ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ
-ರಘೋತ್ತಮ ಹೊ.ಬ
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜವೆಂಬತೆ ಎದ್ದಿತ್ತು. ಅದು ಸಚಿನ್‍ತೆಂಡೂಲ್ಕರ್‍ಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ. ಹಾಗೆಯೇ ತೆಂಡೂಲ್ಕರ್‍ಗೆ ಭಾರತ ರತ್ನ ಕೂಡ ನೀಡಲಾಯಿತು. ಅಂದಹಾಗೆ ಅದು ಬೇರೇಯೇ ವಿಷಯ. ಆದರೆ ಅದೇ “ರತ್ನ”ವನ್ನು ಅಂಬೇಡ್ಕರ್‍ರವರಿಗೆ ಅವರು ಬದುಕಿದ್ದಾಗ ನೀಡಬಹುದಿತ್ತಲ್ಲ!
ಹೌದು, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶ ಹಿಂದೆ ಬಿದ್ದಿದೆ. ಯಾವ ಉನ್ನತ ಪ್ರಶಸ್ತಿಯನ್ನು, ಪದವಿಯನ್ನು ಈಗ ಎಲ್ಲೆಂದರಲ್ಲಿ, ಯಾರಿಗೆಂದರವರಿಗೆ ನೀಡಲಾಗುತ್ತಿದೆಯೋ ಅಂತಹದ್ದೆ ಪದವಿಯನ್ನು, ಪ್ರಶಸ್ತಿಯನ್ನು ಆ ಕಾಲದಲ್ಲಿ ಅಂಬೇಡ್ಕರರಿಗೆ ನಿರಾಕರಿಸಲಾಗಿದೆ ಆಥವಾ ನೀಡದೆ ವಂಚಿಸಲಾಗಿದೆ. ಹಾಗಂತ ಅಂಬೇಡ್ಕರರನ್ನು ಆ ಎಲ್ಲಾ ಪ್ರಶಸ್ತಿಗಳು ಒಮ್ಮೆಲೇ ಪ್ರಪ್ರಥಮವಾಗಿಯೇ ಹಿಂಬಾಲಿಸಬೇಕಾಗಿತ್ತು ಎಂದಲ್ಲ. ಆದರೆ ಅವರ ಹೋರಾಟವನ್ನು, ಸಂವಿಧಾನದ ಮೂಲಕ ಅವರು ಈ ದೇಶಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಅಂತಹ ಪದವಿ ಪ್ರಶಸ್ತಿ ನೀಡಬಹುದಿತ್ತಲ್ಲ! ಅದೂ ಅವರಿಗಿಂತಲೂ ಅತ್ಯಂತ ತಳಮಟ್ಟದ ಅವರ ಮುಂದೆ ಏನೇನು ಅಲ್ಲದವರಿಗೆ ಅಂತಹ ಉನ್ನತ ಪ್ರಶಸ್ತಿ ನೀಡಿರುವಾಗ? ಯಾಕೆಂದರೆ ಉದಾಹರಣೆಗೆ ವಿಶ್ವೇಶ್ವರಯ್ಯನವರಿಗೆ ಈ ದೇಶದ ಪ್ರಪ್ರಥಮ ಭಾರತÀರತ್ನ ಪ್ರಶಸ್ತಿ ನೀಡಲಾಯಿತು. ಆಶ್ಚರ್ಯಕರವೆಂದರೆ ಅಂಬೇಡ್ಕರರು ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ನೀರಾವರಿ ಸಚಿವರಾಗಿದ್ದಾಗ ಒರಿಸ್ಸಾದ ದಾಮೋದರ ನದಿಯ ಪ್ರವಾಹಕ್ಕೆ ಸಂಬಂಧಿಸಿದಂತೆ ಅದೇ ವಿಶ್ವೇಶ್ವರಯ್ಯನವರು ನೀಡಿದ್ದ ವರದಿಯನ್ನು ಅಂಬೇಡ್ಕರರು ತಿರಸ್ಕರಿಸಿದ್ದರು! ಯಾಕೆಂದರೆ ಪ್ರವಾಹವನ್ನು ತಡೆಯಲು ಸೂಕ್ತ ಅಣೆಕಟ್ಟು ನಿರ್ಮಿಸಿ ಆ ನೀರನ್ನು ಕೃಷಿಗೆ, ಜನರ ಕುಡಿಯುವ ನೀರಿಗೆ, ಕೈಗಾರಿಕೆಗೆ ಬಳಸಬಹುದು ಎಂದು ಸಲಹೆ ನೀಡಬೇಕಾಗಿದ್ದ ವಿಶ್ವೇಶ್ವರಯ್ಯನವರು