Wednesday, 12 November 2014

ಕರ್ಣಾಟಕದ ಇತಿಹಾಸದಲ್ಲೂ ಬಂಗಾರದಯುಗದ ಕಥೆ ಬರೆದಿದ್ದ ಸಾಮ್ರಾಟ್ ಅಶೋಕ

                          -ರಘೋತ್ತಮ ಹೊ.ಬ


   ಕರುನಾಡಿನ  ಇತಿಹಾಸ ಅಥವಾ ಕರ್ನಾಟಕದ ಇತಿಹಾಸ ಎಂದರೆ ಅಲ್ಲಿ ಕದಂಬರು, ಗಂಗರು, ರಾಷ್ಟ್ರಕೂಟರು,  ಚಾಳುಕ್ಯರು, ಹೊಯ್ಸಳರು, ಟಿಪ್ಪು, ಹೈದರಾಲಿ ಮತ್ತು  ಮೈಸೂರಿನ ಒಡೆಯರು, ಇದಿಷ್ಟೆ ಇತಿಹಾಸಕಾರರು ಬೆಳಕುಚೆಲ್ಲುವುದು ಮತ್ತು ಅಂತಹ ಬೆಳಕುಚೆಲ್ಲುವಿಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತದೆ. ಉದಾಹರಣೆಗೆ ಕದಂಬರ ಮಯೂರಶರ್ಮನನ್ನು  ಹೊಗಳುವುದು, ಟಿಪ್ಪು-ಹೈದರಾಲಿ, ನಾಲ್ವಡಿ ಕೃಷ್ಣರಾಜ ಒಡೆಯರ್‍ರನ್ನು ತೆಗಳುವುದು  ಅಥವಾ ಅಂತಹ ಮಹತ್ವ ನೀಡದಿರುವುದು ಇತ್ಯಾದಿ. ಇಂತಹ ತಾರತಮ್ಯದ ನಡುವೆ   ಕರುನಾಡಿನ ಅಂತಹ ಇತಿಹಾಸದಲ್ಲಿ ಸಾಮ್ರಾಟ್ ಅಶೋಕನ ಹೆಸರನ್ನು ತಪ್ಪಿಯೂ ಹೇಳುವುದಿಲ್ಲ! ಅಶೋಕ ಈ ನಾಡಿನಲ್ಲಿ ತನ್ನ ರಾಜ್ಯ ವಿಸ್ತರಿಸಿದ್ದರ ಬಗ್ಗೆ, ತನ್ನ ಧರ್ಮ ಮತ್ತು ರಾಜಕೀಯ ಪ್ರಬಾವಳಿಯನ್ನು ಇಲ್ಲಿ ಬೀರಿದÀ್ದರ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲುವುದಿಲ್ಲ ಅಥವಾ ರ್ಕಾಟಕದ ಇತಿಹಾಸದ ಪಾಠಗಳ ಪುಟಗಳಲ್ಲಿ ಪಠ್ಯ ಇರುವುದಿಲ್ಲ!  ಯಾಕೆ?  ಉತ್ತರ ಸರಳ. ಅಶೋಕ ಪಸರಿಸಿದ್ದು ವೈದಿಕರಿಗೆ ಒಗ್ಗದ ಬೌದ್ಧಧರ್ಮವನ್ನು. ಹಾಗೆಯೇ ವೈದಿಕರಿಗೆ ಒಲ್ಲದ ಶಾಂತಿ , ಸಾಮರಸ್ಯವನ್ನು!
      
   ಹಾಗಿದ್ದರೆ ಕರುನಾಡಿನ ಇತಿಹಾಸದಲ್ಲಿ ಅಶೋಕನಿಗೆ ಸ್ಥಾನವಿರಬೇಕಲ್ಲವೆ? ಯಾವ ಸಾಮ್ರಾಟ ಉತ್ತರದ ಈಗಿನ ಅಪ್ಘನಿಸ್ತಾನದ ಹಿಂದೂಖುಷ್ ಪರ್ವತಶ್ರೇಣಿಯಿಂದ ದಕ್ಷಿಣದ ರಾಜ್ಯದ ತುಂಗಭದ್ರಾ ನದಿಯವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದನೋ  ಅಂತಹ ಸಾಮ್ರಾಟನ ಪರಿಚಯ ಅಥವಾ  ಕರುನಾಡಿನಲ್ಲಿನ ಆತನ ಕಂಪಿನ ಬಗ್ಗೆ ಅರಿವಿರಬೇಕಲ್ಲವೆ? ಅರಿವಿರಬೇಕು ಹಾಗೇ ಅಭಾರಿಯೂ ಆಗಿರಬೇಕು. ಯಾಕೆಂದರೆ ‘ಬ್ರಾಹ್ಮಿ’ ಲಿಪಿಯ ಮೂಲಕ, ಪ್ರಾಕೃತ ಭಾಷೆಯ ಮೂಲಕ ಇಡೀ ಭಾರತಕ್ಕೆ ತನ್ನ ಶಾಸನಗಳ ಮೂಲಕ ಅಕ್ಷರ ಪರಿಚಿಯಸಿದÀ ಪÀ್ರಥಮ ಸಾಮ್ರಾಟನೆಂದರೆ ಅದು  ಅಶೋಕ ಮಾತ್ರ.  ಒಂದರ್ಥದಲಿ ಅಶೋಕ ಇಡೀ ಭರತ ಖಂಡಕ್ಕೆ ಜನಸಾಮಾನ್ಯರೂ ಸೇರಿದಂತೆ ಅಕ್ಷರ ಕಲಿಸಿದ ಸಾಕ್ಷರತೆಯ ಸಾಮ್ರಾಟ. ಇದನ್ನು ಅತಿಶಯೋಕ್ತಿಗೆ  ಹೇಳುತ್ತಿಲ್ಲ ಸ್ವತಃ ಖ್ಯಾತ ಇತಿಹಾಸಕಾರ ವಿನ್ಸೆಂಟ್ ಸ್ಮಿತ್‍ರವರೇ “I think it likely that the percentage of literacy among the Buddhist population in Ashoka’s time was higher than it is now in many provinces of British India” ಎನ್ನುತ್ತಾರೆ. (ಆಧಾರ: ASOKA by Radhakumud Mookerji, Pp.102). ಇದರರ್ಥ ಬ್ರಿಟಿಷ್  ಕಾಲದ ಭಾರತಕ್ಕಿಂತಲೂ  ಅಶೋಕನ ಕಾಲದ ಭಾರತದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿತ್ತು ಎಂದು!
       
    ಅಂದಹಾಗೆ ಕರುನಾಡಲ್ಲಿ ಅಥವಾ ಇಂದಿನ ಕರ್ನಾಟಕದಲ್ಲಿ ಅಶೋಕನ ಪ್ರಬಾವಳಿ ಹೇಗಿತ್ತು?  ಉತ್ತರ ಹುಡುಕುವುದಾದರೆ ಅಥವಾ ಅಶೋಕನ ಕುರಿತ ಅತ್ಯಂತ ಮಹತ್ವದ ಅಂಶ ವಿವರಿಸುವುದಾದರೆ ಈ ದೇಶದಲ್ಲಿ “ದೇವನಾಂಪ್ರಿಯ ಅಶೋಕ” ಎಂಬ ಅಶೋಕನ ನಿಜ ನಾಮಧೇಯ ಇರುವ ಏಕೈಕ ಶಾಸನ ದೊರಕಿದ್ದು ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ! ಖಂಡಿತ, ಇದು ಆಶ್ಚರ್ಯವೆನಿಸಿದರೂ ಸತ್ಯ. ಯಾಕೆಂದರೆ ಇಡೀ ಭರತ ಉಪಖಂಡದಲ್ಲಿ  ದೊರೆತ ಎಲ್ಲಾ ಶಾಸನಗಳಲ್ಲೂ  ಬರೇ ‘ ದೇವನಾಂಪ್ರಿಯ’ ಎಂತಲೋ ಅಥವಾ ಬರೇ ‘ಪ್ರಿಯದರ್ಶಿ ರಾಜಾ’ ಎಂತಲೋ ಉಲ್ಲೇಖವಿರುತ್ತಿತ್ತು.  ಆದರೆ ರಾಯಚೂರು ಜಿಲ್ಲೆಯ ಮಸ್ಕಿ ಶಾಸನದಲ್ಲಿ ಪ್ರಾಕೃತ ಭಾಷೆಯಲ್ಲಿ ‘ದೇವನಾಂಪಿಯಸ ಅಸೋಕಸ’ (of his gracious majesty, asoka) (ibid. Pp.12) ಎಂದಿತ್ತು!.
     
   ಬರೀ ಮಸ್ಕಿಯಲ್ಲಷ್ಟೆ ಅಲ್ಲ ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ (ಅಶೋಕನ  ಕಾಲದಲ್ಲಿ ಅದನ್ನು ‘ಇಸಿಲ’ ಎಂದು ಕರೆಯಲಾಗುತ್ತಿತ್ತು) ಹಾಗೂ ಬ್ರಹ್ಮಗಿರಿ, ಹಾಗೆಯೇ ಗುಲ್ಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ಅಶೋಕನ ಶಾಸನಗಳು ದೊರೆತಿವೆ. infact ಇಡೀ ದೇಶದಾದ್ಯಂತ ದೊರೆತಿರುವ 18 ಕಿಬ್ಬಂಡೆ  ಶಾಸನಗಳಲ್ಲಿ  ಶೇ.50 ಅಂದರೆ 9 ಶಾಸನಗಳು ರಾಜ್ಯದಲ್ಲೇ ದೊರೆತಿವೆ!  ಅಂದರೆ ಅಶೋಕನು ಕರ್ನಾಟಕ ರಾಜ್ಯವಾಳಿರುವ  ಪರಿಯನ್ನು ಎಂಥವರಾದರೂ ಊಹಿಸಬಹುದು. ಅದರಲ್ಲೂ ಸನ್ನತಿ “ಅಶೋಕನ ವಯಕ್ತಿಕ ಆಸಕ್ತಿಯಿಂದಾಗಿ ಮೌರ್ಯ ಸಾಮ್ರಾಜ್ಯದ ಒಂದು ಪ್ರಧಾನ ಆಡಳಿತ ಮತ್ತು  ಧಾರ್ಮಿಕ ಕೇಂದ್ರವಾಗಿ  ಬೆಳೆಯಿತು”(ಆಧಾರ: ಷ.ಶೆಟ್ಟರ್‍ರವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’, ಪು.77). ಅಲ್ಲದೆ ಅಲ್ಲಿ(ಸನ್ನತಿ) ದೊರಕಿರುವ ಮಹಾಸ್ತೂಪ ಮತ್ತು ಹಲವು ವಿಹಾರಗಳ ಅವಶೇಷಗಳ ಆಧಾರದ ಮೇಲೆ ಹೇಳುವುದಾದರೆ ಅಶೋಕನ ಕಾಲದಲ್ಲಿ ಅಲ್ಲಿ  ಪ್ರಾರಂಭವಾದ  ಅಂತಹ ಧಾರ್ಮಿಕ ಚಟುವಟಿಕೆಗಳು ಮತ್ತೂ ಮುಂದುವರಿದು ಅದು ಬೃಹತ್ ಬೌದ್ಧಕೇಂದ್ರವಾಗಿ ಬೆಳೆಯಿತು.
  
   ಇನ್ನು ಅಶೋಕನ ಕರ್ನಾಟಕದ ಸಾಮ್ರಾಜ್ಯದ ಬಗ್ಗೆ ಹೇಳುವುದಾದರೆ  ಸುವರ್ಣಗಿರಿಯನ್ನು ಆತ ತನ್ನ ದಖ್ಖಣದ (ಕರ್ನಾಟಕ-ಆಂಧ್ರ) ರಾಜಧಾನಿಯಾಗಿ ಮಾಡಿಕೊಂಡ. ಅಲ್ಲದೆ ಅದಕ್ಕೆ ಆಯಪುತ( ಆರ್ಯಪುತ್ರ)ನನ್ನು ನೇಮಕಮಾಡಿ ಆತನ ಸಹಾಯಕ್ಕೆ ‘ಮಹಾಮಾತ್ರ’ರನ್ನು ಕೂಡ ನೇಮಿಸಿದ. ಅಂದಹಾಗೆ ‘ಆರ್ಯಪುತ್ರ’ನೆಂಬುವವನು ಅಶೋಕನ ಸಮೀಪದ ಸಂಬಂಧಿ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ನಿಟ್ಟಿನಲಿ ಹೇಳುವುದಾದರೆ ಅಶೋಕನ ಸಾಮ್ರಾಜ್ಯ  ರಾಜ್ಯದ ತುಂಗಭದ್ರಾ ನದಿಯವರೆಗೆ ಇತ್ತು. ಹಾಗಿದ್ದರೆ ಅಲ್ಲಿಂದ ಕೆಳಗೆ  ದಕ್ಷಿಣಕ್ಕೆ  ಆ ಸಮಯದಲ್ಲಿ ಯಾರು ಆಳುತ್ತಿದ್ದರು? ಯಾವ ರಾಜ್ಯವಿತ್ತು? ಉತ್ತರ: ‘ಮಹಿಷ ಮಂಡಲ’ ಅಥವಾ ‘ಮಹಿಷೂರು’ ಅಥವಾ ಇಂದಿನ ‘ಮೈಸೂರು’! ಅಂದರೆ ‘ಮಹಿಷಾಸುರ’ ಅಂದಿನ ಮಹಿಷಮಂಡಲದ ಅರಸು ಎಂದಾಯಿತು. ಹಾಗೆಯೇ ‘ಮಹಿಷಮಂಡಲ’ಕ್ಕೆ (‘ಮಹಿಷ’ ಎಂದರೆ ‘ಎಮ್ಮೆ’ ಎಂದರ್ಥ) ಅಂದಿನ  ಸಾಮಂತರಾಗಿ  ದಕ್ಷಿಣದಲ್ಲಿ ‘ಎರುಮೈನಾಡು’ (ಎರುಮೈ= ಎಮ್ಮೆ=ಮಹಿಷ) ಇಂದಿನ ತಮಿಳುನಾಡು ಇತ್ತು. ಇದರರ್ಥ ‘ಮಹಿಷಾಸುರ’ ಅಶೋಕನ  ಬೌದ್ಧ ಸಾಮಂತ ಅರಸ! (ಖಂಡಿತ, ಇದರತ್ತ ಇತಿಹಾಸ ಬೆಳಕು ಚೆಲ್ಲಬೇಕು.   ಸುಮ್ಮನೇ ಆತನನ್ನು ರಾಕ್ಷಸ, ಚಾಮುಂಡಿ ಆತನನ್ನು ಕೊಂದಳು ಎಂದು  ಕಥೆ ಕಟ್ಟುವುದಲ್ಲ!)
  
  ಮೂರನೇ ಬೌದ್ಧ ಪರಿಷತ್‍ನಂತರ ಅಶೋಕ ತನ್ನ  ಧರ್ಮ ಪ್ರಸಾರಕರನ್ನು ಅನೇಕ ಕಡೆ ಕಳುಹಿಸುತ್ತಾನೆ. ಅದರಲ್ಲಿ  ವನವಾಸ(ಬನವಾಸಿ) ಮತ್ತು ಮಹಿಷಮಂಡಲಗಳೂ ಒಳಗೊಂಡಿದ್ದವು. ಬನವಾಸಿಗೆ ಥೇರ ರಖ್ಖಿತ ಮತ್ತು ಮಹಿಷಮಂಡಲಕ್ಕೆ ಮಹದೇವ ಎಂಬುವವರನ್ನು ಅಶೋಕ ಕಳುಹಿಸುತ್ತಾನೆ (Asoka, the Buddhist emperor of india by Vincent A smith . Pp.44). ಮಹಿಷಮಂಡಲಕ್ಕೆ ಅಂದು ಅಶೋಕ ಕಳುಹಿಸಿದ ಧರ್ಮಪ್ರಚಾರಕ ಮಹದೇವ ಇಂದಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಭಾಗದಲ್ಲಿ ಕಂಡುಬರುವ ಮಲೈ ಮಹದೇಶ್ವರ ಇರಬಹುದೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಖಂಡಿತ ಉದ್ಭವಿಸುತ್ತದೆ. ಯಾಕೆಂದರೆ ಜನಪದೀಯ ಸಾಹಿತ್ಯದಲ್ಲಿ ಮಹದೇಶ್ವರರನ್ನು ಈಗಲೂ “ಉತ್ತರದೇಶದಯ್ಯ” ಎನ್ನಲಾಗುತ್ತದೆ. ಅಂದರೆ ಮಹದೇಶ್ವರರು ಉತ್ತರಭಾರತದಿಂದ ಬಂದವರು ಎಂದರ್ಥ! ಅಲ್ಲದೆ  ಮಹದೇಶ್ವರನ ಭಕ್ತರ ‘ಬುರುಡೆ ಬೋಳಿಸುವ ಪದ್ಧತಿ’, ‘ಗುಡ್ಡನ ಬಿಡುವ ಪದ್ಧತಿ’, ‘ಭಿಕ್ಷೆ ಬೇಡುವ ಪದ್ಧತಿ’  ಇವೆಲ್ಲವೂ ಬೌದ್ಧಭಿಕ್ಕುಗಳ ರೀತಿಯೇ ಇದೆ. ಒಟ್ಟಾರೆ  ಈ ಆಧಾರದ ಮೇಲೆ ಅಶೋಕ ಅಂದು ಕಳುಹಿಸಿದ ಥೇರ(ಬೌದ್ಧ ಭಿಕ್ಕು) ಮಹದೇವನೆ ಇಂದಿನ ಮಲೈ ಮಹದೇಶ್ವರ ಎಂದು ನಿಸ್ಸಂಶಯವಾಗಿ ಹೇಳಬಹುದು.
   
 ಒಂದಂತು ನಿಜ, ಸಾಮ್ರಾಟ್ ಅಶೋಕ ಕರ್ನಾಟಕದ ಉದ್ದಗಲಕ್ಕೂ ತನ್ನ ಪ್ರಭಾವ ಬೀರಿದ್ದ. ಈ ಹಿನ್ನೆಲೆಯಲ್ಲಿ  ಪರ್ಷಿಯನ್ ಯಾತ್ರಿಕ ಫಾಹಿಯಾನ್ ಇಲ್ಲಿ ಕಂಡ ಮಹಿಶಾಸಕ (ಮೈಸೂರು?), ಚೀನಿ ಯಾತ್ರಿಕ ಹೂಯೆನ್ ತ್ಸಾಂಗ್ ಹೇಳುವ ‘ಕೊಂಕಣ ಪುರ’ ಮತ್ತು ಆತ ಅಲ್ಲಿ ಕಂಡ ಅಶೋಕ ಸ್ತೂಪ, ಬುದ್ಧ ಕರಂಡಕ, ಮೈತ್ರೇಯ ವಿಗ್ರಹ ಮತ್ತು ಹಲವಾರು ಸಂಘಾರಾಮಗಳು(ಭಿಕ್ಕುಗಳು ವಾಸಿಸುತ್ತಿದ್ದ ಪ್ರದೇಶ) ಮತ್ತು ಅಂತೆಯೇ  ಆ ಕಾಲದಲ್ಲಿ ಬನವಾಸಿ  ಪ್ರಸಿದ್ಧ ಬೌದ್ಧಕೇಂದ್ರವಾಗಿದ್ದದ್ದು, ಇವೆಲ್ಲವನ್ನು ನಾವು ಗಮನಿಸಬಹುದು. ದುರಂತವೆಂದರೆ ಬನವಾಸಿ ಎಂದಾಕ್ಷಣ ಅದನ್ನು ಕದಂಬರ ರಾಜಧಾನಿ ಎಂದಷ್ಟೆ ಹೇಳುತ್ತೇವೆ! ಹಾಗಿದ್ದರೆ ಅಶೋಕನಿಗೂ ಅದೇ ಬನವಾಸಿಗೂ (ಕರ್ನಾಟಕ) ಇದ್ದ ಸಂಬಂಧ? ಖಂಡಿತ, ಇತಿಹಾಸದಲ್ಲಿ ಇಂತಹದ್ದನ್ನೆಲ್ಲ ಉದ್ದೇಶಪೂರ್ವಕವಾಗಿಯೇ  ಮುಚ್ಚಿಡಲಾಗಿದೆ!
  
   ಒಂದಂತು ನಿಜ,  ಕರ್ನಾಟಕಕ್ಕೆ ಸಂಬಂಧಿಸಿದಂತೆ ಆತನ ಉತ್ತರ ಗಡಿ ಗುಲ್ಬರ್ಗ ಜಿಲ್ಲೆಯ ಸನ್ನತಿಯಾಗಿದ್ದರೆ , ದಕ್ಷಿಣದ ಗಡಿ ಚಿತ್ರದುರ್ಗ ಜಿಲ್ಲೆಯ  ಸಿದ್ದಾಪುರ- ಬ್ರಹ್ಮಗಿರಿಯಾಗಿತ್ತು. ಪಶ್ಚಿಮದ ಗಡಿ ಕೊಪ್ಪಳವಾಗಿದ್ದರೆ, ಪೂರ್ವ ಗಡಿ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯ ಯರ್ರಗುಡಿಯಾಗಿತ್ತು. 125ಕಿ.ಮೀ ವಿಸ್ತೀರ್ಣದ ತನ್ನ ಕರ್ನಾಟಕದ ಮಿತಿಯ ಈ ಕ್ಷೇತ್ರದಲ್ಲಿ ಅಶೋಕ 11 ಕಿಬ್ಬಂಡೆ ಶಾಸನಗಳಲ್ಲದೆ , ಹೆಬ್ಬಂಡೆ ಶಾನಗಳ ಒಂದು ಗುಚ್ಛವನ್ನು ಸಹ ಕೊರೆಯಿಸಿದ್ದನು(ಷ.ಶೆಟ್ಟರ್, ಪು.76). ಹಾಗೆಯೇ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ  ಬೌದ್ಧ ಪರಂಪರೆಯನ್ನನುಸರಿಸಿ  ಅಶೋಕನು  ಕರ್ನಾಟಕ-ಆಂಧ್ರದ ಎಲ್ಲಾ ಜನಾಂಗಗಳನ್ನು ‘ಅಂಧಕ’ ಎಂಬ ಹೆಸರಿನಿಂದ ಗುರುತಿಸಿದ. ಈ ಎಲ್ಲಾ ಆಧಾರಗಳ ಮೇಲೆ ಹೇಳುವುದಾದರೆ ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ಸಾಮ್ರಾಟ ಅಶೋಕ ಕರುನಾಡಲ್ಲೂ ತನ್ನ ಪ್ರಬಲ ಕಂಪು ಬೀರಿದ್ದ. ಆತ ಪ್ರಚುರ ಪಡಿಸಿದ ‘ಬ್ರಾಹ್ಮಿ’ ಲಿಪಿ ಮತ್ತು ಪ್ರಾಕೃತ ಭಾಷೆಯಿಂದ (ಷ.ಶೆಟ್ಟರ್, ಪು.75) ಕನ್ನಡವೂ ಒಳಗೊಂಡಂತೆ  ಈ ದೇಶದ ಹಲವು ಭಾಷೆಗಳು ಅಭಿವೃದ್ಧಿ ಹೊಂದಿದವು. ಅಜ್ಞಾನವೆಂದÀರೆ ನಾವು ನಮ್ಮ ಕರ್ನಾಟಕದ ಇತಿಹಾಸವೆಂದರೆ ಕೇವಲ ಕದಂಬ, ಗಂಗ,  ರಾಷ್ಟ್ರಕೂಟ, ಹೊಯ್ಸಳ, ಚಾಳುಕ್ಯ ಎಂದಷ್ಟೆ ಹೇಳುತ್ತೇವೆ! ಆದರೆ ಅದೇ ಇತಿಹಾಸದ ಪುಟಗಳಲ್ಲಿ ನಮ್ಮ ರಾಯಚೂರಿನ ಮಸ್ಕಿ ಶಾಸನದಿಂದ ಇಡೀ ವಿಶ್ವಕ್ಕೆ ಅಶೋಕ ಎಂದು ಪರಿಚಯಗೊಂಡ ‘ದೇವನಾಂಪ್ರಿಯ’ನ ಇತಿಹಾಸ?
     
 ಖಂಡಿತ, ಈ ನಿಟ್ಟಿನಲಿ ಇನ್ನು ಮುಂದಾದರೂ, “ಕರ್ಣಾಟಕದ ಇತಿಹಾಸದಲಿ ... ಬಂಗಾರದಯುಗದ ಕಥೆಯನ್ನು” ಹೇಳುವಾಗ ರಾಜ್ಯದ ಸುವರ್ಣಗಿರಿಯನ್ನು ತನ್ನ ದಕ್ಷಿಣದ ರಾಜಧಾನಿಯಾಗಿ ಮಾಡಿಕೊಂಡಿದ್ದ ಸಾಮ್ರಾಟ್ ಅಶೋಕನ ಹೆಸರು ಮೊದಲು ಪ್ರಸ್ತಾಪವಾಗಬೇಕು. “ಹಕ್ಕಬುಕ್ಕರು ಹರುಷದ ಮಳೆಯನ್ನು ಇಲ್ಲಿ ಚೆಲ್ಲು”ವುದಕ್ಕೂ ಮೊದಲೇ ಬೌದ್ಧ ಧರ್ಮದ ಕಂಪನ್ನು ಇಲ್ಲಿ ಹರಡಿದ್ದ ‘ದೇವನಾಂಪ್ರಿಯ’ನ ಹೆಸರಿಗೆ ಅಗ್ರ ಮಾನ್ಯತೆ ಸಿಗಬೇಕು.


Tuesday, 14 October 2014

Raghothama Hoba's writings:   ಅಂಬೇಡ್ಕರ್ ಪುನರ್‍ಸೃಷ್ಟಿಸಿದ ಬುದ್ಧ ಭಾರತ 1956 ಅಕ್ಟೋ...


  ಅಂಬೇಡ್ಕರ್ ಪುನರ್‍ಸೃಷ್ಟಿಸಿದ ಬುದ್ಧ ಭಾರತ


 1956 ಅಕ್ಟೋಬರ್ 14ರ ಬೆಳಿಗ್ಗೆ 9 ಗಂಟೆಗೆ ಕುಶೀನಗರದ ಹಿರಿಯ ಬೌದ್ಧಭಿಕ್ಕು ಆರ್ಯ ಚಂದ್ರಮಣಿ ಥೇರರವರು ಬಾಬಾಸಾಹೇಬ್ ಅಂಬೇಡ್ಕರರಿಗೆ ಮಹಾರಾಷ್ಟ್ರದ ನಾಗಪುರದ ಆ ವಿಶಾಲ ಜನಸಾಗರದ ನಡುವೆ ‘ಬುದ್ಧಂ ಶರಣಂ ಗಚ್ಚಾಮಿ... ಧಮ್ಮ ಶರಣಂ ಗಚ್ಛಾಮಿ... ಸಂಘಂ ಶರಣಂ ಗಚ್ಛಾಮಿ...’ ಎಂಬ ಮಂತ್ರ ಪಠಿಸುತ್ತಿದ್ದಂತೆ ಇತಿಹಾಸದ ನಿಂತುಹೋದ ಚಕ್ರವೊಂದು ಮತ್ತೆ ತಿರುಗಲಾರಂಭಿಸಿತು. ಹೌದು, ಅದು ಧಮ್ಮಚಕ್ರ. ಅರ್ಥಾತ್ ಬೌದ್ಧ ಧಮ್ಮಚಕ್ರ. ನೂರಾರು ವರುಷಗಳ ಕಾಲ ಭಾರತದ ಇತಿಹಾಸದಲ್ಲಿ ವೈಭವವನ್ನು ಕಂಡು ಅಷ್ಟೆ ನೂರಾರು ವರುಷಗಳು ಸ್ತಬ್ಧವಾಗಿದ್ದ ಬೌದ್ಧಧಮ್ಮ ಮತ್ತೆ ಅಂಬೇಡ್ಕರರ ಮೂಲಕ ಜನಮಾನಸದಲ್ಲಿ ನೆಲೆಸಲಾರಂಭಿಸಿತು. ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಬುದ್ಧಭಾರತವನ್ನು ಪ್ರಾಯೋಗಿಕ ನೆಲೆಯಲ್ಲಿ ಭಾರತದಲ್ಲಿ ಪುನರ್‍ಸೃಷ್ಟಿಸಿದ್ದರು. ಅದರ ಚಲನೆಗೆ ಮರುಚಾಲನೆ ನೀಡಿದ್ದರು.

 ಅಂದಹಾಗೆ ತಾವು ಅಂದು ಬೌದ್ಧಧರ್ಮ ಸ್ವೀಕರಿಸಿದ ದಿನ ಅಂಬೇಡ್ಕರ್ ಏನು ಹೇಳಿದರು? ಭಾವಾವೇಶದಿಂದ ಅವರೇ ಹೇಳಿರುವ ಮಾತನ್ನು ಅಷ್ಟೇ ಭಾವಾವೇಶದಿಂದ ದಾಖಲಿಸುವುದಾದರೆ “ಹಿಂದೂಧರ್ಮವನ್ನು ತ್ಯಜಿಸುವ ಚಳುವಳಿಯನ್ನು ನಾನು 1935ರಲ್ಲಿ ಪ್ರಾರಂಭಿಸಿದೆ ಮತ್ತು ಅಂದಿನಿಂದ ನಾನು ಆ ಹೋರಾಟವನ್ನು ಮುಂದುವರಿಸುತ್ತಲೇ ಬಂದೆ. ಈ ಕಾರಣಕ್ಕಾಗಿ ಇಂದು ನಡೆದ ಮತಾಂತರ ನನಗೆ ಊಹಿಸಲಾರದಷ್ಟು ಸಂತಸ ಮತ್ತು ಅಗಾಧವಾದ ತೃಪ್ತಿ ನೀಡಿದೆ. ನರಕದಿಂದ ಬಿಡುಗಡೆ ಪಡೆದೆನೆಂಬ ಭಾವನೆ ನನ್ನಲ್ಲಿ ಮೂಡಿದೆ”.

 ಹೌದು, ‘ನರಕ’ ಅದು ಅಂಬೇಡ್ಕರ್ ಭಾವಾವೇಶದಿಂದಲೇ ಹೇಳಿದರೂ ವಾಸ್ತವದ ಪ್ರತಿಬಿಂಬವಾಗಿರುವ ‘ಹಿಂದೂಧರ್ಮ’ವೆಂಬ ‘ನರಕ’. ಯಾಕೆಂದರೆ ಅಂಬೇಡ್ಕರ್ 1935ರಲ್ಲೇ ‘ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ’ ಎಂದು ಗುಡುಗಿದ್ದರು. ಮಹಾಡ್ ಎಂಬ ಊರಿನ ಕೆರೆಯ ನೀರನ್ನು ಕುಡಿಯಲು ಸ್ವತಃ ಅವರೇ ಪ್ರಾರಂಭಿಸಿದ ಚಳುವಳಿಯಲ್ಲಿ ನೊಂದ ಅವರು ತನ್ನವರ ಮೇಲೆ ಧಾಳಿಗಳಾದಾಗ ರೋಷದಿಂದ ‘ಮನುಸ್ಮøತಿ’ ಸುಟ್ಟು ತನ್ನ ಆ ‘ಹಿಂದೂವಾಗಿ ಸಾಯಲಾರೆ’ ಎಂಬ ಆ ಗಜ ಗರ್ಜನೆ ಗರ್ಜಿಸಿದ್ದರು. ಬಹುಶಃ ಆ ಸಂದರ್ಭದಲ್ಲಿ ಬಹುತೇಕರು ಅಂಬೇಡ್ಕರರ ಆ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಿದ್ದರೆಂದೆನಿಸುತ್ತದೆ. ಆದರೆ ನುಡಿದುದ್ದನ್ನು ಸಾಧಿಸುವುದರಲ್ಲಿ ಗಟ್ಟಿಗರಾದ ಬಾಬಾಸಾಹೇಬರು ತನ್ನ ಜನರಿಗೆ 1930-31ರ ದುಂಡುಮೇಜಿನ ಪರಿಷತ್ತಿನ ಹೋರಾಟಗಳ ಮೂಲಕ ರಾಜಕೀಯ ಮೀಸಲಾತಿ ಕೊಡಿಸಿದ್ದರು. 1942ರಲ್ಲಿ ಸ್ವತಃ ತಾವೇ ಅಂದಿನ ಬ್ರಿಟಿಷ್ ವೈಸರಾಯ್‍ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ನಿಯುಕ್ತಿಗೊಂಡು ತಮ್ಮ ಪ್ರಥಮ ಸಾಧನೆಯೆಂಬಂತೆ ಪರಿಶಿಷ್ಟರಿಗೆ 8
1/2 ಪರ್‍ಸೆಂಟ್ ಉದ್ಯೋಗ ಮೀಸಲಾತಿ ಕೊಡಿಸಿದ್ದರು. ತದನಂತರ ಆ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಸ್ವಾತಂತ್ರೋತ್ತರದಲ್ಲಿ ಸಂವಿಧಾನಶಿಲ್ಪಿಯಾಗಿ ಭಾರತ ಸಂವಿಧಾನದಲ್ಲಿ ಅದನ್ನು ಉಳಿಸಿಕೊಟ್ಟಿದ್ದರು. ಒಟ್ಟಾರೆ ಈ ದೇಶದ ಅಸ್ಪøಶ್ಯತೆಯಿಂದ ನೊಂದ ಕೋಟ್ಯಾನುಕೋಟಿ ಸೋದರ/ಸೋದರಿಯರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಏನೇನು ಅನುಕೂಲಗಳು ಬೇಕೋ ಅದೆಲ್ಲವನ್ನು ಛಲಬಿಡದೆ ಗಳಸಿಕೊಟ್ಟು ಕಡೆಗಷ್ಟೇ ಅವರು ಹಿಂದುತ್ವದಿಂದ ಬಿಡುಗಡೆಗೊಂಡು ಬುದ್ಧನ ಕಡೆಗೆ ಚಲಿಸಿದ್ದು! ಈ ನಿಟ್ಟಿನಲ್ಲಿ ಹೇಳುವುದಾದರೆ ಅವರ ಒಟ್ಟಾರೆ ಪ್ರಕ್ರಿಯೆ ಯೋಜನಾಬದ್ಧವಾದದ್ದು. ಎಲ್ಲಿಯೂ ಕೂಡ ‘ಅನನುಕೂಲ ಸ್ಥಿತಿಗಳನ್ನು ತನ್ನವರಿಗೆ ಅನುಕೂಲಕರಮಾಡಿಕೊಡುವುದರಲ್ಲಿ’ ಅವರು ಹಿಂದೆ ಬೀಳಲಿಲ್ಲ. ತಮ್ಮ ಹೋರಾಟಕ್ಕೆ ತಾರ್ಕಿಕ ಜಯ ಪಡೆದ ನಂತರವಷ್ಟೆ ಅವರು ಬುದ್ಧನೆಡೆಗೆ ಅಧಿಕೃತವಾಗಿ ಬೆಸೆದದ್ದು.

ಹಾಗಿದ್ದರೆ ಅಂಬೇಡ್ಕರ್ ಬುದ್ಧನನ್ನೇ ಯಾಕೆ ಆಯ್ಕೆಮಾಡಿಕೊಂಡರು? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಅದಕ್ಕೆ ಅಂಬೇಡ್ಕರ್ ಅಂದೇ ಹೇಳುತ್ತಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು(ಅಸ್ಪøಶ್ಯರು)”. ಆ ನಾಗ ಜನಾಂಗದವರು ಬೌದ್ಧ ಮತಾವಲಂಬಿಗಳಾಗಿದ್ದರು. ಅಂತಹ ಚಾರಿತ್ರಿಕ ಹಿನ್ನೆಲೆಯ ಕಾರಣಕ್ಕಷ್ಟೆ ತಾನು ಬೌದ್ಧ ಧರ್ಮ ಸ್ವೀಕರಿಸಿದ್ದಾಗಿ ತಮ್ಮ ಬುದ್ಧನ ಒಲವಿಗೆ ಅಂಬೇಡ್ಕರರು ಸ್ಪಷ್ಟೀಕರಣ ನೀಡುತ್ತಾರೆ. ಹಾಗೆಯೇ ಅಂತಹ ಸ್ಪಷ್ಟೀಕರಣಕ್ಕೆ “ಭಾರತದ ನಿಜವಾದ ಇತಿಹಾಸ ಬೌದ್ಧತ್ವಕ್ಕೂ ಬ್ರಾಹ್ಮಣತ್ವಕ್ಕೂ ನಡೆದ ನಿರಂತರ ಕದನ” ಎಂದೂ ಕೂಡ ಅಂಬೇಡ್ಕರ್ ದನಿಗೂಡಿಸುತ್ತಾರೆ. ಅಂದಹಾಗೆ ಬ್ರಾಹ್ಮಣತ್ವದ  ಜತೆಗಿನ ಜಗಳದಲ್ಲಿ ಸೋತ ಮೂಲ ಬೌದ್ಧ ನಾಗ ಜನರೇ ಊರ ಆಚೆ ತಳ್ಳಲ್ಪಟ್ಟ ಅಸ್ಪøಶ್ಯರಾಗಿ ಸೃಷ್ಟಿಯಾದರು ಎಂದು ಕೂಡ ಅಂಬೇಡ್ಕರರು ಅಸ್ಪøಶ್ಯತೆಯ ಸೃಷ್ಟಿಗೂ ಕಾರಣ ಕೊಡುತ್ತಾರೆ. ಈ ನಿಟ್ಟಿನಲ್ಲಿ ತನ್ನ ಮೂಲ ಜನರು ಬೌದ್ಧಧರ್ಮೀಯರಾಗಿದ್ದ ಕಾರಣದಿಂದ  ತಾನು ಮಾಡುತ್ತಿರುವ ಈ ಮತಾಂತರ ಬೇರೆ ಧರ್ಮಕ್ಕೆ ಹೋಗುವ ಕ್ರಿಯೆಯಲ್ಲ ಬದಲಿಗೆ ‘ಸ್ವಂತ ಮನೆಗೆ ವಾಪಸ್ ಹೋಗುವ ಕ್ರಿಯೆ’ ಎಂದು ಅಂಬೇಡ್ಕರ್ ಅಪೂರ್ವ ಸ್ಪಷ್ಟೀಕರಣ ನೀಡುತ್ತಾರೆ. ತನ್ಮೂಲಕ ದಲಿತರು ಬೌದ್ಧರಾಗಲೇಬೇಕಾದ ಅನಿವಾರ್ಯತೆಗೆ ಇತಿಹಾಸದ ಕೊಂಡಿಯನ್ನು ಅವರು ಜೋಡಿಸುತ್ತಾರೆ.

