ದಲಿತರು ಮತ್ತು ಉದ್ದಿಮೆಶೀಲತೆ
- ರಘೋತ್ತಮ ಹೊ.ಬ
DICCI team
MILIND KAMBLE
CHANDRABHAN PRASAD
ಮೀಸಲಾತಿ: ವಯಕ್ತಿಕವಾಗಿ ನಾನು ಅದರ ಫಲಾನುಭವಿ. ಫಲಾನುಭವಿ ಆಗಲೇಬೇಕು ಅಂತ ಓದಿದ್ದು. ಅದಕ್ಕೆ ಫಲಾನುಭವಿ. ಮನೆಯವರ ಒತ್ತಡ, ಹಾಗೇ ಅಣ್ಣಂದಿರು ಫಲಾನುಭವಿಗಳಾದರು ನಾನು ಆಗದಿದ್ದರೆ ನನ್ನ ಅಪ್ಪ ಅಮ್ಮ ಸುಮ್ಮನೇ ಬಿಡುವರೇ ಎಂಬ ಸಾಮಾನ್ಯ ಆಲೋಚನೆ ಕೂಡ ನಾನು ಹಾಗೇ ಮೀಸಲಾತಿಯ ಫಲಾನುಭವಿ ಆಗುವಂತೆ ಮಾಡಿತು. ಆದರೆ ನನ್ನ ಬೇರೆ ಜಾತಿಯ ಸ್ನೇಹಿತರು ಅದರ(ಮೀಸಲಾತಿ) ಫಲಾನುಭವ ಇಲ್ಲದೆ ನನಗಿಂತಲೂ ಚೆನ್ನಾಗಿ ಬದುಕುತ್ತಿದ್ದಾರೆ! ನನ್ನನ್ನೇ ಅಣಕಿಸುವಷ್ಟು! ಹಾಗಿದ್ದರೆ ನಾನು ಗಳಿಸಿದ್ದಾದರೂ ಏನು? ಅವರು ಕಳೆದುಕೊಂಡದ್ದಾದರೂ ಏನು? ಹೌದು, ನಾನು ಗಳಿಸಿದ್ದು ಬರೀ ಮೀಸಲಾತಿ ಮತ್ತು ಒಂದು ಉದ್ಯೋಗ. ಆದರೆ ಅವರು? ಇಡೀ ಜಗತ್ತನ್ನೇ ತಮ್ಮದೆಂದುಕೊಂಡರು. ಫುಟ್‍ಪಾತ್‍ನಲ್ಲಿ ಕಳ್ಳೇಕಾಯಿ ಮಾರುವುದರಿಂದ ಹಿಡಿದು ಹೈಟೆಕ್ ಕಂಪನಿಯ ಸಿ.ಇ.ಒ.ಗಳಾಗುವವವರೆಗೆ ಅವರು ಅವಕಾಶ ಪಡೆದರು. ಎಲ್ಲಾ ಬಗೆಯ ಉದ್ಯಮಗಳೂ ಅವರಿಗೆ ತೆರೆದಿತ್ತು. ದಲಿತರ ಈ ಹೊತ್ತಿನ ಹಸಿವನ್ನು ಮೀಸಲಾತಿ ಖಂಡಿತ ಹಿಂಗಿಸಲಾರದು. ಅವರಿಗೂ ತರೆಯಬೇಕಿದೆ ಎಲ್ಲಾ ಬಗೆಯ ಉದ್ಯಮಗಳು. ಇಲ್ಲದಿದ್ದರೆ ಮುಂದಿನ ಪೀಳಿಗೆಯಲ್ಲಿ ನಾಶ ಖಚಿತ.