Tuesday, 14 October 2014

  ಅಂಬೇಡ್ಕರ್ ಪುನರ್‍ಸೃಷ್ಟಿಸಿದ ಬುದ್ಧ ಭಾರತ


 1956 ಅಕ್ಟೋಬರ್ 14ರ ಬೆಳಿಗ್ಗೆ 9 ಗಂಟೆಗೆ ಕುಶೀನಗರದ ಹಿರಿಯ ಬೌದ್ಧಭಿಕ್ಕು ಆರ್ಯ ಚಂದ್ರಮಣಿ ಥೇರರವರು ಬಾಬಾಸಾಹೇಬ್ ಅಂಬೇಡ್ಕರರಿಗೆ ಮಹಾರಾಷ್ಟ್ರದ ನಾಗಪುರದ ಆ ವಿಶಾಲ ಜನಸಾಗರದ ನಡುವೆ ‘ಬುದ್ಧಂ ಶರಣಂ ಗಚ್ಚಾಮಿ... ಧಮ್ಮ ಶರಣಂ ಗಚ್ಛಾಮಿ... ಸಂಘಂ ಶರಣಂ ಗಚ್ಛಾಮಿ...’ ಎಂಬ ಮಂತ್ರ ಪಠಿಸುತ್ತಿದ್ದಂತೆ ಇತಿಹಾಸದ ನಿಂತುಹೋದ ಚಕ್ರವೊಂದು ಮತ್ತೆ ತಿರುಗಲಾರಂಭಿಸಿತು. ಹೌದು, ಅದು ಧಮ್ಮಚಕ್ರ. ಅರ್ಥಾತ್ ಬೌದ್ಧ ಧಮ್ಮಚಕ್ರ. ನೂರಾರು ವರುಷಗಳ ಕಾಲ ಭಾರತದ ಇತಿಹಾಸದಲ್ಲಿ ವೈಭವವನ್ನು ಕಂಡು ಅಷ್ಟೆ ನೂರಾರು ವರುಷಗಳು ಸ್ತಬ್ಧವಾಗಿದ್ದ ಬೌದ್ಧಧಮ್ಮ ಮತ್ತೆ ಅಂಬೇಡ್ಕರರ ಮೂಲಕ ಜನಮಾನಸದಲ್ಲಿ ನೆಲೆಸಲಾರಂಭಿಸಿತು. ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಬುದ್ಧಭಾರತವನ್ನು ಪ್ರಾಯೋಗಿಕ ನೆಲೆಯಲ್ಲಿ ಭಾರತದಲ್ಲಿ ಪುನರ್‍ಸೃಷ್ಟಿಸಿದ್ದರು. ಅದರ ಚಲನೆಗೆ ಮರುಚಾಲನೆ ನೀಡಿದ್ದರು.

 ಅಂದಹಾಗೆ ತಾವು ಅಂದು ಬೌದ್ಧಧರ್ಮ ಸ್ವೀಕರಿಸಿದ ದಿನ ಅಂಬೇಡ್ಕರ್ ಏನು ಹೇಳಿದರು? ಭಾವಾವೇಶದಿಂದ ಅವರೇ ಹೇಳಿರುವ ಮಾತನ್ನು ಅಷ್ಟೇ ಭಾವಾವೇಶದಿಂದ ದಾಖಲಿಸುವುದಾದರೆ “ಹಿಂದೂಧರ್ಮವನ್ನು ತ್ಯಜಿಸುವ ಚಳುವಳಿಯನ್ನು ನಾನು 1935ರಲ್ಲಿ ಪ್ರಾರಂಭಿಸಿದೆ ಮತ್ತು ಅಂದಿನಿಂದ ನಾನು ಆ ಹೋರಾಟವನ್ನು ಮುಂದುವರಿಸುತ್ತಲೇ ಬಂದೆ. ಈ ಕಾರಣಕ್ಕಾಗಿ ಇಂದು ನಡೆದ ಮತಾಂತರ ನನಗೆ ಊಹಿಸಲಾರದಷ್ಟು ಸಂತಸ ಮತ್ತು ಅಗಾಧವಾದ ತೃಪ್ತಿ ನೀಡಿದೆ. ನರಕದಿಂದ ಬಿಡುಗಡೆ ಪಡೆದೆನೆಂಬ ಭಾವನೆ ನನ್ನಲ್ಲಿ ಮೂಡಿದೆ”.