 ಪ್ರಶ್ನೆ ಏನೆಂದರೆ ಅಂಬೇಡ್ಕರ್ ಜೋಡಿಸಿದ ಆ ಐತಿಹಾಸಿಕ ಜೋಡಣೆಗೆ ಭಾರತದ ಸಮಸ್ತ ದಲಿತರು ಸ್ಪಂಧಿಸಿದರೇ? ಖಂಡಿತ ಇಲ್ಲ. ಯಾಕೆಂದರೆ ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದ 15 ದಿನಗಳಲ್ಲೇ ಅಂದಿನ ಜವಾಹರಲಾಲ್ ನೇತೃತ್ವದ ಕೇಂದ್ರ ಕಾಂಗ್ರೆಸ್ ಸರ್ಕಾರ ಬೌದ್ಧಧರ್ಮದ ಕಡೆಗೆ ಒಲವು ತೋರುವ ದಲಿತರನ್ನು ಬೆದರಿಸಲು “ಬೌದ್ಧಧರ್ಮ ಸ್ವೀಕರಿಸಿದ  ದಲಿತರು (ಎಸ್‍ಸಿ/ಎಸ್‍ಟಿಗಳು) ಮೀಸಲಾತಿಯ ಫಲಾನುಭವವನ್ನು ಕಳೆದುಕೊಳ್ಳುವರು” ಎಂದು ಅಧಿಸೂಚನೆ ಹೊರಡಿಸಿತು!(Buddhism in india after ambedkar by D.C.Ahir. p.14).ತತ್ಪರಿಣಾಮ ಎಲ್ಲಿ ಮೀಸಲಾತಿ ಹೊರಟುಹೋಗುತ್ತದೆಯೋ ಎಂದು ಹೆದರಿದ ದೇಶದ ಬಹುತೇಕ ದಲಿತರು ಬೌದ್ಧರಾಗುವತ್ತ ಹಿಂಜರಿದರು. ಹಾಗೆಯೇ ತನ್ನ ಜನರು ಬೌದ್ಧರಾದರೆ ಮೀಸಲಾತಿ ಸೌಲಭ್ಯ ಕಳೆದುಕೊಳ್ಳುತ್ತಾರೆಂಬ ಅರಿವೂ ಸಹ ಅಂಬೇಡ್ಕರರಿಗಿತ್ತು. ಆದರೆ ಅದನ್ನು ಹೋರಾಡಿ ಮತ್ತೆ ಪಡೆಯುತ್ತೇನೆ ಎಂಬ ಮಾತನ್ನು ಸಹ ಮತಾಂತರದ ಸಂದರ್ಭದಲ್ಲಿ ಅವರು ನುಡಿದಿದ್ದರು. ಆದರೆ ಬಾಬಾಸಾಹೇಬರು ಮತಾಂತರವಾದ ಎರಡೇ ತಿಂಗಳಲ್ಲಿ(ಡಿಸೆಂಬರ್ 6, 1956) ನಿಧನರಾದರು. ಪರಿಣಾಮ ಆ ಸಂದರ್ಭದಲ್ಲಿ ಬೌದ್ಧರಾದರೂ ದಲಿತರು ಮೀಸಲಾತಿ ಉಳಿಸಿಕೊಳ್ಳುವ ಮಾತು ದೂರಉಳಿಯಿತು. ಅಂದಹಾಗೆ ಇದಾಗಿ ಹಲವರ್ಷಗಳ ನಂತರ ‘ದಲಿತರು ಬೌದ್ಧರಾದರೂ ಅವರ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ’ ಎಂಬ ಅಧಿಸೂಚನೆ ಹೊರಬೀಳಲು ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದೇ ಬರಬೇಕಾಯಿತು! 1989ರಲ್ಲಿ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್‍ರವರ ನೇತೃತ್ವದ ಕಾಂಗ್ರೆಸ್ಸೇತರ ಜನತಾದಳದ ಸರ್ಕಾರವೇ ಬೌದ್ಧದಲಿತರಿಗೂ ಮೀಸಲಾತಿಯನ್ನು ಮರುಕಲ್ಪಿಸಿಕೊಟ್ಟಿತು ಎಂಬುದು ಇಲ್ಲಿ ಕಾಕತಾಳೀಯವೆನಿಸಿದರೂ ಗಮನಿಸಬೇಕಾದ ವಿಚಾರ. ಒಟ್ಟಾರೆ 3-6-1990ರಲ್ಲಿ ರಾಷ್ಟ್ರಪತಿಗಳಿಂದ ಒಪ್ಪಿಗೆಪಡೆಯಲ್ಪಟ್ಟ, 4-6-1990ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ತಿದ್ದುಪಡಿ ಮಸೂದೆ-1990 ಬೌದ್ಧಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರೂ ಮೀಸಲಾತಿ ಪಡೆಯಲು ಅರ್ಹರು ಎಂಬುದನ್ನು ಸಾರಿ ಹೇಳಿತು. ಈ ದಿಸೆಯಲ್ಲಿ ಅಂಬೇಡ್ಕರರು ಮತಾಂತರಗೊಂಡ 34 ವರ್ಷಗಳ ನಂತರ ದಲಿತ ಬೌದ್ಧರಿಗೆ ಮೀಸಲಾತಿ ಮರುದೊರಕಿತು.

ಹೀಗಿದ್ದರೂ ಅಂದರೆ ದಲಿತರು ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರೂ ಅವರ ಮೀಸಲಾತಿಗೆ ಯಾವ ಧಕ್ಕೆಯೂ ಇಲ್ಲ ಎಂದು ತಿಳಿದಿದ್ದರೂ ಗೊಂದಲ ಅಲ್ಲಲ್ಲಿ ಇನ್ನೂ ಹಾಗೆಯೇ ಇದೆ. ಹಾಗೆ ಈ ಕಾರಣದಿಂದ ದಲಿತರಲ್ಲಿ ಇಂದು ಮೂರು ಮಾದರಿಯ ಬೌದ್ಧರು ಸೃಷ್ಟಿಯಾಗಿದ್ದಾರೆ. ಅವರಲ್ಲಿ ಮೊದಲನೆಯ ಮಾದರಿಯವರು ಸಂಪೂರ್ಣ ಬೌದ್ಧ ಮತಾವಲಂಬಿಗಳಾಗಿ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿ ಅಂಬೇಡ್ಕರ್ ಮಾರ್ಗದಲ್ಲಿ ಕ್ರಾಂತಿಕಾರಿ ಚಿಂತನೆಯ ಮೂಲಕ ಅಪ್ಪಟ ಬೌದ್ಧರಾಗಿರುವವರು. ಎರಡನೆಯ ಮಾದರಿಯವರು ಬೌದ್ಧಮತಾವಲಂಬಿಗಳಾಗಿಯೂ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿಯೂ ಸಾಂಪ್ರದಾಯಿಕವಾಗಿ ಬುಡಕಟ್ಟು ಆಚರಣೆಗಳನ್ನು ಅಂದರೆ ಮಾರಮ್ಮ, ಎಲ್ಲಮ್ಮನ ಪೂಜಿಸುವುದು, ಹರಕೆ ಹೊರುವುದು, ಬೆಟ್ಟಗಳಿಗೆ ಪರಿಷೆ ಹೋಗುವುದು, ಇತ್ಯಾದಿ ಮಾಡುವವರು. ಇನ್ನು ಮೂರನೆಯ ಮಾದರಿಯವರು ಅಧಿಕೃತವಾಗಿ ಬೌದ್ಧರಾಗಿಲ್ಲದಿದ್ದರೂ ಹಿಂದೂ ದೇವಾನುದೇವತೆಗಳನ್ನು ನಿರಾಕರಿಸಿ, ಬುಡಕಟ್ಟು ಆಚರಣೆಗಳನ್ನು ಮುಂದುವರೆಸಿ ಬುದ್ಧ ಮತ್ತು ಅಂಬೇಡ್ಕರರನ್ನು ಜೊತೆಜೊತೆಯಾಗಿ ಪೂಜಿಸುವವರು. ಒಟ್ಟಾರೆ ಈ ನಿಟ್ಟಿನಲ್ಲಿ ಹೇಳುವುದಾದರೆ ‘ಮೂರನೆಯ ಮಾದರಿಯ ಬೌದ್ಧರೇ ಇಲ್ಲಿ ಬಹುಸಂಖ್ಯಾತರು’ ಎನ್ನಬಹುದು!

ಒಂದಂತು ನಿಜ, ದಲಿತರಲ್ಲಿ ಇಂದು ಅಂಬೇಡ್ಕರ್ ಕಂಡುಕೊಂಡ ಬುದ್ಧ ಮತ್ತು ಆತನ ಧಮ್ಮ ಹಾಸುಹೊಕ್ಕಾಗಿದೆ. ಅದು ಅಧಿಕೃತ ಸಂಘಟಿತ ರೂಪದಲ್ಲಿ ಇನ್ನು ಪರಿಪೂರ್ಣವಾಗಿ ಹೊರಹೊಮ್ಮಿಲ್ಲದಿರಬಹುದು ಆದರೆ ಅಂಬೇಡ್ಕರ್ ಎಂದಾಕ್ಷಣ ಬುದ್ಧ, ಬುದ್ಧ ಎಂದಾಕ್ಷಣ ಅಂಬೇಡ್ಕರ್ ಹೀಗೆ ಭಾವ ಬಂಧವಂತು ಮಾತ್ರ ಬೆಸೆದಿರುವುದಂತೂ ಸತ್ಯ. ಈ ಕಾರಣಕ್ಕಾಗಿಯೇ ಎಷ್ಟೋ ಸಂದರ್ಭಗಳಲ್ಲಿ ಅನ್ಯ ಜಾತಿಗಳವರಲ್ಲಿ ಬುದ್ಧನ ಧರ್ಮ ಎಂದರೆ ಅದು ದಲಿತರ ಧರ್ಮ ಎಂದೇ ಭಾವಿಸುವ ಪರಿಪಾಟ ಈಗಂತೂ ಕಾಮನ್ ಆಗಿಬಿಟ್ಟಿದೆಯೆಂದರೆ ಯಾವ ಪರಿ ಬೌದ್ಧಧರ್ಮ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನೆಲೆಕಂಡುಕೊಂಡಿದೆ ಎಂಬುದನ್ನು ಎಂತಹವರಾದರೂ ಊಹಿಸಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಅಂಬೇಡ್ಕರ್ ಅಂದು ಬಯಸಿದ ಬಿಡುಗಡೆಯ ಮಾರ್ಗದತ್ತ ದಲಿತರು ಸದ್ದಿಲ್ಲದೆ ಚಲಿಸುತ್ತಾರೆ ಎನ್ನುವುದು ಸ್ಪಷ್ಟ. ಯಾರಿಗ್ಗೊತ್ತು ಮುಂದೊಂದು ದಿನ ಮೀಸಲಾತಿ ಕೊನೆಗೊಂಡರೆ ದಲಿತರೆಲ್ಲ ಸಾರಾಸಗಟಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡರೂ ಅಚ್ಚರಿ ಇಲ್ಲ! ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಅಂದು ಚಿಂತಿಸಿದ, ಪಾಲಿಸಿದ ಬುದ್ಧನ ಭಾರತ ಖಂಡಿತ ಇಂದು ಪ್ರಾಯೋಗಿಕವಾಗಿ ಯಶಸ್ಸಿನ ಹಾದಿಯಲ್ಲಿದೆ. ಈ ದಿಸೆಯಲ್ಲಿ ಹೇಳುವುದಾದರೆ ದಲಿತರ ಧಮನಿಗಳಲ್ಲಿ ಬುದ್ಧರಕ್ತ ಶರವೇಗದಿಂದ ಪ್ರವಹಿಸುತ್ತಿದೆ ಮತ್ತು ಅಂತಹ ಪ್ರವಾಹದ ಹಿಂದೆ ಅಂಬೇಡ್ಕರರ ಅವಿರತ ಹೋರಾಟದ ಅಧಮ್ಯ ಶಕ್ತಿ ಇದೆ ಎಂದರೆ ಅದು ಅತಿಶಯೋಕ್ತಿಯೆನಿಸದು.    
                               -ರಘೋತ್ತಮ ಹೊ.ಬ


Tuesday, 23 September 2014

ಕಂಬಾಲಪಲ್ಲಿ: ಕಥೆ... ವ್ಯಥೆ...

                                -ರಘೋತ್ತಮ ಹೊ.ಬ

                   
   ಕಂಬಾಲಪಲ್ಲಿ; 14 ವರ್ಷಗಳ ಹಿಂದೆ 7 ಜನ ದಲಿತರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು... ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿತು... ತದನಂತರ ಈಗ (2014) ಆಗಸ್ಟ್ 20 ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಹಾಗಿದ್ದರೆ ಕಂಬಾಲಪಲ್ಲಿಯಲ್ಲಿ ಅಂದು (ಮಾರ್ಚ್, 11, 2000) 7ಜನ ದಲಿತರು ಸುಟ್ಟು ಬೂದಿಯಾದದ್ದು ಹೇಗೆ? ಘಟನೆಯನ್ನು ಹೇಗೆ ಹೇಳಬಹುದೆಂದರೆ, ಆ 7 ಜನ ದಲಿತರು ತಮ್ಮ ಮನೆಗಳೊಳಕ್ಕೆ ತಾವೇ ಹೋಗಿ ‘ಅದು ಹೇಗೋ’ ಹೊರಗಿನಿಂದ ಚಿಲಕ ಹಾಕಿಕೊಂಡು, ‘ಅದು ಹೇಗೋ’ ತಮ್ಮ ಮನೆಗಳಿಗೆ ಹೊರಗಿನಿಂದ ಹುಲ್ಲು ಕಸ ತುಂಬಿಕೊಂಡು, ‘ಅದು ಹೇಗೋ’ ಹೊರಗಿನಿಂದ ತಮ್ಮ ಮನೆಗಳಿಗೆ ಸೀಮೆ ಎಣ್ಣೆ ಪೆಟ್ರೋಲ್ ಸುರಿದುಕೊಂಡು, ‘ಅದು ಹೇಗೋ’ ಮನೆಯ ಒಳಗೇ ಇದ್ದ ಅಷ್ಟೂ ದಲಿತರು ಹೊರಗಡೆ ಬೆಂಕಿ ಕಡ್ಡಿ ಕೀರಿ ಬೆಂಕಿ ಹಚ್ಚಿಕೊಂಡು, ಕಿರುಚಾಡಿ ಅಮ್ಮಾ, ಅಯ್ಯೋ, ಕಾಪಾಡಿ ಎಂದು ಅತ್ತೂ ಕರೆದು ಅಸಹಾಯಕರಾಗಿ ಕೂಗಾಡಿ ವಿಧಿಯಿಲ್ಲದೆ ಬೆಂಕಿಗೆ ದೇಹವನ್ನೊಡ್ಡಿ ಸುಟ್ಟು ಕರಕಲಾದರು! ಇಲ್ಲಿ ‘ಅದು ಹೇಗೋ’ ಎಂಬ ಪ್ರಶ್ನೆ ಬರುತ್ತದಲ್ಲ, ಅದಕ್ಕೆ ಉತ್ತರ?

  ಕ್ಷಮಿಸಿ, ಕಂಬಾಲಪಲ್ಲಿಯ ಘಟನೆ ವಿವರಿಸೋಣವೆಂದರೆ ಲೇಖನಿಯಿಂದ ನೀಲಿ ಇಂಕು ಬರುತ್ತಿಲ್ಲ. ರಕ್ತ ತಾನಾಗೇ ಕುದಿದು ಬರುತ್ತಿದೆ. ಹಾಗೇ ನ್ಯಾಯ ದೊರಕದೆ ತಣ್ಣಗಾಗುತ್ತದೆ. ಆದರೂ ತಣ್ಣಗಾಗುವ ಮೊದಲು ದುರಂತವನ್ನು ದಾಖಲಿಸುತ್ತೇನೆ.

 1997ರ ಆಗಸ್ಟ್ ತಿಂಗಳ ಒಂದು ದಿನ ಕೋಲಾರದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ, ಆ ಗ್ರಾಮದಲ್ಲಿ ವಾಸವಿದ್ದ ರೆಡ್ಡಿ ಒಕ್ಕಲಿಗರು ಮತ್ತು ದಲಿತರು ಇಬ್ಬರಿಗೂ ಸೇರಿದ ಕೆಲವು ಕುರಿಗಳು ಕಳುವಾದವು. ಅಂದಹಾಗೆ ಈ ಸಂಬಂಧ ಪಂಚಾಯತಿ ನಡೆದು ವೆಂಕಟರಮಣಪ್ಪ, ಅಂಜನಪ್ಪ ಮತ್ತು ರಾವಣಪ್ಪ ಎಂಬ ಮೂವರು ದಲಿತರು ಕುರಿ ಕದ್ದಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು. ಹಾಗೆ ಈ ಸಂಬಂಧ ಪೋಲೀಸರಿಗೆ ದೂರು ನೀಡಲು ಸಹ ಪಂಚಾಯತಿ ನಿರ್ಧರಿಸಿತು. ಇದರಿಂದ ಬೆದರಿದ ದಲಿತರು ತಮ್ಮ ಕುಟುಂಬಗಳ ಸಮೇತ ಊರು ಬಿಟ್ಟು ಹೋದರು. ಆದರೂ ಕುರಿ ಕಳÀವಿನ ಈ ಸಂಬಂಧ ಕೇಸು ದಾಖಲಾಗಿ ತನಿಖೆ ನಡೆದು ಕುರಿ ಕದ್ದವರು ಅದೇ ಗ್ರಾಮದ ರೆಡ್ಡಿ ಸಮುದಾಯದ ಕೆ.ಎಂ.ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ರೆಡ್ದಪ್ಪ, ನಾರಾಯಣಸ್ವಾಮಿ, ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಎಂದು ಗುರುತಿಸಲಾಯಿತು. ಅಂತೆಯೇ ಇವರು ಕುರಿ ಕದ್ದು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಿದ್ದನ್ನು ಪೊಲೀಸರು ವಾಪಸ್ ತರಿಸಿ ದಲಿತರಿಗೆ ನೀಡಿದರು. ಅಂದಹಾಗೆ ಪೊಲೀಸರಿಗೆ ಇದನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡಿದವರು ಅದೇ ಕುರಿ ಕಳುವಿನ ಆರೋಪ ಹೊತ್ತು ಊರು ಬಿಟ್ಟಿದ್ದ ವೆಂಕಟರಮಣಪ್ಪ ಮತ್ತು ಆತನ ಇಬ್ಬರು ಸಹೋದರರು. ಒಂದರ್ಥದಲ್ಲಿ ಈ ಪ್ರಕರಣ ಕಂಬಾಲಪಲ್ಲಿ ಗ್ರಾಮದ ರೆಡ್ಡಿ ಜನಾಂಗದವರಿಗೆ ತೀವ್ರ ಮುಜುಗರ ಉಂಟುಮಾಡಿತ್ತು ಮತ್ತು ಈ ನಿಟ್ಟಿನಲ್ಲಿ ಹಾಗೆ ಕುರಿಕದ್ದು ಸಿಕ್ಕಿಬಿದ್ದ ಕೆ.ಎಂ.ಮದ್ದಿರೆಡ್ಡಿ ಮತ್ತು ಇತರರು ಪೊಲೀಸರಿಗೆ ಸಹಾಯ ಮಾಡಿದ ದಲಿತ ವೆಂಕಟರಮಣಪ್ಪನಿಗೊಂದು ಗತಿಕಾಣಿಸಲು ಹೊಂಚು ಹಾಕಿದರು ಮತ್ತು ಅಂತಹದ್ದೊಂದು ದಿನ ಬಂದಿಯೂ ಬಿಟ್ಟಿತು ಕೂಡ. ಯಾಕೆಂದರೆ ಗರ್ಭಿಣಿಯಾಗಿದ್ದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ 05-06-1998ರ ಬೆಳಿಗ್ಗೆ 10.30 ಕ್ಕೆ ದಲಿತ ವೆಂಕಟರಮಣಪ್ಪ ಊರಿಗೆ ಬಂದು ಇಳಿಯುತ್ತಲೇ ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 39 ಜನರು ವೆಂಕಟರಮಣಪ್ಪನ ಮನೆಯತ್ತ ಧಾವಿಸಿ ಅವನನ್ನು ಅಟ್ಟಾಡಿಸಿಕೊಂಡು ಹೋಗಿ ಅವನ ಹೆಂಡತಿ ಮತ್ತು ಕುಟುಂಬಸ್ಥರ ಎದುರೇ ಆತನನ್ನು ಕಲ್ಲು ಹೊಡೆದು ಸಾಯಿಸಿದರು. ಅಂತೆಯೇ ಹಾಗೆ ಸಾಯಿಸಲ್ಪಟ್ಟ ವೆಂಕಟರಮಣಪ್ಪನನ್ನು ಸುಮಾರು 50 ಸೈಜುಗಲ್ಲಿನಡಿ ಸಮಾಧಿ ಮಾಡಲಾಯಿತೆಂದರೆ ಘಟನೆಯ ಭೀಭತ್ಸತೆಯನ್ನು ಎಂಥವರಾದರೂ ಊಹಿಸಬಹುದು. ದುರಂತವೆಂದರೆ ಈ ಸಂಬಂಧ 41 ಜನರ ಬಂಧನವಾಗಿ ಎಲ್ಲರೂ ಜಾಮೀನಿನ ಮೂಲಕ ಹೊರಬಂದರು!
 
  ಅಂದಹಾಗೆ ಇದು ಇಲ್ಲಿಗೆ ನಿಂತಿದ್ದರೆ ಸರಿ ಹೋಗುತ್ತಿತ್ತು. ಆದರೆ ಘಟನೆ ನಡೆದ ಒಂದೂವರೆ ವರ್ಷದ ನಂತರ (ಡಿಸೆಂಬರ್, 99) ಚಿಕ್ಕಬಳ್ಳಾಪುರದ ಎ.ಸಿ.ಕಛೇರಿಯಲ್ಲಿ ದಲಿತರ ಕುಂದು-ಕೊರತೆಗಳ ಸಭೆಯೊಂದು ನಡೆದು ಆ ಸಭೆಯಲ್ಲಿ ಕಂಬಾಲಪಲ್ಲಿಯಲ್ಲಿ ಸವರ್ಣೀಯರಿಂದ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನ ಕಿರಿಯ ಸಹೋದರ ಶ್ರೀರಾಮಪ್ಪ ತನ್ನ ಸಹೋದರನ ಹತ್ಯೆಯ ನಂತರ ತಾನು ಊರು ಬಿಡುವಂತಾಗಿದ್ದು ತÀನಗೆ ಗ್ರಾಮಕ್ಕೆ ವಾಪಸ್ಸು ಹೋಗಲು ಎಲ್ಲಾ ರೀತಿಯ ಸಹಾಯಬೇಕೆಂದು ಸಭೆಗೆ ತಿಳಿಸಿದ. ಅಂತೆಯೇ ಈ ಸಂಬಂಧ ಸಭೆಯೊಂದು ನಡೆದು 08-01-2000 ರಂದು ಶ್ರೀರಾಮಪ್ಪ ಮತ್ತವನ ಸಹೋದರ ಅಂಜನಪ್ಪ, ತಂದೆ ವೆಂಕಟರಾಯಪ್ಪ ಮತ್ತು ತಾಯಿ ರಾಮಕ್ಕನವರನ್ನು ವಾಪಸ್ಸು ಊರಿಗೆ (ಕಂಬಾಲಪಲ್ಲಿಗೆ) ಕರೆತರಲಾಯಿತು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆಯೊಂದನ್ನು ಸಹ ನಡೆಸಲು ಕೂಡ ತಾಲ್ಲೂಕು ಆಡಳಿತ ತೀರ್ಮಾನಿಸಿತು. ಆದರೆ ಸಭೆಯನ್ನು ಗ್ರಾಮದಲ್ಲಿ ಎಲ್ಲಿ ನಡೆಸಬೇಕು ಅಂದರೆ ರೆಡ್ಡಿ ಒಕ್ಕಲಿಗರ ಬೀದಿಯಲ್ಲಿದ್ದ ದೇವಸ್ಥಾನದಲ್ಲೋ ಅಥವಾ ದಲಿತರ ಕೇರಿಯಲ್ಲಿದ್ದ ಅರಳೀಕಟ್ಟೆಯಲ್ಲೋ ಎಂಬ ಪ್ರಶ್ನೆ ಉದ್ಭವಿಸಿ ಸಭೆ ನಡೆಯಲಿಲ್ಲ. ಒಟ್ಟಾರೆ ಕಂಬಾಲಪಲ್ಲಿ ಉಧ್ವಿಗ್ನವಾಗೇ ಇತ್ತು.

  ಇಂತಹ ಉಧ್ವಿಗ್ನ ಸ್ಥಿತಿಯಲ್ಲಿ 10-03-2000 ಸಂಜೆ 6.00 ಗಂಟೆಗೆ ದಲಿತರಾದ ಶಂಕರಪ್ಪ ಮತ್ತು ಅವನ ಸ್ನೇಹಿತ ನರಸಿಂಹಪ್ಪ, ಅಸ್ವಸ್ಥರಾಗಿದ್ದ ತಮ್ಮ ತಂದೆಯವರಿಗಾಗಿ ಎಳನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಹಾಗೆ ಬರುತ್ತಿರುವಾಗ ಎದುರುಗಡೆ ಟಿವಿಎಸ್ ಮೊಪೆಡ್‍ನಲ್ಲಿ ಬರುತ್ತಿದ್ದ ಕೆ.ಎಂ.ವೆಂಕಟರೆಡ್ಡಿ ಬಿನ್ ಮದ್ದೀರೆಡ್ಡಿ, ರವಿ ಬಿನ್ ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಎಂಬಿಬ್ಬರು ರೆಡ್ಡಿ ಒಕ್ಕಲಿಗ ಹುಡುಗರು ಶಂಕರಪ್ಪ ಮತ್ತು ನರಸಿಂಹಪ್ಪನವರಿಗೆ ನೇರ ಗುದ್ದಿಸುವ ರೀತಿಯಲ್ಲಿ ಬಂದರು. ಈ ಸಮಯದಲ್ಲಿ ದಲಿತರು ಮತ್ತು ಆ ರೆಡ್ಡಿ ಒಕ್ಕಲಿಗ ಹುಡುಗರ ನಡುವೆ ತಗಾದೆ ಉಂಟಾಗಿ ಕ್ಷುಲ್ಲಕ ಜಗಳವೂ ಕೂಡ ಆಯಿತು ಮತ್ತು ಅದು ಅಲ್ಲಿಗೆ ಮುಗಿದುಹೋಗಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ಶಂಕರಪ್ಪ ಮತ್ತು ನರಸಿಂಹಪ್ಪ ಊರಿಗೆ ಬರುತ್ತಲೇ ಅವರನ್ನು ಸುತ್ತುವರೆದ ಕೆ.ಎಂ.ಮದ್ದಿರೆಡ್ಡಿ, ರವಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 11 ಜನರ ಗುಂಪು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿತು. ಅದಲ್ಲದೆ ಆ ವಿಚ್ಛಿದ್ರಕಾರಿ ಸವರ್ಣಿಯರ ಗುಂಪು ಪರಿಶಿಷ್ಟರ ಕಾಲೋನಿಯ ಮೇಲೆ ತೀವ್ರತರವಾಗಿ ಧಾಳಿ ನಡೆಸಿ ದಲಿತ ಕುಟುಂಬಸ್ಥರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತು. ಈ ಸಮಯದಲ್ಲಿ ತಕ್ಷಣ ದಲಿತರಾದ ಶಂಕರಪ್ಪ ಮತ್ತು ನರಸಿಂಹಪ್ಪ ಸಮೀಪದ ಯನಮಲಪಾಡಿ ಗ್ರಾಮಕ್ಕೆ ತೆರಳಿ ಫೋನ್ ಮೂಲಕ ಸಮೀಪದ ಕೆಂಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರಾದರೂ ಆ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ಭೇಟಿಕೊಟ್ಟದ್ದು ನೇರ ರೆಡ್ಡಿ ಒಕ್ಕಲಿಗರ ಮನೆಗಳಿಗೆ. ಮನೆ ಕಳೆದುಕೊಂಡಿದ್ದ, ಹಲ್ಲೆಗೊಳಗಾಗಿದ್ದ ದಲಿತರ ಕೇರಿಯತ್ತ ಆತ ಕಣ್ಣೆತ್ತಿಯೂ ನೋಡಲಿಲ್ಲ!

  ಇದಿಷ್ಟು ಕಂಬಾಲಪಲ್ಲಿಯ ಏಳು ದಲಿತ ಜೀವಗಳು ಬೆಂಕಿಗೆ ಆಹುತಿಯಾಗುವ ಮುನ್ನ ದುರಂತದ ಹಿಂದಿನ ಕಥೆ. ಬಹುಶಃ ಈ ಕಥೆಯೇ ಹೇಳುತ್ತದೆ ಕಂಬಾಲಪಲ್ಲಿ ಉಧ್ವಿಗ್ನವಾಗಿತ್ತು ಇಂತಹ ದಹನಕ್ಕೆ ಪೂರ್ವ ತಯಾರಿಯಾಗಿತ್ತು ಎಂಬುದನ್ನು. ದುರಂತವೆಂದರೆ ಅಂದಿನ ಪೊಲೀಸ್ ವ್ಯವಸ್ಥೆ ಕಂಬಾಲಪಲ್ಲಿಯ ದಲಿತರ ಇಂತಹ ದುಃಖಕ್ಕೆ, ಆಪತ್ತಿನ ಪರಿಸ್ಥಿತಿಗೆ ಸಕಾಲಕ್ಕೆ ಸ್ಪಂಧಿಸಲೇ ಇಲ್ಲ. ಕಡೆ ಪಕ್ಷ ದಲಿತರ ಮೇಲೆ ಹಲ್ಲೆ ನಡೆದ ಆ ದಿನ (10-03-2000) ಸಂಜೆ ಮತ್ತು ಆ ರಾತ್ರಿ ಪೂರ ಪೊಲೀಸ್ ವ್ಯಾನ್ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೀಡುಬಿಟ್ಟಿದ್ದರೆ ಸಾಮೂಹಿಕ ದಲಿತ ದಹನವನ್ನು ಖಂಡಿತ ತಡೆಯಬಹುದಿತ್ತು.
 
  ಸ್ವಾಭಾವಿಕವಾಗಿ ಮಾರನೇ ದಿನ ಅಂದರೆ 11-03-2000 ರ ಬೆಳಿಗ್ಗೆ ನೊಂದ ಕಂಬಾಲಪಲ್ಲಿ ದಲಿತರು ಹಿಂದಿನ ದಿನ ತಮ್ಮ ಮೇಲೆ ಆದ ದಾಳಿಯ ಬಗ್ಗೆ ಚಿಂತಾಮಣಿಯ ಡಿ.ಎಸ್.ಎಸ್. ನಾಯಕ ಎನ್.ಶಿವಣ್ಣನವರಿಗೆ ಮಾಹಿತಿ ನೀಡಿದರು. ತಕ್ಷಣ ಎನ್.ಶಿವಣ್ಣನವರು ಕೋಲಾರ ಜಿಲ್ಲಾ ಎಸ್.ಪಿ.ಯವರನ್ನು ಸಂಪರ್ಕಿಸಿದರಾದರೂ ಅವರು ರಜೆಯಲ್ಲಿದ್ದ ಕಾರಣ ಎ.ಎಸ್.ಪಿ.ಯವರು ಎನ್.ಶಿವಣ್ಣನವರಿಗೆ ತಾವು ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾಗುವಂತೆ ತಿಳಿಸಿದರು. ಈ ನಡುವೆ ಕಂಬಾಲಪಲ್ಲಿಯ ದಲಿತ ಆ ಸಂತ್ರಸ್ತರು ಸರ್ಕಲ್ ಇನ್ಸ್‍ಪೆಕ್ಟರ್‍ರವರು ಬರುವವರೆಗೂ ಕಾಯದೆ ತಮ್ಮ ಊರಿನ ವ್ಯಾಪ್ತಿಯ ಕೆಂಚನಹಳ್ಳಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದರಾದರೂ ಮತ್ತದೇ ಅಲ್ಲಿನ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ದೂರು ಸ್ವೀಕರಿಸಲು ನಿರಾಕರಿಸಿದ! ಹಾಗೆಯೇ ತೀವ್ರವಾಗಿ ಗಾಯಗೊಂಡಿದ್ದ ಆ ದಲಿತ ಸಂತ್ರಸ್ತರನ್ನು ಆತ ಗೆಟೌಟ್ ಎಂದು ಹೋಗುವಂತೆ ಆದೇಶಿಸಿದ. ವಿಧಿಯಿಲ್ಲದೆ ಆ ಸಂತ್ರಸ್ತರು ಚಿಂತಾಮಣಿಯ ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾದರು. ಅಂತೆಯೇ ದೂರವಾಣಿ ಮೂಲಕ ತಮ್ಮ ಕಛೇರಿಗೆ ಆ ಸಬ್‍ಇನ್ಸ್‍ಪೆಕ್ಟರ್‍ರನ್ನು ಕರೆಸಿಕೊಂಡ ಸರ್ಕಲ್ ಇನ್ಸ್‍ಪೆಕ್ಟರ್ ಕಂಬಾಲಪಲ್ಲಿಯ ದಲಿತ ಸಂತ್ರಸ್ತರು ನೀಡಿದ್ದ ದೂರನ್ನು ಸಬ್‍ಇನ್ಸ್‍ಪೆಕ್ಟರ್‍ಗೆ ನೀಡಿ ದೂರನ್ನು ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. ಅಂದಹಾಗೆ 11-03-2000 ರ ಆ ದಿನ ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆಯಾಗಿತ್ತು. ಹಾಗೆಯೇ ಸಂಜೆ ಬಿ.ಕೆ.ಆರ್ ಎಂಬ ಖಾಸಗಿ ಬಸ್ ಹಿಡಿದು ಸಂತ್ರಸ್ತ ಆ ದಲಿತರು ಗ್ರಾಮದತ್ತ ನಡೆದರು....
     
  ನಡೆದ ದಹನ: ಈ ನಡುವೆ ಕಂಬಾಲಪಲ್ಲಿಯಲ್ಲಿ ರೆಡ್ಡಿಗಳಲ್ಲೂ ಎರಡು ಗುಂಪಾಗಿತ್ತು. ಒಂದು ಗುಂಪು ಆಂಜನೇಯರೆಡ್ಡಿ ಎಂಬುವವನದ್ದಾಗಿದ್ದರೆ, ಮತ್ತೊಂದು ಗುಂಪು ಬುಚನಾಗಾರಿ ಭೈರೆಡ್ಡಿ ಎಂಬುವವನದಾಗಿತ್ತು. ಆಂಜನೆಯರೆಡ್ಡಿ ದಲಿತರ ಪರವಿದ್ದು ಆತ ಅಂದಿನ ಚಿಂತಾಮಣಿ ಶಾಸಕ ಚೌಡರೆಡ್ಡಿಯವರ ಬೆಂಬಲಿಗನಾಗಿದ್ದ. ಹಾಗೆಯೇ ಬುಚನಾಗಾರಿ ಭೈರೆಡ್ಡಿ ಚಿಂತಾಮಣಿಯ ಮಾಜಿ ಶಾಸಕ, ದಲಿತರ ಬಗ್ಗೆ ಉಗ್ರ ವಿರೊಧಹೊಂದಿದ್ದ ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ.ಕೃಷ್ಣರೆಡ್ಡಿಯವರ ಬೆಂಬಲಿಗನಾಗಿದ್ದ. ಒಟ್ಟಾರೆ ಆಂಜನೇಯರೆಡ್ಡಿ ಮತ್ತು ಬುಚನಾಗಾರಿ ಭೈರೆಡ್ಡಿಯವರ ನಡುವೆ ವೈರತ್ವ ಕೂಡ ಹಾಗೆಯೇ ಇತ್ತು. ಇನ್ನು ಸದರಿ ಆಂಜನೇಯರೆಡ್ಡಿಗೆ ತಮ್ಮ ಮೇಲೆ ದಾಳಿ ನಡೆದ ಬಗ್ಗೆ ದಲಿತರು ಮಾಹಿತಿ ಕೂಡ ನೀಡಿದ್ದರು. ಹಾಗೆಯೇ ತನ್ನ ಬೆಂಬಲಿಗರಾದ ದಲಿತರ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಆಂಜನೇಯ ರೆಡ್ಡಿ, ಭೈರೆಡ್ಡಿ ಮತ್ತು ಆತನ ಬೆಂಬಲಿಗರನ್ನು ಅದಾಗಲೇ ಪ್ರಶ್ನಿಸಿದ್ದ ಕೂಡ. ಅಂದಹಾಗೆ ಈ ಸಮಯದಲ್ಲಿ ಅಂದರೆ ಆ ದಿನ ಆ ಸಂಜೆ ಬಿ.ಕೆ.ಆರ್ ಬಸ್ ಇಳಿದವರಲ್ಲಿ ದಲಿತರಾದ ಶ್ರೀರಾಮಪ್ಪ (ಮೊದಲೇ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನವರ ಸಹೋದರ), ಅಂಜನಪ್ಪ, ಶಂಕರಪ್ಪ, ಬಿ.ಕೆ.ಅಂಜನಪ್ಪ, ರಾವಣ ಮತ್ತು ಆಂಜನೇಯರೆಡ್ಡಿ ಇವರೆಲ್ಲರೂ ಇದ್ದರು. ಇವರೆಲ್ಲರೂ ಬಸ್ ಇಳಿಯುತ್ತಿದ್ದಂತೆ ಇವರಿಗಾಗಿ ಕಂಬಾಲಪಲ್ಲಿಯ ಆ ಗ್ರಾಮದಲ್ಲಿ ಅದಾಗಲೇ ಗುಂಪು ಸೇರಿದ್ದ ಭೈರೆಡ್ಡಿ ಮತ್ತವರ ಬೆಂಬಲಿಗರು ದಾಳಿ ನಡೆಸಿದರು. ದಲಿತರು ಹೆದರಿ ಓಡಿ ಹೋಗಿ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡು ಚಿಲಕ ಹಾಕಿಕೊಂಡರು. ಆದರೆ ಆಂಜನೇಯ ರೆಡ್ಡಿ ಹಾಗೆ ಮಾಡಲಿಲ್ಲ. ಬದಲಿಗೆ ಆತ ತನ್ನ ಪರ ಬೆಂಬಲಿಗ ಒಕ್ಕಲಿಗರ ಗುಂಪು ಕಟ್ಟಿಕೊಂಡು ಭೈರೆಡ್ಡಿಯ ವಿರುದ್ಧ ಗಲಾಟೆಗೆ ನಿಂತ ಮತ್ತು ಈ ಗಲಾಟೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಭೈರೆಡ್ಡಿಯ ಬೆಂಬಲಿಗ ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಜಗಳದಲ್ಲಿ ಕೊಲೆಯಾಗಿ ಹೋದ! ಈ ಕೊಲೆಯಾದದ್ದೇ ತಡ ಆಂಜನೇಯರೆಡ್ಡಿ ಮತ್ತು ಆತನ ಬೆಂಬಲಿಗರು ತಪ್ಪಿಸಿಕೊಂಡು ಓಡಿಹೋದರು. ಆದರೆ? ಅದಾಗಲೇ ದಲಿತರು ಹೆದರಿಕೆಯಿಂದ ಮನೆ ಸೇರಿಕೊಂಡು ಚಿಲಕ ಹಾಕಿಕೊಂಡಿದ್ದರಲ್ಲ? ಅಂತೆಯೇ ತಮ್ಮವನ ಸಾವಿಗೆ ಮೂಲ ಕಾರಣ ದಲಿತರೇ ಎಂದ ರೆಡ್ಡಿ ಒಕ್ಕಲಿಗರ ಆ ಉದ್ರಿಕ್ತ ಗುಂಪು ಮದ್ದಿರೆಡ್ಡಿ ಎಂಬುವವನ ನೇತೃತ್ವದಲ್ಲಿ ದಲಿತರ ಕೇರಿಯತ್ತ ನುಗ್ಗಿತು.

  ಅಂದಹಾಗೆ ಇದೇ ಮದ್ದಿರೆಡ್ಡಿ ಕುರಿ ಕಳುವಿನ ಪ್ರಕರಣದ ಪ್ರಮುಖ ಆರೋಪಿ. ಇದೇ ಮದ್ದಿರೆಡ್ಡಿ ದಲಿತ ವೆಂಕಟರಮಣಪ್ಪನ ಹತ್ಯೆ ಆರೋಪಿ. ಇದೇ ಮದ್ದಿರೆಡ್ಡಿಯ ಮಗ ವೆಂಕಟರೆಡ್ಡಿ ಹಿಂದಿನ ದಿನ ದಲಿತ ಶಂಕರಪ್ಪನ ಮೇಲೆ ಹಲ್ಲೆ ನಡೆಸಿದ ಆರೋಪಿ. ಇಂತಹ ಆರೋಪಿಗಳ ಗುಂಪು ದಲಿತ ಶಿಕ್ಷಕ ಅಂಜನಪ್ಪ ಮತ್ತು ದಿವಂಗತ ವೆಂಕಟರಮಣಪ್ಪನ ಸಹೋದರ ಶ್ರೀರಾಮಪ್ಪನ ಮನೆಯತ್ತ ಧಾವಿಸಿತು. ಯಾವ ಪರಿಯೆಂದರೆ ಮೂರು ಪ್ರಮುಖ ದಲಿತರ ಆ ಮನೆಗಳಿಗೆ ಹೊರಗಿನಿಂದ ಬೀಗ ಜಡಿಯಲಾಯಿತು ಮತ್ತು ಆ ಮೂವರು ದಲಿತರ ಮನೆಗಳಿಗೆ ಹುಲ್ಲನ್ನು ಹೊದೆಸಲಾಯಿತು. ಹಾಗೆಯೇ ಸವರ್ಣೀಯರ ಆ ಗುಂಪು ಸೀಮೆಎಣ್ಣೆ ಮತ್ತು ಪೆಟ್ರೋಲ್‍ನ್ನು ಆ ಮೂವರು ದಲಿತರ ಮನೆಗಳಿಗೆ ಸುರಿಯಿತು. ಒಂದು ಸಣ್ಣ ಬೆಂಕಿಕಡ್ಡಿಯನ್ನು ಗೀರಿ ಅತ್ತ ಎಸೆಯಿತು, ಗಹಗಹಿಸಿ ನಕ್ಕಿತ್ತು! ಆ ವಿಕೃತ ನಗುವಿಗೆ ಕ್ಷಣಮಾತ್ರದಲ್ಲಿ ಆ ಮೂರು ದಲಿತರ ಮನೆಗಳು ಭಸ್ಮ! ಹಾಗೆಯೇ ಆ ಮೂರು ಮನೆಗಳಿಂದ ಹೊರ ತಂದ ಏಳು ದಲಿತರ ಹೆಣಗಳು 1)ಶ್ರೀರಾಮಪ್ಪ(25), 2)ಅಂಜನಪ್ಪ(27), 3)ರಾಮಕ್ಕ(70), 4)ಸುಬ್ಬಕ್ಕ(45) 5)ಪಾಪಮ್ಮ(46), 6)ನರಸಿಂಹಯ್ಯ(25), 7)ಚಿಕ್ಕಪಾಪಣ್ಣ(40).
   
