ಕಂಬಾಲಪಲ್ಲಿ: ಕಥೆ... ವ್ಯಥೆ...
-ರಘೋತ್ತಮ ಹೊ.ಬ
ಕಂಬಾಲಪಲ್ಲಿ; 14 ವರ್ಷಗಳ ಹಿಂದೆ 7 ಜನ ದಲಿತರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು... ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿತು... ತದನಂತರ ಈಗ (2014) ಆಗಸ್ಟ್ 20 ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಹಾಗಿದ್ದರೆ ಕಂಬಾಲಪಲ್ಲಿಯಲ್ಲಿ ಅಂದು (ಮಾರ್ಚ್, 11, 2000) 7ಜನ ದಲಿತರು ಸುಟ್ಟು ಬೂದಿಯಾದದ್ದು ಹೇಗೆ? ಘಟನೆಯನ್ನು ಹೇಗೆ ಹೇಳಬಹುದೆಂದರೆ, ಆ 7 ಜನ ದಲಿತರು ತಮ್ಮ ಮನೆಗಳೊಳಕ್ಕೆ ತಾವೇ ಹೋಗಿ ‘ಅದು ಹೇಗೋ’ ಹೊರಗಿನಿಂದ ಚಿಲಕ ಹಾಕಿಕೊಂಡು, ‘ಅದು ಹೇಗೋ’ ತಮ್ಮ ಮನೆಗಳಿಗೆ ಹೊರಗಿನಿಂದ ಹುಲ್ಲು ಕಸ ತುಂಬಿಕೊಂಡು, ‘ಅದು ಹೇಗೋ’ ಹೊರಗಿನಿಂದ ತಮ್ಮ ಮನೆಗಳಿಗೆ ಸೀಮೆ ಎಣ್ಣೆ ಪೆಟ್ರೋಲ್ ಸುರಿದುಕೊಂಡು, ‘ಅದು ಹೇಗೋ’ ಮನೆಯ ಒಳಗೇ ಇದ್ದ ಅಷ್ಟೂ ದಲಿತರು ಹೊರಗಡೆ ಬೆಂಕಿ ಕಡ್ಡಿ ಕೀರಿ ಬೆಂಕಿ ಹಚ್ಚಿಕೊಂಡು, ಕಿರುಚಾಡಿ ಅಮ್ಮಾ, ಅಯ್ಯೋ, ಕಾಪಾಡಿ ಎಂದು ಅತ್ತೂ ಕರೆದು ಅಸಹಾಯಕರಾಗಿ ಕೂಗಾಡಿ ವಿಧಿಯಿಲ್ಲದೆ ಬೆಂಕಿಗೆ ದೇಹವನ್ನೊಡ್ಡಿ ಸುಟ್ಟು ಕರಕಲಾದರು! ಇಲ್ಲಿ ‘ಅದು ಹೇಗೋ’ ಎಂಬ ಪ್ರಶ್ನೆ ಬರುತ್ತದಲ್ಲ, ಅದಕ್ಕೆ ಉತ್ತರ?
ಕ್ಷಮಿಸಿ, ಕಂಬಾಲಪಲ್ಲಿಯ ಘಟನೆ ವಿವರಿಸೋಣವೆಂದರೆ ಲೇಖನಿಯಿಂದ ನೀಲಿ ಇಂಕು ಬರುತ್ತಿಲ್ಲ. ರಕ್ತ ತಾನಾಗೇ ಕುದಿದು ಬರುತ್ತಿದೆ. ಹಾಗೇ ನ್ಯಾಯ ದೊರಕದೆ ತಣ್ಣಗಾಗುತ್ತದೆ. ಆದರೂ ತಣ್ಣಗಾಗುವ ಮೊದಲು ದುರಂತವನ್ನು ದಾಖಲಿಸುತ್ತೇನೆ.
1997ರ ಆಗಸ್ಟ್ ತಿಂಗಳ ಒಂದು ದಿನ ಕೋಲಾರದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ, ಆ ಗ್ರಾಮದಲ್ಲಿ ವಾಸವಿದ್ದ ರೆಡ್ಡಿ ಒಕ್ಕಲಿಗರು ಮತ್ತು ದಲಿತರು ಇಬ್ಬರಿಗೂ ಸೇರಿದ ಕೆಲವು ಕುರಿಗಳು ಕಳುವಾದವು. ಅಂದಹಾಗೆ ಈ ಸಂಬಂಧ ಪಂಚಾಯತಿ ನಡೆದು ವೆಂಕಟರಮಣಪ್ಪ, ಅಂಜನಪ್ಪ ಮತ್ತು ರಾವಣಪ್ಪ ಎಂಬ ಮೂವರು ದಲಿತರು ಕುರಿ ಕದ್ದಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು. ಹಾಗೆ ಈ ಸಂಬಂಧ ಪೋಲೀಸರಿಗೆ ದೂರು ನೀಡಲು ಸಹ ಪಂಚಾಯತಿ ನಿರ್ಧರಿಸಿತು. ಇದರಿಂದ ಬೆದರಿದ ದಲಿತರು ತಮ್ಮ ಕುಟುಂಬಗಳ ಸಮೇತ ಊರು ಬಿಟ್ಟು ಹೋದರು. ಆದರೂ ಕುರಿ ಕಳÀವಿನ ಈ ಸಂಬಂಧ ಕೇಸು ದಾಖಲಾಗಿ ತನಿಖೆ ನಡೆದು ಕುರಿ ಕದ್ದವರು ಅದೇ ಗ್ರಾಮದ ರೆಡ್ಡಿ ಸಮುದಾಯದ ಕೆ.ಎಂ.ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ರೆಡ್ದಪ್ಪ, ನಾರಾಯಣಸ್ವಾಮಿ, ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಎಂದು ಗುರುತಿಸಲಾಯಿತು. ಅಂತೆಯೇ ಇವರು ಕುರಿ ಕದ್ದು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಿದ್ದನ್ನು ಪೊಲೀಸರು ವಾಪಸ್ ತರಿಸಿ ದಲಿತರಿಗೆ ನೀಡಿದರು. ಅಂದಹಾಗೆ ಪೊಲೀಸರಿಗೆ ಇದನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡಿದವರು ಅದೇ ಕುರಿ ಕಳುವಿನ ಆರೋಪ ಹೊತ್ತು ಊರು ಬಿಟ್ಟಿದ್ದ ವೆಂಕಟರಮಣಪ್ಪ ಮತ್ತು ಆತನ ಇಬ್ಬರು ಸಹೋದರರು. ಒಂದರ್ಥದಲ್ಲಿ ಈ ಪ್ರಕರಣ ಕಂಬಾಲಪಲ್ಲಿ ಗ್ರಾಮದ ರೆಡ್ಡಿ ಜನಾಂಗದವರಿಗೆ ತೀವ್ರ ಮುಜುಗರ ಉಂಟುಮಾಡಿತ್ತು ಮತ್ತು ಈ ನಿಟ್ಟಿನಲ್ಲಿ ಹಾಗೆ ಕುರಿಕದ್ದು ಸಿಕ್ಕಿಬಿದ್ದ ಕೆ.ಎಂ.ಮದ್ದಿರೆಡ್ಡಿ ಮತ್ತು ಇತರರು ಪೊಲೀಸರಿಗೆ ಸಹಾಯ ಮಾಡಿದ ದಲಿತ ವೆಂಕಟರಮಣಪ್ಪನಿಗೊಂದು ಗತಿಕಾಣಿಸಲು ಹೊಂಚು ಹಾಕಿದರು ಮತ್ತು ಅಂತಹದ್ದೊಂದು ದಿನ ಬಂದಿಯೂ ಬಿಟ್ಟಿತು ಕೂಡ. ಯಾಕೆಂದರೆ ಗರ್ಭಿಣಿಯಾಗಿದ್ದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ 05-06-1998ರ ಬೆಳಿಗ್ಗೆ 10.30 ಕ್ಕೆ ದಲಿತ ವೆಂಕಟರಮಣಪ್ಪ ಊರಿಗೆ ಬಂದು ಇಳಿಯುತ್ತಲೇ ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 39 ಜನರು ವೆಂಕಟರಮಣಪ್ಪನ ಮನೆಯತ್ತ ಧಾವಿಸಿ ಅವನನ್ನು ಅಟ್ಟಾಡಿಸಿಕೊಂಡು ಹೋಗಿ ಅವನ ಹೆಂಡತಿ ಮತ್ತು ಕುಟುಂಬಸ್ಥರ ಎದುರೇ ಆತನನ್ನು ಕಲ್ಲು ಹೊಡೆದು ಸಾಯಿಸಿದರು. ಅಂತೆಯೇ ಹಾಗೆ ಸಾಯಿಸಲ್ಪಟ್ಟ ವೆಂಕಟರಮಣಪ್ಪನನ್ನು ಸುಮಾರು 50 ಸೈಜುಗಲ್ಲಿನಡಿ ಸಮಾಧಿ ಮಾಡಲಾಯಿತೆಂದರೆ ಘಟನೆಯ ಭೀಭತ್ಸತೆಯನ್ನು ಎಂಥವರಾದರೂ ಊಹಿಸಬಹುದು. ದುರಂತವೆಂದರೆ ಈ ಸಂಬಂಧ 41 ಜನರ ಬಂಧನವಾಗಿ ಎಲ್ಲರೂ ಜಾಮೀನಿನ ಮೂಲಕ ಹೊರಬಂದರು!
ಅಂದಹಾಗೆ ಇದು ಇಲ್ಲಿಗೆ ನಿಂತಿದ್ದರೆ ಸರಿ ಹೋಗುತ್ತಿತ್ತು. ಆದರೆ ಘಟನೆ ನಡೆದ ಒಂದೂವರೆ ವರ್ಷದ ನಂತರ (ಡಿಸೆಂಬರ್, 99) ಚಿಕ್ಕಬಳ್ಳಾಪುರದ ಎ.ಸಿ.ಕಛೇರಿಯಲ್ಲಿ ದಲಿತರ ಕುಂದು-ಕೊರತೆಗಳ ಸಭೆಯೊಂದು ನಡೆದು ಆ ಸಭೆಯಲ್ಲಿ ಕಂಬಾಲಪಲ್ಲಿಯಲ್ಲಿ ಸವರ್ಣೀಯರಿಂದ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನ ಕಿರಿಯ ಸಹೋದರ ಶ್ರೀರಾಮಪ್ಪ ತನ್ನ ಸಹೋದರನ ಹತ್ಯೆಯ ನಂತರ ತಾನು ಊರು ಬಿಡುವಂತಾಗಿದ್ದು ತÀನಗೆ ಗ್ರಾಮಕ್ಕೆ ವಾಪಸ್ಸು ಹೋಗಲು ಎಲ್ಲಾ ರೀತಿಯ ಸಹಾಯಬೇಕೆಂದು ಸಭೆಗೆ ತಿಳಿಸಿದ. ಅಂತೆಯೇ ಈ ಸಂಬಂಧ ಸಭೆಯೊಂದು ನಡೆದು 08-01-2000 ರಂದು ಶ್ರೀರಾಮಪ್ಪ ಮತ್ತವನ ಸಹೋದರ ಅಂಜನಪ್ಪ, ತಂದೆ ವೆಂಕಟರಾಯಪ್ಪ ಮತ್ತು ತಾಯಿ ರಾಮಕ್ಕನವರನ್ನು ವಾಪಸ್ಸು ಊರಿಗೆ (ಕಂಬಾಲಪಲ್ಲಿಗೆ) ಕರೆತರಲಾಯಿತು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆಯೊಂದನ್ನು ಸಹ ನಡೆಸಲು ಕೂಡ ತಾಲ್ಲೂಕು ಆಡಳಿತ ತೀರ್ಮಾನಿಸಿತು. ಆದರೆ ಸಭೆಯನ್ನು ಗ್ರಾಮದಲ್ಲಿ ಎಲ್ಲಿ ನಡೆಸಬೇಕು ಅಂದರೆ ರೆಡ್ಡಿ ಒಕ್ಕಲಿಗರ ಬೀದಿಯಲ್ಲಿದ್ದ ದೇವಸ್ಥಾನದಲ್ಲೋ ಅಥವಾ ದಲಿತರ ಕೇರಿಯಲ್ಲಿದ್ದ ಅರಳೀಕಟ್ಟೆಯಲ್ಲೋ ಎಂಬ ಪ್ರಶ್ನೆ ಉದ್ಭವಿಸಿ ಸಭೆ ನಡೆಯಲಿಲ್ಲ. ಒಟ್ಟಾರೆ ಕಂಬಾಲಪಲ್ಲಿ ಉಧ್ವಿಗ್ನವಾಗೇ ಇತ್ತು.
