Thursday, 26 June 2014

ದಲಿತರ ದೇವಾಲಯ ಪ್ರವೇಶ: ಮೇಲುಗೈ ಸಾಧಿಸಿದ ದೈವತ್ವದ ಆಜ್ಞೆ!

                        -ರಘೋತ್ತಮ ಹೊ.ಬ.


  ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ದಲಿತ ಸಂಸದ ರಮೇಶ್ ಜಿಗಜಿಣಗಿಯವರಿಂದ ‘ಯಾವುದೇ ದೇವಾಲಯ ಪ್ರವೇಶಿಸಲ್ಲ’ ಎಂಬ ಹೇಳಿಕೆ ಪ್ರಕಟವಾಗಿತ್ತು. ಹಾಗೆಯೇ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮೋಹನ್ ಕುಮಾರ್ ಎಂಬ ದಲಿತ ಯುವಕ ದೇವಸ್ಥಾನ ಪ್ರವೇಶಿಸಿ ಅದು ಕೂಡ ವಿವಾದಕ್ಕೆ ಕಾರಣವಾಗಿದೆ. ಈ ನಿಟ್ಟಿನಲಿ ರಮೇಶ್ ಜಿಗಜಿಣಗಿಯವರ ಆ ಮಾತು, ಹಾಗೆಯೇ ಹಾಸನದ ಜಿಲ್ಲೆಯ ಆ ಘಟನೆ, ಎಂತಹದ್ದು? ಮತ್ತೆ ಮತ್ತೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಹೃದಯ ಚುಚ್ಚುವಂಥದ್ದು! ಹಾಗೆಯೇ ಅಸ್ಪøಶ್ಯತೆಯ ನೋವಿನಲ್ಲಿ ಬೇಯುತ್ತಿರುವ ದಲಿತರ ಅಸಹಾಯಕ ಮನಸ್ಥಿತಿಯ ಪ್ರತಿರೂಪದ್ದು. ಖಂಡಿತ ಇಂತಹದ್ದರ ಬಗ್ಗೆ ಬರೆಯಲು ನೋವೆನಿಸುತ್ತದೆ. ಅದರೂ ಬರೆಯದೇ ವಿಧಿಯಿಲ್ಲ. ಯಾಕೆಂದರೆ ನೋವು ಎಂದಿದ್ದರೂ, ಹೇಗಿದ್ದರೂ ಅದು ನೋವೆ.
    
  ಹಾಗೆ ಹೇಳುವುದಾದರೆ ಭಾರತೀಯ ಸಮಾಜ, ಇದರಲ್ಲಿ ಯಾರು ಹೀಗೆ ಮೇಲು-ಕೀಳು ಎಂದು ತಾರತಮ್ಯ ಎಂದು ಸೃಷ್ಟಿಸಿದರೋ ಗೊತ್ತಿಲ್ಲ. ಬಹುಶಃ ಅದರ ಮೂಲ ಹುಡುಕುವುದು ಗೊಂದಲಕಾರಿ ಹಾಗೆಯೇ ಅಪಾಯಕಾರಿ ಕೂಡ, ಆದರೆ ಅಸ್ತಿತ್ವ ಮಾತ್ರ ಸತ್ಯ. ಅಕ್ಷರದಲ್ಲಿ ಕೆಲ ವರ್ಷಗಳಿಂದೀಚೆಗೆ ಅದು ದಾಖಲೀಕರಣವಾಗುತ್ತಿದೆಯೇ ಹೊರತು ಬಹುಪಾಲು ಅದು ಸಮಾಜದಲ್ಲಿ ಬೇಕೆಂತಲೇ ಉಪೇಕ್ಷೆಗೊಳಪಟ್ಟಿದೆ ಅಥವಾ ಉಪೇಕ್ಷೆಗೊಳಪಡಿಸಲಾಗಿದೆ. ಅದರಲ್ಲೂ ಹಿಂದೂ ದೇವಾಲಯ ಪ್ರವೇಶ? ಈ ದಿಸೆಯಲ್ಲಿ ಇತಿಹಾಸದಲ್ಲಿ ದಾಖಲಾಗಿರುವ ಅಂತಹ ಹಿಂದೂ ದೇವಾಲಯ ಪ್ರವೇಶದ ಒಂದು ದಾಖಲೀಕರಣವನ್ನು (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.9, ಪು.317, 318) ಉಲ್ಲೇಖಿಸುವುದಾದರೆ 1936 ನವೆಂಬರ್ 26ರಂದು ಕೇರಳದ ತಿರುವಾಂಕೂರಿನ ಅಂದಿನ ಅರಸ, ಅಲ್ಲಿನ ಈಳವ ಸಮಾಜದ ಹೋರಾಟಕ್ಕೆ ಮಣಿದು “ಇನ್ನು ಮುಂದೆ ನಮ್ಮ ಹಿಂದೂ ಧರ್ಮದ ಯಾವುದೇ ಪ್ರಜೆಗಳನ್ನು ಅವರ ಜನ್ಮ, ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಅವರು ಹಿಂದೂ ತತ್ವದಲ್ಲಿ ನೆಮ್ಮದಿ ಕಾಣುವಂತಾಗಲು, ಪರಿಹಾರ ಕಂಡುಕೊಳ್ಳುವಂತಾಗಲು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದಕ್ಕಾಗಿ ಇಂದಿನಿಂದ ಹೊರಡಿಸುವ ಆದೇಶವೆಂದರೆ ಜನ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ಹಿಂದೂವು ಯಾವುದೇ ದೇವಸ್ಥಾನವನ್ನು ಪ್ರವೇಶಿಸುವ ಅಥವಾ ಪೂಜಿಸಲ್ಪಡುವುದಕ್ಕೆ ಯವುದೇ ನಿರ್ಬಂಧವಿರುವುದಿಲ್ಲ” ಎಂದು ಆಜ್ಞೆ ಹೊರಡಿಸಿದರು. ಅಂದಹಾಗೆ ತಿರುವಾಂಕೂರು ಅರಸರ ಅಂದಿನ ಆ ಆದೇಶಕ್ಕೆ ಕಾರಣ 1932ರಲ್ಲಿ ಅದೇ ತಿರುವಾಂಕೂರು ಪ್ರಾಂತ್ಯದ ಗುರುವಾಯೂರು ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿಯವರು ವಿವಾದ ಹುಟ್ಟುಹಾಕಿದ್ದು. ಪರಿಣಾಮ ದೇವಾಲಯದ ಈ ಪ್ರವೇಶಕ್ಕೆ ಸಂಬಂಧಿಸಿದಂತೆ ಆಗ ಪರ-ವಿರೋಧ ಚರ್ಚೆಗಳು ಹುಟ್ಟುಕೊಂಡು, ಈಳವರಿಗೆ ದೇವಸ್ಥಾನ ಪ್ರವೇಶದ ನಿಲುವಿನ ವಿರುದ್ಧವಿದ್ದ ಅಂದಿನ ತಿರುವಾಂಕೂರು ಪ್ರಾಂತ್ಯದ ಪ್ರಧಾನಮಂತ್ರಿ ಶ್ರೀ ಸಿ.ಪಿ.ರಾಮಸ್ವಾಮಿ ಅಯ್ಯರ್‍ವರು ಆ ಸಂದರ್ಭದಲ್ಲಿ ಹೇಳಿದ್ದೇನೆಂದರೆ “ವಯಕ್ತಿಕವಾಗಿ ನಾನು ಜಾತಿ ನಿಯಮಗಳನ್ನು ಆಚರಿಸುವುದಿಲ್ಲ. ಆದರೆ ನನಗೆ ತಿಳಿದಿರುವಂತೆ ದೇವಸ್ಥಾನ ಪೂಜೆಗೆ ಸಂಬಂಧಿಸಿದ ಪ್ರಸ್ತುತದ ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಅಂಶಗಳೆಲ್ಲವೂ ದೈವತ್ವದ ಆಜ್ಞೆಯ ಆಧಾರದ ಮೇಲೆ ರೂಪಿತಗೊಂಡಿವೆ ಎಂಬುದು ಮತ್ತು ಇದು ನನ್ನೊಬ್ಬನದೇ ಅಲ್ಲ ಬಹುತೇಕರ ಮನಸ್ಸಿನ ಪ್ರಬಲ ಭಾವನೆ ಮತ್ತು ನಂಬಿಕೆ ಕೂಡ ಆಗಿದೆ” ಎಂದು! ತನ್ಮೂಲಕ ರಾಮಸ್ವಾಮಿ ಅಯ್ಯರ್‍ರವರು ದೇವಸ್ಥಾನ ಪ್ರವೇಶದ ಈ ಪ್ರಕ್ರಿಯೆಯನ್ನು ದೈವತ್ವದ ಆಜ್ಞೆಗೆ ಹೋಲಿಸಿದ್ದರು.
  
   ಅಂದಹಾಗೆ ಇದು 1936ರ ಪ್ರಕ್ರಿಯೆ. ಆದರೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೂತನ ಸಂವಿಧಾನ ರಚಿಸುವ ಪ್ರಕ್ರಿಯೆ ಜರುಗುತ್ತದೆ. ಅದರಲ್ಲೂ ಸಂವಿಧಾನದ ಡ್ರಾಫ್ಟ್ ರಚಿಸುವ ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅಧ್ಯಕ್ಷತೆಯಲ್ಲಿ ಸಲ್ಲಿಸಿದ ಆ ಡ್ರಾಫ್ಟ್‍ನಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಮೂಲಭೂತ ಹಕ್ಕನ್ನು ರೂಪಿಸುತ್ತಾರೆ. ಅದೆಂದರೆ “ಹಿಂದೂ ಧರ್ಮದ ಯಾವುದೇ ಧಾರ್ಮಿಕ ಸಂಸ್ಥೆಯನ್ನು ಪ್ರವೇಶಿಸಲು ಹಿಂದೂ ಧರ್ಮದ ಯಾವುದೇ ಜನಾಂಗವನ್ನಾಗಲೀ, ಜಾತಿಯನ್ನಾಗಲೀ ಜಾತಿ ಮತ್ತು ಜನ್ಮದ ಆಧಾರದ ಮೇಲೆ ನಿರ್ಬಂಧಿಸುವಂತಿಲ್ಲ” ಎಂದು (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.13, ಪು.113). ಹಾಗೆಯೇ 1950 ಜನವರಿ 26ರಂದು ಜಾರಿಯಾದ ಭಾರತದ ಸಂವಿಧಾನ ಕೂಡ ಅನುಚ್ಛೇದ 15ರ ಮೂಲಕ “ಧರ್ಮ, ಜನಾಂಗ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಅಧಾರದ ಮೇಲೆ ವ್ಯಕ್ತಿಯೋರ್ವನ ಮೇಲೆ ಯಾವುದೇ ಕಾರಣಕ್ಕೂ ರಾಜ್ಯವು ತಾರತಮ್ಯ ಮಾಡುವಂತಿಲ್ಲ” ಎಂದು ಘೋಷಿಸಿತು. ಅಂತೆಯೇ ಅನುಚ್ಛೇದ 17ರ ಮೂಲಕ ಅದೇ ಭಾರತದ ಸಂವಿಧಾನ ಅಸ್ಪøಶ್ಯತಾಚರಣೆಯನ್ನು ಕೂಡ ನಿಷೇಧಿಸಿತು.
  
  ದುರಂತವೆಂದರೆ ಇದೆಲ್ಲ ಘಟಿಸಿ ಈಗ್ಗೆ 64 ವರ್ಷಗಳು ಉರುಳುತ್ತಾ ಬಂದಿವೆ. ಆದರೆ ದಲಿತರಿಗೆ ದೇವಸ್ಥಾನ ಪ್ರವೇಶ ಎಲ್ಲಿ ಸಾಧÀ್ಯವಾಗಿದೆ ಎಂಬುದು? ಯಾಕೆಂದರೆ ಇಲ್ಲಿ ಅಂದರೆ ಪ್ರಸ್ತುತದ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿಯವರು “ನಾನು ದೇವಸ್ಥಾನದ ಹತ್ತಿರಕ್ಕೇ ಹೋಗುವುದಿಲ್ಲ, ನಾನು ಹಿಂದೂ ಧರ್ಮದತ್ತ ತಿರುಗಿಯೇ ನೋಡುವುದಿಲ್ಲ” ಎಂದವರಲ್ಲ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೂ ಕೂಡ. ಬದಲಿಗೆ ಜಿಗಜಿಣಗಿಯವರೇ ಹೇಳಿರುವಂತೆ “ಅವರು ಎಲ್ಲಾ ದೇವಸ್ಥಾನಗಳಿಗೂ ಹೋಗುತ್ತಾರೆ. ಆದರೆ ಹೊರಗಡೆ ನಿಂತು ಪೂಜೆ ಸಲ್ಲಿಸುತ್ತಾರೆ”! ಹಾಗಿದ್ದರೆ ಇಂತಹ ಸ್ಥಿತಿಗೆ ಕಾರಣವೇನು? ಹಾಗೆಯೇ ಇಲ್ಲಿ ಮೇಲುಗೈಯಾಗಿರುವುದಾದರೂ ಯಾವುದು? ಅಂಬೇಡ್ಕರರು ರಚಿಸಿದ, ಭಾರತದ ಸಂವಿಧಾನ ರೂಪಿಸಿದ ಅನುಚ್ಛೇದ ನಿಯಮಗಳೋ ಅಥವಾ ಇಲ್ಲಿ ಉಲ್ಲೇಖಿಸಿರುವ ಸಿ.ಪಿ.ರಾಮಸ್ವಾಮಿ ಅಯ್ಯರ್‍ರವರ ಹೇಳಿಕೆಯಾದ ದೈವತ್ವದ ಆಜ್ಞೆಯೋ ಎಂಬುದು? ಖಂಡಿತ, ದೈವತ್ವದ ಆಜ್ಞೆಯೇ ಮೇಲುಗೈ ಸಾಧಿಸಿದೆ ಹಾಗೆಯೇ ಮುಂದೆಯೂ ಕೂಡ ಸಾಧಿಸುತ್ತದೆ! ಯಾಕೆಂದರೆ ಇದು ಸಂಸದ ರಮೇಶ ಜಿಗಜಿಣಗಿಯವರೊಬ್ಬರ, ಹಾಗೆಯೇ ಹಾಸನ ಜಿಲ್ಲೆಯ ಆ ಯುವಕನೊಬ್ಬನ ಸಮಸ್ಯೆಯಲ್ಲ, ಈ ದೇಶದ ಮೂಲೆ ಮೂಲೆಯಲ್ಲಿರುವ ದಲಿತನ ಸಮಸ್ಯೆ.
  
   ಅನುಭವದಂತೆ ಹಾಗೆಯೇ ನೋಡಿ ತಿಳಿದಿರುವಂತೆ ಯಾವುದೇ ದಲಿತ ಆತ ವಯಕ್ತಿಕವಾಗಿ ದೇವಸ್ಥಾನ ಪ್ರವೇಶಿಸುವ ಆಸೆ ಹೊಂದಿರದೆ ಇರಲಾರ. ಯಾಕೆಂದರೆ ಭಾರತ ದೈವತ್ವದ ನಾಡು. ಇಲ್ಲಿ ದೇವಾಲಯಗಳು ಯಥೇಚ್ಛವಾಗಿವೆ. ಹಳ್ಳಿಗೊಂದು, ಎರಡರಂತೆ ದೇವಸ್ಥಾನಗಳು ಇದ್ದೇ ಇವೆ. ಹಾಗೆ ಆ ಹಳ್ಳಿಯ ಭಾಗವಾಗಿರುವ ದಲಿತರು? ದಲಿತ ಬಾಲಕರು? ದೇವಸ್ಥಾನವನ್ನು ಪ್ರವೇಶಿಸದೆ ಇರುತ್ತಾರೆಯೇ? ಖಂಡಿತ, ಬಹುತೇಕರು ಜಿಗಜಿಣಗಿಯವರಂತೆ ದೇವಸ್ಥಾನ ಪ್ರವೇಶಿಸಿರುತ್ತಾರೆ. ಯಾಕೆಂದರೆ ಎಲ್ಲರೂ ಪ್ರವೇಶಿಸುತ್ತಾರೆ ಎಂಬ ಸಾಮಾನ್ಯ ನೋಟದಿಂದ. ಆದರೆ ‘ತಾವು ಕೀಳು ಜಾತಿಯವರು’ ಎಂದು ಗೊತ್ತಾಗುವುದು ‘ಏಯ್! ದೂರ ಹೋಗು’ ಎಂದಾಗ! ಅಂದಹಾಗೆ ಇಂತಹ ‘ದೂರ ಹೋಗು’ ಎಂಬ ಆಜ್ಞೆಗಳನ್ನು ಮೀರಿ ದೇವಸ್ಥಾನ ಪ್ರವೇಶಿಸಿದ ಬಾಲಕರಿದ್ದಾರೆ (ಹಾಸನದ ಆ ಯುವಕ ಮಾಡಿದಂತೆ). ಅಂತಹ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ಅಲ್ಲಿ ಕೋಮುಗಲಭೆಗಳಾಗಿವೆ ಅಥವಾ ‘ತುಂಡುಡುಗ ಅವನಿಗೇನು ಗೊತ್ತು’ ಎಂದು ಬಿಟ್ಟುಕಳುಹಿಸಿರುವ ಪ್ರಸಂಗಗಳೂ ಇವೆ. ಪ್ರಶ್ನೆ ಏನೆಂದರೆ ಇಂತಹ ದೇವಸ್ಥಾನ ಪ್ರವೇಶ ನಿರಾಕರಿಸುವ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ದಲಿತ ಬಾಲಕ/ಬಾಲಕಿಯರ ಮೇಲೆ, ಒಟ್ಟಾರೆ ಆ ಸಮಾಜದ ಮೇಲೆ ಬೀರುವ ಪರಿಣಾಮ? ಖಂಡಿತ, ಈ ಕಾರಣಕ್ಕೆ ದಲಿತರು ಅನ್ಯ ಧರ್ಮದೆಡೆ ಆಕರ್ಷಿತರಾಗುವುದು. ಸ್ವತಃ ಅಂಬೇಡ್ಕರರ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ 1930 ಮಾರ್ಚ್ 2ರಂದು “ಹಿಂದೂಗಳ ಹೃದಯ ಪರಿವರ್ತನೆ ಮಾಡಲು ನಾವು ಈ ಕಾಳಾರಾಮ್ ದೇವಸ್ಥಾನ ಪ್ರವೇಶ ಸತ್ಯಾಗ್ರಹ ಮಾಡುತ್ತಿದ್ದೇವೆ” (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ 1. ಪು.182) ಎಂದವರು ಅದರಲ್ಲಿ ವಿಫಲಗೊಳ್ಳುತ್ತಲೇ ಮುಂದೆ 1934 ನವೆಂಬರ್ 19 ರಂದು ಆ ದೇವಾಲಯ ಪ್ರವೇಶ ಚಳುವಳಿಯನ್ನು ಕೈಬಿಡುತ್ತಾ “ಹಿಂದೂ ಸಮಾಜದಲ್ಲಿ ನಮ್ಮ ನೈಜ ಸ್ಥಿತಿ ಏನು ಎಂಬುದು ಈ ಮೂಲಕ ತಿಳಿಯಿತು” (ಅದೇ ಕೃತಿ. ಪು.203) ಎಂದರು! ಮುಂದೆ 1935 ಅಕ್ಟೋಬರ್ 13ರಂದು ಅದೇ ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ “ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ” (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ 3. ಪು.94) ಎಂದು ಘೋಷಿಸಿದ ಅವರು ಅಂತೆಯೇ 1956 ಅಕ್ಟೋಬರ್ 14 ರಂದು ತಮ್ಮ ಐದು ಲಕ್ಷ ಅನುಯಾಯಿಗಳೊಡನೆ ಹಿಂದೂಧರ್ಮ ತ್ಯಜಿಸಿ ಬೌದ್ಧಧರ್ಮ ಸೇರುತ್ತಾರೆ, ತನ್ಮೂಲಕ ಅಂಬೇಡ್ಕರ್ ಹಿಂದೂ ದೇವಸ್ಥಾನ ಪ್ರವೇಶಿಸುವ ಸಂದರ್ಭವನ್ನೇ ತಪ್ಪಿಸಿಕೊಳ್ಳುತ್ತಾರೆ.
 
   ಪ್ರಶ್ನೆ ಏನೆಂದರೆ ಎಷ್ಟು ದಲಿತರು ಅಂಬೇಡ್ಕರರ ಈ ಕ್ರಾಂತಿಕಾರಿ ಮಾರ್ಗದಲ್ಲಿ  ಸಾಗುವುದು ಸಾಧ್ಯ? ಎಂಬುದು. ಹಾಗಿದ್ದರೆ ದಲಿತರಿಗೆ ಹಿಂದೂ ದೇವಾಲಯಗಳನ್ನು ಮುಕ್ತವಾಗಿ ತೆರೆಯಬೇಕಲ್ಲವೆ? ಎಲ್ಲಾ ಹಿಂದೂಗಳು ಎಲ್ಲಾ ದಲಿತರನ್ನು “ಬನ್ನಿ, ನಮ್ಮ ದೇವಸ್ಥಾನಕ್ಕೆ” ಎಂದು ಪ್ರೀತಿಯಿಂದ ಅಥವಾ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯಾದರೂ ಕರೆದುಕೊಂಡು ಹೋಗಬೇಕಲ್ಲವೆ? ದುರಂತವೆಂದರೆ ಐದು ಬಾರಿ ಸಂಸದ, ನಾಲ್ಕು ಬಾರಿ ವಿಧಾನಸಭಾ ಸದಸ್ಯ, ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ ಗೌರವಾನ್ವಿತ ಶೋಷಿತ ಸಮುದಾಯದ ಸದಸ್ಯರಾದ ರಮೇಶ ಜಿಗಜಿಣಗಿಯವರಿಗೆ ಇಂತಹ ಹೀನ ಪರಿಸ್ಥಿತಿ. ಇನ್ನು ಹಳ್ಳಿಗಳಲ್ಲಿ, ಪಟ್ಟಣಗಳ ಕೊಳಗೇರಿಗಳಲ್ಲಿ ಬದುಕುವ ಸಾಮಾನ್ಯ ದಲಿತರ ಪಾಡು ಹೇಗಿರಬೇಡ? ನಿಜ ಹೇಳಬೇಕೆಂದರೆ ಇಂದಿಗೂ ಕೂಡ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಬಹುತೇಕ ದಲಿತರ ಸ್ಥಿತಿ ಅಸಹಾಯಕ, ಹಾಗೆಯೇ ಅತಂತ್ರ.


Thursday, 19 June 2014


ಉತ್ತರಪ್ರದೇಶದ ಬದೌನ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುತ್ತ...

                   -ರಘೋತ್ತಮ ಹೊ.ಬ


 “ಆಕೆ ನನ್ನ ಸರ್ವಸ್ವ. ನನ್ನ ಪ್ರಪಂಚವೇ ಆಕೆಯಾಗಿದ್ದಳು. ಆದರೆ ಇಂದು ಆ ನನ್ನ ಪ್ರಪಂಚ ಕೊನೆಗೊಂಡಿದೆ” ತನ್ನ 12 ವರ್ಷದ ಕಂದಮ್ಮನನ್ನು ಪಾಪಿಗಳ ಲೈಂಗಿಕ ತೃಷೆಗೆ ಕಳೆದುಕೊಂಡ ಉತ್ತರಪ್ರದೇಶದ ಬದೌನ್ ಜಿಲ್ಲೆಯ ಕಾತ್ರ ಸಾದತ್‍ಗಂಜ್ ಗ್ರಾಮದ ದಲಿತ ತಂದೆಯ ಆಕ್ರಂಧನದ ನುಡಿಗಳಿವು. ಹೌದು, ಕಳೆದ ಮೇ 27ರ ಮಂಗಳವಾರ ಸಂಜೆ 12 ಮತ್ತು 14ರ ಮಯೋಮಾನದ ಇಬ್ಬರು ಅಕ್ಕತಂಗಿಯರು, ಮೂರ್ತಿ ಮತ್ತು ಪುಷ್ಪ, ಬಹಿರ್ದೆಶೆಗೆಂದು ಹೊಲಕ್ಕೆ ಹೋದವರು ಮತ್ತೆ ಮರಳಿ ಬರಲೇ ಇಲ್ಲ!

