Monday, 4 May 2015

ಮನಸ್ಸು: ಬುದ್ಧನ ಬೋಧನೆಯ ಪ್ರಮುಖ ತಿರುಳು

-ರಘೋತ್ತಮ ಹೊ.ಬ

  ಒಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ ಮಾರನೇ ದಿನ ತನ್ನ ನಗರಕ್ಕೆ ಬರುವಂತೆ, ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ, ತಮ್ಮ ಬೋಧನೆ ಮತ್ತು ವ್ಯಕ್ತಿತ್ವದ ಶ್ರೇಷ್ಠತೆಯನ್ನು ತನ್ನ ಜನರ ಮುಂದೆ ಪ್ರದರ್ಶಿಸುವಂತೆ ಆತ ಬುದ್ಧರನ್ನು ಆಹ್ವಾನಿಸಿದ. ಹಾಗೆಯೇ ಆತನ ಆಹ್ವಾನಕ್ಕೆ ಸಮ್ಮತಿಸಿದ ಬುದ್ಧರು ಮಾರನೆಯ ದಿನ ತನ್ನ ಉಪಾಸಕರೊಡನೆ ಪ್ರಸೇನಜಿತನ ನಗರವನ್ನು ಪ್ರವೇಶಿಸಿದರು. ನಗರದ ನಾಲ್ಕು ಬೀದಿಗಳ ಮೂಲಕ ನಡೆದು ಅವರು ತಮಗೆ ನಿಗಧಿಪಡಿಸಿದ ಸ್ಥಳದಲ್ಲಿ ಕುಳಿತುಕೊಂಡರು ಮತ್ತು ವಿನಯಪೂರ್ವಕವಾಗಿ ಪ್ರಸೇನಜಿತ ನೀಡಿದ ಆತಿಥ್ಯ ಸ್ವೀಕರಿಸಿ ಬುದ್ಧರು ನಗರದ ನಾಲ್ಕು ಹೆದ್ದಾರಿಗಳು ಕೂಡುವ ಸ್ಥಳದಲ್ಲಿ ವಿಶಾಲ ಸಭಿಕರ ಮುಂದೆ ತಮ್ಮ ಬೋಧನೆ ಪ್ರಾರಂಭಿಸಿದರು.
   ಬುದ್ದರು ಹೀಗೆ ಬೋಧನೆ ನಡೆಸುತ್ತಿರಬೇಕಾದರೆ ಅಲ್ಲಿ ಇಬ್ಬರು ಶ್ರೀಮಂತರು ಉಪಸ್ಥಿತರಿದ್ದರು. ಅವರಲ್ಲಿ ಮೊದಲನೆಯವನು ಹೇಳಿದ “ಎಂತಹ ಶ್ರೇಷ್ಠ ಜ್ಞಾನ, ಅದರ ಅನ್ವಯದ ವ್ಯಾಪಕತೆ, ನಮ್ಮ ಅಂತರಂಗ ಪರಿಶೋಧಿಸುವ ಅದರ ಗುಣ ಇಂತಹದ್ದನ್ನು ಸಾರ್ವಜನಿಕವಾಗಿ ಬೋಧಿಸಲಾಗುತ್ತದೆಯೆಂದರೆ, ನಿಜಕ್ಕೂ ಇದು ರಾಜನ ಶ್ರೇಷ್ಠ ನಡವಳಿಕೆ”.
   ಇನ್ನು ಇದಕ್ಕೆ ವಿರುದ್ಧವಾಗಿ ಎರಡನೆಯ ಶ್ರೀಮಂತ ಹೇಳಿದ್ದು “ಇಂತಹ ಮನುಷ್ಯನನ್ನು (ಬುದ್ಧನನ್ನು) ಕರೆತಂದು ಬೋಧನೆ ನೀಡಿಸುತ್ತಿರುವ ರಾಜನ ಈ ನಡೆ ಎಂಥ ಅವಿವೇಕದ್ದು? ಹಾಗೆಯೇ ಆ ಬುದ್ಧನೂ ಅಷ್ಟೆ ಹಸುವಿನ ಹಿಂದೆ ಕರು ಅಡ್ಡಾಡುವಂತೆ, ಕುರಿಯಂತೆ ಅರಚುತ್ತಾ ರಾಜನ ಹಿಂದೆ ಹೋಗುತ್ತಿದ್ದಾನೆ”.
ಹೀಗೆ ಹೇಳುತ್ತಾ ಆ ಶ್ರೀಮಂತರಿಬ್ಬರು ಪರಸ್ಪರ ವಿದಾಯ ಹೇಳಿ ತಾವು ಉಳಿದುಕೊಂಡಿದ್ದ ವಸತಿಗೃಹಕ್ಕೆ ತೆರಳಿದರು. ಅದರಲ್ಲಿ ಮೊದಲನೆಯ ಶ್ರೀಮಂತ ಸ್ವಲ್ಪ ಮದ್ಯಪಾನ ಮಾಡಿ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡು ತನ್ನ ಸೇವಕರೊಡನೆ ವಸತಿಗೃಹದ ತನ್ನ ಕೋಣೆಯಲ್ಲಿ ಉಳಿದುಕೊಂಡ. ಆದರೆ ಅದಕ್ಕೆ ತದ್ವಿರುದ್ಧವಾಗಿ ಎರಡನೆಯ ಶ್ರೀಮಂತ ಒಳಗಿನ ಕೆಟ್ಟತನದಿಂದ ಪ್ರೇರೇಪಿಸಲ್ಪಟ್ಟು ಮತಿಮೀರಿ ಮದ್ಯಪಾನ ಮಾಡಿದ. ಹೇಗೆಂದರೆ ಆತನಿಗೇ ಪರಿವೇ ಇಲ್ಲದೆ ತನ್ನ ವಸತಿಗೃಹದ ಮುಂಭಾಗದ ರಸ್ತೆಯಲ್ಲೇ ಆತ ಮಲಗಿದ ಮತ್ತು  ಬೆಳಕುಹರಿಯುತ್ತಲೇ ಅವನದೇ ಸೇವಕರು ರಸ್ತೆಯಲ್ಲಿ ಮಲಗಿರುವುದು ಯಾರು ಎಂಬುದನ್ನು ಗುರುತಿಸದೇ ಕುದುರೆ ಗಾಡಿಯನ್ನು ಆತನ ಮೇಲೆ ಹರಿಸಿದರು. ಪರಿಣಾಮ ಆ ಶ್ರೀಮಂತ ಅಸುನೀಗಿದ.