ಇಂತಹ ಉಧ್ವಿಗ್ನ ಸ್ಥಿತಿಯಲ್ಲಿ 10-03-2000 ಸಂಜೆ 6.00 ಗಂಟೆಗೆ ದಲಿತರಾದ ಶಂಕರಪ್ಪ ಮತ್ತು ಅವನ ಸ್ನೇಹಿತ ನರಸಿಂಹಪ್ಪ, ಅಸ್ವಸ್ಥರಾಗಿದ್ದ ತಮ್ಮ ತಂದೆಯವರಿಗಾಗಿ ಎಳನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಹಾಗೆ ಬರುತ್ತಿರುವಾಗ ಎದುರುಗಡೆ ಟಿವಿಎಸ್ ಮೊಪೆಡ್‍ನಲ್ಲಿ ಬರುತ್ತಿದ್ದ ಕೆ.ಎಂ.ವೆಂಕಟರೆಡ್ಡಿ ಬಿನ್ ಮದ್ದೀರೆಡ್ಡಿ, ರವಿ ಬಿನ್ ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಎಂಬಿಬ್ಬರು ರೆಡ್ಡಿ ಒಕ್ಕಲಿಗ ಹುಡುಗರು ಶಂಕರಪ್ಪ ಮತ್ತು ನರಸಿಂಹಪ್ಪನವರಿಗೆ ನೇರ ಗುದ್ದಿಸುವ ರೀತಿಯಲ್ಲಿ ಬಂದರು. ಈ ಸಮಯದಲ್ಲಿ ದಲಿತರು ಮತ್ತು ಆ ರೆಡ್ಡಿ ಒಕ್ಕಲಿಗ ಹುಡುಗರ ನಡುವೆ ತಗಾದೆ ಉಂಟಾಗಿ ಕ್ಷುಲ್ಲಕ ಜಗಳವೂ ಕೂಡ ಆಯಿತು ಮತ್ತು ಅದು ಅಲ್ಲಿಗೆ ಮುಗಿದುಹೋಗಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ಶಂಕರಪ್ಪ ಮತ್ತು ನರಸಿಂಹಪ್ಪ ಊರಿಗೆ ಬರುತ್ತಲೇ ಅವರನ್ನು ಸುತ್ತುವರೆದ ಕೆ.ಎಂ.ಮದ್ದಿರೆಡ್ಡಿ, ರವಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 11 ಜನರ ಗುಂಪು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿತು. ಅದಲ್ಲದೆ ಆ ವಿಚ್ಛಿದ್ರಕಾರಿ ಸವರ್ಣಿಯರ ಗುಂಪು ಪರಿಶಿಷ್ಟರ ಕಾಲೋನಿಯ ಮೇಲೆ ತೀವ್ರತರವಾಗಿ ಧಾಳಿ ನಡೆಸಿ ದಲಿತ ಕುಟುಂಬಸ್ಥರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತು. ಈ ಸಮಯದಲ್ಲಿ ತಕ್ಷಣ ದಲಿತರಾದ ಶಂಕರಪ್ಪ ಮತ್ತು ನರಸಿಂಹಪ್ಪ ಸಮೀಪದ ಯನಮಲಪಾಡಿ ಗ್ರಾಮಕ್ಕೆ ತೆರಳಿ ಫೋನ್ ಮೂಲಕ ಸಮೀಪದ ಕೆಂಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರಾದರೂ ಆ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ಭೇಟಿಕೊಟ್ಟದ್ದು ನೇರ ರೆಡ್ಡಿ ಒಕ್ಕಲಿಗರ ಮನೆಗಳಿಗೆ. ಮನೆ ಕಳೆದುಕೊಂಡಿದ್ದ, ಹಲ್ಲೆಗೊಳಗಾಗಿದ್ದ ದಲಿತರ ಕೇರಿಯತ್ತ ಆತ ಕಣ್ಣೆತ್ತಿಯೂ ನೋಡಲಿಲ್ಲ!
ಇದಿಷ್ಟು ಕಂಬಾಲಪಲ್ಲಿಯ ಏಳು ದಲಿತ ಜೀವಗಳು ಬೆಂಕಿಗೆ ಆಹುತಿಯಾಗುವ ಮುನ್ನ ದುರಂತದ ಹಿಂದಿನ ಕಥೆ. ಬಹುಶಃ ಈ ಕಥೆಯೇ ಹೇಳುತ್ತದೆ ಕಂಬಾಲಪಲ್ಲಿ ಉಧ್ವಿಗ್ನವಾಗಿತ್ತು ಇಂತಹ ದಹನಕ್ಕೆ ಪೂರ್ವ ತಯಾರಿಯಾಗಿತ್ತು ಎಂಬುದನ್ನು. ದುರಂತವೆಂದರೆ ಅಂದಿನ ಪೊಲೀಸ್ ವ್ಯವಸ್ಥೆ ಕಂಬಾಲಪಲ್ಲಿಯ ದಲಿತರ ಇಂತಹ ದುಃಖಕ್ಕೆ, ಆಪತ್ತಿನ ಪರಿಸ್ಥಿತಿಗೆ ಸಕಾಲಕ್ಕೆ ಸ್ಪಂಧಿಸಲೇ ಇಲ್ಲ. ಕಡೆ ಪಕ್ಷ ದಲಿತರ ಮೇಲೆ ಹಲ್ಲೆ ನಡೆದ ಆ ದಿನ (10-03-2000) ಸಂಜೆ ಮತ್ತು ಆ ರಾತ್ರಿ ಪೂರ ಪೊಲೀಸ್ ವ್ಯಾನ್ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೀಡುಬಿಟ್ಟಿದ್ದರೆ ಸಾಮೂಹಿಕ ದಲಿತ ದಹನವನ್ನು ಖಂಡಿತ ತಡೆಯಬಹುದಿತ್ತು.