   ಬಹಿರ್ದೆಶೆಗೆಂದು ಹೋದವರು ಬಹು ಹೊತ್ತಾದರೂ ಮರಳಿ ಬಾರದಿದ್ದನ್ನು ಗಮನಿಸಿದ ಬಾಲೆಯರ ಪೋಷಕರು ಗ್ರಾಮದಲ್ಲಿ ಹುಡುಕಲು ಆರಂಭಿಸಿದರಾದರೂ ಸುಳಿವು ಸಿಗಲೇ ಇಲ್ಲ. ಕಡೆಗೆ ಆ ಮಕ್ಕಳ ತಂದೆಯ ಸಹೋದರನೊಬ್ಬ “ಹೊಲದಲ್ಲಿ ಮಕ್ಕಳ ಕಿರುಚಾಟವನ್ನು ತಾನೂ ಕೇಳಿದ್ದಾಗಿಯೂ, ಬಳಿಗೆ ಹೋಗಿ ಅವರನ್ನು ಹೊತ್ತೊಯ್ದು ದೈಹಿಕವಾಗಿ ಹಿಂಸಿಸುತ್ತಿದ್ದ ಐದು ಜನ ದುರುಳರನ್ನು ‘ಅವರನ್ನು ಬಿಟ್ಟುಬಿಡುವಂತೆ’ ಕೇಳಿದ್ದಾಗಿಯೂ, ಅವರ ಜೊತೆ ಹೋರಾಟ ನಡೆಸಿದ್ದಾಗಿಯೂ, ಪರಿಣಾಮ ಅವರು ನನ್ನನ್ನು ಶೂಟ್ ಮಾಡುವುದಾಗಿ ಬೆದರಿಸಿದ್ದಾಗಿ” ಅಣ್ಣನಿಗೆ ವಿವರಿಸಿದ. ಗಾಭರಿ ಬಿದ್ದ ಆ ಪೋಷಕರು ಕೂಡಲೇ ಸಮೀಪದಲ್ಲಿದ್ದ ಬದೌನ್ ಪೊಲೀಸ್ ಠಾಣೆಯತ್ತ ದೌಡಾಯಿಸಿದರು. ಆದರೆ ಅಲ್ಲಿ ಠಾಣೆಯಲ್ಲಿ ಆ ಪೊಲೀಸರಿಂದ ಬಂದ ಉತ್ತರವೇನೆಂದರೆ “ಹೇ! ಆ ಹುಡುಗಿಯರು ಊರಿನ ಕೆಲವು ಮೇಲ್ಜಾತಿ ಗಂಡಸರ ಜೊತೆ ಹೋಗಿದ್ದಾರೆ. ಕೆಲವೇ ಗಂಟೆಗಳಲ್ಲಿ ವಾಪಸ್ ಬರುತ್ತಾರೆ. ಅದಕ್ಕೆಲ್ಲ ತಲೆಕೆಸಿಕೊಳ್ಳಬೇಡಿ” ಎಂದು! ಅದರೆ ಆ ಬಾಲೆಯರು ಪೊಲೀಸರು ಹೇಳಿದ ಹಾಗೆ ವಾಪಸ್? ಊಹ್ಞೂಂ, ರಾತ್ರಿಯೆಲ್ಲಾ ತಮ್ಮ ಮಕ್ಕಳಿಗಾಗಿ ಹುಡುಕಾಡಿದ ಆ ಪೋಷಕರಿಗೆ ಮಾರನೇ ದಿನ ಬೆಳಿಗ್ಗೆ ಮಹಿಳೆಯೋರ್ವಳಿಂದ ತಿಳಿದ ಸಿಡಿಲಿನ ಸುದ್ದಿಯೆಂದರೆ “ನಿಮ್ಮ ಮಕ್ಕಳ ಹೆಣಗಳು ಸಮೀಪದ ಮಾವಿನ ತೋಪೊಂದರಲ್ಲಿ ನೇತಾಡುತ್ತಿವೆ” ಎಂದು!

   ಹೌದು, ಬಹಿರ್ದೆಶೆಗೆಂದು ಹೊರಟಿದ್ದ ಆ ದಲಿತ ಪುಟ್ಟ ಕಂದಮ್ಮಗಳನ್ನು ಆ ಊರಿನ 5 ಜನ ಮೇಲ್ಜಾತಿಯವರು ಹೊತ್ತೊಯ್ದು ರಾತ್ರಿಯೆಲ್ಲಾ ಕ್ರೂರವಾಗಿ ಅತ್ಯಾಚಾರ ಮಾಡಿ ಸುದ್ದಿ ಹೊರಬರುತ್ತದೆ ಎಂದು ಆ ಮಕ್ಕಳನ್ನು ಬದುಕಲೂ ಬಿಡದೇ ಜೀವಂತವಾಗಿ ಹಗ್ಗ ಬಿಗಿದು ಮಾವಿನ ಮರವೊಂದಕ್ಕೆ ನೇಣುಹಾಕಿದ್ದರು. ಆತ್ಮಹತ್ಯೆ ಎಂದು ಬಿಂಬಿಸಲು! ಅಂದಹಾಗೆ ಖುದ್ದು ಮಕ್ಕಳನ್ನು ಹೊತ್ತೊಯ್ದಿದ್ದನ್ನು ಗಮನಿಸಿದ್ದ ಆ ಪೊಲೀಸರು ಉತ್ತರಿಸಿದ್ದು? “ಹುಡುಗಿಯರು, ಮೇಲ್ಜಾತಿ ಗಂಡಸರ ಜೊತೆ ಹೋಗಿದ್ದಾರೆ, ವಾಪಸ್ ಬರುತ್ತಾರೆ!” ಆದರೆ ಬಂದದ್ದು? ನೇತಾಡುವ ಶವಗಳಾಗಿ!

   ಖಂಡಿತ, ಉತ್ತರ ಪ್ರದೇಶವಿಂದು ಅತ್ಯಾಚಾರಿಗಳ ಸ್ವರ್ಗ. ಯಾಕೆಂದರೆ ಅಲ್ಲಿ ಆಳುತ್ತಿರುವುದು ಅಖಿಲೇಶ್ ಯಾದವ್ ಎಂಬ ಅದೇ ‘ಸ್ವರ್ಗದ ಒಡೆಯ’! ಹಾಗೆಯೇ ಸದರಿ ಪ್ರಕರಣದ ಆ 5 ಜನ ಮೇಲ್ಜಾತಿ ಗಂಡಸರು ಅದೇ ಅಖಿಲೇಶ್‍ನ ಸ್ವಜಾತಿ ಯಾದವ ಜಾತಿಯವರು. ‘ದಲಿತ ಆ ಹೆಣ್ಣು ಮಕ್ಕಳು’ ಆಮೇಲೆ ಬರುತ್ತಾರೆ ಎಂದು, ವಿಷಯ ಗೊತ್ತಿದ್ದೂ, ಅದು ಅಂದರೆ ಅತ್ಯಾಚಾರ ಮತ್ತು ಕೊಲೆ ನಡೆಯಲು ಅನುವುಮಾಡಿಕೊಟ್ಟ (ಇಲ್ಲಿ ಕಾಪಾಡುವ ಮಾತೇ ಇಲ್ಲ!) ಬದೌನ್ ನ ಆ ಪೋಲೀಸರು ಕೂಡ ಅದೇ ಯಾದವ ಜಾತಿಯವರು. ದುರಂತವೆಂದರೆ ಪ್ರಕರಣದಲ್ಲಿ ಆ ದಲಿತ ಹೆಣ್ಣು ಮಕ್ಕಳ ಹೆಣಗಳು ನೇತಾಡುವ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಕಡೆಗೆ ಗ್ರಾಮಸ್ಥರು ಹೆಣಗಳನ್ನು ಇಳಿಸಿ ಸಮೀಪದ ಹೆದ್ದಾರಿಯೊಂದಕ್ಕೆ ಅಡ್ಡಲಾಗಿ ಮಲಗಿಸಿ ಪ್ರತಿಭಟನೆಗಿಳಿದ ನಂತರವಷ್ಟೆ ಪೊಲೀಸರು ದೂರು ದಾಖಲಿಸಿದ್ದು. ಹ್ಞಾಂ, ಮರಣೋತ್ತರ ವರದಿಯನ್ನು ಬದೌನ್ ನ ಜಿಲ್ಲಾ ಎಸ್‍ಪಿ ಮಾನ್‍ಸಿಂಗ್ ಚೌಹಾಣ್‍ರ ಹೇಳಿಕೆಯ ಪ್ರಕಾರವೇ ಹೇಳುವುದಾದರೆ “ಬಲಿಪಶು ಆ ಹೆಣ್ಣು ಮಕ್ಕಳ ಮೇಲೆ ಗುಂಪು ಅತ್ಯಾಚಾರವೆಸಗಲಾಗಿದೆ, ಹಾಗೆಯೇ ನೇಣು ಹಾಕಿ ಸಾಯಿಸಲಾಗಿದೆ”. ಅಂದಹಾಗೆ ಘಟನೆ ನಡೆದ ನಂತರ ಸ್ವಾಭಾವಿಕವಾಗಿ ಅಲ್ಲಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂತ್ರಸ್ತ ಎರಡೂ ಕುಟುಂಬಗಳಿಗೂ ತಲಾ 5 ಲಕ್ಷ ಪರಿಹಾರ ಘೋಷಿಸಿದರು. ಆದರೆ ಮುಖ್ಯಮಂತ್ರಿಯ ಅಂತಹ ಪರಿಹಾರದ ಘೋಷಣೆಗೆ ಆ ಕುಟುಂಬಗಳ ಉತ್ತರ ಗಂಭೀರವಾಗಿತ್ತು. ಅದೆಂದರೆ “ಪರಿಹಾರ, ನಮಗೆ ಬೇಡ. ಬೇಕಿರುವುದು ನ್ಯಾಯ. ನಮ್ಮ ಮಕ್ಕಳನ್ನು ಅವರು ನೇಣಿಗೇರಿಸಿದ್ದಾರೆ. ಅವರಿಗೂ ನೇಣು ಆಗಬೇಕು” ಎಂದು.

   ಈ ನಿಟ್ಟಿನಲಿ ಸಂತ್ರಸ್ತ ಪೋಷಕರ ಇಂತಹ ಒತ್ತಾಯಕ್ಕೆ ಬಲ ಬಂದಿದ್ದು ಮಾರನೇ ದಿನ ಆ ಗ್ರಾಮಕ್ಕೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ಭೇಟಿಕೊಟ್ಟಾಗ. ಆಶ್ಚರ್ಯಕರವೆಂದರೆ ಅಖಿಲೇಶ್ ಸರ್ಕಾರ ಕೊಟ್ಟ ಪರಿಹಾರವನ್ನು ವಾಪಸ್ ಅವರ ಮುಖಕ್ಕೇ ಬಿಸಾಕಿದ ಆ ಪೋಷಕರು ಮಾಯಾವತಿಯವರಿಗೆ ಹೇಳಿದ್ದು “ಪರಿಹಾರ ನೀವು ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತೇವೆ. ನೀವು ಎಷ್ಟೇ ಕೊಡಿ ಅದನ್ನು ನಾವು ಪ್ರೀತಿಯಿಂದ ಸ್ವೀಕರಿಸುತ್ತೇವೆ. ಆದರೆ ಅಖಿಲೇಶ್ ಸರ್ಕಾರದ ಪರಿಹಾರ ಮಾತ್ರ ಬೇಡ” ಎಂದು! ಒಂದು ಅಂತಃಕರಣದ ದೃಷ್ಟಿಕೋನವನ್ನು ಇಲ್ಲಿ ಗಮನಿಸಬೇಕು. ಅದೆಂದರೆ ಅತ್ಯಾಚಾರಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದರೂ ಕಳೆದುಹೋಗದ ಆ ಪೋಷಕರ ಸ್ವಾಭಿಮಾನ. ಯಾಕೆಂದರೆ ಆ ಪೋಷಕರಿಗೆ ತಿಳಿದಿತ್ತು ತಮ್ಮ ಮಕ್ಕಳನ್ನು ಅತ್ಯಾಚಾರಗೈದು ಕೊಲೆಮಾಡಿದ್ದು ನೇರ ಅಖಿಲೇಶ್ ಸರ್ಕಾರ ಎಂದು. ಹೀಗಿರುವಾಗ ಅಂತಹವರಿಂದ ಪರಿಹಾರ ಸ್ವೀಕರಿಸುವುದೆಂದರೆ... ಈ ದಿಸೆಯಲ್ಲಿ ಬದೌನ್ ನ ಸಂತ್ರಸ್ತ ಆ ಪೋಷಕರ ಕಳಕಳಿ ಗಮನಿಸಿದ ಮಾಯಾವತಿಯವರು ಆ ಕುಟುಂಬಗಳಿಗೆ ಸ್ಥಳದಲ್ಲೇ ತಮ್ಮ ಪಕ್ಷದ ವತಿಯಿಂದ ತಲಾ 5ಲಕ್ಷ ಪರಿಹಾರ ವಿತರಿಸಿದರು. ಹಾಗೆಯೇ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು “ರಾಜಕೀಯ ಅನುಕೂಲಗಳಿಸಲು ನಾನು ಈ ಭೇಟಿ ನೀಡಿದ್ದೇನೆಂದು ಆಡಳಿತ ಪಕ್ಷ ಅಪಪ್ರಚಾರ ನಡೆಸುವ ಸಾಧ್ಯತೆಯಿದೆ. ಆದ್ದರಿಂದ ಸ್ವಭಾವತಃ ನಾನು ಇಂತಹ ಸಂದರ್ಭಗಳಲ್ಲಿ ಭೇಟಿಕೊಡುವುದಿಲ್ಲ. ಆದರೆ ಬದೌನ್ ಘಟನೆಯ ಈ ಸಂದರ್ಭದಲ್ಲಿ ಸಿಬಿಐ ತನಿಖೆಗಾಗಿ ಒತ್ತಡ ಹೇರಲು ನಾನು ನನ್ನ ವಯಕ್ತಿಕ ನಿಯಮ ಮುರಿದು ಭೇಟಿನೀಡಬೇಕಾಯಿತು” ಎಂದರು. ಹಾಗೆಯೇ “ಹೆಣ್ಣುಮಕ್ಕಳುಗಳನ್ನು ಕಳೆದುಕೊಂಡು ದುಃಖತಪ್ತ ಸ್ಥಿತಿಯಲ್ಲಿರುವ ಈ ಕುಟುಂಬಗಳಿಗೆ ನ್ಯಾಯ ದೊರಕಲಿಲ್ಲವೆಂದರೆ ನಾನು ಇಲ್ಲಿಯೇ ಧರಣಿ ಕೂರುವುದಾಗಿ” ಅವರು ಬೆದರಿಕೆಯನ್ನೂ ಒಡ್ಡಿದರು. ಪರಿಣಾಮ ಹೆದರಿದ ಅಖಿಲೇಶ್ ಯಾದವ್ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು.

   ಒಂದು ಗಂಭೀರ ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದೆಂದರೆ 2012 ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ ಒಂದರಲ್ಲಿ ನಡೆದ ಅತ್ಯಾಚಾರದ ಘಟನೆ. ಆ ಘಟನೆಯಲ್ಲಿ ನಿರ್ಭಯಾ ಎಂಬ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿ ಆಕೆ ಅಸುನೀಗಿದಾಗ ಇಡೀ ದೇಶ, ಮೀಡಿಯಾಗಳು, ಫೇಸ್‍ಬುಕ್, ಟ್ವಿಟ್ಟರ್‍ಗಳು ಕೋಲಾಹಲ ಎಬ್ಬಿಸಿದ್ದೇ ಎಬ್ಬಿಸಿದ್ದು. ದೇಶಾದ್ಯಂತ ಭಾರೀ ಚರ್ಚೆ ನಡೆದು ಆರೋಪಿಗಳಿಗೆ ಮರಣದಂಡನೆಯಂತಹ ಉಗ್ರ ಶಿಕ್ಷೆಯೂ ಆಯಿತು! ಕಾರಣ? ಅತ್ಯಾಚಾರಕ್ಕೆ ಒಳಗಾದ ಆ ಮಹಿಳೆ ಮೇಲ್ಜಾತಿಯವಳು ಎಂಬ ಕಾರಣಕ್ಕೆ! ಆದರೆ ಬದೌನ್ ನ ಸದ್ಯದ ದಲಿತ ಹೆಣ್ಣುಮಕ್ಕಳ ಭೀಭತ್ಸ ಅತ್ಯಾಚಾರ ಮತ್ತು ಕೊಲೆ ಪ್ರಕರಣ? ಖಂಡಿತ, ಮಾಧÀ್ಯಮಗಳು ಅಂತಹ ಮುಖಪುಟದ ಸುದ್ದಿ ಮಾಡಲಿಲ್ಲ, ಕಿರುಚಲಿಲ್ಲ, ಅರಚಲಿಲ್ಲ, ಗಂಟೆಗಳ ಕಾಲ ಟಿವಿಗಳ ಮುಂದೆ ಕೂಗಾಡಲಿಲ್ಲ! ನೂತನ ಪ್ರಧಾನಿ ನರೇಂದ್ರ ಮೋದಿಯಿಂದಲೂ ಅಂತಹ ಪ್ರತಿಭಟನೆಯ ಹೇಳಿಕೆ ಹೊರಬೀಳಲಿಲ್ಲವೆಂದರೆ...!
ಮೇಲ್ಜಾತಿ ಹೆಣ್ಣು ಮಕ್ಕಳಿಗೊಂದು ನ್ಯಾಯ, ದಲಿತ ಹೆಣ್ಣು ಮಕ್ಕಳಿಗೊಂದು ನ್ಯಾಯ!
ಖಂಡಿತ, ದಲಿತರಿಗೊಂದು ನ್ಯಾಯ, ಇತರರಿಗೊಂದು ನ್ಯಾಯ ಎಂಬುದಕ್ಕೆ ಬದೌನ್ ನ ಈ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಯಾಕೆಂದರೆ ಈ ನಿಟ್ಟಿನಲ್ಲಿ ಖೈರ್ಲಾಂಜಿ ಪ್ರಕರಣವನ್ನಿಲ್ಲಿ ದಾಖಲಿಸುವುದಾದರೆ 2006 ಸೆಪ್ಟೆಂಬರ್ 26, ಮಹಾರಾಷ್ಟ್ರದ ಖೈರ್ಲಾಂಜಿ ಗ್ರಾಮದಲ್ಲಿ ಆ ದಿನ ಮೇಲ್ಜಾತಿಗಳ ಗುಂಪೊಂದು ದಲಿತ ವರ್ಗಕ್ಕೆ ಸೇರಿದ ಭಯ್ಯಾಲಾಲ್ ಭೂತ್‍ಮಾಂಗೆ ಮತ್ತವರ ಕುಟುಂಬದ ನಾಲ್ವರನ್ನು ಭೀಭತ್ಸವಾಗಿ ಹಿಂಸಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಎಳೆದು ತಂದ ಆ ಮೇಲ್ಜಾತಿಗಳ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ಆ ಕುಟುಂಬದ ಪ್ರಿಯಾಂಕ ಭೂತ್‍ಮಾಂಗೆ ಎಂಬ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸುವಂತೆ ಸ್ವತಃ ಆತನ ತಮ್ಮ ರೋಷನ್‍ಗೆ ಹೇಳಿತು. ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮರ್ಮಾಂಗಕ್ಕೆ ಬಲವಾದ ಏಟುಗಳು ಬಿದ್ದವು! ಕಡೆಗೆ ಪ್ರಿಯಾಂಕ ಭೂತ್‍ಮಾಂಗೆಯ ವಕ್ಷಸ್ಥಳಕ್ಕೆ ಮಚ್ಚಿನಿಂದ ಹೊಡೆದ ಆ ಗುಂಪು ಅವಳ ಮರ್ಮಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿ ಅದಕ್ಕೂ ಮೊದಲು 19 ವರ್ಷದ ಆಕೆಯ ಮೇಲೆ ಮೇಲ್ಜಾತಿಗಳ ಆ ಗುಂಪು ಬಹಿರಂಗವಾಗಿಯೇ ಸಾಮೂಹಿಕ ಅತ್ಯಾಚಾರ ನಡೆಸಿತು.

   ದುರಂತವೆಂದರೆ ಇಂತಹ ಭೀಭತ್ಸ ಕೃತ್ಯವೆಸಗಿದ ಆರೋಪಿಗಳಿಗೆ ಕೆಳಹಂತದ ವಿಚಾರಣಾ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದರೆ, 2010 ಜುಲೈ 12 ರಂದು ಬಾಂಬೇ ಹೈಕೋರ್ಟ್‍ನ ನಾಗಪುರ ಪೀಠವು ಸದರಿ ಮರಣದಂಡನೆಯನ್ನು ಜೀವಾವಧಿಶಿಕ್ಷೆಗೆ ಇಳಿಸಿತು. ಆ ಮೂಲಕ ಖೈರ್ಲಾಂಜಿಯ ಆ ನರಹಂತಕರನ್ನು ವ್ಯವಸ್ಥಿತವಾಗಿ ರಕ್ಷಿಸಲಾಯಿತು! ಪರಿಣಾಮ ಜಗಜ್ಜಾಹೀರಾದದ್ದೆಂದರೆ ದಲಿತರ ಮೇಲಿನ ದೌರ್ಜನ್ಯಕ್ಕೆ ಈ ದೇಶದಲ್ಲಿ ಎಂತಹ ‘ನ್ಯಾಯ’ ಎಂಬುದು. ಅಂದಹಾಗೆ ಇಂತಹ’‘ನ್ಯಾಯ’ಕ್ಕೆ ಮತ್ತೊಂದು ಘಟನೆಯನ್ನಿಲ್ಲಿ ಉಲ್ಲೇಖಿಸಬಹುದು. ಅದೆಂದರೆ 1997 ಡಿಸೆಂಬರ್ 1 ಮಧ್ಯರಾತ್ರಿ 11 ಗಂಟೆಗೆ ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಎಂಬ ಗ್ರಾಮದಲ್ಲಿ ನಡೆದ ಘಟನೆ. ಆ ಘಟನೆಯಲ್ಲಿ ಮೇಲ್ಜಾತಿ ರಣವೀರಸೇನೆಯ ನರಹಂತಕ ಗುಂಪು 27 ಮಹಿಳೆಯರು, 16 ಮಕ್ಕಳು ಸೇರಿದಂತೆ 58 ದಲಿತರನ್ನು ಕೊಂದುಹಾಕಿತು. ದುರಂತವೆಂದರೆ ಸದರಿ ಪ್ರಕರಣದಲ್ಲಿಯೂ ಅಷ್ಟೆ 2013 ಅಕ್ಟೋಬರ್ 3ರಂದು ತೀರ್ಪು ನೀಡಿದ ಪಾಟ್ನಾ ಉಚ್ಛನ್ಯಾಯಾಲಯ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡದ ಎಲ್ಲಾ ಅರೋಪಿಗಳನ್ನು ದೋಷ ಮುಕ್ತಗೊಳಿಸಿತು! ಪ್ರಶ್ನೆ ಏನೆಂದರೆ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಇಂತಹ "ದುರಂತ ತೀರ್ಪುಗಳ ಇತಿಹಾಸ"ವಿರುವಾಗ ಉತ್ತರಪ್ರದೇಶದ ಬದೌನ್ ನಲ್ಲಿ ನಡೆದಿರುವ ಸದ್ಯದ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ? ಖಂಡಿತ, ಇದಕ್ಕೂ ಕೂಡ ನ್ಯಾಯ ಬಲು ದೂರದಲ್ಲಿರುವಂತೆ ಕಾಣುತ್ತದೆ.

   ಹಾಗಿದ್ದರೆ ಪರಿಹಾರ? ಖಂಡಿತ ಪರಿಹಾರ, “ಪರಿಹಾರ ನೀಡಲು ಬಂದ ಮಾಯಾವತಿಯವರಿಂದ ಮಾತ್ರ ಪರಿಹಾರ ಸ್ವೀಕರಿಸಿದ” ಆ ಪೋಷಕರ ಸ್ವಾಭಿಮಾನದ ನಡೆಯಲ್ಲಿದೆ! ಯಾಕೆಂದರೆ ಮಾಯಾವತಿಯವರು 4 ಬಾರಿ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು. ಆಗ ಅವರ ಮೇಲೆ ಇಂತಹ ಘಟನೆಗಳಾಗಲಿಲ್ಲ, ಈಗ ಆಗುತ್ತಿದೆ ಎಂದರೆ ಇದಕ್ಕೆ ನಿಜಕ್ಕೂ ಪರಿಹಾರ? ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಅಥವಾ ಅಂತಹ ದಲಿತರ ಅಧಿಕಾರದ ಘಟನೆಗಳು ದೇಶಾದ್ಯಂತ ಘಟಿಸುವುದು. ಅಂದಹಾಗೆ ಇದರ ಬದಲಿಗೆ ಅಖಿಲೇಶ್‍ರಂತಹ ದೌರ್ಜನ್ಯಕೋರರಿಗೇ ಮತ್ತೆ ಮತ್ತೆ ಅಧಿಕಾರ ಸಿಕ್ಕರೆ? ಬದೌನ್, ಖೈರ್ಲಾಂಜಿ, ಲಕ್ಷ್ಮಣ್‍ಪುರ್‍ಬಾಥೆ ಇಂತಹ ಘಟನೆಗಳು ನಿರಂತರವಾಗುತ್ತವಷ್ಟೆ.
                                 