   ನ್ಯಾಯ-ಅನ್ಯಾಯದ ಕಥೆ:-ನಿಜ ಸತ್ತವರನ್ನು ವಾಪಸ್ಸು ತರಲು ಸಾಧ್ಯವಿಲ್ಲ. ಅವರ ಬದುಕನ್ನು ಮತ್ತೆಕಟ್ಟಲು ಸಾಧ್ಯವಿಲ್ಲ. ಆದರೆ ಬದುಕಿರುವ ಅವರ ಸಂಬಂಧಿಕರು ಕುಟುಂಬಸ್ಥರ ಅವರ ನೊಂದ ಶೋಷಿತ ಬಂಧುಗಳು? ಅವರನ್ನು ಬದುಕಿಸುವುದು ಬೇಡವೇ? ಖಂಡಿತ, ಅಂತಹ ಬದುಕು ದೊರೆಯುವುದು ಪಾಪಿಗಳಿಗೆ ಶಿಕ್ಷೆಯಾದಾಗ. ಹೊರಗಿನಿಂದ ಹುಲ್ಲು ತುರುಕಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದವರ ಕುತ್ತಿಗೆಗೆ ನೇಣು ಹಗ್ಗ ಬಿದ್ದಾಗ. ದುರಂತವೆಂದರೆ ಇದುವರೆಗೆ ಘಟನೆಯ ಹಳೆಯ ಕಥೆಯಾದರೆ ಇನ್ನು ಮುಂದೆ ಅದು ಬೇರೆಯದೇ ಕಥೆ! ನ್ಯಾಯ-ಅನ್ಯಾಯದ ವ್ಯಥೆ....

  ದಲಿತರ ಆ ಏಳು ಜನರ ದಹನವಾದಾಗ ಅಂದು ರಾಜ್ಯದಲ್ಲಿದ್ದುದು ಎಸ್.ಎಂ.ಕೃಷ್ಣರ ಸರ್ಕಾರ. ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣರು ಅಂದು ಅಧಿಕಾರದಲ್ಲಿದ್ದಕ್ಕೆ ಕಂಬಾಲಪಲ್ಲಿಯ ಒಕ್ಕಲಿಗ ರೆಡ್ಡಿ ಸಮುದಾಯದವರು ಅಷ್ಟೊಂದು ತೀವ್ರತೆಯ ಮಟ್ಟಕ್ಕೆ ತಲುಪಿದ್ದು ಎಂಬ ಆರೋಪವಿದೆ. ಆದರೆ ಇತಿಹಾಸ ಬಲ್ಲವರಿಗೆ ಅದರ ಅರಿವಿರುವವರಿಗೆ ಅದು ಬರಿಯ ಆರೋಪವಲ್ಲ, ಸತ್ಯವೆಂಬುದು ತಿಳಿದಿದೆ. ಯಾಕೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‍ರವರು ಹೇಳುವುದೇ “ಅಸ್ಪøಶ್ಯತೆ ಹಾಗೆಂದರೆ ಅದು ಅಧಿಕಾರಹೀನತೆ” ಎಂದು. ಅಂದರೆ ದಲಿತರಿಗೆ ಅಧಿಕಾರ ಇಲ್ಲದ್ದರಿಂದ ಅವರು ಅಸ್ಪøಶ್ಯರಾದರು ಎಂದು. ಹಾಗೆಯೇ ಅದೇ ರಾಜಕೀಯ ಅಧಿಕಾರ ಅಂದು ತನ್ನ ಕೈಯಲ್ಲಿ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಆ ಪರಿ ವ್ಯಗ್ರÀಗೊಂಡಿದ್ದು. ಈ ನಿಟ್ಟಿನಲ್ಲಿ ದಲಿತರ ದಹನವಾದಾಗ ಸಹಜವಾಗಿ ಘಟಾನುಘಟಿಗಳು ಅಲ್ಲಿ ಭೇಟಿ ನೀಡಿದ್ದರು .ಪರಿಹಾರವನ್ನೂ ಘೋಷಿಸಲಾಯಿತು. ಹಾಗೆ ಸರ್ಕಾರ ತಕ್ಷಣ ನ್ಯಾಯಾಂಗ ತನಿಖೆ ಕೂಡ ಘೋಷಿಸಿತು. ಆದರೆ ಘಟನೆಗೆ ಪರೋಕ್ಷ ಕಾರಣರಾದ ಕೆಂಚನಹಳ್ಳಿಯ ಎಸ್.ಐ. ವೆಂಕಟರಮಣಪ್ಪನ ಮೇಲೆ ಯಾವುದೇ ತನಿಖೆಯಾಗಲಿಲ್ಲ. ಒಕ್ಕಲಿಗ ರಾಜಕಾರಣಿಗಳ ಕೃಪೆ ಪಡೆದಿದ್ದರಿಂದ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧವೇ ನಡೆಯಲಿಲ್ಲ. ದುರಂತವೆಂದರೆ ಡಿ.ಎಸ್.ಎಸ್.ನ ಅಂದಿನ ಪದಾಧಿಕಾರಿಗಳು, ಘಟನಾ ಸ್ಥಳಕ್ಕೆ ಅಂದು ಭೇಟಿ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಶ್ರೀಮತಿ ಸೋನಿಯಾಗಾಂಧಿಯವರಿಗೆ ಮನವಿ ಸಲ್ಲಿಸಿ ಘಟನೆಯ ನೈತಿಕ ಹೊಣೆಯ ಆಧಾರದ ಮೇಲೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಕಿತ್ತೊಗೆಯಬೇಕೆಂದು ಕೋರಿಕೊಂಡರಾದರೂ ಸೋನಿಯಾ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರೆಡ್ಡಿ ಒಕ್ಕಲಿಗ ಸಮುದಾಯದವರು 22-03-2000ರಂದು ಚಿಂತಾಮಣಿ ಬಂದ್ ನಡೆಸಿ ಅಂಬೇಡ್ಕರ್ ವಿರುದ್ಧ ಮತ್ತು ಅಂದಿನ ಡಿ.ಎಸ್.ಎಸ್.ನವರ ವಿರುದ್ಧ ಘೋಷಣೆ ಮೊಳಗಿಸಿದರು!
ಇಂತಹದ್ದೆಲ್ಲಾ ದುರಂತಗಳ ಮದ್ಯೆ ಘಟನೆಯ ಬಗ್ಗೆ ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಲಾಯಿತು. ಆಶ್ಚರ್ಯಕರವೆಂದರೆ ಸಿ.ಬಿ.ಐ. ತನಿಖೆ ಪ್ರಾರಂಭವಾದ ತಕ್ಷಣ ನ್ಯಾಯಾಂಗ ತನಿಖೆ ಹಿಂತೆಗೆದುಕೊಳ್ಳಲಾಯಿತು. ಯಾಕೆ ಎಂದು ಯಾರು ಕೇಳಲೇ ಇಲ್ಲ! ನಿಜ ಹೇಳಬೇಕೆಂದರೆ ರಾಜೀವ್‍ಗಾಂಧಿ ಹತ್ಯೆ ಪ್ರಕರಣ, ಕರ್ನಾಟಕದಲ್ಲಿ ಬಿ.ಜೆ.ಪಿ ಎಂ.ಎಲ್.ಎ ಚಿತ್ತರಂಜನ್ ಹತ್ಯೆ ಪ್ರಕರಣ ಹೀಗೆ ಇನ್ನಿತರ ಪ್ರಕರಣಗಳಲ್ಲಿ ನ್ಯಾಯಾಂಗ ಮತ್ತು ಸಿ.ಬಿ.ಐ ಎರಡೂ ರೀತಿಯ ತನಿಖೆ ನಡೆದು ತಪ್ಪಿಸ್ಥರು ಶಿಕ್ಷೆಗೀಡಾದರು. ಆದರೆ ಕಂಬಾಲಪಲ್ಲಿಯಲ್ಲಿ ಮಾತ್ರ ನ್ಯಾಯಾಂಗ ತನಿಖೆ ಹಿಂಪಡೆಯಲಾಯಿತು! ಪರಿಣಾಮ 2006 ಡಿಸೆಂಬರ್ 4ರಂದು ತೀರ್ಪು ನೀಡಿದ ಕೋಲಾರ ಜಿಲ್ಲಾ ನ್ಯಾಯಾಲಯ ಪ್ರತಿಕೂಲ ಸಾಕ್ಷಿಯ ನೆಪವೊಡ್ಡಿ ಕಂಬಾಲಪಲ್ಲಿಯ ಎಲ್ಲಾ 32 ಆರೋಪಿಗಳನ್ನು ಕುಲಾಸೆಗೊಳಿಸಿತು. ಪ್ರತಿಕೂಲ ಸಾಕ್ಷಿ ಎಂದರೆ ಪೊಲೀಸರ ಎದುರು ‘ಇಂತಹವರೆ ಬೆಂಕಿ ಹಚ್ಚಿದವರು’ ಎಂದು ಹೇಳಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಎದುರು ಉಲ್ಟಾ ಹೊಡೆದರು! ಸಕಾಳ ಗಂಗಾಳಪ್ಪ ಎಂಬ ಸಾಕ್ಷಿಯ ಹೇಳಿಕೆಯನ್ನೇ ದಾಖಲಿಸುವುದಾದರೆ “ಜೀವ ಬೆದರಿಕೆಯಿಂದಾಗಿ ನಾವು ಸತ್ಯ ಹೇಳಲಿಲ್ಲ”! ಹಾಗೆಯೇ ಘಟನೆಯಲ್ಲಿ ತನ್ನ ಹೆಂಡತಿ ರಾಮಕ್ಕ, ಮಕ್ಕಳಾದ ಶ್ರೀರಾಮಪ್ಪ, ಆಂಜನೇಯ, ಮಗಳಾದ ಪಾಪಮ್ಮನವರನ್ನು ಕಳೆದುಕೊಂಡ ಎಂ.ವೆಂಕಟರಾಯಪ್ಪ ಹೇಳುವುದು “ನಾನೊಬ್ಬನೇ ತಾನೇ ಏನು ಮಾಡಲು ಸಾಧ್ಯ? ಎಲ್ಲಾ ಸಾಕ್ಷಿಗಳಿಗೂ ಅವರು ಹಣ ಕೊಟ್ಟಿದ್ದಾರೆ”. ಪರಿಣಾಮ ವೆಂಕಟರಾಯಪ್ಪ ನ್ಯಾಯಾಲಯದ ಎದುರು ಉಲ್ಟಾ ಸಾಕ್ಷಿ ಹೇಳಿದ್ದಾನೆ ಅಂತೆಯೇ ಆ 32 ಹಂತಕರ ಖುಲಾಸೆಯಾಗಿದೆ! ಹಾಗೆಯೇ ಖುಲಾಸೆಯಾದ ಆ ದಿನ (ಡಿಸೆಂಬರ್ 4, 2006) ಕಂಬಾಲಪಲ್ಲಿಯ ರೆಡ್ಡಿ ಜನರ ಮನೆಯಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಬಿಡುಗಡೆಗೊಂಡ ಆ ಆರೋಪಿಗಳಿಗೆ ಅಭಿನಂದನೆಯ ಸುರಿಮಳೆ!

  ದುರಂತವೆಂದರೆ ಈ ಸಂಬಂಧ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದಾಗ ಅದರ ತೀರ್ಪು ಕೂಡ ಮೊನ್ನೆ ಆಗಸ್ಟ್ 20 ರಂದು ಹೊರಬಿದ್ದಿದೆ. ಜಸ್ಟೀಸ್ ಕೆ.ಎನ್.ಫಣೀಂದ್ರ ಮತ್ತು ಮೊಹನ ಶಾಂತನಗೌಡರ್‍ರವರಿದ್ದ ಪೀಠ ಕೋಲಾರ ಜಿಲ್ಲೆಯ ಕೆಳಹಂತದ ನ್ಯಾಯಾಲಯ ಡಿಸೆಂಬರ್ 4, 2006 ರಂದು ಸಾಕ್ಷಿಯ ಕೊರತೆಯ ಆಧಾರದ ಮೇಲೆ ನೀಡಿದ್ದ ಕಂಬಾಲಪಲ್ಲಿ ತೀರ್ಪನ್ನು ಎತ್ತಿ ಹಿಡಿದಿದೆ. ಅಂದಹಾಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಎಸ್. ಚಂದ್ರಮೌಳಿಯ ಪ್ರಕಾರ ಹೇಳುವುದಾದರೆ “ಇಲ್ಲಿ 91 ಸಾಕ್ಷಿಗಳಲ್ಲಿ 56 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ತನಿಖಾಧಿಕಾರಿ ಮತ್ತು ಸಂಬಂಧಪಟ್ಟ ವೈದ್ಯರ ವಿಚಾರಣೆ ನಡೆದಿಲ್ಲ. ಹಾಗೆಯೇ ಗಾಯ ಪ್ರಮಾಣಪತ್ರದ ದಾಖಲೆಗಳನ್ನು ಪರಿಗಣಿಸಿಲ್ಲ. ಅದಲ್ಲದೆ ಪೊಲೀಸರ ಮುಂದೆ ಸತ್ಯ ಸಾಕ್ಷಿ ನುಡಿದಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಮುಂದೆ ತಮ್ಮ ಸಾಕ್ಷಿಗಳನ್ನು ವಿರುದ್ಧವಾಗಿ ಹೇಳಿದ್ದಾರೆ! ಅರ್ಥಾತ್ ಹಣ ಪಡೆದು ಬೆದರಿಕೆಗಳಿಗೊಳಗಾಗಿ ಸುಳ್ಳು ಹೇಳಿದ್ದಾರೆ ಮತ್ತು ಈ ಸಂದರ್ಭದಲ್ಲಿ ತನಿಖಾಧಿಕಾರಿಯಾಗಲಿ ಅಥವಾ ನ್ಯಾಯಾಲಯವಾಗಲಿ ಘಟನೆ (7 ದಲಿತರ ಜೀವಂತ ದಹನ) ನಡೆಯಲು ನಿಜಕ್ಕೂ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ. ಆ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ರಕ್ಷಿಸಲು ನ್ಯಾಯಾಲಯ ಈ ದಲಿತರ ದಹನದ ಈ ಘಟನೆಯನ್ನು ಮರುವಿಚಾರಣೆಗೆ ಒಳಪಡಿಸಬೇಕು” ಎಂದು ಕೇಳಿಕೊಂಡರು. ಆದರೆ ಎಸ್.ಪಿ.ಪಿ. ಯವರ ಈ ಮನವಿಗೆ ಹೈಕೋರ್ಟ್ ಪೀಠ ಸ್ಪಂಧಿಸಲಿಲ್ಲ. ಬದಲಿಗೆ “ಕೆಳಹಂತದ ನ್ಯಾಯಾಲಯ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿದೆ. ಘಟನೆಯ ಪಂಚನಾಮೆ, ಮಹಜರನ್ನು ಗಣನೆಗೆ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಪಿ.ಯವರ ಮನಸೋ ಇಚ್ಛೆಗೆ ತಕ್ಕಂತೆ ಹೆಚ್ಚಿನ ಸಾಕ್ಷಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಎಸ್.ಪಿ.ಪಿ.ಯವರ ಮನವಿಯನ್ನು ತಳ್ಳಿ ಹಾಕಿ ಕೋಲಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2006 ಡಿಸೆಂಬರ್ 4 ರಂದು ಕಂಬಾಲಪಲ್ಲಿಯ 32 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಈಗಿನ ತೀರ್ಪಿನಲ್ಲಿ ಹೈಕೋರ್ಟ್ ಎತ್ತಿಹಿಡಿದಿದೆ.

  ಈ ನಿಟ್ಟಿನಲ್ಲಿ ಇದು ನ್ಯಾಯವೇ? ಅಥವಾ ಘಟನೆ ನಮ್ಮ ಕಣ್ಣೆದುರೆ ನಡೆದರೂ ನಾವು ನೋಡುತ್ತಾ ಕೂರುವುದು ಇದು ಅನ್ಯಾಯವೇ? ಏನೂ ತಿಳಿಯುತ್ತಿಲ್ಲ. ಆದರೆ ದಲಿತರ ಜೀವ ಮತ್ತು ಜೀವನ ಇಂತಹ ನಿರಂತರ, ಅಂದರೆ ಮಹಾರಾಷ್ಟ್ರದ ಖೈರ್ಲಾಂಜಿ ಹತ್ಯಾಕಾಂಡ ತೀರ್ಪು, ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡ ತೀರ್ಪು ಮತ್ತು ಸದ್ಯದ ಕಂಬಾಲಪಲ್ಲಿ ತೀರ್ಪುಗಳ ಮೂಲಕ ಕಾಲಕಸವಾಗುತ್ತಿರುವುದು ನಿಶ್ಚಿತ. ಹಾಗೆಯೇ “ಇಂತಹ ತೀರ್ಪುಗಳ ವ್ಯವಸ್ಥೆಯ ಇಂತಹ ರಕ್ಷಣೆ” ದಲಿತರಿಗೆ ಯಾವ ಭರವಸೆಯನ್ನಾದರೂ ನೀಡುತ್ತದೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

   ಖಂಡಿತ, ಒಂದು ಆಶಾಕಿರಣ ಕಾಣುತ್ತದೆ. ಅದೆಂದರೆ ಕಂಬಾಲಪಲ್ಲಿ ಘಟನೆ ನಡೆದಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಒಕ್ಕಲಿಗರು. ಅವರ ಬಳಿ ರಾಜಕೀಯ ಅಧಿಕಾರ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಹಾಗೆ ‘ಬೆಂಕಿ ಹಚ್ಚಲು’ ಕಾರಣವಾಯಿತು. ಹಾಗೆಯೇ ಅಂತಹ ಅಧಿಕಾರ ಅವರ ಬಳಿ ನಿರಂತರ ಇದ್ದಿದ್ದರಿಂದಲೇ ಕಂಬಾಲಪಲ್ಲಿ ವಿಚಾರಣೆ ನಡೆಸುತ್ತಿದ್ದ ಕೋಲಾರದ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರೊರ್ವರನ್ನು ಎತ್ತಂಗಡಿ ಮಾಡಿಸಿ ಬೇರೆಯವರನ್ನು ಅಲ್ಲಿ ಹಾಕಿಸಿದ್ದು, ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನೇಮಕಗೊಂಡಿದ್ದ ಎಸ್.ಪಿ.ಪಿ.ಯವರನ್ನು ಹಿಂತೆಗೆದುಕೊಂಡಿದ್ದು.

  ಒಟ್ಟಾರೆ ದೌರ್ಜನ್ಯ, ರಾಜಕೀಯ ಅಧಿಕಾರ ಇಲ್ಲದವರಿಗೆ ನಡೆಯುತ್ತದೆ ಮತ್ತು ಅಂತಹ ಅಧಿಕಾರ ದೊರೆಯದಿದ್ದರೆ ದೌರ್ಜನ್ಯ ಒಂದಿಲ್ಲೊಂದು ರೂಪಗಳಲ್ಲಿ ತನ್ನ ರೌದ್ರಾವತಾರವನ್ನು ತೋರುತ್ತಲೇ ಇರುತ್ತದೆ. ಅದಕ್ಕೆ ಅಂಬೇಡ್ಕರ್ ಹೇಳಿದ್ದು “ರಾಜಕೀಯ ಅಧಿಕಾರ ಪ್ರಗತಿಯ ಹೆಬ್ಬಾಗಿಲು ತೆಗೆಯುವ ಬೀಗದ ಕೈ” ಎಂದು. ಅಂದಹಾಗೆ ಅಂತಹ ರಾಜ್ಯಾಧಿಕಾರದ ಬೀಗದ ಕೈ ರಕ್ಷಣೆಯ ಅಸ್ತ್ರ ಕೂಡ ಆಗುತ್ತದೆ. ಆಗಬಲ್ಲದು. ಈ ನಿಟ್ಟಿನಲ್ಲಿ ದಲಿತರು ಇನ್ನು ಮುಂದಾದರೂ ಅದನ್ನು ಪಡೆಯುವ ದಿಕ್ಕಿನಲ್ಲಿ ಚಿಂತಿಸಬೇಕಷ್ಟೆ.

                                                                                             
                                 

Saturday, 30 August 2014

ಅಪಾರ್ಥೈಡ್ ಎಂಬ ‘ಕಪ್ಪು ಅಸ್ಪøಶ್ಯತಾಚರಣೆ’ ಮತ್ತು ಮಂಡೇಲಾ

                                   -ರಘೋತ್ತಮ ಹೊ.ಬ

     
  ಅಪಾರ್ಥೈಡ್ ಅಥವಾ ಇಂಗ್ಲೀಷಿನಲ್ಲಿ ಬರೆಯುವುದಾದರೆ apartheid ಹಾಗೆಂದರೆ “the state of being apart” ಎಂದರ್ಥ. ಅಂದರೆ ಕನ್ನಡದಲ್ಲಿ ಸರಳವಾಗಿ ಹೇಳುವುದಾದರೆ “ಇತರರಿಂದ ಬೇರೆಯಾಗಿ ದೂರ ಇರುವುದು ಅಥವಾ ದೂರ ಇರಿಸುವುದು” ಎಂದರ್ಥ. ಅರ್ಥವಾಯಿತಲ್ಲವೆ? ದೂರ ಇರಿಸುವುದು ಅಥವಾ ಇರುವುದು ಎಂದರೆ, ಭಾರತದಲ್ಲಿ ಅಸ್ಪøಶ್ಯರನ್ನು ಊರ ಹೊರಗೆ ಇಟ್ಟ ಹಾಗೆ, ದೇವಸ್ಥಾನಗಳಿಂದ ದೂರ ಇಟ್ಟ ಹಾಗೆ, ರಸ್ತೆಯಲ್ಲಿ ಸಂಚರಿಸಲು ನಿರ್ಬಂಧಿಸಿದ ಹಾಗೆ, ಮೇಲ್ಜಾತಿ ಜನರ ಗುಲಾಮರಾಗಿ ದುಡಿಸಿಕೊಳ್ಳುತ್ತಿದ್ದ ಹಾಗೆ ದಕ್ಷಿಣಾ ಆಫ್ರಿಕಾದಲ್ಲಿ ಕಪ್ಪು ಜನರನ್ನು ಬಿಳಿಯರು ದೂರ ಇಟ್ಟಿದ್ದರು. ಬಿಳಿಯರಿಗೆ ಪ್ರತ್ಯೇಕ ಹೋಟೆಲ್‍ಗಳು, ಬೀಚ್‍ಗಳು, ಶಾಪಿಂಗ್ ಮಾಲ್‍ಗಳು, ವಾಸಸ್ಥಳದ ಬಡಾವಣೆಗಳು, ಕಪ್ಪು ಜನರನ್ನು ಅಲ್ಲಿ ಪ್ರವೇಶಿಸಲು ನಿರ್ಬಂಧಿಸಿದ್ದು, ಅವರ ನಾಗರೀಕತೆಯನ್ನು ಕಿತ್ತುಕೊಂಡು ದೂರದ ಗುಡ್ಡಗಾಡು ರಾಜ್ಯಗಳನ್ನು ಅವರಿಗೆ ನೀಡಿದ್ದು, ಅವರ ಗುಲಾಮಗಿರಿಯ ಬಿಟ್ಟಿ ದುಡಿತದಲ್ಲಿ ದಕ್ಷಿಣ ಆಫ್ರಿಕಾವನ್ನು ಅರವತ್ತರ ದಶಕದಲ್ಲಿ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರವಾಗಿಸಿದ್ದು (ಜಪಾನಿನ ನಂತರ ದಕ್ಷಿಣಾ ಆಫ್ರಿಕಾ ಶೇ.67 ಜಿಡಿಪಿಯೊಂದಿಗೆ ಎರಡನೇ ಸ್ಥಾನದಲ್ಲಿತ್ತು!) ಅಪಾರ್ಥೈಡ್ ಎಂಬ so called ದಕ್ಷಿಣಾ ಆಫ್ರಕಾದ ಅಸ್ಪøಶ್ಯತೆಗೆ ಭವ್ಯ ಸಾಕ್ಷಿಗಳಾಗಿ ನಿಲ್ಲುತ್ತವೆ. ದುರಂತವೆಂದರೆ ಇಂತಹದ್ದೊಂದು ಶಾಸನಬದ್ಧ ಅಸ್ಪøಶ್ಯತೆಯ  ಕಾನೂನನ್ನು 1948 ಸಾರ್ವತ್ರಿಕ ಚುನಾವಣೆಯ ನಂತರ ಅಲ್ಲಿಯ ಅಲ್ಪಸಂಖ್ಯಾತ ಬಿಳಿಯರ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿತು. ಆ ಮೂಲಕ ಅದು ಸಮಾಜವನ್ನು ಬಿಳಿಯರು, ಬಣ್ಣದವರು, ಭಾರತೀಯರು ಮತ್ತು ಕಪ್ಪುಜನರು ಹೀಗೆ 4ಗುಂಪುಗಳಾಗಿ ವಿಭಜಿಸಿತು. (ಭಾರತದಲ್ಲಿ ಮನು ಧರ್ಮಶಾಸ್ತ್ರ ಸಮಾಜವನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಹೀಗೆ 4ವರ್ಣಗಳಾಗಿ ವಿಭಜಿಸಿದ ಹಾಗೆ!) ಅಂದಹಾಗೆ ನಮ್ಮ ಗಾಂಧೀಜಿಯವರು ಕೂಡ ದಕ್ಷಿಣ ಆಫ್ರಿಕಾದಲ್ಲಿ ಕೆಲ ಕಾಲ ಇದ್ದರು. ಆದರೆ ಅಲ್ಲಿ ಅವರು  ಹೋರಾಡಿದ್ದು ಅಲ್ಲಿಯ ಕಪ್ಪುಜನರ ಪರ ಅಲ್ಲ! ಬದಲಿಗೆ ಅಲ್ಲಿ ಅಲ್ಪ ಸಂಖ್ಯೆಯಲ್ಲಿದ್ದ ಭಾರತೀಯರ ಪರವಷ್ಟೆ!!
   
   ಹಾಗಿದ್ದರೆ ದಕ್ಷಿಣ ಆಫ್ರಿಕಾದ ಇಂತಹ ಅಪಾರ್ಥೈಡ್ ಎಂಬ ಅಸ್ಪøಶ್ಯತಾಚರಣೆಯ ವಿರುದ್ಧ ಹೋರಾಡಿದ್ದು? ನಿಸ್ಸಂಶಯವಾಗಿ ಅದು ರೋಲಿಹ್ಲಾಹ್ಲ ಮಂಡೇಲಾ. ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಡಾ.ನೆಲ್ಸನ್ ಮಂಡೇಲಾ. ಅವರ ಆತ್ಮಕತೆ “Long Walk To Freedom” ನಲ್ಲಿ ಅವರೇ ಹೇಳಿಕೊಂಡಿರುವುದನ್ನು ಉಲ್ಲೇಖಿಸುವುದಾದÀರೆ “ನನ್ನ ಜೀವನದಲ್ಲಿ ಸಂಭ್ರಮದ, ಸಾಕ್ಷಾತ್ಕಾರದ, ಸತ್ಯದ ಒಂದು ಕ್ಷಣವೂ ಇಲ್ಲ. ತುಂಬಿದ್ದೆಲ್ಲ ಒತ್ತಟ್ಟಿಗೆ ಬರುತ್ತಿದ್ದ ಸಹಸ್ರ, ಸಹಸ್ರ ಮರೆಯಲಾಗದ, ನೋವಿನ, ಅಪಮಾನದ ಕ್ಷಣಗಳೇ.  ನಿಜ ಹೇಳಬೇಕೆಂದರೆ ಇಂತಹ ನೋವು, ಅಪಮಾನ ನನ್ನಲ್ಲಿ ರೋಷವನ್ನು, ಬಂಡಾಯಗಾರನನ್ನು, ನನ್ನ ಜನರನ್ನು ಅನ್ಯಾಯವಾಗಿ ಜೈಲಿಗೆ ತಳ್ಳಿದ ವ್ಯವಸ್ಥೆಯ ವಿರುದ್ಧ ಹೋರಾಡುವ ಛಲವನ್ನು ತುಂಬಿತು”.
  
  ಖಂಡಿತ, ಮಡಿಬಾ ಪಂಥದಲ್ಲಿ 1918 ಜುಲೈ 18ರಂದು ಜನಿಸಿದ ಮಂಡೇಲಾರ ಬದುಕಿನಲ್ಲಿ ತುಂಬಿದ್ದು ಬರೀ ನೋವು, ಅಪಮಾನ, ದೌರ್ಜನ್ಯದ ದಿನಗಳಷ್ಟೆ. ಯಾಕೆಂದರೆ ಅಂದಿನ ದಕ್ಷಿಣ ಆಫ್ರಿಕಾದ ಸರ್ಕಾರ ಶಿಕ್ಷಣ, ಆಸ್ಪತ್ರೆ, ಪ್ರವಾಸಿ ತಾಣ, ಸಮುದ್ರ ತೀರಗಳು ಹೀಗೆ ಪ್ರತಿಯೊಂದನ್ನೂ ಅಂದಿನ ಕಪ್ಪು ಜನರಿಗೆ ಪ್ರತ್ಯೇಕವಾಗಿ ಬಿಳಿಯರಿಗಿಂತ ಕೀಳಾಗಿ ನೀಡಿತ್ತು. ಇಂತಹ ಅಸಮಾನತೆಯ ಸಮಯದಲ್ಲಿ ಪದವಿ ಮುಗಿಸಿದ ಮಂಡೇಲ 1942ರ ಹೊತ್ತಿಗೆ ಕಪ್ಪುಜನರ ಪ್ರಾಬಲ್ಯದ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ ಸೇರಿದರು. 1944 ರಲ್ಲಿ ಅದರ ಯುವ ಸಮಿತಿಯ ಹುಟ್ಟಿಗೂ ಕಾರಣರಾದರು. ಆ ಮೂಲಕ ಮಂಡೇಲ ಯಾವ ಒಂದು ಸರ್ಕಾರಿ ಕೃಪಾಪೋಷಿತ  ಅಸ್ಪøಶ್ಯತಾಚರಣೆ ಅಥವಾ ಅಪಾರ್ಥೈಡ್ ಅಥವಾ ‘ಬಣ್ಣ ಬೇಧ ನೀತಿ’ ಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಯಾವ ಮಟ್ಟಕ್ಕೆಂದರೆ 1952ರಲ್ಲಿ ಪ್ರಾರಂಭವಾದ ‘ಕಾನೂನು ಭಂಗ ಅಭಿಯಾನ’’ದಲ್ಲಿ ನೆಲ್ಸನ್ ಮಂಡೇಲ ಅದರ ’ರಾಷ್ಟ್ರೀಯ ಸ್ವಯಂ ಸೇವಕ ಪಡೆ’ಯ ಮುಖ್ಯಸ್ಥರಾಗುವ ಮಟ್ಟಿಗೆ.
  
  ತದನಂತರ ಬಿಳಿಯರು ಜಾರಿಗೊಳಿಸಿದ್ದ ಆರು ಕಠಿಣ ಕಾನೂನುಗಳ ವಿರುದ್ಧ ಅಸಹಕಾರ ಚಳುವಳಿಯನ್ನು ಮಂಡೇಲ ಪ್ರಾರಂಭಸಿದರು. ಪರಿಣಾಮವಾಗಿ ಅವರು ಮತ್ತು ಇತರ 9 ಜನರನ್ನು ಬಿಳಿಯರ ‘ನ್ಯಾಷನಲ್ ಪಾರ್ಟಿ’ ನೇತೃತ್ವದ ಸರ್ಕಾರ ’ಕೋಮುದಂಗೆ ನಿಯಂತ್ರಣ ಕಾಯ್ದೆ’’ಯಡಿ ಬಂಧಿಸಿ ಒಂಬತ್ತು ತಿಂಗಳ ಕಠಿಣ ದುಡಿಮೆ ಶಿಕ್ಷೆಗೆ ಒಳಪಡಿಸಿತು. ಪ್ರಶ್ನೆ ಏನೆಂದರೆ ಓರ್ವ ಜನಪ್ರಿಯ ನಾಶಯಕನನ್ನೆ ಹೀಗೆ ಅಲ್ಲಿನ ಸರ್ಕಾರ ಕಠಿಣ ದುಡಿಮೆಗೆ ಒಳಪಡಿಸಿತ್ತೆಂದರೆ ಇನ್ನು ಅಲ್ಲಿ ಸಾಮಾನ್ಯ ಕಪ್ಪುಜನರ ಸ್ಥಿತಿ ಹೇಗಿರಬೇಡ? ಒಂದರ್ಥದಲಿ ಅಲ್ಲಿ ಜಾರಿ ಇದ್ದದ್ದು ‘ಕಪ್ಪು ಅಸ್ಪøಶ್ಯತಾಚರಣೆ’ ಯಷ್ಟೆ ಅಲ್ಲ, ಜೊತೆಗೆ ಸಾಮಾಜಿಕ ಸರ್ಕಾರಿ ಜೀತಗಾರಿಕೆ! ಒಟ್ಟಾರೆ ಇಂತಹ ಕಠಿಣ ದುಡಿಮೆಯ ಮೂಲಕ ಮಂಡೇಲರ ಜೈಲುವಾಸ ಪ್ರಾರಂಭವಾಯಿತು. ಇದರ ಹಿಂದೆಯೇ ಅವರ ವಿರುದ್ಧ ನಿಷೇಧ ಕೂಡ ಹೇರಲಾಯಿತು. ಅದು ಎಂತಹ ನಿಷೇಧವೆಂದರೆ 1955 ಜೂನ್ 26ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕ್ಲಿಪ್‍ಟೌನ್ ಎಂಬಲ್ಲಿ ‘ಸ್ವಾತಂತ್ರ್ಯ ಸನ್ನದ’’ನ್ನು ಘೋಷಿಸಿದಾಗ ಮಂಡೇಲ ಗುಪ್ತವಾಗಿ, ಮೂಕಪ್ರೇಕ್ಷಕನಾಗಿ ಅದನ್ನು ನೋಡಬೇಕಾಯಿತಷ್ಟೆ! ಈ ನಡುವೆ 1955ರ ಡಿಸೆಂಬರ್ ಅಂತ್ಯದಲ್ಲಿ ದೇಶಾದ್ಯಂತ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಮಂಡೇಲರನ್ನು ಮತ್ತೊಮ್ಮೆ ಬಂಧಿಸಲಾಯಿತು. ಬಂಧಿಸಿ 1956ರಲ್ಲಿ ಅವರ ವಿರುದ್ಧ ಸುಪ್ರಸಿದ್ಧ ‘ದೇಶ ದ್ರೋಹದ ಅಪಾದನೆ’ಯನ್ನು  ಹೊರಿಸಲಾಯಿತು. ಅಂದಹಾಗೆ ಇಂತಹ ಅಪಾದನೆ ಬರೀ ಮಂಡೇಲಾರ ವಿರುದ್ಧ ಮಾತ್ರವಷ್ಟೆ ಅಲ್ಲ, ಸುಮಾರು 156ಜನರನ್ನು ಈ ದೇಶದ್ರೋಹದ ಆರೋಪದಡಿ ಬಂಧಿಸಲಾಯಿತು. ಬಂಧನದ ನಂತರ ಸುಪ್ರಸಿದ್ಧ ಈ ವಿಚಾರಣೆ 1961ರವರೆಗೂ ಮುಂದುವರಿದು ಮಾರ್ಚ್29, 1961ರಲ್ಲಿ ಮಂಡೇಲಾರನ್ನು ನಿರಪರಾಧಿ ಎಂದು ಘೋಷಿಸಲಾಯಿತು. ಈ ವಿಚಾರಣೆಯ ಸಂದರ್ಭದಲ್ಲಿ ಮಂಡೇಲ ಪೀಟರ್‍ಮಾರಿಟ್ಜ್‍ಬರ್ಗ್‍ನಲ್ಲಿ ‘ಅಖಿಲ ಆಫ್ರಿಕಾ ಸಮ್ಮೇಳನ’ದಲ್ಲಿ ಮಾತನಾಡಿ ಅಂದಿನ ದಕ್ಷಿಣ ಆಫ್ರಿಕಾದ ಪ್ರಧಾನಿ ವೆರ್‍ಫೋರ್ಡ್‍ರಿಗೆ ಜನಾಂಗ ಭೇಧವಿಲ್ಲದೆ ರಾಷ್ಟ್ರೀಯ ಸಮ್ಮೇಳನವೊಂದನ್ನು ಕರೆಯಬೇಕೆಂದು ಆಗ್ರಹಿಸುತ್ತಾರೆ. ತಪ್ಪಿದರೆ ದಕ್ಷಿಣ ಆಫ್ರಿಕಾವನ್ನು ಸ್ವಾತಂತ್ರ್ಯಗೊಳಿಸಲು ರಾಷ್ಟ್ರೀಯ ಚಳುವಳಿಯೊಂದನ್ನು ಆರಂಭಿಸುವುದಾಗಿ ಅವರು ಗುಡುಗುತ್ತಾರೆ. ಪರಿಣಾಮ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಮಂಡೇಲರ ವಿರುದ್ಧ ಮತ್ತೊಮ್ಮೆ ಕಾರ್ಯಾಚರಣೆಗಿಳಿಯಿತು. ಈ ಸಂದರ್ಭದಲ್ಲಿ ಮಂಡೇಲ ಬೇರೆ ದಾರಿ ಇಲ್ಲದೆ ಭೂಗತರಾದರು. ಭೂಗತರಾದದ್ದಷ್ಟೆ ಅಲ್ಲ ಸರ್ಕಾರದ ವಿರುದ್ಧ ಮಂಡೇಲ ಶಸ್ತ್ರಾಸ್ತ್ರ ಹೋರಾಟ ಸಹ ಕೈಗೊಂಡರು. ಹಾಗೆಯೇ ಅಂತಹ ಹೋರಾಟದಲ್ಲಿ ‘ಉಮಕೊಂಟೊ ವಿಸಿಜ್ಟೆ (ದೇಶದ ಈಟಿ)’ ಎಂಬ ಕಪ್ಪುಜನರ ಶಸ್ತ್ರಾಸ್ತ್ರ ಪಡೆ ಕೂಡ ರೂಪುಗೊಂಡಿತು.