ಸ್ವಾಭಾವಿಕವಾಗಿ ಮಾರನೇ ದಿನ ಅಂದರೆ 11-03-2000 ರ ಬೆಳಿಗ್ಗೆ ನೊಂದ ಕಂಬಾಲಪಲ್ಲಿ ದಲಿತರು ಹಿಂದಿನ ದಿನ ತಮ್ಮ ಮೇಲೆ ಆದ ದಾಳಿಯ ಬಗ್ಗೆ ಚಿಂತಾಮಣಿಯ ಡಿ.ಎಸ್.ಎಸ್. ನಾಯಕ ಎನ್.ಶಿವಣ್ಣನವರಿಗೆ ಮಾಹಿತಿ ನೀಡಿದರು. ತಕ್ಷಣ ಎನ್.ಶಿವಣ್ಣನವರು ಕೋಲಾರ ಜಿಲ್ಲಾ ಎಸ್.ಪಿ.ಯವರನ್ನು ಸಂಪರ್ಕಿಸಿದರಾದರೂ ಅವರು ರಜೆಯಲ್ಲಿದ್ದ ಕಾರಣ ಎ.ಎಸ್.ಪಿ.ಯವರು ಎನ್.ಶಿವಣ್ಣನವರಿಗೆ ತಾವು ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾಗುವಂತೆ ತಿಳಿಸಿದರು. ಈ ನಡುವೆ ಕಂಬಾಲಪಲ್ಲಿಯ ದಲಿತ ಆ ಸಂತ್ರಸ್ತರು ಸರ್ಕಲ್ ಇನ್ಸ್‍ಪೆಕ್ಟರ್‍ರವರು ಬರುವವರೆಗೂ ಕಾಯದೆ ತಮ್ಮ ಊರಿನ ವ್ಯಾಪ್ತಿಯ ಕೆಂಚನಹಳ್ಳಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದರಾದರೂ ಮತ್ತದೇ ಅಲ್ಲಿನ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ದೂರು ಸ್ವೀಕರಿಸಲು ನಿರಾಕರಿಸಿದ! ಹಾಗೆಯೇ ತೀವ್ರವಾಗಿ ಗಾಯಗೊಂಡಿದ್ದ ಆ ದಲಿತ ಸಂತ್ರಸ್ತರನ್ನು ಆತ ಗೆಟೌಟ್ ಎಂದು ಹೋಗುವಂತೆ ಆದೇಶಿಸಿದ. ವಿಧಿಯಿಲ್ಲದೆ ಆ ಸಂತ್ರಸ್ತರು ಚಿಂತಾಮಣಿಯ ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾದರು. ಅಂತೆಯೇ ದೂರವಾಣಿ ಮೂಲಕ ತಮ್ಮ ಕಛೇರಿಗೆ ಆ ಸಬ್‍ಇನ್ಸ್‍ಪೆಕ್ಟರ್‍ರನ್ನು ಕರೆಸಿಕೊಂಡ ಸರ್ಕಲ್ ಇನ್ಸ್‍ಪೆಕ್ಟರ್ ಕಂಬಾಲಪಲ್ಲಿಯ ದಲಿತ ಸಂತ್ರಸ್ತರು ನೀಡಿದ್ದ ದೂರನ್ನು ಸಬ್‍ಇನ್ಸ್‍ಪೆಕ್ಟರ್‍ಗೆ ನೀಡಿ ದೂರನ್ನು ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. ಅಂದಹಾಗೆ 11-03-2000 ರ ಆ ದಿನ ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆಯಾಗಿತ್ತು. ಹಾಗೆಯೇ ಸಂಜೆ ಬಿ.ಕೆ.ಆರ್ ಎಂಬ ಖಾಸಗಿ ಬಸ್ ಹಿಡಿದು ಸಂತ್ರಸ್ತ ಆ ದಲಿತರು ಗ್ರಾಮದತ್ತ ನಡೆದರು....
ನಡೆದ ದಹನ: ಈ ನಡುವೆ ಕಂಬಾಲಪಲ್ಲಿಯಲ್ಲಿ ರೆಡ್ಡಿಗಳಲ್ಲೂ ಎರಡು ಗುಂಪಾಗಿತ್ತು. ಒಂದು ಗುಂಪು ಆಂಜನೇಯರೆಡ್ಡಿ ಎಂಬುವವನದ್ದಾಗಿದ್ದರೆ, ಮತ್ತೊಂದು ಗುಂಪು ಬುಚನಾಗಾರಿ ಭೈರೆಡ್ಡಿ ಎಂಬುವವನದಾಗಿತ್ತು. ಆಂಜನೆಯರೆಡ್ಡಿ ದಲಿತರ ಪರವಿದ್ದು ಆತ ಅಂದಿನ ಚಿಂತಾಮಣಿ ಶಾಸಕ ಚೌಡರೆಡ್ಡಿಯವರ ಬೆಂಬಲಿಗನಾಗಿದ್ದ. ಹಾಗೆಯೇ ಬುಚನಾಗಾರಿ ಭೈರೆಡ್ಡಿ ಚಿಂತಾಮಣಿಯ ಮಾಜಿ ಶಾಸಕ, ದಲಿತರ ಬಗ್ಗೆ ಉಗ್ರ ವಿರೊಧಹೊಂದಿದ್ದ ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ.ಕೃಷ್ಣರೆಡ್ಡಿಯವರ ಬೆಂಬಲಿಗನಾಗಿದ್ದ. ಒಟ್ಟಾರೆ ಆಂಜನೇಯರೆಡ್ಡಿ ಮತ್ತು ಬುಚನಾಗಾರಿ ಭೈರೆಡ್ಡಿಯವರ ನಡುವೆ ವೈರತ್ವ ಕೂಡ ಹಾಗೆಯೇ ಇತ್ತು. ಇನ್ನು ಸದರಿ ಆಂಜನೇಯರೆಡ್ಡಿಗೆ ತಮ್ಮ ಮೇಲೆ ದಾಳಿ ನಡೆದ ಬಗ್ಗೆ ದಲಿತರು ಮಾಹಿತಿ ಕೂಡ ನೀಡಿದ್ದರು. ಹಾಗೆಯೇ ತನ್ನ ಬೆಂಬಲಿಗರಾದ ದಲಿತರ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಆಂಜನೇಯ ರೆಡ್ಡಿ, ಭೈರೆಡ್ಡಿ ಮತ್ತು ಆತನ ಬೆಂಬಲಿಗರನ್ನು ಅದಾಗಲೇ ಪ್ರಶ್ನಿಸಿದ್ದ ಕೂಡ. ಅಂದಹಾಗೆ ಈ ಸಮಯದಲ್ಲಿ ಅಂದರೆ ಆ ದಿನ ಆ ಸಂಜೆ ಬಿ.ಕೆ.ಆರ್ ಬಸ್ ಇಳಿದವರಲ್ಲಿ ದಲಿತರಾದ ಶ್ರೀರಾಮಪ್ಪ (ಮೊದಲೇ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನವರ ಸಹೋದರ), ಅಂಜನಪ್ಪ, ಶಂಕರಪ್ಪ, ಬಿ.