೋಲೀಸರು ಕೂಡ ಅದೇ ಯಾದವ ಜಾತಿಯವರು. ದುರಂತವೆಂದರೆ ಪ್ರಕರಣದಲ್ಲಿ ಆ ದಲಿತ ಹೆಣ್ಣು ಮಕ್ಕಳ ಹೆಣಗಳು ನೇತಾಡುವ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಕಡೆಗೆ ಗ್ರಾಮಸ್ಥರು ಹೆಣಗಳನ್ನು ಇಳಿಸಿ ಸಮೀಪದ ಹೆದ್ದಾರಿಯೊಂದಕ್ಕೆ ಅಡ್ಡಲಾಗಿ ಮಲಗಿಸಿ ಪ್ರತಿಭಟನೆಗಿಳಿದ ನಂತರವಷ್ಟೆ ಪೊಲೀಸರು ದೂರು ದಾಖಲಿಸಿದ್ದು. ಹ್ಞಾಂ, ಮರಣೋತ್ತರ ವರದಿಯನ್ನು ಬದೌನ್ ನ ಜಿಲ್ಲಾ ಎಸ್‍ಪಿ ಮಾನ್‍ಸಿಂಗ್ ಚೌಹಾಣ್‍ರ ಹೇಳಿಕೆಯ ಪ್ರಕಾರವೇ ಹೇಳುವುದಾದರೆ “ಬಲಿಪಶು ಆ ಹೆಣ್ಣು ಮಕ್ಕಳ ಮೇಲೆ ಗುಂಪು ಅತ್ಯಾಚಾರವೆಸಗಲಾಗಿದೆ, ಹಾಗೆಯೇ ನೇಣು ಹಾಕಿ ಸಾಯಿಸಲಾಗಿದೆ”. ಅಂದಹಾಗೆ ಘಟನೆ ನಡೆದ ನಂತರ ಸ್ವಾಭಾವಿಕವಾಗಿ ಅಲ್ಲಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂತ್ರಸ್ತ ಎರಡೂ ಕುಟುಂಬಗಳಿಗೂ ತಲಾ 5 ಲಕ್ಷ ಪರಿಹಾರ ಘೋಷಿಸಿದರು. ಆದರೆ ಮುಖ್ಯಮಂತ್ರಿಯ ಅಂತಹ ಪರಿಹಾರದ ಘೋಷಣೆಗೆ ಆ ಕುಟುಂಬಗಳ ಉತ್ತರ ಗಂಭೀರವಾಗಿತ್ತು. ಅದೆಂದರೆ “ಪರಿಹಾರ, ನಮಗೆ ಬೇಡ. ಬೇಕಿರುವುದು ನ್ಯಾಯ. ನಮ್ಮ ಮಕ್ಕಳನ್ನು ಅವರು ನೇಣಿಗೇರಿಸಿದ್ದಾರೆ. ಅವರಿಗೂ ನೇಣು ಆಗಬೇಕು” ಎಂದು.