   ಒಟ್ಟಾರೆ ಹೇಳುವುದಾದರೆ ಈ ಸಂದರ್ಭ ಮಂಡೇಲರ ಹೋರಾಟದ ನಿರ್ಣಾಯಕ ನಿರ್ಣಾಯಕ ಕ್ಷಣವಾಗಿತ್ತು. ಯಾಕೆಂದರೆ ಅತ್ತ ಶಸ್ತ್ರಾಸ್ತ್ರ ಹೋರಾಟ ಆರಂಭವಾಗುತ್ತಲೇ ಡೇವಿಡ್ ಮೊಟ್ಸಾಮಯಿ ಎಂದು ಹೆಸರು ಬದಲಿಸಿಕೊಂಡ ಮಂಡೇಲ ದಕ್ಷಿಣ ಆಫ್ರಿಕಾ ಬಿಟ್ಟು ಇಂಗ್ಲೆಂಡಿಗೆ ತೆರಳಿ ಶಸ್ತ್ರಾಸ್ತ್ರ ಹೋರಾಟಕ್ಕೆ ಅದರ ಬೆಂಬಲ ಕೋರಿದರು (ಯಾಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಡಚ್ಚರಾಗಿದ್ದರು). ಅಲ್ಲದೆ ಈ ಕಾರಣಕ್ಕಾಗಿ ಮೊರಾಕ್ಕೊ, ಇಥಿಯೋಫಿಯಾದಲ್ಲಿ ಸೇನಾ ತರಬೇತಿ ಕೂಡ ಪಡೆದ ಮಂಡೇಲ 1962ಜುಲೈ ನಲ್ಲಿ ದೇಶಕ್ಕೆ ವಾಪಸ್ ಮರಳುತ್ತಿದ್ದಂತೆ ಮತ್ತೊಮ್ಮೆ ಬಂಧನಕ್ಕೊಳಗಾಗಬೇಕಾಯಿತು. ಅವರ ಮೇಲೆ ಕಾನೂನಿಗೆ ವಿರುದ್ಧವಾಗಿ ದೇಶ ಬಿಟ್ಟು ತೆರಳಿದ ಆರೋಪ ಹೊರಿಸಿದ ಬಿಳಿಯರ ಸರ್ಕಾರ ಮತ್ತೊಮ್ಮೆ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಇದಷ್ಟೆ ಅಲ್ಲದೆ 1963ರಲ್ಲಿ ಮತ್ತೊಮ್ಮೆ ದೇಶದ್ರೋಹದ ಆರೋಪ ಹೊರಿಸಿ ಮಂಡೇಲಾರಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯದ ಮುಂದೆ ಬಿಳಿಯರ ಸರ್ಕಾರ ಕೋರಿದಾಗ ವಾದ ಮಂಡಿಸುತ್ತಾ ಸ್ವತಃ ವಕೀಲರಾದ ಮಂಡೇಲ ಹೀಗೆ ಹೇಳುತ್ತಾರೆ, “ನಾನು ಬಿಳಿಯರ ದಬ್ಬಾಳಿಕೆ ವಿರುದ್ಧ ಹೋರಾಡಿದ್ದೇನೆ, ಹಾಗೆಯೇ ಕಪ್ಪುಜನರ ದಬ್ಬಾಳಿಕೆಯ ವಿರುದ್ಧವೂ ಹೋರಾಡಿದ್ದೇನೆ. ಒಟ್ಟಾರೆ ನಾನು ಸರ್ವರೂ ಸಾಮರಸ್ಯ ಮತ್ತು ಸಮಾನ ಅವಕಾಶಗಳಡಿ ಬದುಕುವ ಪ್ರಜಾಪ್ರಭುತ್ವದ, ಸ್ವತಂತ್ರ ಸಮಾಜದ ಆದರ್ಶಗಳನ್ನು ಪೋಷಿಸುತ್ತೇನೆ. ಅದೊಂದು ಆದರ್ಶ. ಯಾಕೆಂದರೆ ನಾನು ಅಂತಹ ಆದರ್ಶವನ್ನು ಸಾಧಿಸುವ ಮತ್ತು ಅದರಡಿಯಲ್ಲಿ ಬದುಕುವ ಆಶಯ ಹೊಂದಿದ್ದೇನೆ. ಅಗತ್ಯವಾದರೆ ಅಂತಹ ಆದರ್ಶದ ಸಾಧನೆಗಾಗಿ ಸಾಯಲೂ ಕೂಡ ಸಿದ್ಧ”!
 
 ವಾವ್! ಎಂತಹ ಗ್ರೇಟ್ ಮಾತುಗಳು. ಅಂದಹಾಗೆ ಇಂತಹ ಗ್ರೇಟ್ ಮಾತುಗಳನ್ನಾಡಿದ ಮಂಡೇಲ ಮತ್ತವರ ಸಂಗಾತಿ ಸ್ನೇಹಿತ ವಾಲ್ಟರ್ ಸಿಸುಲುರವರನ್ನು 1964 ಜುಲೈ 11ರಂದು ದಕ್ಷಿಣಾ ಆಫ್ರಿಕಾದ ಬಿಳಿಯರ ಸರ್ಕಾರ ಜೀವಾವಧಿ ಶಿಕ್ಷಗೆ ಗುರಿಪಡಿಸಿ ರಾಬ್ಬನ್ ದ್ವೀಪಕ್ಕೆ ಕಳುಹಿಸುತ್ತದೆ, ಆ ಮೂಲಕ ಸ್ವಾತಂತ್ರ್ಯದ ಪರ, ಬಂಧನದ ದೌರ್ಜನ್ಯದ ವಿರುದ್ಧ ಹೋರಾಡಿದ ಧೀರಶಕ್ತಿಯೊಂದು ಸತತ 26ವರ್ಷಗಳವರೆಗೆ ಸುಧೀರ್ಘ ಜೈಲುವಾಸಕ್ಕೆ ತೆರಳುತ್ತದೆ. ಬಹುಶಃ ಇದು ವ್ಯವಸ್ಥೆ ಶ್ರೇಷ್ಠವ್ಯಕ್ತಿಯೊಬ್ಬನ ಪರಿಪೂರ್ಣ 26ವರ್ಷಗಳನ್ನು ಕಿತ್ತುಕೊಂಡದ್ದೆಂದರೆ ತಪ್ಪಾಗದು.
 
 ಸಮಾಧಾನದ ವಿಷಯವೆಂದರೆ 1990 ಭಾನುವಾರ ಫೆಬ್ರವರಿ11 ಮಂಡೇಲ ಜೈಲಿನಿಂದ ಹೊರಬರುತ್ತಾರೆ. ಹೊರಬಂದದ್ದೆ ಅಪಾರ್ಥೈಡ್ ಎಂಬ ಆ ಬಿಳಿಯರ ಅಸ್ಪøಶ್ಯತಾಚರಣೆಯನ್ನು ಕೊನೆಗಾಣಿಸುವ ನಿಟ್ಟಿನಲಿ ಅವರ ಜೊತೆ ಮಾತುಕತೆಗಿಳಿದು 1994 ಏಪ್ರಿಲ್ 27 ರಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುತ್ತಾರೆ. ಪರಿಣಾಮವಾಗಿ ಅಂದರೆ ಶಾಂತಿಮಾರ್ಗ ಹಿಡಿದುದ್ದಕ್ಕಾಗಿ 1993ರಲ್ಲಿ ಅವರು ಅಂದಿನ ಬಿಳಿಯರ ಸರ್ಕಾರದ ಅಧ್ಯಕ್ಷ ಎಫ್.ಡಬ್ಲ್ಯೂ.ಡಿ ಕ್ಲರ್ಕ್‍ರೊಡನೆ ನೊಬೆಲ್ ಪ್ರಶಸ್ತಿಗೂ ಕೂಡ ಪಾತ್ರರಾಗುತ್ತಾರೆ. ಹಾಗೆಯೇ ಜೈಲಿನಿಂದ ಬಿಡುಗಡೆಯಾದ ವರ್ಷ(1990)ಭಾರತ ಸರ್ಕಾರ ನೀಡುವ ‘ಭಾರತ ರತ್ನ’ ಪ್ರಶಸ್ತಿಗೂ ಕೂಡ ಮಂಡೇಲ, ಮರಣೋತ್ತರವಾಗಿ ಆ ಪ್ರಶಸ್ತಿ ಪಡೆದ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಪಾಲುದಾರರಾಗುತ್ತಾರೆ! ತನ್ಮೂಲಕ ಮಹಾನ್ ತ್ಯಾಗದ ಎರಡು ರತ್ನಗಳು ಶ್ರೇಷ್ಠ ಹೋರಾಟವೊಂದರ ನೆನಪಿಗೆ ಪಾಲುದಾರರಾಗುತ್ತವೆ. ಕಾಕತಾಳೀಯವೆಂದರೆ ಒಂದೇ ವರ್ಷದಲ್ಲಿ ಭಾರತರತ್ನಕ್ಕೆ ಪಾಲುದಾರರಾದ ಆ “ರತ್ನಗಳು” ಸಾವಿನಲ್ಲೂ ಪಾಲುದಾರರಾದದ್ದು! ಅಂದರೆ ಬಾಬಾಸಾಹೇಬ್ ಅಂಬೇಡ್ಕರ್ ಯಾವ ದಿನ ನಿಧನರಾದರೊ (ಡಿಸೆಂಬರ್ 6) ಅದೇ ದಿನ ಅಂದರೆ 2013 ಡಿಸೆಂಬರ್ 6ರಂದೇ ಮಂಡೇಲಾ ಕೂಡ ನಿಧನರಾದದ್ದು!
 
  ಖಂಡಿತ, ಇದು ಕಾಕತಾಳೀಯವೆನಿಸಿದ್ದರೂ ಘಟಿಸಿದ್ದಂತೂ ಸತ್ಯ. ಯಾಕೆಂದರೆ ಅಸ್ಪøಶ್ಯತಾಚರಣೆ ಅದು ದಲಿತರ ವಿರುದ್ಧ ನಡೆದಿದ್ದಾರೇನು? ಆಫ್ರಿಕಾದ ಕಪ್ಪುಜನರ ವಿರುದ್ಧ ನಡೆದಿದ್ದಾರೇನು? ಎರಡೂ ಕೂಡ ಮಾನವ ಹಕ್ಕುಗಳ ಘೋರ ಉಲ್ಲಂಘನೆಯೇ. ಈ ನಿಟ್ಟಿನಲಿ ಮಂಡೇಲ ನಿಧನದ ಸಂದರ್ಭದಲ್ಲಿ ರಾಷ್ಟ್ರದ ಸಧ್ಯದ ದಲಿತರ ದನಿಯಾಗಿರುವ ಮಾಯಾವತಿಯವರ ಹೇಳಿಕೆಯನ್ನು ಉಲ್ಲೇಖಿಸುವುದಾದರೆ “Like Nelson Mandela fought against racism, Babasaheb Ambedkar fought casteism. So my respects to  both”. ಖಂಡಿತ, ಗೌರವ ಇಬ್ಬರಿಗೂ ಸಲ್ಲಬೇಕು. ಬಾಬಾಸಾಹೇಬ್ ಅಂಬೇಡ್ಕರರಿಗೂ ಹಾಗೆಯೇ ಅವರ ಹಾಗೆ ದಕ್ಷಿಣ ಆಫ್ರಿಕಾದ ಕಪ್ಪುಜನರ ಹಕ್ಕುಗಳ ಪರ ಹೋರಾಡಿದ ನೆಲ್ಸನ್ ಮಂಡೇಲಾರಿಗೂ.   

Wednesday, 30 July 2014


    ದಲಿತರ ಸಹಜವಾದ ಬುದ್ಧ ಪ್ರೀತಿ

                                -ರಘೋತ್ತಮ ಹೊ.ಬ
 
 ಹಿಂದೆ, 20ವರ್ಷಗಳ ಹಿಂದೆ ನನ್ನ ಅಣ್ಣ ನಾಗಸಿದ್ಧಾರ್ಥ ಹೊಲೆಯಾರ್ ಬೌದ್ಧಭಿಕ್ಕುವಿನ ವೇಷಧಾರಿಯಾಗಿ, ವಿಧಾನಸೌಧದ ಮುಂದೆ ಹೆಜ್ಜೆ ಹಾಕಿದ ಚಿತ್ರ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾದಾಗ ನನ್ನೂರ ಜನರೆಲ್ಲ ಚಕಿತವಾಗಿ ನೋಡಿದವರೆ! ಬೆರೆಗುಗಣ್ಣು ಬಿಟ್ಟವರೆ! ಬೆಂಗಳೂರಿನ “ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ಧಿಸ್ಟ್ಸ್” ಸಂಘಟನೆ ಏರ್ಪಡಿಸಿದ್ಧ ಆ ಬೌದ್ಧ ಯಾತ್ರೆಯಲ್ಲಿ ಇಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಕೂಡ ಶ್ವೇತ ವರ್ಷಧಾರಿಯಾಗಿ ‘ಭೀಮಜ್ಯೋತಿ’ ಹಿಡಿದು ಹೆಜ್ಜೆ ಹಾಕಿದ್ದರು. ನಾಡಿನಾದ್ಯಂತ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ಧ ಆ ಬೌದ್ಧಯಾತ್ರೆ ಹೆಸರು ಪಡೆಯಿತು. ಹಾಗೆಯೇ ಸುದ್ದಿ ಕೂಡ ಮಾಡಿತ್ತು. ಮಾರನೆ ದಿನ ನನ್ನಣ್ಣ ಊರಿಗೆ ಬಂದಾಗ ಸಂಭ್ರಮವೋ  ಸಂಭ್ರಮ. ಏನನ್ನೋ ಸಾಧಿಸಿದ ಭವ್ಯತೆಯ ಸಂಗಮ. ಒಟ್ಟಾರೆ ಅಲ್ಲಿ ಸಾಧ್ಯವಾದದ್ದು “ಭೀಮಶಕ್ತಿ’ ಹಾಗೆಯೇ ದಲಿತರೊಳಗಿದ್ದ ಬುದ್ಧ ಭಕುತಿ.
 


  ಹೌದು, ಬುದ್ಧ ಭಕುತಿ ಅಥವಾ ಪ್ರೀತಿ ದಲಿತರಲ್ಲಿ ಅವಿನಾಭಾವವಾಗಿ ಮೂಡುವ ಒಂದು ದಿವ್ಯ ಭಾವನೆ. ಅದು ಬುದ್ಧನೆಡೆಗಿನ ಪ್ರೀತಿಯ ಧ್ಯೋತಕವೋ ಅಥವಾ ಅಂಬೇಡ್ಕರರ ಬೌದ್ಧ ಸ್ವೀಕಾರದ ಸಾರ್ಥಕವೋ  ಒಟ್ಟಿನಲಿ ದಲಿತರಿಗೆ ಬುದ್ಧನತ್ತ ಅವಿಚ್ಛಿನ್ನ ನಂಟಿರುವುದಂತು ಸುಳ್ಳಲ್ಲ. ದಲಿತರ ಈ ಬುದ್ಧ ಭಕುತಿಗೆ ನೇರ ಕಾರಣ ಬಾಬಾಸಾಹೇಬ್ ಅಂಬೇಡ್ಕರ್. ಹಿಂದೆ 1956ರಲ್ಲಿ  ಅವರು ತಮ್ಮ 10ಲಕ್ಷ  ಬಂಧುಗಳೊಡನೆ ಬೌದ್ಧಧರ್ಮ ಸ್ವೀಕರಿಸಿದಾಗ ಇಡೀ ಜಗತ್ತು ದಲಿತರು  ಇನ್ನು ಬೌದ್ಧ ಧಮ್ಮದ ಕಡೆಗೆ ನೋಡುವುದು ಎಂದು ಊಹಿಸಿತ್ತು. ಖಂಡಿತ ಅಂತಹ ನೋಡುವಿಕೆಯ ಭಾಗವಾಗಿ ಮೂಡಿಬರುವುದೇ ಬುದ್ಧ ಭಕುತಿ ಅಥವಾ ಭಕ್ತಿ.
   
  ಇಂತಹ ಬುದ್ಧಭಕ್ತಿ ಅಥವಾ ಬುದ್ಧನೆಡೆಗೆ ದಲಿತರ ಪ್ರೀತಿ ಇಂದು ಸರ್ವೇಸಾಮಾನ್ಯ. ಅದರಲ್ಲೂ ಶಿಕ್ಷಣ ಪಡೆದ ದಲಿತರಲ್ಲಂತೂ ಅಂತಹ ಪ್ರೀತಿ ಅಂಬೇಡ್ಕರರದಕ್ಕಿಂತ ಒಂದು ತೂಕ ಹೆಚ್ಚೆ  ಇರುತ್ತದೆ. ಏನು ಗೊತ್ತಿಲ್ಲ ಎಂದರೂ ದಲಿತರ ಮನಸ್ಸು “ಬುದ್ಧಂ ಶರಣಂ ಗಚ್ಛಾಮಿ” ಎಂದು ಗುನುಗು ಹಾಕುತ್ತಿರುತ್ತದೆ. ಬುದ್ಧನ ಚಿತ್ರ ಕಂಡರೆ ಅಥವಾ ಅವನ ಮಂತ್ರದ ಗಾನ ಕೇಳಿದರೆ ಎಂತಹ  ದಲಿತನೂ ತಲೆದೂಗದೆ ಇರಲಾರ.
     
   ಈ ಸಂದರ್ಭದಲ್ಲಿ ಒಂದಷ್ಟು ಪ್ರಶ್ನೆ ಕೇಳಿಬರುತ್ತವೆ. ಹಾಗಿದ್ದರೆ ದಲಿತರೆಲ್ಲ ಬೌದ್ಧರೆ? ಅಥವಾ ದಲಿತರ ಧರ್ಮ ಬೌದ್ಧ ಧರ್ಮವೇ? ಯಾಕೆ ದಲಿತರು ಇನ್ನೂ ಆ ಧರ್ಮವನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ? ಇತ್ಯಾದಿ.  ಖಂಡಿತ, ಇದಕ್ಕೆಲ್ಲ ಉತ್ತರ ಸುಲಭದಲ್ಲಿ ಸಿಗುವುದಿಲ್ಲ. ಆದರೆ ದಲಿತರ ಬುದ್ಧ ಭಕುತಿ ಮತ್ತು ಪ್ರೀತಿ ಮಾತ್ರ ಹೆಚ್ಚುವುದು ನಿಂತಿಲ್ಲ! ಉದಾಹರಣೆಗೆ ನಮ್ಮ ಸ್ವಂತ ಊರಿನಲ್ಲಿ 20 ವರ್ಷಗಳ ಹಿಂದೆಯೇ ದಲಿತರೆಲ್ಲ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. “ಮಂಗಲಹೊಸೂರಿನಲ್ಲಿ 500 ದಲಿತರಿಂದ ಬೌದ್ಧಧರ್ಮ ಸ್ವೀಕಾರ” ಎಂಬ ಹೆಡ್‍ಲೈನ್ಸ್ ಪತ್ರಿಕೆಗಳಲ್ಲಿ ಆ ಕಾಲದಲ್ಲೇ  ಪ್ರಕಟವಾಗಿದೆ. ಆದರೆ ನನ್ನೂರ ದಲಿತರ್ಯಾರು “ನಾವು ಬೌದ್ಧರು. ನಮ್ಮ ಧರ್ಮ ಬೌದ್ಧಧರ್ಮ” ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಿದ್ದರೂ ಬುದ್ಧನೆಡೆಗಿನ ಅವರ ಭಕುತಿ ಮತ್ತು ಪ್ರೀತಿ ಮಾತ್ರ ಹಾಗೆಯೇ ಮುಂದುವರಿದಿದೆ.
   
    ಈ ನಿಟ್ಟಿನಲಿ ಇಂತಹ ಘಟನೆಗಳು ನಮ್ಮೂರಷ್ಟೆ ಅಲ್ಲ ದಲಿತ ಕೇರಿಗಳಲ್ಲಿ ಇದು ಸರ್ವೇಸಾಮಾನ್ಯ. ಇದು ಯಾವ ತರಹ ಎಂದರೆ ಇಂದು ಬಹುತೇಕ ದಲಿತರಿರುವ  ಕಡೆ ನಾವು ಒಂದಾದರೂ ಬೌದ್ಧ ವಿಹಾರ ನಿರ್ಮಾಣಗೊಂಡಿರುವುದನ್ನು ಗಮನಿಸಬಹುದು. ಖಾವಿ ತೊಟ್ಟು ಬೌದ್ಧಭಿಕ್ಕುಗಳಾಗಿ “ಭಂತೇ” ಎಂದು ಅಭಿಮಾನಪೂರ್ವಕವಾಗಿ ಕರೆಸಿಕೊಳ್ಳುತ್ತಿರುವ ಅನೇಕ  ದಲಿತ ಬೌದ್ಧ ಭಿಕ್ಕುಗಳನ್ನು ನಾವಿಂದು ಕಾಣಬಹುದು. ದಲಿತ  ಕೇರಿಗಳಲ್ಲಿ ಇಂದು ಅಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ ಇತ್ಯಾದಿ  ಸಡಗರಗಳಲ್ಲಿ ಬೌದ್ಧ ಭಿಕ್ಕುಗಳ ಹಾಜರಿ ಸಾಮಾನ್ಯ. ಒಟ್ಟಾರೆ  ಹೇಳುವುದಾದರೆ ಬುದ್ಧನೆಡೆಗೆ ದಲಿತರು ಸದ್ದಿಲ್ಲದೆ ಸಾಗುತ್ತಿದ್ದಾರೆ!
   
    ಹಾಗೆ ಹೇಳುವುದಾದರೆ ಇಂದಿಗೂ ಬಹುತೇಕ ದಲಿತರಲ್ಲಿ ತಮ್ಮ ಧರ್ಮ  ಯಾವುದು ಎಂಬ ಗೊಂದಲ ಇದ್ದೇ ಇದೆ.  ಮೀಸಲಾತಿಯ ವಿಷಯಕ್ಕೆ ಬಂದಾಗ ಅವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಸಿಕೊಳ್ಳುತ್ತಾರೆ ಆದರೆ ಹೇಳಿಕೊಳ್ಳಲಲ್ಲ. ಆಚರಣೆಯಲ್ಲಿ ಮತ್ತು ಪ್ರೀತಿಯಲ್ಲಿ ಅವರ ಮೊದಲ ಪ್ರಾಶಸ್ತ್ಯ ಬುದ್ಧನಿಗಷ್ಟೆ ಮೀಸಲು. ಅಂದಹಾಗೆ ಈಚೀಚೆಗೆ ಅಶೋಕ, ಕನಿಷ್ಕಾನ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮಾದರಿಯ ದೊಡ್ಡ ದೊಡ್ಡ ಬೌದ್ಧ ವಿಹಾರಗಳನ್ನು ನಾವು ದಲಿತರ ಪ್ರಯತ್ನದಿಂದಾಗಿ ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಅಂಬೇಡ್ಕರರು ಬೌದ್ಧಧರ್ಮ ಸ್ವೀಕರಿಸಿದ “ದೀಕ್ಷಾ ಭೂಮಿ”ಯಲ್ಲಿ ಇಂದು ಬೃಹತ್ ಬೌದ್ಧವಿಹಾರ ನಿರ್ಮಾಣಗೊಂಡಿದೆ. ಅಂಬೇಡ್ಕರ್  ಬೌದ್ಧಧರ್ಮ  ಸ್ವೀಕರಿಸಿದ್ದರ (1956 ಅಕ್ಟೋಬರ್ 14)  ನೆನಪಿಗಾಗಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ದಲಿತರು, ಕ್ಷಮಿಸಿ ಬೌದ್ಧರು ಅಕ್ಟೋಬರ್‍ನಲ್ಲಿ  ನಾಗಪುರಕ್ಕೆ ಭೇಟಿಕೊಡುತ್ತಾರೆ. ಹಬ್ಬದ ಮಾದರಿಯಲ್ಲಿ  ಸಂಭ್ರಮಿಸುತ್ತಾರೆ. ಅಂದಹಾಗೆ ಇದು ಮಹಾರಾಷ್ಟ್ರದಲ್ಲಷ್ಟೆ ಅಲ್ಲ ಉತ್ತರ ಪ್ರದೇಶದಲ್ಲಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಆಡಳಿತಾವಧಿಗಳಲ್ಲಿ ರಾಜ್ಯದಾದ್ಯಂತ ಸಾವಿರಾರು ಬೌದ್ಧವಿಹಾರಗಳನ್ನು ನಿರ್ಮಿಸಿದ್ದಾರೆ. ಸ್ವತಃ ಮಾಯಾವತಿ ಮತ್ತು ಅವರ ಗುರು ದಿ.ಕಾನ್ಷೀರಾಮ್‍ರವರು ತಾವು ಬೌದ್ಧಧರ್ಮ ಸ್ವೀಕರಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ನಿಟ್ಟಿನಲಿ ಕಾನ್ಷೀರಾಮ್‍ರವರು ನಿಧನರಾದಾಗ(2006 ಅಕ್ಟೋಬರ್ 6) ಅವರ ಅಂತ್ಯಕ್ರಿಯೆಯನ್ನು ಅಂಬೇಡ್ಕರರ ಹಾಗೇ ಬೌದ್ಧ ವಿಧಿವಿಧಾನದಲ್ಲೇ ನೆರವೇರಿಸಿದ್ದನ್ನು ನಾವು ಗಮನಿಸಬಹುದು. ಒಟ್ಟಾರೆ ಇಂದು ಭಾರತ ದೇಶ ಮತ್ತು ಇಲ್ಲಿನ ದಲಿತ ಸಮುದಾಯ ಸಂಪೂರ್ಣ ಬುದ್ಧ ಪ್ರೀತಿಯಲ್ಲಿ ಮೀಯುತ್ತಿದೆ.

     ಈ ದಿಸೆಯಲ್ಲಿ ನಮ್ಮ ಕರ್ನಾಟಕವೂ ಕೂಡ ಹಿಂದೆ ಬಿದ್ದಿಲ್ಲ! ಯಕೆಂದರೆ ಹಾಲಿ ಕೇಂದ್ರ  ರೈಲ್ವೆ ಸಚಿವ  ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ವತಿಯಿಂದ ನಾಗಪುರ ಮಾದರಿಯಲ್ಲೇ ಬಿಸಿಲ ನಾಡು ಗುಲ್ಬರ್ಗದಲ್ಲಿ ಬೃಹತ್ ಬುದ್ಧ ಮಂದಿರವನ್ನು ಕಟ್ಟಿಸಿದ್ದಾರೆ. ಆ ನಿಟ್ಟಿನಲಿ ಖರ್ಗೆಯವರು ಮಾಯಾವತಿಯವರ ಸಾಲಿನಲ್ಲಿ ನಿಲ್ಲುತ್ತಾರೆ.
   
  ದಲಿತ ಕೇರಿಗಳಲ್ಲಿ ಮತ್ತವರ ನಿತ್ಯ ಜೀವನದಲ್ಲಿ ಇಂದು ನಾವು ಬುದ್ಧನನ್ನು ಸಹಜವಾಗಿ ಕಾಣಬಹದು. ಬುದ್ಧನ ಭಾವಚಿತ್ರ, ಬುದ್ಧ ವಿಹಾರ,  ಬುದ್ಧನ ವೃಕ್ಷ ಅರ್ಥಾತ್ ಬೋಧಿ ವೃಕ್ಷ( ಅರಳೀ ಮರ) ಇವೆಲ್ಲ ದಲಿತ ಕೇರಿಗಳಲ್ಲಿ ಸರ್ವೇಸಾಮಾನ್ಯ. ಅಂದಹಾಗೆ  ವಯಕ್ತಿಕವಾಗಿ ನಾನು ಮತ್ತು ನನ್ನ ಕುಟುಂಬ ಕೆಲದಿನಗಳ ಹಿಂದೆ ನನ್ನೂರಿನ (ಚಾಮರಾಜನಗರ) ಬೌದ್ಧ ವಿಹಾರ (ಸಾರನಾಥ ವಿಹಾರ) ವೊಂದಕ್ಕೆ ಭೇಟಿಕೊಟ್ಟಿದ್ದೆವು. ನನ್ನ 5 ವರ್ಷದ ಪುಟ್ಟ ಮಗಳು ಸಾಂಚಿಮೌರ್ಯ ವಿಹಾರದ ಸುತ್ತ ಮುತ್ತ ಬೆಳೆದಿದ್ದ ಚಿಕ್ಕ ಚಿಕ್ಕ ಗಿಡಗಂಟಿಗಳನ್ನು ಕೀಳುತ್ತಾ ಅದರ ಆವರಣವನ್ನು ಶುಭ್ರಗೊಳಿಸುವ ಕ್ರಿಯೆಯಲ್ಲಿ ನಿರತಳಾಗಿದ್ದಳು. ಮನಸ್ಸು ಹೇಳಿತು “ನಿಜಕ್ಕೂ ಇಂದು ಆಗಬೇಕಾದ್ದೆಂದರೆ ದಲಿತರ ಎದೆಯಲ್ಲಿ ಇರುವ ಇಂತಹ  ಹಿಂದೂ ಧರ್ಮದ ಚಿಕ್ಕ ಚಿಕ್ಕ ಕಳೆಗಳನ್ನು ಕೀಳುವ ಕೆಲಸ. ಖಂಡಿತ, ನನ್ನ ಮಗಳಂತಹ ಮುಂದಿನ  ಜನರೇಷನ್ ಆ ಕ್ರಿಯೆಯಲ್ಲಿ ತೊಡಗುತ್ತದೆ” ಎಂದು.

   ದಲಿತರ ಬುದ್ಧನೆಡೆಗಿನ ಪ್ರೀತಿ ಮತ್ತು ಭಕುತಿ ಸವಿಜೇನ ರೀತಿ. ಅದು ನಿಷ್ಕಲ್ಮಶವಾದುದು. ಹಾಗೆಯೇ ಅವರಿಗೆ ಅತ್ಯಗತ್ಯವಾದುದು.                                                    
                                                     

Saturday, 26 July 2014


ಛತ್ರಪತಿ ಶಾಹುಮಹಾರಾಜ್: ಸಾಮಾಜಿಕ ಪರಿವರ್ತನೆಯ ಮೇರುಸ್ತಂಭ

                              -ರಘೋತ್ತಮ ಹೊ.ಬ. 




  1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನುಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು... ಹಾಗೆಯೇ ಈ ಆದೇಶದ ಉದ್ದೇಶಕ್ಕಾಗಿ ಬ್ರಾಹ್ಮಣ, ಪ್ರಭು, ಶೇಣಾವಿ, ಪಾರ್ಸಿ ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಜಾತಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ಅರ್ಥೈಸಲಾಗುವುದು”. ಹೌದು, ಹಿಂದುಳಿದ ವರ್ಗಗಳಿಗೆ(ಓ.ಬಿ.ಸಿ) ಈ ದೇಶದಲ್ಲಿ ಪ್ರಪ್ರಥಮವಾಗಿ ಶೇ.50ರಷ್ಟು ಮೀಸÀಲಾತಿ ನೀಡಿ ಆಜ್ಞೆ ಹೊರಡಿಸಿ ‘ಮೀಸಲಾತಿಯ ಜನಕ (Father of Reservation)’ ಎಂದು ಖ್ಯಾತಿಗೊಂಡ ಅರಸ ಬೇರಾರು ಅಲ್ಲ, ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು. ಸಹಜವಾಗಿ ಹೇಳುವುದಾದರೆ “ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ” (ಆಧಾರ: Chathrapati Shahu The Pillar Of Social Democracy : Published by Education department, Government of Maharashtra , p.146).
 
  ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26 ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‍ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.

   ಪ್ರಶ್ನೆ ಏನೆಂದರೆ ಮಹಾರಾಜ ಶಾಹುರವರು ತಮ್ಮ ಅರಸೊತ್ತಿಗೆಯನ್ನು ಅಂದಿನ ಇತರೆ ಅರಸರುಗಳಂತೆ ಬರೀ ಮೋಜು, ಮಸ್ತಿಗೆ ಬಳಸಿದರೆ? ಖಂಡಿತ ಹಾಗೆ ಪ್ರಶ್ನೆ ಕೇಳುವುದೇ ಮಹಾಪರಾಧವಾಗುತ್ತದೆ. ದಿಟ ಹೇಳಬೇಕೆಂದರೆ ಶಾಹುರವರು ಪ್ರಜಾನುರಾಗಿಯಾದರು. ಯಾವ ತಳವರ್ಗಗಳು, ಬ್ರಾಹ್ಮಣೇತರ ಸಮುದಾಯಗಳು ಶತಶತಮಾನಗಳಿಂದ ವಿದ್ಯೆ, ಆಸ್ತಿ, ಅಧಿಕಾರಗಳಿಂದ ವಂಚಿತಗೊಂಡಿದ್ದವೋ ಅಂತಹದ್ದನ್ನು ವಾಪಸ್ ಕೊಡಿಸಲು ಸ್ವತಃ ಆ ಸಮುದಾಯಗಳ ಪ್ರತಿನಿಧಿಯಾಗಿ ನೋವನ್ನು ಅನುಭವಿಸಿ ಶ್ರಮಿಸಿದರು.

    ಅಂತಹ ನೋವಿನ ಪ್ರಕರಣವೊಂದನ್ನು ಇಲ್ಲಿ ದಾಖಲಿಸುವುದಾದರೆ “1900 ರ ವರ್ಷದ ಒಂದು ದಿನ ಬೆಳಿಗ್ಗೆ ಯುವರಾಜ ಶಾಹು ತಮ್ಮ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ಇತರರೊಡನೆ ಪಂಚಗಂಗಾ ನದಿಗೆ ಸ್ನಾನ ಮಾಡಲು ಹೋದರು. ಆಗ ಸಂಪ್ರದಾಯದಂತೆ ಮಹಾರಾಜರು ನದಿಯಲ್ಲಿ ಸ್ನಾನಮಾಡುತ್ತಿದ್ದರೆ ಬ್ರಾಹ್ಮಣ ಪೂಜಾರಿಗಳು ಮಂತ್ರ ಹೇಳಬೇಕಾಗಿತ್ತು. ಅಂತೆಯೇ ಯುವರಾಜ ಶಾಹು ಸ್ನಾನ ಮಾಡುತ್ತಿದ್ದಾಗ ಮಂತ್ರ ಹೇಳಲಾಯಿತು. ಆದರೆ ಆ ಮಂತ್ರ ‘ವೇದ ಪಠಣವಾಗಿರಲಿಲ’್ಲ! ಬದಲಿಗೆ ಪುರಾಣದ ಯಾವುದೋ ಒಂದೆರಡು ಶ್ಲೋಕಗಳಾಗಿದ್ದವು. ಅಂದಹಾಗೆ ಇದನ್ನು ಸಹಪಾಠಿಯೋರ್ವರಿಂದ ತಿಳಿದ ಯುವರಾಜ ಶಾಹು ಮಂತ್ರ ಹೇಳಿದ ಪೂಜಾರಿಯನ್ನು ಈ ಬಗ್ಗೆ ಕೇಳಲಾಗಿ ಪೂಜಾರಿ ಹೇಳಿದ್ದೇನೆಂದರೆ ‘ಮಹಾರಾಜರು ಶೂದ್ರ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ವೇದಗಳ ಮಂತ್ರಗಳನ್ನು ಹೇಳುವ ಹಾಗಿಲ್ಲ’ ಎಂದು! (ಅದೇ ಕೃತಿ, ಪು.114). ಖಂಡಿತ, ಈ ಘಟನೆ ಶಾಹು ಮಹಾರಾಜರಲ್ಲಿ ಆಕ್ರೋಶದ ಅಲೆಯನ್ನೇ ಎಬ್ಬಿಸಿತು. ಯಾಕೆಂದರೆ ಮಹಾರಾಜರಿಂದ ವೇತನ ಪಡೆಯುವ ಪೂಜಾರಿಯೊಬ್ಬ ಅದೇ ಮಹಾರಾಜರಿಗೆ ‘ಅವರು ಶೂದ್ರರು’ ಎಂಬ ಕಾರಣಕ್ಕಾಗಿ ಅವರಿಗೆ ವೇದಗಳನ್ನು ಉಚ್ಛರಿಸುವುದಿಲ್ಲ ಎಂದರೆ?

   ವೇದೋಕ್ತ ಪ್ರಕರಣ: ಅಂತೆಯೇ ಇದರಿಂದ ಕೆರಳಿದ ಶಾಹು ಮಹಾರಾಜರು 1901 ಅಕ್ಟೋಬರ್ ತಿಂಗಳಲ್ಲಿ ತಮ್ಮ ಆಸ್ಥಾನದ ಮುಖ್ಯ ಪೂಜಾರಿ ರಾಜೋಪಾಧ್ಯೆಯವರಿಗೆ ತಮ್ಮ ಅರಮನೆಯಲ್ಲಿ ಇನ್ನುಮುಂದೆ ವೇದೋಕ್ತಿಗಳನ್ನೇ ಉಚ್ಛರಿಸಬೇಕೆಂದು ರಾಜಾಜ್ಞೆ ವಿಧಿಸಿದರು. ಆದರೆ ಮಹಾರಾಜರ ಇಂತಹ ಆಜ್ಞೆ ಮತ್ತು ಈ ಸಂಬಂಧ ಅವರು ನೀಡಿದ ನೋಟೀಸುಗಳಿಗೆ ಮುಖ್ಯಪೂಜಾರಿ ರಾಜೋಪಾಧ್ಯೆಯವರು ತಲೆಕೆಡಿಸಿಕೊಳ್ಳಲೇ ಇಲ್ಲ! ಕಡೆಗೆ ತಮ್ಮ ಅಧಿಕಾರ ದಂಡ ಪ್ರಯೋಗಿಸಿದ ಶಾಹು ಮಹಾರಾಜರು ಆ ರಾಜೋಪಾಧ್ಯೆಯನ್ನು ಪೂಜಾರಿಗಿರಿಯಿಂದ ಕಿತ್ತೆಸೆದರು! ಅವರಿಗೆ ಬಳುವಳಿಯಾಗಿ ನೀಡಿದ್ದ ಇನಾಮು ಗ್ರಾಮ ಮತ್ತು ಭೂಮಿಯನ್ನು ವಾಪಸ್ ಪಡೆದರು. ಅಲ್ಲದೇ ಸದರಿ ರಾಜೋಪಾಧ್ಯೆಯವರಿಗೆ ನೀಡಿದ್ದ ಕೆಲವು ರೆವಿನ್ಯೂ, ಸಿವಿಲ್ ಮತ್ತು ಕ್ರಿಮಿನಲ್ ಅಧಿಕಾರಗಳನ್ನು ಕಿತ್ತುಕೊಂಡು ಮಹಾರಾಜ ಶಾಹು ಅವರನ್ನು ಅರಮನೆÀಯಿಂದ ಹೊರಹಾಕಿದರು. ಅಂದಹಾಗೆ ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು. ಹಾಗೆಯೇ ಸಂಧಾನಗಳ ಮೂಲಕ ಶಾಹುಮಹಾರಾಜರನ್ನು ಕ್ಷತ್ರಿಯ ಎಂದು ಒಪ್ಪಿಕೊಳ್ಳಲಾಯಿತು. ಅಂತೆಯೇ ಅವರ ಅರಮನೆಯಲ್ಲಿ ವೇದಮಂತ್ರಗಳನ್ನು ಉಚ್ಛರಿಸÀುವ ಪರಿಪಾಠ ಕೂಡ ಆರಂಭವಾಯಿತು! (ಅದೇ ಕೃತಿ, ಪು.136).  ಈ ನಿಟ್ಟಿನಲಿ ಈ ಪ್ರಕರಣ ಭಾರತದ ಇತಿಹಾಸದಲ್ಲಿ ‘ವೇದೋಕ್ತ ಪ್ರಕರಣ’ ಎಂದು ಹೆಸರು ಪಡೆಯಿತಲ್ಲದೆ, ಬ್ರಾಹ್ಮಣ್ಯದ ಕಾನೂನಿನ ಪಾರುಪತ್ಯಕ್ಕೆ ಪ್ರಪ್ರಥಮವಾಗಿ ತಡೆಯೊಡ್ಡಿತ್ತು!