ಪ್ರವಾಹವನ್ನು ತಡೆಯಲು ನದಿಯ ಆ ನೀರನ್ನು ಸಂಪೂರ್ಣವಾಗಿ ಸಮುದ್ರಕ್ಕೆ ಹರಿಯಲು ಬಿಡಬೇಕು ಎಂದು ವರದಿ ನೀಡಿದ್ದರು! ಜನೋಪಯೋಗಿ ಅಲ್ಲದ ವಿಶ್ವೇಶ್ವರಯ್ಯನವರ ಆ ವರದಿಯನ್ನು ಅಂಬೇಡ್ಕರರು ಅಷ್ಟೆ ಸ್ಪೀಡಾಗಿ ಕಸದ ಬುಟ್ಟಿಗೆ ಎಸೆದಿದ್ದರು! ಬದಲಿಗೆ ಆ ನದಿಗೆ ಹಿರಾಕುಡ್ ಬಳಿ ಅಣೇಕಟ್ಟು ನಿರ್ಮಿಸಲು ಬ್ರ್ರಿಟಿಷ್ ಸರ್ಕಾರಕ್ಕೆ ಸ್ವತಃ ಸಲಹೆ ನೀಡಿದ ಅಂಬೇಡ್ಕರರು ಆ ಮೂಲಕ ಲಕ್ಷಾಂತರ ರೈತರಿಗೆ ಅನ್ನದಾತರಾದರು. ದುರಂತವೆಂದರೆ ಜನರಿಗೆ ಉಪಯೋಗವಲ್ಲದ ವರದಿ ನೀಡಿದ ವಿಶ್ವೇಶ್ವರಯ್ಯನವರಿಗೆ ಭಾರತರತ್ನ! ಆದರೆ ಜನೋಪಯೋಗಿ ಕಾರ್ಯ ಮಾಡಿದ ಅಂಬೇಡ್ಕರರಿಗೆ ಅಂತಹ ಯಾವುದೇ’ರತ್ನ’ವಿಲ್ಲ! ಕಡೇ ಪಕ್ಷ ‘ಪದ್ಮ’ ಪ್ರಶಸ್ತಿಯೂ ಇಲ್ಲ! ಜಾತಿವಾದಿ ಭಾರತ ಅಂಬೇಡ್ಕರರನ್ನು ಪ್ರಶಸ್ತಿಗಳಿಂದ, ಪದವಿಗಳಿಂದ ಹೇಗೆ ವಂಚಿಸಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.
ಇರಲಿ, ಇನ್ನು ಸಂವಿಧಾನದ ಕಥೆಗೆ ಬರೋಣ. ನವೆಂಬರ್ 26, 1949 ರಂದು ಅಂಬೇಡ್ಕರರು ಈ ದೇಶಕ್ಕೆ ಸಂವಿಧಾನ ಅರ್ಪಿಸಿ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು. ಹಾಗೆಯೇ ಇಡೀ ದೇಶ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಗುರುತಿಸಿತು. ದುರಂತವೆಂದರೆ ಅಂತಹ ಸಂವಿಧಾನ ಶಿಲ್ಪಿಗೆ ಯಾವುದಾದರೊಂದು ಭಾರತದ ವಿವಿ ತಕ್ಷಣ ಕರೆದು ಡಾಕ್ಟರೇಟೋ ಮತ್ತೊಂದೋ ನೀಡಿ ಗೌರಸಬೇಕಿತ್ತಲ್ಲವೇ? ಊಹ್ಞೂಂ! ಈ ದೇಶದ ಯಾವುಧೇ ವಿವಿಗಳು ಅದಕ್ಕೆ ಮುಂದೆ ಬರಲಿಲ್ಲ. ಆಶ್ಚರ್ಯಕರವೆಂದರೆ ಅಂಬೇಡ್ಕರರನ್ನು ಗೌರವಿಸುವ ಅಂತಹ ಕೆಲಸವನ್ನು ಪ್ರಪ್ರಥಮವಾಗಿ ಮಾಡಿದ್ದು ಒಂದು ವಿದೇಶಿ ವಿ.ವಿ! ಅಮೆರಿಕಾದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾನಿಲಯವೇ ಆ ವಿ.ವಿ! ಏಕೆಂದರೆ ಅಮೆರಿಕಾದ ಕೊಲಂಬಿಯಾ ವಿ.ವಿ ಅಂಬೇೀಡ್ಕರರನ್ನು ಡಾಕ್ಟರೇಟ್ ಮೂಲಕ ಗೌರವಿಸಿದ ನಂತರವಷ್ಟೆ ಭಾರತದ ಏಕೈಕ ವಿವಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರರನ್ನು doctor of literature ಮೂಲಕ ಗೌರವಿಸಿದ್ದು!