 ಹೌದು, ‘ನರಕ’ ಅದು ಅಂಬೇಡ್ಕರ್ ಭಾವಾವೇಶದಿಂದಲೇ ಹೇಳಿದರೂ ವಾಸ್ತವದ ಪ್ರತಿಬಿಂಬವಾಗಿರುವ ‘ಹಿಂದೂಧರ್ಮ’ವೆಂಬ ‘ನರಕ’. ಯಾಕೆಂದರೆ ಅಂಬೇಡ್ಕರ್ 1935ರಲ್ಲೇ ‘ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ’ ಎಂದು ಗುಡುಗಿದ್ದರು. ಮಹಾಡ್ ಎಂಬ ಊರಿನ ಕೆರೆಯ ನೀರನ್ನು ಕುಡಿಯಲು ಸ್ವತಃ ಅವರೇ ಪ್ರಾರಂಭಿಸಿದ ಚಳುವಳಿಯಲ್ಲಿ ನೊಂದ ಅವರು ತನ್ನವರ ಮೇಲೆ ಧಾಳಿಗಳಾದಾಗ ರೋಷದಿಂದ ‘ಮನುಸ್ಮøತಿ’ ಸುಟ್ಟು ತನ್ನ ಆ ‘ಹಿಂದೂವಾಗಿ ಸಾಯಲಾರೆ’ ಎಂಬ ಆ ಗಜ ಗರ್ಜನೆ ಗರ್ಜಿಸಿದ್ದರು. ಬಹುಶಃ ಆ ಸಂದರ್ಭದಲ್ಲಿ ಬಹುತೇಕರು ಅಂಬೇಡ್ಕರರ ಆ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಿದ್ದರೆಂದೆನಿಸುತ್ತದೆ. ಆದರೆ ನುಡಿದುದ್ದನ್ನು ಸಾಧಿಸುವುದರಲ್ಲಿ ಗಟ್ಟಿಗರಾದ ಬಾಬಾಸಾಹೇಬರು ತನ್ನ ಜನರಿಗೆ 1930-31ರ ದುಂಡುಮೇಜಿನ ಪರಿಷತ್ತಿನ ಹೋರಾಟಗಳ ಮೂಲಕ ರಾಜಕೀಯ ಮೀಸಲಾತಿ ಕೊಡಿಸಿದ್ದರು. 1942ರಲ್ಲಿ ಸ್ವತಃ ತಾವೇ ಅಂದಿನ ಬ್ರಿಟಿಷ್ ವೈಸರಾಯ್‍ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ನಿಯುಕ್ತಿಗೊಂಡು ತಮ್ಮ ಪ್ರಥಮ ಸಾಧನೆಯೆಂಬಂತೆ ಪರಿಶಿಷ್ಟರಿಗೆ 8
1/2 ಪರ್‍ಸೆಂಟ್ ಉದ್ಯೋಗ ಮೀಸಲಾತಿ ಕೊಡಿಸಿದ್ದರು. ತದನಂತರ ಆ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಸ್ವಾತಂತ್ರೋತ್ತರದಲ್ಲಿ ಸಂವಿಧಾನಶಿಲ್ಪಿಯಾಗಿ ಭಾರತ ಸಂವಿಧಾನದಲ್ಲಿ ಅದನ್ನು ಉಳಿಸಿಕೊಟ್ಟಿದ್ದರು. ಒಟ್ಟಾರೆ ಈ ದೇಶದ ಅಸ್ಪøಶ್ಯತೆಯಿಂದ ನೊಂದ ಕೋಟ್ಯಾನುಕೋಟಿ ಸೋದರ/ಸೋದರಿಯರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಏನೇನು ಅನುಕೂಲಗಳು ಬೇಕೋ ಅದೆಲ್ಲವನ್ನು ಛಲಬಿಡದೆ ಗಳಸಿಕೊಟ್ಟು ಕಡೆಗಷ್ಟೇ ಅವರು ಹಿಂದುತ್ವದಿಂದ ಬಿಡುಗಡೆಗೊಂಡು ಬುದ್ಧನ ಕಡೆಗೆ ಚಲಿಸಿದ್ದು! ಈ ನಿಟ್ಟಿನಲ್ಲಿ ಹೇಳುವುದಾದರೆ ಅವರ ಒಟ್ಟಾರೆ ಪ್ರಕ್ರಿಯೆ ಯೋಜನಾಬದ್ಧವಾದದ್ದು. ಎಲ್ಲಿಯೂ ಕೂಡ ‘ಅನನುಕೂಲ ಸ್ಥಿತಿಗಳನ್ನು ತನ್ನವರಿಗೆ ಅನುಕೂಲಕರಮಾಡಿಕೊಡುವುದರಲ್ಲಿ’ ಅವರು ಹಿಂದೆ ಬೀಳಲಿಲ್ಲ. ತಮ್ಮ ಹೋರಾಟಕ್ಕೆ ತಾರ್ಕಿಕ ಜಯ ಪಡೆದ ನಂತರವಷ್ಟೆ ಅವರು ಬುದ್ಧನೆಡೆಗೆ ಅಧಿಕೃತವಾಗಿ ಬೆಸೆದದ್ದು.