   ಅಸ್ಪøಶ್ಯತೆಯ ವಿರುದ್ಧ ಸಮರ: ಶಾಹು ಮಹಾರಾಜರು ಹಿಂದುಳಿದ ವರ್ಗ(ಓ.ಬಿ.ಸಿ)ಗಳಿಗೆ ತಮ್ಮ ಸಂಸ್ಥಾನದಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದ್ದನ್ನು ತಿಳಿದಿರಿ. ಆದರೆ ಆಗ ಅವರು ಎದುರಿಸಿದ ಟೀಕೆ? ಇಂತಹ ಮೀಸಲಾತಿ ಟೀಕೆಗೆ ಶಾಹುರವರು ಉತ್ತರಿಸಿರುವ ಪರಿ ನೋಡಿ “ಹಿಂದುಳಿದ ವರ್ಗಗಳ ಏಳ್ಗೆಗಾಗಿ ನನ್ನ ರಾಜ್ಯದಲ್ಲಿ ವಿಶೇಷ ಪ್ರಯತ್ನ ನಡೆಯುತ್ತಿರುವುದನ್ನು ಕೆಲವು ಸುಶಿಕ್ಷಿತ ಮೇಲ್ವರ್ಗದ ಜನ ಅಪಮಾನಕಾರಿ ನಡೆ ಎಂದು ಭಾವಿಸುತ್ತಿದ್ದಾರೆ. ಆದರೆ ಖಾಯಿಲೆಪೀಡಿತ ದುರ್ಬಲ ಮಗುವೊಂದನ್ನು ವೈದ್ಯರು ವಿಶೇಷವಾಗಿ ಮಹಿಳಾ ವೈದ್ಯರು ಹೇಗೆ ನೋಡಿಕೊಳ್ಳುತ್ತಾರೆ? ಈ ನಿಟ್ಟಿನಲಿ ಆ ಕ್ರಮವನ್ನೇ ಉಲ್ಲೇಖಿಸುವುದಾದರೆ ವೈದ್ಯರು ಅಂತಹ ದುರ್ಬಲ ಮಗು ಇತರರಂತೆ ದಷ್ಟಪುಷ್ಟವಾಗಲು ವಿಶೇಷ ಆಹಾರಗಳನ್ನು ನೀಡುತ್ತಾರೆ ಮತ್ತು ಇದನ್ನು ಎಲ್ಲರೂ ಒಪ್ಪುತ್ತಾರೆ. ದುರಂತವೆಂದರೆ ನಾನು ಇದೇ ಸಿದ್ಧಾಂತವನ್ನು(ದುರ್ಬಲ ಮಗುವಿನ) ಅಸ್ಪøಶ್ಯರಿಗೆ ಅಪ್ಲೈ ಮಾಡಿದರೆ ನನ್ನನ್ನು ಯಾಕೆ ಟೀಕಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ!” (ಅದೇ ಕೃತಿ, ಪು.35).  ‘ಮೀಸಲಾತಿಯ ಜನಕ’ ಮೀಸಲಾತಿಯನ್ನು ಅದ್ಭುತವಾಗಿ ಸಮರ್ಥಿಸಿದ ಪರಿ ಇದು! ಕಾಕತಾಳೀಯವೆಂದರೆ ಇದೇ ಮೀಸಲಾತಿಯ ಜನಕ ಅರ್ಥಾತ್ ಶಾಹು ಮಹಾರಾಜರು ಅದೇ ಮೀಸಲಾತಿಯ ಆಧುನಿಕ ಪ್ರವರ್ತಕ ಬಾಬಾಸಾಹೇಬ್ ಅಂಬೇಡ್ಕರರನ್ನು ಈ ದೇಶಕ್ಕೆ ವಿಶೇಷವಾಗಿ ಅಸ್ಪøಶ್ಯರ ಮುಂದೆ 1922 ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆದ ‘ಅಖಿಲ ಭಾರತ ಶೋಷಿತ ವರ್ಗಗಳ ಸಮ್ಮೇಳನ’ದಲ್ಲಿ ಪರಿಚಯಿಸುತ್ತಾ ‘You should all keep before you Mr.Bhimrao Ambedkar, Your great leader as your ideal and try to follow him, to be like him’ ಎಂದರು! ಅಂದರೆ ‘ನಿಮ್ಮ ಶ್ರೇಷ್ಠ ನಾಯಕ ಶ್ರೀ ಭೀಮರಾವ್ ಅಂಬೇಡ್ಕರರಂತೆ ನೀವಾಗಬೇಕು, ಅವರನ್ನು ನೀವು(ಶೋಷಿತ ವರ್ಗಗಳು) ನಿಮ್ಮ ಆದರ್ಶವಾಗಿ ಸ್ವೀಕರಿಸಬೇಕು, ಮುಂದಿಟ್ಟುಕೊಳ್ಳಬೇಕು’ ಎಂದರ್ಥ! (ಅದೇ ಕೃತಿ, ಪು.38). ಖಂಡಿತ, ಶಾಹುರವರು ಅಂಬೇಡ್ಕರರನ್ನು ಅಸ್ಪøಶ್ಯರಿಗೆ ಬರೀ ಪರಿಚಯಿಸಿದ್ದಷ್ಟೇ ಅಲ್ಲ ಅವರ ಹೋರಾಟಕ್ಕೆ, ಅವರ ಬದುಕಿಗೆ ತಮ್ಮ ಬೆಂಬಲದ ನೆರವನ್ನೂ ನೀಡಿದ್ದಾರೆ. ಯಾವ ಪರಿ ಎಂದರೆ ಅಂಬೇಡ್ಕರರು 1921ರಲ್ಲಿ ಇಂಗ್ಲೆಂಡಿಗೆ ಎಂಎಸ್ಸಿ, ಡಿಎಸ್ಸಿ ಪದವಿ ಪಡೆಯಲು ತೆರಳಿ ತಮ್ಮ ಶಿಕ್ಷಣಕ್ಕೆ ‘200 ಪೌಂಡ್ ನೆರವು ಬೇಕೆಂದು’ ಶಾಹು ಮಹಾರಾಜರಿಗೆ ಪತ್ರ ಬರೆದಾಗ ಮಹಾರಾಜರು ತಡ ಮಾಡದೆ ಅಂಬೇಡ್ಕರರಿಗೆ ಲಂಡನ್ನಿನ ಅವರ ವಿಳಾಸಕ್ಕೆ ಅಂದಿನ ಭಾರತೀಯ ಕರೆನ್ಸಿಯಲ್ಲಿ 1500ರೂಗಳನ್ನು ಕಳುಹಿಸುತ್ತಾರೆ. ಅಲ್ಲದೆ ಅಂಬೇಡ್ಕರರು ವಿದೇಶದಲ್ಲಿದ್ದುದರಿಂದ ಅವರ ಶ್ರೀಮತಿ ಮಾತೆ ರಮಾಬಾಯಿಯವರಿಗೆ ನೆರವಾಗಲೆಂದು ಅವರಿಗೂ ಕೂಡ ಶಾಹು ಮಹಾರಾಜರು 750 ರೂಗಳ ಸಹಾಯಧನ ಮಂಜೂರು ಮಾಡುತ್ತಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ಅಂಬೇಡ್ಕರರು ಈ ದೇಶದ ಶೋಷಿತರ ಪ್ರಥಮ ಪತ್ರಿಕೆ ‘ಮೂಕ ನಾಯಕ’ವನ್ನು ಆರಂಭಿಸಿದಾಗ ಶಾಹುಮಹಾರಾಜರು ಅದಕ್ಕೂ ಕೂಡ 2500ರೂಗಳ ಅನುದಾನ ನೀಡುತ್ತಾರೆ. ಹಾಗೆ ಅಂಬೇಡ್ಕರರ ಹೋರಾಟಕ್ಕೆ ಹೀಗೆ ಅನುದಾನ ನೀಡಿದ್ದಷ್ಟೇ ಅಲ್ಲ, ಶಾಹು ಮಹಾರಾಜರು 1920ರಲ್ಲಿ ಅಂಬೇಡ್ಕರರ ಶಿಫಾರಸ್ಸಿನ ಮೇರೆಗೆ ಆರ್.ಕೆ.ಕದಂ ಎಂಬ ಅಸ್ಪøಶ್ಯರನ್ನು ನಾಮನಿರ್ದೇಶನದ ಮೂಲಕ ತಮ್ಮ ಸಂಸ್ಥಾನದ ಆಡಳಿತ ಪರಿಷತ್ತಿಗೂ ಕೂಡ ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಲ್ಲದೆ ಅಸ್ಪøಶ್ಯತೆ ವಿರುದ್ಧ ರಾಜಾಜ್ಞೆ ವಿಧಿಸುವ ಅವರು “ಯಾವುದೇ ಮನುಷ್ಯರಿಗೆ ಸಾರ್ವಜನಿಕ ಸ್ಥಳ, ಧರ್ಮಛತ್ರ, ಸÀರ್ಕಾರಿ ಕಚೇರಿ,  ಸಾರ್ವಜನಿಕ ಹೋಟೆಲ್ಲು, ಕೆರೆ, ಬಾವಿ ಇತ್ಯಾದಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ”(ಅದೇ ಕೃತಿ, ಪು.199) ಎನ್ನುತ್ತಾರೆ. ಆ ಮೂಲಕ ಅಸ್ಪøಶ್ಯತೆ ವಿರುದ್ಧ ಶಾಹು ಮಹಾರಾಜರು ಸಮರ ಸಾರುತ್ತಾರೆ.

    ಶಾಹು ಸತ್ಯಶೋಧಕ ಸಮಾಜ: ಒಂದು ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದು ಮಹಾತ್ಮ ಜ್ಯೋತಿಬಾಫುಲೆಯವರಿಗೆ ಸಂಬಂಧಪಟ್ಟಿದ್ದು. ಹಿಂದುಳಿದ ಫೂಲ್ ಮಾಲಿ(ಹೂವಾಡಿಗ) ಜಾತಿಗೆ ಸೇರಿದ ಜ್ಯೋತಿಬಾಫುಲೆಯವರು ತಮ್ಮ ಧರ್ಮಪತ್ನಿ ಮಾತೆ ಸಾವಿತ್ರಿಬಾಫುಲೆಯವರೊಡಗೂಡಿ ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಸಮಾಜ ಚಳುವಳಿಯ ಮೂಲಕ(1873) ಸಾಮಾಜಿಕ ಕ್ರಾಂತಿಯ ಕಿಡಿ ಹಚ್ಚಿದ್ದು ಎಲ್ಲರಿಗೂ ತಿಳಿದಿದೆ. ಅಂದಹಾಗೆ ಫುಲೆಯವರ ಈ ಚಳುವಳಿಯನ್ನು ‘ಶಾಹು ಸತ್ಯಶೋಧಕ ಸಮಾಜ’ ಹೆಸರಿನಲ್ಲಿ ಸಮರ್ಥವಾಗಿ ಮುಂದುವರಿಸಿದ ಶಾಹು ಮಹಾರಾಜರು ಸಾಮಾಜಿಕ ಪರಿವರ್ತನೆಯ ನೂತನ ಶಕೆಯ ಈ ನಿಟ್ಟಿನಲ್ಲಿ ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿಯಾಗುತ್ತಾರೆ. ಈ ದಿಸೆಯಲ್ಲಿ ಶಾಹುರÀವರ ಈ ಎಲ್ಲಾ ಸಾಮಾಜಿಕ ಪರಿವರ್ತನೆಯ ಕೈಂಕರ್ಯಗಳಲ್ಲಿ ಫುಲೆಯವರ ನೆರಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.

   ಕಡೆಯದಾಗಿ ಶಾಹು ಮಹಾರಾಜರ ಪ್ರಾಯೋಗಿಕ ಸಾಮಾಜಿಕತೆಯನ್ನಿಲ್ಲಿ ಒಂದು ಉದಾಹರಣೆಯನ್ನಾಗಿ ನೋಡೋಣ. ಅದೆಂದರೆ ‘ತಮ್ಮ ರಾಜ್ಯದ ರಾಜಧಾನಿ ಕೊಲ್ಲಾಪುರ ನಗರದ ಮುಖ್ಯರಸ್ತೆಯೊಂದರಲ್ಲಿ ಮಹಾರಾಜ ಶಾಹುರವರು ಉದ್ದೇಶಪೂರ್ವಕವಾಗಿಯೇ ಗಂಗಾರಾಂ ಕಾಂಬ್ಳೆ ಎಂಬ ಅಸ್ಪøಶ್ಯನಿಗೆ ಹಣಕಾಸು ನೆರವು ನೀಡಿ ಹೊಟೆಲ್ಲೊಂದÀನ್ನು ತೆರೆಸಿದ್ದರು. ಹಾಗೆಯೇ ಆ ಹೊಟೆಲ್ಲಿಗೆ ‘ಶಾಹು ಟೀ ಷಾಪ್’ ಎಂದು ಹೆಸರಿಡಿಸಿದ್ದ ಮಹಾರಾಜರು ಪ್ರತಿದಿನ ತಮ್ಮ ಆಸ್ಥಾನದ ಇತರರೊಡನೆ ಆ ಹೊಟೆಲ್ಲಿಗೆ ಹೋಗಿ ಟೀ ಕುಡಿಯುತ್ತಿದ್ದರು. ಆ ಮೂಲಕ ಜಾತಿ ಆಧಾರದ ಉದ್ಯೋಗ ತೊಲಗಿಸುವುದರ ಜೊತೆಗೆ, ಅಸ್ಪøಶ್ಯತೆ ಆಚರಣೆ ತಮ್ಮ ರಾಜ್ಯದಲ್ಲಿ ಸಲ್ಲದ್ದೆಂದು ಬಹಿರಂಗವಾಗಿ ಶಾಹು ಮಹಾರಾಜರು ಇಡೀ ಜಗತ್ತಿಗೆ ಪ್ರತಿನಿತ್ಯ ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ದುರಂತವೆಂದರೆ ಇಂತಹ ಸಾಮಾಜಿಕ ಪ್ರಯೋಗದ ಶ್ರೇಷ್ಠ ಅರಸು ಡಯಾಬಿಟಿಸ್‍ಗೆ ತುತ್ತಾಗಿ 48ರ ಸಣ್ಣ ಹರೆಯದಲ್ಲೇ ಅಂದರೆ 1922 ಮೇ 6 ರಂದು ನಿಧನರಾದರು.

   ಒಂದು ವಾಸ್ತಾವಾಂಶವನ್ನಿಲ್ಲಿ ಪ್ರಸ್ತಾಪಿಸಬೇಕು ಅದೆಂದರೆ ಲೋಕಮಾನ್ಯ ಎಂಬ ಹೆಸರಿನ ಸೋಕಾಲ್ಡ್ ಬಾಲಗಂಗಾಧರ ತಿಲಕರು ಶಾಹು ಮಹಾರಾಜರ ಉಗ್ರ ಟೀಕಾಕಾರರಾಗಿದ್ದರು. ಹಾಗೆಯೇ ತಿಲಕರ ಸಂಪಾದಕತ್ವದ ‘ಕೇಸರಿ’ ಪತ್ರಿಕೆ ಶಾಹು ಮಹಾರಾಜರ ಇಂತಹ ಸಾಮಾಜಿಕ ಕಲ್ಯಾಣ ಕಾರ್ಯ ಕಂಡು ಅವರನ್ನು ಸ್ವರಾಜ್ಯ ದ್ರೋಹಿ ಎಂದಿತ್ತು! ಆದರೆ ಶಾಹು ಮಹಾರಾಜರು ಮನುವಾದಿಗಳ ಇಂತಹ ಟೀಕೆಗಳಿಗೆಲ್ಲ ಖಂಡಿತ ಜಗ್ಗಲಿಲ್ಲ. ಬದಲಿಗೆ “ನನ್ನನ್ನು ಕೊಲ್ಲಾಪುರದ ಈ ಸಿಂಹಾಸನದಿಂದ ಕಿತ್ತೊಗೆದರೂ ಸರೀ ನಾನು ಈ ದೇಶದ ಶೋಷಿತ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಸೇವೆಯನ್ನು ನಿರಂತರ ಮುಂದುವರಿಸುವುದಾಗಿ” ಗುಡುಗಿದರು.

    ಒಂದಂತು ನಿಜ, ಭಾರತದ ಸಾಮಾಜಿಕ ಪರಿವರ್ತನೆಯ ಚಳುವಳಿಯ ಇತಿಹಾಸದಲ್ಲಿ ಛತ್ರಪತಿ ಶಾಹು ಮಹಾರಾಜರ ಹೆಸರು ಅಚ್ಚಳಿಯದೇ ಶ್ರೇಷ್ಠತಮವಾಗಿ ದಾಖಲಾಗಿದೆ. ಮಹಾತ್ಮ ಜ್ಯೋತಿಬಾಫುಲೆ, ಶ್ರೀ ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬಾಬಾಸಾಹೇಬ್ ಅಂಬೇಡ್ಕರ್ ಹೀಗೆ ಧೀಮಂತ ಸಾಮಾಜಿಕ ಪರಿವರ್ತನ ಚಿಂತಕರ ಜೊತೆ ಶಾಹು ಮಹಾರಾಜರ ಹೆಸರು ‘ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ’ವೆಂದು ಅನ್ವರ್ಥವಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಮಾಜಿಕ ಕೈಂಕರ್ಯದ ಅರಸನ ಕ್ರಾಂತಿಯ ಪಥದಲ್ಲಿ ಈ ದೇಶ, ಈ ಸಮಾಜ ನಿರಂತರ ಸಾಗಬೇಕಷ್ಟೆ.  

Thursday, 24 July 2014

 ಗಾಂಧೀಜಿಯವರಿಂದ ಜಾತಿಪದ್ಧತಿ ಸಮರ್ಥನೆ

                                 -ರಘೋತ್ತಮ ಹೊ.ಬ

       
   ಹಿಂದೆ 1936 ಜುಲೈ 2 ರಂದು ಪತ್ರ ಮುಖೇನ ಅಂಬೇಡ್ಕಕರಿಗೆ ಅಪರೂಪದ ಆಹ್ವಾನವೊಂದು ಬಂದಿತ್ತು. ಲಾಹೋರ್‍ನ “ಜಾತ್ ಪತ್ ತೋಡಕ್ ಮಂಡಲ್(ಜಾತಿ ನಿರ್ಮೂಲನಾ ಮಂಡಳಿ)”ಯವರು ಬರೆದಿದ್ದ ಪತ್ರವದು. ಆ ಪತ್ರದಲ್ಲಿ ಆ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಸಂತರಾಮ್ ಎಂಬುವವರು ಅಂಬೇಡ್ಕರರನ್ನುದ್ದೇಶಿಸಿ “ನೀವೊಬ್ಬ ಮಹಾನ್ ವಿಚಾರಶೀಲರು; ಜಾತಿಯ ಸಮಸ್ಯೆಯನ್ನು ನಿಮ್ಮಷ್ಟು ಆಳವಾಗಿ ಅಭ್ಯಾಸ ಮಾಡಿದವರು ಇನ್ನೊಬ್ಬರಿಲ್ಲವೆಂಬುದು ನನ್ನ ನಿಶ್ಚಿತ ಅಭಿಪ್ರಾಯ. ನಿಮ್ಮ ಲೇಖನಗಳಿಂದ ನಾನು ಹಾಗೂ ನಮ್ಮ ಮಂಡಳಿ ಸಾಕಷ್ಟು ಲಾಭ ಪಡೆದಿದ್ದೇವೆ. ಜಾತಿಗೆ ಆಧಾರವಾದ ಧಾರ್ಮಿಕ ಪರಿಕಲ್ಪನೆಗಳನ್ನು ನಾಶಗೊಳಿಸಿದಾಗ ಮಾತ್ರ ಜಾತಿಯನ್ನು ಭಂಗಿಸುವುದು ಸಾಧ್ಯ ಎಂದು ನೀವು ಹೇಳಿದ್ದೀರಿ. ಆದ್ದರಿಂದ ನಮ್ಮ ಮಂಡಳಿಯ ವಾರ್ಷಿಕ ಸಮ್ಮೇಳನಕ್ಕೆ ನೀವೆ ಅಧ್ಯಕ್ಷರಾಗಬೇಕೆಂಬುದು ನಮ್ಮ ಕಾರ್ಯಕಾರಿ ಸಮಿತಿಯ ಒಕ್ಕೊರಲಿನ ತೀರ್ಮಾನವಾಗಿದೆ. ನಮ್ಮ ಮಂಡಳಿಯ ಸಹಾಯಕ ಕಾರ್ಯದರ್ಶಿ ಶ್ರೀಇಂದ್ರಸಿಂಗ್‍ರವರು ನಮ್ಮ ಪರವಾಗಿ ನಿಮ್ಮನ್ನು ಅಧಿಕೃತವಾಗಿ ಮುಂಬಯಿಯಲ್ಲಿ ಕಂಡು ಆಹ್ವಾನಿಸಲು ಬರುತ್ತಿದ್ದಾರೆ”ಎಂದು ಬರೆದಿದ್ದರು.
ಒಟ್ಟಾರೆ, ಜಾತಿ ಪದ್ಧತಿಯ ನಿರ್ಮೂಲನೆಯ ಕುರಿತಾದ ಅಪರೂಪದ ಸಮ್ಮೇಳನವೊಂದಕ್ಕೆ ಅಧ್ಯಕ್ಷತೆ ವಹಿಸುವ ಕಾರ್ಯಕ್ಕೆ ಸವರ್ಣೀಯ ಸಂಸ್ಥೆಯೊಂದು ಅಂಬೇಡ್ಕರರನ್ನು ಆಹ್ವಾನಿಸಿತ್ತು.
   
  ಅಂದಹಾಗೆ ಸವರ್ಣೀಯ ಸಂಸ್ಥೆಯ ಈ ಆಹ್ವಾನಕ್ಕೆ ಅಂಬೇಡ್ಕರರು ಮೊದಮೊದಲು ನಿರಾಕರಿಸಿದರಾದರೂ ಅದರ ಸದಸ್ಯರು ದೂರದ ಲಾಹೋರ್‍ನಿಂದ(ಇಂದಿನ ಪಾಕಿಸ್ತಾನದಲ್ಲಿರುವ) ಮುಂಬಯಿಗೇ ಬಂದು ಖುದ್ದು ಆಹ್ವಾನ ನೀಡಿದ್ದರಿಂದ ಅಂಬೇಡ್ಕರ್‍ರವರು ಒಪ್ಪಲೇಬೇಕಾಯಿತು. ಅಂತೆಯೇ ಜಾತಿನಿರ್ಮೂಲನೆ ಬಗೆಗಿನ ಬಹುಮುಮುಖ್ಯವಾದ ಆ ಸಮ್ಮೇಳನದಲ್ಲಿ ಅಧÀ್ಯಕ್ಷೀಯ ಭಾಷಣ ಅರ್ಥಪೂರ್ಣವಾಗಿರಬೇಕೆಂದು ಆಶಿಸಿದ ಅಂಬೇಡ್ಕರ್‍ರವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಸಿದ್ಧಪಡಿಸಿಕೊಂಡರು. ಹಾಗೆಯೇ ಸಮ್ಮೇಳನದಲ್ಲಿ ಅದನ್ನು ಹಂಚಬೇಕೆಂಬ ಉದ್ದೇಶದಿಂದ ಆ ಕಾಲದಲ್ಲಿ ಸ್ವತಃ ತಾವೇ ಅದನ್ನು ಮುದ್ರಿಸಿದರು!
 
  ಆದರೆ? ಜಾತಿಪದ್ಧತಿಯ ಬಗ್ಗೆ ಅಂಬೇಡ್ಕರರ ನಿಲುವುಗಳನ್ನು ಮತ್ತಷ್ಟು ತಿಳಿದುಕೊಂಡ ಜಾತಿನಿರ್ಮೂಲನೆ ಹೆಸರಿನ ಆ ಸವರ್ಣೀಯ ಹಿಂದೂಗಳ ಮಂಡಳಿ “ನಿಮ್ಮನ್ನು ಈ ರಾಜ್ಯಕ್ಕೆ ಬರಮಾಡಿಕೊಳ್ಳುವುದನ್ನು ಪಂಜಾಬ್‍ನ (ಈಗಿನ ಪಾಕಿಸ್ತಾನದಲ್ಲಿರುವ) ಸಮಸ್ತ ಹಿಂದೂಗಳು ವಿರೋಧಿಸಿದ್ದಾರೆ. ನಿಮ್ಮನ್ನು ಆಹ್ವಾನಿಸಿದ ಕಾರಣಕ್ಕಾಗಿ ನಮ್ಮ ಸಂಸ್ಥೆಯು ಎಲ್ಲಾ ಕಡೆಯಿಂದ  ಹೀನಾಯವಾದ ಟೀಕೆಗೆ ಗುರಿಯಾಗಿದೆ”. ಎಂದು ಪತ್ರ ಬರೆಯಿತು!
ಅಂದಹಾಗೆ ಈ ಸಂದರ್ಭದಲ್ಲಿ ಅವರನ್ನು ನೋಡಲು ಮುಂಬಯಿಗೇ ಬಂದ ಮಂಡಳಿಯ ಪ್ರತಿನಿಧಿಯೊಬ್ಬರು ಅಂಬೇಡ್ಕರರು ತಮ್ಮ ಆ ಆಧ್ಯಕ್ಷೀಯ ಭಾಷಣದಲ್ಲಿ ಏನು ಬರೆದಿವರು ಎಂದು ತಿಳಿದುಕೊಳ್ಳಲು ಬಲು ಉತ್ಸುಕರಾಗಿದ್ದರು! ಅದಕ್ಕಾಗಿ ಭಾಷಣವನ್ನು ನಾವು ಲಾಹೋರ್‍ನಲ್ಲಿಯೇ ಮುದ್ರಿಸುವುವೆ ಎಂದು ಅಂಬೇಡ್ಕರರನ್ನು ಅವರು ಒತ್ತಾಯಿಸತೊಡಗಿದರು. ಅಂತಿಮವಾಗಿ ಅವರ ಉದ್ದೇಶ ಅರಿತು, ಅವರನ್ನು ನಿರಾಶೆಗಳೊಪಡಿಸಲು ಇಚ್ಚಿಸದ ಅಂಬೇಡ್ಕರರು ತಾವು ಸಿದ್ಧಪಡಿಸಿದ ಆ ಭಾಷಣದ ಒಂದು ಪ್ರತಿಯನ್ನು ಜಾತಿನಿರ್ಮೂಲನೆ ಮಂಡಳಿಯ ಆ ಪ್ರತಿನಿಧಿ(ಶ್ರೀ ಹರಭಗವಾನ್)ಗೆ ನೀಡಿದರು.

  ಅಂಬೇಡ್ಕರರು ಬರೆದಿದ್ದ ಆ ಸುದೀರ್ಘ ಅಧ್ಯಕ್ಷೀಯ ಭಾಷಣದಲ್ಲಿ ಅಂತಹದ್ದೇನಿತ್ತು? ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ “ಜಾತಿ ಎಂಬುದು ನೀತಿಸಮ್ಮತವೋ ಅಲ್ಲವೋ ಎಂಬುದನ್ನು ವಿಚಾರಿಸುವ ಸ್ವಾತಂತ್ರ್ಯವೇ ಜನಸಾಮಾನ್ಯರಿಗಿಲ್ಲ. ಹೀಗಿರುವಾಗ ಅದನ್ನು ನಿರ್ಮೂಲನೆಗೊಳಿಸುವುದು ಹೇಗೆ? ಒಂದರ್ಥದಲ್ಲಿ ಜಾತಿ ಒಂದು ಅಭೇಧ್ಯವಾದ ಕೋಟೆಯಾಗಿದೆ. ಬುದ್ಧಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಅದರಲ್ಲೂ ಆ ಕೋಟೆಯ ಒಳಗಡೆ(ಅದರ ರಕ್ಷಣೆಗಾಗಿ) ಬುದ್ಧಿವಂತ ವರ್ಗವಾದ  ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಅದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿ(ಜಾತಿಪದ್ಧತಿ)ಯನ್ನು ರಕ್ಷಿಸಿಕೊಳ್ಳಲು ನಿಂತ ಸೈನ್ಯವಾಗಿದೆ. ಹೀಗಾಗಿಯೇ ನಾನು ಹೇಳುತ್ತಿದ್ದೇನೆ  ಹಿಂದೂಗಳಲ್ಲಿರುವ ಜಾತಿಪದ್ಧತಿಯನ್ನು ಹೊಡೆದಟ್ಟುವುದು ಅಸಾಧ್ಯ. ಜಾತಿಪದ್ಧತಿ ಎಂಬ ಈ ಕೋಟೆಯನ್ನು ಛಿದ್ರಮಾಡುವುದಕ್ಕೆ ಒಂದು ದೀರ್ಘ ಯುಗವೇ ಬೇಕಾಗುತ್ತದೆ. ಅಂದಹಾಗೆ ಅದು ಸಾಧ್ಯವಾಗಬೇಕಾದರೆ ಜಾತಿಪದ್ಧತಿಗೆ ಆಧಾರವಾಗಿರುವ ವೇದ ಮತ್ತು ಶಾಸ್ತ್ರಗಳನ್ನು ಸಿಡಿಮದ್ದಿಟ್ಟು ಹಾರಿಸಬೇಕೆಕು. ಶೃತಿ-ಸ್ಮøತಿಗಳ ಧರ್ಮವನ್ನು ನಾಶ ಮಾಡಬೇಕು. ಇದು ಬಿಟ್ಟು ಬೇರೆ ದಾರಿಯೇ ಇಲ್ಲ. ಈ ವಿಷಯದಲ್ಲಿ ಇದು ನನ್ನ ಖಚಿತ ಅಭಿಪ್ರಾಯ…”.

   ಮುಂದುವರಿದು ಅವರು “ವಿಧಿ ನಿಷೇಧಗಳೆ ಧರ್ಮವೆಂಬರ್ಥ ಬರುವಂತೆ ವೇದ ಸ್ಮøತಿಗಳಲ್ಲಿ ‘ಧರ್ಮ’ ಎಂಬ ಪದವನ್ನು ಬಳಸಲಾಗಿದೆ. ವೇದ ಸ್ಮøತಿಗಳ ಮೂಲಕ ಕಾನೂನು ಕ್ರಮಕ್ಕೆ ಒಳಪಡಿಸಿದ ವರ್ಗ(ವರ್ಣ)  ನೀತಿಯನ್ನು ನಾನು ಧರ್ಮವೆಂದು ಒಪ್ಪಲಾರೆ. ಕಟ್ಟುನಿಟ್ಟಿನ ನಿಯಮಗಳೆ ಧರ್ಮವೆನ್ನುವುದಾದರೆ ಅದರಿಂದ  ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ. ಗುಲಾಮಗಿರಿಗೆ ಒಳಪಟ್ಟು ಜನ ಹೊರಗಿನಿಂದ ಹೇರಲ್ಪಟ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ತತ್ವಗಳಿಗೆ ಬದಲಾಗಿ ಒತ್ತಾಯಪೂರ್ವಕವಾಗಿ ವಿಧಿಸಲ್ಪಟ್ಟ ಶಾಸನಗಳಿಗೆ ವಿಧೇಯರಾಗಬೇಕಾಗುತ್ತದೆ. ಈ ವಿಧಿ ನಿಷೇಧಗಳ ಅತ್ಯಂತ ದುಷ್ಟ ಅಂಶವೆಂದರೆ ಅವು ಎಲ್ಲಾ ಕಾಲಕ್ಕೂ  ಪಾಲಿಸಲ್ಪಡಬೇಕೆನ್ನುವುದು. ಹಾಗೆಯೇ ಎಲ್ಲಾ ವರ್ಗಗಳಿಗೂ ಅವು ಸಮಾನವಾಗಿಲ್ಲದಿರುವುದು ಅಥವಾ ಹಾಗೆ ಅವು ಒಂದೊಂದು ವರ್ಗಕ್ಕೂ ಒಂದೊಂದು ಬಗೆಯಾಗಿರುವುದು. ಹಾಗೆಯೇ ಅವು ಸಾರ್ವಕಾಲಿಕ ಎಂದಿರುವುದರಿಂದ  ಅಸಮಾನತೆಯೂ ಕೂಡ  ಶಾಶ್ವತವಾಗಿದೆ. ಹೀಗಿರುವಾಗ ಇಂತಹ  ಶಾಶ್ವತ ನಿಯಮ ಅಥವಾ ಅನಾಹುತಕಾರಿ ಶಾಸನಗಳನ್ನು ಜನ ಹೇಗೆ ಸಹಿಸಿಕೊಳ್ಳಬಲ್ಲರು? ಆ ಕಾರಣದಿಂದ  ಇಂತಹ(ನಿಯಮಗಳ ಆಧಾರದ ಮೇಲಿನ) ಧರ್ಮವನ್ನು ನಾಶಗೊಳಿಸಬೇಕೆಂದು ಯಾವುದೇ ಅನುಮಾನವಿಲ್ಲದೆ ಹೇಳುತ್ತೇನೆ.”

   ಖಂಡಿತ, ಜಾತಿಪದ್ಧತಿ ನಿರ್ಮೂಲನೆಗೊಳಿಸಬೇಕೆಂದು ಹೊರಟ ಯಾರಿಗೇ ಆಗಲಿ ಅಂಬೇಡ್ಕರರು ಅಂದು ನೀಡಿರುವ ಈ ವಿಶ್ಲೇಷಣೆ ಮತ್ತು ತೀರ್ಮಾನವೇ ಅಂತಿಮವಾಗುತ್ತದೆ. ಯಾಕೆಂದರೆ ಅಸಮಾನತೆಯ ಆಧಾರದ  ಮನುಸ್ಮøತಿ ಮತ್ತು ಇತರ ಶೃತಿಗಳ ಮೇಲೆ ನಿಂತಿರುವ ಧರ್ಮವನ್ನು ನಾಶಗೊಳಿಸದೆ ಜಾತಿ ಪದ್ಧತಿ ಖಂಡಿತ ನಾಶವಾಗುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಸಮ್ಮೇಳನದ ಹೆಸರು “ಜಾತಿ ನಿರ್ಮೂಲನೆ” ಎಂದಿದ್ದರಿಂದ ಅಂಬೇಡ್ಕರರು ಅದನ್ನು ಹೇಗೆ ನಿರ್ಮೂಲನೆ ಮಾಡುವುದು ಎಂಬ ಸತ್ಯವನ್ನು ಅತ್ಯಂತ ಸರಳವಾಗಿ ಮತ್ತು ಸಹಜವಾಗಿ ದಾಖಲಿಸಿದ್ದಾರೆ ಮತ್ತು ಹಾಗೆಯೇ ದಾಖಲಿಸುತ್ತಾ ಅವರು “ಹಿಂದೂಗಳೇ, ಬಹುಶಃ ನಿಮ್ಮನ್ನುದ್ದೇಶಿಸಿ ಇದು ನನ್ನ ಕೊನೆಯ ಭಾಷಣ” ಎಂದು ಅತ್ಯಂತ ನಿರ್ಭಿಡೆಯಿಂದ  ಹೇಳಿದ್ದಾರೆ.

   ಅಂದಹಾಗೆ ಈ ಸಂದರ್ಭದಲ್ಲಿ ಅಂಬೇಡ್ಕರರು ಹಿಂದೂಗಳಿಗೆ ಕೆಲವು ಬುದ್ಧಿಯ ಮಾತು ಮತ್ತು ಪರಿಹಾರಗಳನ್ನು ಸೂಚಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು “ಹಿಂದೂಗಳು ತಮ್ಮ ಧರ್ಮವನ್ನು ಇದು ನಮ್ಮನ್ನು ಚೆನ್ನಾಗಿ ಬದುಕಲು ಉಳಿಯಗೊಡುವುದೆ ಎಂಬ ದೃಷ್ಟಿಯಲ್ಲಿ ಪರಿಶೀಲಿಸಬೇಕು”.
ಎರಡನೆಯದು “ಆನುವಂಶಿಕವಾಗಿ ತಮಗೆ ಬಂದ ಸಾಮಾಜಿಕ ಸಂಪ್ರದಾಯವನ್ನು ಅಖಂಡವಾಗಿ ರಕ್ಷಿಸಿಕೊಂಡು ಹೋಗಬೇಕೆ ಅಥವಾ ಉಪಯುಕ್ತವಾದ ಅಂಶವನ್ನು ಆಯ್ದುಕೊಂಡು ಮುಂದಿನ ಪೀಳಿಗೆಗೆ ಅದನ್ನಷ್ಟೆ ಉಳಿಸಿಕೊಡಬೇಕೆ ಎಂಬುದನ್ನು  ಯೋಚಿಸಬೇಕು”.
ಮೂರನೆಯದು “ಹಿಂದೂಗಳು ತಮ್ಮ ಆದರ್ಶಗಳಿಗೆಲ್ಲ ಪ್ರಾಚೀನ ಕಾಲವನ್ನೆ ಪೂಜಿಸುತ್ತಿರಬೇಕೇ? ಅಥವಾ ಹಾಗೆ  ಪೂಜಿಸುವುದನ್ನು ನಿಲ್ಲಿಸಬೇಕೆ? ಅದನ್ನು ಹಿಂದೂಗಳು ಪರಿಶೀಲಿಸತಕ್ಕದ್ದು”.
ನಾಲ್ಕನೆಯದು “ಅಚ್ಯುತವಾದುದು, ಶಾಶ್ವತವಾದುದು, ಸನಾತನವಾದುದು ಯಾವುದೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕಾಲ ಈಗ ಸನ್ನಿಹಿತವಾಗಿದೆ. ಹಿಂದೂಗಳು ಈ ಬಗ್ಗೆ ಯೋಚಿಸಬೇಕು”. ಎಲ್ಲವೂ ಪರಿವರ್ತನೆಯಾಗುತ್ತಲೇ ಇರುತ್ತದೆ. ವ್ಯಕ್ತಿಗಳಿಗೆ ಹೇಗೋ ಸಮಾಜಕ್ಕೂ ಹಾಗೆಯೇ. ಪರಿವರ್ತನೆ ಎಂಬುದು ಜಗದ ನಿಯಮ. ಬದಲಾಗುತ್ತಿರುವ ಸಮಾಜದಲ್ಲಿ ಹಳೆಯ ಮೌಲ್ಯಗಳು ವ್ಯತ್ಯಾಸಗೊಳ್ಳುತ್ತವೆ. ಮನುಷ್ಯರ ಕೃತ್ಯಗಳನ್ನು ಬೆಲೆ ಕಟ್ಟುವುದಷ್ಟಕ್ಕೆ ಮಾನದಂಡಗಳಿರುವುದು. ಪುನರ್‍ವಿಮರ್ಶೆಗೆ ಒಳಪಡಿಸಲೂ ಕೂಡ ನಾವು ಸಿದ್ಧರಾಗಿರಬೇಕು”. ಹೀಗೆ ಹೇಳುತ್ತಾ ಅಂಬೇಡ್ಕರರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮುಕ್ತಾಯಗೊಳಿಸಿರುತ್ತಾರೆ. ಅಂದಹಾಗೆ ಹಾಗೆ ಮುಕ್ತಾಯಗೊಳಿಸುವಾಗ ಅವರು “ಜಾತಿಪದ್ಧತಿ ನಾಶವಾದರೆ  ಮಾತ್ರ ಹಿಂದೂ ಸಮಾಜ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು” ಎಂಬ ಸಲಹೆಯನ್ನ ನೀಡುವುದನ್ನು ಮರೆಯುವುದಿಲ್ಲ. ಒಂದಂತು ನಿಜ ಜಾತಿಪದ್ಧತಿ ಹೇಗೆ ನಿರ್ಮೂಲನೆಗೊಳ್ಳಬೇಕು ಎಂದು ಕೊಳ್ಳುವವರಿಗೆ ಅಥವಾ ಆ ನಿಟ್ಟಿನಲಿ ಚಿಂತಿಸುವವರಿಗೆ ಅಂಬೇಡ್ಕರರು ಅಂದು ನೀಡಿರುವ ಆ ಪರಿಹಾರ ಮಾರ್ಗ ಮಹತ್ತರವಾಗಿ ಕಾಣುತ್ತದೆ. ದುರಂತವೆಂದರೆ ಅಂಬೇಡ್ಕರರು ಹೀಗೆ ಜಾತಿಪದ್ಧತಿ ನಿರ್ಮೂಲನೆ ಗೊಳಿಸಬೇಕೆಂದು ಸಲಹೆ ನೀಡುತ್ತಿದ್ದರೆ ಆ ಕಾಲದಲ್ಲಿ ಮಹಾತ್ಮರೆಂದು ಗುರುತಿಸಿಕೊಂಡಿದ್ದ ಗಾಂಧೀಜಿಯವರೇನು ಮಾಡಬೇಕಿತ್ತು? ಬೆಂಬಲಿಸಬೇಕಿತ್ತು ಅಥವಾ ಸುಮ್ಮನೆ ಇರಬೇಕಿತ್ತು ತಾನೆ?