ಉದ್ದಿಮೆ, ಹಾಗಿದ್ದರೆ ದಲಿತರು ಎಲ್ಲೆಲ್ಲಿ ನುಗ್ಗಬಹುದು? ಉತ್ತರ ಬಹು ಆಯಾಮದ್ದು. ಅಂದಹಾಗೆ ನನಗೆ ಪರಿಚಿತ ಸ್ವಯಂ ಉದ್ಯೋಗ ನಡೆಸುತ್ತಿದ್ದ ದಲಿತ ಸಂಘರ್ಷ ಸಮಿತಿಯ ಮುಖಂಡರೊಬ್ಬರು ಹೀಗೆ ಸವರ್ಣೀಯರ ವಿರುದ್ಧ ಹೋರಾಟ ಕೈಗೊಂಡಾಗ ಅವರಿಗೆ ಅಂಗಡಿ ಬಾಡಿಗೆ ನೀಡಿದ್ದ ಸವರ್ಣೀಯನೊಬ್ಬ ಅವರನ್ನು ಖಾಲಿ ಮಾಡಿಸಿದ. ಆದರೆ ಅವರು ಹೆದರಲಿಲ್ಲ. ಬೇರೊಂದು ಅಂಗಡಿ ಬಾಡಿಗೆಗೆ ಪಡೆದು ತಮ್ಮ ವ್ಯವಹಾರ ಮುಂದುವರಿಸಿದರು. ಖಂಡಿತ, ಈ ಸಂದರ್ಭದಲ್ಲಿ ಅಸ್ಪøಶ್ಯತಾಚರಣೆ ಎಂದುಕೊಂಡರೆ ನಮ್ಮಪ್ಪರಾಣೆಗೂ ನಾವು ಈ ಶತಕದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಉದ್ದಿಮೆಗೆ ಇಳಿಯಬೇಕು. ಮೊದಲು ಕಡ್ಲೇಕಾಯಿಯನ್ನೇ ಮಾರಬೇಕು. ಫುಟ್‍ಪಾತ್‍ನಲ್ಲಿ ಟೀಯನ್ನೇ ಕಾಯಿಸಬೇಕು. ಚಪ್ಪಲಿ ಹೊಲಿಯುವುದಕ್ಕಿಂತ, ಶೌಚಾಲಯ ಶುಚಿಗೊಳಿಸುವುದಕ್ಕಿಂತ ಇದು ಉತ್ತಮ ಕೆಲಸ! ಹಾಗಿದ್ದರೆ ಗ್ರಾಹಕರು? ನಾವೇ! ನಾವೇ ಕಡ್ಲೇಕಾಯಿ ಮಾರಬೇಕು, ರೇಷನ್ ಅಂಗಡಿ ತೆರೆಯಬೇಕು, ಗೊಬ್ಬರದ ಅಂಗಡಿ ತೆರೆಯಬೇಕು, ಬೇರೆಯವರಿಗಿಂತ ಅರ್ಧ ರೂಪಾಯಿ ಕಮ್ಮಿ ತೆಗೆದುಕೊಳ್ಳಬೇಕು. ನಾವೇ ಅದರ ಗ್ರಾಹಕರೂ ಕೂಡ ಆಗಬೇಕು. ನೋಡಿ, ಲಕ್ ಹೇಗೆ ಕುದುರುತ್ತದೆ ಎಂಬುದನ್ನು! ಉದ್ಯೋಗವೂ ಸೃಷ್ಠಿಯಾಗುತ್ತದೆ. ನಾಲ್ಕು ಕಾಸೂ ಕೂಡ ಬರುತ್ತದೆ. ಯಾಕೆಂದರೆ ಇಂದಿಗೂ ದಲಿತರು ಬಹುತೇಕ ಅಂಗಡಿಗಳಿಗೆ, ಹೋಟೆಲ್‍ಗಳಿಗೆ, ಕಂಪನಿಗಳಿಗೆ ಖಾಯಂ ಗಿರಾಕಿಗಳಾಗಿದ್ದಾರೆ, ಗ್ರಾಹಕರಾಗಿದ್ದಾರೆ. ಆದರೆ ಮಾಲೀಕರಾಗುವುದು? ಖಂಡಿತ, ಹೀಗೆ ಕೆಳಮಟ್ಟದಿಂದಲೇ ಪ್ರಾರಂಭವಾಗಬೇಕು. ಇಡೀ ಜಗತ್ತು ಸ್ಪರ್ಧಾತ್ಮಕತೆಯ ಹಿಂದೆ ಓಡುತ್ತಿದೆ. ಹೀಗಿರುವಾಗ ದಲಿತರು ಅಪ್ಪ ಹಾಕಿದ ಮೀಸಲಾತಿ ಎಂಬ ಆಲದ ಮರಕ್ಕೆ ನೇತುಹಾಕಿಕೊಳ್ಳುವುದು? ಅದಕ್ಕೇ
ಜೋತುಬೀಳುವುದು?