1952 ಜೂನ್ 1 ರಂದು ಅಂಬೇಡ್ಕರರಿಗೆ doctor of laws ನೀಡಿ ಗೌರವಿಸುತ್ತಾ ಅಮೆರಿಕಾದ ಕೊಲಂಬಿಯಾ ವಿವಿ ಭಾರತದ ಸಂವಿಧಾನ ರಚನೆಗೆ ಸಂಬಧಿಸಿದಂತೆ ಅಂಬೇಡ್ಕರರ ಪರಿಶ್ರಮ, ಸಮಾಜ ಸುಧಾರಣೆ, ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಅವರು ನಡೆಸಿದ ಹೋರಾಟ ಇವುಗಳನ್ನು ಗುರುತಿಸಿ, ತನ್ನ ಆ ಅತ್ಯಮೂಲ್ಯ ಪದವಿಯ ಮೂಲಕ ಅವರನ್ನು ಗೌರವಿಸಿತು. ಒಂದರ್ಥದಲಿ ತನ್ನಲ್ಲಿಯೇ ಪಿ.ಎಚ್.ಡಿ. ಪಡೆದ(1917) “ಆ ವಿದ್ಯಾರ್ಥಿ”ಗೆ ತಾನೇ ‘ಡಾಕ್ಟರ್ ಆಫ್ ಲಾ’ ನೀಡುವ ಮೂಲಕ ಅಮೆರಿಕಾದ ಆ ವಿವಿ ತನಗೆ ತಾನೇ ಗೌರವಿಸಿಕೊಂಡಿತು! ಆ ಮೂಲಕ ಈ ದೇಶದ ಬಹುಕೋಟಿ ದಲಿತರ ಭಾವನೆಗಳನ್ನು, ಮಾನವ ಹಕ್ಕುಗಳನ್ನು ಅಮೆರಿಕಾದ ಆ ವಿ.ವಿ ಎತ್ತಿಹಿಡಿಯಿತು. ಪ್ರಶ್ನೆ ಏನೆಂದರೆ ಭಾರತದ ವಿಶ್ವವಿದ್ಯಾನಿಲಯಗಳು? ಅದು ಬನಾರಸ್‍ನ ಹಿಂದೂ ವಿವಿ ಇರಬಹುದು, ನವದೆಹಲಿಯ JNU ಇರಬಹುದು, ನಮ್ಮ ವಿಶ್ವವಿಖ್ಯಾತ ಮೈಸೂರು ವಿವಿ ಇರಬಹುದು, ಇವೆಲ್ಲಾ? ಅಂದಹಾಗೆ ಇತ್ತೀಚೆಗೆ ಈ ವಿವಿಗಳಲ್ಲೆಲ್ಲಾ ಅಂಬೇಡ್ಕರ್ ಪೀಠಗಳು, ಸಂಶೋಧನಾ ಕೇದ್ರಗಳು ತಲೆ ಎತ್ತಿವೆ. ಆದರೆ ಅದು ಬಾಬಾಸಾಹೇಬರ ಮೇಲಿನ ಗೌರವದಿಂದಲ್ಲ! ಬದಲಿಗೆ ಯು.ಜಿ.ಸಿ ನೀಡುವ ಗ್ರ್ಯಾಂಟ್‍ನ ವ್ಯಾಮೋಹದಿಂದ ಎಂಬುದು ಸರ್ವವಿಧಿತ.