  ಊಹ್ಞೂಂ, ಬದಲಿಗೆ ವಿರೋಧೀಸಿ ‘ಹರಿಜನ’ ಎಂಬ ತಮ್ಮ ಅಂದಿನ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು!

  ಗಾಂಧೀಜಿಯವರ ಲೇಖನದ ಆಯ್ದ ಭಾಗಗಳು ಇಂತಿವೆ. “ಡಾ.ಅಂಬೇಡ್ಕರ್‍ರವರು ಹಿಂದೂ ಧರ್ಮಕ್ಕೆ ಒಂದು ಆಹ್ವಾನವಾಗಿದ್ದಾರೆ(ಚಾಲೆಂಜ್ ಆಗಿದ್ದಾರೆ!). ಹಿಂದೂ ಎಂದು ಘೋಷಿತರಾಗಿ, ಹಿಂದೂ ಪ್ರಭುವೊಬ್ಬನ(ಸಯ್ಯಾಜಿರಾವ್ ಗಾಯಕವಾಡ್) ನೆರವಿನಿಂದ ಶಿಕ್ಷಣ ಪಡೆದ ಈ ವ್ಯಕ್ತಿ ಸವರ್ಣ ಹಿಂದೂಗಳ ಬಗೆಗೆ ಅದೆಷ್ಟು ಅಸಹ್ಯ ಪಟ್ಟುಕೊಂಡಿದ್ದಾರೆಂದರೆ ಈಗ ಆತನು ಅವರನ್ನು ಮಾತ್ರವಲ್ಲದೆ ಅವರಿಗೂ ತನಗೂ ಸಮಾನವಾಗಿದ್ದ ಧರ್ಮವನ್ನೂ ಕೂಡ ತ್ಯಜಿಸಲು ನೀರ್ಧರಿಸಿದ್ದಾನೆ.(1935 ಅಕ್ಟೋಬರ್ 23 ರಂದು  ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ ಅಂಬೇಡ್ಕರರು ‘ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ನಾನು ಹಿಂದೂವಾಗಿ ಖಂಡಿತ ಸಾಯಲಾರೆ’ ಎಂದು ಹೇಳಿರುವುದನ್ನು, ಹಾಗೆ ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದನ್ನು ಓದುಗರು ಗಮನಿಸಬಹುದು) ಆತನನ್ನು ಮತ್ತು ಆತನ ಜನರನ್ನು ಸವರ್ಣ ಹಿಂದೂಗಳು ನೆಡೆಸಿಕೊಂಡ ರೀತಿ ಅದಕ್ಕೆ ಕಾರಣ. ಧರ್ಮದ ಕೆಲವು ಪ್ರತಿಪಾದಕರ ಬಗ್ಗೆ ಉಂಟಾದ ಗೊಂದಲಗಳನ್ನು ಆತ ಆ ಧರ್ಮಕ್ಕೂ ಅನ್ವಯಿಸಿದ್ದಾನೆ”.

  ಗಾಂಧಿಯವರು ಅಂಬೇಡ್ಕರರ ಬಗ್ಗೆ ಹೇಳಿದ್ದಿಷ್ಟು. ಅಂದಹಾಗೆ ಅವರ ಹೇಳಿಕೆಯಲ್ಲಿ ಒಂದು ಅಸೂಯೆಯ  ಮಾತನ್ನು ಗಮನಿಸಬೇಕು! ಅದೇನೆಂದರೆ “ಹಿಂದೂ ಪ್ರಭುವೊಬ್ಬನ ನೆರವಿನಿಂದ ಶಿಕ್ಷಣ ಪಡೆದ ಈ ವ್ಯಕ್ತಿ” ಎಂಬ ಹೇಳಿಕೆ. ಈ ನಿಟ್ಟಿನಲಿ ಕೇಳುವುದೇನೆಂದರೆ ‘ಅಂಬೇಡ್ಕರ್ ಹಿಂದೂ, ಆದ್ದರಿಂದ ಅವರಿಗೆ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್‍ರು ನೆರವು ನೀಡಿದರೆ? ಅಥವಾ ಮಹಾರಾಜರೂ  ಹಿಂದೂ, ನಾನು ಕೂಡ ಒಬ್ಬ ಹಿಂದೂ, ಆ ಕಾರಣದಿಂದ ಅವರಿಂದ ಶಿಕ್ಷಣಕ್ಕೆ ನೆರವು ಪಡೆದುಕೊಳ್ಳುತ್ತಿದ್ದೇನೆ’ ಎಂದು ಅಂಬೇಡ್ಕರ್ ನೆರವು ಪಡೆದುಕೊಂಡರೆ? ಗಾಂಧೀಜಿಯವರ ಹೇಳೀಕೆಯಲ್ಲಿನ ಅಸೂಯೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು!

 ಮುಂದುವರಿದು ಗಾಂಧೀಜಿಯವರು “ತನ್ನ ಜೀವನಕ್ಕಿಂತಲೂ ಹೆಚ್ಚಾಗಿ ಧರ್ಮವನ್ನು ಪ್ರೀತಿಸುವ ಯಾವ ಹಿಂದೂವಾದರೂ ಅಂಬೇಡ್ಕರರ ಆ ದೋಷಾರೋಪಣೆಯನ್ನು ಒಪ್ಪಿಕೊಳ್ಳಲಾರನು. ಹಿಂದೂ ಧರ್ಮದ ಬಗ್ಗೆ ಈ ಬಗೆಯ ಜಿಗುಪ್ಸೆ ಹೊಂದಿರುವವರು ಅಂಬೇಡ್ಕರ್ ಅವರೊಬ್ಬರೇ ಅಲ್ಲ. ಇನ್ನು ಅನೇಕರಿದ್ದಾರೆ. ಆದರೆ ಅಂತಹ ಜನರಲ್ಲಿ ಅತ್ಯಂತ ಹಟಮಾರಿ ವ್ಯಕ್ತಿ ಅಂಬೇಡ್ಕರ್‍ರವರು. ರಾಜಿ ಮಾಡಿಕೊಳ್ಳಲು ದುಸ್ಸಾಧ್ಯವಾದ ವ್ಯಕ್ತಿ. ಆ ಮುಂದಾಳುಗಳ ಮಂಚೂಣಿಯಲ್ಲಿರುವವರು ಇವರೊಬ್ಬರೆ. ಅಂಬೇಡ್ಕರರು ಅಂತಹ ಮಂಚೂಣಿಯಲ್ಲಿದ್ದರೂ ಅವರು ಅತ್ಯಂತ ಚಿಕ್ಕದಾದ ಒಂದು ಅಲ್ಪಸಂಖ್ಯಾಂತ ವರ್ಗ(ದಲಿತ)ದ ಪ್ರತಿನಿಧಿಯಾಗಿದ್ದಾರೆ”(ಹರಿಜನ, 13 ಜುಲೈ 1936).

  ಗಾಂಧೀಜಿಯವರ ಮಾತುಗಳಲ್ಲಿ ಅಂಬೇಡ್ಕರರ ಬಗೆಗಿನ  ಅವರ ‘ಭಾವನೆ’ಯನ್ನು ಮತ್ತು ಅಂಬೇಡ್ಕರರ ಕ್ರಿಯೆಗೆ ವಿರುದ್ಧವಾಗಿನ ಅವರ ತಂತ್ರವನ್ನು ಗಮನಿಸಬಹುದು. ತಂತ್ರವೇನೆಂದರೆ ಅಂಬೇಡ್ಕರರ ಸಮುದಾಯವನ್ನು ಒಂದು ಚಿಕ್ಕ ಸಮುದಾಯವೆನ್ನುವ ಮೂಲಕ ಅವರ ಹೇಳಿಕೆಯ ಮೌಲ್ಯವನ್ನು ಕುಗ್ಗಿಸುವುದು! ಅಂದಹಾಗೆ ಗಾಂಧಿಯವರು ಅಂಬೇಡ್ಕರರಲ್ಲಿ ಒಂದು ಸತ್ಯವನ್ನು ಗುರುತಿಸಿದ್ದಾರೆ. ಅದೇನೆಂದರೆ ಅದು “ಹಟಮಾರಿ ಧೋರಣೆ”. ಖಂಡಿತ, ಅಂತಹ ಹಟಮಾರಿ ಧೋರಣೆಯ ಕಾರಣಕ್ಕೆ  ಅಂಬೇಡ್ಕರರು 20 ವರ್ಷಗಳ ಹಿಂದೆ ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ 1956ರಲ್ಲಿ ಹಿಂದೂ ಧರ್ಮ ತ್ಯಜಿಸಿ ಬೌದ್ಧಧರ್ಮ ಸ್ವೀಕರಿಸಿದ್ದು. ದುಖಃದ ವಿಷಯವೆಂದರೆ  ಅಂಬೇಡ್ಕರರ  ಈ ‘ಹಟಮಾರಿ, ಕ್ರಾಂತಿ ಕಾರಿ’ ಹೆಜ್ಜೆನೋಡಲು 1956ರಲ್ಲಿ ಗಾಂಧೀಜಿಯವರು ಬದುಕಿರಲಿಲ್ಲ.
 
 ಮುಂದುವರಿದು ಗಾಂಧೀಜಿಯವರು “ಜಾತಿ ಪದ್ಧತಿಗೂ ಧರ್ಮಕ್ಕೂ ಸಂಬಧವೇ ಇಲ್ಲ. ಅದೊಂದು ರೂಡಿ,ü ಸಂಪ್ರದಾಯ ಅಷ್ಟೆ. ಹಾಗೆ ವರ್ಣ ಮತ್ತು ಆಶ್ರಮಗಳೂ ಜಾತಿಗೆ ಸಂಬಧಪಟ್ಟಿಲ್ಲ. ನಮ್ಮ ನಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸಿ ನಾವು ಪ್ರತಿಯೊಬ್ಬರು ಉಪಜೀವನ ನಡೆಸಬೇಕು ಎಂಬುದನ್ನು ವರ್ಣವ್ಯವಸ್ಥೆ ತಿಳಿಸುತ್ತದೆ. ವರ್ಣವ್ಯವಸ್ಥೆ ನಮ್ಮ ಕರ್ತವ್ಯಗಳನ್ನು ವ್ಯಾಖ್ಯೆ ಮಾಡಿ ತಿಳಿಸುತ್ತದೆಯೋ ಹೊರತು ಹಕ್ಕುಗಳನ್ನಲ್ಲ. ಮಾನವ ಕೋಟಿಯ ಕಲ್ಯಾಣಕ್ಕೆ ಅನುಕೂಲವಾದ ವೃತ್ತಿಯನ್ನೆ ಅದು ಹೇಳುತ್ತದೆ ಹೊರತು ಬೇರೆ ವೃತ್ತಿಯನ್ನಲ್ಲ. ವೃತ್ತಿಗಳಲ್ಲಿ ಉಚ್ಚ, ನೀಚ ಎಂಬ ಭೇದವಿಲ್ಲ. ಎಲ್ಲಾ ವೃತ್ತಿಗಳೂ ಒಳ್ಳೆಯವು, ನ್ಯಾಯಸಮ್ಮತವಾದವು ಮತ್ತು ಸ್ಥಾನಮಾನ ದೃಷ್ಟಿಯಿಂದ ಸಂಪೂರ್ಣ ಸಮಾನವಾದವು. ಬ್ರಾಹ್ಮಣನ ವೃತ್ತಿ ಮತ್ತು ಹಲಾಲುಕೋರನ ವೃತ್ತಿ ಎರಡೂ ಸಮಾನವಾದುವು. ಸಮರ್ಪಕವಾಗಿ ನೆರವೇರಿಸಿದಾಗ ದೇವರ ದೃಷ್ಟಿಯಿಂದ ಇವೆರಡೂ ವೃತ್ತಿಗಳಿಂದ ಬರತಕ್ಕ ಪುಣ್ಯವೂ ಸರಿಸಮಾನ!”

   ಆಶ್ಚರ್ಯ! ಯಾವ ಶೃತಿ-ಸ್ಮøತಿ (ಮನುಸ್ಮøತಿ) ಆಧಾರಿತ ಧರ್ಮವನ್ನು ನಾಶಮಾಡಬೇಕೆಂದು ಅಂಬೇಡ್ಕರರು ಕರೆಕೊಡುತ್ತಾರೋ  ಗಾಂಧೀಜಿ ಅದೇ ಮನುಸ್ಮøತಿ  ಆಧರಿತ ವರ್ಣಾಶ್ರಮವನ್ನು  ದೇವರ ದೃಷ್ಟಿಯಲ್ಲಿ ಸಮರ್ಥಿಸುತ್ತಾರೆ! ಅಂದಹಾಗೆ ಈ ಸಂದರ್ಭದಲ್ಲಿ  ಗಾಂಧೀಜಿಯವರಿಂದ ಅವರ ಸ್ವಾತಂತ್ರ್ಯ ಹೋರಾಟವೆಂಬ ಇತಿಹಾಸವನ್ನು ಮೈನಸ್ ಮಾಡಿ ನೋಡಿದ್ದೇ ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರು ನಮ್ಮ ಉಡುಪಿಯ ಪೇಜಾವರ ಶ್ರೀಗಳ ಥರ ಕಂಡರೆ ಅತಿಶಯೋಕ್ತಿಯೇನಿಲ್ಲ!.

  ಗಾಂಧಿಯವರಿಂದ ವರ್ಣಾಶ್ರಮಧರ್ಮ ಪದ್ದತಿಯನ್ನು ಸಮರ್ಥಿಸುವ ಇನ್ನಷ್ಟು ಸಮರ್ಥನೆಗಳನ್ನು ನೋಡಿ, “ಚೈತ್ಯ, ಜ್ಞಾನದೇವ,  ತುಕಾರಾಮ್, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ, ರಾಜರಾಮ್ ಮೋಹನ್ ರಾಯ್, ಮಹರ್ಷಿ ದೇವೇಂದ್ರನಾಥ್ ಠಾಕೂರ್, ವಿವೇಕಾನಂದ ಮತ್ತು ಇನ್ನು ಅನೇಕಾನೇಕರು ಒಪ್ಪಿಕೊಂಡ ಧರ್ಮವು ಡಾ.ಅಂಬೇಡ್ಕರರು ಹೇಳುವಷ್ಟು ಗುಣಹೀನವಾಗಿದೆಯೇ? ಧರ್ಮದ ಬೆಲೆ ಕಟ್ಟುವುದು ಅದರ ಕನಿಷ್ಠ ಮಾದರಿಗಳಿಂದ ಅಲ್ಲ. ಆ ಧರ್ಮದಲ್ಲಿ ಉದಿಸಿದ ಅತ್ಯುತ್ತಮ ಮಾದರಿಗಳ ಮೂಲಕ. ಏಕೆಂದರೆ ಇಟ್ಟುಕೊಳ್ಳಬೇಕಾದ ಆದರ್ಶವೆಂದರೆ ಅದೊಂದೆ”(ಹರಿಜನ 18 ಜುಕಲೈ 1936). (ನೋಡಿ!  ಹಿಂದೂ ಧರ್ಮವನ್ನು ಗಾಂಧೀಜಿಯವರು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು!)
 
  ಅಂದಹಾಗೆ ಗಾಂಧಿಯವರ ಈ ಲೇಖನಗಳಿಗೆ ಪ್ರತಿಯಾಗಿ ಲಾಹೋರ್‍ನ ಅದೇ “ಜಾತ್‍ಪತ್‍ತೋಡಕ್ ಮಂಡಲ್”ನ ಅಧ್ಯಕ್ಷರಾದ ಸಂತರಾಮ್‍ರವರು ಗಾಂಧೀಜಿಯವರ ಅದೇ ‘ಹರಿಜನ’ ಪತ್ರಿಕೆಗೆ ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಸಂತರಾಮ್‍ರವರು “ಅಸ್ಪøಶ್ಯವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಡಾ.ಅಂಬೇಡ್ಕರ್ ಅವರಿಗೆ ಅಧ್ಯಕ್ಷರಾಗಲು ನಾವು ಆಹ್ವಾನಿಸಲಿಲ್ಲ. ನಾವು ಹಿಂದೂಗಳಲ್ಲಿ ಸ್ಪøಶ್ಯ ಅಸ್ಪøಶ್ಯ ಭೇದ ಪರಿಗಣಿಸುವುದಿಲ್ಲ. ಅಸ್ಪøಶ್ಯತೆ ಹಿಂದೂ ಧರ್ಮಕ್ಕೆ ಬಡಿದುಕೊಂಡ ಮಾನಸಿಕ ರೋಗವೆಂದು ನಿರ್ಧರಿಸಿರುವ ನಮ್ಮ ಅಭಿಪ್ರಾಯವು ಅಂಬೇಡ್ಕರರದ್ದೂ ಆದ್ದರಿಂದ ಹಾಗೂ ಹಿಂದೂಗಳ ಅವನತಿಗೆ ಜಾತಿಪದ್ಧತಿಯೇ  ಕಾರಣವೆಂದು ಅಂಬೇಡ್ಕರರು ಅಭಿಪ್ರಾಯಪಟ್ಟಿದ್ದರಿಂದ ನಾವು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿದೆವು. ತಮ್ಮ ಡಾಕ್ಟರೇಟ್ ಪ್ರಬಂಧಕ್ಕೂ ಜಾತಿಪದ್ಧತಿಯನ್ನು ಅಂಬೇಡ್ಕರರು ವಿಷಯವಾಗಿ ಆಯ್ಕೆ ಮಾಡಿಕೊಂಡವರು. ಆದ್ದರಿಂದ ಅವರು ಆ ವಿಷಯವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದಾರೆ. ಆದರೆ ಅಂಬೇಡ್ಕರರು ‘ಹಿಂದೂವಾಗಿ ಇದು ನಾನು ಮಾಡುವ ಅಂತಿಮ ಭಾಷಣ’ವೆಂದು ಘೋಷಿಸಿದರು. ಆ ಕಾರಣದಿಂದ ಸಮ್ಮೇಳನ ರದ್ದುಮಾಡಿದೆವು. ಹೀಗಿದ್ದರೂ ಅಂಬೇಡ್ಕರರ ಉಪನ್ಯಾಸವನ್ನು ನಾನು ಹೊಗಳದೆ ಇರಲಾರೆ. ನನಗೆ ತಿಳಿದ ಮಟ್ಟಿಗೆ ಅವರ ಉಪನ್ಯಾಸವು ಆ ವಿಷಯವಾಗಿ ಅತ್ಯಂತ ಪಾಂಡಿತ್ಯಪೂರ್ಣವಾದುದು. ಭಾರತದ ಪ್ರತಿಯೊಂದು ಭಾಷೆಯಲ್ಲಿಯೂ ಅದು ಅನುವಾದ ಯೋಗ್ಯವಾಗಿದೆ”.
 
  ಇಷ್ಟು ಸಾಕು, ಅಂಬೇಡ್ಕರರ ಜ್ಞಾನದ ಹೊಳಹಿನ ಬೆಳಕು ತಿಳಿಸಲು. ಸಂತರಾಮರು ಗಾಂಧಿಜಿಯವರಿಗೆ  ಅದನ್ನು ಸರಿಯಾಗಿಯೇ ತಲುಪಿಸಿದ್ದಾರೆ! ಸಂತರಾಮರ ಈ ಪತ್ರಕ್ಕೆ ಗಾಂಧೀಜಿಯವರ ಪ್ರತಿಕ್ರಿಯೆಯು ಏನು ಗೊತ್ತೆ? “ಮಂಡಲ(ಜಾತ್‍ಪತ್‍ತೋಡಕ್ ಮಂಡಲ್)ದ ಪ್ರತಿನಿಧಿಯಾಗಿ ಮಾತನಾಡುವ ಸಂತರಾಮ್‍ರವರು ಡಾ.ಅಂಬೇಡ್ಕರರ ಮತ್ತು ಅವರ ಉಪನ್ಯಾಸವನ್ನು ಮೆಚ್ಚಿ ಹೊಗಳುತ್ತಿರುವುದರಿಂದ ಅವರ(ಸಂತರಾಮ್‍ರ) ನಿಲುವು ಅಸಮರ್ಥನೀಯ”! ಗಮನಿಸಿ ಅಂಬೇಡ್ಕರರ ಬಗ್ಗೆ ಗಾಂಧೀಜಿಯವರಿಗಿದ್ದ ಅಸಹನೆಯನ್ನು! ಸಂತರಾಮ್‍ರು ಅಂಬೇಡ್ಕರರನ್ನು ಹೊಗಳಿದ್ದೂ ಕೂಡ ಗಾಂಧೀಜಿಯವರಿಗೆ ಉರಿ ತರಿಸಿದೆ. ಅಂದಹಾಗೆ ಸಂತರಾಮ್‍ರು ಮುಂದುವರಿದು “ವರ್ಣವ್ಯವಸ್ಥೆ ನಿರ್ಮೂಲನೆಗೊಳಿಸದೆ ಅಸ್ಪøಶ್ಯತೆ ನಿರ್ಮೂಲನೆಗೆ ಪ್ರಯತ್ನಿಸುವುದೆಂದರೆ ರೋಗದ ಬಾಹ್ಯ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಿದಂತೆ. ಅಸ್ಪøಶ್ಯರಿಗೆ, ಶೂದ್ರರಿಗೆ ಸಮನಾದ ಸಾಮಾಜಿಕ ಸ್ಥಾನಮಾನ ನೀಡುವುದನ್ನು ಬ್ರಾಹ್ಮಣರು ಇಷ್ಟಪಡುವುದಿಲ್ಲ. ಆದ್ದರಿಂದ ಅಸ್ಪøಶ್ಯತೆಯ ನಿವಾರಣೆಗೆ ಧರ್ಮಶಾಸ್ತ್ರಗಳ ಸಹಾಯ ಪಡೆಯುವುದೆಂದರೆ ಕೆಸರಿನ ಕೊಳೆಯನ್ನು ಕೆಸರಿನಿಂದಲೇ ತೊಳೆದಂತೆ”! ಇದಕ್ಕೆ ಗಾಂಧೀಜಿಯವರು ಹೇಳಿದ್ದೇನು ಗೊತ್ತೆ? “ಕುರಾನನ್ನು ನಿರಾಕರಿಸಿ ಮುಸ್ಲೀಮನೊಬ್ಬ ಮುಸ್ಲೀಮನಾಗಬಲ್ಲನೆ? ಬೈಬಲ್ಲನ್ನು ನಿರಾಕರಿಸಿ ಕ್ರೈಸ್ತನೊಬ್ಬ ಕ್ರೈಸ್ತನಾಗಿ ಉಳಿಯಬಲ್ಲನೆ? ಹಾಗೆಯೇ ವರ್ಣ  ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ತಾವು ಹಿಂದೂಗಳೆಂದು ಹೇಗೆ ಕರೆದುಕೊಳ್ಳಬಲ್ಲರು?” ಎಂದು! ಒಟ್ಟಾರೆ ಗಾಂಧೀಜಿಯವರ ಪ್ರಕಾರ ವರ್ಣ ಮತ್ತು ಜಾತಿವ್ಯವಸ್ಥೆ ಬೈಬಲ್ ಮತ್ತು ಕುರಾನ್‍ಗೆ ಸಮ ಅಥವಾ ಪವಿತ್ರ!
 
    ಈ ನಿಟ್ಟಿನಲಿ ಮಹಾತ್ಮ ಗಾಂಧಿಜಿಯವರಿಂದ ಜಾತಿ ಪದ್ಧತಿಯ ಸಮರ್ಥನೆ ಎಂಬ ವಿಷಯದ ಕುರಿತಂತೆ ತಿಳಿಯಲು ಇದಿಷ್ಟು ಮಾತ್ರ ಸಾಕೆನಿಸುತ್ತದೆ!

Friday, 18 July 2014

 ದಾದಾಸಾಹೇಬ್ ಕಾನ್ಷೀರಾಂಜೀ: ನಮ್ಮ ನಡುವೆ ಇದ್ದ ಎರಡನೇ ಅಂಬೇಡ್ಕರ್

                               -ರಘೋತ್ತಮ ಹೊ.ಬ

 
 “ನಮಗೊಂದು ಶಕ್ತಿಯಿದೆ. ಅದು ರಾಜಕೀಯ ಶಕ್ತಿ. ಆ ಶಕ್ತಿಯನ್ನು ನಾವು ಗೆಲ್ಲಲೇಬೇಕು. ಆ ಶಕ್ತಿಯನ್ನು ನಾವು ಹೇಗಲಿಗೇರಿಸಿಕೊಂಡರೆ ನಮ್ಮ ಜನರ ಹಿತವನ್ನು ನಾವು ಸುಲಭವಾಗಿ ಕಾಪಾಡಬಹುದು”, “ನಿಮ್ಮ ಬಳಿ ಓಟಿದೆ. ನೀ

ವು ಒಗ್ಗಟ್ಟಾದರೆ ನಿಮ್ಮ ಹಿತವನ್ನು ಕಾಯುವ ಪ್ರತಿನಿಧಿಯನ್ನು ಲೋಕಸಭೆ ಹಾಗೂ ವಿಧಾನಸಭೆಗಳಿಗೆ ನೀವು ಕಳುಹಿಸಬಹುದು. ತಪ್ಪಿದರೆ ನೀವು ನಾಶವಾಗುತ್ತೀರಿ”. ದಲಿತರಿಗೆ ರಾಜಕೀಯ ಅಧಿಕಾರದ ಬಗೆಗಿನ ಮಹತ್ವದ ಕುರಿತು ಹೇಳುವ ಅಂಬೇಡ್ಕರರ ಶ್ರೇಷ್ಠ ಮಾತುಗಳಿವು.  ಬರೀ ಮಾತಾಡಿದ್ದಷ್ಟೆ ಅಲ್ಲ 1936ರಲ್ಲಿ ‘ಸ್ವತಂತ್ರ ಕಾರ್ಮಿಕ ಪಕ್ಷ’ ಸ್ಥಾಪಿಸಿ 1937ರಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ, ಸ್ವಾತಂತ್ರ್ಯಾನಂತರ 1952ರ ಪ್ರಥಮ ಚುನಾವಣೆಗಳಲ್ಲಿ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ ಎಂಬ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಮೂಲಕ ಅಂಬೇಡ್ಕರರು ತಮ್ಮ ಆ ರಾಜಕೀಯ ಕನಸನ್ನು ನನಸಾಗಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗೆಯೇ ನಿಧನ ಸಮಯದಲ್ಲಿ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಎಂಭ ಹೊಸ ಪಕ್ಷವನ್ನು ಸ್ಥಾಪಿಸುವ ಯೋಜನೆಯನ್ನು ಕೂಡ ಅಂಬೇಡ್ಕರರು ಹಾಕಿದ್ದರು. ಒಟ್ಟಾರೆ ತಮ್ಮ ಜೀವಿತದ ಅವಧಿಯಲ್ಲಿ ಅಂಬೇಡ್ಕರರು ದಲಿತರಿಗೆ ತಾವು ಇಚ್ಛಿಸಿದ ಅಂತಹ ರಾಜಕೀಯ ಯಶಸ್ಸು ದೊರಕುವಂತಾಗಲು ಭದ್ರ ಬುನಾದಿ ಹಾಕಿದ್ದಾರೆ. ಅಂದಹಾಗೆ ಅಂತಹ ಭದ್ರ ಬುನಾದಿಯ ಮೇಲೆ ದಲಿತರನ್ನು ಆಳಿಸಿಕೊಳ್ಳುವ ವರ್ಗದಿಂದ ಆಳುವ ವರ್ಗಕ್ಕೆ, ಓಟು ಹಾಕುವ ಸಾಮಾನ್ಯ ಮತದಾರನ ಸ್ಥಿತಿಯಿಂದ ಓಟು ಹಾಕಿಸುವ ರಾಷ್ಟ್ರೀಯ ಪಕ್ಷವೊಂದರ ಮುಖಂಡತ್ವಕ್ಕೆ ಹೊಯ್ದದ್ದು ಬೇರಾರು ಅಲ್ಲ. ಕಾನ್ಷೀರಾಂ. ಪ್ರೀತಿಯಿಂದ ಹೇಳುವುದಾದರೆ ದಾದಾಸಾಹೇಬ್ ಕಾನ್ಷೀರಾಂ.
 
  ಕಾನ್ಷೀರಾಂರವರು ಹುಟ್ಟಿದ್ದು  ಪಂಜಾಬ್‍ನ ರೋಪರ್ ಜಿಲ್ಲೆಯ ಖಾವಸ್‍ಪುರ ಎಂಬ ಹಳ್ಳಿಯಲ್ಲಿ. ತಂದೆ ಶ್ರೀ ಹರಿಸಿಂಗ್. ತಾಯಿ ಶ್ರೀಮತಿ ಬಿಷನ್‍ಕೌರ್. ಅಸ್ಪøಶ್ಯ ಜಾತಿಯಿಂದ ಮತಾಂತರಗೊಂಡ ಸಿಖ್‍ಧರ್ಮಕ್ಕೆ ಸೇರಿದ್ದ ಕಾನ್ಷೀರಾಂರವರು ತಮ್ಮ ಊರಿನಲ್ಲಿ ಅಸ್ಪøಶ್ಯತೆಯ ನೋವುಂಡವರೇನಲ್ಲ. ಸಂದೇಶವೊಂದರಲ್ಲಿ ಅವರೇ ಹೇಳಿರುವ ಹಾಗೇ “ಸಿಖ್ ಗುರುಗಳ ಬೋಧನೆ ಸಮಾನತೆಯನ್ನು ಸಾರುವಂತಹದ್ದು. ಆ ಕಾರಣಕ್ಕೆ ಸಿಖ್ ಧರ್ಮಕ್ಕೆ ಮತಾಂತರಗೊಂಡ ಅಸ್ಪøಶ್ಯರು ಉನ್ನತ ಸ್ಥಾನಕ್ಕೆ ಏರುತ್ತಲೇ ಇದ್ದಾರೆ”. ಅಂದಹಾಗೆ ಅಂತಹ ಉನ್ನತ ಸ್ಥಾನ ಎಂದರೆ ಸಮಾನತೆ!
 
 ಇಂತಹ ಸಮಾನತೆಯ ವಾತಾವರಣದಲ್ಲಿ ಹುಟ್ಟಿದ ಕಾನ್ಷೀರಾಂರವರಿಗೆ ಅಸ್ಪøಶ್ಯತೆ ವಿರುದ್ಧ ಹೋರಾಟ ಮಾಡುವ ಅಗತ್ಯ ಖಂಡಿತ ಇರಲಿಲ್ಲ. ಹಾಗೆಯೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಛಾಪು ಬೀರುವ ಅಗತ್ಯವೂ ಇರಲಿಲ್ಲ. ಆದರೆ ವಿಧಿಲಿಖಿತ ನಿಯಮ ಬೇರೆಯದೇ ಆಗಿತ್ತು. ಅದೆಂದರೆ ವಿದ್ಯಾಭ್ಯಾಸದಲ್ಲಿ ಬಿಎಸ್ಸಿ ಪದವಿ ಪಡೆದು ರಕ್ಷಣಾ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ ಅವರು ಸೀದಾ ವರದಿ ಮಾಡಿಕೊಂಡಿದ್ದು ಮಹಾರಾಷ್ಟ್ರದ ಪೂನಾ ನಗರದ DRDO(Defence Research and Development Organization)  ಕಛೇರಿಯಲ್ಲಿ! ಒಂದರ್ಥದಲ್ಲಿ ದೂರದ ಪಂಜಾಬ್‍ನ ಕಾನ್ಷೀರಾಂರನ್ನು ‘ಮಹಾರಾಷ್ಟ್ರದ ಅಂಬೇಡ್ಕರ್’ರವರು ತಮ್ಮತ್ತ ಸೆಳೆದಿದ್ದರು! ಸೆಳೆದು ಡಿ.ಕೆ.ಕಪರ್ಡೆ ಎಂಬ ತಮ್ಮ ಅನುಯಾಯಿಯೋರ್ವರನ್ನು  ಕಾನ್ಷೀರಾಂರಿಗೆ ಪರಿಚಯ ಮಾಡಿಕೊಟ್ಟಿದ್ದರು! ಖಂಡಿತ ಕಪರ್ಡೆ ನೀಡಿದ ಅಂಬೇಡ್ಕರರ Annihilation of Caste ಕೃತಿಯನ್ನು ಒಂದೇ ರಾತ್ರಿ ನಿದ್ರಿಸದೆ ಮೂರು ಬಾರಿ ಓದಿದ ಕಾನ್ಷೀರಾಂರವರು ಅಂಬೇಡ್ಕರರನ್ನು ಮತ್ತವರ ಚಿಂತನೆಯನ್ನು ತಮ್ಮ ತಲೆಗೆ ತುಂಬಿಕೊಂಡರು. ಅಲ್ಲದೆ ಅಂಬೇಡ್ಕರರ ಮತ್ತೊಂದು ಕೃತಿ ‘what congress and Gandhi have done to untouchables?’ ಓದಿದ ಕಾನ್ಷೀರಾಂರವರು ದಲಿತರ ರಾಜಕಾರಣದ ದಿಕ್ಕು ಏನಾಗಿರಬೇಕು? ಅವರು ಎತ್ತ ಚಲಿಸಬೇಕು? ಏನು ಮಾಡಬೇಕು? ಇತ್ಯಾದಿ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುತ್ತಾ ಒಂದು ಮಹಾನ್ ಕಾರ್ಯಕ್ಕೆ ತಮ್ಮನ್ನು ತಾವು ಅಣಿಗೊಳಿಸಿಕೊಂಡರು. ಹಾಗೇ ಅಣಿಗೊಳ್ಳಿಸಿಕೊಳ್ಳುತ್ತಾ ತಮ್ಮ ತಾಯಿಗೆ 24 ಪುಟಗಳ ಸುದೀರ್ಘ ಪತ್ರ ಬರೆದ ಕಾಂನ್ಷೀರಾಂರವರು ಆ ಪತ್ರದಲ್ಲಿ “ತಾನು ಮದುವೆ ಮಾಡಿಕೋಳ್ಳುವುದಿಲ್ಲ. ಕುಟುಂಬದವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ವಯಕ್ತಿಕವಾಗಿ ಯಾವುದೇ ಆಸ್ತಿ ಸಂಪಾದನೆ ಮಾಡುವುದಿಲ್ಲ. ನನ್ನ ಮುಂದಿನ ಬದುಕು ಶೋಷಿತ ಸಮುದಾಯದ ಏಳಿಗೆಗಾಗಿ ಸಂಪೂರ್ಣ ಮೀಸಲು” ಎಂದು ದೃಢವಾಗಿ ತಿಳಿಸುತ್ತಾರೆ. ತನ್ಮೂಲಕ ಒಂದು ಮಹಾನ್ ತ್ಯಾಗಕ್ಕೆ ತಮ್ಮನ್ನೇ ತಾವು ಒಡ್ಡಿಕೊಳ್ಳುತ್ತಾರೆ.
 
  ಸಂಶಯ ಬೇಡ, ಕಾನ್ಷೀರಾಂ ನುಡಿದಂತೆ ನಡೆದರು. ಹಾಗೆಯೇ ಬದುಕಿದರು ಕೂಡ. ಈ ನಿಟ್ಟಿನಲಿ ಅಂದರೆ ಶೋಷಿತರನ್ನು ವಿಮೋಚನೆಗೊಳಿಸುವ ನಿಟ್ಟಿನಲಿ ಪ್ರಪ್ರಥಮವಾಗಿ ವಿದ್ಯಾವಂತ ನೌಕರರ ಸಂಘಟನೆ ಮಾಡಿದ ಕಾನ್ಷೀರಾಂರವರು 1973ರಲ್ಲಿ BAMCEF(Backward and Minorities Communities  Employees Federation) ಸ್ಥಾಪಿಸುತ್ತಾರೆ. ತನ್ಮೂಲಕ ‘ಸಮಾಜಕ್ಕೆ ಮರಳಿ ಕೊಡು (Pay Back to Society)’ ಸಿದ್ಧಾಂತ ಜಾರಿಗೊಳಿಸುತ್ತಾರೆ. ಅದೇನೆಂದರೆ ‘ಮೀಸಲಾತಿಯಡಿ ಸವಲತ್ತನ್ನು ಪಡೆದ ವ್ಯಕ್ತಿಯೊಬ್ಬ ತನ್ನ ಸಮುದಾಯದ ಏಳಿಗೆಗಾಗಿ ತಾನು ಗಳಿಸಿದ್ದರಲ್ಲಿ ಸ್ವಲ್ಪ ಭಾಗ ವಾಪಸ್ ಕೊಡುವುದು’ ಎಂದರ್ಥ.  ಖಂಡಿತ ಕಾನ್ಷೀರಾಂರ ಈ ಫಾರ್ಮುಲಾ ಕೆಲಸ ಮಾಡಿತು. ಈ ದಿಸೆಯಲ್ಲಿ 1978ರ ವೇಳೆಗೆ ಕಾನ್ಷೀರಾಂರು ಇಡೀ ದೇಶಾದ್ಯಂತ BAMCEFನ ಅಡಿಯಲ್ಲಿ 17ಲಕ್ಷ ನೌಕರರನ್ನು ಸಂಘಟಿಸಿದ್ದರೆಂದರೆ ಅವರ ಸಂಘಟನಾ ಸಾಮಥ್ರ್ಯವನ್ನು ಯಾರಾದರೂ ಊಹಿಸಬಹುದು.
 
   ಈ ಸಂದರ್ಭದಲ್ಲಿ ಅವರು 1977ರಲ್ಲಿ IAS ಗೆ ತಯಾರಿ ನಡೆಸುತ್ತಿದ್ದ 21ರ ಹರಯದ ಶಾಲಾ ಶಿಕ್ಷಕಿ ಮಾಯಾವತಿಯವರನ್ನು ತಮ್ಮ ಸಂಘಟನೆಗೆ (BAMCEF)  ಸೇರಿಸಿಕೊಂಡರು. ಮಾಯಾವತಿ ಎಂದ ಮೇಲೆ ಕಾನ್ಷೀರಾಂರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರ ರಾಜಕಾರಂಣದಲ್ಲಿ ಅವರಿಬ್ಬರು ಮುಟ್ಟಿದೆಲ್ಲ ಚಿನ್ನ.
 
   BAMCEFನ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಷೀರಾಮರು ಜನಸಾಮನಾನ್ಯರನ್ನು ಇಂತಹ ಹೋರಾಟದ ತೆಕ್ಕೆಯಲ್ಲಿ ಒಳಗೊಳ್ಳುವ ನಿಟ್ಟಿನಿಂದ DS4(ದಲಿತ ಶೋಷಿತ ಸಂಘರ್ಷ ಸಮಿತಿ) ಹುಟ್ಟುಹಾಕಿದರು. ಅಂದಹಾಗೆ ದಲಿತರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾನ್ಷೀರಾಂರವರು ಕೊಟ್ಟ ಉತ್ತರ ‘ಠಾಕೂರ್, ಬ್ರಾಹ್ಮಣ್, ಬನಿಯಾ ಚೋಡ್, ಬಾಕಿ ಸಬ್ ಹೈ DS4’ ಎಂಬುದಾಗಿತ್ತು. ಒಂದಂತು ನಿಜ, DS4 ಮೂಲಕ ಕಾನ್ಷೀರಾಂರವರು ಚುನಾವಣಾ ರಾಜಕಾರಣಕ್ಕೆ ಅದ್ಭುತ ಎಂಟ್ರಿ ಕೊಟ್ಟರು. ಯಾಕೆಂದರೆ 1982ರಲ್ಲಿ DS4ವತಿಯಿಂದ ಹರ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ 46 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾನ್ಷೀರಾಂ 1983 ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳ:ನ್ನು ಕಣಕ್ಕಿಳಿಸಿ ತನ್ನ ಗುರಿ ಯಾವುದೆಂದು ಸಂದೇಶ ರವಾನಿಸಿದರು. ಸಂದೇಹ ಬೇಡ, ಕಾನ್ಷೀರಾಂರ ಗುರಿ ದಲಿತರಿಗೆ ರಾಜ್ಯಾಧಿಕಾರ ದೊರಕಿಸಿಕೊಡುವುದಾಗಿತ್ತು.
   