ಕೆ.ಅಂಜನಪ್ಪ, ರಾವಣ ಮತ್ತು ಆಂಜನೇಯರೆಡ್ಡಿ ಇವರೆಲ್ಲರೂ ಇದ್ದರು. ಇವರೆಲ್ಲರೂ ಬಸ್ ಇಳಿಯುತ್ತಿದ್ದಂತೆ ಇವರಿಗಾಗಿ ಕಂಬಾಲಪಲ್ಲಿಯ ಆ ಗ್ರಾಮದಲ್ಲಿ ಅದಾಗಲೇ ಗುಂಪು ಸೇರಿದ್ದ ಭೈರೆಡ್ಡಿ ಮತ್ತವರ ಬೆಂಬಲಿಗರು ದಾಳಿ ನಡೆಸಿದರು. ದಲಿತರು ಹೆದರಿ ಓಡಿ ಹೋಗಿ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡು ಚಿಲಕ ಹಾಕಿಕೊಂಡರು. ಆದರೆ ಆಂಜನೇಯ ರೆಡ್ಡಿ ಹಾಗೆ ಮಾಡಲಿಲ್ಲ. ಬದಲಿಗೆ ಆತ ತನ್ನ ಪರ ಬೆಂಬಲಿಗ ಒಕ್ಕಲಿಗರ ಗುಂಪು ಕಟ್ಟಿಕೊಂಡು ಭೈರೆಡ್ಡಿಯ ವಿರುದ್ಧ ಗಲಾಟೆಗೆ ನಿಂತ ಮತ್ತು ಈ ಗಲಾಟೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಭೈರೆಡ್ಡಿಯ ಬೆಂಬಲಿಗ ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಜಗಳದಲ್ಲಿ ಕೊಲೆಯಾಗಿ ಹೋದ! ಈ ಕೊಲೆಯಾದದ್ದೇ ತಡ ಆಂಜನೇಯರೆಡ್ಡಿ ಮತ್ತು ಆತನ ಬೆಂಬಲಿಗರು ತಪ್ಪಿಸಿಕೊಂಡು ಓಡಿಹೋದರು. ಆದರೆ? ಅದಾಗಲೇ ದಲಿತರು ಹೆದರಿಕೆಯಿಂದ ಮನೆ ಸೇರಿಕೊಂಡು ಚಿಲಕ ಹಾಕಿಕೊಂಡಿದ್ದರಲ್ಲ? ಅಂತೆಯೇ ತಮ್ಮವನ ಸಾವಿಗೆ ಮೂಲ ಕಾರಣ ದಲಿತರೇ ಎಂದ ರೆಡ್ಡಿ ಒಕ್ಕಲಿಗರ ಆ ಉದ್ರಿಕ್ತ ಗುಂಪು ಮದ್ದಿರೆಡ್ಡಿ ಎಂಬುವವನ ನೇತೃತ್ವದಲ್ಲಿ ದಲಿತರ ಕೇರಿಯತ್ತ ನುಗ್ಗಿತು.
ಅಂದಹಾಗೆ ಇದೇ ಮದ್ದಿರೆಡ್ಡಿ ಕುರಿ ಕಳುವಿನ ಪ್ರಕರಣದ ಪ್ರಮುಖ ಆರೋಪಿ. ಇದೇ ಮದ್ದಿರೆಡ್ಡಿ ದಲಿತ ವೆಂಕಟರಮಣಪ್ಪನ ಹತ್ಯೆ ಆರೋಪಿ. ಇದೇ ಮದ್ದಿರೆಡ್ಡಿಯ ಮಗ ವೆಂಕಟರೆಡ್ಡಿ ಹಿಂದಿನ ದಿನ ದಲಿತ ಶಂಕರಪ್ಪನ ಮೇಲೆ ಹಲ್ಲೆ ನಡೆಸಿದ ಆರೋಪಿ. ಇಂತಹ ಆರೋಪಿಗಳ ಗುಂಪು ದಲಿತ ಶಿಕ್ಷಕ ಅಂಜನಪ್ಪ ಮತ್ತು ದಿವಂಗತ ವೆಂಕಟರಮಣಪ್ಪನ ಸಹೋದರ ಶ್ರೀರಾಮಪ್ಪನ ಮನೆಯತ್ತ ಧಾವಿಸಿತು. ಯಾವ ಪರಿಯೆಂದರೆ ಮೂರು ಪ್ರಮುಖ ದಲಿತರ ಆ ಮನೆಗಳಿಗೆ ಹೊರಗಿನಿಂದ ಬೀಗ ಜಡಿಯಲಾಯಿತು ಮತ್ತು ಆ ಮೂವರು ದಲಿತರ ಮನೆಗಳಿಗೆ ಹುಲ್ಲನ್ನು ಹೊದೆಸಲಾಯಿತು. ಹಾಗೆಯೇ ಸವರ್ಣೀಯರ ಆ ಗುಂಪು ಸೀಮೆಎಣ್ಣೆ ಮತ್ತು ಪೆಟ್ರೋಲ್‍ನ್ನು ಆ ಮೂವರು ದಲಿತರ ಮನೆಗಳಿಗೆ ಸುರಿಯಿತು. ಒಂದು ಸಣ್ಣ ಬೆಂಕಿಕಡ್ಡಿಯನ್ನು ಗೀರಿ ಅತ್ತ ಎಸೆಯಿತು, ಗಹಗಹಿಸಿ ನಕ್ಕಿತ್ತು! ಆ ವಿಕೃತ ನಗುವಿಗೆ ಕ್ಷಣಮಾತ್ರದಲ್ಲಿ ಆ ಮೂರು ದಲಿತರ ಮನೆಗಳು ಭಸ್ಮ! ಹಾಗೆಯೇ ಆ ಮೂರು ಮನೆಗಳಿಂದ ಹೊರ ತಂದ ಏಳು ದಲಿತರ ಹೆಣಗಳು 1)ಶ್ರೀರಾಮಪ್ಪ(25), 2)ಅಂಜನಪ್ಪ(27), 3)ರಾಮಕ್ಕ(70), 4)ಸುಬ್ಬಕ್ಕ(45) 5)ಪಾಪಮ್ಮ(46), 6)ನರಸಿಂಹಯ್ಯ(25), 7)ಚಿಕ್ಕಪಾಪಣ್ಣ(40).
ನ್ಯಾಯ-ಅನ್ಯಾಯದ ಕಥೆ:-ನಿಜ ಸತ್ತವರನ್ನು ವಾಪಸ್ಸು ತರಲು ಸಾಧ್ಯವಿಲ್ಲ. ಅವರ ಬದುಕನ್ನು ಮತ್ತೆಕಟ್ಟಲು ಸಾಧ್ಯವಿಲ್ಲ. ಆದರೆ ಬದುಕಿರುವ ಅವರ ಸಂಬಂಧಿಕರು ಕುಟುಂಬಸ್ಥರ ಅವರ ನೊಂದ ಶೋಷಿತ ಬಂಧುಗಳು? ಅವರನ್ನು ಬದುಕಿಸುವುದು ಬೇಡವೇ? ಖಂಡಿತ, ಅಂತಹ ಬದುಕು ದೊರೆಯುವುದು ಪಾಪಿಗಳಿಗೆ ಶಿಕ್ಷೆಯಾದಾಗ. ಹೊರಗಿನಿಂದ ಹುಲ್ಲು ತುರುಕಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದವರ ಕುತ್ತಿಗೆಗೆ ನೇಣು ಹಗ್ಗ ಬಿದ್ದಾಗ. ದುರಂತವೆಂದರೆ ಇದುವರೆಗೆ ಘಟನೆಯ ಹಳೆಯ ಕಥೆಯಾದರೆ ಇನ್ನು ಮುಂದೆ ಅದು ಬೇರೆಯದೇ ಕಥೆ! ನ್ಯಾಯ-ಅನ್ಯಾಯದ ವ್ಯಥೆ....