ಇನ್ನು ಅಂಬೇಡ್ಕರರ ಹೆಸರನ್ನು ಈ ದೇಶದ ಪ್ರತಿಷ್ಠಿತ ವಿವಿಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಇಡುವುದು ಇನ್ನೊಂದು ದೊಡ್ಡ ಕಥೆ. ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಮಾಯಾವತಿ ಅಲ್ಲಿಯ ಹಲವು ಯೂನಿವರ್ಸಿಟಿಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಅಂಬೇಡ್ಕರರ ಹೆಸರನ್ನು ಇಟ್ಟಿದ್ದಾರೆ. ಬರೀ ಅಂಬೇಡ್ಕರರಷ್ಟೆ ಅಲ್ಲ ಅವರ ಧರ್ಮಪತ್ನಿ ರಮಾಬಾಯಿ ಅಂಬೇಡ್ಕರ್, ಮಾರ್ಗದರ್ಶಕರಾದ ಜ್ಯೋತಿಬಾಫುಲೆ, ಶಾಹುಮಹಾರಾಜ್, ಪೆರಿಯಾರ್ ಇತ್ಯಾದಿ ದಾರ್ಶನಿಕರ ಹೆಸರನ್ನು ಮಾಯಾವತಿಯವರು ಒಂದಲ್ಲ ಎರಡಲ್ಲ ಹಲವು ವಿವಿಗಳಿಗೆ ಇಟ್ಟಿದ್ದಾರೆ. ದುರಂತವೆಂದರೆ ವಿವಿಯೊಂದಕ್ಕೆ ಹೆಸರಿಡುವ ಇದೇ ಕೆಲಸಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ತೆಗೆದುಕೊಡಿತೆಂದರೆ, ಬರೋಬ್ಬರಿ 20 ವರ್ಷಗಳು! ಅದೂ ಸುಮ್ಮನೇ ಅಲ್ಲ! 1978ರ ಜುಲೈನಲ್ಲಿ ಮಹಾರಾಷ್ಟ್ರದ ಔರಂಗಾಬಾದ್‍ನ ಮರಾಟವಾಡ ಎಂಬ ವಿವಿಗೆ “ಡಾ.ಬಿ.ಆರ್.ಅಂಬೇಡ್ಕರ್ ವಿವಿ” ಎಂದು ಹೆಸರಿಡುತ್ತೇವೆ ಎಂದು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದು ಜಾರಿಯಾದದ್ದೂ 1994 ಜನವರಿ 14 ರಂದು! ಅಂದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡುವ ತನ್ನ ನಿರ್ಣಯ ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬರೊಬ್ಬರಿ 16 ವರ್ಷ ಬೇಕಾಯಿತು! ಅದೂ ಸುಮ್ಮನೇ ಅಲ್ಲ. ಅದರದೊಂದು ದುರಂತ ಕಥೆ. ರಕ್ತ, ಹತ್ಯೆ, ಆತ್ಮಹತ್ಯೆ, ಆತ್ಮಾಹುತಿ, ಪ್ರತಿಭಟನೆ ಎಂದು ಮುಗ್ಧ ದಲಿತರು ಅದರಲ್ಲೂ ದಲಿತ ಹೆಣ್ಣು ಮಕ್ಕಳು ತಮ್ಮ ಪ್ರಾಣವನ್ನೇ ಬಲಿಕೊಟ್ಟು ನಡೆಸಿದ ಹೋರಾಟವದು.