                             


Wednesday, 18 June 2014

 ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ  ಬಿದ್ದ ಭಾರತ

                                  -ರಘೋತ್ತಮ ಹೊ.ಬ 


 
  ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜವೆಂಬತೆ ಎದ್ದಿತ್ತು. ಅದು ಸಚಿನ್‍ತೆಂಡೂಲ್ಕರ್‍ಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ. ಹಾಗೆಯೇ ತೆಂಡೂಲ್ಕರ್‍ಗೆ ಭಾರತ ರತ್ನ ಕೂಡ ನೀಡಲಾಯಿತು. ಅಂದಹಾಗೆ  ಅದು ಬೇರೇಯೇ ವಿಷಯ. ಆದರೆ ಅದೇ “ರತ್ನ”ವನ್ನು ಅಂಬೇಡ್ಕರ್‍ರವರಿಗೆ ಅವರು ಬದುಕಿದ್ದಾಗ ನೀಡಬಹುದಿತ್ತಲ್ಲ!

  ಹೌದು, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶ ಹಿಂದೆ ಬಿದ್ದಿದೆ. ಯಾವ ಉನ್ನತ ಪ್ರಶಸ್ತಿಯನ್ನು, ಪದವಿಯನ್ನು ಈಗ ಎಲ್ಲೆಂದರಲ್ಲಿ, ಯಾರಿಗೆಂದರವರಿಗೆ ನೀಡಲಾಗುತ್ತಿದೆಯೋ ಅಂತಹದ್ದೆ ಪದವಿಯನ್ನು, ಪ್ರಶಸ್ತಿಯನ್ನು ಆ ಕಾಲದಲ್ಲಿ  ಅಂಬೇಡ್ಕರರಿಗೆ ನಿರಾಕರಿಸಲಾಗಿದೆ ಆಥವಾ ನೀಡದೆ ವಂಚಿಸಲಾಗಿದೆ. ಹಾಗಂತ  ಅಂಬೇಡ್ಕರರನ್ನು ಆ ಎಲ್ಲಾ ಪ್ರಶಸ್ತಿಗಳು ಒಮ್ಮೆಲೇ ಪ್ರಪ್ರಥಮವಾಗಿಯೇ ಹಿಂಬಾಲಿಸಬೇಕಾಗಿತ್ತು ಎಂದಲ್ಲ. ಆದರೆ ಅವರ ಹೋರಾಟವನ್ನು, ಸಂವಿಧಾನದ ಮೂಲಕ ಅವರು ಈ ದೇಶಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಅಂತಹ ಪದವಿ ಪ್ರಶಸ್ತಿ ನೀಡಬಹುದಿತ್ತಲ್ಲ! ಅದೂ ಅವರಿಗಿಂತಲೂ ಅತ್ಯಂತ ತಳಮಟ್ಟದ ಅವರ ಮುಂದೆ ಏನೇನು  ಅಲ್ಲದವರಿಗೆ  ಅಂತಹ ಉನ್ನತ ಪ್ರಶಸ್ತಿ ನೀಡಿರುವಾಗ? ಯಾಕೆಂದರೆ ಉದಾಹರಣೆಗೆ ವಿಶ್ವೇಶ್ವರಯ್ಯನವರಿಗೆ ಈ ದೇಶದ  ಪ್ರಪ್ರಥಮ ಭಾರತÀರತ್ನ ಪ್ರಶಸ್ತಿ ನೀಡಲಾಯಿತು. ಆಶ್ಚರ್ಯಕರವೆಂದರೆ ಅಂಬೇಡ್ಕರರು ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ನೀರಾವರಿ  ಸಚಿವರಾಗಿದ್ದಾಗ ಒರಿಸ್ಸಾದ ದಾಮೋದರ ನದಿಯ ಪ್ರವಾಹಕ್ಕೆ ಸಂಬಂಧಿಸಿದಂತೆ ಅದೇ ವಿಶ್ವೇಶ್ವರಯ್ಯನವರು ನೀಡಿದ್ದ ವರದಿಯನ್ನು ಅಂಬೇಡ್ಕರರು ತಿರಸ್ಕರಿಸಿದ್ದರು! ಯಾಕೆಂದರೆ ಪ್ರವಾಹವನ್ನು ತಡೆಯಲು ಸೂಕ್ತ ಅಣೆಕಟ್ಟು ನಿರ್ಮಿಸಿ ಆ ನೀರನ್ನು ಕೃಷಿಗೆ, ಜನರ ಕುಡಿಯುವ ನೀರಿಗೆ, ಕೈಗಾರಿಕೆಗೆ ಬಳಸಬಹುದು ಎಂದು ಸಲಹೆ ನೀಡಬೇಕಾಗಿದ್ದ ವಿಶ್ವೇಶ್ವರಯ್ಯನವರು ಪ್ರವಾಹವನ್ನು ತಡೆಯಲು ನದಿಯ ಆ ನೀರನ್ನು ಸಂಪೂರ್ಣವಾಗಿ ಸಮುದ್ರಕ್ಕೆ ಹರಿಯಲು ಬಿಡಬೇಕು ಎಂದು ವರದಿ ನೀಡಿದ್ದರು! ಜನೋಪಯೋಗಿ ಅಲ್ಲದ ವಿಶ್ವೇಶ್ವರಯ್ಯನವರ ಆ ವರದಿಯನ್ನು ಅಂಬೇಡ್ಕರರು ಅಷ್ಟೆ ಸ್ಪೀಡಾಗಿ ಕಸದ ಬುಟ್ಟಿಗೆ ಎಸೆದಿದ್ದರು! ಬದಲಿಗೆ ಆ ನದಿಗೆ  ಹಿರಾಕುಡ್ ಬಳಿ ಅಣೇಕಟ್ಟು ನಿರ್ಮಿಸಲು ಬ್ರ್ರಿಟಿಷ್ ಸರ್ಕಾರಕ್ಕೆ ಸ್ವತಃ ಸಲಹೆ ನೀಡಿದ ಅಂಬೇಡ್ಕರರು  ಆ ಮೂಲಕ ಲಕ್ಷಾಂತರ ರೈತರಿಗೆ ಅನ್ನದಾತರಾದರು. ದುರಂತವೆಂದರೆ  ಜನರಿಗೆ ಉಪಯೋಗವಲ್ಲದ  ವರದಿ ನೀಡಿದ ವಿಶ್ವೇಶ್ವರಯ್ಯನವರಿಗೆ ಭಾರತರತ್ನ! ಆದರೆ ಜನೋಪಯೋಗಿ ಕಾರ್ಯ ಮಾಡಿದ ಅಂಬೇಡ್ಕರರಿಗೆ ಅಂತಹ ಯಾವುದೇ’ರತ್ನ’ವಿಲ್ಲ! ಕಡೇ ಪಕ್ಷ ‘ಪದ್ಮ’ ಪ್ರಶಸ್ತಿಯೂ ಇಲ್ಲ! ಜಾತಿವಾದಿ ಭಾರತ ಅಂಬೇಡ್ಕರರನ್ನು ಪ್ರಶಸ್ತಿಗಳಿಂದ, ಪದವಿಗಳಿಂದ  ಹೇಗೆ ವಂಚಿಸಿದೆ ಎಂಬುದಕ್ಕೆ  ಇದೊಂದು ಸಣ್ಣ ಉದಾಹರಣೆ.
 
  ಇರಲಿ, ಇನ್ನು ಸಂವಿಧಾನದ ಕಥೆಗೆ ಬರೋಣ. ನವೆಂಬರ್ 26, 1949 ರಂದು ಅಂಬೇಡ್ಕರರು ಈ ದೇಶಕ್ಕೆ ಸಂವಿಧಾನ ಅರ್ಪಿಸಿ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು. ಹಾಗೆಯೇ ಇಡೀ ದೇಶ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಗುರುತಿಸಿತು. ದುರಂತವೆಂದರೆ ಅಂತಹ ಸಂವಿಧಾನ ಶಿಲ್ಪಿಗೆ  ಯಾವುದಾದರೊಂದು  ಭಾರತದ ವಿವಿ  ತಕ್ಷಣ ಕರೆದು ಡಾಕ್ಟರೇಟೋ ಮತ್ತೊಂದೋ ನೀಡಿ ಗೌರಸಬೇಕಿತ್ತಲ್ಲವೇ? ಊಹ್ಞೂಂ! ಈ ದೇಶದ ಯಾವುಧೇ ವಿವಿಗಳು ಅದಕ್ಕೆ ಮುಂದೆ ಬರಲಿಲ್ಲ. ಆಶ್ಚರ್ಯಕರವೆಂದರೆ ಅಂಬೇಡ್ಕರರನ್ನು ಗೌರವಿಸುವ ಅಂತಹ ಕೆಲಸವನ್ನು ಪ್ರಪ್ರಥಮವಾಗಿ ಮಾಡಿದ್ದು ಒಂದು ವಿದೇಶಿ ವಿ.ವಿ! ಅಮೆರಿಕಾದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾನಿಲಯವೇ ಆ ವಿ.ವಿ!  ಏಕೆಂದರೆ ಅಮೆರಿಕಾದ ಕೊಲಂಬಿಯಾ ವಿ.ವಿ ಅಂಬೇೀಡ್ಕರರನ್ನು ಡಾಕ್ಟರೇಟ್ ಮೂಲಕ ಗೌರವಿಸಿದ ನಂತರವಷ್ಟೆ ಭಾರತದ ಏಕೈಕ ವಿವಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರರನ್ನು doctor of literature ಮೂಲಕ ಗೌರವಿಸಿದ್ದು!

  1952  ಜೂನ್ 1 ರಂದು ಅಂಬೇಡ್ಕರರಿಗೆ doctor of laws ನೀಡಿ ಗೌರವಿಸುತ್ತಾ ಅಮೆರಿಕಾದ ಕೊಲಂಬಿಯಾ ವಿವಿ  ಭಾರತದ ಸಂವಿಧಾನ ರಚನೆಗೆ ಸಂಬಧಿಸಿದಂತೆ ಅಂಬೇಡ್ಕರರ ಪರಿಶ್ರಮ, ಸಮಾಜ  ಸುಧಾರಣೆ, ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಅವರು ನಡೆಸಿದ ಹೋರಾಟ  ಇವುಗಳನ್ನು ಗುರುತಿಸಿ, ತನ್ನ ಆ ಅತ್ಯಮೂಲ್ಯ ಪದವಿಯ ಮೂಲಕ ಅವರನ್ನು ಗೌರವಿಸಿತು. ಒಂದರ್ಥದಲಿ ತನ್ನಲ್ಲಿಯೇ ಪಿ.ಎಚ್.ಡಿ. ಪಡೆದ(1917) “ಆ ವಿದ್ಯಾರ್ಥಿ”ಗೆ ತಾನೇ ‘ಡಾಕ್ಟರ್ ಆಫ್ ಲಾ’ ನೀಡುವ ಮೂಲಕ ಅಮೆರಿಕಾದ ಆ ವಿವಿ ತನಗೆ ತಾನೇ ಗೌರವಿಸಿಕೊಂಡಿತು! ಆ ಮೂಲಕ ಈ ದೇಶದ ಬಹುಕೋಟಿ ದಲಿತರ  ಭಾವನೆಗಳನ್ನು, ಮಾನವ ಹಕ್ಕುಗಳನ್ನು ಅಮೆರಿಕಾದ ಆ ವಿ.ವಿ ಎತ್ತಿಹಿಡಿಯಿತು. ಪ್ರಶ್ನೆ ಏನೆಂದರೆ ಭಾರತದ ವಿಶ್ವವಿದ್ಯಾನಿಲಯಗಳು? ಅದು ಬನಾರಸ್‍ನ ಹಿಂದೂ ವಿವಿ ಇರಬಹುದು, ನವದೆಹಲಿಯ JNU ಇರಬಹುದು, ನಮ್ಮ ವಿಶ್ವವಿಖ್ಯಾತ ಮೈಸೂರು ವಿವಿ ಇರಬಹುದು, ಇವೆಲ್ಲಾ? ಅಂದಹಾಗೆ ಇತ್ತೀಚೆಗೆ ಈ ವಿವಿಗಳಲ್ಲೆಲ್ಲಾ ಅಂಬೇಡ್ಕರ್ ಪೀಠಗಳು, ಸಂಶೋಧನಾ ಕೇದ್ರಗಳು ತಲೆ ಎತ್ತಿವೆ. ಆದರೆ ಅದು ಬಾಬಾಸಾಹೇಬರ ಮೇಲಿನ ಗೌರವದಿಂದಲ್ಲ! ಬದಲಿಗೆ ಯು.ಜಿ.ಸಿ ನೀಡುವ ಗ್ರ್ಯಾಂಟ್‍ನ ವ್ಯಾಮೋಹದಿಂದ ಎಂಬುದು ಸರ್ವವಿಧಿತ.
 
   ಇನ್ನು ಅಂಬೇಡ್ಕರರ ಹೆಸರನ್ನು ಈ ದೇಶದ ಪ್ರತಿಷ್ಠಿತ ವಿವಿಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ  ಇಡುವುದು ಇನ್ನೊಂದು ದೊಡ್ಡ ಕಥೆ. ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಮಾಯಾವತಿ ಅಲ್ಲಿಯ ಹಲವು ಯೂನಿವರ್ಸಿಟಿಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಅಂಬೇಡ್ಕರರ ಹೆಸರನ್ನು ಇಟ್ಟಿದ್ದಾರೆ. ಬರೀ ಅಂಬೇಡ್ಕರರಷ್ಟೆ ಅಲ್ಲ ಅವರ ಧರ್ಮಪತ್ನಿ ರಮಾಬಾಯಿ ಅಂಬೇಡ್ಕರ್, ಮಾರ್ಗದರ್ಶಕರಾದ ಜ್ಯೋತಿಬಾಫುಲೆ, ಶಾಹುಮಹಾರಾಜ್, ಪೆರಿಯಾರ್ ಇತ್ಯಾದಿ ದಾರ್ಶನಿಕರ ಹೆಸರನ್ನು ಮಾಯಾವತಿಯವರು ಒಂದಲ್ಲ ಎರಡಲ್ಲ  ಹಲವು ವಿವಿಗಳಿಗೆ ಇಟ್ಟಿದ್ದಾರೆ. ದುರಂತವೆಂದರೆ ವಿವಿಯೊಂದಕ್ಕೆ ಹೆಸರಿಡುವ ಇದೇ ಕೆಲಸಕ್ಕೆ  ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ತೆಗೆದುಕೊಡಿತೆಂದರೆ, ಬರೋಬ್ಬರಿ 20 ವರ್ಷಗಳು! ಅದೂ ಸುಮ್ಮನೇ ಅಲ್ಲ! 1978ರ ಜುಲೈನಲ್ಲಿ ಮಹಾರಾಷ್ಟ್ರದ ಔರಂಗಾಬಾದ್‍ನ ಮರಾಟವಾಡ ಎಂಬ ವಿವಿಗೆ “ಡಾ.ಬಿ.ಆರ್.ಅಂಬೇಡ್ಕರ್ ವಿವಿ” ಎಂದು ಹೆಸರಿಡುತ್ತೇವೆ ಎಂದು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದು ಜಾರಿಯಾದದ್ದೂ 1994 ಜನವರಿ 14 ರಂದು! ಅಂದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡುವ ತನ್ನ ನಿರ್ಣಯ ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬರೊಬ್ಬರಿ 16 ವರ್ಷ ಬೇಕಾಯಿತು! ಅದೂ ಸುಮ್ಮನೇ ಅಲ್ಲ. ಅದರದೊಂದು ದುರಂತ ಕಥೆ. ರಕ್ತ, ಹತ್ಯೆ, ಆತ್ಮಹತ್ಯೆ, ಆತ್ಮಾಹುತಿ, ಪ್ರತಿಭಟನೆ ಎಂದು ಮುಗ್ಧ ದಲಿತರು ಅದರಲ್ಲೂ ದಲಿತ ಹೆಣ್ಣು ಮಕ್ಕಳು ತಮ್ಮ ಪ್ರಾಣವನ್ನೇ ಬಲಿಕೊಟ್ಟು ನಡೆಸಿದ ಹೋರಾಟವದು.
 
   ಒಂದಷ್ಟು ಘಟನೆಗಳನ್ನು ಹೇಳುವುದಾದರೆ, 1993 ನವೆಂಬರ್ ತಿಂಗಳಿನಲ್ಲಿ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತ ಗೌತಮ್ ವಾಗ್ಮೇರ್ ಎಂಬ ಯುವಕ ನಾಂದೇಡ್ ಎಂಬಲ್ಲಿ ಮರಾಠವಾಡ ವಿವಿಗೆ ಅಂಬೇಡ್ಕರ್ ಹೆಸರಿಡಬೇಕೆಂದು ಹಾಡುಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ. ಅದೇ ಡಿಸೆಂಬರ್‍ನಲ್ಲಿ ಶ್ರೀಮತಿ ಸುಹಾಸಿನಿ ಭನ್ಸೋದ್ ಎಂಬುವವರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡರು! ಇನ್ನು ಇದಕ್ಕಿಂತಲೂ ಹೃದಯ ವಿದ್ರಾವಕ ಘಟನೆ ಎಂದರೆ ಪ್ರತಿಭಾ ಎಂಬ 18 ವರ್óದ  ಬಾಲೆಯೋಬ್ಬಳು “ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂದು ಹೆಸರಿಡಬೇಕು. ಅದನ್ನು ಜಾರಿಗೋಳಿಸದ ಸರ್ಕಾರದ ನಿರ್ಧಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು death note ಬರೆದು ವಿಷ ಕುಡಿದು ಪ್ರಾಣ ಕಳೆದು ಕೊಂಡಳು! ಒಟ್ಟಾರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಮಹಾರಾಷ್ಟ್ರದ ಆ ಕಾಂಗ್ರೆಸ್ ಸಕಾರಕ್ಕೆ ಮುಗ್ಧ ಹೆಣ್ಣು ಮಗಳೊಬ್ಬಳ ಜೀವವೇ ಬೇಕಾಯಿತು! ಇದಕ್ಕಿಂತಲೂ ವಿಚಿತ್ರವಾದ ಘಟನೆ 1994ರಲ್ಲಿ ನಡೆದುದು! ಅದೇನೆಂದರೆ ಕರ್ನಾಟಕದ ಧಾರವಾಡ ವಿವಿಯ ಅಂತಿಮ ರಾಜ್ಯಶಾಸ್ತ್ರ ಎಂ.ಎ. ವಿದ್ಯಾರ್ಥಿ ಅನಂತ್ ಕುಮಾರ್ ಮರಾಠವಾಡ ವಿವಿಗೆ ಅಂಬೇಡ್ಕರ್ ವಿವಿ ಎಂಬ ಹೆಸರಿಡಬೇಕು  ಹೋರಾಟದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್‍ಗೆ ಸೇರಿದ ಮದ್ರಾಸಿನಿಂದ ಕ್ಯಾಲಿಕಟ್‍ಗೆ ಹೊರಟಿದ್ದ ವಿಮಾನ (ಸಂಖ್ಯೆ K995)ನ್ನು ಅಪಹರಿಸಿದ! ಹಾಗೆಯೇ ಮರಾಠವಾಡ ಆ ವಿವಿಗೆ ಅಂಬೇಡ್ಕರ್ ವಿವಿ ಎಂದು ತಕ್ಷಣವೇ ನಾಮಕರಣ ಮಾಡದಿದ್ದರೆ 55 ಜನರಿದ್ದ ಆ ವಿಮಾನವನ್ನು ‘ಪ್ಲಾಸ್ಟಿಕ್ ಬಾಂಬ್’ನಿಂದ ಉಡಾಯಿಸುವುದಾಗಿ ಬೆದರಿಕೆಯನ್ನೂ ಒಡ್ಡಿದ! ಅಂತಿಮವಾಗಿ ಇಂತಹ ಆತ್ಮಹತ್ಯೆ, ಆತ್ಮಾಹುತಿ, ವಿಮಾನ ಹೈಜಾಕ್ ಇತ್ಯಾದಿ ಪ್ರಕರಣಗಳ ನಂತರ 1994 ಜನವರಿ 14 ರಂದು ಮರಾಠವಾಡ ವಿವಿಗೆ “ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ’ ಎಂಬ ಅರ್ಥವಿಲ್ಲದ ಹೆಸರನ್ನು ಇಟ್ಟಿತು ಮಹಾರಾಷ್ಟ್ರದ ಆ ಕಾಂಗ್ರೆಸ್ ಸರ್ಕಾರ. ಅರ್ಥವಿಲ್ಲದ್ದು, ಏಕೆಂದರೆ ‘ಮರಾಠವಾಢ’ ಎಂಬ ವಿವಿಯ ಆ ಹಳೆಯ ಹೆಸರಿನ ಜೊತೆ “ಬಾಬಾಸಾಹೇಬ್ ಅಂಬೇಡ್ಕರ್” ಹೆಸರನ್ನು ಸೇರಿಸಿದ್ದು! ಈ ನಿಟ್ಟಿನಲಿ ಆ ವಿವಿಗೆ ಬರೀ ಅಂಬೇಡ್ಕÀರ್ ಹೆಸರಿಡಲು ಮಹಾರಾಷ್ಟ್ರದ ಆ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ!
   
  ಈ ದೇಶ ಅಂಬೇಡ್ಕರರನ್ನು ಗೌರವಿಸುವಲ್ಲಿ ಹೇಗೆ ಸೋತಿದೆ ಅಥವಾ ದಲಿತರನ್ನು ಹೇಗೆಲ್ಲಾ ನೋಯಿಸಿದೆ  ಎಂಬುದಕ್ಕೆ “ಮರಾಠವಾಡ ವಿವಿ”ಯ ಆ ದುರಂತ ಕಥೆಯೇ ಸಾಕ್ಷಿ. ದುರಂತ ಏಕೆಂದರೆ ಇನ್ನೆಂದೂ ಕೂಡ ಯಾವುದೇ ದಲಿತನು ಸರ್ಕಾರಕ್ಕೆ ವಿವಿಗಳಿಗೆ ಅಂಬೇಡ್ಕರ್ ಹೆಸರನ್ನು ಇಡಿ ಎಂದು ಎಂದಿಗೂ ಒತ್ತಾಯ ಮಾಡಲಾರರು ಅಷ್ಟೊಂದು ಭಯಾನಕ ದುರಂತ ಅದು ಅಂದಹಾಗೆ ಈ ಕತೆಯಲ್ಲಿ ಪದೇಪದೇ ಕಾಂಗ್ರೆಸ್ ಹೆಸರನ್ನೇ ಪ್ರಸ್ತಾಪಿಸಬೇಕಾಯಿತು ಯಾಕೆಂದರೆ ಈ ದೇಶವನ್ನು, ಈ ದೇಶದ ರಾಜ್ಯಗಳನ್ನು ಬಹುತೇಕ ಆಳಿರುವುದು ಕಾಂಗ್ರೆಸ್ ಪಕ್ಷ ತಾನೇ? ಈ ನಿಟ್ಟಿನಲಿ ಅಂಬೇಡ್ಕರರನ್ನು ಈ ದೇಶ ಗೌರವಿಸಿಲ್ಲವೆಂದರೆ ಅದಕ್ಕೆ ಆ ಪಕ್ಷವೇ ನೇರ ಕಾರಣ.
 