   ಈ ನಿಟ್ಟಿನಲಿ ಸಂತ್ರಸ್ತ ಪೋಷಕರ ಇಂತಹ ಒತ್ತಾಯಕ್ಕೆ ಬಲ ಬಂದಿದ್ದು ಮಾರನೇ ದಿನ ಆ ಗ್ರಾಮಕ್ಕೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ಭೇಟಿಕೊಟ್ಟಾಗ. ಆಶ್ಚರ್ಯಕರವೆಂದರೆ ಅಖಿಲೇಶ್ ಸರ್ಕಾರ ಕೊಟ್ಟ ಪರಿಹಾರವನ್ನು ವಾಪಸ್ ಅವರ ಮುಖಕ್ಕೇ ಬಿಸಾಕಿದ ಆ ಪೋಷಕರು ಮಾಯಾವತಿಯವರಿಗೆ ಹೇಳಿದ್ದು “ಪರಿಹಾರ ನೀವು ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತೇವೆ. ನೀವು ಎಷ್ಟೇ ಕೊಡಿ ಅದನ್ನು ನಾವು ಪ್ರೀತಿಯಿಂದ ಸ್ವೀಕರಿಸುತ್ತೇವೆ. ಆದರೆ ಅಖಿಲೇಶ್ ಸರ್ಕಾರದ ಪರಿಹಾರ ಮಾತ್ರ ಬೇಡ” ಎಂದು! ಒಂದು ಅಂತಃಕರಣದ ದೃಷ್ಟಿಕೋನವನ್ನು ಇಲ್ಲಿ ಗಮನಿಸಬೇಕು. ಅದೆಂದರೆ ಅತ್ಯಾಚಾರಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದರೂ ಕಳೆದುಹೋಗದ ಆ ಪೋಷಕರ ಸ್ವಾಭಿಮಾನ. ಯಾಕೆಂದರೆ ಆ ಪೋಷಕರಿಗೆ ತಿಳಿದಿತ್ತು ತಮ್ಮ ಮಕ್ಕಳನ್ನು ಅತ್ಯಾಚಾರಗೈದು ಕೊಲೆಮಾಡಿದ್ದು ನೇರ ಅಖಿಲೇಶ್ ಸರ್ಕಾರ ಎಂದು. ಹೀಗಿರುವಾಗ ಅಂತಹವರಿಂದ ಪರಿಹಾರ ಸ್ವೀಕರಿಸುವುದೆಂದರೆ... ಈ ದಿಸೆಯಲ್ಲಿ ಬದೌನ್ ನ ಸಂತ್ರಸ್ತ ಆ ಪೋಷಕರ ಕಳಕಳಿ ಗಮನಿಸಿದ ಮಾಯಾವತಿಯವರು ಆ ಕುಟುಂಬಗಳಿಗೆ ಸ್ಥಳದಲ್ಲೇ ತಮ್ಮ ಪಕ್ಷದ ವತಿಯಿಂದ ತಲಾ 5ಲಕ್ಷ ಪರಿಹಾರ ವಿತರಿಸಿದರು. ಹಾಗೆಯೇ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು “ರಾಜಕೀಯ ಅನುಕೂಲಗಳಿಸಲು ನಾನು ಈ ಭೇಟಿ ನೀಡಿದ್ದೇನೆಂದು ಆಡಳಿತ ಪಕ್ಷ ಅಪಪ್ರಚಾರ ನಡೆಸುವ ಸಾಧ್ಯತೆಯಿದೆ. ಆದ್ದರಿಂದ ಸ್ವಭಾವತಃ ನಾನು ಇಂತಹ ಸಂದರ್ಭಗಳಲ್ಲಿ ಭೇಟಿಕೊಡುವುದಿಲ್ಲ. ಆದರೆ ಬದೌನ್ ಘಟನೆಯ ಈ ಸಂದರ್ಭದಲ್ಲಿ ಸಿಬಿಐ ತನಿಖೆಗಾಗಿ ಒತ್ತಡ ಹೇರಲು ನಾನು ನನ್ನ ವಯಕ್ತಿಕ ನಿಯಮ ಮುರಿದು ಭೇಟಿನೀಡಬೇಕಾಯಿತು” ಎಂದರು. ಹಾಗೆಯೇ “ಹೆಣ್ಣುಮಕ್ಕಳುಗಳನ್ನು ಕಳೆದುಕೊಂಡು ದುಃಖತಪ್ತ ಸ್ಥಿತಿಯಲ್ಲಿರುವ ಈ ಕುಟುಂಬಗಳಿಗೆ ನ್ಯಾಯ ದೊರಕಲಿಲ್ಲವೆಂದರೆ ನಾನು ಇಲ್ಲಿಯೇ ಧರಣಿ ಕೂರುವುದಾಗಿ” ಅವರು ಬೆದರಿಕೆಯನ್ನೂ ಒಡ್ಡಿದರು. ಪರಿಣಾಮ ಹೆದರಿದ ಅಖಿಲೇಶ್ ಯಾದವ್ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು.