ಹಾಗಿದ್ದರೆ ಅಂಬೇಡ್ಕರ್ ಬುದ್ಧನನ್ನೇ ಯಾಕೆ ಆಯ್ಕೆಮಾಡಿಕೊಂಡರು? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಅದಕ್ಕೆ ಅಂಬೇಡ್ಕರ್ ಅಂದೇ ಹೇಳುತ್ತಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು(ಅಸ್ಪøಶ್ಯರು)”. ಆ ನಾಗ ಜನಾಂಗದವರು ಬೌದ್ಧ ಮತಾವಲಂಬಿಗಳಾಗಿದ್ದರು. ಅಂತಹ ಚಾರಿತ್ರಿಕ ಹಿನ್ನೆಲೆಯ ಕಾರಣಕ್ಕಷ್ಟೆ ತಾನು ಬೌದ್ಧ ಧರ್ಮ ಸ್ವೀಕರಿಸಿದ್ದಾಗಿ ತಮ್ಮ ಬುದ್ಧನ ಒಲವಿಗೆ ಅಂಬೇಡ್ಕರರು ಸ್ಪಷ್ಟೀಕರಣ ನೀಡುತ್ತಾರೆ. ಹಾಗೆಯೇ ಅಂತಹ ಸ್ಪಷ್ಟೀಕರಣಕ್ಕೆ “ಭಾರತದ ನಿಜವಾದ ಇತಿಹಾಸ ಬೌದ್ಧತ್ವಕ್ಕೂ ಬ್ರಾಹ್ಮಣತ್ವಕ್ಕೂ ನಡೆದ ನಿರಂತರ ಕದನ” ಎಂದೂ ಕೂಡ ಅಂಬೇಡ್ಕರ್ ದನಿಗೂಡಿಸುತ್ತಾರೆ. ಅಂದಹಾಗೆ ಬ್ರಾಹ್ಮಣತ್ವದ  ಜತೆಗಿನ ಜಗಳದಲ್ಲಿ ಸೋತ ಮೂಲ ಬೌದ್ಧ ನಾಗ ಜನರೇ ಊರ ಆಚೆ ತಳ್ಳಲ್ಪಟ್ಟ ಅಸ್ಪøಶ್ಯರಾಗಿ ಸೃಷ್ಟಿಯಾದರು ಎಂದು ಕೂಡ ಅಂಬೇಡ್ಕರರು ಅಸ್ಪøಶ್ಯತೆಯ ಸೃಷ್ಟಿಗೂ ಕಾರಣ ಕೊಡುತ್ತಾರೆ. ಈ ನಿಟ್ಟಿನಲ್ಲಿ ತನ್ನ ಮೂಲ ಜನರು ಬೌದ್ಧಧರ್ಮೀಯರಾಗಿದ್ದ ಕಾರಣದಿಂದ  ತಾನು ಮಾಡುತ್ತಿರುವ ಈ ಮತಾಂತರ ಬೇರೆ ಧರ್ಮಕ್ಕೆ ಹೋಗುವ ಕ್ರಿಯೆಯಲ್ಲ ಬದಲಿಗೆ ‘ಸ್ವಂತ ಮನೆಗೆ ವಾಪಸ್ ಹೋಗುವ ಕ್ರಿಯೆ’ ಎಂದು ಅಂಬೇಡ್ಕರ್ ಅಪೂರ್ವ ಸ್ಪಷ್ಟೀಕರಣ ನೀಡುತ್ತಾರೆ. ತನ್ಮೂಲಕ ದಲಿತರು ಬೌದ್ಧರಾಗಲೇಬೇಕಾದ ಅನಿವಾರ್ಯತೆಗೆ ಇತಿಹಾಸದ ಕೊಂಡಿಯನ್ನು ಅವರು ಜೋಡಿಸುತ್ತಾರೆ.