   ಕಾಂಗ್ರೆಸ್‍ನ ಈ ವಂಚನೆಗೆ ಮತ್ತೊಂದು ಉದಾಹರಣೆ ಪಾರ್ಲಿಮೆಂಟ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವ ಪ್ರಕರಣ. ಅದೂ ಅಂದರೆ ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟದ್ದು ಯಾರ  ಕಾಲದಲ್ಲಿ ಎಂದಿರಿ? ವಿ.ಪಿ.ಸಿಂಗ್‍ರ ಕಾಲದಲ್ಲಿ. ವಿ.ಪಿ.ಸಿಂಗ್‍ರವರು 1990 ಏಪ್ರಿಲ್ 12 ರಂದು ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಪ್ರಶ್ನೆ ಏನೆಂದರೆ  ಕಾಂಗ್ರೆಸ್‍ನ ನೆಹರೂ, ಅವರ ಪುತ್ರಿ ಇಂದಿರಾ, ರಾಜೀವ್ ಇವರೆಲ್ಲರೂ ಅಲ್ಲಿಯವರೆಗೆ ಈ ದೇಶವನ್ನು ಬರೋಬ್ಬರಿ 43 ವರ್ಷ ಆಳಿದ್ದರೂ, ಪ್ರತಿವಷರ್À ಅಂಬೇಡ್ಕರ್ ಜಯಂತಿ,  ಅಂಬೇಡ್ಕರರ ಪರಿನಿರ್ವಾಣ ದಿನಾಚರಣೆ  ಇತ್ಯಾದಿ ಬರುತ್ತಲೇ ಇದ್ದರೂ  ಕಾಂಗ್ರೆಸ್‍ನ ಆ ಪ್ರಧಾನಿಗಳಿಗೆ ಅಂಬೇಡ್ಕರರನ್ನು ಸೂಕ್ತವಾಗಿ ಗೌರವಿಸಬೇಕು ಎಂದೆನಿಸಲೇ ಇಲ್ಲ!  ಅಂದಹಾಗೆ ಅಂಬೇಡ್ಕರರಿಗೆ  ಭಾರತರತ್ನ ನೀಡಿದ್ದು ಯಾರ ಕಾಲದಲ್ಲಿ ಎಂದಿರಿ? ಅದೂ ಕೂಡ ವಿ.ಪಿ. ಸಿಂಗ್‍ರ ಕಾಲದಲ್ಲೇ!
 
   ಅದೇನೆ ಇರಲಿ, ಅಂಬೇಡ್ಕರರನ್ನು ಗೌರವಿಸುವಲ್ಲಿ ಈ ದೇಶದ ಸರ್ಕಾರಗಳು ಸೋತಿವೆ. ಕಾಂಗ್ರೆಸ್ಸಂತೂ ದಲಿತರ ಓಟುಗಳನ್ನು ಇಡಿಯಾಗಿ ನುಂಗಿದೆ. ಆದರೆ ವಿವಿಯೊಂದಕ್ಕೆ ಅಂಬೇಡ್ಕರ್ ಹೆಸರಿಡಲು ಪ್ರಾಣಗಳನ್ನು, ಅದರಲ್ಲೂ ಮುಗ್ಧ ಹೆಣ್ಣು ಮಕ್ಕಳ ಜೀವಗಳನ್ನು ಅದು ಬಲಿ ತೆಗದುಕೊಂಡಿದೆ.

   ಆಶ್ಚರ್ಯಕರವೆಂದರೆ ವಿದೇಶಿ ರಾಷ್ಟ್ರಗಳಿಗೆ ಅಂಬೇಡ್ಕರ್ ಬಗ್ಗೆ ಇರುವ ಗೌರವ ಈ ದೇಶದ ಜಾತೀಯ ಮನಸ್ಸುಗಳಿಗೆ ಇಲ್ಲದಿರುವುದು. ಉದಾಹರಣೆಗೆ ಡಿಸೆಂಬರ್ 6, 1991 ರಂದು ಇಂಗ್ಲೆಂಡ್‍ನ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಮಿತಿಯು  ಲಂಡನ್ನಿನಲ್ಲಿ ಅಂಬೇಡ್ಕರರು ವಾಸಿಸಿದ್ದ “ಲಂಡನ್ನಿನ  ಹ್ಯಾಂಪ್‍ಸ್ಟಡ್‍ನ  ಕಿಂಗ್ ಹೆನ್ರಿ ರಸ್ತೆಯ 10 ನೇ ನಂಬರಿನ ಗೃಹ”ವೊಂದರಲ್ಲಿ  ಅಂಬೇಡ್ಕರ್ ಸ್ಮರಣ ಫಲಕವೊಂದನ್ನು ನಿರ್ಮಿಸಿ ಆ ಫಲಕದ ಮೇಲೆ ಹೀಗೆ ಬರೆಸಿದೆ “DR.BHIMRAO RAMJI AMBEDKAR, INDIAN CRUSADER FOR SOCIAL JUSTICE  LIVED HERE 1921-1922”.      
       ಅಂಬೇಡ್ಕರರನ್ನು ಗೌರವಿಸುವುದೆಂದರೆ ಹೀಗೆ! ಬರೀ ಲಂಡನ್ ಒಂದೇ ಅಲ್ಲಾ, ಜಪಾನ್, ಅಮೆರಿಕಾ,  ಹಂಗೇರಿ, ಅದಷ್ಟೆ ಅಲ್ಲ ಸ್ವತಃ ಪಾಕಿಸ್ತಾನ ಕೂಡ  ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಭಾರತ?
   
   ಈ ದೇಶದ ಜಾತೀಯ ಮನಸ್ಸುಗಳು, ಹಿಂದುತ್ವದ ಕೊಂಪೆಯಲಿ ಒದ್ದಾಡುತ್ತಿರುವ ಹುಳಗಳು  ಅಸ್ಪøಶ್ಯ ಕುಲದಲ್ಲಿ ಹುಟ್ಟಿದ ಈ ದೇಶದ ಸಂವಿಧಾನ ಶಿಲ್ಪಿಗೆ, ಸಾಮಾಜಿಕ ನ್ಯಾಯದ ಧೃವತಾರೆಗೆ ಯಾವ ಪರಿಯ ಗೌರವ, ಘನತೆ ನೀಡಿದೆ, ನೀಡುತ್ತಿದೆ ಎಂಬುದಕ್ಕೆ “ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ  ಬಿದ್ದ ಭಾರತ” ಎಂಬ ಈ ಕಥೆ ಹೇಳಬೇಕಾಯಿತಷ್ಟೆ.
                     

Tuesday, 17 June 2014

ಅಂಬೇಡ್ಕರರ ಸ್ವಾಭಿಮಾನಿ ರಾಜಕಾರಣ 

                        -ರಘೋತ್ತಮ ಹೊ.ಬ


     ಇತ್ತೀಚೆಗೆ ಕೆಲವು ಸ್ವಾರ್ಥಪರ ದಲಿತ ರಾಜಕಾರಣಿಗಳಿಂದ  ಪ್ರಚಾರವೊಂದು ನಡೆಯುತ್ತಿದೆ. ಅಂಬೇಡ್ಕರರು ರಾಜಕಾರಣಿಯಲ್ಲ, ಧಾರ್ಮಿಕ ನಾಯಕ! ಆಧ್ಯಾತ್ಮಿಕ ನಾಯಕ!!  ಎಂಬುದೇ ಆ ಪ್ರಚಾರ. ಅರ್ಥಾತ್ ಅಪಪ್ರಚಾರ. ಅಂಬೇಡ್ಕರ್ ಧಾರ್ಮಿಕ ನಾಯಕರು ಎಂದರೇನು? ಅದು ಇನ್ನೂ ಶ್ರೇಷ್ಠವಲ್ಲವೇ? ಎಂದು ಒಂದಷ್ಟು ಮಂದಿ ಖುಷಿಯಾಗಬಹುದು. ಆದರೆ? ಅಂತಹ ಖುಷಿಯಲ್ಲಿ ಅಂಬೇಡ್ಕರರಂತಹ ನೈಜ ಪ್ರಜಾಪ್ರಭುತ್ವವಾದಿಯನ್ನೇ, ಅಂತಹ ಪ್ರಜಾಪ್ರಭುತ್ವದ ಆಧಾರದ ಮೇಲೆ ಈ ದೇಶದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕೆಂದವರನ್ನೆ ಬಲಿಕೊಟ್ಟರೆ? ತಮ್ಮ ಸ್ವಾರ್ಥಕ್ಕೆ ಅಂಬೇಡ್ಕರ್‍ರವರ ವಿಚಾರಗಳನ್ನು, ಅವರ ಒಟ್ಟಾರೆ ಸಮಗ್ರ ಚಿಂತನೆಯನ್ನು, ಹೋರಾಟವನ್ನು ಬಲಿಕೊಟ್ಟರೆ? ಅಂಬೇಡ್ಕರ್ ಎಂಬ ರಾಜಕಾರಣಿಯನ್ನು ಆಧ್ಯಾತ್ಮಿಕ ನಾಯಕ ಎನ್ನುವುದರಿಂದ ಆಗುತ್ತಿರುವುದೇ ಇದು. ತಮ್ಮ ಸ್ವಾರ್ಥಕ್ಕೆ ಅಂಬೇಡ್ಕರರ ಸಿದ್ಧಾಂತಗಳ ಬಲಿ. ಒಟ್ಟಾರೆ ಅಂಬೇಡ್ಕರರ ಹೋರಾಟದ ಕೆಚ್ಚಿನ ಬೆನ್ನೆಲುಬು ಮುರಿಯುವಂಥ ಹೀನ ಕೃತ್ಯ.
 
   ಹಾಗಿದ್ದರೆ ಅಂಬೇಡ್ಕರರ ಹೋರಾಟದ ನೈಜ ತಿರುಳಾದರೂ ಏನು? ಉತ್ತರ: ರಾಜಕೀಯ. ರಾಜಕೀಯವೆಂದರೆ ಅದು ಈಗಿನ third class politician ಗಳು ಮಾಡುವಂಥದ್ದಲ್ಲ. ಹೆಂಡ ಕೊಟ್ಟು, ಸಾರಾಯಿ ಕೊಟ್ಟು, ಓಟು ಕಿತ್ತು ಗೆದ್ದು ಹೈಕಮಾಂಡ್‍ಗಳ ತಲೆ ಹಿಡಿಯುವಂತಹದ್ದಲ್ಲ.  ಸ್ವಾಭಿಮಾನದ್ದು. ಅಪ್ಪನಿಗುಟ್ಟಿದ್ದು ಅಂತಾರಲ್ಲ ಅಂತಹದ್ದು. ಬಹುಶಃ ಅಂತಹ ರಾಜಕಾರಣ ಈ ದೇಶದಲ್ಲಿ ಹಿಂದೆ ಯಾರೂ ಮಾಡಿರಲಾರರು. ಮುಂದೆ ಯಾರೂ ಕೂಡ ಮಾಡಲಾರರು. ಸಾಕ್ಷಾತ್ ಮಹಾತ್ಮ ಗಾಂಧೀಜಿ ಎನಿಸಿಕೊಂಡ ಗಾಂಧೀಜಿಯನ್ನೇ ಅಂತಹ ಹೋರಾಟದಲ್ಲಿ ಅಂದರೆ  ರಾಜಕೀಯ ಹೋರಾಟದಲ್ಲಿ ಸೋಲಿಸಿದ  ಕೀರ್ತಿ ಅಂಬೇಡ್ಕರರದ್ದು. ಅಂತಹ king of combative politics ಅನ್ನು ಈ ದೇಶದ ಕೆಲ ರಾಜಕಾರಣಿಗಳು, ವಿಶೇಷವಾಗಿ ಕೆಲ ಸ್ವಾರ್ಥಪರ ದಲಿತ  ರಾಜಕಾರಣಿಗಳು ‘ಅಂಬೇಡ್ಕರ್ ರಾಜಕಾರಣಿಯೇ ಅಲ್ಲ’ ಎಂದರೆ? ಬಹುಶಃ ಅದು ಸೂರ್ಯನಲ್ಲಿ ಬೆಳಕೇ ಇಲ್ಲ ಎಂದಂತೆ. ಚಂದ್ರನಲ್ಲಿ ಕಾಂತಿಯೇ ಇಲ್ಲ ಎಂದಂತೆ.
     
    ಹಾಗಾದರೆ ಅವರ ಸ್ವಾಭಿಮಾನದ ರಾಜಕಾರಣದ ಝಲಕ್? ಸ್ವತಃ ಅಂಬೇಡ್ಕರರೇ ಹೇಳುವ ಹಾಗೆ ಅವರು ಎಂ.ಎ, ಪಿ.ಎಚ್‍ಡಿ, ಡಿ.ಎಸ್ಸಿ, ಪದವಿಗಳನ್ನು ಮುಗಿಸಿ ಬಂದಾಗ ಈ ದೇಶದ ಪ್ರಮುಖ ಯೂನಿವರ್ಸಿಟಿಗಳು ಅವರಿಗೆ  professor ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಆಹ್ವಾನಿಸಿದವು. ಆಗಿನ ಕಾಲಕ್ಕೆ ಸಾವಿರವೋ ಹತ್ತು ಸಾವಿರವೋ ಸಂಬಳ ಪಡೆದು ಅಂಬೇಡ್ಕರರು ಖುಷಿಯಾಗಿ ತಮ್ಮ family ಜೊತೆ ಕಾರು ಬಂಗಲೆ ಎಂದು ಐಷಾರಾಮಿ ಜೀವನ ನಡೆಸಬಹುದಿತ್ತು. ಒಂದಲ್ಲ, ಎರಡಲ್ಲ, ಮೂರು ಮನೆ ಕಟ್ಟಿಕೊಂಡು ಒಂದಷ್ಟು ವಿವಿಗಳಿಗೆ ಕುಲಪತಿಯೋ ಮತ್ತೊಂದೋ ಆಗಿ ಹಾಯಾಗಿರಬಹುದಿತ್ತು. ಆದರೆ? ಕೋಟು ಹಾಕಿಕೊಂಡು ಪಾಠ ಮಾಡಬೇಕಾದ ಪ್ರೊಫೆಸರ್ ಅದೇ ಕೋಟು ಹಾಕಿಕೊಂಡು ಧಿಕ್ಕಾರ ಎಂದು ನಿಂತದ್ದು ಬೀದಿಯಲ್ಲಿ! ತನ್ನ ಜನರ ಹೀನ ಸ್ಥಿತಿ ಕಂಡು ಅವರ ಉದ್ಧಾರಕ್ಕೆ ಪಣ ತೊಟ್ಟು ಧರಣಿ ಕುಳಿತದ್ದು ಈ ದೇಶದ ಕೆರೆ, ಕಟ್ಟೆ, ದೇವಸ್ಥಾನ, ಶಾಲೆಗಳೆಂಬ ಸಾರ್ವಜನಿಕ ಸ್ಥಳಗಳಲ್ಲಿ.
     
    ಸ್ವಂತ ಭಾಷೆಯನ್ನು ಓದಲು ಬರೆಯಲು ಬಾರದವರಿಗೆ ಇಂಗ್ಲೀಷು, ಫ್ರೆಂಚು, ಪಾರ್ಸಿ, ಮರಾಠಿ, ಹಿಂದಿ ಇತ್ಯಾದಿ ಭಾಷೆಗಳನ್ನು ಕಲಿತು ಬ್ರಿಟೀಷ್ ಕಮೀಷನ್‍ಗಳ ಮುಂದೆ, ಈ ದೇಶದ ಪಟ್ಟಭದ್ರ ಹಿಂದೂಗಳ ಮುಂದೆ 30 ಕೋಟಿ ದಲಿತರ ಪರವಾಗಿ ಒಂದೇ ದನಿಯಾಗಿ ವಿವಿಧ ವೇದಿಕೆಗಳಲ್ಲಿ, ಅಸೆಂಬ್ಲಿ, ಪಾರ್ಲಿಮೆಂಟುಗಳಲ್ಲಿ ಕೂಗಾಡಿ ಹೋರಾಡಿ ಸಹಸ್ರಾರು ವರ್ಷಗಳಿಂದ   ಕಳೆದುಕೊಂಡಿದ್ದ ಮಾನ ಮರ್ಯಾದೆ ಆಸ್ತಿ ಆಧಿಕಾರ ಎಲ್ಲವನ್ನು ತಮ್ಮ 40 ವರ್ಷಗಳ ರಾಜಕೀಯ  ಜೀವನದಲ್ಲಿ ತಂದು ಕೊಟ್ಟವರು ಅಂಬೇಡ್ಕರರು.(ಅಂಬೇಡ್ಕರರು ಎಂದು ಹೆಸರೇ ಹೇಳಬೇಕಾಗಿದೆ. ಏಕೆಂದರೆ ಅವರು ಎಂದಾಕ್ಷಣ ಬೇರೆಯವರು ಎಂದೇ ತಪ್ಪು ತಿಳಿದುಬಿಡುವ, ತಿಳಿಸಿಬಿಡುವ ಅಪಾಯ ಇದೆ! ವಿಶೇಷವಾಗಿ ಸ್ವಾರ್ಥಪರ ದಲಿತ ರಾಜಕಾರಣಿಗಳಿಂದ).ಇಂತಹ ತಮ್ಮ ರಾಜಕೀಯ ಹೋರಾಟವನ್ನು ಅಂಬೇಡ್ಕರರು ರಾಜಕೀಯ ಪಕ್ಷಗಳ ಮೂಲಕವೇ ಮಾಡಿರಬೇಕಲ್ಲವೆ? ಹೌದು, ರಾಜಕಾರಣಿ ಎಂದಾಕ್ಷಣ ರಾಜಕೀಯ ಪಕ್ಷ ಬೇಕೆಬೇಕು.  ಏಕೆಂದರೆ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಲಕ್ಷಣ. ಅದಕ್ಕೋಸ್ಕರ ಆ ಕಾಲದಲ್ಲಿ ಅಂಬೇಡ್ಕರರು  ಸ್ಥಾಪಿಸಿದ್ದು ಒಂದಲ್ಲ ಎರಡಲ್ಲ ಮೂರು ರಾಜಕೀಯ ಪಕ್ಷಗಳನ್ನು. I.L.P(Independent Labour Party), S.C.F(Scheduled Caste Federation), R.P.I(Republican Party of India).ಎಂಬುವುವೇ ಆ ಮೂರು ರಾಜಕೀಯ ಪಕ್ಷಗಳು.
 
    ಭಾರತೀಯ ರಾಜಕಾರಣ ಎಂದಾಕ್ಷಣ ಕಾಂಗ್ರೆಸ್ ಎಂದು  ಗಿಳಿಪಾಠ ಹೇಳುವವರಿಗೆ ಅಂಬೇಡ್ಕರರ ಈ ಸ್ವಾಭಿಮಾನಿ ಹಿನ್ನಲೆಯ ರಾಜಕೀಯ ಪಕ್ಷಗಳು ಮತ್ತು ಅದರ ಮೂಲಕ ಅವರು ಎದುರಿಸಿದ ಚುನಾವಣೆಗಳು ಗೊತ್ತಿಲ್ಲದಿರಬಹುದು. ಆದರೆ ಇತಿಹಾಸ ಇತಿಹಾಸವೇ ಅಲ್ಲವೆ? ಯಾಕೆ ಅಂಬೇಡ್ಕರರು ಹೇಳುವ ಹಾಗೆ  ಕೊಂದವ (ಬೇಟೆಗಾರ) ಹೇಳಿದ್ದೆ ಮಾತ್ರ ಇತಿಹಾಸವೆ? ಆ ಬೇಟೆಗಾರನಿಂದ ಹತನಾದ  ಸಿಂಹಕ್ಕೆ ಯಾವುದೇ ಇತಿಹಾಸವಿಲ್ಲವೆ? ಸಿಂಹಗಳ ಬಾಯಿಯಿಂದಲೂ ಇತಿಹಾಸ ಹೇಳಿಸುವ ಅಥವಾ ಇತಿಹಾಸ ಬರೆಸುವ ತನ್ಮೂಲಕ ಬೇಟೆಗಾರ(ಹಿಂದೂಗಳು)ನ ಸಂಚನ್ನು ವಿಫಲಗೊಳಿಸುವ ಕೆಲಸವನ್ನು ಇಂದಿನ ದಲಿತರು ವಿಶೇಷವಾಗಿ ಅಂಬೇಡ್ಕರ್‍ವಾದಿಗಳು ಮಾಡಬೇಕಾಗಿದೆ.

   ಸ್ವತಂತ್ರಪೂರ್ವ ನಡೆದಿರುವ ವಿವಿಧ ಚುನಾವಣೆಗಳನ್ನು ಅಂಬೇಡ್ಕರರು I.L.P., S.C.F., ವತಿಯಿಂದ ಸ್ಪರ್ಧಿಸಿದ್ದಾರೆ. ಅದೂ S.C.F ನ ವತಿಯಲ್ಲಿ ಅವರು ಸ್ಪರ್ಧಿಸಿದ್ದು ಆನೆ ಗುರುತಿನ ಮೂಲಕ. ‘ಆನೆ’ ಎಂದಾಕ್ಷಣ ಈಗಿನ ಬಿಎಸ್‍ಪಿ ಪಕ್ಷವನ್ನು ಕಲ್ಪಿಸಿಕೊಳ್ಳುವುದು ಬೇಡ. ಹೆಚ್ಚೆಂದರೆ ಅಂಬೇಡ್ಕರ್‍ರವರು ‘ಆನೆ’ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದರೆಂಬ ಗೌರವಕ್ಕೆ ಆ ಪಕ್ಷದ ಸಂಸ್ಥಾಪಕರಾದ ಮಾನ್ಯ ಕಾನ್ಷೀರಾಂರವರು  ಆನೆ ಚಿಹ್ನೆಯನ್ನು ತಮ್ಮ ಪಕ್ಷದ ಚಿಹ್ನೆಯಾಗಿಸಿಕೊಂಡಿರಬಹುದಷ್ಟೆ. ಅಂದಹಾಗೆ  ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್‍ರವರು ಆ ಚುನಾವಣೆಗಳಲ್ಲಿ ದೇಶದಾದ್ಯಂತ ಪ್ರಚಾರವನ್ನು ಕೂಡ ಮಾಡಿದ್ದಾರೆ. ಲಕ್ನೋ, ಪಂಜಾಬ್, ಬಂಗಾಳ, ಮಧ್ಯಪ್ರದೇಶ ಹೀಗೆ ವಿವಿದೆಡೆ ಅವರು ಮಾಡಿರುವ  ಚುನಾವಣಾ ಭಾಷಣಗಳು ಇತಿಹಾಸದಲ್ಲಿ ದಾಖಲಾಗಿವೆ.
 
   ಹಾಗೆ ರಾಜಕೀಯ ಎಂದಾಕ್ಷಣ ಬೇರೆ ರಾಜಕೀಯ ಪಕ್ಷಗಳನ್ನು ಟೀಕಿಸಿರಬೇಕಲ್ಲವೇ? ಹೌದು, ಅಂಬೇಡ್ಕರರು ಜೀವನದುದ್ದಕ್ಕೂ  ಕಾಂಗ್ರೆಸ್ ಪಕ್ಷವನ್ನು ಗುಮ್ಮನಂತೆ ಕಾಡಿದ್ದಾರೆ. ಕಮ್ಯುನಿಸ್ಟರನ್ನು ಹೀನಾಯವಾಗಿ ಹಂಗಿಸಿದ್ದಾರೆ. ಹಿಂದೂ ಮಹಾಸಭಾ(ಇಂದಿನ ಬಿಜೆಪಿ)ಯನ್ನು ಕೂಡ ಉಗ್ರವಾಗಿ ಟೀಕಿಸಿದ್ದಾರೆ. ಅಂದಹಾಗೆ ಗಾಂಧೀಜಿಯವರನ್ನು ತಮ್ಮ ಜೀವನದುದ್ದಕ್ಕೂ ಅವರು ಕಾಡಿರುವ ಪರಿ ಈ ದೇಶದ ಇತಿಹಾಸ ಒಟ್ಟಾರೆ ಇಡೀ ಪ್ರಪಂಚದ ಇತಿಹಾಸ ಇನ್ನು ಜನ್ಮ ಜನ್ಮಾಂತರಕ್ಕೂ ನೆನೆಸಿಕೊಳ್ಳುವಂತಹದ್ದು. ಈಗಿನ ರಾಜಕಾರಣಿಗಳು ಪರಸ್ಪರ ಟೀಕಿಸುವುದೇನು ಬಂತು? ಅಂಬೇಡ್ಕರ್ ಗಾಂಧೀಜಿಯವರನ್ನು ಆಗ ಟೀಕಿಸಿದ್ದಾರಲ್ಲ ಅದು ರಾಜಕೀಯ. ಅವರ ವಿರುದ್ಧ “what congress and Gandhi have done to untouchables?”ಎಂದು ಪುಸ್ತಕ ಬರೆದು ಪ್ರಕಟಿಸಿದ್ದಾರಲ್ಲಾ ಅದು ರಾಜಕೀಯ. ದೇವೇಗೌಡರು ಆಗಾಗ ಪುಸ್ತಕ ಬರೆಯುತ್ತಾರಲ್ಲ ಅದಲ್ಲ. ಈವಾಗ ಏನೋ ನೆಟ್ ಇದೆ. ಕಂಪ್ಯೂಟರ್ ಇದೆ. ಫ್ಯಾಕ್ಸ್, ಟಿವಿ, ಮೊಬೈಲ್ ಸಮೂಹ ಮಾಧ್ಯಮಗಳ ಬರಪೂರ ಬೆಂಬಲವೇ ಇದೆ. ಆದರೆ ಆಗ ಅಂಬೇಡ್ಕರರಿಗೆ ಏನಿತ್ತು? ನಿಜ,  ಗಾಂಧೀಜಿಯವರಿಗೆ ಏನಿತ್ತು ಎಂದು ಕೇಳಬಹುದು.  ಆದರೆ ಅವರಿಗೆ  ಸಮಸ್ತ ಹಿಂದೂಗಳ ಬೆಂಬಲವಿತ್ತು! ಆದರೆ ಅಂಬೇಡ್ಕರರಿಗೆ? ಎಷ್ಟೋ ಸಂದರ್ಭದಲ್ಲಿ ಅಂಬೇಡ್ಕರರು ದಲಿತರ ಪರ  ಹೋರಾಡುತ್ತಿದ್ದಾಗಲೂ ಕೂಡ ಅವರು ದಲಿತರ ವಿರುದ್ಧವೇ ಹೋರಾಡುತ್ತಿದ್ದಾರೆ, ಗಾಂಧೀಜಿಯವರೇ ನಮ್ಮ ಪರ  ಹೋರಾಡುತ್ತಿರುವುದು ಎಂದು ಈ ದೇಶದ ಅಜ್ಞಾನಿ ದಲಿತರು ಅಂದು ಕೊಂಡದ್ದು ಉಂಟು!  ವಿಶೇಷವಾಗಿ ಪೂನಾ ಒಪ್ಪಂದದ ಸಂಧರ್ಭದಲ್ಲಿ. ಅಂದಹಾಗೆ ಅಂತಹ ದಲಿತರು ಈಗಲೂ ಇದ್ದಾರೆ ಎಂದರೆ ಬಹುತೇಕರಿಗೆ ಅಚ್ಚರಿಯಾಗಬಹುದು. ವಿಶೇಷವಾಗಿ ತಮ್ಮನ್ನೇ ತಾವು ಗಾಂಧೀವಾದಿಗಳೆಂದು ಕರೆದುಕೊಳ್ಳುವ ದಲಿತರು ಅಂತಹ ಅಜ್ಞಾನಿಗಳೆನ್ನಬಹುದು.