ಆದರೆ ಮೊದಲನೆಯ ಶ್ರೀಮಂತ? ಆತ ದೂರದ ರಾಜ್ಯವೊಂದಕ್ಕೆ ತೆರಳುತ್ತಲೇ ಆತನ ಮುಂದೆ ಕುದುರೆಯೊಂದು ಬಂದು ಮೊಣಕಾಲೂರಿತು. ಆಶ್ಚರ್ಯವೆಂಬಂತೆ ಶ್ರೀಮಂತ ಆ ಕುದುರೆಯನ್ನೇರುತ್ತಲೇ ಅದು ಆತನನ್ನು ಆ ರಾಜ್ಯದ ಆಸ್ಥಾನಕ್ಕೆ ಹೊಯ್ದಿತ್ತು ಮತ್ತು ರಾಜಕುದುರೆ ಆರಿಸಿತರುವ ವ್ಯಕ್ತಿಗಾಗಿ ಕಾಯುತ್ತಿದ್ದ ಅಲ್ಲಿಯ ಜನರು ಕುದುರೆ ಹೀಗೆ ಶ್ರೀಮಂತನನ್ನು ಆರಿಸಿತರುತ್ತಿದ್ದಂತೆ ಆತನನ್ನು ಸಿಂಹಾಸನಕ್ಕೇರಿಸಿದರು. ಪರಿಣಾಮ ಆ ಶ್ರೀಮಂತ ಆ ರಾಜ್ಯದ ರಾಜನಾದ.
   ಹೀಗೆ ಇಂತಹ ವಿಚಿತ್ರ ಘಟನೆಗಳು ನಡೆದ ಕೆಲ ದಿನಗಳ ತರುವಾಯ ರಾಜನಾದ ಆ ಶ್ರೀಮಂತ ಒಮ್ಮೆ ಸ್ವತಃ ಬುದ್ಧನನ್ನು ತನ್ನ ರಾಜ್ಯಕ್ಕೆ ಉಪದೇಶನೀಡುವಂತೆ ಆಹ್ವಾನಿಸಿದ. ರಾಜನಾಗಿ ನೇಮಕಗೊಂಡ ಆ ಶ್ರೀಮಂತನ ಆಹ್ವಾನಕ್ಕೆ ಮನ್ನಿಸಿದ ಬುದ್ಧರು ಆತನ ರಾಜ್ಯಕ್ಕೆ ಆಗಮಿಸಿದರು ಮತ್ತು ಆತನ ಆತಿಥ್ಯ ಸ್ವೀಕರಿಸಿ ಆ ಶ್ರೀಮಂತನ ಎದÀುರೇ “ಹೇಗೆ ಕೆಟ್ಟ ಮನಸ್ಸನ್ನು ಹೊಂದಿದ್ದ ಒಬ್ಬ ಶ್ರೀಮಂತ ಸಾವು ಕಂಡ, ಒಳ್ಳೆಯ ಮನಸ್ಸು ಹೊಂದಿದ್ದ ಮತ್ತೊಬ್ಬ ಹೇಗೆ ಉನ್ನತ ಸ್ಥಾನಕ್ಕೇರಿದ” ಎಂಬುದನ್ನು ವಿವರಿಸುತ್ತಾ “ಮನಸ್ಸೇ ಎಲ್ಲದಕ್ಕೂ ಮೂಲ. ಮನಸ್ಸೇ ಗುರು, ಮನಸ್ಸೇ ಕಾರಣ. ಮನಸ್ಸಿನ ಮಧ್ಯೆ ಕೆಟ್ಟ ಆಲೋಚನೆ ಇದ್ದರೆ ಆಗ ಮೂಡಿ ಬರುವ ಪದಗಳು ಕೆಟ್ಟದ್ದಾಗಿರುತ್ತವೆ, ಕ್ರಿಯೆಗಳೂ ಕೆಟ್ಟದ್ದಾಗಿರುತ್ತವೆ ಮತ್ತು ಅಂತಹ ಪಾಪದ ಫಲವಾಗಿ ಮೂಡಿಬರುವ ದುಃಖ ಆ ಮನುಷ್ಯನನ್ನು ಹೇಗೆ ರಥದ ಚಕ್ರಗಳು ಆತನನ್ನು ಹಿಂಬಾಲಿಸುತ್ತವೋ ಹಾಗೆ ಹಿಂಬಾಲಿಸುತ್ತವೆ” ಎನ್ನುತ್ತಾ... “ಆದ್ದರಿಂದ ಮನಸ್ಸೇ ಎಲ್ಲದಕ್ಕೂ ಮೂಲ. ಇಂತಹದ್ದನ್ನು ಮಾಡು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಇಂತಹದ್ದನ್ನು ಯೋಚಿಸು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮೂಡಿ ಬರುವ ಪದಗಳು, ಮಾಡುವ ಕ್ರಿಯೆ ಎಲ್ಲವೂ ಒಳ್ಳೆಯದ್ದಾಗಿರುತ್ತವೆ ಮತ್ತು ಅಂತಹ ಒಳ್ಳೆಯ ನಡವಳಿಕೆಯ ಫಲವಾಗಿ ಮೂಡಿಬರುವ ಸಂತೋಷ ಆ ಮನುಷ್ಯನನ್ನು ಹೇಗೆ ವಸ್ತುವೊಂದನ್ನು ಆತನ ನೆರಳು ಹಿಂಬಾಲಿಸುತ್ತದೆಯೋ ಹಾಗೆ ಹಿಂಬಾಲಿಸುತ್ತದೆ”. ಬುದ್ಧ ಹೀಗೆ ಹೇಳುತ್ತಲೇ ರಾಜನ ಸ್ಥಾನಕ್ಕೆ ಏರಿದ ಆ ಶ್ರೀಮಂತ, ಆತನ ಮಂತ್ರಿಗಳು, ಆತನ ರಾಣಿ ಎಲ್ಲರೂ ಬುದ್ಧನ ಅನುಯಾಯಿಗಳಾಗುತ್ತಾರೆ. (ಆಧಾರ: ‘ಬುದ್ಧ ಅಂಡ್ ಹಿಸ್ ಧಮ್ಮ’, ಲೇಖಕರು: ಡಾ.ಅಂಬೇಡ್ಕರ್, ಪು.282)