ಎಲ್ಲಿಯವರೆಗೆ ನಮ್ಮ ಹೋರಾಟ ಒಂದೇ ದಿಕ್ಕಿನೆಡೆಗೆ, ಬರೇ ಮೀಸಲಾತಿಯೆಡೆಗೆ ಇರುತ್ತದೆಯೋ ಅಲ್ಲಿಯವರೆಗೆ ನಮ್ಮನ್ನು ಬಲಿತೆಗೆದುಕೊಳ್ಳುವುದು ಪಟ್ಟಭದ್ರರಿಗೆ ಸುಲಭವಾಗುತ್ತದೆ. ಅದೇ ‘ನಾವು ಮೀಸಲಾತಿ ಬೇಡುವವರಲ್ಲ. ನೀಡುವವರಾಗುತ್ತೇವೆ’ ಎಂದು ವ್ಯಾಪಾರ ಉದ್ದಿಮೆಗಳೆಡೆ ಮನಸ್ಸು ಮಾಡಿದರೆ? ವರ್ಣಾಶ್ರಮದ ಮೌಲ್ಯಗಳನ್ನು ಉಲ್ಟಾಪಲ್ಟಾ ಮಾಡುವತ್ತ ಚಿಂತಿಸಿದರೆ? ಹೊಸ ಬಗೆಯ ಗ್ರಾಹಕರು ಹುಟ್ಟಿಕೊಳ್ಳುತ್ತಾರೆ. ಅಕಸ್ಮಾತ್ ಅಸ್ಪøಶ್ಯತಾಚರಣೆಯೂ ನಡೆದರೆ ಎಷ್ಟು ದಿನ ಅಂತ ನಡೆಯಲಿಕ್ಕಾಗುತ್ತದೆ? ನಡೆದರೆ ನಡೆಯಲಿ ಬಿಡಿ. ನಮ್ಮ ಮೇಲೆ ನಡೆದದ್ದು ನಮ್ಮ ಮಕ್ಕಳ ತಲೆಗೆ ಕೊನೆಗೊಳ್ಳಬಹುದು. ಮೊಮ್ಮಕ್ಕಳ ತಲೆಗೆ ಕೊನೆಗೊಳ್ಳಬಹುದು. ಬರೇ ಮೀಸಲಾತಿಗೆ ಜೋತು ಬಿದ್ದರೆ ನಮ್ಮ ಮಕ್ಕಳ್ಹೇಗೆ ಹೊಸ ರೀತಿ ಯೋಚಿಸಲು ಸಾಧ್ಯ? ‘ನಮ್ಮಪ್ಪ ಮೀಸಲಾತಿಯಿಂದ ಕೆಲಸ ಗಿಟ್ಟಿಸಿದ್ದ ನಾನೂ ಕೂಡ ಮೀಸಲಾತಿಯಿಂದಲೇ ಕೆಲಸ ತಗೆದುಕೊಳ್ಳ ಬೇಕು’ ಎಂದು ಆತ ಅಂದುಕೊಂಡರೆ ಆತನಿಗೆ ತೆಗದುಕೊಳ್ಳಲು ಅಲ್ಲಿ ಉದ್ಯೋಗವೇ ಇರುವುದಿಲ್ಲ. ಎಲ್ಲವೂ ಖಾಸಗೀಕರಣಗೊಂಡು ಮೀಸಲಾತಿ ಹಲ್ಲಿಲ್ಲದ ಹಾವಾಗುತ್ತದೆ. ಉಪಯೋಗಕ್ಕೆ ಬಾರದ ಆಯುಧವಾಗುತ್ತದೆ! ಅದರ ಬದಲು ಉದ್ದಿಮೆಶೀಲತೆಯ ಮೂಲಕ ನಾವು ಆತನಿಗೆ/ಆಕೆಗೆ ‘ಬದುಕನ್ನು ಹೀಗೂ ಬಾಳಬಹುದು; ಏನಾದರೂ ಮಾಡು, ಬದುಕಲಿಕ್ಕೆ ವ್ಯಾಪಾರವಾದರೂ ಸೈ, ಸ್ವಯಂ ಉದ್ಯೋಗವಾದರೂ ಸೈ, ನಿನ್ನದೇ ಸ್ವಂತ ಉದ್ದಿಮೆಯಾದರೂ ಸೈ’ ಎಂಬ ಕನಸನ್ನು ಆತನಲ್ಲಿ/ಆಕೆಯಲ್ಲಿ ಬಿತ್ತಿದ್ದೇ ಆದರೆ?