    ಇರಲಿ, ಚುನಾವಣೆಗಳಲ್ಲಿ  ಅಂಬೇಡ್ಕರರು ಸ್ಪರ್ಧಿಸಿದ್ದರೆಂಬ ಮಾತ್ರಕ್ಕೆ ಅವರು ಅಲ್ಲಿ ಗೆದ್ದಿರಲೇಬೇಕಲ್ಲವೇ? ಗೆದ್ದು ಮತ್ರಿಯಾಗಿರಬೇಕಲ್ಲವೆ? ಹೌದು, 1937ರಲ್ಲಿ ಮುಂಬೈ ಅಸೆಂಬ್ಲಿಗೆ  ನಡೆದ ಚುನಾವಣೆಯಲ್ಲಿ ಸ್ವತಃ ಅವರನ್ನೂ ಸೇರಿಸಿಕೊಂಡು ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’(ಸ್ವತಃ ಅಂಬೇಡ್ಕರರೇ ಸ್ಥಾಪಿಸಿದ್ದ ಪಕ್ಷ)ಯ ವತಿಯಿಂದ 17 ಸ್ಥಾನಗಳನ್ನು ಗೆದ್ದಿರುವ ಅವರು ನಂತರ 1942ರಲ್ಲಿ ಇಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ  ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿಯಲ್ಲಿ ಮಂತ್ರಿಯೂ ಆಗಿದ್ದಾರೆ! ಅದೂ ಎಷ್ಟು ವರ್ಷಗಳವರೆಗೆ? 1942ರಿಂದ 1946ರವರೆಗೆ ಸತತ ನಾಲ್ಕು ವರ್ಷಗಳು! 1942ರಲ್ಲಿ ಮಂತ್ರಿಯಾದಾಗ ಅವರಿಗೆ  ಈ ದೇಶದಲ್ಲಿ ಭವ್ಯವಾದ ಸ್ವಾಗತ ಸಿಕ್ಕಿರಬೇಕಲ್ಲವೇ? ಹೌದು, ಸಹಸ್ರಾರು ವರ್ಷಗಳಿಂದ  ಈ ದೇಶದ ಎಲ್ಲಾ ರಾಜರುಗಳ ಅಥವಾ ಮತ್ತವರ ಆಸ್ಥಾನದತ್ತ ಕಣ್ಣೆತ್ತಿಯೂ ನೋಡಲಾಗದಂತ ದಲಿತರು  ಅಂಬೇಡ್ಕರ್ ಮೂಲಕ ದಿಲ್ಲಿಯಲ್ಲಿ ಬ್ರಿಟಿಷ್ ಮಂತ್ರಿಮಂಡಲದಲ್ಲಿ 1942ರಲ್ಲಿ ಪ್ರಪ್ರಥಮವಾಗಿ ಮಂತ್ರಿಗಳಾಗುತ್ತಾರೆ! ತನ್ಮೂಲಕ ಅಂಬೇಡ್ಕರರು ದಲಿತರಿಗೆ ಹಿಡಿದಿದ್ದ ‘ಅಧಿಕಾರ ಗ್ರಹಣ’ ಬಿಡಿಸುತ್ತಾರೆ. ಹಾಗೆ ಮಂತ್ರಿಯಾಗಿ ಅವರು ಮುಂಬೈಗೆ ಬಂದಿಳಿದಾಗ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತದೆ. ಮುಂಬೈ ಸಿಟಿ ಪೂರಾ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಧ್ವಜಗಳಿಂದ ರಾರಾಜಿಸುತ್ತಿರುತ್ತದೆ. ಹೆಂಗಸರು ಮಕ್ಕಳೆನ್ನದೆ  ವಯೋವೃದ್ಧರಾದಿಯಾಗಿ ಎಲ್ಲರೂ ತಮ್ಮ ಈ ಧೀರ ನಾಯಕನನ್ನು ರಾಜಮರ್ಯಾದೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸುತ್ತಾರೆ. ಆ ಮೂಲಕ ಅಂಬೇಡ್ಕರರಿಗೆ ಅಭೂತಪೂರ್ವ ಗೌರವವನ್ನು ಆಗಿನ ದಲಿತರು ಸಲ್ಲಿಸುತ್ತಾರೆ.

    ಅಂದಹಾಗೆ ಆಗಿನ ರಾಜಕಾರಣ ಎಂದಾಕ್ಷಣ ಬಹುತೇಕರು ಕಾಂಗ್ರೆಸ್ ಪಕ್ಷ ಎಂದಷ್ಟೆ ತಿಳಿದುಕೊಂಡಿದ್ದಾರೆಂದು ಮತ್ತೊಮ್ಮೆ ಹೇಳುಳುತ್ತಿದ್ದೇನೆ. ಆದರೆ ಅದು ಸುಳ್ಳು. ಒಟ್ಟಾರೆ ಬ್ರಿಟಿಷರ ವಿರುದ್ಧ ನಡೆದ ಸ್ಪರ್ಧೆ ತ್ರಿಕೋನ ಸ್ಪರ್ಧೆ ಎಂದುಕೊಳ್ಳಬಹುದು. ಏಕೆಂದರೆ ಒಂದೆಡೆ ಹಿಂದೂಗಳ ನೇತೃತ್ವದ ಕಾಂಗ್ರೆಸ್ ಇದ್ದರೆ ಮತ್ತೊಂದೆಡೆ ಮುಸ್ಲಿಮರ ನೇತೃತ್ವದ ಮುಸ್ಲಿಂ ಲೀಗ್, ಇವೆರಡರ ನಡುವೆ struggle for independence ಎಂಬ ಆ political warನಲ್ಲಿ  ಸ್ಪರ್ಧೆಗಿಳಿದದ್ದು ಅಂಬೇಡ್ಕರ್ ನೇತೃತ್ವದ  ‘ಪರಿಶಿಷ್ಟ ಜಾತಿಗಳ ಒಕ್ಕೂಟ” ಅಥವಾ  SCF. ನೆನಪಿರಲಿ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ ಸ್ಟ್ರೈಕು, ಧರಣಿ ನಡೆಸಲು ಕಟ್ಟಿಕೊಂಡ ಸಂಘವಲ್ಲ! ಅದೊಂದು ರಾಜಕೀಯ ಪಕ್ಷ. ಹೆಸರು ಸಂಘದ ಹಾಗೆ ಕಾಣುತ್ತದಷ್ಟೆ. ಹಾಗಿದ್ದರೆ ಸ್ವಾತಂತ್ರ್ಯ ಬಂದಾಗ ಈ ಮೂರು ಗುಂಪುಗಳಿಗೆ ಅಂದರೆ ಕಾಂಗ್ರೆಸ್‍ಗೆ, ಮುಸ್ಲಿಂ ಲೀಗ್‍ಗೆ, ಪರಿಶಿಷ್ಟ ಜಾತಿ ಒಕ್ಕೂಟದವರಿಗೆ  ಅವರವರ ಪಾಲು ಸಿಕ್ಕಿತಾ? ಖಂಡಿತ. ಕಾಂಗ್ರೆಸ್‍ಗೆ ಈ ದೇಶದ ಅಧಿಕಾರ ಸಿಕ್ಕಿತು.  ಮುಸ್ಲಿಂ ಲೀಗಿಗೆ ಪಾಕಿಸ್ತಾನ ಸಿಕ್ಕಿತು. ಹಾಗೆಯೇ ಪರಿಶಿಷ್ಟ ಜಾತಿ ಒಕ್ಕೂಟಕ್ಕೆ ಈ ದೇಶದ ಸಂವಿಧಾನ ಬರೆಯುವ, ಆ ಸಂವಿಧಾನದ ಮೂಲಕ  ತಮ್ಮ ಹಕ್ಕು ಅಧಿಕಾರಗಳನ್ನು ಸೂಕ್ತ ಕಲಂಗಳಡಿಯಲ್ಲಿ ಪಡೆಯುವ ಅವಕಾಶ ಸಿಕ್ಕಿತು. ಹಾಗೆಯೇ ಅಂಬೇಡ್ಕರರು ಅಂತಹ  ಸಂಧರ್ಭವನ್ನು ಸಮರ್ಥವಾಗಿ ಬಳಸಿಕೊಂಡರೂ ಕೂಡ.

  ಅಂದಹಾಗೆ ಮತ್ತೊಮ್ಮೆ ಹೇಳುವುದಾದರೆ ಅಂಬೇಡ್ಕರ್‍ರವರು ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐ.ಎಲ್.ಪಿ.)’ ಕಟ್ಟದಿದ್ದರೆ 1937ರಲ್ಲಿ ಮುಂಬೈ ಅಸೆಂಬ್ಲಿಗೆ ಗೆಲ್ಲಲಾಗುತ್ತಿತ್ತೆ? ಗೆಲ್ಲದೇ ಇದ್ದರೆ 1942ರಲ್ಲಿ ಮಂತ್ರಿಯಾಗುತ್ತಿದ್ದರೆ? ಮಂತ್ರಿಯಾಗದೇ ಇದ್ದರೆ, ‘ಪರಿಶಿಷ್ಟ ಜಾತಿಗಳ ಒಕ್ಕೂಟ’ ಎಂಬ ಮತ್ತೊಂದು ರಾಜಕೀಯ ಪಕ್ಷ ಕಟ್ಟದೆ ಇದ್ದರೆ ಸಂವಿಧಾನ ಸಭೆಯ ಸದಸ್ಯರಾಗುತ್ತಿದ್ದರೆ? (ನೆನಪಿರಲಿ, ಅಂಬೇಡ್ಕರರು ಸಂವಿಧಾನಸಭೆಗೆ ಆಯ್ಕೆಯಾದದ್ದು ಕೂಡ ಬಂಗಾಳದ ಜೈಸೂರ್ ಮತ್ತು ಕುಲ್ನಾ ಎಂಬ ಕ್ಷೇತ್ರಗಳಿಂದ. “ಪರಿಶಿಷ್ಟ ಜಾತಿಗಳ ಒಕ್ಕೂಟ” ಪಕ್ಷದ ವತಿಯಿಂದ ಸ್ಪರ್ಧಿಸಿ!) ಸಂವಿಧಾನ ಸಭೆಯ ಸದಸ್ಯರಾಗದಿದ್ದರೆ ಸಂವಿಧಾನ ಶಿಲ್ಪಿಯಾಗುತ್ತಿದ್ದರೆ? ಊಹ್ಞೂಂ,  ಅಂಬೇಡ್ಕರ್ ರಾಜಕೀಯ ಹೋರಾಟ  ಮಾಡದೇ  I.L.P., S.C.F., ಎಂಬ ರಾಜಕೀಯ ಪಕ್ಷಗಳನ್ನು ಕಟ್ಟದೆ ಇದ್ದರೆ ಅವರು ಸಂವಿಧಾನ ಶಿಲ್ಪಿಯಿರಲಿ ಸಂವಿಧಾನದ ಹತ್ತಿರ ಸುಳಿಯಲೂ  ಸಾಧ್ಯವಿರುತ್ತಿರಲಿಲ್ಲ. ಹಾಗಿದ್ದರೆ ಅವರು ಕಾಂಗ್ರೆಸ್ ಪಕ್ಷ ಸೇರಿಯೆ ಇಷ್ಟೆಲ್ಲವನ್ನು  ಪಡೆಯಬಹುದಿತ್ತಲ್ಲ ಎಂದು ಯಾರಾದರೂ ಪ್ರಶ್ನಿಸಬಹುದು.  ಆದರೆ ಅದು ಅಂದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರರ ಸ್ವಂತ ಮನೆಯಾಗುತ್ತಿತ್ತೆ? ಖಂಡಿತ ಇಲ್ಲ. ಹೆಚ್ಚೆಂದರೆ ಬಾಡಿಗೆ ಮನೆಯಂತಿರುತ್ತಿತ್ತು ತಾನೆ? ಆ ಬಾಡಿಗೆ ಮನೆಯಲ್ಲಿ ಹೈಕಮಾಂಡ್ ಎಂಬ ಮಾಲೀಕನ ಹಂಗಿನಲ್ಲಿ, ಅಸ್ಪøಶ್ಯತೆ ಎಂಬ ಸಂಧಿಗ್ಧ ಸಂದರ್ಭದಲ್ಲಿ ಅಂಬೇಡ್ಕರರು ಸ್ವಾಭಿಮಾನಿ ಮತ್ತು ಸ್ವಾವಲಂಬಿ ರಾಜಕಾರಣ ಮಾಡಲು ಸಾಧ್ಯವಿತ್ತೆ? 8 ವರ್ಷ ಮಂತ್ರಿಯಾಗಿರಲು ಸಾಧ್ಯವಿತ್ತೆ? ಖಂಡಿತ ಇಲ್ಲ. ಒಂದು ಮಾತು ಅವರ ಆ 8ವರ್ಷಗಳ ಮಂತ್ರಿಗಿರಿಯಲ್ಲಿ ಸ್ವಾತಂತ್ರ್ಯ ಬಂದ ನಂತರ 4ವರ್ಷ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಿರಬಹುದು. ಆದರೆ ಅದು ಕಾಂಗ್ರೆಸ್ ನೀಡಿದ ಬಳುವಳಿಯಲ್ಲ. ಬದಲಿಗೆ ಸ್ವಾತಂತ್ರ್ಯ ಹಸ್ತಾಂತರ ಸಂದರ್ಭದಲ್ಲಿ ಬ್ರಿಟಿಷರು ನೆಹರೂ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ‘ಪರಿಶಿಷ್ಟ ಜಾತಿ ಒಕ್ಕೂಟ’ದ ಪ್ರತಿನಿಧಿಯಾಗಿ ಅಂಬೇಡ್ಕರರನ್ನು ಸೇರಿಸಿಕೊಳ್ಳಲೇಬೇಕೆಂಬ  ಒತ್ತಡ ತಂದಿದ್ದರಿಂದ ಅಂಬೇಡ್ಕರ್ ಮಂತ್ರಿಯಾದರೆ ಹೊರತು  ಕಾಂಗ್ರೆಸ್ ಮತ್ತು ಗಾಂಧಿ ಹೇಳಿದರು ಎಂದಲ್ಲ.  ಬೇಕಿದ್ದರೆ  ಆಸಕ್ತರು ಅಧಿಕಾರ ಹಸ್ತಾಂತರ ಸಂಧರ್ಭದಲ್ಲಿ S.C.F.,ಮೂಲಕ  ಅಂಬೇಡ್ಕರ್ ದೇಶಾದ್ಯಂತ ನಡೆಸಿದ ಉಗ್ರ ಹೋರಾಟವನ್ನು  ಸುದೀಪ್ ಬಂದೋಪಧ್ಯಾಯ ಎಂಬುವವರು ಬರೆದಿರುವ “1945ರಿಂದ 1947ರ ವರೆಗಿನ ಬೆಳವಣಿಗೆಗಳು” ಎಂಬ ಕೃತಿಯನ್ನು ಓದುವುದರ ಮೂಲಕ ತಿಳಿದುಕೊಳ್ಳಬಹುದು.

   ಒಂದಂತು ನಿಜ, ಅಂಬೇಡ್ಕರ್‍ರವರು ತಮ್ಮ ಜೀವನದುದ್ದಕ್ಕೂ  ಈ ದೇಶದ ಪ್ರತಿಯೊಬ್ಬರ ವಿಶೇಷವಾಗಿ ದಲಿತರ ಪ್ರತಿಯೊಂದು ಸಮಸ್ಯೆಗಳಿಗೆ  ರಾಜಕೀಯ ಅಧಿಕಾರದಲ್ಲಿಯೇ  ಪರಿಹಾರವಿದೆಯೆಂದು ನಂಬಿದವರು. ರಾಜಕೀಯವನ್ನೇ ತಮ್ಮ ಉಸಿರಾಗಿ ಇಟ್ಟುಕೊಂಡು ಹೋರಾಟ ಮಾಡಿದವರು. ಹಾಗಂತ ಅವರು ಆಗ ಅಸ್ತಿತ್ವದಲ್ಲಿದ್ದ ಬೇರೆ ಪಕ್ಷಗಳಲ್ಲಿ ‘ಜೀ ಹುಜೂರ್’ ಎಂದು ಚಮಚಾ ರಾಜಕಾರಣ ಮಾಡಿದವರಲ್ಲ. ಭ್ರಷ್ಟಾಚಾರವಂತೂ ಅವರತ್ತ ಸುಳಿಯಲೇ ಇಲ್ಲ. “ಗೆದ್ದರೆ ಅಧಿಕಾರ, ಸೊತರೆ ವೀರ ಸ್ವರ್ಗ” ಎಂಬಂತೆ ಅವರು ಸ್ವಾಭಿಮಾನಿ ರಾಜಕಾರಣ ನಡೆಸಿದರು. ಇಂತಹ ಸ್ವಾಭಿಮಾನಿ ರಾಜಕೀಯವನ್ನು ತಿಳಿಯದೆ, ಸ್ವಾಭಿಮಾನಿ ಇತಿಹಾಸವನ್ನು ಓದದೆ ಅಂಬೇಡ್ಕರ್ ರಾಜಕಾರಣಿಯೇ ಅಲ್ಲ, ರಾಜಕೀಯಕ್ಕೂ ಅವರಿಗೂ ಸಂಬಂಧವೇ ಇಲ್ಲ ಎನ್ನುವುದು? ಅದು ಅಪ್ಪಟ ಪ್ರಜಾಪ್ರಭುತ್ವವಾದಿಗೆ ಎಸಗುವ ದ್ರೋಹ.
 
    ಅಂತಹ ದ್ರೋಹವನ್ನು  ನಾವು ಅಂದರೆ ದಲಿತರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಮನೆಗಳ ಜೀತಗಾರಿಕೆ ಮಾಡಲು ಎಸಗಬೇಕೆ? ಬೇಡ, ಖಂಡಿತ ಬೇಡ. ನಮ್ಮಗಳ ಸ್ವಾರ್ಥಕ್ಕಾಗಿ ನಾವು ಅಂಬೇಡ್ಕರರ ವಿಚಾರಗಳಿಗೆ ಅವರ ಸ್ವಾಭಿಮಾನಿ ರಾಜಕಾರಣಕ್ಕೆ ಚ್ಯುತಿ ತರುವುದು ಬೇಡ. ಅವರ ವಿಚಾರಗಳನ್ನು ದಿಕ್ಕುತಪ್ಪಿಸುವುದು ಬೇಡ. ಅಕಸ್ಮಾತ್ ಕೆಲವು ದಲಿತ ರಾಜಕಾರಣಿಗಳು ಬೇರೆಬೇರೆ ಪಕ್ಷಗಳಲ್ಲಿದ್ದರೆ ಅಲ್ಲಿಯ ಹೈಕಮಾಂಡ್ ಹೇಳಿದ ಹಾಗೆ ಕೇಳಬೇಕೆಂದಿದ್ದರೆ ಅದು ಅವರ ಕರ್ಮ.ಅದಕ್ಕೆ ಅಂಬೇಡ್ಕರರೇನು ಮಾಡಲಿಕ್ಕಾಗುತ್ತದೆ? ಅವರ ವಿಚಾರಗಳಾದರೂ ಏನು ಮಾಡಲಿಕ್ಕಾಗುತ್ತದೆ? ಅಂತಹ ರಾಜಕಾರಣಿಗಳು ಅವರ ಪಾಡಿಗೆ ಅವರು ಆ ಪಕ್ಷಗಳಲ್ಲಿರಲಿ. ಅಲ್ಲಿಯ ಜೀತಗಾರಿಕೆ ಮಾಡಲಿ. ಅದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಆದರೆ ಯಾವುದೇ ಕಾರಣಕ್ಕೂ ಅಂತಹವರು ಅಂಬೇಡ್ಕರ್ ಹೆಸರನ್ನು ಎತ್ತಬಾರದು. ಅಕಸ್ಮಾತ್ ಹೇಳಲೇಬೇಕಾದುದಾದರೆ “ಅಂಬೇಡ್ಕರ್ ದಲಿತರಿಗೆ ಕಾಂಗ್ರೆಸ್ ಎಂಬುದು ಉರಿಯುವ ಮನೆ, ಅದರಲ್ಲಿ ಹೊಕ್ಕುವಿರಾದರೆ ಸುಟ್ಟು ಭಸ್ಮವಾಗುವಿರಿ”  ಎಂದು ಸತ್ಯವನ್ನೇ ಹೇಳಬೇಕು. ಮತ್ತು ಹಾಗೆ ಹೇಳಿ ಅಂತಹವರು ಅದದೇ ಪಕ್ಷಗಳಲ್ಲಿರಲಿ. ಅದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಒಂದರ್ಥದಲಿ ಅದು ‘ಸ್ವಾಭಿಮಾನ’ದ, ‘ಅವಮಾನಕ್ಕೆ ಅಂಜದ’ ರಾಜಕಾರಣವಾಗುತ್ತದೆ. ಅದು ಬಿಟ್ಟು ಅಂಬೇಡ್ಕರರು ರಾಜಕಾರಣಿಯೇ ಅಲ್ಲ ಎನ್ನುವುದು? ರಾಜಕೀಯದ ಸೋಂಕೇ ಇಲ್ಲ ಎನ್ನುವುದು?

    ಬೇಡ. ನಮ್ಮಗಳ ಸ್ವಾರ್ಥಕ್ಕೆ ನಾವು ಅಂಬೇಡ್ಕರರನ್ನು ಅವರ ಸ್ವಾಭಿಮಾನಿ ರಾಜಕಾರಣವನ್ನು ದಿಕ್ಕುತಪ್ಪಿಸುವುದು, ತಪ್ಪು ಪ್ರಚಾರ ಮಾಡುವುದು ಅಂಬೇಡ್ಕರ್ ಮೊಮ್ಮಕ್ಕಳಾದ ದಲಿತರಿಗೆ ಬೇಡ. ಅಕಸ್ಮಾತ್ ಹಾಗೇನಾದರೂ ಮಾಡಿದ್ದೆ ಮತ್ತು ಹಾಗೆ ಮಾಡುವುದನ್ನು ಮುಂದುವರಿಸಿದ್ದೇ ಆದರೆ  ಅದು ‘ನಮ್ಮ ತಂದೆಗೆ’ ಮತ್ತು ಅವರು ಕಟ್ಟಿದ ಆ ಸ್ವಾಭಿಮಾನದ ಸ್ವಂತ ಮನೆಗೆ ಎಸಗುವ ದ್ರೋಹವಾಗುತ್ತದಷ್ಟೆ. 