   1984 ಏಪ್ರಿಲ್ 14 ‘ಅಂಬೇಡ್ಕರ್ ಜಯಂತಿ’ಯಂದು ಬಿಎಸ್‍ಪಿ(ಬಹುಜನ ಸಮಾಜ ಪಕ್ಷ)  ಸ್ಥಾಪಿಸಿದ ಕಾನ್ಷೀರಾಂರು “ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಮಾಜದ ಶೇ.85ರಷ್ಟಿದ್ದಾರೆ. ಇವರು ಬಹುಜನರು. ಉಳಿದ ಶೇ.15ರಷ್ಟು ಮೇಲ್ಜಾತಿಗಳು ಮನುವಾದಿಗಳು. ಇವರು ಎಂದಿಗೂ ಬಹುಜನರ ಉದ್ಧಾರ ಮಾಡುವುದು ಸಾಧ್ಯವಿಲ್ಲ” ಎಂದು ತಮ್ಮ ರಾಜಕೀಯ ಸಿದ್ಧಾಂತ ತೇಲಿಬಿಟ್ಟರು. ಈ ನಿಟ್ಟಿನಲಿ ಬಿಎಸ್‍ಪಿಯ ಯಶೋಗಾಥೆ ಎಲ್ಲರಿಗೂ ತಿಳಿದದ್ದೆ. 1984ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಚಂಬಲ್ ಕ್ಷೇತ್ರದಿಂದ ಕಣಕ್ಕಿಳಿದ ಕಾನ್ಷೀರಾಂರು ಮುಂದೆ ಹಿಂದಿರುಗಿ ನೋಡಲೇಇಲ್ಲ. ತಮ್ಮ ಪಕ್ಷದ ಮೂಲಕ ಒಂದಾದ ಮೇಲೊಂದರಂತೆ ಚುನಾವಣಾ ಯಶಸ್ಸು ಪಡೆದ ಅವರು ಬಹುಜನ ಸಮಾಜ ಪಕ್ಷವನ್ನು ಈ ದೇಶದ ಮೂರನೇ ಅತಿ ದೊಡ್ಡ ಪಕ್ಷವನ್ನಾಗಿ ಮಾಡಿದರು. ತಮ್ಮ ಶಿಷ್ಯೆ ಮಾಯಾವತಿಯವವರನ್ನು ದೇಶದ ಬೃಹತ್ ರಾಜ್ಯವಾದ ಉತ್ತರಪ್ರದೇಶದಲ್ಲಿ ಒಂದಲ್ಲ ಎರಡಲ್ಲ 3 ಬಾರಿ ಮುಖ್ಯಮಂತ್ರಿ ಮಾಡಿದರು. 1995 ಮಾಯಾವತಿಯವರು ಬಿಜೆಪಿಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದಾಗ ಮಾಧ್ಯಮಗಳು ಅದನ್ನು ‘ಪ್ರಜಾಪ್ರಭುತ್ವದ ಅದ್ಭುತ’ ಎಂದು ಬಣ್ಣಿಸಿದವು. ಖಂಡಿತ ಅಂತಹ ಅದ್ಭುತದ ಹಿಂದೆ ಕಾನ್ಷೀರಾಂ ಎಂಬ ಮಾಂತ್ರಿಕನ ಕೈವಾಡವಿತ್ತು. ಸ್ವತಃ 1992ರಲ್ಲಿ ಉತ್ತರಪ್ರದೇಶದಲ್ಲಿ ಇಟವಾ ಲೋಕಸಭಾ ಸಾಮಾನ್ಯ ಕ್ಷೇತ್ರದಿಂದ 19000 ಮತಗಳಿಂದ ಚುನಾವಣೆ ಜಯಿಸಿದ ಕಾನ್ಷೀರಾಂರವರು ದಲಿತರು ಬರೀ ಮೀಸಲು ಕ್ಷೇತ್ರಗಳಿಂದಷ್ಟೆ ಗೆಲ್ಲುತ್ತಾರೆ, ಅಲ್ಲಿ ಸ್ಪರ್ಧಿಸಲಷ್ಟೆ ಅರ್ಹರು ಎಂಬ ಮಿಥ್‍ಅನ್ನು ಚಿತ್ ಮಾಡಿದರು. 1997 ಮತ್ತು 2002ರಲ್ಲಿ  ಮತ್ತದೇ ಬಿಜೆಪಿಯ ಬೆಂಬಲದಿಂದಲೇ ಮಾಯಾವತಿಯವರನ್ನು ಅಧಿಕಾರಕ್ಕೆ ತಂದ ಕಾನ್ಷೀರಾಂರವರು ಹಂತಹಂತದಲ್ಲಿ ತಮ್ಮ ಚಾಕಚಕ್ಯತೆ ತೋರುತ್ತಾ ಹೋದರು.
   
  ಯಾಕೆಂದರೆ ಒಂದು ಕಾಲದಲ್ಲಿ ದಲಿತರು ಎಂದರೆ ಬರೀ ಬೇರೆ ಪಕ್ಷಗಳಲ್ಲಿ ಗುಲಾಮಗಿರಿ ಮಾಡಲಷ್ಟೆ  ಆಯ್ಕೆಯಾಗುತ್ತಾರೆ ಎಂಬ ನೀತಿ ಚಾಲ್ತಿಯಲ್ಲಿತ್ತು. ಆದರೆ ಕಾನ್ಷೀರಾಂರವರು ಅಂತಹ ನೀತಿಯನ್ನು ‘ಚಮಚಾಗಿರಿ’ ಎಂದು ಜರೆದು ಅದರ ನಿರ್ಮೂಲನೆಗಾಗಿ ‘ಚಮಚಾಯುಗ’ ಎಂಬ ಪುಸ್ತಕ ಬರೆದು ಈ ದೇಶದ ದಲಿತರ ಕಣ್ತೆರೆಸಿದರು. ‘ಚಮಚಾ ಎಂಬುದು ಒಂದು ಸಾಧನ. ಅದು ದಲಿತರ ನಿಜವಾದ ಹೋರಾಟಗಾರನನ್ನು ಹತ್ತಿಕ್ಕಲು ದಲಿತರಲ್ಲೇ ಮತ್ತೊಬ್ಬ ಏಜೆಂಟ್‍ನನ್ನು ಸೃಷ್ಟಿಸುವ ಮೇಲ್ಜಾತಿ ಪಕ್ಷಗಳ ಆಟ’ ಎಂದು ತಮ್ಮ ಚಮಚಾಗಿರಿ ಪದಕ್ಕೆ ವಿವರಣೆ ಕೊಟ್ಟರು. ಈ ವಿವರಣೆ ದೇಶದಾದ್ಯಂತ ಕೆಲಸ ಮಾಡಿದೆ. ಅದು ಇಂದು ದಲಿತರಲ್ಲಿ ಸ್ವಲ್ಪ ಮಟ್ಟಿಗಾದರೂ ರಾಜಕೀಯ ಸ್ವಾಭಿಮಾನವನ್ನು ಸೃಷ್ಟಿಸಿದೆ. ಯಾಕೆಂದರೆ ಒಂದು ಕಾಲದಲ್ಲಿ ದಲಿತರ ಮತ ಬರೀ ಖರೀದಿಗಾಗಿ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ದಲಿತರೂ ತಮ್ಮ ನೇತೃತ್ವದಲ್ಲಿ ಒಂದು ಪಾರ್ಟಿ ಕಟ್ಟಿಕೊಳ್ಳಬಹುದು, ಅದರ ಅಡಿಯಲ್ಲಿ ಚುನಾವಣೆಗಳಲ್ಲಿ ಗೆಲ್ಲಬಹುದು, ಗೆದ್ದು ಗದ್ದುಗೆ ಹಿಡಿಯಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು DRDOದ ಮಾಜಿ ವಿಜ್ಞಾನಿ ಕಾನ್ಷೀರಾಂರವರು. ಇಂತಹ ಕಾನ್ಷೀರಾಂರವರು 2006 ಅಕ್ಟೋಬರ್ 9ರಂದು ನಮ್ಮನ್ನೆಲ್ಲ ತಬ್ಬಲಿಗಳನ್ನಾಗಿಸಿದರು. ಅರ್ಥಾತ್ ಕಾನ್ಷೀರಾಂರ ಅಮರ ಚೇತನ ಪ್ರಕೃತಿಯಲ್ಲಿ ಲೀನವಾಯಿತು.
 
  ದಾದಾಸಾಹೇಬ್ ಕಾನ್ಷೀರಾಂ ಪ್ರಾಯೋಗಿಕತೆ ಬಯಸಿದ ಈ ದೇಶ ಕಂಡ ಅಪ್ಪಟ ರಾಜಕೀಯ ಸಿದ್ಧಾಂತಿ. ಅದರಲ್ಲೂ ಅಂತಹ ಅದ್ಭುತ ಚೇತನ ಶೋಷಿತ ಸಮುಧಾಯದ ನಡುವೆ ಹುಟ್ಟಿತ್ತಲ್ಲ ಎಂಬುದೇ ಒಂದು ಸುಂದರ ಕನಸ್ಸಿನ ಮಾದರಿಯದ್ದು. ಎಲ್ಲರೂ ಎರಡನೇ ಅಂಬೇಡ್ಕರ್ ಯಾರು? ಯಾರು? ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಖಂಡಿತ ಕಾನ್ಷೀರಾಂ ನಮ್ಮ ನಡುವೆ ಇದ್ದು ತಮ್ಮ ಅದ್ಭುತ ಮಾಂತ್ರಿಕ ಮೋಡಿಯಿಂದ ಬಾಬಾಸಾಹೇಬರ ಕನಸನ್ನು ನನಸುಗೊಳಿಸಿದ ಎರಡನೇ ಅಂಬೇಡ್ಕರಂತೆ ಕಂಡರೆ ಆಶ್ಚರ್ಯವೇನಿಲ್ಲ.

Wednesday, 16 July 2014

ಅಂಬೇಡ್ಕರ್ ಹೇಳಿದ ಅಸ್ಪøಶ್ಯತೆಯ ಉಗಮದ ಅಪರೂಪದ ಸಿದ್ಧಾಂತ

              -ರಘೋತ್ತಮ ಹೊ.ಬ
  
  ಅಸ್ಪøಶ್ಯತೆ; ಹಾಗೆಂದರೆ ಊರಿಂದ ಹೊರಗಿಡುವುದು, ಊರಿನ ದೇವಾಲಯಗಳ ಪ್ರವೇಶ ನಿರ್ಬಂಧ, ಮುಟ್ಟಿಸಿಕೊಳ್ಳದಿರುವುದು, ಕ್ಷೌರ ಮಾಡದಿರುವುದು, ಬೀದಿಯೊಳಕ್ಕೆ ಬಿಟ್ಟುಕೊಳ್ಳದಿರುವುದು, ಊರಿನ ಕೀಳು ವೃತ್ತಿಗಳನ್ನು ಮಾಡುವುದು, ತಪ್ಪಾದರೆ ಬಹಿಷ್ಕಾರ ಶಿಕ್ಷೆ ಎದುರಿಸುವುದು, ಹಾಗೆಯೇ ಸವರ್ಣೀಯರಿಂದ ದಬ್ಬಾಳಿಕೆ,  ದೌರ್ಜನ್ಯ, ಅತ್ಯಾಚಾರ, ಕೊಲೆ, ಸುಲಿಗೆ, ಜೀತ.... ಬಹುಶಃ ಇದರ ವಿವರಣೆ ಅಗಣಿತ! ಹಾಗಿದ್ದರೆ ಇದು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿತ್ತೇ? ಎರಡು ಸಾವಿರ, ಮೂರು ಸಾವಿರ, ಐವತ್ತು ಸಾವಿರ, ಈ ಭೂಮಿ, ಸೃಷ್ಟಿ ಉಗಮವಾದಾಗಿನಿಂದಲೂ ಇತ್ತೇ? ಖಂಡಿತ, ಇರಲಿಕ್ಕಿಲ್ಲ. ಹಾಗಿದ್ದರೆ ಎಲ್ಲೋ ಒಂದು ದಿನ, ಒಂದು ಘಳಿಗೆ, ಒಂದು ವರುಷ, ಒಂದು ಶತಮಾನ, ಒಂದು ಯುಗದಲ್ಲಿ ಅದು ಪ್ರಾರಂಭವಾಗಿರಬೇಕಲ್ಲವೆ? ವಿಕಾಸ ಹೊಂದಿರಬೇಕಲ್ಲವೆ? ಖಂಡಿತ, ಅಸ್ಪøಶ್ಯತೆ ಅದಕ್ಕೊಂದು ಹುಟ್ಟಿದ ತಾರೀಖಿದೆ, ಘಳಿಗೆ ಇದೆ, ತಿಥಿ ಇದೆ, ಶತಮಾನಗಳ ಕಾಲ ರೂಪಿಸಿದ ಷಡ್ಯಂತ್ರವಿದೆ. ಅಂದಹಾಗೆ ಅದರ ವಿವರಣೆ ಅಂಬೇಡ್ಕರ್ ನೀಡುತ್ತಾರೆ, ಅವರ ಅಮೂಲ್ಯ ಬರಹಗಳು ನೀಡುತ್ತವೆ.
  
  ಹಾಗಿದ್ದರೆ ಅಸ್ಪøಶ್ಯತೆ ಎಂದು ಉಗಮವಾಯಿತು? ಹೇಗೆ ಉಗಮವಾಯಿತು? ಖಂಡಿತ, ಈ ದೇಶದ ಯಾವುದೇ ಸಂಶೋಧಕ, ಅಧ್ಯಾಪಕ, ವಿಶ್ವವಿದ್ಯಾನಿಲಯ ಈ ವಿಷಯದ ಬಗ್ಗೆ ಶೋಧನೆ, ಪರಿಶೋಧನೆ, ನಿಧಿಶೋಧನೆ ಕೈಗೊಂಡಿಲ್ಲ. ಯಾಕೆಂದರೆ ಮೂಲ ತಿಳಿದರೆ, ಉಗಮ ತಿಳಿದರೆ ಅಂತ್ಯವೂ ತಿಳಿಯುತ್ತದೆ ತಾನೇ? ಅದಕ್ಕೆ ಈ ದೇಶದ ಸ್ಥಾಪಿತ ಹಿಂದೂ ಹಿತಾಸಕ್ತಿಗಳು ಇದರತ್ತ ಕಣ್ಣೆತ್ತಿಯೂ ನೋಡಲಿಲ್ಲ. ಆದರೆ ಕಣ್ಣು ಬಿಟ್ಟ ಅಸ್ಪøಶ್ಯರು? ಅದರಲ್ಲೂ ಬುಧ್ಧನ ಕಣ್ಣು ಬಿಟ್ಟ ಅಂಬೇಡ್ಕರರಂತಹ ಅಸ್ಪøಶ್ಯ ಶ್ರೇಷ್ಠರು? ಇದಕ್ಕೊಂದು ಸಂಶೋಧನೆಗೈದೇ ತೀರುತ್ತಾರೆ. ಅದರ ಹುಟ್ಟಿನ ಮೂಲವ ಬಯಲಿಗೆಳೆಯುತ್ತಾರೆ.
  
   ಹೌದು, ಅಂಬೇಡ್ಕರ್ ಅಸ್ಪøಶ್ಯತೆಯ ಉಗಮಕ್ಕೆ ಒಂದು ನವೀನ ಹಾಗೆಯೇ ಸಮರ್ಥ ಎನಿಸುವ ಸಿದ್ಧಾಂತ ಸಂಶೋಧಿಸುತ್ತಾರೆ. ಅದು ಅಸ್ಪøಶ್ಯರು ಮೂಲಬೌದ್ಧರಾಗಿದ್ದರು, ಬೌದ್ಧರಾಗಿಯೇ ಅವರು ಹಾಗೆ ಉಳಿದಿದ್ದಕ್ಕೆ, ಹಾಗೇ ಸತ್ತ ದನದ ಮಾಂಸ ಸೇವನೆಯನ್ನು ಅವರು ಹಾಗೆ ಮುಂದುವರಿಸಿದ್ದಕ್ಕೆ ಅವರು ಅಸ್ಪøಶ್ಯರಾಗಬೇಕಾಯಿತು ಎಂಬ ಸಿದ್ಧಾಂತವದು. ಈ ನಿಟ್ಟಿನಲಿ 1940 ಫೆಬ್ರವರಿ 24ರಂದು ಅಂಬೇಡ್ಕರರು ಮುಂಬೈಯ ‘ಬಾಂಬೆ ಕ್ರಾನಿಕಲ್’ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಅಸ್ಪøಶ್ಯತೆಯ ಉಗಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅಂದಹಾಗೆ ಅಂಬೇಡ್ಕರರ ಅನಿಸಿಕೆ, (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂಪುಟ.17, ಭಾಗ.1, ಪು.302-305) ಸಂಶೋಧನೆ, ಇಂತಿದೆ. “ಅಸ್ಪøಶ್ಯತೆ ಅದು ಪ್ರಪಂಚದ ಯಾವುದೇ ಭಾಗದಲ್ಲೂ ಅಸ್ತಿತ್ವದಲ್ಲಿಲ,್ಲ ಬದಲಿಗೆ ಅದು ಭಾರತದ ವಿಶಿಷ್ಟ ಆಸ್ತಿಯಾಗಿದ್ದು ಅದೊಂದು ಸಾಮಾಜಿಕ ಆಚರಣೆ ಅಥವಾ ಸಂಸ್ಥೆಯಾಗಿದೆ. ಹಾಗೆ ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಮಾನವನ ಮನಶಾಸ್ತ್ರ ಮತ್ತು ಸಾಮಾಜಿಕ ಶಕ್ತಿಗೆ ವಿರುದ್ಧವಾಗಿ ಚಲಿಸುವ ಅದು, ಒಂದು ರೀತಿಯ ಅಸ್ವಾಭಾವಿಕ ಸಂಸ್ಥೆ. ಅಂತೆಯೇ ಅಸ್ಪøಶ್ಯತೆಯ ಉಗಮವನ್ನು ಸಾಬೀತುಪಡಿಸುವ ಎಲ್ಲ ಕಾರಣಗಳು ಖಂಡಿತ ಎಲ್ಲ ಸಾಮಾಜಿಕ ಶಕ್ತಿ ಮತ್ತು ಮನಶಾಸ್ತ್ರೀಯ ನಿರ್ಧಾರಕಗಳನ್ನು ಮೀರಿ ಬೆಳೆಯುತ್ತದೆ” ಅಂಬೇಡ್ಕರರು ಹೇಳುತ್ತಾ ಹೋಗುತ್ತಾರೆ...
 
    ಮುಂದುವರೆದು ಅವರು ಅಭಿಪ್ರಯಿಸುವುದೇನೆಂದರೆ “ಅಸ್ಪøಶ್ಯತೆ ಅದು ವೇದಗಳ ಕಾಲವಿರಲಿ, ಅದರ ನಂತರದ ಹಲವು ಶತಮಾನಗಳವರೆಗೂ ಅದು ಅಸ್ತಿತ್ವದಲ್ಲಿರಲಿಲ್ಲ. ಯಾಕೆಂದರೆ ವೇದಗಳ ಯಾವುದೇ ಮೂಲೆಯಲ್ಲಿಯೂ ಅದರ ಪ್ರಸ್ತಾಪವೇ ಇಲ್ಲ. ಹೀಗಿರುವಾಗ ಅದು ಅಸ್ತಿತ್ವಕ್ಕೆ ಹೇಗೆ ಬಂತು?” ಈ ಕಾರಣಕ್ಕೆ ಅವರು ಹೇಳುವುದೇನೆಂದರೆ “ಅಸ್ಪøಶ್ಯತೆ ಅದರ ಕಲ್ಪನೆ ತೀರಾ ಈಚಿನದ್ದು” ಎಂದು.
 
   ಖಂಡಿತ, ಅಸ್ಪøಶ್ಯತೆ ಅದರ ಮೂಲ ತೀರಾ ಈಚಿನದ್ದು. ಯಾಕೆಂದರೆ ಮುಂದೆ ಅಂಬೇಡ್ಕರರು ಹೇಳುವುದ ಕೇಳಿ “ಅದೊಂದು ಕಾಲವಿತ್ತು. ಆ ಕಾಲದಲ್ಲಿ ಜನಸಮೂಹದ ಕೆಲ ಜನ ಆಗಷ್ಟೆ ಕೃಷಿಕ ಜೀವನದಲ್ಲಿ ತೊಡಗಿಸಿಕೊಂಡಿತ್ತು. ಮತ್ತೂ ಕೆಲವು ಜನ ಅಂದರೆ ಉಳಿದವರು ತಮ್ಮ ಕುರಿಗಳು ಮತ್ತು ದನಕರುಗಳ ಜೊತೆ ಊರಿಂದ ಊರಿಗೆ ಚಲಿಸುತ್ತಾ ಅಲೆಮಾರಿ ಸ್ಥಿತಿಯಲ್ಲಿ ಬದುಕುತ್ತಿದ್ದರು. ಅಂದಹಾಗೆ ಹಾಗೆ  ಕೃಷಿಕ ಜೀವನದಲ್ಲಿ ತೊಡಗಿಸಿಕೊಂಡು ಭೂಮಿ, ಮನೆ, ಬೆಳೆ ಮತ್ತು ಉನ್ನತ ಸಾಮಾಜಿಕ ಸ್ಥಿತಿಗಳನ್ನು ಗಳಿಸಿದ್ದ ಜನ,  ಕುರಿಗಾಹಿ ಅಲೆಮಾರಿ ಸಮುದಾಯಗಳಿಂದ ತಮ್ಮ ನೆಮ್ಮದಿ ಭಂಗÀವಾಗುವುದನ್ನು ಇಷ್ಟಪಡುತ್ತಿರಲಿಲ್ಲ. ಹಾಗೆ ಮತ್ತೊಂದು ಅಂಶವೆಂದರೆ ಕೃಷಿಕ ಆ ಜನ ಯಾವುದೇ ಆಸ್ತಿಯನ್ನು ಹೊಂದಿಲ್ಲದ, ದೈಹಿಕವಾಗಿ ಗಟ್ಟಿಮುಟ್ಟಾದ ಮತ್ತು ಸದೃಢ ಆ ಕುರಿಗಾಹಿಗಳಿಗೆ ಯಾವುದೇ ರೀತಿಯಲ್ಲೂ ಸರಿಸಮರಿರಲಿಲ್ಲ. ಈ ಕಾರಣದಿಂದ ಅಲೆಮಾರಿ ಬುಡಕಟ್ಟುಗಳಿಂದ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಕೃಷಿಕ ಆ ಜನ ತಮ್ಮತಮ್ಮಲ್ಲೇ ಯಾದವೀ ಕಲಹದಿಂದ ಛಿದ್ರಗೊಂಡಿದ್ದ ಕುರಿಗಾಹಿ ವರ್ಗದಿಂದ ಕೆಲವರನ್ನು ಸೇವಕರಾಗಿ ಸೇರಿಸಿಕೊಂಡರು ಮತ್ತು ಅಂತಹ ಸೇವಕರಿಗೆ ಊರಿನ ಹೊರಗೆ ಮನೆ ಮತ್ತು ತುಂಡು ಭೂಮಿಯನ್ನು ಸಹ ನೀಡಿದರು. ಅಂದಹಾಗೆ ಹಾಗೆ ಸೇರಿಕೊಂಡ ಆ ಸೇವಕರ ಮುಖ್ಯ ಕರ್ತವ್ಯವೆಂದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಾಗಿತ್ತು”.  ಹೀಗೆ ‘ಸೇವಕರ ವರ್ಗ’ದ ಅಸ್ತಿತ್ವವನ್ನು ಆ ಮೂಲಕ ‘ಅಸ್ಪøಶ್ಯರ ಮೂಲ’ವನ್ನು ಅಂಬೇಡ್ಕರರು ಬಿಚ್ಚಿಡುತ್ತಾರೆ.
  
   ಮುಂದುವರಿದು ಅವರು “ಕುರಿಗಾಹಿ ಅಲೆಮಾರಿ ಬುಡಕಟ್ಟುಗಳಿಂದ ಗ್ರಾಮಗಳನ್ನು ರಕ್ಷಿಸುವ ತಮ್ಮ ಕರ್ತವ್ಯವನ್ನು ಸೇವಕರು ಹೀಗೆ ಹಲವು ತಲೆಮಾರುಗಳವರೆಗೆ ಮುಂದುವರಿಸಿದರು. ಹಾಗಿದ್ದರೂ ಗ್ರಾಮದ ಆ ಮೂಲನಿವಾಸಿಗಳು ಮತ್ತು ಗ್ರಾಮದ ಅಂಚುಗಳಲ್ಲಿ ವಾಸಿಸುತ್ತಿದ್ದ ಆ ಗ್ರಾಮದ ರಕ್ಷಕರು ಅರ್ಥಾತ್ ಸೇವಕರ ನಡುವೆ ಮಾನವ ಸಂಬಂಧ, ಅಸ್ಪøಶ್ಯತೆಯ ಯಾವ ಪರಿಕಲ್ಪನೆಯೂ ಇಲ್ಲದೆ ಸಹಜವಾಗಿತ್ತು. ಹೀಗಿರುವಾಗ ಅದು ಅಂದರೆ ಅಸ್ಪøಶ್ಯತೆ ಹೇಗೆ ಬಂತು ಎಂಬುದು?”
 
   ತಮ್ಮ ಈ ಪ್ರಶ್ನೆಗೆ ಸ್ವತಃ ಅವರೇ ಕಾರಣಕೊಡುತ್ತಾ ಅಂಬೇಡ್ಕರರು ಭಾರತದಲ್ಲಿ ಅಂದು ಪ್ರಬ¯ವಾಗಿದ್ದ ಬೌದ್ಧಧರ್ಮದ ಅಸ್ತಿತ್ವವನ್ನು ಉದಹರಿಸುತ್ತಾರೆ. ಅಂಬೇಡ್ಕರ್ ಹೇಳುತ್ತಾರೆ “ಬೌದ್ಧಧರ್ಮ ಅದು ಭಾರತದ ಇತಿಹಾಸದಲ್ಲಿ ಯಾವುದೇ ಆಕ್ರಮಣಕಾರನು ಆಕ್ರಮಿಸದ ರೀತಿಯಲ್ಲಿ ಇಡೀ ಭರತಖಂಡವನ್ನು ಆಕ್ರಮಿಸಿತ್ತು. ಹೇಗೆಂದರೆ ಕೆಲವೇ ತಲೆಮಾರುಗಳಲ್ಲಿ ಹೆಚ್ಚು ಕಡಿಮೆ ಇಡೀ ಭಾರತ ದೇಶ ಅದರಲ್ಲೂ ಜನಸಾಮಾನ್ಯರು ಮತ್ತು ವ್ಯಾಪಾರಿ ವರ್ಗ ಬೌದ್ಧಧರ್ಮದೆಡೆ ವಲಸೆಹೋಗುವ ಮಟ್ಟಿಗೆ. ಅಂದಹಾಗೆ ಈ ಸಂದರ್ಭದಲ್ಲಿ ಬ್ರಾಹ್ಮಣತ್ವ ಧಾಳಿಗೊಳಗಾಗುವ ಭೀತಿಯಲ್ಲಿ ಸಿಲುಕಿತು. ನಿಜ ಹೇಳಬೇಕೆಂದರೆ ಈ ಸಮಯದಲ್ಲಿ ಬ್ರಾಹ್ಮಣರು ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ಚಾಣಾಕ್ಷತೆಯನ್ನು ತೋರದಿದ್ದರೆ ಖಂಡಿತ ಅದು ಅಂದರೆ ಬ್ರಾಹ್ಮಣತ್ವ ಇನ್ನಿಲ್ಲವಾಗಿರುತ್ತಿತ್ತು. ಹಾಗೆಯೇ ಬ್ರಾಹ್ಮಣತ್ವ, ಅದು ರಕ್ಷಣೆಯಾಗಬೇಕೆಂದಿದ್ದರೆ ಹಲವು ವರುಷಗಳ ಕಾಲ ತಾವು ಕಾಪಾಡಿಕೊಂಡು ಬಂದಿದ್ದ, ಶತಮಾನಗಳವರೆಗೆ  ತಾವು ಕಟ್ಟಿ ಆಳಿದ್ದ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳನ್ನು ಬ್ರಾಹ್ಮಣರು ಕಿತ್ತೆಸೆಯಬೇಕಿತ್ತು. ಹೀಗಿರುವಾಗ ಬ್ರಾಹ್ಮಣರು ಏನು ಮಾಡಿದರು?” 
  
  ಅಂಬೇಡ್ಕರರು ಪ್ರಶ್ನೆ ಹಾಕುತ್ತಾರೆ. ಹಾಗೆಯೇ ಅಂದಿನ ಬೌದ್ಧಧರ್ಮದ ವ್ಯಾಪಕತೆಯನ್ನು ಸಹ ಅವರು ವಿವರಿಸುತ್ತಾರೆ. ಅವರು ಹೇಳುತ್ತಾರೆ “ಹಾಗೆ ಆ ಕಾಲದಲ್ಲಿ ಜನಸಾಮಾನ್ಯರ ಮನಸ್ಸಿಗೆ ತಟ್ಟಿದ್ದ ಬುದ್ಧನ ಮೂರು ಪವಿತ್ರ ಬೋಧನೆಗಳಿದ್ದವು. ಅವುಗಳೆಂದರೆ ಸಾಮಾಜಿಕ ಸಮಾನತೆಯ ಆತನ ಬೋಧನೆ (ತತ್ವ),  ಚಾತುರ್ವರ್ಣಪದ್ಧತಿ ನಿರ್ಮೂಲನೆಗೊಳಿಸುವೆಡೆಗಿನ ಆತನ ಒತ್ತಾಯ, ಅಹಿಂಸೆಯ ಆತನ ಸಿದ್ಧಾಂತ ಅಂದರೆ, ಜನಸಾಮಾನ್ಯರನ್ನು ಬಡತನದ ಸ್ಥಿತಿಗೆ ತಳ್ಳಿದ್ದ ಮತ್ತು ಅವರಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ತಾತ್ಸಾರ ಭಾವ ಉಂಟುಮಾಡಿದ್ದ ಬಲಿಕೊಡುವುದು ಮತ್ತು ಇತರ ಧಾರ್ಮಿಕ ಆಚರಣೆಗಳ ಆತನ ಖಂಡನೆ”. ಅಂದಹಾಗೆ ಅಂಬೇಡ್ಕರರ ಪ್ರಕಾರ “ಬುದ್ಧನ ಕಾಲದ ಬ್ರಾಹ್ಮಣರು ಸಸ್ಯಾಹಾರದಿಂದ ಬಹುದೂರ ಇದ್ದರು. ಹಾಗೆ ದೇವರನ್ನು ತೃಪ್ತಿಪಡಿಸುವ ಭಾವನೆಯಲ್ಲಿ ಸಹಸ್ರಾರು ಪ್ರಾಣಿಗಳನ್ನು ಮತ್ತು ಹಸುಗಳನ್ನು ಅವರು ಬಲಿಕೊಡುತ್ತಿದ್ದರಾದರೂ ಅವರ ನೈಜ ಉದ್ದೇಶ ಮಾಂಸದ ಬಗೆಗಿನ ತಮ್ಮ ವ್ಯಾಮೋಹವನ್ನು ತೃಪ್ತಿಪಡಿಸಿಕೊಳ್ಳುವುದಾಗಿತ್ತು. ಆ ಮೂಲಕ ಅವರು ಯಥೇಚ್ಛ ಮಾಂಸಬಾಕರಾಗಿದ್ದರು”. ಮಾಂಸಾಹಾರದ ಬಗೆಗಿನ ಬ್ರಾಹ್ಮಣರ ವ್ಯಾಮೋಹವನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾರೆ.
  
   ಹಾಗಿದ್ದರೆ ಸಮಾಜದಲ್ಲಿ ಒಂದು ವರ್ಗ ಹೀಗೆ ವಿಪರೀತ ಮಾಂಸ ವ್ಯಸನಿಗಳಾದರೆ ಅದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದಲ್ಲವೆ? ಅಂದರೆ ಹೇಗೆ ಮರಗಳ ಹನನವಾದರೆ ಪರಿಸರ ಹಾಳಾಗುತ್ತದೆಯೋ, ಮಳೆ ಇಲ್ಲವಾಗುತ್ತದೆಯೋ ಹಾಗೆ. ಹೌದು, ಅಂಬೇಡ್ಕರರು ಇದನ್ನು ಕೂಡ ವಿವರಿಸುತ್ತಾರೆ. ಅದೆಂದರೆ “ಬ್ರಾಹ್ಮಣರ ಇಂತಹ ಮಿತಿಮೀರಿದ ಮಾಂಸದ ಬೇಡಿಕೆ ಮತ್ತು ಬಲಿಕೊಡಲು ಅವರು ಹೀಗೆ ಹಸುಗಳನ್ನು ಹುಡುಕುತ್ತಿದ್ದದ್ದು, ಅದನ್ನೇ ಅಂದರೆ ಹಸುಗಳನ್ನೇ ಜೀವನದ ಮುಖ್ಯ ಆಧಾರವಾಗಿಹೊಂದಿದ್ದ, ಪರಿಣಾಮ ಹಾಲು ಮತ್ತು ಅದರ ಉಪಉತ್ಪನ್ನಗಳನ್ನು ಕಳೆದುಕೊಳ್ಳಬೇಕಾಗಿಬಂದ ರೈತರನ್ನು ಬಡವರನ್ನಾಗಿಸಿತು. ಈ ನಿಟ್ಟಿನಲ್ಲಿ ಈ ದಿನಗಳಲ್ಲೂ ಲಭ್ಯವಿರುವ ವೇದಗಳ ಧಾರ್ಮಿಕ ಆಚರಣೆಗಳ ಭೀಕರ ವಿವರಣೆಗಳಲ್ಲಿ ಇಂತಹ ಮಿತಿಮೀರಿದ ರಕ್ತ ಬಲಿ ಆ ಕಾಲದಲ್ಲಿ ಹೇಗೆ ನಡೆಯುತ್ತಿತ್ತು ಮತ್ತು ಅಂತಹ ಬಲಿಯಲ್ಲಿ ಮಾನವೀಯತೆಗೆ ಹೇಗೆ ಕ್ಷೀಣ ಅವಕಾಶವಿತ್ತು ಎಂಬುದರ ಸಾಕ್ಷಿಯನ್ನು ಕಾಣಬಹುದು. ಪರಿಣಾಮ ಈ ಸಂದರ್ಭದಲ್ಲಿ ಇಂತಹ ಪ್ರಾಣಿಬಲಿ ಮತ್ತು ಧಾರ್ಮಿಕ ಆಚರಣೆಗಳನ್ನು ನಿರ್ಮೂಲನೆಗೊಳಿಸುವುದಾಗಿ ಬುದ್ಧ ಬೋಧಿಸುತ್ತಿದ್ದಂತೆ ಜನಸಾಮಾನ್ಯರಿಗೆ ನೈತಿಕವಾಗಿ ಮತ್ತು ಆರ್ಥಿಕ ದೃಷ್ಟಿಯಿಂದಲೂ ಬುದ್ಧನ ಈ ಬೋಧನೆಗಳು ಆಕರ್ಷಣೀಯವೆನಿಸಿದವು. ಅಂತೆಯೇ ಅವರು ಬುದ್ಧನ ಬೋಧನೆಗಳಲ್ಲಿ ಉತ್ಸುಕರಾಗಿ ಅವುಗಳನ್ನು ಅಪ್ಪಿಕೊಂಡರು ಮತ್ತು ಬ್ರಾಹ್ಮಣೀಕೃತ ಬೋಧನೆಗಳನ್ನು ತ್ಯಜಿಸಿದರು.
   
 ಹಾಗಿದ್ದರೆ ಬೌದ್ಧತ್ವದ ಇಂತಹ ನುಗ್ಗಿ ಬರುತ್ತಿದ್ದ ಅಲೆಯಲ್ಲಿ ಬ್ರಾಹ್ಮಣತ್ವ ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡಿತು? ನಿಜ ಹೇಳಬೇಕೆಂದರೆ ಅದು ಹಿಂದುತ್ವದ ಎಲ್ಲ ಆಚರಣೆಗಳು ಮತ್ತು ಬಲಿಗಳನ್ನು ಒಮ್ಮೆಲೆ ಬಿಟ್ಟುಬಿಟ್ಟಿತು! ಹಾಗೆಯೇ ಅಲ್ಲಿಯವರೆಗೆ ಯಾವ ಹಸುವನ್ನು ಕೊಲ್ಲಲಾಗುತ್ತಿತ್ತೋ ಅದನ್ನು ಬುದ್ಧನಿಗೆ ಸವಾಲು ಒಡ್ಡಲು ಅತಿಪವಿತ್ರವೆಂದು ಘೋಷಿಸಲಾಯಿತು! ಹಾಗೆಯೇ ಮಾಂಸ ತಿನ್ನುತ್ತಿದ್ದ ಬ್ರಾಹ್ಮಣ ಇದ್ದಕಿದ್ದ ಹಾಗೆಯೇ ಶುದ್ಧ ಸಸ್ಯಾಹಾರಿಯಾದ! ಮದ್ಯಸೇವನೆ ಕೊನೆಗೊಂಡಿತು! ಹಿಂದುತ್ವ ಧರ್ಮಶುದ್ಧಿಯ ಲೇಪದ ಸೋಗುಹಾಕಿಕೊಂಡಿತು!”

ಕ್ಷತ್ರಿಯರ ಜೊತೆ ಕೈಜೋಡಿಸಿದ್ದು!

   ಅಂದಹಾಗೆ ಈ ಸಂದರ್ಭದಲ್ಲಿ ಕ್ಷತ್ರಿಯರು ಬೌದ್ಧತ್ವದೆಡೆಗೆ ಚಲಿಸುವುದನ್ನು ತಡೆಯಲು ಬ್ರಾಹ್ಮಣರು ಅವರಿಗೆ ತಮ್ಮೊಡನೆ ಸಮಾನತೆಯನ್ನು ಕಲ್ಪಿಸುವ ಆಹ್ವಾನವಿತ್ತರು!  ಈ ದಿಸೆಯಲ್ಲಿ ಅಂಬೇಡ್ಕರರು ಇತರ ಆಕರ ಗ್ರಂಥಗಳ ಆಧಾರವಲ್ಲದೆ, ಧಾರ್ಮಿಕ ಕೃತಿಯೊಂದರಲ್ಲಿ ಒಂದು ನಿರ್ದಿಷ್ಟ ಶ್ಲೋಕವಿದೆ ಎಂದು ಶ್ಲೋಕವೊಂದರತ್ತ ತಮ್ಮ ಗಮನಸೆಳೆಯುತ್ತಾರೆ. ಹಾಗೆ ಅಂಬೇಡ್ಕರರು ಉಲ್ಲೇಖಿಸಿದ ಆ ಶ್ಲೋಕದಲ್ಲಿ ಹೇಳಿರುವುದೇನೆಂದರೆ, ಹೇಗೆ ಖೈದಿಯೊಬ್ಬನು ತಪ್ಪಿಸಿಕೊಳ್ಳುವುದನ್ನು ತಡೆಯಲು ಪೊಲೀಸರಿಬ್ಬರು ಕಾವಲು ಕಾಯುತ್ತಾರೋ ಹಾಗೆ ವೈಶ್ಯರು ಮತ್ತು ಶೂದ್ರರು ತಮ್ಮ ಕೈಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಬ್ರಾಹ್ಮಣರು ಮತ್ತು ಕ್ಷತ್ರಿಯರು ಪರಸ್ಪರ ಕೈಜೋಡಿಸಿದರು ಎಂದು!