ಈ ದಿಕ್ಕಿನಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ DICCI(Dalit India Chamber of Commerce and Industries) ಸಮಾವೇಶ ಗಮನಾರ್ಹವಾದುದೇ. ಯಾಕೆಂದರೆ ಮೀಸಲಾತಿ ನಿರ್ವೀರ್ಯಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ಬರೀ ಅದಷ್ಟಕ್ಕೆ ದಲಿತರು ಜೋತು ಬೀಳುವುದೆಂದರೆ ಮುಂದೆ ಬದುಕುವುದಾದರೂ ಹೇಗೆ? ಖಾಸಗೀ ರಂಗದಲ್ಲಿ ಮೀಸಲಾತಿ ಎಂದು ಕೆಲವರು ಅನ್ನಬಹುದು. ಆದರೆ ಸರ್ಕಾರಿ ಮೀಸಲಾತಿಯನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸದ ವ್ಯವಸ್ಥೆ ಖಾಸಗಿ ರಂಗದಲ್ಲಿ ಅದನ್ನು ಜಾರಿಗೊಳಿಸುತ್ತದೆ ಎಂಬುದು ಕನಸಿನ ಮಾತು. ಈ ಕಾರಣಕ್ಕಾಗಿ ದಲಿತರಲ್ಲಿ ಉದ್ದಿಮೆಶೀಲತೆ ಬೆಳೆಸುವ ನಿಟ್ಟಿನಲಿ ಆIಅಅIಯ ಮುಖ್ಯ ಪ್ರವರ್ತಕ, ದಲಿತ ಚಿಂತಕ ಚಂದ್ರಭಾನ್ ಪ್ರಸಾದ್ ಮತ್ತು ಅಧ್ಯಕ್ಷ ಮಿಳಿಂದ್‍ಕಾಂಬ್ಳಿಯವರ ಪ್ರಯತ್ನ ಖಂಡಿತ ಹೊಸ ಮಾದರಿಯದ್ದು. ಅಂದಹಾಗೆ ಬೆಳೆಯುತ್ತಿರುವ ದಲಿತ ವಿದ್ಯಾರ್ಥಿ ಸಮೂಹಕ್ಕೆ ಸರ್ಕಾರ ಎಷ್ಟು ಅಂತ ಉದ್ಯೋಗ ನೀಡಲಿಕ್ಕಾಗುತ್ತದೆ? ಸರ್ಕಾರ ನೀಡಲಿಲ್ಲವೆಂದರೆ ದಲಿತ ಸಮುದಾಯ ಹೊಸದಾಗಿ ಏನನ್ನೂ ಮಾಡುವುದು ಬೇಡವೆ? ಹಿಂದೆ ದಲಿತ ಯುವಕರಲ್ಲಿ ಒಂದು ಟ್ರೆಂಡ್ ಇತ್ತು. ಪದವಿ ಗಳಿಸಿದಾಕ್ಷಣ ಸರ್ಕಾರ ನಮಗೆ ಕರೆದು ಉದ್ಯೋಗ ಕೊಡಬೇಕು ಎಂಬುದೇ ಆ ಟ್ರೆಂಡ್! ಕೆಲಸ ಮಾಡು ಅಂದರೆ ‘ಹ್ಞೂಂ ನಾನು ಓದಿಲ್ಲವೆ?’ ಎಂಬ ಉತ್ತರ ಅಂತಹ ವಿದ್ಯಾರ್ಥಿಗಳಿಂದ ಬರುತ್ತಿತ್ತು. ಆದರೆ ಈಗ? ಕಾಲ ಬದಲಾಗಿದೆ. ‘ನೀನು ಓದಿದ್ದೀಯ. ಅದು ನಿನ್ನ ಜ್ಞಾನಕ್ಕಷ್ಟೆ’ ಎಂಬ ವಿವರಣೆ ಈಗ ಸರ್ವೇಸಾಮಾನ್ಯವಾಗಿದೆ. ಹಾಗಿದ್ದರೆ ಇಂತಹ ಸಮಯದಲ್ಲಿ ಏನು ಮಾಡುವುದು? ಖಂಡಿತ, ಉತ್ತರ:- ಉದ್ದಿಮೆಶೀಲತೆ ಅಥವಾ entrepreneurship.