  ಒಟ್ಟಾರೆ ಬುದ್ಧನ ಪ್ರಕಾರ ಜಗತ್ತಿನ್ನೆಲ್ಲ ದುಃಖಗಳಿಗೆ, ನೋವುಗಳಿಗೆ ಕಾರಣ ಮನುಷ್ಯನ ಮನಸ್ಸು. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಮೂಡಿಬಂದರೆ ಸಂತಸ ತಾನಾಗೇ ನಮ್ಮತ್ತ ಹರಿದುಬರುತ್ತದೆ. ಕೆಟ್ಟ ಆಲೋಚನೆ ಮೂಡಿಬಂದರೆ ದುಃಖ ತಾನಾಗೇ ಅಂತಹವರನ್ನು ಹಿಂಬಾಲಿಸುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರಸ್ತಾಪಿತವಾಗಿರುವ ಆ ಶ್ರೀಮಂತರಿಬ್ಬರ ದೃಷ್ಟಾಂತದಲ್ಲಿ ಬುದ್ಧನ ಬೋಧನೆಯ ಆ ಪ್ರಮುಖ ತಿರುಳು ನಮಗೆ ಸ್ಪಷ್ಟವಾಗುತ್ತದೆ, ಇಡೀ ಜಗತ್ತಿಗೇ ಸುಸ್ಪಷ್ಟವಾಗಿ ತಿಳಿಯುತ್ತದೆ.

                   

Tuesday, 28 April 2015

ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ನೀರು ಕೊಡದ  ಆ ಧರ್ಮದಲ್ಲಿ......

                    -ರಘೋತ್ತಮ ಹೊ.ಬ.

1. ಧರ್ಮಕ್ಕಾಗಿ ಮನುಷ್ಯನಲ್ಲ; ಮನುಷ್ಯನಿಗಾಗಿ ಧರ್ಮ.
2. ಮಾನವರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
3. ಸಂಘಟಿತರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
4. ಸಾಮಥ್ರ್ಯ ಗಳಿಸಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
5. ಸಮಾನತೆ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
6. ಸ್ವಾತಂತ್ರ್ಯ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
7. ನಿಮ್ಮ ಕೌಟುಂಬಿಕ ಜೀವನವನ್ನು ಸುಖಮಯಗೊಳಿಸಿಕೊಳ್ಳಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
   ದಲಿತರು ಯಾಕೆ ಮತಾಂತರ ಆಗಬೇಕು ಎಂಬುದಕ್ಕೆ ಅಂಬೇಡ್ಕರರು ಹೊರಡಿಸಿದ್ದ ಘೋಷಣೆಗಳಿವು. ಈ ಘೋಷಣೆಗಳು 1936 ಮೇ 30, 31ರಂದು ಮುಂಬೈನ ದಾದರ್‍ನಲ್ಲಿ ಅಂಬೇಡ್ಕರರು ತನ್ನವರನ್ನು ಮತಾಂತರಕ್ಕೆ ಅಣಿಗೊಳಿಸಲು ಆಯೋಜಿಸಿದ್ದ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿದ್ದವು. ಅಂಬೇಡ್ಕರರು ಈ ಸಮ್ಮೇಳನ ಆಯೋಜಿಸಲಿಕ್ಕೆ ಹಿನ್ನೆಲೆ 1935 ಅಕ್ಟೋಬರ್ 13ರಂದು “ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ, ಅದು ನನ್ನ ಕೈಲಿರಲಿಲ್ಲ. ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ” ಎಂದು ಘರ್ಜನೆ ಮೊಳಗಿಸಿದ್ದುದ್ದಾಗಿತ್ತು. ಅಂಬೇಡ್ಕರರು ಹೀಗೆ ಘರ್ಜನೆ ಮೊಳಗಿಸಲಿಕ್ಕೆ ಹಿಂದೂ ಧರ್ಮದಿಂದ ಅವರು ಆ ಸಮಯದಲ್ಲಿ ಸತತ 5 ವರ್ಷ ಅವಮಾನಕ್ಕೀಡಾಗಿದ್ದದ್ದು ಕಾರಣವಾಗಿತ್ತು. ಹೇಗೆಂದರೆ ನಾಸಿಕ್‍ನ ಕಾಳಾರಾಂ ದೇವಸ್ಥಾನದ ಪ್ರವೇಶ ಪಡೆಯಲು ಸತತ 5ವರ್ಷ ಹೋರಾಟ ನಡೆಸಿದ್ದ ಅಂಬೇಡ್ಕರರು ತಮ್ಮ ಆ ಹೋರಾಟದಲ್ಲಿ ವಿಫಲತೆ ಕಂಡಿದ್ದರು ಅರ್ಥಾತ್ ಹಿಂದೂಗಳಿಂದ ವೈಫಲ್ಯ ಕಂಡಿದ್ದರು, ಹಾಗೆಯೇ ಹಲ್ಲೆಗೊಳಗಾಗಿದ್ದರು.