ಹಸು ಪವಿತ್ರಗೊಂಡ ಬಗೆ:

      ಹಸುವನ್ನು ಪವಿತ್ರ ಎಂದು ಘೋಷಿಸಿದ್ದರಿಂದ ಬಲಿಕೊಡುವ ಧಾರ್ಮಿಕ ಆಚರಣೆಗಳು ಕೊನೆಗೊಂಡವು ಮತ್ತು ಬೌದ್ಧಧರ್ಮದ ಅನೇಕ ಬೋಧನೆಗಳನ್ನು ಹಿಂದೂಧರ್ಮದೊಳಕ್ಕೆ ತುರುಕಲಾಯಿತು. ಪರಿಣಾಮ ಬೌದ್ಧ ಧರ್ಮದ ಕಡೆ ಯಾವ ಜನ ಹೋಗಿದ್ದರೋ ಅದೇ ಜನರನ್ನು ನಿಧಾನವಾಗಿ ವಾಪಸ್ ಸೆಳೆಯಲಾಯಿತು. ಅಂದಹಾಗೆ ಈ ಸಂದರ್ಭದಲ್ಲಿ ಬ್ರಾಹ್ಮಣರು ಒಪ್ಪದ (ಬೌದ್ಧ ಧರ್ಮದಲ್ಲಿದ್ದ) ಒಂದು ಬೋಧನೆಯೆಂದರೆ ಸಮಾನತೆಯ ಸಿದ್ಧಾಂತ ಮತ್ತು ಚಾತುರ್ವರ್ಣ ಜಾತಿವ್ಯವಸ್ಥೆಯನ್ನು ನಿರ್ಮೂಲಗೊಳಿಸುವುದು. ಅದಕ್ಕಾಗಿ ಬ್ರಾಹ್ಮಣರು ಈ ಸಮಯದಲ್ಲಿ ಒಂದು ಕೆಲಸ ಮಾಡಿದರು. ಅದೆಂದರೆ ತಾತ್ಕಾಲಿಕವಾಗಿ ಅವರು ಕ್ಷತ್ರಿಯರನ್ನು ತಮ್ಮಷ್ಟೆ ಮಟ್ಟಕ್ಕೇ ತಂದು ನಿಲ್ಲಿಸಿದ್ದು(ಆ ಮೂಲಕ ಚಾತುರ್ವರ್ಣದಲ್ಲಿ ಸ್ವಲ್ಪ ಸಮಾನತೆಯಾಗಿದೆ ಎಂದು ಬಿಂಬಿಸಲು!).  ಹಾಗೆಯೇ ಬ್ರಾಹ್ಮಣ ಜನ್ಮ ಮೂಲದ ದೇವರುಗಳನ್ನು ತಳಮಟ್ಟಕ್ಕೆ ಇಳಿಸಿ ನೇಪಥ್ಯಕ್ಕೆ ಸರಿಸಿದ ಅವರು ಅದರ ಜಾಗದಲ್ಲಿ ಕ್ಷತ್ರಿಯ ದೇವರುಗಳನ್ನು ಪ್ರತಿಷ್ಠಾಪಿಸಿದರು. ತನ್ಮೂಲಕ ಅನೇಕ ಸಮಯಸಾಧಕ ಹೊಂದಾಣಿಕೆಗಳನ್ನು (ಬ್ರಾಹ್ಮಣರು) ಮಾಡಿಕೊಂಡರು”.
 
 ಅಂಬೇಡ್ಕರ್ ಹೀಗೆ ಬುದ್ಧನ ಕಾಲದಲ್ಲಿ ಬ್ರಾಹ್ಮಣತ್ವ ಪಡೆದುಕೊಂಡ ರೂಪಾಂತರವನ್ನು ವಿವರಿಸುತ್ತಾರೆ.

ಅನಿರೀಕ್ಷಿತ ಬೆಳವಣಿಗೆ:

     ಅಂದಹಾಗೆ ಹೀಗೆ ಹೊಂದಾಣಿಕೆಮಾಡಿಕೊಳ್ಳುವ ಮತ್ತು ಸಂಧಾನಮಾಡಿಕೊಳ್ಳುವ ಬ್ರಾಹ್ಮಣತ್ವದ ಇಂತಹ ಅತೀ ಅನಿರೀಕ್ಷಿತ ಕಾರ್ಯಾಚರಣೆಯ ಪ್ರಕ್ರಿಯೆಯ ಬೆಳವಣಿಗೆ ತೀವ್ರವಾಗಿ ಬುದ್ಧನಿಗೆ ವ್ಯತಿರಿಕ್ತವಾಗಿ ನಡೆಯಿತು. ಯಾಕೆಂದರೆ ಬುದ್ಧ ದನಗಳನ್ನು ಬಲಿಕೊಡುವುದನ್ನು ನಿಲ್ಲಿಸಿದ. ಆದರೆ(ತಾವು ಬಲಿ ಕೊಡುತ್ತಿದ್ದ) ಅದೇ ಪ್ರಾಣಿಯನ್ನು (ದನವನ್ನು) ಬ್ರಾಹ್ಮಣರು ಪಾವಿತ್ರ್ಯತೆಯ ಮಟ್ಟಕ್ಕೆ ಏರಿಸಿದರು! ( ಆ ಮೂಲಕ ಬುದ್ಧನ ತತ್ವವನ್ನೇ ಹೈಜಾಕ್ ಮಾಡಿದರು!) ಪರಿಣಾಮ ಹಿಂದೂ ಸಮಾಜ ಇಂತಹ ಪಾವಿತ್ರೀಕರಣವನ್ನು ಸಹಜವಾಗಿ ಒಪ್ಪಿಕೊಂಡಿತು ಮತ್ತು ದನಗಳನ್ನು ಕೊಲ್ಲುವುದನ್ನು ನಿಲ್ಲಿಸಿತು.  ಹಾಗೆಯೇ ಆಗಿನ ಕಾಲದ ಅಸ್ಪøಶ್ಯರು ಕೂಡ ಅದನ್ನೇ ಮಾಡಿದರು (ಅಂದರೆ ಹಸು ಕೊಲ್ಲುವುದನ್ನು ನಿಲ್ಲಿಸಿದರು). ಆದರೆ ತೀರಾ ಬಡವರಾಗಿದ್ದ ಅಸ್ಪøಶ್ಯರು (ಪ್ರಾರಂಭದಲ್ಲೇ ಅಂಬೇಡ್ಕರ್ ಹೇಳಿದ ಗ್ರಾಮದ ಸೇವಕರು) ತಮಗೆ ತಿನ್ನಲಿಕ್ಕೆ ಎಲ್ಲಾ ಕಾಲದಲ್ಲೂ ತಾಜಾ ಮಾಂಸ ಅಥವಾ beef(ದನದ ಮಾಂಸ) ಸಿಗದೇ (ಯಾಕೆಂದರೆ ಹಸು ಕೊಲ್ಲುವುದನ್ನು ನಿಲ್ಲಿಸಲಾಗಿತ್ತಲ್ಲ!) ತಮ್ಮ ಹಳೆಯ ಪದ್ಧತಿಯಾದ ಸತ್ತ ದನಗಳ ಶರೀರದ ಮಾಂಸವನ್ನು ತಿನ್ನುವುದನ್ನು ಮುಂದುವರಿಸಿದರು. ಹ್ಞಾಂ, ಬುದ್ಧನಾಗಲೀ, ಬ್ರಾಹ್ಮಣರಾಗಲೀ ಸತ್ತದನದ ಮಾಂಸವನ್ನು ತಿನ್ನುವುದನ್ನು ನಿಷೇಧಿಸಿರಲಿಲ್ಲ. ಈ ನಿಟ್ಟಿನಲ್ಲಿ ಅಂತಹ ನಿಷೇಧ ಇದ್ದದ್ದು ಜೀವಂತ ದನಗಳನ್ನು ಕತ್ತರಿಸುವುದಕ್ಕೆ ಮಾತ್ರ. ಆದರೆ ಆ ಕಾಲದ ಅಸ್ಪøಶ್ಯರು ಒಂದು ಅಪರಾಧ ಮಾಡಿದರು. ಅದೆಂದರೆ ಬಡವರಲ್ಲೂ ಅತೀ ಬಡವರಾಗಿದ್ದ ಮತ್ತು ಸಾಮಾಜಿಕ ಶ್ರೇಣಿಯ ತಳಬಾಗದಲ್ಲಿದ್ದ ಅವರು (ಬ್ರಾಹ್ಮಣರ ಹಿಂದೂ ಧರ್ಮಕ್ಕೆ ತಕ್ಷಣ ಸೇರದೆ) ಬಹುದೀರ್ಘ ಕಾಲದವರೆಗೆ ಬೌದ್ಧಧರ್ಮಕ್ಕೇ ಅಂಟಿಕೊಂಡರು. ಅಂದಹಾಗೆ ಅವರನ್ನು (ಅಸ್ಪøಶ್ಯರನ್ನು) (ಬೌದ್ಧಧರ್ಮದಿಂದ) ವಾಪಸ್ ಹಿಂದೂಧರ್ಮಕ್ಕೆ ಕರೆತರಲು ಅವರ ಮೇಲೆ ದೀರ್ಘಕಾಲದವರೆಗೆ ಒಂದು ಬೃಹತ್ ಬಲವನ್ನು ಪ್ರಯೋಗಿಸಲಾಯಿತು. ಅವ್ಯಾವುದೂ ಕೆಲಸಕ್ಕೆ ಬಾರದಿದ್ದಾಗ ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು ಮತ್ತು ‘ಅಸ್ಪøಶ್ಯತೆ’ಯನ್ನು ಹೇರಲಾಯಿತು!
   
  (ಅಸ್ಪøಶ್ಯತೆ ಹೇಗೆ ಹುಟ್ಟಿತು ಎಂಬುದು ಅರ್ಥವಾಯಿತೇ?) ಹಾಗಿದ್ದರೆ ಅಷ್ಟೇ ಸಾಕು. ಮುಂದೆ ಕಡೆಯದಾಗಿ ಅಂಬೇಡ್ಕರರು ಹೇಳುವುದ ಕೇಳಿ. “ಹೀಗೆ ಸತ್ತ ಹಸುವನ್ನು ತಿನ್ನುವ ಅವರ (ಅಸ್ಪøಶ್ಯರ) ಅಭ್ಯಾಸವನ್ನೇ ಅವರ ವಿರುದ್ಧ ಶೋಷಣೆಯ ಅಸ್ತ್ರವನ್ನಾಗಿಸಲಾಯಿತು. ಒಂದರ್ಥದಲ್ಲಿ ಈ ಅಭ್ಯಾಸ (ಸತ್ತ ಹಸು ತಿನ್ನುವುದು) ಹಿಂದೂ ಮನಸ್ಸುಗಳನ್ನು ಸ್ವಾಭಾವಿಕವಾಗಿ ಅಸ್ಪøಶ್ಯರಿಂದ ವಿಕರ್ಷಿಸಿತು. ಒಟ್ಟಾರೆ ಈ ಸ್ಥಿತಿ (ಸಾಮಾಜಿಕ) ಅಸಹ್ಯಕರವಾಗಿತ್ತು. ಪರಿಣಾಮ ಯಾವುದೇ ಕಷ್ಟವಿಲ್ಲದೆ ಈ ಪರಿಸ್ಥಿತಿಯನ್ನು ಬ್ರಾಹ್ಮಣರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಹಾಗೆ ಆ ಇಡೀ ಸಂಪೂರ್ಣ ವರ್ಗದ ಮೇಲೆ ಅಸ್ಪøಶ್ಯತೆಯನ್ನು ಹೇರಿದರು. ನಿಜಹೇಳಬೇಕೆಂದರೆ ಬೇರೆ ಎಲ್ಲರು ಬಿಟ್ಟರೂ ಇವರು (ಅಸ್ಪøಶ್ಯರು) ಮಾತ್ರ ಬೌದ್ಧಧರ್ಮಕ್ಕೆ ಅಂಟಿಕೊಂಡಿದ್ದಕ್ಕೆ ವಿಧಿಸಿದ ಶಿಕ್ಷೆ ಇದು. ಪರಿಣಾಮ ಸಾಮಾಜಿಕ ಸಮಾನತೆ ಮತ್ತು ಸ್ವಾತಂತ್ರ್ಯದ ಈ ಆಧುನಿಕ ಚಿಂತನೆಯಿದ್ದರೂ ಮತ್ತು ಶಿಕ್ಷಣ ಪಡೆದಿದ್ದರೂ ಇಂದಿಗೂ ಕೂಡ ಅಸ್ಪøಶ್ಯತೆ ನಿರಂತರವಾಗಿದೆ.....”
   
   ಅಂಬೇಡ್ಕರ್ ನಿಲ್ಲಿಸುತ್ತಾರೆ. ಆದರೆ ಅಸ್ಪøಶ್ಯತೆಯ ಆ ನಿರಂತರತೆ......?  




Saturday, 12 July 2014

'ಹರಿಜನ' ಎಂಬ ನಾಮಕರಣದ ಸುತ್ತ ಒಂದಷ್ಟು...

                             

-ರಘೋತ್ತಮ ಹೊ.ಬ.


    ಈ ದೇಶದಲ್ಲಿ ಎಂತೆಂತಹ ವ್ಯಂಗ್ಯಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಜನಾಂಗವೊಂದಕ್ಕೆ ಹೊಸ ಹೆಸರಿಡುವ ವ್ಯಂಗ್ಯವೂ ಕೂಡ ನಡೆದಿದೆ. ಒಂದರ್ಥದಲ್ಲಿ ಅದನ್ನು ದುರಂತವೆನ್ನಬಹುದು. ಯಾಕೆಂದರೆ ಯಾವವೊಂದು ಸಮುದಾಯವನ್ನು ತಾವು ಕೀಳು, ಹೊಲಸು ಎಂದು ಮತ್ತೊಂದು ಸಮುದಾಯ ಭಾವಿಸಿತ್ತೋ ಅಂತಹ ಶತೃ ಸಮುದಾಯ ತನ್ನ ಅಧೀನ ಸಮುದಾಯಕ್ಕೆ ಇಟ್ಟ ಹೆಸರದು. ಅಂದಹಾಗೆ ಅಧೀನ ಸಮುದಾಯವಾಗಿರುವ ಆ ಅಸ್ಪøಶ್ಯ ಸಮುದಾಯವೇನೂ ತನಗೆ ಹೊಸ ಹೆಸರು ನೀಡಿ ಎಂದು ತನ್ನ ವಿರುದ್ಧ ತೊಡೆ ತಟ್ಟಿದ್ದ ಆ ಪಟ್ಟಭದ್ರ ಸಮುದಾಯವನ್ನು ಗೋಗರೆದಿರಲಿಲ್ಲ ಅಥವಾ ಅರ್ಜಿ ಗುಜರಾಯಿಸಿರಲಿಲ್ಲ. ಆದರೆ ಅಂಥಹದ್ದೊಂದು ನಾಮಕರಣ ಶಾಸ್ತ್ರ ನಡೆದುಹೋಯಿತು. ಅದು ಅಂತಿಂಥ ನಾಮಕರಣ ಶಾಸ್ತ್ರವಲ್ಲ. ಒಂದು ಬೃಹತ್ ಸಮುದಾಯಕ್ಕೆ ಅದರ ಸ್ಥಿತಿಗತಿಗಳನ್ನು, ಅದರ ವೇಶಭೂಷಣವನ್ನು, ಅದರ ರೂಪ ಕುರೂಪವನ್ನು ನೋಡಿ ಇಟ್ಟ ಹೆಸರದು. ನಮ್ಮ ಕಡೆ ಮಗು ಕಪ್ಪಗಿದ್ದರೆ ಕರಗಯ್ಯ ಎಂದು, ಕೆಂಪಗಿದ್ದರೆ ಕೆಂಪಯ್ಯ ಎಂದು, ಕಾಡು ಮನುಷ್ಯನ ಥರ ಇದ್ದರೆ ಕಾಡಯ್ಯ ಎಂದು (ಸಧ್ಯಕ್ಕೆ, ಆ ಟ್ರೆಂಡ್ ಇಲ್ಲ ಬಿಡಿ!) ಇಡುತ್ತಾರಲ್ಲ ಹಾಗೆ. ಅಸ್ಪøಶ್ಯರ ದಯನೀಯ ಪರಿಸ್ಥಿತಿಯನ್ನು, ವೇಶಭೂಷಣವನ್ನು, ಆಚಾರ-ವಿಚಾರವನ್ನು ನೋಡಿ ಇಟ್ಟ ಹೆಸರದು. ಅಂದಹಾಗೆ ಅಸ್ಪøಶ್ಯರಿಗೆ ಇಡಲಾದ ಆ ಹೆಸರು ‘ಹರಿಜನ’ ಎಂದು!
 
   ಹೆಸರು ಇಡುವುದು ಎಂದ ಮೇಲೆ ಪುರೋಹಿತರೊಬ್ಬರು ಇರಲೇಬೇಕಲ್ಲವೇ? ಹೌದು, ಅಸ್ಪøಶ್ಯರಿಗೆ ಹರಿಜನ ಎಂದು ಹೆಸರಿಡಲಾದ ಆ ನಾಮಕರಣ ಶಾಸ್ತ್ರದ ಪೌರೋಹಿತ್ಯವನ್ನು ವಹಿಸಿದವರು ಸಾಕ್ಷಾತ್ ಮೋಹನದಾಸ್ ಕರಮಚಂದ ಗಾಂಧೀಜಿಯವರು. ಈ ದೇಶವಾಸಿಗಳಿಂದ ಗೌರವದಿಂದ ‘ಮಹಾತ್ಮ’ ಎಂದು ಕರೆಸಿಕೊಳ್ಳುವ ಬಾಪೂಜಿಯವರು.

   ಹಿನ್ನೆಲೆ: ಇರಲಿ, ಮೊದಲಿಗೆ ಅಸ್ಪøಶ್ಯ ಎಂಬ ಆ ಬೃಹತ್ ಜನಸಮುದಾಯವನ್ನು ಏಕೆ ಹರಿಜನ ಎಂದು ನಾಮಾಂಕಿತಗೊಳಿಸಲಾಯಿತು, ಅದರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳುವ. ಅಸ್ಪøಶ್ಯರು ಅವರಿಗೆ ಹರಿಜನ ಎಂಬ ಆ ಹೆಸರಿಡಲಾದದ್ದು 1937ರ ನಂತರ. ತಮಾಷೆಯೆಂದರೆ exact date ಗೊತ್ತಿಲ್ಲ! ಯಾಕೆಂದರೆ ಅಸ್ಪøಶ್ಯರು ಸಾಮಾನ್ಯ ಅನಕ್ಷರಸ್ಥರು ತಾನೆ! ಹುಟ್ಟಿದ್ದು ಯಾವಾಗ ಎಂದು ಕೇಳಿದರೆ “ಅದೇ ಅವತ್ತು ಅಮಾಸೆ ಸ್ವಾಮಿ. ದೀಪಾವಳಿ ಹಬ್ಬದ ಮಾರನೆ ದಿನ ಎಂದು ಹೇಳುತ್ತಾರೆ. ಹಾಗೆಯೇ ಆ ಮಗುವಿನ  date ಬರೆದುಕೊಳ್ಳುವ ಮೇಸ್ಟರು ಒಂದು ಅಂದಾಜು ದಿನ ದಾಖಲಿಸಿಕೊಳ್ಳುತ್ತಾರೆ”! ಹೀಗೆಯೇ ಅಸ್ಪøಶ್ಯರಿಗೆ ಹರಿಜನ ಎಂದು ದಾಖಲಿಸಿದ ಆ ಸಮಯ 1932 ಡಿಸೆಂಬರ್ ತಿಂಗಳ ಆಸುಪಾಸು. ಅರೆ, ಇದೇನಿದು? 1932 ಎಂದು ಒಂದು ಇಸವಿ ಮತ್ತೆ ಮತ್ತೆ ಕೇಳಿಬರುತ್ತಿದೆಯಲ್ಲಾ ಎಂದು ಹಲವರಿಗಾದರೂ ಅನ್ನಿಸಬಹುದು.

   ಹೌದು, ಅದು ನಿಜ ಅದೆಂದರೆ ಈ ದೇಶದ ಅಸ್ಪøಶ್ಯರಿಗೂ 1932ನೇ ಇಸವಿಗೂ ಒಂದು ಅವಿನಾಭಾವ ಸಂಬಂಧ. ಏಕೆಂದರೆ 1932ರ ಈ ಇಸವಿಯಲ್ಲಿಯೇ ಕುಪ್ರಸಿದ್ಧ ಪೂನಾ ಒಪ್ಪಂದ ಜರುಗಿದ್ದು ಮತ್ತು ಅಂತಹ ಒಪ್ಪಂದದ ಮೂಲಕ ಅಸ್ಪøಶ್ಯರನ್ನು ಶಾಶ್ವತ ಗುಲಾಮಗಿರಿಗೆ ತಳ್ಳಿದ್ದು. ಅಂದಹಾಗೆ ಅಂಥಹ ಗುಲಾಮಗಿರಿಗೆ ತಳ್ಳುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದವರು again ಮತ್ತದೇ ಮಹಾತ್ಮಗಾಂಧೀಜಿಯವರು!
 
   ಗುಲಾಮಗಿರಿಗೆ ಎಂದಾಕ್ಷಣ ಯಾವುದರ ಗುಲಾಮಗಿರಿಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೌದು, ಅಸ್ಪøಶ್ಯರನ್ನು ಕಾಂಗ್ರೆಸ್‍ನ ಮತ್ತು ಹಿಂದೂಗಳ ಶಾಶ್ವತ ಗುಲಾಮಗಿರಿಗೆ ತಳ್ಳಲು ಗಾಂಧೀಜಿಯವರು ‘ಹರಿಜನ’ ಎಂಬ ಈ ಪದವನ್ನು ಹುಟ್ಟುಹಾಕಿದರು. ಯಾಕೆಂದರೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಮಹಾತ್ಮರಿಗೆ ಅಂಬೇಡ್ಕರರ ನಿಜ ಸಾಮಥ್ರ್ಯ ಗೊತ್ತಾಗಿತ್ತು ಮತ್ತು ಹಾಗೆಯೇ ಅಂಬೇಡ್ಕರರು ಬಳಸುತ್ತಿದ್ದ “ಶೋಷಿತವರ್ಗಗಳು (depressed classes)” ಎಂಬ ಪದ ಈ ದೇಶದ ಅಸ್ಪøಶ್ಯರನ್ನು ಒಟ್ಟಿಗೇ ಅಂಬೇಡ್ಕರರ ಜೊತೆ ಕೊಂಡೊಯ್ಯುತ್ತಿದ್ದುದು ಮತ್ತೆ ಹಾಗೆ ಕರೆಯಲ್ಪಟ್ಟಿದ್ದೇ ಆದರೆ ಶೋಷಿತ ವರ್ಗಗಳು ಎಂಬ ಆ ವರ್ಗಗಳು ಇನ್ನೆಂದಿಗೂ ಕಾಂಗ್ರೆಸ್‍ನ ತೆಕ್ಕೆಗೆ ಬರುವುದು ಸಾಧ್ಯವಿಲ್ಲ, ಹಿಂದೂ ಧರ್ಮದಲ್ಲಿಯೂ ಉಳಿಯುವುದಿಲ್ಲ ಎಂಬುದು ಗಾಂಧೀಜಿಯವರ ಅರಿವಿಗೆ ಬಂದಿತ್ತು. ಸಾಲದ್ದಕ್ಕೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಸ್ಪøಶ್ಯರ ವಿರುದ್ಧ ಆ ಪರಿ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಸ್ವತಃ ಮಹಾತ್ಮಗಾಂಧೀಜಿಯವರಿಗೂ ಪಾಪಪ್ರಜ್ಞೆ ಕಾಡಿರಬೇಕು! ಅಥವಾ ತನ್ನ  original ಬಣ್ಣ ಬಯಲಾಯಿತಲ್ಲಾ ಎಂಬ ಅಳುಕು ಮತ್ತು ಅಂಥಹ ಬಣ್ಣವನ್ನು ಮತ್ತೆ ಹಚ್ಚುವ ಪ್ರಯತ್ನವಾಗಿಯೂ ಅವರು ಕಂಡುಕೊಂಡ ಆ ಪದ ‘ಹರಿಜನ’ ಮತ್ತು ಅದರ ಹೆಸರಿನಲ್ಲಿಯ  ಸಂಘ ಹಾಗೂ ಆ ಹೆಸರಿನ ಉದ್ಧಾರ ಅರ್ಥಾತ್ ಹರಿಜನೋದ್ಧಾರ!
 
   ಈ ನಿಟ್ಟಿನಲಿ ಹರಿಜನ ಎಂದು ನಾಮಾಂಕಿತವಾದಾಕ್ಷಣ ಆ ಸಂದರ್ಭದಲ್ಲಿಯೇ ಇದ್ದ ಅಂಬೇಡ್ಕರರು ತಮ್ಮ ಅಭಿಪ್ರಾಯವನ್ನು ಹೇಳಿಯೇ ಹೇಳಿರುತ್ತಾರಲ್ಲವೆ? ಹೌದು, ಗಾಂಧೀಜಿ ‘ಹರಿಜನ’ ಎಂದರೆ ಅಸ್ಪøಶ್ಯರು ‘ದೇವರ ಮಕ್ಕಳು’ ಎಂದಾಕ್ಷಣ ಅಂಬೇಡ್ಕರರು ಹಾಗಿದ್ದರೆ ನೀವು ‘ದೆವ್ವದ ಮಕ್ಕಳಾ?’ ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಹಾಗೆಯೇ ಆ ಹೆಸರಿನ ತಲಸ್ಪರ್ಶಿ ವಿಮರ್ಶೆಗೆ ತೊಡಗುವ ಅವರು ತಮ್ಮ ‘ಅಸ್ಪøಶ್ಯರು ಯಾರು?’ ಎಂಬ ಕೃತಿಯಲ್ಲಿ ಅದನ್ನು ದಾಖಲಿಸುತ್ತಾರೆ. ಅಂಬೇಡ್ಕರರ ವಿವರಣೆ ಇಂತಿದೆ:
   
  “ಗಾಂಧೀಜಿ  ಶೋಷಿತವರ್ಗಗಳನ್ನು ಅಸ್ಪøಶ್ಯರು ಎನ್ನುವ ಬದಲಾಗಿ ‘ಹರಿಜನ’ ಎಂದರು. ಸ್ವಜಾತಿ ಪ್ರೇಮಿಗಳಾಗಿದ್ದರಿಂದ ಗಾಂಧೀಜಿ ವೈಷ್ಣವಧರ್ಮ ಪ್ರಚಾರಕ್ಕೆ ಹರಿಜನ ಎಂದು ಹೆಸರಿಟ್ಟರು. ಹಾಗೆ ಹೇಳುವುದಾದರೆ ಅಸ್ಪøಶ್ಯರಿಗೆ ‘ಹರಿಜನ’ ಎಂಬ ಆ ಪದ ಕಂಡರಾಗದು. ಅದರ ವಿರುದ್ಧ ಅನೇಕರು ದನಿ ಎತ್ತಿದ್ದಾರೆ. ‘ಹರಿಜನ’ ಎನ್ನುವ ಆ ಹೆಸರು ದಯೆ ಅನುಕಂಪ ಸೂಚಿಸುವಂಥಾದ್ದು. ಯಹೂದಿಯರು ತಮ್ಮನ್ನು “ದೇವರಿಂದ ಆರಿಸಲಾದ್ದ ಜನ” ಎಂದು ಕರೆದುಕೊಳ್ಳುವ ಹಾಗೆ ‘ಹರಿಜನ’ ಎಂಬ ಆ ಶಬ್ಧವು ಅರ್ಥ ಪಡೆದಿದ್ದರೆ  ಅದು ಬೇರೆಯೇ ವಿಷಯವಾಗುತ್ತಿತ್ತು. ಆದರೆ ದೇವರ ಮಕ್ಕಳು ಎಂದು ಕರೆಯಿಸಿಕೊಂಡು ತಮ್ಮ ಅಸಹಾಯಕತೆ, ಪರಾವಲಂಬನೆಯನ್ನು ತೋರಿಸಿ ತಮ್ಮನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುವವರಿಂದ ಅನುಕಂಪ ಬೇಡಿದಂತಾಗುತ್ತದೆ ‘ಹರಿಜನ’ ಎಂಬ ಆ ಪದ. ಸಾಲದಕ್ಕೆ ಅಸ್ಪøಶ್ಯ ಗಣ್ಯರೆಲ್ಲರೂ ಈ ಹೆಸರಿನಲ್ಲಿ ಸೂಚಿತವಾಗಿರುವ ‘ಅವಮಾನಕರ ಅರ್ಥ’ಗಳನ್ನು ವಿರೋಧಿಸಿದ್ದಾರೆ. ಈ ನಿಟ್ಟಿನಲಿ ಈ ಹೊಸ ಹೆಸರಿನ ಬಗ್ಗೆ ಅಸ್ಪøಶ್ಯರಿಗೆ ಅದೆಷ್ಟು ವಿರೋಧವಿದೆಯೆಂದರೆ ಮುಂಬಯಿ ಶಾಸಕಾಂಗ ಸಭೆಯಲ್ಲಿ ‘ಹರಿಜನ’ ಎಂಬ ಆ ಪದಕ್ಕೆ ಕಾನೂನಿನ ಸಮರ್ಥನೆ ನೀಡಲು ಕಾಂಗ್ರೆಸ್ ಸರ್ಕಾರ ಮಸೂದೆ ಮಂಡಿಸಿದಾಗ ಎಲ್ಲಾ ಅಸ್ಪøಶ್ಯ ಸದಸ್ಯರು ಪಕ್ಷ ಭೇದ ಮರೆತು ಸಭಾತ್ಯಾಗ ಮಾಡಿ ವಿರೋಧ ಸೂಚಿಸಿದರು! ಗಾಂಧೀಜಿಯವರ ಹಾಗೂ ಅವರೇ ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರ ಪತನವಾಗುವವರೆಗೂ ‘ಹರಿಜನ’ ಎನ್ನುವ ಆ ಹೆಸರು ಹೋಗುವುದಿಲ್ಲ. ಈ ಹೆಸರನ್ನು ಗಾಂಧೀಜಿಯವರೇ ಅಸ್ಪøಶ್ಯರ ಮೇಲೆ ಹೇರಿದ್ದು ಮತ್ತು ಈ ಹೆಸರಿನಿಂದ ಅಸ್ಪøಶ್ಯರಿಗೆ ಒಳ್ಳೆಯದೇನು ಆಗಿಲ್ಲ ಎಂಬ ಬಗ್ಗೆ ಎರಡು ಮಾತಿಲ್ಲ”.”
 
   ಆಶ್ಚರ್ಯ! ಅಂಬೇಡ್ಕರರ ವಿವರಣೆ. ಯಾಕೆಂದರೆ ಒಬ್ಬ ಏಕಾಂಗಿ ವ್ಯಕ್ತಿಯಾಗಿ, ಶಕ್ತಿಯಾಗಿ ಗಾಂಧೀಜಿ ಮತ್ತು ಕಾಂಗ್ರೆಸ್ ಎಂಬ ಬೃಹತ್ ಶಕ್ತಿಗಳು ‘ಹರಿಜನ’ ಎಂಬ ಖೆಡ್ಡಾಕ್ಕೆ ಅಸ್ಪøಶ್ಯರನ್ನು ತಳ್ಳುತ್ತಿರುವುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟುಹೋಗಿದ್ದಾರೆ. ಹಾಗೆಯೇ ಆ ಬೃಹತ್ ಶಕ್ತಿಗಳು ಪತÀನವಾಗುವವರೆಗೆ ಆ ಹೆಸರು ಹೋಗುವುದಿಲ್ಲ ಎಂಬ ಗಂಭೀರ ಎಚ್ಚರಿಕೆಯನ್ನೂ ಸಹ ಅವರು ನೀಡಿದ್ದಾರೆ!
   
   ಅಂದಹಾಗೆ ಅಂಬೇಡ್ಕರರ ಆ ವಿವರಣೆಯಲ್ಲಿ  “ಗಾಂಧೀಜಿಯವರು  ಸ್ವಜಾತಿ ಪ್ರೇಮಿಯಾಗಿದ್ದರಿಂದ ವೈಷ್ಣವ ಧರ್ಮದ ಪ್ರಚಾರಕ್ಕೆ ‘ಹರಿಜನ’ಎಂಬ ಹೆಸರಿಟ್ಟರು” ಎಂದಿದ್ದಾರೆ. ಆಶ್ಚರ್ಯವೆಂದರೆ ನಮ್ಮ ಪೇಜಾವರಶ್ರೀಗಳೂ ಕೂಡ ಅಸ್ಪøಶ್ಯರಿಗೆ ವೈಷ್ಣವದೀಕ್ಷೆ ನೀಡುತ್ತಿದ್ದಾರೆ. ಸಂಘಪರಿವಾರದ ಆ ಸ್ವಾಮೀಜಿ ಅದಕ್ಕೆ ಪ್ರೇರಣೆಯನ್ನು ಗಾಂಧೀಜಿಯಿಂದ ಪಡೆದರೆ? ಅಥವಾ ಗಾಂಧೀಜಿ ಎಲ್ಲಾ ಹಿಂದೂ ಪರಿವಾರಗಳ ಮೂಲ ಗುರುವೇ? ಕಾಲವೇ ಉತ್ತರಿಸಬೇಕು! ಮತ್ತೊಂದು ಅಂಬೇಡ್ಕರರ ವಿವರಣೆಯಲ್ಲಿ ಕಂಡುಬರುವುದು. ಅದೆಂದರೆ, ಗಾಂಧೀಜಿ ‘ಹರಿಜನ’ ಎಂದರೆ “ದೇವರ ಮಕ್ಕಳು” ಎಂದು ವಿವರಣೆ ನೀಡಿದ್ದಾರೆ ಎಂಬುದಕ್ಕೆ. ‘ದೇವದಾಸಿ ಪದ್ಧತಿ’ ಎಲ್ಲರಿಗೂ ತಿಳಿದದ್ದೆ. ಅದರಲ್ಲೂ ದೇವದಾಸಿಗಳಾಗುವವರು? ಬಹುತೇಕ ದಲಿತ ಹೆಣ್ಣುಮಕ್ಕಳು. ಆ ದೇವದಾಸಿ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳು? ದೇವರ ಮಕ್ಕಳು! ಹಾಗಿದ್ದರೆ ‘ದೇವರ ಮಕ್ಕಳು’ ಅರ್ಥಾತ್ ‘ಹರಿಜನ’ರೆಂದರೆ ‘ಸೂ... ಮಕ್ಕಳು’”ಎಂದರ್ಥ! ಖಂಡಿತ, ಅಸ್ಪøಶ್ಯರು ‘ಹರಿಜನ’ ಎಂಬ ಆ ಪದಕ್ಕೆ ಉಗ್ರ ವಿರೋಧ, ಆಕ್ರೋಶ ವ್ಯಕ್ತಪಡಿಸುವುದು ಈ ಕಾರಣಕ್ಕೆ.
   
   ಅದೇನೇ ಇರಲಿ ಶತಶತಮಾನಗಳಿಂದ ಶೋಷಣೆ ಅನುಭವಿಸಿದವರನ್ನು, ಅಕ್ಷರ ಕಾಣದವರನ್ನು “ಆ ಗುಂಪಿನಲ್ಲಿ ಅಕ್ಷರ ಕಂಡ ಒಬ್ಬನಿಂದ” ತಪ್ಪಿಸಲು, ವಿಮೋಚನೆಗೊಳ್ಳುವುದನ್ನು ತಡೆಯಲು ಗಾಂಧೀಜಿ ಮತ್ತು ಕಾಂಗ್ರೆಸಿಗರು ಒಟ್ಟಾರೆ ಹಿಂದೂಗಳು ರೂಪಿಸಿದ ಆ ಪದವೇ ಹರಿಜನ. ಈ ನಿಟ್ಟಿನಲಿ ಹಿಂದೂಗಳಿಂದ ವಿಮೋಚನೆಗೊಳ್ಳಲಿಲ್ಲ ಎಂದರೆ ಅಸ್ಪøಶ್ಯರು ಅವರ ಅಡಿಯಾಳರಾದರೆಂದೇ (ರಾಜಕೀಯ) ಅರ್ಥ! ಅಂದಹಾಗೆ ಒಮ್ಮೆ ಯಾವುದೇ ವ್ಯಕ್ತಿ ಅಥವಾ ಸಮುದಾಯ ರಾಜಕೀಯವಾಗಿ ಅಡಿಯಾಳಾದರೆ ಮುಗಿದುಹೋಯಿತು. ಆತ ಅಥವಾ ಆ ಸಮುದಾಯ ಇನ್ನೆಂದಿಗೂ ವಿಮೋಚನೆಗೊಳ್ಳಲು ಸಾಧ್ಯವಿಲ್ಲ.
 
   ಈ ನಿಟ್ಟಿನಲಿ ಆಸ್ಪøಶ್ಯರಿಗೆ ಅಂತಹ ಗುಲಾಮಗಿರಿ ಬೇಕೆ? ತಮ್ಮನ್ನು ತಾವು ಹರಿಜನ ಎಂಬ ಆ ಕೀಳು ಪದದಿಂದ ಕರೆದುಕೊಳ್ಳುವುದು ಬೇಕೆ? ಅಕಸ್ಮಾತ್ ಹಾಗೆ ಕರೆದುಕೊಳ್ಳುವುದಾದರೆ ಅಸ್ಪøಶ್ಯರು ಮಾದಿಗ, ಹೊಲೆಯ, ಜಾಡಮಾಲಿ ಹೀಗೆ ತಮ್ಮ ಜಾತಿಯ ಹೆಸರನ್ನು ನೇರ ಹೇಳಿಕೊಳ್ಳುವುದು ಸ್ವಾಭಿಮಾನಿ ಪ್ರಕ್ರಿಯೆ ಎನಿಸಿಕೊಳ್ಳುತ್ತದೆಯಲ್ಲವೇ? ಯಾಕೆ ಉನ್ನತ ಜಾತಿಗಳವರು ತಮ್ಮ ಜಾತಿಗಳನ್ನು ಗೌರವವಾಗಿ ಗೌಡ, ಪಟೇಲ ಎಂದು ಹೇಳಿಕೊಳ್ಳುತ್ತಾರೆ. ಅಸ್ಪøಶ್ಯರು ಹಾಗೆ ಹೇಳಿಕೊಂಡರೆ ಪ್ರಾರಂಭದಲ್ಲಿ ಕಿರಿಕಿರಿ ಆಗಬಹುದು. ಆದರೆ ಅದು ಅಂದು ಚಳುವಳಿಯ ರೂಪ ತಾಳಿದರೆ? ಸ್ವಾಭಿಮಾನ ತಾನೇತಾನಾಗಿ ಹುಟ್ಟಿಬರುತ್ತದೆ. ಈ ಸಂದರ್ಭದಲ್ಲಿ ಕಾನೂನಿನ ವಿಷಯವೊಂದನು ತಿಳಿದುಕೊಳ್ಳುವುದು ಅತ್ಯಗತ್ಯ. ಅದೆಂದರೆ 1989ರ ಅಸ್ಪøಶ್ಯತಾ ನಿಷೇಧ ಕಾಯಿದೆಯಡಿ ಅಸ್ಪøಶ್ಯರನ್ನು ‘ಹರಿಜನ’ ಎಂದು ಸಂಭೋದಿಸುವುದೂ ಕೂಡ ಶಿಕ್ಷಾರ್ಹ ಅಪರಾಧ. ಹಾಗಿದ್ದರೆ ‘ಹರಿಜನ’ ಎಂಬ ಆ ಪದವನ್ನು ಸೃಷ್ಟಿಸಿದವರು? ಅವರೂ ಕೂಡ ಶಿಕ್ಷೆಗೆ ಅರ್ಹರಲ್ಲವೇ?
     
 ಅದೇನೇ ಇರಲಿ, ಅಸ್ಪøಶ್ಯರು ತಮ್ಮನ್ನು ತಾವು ‘ಹರಿಜನ’ರೆಂದು ಹೇಳಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಬೇರೆಯವರು ಹಾಗೆ ಕರೆದರೂ ಅದನ್ನು ಪ್ರತಿಭಟಿಸಬೇಕು. ಈ ನಿಟ್ಟಿನಲಿ ‘ಹರಿಜನ’ ಎಂಬ ಆ ಪದವನ್ನು ಸಂಪೂರ್ಣ ಕೈ ಬಿಡಬೇಕು. ಇಲ್ಲದಿದ್ದರೆ ನಾವು ಅಂಬೇಡ್ಕರರು ಹೇಳಿರುವ ಹಾಗೆ ಗಾಂಧೀಜಿ, ಅವರು ಪ್ರತಿಪಾದಿಸಿದ ಪಕ್ಷ ಮತ್ತು ಆ ಮೂಲಕ ಹಿಂದೂಗಳ ಶಾಶ್ವತ ಗುಲಾಮರಾಗುತ್ತೇವಷ್ಟೆ.