 ಪ್ರಶ್ನೆ ಏನೆಂದರೆ ಅಂಬೇಡ್ಕರ್ ಜೋಡಿಸಿದ ಆ ಐತಿಹಾಸಿಕ ಜೋಡಣೆಗೆ ಭಾರತದ ಸಮಸ್ತ ದಲಿತರು ಸ್ಪಂಧಿಸಿದರೇ? ಖಂಡಿತ ಇಲ್ಲ. ಯಾಕೆಂದರೆ ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದ 15 ದಿನಗಳಲ್ಲೇ ಅಂದಿನ ಜವಾಹರಲಾಲ್ ನೇತೃತ್ವದ ಕೇಂದ್ರ ಕಾಂಗ್ರೆಸ್ ಸರ್ಕಾರ ಬೌದ್ಧಧರ್ಮದ ಕಡೆಗೆ ಒಲವು ತೋರುವ ದಲಿತರನ್ನು ಬೆದರಿಸಲು “ಬೌದ್ಧಧರ್ಮ ಸ್ವೀಕರಿಸಿದ  ದಲಿತರು (ಎಸ್‍ಸಿ/ಎಸ್‍ಟಿಗಳು) ಮೀಸಲಾತಿಯ ಫಲಾನುಭವವನ್ನು ಕಳೆದುಕೊಳ್ಳುವರು” ಎಂದು ಅಧಿಸೂಚನೆ ಹೊರಡಿಸಿತು!(Buddhism in india after ambedkar by D.C.Ahir. p.14).ತತ್ಪರಿಣಾಮ ಎಲ್ಲಿ ಮೀಸಲಾತಿ ಹೊರಟುಹೋಗುತ್ತದೆಯೋ ಎಂದು ಹೆದರಿದ ದೇಶದ ಬಹುತೇಕ ದಲಿತರು ಬೌದ್ಧರಾಗುವತ್ತ ಹಿಂಜರಿದರು. ಹಾಗೆಯೇ ತನ್ನ ಜನರು ಬೌದ್ಧರಾದರೆ ಮೀಸಲಾತಿ ಸೌಲಭ್ಯ ಕಳೆದುಕೊಳ್ಳುತ್ತಾರೆಂಬ ಅರಿವೂ ಸಹ ಅಂಬೇಡ್ಕರರಿಗಿತ್ತು. ಆದರೆ ಅದನ್ನು ಹೋರಾಡಿ ಮತ್ತೆ ಪಡೆಯುತ್ತೇನೆ ಎಂಬ ಮಾತನ್ನು ಸಹ ಮತಾಂತರದ ಸಂದರ್ಭದಲ್ಲಿ ಅವರು ನುಡಿದಿದ್ದರು. ಆದರೆ ಬಾಬಾಸಾಹೇಬರು ಮತಾಂತರವಾದ ಎರಡೇ ತಿಂಗಳಲ್ಲಿ(ಡಿಸೆಂಬರ್ 6, 1956) ನಿಧನರಾದರು. ಪರಿಣಾಮ ಆ ಸಂದರ್ಭದಲ್ಲಿ ಬೌದ್ಧರಾದರೂ ದಲಿತರು ಮೀಸಲಾತಿ ಉಳಿಸಿಕೊಳ್ಳುವ ಮಾತು ದೂರಉಳಿಯಿತು. ಅಂದಹಾಗೆ ಇದಾಗಿ ಹಲವರ್ಷಗಳ ನಂತರ ‘ದಲಿತರು ಬೌದ್ಧರಾದರೂ ಅವರ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ’ ಎಂಬ ಅಧಿಸೂಚನೆ ಹೊರಬೀಳಲು ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದೇ ಬರಬೇಕಾಯಿತು! 