ಒಂದಷ್ಟು ಘಟನೆಗಳನ್ನು ಹೇಳುವುದಾದರೆ, 1993 ನವೆಂಬರ್ ತಿಂಗಳಿನಲ್ಲಿ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತ ಗೌತಮ್ ವಾಗ್ಮೇರ್ ಎಂಬ ಯುವಕ ನಾಂದೇಡ್ ಎಂಬಲ್ಲಿ ಮರಾಠವಾಡ ವಿವಿಗೆ ಅಂಬೇಡ್ಕರ್ ಹೆಸರಿಡಬೇಕೆಂದು ಹಾಡುಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ. ಅದೇ ಡಿಸೆಂಬರ್‍ನಲ್ಲಿ ಶ್ರೀಮತಿ ಸುಹಾಸಿನಿ ಭನ್ಸೋದ್ ಎಂಬುವವರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡರು! ಇನ್ನು ಇದಕ್ಕಿಂತಲೂ ಹೃದಯ ವಿದ್ರಾವಕ ಘಟನೆ ಎಂದರೆ ಪ್ರತಿಭಾ ಎಂಬ 18 ವರ್óದ ಬಾಲೆಯೋಬ್ಬಳು “ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂದು ಹೆಸರಿಡಬೇಕು. ಅದನ್ನು ಜಾರಿಗೋಳಿಸದ ಸರ್ಕಾರದ ನಿರ್ಧಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು death note ಬರೆದು ವಿಷ ಕುಡಿದು ಪ್ರಾಣ ಕಳೆದು ಕೊಂಡಳು! ಒಟ್ಟಾರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಮಹಾರಾಷ್ಟ್ರದ ಆ ಕಾಂಗ್ರೆಸ್ ಸಕಾರಕ್ಕೆ ಮುಗ್ಧ ಹೆಣ್ಣು ಮಗಳೊಬ್ಬಳ ಜೀವವೇ ಬೇಕಾಯಿತು! ಇದಕ್ಕಿಂತಲೂ ವಿಚಿತ್ರವಾದ ಘಟನೆ 1994ರಲ್ಲಿ ನಡೆದುದು! ಅದೇನೆಂದರೆ ಕರ್ನಾಟಕದ ಧಾರವಾಡ ವಿವಿಯ ಅಂತಿಮ ರಾಜ್ಯಶಾಸ್ತ್ರ ಎಂ.ಎ. ವಿದ್ಯಾರ್ಥಿ ಅನಂತ್ ಕುಮಾರ್ ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂಬ ಹೆಸರಿಡಬೇಕು ಹೋರಾಟದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್‍ಗೆ ಸೇರಿದ ಮದ್ರಾಸಿನಿಂದ ಕ್ಯಾಲಿಕಟ್‍ಗೆ ಹೊರಟಿದ್ದ ವಿಮಾನ (ಸಂಖ್ಯೆ K995)ನ್ನು ಅಪಹರಿಸಿದ! ಹಾಗೆಯೇ ಮರಾಠವಾಡ ಆ ವಿವಿಗೆ ಅಂಬೇಡ್ಕರ್ ವಿವಿ ಎಂದು ತಕ್ಷಣವೇ ನಾಮಕರಣ ಮಾಡದಿದ್ದರೆ 55 ಜನರಿದ್ದ ಆ ವಿಮಾನವನ್ನು ‘ಪ್ಲಾಸ್ಟಿಕ್ ಬಾಂಬ್’ನಿಂದ ಉಡಾಯಿಸುವುದಾಗಿ ಬೆದರಿಕೆಯನ್ನೂ ಒಡ್ಡಿದ! ಅಂತಿಮವಾಗಿ ಇಂತಹ ಆತ್ಮಹತ್ಯೆ, ಆತ್ಮಾಹುತಿ, ವಿಮಾನ ಹೈಜಾಕ್ ಇತ್ಯಾದಿ ಪ್ರಕರಣಗಳ ನಂತರ 1994 ಜನವರಿ 14 ರಂದು ಮರಾಠವಾಡ ವಿವಿಗೆ “ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ’ ಎಂಬ ಅರ್ಥವಿಲ್ಲದ ಹೆಸರನ್ನು ಇಟ್ಟಿತು ಮಹಾರಾಷ್ಟ್ರದ ಆ ಕಾಂಗ್ರೆಸ್ ಸರ್ಕಾರ. ಅರ್ಥವಿಲ್ಲದ್ದು, ಏಕೆಂದರೆ ‘ಮರಾಠವಾಢ’ ಎಂಬ ವಿವಿಯ ಆ ಹಳೆಯ ಹೆಸರಿನ ಜೊತೆ “ಬಾಬಾಸಾಹೇಬ್ ಅಂಬೇಡ್ಕರ್” ಹೆಸರನ್ನು ಸೇರಿಸಿದ್ದು! ಈ ನಿಟ್ಟಿನಲಿ ಆ ವಿವಿಗೆ ಬರೀ ಅಂಬೇಡ್ಕÀರ್ ಹೆಸರಿಡಲು ಮಹಾರಾಷ್ಟ್ರದ ಆ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ!