ದಲಿತರ ಆ ಏಳು ಜನರ ದಹನವಾದಾಗ ಅಂದು ರಾಜ್ಯದಲ್ಲಿದ್ದುದು ಎಸ್.ಎಂ.ಕೃಷ್ಣರ ಸರ್ಕಾರ. ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣರು ಅಂದು ಅಧಿಕಾರದಲ್ಲಿದ್ದಕ್ಕೆ ಕಂಬಾಲಪಲ್ಲಿಯ ಒಕ್ಕಲಿಗ ರೆಡ್ಡಿ ಸಮುದಾಯದವರು ಅಷ್ಟೊಂದು ತೀವ್ರತೆಯ ಮಟ್ಟಕ್ಕೆ ತಲುಪಿದ್ದು ಎಂಬ ಆರೋಪವಿದೆ. ಆದರೆ ಇತಿಹಾಸ ಬಲ್ಲವರಿಗೆ ಅದರ ಅರಿವಿರುವವರಿಗೆ ಅದು ಬರಿಯ ಆರೋಪವಲ್ಲ, ಸತ್ಯವೆಂಬುದು ತಿಳಿದಿದೆ. ಯಾಕೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‍ರವರು ಹೇಳುವುದೇ “ಅಸ್ಪøಶ್ಯತೆ ಹಾಗೆಂದರೆ ಅದು ಅಧಿಕಾರಹೀನತೆ” ಎಂದು. ಅಂದರೆ ದಲಿತರಿಗೆ ಅಧಿಕಾರ ಇಲ್ಲದ್ದರಿಂದ ಅವರು ಅಸ್ಪøಶ್ಯರಾದರು ಎಂದು. ಹಾಗೆಯೇ ಅದೇ ರಾಜಕೀಯ ಅಧಿಕಾರ ಅಂದು ತನ್ನ ಕೈಯಲ್ಲಿ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಆ ಪರಿ ವ್ಯಗ್ರÀಗೊಂಡಿದ್ದು. ಈ ನಿಟ್ಟಿನಲ್ಲಿ ದಲಿತರ ದಹನವಾದಾಗ ಸಹಜವಾಗಿ ಘಟಾನುಘಟಿಗಳು ಅಲ್ಲಿ ಭೇಟಿ ನೀಡಿದ್ದರು .ಪರಿಹಾರವನ್ನೂ ಘೋಷಿಸಲಾಯಿತು. ಹಾಗೆ ಸರ್ಕಾರ ತಕ್ಷಣ ನ್ಯಾಯಾಂಗ ತನಿಖೆ ಕೂಡ ಘೋಷಿಸಿತು. ಆದರೆ ಘಟನೆಗೆ ಪರೋಕ್ಷ ಕಾರಣರಾದ ಕೆಂಚನಹಳ್ಳಿಯ ಎಸ್.ಐ. ವೆಂಕಟರಮಣಪ್ಪನ ಮೇಲೆ ಯಾವುದೇ ತನಿಖೆಯಾಗಲಿಲ್ಲ. ಒಕ್ಕಲಿಗ ರಾಜಕಾರಣಿಗಳ ಕೃಪೆ ಪಡೆದಿದ್ದರಿಂದ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧವೇ ನಡೆಯಲಿಲ್ಲ. ದುರಂತವೆಂದರೆ ಡಿ.ಎಸ್.ಎಸ್.ನ ಅಂದಿನ ಪದಾಧಿಕಾರಿಗಳು, ಘಟನಾ ಸ್ಥಳಕ್ಕೆ ಅಂದು ಭೇಟಿ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಶ್ರೀಮತಿ ಸೋನಿಯಾಗಾಂಧಿಯವರಿಗೆ ಮನವಿ ಸಲ್ಲಿಸಿ ಘಟನೆಯ ನೈತಿಕ ಹೊಣೆಯ ಆಧಾರದ ಮೇಲೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಕಿತ್ತೊಗೆಯಬೇಕೆಂದು ಕೋರಿಕೊಂಡರಾದರೂ ಸೋನಿಯಾ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರೆಡ್ಡಿ ಒಕ್ಕಲಿಗ ಸಮುದಾಯದವರು 22-03-2000ರಂದು ಚಿಂತಾಮಣಿ ಬಂದ್ ನಡೆಸಿ ಅಂಬೇಡ್ಕರ್ ವಿರುದ್ಧ ಮತ್ತು ಅಂದಿನ ಡಿ.ಎಸ್.ಎಸ್.ನವರ ವಿರುದ್ಧ ಘೋಷಣೆ ಮೊಳಗಿಸಿದರು!