   ಬಾಬಾಸಾಹೇಬರು ಜೀವನದಲ್ಲಿ ಯಾವುದೇ ಹೋರಾಟವನ್ನು ತಮಾಷೆಗೆ ತೆಗೆದುಕೊಂಡವರಲ್ಲ. ಫಲಿತಾಂಶ ಬರಬೇಕು ಇಲ್ಲದಿದ್ದರೆ, ಏನು ಫಲಿತಾಂಶ ಬರಬೇಕು ಎಂಬುದನ್ನು ಅವರೇ ನಿರ್ಧರಿಸಿಬಿಡುತ್ತಿದ್ದರು. ನಾಸಿಕ್‍ನ ಕಾಳಾರಾಂ ದೇವಸ್ಥಾನ ಪ್ರವೇಶವನ್ನು ಅವರು ಅಕ್ಷರಶಃ ಬಯಸಿದ್ದರು, ಫಲ ಸಿಗಲಿಲ್ಲ. ಆದರೆ ಆ ಫಲಕ್ಕೆ ಅವರು ಹಿಂದೂ ಧರ್ಮ ತೊರೆಯುವ ಘರ್ಜನೆಯ ಮೆರುಗು ನೀಡಿದ್ದರು. ಸುಮ್ಮನೇ ಮೆರುಗು ನೀಡಿದರಾಯಿತೆ? ಕಾರ್ಯರೂಪಕ್ಕೆ ಬರುವುದು ಬೇಡವೆ? ಅದಕ್ಕೇ ಅಂಬೇಡ್ಕರರು ಆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಮ್ಮೇಳನ ಆಯೋಜಿಸಿದ್ದು ಮತ್ತು ಅದಕ್ಕೆ ಸ್ಫೂರ್ತಿ ಎಂಬಂತೆ ಈ ಘೋಷಣೆಗಳನ್ನು ಹೊತ್ತ ಫಲಕಗಳು.
     ಅಂಬೇಡ್ಕರರ ಉಳಿದ ಘೋಷಣೆಗಳನ್ನು ದಾಖಲಿಸುವುದಾದರೆ
8. ನಿಮ್ಮನ್ನು ಮಾನವರಂತೆ ಕಾಣದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
9. ನಿಮ್ಮನ್ನು ದೇವಸ್ಥಾನಗಳನ್ನು ಪ್ರವೇಶಿಸಲಿಕ್ಕೆ ನಿರ್ಬಂಧಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
10. ನಿಮಗೆ ಕುಡಿಯುವ ನೀರನ್ನು ನಿರಾಕರಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
11. ನೀವು ಶಿಕ್ಷಣ ಪಡೆಯುವುದನ್ನು ಒಪ್ಪದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
12. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ಅವಮಾನಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
13. ನೀವು ಉದ್ಯೋಗ ಪಡೆಯಲಿಕ್ಕೆ ತಡೆಯೊಡ್ಡುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
    ಹೀಗೆ ಕೇಳುತ್ತಾ ಹೋಗುತ್ತವೆ ಅಂಬೇಡ್ಕರರ ಆ ಪ್ರಶ್ನಾರೂಪದ ಆ ಘೋಷಣೆಗಳು. ಅಂಬೇಡ್ಕರರ ಈ ಪ್ರಶ್ನೆಗಳು ಅದು ಅಂದಿನ 1936ಕ್ಕೆ ಸೀಮಿತವೆಂಬಂತೆ ಕಾಣುತ್ತವೆಯೇ? ಖಂಡಿತ ಇಲ್ಲ. ಅವು ಈಗಲೂ ಪ್ರಸ್ತುತ, ಅಂತೆಯೇ ಅಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತವೆ. ಬೇಡ, ಅಂತಹ ಪ್ರಸ್ತುತತೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವುದು ಬೇಡ. ಬದಲಿಗೆ ಅಂಬೇಡ್ಕರರ ಅಂತಹ ಉಳಿದ ಘೋಷಣೆಗಳತ್ತ ಗಮನಹರಿಸುವುದಾದರೆ...
14. ಮನುಷ್ಯ ಮನುಷ್ಯರ ನಡುವೆ ಸಹಜ ಸಂಬಂಧವನ್ನು ನಿಷೇಧಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ಬಲಪ್ರದರ್ಶನ.
15. ಮಾನವತೆಗೆ ಮಾನ್ಯತೆ ನೀಡುವುದನ್ನು ಅಧರ್ಮವೆಂದು ಪರಿಗಣಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ರೋಗ.
16. ಅಪವಿತ್ರ ಪ್ರಾಣಿಗಳ ಸ್ಪರ್ಶವನ್ನು ಮಾನ್ಯಮಾಡುವ ಆದರೆ ಮಾನವರ ಸ್ಪರ್ಶವನ್ನು ನಿಷೇಧಿಸುವ ಧರ್ಮ ಅದೊಂದು ಧರ್ಮವೇ ಅಲ್ಲ, ಬದಲಿಗೆ ಅದೊಂದು ಮೂರ್ಖತನ.