ಈ ದೇಶ ಅಂಬೇಡ್ಕರರನ್ನು ಗೌರವಿಸುವಲ್ಲಿ ಹೇಗೆ ಸೋತಿದೆ ಅಥವಾ ದಲಿತರನ್ನು ಹೇಗೆಲ್ಲಾ ನೋಯಿಸಿದೆ ಎಂಬುದಕ್ಕೆ “ಮರಾಠವಾಡ ವಿವಿ”ಯ ಆ ದುರಂತ ಕಥೆಯೇ ಸಾಕ್ಷಿ. ದುರಂತ ಏಕೆಂದರೆ ಇನ್ನೆಂದೂ ಕೂಡ ಯಾವುದೇ ದಲಿತನು ಸರ್ಕಾರಕ್ಕೆ ವಿವಿಗಳಿಗೆ ಅಂಬೇಡ್ಕರ್ ಹೆಸರನ್ನು ಇಡಿ ಎಂದು ಎಂದಿಗೂ ಒತ್ತಾಯ ಮಾಡಲಾರರು ಅಷ್ಟೊಂದು ಭಯಾನಕ ದುರಂತ ಅದು ಅಂದಹಾಗೆ ಈ ಕತೆಯಲ್ಲಿ ಪದೇಪದೇ ಕಾಂಗ್ರೆಸ್ ಹೆಸರನ್ನೇ ಪ್ರಸ್ತಾಪಿಸಬೇಕಾಯಿತು ಯಾಕೆಂದರೆ ಈ ದೇಶವನ್ನು, ಈ ದೇಶದ ರಾಜ್ಯಗಳನ್ನು ಬಹುತೇಕ ಆಳಿರುವುದು ಕಾಂಗ್ರೆಸ್ ಪಕ್ಷ ತಾನೇ? ಈ ನಿಟ್ಟಿನಲಿ ಅಂಬೇಡ್ಕರರನ್ನು ಈ ದೇಶ ಗೌರವಿಸಿಲ್ಲವೆಂದರೆ ಅದಕ್ಕೆ ಆ ಪಕ್ಷವೇ ನೇರ ಕಾರಣ.
ಕಾಂಗ್ರೆಸ್‍ನ ಈ ವಂಚನೆಗೆ ಮತ್ತೊಂದು ಉದಾಹರಣೆ ಪಾರ್ಲಿಮೆಂಟ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವ ಪ್ರಕರಣ. ಅದೂ ಅಂದರೆ ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟದ್ದು ಯಾರ ಕಾಲದಲ್ಲಿ ಎಂದಿರಿ? ವಿ.ಪಿ.ಸಿಂಗ್‍ರ ಕಾಲದಲ್ಲಿ. ವಿ.ಪಿ.ಸಿಂಗ್‍ರವರು 1990 ಏಪ್ರಿಲ್ 12 ರಂದು ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಪ್ರಶ್ನೆ ಏನೆಂದರೆ ಕಾಂಗ್ರೆಸ್‍ನ ನೆಹರೂ, ಅವರ ಪುತ್ರಿ ಇಂದಿರಾ, ರಾಜೀವ್ ಇವರೆಲ್ಲರೂ ಅಲ್ಲಿಯವರೆಗೆ ಈ ದೇಶವನ್ನು ಬರೋಬ್ಬರಿ 43 ವರ್ಷ ಆಳಿದ್ದರೂ, ಪ್ರತಿವಷರ್À ಅಂಬೇಡ್ಕರ್ ಜಯಂತಿ, ಅಂಬೇಡ್ಕರರ ಪರಿನಿರ್ವಾಣ ದಿನಾಚರಣೆ ಇತ್ಯಾದಿ ಬರುತ್ತಲೇ ಇದ್ದರೂ ಕಾಂಗ್ರೆಸ್‍ನ ಆ ಪ್ರಧಾನಿಗಳಿಗೆ ಅಂಬೇಡ್ಕರರನ್ನು ಸೂಕ್ತವಾಗಿ ಗೌರವಿಸಬೇಕು ಎಂದೆನಿಸಲೇ ಇಲ್ಲ! ಅಂದಹಾಗೆ ಅಂಬೇಡ್ಕರರಿಗೆ ಭಾರತರತ್ನ ನೀಡಿದ್ದು ಯಾರ ಕಾಲದಲ್ಲಿ ಎಂದಿರಿ? ಅದೂ ಕೂಡ ವಿ.ಪಿ. ಸಿಂಗ್‍ರ ಕಾಲದಲ್ಲೇ!