   ಒಂದು ಗಂಭೀರ ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದೆಂದರೆ 2012 ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ ಒಂದರಲ್ಲಿ ನಡೆದ ಅತ್ಯಾಚಾರದ ಘಟನೆ. ಆ ಘಟನೆಯಲ್ಲಿ ನಿರ್ಭಯಾ ಎಂಬ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿ ಆಕೆ ಅಸುನೀಗಿದಾಗ ಇಡೀ ದೇಶ, ಮೀಡಿಯಾಗಳು, ಫೇಸ್‍ಬುಕ್, ಟ್ವಿಟ್ಟರ್‍ಗಳು ಕೋಲಾಹಲ ಎಬ್ಬಿಸಿದ್ದೇ ಎಬ್ಬಿಸಿದ್ದು. ದೇಶಾದ್ಯಂತ ಭಾರೀ ಚರ್ಚೆ ನಡೆದು ಆರೋಪಿಗಳಿಗೆ ಮರಣದಂಡನೆಯಂತಹ ಉಗ್ರ ಶಿಕ್ಷೆಯೂ ಆಯಿತು! ಕಾರಣ? ಅತ್ಯಾಚಾರಕ್ಕೆ ಒಳಗಾದ ಆ ಮಹಿಳೆ ಮೇಲ್ಜಾತಿಯವಳು ಎಂಬ ಕಾರಣಕ್ಕೆ! ಆದರೆ ಬದೌನ್ ನ ಸದ್ಯದ ದಲಿತ ಹೆಣ್ಣುಮಕ್ಕಳ ಭೀಭತ್ಸ ಅತ್ಯಾಚಾರ ಮತ್ತು ಕೊಲೆ ಪ್ರಕರಣ? ಖಂಡಿತ, ಮಾಧÀ್ಯಮಗಳು ಅಂತಹ ಮುಖಪುಟದ ಸುದ್ದಿ ಮಾಡಲಿಲ್ಲ, ಕಿರುಚಲಿಲ್ಲ, ಅರಚಲಿಲ್ಲ, ಗಂಟೆಗಳ ಕಾಲ ಟಿವಿಗಳ ಮುಂದೆ ಕೂಗಾಡಲಿಲ್ಲ! ನೂತನ ಪ್ರಧಾನಿ ನರೇಂದ್ರ ಮೋದಿಯಿಂದಲೂ ಅಂತಹ ಪ್ರತಿಭಟನೆಯ ಹೇಳಿಕೆ ಹೊರಬೀಳಲಿಲ್ಲವೆಂದರೆ...!
ಮೇಲ್ಜಾತಿ ಹೆಣ್ಣು ಮಕ್ಕಳಿಗೊಂದು ನ್ಯಾಯ, ದಲಿತ ಹೆಣ್ಣು ಮಕ್ಕಳಿಗೊಂದು ನ್ಯಾಯ!
ಖಂಡಿತ, ದಲಿತರಿಗೊಂದು ನ್ಯಾಯ, ಇತರರಿಗೊಂದು ನ್ಯಾಯ ಎಂಬುದಕ್ಕೆ ಬದೌನ್ ನ ಈ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಯಾಕೆಂದರೆ ಈ ನಿಟ್ಟಿನಲ್ಲಿ ಖೈರ್ಲಾಂಜಿ ಪ್ರಕರಣವನ್ನಿಲ್ಲಿ ದಾಖಲಿಸುವುದಾದರೆ 2006 ಸೆಪ್ಟೆಂಬರ್ 26, ಮಹಾರಾಷ್ಟ್ರದ ಖೈರ್ಲಾಂಜಿ ಗ್ರಾಮದಲ್ಲಿ ಆ ದಿನ ಮೇಲ್ಜಾತಿಗಳ ಗುಂಪೊಂದು ದಲಿತ ವರ್ಗಕ್ಕೆ ಸೇರಿದ ಭಯ್ಯಾಲಾಲ್ ಭೂತ್‍ಮಾಂಗೆ ಮತ್ತವರ ಕುಟುಂಬದ ನಾಲ್ವರನ್ನು ಭೀಭತ್ಸವಾಗಿ ಹಿಂಸಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಎಳೆದು ತಂದ ಆ ಮೇಲ್ಜಾತಿಗಳ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ಆ ಕುಟುಂಬದ ಪ್ರಿಯಾಂಕ ಭೂತ್‍ಮಾಂಗೆ ಎಂಬ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸುವಂತೆ ಸ್ವತಃ ಆತನ ತಮ್ಮ ರೋಷನ್‍ಗೆ ಹೇಳಿತು. ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮರ್ಮಾಂಗಕ್ಕೆ ಬಲವಾದ ಏಟುಗಳು ಬಿದ್ದವು! ಕಡೆಗೆ ಪ್ರಿಯಾಂಕ ಭೂತ್‍ಮಾಂಗೆಯ ವಕ್ಷಸ್ಥಳಕ್ಕೆ ಮಚ್ಚಿನಿಂದ ಹೊಡೆದ ಆ ಗುಂಪು ಅವಳ ಮರ್ಮಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿ ಅದಕ್ಕೂ ಮೊದಲು 19 ವರ್ಷದ ಆಕೆಯ ಮೇಲೆ ಮೇಲ್ಜಾತಿಗಳ ಆ ಗುಂಪು ಬಹಿರಂಗವಾಗಿಯೇ ಸಾಮೂಹಿಕ ಅತ್ಯಾಚಾರ ನಡೆಸಿತು.