ಹಿಂದೆ ದಿ.ಕಾಂಶಿರಾಂರವರು ತಾನು ದಲಿತರನ್ನು ‘ಬೇಡುವ ಸಮಾಜದಿಂದ, ನೀಡುವ ಸಮಾಜವಾಗಿ ಪರಿವರ್ತಿಸುತ್ತೇನೆ’ ಎಂದಿದ್ದರು. ಅವರ ಉದ್ದೇಶ ದಲಿತರನ್ನು ರಾಜಕೀಯ ಹಕ್ಕು ಅಧಿಕಾರಗಳಿಗಾಗಿ ತಯಾರು ಮಾಡುವುದಾಗಿತ್ತು. ಖಂಡಿತ, ಕಾಂಶಿರಾಂ ಆ ದಿಸೆಯಲ್ಲಿ ಯಶಸ್ಸನ್ನೂ ಕೂಡ ಕಂಡರು. ಮಾಯಾವತಿಯಂತಹ ದಲಿತ ಮಹಿಳೆ ಬೃಹತ್ ರಾಜ್ಯವೊಂದರಲ್ಲಿ 4 ಬಾರಿ ಮುಖ್ಯಮಂತ್ರಿಯಾದರು. ಆದರೆ ದಲಿತರ ಭವಿಷ್ಯದ ಬದುಕಿನ ಉದ್ಯೋಗದ ಪ್ರಶ್ನೆ? ಖಂಡಿತ, ಚಂದ್ರಭಾನ್‍ಪ್ರಸಾದ್‍ರ DICCI(ಡಿಕ್ಕಿ) ಮಾದರಿಯ ಹೋರಾಟ ಈ ಸಂದರ್ಭದಲ್ಲಿ ಅತ್ಯಗತ್ಯವಾಗುತ್ತದೆ. ಒಂದು ಜನರೇಷನ್ ಚಂದ್ರಭಾನ್ ಪ್ರಸಾದ್‍ರ ಆ ದಿಕ್ಕಿನಲಿ ಪ್ರಯತ್ನಿಸಬೇಕು. ದಲಿತರಲ್ಲಿ ಉದ್ದಿಮೆಶೀಲತೆ ಬೆಳೆಸಲು ತನು, ಮನ, ಧನ ಎಲ್ಲವನ್ನೂ ಮೀಸಲಿಡಬೇಕು. ಒಂದು ಹೊಸ ಚಳುವಳಿಯ ರೂಪವಾಗಿ ಅದು ಹೊರಹೊಮ್ಮ ಬೇಕು.
ಇಂದು ಟಾಟಾ, ಬಿರ್ಲಾ, ರಿಲಾಯನ್ಸ್, ವಿಪ್ರೋ, ಇನ್ಫೋಸಿಸ್ ಸರ್ಕಾರಗಳಿಂದ ಬಹುಕೋಟಿಗಟ್ಟಲೆ ಸಾಲ, ಭೂಮಿ, ಸವಲತ್ತು ಪಡೆದು ದಲಿತರ ಮೀಸಲಾತಿಯನ್ನು ನಾಚಿಸುತ್ತಿವೆ. ಅದೇ ದಲಿತರೇ ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ? ಉದ್ದಿಮೆಶೀಲತೆಯನ್ನು ಬೆಳೆಸುವತ್ತ/ ರೂಢಿಸುವತ್ತ ಕೈ ಜೋಡಿಸಿದರೆ?
‘political power is the master key through which you can unlock all doors of progress’ ಇದು ಅಂಬೇಡ್ಕರರ ಶ್ರೇಷ್ಠ ನುಡಿ. ಆದರೆ ಮೀಸಲಾತಿ ಇಲ್ಲದ ಇಂತಹ ಜಾಗತೀಕರಣದ ಈ ಕಾಲದಲ್ಲಿ ಆ ನುಡಿಗೆ ‘entrepreneurship(ಉದ್ದಿಮೆಶೀಲತೆ)is the master key through which you can unlock all doors of progress’ ಎಂದು ಹೊಸ ಅರ್ಥ ಕಲ್ಪಿಸಿದರೆ? ಖಂಡಿತ ಅಂತಹ ಹೊಸ ಅರ್ಥ ಕಲ್ಪಿಸಬೇಕಿದೆ. ಅಂಬೇಡ್ಕರ್ ಚಿಂತನೆಗೂ ಹೊಸ ಕಸುವು ತುಂಬುವ ಕೆಲಸ ನಡೆಯಬೇಕಿದೆ. ದಲಿತರಲ್ಲಿ ಉದ್ದಿಮೆಶೀಲತೆ ನೆಲೆಗೊಳ್ಳಬೇಕಿದೆ. ಯಾಕೆಂದರೆ ಮೊದಲೇ ಹೇಳಿದ ಹಾಗೆ LPG ಯ, FDIನ ಈ ಯುಗದಲ್ಲಿ ದಲಿತರ ಹಸಿವನ್ನು ಕೇವಲ ಮೀಸಲಾತಿಯಿಂದಷ್ಟೆ ಹಿಂಗಿಸುವುದು ಖಂಡಿತ ಸಾಧ್ಯವಿಲ್ಲ ಅದಕ್ಕೆ.
No comments:
Post a Comment