17. ಒಂದು ವರ್ಗ ಶಿಕ್ಷಣ ಪಡೆಯದಂತೆ ಪ್ರತಿಬಂಧಿಸುವ, ಅದು ಐಶ್ವರ್ಯ ಪಡೆಯದಂತೆ, ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದದಂತೆ ನಿರ್ಬಂಧಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಮಾನವ ಜೀವನ ಅಪಹಾಸ್ಯ.
18. ಬಡವನನ್ನು ಬಡವನಂತೆಯೇ ಇರಲು, ಅಶಿಕ್ಷಿತನನ್ನು ಅಶಿಕ್ಷಿತನಂತೆಯೇ ಇರಲು ಒತ್ತಾಯಪಡಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಶಿಕ್ಷೆ.
  ಸಾಕೆ? ಅಂಬೇಡ್ಕರರ ಅಂತಹ ಘೋಷಣಾ ರೂಪದ ವಾಖ್ಯೆ? ಅಥವಾ ಇದಕ್ಕಿಂತಲೂ ಹೆಚ್ಚು ಇನ್ನೇನಾದರೂ ಬೇಕೆ? ಖಂಡಿತ ಸಾಕೆನಿಸುತ್ತದೆ. ಧರ್ಮವೆಂದರೆ ಅದೇನು ಗೊಂಬೆಯಲ್ಲ, ಪ್ರಾಣಿಯಲ್ಲ, ಪಕ್ಷಿಯಲ್ಲ. ಗಿಡ-ಮರ, ರೆಂಬೆ-ಕೊಂಬೆ, ನವಿಲು-ಗುಬ್ಬಚ್ಚಿ ಯಾವುದೂ ಅಲ್ಲ. ಬದಲಿಗೆ ಅದೊಂದು ಹಿತಾಸಕ್ತಿಗಳನ್ನು ಹೊಂದಿರುವ ಮನುಷ್ಯರ ಸಮೂಹ. ಅಂತಹ ಮನುಷ್ಯರ ಸಮೂಹದ ಸಂಗದ ಬಗ್ಗೆ ಕಡೆಯದಾಗಿ ಹೇಳುವ ಅಂಬೇಡ್ಕರರ ಘೋಷಣೆಗಳನ್ನು ಕೇಳಿ.
19. ಯಾರು ದೇವರನ್ನು ಸರ್ವವ್ಯಾಪಿ ಎಂದು ಬೋಧಿಸುತ್ತಾರೆಯೋ ಮತ್ತು ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅಂತಹ ಜನರ ಜೊತೆ ಸೇರಬೇಡಿ.
20. ಯಾರು ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ಕುಡಿಯಲು ನೀರು ಕೊಡದೆ ನಿಷೇಧಿಸಿ ಅವರನ್ನು ಕೊಲ್ಲುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅವರ ಜೊತೆ ಸೇರಬೇಡಿ. (ಅಂಬೇಡ್ಕರ್ ಬರಹಗಳು. ಇಂಗ್ಳಿಷ್.ಸಂ.17, ಭಾಗ.3, ಪು.113)
  ಬೇಸರವೆನಿಸುತ್ತಿದೆಯೇ ಮನಸ್ಸು ಕಳಾಹೀನವಾಗುತ್ತಿದೆಯೇ ಅಂಬೇಡ್ಕರರ ಈ ಘೋಷಣೆಗಳನ್ನು ಕೇಳಿ? ಅಥವಾ ಅಂಬೇಡ್ಕರರ ಈ ಘೋಷಣೆಗಳು ಸುಳ್ಳು ಎನಿಸುತ್ತಿವೆಯೇ? ಸುಳ್ಳೆನಿಸಿದರೆ ಅಂಬೇಡ್ಕರರ ಈ ಕಡೆಯ ಘೋಷಣೆಗೆ ಪೂರಕವಾಗಿ ಈಗಲೂ ನಡೆಯುತ್ತಿರುವ ಈ ಕೆಳಗಿನ ಒಂದು ಆಚರಣೆಯನ್ನು ಗಮನಿಸಿ. ಮೈಸೂರಿನಲ್ಲಿ ಒಂದು ಆಶ್ರಮವಿದೆ. ಆ ಆಶ್ರಮದ ಹೆಸರು, ಅದರ ಸ್ವಾಮೀಜಿ ಅದರ ಪ್ರಸ್ತಾಪ ಬೇಡ. ಆದರೆ ಆ ಆಶ್ರಮದಲ್ಲಿ ಒಂದು ಅತ್ಯಪರೂಪದ ವನವಿದೆ. ಅದು ಶುಕ ವನ. ಅಂದರೆ ಗಿಳಿಗಳ ವನ. ಆ ವನದಲ್ಲಿ ನಾನಾ ಬಗೆಯ ಗಿಳಿಗಳಿವೆ. ಅವಕ್ಕೆ ಥರಥರದ ಹಣ್ಣುಗಳು, ವಿಧವಿಧದ ವರ್ಣರಂಜಿತ ಪಂಜರಗಳು, ನೋಡಿಕೊಳ್ಳಲು