ಇಂತಹದ್ದೆಲ್ಲಾ ದುರಂತಗಳ ಮದ್ಯೆ ಘಟನೆಯ ಬಗ್ಗೆ ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಲಾಯಿತು. ಆಶ್ಚರ್ಯಕರವೆಂದರೆ ಸಿ.ಬಿ.ಐ. ತನಿಖೆ ಪ್ರಾರಂಭವಾದ ತಕ್ಷಣ ನ್ಯಾಯಾಂಗ ತನಿಖೆ ಹಿಂತೆಗೆದುಕೊಳ್ಳಲಾಯಿತು. ಯಾಕೆ ಎಂದು ಯಾರು ಕೇಳಲೇ ಇಲ್ಲ! ನಿಜ ಹೇಳಬೇಕೆಂದರೆ ರಾಜೀವ್‍ಗಾಂಧಿ ಹತ್ಯೆ ಪ್ರಕರಣ, ಕರ್ನಾಟಕದಲ್ಲಿ ಬಿ.ಜೆ.ಪಿ ಎಂ.ಎಲ್.ಎ ಚಿತ್ತರಂಜನ್ ಹತ್ಯೆ ಪ್ರಕರಣ ಹೀಗೆ ಇನ್ನಿತರ ಪ್ರಕರಣಗಳಲ್ಲಿ ನ್ಯಾಯಾಂಗ ಮತ್ತು ಸಿ.ಬಿ.ಐ ಎರಡೂ ರೀತಿಯ ತನಿಖೆ ನಡೆದು ತಪ್ಪಿಸ್ಥರು ಶಿಕ್ಷೆಗೀಡಾದರು. ಆದರೆ ಕಂಬಾಲಪಲ್ಲಿಯಲ್ಲಿ ಮಾತ್ರ ನ್ಯಾಯಾಂಗ ತನಿಖೆ ಹಿಂಪಡೆಯಲಾಯಿತು! ಪರಿಣಾಮ 2006 ಡಿಸೆಂಬರ್ 4ರಂದು ತೀರ್ಪು ನೀಡಿದ ಕೋಲಾರ ಜಿಲ್ಲಾ ನ್ಯಾಯಾಲಯ ಪ್ರತಿಕೂಲ ಸಾಕ್ಷಿಯ ನೆಪವೊಡ್ಡಿ ಕಂಬಾಲಪಲ್ಲಿಯ ಎಲ್ಲಾ 32 ಆರೋಪಿಗಳನ್ನು ಕುಲಾಸೆಗೊಳಿಸಿತು. ಪ್ರತಿಕೂಲ ಸಾಕ್ಷಿ ಎಂದರೆ ಪೊಲೀಸರ ಎದುರು ‘ಇಂತಹವರೆ ಬೆಂಕಿ ಹಚ್ಚಿದವರು’ ಎಂದು ಹೇಳಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಎದುರು ಉಲ್ಟಾ ಹೊಡೆದರು! ಸಕಾಳ ಗಂಗಾಳಪ್ಪ ಎಂಬ ಸಾಕ್ಷಿಯ ಹೇಳಿಕೆಯನ್ನೇ ದಾಖಲಿಸುವುದಾದರೆ “ಜೀವ ಬೆದರಿಕೆಯಿಂದಾಗಿ ನಾವು ಸತ್ಯ ಹೇಳಲಿಲ್ಲ”! ಹಾಗೆಯೇ ಘಟನೆಯಲ್ಲಿ ತನ್ನ ಹೆಂಡತಿ ರಾಮಕ್ಕ, ಮಕ್ಕಳಾದ ಶ್ರೀರಾಮಪ್ಪ, ಆಂಜನೇಯ, ಮಗಳಾದ ಪಾಪಮ್ಮನವರನ್ನು ಕಳೆದುಕೊಂಡ ಎಂ.ವೆಂಕಟರಾಯಪ್ಪ ಹೇಳುವುದು “ನಾನೊಬ್ಬನೇ ತಾನೇ ಏನು ಮಾಡಲು ಸಾಧ್ಯ? ಎಲ್ಲಾ ಸಾಕ್ಷಿಗಳಿಗೂ ಅವರು ಹಣ ಕೊಟ್ಟಿದ್ದಾರೆ”. ಪರಿಣಾಮ ವೆಂಕಟರಾಯಪ್ಪ ನ್ಯಾಯಾಲಯದ ಎದುರು ಉಲ್ಟಾ ಸಾಕ್ಷಿ ಹೇಳಿದ್ದಾನೆ ಅಂತೆಯೇ ಆ 32 ಹಂತಕರ ಖುಲಾಸೆಯಾಗಿದೆ! ಹಾಗೆಯೇ ಖುಲಾಸೆಯಾದ ಆ ದಿನ (ಡಿಸೆಂಬರ್ 4, 2006) ಕಂಬಾಲಪಲ್ಲಿಯ ರೆಡ್ಡಿ ಜನರ ಮನೆಯಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಬಿಡುಗಡೆಗೊಂಡ ಆ ಆರೋಪಿಗಳಿಗೆ ಅಭಿನಂದನೆಯ ಸುರಿಮಳೆ!
ದುರಂತವೆಂದರೆ ಈ ಸಂಬಂಧ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದಾಗ ಅದರ ತೀರ್ಪು ಕೂಡ ಮೊನ್ನೆ ಆಗಸ್ಟ್ 20 ರಂದು ಹೊರಬಿದ್ದಿದೆ. ಜಸ್ಟೀಸ್ ಕೆ.ಎನ್.ಫಣೀಂದ್ರ ಮತ್ತು ಮೊಹನ ಶಾಂತನಗೌಡರ್‍ರವರಿದ್ದ ಪೀಠ ಕೋಲಾರ ಜಿಲ್ಲೆಯ ಕೆಳಹಂತದ ನ್ಯಾಯಾಲಯ ಡಿಸೆಂಬರ್ 4, 2006 ರಂದು ಸಾಕ್ಷಿಯ ಕೊರತೆಯ ಆಧಾರದ ಮೇಲೆ ನೀಡಿದ್ದ ಕಂಬಾಲಪಲ್ಲಿ ತೀರ್ಪನ್ನು ಎತ್ತಿ ಹಿಡಿದಿದೆ. ಅಂದಹಾಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಎಸ್. ಚಂದ್ರಮೌಳಿಯ ಪ್ರಕಾರ ಹೇಳುವುದಾದರೆ “ಇಲ್ಲಿ 91 ಸಾಕ್ಷಿಗಳಲ್ಲಿ 56 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ತನಿಖಾಧಿಕಾರಿ ಮತ್ತು ಸಂಬಂಧಪಟ್ಟ ವೈದ್ಯರ ವಿಚಾರಣೆ ನಡೆದಿಲ್ಲ. ಹಾಗೆಯೇ ಗಾಯ ಪ್ರಮಾಣಪತ್ರದ ದಾಖಲೆಗಳನ್ನು ಪರಿಗಣಿಸಿಲ್ಲ. ಅದಲ್ಲದೆ ಪೊಲೀಸರ ಮುಂದೆ ಸತ್ಯ ಸಾಕ್ಷಿ ನುಡಿದಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಮುಂದೆ ತಮ್ಮ ಸಾಕ್ಷಿಗಳನ್ನು ವಿರುದ್ಧವಾಗಿ ಹೇಳಿದ್ದಾರೆ! ಅರ್ಥಾತ್ ಹಣ ಪಡೆದು ಬೆದರಿಕೆಗಳಿಗೊಳಗಾಗಿ ಸುಳ್ಳು ಹೇಳಿದ್ದಾರೆ ಮತ್ತು ಈ ಸಂದರ್ಭದಲ್ಲಿ ತನಿಖಾಧಿಕಾರಿಯಾಗಲಿ ಅಥವಾ ನ್ಯಾಯಾಲಯವಾಗಲಿ ಘಟನೆ (7 ದಲಿತರ ಜೀವಂತ ದಹನ) ನಡೆಯಲು ನಿಜಕ್ಕೂ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ. ಆ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ರಕ್ಷಿಸಲು ನ್ಯಾಯಾಲಯ ಈ ದಲಿತರ ದಹನದ ಈ ಘಟನೆಯನ್ನು ಮರುವಿಚಾರಣೆಗೆ ಒಳಪಡಿಸಬೇಕು” ಎಂದು ಕೇಳಿಕೊಂಡರು. ಆದರೆ ಎಸ್.ಪಿ.ಪಿ. ಯವರ ಈ ಮನವಿಗೆ ಹೈಕೋರ್ಟ್ ಪೀಠ ಸ್ಪಂಧಿಸಲಿಲ್ಲ. ಬದಲಿಗೆ “ಕೆಳಹಂತದ ನ್ಯಾಯಾಲಯ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿದೆ. ಘಟನೆಯ ಪಂಚನಾಮೆ, ಮಹಜರನ್ನು ಗಣನೆಗೆ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಪಿ.ಯವರ ಮನಸೋ ಇಚ್ಛೆಗೆ ತಕ್ಕಂತೆ ಹೆಚ್ಚಿನ ಸಾಕ್ಷಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಎಸ್.ಪಿ.ಪಿ.ಯವರ ಮನವಿಯನ್ನು ತಳ್ಳಿ ಹಾಕಿ ಕೋಲಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2006 ಡಿಸೆಂಬರ್ 4 ರಂದು ಕಂಬಾಲಪಲ್ಲಿಯ 32 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಈಗಿನ ತೀರ್ಪಿನಲ್ಲಿ ಹೈಕೋರ್ಟ್ ಎತ್ತಿಹಿಡಿದಿದೆ.