Friday, 13 June 2014

 ದಲಿತರು ಮತ್ತು ಉದ್ದಿಮೆಶೀಲತೆ

                                              -     ರಘೋತ್ತಮ ಹೊ.ಬ

DICCI team

MILIND KAMBLE

CHANDRABHAN PRASAD
   ಮೀಸಲಾತಿ: ವಯಕ್ತಿಕವಾಗಿ ನಾನು ಅದರ ಫಲಾನುಭವಿ. ಫಲಾನುಭವಿ ಆಗಲೇಬೇಕು ಅಂತ ಓದಿದ್ದು. ಅದಕ್ಕೆ ಫಲಾನುಭವಿ. ಮನೆಯವರ ಒತ್ತಡ, ಹಾಗೇ ಅಣ್ಣಂದಿರು ಫಲಾನುಭವಿಗಳಾದರು ನಾನು ಆಗದಿದ್ದರೆ ನನ್ನ ಅಪ್ಪ ಅಮ್ಮ ಸುಮ್ಮನೇ ಬಿಡುವರೇ ಎಂಬ ಸಾಮಾನ್ಯ ಆಲೋಚನೆ ಕೂಡ ನಾನು ಹಾಗೇ ಮೀಸಲಾತಿಯ ಫಲಾನುಭವಿ ಆಗುವಂತೆ ಮಾಡಿತು. ಆದರೆ ನನ್ನ  ಬೇರೆ ಜಾತಿಯ ಸ್ನೇಹಿತರು ಅದರ(ಮೀಸಲಾತಿ)  ಫಲಾನುಭವ ಇಲ್ಲದೆ ನನಗಿಂತಲೂ ಚೆನ್ನಾಗಿ ಬದುಕುತ್ತಿದ್ದಾರೆ! ನನ್ನನ್ನೇ ಅಣಕಿಸುವಷ್ಟು! ಹಾಗಿದ್ದರೆ ನಾನು ಗಳಿಸಿದ್ದಾದರೂ ಏನು? ಅವರು ಕಳೆದುಕೊಂಡದ್ದಾದರೂ ಏನು? ಹೌದು, ನಾನು ಗಳಿಸಿದ್ದು ಬರೀ ಮೀಸಲಾತಿ ಮತ್ತು ಒಂದು ಉದ್ಯೋಗ. ಆದರೆ ಅವರು? ಇಡೀ ಜಗತ್ತನ್ನೇ ತಮ್ಮದೆಂದುಕೊಂಡರು. ಫುಟ್‍ಪಾತ್‍ನಲ್ಲಿ ಕಳ್ಳೇಕಾಯಿ ಮಾರುವುದರಿಂದ ಹಿಡಿದು ಹೈಟೆಕ್ ಕಂಪನಿಯ ಸಿ.ಇ.ಒ.ಗಳಾಗುವವವರೆಗೆ ಅವರು ಅವಕಾಶ ಪಡೆದರು.  ಎಲ್ಲಾ ಬಗೆಯ ಉದ್ಯಮಗಳೂ ಅವರಿಗೆ ತೆರೆದಿತ್ತು. ದಲಿತರ ಈ ಹೊತ್ತಿನ  ಹಸಿವನ್ನು ಮೀಸಲಾತಿ ಖಂಡಿತ ಹಿಂಗಿಸಲಾರದು. ಅವರಿಗೂ ತರೆಯಬೇಕಿದೆ ಎಲ್ಲಾ ಬಗೆಯ ಉದ್ಯಮಗಳು. ಇಲ್ಲದಿದ್ದರೆ ಮುಂದಿನ ಪೀಳಿಗೆಯಲ್ಲಿ ನಾಶ ಖಚಿತ.

   ಉದ್ದಿಮೆ, ಹಾಗಿದ್ದರೆ ದಲಿತರು ಎಲ್ಲೆಲ್ಲಿ ನುಗ್ಗಬಹುದು?  ಉತ್ತರ ಬಹು ಆಯಾಮದ್ದು. ಅಂದಹಾಗೆ ನನಗೆ ಪರಿಚಿತ ಸ್ವಯಂ ಉದ್ಯೋಗ ನಡೆಸುತ್ತಿದ್ದ ದಲಿತ ಸಂಘರ್ಷ ಸಮಿತಿಯ  ಮುಖಂಡರೊಬ್ಬರು ಹೀಗೆ ಸವರ್ಣೀಯರ ವಿರುದ್ಧ ಹೋರಾಟ ಕೈಗೊಂಡಾಗ ಅವರಿಗೆ ಅಂಗಡಿ ಬಾಡಿಗೆ ನೀಡಿದ್ದ ಸವರ್ಣೀಯನೊಬ್ಬ ಅವರನ್ನು  ಖಾಲಿ ಮಾಡಿಸಿದ. ಆದರೆ ಅವರು ಹೆದರಲಿಲ್ಲ. ಬೇರೊಂದು ಅಂಗಡಿ ಬಾಡಿಗೆಗೆ ಪಡೆದು ತಮ್ಮ   ವ್ಯವಹಾರ ಮುಂದುವರಿಸಿದರು. ಖಂಡಿತ,  ಈ ಸಂದರ್ಭದಲ್ಲಿ ಅಸ್ಪøಶ್ಯತಾಚರಣೆ  ಎಂದುಕೊಂಡರೆ ನಮ್ಮಪ್ಪರಾಣೆಗೂ ನಾವು ಈ ಶತಕದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಉದ್ದಿಮೆಗೆ  ಇಳಿಯಬೇಕು. ಮೊದಲು ಕಡ್ಲೇಕಾಯಿಯನ್ನೇ ಮಾರಬೇಕು. ಫುಟ್‍ಪಾತ್‍ನಲ್ಲಿ ಟೀಯನ್ನೇ ಕಾಯಿಸಬೇಕು. ಚಪ್ಪಲಿ ಹೊಲಿಯುವುದಕ್ಕಿಂತ, ಶೌಚಾಲಯ ಶುಚಿಗೊಳಿಸುವುದಕ್ಕಿಂತ  ಇದು ಉತ್ತಮ ಕೆಲಸ! ಹಾಗಿದ್ದರೆ ಗ್ರಾಹಕರು? ನಾವೇ! ನಾವೇ ಕಡ್ಲೇಕಾಯಿ ಮಾರಬೇಕು, ರೇಷನ್ ಅಂಗಡಿ ತೆರೆಯಬೇಕು, ಗೊಬ್ಬರದ ಅಂಗಡಿ ತೆರೆಯಬೇಕು, ಬೇರೆಯವರಿಗಿಂತ ಅರ್ಧ ರೂಪಾಯಿ ಕಮ್ಮಿ ತೆಗೆದುಕೊಳ್ಳಬೇಕು. ನಾವೇ ಅದರ ಗ್ರಾಹಕರೂ ಕೂಡ ಆಗಬೇಕು.  ನೋಡಿ, ಲಕ್ ಹೇಗೆ ಕುದುರುತ್ತದೆ ಎಂಬುದನ್ನು! ಉದ್ಯೋಗವೂ ಸೃಷ್ಠಿಯಾಗುತ್ತದೆ. ನಾಲ್ಕು ಕಾಸೂ ಕೂಡ ಬರುತ್ತದೆ. ಯಾಕೆಂದರೆ ಇಂದಿಗೂ  ದಲಿತರು ಬಹುತೇಕ ಅಂಗಡಿಗಳಿಗೆ, ಹೋಟೆಲ್‍ಗಳಿಗೆ, ಕಂಪನಿಗಳಿಗೆ ಖಾಯಂ ಗಿರಾಕಿಗಳಾಗಿದ್ದಾರೆ, ಗ್ರಾಹಕರಾಗಿದ್ದಾರೆ. ಆದರೆ  ಮಾಲೀಕರಾಗುವುದು? ಖಂಡಿತ,  ಹೀಗೆ ಕೆಳಮಟ್ಟದಿಂದಲೇ ಪ್ರಾರಂಭವಾಗಬೇಕು. ಇಡೀ ಜಗತ್ತು ಸ್ಪರ್ಧಾತ್ಮಕತೆಯ ಹಿಂದೆ ಓಡುತ್ತಿದೆ. ಹೀಗಿರುವಾಗ ದಲಿತರು ಅಪ್ಪ ಹಾಕಿದ ಮೀಸಲಾತಿ ಎಂಬ ಆಲದ ಮರಕ್ಕೆ ನೇತುಹಾಕಿಕೊಳ್ಳುವುದು? ಅದಕ್ಕೇ
 ಜೋತುಬೀಳುವುದು?

    ಎಲ್ಲಿಯವರೆಗೆ ನಮ್ಮ ಹೋರಾಟ ಒಂದೇ ದಿಕ್ಕಿನೆಡೆಗೆ, ಬರೇ ಮೀಸಲಾತಿಯೆಡೆಗೆ ಇರುತ್ತದೆಯೋ ಅಲ್ಲಿಯವರೆಗೆ ನಮ್ಮನ್ನು ಬಲಿತೆಗೆದುಕೊಳ್ಳುವುದು ಪಟ್ಟಭದ್ರರಿಗೆ ಸುಲಭವಾಗುತ್ತದೆ. ಅದೇ ‘ನಾವು ಮೀಸಲಾತಿ ಬೇಡುವವರಲ್ಲ.  ನೀಡುವವರಾಗುತ್ತೇವೆ’ ಎಂದು ವ್ಯಾಪಾರ ಉದ್ದಿಮೆಗಳೆಡೆ  ಮನಸ್ಸು ಮಾಡಿದರೆ? ವರ್ಣಾಶ್ರಮದ ಮೌಲ್ಯಗಳನ್ನು ಉಲ್ಟಾಪಲ್ಟಾ ಮಾಡುವತ್ತ ಚಿಂತಿಸಿದರೆ?  ಹೊಸ ಬಗೆಯ  ಗ್ರಾಹಕರು ಹುಟ್ಟಿಕೊಳ್ಳುತ್ತಾರೆ. ಅಕಸ್ಮಾತ್ ಅಸ್ಪøಶ್ಯತಾಚರಣೆಯೂ ನಡೆದರೆ  ಎಷ್ಟು ದಿನ ಅಂತ ನಡೆಯಲಿಕ್ಕಾಗುತ್ತದೆ? ನಡೆದರೆ ನಡೆಯಲಿ ಬಿಡಿ.  ನಮ್ಮ ಮೇಲೆ ನಡೆದದ್ದು ನಮ್ಮ ಮಕ್ಕಳ ತಲೆಗೆ ಕೊನೆಗೊಳ್ಳಬಹುದು. ಮೊಮ್ಮಕ್ಕಳ ತಲೆಗೆ ಕೊನೆಗೊಳ್ಳಬಹುದು.  ಬರೇ ಮೀಸಲಾತಿಗೆ ಜೋತು ಬಿದ್ದರೆ  ನಮ್ಮ ಮಕ್ಕಳ್ಹೇಗೆ ಹೊಸ ರೀತಿ ಯೋಚಿಸಲು ಸಾಧ್ಯ? ‘ನಮ್ಮಪ್ಪ ಮೀಸಲಾತಿಯಿಂದ ಕೆಲಸ ಗಿಟ್ಟಿಸಿದ್ದ ನಾನೂ ಕೂಡ ಮೀಸಲಾತಿಯಿಂದಲೇ     ಕೆಲಸ ತಗೆದುಕೊಳ್ಳ ಬೇಕು’ ಎಂದು ಆತ ಅಂದುಕೊಂಡರೆ ಆತನಿಗೆ ತೆಗದುಕೊಳ್ಳಲು  ಅಲ್ಲಿ ಉದ್ಯೋಗವೇ ಇರುವುದಿಲ್ಲ. ಎಲ್ಲವೂ ಖಾಸಗೀಕರಣಗೊಂಡು ಮೀಸಲಾತಿ ಹಲ್ಲಿಲ್ಲದ ಹಾವಾಗುತ್ತದೆ. ಉಪಯೋಗಕ್ಕೆ ಬಾರದ ಆಯುಧವಾಗುತ್ತದೆ! ಅದರ ಬದಲು ಉದ್ದಿಮೆಶೀಲತೆಯ ಮೂಲಕ ನಾವು ಆತನಿಗೆ/ಆಕೆಗೆ ‘ಬದುಕನ್ನು ಹೀಗೂ ಬಾಳಬಹುದು; ಏನಾದರೂ ಮಾಡು, ಬದುಕಲಿಕ್ಕೆ ವ್ಯಾಪಾರವಾದರೂ ಸೈ, ಸ್ವಯಂ ಉದ್ಯೋಗವಾದರೂ ಸೈ, ನಿನ್ನದೇ ಸ್ವಂತ ಉದ್ದಿಮೆಯಾದರೂ ಸೈ’ ಎಂಬ ಕನಸನ್ನು ಆತನಲ್ಲಿ/ಆಕೆಯಲ್ಲಿ ಬಿತ್ತಿದ್ದೇ ಆದರೆ?

  ಈ ದಿಕ್ಕಿನಲ್ಲಿ ಮೊನ್ನೆ ಬೆಂಗಳೂರಿನಲ್ಲಿ ನಡೆದ DICCI(Dalit India Chamber of Commerce and Industries)  ಸಮಾವೇಶ ಗಮನಾರ್ಹವಾದುದೇ. ಯಾಕೆಂದರೆ ಮೀಸಲಾತಿ ನಿರ್ವೀರ್ಯಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ಬರೀ ಅದಷ್ಟಕ್ಕೆ ದಲಿತರು ಜೋತು ಬೀಳುವುದೆಂದರೆ ಮುಂದೆ ಬದುಕುವುದಾದರೂ ಹೇಗೆ? ಖಾಸಗೀ ರಂಗದಲ್ಲಿ ಮೀಸಲಾತಿ ಎಂದು ಕೆಲವರು ಅನ್ನಬಹುದು. ಆದರೆ ಸರ್ಕಾರಿ ಮೀಸಲಾತಿಯನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸದ ವ್ಯವಸ್ಥೆ ಖಾಸಗಿ ರಂಗದಲ್ಲಿ ಅದನ್ನು ಜಾರಿಗೊಳಿಸುತ್ತದೆ ಎಂಬುದು ಕನಸಿನ ಮಾತು.  ಈ ಕಾರಣಕ್ಕಾಗಿ ದಲಿತರಲ್ಲಿ ಉದ್ದಿಮೆಶೀಲತೆ ಬೆಳೆಸುವ ನಿಟ್ಟಿನಲಿ ಆIಅಅIಯ ಮುಖ್ಯ ಪ್ರವರ್ತಕ, ದಲಿತ ಚಿಂತಕ ಚಂದ್ರಭಾನ್ ಪ್ರಸಾದ್ ಮತ್ತು ಅಧ್ಯಕ್ಷ ಮಿಳಿಂದ್‍ಕಾಂಬ್ಳಿಯವರ ಪ್ರಯತ್ನ ಖಂಡಿತ ಹೊಸ ಮಾದರಿಯದ್ದು. ಅಂದಹಾಗೆ ಬೆಳೆಯುತ್ತಿರುವ ದಲಿತ ವಿದ್ಯಾರ್ಥಿ ಸಮೂಹಕ್ಕೆ ಸರ್ಕಾರ ಎಷ್ಟು ಅಂತ ಉದ್ಯೋಗ ನೀಡಲಿಕ್ಕಾಗುತ್ತದೆ? ಸರ್ಕಾರ ನೀಡಲಿಲ್ಲವೆಂದರೆ ದಲಿತ ಸಮುದಾಯ ಹೊಸದಾಗಿ  ಏನನ್ನೂ ಮಾಡುವುದು ಬೇಡವೆ? ಹಿಂದೆ  ದಲಿತ ಯುವಕರಲ್ಲಿ ಒಂದು ಟ್ರೆಂಡ್ ಇತ್ತು. ಪದವಿ ಗಳಿಸಿದಾಕ್ಷಣ ಸರ್ಕಾರ  ನಮಗೆ ಕರೆದು ಉದ್ಯೋಗ ಕೊಡಬೇಕು ಎಂಬುದೇ ಆ ಟ್ರೆಂಡ್! ಕೆಲಸ ಮಾಡು ಅಂದರೆ ‘ಹ್ಞೂಂ ನಾನು ಓದಿಲ್ಲವೆ?’ ಎಂಬ ಉತ್ತರ ಅಂತಹ ವಿದ್ಯಾರ್ಥಿಗಳಿಂದ ಬರುತ್ತಿತ್ತು. ಆದರೆ ಈಗ? ಕಾಲ ಬದಲಾಗಿದೆ.  ‘ನೀನು ಓದಿದ್ದೀಯ. ಅದು ನಿನ್ನ ಜ್ಞಾನಕ್ಕಷ್ಟೆ’ ಎಂಬ ವಿವರಣೆ ಈಗ ಸರ್ವೇಸಾಮಾನ್ಯವಾಗಿದೆ. ಹಾಗಿದ್ದರೆ ಇಂತಹ ಸಮಯದಲ್ಲಿ ಏನು ಮಾಡುವುದು? ಖಂಡಿತ, ಉತ್ತರ:- ಉದ್ದಿಮೆಶೀಲತೆ ಅಥವಾ entrepreneurship. 
    ಹಿಂದೆ ದಿ.ಕಾಂಶಿರಾಂರವರು ತಾನು ದಲಿತರನ್ನು ‘ಬೇಡುವ ಸಮಾಜದಿಂದ, ನೀಡುವ ಸಮಾಜವಾಗಿ ಪರಿವರ್ತಿಸುತ್ತೇನೆ’ ಎಂದಿದ್ದರು. ಅವರ ಉದ್ದೇಶ ದಲಿತರನ್ನು ರಾಜಕೀಯ ಹಕ್ಕು ಅಧಿಕಾರಗಳಿಗಾಗಿ ತಯಾರು ಮಾಡುವುದಾಗಿತ್ತು. ಖಂಡಿತ, ಕಾಂಶಿರಾಂ ಆ ದಿಸೆಯಲ್ಲಿ ಯಶಸ್ಸನ್ನೂ ಕೂಡ ಕಂಡರು. ಮಾಯಾವತಿಯಂತಹ ದಲಿತ ಮಹಿಳೆ ಬೃಹತ್ ರಾಜ್ಯವೊಂದರಲ್ಲಿ 4 ಬಾರಿ ಮುಖ್ಯಮಂತ್ರಿಯಾದರು. ಆದರೆ ದಲಿತರ ಭವಿಷ್ಯದ ಬದುಕಿನ  ಉದ್ಯೋಗದ ಪ್ರಶ್ನೆ? ಖಂಡಿತ, ಚಂದ್ರಭಾನ್‍ಪ್ರಸಾದ್‍ರ DICCI(ಡಿಕ್ಕಿ) ಮಾದರಿಯ ಹೋರಾಟ ಈ ಸಂದರ್ಭದಲ್ಲಿ ಅತ್ಯಗತ್ಯವಾಗುತ್ತದೆ. ಒಂದು ಜನರೇಷನ್ ಚಂದ್ರಭಾನ್ ಪ್ರಸಾದ್‍ರ ಆ ದಿಕ್ಕಿನಲಿ ಪ್ರಯತ್ನಿಸಬೇಕು. ದಲಿತರಲ್ಲಿ  ಉದ್ದಿಮೆಶೀಲತೆ  ಬೆಳೆಸಲು ತನು, ಮನ, ಧನ ಎಲ್ಲವನ್ನೂ ಮೀಸಲಿಡಬೇಕು. ಒಂದು ಹೊಸ ಚಳುವಳಿಯ ರೂಪವಾಗಿ ಅದು ಹೊರಹೊಮ್ಮ ಬೇಕು.
    
    ಇಂದು ಟಾಟಾ, ಬಿರ್ಲಾ, ರಿಲಾಯನ್ಸ್, ವಿಪ್ರೋ, ಇನ್ಫೋಸಿಸ್ ಸರ್ಕಾರಗಳಿಂದ ಬಹುಕೋಟಿಗಟ್ಟಲೆ ಸಾಲ, ಭೂಮಿ, ಸವಲತ್ತು ಪಡೆದು ದಲಿತರ ಮೀಸಲಾತಿಯನ್ನು ನಾಚಿಸುತ್ತಿವೆ. ಅದೇ ದಲಿತರೇ ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ? ಉದ್ದಿಮೆಶೀಲತೆಯನ್ನು ಬೆಳೆಸುವತ್ತ/ ರೂಢಿಸುವತ್ತ ಕೈ ಜೋಡಿಸಿದರೆ?
      
  ‘political power is the master key through which you can unlock all doors of progress’ ಇದು ಅಂಬೇಡ್ಕರರ ಶ್ರೇಷ್ಠ ನುಡಿ. ಆದರೆ ಮೀಸಲಾತಿ ಇಲ್ಲದ ಇಂತಹ ಜಾಗತೀಕರಣದ ಈ ಕಾಲದಲ್ಲಿ  ಆ ನುಡಿಗೆ ‘entrepreneurship(ಉದ್ದಿಮೆಶೀಲತೆ)is the master key through which you can unlock all doors of progress’ ಎಂದು ಹೊಸ ಅರ್ಥ ಕಲ್ಪಿಸಿದರೆ? ಖಂಡಿತ ಅಂತಹ ಹೊಸ ಅರ್ಥ ಕಲ್ಪಿಸಬೇಕಿದೆ. ಅಂಬೇಡ್ಕರ್ ಚಿಂತನೆಗೂ ಹೊಸ ಕಸುವು ತುಂಬುವ ಕೆಲಸ ನಡೆಯಬೇಕಿದೆ. ದಲಿತರಲ್ಲಿ ಉದ್ದಿಮೆಶೀಲತೆ ನೆಲೆಗೊಳ್ಳಬೇಕಿದೆ. ಯಾಕೆಂದರೆ ಮೊದಲೇ ಹೇಳಿದ ಹಾಗೆ LPG ಯ, FDIನ ಈ ಯುಗದಲ್ಲಿ ದಲಿತರ ಹಸಿವನ್ನು ಕೇವಲ ಮೀಸಲಾತಿಯಿಂದಷ್ಟೆ ಹಿಂಗಿಸುವುದು ಖಂಡಿತ ಸಾಧ್ಯವಿಲ್ಲ ಅದಕ್ಕೆ.

Thursday, 12 June 2014

ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್

                            -ರಘೋತ್ತಮ ಹೊ.ಬ


    1881 ರಲ್ಲೆ ವಿಲಿಯಂ ಹಂಟರ್  ಎಂಬುವವರು ಭಾರತದಲ್ಲಿ ಬೌದ್ಧಧರ್ಮ ಪುನರುತ್ಥಾನವಾಗುವುದೆಂದು ಸೂಚಿಸಿದ್ದರು. ವಿಶ್ವಕವಿ ರವೀಂದ್ರನಾಥ ಠಾಗೋರ್ ಕೂಡ   ತಮ್ಮ “ಬುದ್ಧದೇವೋ” ಎಂಬ ಪದ್ಯದಲ್ಲಿ ಬೌದ್ಧಧರ್ಮ ಪುನಾರುತ್ಥಾನವಾಗುವುದೆಂದು ನಿರೀಕ್ಷಿಸಿದ್ದರು. ಅದರೆ? ನಿಜಕ್ಕೂ ಅದರ ಪುನರುತ್ಥಾನಕ್ಕೆ ಶ್ರಮಿಸಿದ್ದು? ಭಾರತದಲ್ಲಿ ಮತ್ತೆ ಬುದ್ಧ ಮಂತ್ರ ಪಠಣದ ಕ್ರಿಯೆಗೆ ಮುನ್ನುಡಿ ಬರೆದದ್ದು? ನಿಸ್ಸಂಶಯವಾಗಿ ಅದು ಅಂಬೇಡ್ಕರ್. ಅಂಬೇಡ್ಕರ್ 1956 ಅಕ್ಟೋಬರ್ 14 ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ  ಬೌದ್ಧಧರ್ಮ ಸ್ವೀಕರಿಸಿದ್ದು ಇಡೀ ವಿಶ್ವದ ಇತಿಹಾಸದಲ್ಲಿ ಚಿರನೆನಪಿನಲ್ಲಿ ಉಳಿದುಕೊಳ್ಳುವಂತಹ ಘಟನೆ. ಯಾಕೆಂದರೆ ಎಲ್ಲರೂ ಮತಾಂತರ ಮತಾಂತರ ಎನ್ನುತ್ತಾರೆ  ಆದರೆ ಒಂದೇ ದಿನ ಅಷ್ಟೊಂದು ಬೃಹತ್ ಜನ ಒಂದೇ ವೇದಿಕೆಯಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ  ಮತಾಂತರಗೊಂಡಿದ್ದು? ಹಿಂದೆ ಎಂದೂ ನಡೆದಿರಲಿಲ್ಲ! ಆದರೆ ಅಂಬೇಡ್ಕರ್ ಮೂಲಕ ಅದು  ನಡೆಸಲ್ಪಟ್ಟಿತ್ತು.  ಯಾವ ಬೌದ್ಧಧರ್ಮ  ಭಾರತದಿಂದ ಕಣ್ಮರೆಯಾಗಿತ್ತೋ ಅದು ಅಂಬೇಡ್ಕರ್ ಮೂಲಕ ಭಾರತದಲ್ಲಿ ಮತ್ತೆ ಜೀವ ಪಡೆದಿತ್ತು.   ಈ ನಿಟ್ಟಿನಲಿ  ಭಾರತದಲ್ಲಿ  ಬೌದ್ಧ ಧರ್ಮದ ಪುನರುತ್ಥಾನಕ್ಕೆ ಅಂಬೇಡ್ಕರ್ ಮುನ್ನುಡಿ ಬರೆದಿದ್ದರು.