1989ರಲ್ಲಿ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್‍ರವರ ನೇತೃತ್ವದ ಕಾಂಗ್ರೆಸ್ಸೇತರ ಜನತಾದಳದ ಸರ್ಕಾರವೇ ಬೌದ್ಧದಲಿತರಿಗೂ ಮೀಸಲಾತಿಯನ್ನು ಮರುಕಲ್ಪಿಸಿಕೊಟ್ಟಿತು ಎಂಬುದು ಇಲ್ಲಿ ಕಾಕತಾಳೀಯವೆನಿಸಿದರೂ ಗಮನಿಸಬೇಕಾದ ವಿಚಾರ. ಒಟ್ಟಾರೆ 3-6-1990ರಲ್ಲಿ ರಾಷ್ಟ್ರಪತಿಗಳಿಂದ ಒಪ್ಪಿಗೆಪಡೆಯಲ್ಪಟ್ಟ, 4-6-1990ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ತಿದ್ದುಪಡಿ ಮಸೂದೆ-1990 ಬೌದ್ಧಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರೂ ಮೀಸಲಾತಿ ಪಡೆಯಲು ಅರ್ಹರು ಎಂಬುದನ್ನು ಸಾರಿ ಹೇಳಿತು. ಈ ದಿಸೆಯಲ್ಲಿ ಅಂಬೇಡ್ಕರರು ಮತಾಂತರಗೊಂಡ 34 ವರ್ಷಗಳ ನಂತರ ದಲಿತ ಬೌದ್ಧರಿಗೆ ಮೀಸಲಾತಿ ಮರುದೊರಕಿತು.

ಹೀಗಿದ್ದರೂ ಅಂದರೆ ದಲಿತರು ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರೂ ಅವರ ಮೀಸಲಾತಿಗೆ ಯಾವ ಧಕ್ಕೆಯೂ ಇಲ್ಲ ಎಂದು ತಿಳಿದಿದ್ದರೂ ಗೊಂದಲ ಅಲ್ಲಲ್ಲಿ ಇನ್ನೂ ಹಾಗೆಯೇ ಇದೆ. ಹಾಗೆ ಈ ಕಾರಣದಿಂದ ದಲಿತರಲ್ಲಿ ಇಂದು ಮೂರು ಮಾದರಿಯ ಬೌದ್ಧರು ಸೃಷ್ಟಿಯಾಗಿದ್ದಾರೆ. ಅವರಲ್ಲಿ ಮೊದಲನೆಯ ಮಾದರಿಯವರು ಸಂಪೂರ್ಣ ಬೌದ್ಧ ಮತಾವಲಂಬಿಗಳಾಗಿ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿ ಅಂಬೇಡ್ಕರ್ ಮಾರ್ಗದಲ್ಲಿ ಕ್ರಾಂತಿಕಾರಿ ಚಿಂತನೆಯ ಮೂಲಕ ಅಪ್ಪಟ ಬೌದ್ಧರಾಗಿರುವವರು. ಎರಡನೆಯ ಮಾದರಿಯವರು ಬೌದ್ಧಮತಾವಲಂಬಿಗಳಾಗಿಯೂ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿಯೂ ಸಾಂಪ್ರದಾಯಿಕವಾಗಿ ಬುಡಕಟ್ಟು ಆಚರಣೆಗಳನ್ನು ಅಂದರೆ ಮಾರಮ್ಮ, ಎಲ್ಲಮ್ಮನ ಪೂಜಿಸುವುದು, ಹರಕೆ ಹೊರುವುದು, ಬೆಟ್ಟಗಳಿಗೆ ಪರಿಷೆ ಹೋಗುವುದು, ಇತ್ಯಾದಿ ಮಾಡುವವರು. ಇನ್ನು ಮೂರನೆಯ ಮಾದರಿಯವರು ಅಧಿಕೃತವಾಗಿ ಬೌದ್ಧರಾಗಿಲ್ಲದಿದ್ದರೂ ಹಿಂದೂ ದೇವಾನುದೇವತೆಗಳನ್ನು ನಿರಾಕರಿಸಿ, ಬುಡಕಟ್ಟು ಆಚರಣೆಗಳನ್ನು ಮುಂದುವರೆಸಿ ಬುದ್ಧ ಮತ್ತು ಅಂಬೇಡ್ಕರರನ್ನು ಜೊತೆಜೊತೆಯಾಗಿ ಪೂಜಿಸುವವರು. ಒಟ್ಟಾರೆ ಈ ನಿಟ್ಟಿನಲ್ಲಿ ಹೇಳುವುದಾದರೆ ‘ಮೂರನೆಯ ಮಾದರಿಯ ಬೌದ್ಧರೇ ಇಲ್ಲಿ ಬಹುಸಂಖ್ಯಾತರು’ ಎನ್ನಬಹುದು!