ವೈದ್ಯರುಗಳು, ಸೇವಕರುಗಳು... ಒಟ್ಟಿನಲ್ಲಿ ಅಂಬೇಡ್ಕರರು ಹೇಳಿದ “ಇರುವೆಗಳಿಗೆ ಸಕ್ಕರೆ ಉಣಿಸುವವರು ದೃಷ್ಟಾಂತದಂತೆ” ಮೈಸೂರಿನ ಆ ಆಶ್ರಮದಲ್ಲಿ ಗಿಳಿಗಳಿಗೆ ರಾಜೋಪಚಾರ! ಅದೇ ಆಶ್ರಮದ ಅನತಿ ದೂರದಲ್ಲೇ ಸ್ಲಂಗಳಿವೆ! ಅಲ್ಲಿ ದಲಿತರಿದ್ದಾರೆ. ಅವರ ಪಾಡು? ಆಚರಣೆಗಳು? ಮೂಲಭೂತ ಸೌಕರ್ಯಗಳು? ವ್ಯಂಗ್ಯವೆಂದರೆ ಆಶ್ರಮ ಇರುವ ಹಾಲಿ ಆ ಜಾಗ ಕೂಡ ದಲಿತರದ್ದೆ!  ಹಿಂದೆ ಮೈಸೂರು ಮಹಾರಾಜರು ದಲಿತರಿಗೆ ನೀಡಿದ್ದ ಜಾಗ ಅದು. ಆದರೆ ದಲಿತರಿಗೆ ಬಿಡಿಗಾಸು ಬಿಸಾಕಿ ಅವರ ಜಮೀನಿನನ್ನು ಆಕ್ರಮಿಸಿಕೊಂಡು ಅಲ್ಲಿ ಆಶ್ರಮ ಕಟ್ಟಲಾಗಿದೆ! ಗಿಳಿಗಳಿಗೆ ರಾಜಾತಿಥ್ಯ ನಡೆಸಲಾಗುತ್ತಿದೆ! ಪ್ರಶ್ನೆಯೇನೆಂದರೆ ಆ ಜಮೀನಿನ ಮೂಲ ಮಾಲೀಕರಾದ ದಲಿತರ ಬದುಕು? ಆಶ್ರಮದಿಂದ ಅವರಿಗೆ ಉಪಚಾರ? ದಲಿತರ ಕಷ್ಟ ನಷ್ಟಗಳಿಗೆ ನೆರವು? ಅಸ್ಪøಶ್ಯತೆಯ ನೋವಿಗೆ ಮುಲಾಮು? ಖಂಡಿತ ಶೂನ್ಯ.
   ಅಂಬೇಡ್ಕರರು ಅಂದು ಹೇಳಿದ, ಪ್ರದರ್ಶನಕಿಟ್ಟಿದ್ದ ಘೋಷಣೆಗಳು ಬರೀ ಘೋಷಣೆಗಳಲ್ಲ, ಬದಲಿಗೆ ಭಾರತದ ಧಾರ್ಮಿಕ ಬದುಕಿನ ತೆರೆದ ಪುಟಗಳು ಮತ್ತು ಅಂತಹ ಪುಟಗಳ ಪುಸ್ತಕ ಬಿಸುಟು ಹೊರಬನ್ನಿ ಎಂದು ಅಂಬೇಡ್ಕರರು ಅಂದು ಕರೆನೀಡಿದ್ದೇ ಮತಾಂತರ. ಈ ನಿಟ್ಟಿನಲ್ಲಿ ದಲಿತರು ಯಾಕೆ ಮತಾಂತರವಾಗಬೇಕು ಎಂಬ ಪ್ರಶ್ನೆಗೆ ಅಂಬೇಡ್ಕರರ ಈ ಘೋಷಣೆಗಳು ಸ್ಪಷ್ಟ ಉತ್ತರವಾಗುತ್ತವೆ.

Wednesday, 15 April 2015

'ಗಾಂಧಿ ನಿಜಕ್ಕೂ ಮಹಾತ್ಮರೇ?' ಎಂಬ ಅಂಬೇಡ್ಕರರ ಪ್ರಶ್ನೆ, ಮತ್ತವರ ಉತ್ತರ

-ರಘೋತ್ತಮ ಹೊ.ಬ

  ಗಾಂಧಿ ನಿಜಕ್ಕೂ ಮಹಾತ್ಮರೇ? ಬಾಬಾಸಾಹೇಬ್ ಅಂಬೇಡ್ಕರರು ಕೇಳಿದ ನೇರ ಪ್ರಶ್ನೆ ಇದು ಎನ್ನಬಹುದು. ಯಾಕೆಂದರೆ ಇಂತಹ ಪ್ರಶ್ನಾ ರೂಪದ Is Gandhi a Mahathma? ಎಂಬ ಲೇಖನವನ್ನು ಬಾಬಾಸಾಹೇಬರು 1938ರಲ್ಲಿ ‘ಚಿತ್ರಾ’ ಎಂಬ ಮರಾಠಿ ಪತ್ರಿಕೆಗೆ ಆ ಪತ್ರಿಕೆಯ ಆ ವರ್ಷದ ದೀಪಾವಳಿ ವಿಶೇಷಾಂಕಕ್ಕೆ ಬರೆದಿದ್ದಾರೆ ಮತ್ತು ಆ ಲೇಖನದ ಒರಿಜಿನಲ್ ಇಂಗ್ಲೀಷ್ ರೂಪ ಭಾರತ ಸರ್ಕಾರ ಈಚೆಗೆ ಪ್ರಕಟಿಸಿರುವ(2014) ‘ಅಂಬೇಡ್ಕರ್ ಬರಹಗಳು(ಇಂಗ್ಲೀಷ್), ಸಂಪುಟ 17, ಭಾಗ 2’ ರಲ್ಲಿ ಮರು ಮುದ್ರಣ ಕೂಡ ಕಂಡಿದೆ. ಸತ್ಯವನ್ನು ಹೀಗೆ ಪೀಠಿಕೆಯಲ್ಲೇ ಸ್ಪಷ್ಟಪಡಿಸಬೇಕಾಗಿದೆ. ಕಾರಣ ಕೆಲವರು ಇದನ್ನು ಪೂರ್ವಾಗ್ರಹಪೀಡಿತ ಅಥವಾ ಸ್ವಪ್ರೇರಿತ ಎಂದು ಭಾವಿಸಿಬಿಡುವ ಅಪಾಯವಿದೆ.