ಈ ನಿಟ್ಟಿನಲ್ಲಿ ಇದು ನ್ಯಾಯವೇ? ಅಥವಾ ಘಟನೆ ನಮ್ಮ ಕಣ್ಣೆದುರೆ ನಡೆದರೂ ನಾವು ನೋಡುತ್ತಾ ಕೂರುವುದು ಇದು ಅನ್ಯಾಯವೇ? ಏನೂ ತಿಳಿಯುತ್ತಿಲ್ಲ. ಆದರೆ ದಲಿತರ ಜೀವ ಮತ್ತು ಜೀವನ ಇಂತಹ ನಿರಂತರ, ಅಂದರೆ ಮಹಾರಾಷ್ಟ್ರದ ಖೈರ್ಲಾಂಜಿ ಹತ್ಯಾಕಾಂಡ ತೀರ್ಪು, ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡ ತೀರ್ಪು ಮತ್ತು ಸದ್ಯದ ಕಂಬಾಲಪಲ್ಲಿ ತೀರ್ಪುಗಳ ಮೂಲಕ ಕಾಲಕಸವಾಗುತ್ತಿರುವುದು ನಿಶ್ಚಿತ. ಹಾಗೆಯೇ “ಇಂತಹ ತೀರ್ಪುಗಳ ವ್ಯವಸ್ಥೆಯ ಇಂತಹ ರಕ್ಷಣೆ” ದಲಿತರಿಗೆ ಯಾವ ಭರವಸೆಯನ್ನಾದರೂ ನೀಡುತ್ತದೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಖಂಡಿತ, ಒಂದು ಆಶಾಕಿರಣ ಕಾಣುತ್ತದೆ. ಅದೆಂದರೆ ಕಂಬಾಲಪಲ್ಲಿ ಘಟನೆ ನಡೆದಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಒಕ್ಕಲಿಗರು. ಅವರ ಬಳಿ ರಾಜಕೀಯ ಅಧಿಕಾರ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಹಾಗೆ ‘ಬೆಂಕಿ ಹಚ್ಚಲು’ ಕಾರಣವಾಯಿತು. ಹಾಗೆಯೇ ಅಂತಹ ಅಧಿಕಾರ ಅವರ ಬಳಿ ನಿರಂತರ ಇದ್ದಿದ್ದರಿಂದಲೇ ಕಂಬಾಲಪಲ್ಲಿ ವಿಚಾರಣೆ ನಡೆಸುತ್ತಿದ್ದ ಕೋಲಾರದ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರೊರ್ವರನ್ನು ಎತ್ತಂಗಡಿ ಮಾಡಿಸಿ ಬೇರೆಯವರನ್ನು ಅಲ್ಲಿ ಹಾಕಿಸಿದ್ದು, ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನೇಮಕಗೊಂಡಿದ್ದ ಎಸ್.ಪಿ.ಪಿ.ಯವರನ್ನು ಹಿಂತೆಗೆದುಕೊಂಡಿದ್ದು.
ಒಟ್ಟಾರೆ ದೌರ್ಜನ್ಯ, ರಾಜಕೀಯ ಅಧಿಕಾರ ಇಲ್ಲದವರಿಗೆ ನಡೆಯುತ್ತದೆ ಮತ್ತು ಅಂತಹ ಅಧಿಕಾರ ದೊರೆಯದಿದ್ದರೆ ದೌರ್ಜನ್ಯ ಒಂದಿಲ್ಲೊಂದು ರೂಪಗಳಲ್ಲಿ ತನ್ನ ರೌದ್ರಾವತಾರವನ್ನು ತೋರುತ್ತಲೇ ಇರುತ್ತದೆ. ಅದಕ್ಕೆ ಅಂಬೇಡ್ಕರ್ ಹೇಳಿದ್ದು “ರಾಜಕೀಯ ಅಧಿಕಾರ ಪ್ರಗತಿಯ ಹೆಬ್ಬಾಗಿಲು ತೆಗೆಯುವ ಬೀಗದ ಕೈ” ಎಂದು. ಅಂದಹಾಗೆ ಅಂತಹ ರಾಜ್ಯಾಧಿಕಾರದ ಬೀಗದ ಕೈ ರಕ್ಷಣೆಯ ಅಸ್ತ್ರ ಕೂಡ ಆಗುತ್ತದೆ. ಆಗಬಲ್ಲದು. ಈ ನಿಟ್ಟಿನಲ್ಲಿ ದಲಿತರು ಇನ್ನು ಮುಂದಾದರೂ ಅದನ್ನು ಪಡೆಯುವ ದಿಕ್ಕಿನಲ್ಲಿ ಚಿಂತಿಸಬೇಕಷ್ಟೆ.
No comments:
Post a Comment