   ಹಾಗಿದ್ದರೆ ಬೌದ್ಧಧರ್ಮಕ್ಕೆ ಮತಾಂತರ ಹೊಂದುವ ಅಂಬೇಡ್ಕರರ ನಿರ್ಧಾರ ದಿಢೀರನೆ ತೆಗೆದುಕೊಂಡದ್ದೆ? ಅಥವಾ ಯಾವುದಾದರೂ  ಆಮಿಷಕ್ಕೊಳಗಾಗಿ ಅವರು ಮತಾಂತರ ಹೊಂದಿದರೆ? ಖಂಡಿತ ಇಲ್ಲ. ಬೌದ್ಧಧರ್ಮ ಸ್ವೀಕಾರದ ಅವರ ನಿರ್ಧಾರ ಅವರ ಜೀವನದ ಅಂತಿಮಗಳಿಗೆಯದ್ದಲ್ಲ ಅಥವಾ ಯಾವುದೇ ಆಸೆ  ಆಮಿಷದ್ದೂ ಅಲ್ಲ. ಯಾಕೆಂದರೆ ತಮ್ಮ ಜೀವಿತದ ಬಹಳ ಹಿಂದೆಯೇ ಅಂದರೆ 1936, ಮೇ13 ರ ಬುದ್ಧ ಜಯಂತಿಯಂದೆ  ಮುಂಬೈನಲ್ಲಿ ತಮ್ಮ ಸುಪ್ರಸಿದ್ಧ “ ಮುಕ್ತಿಯ ಮಾರ್ಗ ಯಾವುದು?” ಎಂಬ ಭಾಷಣದಲ್ಲಿ ಅವರು ತಮ್ಮ ಸ್ಪಷ್ಟ ಗುರಿ  ಬೌದ್ಧಧರ್ಮ  ಎಂಬುದನ್ನು ಬಹಳ ನಿಖರವಾಗಿಯೇ, ನಿಶ್ಚಿತವಾಗಿಯೇ ಹೇಳಿದ್ದರು.
   
   ಯಾಕೆಂದರೆ ಅಂಬೇಡ್ಕರ್ ಹಿಂದೂಧರ್ಮ ಟೀಕಿಸುತ್ತಿದ್ದರು ಎಂದರೆ ಅದಕ್ಕೆ ಪರ್ಯಾಯವನ್ನು ಹುಡುಕಿಕೊಂಡಿದ್ದರೆಂದೇ ಅಲ್ಲವೆ? ಹೌದು, ಜೀವನದುದ್ದಕ್ಕೂ  ಹಿಂದೂ ಧರ್ಮವನ್ನು, ಮತ್ತದರ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಅವರು  ಹಾಗೆ ಟೀಕಿಸುತ್ತಾ, ಟೀಕಿಸುತ್ತಾ  ಬುದ್ಧನನ್ನು ತನ್ನೆಡೆಗೆ ಎಳೆದುಕೊಂಡಿದ್ದರು. ಅಂದಹಾಗೆ 1936 ರ ಸಮಯದಲ್ಲಿ  ಅವರು ಬೌದ್ಧಧರ್ಮದಲ್ಲಿ ತನ್ನ ಭವಿಷ್ಯ ಎಂದಾಗ ಮೂಂಜೆ ಎಂಬ  ಹಿಂದೂ ಮಹಾಸಭಾದ  ಮುಖಂಡರು ಅಂಬೇಡ್ಕರರಿಗೆ ಸಲಹೆ ನೀಡಿದ್ದು “ಮುಸ್ಲಿಂ ಧರ್ಮವನ್ನು ಪರ್ಯಾಯವಾಗಿ ಎದುರಿಸಲು ದಲಿತರು ಸಿಖ್ ಧರ್ಮಕ್ಕೆ ಮತಾಂತರಗೊಳ್ಳಲಿ” ಎಂದು. ಆದರೆ ಅಂಬೇಡ್ಕರರು ಹಿಂದೂ ಧರ್ಮದ ನಾಯಕರುಗಳ  ಆ ಸಲಹೆಗಳಿಗೆ  ತಲೆಕೆಡಿಸಿಕೊಳ್ಳಲಿಲ್ಲ.  ಬದಲಿಗೆ  ತಮ್ಮಷ್ಟಕ್ಕೆ ತಾವು  ಬುದ್ಧನತ್ತ ಚಲಿಸತೊಡಗಿದ್ದರು. 1950ರಲ್ಲಿ “ಷೆಡ್ಯೂಲ್ಡ್ ಕ್ಯಾಸ್ಟ್ ಫಡರೇಷನ್” ಎಂಬ  ತಮ್ಮ ನೇತೃತ್ವದ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ  ಅಂಬೇಡ್ಕರರು ಬುದ್ಧ ಜಯಂತಿಯನ್ನು ಆಚರಿಸುವಂತೆ ಕೂಡ ಕರೆನೀಡಿದ್ದರು. ಕೋಲ್ಕತ್ತಾದ ಮಹಾಬೋಧಿ ಸೊಸೈಟಿಯವರು ಹೊರತಂದಿದ್ದ ವಿಶೇಷ ಸಂಚಿಕೆಯೊಂದರಲ್ಲಿ  ಅವರು 1950ರಲ್ಲೇ “ಭಗವಾನ್ ಬುದ್ಧ ಮತ್ತು ಆತನ ಧಮ್ಮದ ಭವಿಷ್ಯ”ಎಂಬ ಲೇಖನ ಬರೆದಿದ್ದರು. ಆ ಮೂಲಕ ಬೌದ್ಧದರ್ಮಕ್ಕೆ ‘ಉಜ್ವಲ ಭವಿಷ್ಯ’ವಿದೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದರು . ಈ ನಡುವೆ 1954ರಲ್ಲಿ ಬರ್ಮಾದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿಯೂ ಕೂಡ ಅಂಬೇಡ್ಕರ್ ರವರು ಭಾಗವಹಿಸಿದ್ದರು. ಒಟ್ಟಾರೆ ತಮ್ಮ ಅವಿರತ ಸಾಮಾಜಿಕ, ರಾಜಕೀಯ ಹೋರಾಟದ ನಡುವೆ ಅಂಬೇಡ್ಕರರು ನಿಧಾನವಾಗಿ ಚಲಿಸುತ್ತಿದ್ದದ್ದು ಬೌದ್ಧದರ್ಮದ ಕಡೆಗೆ .
   
   ಯಾಕೆಂದರೆ ಅವರಿಗೆ ತಿಳಿದಿತ್ತು , ಒಂದು ಸಮುದಾಯಕ್ಕೆ ಸಾಮಾಜಿಕ ರಾಜಕೀಯ ಜಾಗೃತಿ ಮೂಡಿಸಿ ಅದಕ್ಕೆ ಧಾರ್ಮಿಕ ದಿಕ್ಕನ್ನು ತೋರಿಸದಿದ್ದರೆ  ಅದಕ್ಕೆ ಅರ್ಥವಿರುವುದಿಲ್ಲ ಎಂದು. ಈ ಕಾರಣಕ್ಕಾಗಿಯೇ ಅವರು ತಮ್ಮ ಹದಗೆಡುತ್ತಿದ್ದ ಆರೋಗ್ಯದ ಮಧ್ಯೆ ಸ್ವೀಕರಿಸಿದ್ದು ಬೌದ್ಧಧರ್ಮ ಮತ್ತು ಅಂಥ ಮುನ್ಸೂಚನೆ ಸಿಕ್ಕಿದ್ದರಿಂದಲೇ ಅಂದರೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿದ್ದರಿಂದಲೆ ಅವರು ತಾವು ಪುನರುತ್ಥಾನಗೊಳಿಸಿದ ಅಂತಹ ಧರ್ಮದ ನೆಲೆಗಟ್ಟಾಗಿ ಬುದ್ಧಧರ್ಮವನ್ನು ಕುರಿತು “ ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿ ಬರೆದದ್ದು. ಯಾಕೆಂದರೆ ಅದಾಗಲೆ ಮಹಾಬೋಧಿ ಸೊಸೈಟಿ ಮತ್ತು ಮತ್ತಿತರ ಬೌದ್ಧ ಸೊಸೈಟಿಗಳು ಭಾರತದಲ್ಲಿ ಇದ್ದವಾದರು ಅವ್ಯಾವುದಕ್ಕೂ ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನಕ್ಕೆ ಸ್ಪಷ್ಟ ರೂಪುರೇಷೆ ಅಥವಾ ಟಾರ್ಗೆಟ್ ಗ್ರೂಪ್ ಇರಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಬೌದ್ಧಧರ್ಮವನ್ನು ಈ ರಾಷ್ಟ್ರದ ಜನಮಾನಸದ ಧರ್ಮವಾಗಿ ಬೆಳೆಸುವ ಆಲೋಚನೆ ಇತ್ತು. ಬರೀ ದಲಿತರಿಗೆ ಮಾತ್ರ ಆ ಧರ್ಮ ಎಂಬಂತೆಯಲ್ಲ. ಸಮಸ್ತ ಭಾರತೀಯರಿಗೂ ಆ ಧರ್ಮದ ಆಶಯಗಳನ್ನು ತಲುಪಿಸಬೇಕೆಂಬ ಆಶಯವಿತ್ತು ಅಂಬೇಡ್ಕರರಿಗೆ . ಹಾಗಂತ ಅಂಬೇಡ್ಕರರು ತಮ್ಮ ಆಪ್ತ ಅನುಯಾಯಿಗಳಲ್ಲಿ ಹೇಳಿಕೊಂಡಿದ್ದರು. ಅವರ ಈ ಆಶಯಗಳನ್ನು ಉಲ್ಲೇಖಿಸುತ್ತ ಅವರ ಸಹಪಾಠಿಯಾಗಿದ್ದ ಭಗವಾನ್‍ದಾಸ್‍ರವರು ತಮ್ಮ “ಇನ್ ಪಸ್ರ್ಯೂಟ್ ಆಫ್ ಅಂಬೇಡ್ಕರ್” ಕೃತಿಯಲ್ಲಿ ಹೀಗೆ ಹೇಳುತ್ತಾರೆ “ಅವರು( ಅಂಬೇಡ್ಕರ್) ಬೌದ್ಧಧರ್ಮ ಅಸ್ಪøಶ್ಯರ ಏಕಾಧಿಪತ್ಯಕ್ಕೆ ಒಳಪಡುವುದರ ಪರ ಇರಲಿಲ್ಲ. ಬದಲಿಗೆ ಅದು ಇಡೀ ಪ್ರಪಂಚದಲ್ಲೇ ಮಾನವತೆ ಮತ್ತು ಸಹೋದರತೆಯನ್ನು ಪ್ರಚುರಪಡಿಸುವ ಸಾಧನವಾಗಬೇಕು” ಎಂದು ಆಶಿಸಿದ್ದರು ಎನ್ನುತ್ತಾರೆ ಭಗವಾನ್‍ದಾಸ್‍ರವರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಇನ್ನಷ್ಟೂ ಆಶಯಗಳನ್ನು ಅವರು ಉಲ್ಲೇಖಿಸುತ್ತಾರೆ ಅವುಗಳೆಂದರೆ

 1. ಪ್ರತಿಯೊಬ್ಬ ಬೌದ್ಧನು ತನ್ನ ಬಳಿ ಬೌದ್ಧಧರ್ಮದ ಧರ್ಮ ಗ್ರಂಥವೊಂದನ್ನು ಇಟ್ಟುಕೊಳ್ಳಬೇಕು ಮತ್ತು ಆ ಗ್ರಂಥ  ಬುದ್ಧನ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಬಿಂಬಿಸಬೇಕು.

 2. ಹೇಗೆ ಕ್ರಿಶ್ಚಿಯನ್ನರು ಒಂದು  ಅಧಿಕಾರಯುತ ಮತಾಂತರ ಪದ್ಧತಿಯನ್ನು ಇಟ್ಟುಕೊಂಡಿದ್ದಾರೋ ಅಂತಹದ್ದೆ ಮಾದರಿಯ  ಮತಾಂತರ ಪದ್ಧತಿಯನ್ನು ಬೌದ್ಧರು ಕೂಡ ಹೊಂದಬೇಕು. ಅಂದಹಾಗೆ ಅಂತಹ ಮತಾಂತರದಲ್ಲಿ ಬರೀ ಬೌದ್ಧ ಪಂಚಶೀಲಗಳಷ್ಟೆ ಅಲ್ಲ ಬದಲಿಗೆ  ಭಾರತದಲ್ಲಿ ಬೌದ್ಧಧರ್ಮ ಸ್ವೀಕರಿಸಿದ ವ್ಯಕ್ತಿಯೊಬ್ಬ  “ಇನ್ನುಮುಂದೆ ನಾನು ಹಿಂದೂ ಅಲ್ಲ,  ನಾನೊಬ್ಬ ಹೊಸ ಮನುಷ್ಯ” ಎಂಬ ಭಾವನೆ ಮೂಡಬೇಕು  ಎನ್ನುತ್ತಾರೆ ಅಂಬೇಡ್ಕರ್‍ರವರು . ಈ ಕಾರಣಕ್ಕೆ ತಮ್ಮದೇ 22 ದೀಕ್ಷಾ ವಿಧಿಗಳನ್ನು ಸಹ ಅಂಬೇಡ್ಕರರು ಪ್ರತಿಷ್ಠಾಪಿಸುತ್ತಾರೆ. ಅವುಗಳಲ್ಲಿ ನಾನು ಹಿಂದೂ ದೇವರುಗಳನ್ನು ನಂಬುವುದಿಲ್ಲ, ಬ್ರಹ್ಮ, ವಿಷ್ಣು, ಶಿವ ಇವರುಗಳನ್ನು ನಂಬುವುದಿಲ್ಲ, ಬುದ್ಧ ವಿಷ್ಣುವಿನ ಅವತಾರ ಎಂದು ನಂಬುವುದಿಲ್ಲ  ಎಂಬಿತ್ಯಾದಿ ಅಂಶಗಳಿವೆ.

 3. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಉಪಾಸಕರನ್ನು ನೇಮಿಸಿಕೊಳ್ಳಬೇಕು ಮತ್ತು ಅವರು ವಿವಾಹಿತರಾಗಿರಬೇಕು. ಅಲ್ಲದೆ ಧರ್ಮ ಪ್ರಚಾರ ಮಾಡುವ ಅವರಿಗೆ ಸೂಕ್ತ ವೇತನ ನೀಡಬೇಕು  ಮತ್ತು ಅವರು ಬೌದ್ಧ ಧರ್ಮ ಪ್ರಚಾರ ಕಾರ್ಯವನ್ನು ಪಾರ್ಟ್‍ಟೈಮ್ ವೃತ್ತಿಯಾಗಿ ಸ್ವೀಕರಿಸಬೇಕು.

 4. ಬೌದ್ಧ ಧರ್ಮ ಪ್ರಚಾರಕ್ಕಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತಹ ಕೇಂದ್ರಗಳಲ್ಲಿ  ಉಪಾಸಕರಿಗೆ ತರಬೇತಿ ನೀಡುವ, ಬೇರೆ  ಧರ್ಮಗಳ ಬಗ್ಗೆ ತಿಳಿದು ಕೊಳ್ಳುವ ವ್ಯವಸ್ಥೆಯಾಗಬೇಕು.

 5. ಪ್ರತಿ ಭಾನುವಾರ ಜನರು ಬೌದ್ಧ ವಿಹಾರವೊಂದರಲ್ಲಿ ಸೇರಬೇಕು ಮತ್ತು ಅಲ್ಲಿ ಅವರು ಬುದ್ಧನ್ನು ಪೂಜಿಸಬೇಕು ಹಾಗೆಯೇ ಅಲ್ಲಿ ಬುದ್ಧನ ಕುರಿತು ಉಪನ್ಯಾಸವಿರಬೇಕು.
           
    ಹೀಗೆ  ಅಂಬೇಡ್ಕರರ ಆಶಯಗಳನ್ನು ಹೇಳುತ್ತಾ ಹೋಗುತ್ತಾರೆ ಭಗವಾನ್‍ದಾಸ್‍ರವರು. ಒಂದಂತು ನಿಜ,  ಬೌದ್ಧ ಧರ್ಮದ ಪ್ರಚಾರಕ್ಕಾಗಿ ಅಂಬೇಡ್ಕರರು ತುಂಬಾ ಸೀರಿಯಸ್ ಆಗಿದ್ದರು.  ಧರ್ಮ ಸ್ವೀಕಾರ ಮತ್ತು ಪ್ರಚಾರವನ್ನು ಅವರು ಹಗುರವಾಗಿ ತೆಗೆದುಕೊಂಡಿರಲಿಲ್ಲ. ಏನಾದರೂ ಅವರು ಇನ್ನೊಂದಿಷ್ಟು ವರುಷ ಬದುಕಿದ್ದೇ ಆದರೆ  ಇಡೀ ಭಾರತವನ್ನು ಬೌದ್ಧ ಭಾರತ ಮಾಡಿ ಬಿಡುತ್ತಿದ್ದರು. ಆದರೆ ಜೀವನದ ಅಂತ್ಯ ಅವರಿಗೆ ಅಂತಹ ಅವಕಾಶ ಕೊಡಲಿಲ್ಲ. ಅದೇನೆ ಇರಲಿ, ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾರಕರೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿ ಹೋಗಿದೆ. ಈ ನಿಟ್ಟಿನಲಿ ಅವರ ಆ ಧರ್ಮ ಪುನರುತ್ಥಾನದ ಧಾರ್ಮಿಕ ಪ್ರಕ್ರಿಯೆಯ ನಿರಂತರತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಷ್ಟೆ.
                                         



Monday, 2 June 2014

     ಕೆ.ಆರ್.ಎಸ್.ನಿರ್ಮಾಣ: ಮತ್ತಷ್ಟು ಇತಿಹಾಸ

                                         


    -ರಘೋತ್ತಮ ಹೊ.ಬ


  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್  ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು  ಮೈಸೂರಿನ ಅಂದಿನ ಮಹಾರಾಜ  ನಾಲ್ವಡಿ ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!
 
   ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನಿರಂತರ ನೀರು ಸರಬರಾಜು ಮಾಡಲು ಶಿವನಸಮುದ್ರದ ಹತ್ತಿರ ತೋರೆಕಾಡನಹಳ್ಳಿ ಎಂಬಲ್ಲಿ ಚೆಕ್‍ಡ್ಯಾಂ ನಿರ್ಮಿಸಲು  ಕೂಡ ಒಡೆಯರ್‍ರವರು ಆಲೋಚಿಸಿದರು.  ಹಾಗೆಯೇ ಅದರ ನಿರ್ಮಾಣ ಕೂಡ ಆಯಿತು ಆದರೆ ಕೆಲವೇ ಅಡಿಗಳಷ್ಟಿದ್ದ ಚೆಕ್‍ಡ್ಯಾಂ ನೀರು ಏನೇನಕ್ಕು ಸಾಲುತ್ತಿರಲಿಲ್ಲ. ಕಡೆಗೆ ಚಿನ್ನದ ಗಣಿಗೆ ವಿದ್ಯುತ್ ಪೂರೈಕೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ ಅವರು  1904 ರಲ್ಲಿ ಜೋಗ್ ಬಳಿ ವಿದ್ಯುತ್ ಉತ್ಪಾದನೆ ಮಾಡಲು ಅನುಮತಿ  ಕೋರಿ ಅಂದಿನ ಬ್ರೀಟಿಷ್ ವೈಸ್ ರಾಯ್ ಲಾರ್ಡ ಕರ್ಜನ್‍ರವರಿಗೆ ಪತ್ರ ಕೂಡ ಬರೆದರು. ಆದರೆ ಪರಿಸರದ ನೆಪ ಒಡ್ಡಿ ಕರ್ಜನ್ ಅದಕ್ಕೆ ಅನುಮತಿ  ನೀಡಲಿಲ್ಲ. ಕಡೆಗೆ ಬೇರಾವ ದಾರಿ ಕಾಣದೆ ಒಡೆಯರ್‍ರವರು ಜೋಗ್‍ನಲ್ಲಿ ವಿದ್ಯುತ್ ಉತ್ಪತ್ತಿ ಮಾಡುವ ಆಲೋಚನೆ  ಕೈಬಿಟ್ಟು ಶಿವನಸಮುದ್ರಕ್ಕೆ ನಿರಂತರ ನೀರು ಒದಗಿಸುವ ದಿಕ್ಕಿನಲಿ ಮತ್ತೆ ಆಲೋಚನೆಗಿಳಿದರು.  ಈ ಸಂಧರ್ಭದಲ್ಲಿ ಅವರ ಆ ಆಲೋಚನೆಗೆ ಆಗ ಕೈ ಜೋಡಿಸಿದ್ದು  ಆಗಿನ ಮೈಸೂರು ಪ್ರಾಂತ್ಯದ ಮುಖ್ಯ ಇಂಜಿನಿಯರ್ ಆಗಿದ್ದ ಮ್ಯಾಕ್ ಹಚ್‍ರವರು.
 
  ಅಂದಹಾಗೆ ಮಹಾರಾಜರ ಆ ಆಲೋಚನೆಗೆ ಇಂಬು ಕೊಡಲೆಂಬಂತೆ 120 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್  ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಎಂಬಲ್ಲಿ  ಅಣೆಕಟ್ಟೆ ನಿರ್ಮಿಸಲು ಯೋಜನೆ ರೂಪಿಸಿ ಶಂಕು ಸ್ಥಾಪನೆಗೈದಿರುವ ಹಳೆ ಕಡತವೊಂದು ಅವರ ಕಣ್ಣಿಗೆ ಬಿತ್ತು. ಈ ನಿಟ್ಟಿನಲ್ಲಿ ಶಿವನಸಮುದ್ರದ ವಿದ್ಯುತ್ ಕೇಂದ್ರಕ್ಕೆ ತಕ್ಷಣ ಮತ್ತು ಶಾಶ್ವತ ಪರಿಹಾರವಾಗಿ, ನಿರಂತರ ನೀರು ಒದಗಿಸಲು ಇದೇ ತಕ್ಕ ಯೋಜನೆ ಎಂದು ಪರಿಗಣಿಸಿದ ಅವರು ಟಿಪ್ಪು ಸುಲ್ತಾನನ  ಕನಸಿನ ಯೋಜನೆಗೆ  ಮರು ಜೀವ ನೀಡಲು ತಮ್ಮ ಇಂಜಿನಿಯರ್‍ರÀಗಳ ತಂಡಕ್ಕೆ  ಸೂಚಿಸಿದರು. ಅಂದಹಾಗೆ ಅಣೆಕಟ್ಟು ಕಟ್ಟಲು ಒಡೆಯರ್‍ರವರು ಸೂಚನೆ ನೀಡಿದ(1906) ಇಂಜಿನಿಯರ್‍ಗಳ ಆ ತಂಡದಲ್ಲಿ  ವಿಶ್ವೇಶ್ವರಯ್ಯನವರಿರಲಿಲ್ಲ! ಅಥವಾ ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯನವರ ಆಗಮನ ಇನ್ನು ಆಗೇ ಇರಲಿಲ್ಲ!
 