   ದುರಂತವೆಂದರೆ ಇಂತಹ ಭೀಭತ್ಸ ಕೃತ್ಯವೆಸಗಿದ ಆರೋಪಿಗಳಿಗೆ ಕೆಳಹಂತದ ವಿಚಾರಣಾ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದರೆ, 2010 ಜುಲೈ 12 ರಂದು ಬಾಂಬೇ ಹೈಕೋರ್ಟ್‍ನ ನಾಗಪುರ ಪೀಠವು ಸದರಿ ಮರಣದಂಡನೆಯನ್ನು ಜೀವಾವಧಿಶಿಕ್ಷೆಗೆ ಇಳಿಸಿತು. ಆ ಮೂಲಕ ಖೈರ್ಲಾಂಜಿಯ ಆ ನರಹಂತಕರನ್ನು ವ್ಯವಸ್ಥಿತವಾಗಿ ರಕ್ಷಿಸಲಾಯಿತು! ಪರಿಣಾಮ ಜಗಜ್ಜಾಹೀರಾದದ್ದೆಂದರೆ ದಲಿತರ ಮೇಲಿನ ದೌರ್ಜನ್ಯಕ್ಕೆ ಈ ದೇಶದಲ್ಲಿ ಎಂತಹ ‘ನ್ಯಾಯ’ ಎಂಬುದು. ಅಂದಹಾಗೆ ಇಂತಹ’‘ನ್ಯಾಯ’ಕ್ಕೆ ಮತ್ತೊಂದು ಘಟನೆಯನ್ನಿಲ್ಲಿ ಉಲ್ಲೇಖಿಸಬಹುದು. ಅದೆಂದರೆ 1997 ಡಿಸೆಂಬರ್ 1 ಮಧ್ಯರಾತ್ರಿ 11 ಗಂಟೆಗೆ ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಎಂಬ ಗ್ರಾಮದಲ್ಲಿ ನಡೆದ ಘಟನೆ. ಆ ಘಟನೆಯಲ್ಲಿ ಮೇಲ್ಜಾತಿ ರಣವೀರಸೇನೆಯ ನರಹಂತಕ ಗುಂಪು 27 ಮಹಿಳೆಯರು, 16 ಮಕ್ಕಳು ಸೇರಿದಂತೆ 58 ದಲಿತರನ್ನು ಕೊಂದುಹಾಕಿತು. ದುರಂತವೆಂದರೆ ಸದರಿ ಪ್ರಕರಣದಲ್ಲಿಯೂ ಅಷ್ಟೆ 2013 ಅಕ್ಟೋಬರ್ 3ರಂದು ತೀರ್ಪು ನೀಡಿದ ಪಾಟ್ನಾ ಉಚ್ಛನ್ಯಾಯಾಲಯ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡದ ಎಲ್ಲಾ ಅರೋಪಿಗಳನ್ನು ದೋಷ ಮುಕ್ತಗೊಳಿಸಿತು! ಪ್ರಶ್ನೆ ಏನೆಂದರೆ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಇಂತಹ "ದುರಂತ ತೀರ್ಪುಗಳ ಇತಿಹಾಸ"ವಿರುವಾಗ ಉತ್ತರಪ್ರದೇಶದ ಬದೌನ್ ನಲ್ಲಿ ನಡೆದಿರುವ ಸದ್ಯದ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ? ಖಂಡಿತ, ಇದಕ್ಕೂ ಕೂಡ ನ್ಯಾಯ ಬಲು ದೂರದಲ್ಲಿರುವಂತೆ ಕಾಣುತ್ತದೆ.

   ಹಾಗಿದ್ದರೆ ಪರಿಹಾರ? ಖಂಡಿತ ಪರಿಹಾರ, “ಪರಿಹಾರ ನೀಡಲು ಬಂದ ಮಾಯಾವತಿಯವರಿಂದ ಮಾತ್ರ ಪರಿಹಾರ ಸ್ವೀಕರಿಸಿದ” ಆ ಪೋಷಕರ ಸ್ವಾಭಿಮಾನದ ನಡೆಯಲ್ಲಿದೆ! ಯಾಕೆಂದರೆ ಮಾಯಾವತಿಯವರು 4 ಬಾರಿ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು. ಆಗ ಅವರ ಮೇಲೆ ಇಂತಹ ಘಟನೆಗಳಾಗಲಿಲ್ಲ, ಈಗ ಆಗುತ್ತಿದೆ ಎಂದರೆ ಇದಕ್ಕೆ ನಿಜಕ್ಕೂ ಪರಿಹಾರ? ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಅಥವಾ ಅಂತಹ ದಲಿತರ ಅಧಿಕಾರದ ಘಟನೆಗಳು ದೇಶಾದ್ಯಂತ ಘಟಿಸುವುದು. ಅಂದಹಾಗೆ ಇದರ ಬದಲಿಗೆ ಅಖಿಲೇಶ್‍ರಂತಹ ದೌರ್ಜನ್ಯಕೋರರಿಗೇ ಮತ್ತೆ ಮತ್ತೆ ಅಧಿಕಾರ ಸಿಕ್ಕರೆ? ಬದೌನ್, ಖೈರ್ಲಾಂಜಿ, ಲಕ್ಷ್ಮಣ್‍ಪುರ್‍ಬಾಥೆ ಇಂತಹ ಘಟನೆಗಳು ನಿರಂತರವಾಗುತ್ತವಷ್ಟೆ.
                                 
                             


No comments:

Post a Comment