ಅದೇನೆ ಇರಲಿ, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶದ ಸರ್ಕಾರಗಳು ಸೋತಿವೆ. ಕಾಂಗ್ರೆಸ್ಸಂತೂ ದಲಿತರ ಓಟುಗಳನ್ನು ಇಡಿಯಾಗಿ ನುಂಗಿದೆ. ಆದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಪ್ರಾಣಗಳನ್ನು, ಅದರಲ್ಲೂ ಮುಗ್ಧ ಹೆಣ್ಣು ಮಕ್ಕಳ ಜೀವಗಳನ್ನು ಅದು ಬಲಿ ತೆಗದುಕೊಂಡಿದೆ.
ಆಶ್ಚರ್ಯಕರವೆಂದರೆ ವಿದೇಶಿ ರಾಷ್ಟ್ರಗಳಿಗೆ ಅಂಬೇಡ್ಕರ್ ಬಗ್ಗೆ ಇರುವ ಗೌರವ ಈ ದೇಶದ ಜಾತೀಯ ಮನಸ್ಸುಗಳಿಗೆ ಇಲ್ಲದಿರುವುದು. ಉದಾಹರಣೆಗೆ ಡಿಸೆಂಬರ್ 6, 1991 ರಂದು ಇಂಗ್ಲೆಂಡ್‍ನ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಮಿತಿಯು ಲಂಡನ್ನಿನಲ್ಲಿ ಅಂಬೇಡ್ಕರರು ವಾಸಿಸಿದ್ದ “ಲಂಡನ್ನಿನ ಹ್ಯಾಂಪ್‍ಸ್ಟಡ್‍ನ ಕಿಂಗ್ ಹೆನ್ರಿ ರಸ್ತೆಯ 10 ನೇ ನಂಬರಿನ ಗೃಹ”ವೊಂದರಲ್ಲಿ ಅಂಬೇಡ್ಕರ್ ಸ್ಮರಣ ಫಲಕವೊಂದನ್ನು ನಿರ್ಮಿಸಿ ಆ ಫಲಕದ ಮೇಲೆ ಹೀಗೆ ಬರೆಸಿದೆ “DR.BHIMRAO RAMJI AMBEDKAR, INDIAN CRUSADER FOR SOCIAL JUSTICE LIVED HERE 1921-1922”.
ಅಂಬೇಡ್ಕರರನ್ನು ಗೌರವಿಸುವುದೆಂದರೆ ಹೀಗೆ! ಬರೀ ಲಂಡನ್ ಒಂದೇ ಅಲ್ಲಾ, ಜಪಾನ್, ಅಮೆರಿಕಾ, ಹಂಗೇರಿ, ಅದಷ್ಟೆ ಅಲ್ಲ ಸ್ವತಃ ಪಾಕಿಸ್ತಾನ ಕೂಡ ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಭಾರತ?
ಈ ದೇಶದ ಜಾತೀಯ ಮನಸ್ಸುಗಳು, ಹಿಂದುತ್ವದ ಕೊಂಪೆಯಲಿ ಒದ್ದಾಡುತ್ತಿರುವ ಹುಳಗಳು ಅಸ್ಪøಶ್ಯ ಕುಲದಲ್ಲಿ ಹುಟ್ಟಿದ ಈ ದೇಶದ ಸಂವಿಧಾನ ಶಿಲ್ಪಿಗೆ, ಸಾಮಾಜಿಕ ನ್ಯಾಯದ ಧೃವತಾರೆಗೆ ಯಾವ ಪರಿಯ ಗೌರವ, ಘನತೆ ನೀಡಿದೆ, ನೀಡುತ್ತಿದೆ ಎಂಬುದಕ್ಕೆ “ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ” ಎಂಬ ಈ ಕಥೆ ಹೇಳಬೇಕಾಯಿತಷ್ಟೆ.
No comments:
Post a Comment