  ಇರಲಿ, ಕನ್ನಂಬಾಡಿಯಲ್ಲಿ ಅಣೆಕಟ್ಟೆಯನ್ನೇನೊ ಕಟ್ಟಲು  ಮಹಾರಾಜರು ನಿರ್ಧರಿಸಿದರು. ಆದರೆ ಬ್ರಿಟಿಷ್ ರೆಸಿಡೆಂಟರಿಂದ ಅವರಿಗೆ ಸಿಕ್ಕಿದ್ದು ಕೇವಲ 70 ಅಡಿ ಎತ್ತರ ಕಟ್ಟಲು ಹಾಗೂ 60ಅಡಿ ನೀರು ಸಂಗ್ರಹಿಸಲು ಮಾತ್ರ. ಈ ನಿಟ್ಟಿನಲಿ ಬ್ರೀಟಿಷರ ನಿಲುವನ್ನು ಮಹಾರಾಜರು ಸುತಾರಾಂ ತಿರಸ್ಕರಿಸಿದರು. ಈ ನಡುವೆ ಬ್ರೀಟಿಷರು ಮತ್ತೊಂದು ಕಂಡೀಷನ್ ಹಾಕಿದರು. ಅದೇನೆಂದರೆ ಕೆ.ಆರ್.ಎಸ್ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬೇಕು, ಹಾಗೆಯೇ ಹಾಗೆ ಉತ್ಪತ್ತಿಯಾದ ವಿದ್ಯುತ್ತಿನಲ್ಲಿ ಚಿನ್ನದಗಣಿಗೆ ಸಾಗಿಸಿ ಉಳಿದ ವಿದ್ಯುತ್ತನ್ನು ತಮ್ಮ ನೇರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಮತ್ತು ಕೊಯಮತ್ತೂರಿಗೆ ಒದಗಿಸಬೇಕು ಎಂಬುದೇ ಆ ಕಂಡೀಷನ್. ಆದರೆ ಈ ಕಂಡೀಷನ್‍ಗೆ ಸಹ ಒಡೆಯರ್ ಜಗ್ಗಲಿಲ್ಲ. ಬದಲಿಗೆ  ಕೃಷಿಗೆ ವಿದ್ಯುತ್ ಮತ್ತು ನೀರು ಒದಗಿಸುವ ತಮ್ಮ ನಿಲುವಿಗೆ ಅವರು ಕಟಿಬದ್ಧರಾದರು. ಅಂತಿಮವಾಗಿ ಮಹಾರಾಜರ  ಈ ನಿಲುವಿಗೆ ಬ್ರಿಟೀಷರು ತಲೆಬಾಗಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಸಮ್ಮತಿಸಿದರು. 90ಅಡಿ ಎತ್ತರ ಮತ್ತು 80ಅಡಿ ನೀರು ಸಂಗ್ರಹಿಸಲು ಮತ್ತು ಮುಂದೆ ವಿಸ್ತರಿಸಬಹುದಾದ ಅವಕಾಶ ನೀಡಿ ಒಪ್ಪಿಗೆ ನೀಡಿದರು. ಈ ಸಂಧರ್ಭದಲ್ಲಿ ಬ್ರಿಟಿಷ್ ರೆಸಿಡೆಂಟರಿಂದ ಒಪ್ಪಿಗೆ ಸಿಕ್ಕಿದ್ದೆ ತಡ ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಮತ್ತವರ ತಂಡ  ಜಲಾಶಯದ ನಿರ್ಮಾಣಕ್ಕೆ ಕಾರ್ಯೋನ್ಮುಖವಾಯಿತು. ಅಂದಹಾಗೆ ಜಲಾಶಯ ನಿರ್ಮಾಣದ ಪ್ರಾಥಮಿಕ ತಯಾರಿ ನಡೆದ ಈ ಸಂಧರ್ಭದಲ್ಲಿಯೂ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ!

   ಇನ್ನು ಅದು 1908ರ ಅಂತ್ಯದ ಸಮಯ. ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಸೇವೆಯಿಂದ ನಿವೃತ್ತರಾದರು.  ಸ್ವಾಭಾವಿಕವಾಗಿ ತೆರವುಗೊಂಡ ಆ ಸ್ಥಾನಕ್ಕೆ ಕ್ಯಾಪ್ಟನ್ ಡೇವಿಸ್‍ರವರು ಮುಖ್ಯ ಇಂಜಿನಿಯರಾಗಿ ನೇಮಕಗೊಂಡರು ಹಾಗೆಯೆ ಕನ್ನಂಬಾಡಿ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನಿಟ್ಟು ಅದರ ಪಾತ್ರವನ್ನು ಬದಲಿಸುª  ಹಚ್‍ರವರ ಕಾಮಗಾರಿಯನ್ನು ಡೇವಿಸ್‍ರವರು  ಮುಂದುವರೆಸಿದರು. ದುರಂತವೆದಂರೆ 1909ರ ಮೇ-ಜೂನ್ ಮುಂಗಾರಿನ ತಿಂಗಳು. ನದಿಯ ಪ್ರವಾಹ ಉಕ್ಕಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಮರಳು ಮೂಟೆಗಳೆಲ್ಲವು ಪ್ರವಾಹಕ್ಕೆ ಕೊಚ್ಚಿ ಹೋದವು. ಇದನ್ನು ತಡೆಯುವ ನಿಟ್ಟಿನಲ್ಲಿ ರಾತ್ರೋರಾತ್ರಿ ತೆಪ್ಪಗಳೊಂದಿಗೆ ಕಾರ್ಮಿಕರ ಜೊತೆ ಕಾರ್ಯಾಚರಣೆಗೆ ಇಳಿದ ಕ್ಯಾ.ಡೇವಿಸ್ ತನ್ನ ಸಹಪಾಠಿ ಕಾರ್ಮಿಕನೋರ್ವನನ್ನು ಉಳಿಸಲು ಹೋಗಿ ನದಿಯ ಪ್ರವಾಹದಲ್ಲಿ ಕೋಚ್ಚಿಹೋದ.  ಘಟನೆಯಲ್ಲಿ ಕ್ಯಾ.ಡೇವಿಸ್ ಹಠಾತ್ ಸಾವಿಗೀಡಾದ. ಈ ಕಾರಣದಿಂದಾಗಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹುದ್ದೆ ಖಾಲಿಬಿದ್ದಿತು.
 
   ಇದೇ ಸಂಧರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ ಒಳಗೊಳಗೆ ಮತ್ತೊಂದು ಹೋರಾಟ ಪ್ರಾರಂಭವಾಗಿತ್ತು. ಅದು ಮೈಸೂರು  ಮೈಸೂರಿಗರಿಗೆ ಎಂಬ ಹೋರಾಟ. ಅಂದರೆ ಮೈಸೂರು ಪ್ರಾಂತ್ಯದಲ್ಲಿದ್ದ ಮದ್ರಾಸಿ ಅಧಿಕಾರಿಗಳನ್ನು ಓಡಿಸುವ  ಹೋರಾಟವದು. ಈ ಹೋರಾಟ ಕಾವು  ಪಡೆದುಕೊಳ್ಳುತ್ತಿದ್ದಂತೆ ಇದನ್ನು ಶಮನಮಾಡುವ ನಿಟ್ಟಿನಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು   ಚಿಂತನೆಗಿಳಿದರು ಹಾಗೆಯೇ ಅದೇ ಸಮಯದಲ್ಲಿ ಖಾಲಿಯಾದ ಮುಖ್ಯ ಇಂಜಿನಿಯರ್ ಹುದ್ದೆಗೆ ಬೇರೋಬ್ಬರನ್ನು ನೇಮಿಸಬೇಕಾದ ಅನಿವಾರ್ಯತೆ ಕೂಡ ಅವರಿಗೆ ಎದುರಾಯಿತು.   ಇಂಜಿನಿಯರ್ ನೇಮಕ ಮತ್ತು ಮೈಸೂರು ಮೈಸೂರಿಗರಿಗೆ ಎಂಬ ಎರಡೂ ಬೇಡಿಕೆಯ ಹಿನ್ನೆಲೆಯಲ್ಲಿ ಮಹಾರಾಜರು ದೂರದ ಮುಂಬಯಿಯಲ್ಲಿ ಕಾರ್ಯನಿರ್ªÀಹಿಸುತ್ತಿದ್ದ ಮೈಸೂರು ಸಂಸ್ಥಾನದವರೆ ಆದ ವಿಶ್ವೇಶ್ವರಯ್ಯರವರನ್ನು ಮುಖ್ಯ ಇಂಜಿನಿಯರ ಹುದ್ದೆಗೆ ನೇಮಿಸಿಕೊಂಡರು. ಈ ನಿಟ್ಟಿನಲಿ ಮಹಾರಾಜರ ಆದೇಶದ ಮೇರೆಗೆ 1909ರ ಅಂತ್ಯದಲ್ಲಿ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದುಕೊಂಡರು! ಅಂದಹಾಗೆ ಅವರು ಹಾಗೆ ಸಂಸ್ಥಾನಕ್ಕೆÀ ಸೇವೆಗೆ ಪ್ರವೇಶಪಡೆಯುತ್ತಿದ್ದಂತೆ ಇಂಜಿನಿಯರರಾದ ಅವರ ಹೆಗಲ ಮೇಲೆ ಸಂಸ್ಥಾ£ದÀ ಎಲ್ಲ ನಿರ್ಮಾಣದ ಕಾಮಗಾರಿಗಳ ಹೊರೆಯು ಬಿತ್ತು. ಹಾಗೆಯೆ ಕೆ.ಆರ್.ಎಸ್ ನಿರ್ಮಾಣ ಕಾಮಗಾರಿ  ಕೂಡ.  ಯಾಕೆಂದರೆ ಮೊದಲೇ ತಿಳಿಸಿದ ಹಾಗೆ ಅದಾಗಲೆ  ಜಲಾಶಯ ನಿರ್ಮಾಣದ ಪ್ರಾಥಮಿಕ ಕಾರ್ಯಗಳು ಜಾರಿಯಲ್ಲಿತ್ತು. ಈ ನಿಟ್ಟಿನಲಿ ಇದಕ್ಕೆ ಸಾಕ್ಷಿ ಬೇಕೆನ್ನುವವರು ಸ್ವತಃ ವಿಶ್ವೇಶ್ವರಯ್ಯನವರೆ ತಮ್ಮ ಆತ್ಮಕಥೆ “ನನ್ನ ವೃತ್ತಿ ಜೀವನದ ನೆನಪುಗಳು “ ಕೃತಿಯಲ್ಲಿ ನಾನು ಬರುವುದಕ್ಕೆ ಮೊದಲೆ ಶ್ರೀರಂಗಪಟ್ಟಣದಿಂದ 10 ಮೈಲು ದೂರದಲ್ಲಿ ಕಾವೇರಿ ನದಿಯ ಪಶ್ಚಿಮ ದಂಡೆ ಮೇಲೆ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣದ ಕಾಮಗಾರಿ ನೆಡೆದಿತ್ತು. ಎಂದು ಬರೆದಿರುವುದನ್ನು ಗಮನಿಸಬಹುದು. ಆ ಮೂಲಕ ಪ್ರಾಮಾಣಿಕವಾಗಿ ಸ್ವತಃ ಸರ್.ಎಂ.ವಿ.ರವರೆ ಜಲಾಶಯದ ನಿರ್ಮಾಣದ ಕಾಮಗಾರಿ ತನ್ನ ಆಗಮನಕ್ಕೂ ಮೊದಲೇ ಪ್ರಾರಂಭಗೊಂಡಿತ್ತೆಂಬುದನ್ನು ಸೂಚಿಸಿದ್ದಾರೆ. ಒಟ್ಟಾರೆ  ಈ ನಿಟ್ಟಿನಲಿ ಹೇಳುವುದಾದರೆ ಕೆ.ಆರ್.ಎಸ್ ವಿಶ್ವೇಶ್ವರಯ್ಯನವರ ಕನಸಿನ ಕೂಸಂತು ಅಲ್ಲ. ಟಿಪ್ಪು ಕನಸಿದ್ದÀನ್ನು ನಾಲ್ವಡಿರವರು   ಕಾರ್ಯರೂಪಕ್ಕೆ ತಂದ  ಸಂದರ್ಭದಲ್ಲಿ ಮಧ್ಯ ಇಂಜಿನಿಯರರಾಗಿ ನೇಮಕಗೊಂಡು ಅವರು ಕೆಲಸ ಮುಂದುವರೆಸಿದ್ದಾರೆ ಅಷ್ಟೆ! ಈ ನಿಟ್ಟಿನಲ್ಲಿ ಇಂಜಿನಿಯರ್  ಕ್ಯಾ.ಡೇವಿಸ್ ಏನಾದರು ಸಾಯದಿದ್ದರೆ ವಿಶ್ವೇಶ್ವರಯ್ಯನವರು ಮೈಸೂರು  ಸಂಸ್ಥಾನಕ್ಕೆ ಬರುತ್ತಿರಲೇ ಇರಲಿಲ್ಲ. ಹಾಗೆಯೇ ಕೆ.ಆರ್.ಎಸ್ ನಿರ್ಮಾಣದ ಶ್ರೇಯಸ್ಸು ಅವರ ಹೆಸರಿಗೆ ಹೈಜಾಕ್ ಆಗುವುದು ಕೂಡ ನೆಡೆಯುತ್ತಿರಲಿಲ್ಲ. ಕ್ಯಾ.ಡೇವಿಸ್ ಸದ್ದಿಲ್ಲದೆ ಸಂಬಳಪಡೆದು ಕಾಮಗಾರಿ ಮುಗಿಸುತ್ತಿದ್ದ!
 
  ಇರಲಿ, ಈ ನಡುವೆ ಮಹಾರಾಜರ ವಿಶ್ವಾಸ ಸಂಪಾದಿಸಿದ ವಿಶ್ವೇಶ್ವರಯ್ಯನವರು ಮೈಸೂರು ಮೈಸೂರಿಗರಿಗೆ ಎಂಬ ತತ್ವದ ಅಡಿಯಲ್ಲಿ  ದಿವಾನ ಹುದ್ದೆಗೂ ಕೂಡ ನೇಮಿಸಲ್ಪಟ್ಟರು. ಅಂದಹಾಗೆ ಆಗ ತೆರವಾದÀ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಿಸಲ್ಪಟ್ಟವರು ಯಾರು? ಯಾರು ಯಾಕೆ ಅವರ ಹೆಸರು ಹೇಳುವುದಿಲ್ಲ? ಕೆ.ಆರ್.ಎಸ್ ಇತಿಹಾಸದ ದ್ವಂದ್ವವೆಂದರೆ ಇದೇ! ಇರಲಿ, 1911ರಲ್ಲಿ ನದಿ ಪ್ರವಾಹ ಬದಲಿಸುವ ಕಾರ್ಯ ಮುಗಿದು ಜಲಾಶಯದ ಕಟ್ಟಡ ಕಾಮಗಾರಿ ಪ್ರಾರಂಭ ವಾಯಿತು. ಈನಿಟ್ಟಿನಲ್ಲಿ 2ಕೋಟಿ 70ಲಕ್ಷ ಬಜೆಟ್ಟಿನ ಈ  ಯೋಜನೆ ಹಣದ ಕೊರತೆಯನ್ನೆದುರಿಸಿತು. ಯಾಕೆಂದರೆ ಮೈಸೂರು ರಾಜ್ಯದ ಅಂದಿನ ಒಟ್ಟು ಬಜೆಟ್ಟೆ 2ಕೋಟಿ 30ಲಕ್ಷ. ಹೀಗಿರುವಾಗ ಜಲಾಶಯಕ್ಕಾಗಿ  2ಕೋಟಿ 70ಲಕ್ಷ ತರುವುದು? ಅಂದಹಾಗೆ  ಈ ಸಂಧರ್ಭದಲ್ಲಿ ಧೃತಿಗೆಡದ  ಮಹಾರಾಜ ನಾಲ್ವಡಿಯವರು  ತಮ್ಮ ತಾಯಿ ಮತ್ತು ತಮ್ಮ ಧರ್ಮಪತ್ನಿಯವರಿಗೆ ಸೇರಿದ 4 ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಾಟ ಮಾಡಿ ಹಣ ಒದಗಿಸಿದರು. ಅಂದಹಾಗೆ ಅಣೆಕಟ್ಟು ನಿರ್ಮಾಣಕ್ಕೆ ಮಹಾರಾಜರು ಒದಗಿಸಿದ ಆ 2ಕೋಟಿ 70ಲಕ್ಷ ರೂಗಳಲ್ಲಿ ಮುಖ್ಯ ಇಂಜಿನಿಯರ್ ವಿಶ್ವೇಶ್ವರಯ್ಯನವರ ಸಂಬಳವೂ ಕೂಡ ಸೇರಿತ್ತು!
 
  ಇರಲಿ, ಮೊದಲೆ ಹೇಳಿದಹಾಗೆ ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಬೇರೊಬ್ಬರು ಮುಖ್ಯ ಇಂಜಿನಿಯರರಾಗಿ ನೇಮಕಗೊಂಡರು. ಬಳಿಕ ಆ ಹೊಸ ಇಂಜಿನಿಯರ್ ಕೆ.ಆರ್. ಎಸ್ ನಿರ್ಮಾಣದ ಕಾಮಗಾರಿ ಮುಂದುವರೆಸಿದರು. ಅಂದಹಾಗೆ   ಜಲಾಶಯದಲ್ಲಿ ಈಗಲೂ ಕೆ.ಆರ್.ಎಸ್. ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ 50ಕ್ಕೂ ಹೆಚ್ಚು ಇಂಜಿನಿಯರ್‍ಗಳ ಹೆಸರನ್ನೊಳಗೊಂಡ ನಾಮಫಲಕವಿದೆ. ಅದರಲ್ಲಿ ವಿಶ್ವೇಶ್ವರಯ್ಯ ಒಬ್ಬರಷ್ಟೆ. ಬರೀ ವಿಶ್ವೇರಯ್ಯರವರೊಬ್ಬರೇ ಅಲ್ಲ!
 
   ಅಂದಹಾಗೆ ಕೆಆರ್‍ಎಸ್‍ನ ಕಾಮಗಾರಿ ಹೀಗೆ ಮುಂದುವರಿದಿರಬೇಕಾದರೆ  ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವುದನ್ನು ವಿರೋಧಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರು ಮಹಾರಾಜರ ಜೊತೆ ವಿಶ್ವಾಸಕೆಡಿಸಿಕೊಂಡರು. ಯಾಕೆಂದರೆ ಮೀಸಲಾತಿ ನೀಡುವುದರಿಂದ ಪ್ರತಿಭೆಗಳಿಗೆ ಮೊಸವಾಗುತ್ತದೆ ಎಂಬ ತಮ್ಮನಿಲುವಿಗೆ ಅಂಟಿಕೊಂಡ ವಿಶ್ವೇಶ್ವರಯ್ಯನವರು ಒಬಿಸಿ ಮೀಸಲಾತಿಗೆ ಕಟಿಬದ್ಧರಾದ  ಮಹಾರಾಜರ ಕೆಂಗಣ್ಣಿಗೆ ಗುರಿಯಾದರು. ತತ್ಪರಿಣಾಮವಾಗಿ ಅವರು ದಿವಾನ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂತು ಮತ್ತು ಆಗ ಇಸವಿ 1918!

   ಹೌದು, ಕೆ.ಆರ್.ಎಸ್. ಕಟ್ಟಡ ಕಾಮಗಾರಿ ಪ್ರಾರಂಭ ವಾದದ್ದು 1911ರಲ್ಲಿ, ಮತ್ತೆ ಅದು ಹಾಗೆಯೇ ಮುಂದುವರೆದಿತ್ತು. ಪ್ರಶ್ನೆಯೇನೆಂದರೆ 1918ರಲ್ಲಿ ಸರ್.ಎಂ.ವಿ.ರವರು  ರಾಜೀನಾಮೆ ಇತ್ತಾಕ್ಷಣ ಕಾಮಗಾರಿ ನಿಂತು ಹೋಯಿತೆ ಎಂಬುದು? ಖಂಡಿತ ಇಲ್ಲ!  ಯಾಕೆಂದರೆ ಅದರ ನಿಜವಾದ ನಿರ್ಮಾತೃ ನಾಲ್ವಡಿಕೃಷ್ಣರಾಜ ಒಡೆಯರ್‍ರವರು ಅದಕ್ಕಾಗಿ ಉಸಿರು ಹಿಡಿದುಕೊಂಡು ಇದ್ದರಲ್ಲ! ಈ ಸಂಧರ್ಭದಲಿ ಮತ್ತೊಂದು ಆಕ್ಷೇಪಣೆ ಅದೇನೆಂದರೆ ಕೆ.ಆರ್.ಎಸ್ ನಿರ್ಮಾಣವೇ ವಿಶ್ವೇಶ್ವರಯ್ಯನ್ನವರ ಧ್ಯೇಯವಾಗಿದ್ದರೆ ಅವರು ರಾಜೀನಾಮೆ ನೀಡಬಾರದಿತ್ತು! ಕೆ.ಆರ್.ಎಸ್ ಕಟ್ಟಿಯೇ ನಾನು ಹೋಗುವುದು ಎಂದು ಅವರು ಹೇಳಬೇಕಿತ್ತು! ಊಹ್ಞೂಂ, ಅದ್ಯಾವುದೂ ನಡೆದಿಲ್ಲ! ವಿಶ್ವೇಶ್ವರಯ್ಯನವರು ರಾಜೀನಾಮೆ ಇತ್ತು ಹೋದರು ಜಲಾಶಯದ ಕಾಮಗಾರಿ ಅದರ ಪಾಡಿಗೆ ಅದು ನಡೆದಿತ್ತು!
 
  ಈ ನಿಟ್ಟಿನಲಿ ವಿಶ್ವೇಶ್ವರಯ್ಯನವರ ರಾಜೀನಾಮೆಯ ನಂತರ ಅವರು ನಂತರದ ದಿವಾನರುಗಳಿಗೆ ಸಹಾಯಕರಾದದ್ದಾಗಲಿ ಸಲಹೆಗಾರರಾದದ್ದಾಗಲಿ ಎಂಥದ್ದು ಇಲ್ಲ! ಕಡೆ ಪಕ್ಷ ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದವರಿಗೆ ಮೇಸ್ತ್ರಿಯಾಗಿಯಾದರೂ ಅವರಿದ್ದರೆ? ಉಹ್ಞೂಂ, ಅದೂ ಇಲ್ಲ! ಹಾಗಿದ್ದರೆ ಅದರ ನಿರ್ಮಾಣದ ಶ್ರೇಯಸ್ಸು ಅವರಿಗ್ಹೇಗೆ ಸಂದಿತು ಎಂಬುದು? ಯಾಕೆಂದರೆ ಅವರು ರಾಜೀನಾಮೆ ನೀಡಿದ 14 ವರ್ಷಗಳ ನಂತರ ಅಂದರೆ 1932 ರಲ್ಲಿ ಕಾಮಗಾರಿ ಮುಗಿದದ್ದು. ಅಂದಹಾಗೆ ಅಗಲೂ ಕೂಡ ನಾಲ್ವಡಿಯವರು ರಾಜರಾಗಿ ಮುಂದುವರಿದಿದ್ದರು ಮತ್ತು ತಾವು ಪ್ರಾರಂಭಿಸಿದ ಯೋಜನೆಯನ್ನು ತಾವೇ ತಮ್ಮ ಕೈಯಾರ ಉದ್ಘಾಟಿಸಿದರು. ದುರಂತವೆಂದರೆ ಅದರ ಶ್ರೇಯಸ್ಸು ಅವರಿಗೆ ಸಲ್ಲಲಿಲ್ಲ! ಅವರ ಕೈ ಕೆಳಗೆ ವೇತನಕ್ಕಾಗಿ ದುಡಿದವರೊಬ್ಬರಿಗೆ ಅದು ಸಂದಿತು! ಸತ್ಯ ಹೀಗಿರುವಾಗ, ಇತಿಹಾಸದಲ್ಲಿ ನಾಲ್ವಡಿಯವರಿಗೆ ಘಟಿಸಿರುವ ಇಂತಹ ಘೋರತೆಗೆ ಯಾರು ಹೊಣೆ?  ನಮ್ಮ ಕಣ್ಣೆದುರೇ ಒಬ್ಬ ಶ್ರೇಷ್ಠ ರಾಜನಿಗೆ ಅವನ ಸಾಧನೆಯ ಶ್ರೇಷ್ಠತೆ ಧಕ್ಕಲಿಲ್ಲವೆಂದರೆ? ಹಾಗಿದ್ದರೆ  ತನ್ನ ತನು ಮನ ಧನವನ್ನೆಲ್ಲ ಧಾರೆ ಎರೆದು ಆತ ಮಾಡಿದ ತ್ಯಾಗಕ್ಕೆ ಬೆಲೆಯಾದರೂ ಎಲ್ಲಿದೆ? ನಾಲ್ವಡಿಯವರಿಗೆ ಯಾರು ಇಂಥ ದ್ರೋಹ ಎಸಗಿದ್ದು? ವಿಶ್ವೇಶ್ವರಯ್ಯನವರಂತು ಖಂಡಿತ ಅಲ್ಲ. ಕಪೋಲಕಲ್ಪಿತ ಕಥೆ ಕಟ್ಟಿದ ಅವರ ಅನುಯಾಯಿಗಳು. ಹಾಗೆ ಬಂಗಾರ ಮನುಷ್ಯ ಚಿತ್ರದಲ್ಲಿ “ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ..” ಎಂಬ ಅಂತಹದ್ದೊಂದು ಆಘಾತಕಾರಿ ಸಾಹಿತ್ಯ ಬರೆಸಿದ ಆ ನಿರ್ಮಾಪಕ ಹಾಗು ಬರೆದ ಆ ಕವಿ!