ಒಂದಂತು ನಿಜ, ದಲಿತರಲ್ಲಿ ಇಂದು ಅಂಬೇಡ್ಕರ್ ಕಂಡುಕೊಂಡ ಬುದ್ಧ ಮತ್ತು ಆತನ ಧಮ್ಮ ಹಾಸುಹೊಕ್ಕಾಗಿದೆ. ಅದು ಅಧಿಕೃತ ಸಂಘಟಿತ ರೂಪದಲ್ಲಿ ಇನ್ನು ಪರಿಪೂರ್ಣವಾಗಿ ಹೊರಹೊಮ್ಮಿಲ್ಲದಿರಬಹುದು ಆದರೆ ಅಂಬೇಡ್ಕರ್ ಎಂದಾಕ್ಷಣ ಬುದ್ಧ, ಬುದ್ಧ ಎಂದಾಕ್ಷಣ ಅಂಬೇಡ್ಕರ್ ಹೀಗೆ ಭಾವ ಬಂಧವಂತು ಮಾತ್ರ ಬೆಸೆದಿರುವುದಂತೂ ಸತ್ಯ. ಈ ಕಾರಣಕ್ಕಾಗಿಯೇ ಎಷ್ಟೋ ಸಂದರ್ಭಗಳಲ್ಲಿ ಅನ್ಯ ಜಾತಿಗಳವರಲ್ಲಿ ಬುದ್ಧನ ಧರ್ಮ ಎಂದರೆ ಅದು ದಲಿತರ ಧರ್ಮ ಎಂದೇ ಭಾವಿಸುವ ಪರಿಪಾಟ ಈಗಂತೂ ಕಾಮನ್ ಆಗಿಬಿಟ್ಟಿದೆಯೆಂದರೆ ಯಾವ ಪರಿ ಬೌದ್ಧಧರ್ಮ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನೆಲೆಕಂಡುಕೊಂಡಿದೆ ಎಂಬುದನ್ನು ಎಂತಹವರಾದರೂ ಊಹಿಸಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಅಂಬೇಡ್ಕರ್ ಅಂದು ಬಯಸಿದ ಬಿಡುಗಡೆಯ ಮಾರ್ಗದತ್ತ ದಲಿತರು ಸದ್ದಿಲ್ಲದೆ ಚಲಿಸುತ್ತಾರೆ ಎನ್ನುವುದು ಸ್ಪಷ್ಟ. ಯಾರಿಗ್ಗೊತ್ತು ಮುಂದೊಂದು ದಿನ ಮೀಸಲಾತಿ ಕೊನೆಗೊಂಡರೆ ದಲಿತರೆಲ್ಲ ಸಾರಾಸಗಟಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡರೂ ಅಚ್ಚರಿ ಇಲ್ಲ! ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಅಂದು ಚಿಂತಿಸಿದ, ಪಾಲಿಸಿದ ಬುದ್ಧನ ಭಾರತ ಖಂಡಿತ ಇಂದು ಪ್ರಾಯೋಗಿಕವಾಗಿ ಯಶಸ್ಸಿನ ಹಾದಿಯಲ್ಲಿದೆ. ಈ ದಿಸೆಯಲ್ಲಿ ಹೇಳುವುದಾದರೆ ದಲಿತರ ಧಮನಿಗಳಲ್ಲಿ ಬುದ್ಧರಕ್ತ ಶರವೇಗದಿಂದ ಪ್ರವಹಿಸುತ್ತಿದೆ ಮತ್ತು ಅಂತಹ ಪ್ರವಾಹದ ಹಿಂದೆ ಅಂಬೇಡ್ಕರರ ಅವಿರತ ಹೋರಾಟದ ಅಧಮ್ಯ ಶಕ್ತಿ ಇದೆ ಎಂದರೆ ಅದು ಅತಿಶಯೋಕ್ತಿಯೆನಿಸದು.    
                               -ರಘೋತ್ತಮ ಹೊ.ಬ


No comments:

Post a Comment