      ಹಾಗಿದ್ದರೆ ಅಂಬೇಡ್ಕರ್ ಏನು ಹೇಳುತ್ತಾರೆ? ಮೊದಲಿಗೆ ಅವರು ಪ್ರಾರಂಭಿಸುವುದು  Is Gandhi a Mahathma?  I am sick of this question ಅಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ? ಈ ಪ್ರಶ್ನೆಯೇ ನನಗೆ ವಾಕರಿಕೆ ತರಿಸುತ್ತದೆ’ ಎಂದು.  ಅಂಬೇಡ್ಕರರಿಗೇಕೆ ಈ ಪ್ರಶ್ನೆ ವಾಕರಿಕೆ ತರಿಸುತ್ತದೆ? ಅವರು ಎರಡು ಕಾರಣಗಳನ್ನು ನೀಡುತ್ತಾರೆ. ಅದರಲ್ಲಿ ಮೊದಲನೆಯದು “ಕಾರಣ ಕೇಳುವ ಗುಣ ಮತ್ತು ಬೌದ್ಧಿಕತೆ ಬದಲಿಗೆ ಮಹಾತ್ಮರು ಕುರುಡುನಂಬಿಕೆ ಬಿತ್ತುತ್ತಿದ್ದಾರೆ”. ಹಾಗೆಯೇ ಎರಡನೆಯದು “ವಾಸ್ತವವಾಗಿ ಮಹಾತ್ಮ ಎಂಬ ಈ ಪದಕ್ಕೆ ಜನಸಾಮಾನ್ಯರು ತಿಳಿದುಕೊಂಡಿರುವ ಅರ್ಥವಾದರೂ ಏನು?” ಎಂಬುದು. 
 ನಿಜ, ಅಂಬೇಡ್ಕರರ ಈ ಪ್ರಶ್ನೆಗಳು ಮತ್ತವರ ವಿಶ್ಲೇಷಣೆಗಳು ಕೆಲವರಿಗೆ arrogant ಎನಿಸಬಹುದು. ಆದರೆ ಅಂಬೇಡ್ಕರರು ಗಾಂಧೀಜಿಯವರ ಸಮಕಾಲೀನರು. ಸಮಕಾಲೀನರಿಗೆ ತಮ್ಮ ಕಾಲದ ವ್ಯಕ್ತಿಗಳನ್ನು ಪ್ರಶ್ನಿಸುವ, ವರ್ತನೆಗಳನ್ನು ಆಕ್ಷೇಪಿಸುವ ಅರ್ಹತೆ ಇದ್ದೇ ಇರುತ್ತದೆ. ಅದರಲ್ಲೂ ಜ್ಞಾನದಲ್ಲಿ, ಶೈಕ್ಷಣಿಕ ಅರ್ಹತೆಯಲ್ಲಿ ಅಂಬೇಡ್ಕರರು ಗಾಂಧೀಜಿಯವರಿಗಿಂತ ಉನ್ನತಮಟ್ಟದಲ್ಲಿದ್ದಾಗ ಇಂತಹ ‘ಮಹಾತ್ಮ’ ಎಂಬ ಟೈಟಲ್ಲನ್ನು ಪ್ರಶ್ನಿಸುವ ಸಹಜತೆ ಮತ್ತು ಸಾಮಥ್ರ್ಯ ಅವರಿಗೆ ಖಂಡಿತ ಬಂದೇಬರುತ್ತದೆ. ಅಂದಹಾಗೆ ಆ ಕಾಲದ ಆ ಹೊತ್ತಿನ ಅಂಬೇಡ್ಕರರ ಅಂತಹ ಅನಿಸಿಕೆ, ವಿವರಣೆ ಈಗ ಏಕೆ? ಅದು ಆ ಕಾಲದ ಆ ಸಂದರ್ಭದ್ದು ಎಂದು ಕೆಲವರು ಆಕ್ಷೇಪವ್ಯಕ್ತ್ತಪಡಿಸಬಹುದು ವಿಶೇಷವಾಗಿ ಗಾಂಧಿವಾದಿಗಳು. ಆದರೆ ಇತಿಹಾಸದ ಪ್ರಶ್ನೆಗಳು, ಅದಕ್ಕೆ ಉತ್ತರ, ನಡೆದ ಚರ್ಚೆ ನಮಗೆ ಬೆಳಕಾಗುತ್ತವೆ, ಸರಿ ತಪ್ಪುಗಳ ಪ್ರಕಲ್ಪನೆ ಮೂಡಿಸುತ್ತವೆ. ಮತ್ತೂ ವಾಸ್ತವವೆಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ?’ ಎಂಬ ಈ ಪ್ರಶ್ನೆಯನ್ನು ಅಂಬೇಡ್ಕರರೇನು ತಮಗೆ ತಾವೇ ಹಾಕಿಕೊಂಡದ್ದಲ್ಲ. ಆದರೆ ಆ ಕಾಲದ ವರ್ತಮಾನದ ಸುದ್ದಿ ಸೃಷ್ಟಿಯಂತೆ ಗಾಂಧೀಜಿಯವರನ್ನು ಎಲ್ಲರೂ ಮಹಾತ್ಮ, ಮಹಾತ್ಮ ಎನ್ನತೊಡಗಿದಾಗ ಅಂದಿನ ಮಾಧ್ಯಮ ಲೋಕ, ವಿಶೇಷವಾಗಿ ಪತ್ರಕರ್ತರು ಜಿಜ್ಞಾಸೆಗೊಳಗಾಗಿದ್ದರು ಮತ್ತು ಅಂತಹ ಜಿಜ್ಞಾಸೆಯ ಪ್ರಶ್ನೆಯಲ್ಲಿಯೇ ‘ಚಿತ್ರಾ’ ಎಂಬ ಆ ಮರಾಠಿ ಪತ್ರಿಕೆಯ ಸಂಪಾದಕರು ಇದಕ್ಕೆ ಅಂಬೇಡ್ಕರರ ಉತ್ತರ ಏನಿರಬಹುದು ಎಂದು ಕುತೂಹಲಗೊಂಡು ಮತ್ತು ಅಂತಹ ಕುತೂಹಲವನ್ನು ತಮ್ಮ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸುವ ಉತ್ಸುಕತೆ ತೋರಿ ಸದರಿ ಈ ಸಂಬಂಧ ಲೇಖನವೊಂದನ್ನು ಬರೆದುಕೊಂಡುವಂತೆ ಅವರು ಅಂಬೇಡ್ಕರರ ದುಂಬಾಲುಬಿದ್ದಿದ್ದರು. ಸಂಪಾದಕರ ಅಂತಹ ಒತ್ತಡವನ್ನು ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಈ ಕಾರಣಕ್ಕಾಗಿ ನಾನು (ಗಾಂಧಿ ನಿಜಕ್ಕೂ ಮಹಾತ್ಮರೇ?) ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ನಿರ್ಧರಿಸಿದ್ದೇನೆ” ಎನ್ನುತ್ತಾ ಜನಸಾಮಾನ್ಯರು ‘ಮಹಾತ್ಮ’ ಎಂಬ ಈ ಪದಕ್ಕೆ ತಿಳಿದುಕೊಂಡಿರುವ ಅರ್ಥವಾದರೂ ಏನು? ಎಂಬ ಪ್ರಶ್ನೆಗೆ ಉತ್ತರಿಸಲಾರಂಭಿಸುತ್ತಾರೆ.
      ಅವರು ಹೇಳುವುದೇನೆಂದರೆ “ಸಾಮಾನ್ಯ ಹಿಂದೂವೊಬ್ಬನ ಪ್ರಕಾರ ಹೇಳುವುದಾದರೆ ವ್ಯಕ್ತಿಯೋರ್ವ ವiಹಾತ್ಮ ಪಟ್ಟಕ್ಕೆ ಅರ್ಹತೆ ಗಳಿಸಲು ಮೂರು ಅಂಶಗಳನ್ನು ಹೊಂದಿರಬೇಕು. ಅವು ಆತನ ಬಟ್ಟೆ, ಆತನ ಗುಣ ಮತ್ತು ಆತನ ನಿರ್ದಿಷ್ಟ ಸಿದ್ಧಾಂತ. ಈ ಹಿನ್ನೆಲೆಯಲ್ಲಿ ಮಹಾತ್ಮರು ಯಾರು ಎಂದು ತೀರ್ಮಾನಿಸಲು ಈ ಅಂಶಗಳನ್ನು ಆಧಾರವಾಗಿ ತೆಗೆದುಕೊಳ್ಳುವುದಾದರೆ ತಿಳಿಗೇಡಿ ಮತ್ತು ತಮ್ಮ ಏಳಿಗೆಗಾಗಿ ಇತರರತ್ತ ನೋಡುವ ಅವಿದ್ಯಾವಂತ ಜನರ ದೃಷ್ಟಿಯಲ್ಲಿ ಖಂಡಿತ ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮರಾಗುತ್ತಾರೆ. ಈ ರೀತಿ ವೇಷ ಬದಲಿಸಿ ಮಹಾತ್ಮರುಗಳಾಗುವುದು ಭಾರತದಲ್ಲಿ ಯಾರಿಗೇ ಆಗಲಿ ಬಹಳ ಸುಲಭ. ಇದು ಹೇಗೆಂದರೆ ನೀವೊಂದು ವೇಳೆ ಅತಿವಿಶಿಷ್ಠವಾದ ಶ್ರೇಷ್ಠ ಕೆಲಸವನ್ನು ಸಾಮಾನ್ಯ ವೇಷ ಧರಿಸಿ ಸಾಮಾನ್ಯ ಜೀವನ ನಡೆಸುತ್ತಾ ಮಾಡಿದೆರೆಂದಿಟ್ಟುಕೊಳ್ಳಿ ಯಾರೂ ಕೂಡ ನಿಮ್ಮನ್ನು ಗಮನಿಸುವುದಿಲ್ಲ! ಆದರೆ ಅದೇ, ವ್ಯಕ್ತಿಯೊಬ್ಬ ಸಾಮಾನ್ಯ ರೀತಿಯಲ್ಲಿ ವರ್ತಿಸದೆ ವಿಚಿತ್ರ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದರೆ ಮತ್ತು ತನ್ನ ಗುಣದಲ್ಲಿ ಅಸಹಜತೆಯನ್ನು ತೋರಿಸುತ್ತಿದ್ದರೆ ಆತ ಸಂತನಾಗುತ್ತಾನೆ, ಮಹಾತ್ಮನಾಗುತ್ತಾನೆ. ಒಟ್ಟಾರೆ ನೀವೊಂದು ಸೂಟ್ ಅಥವಾ ಸಾಮಾನ್ಯ ಡ್ರೆಸ್ ಧರಿಸಿ ಏನಾದರೂ ಮಾಡುತ್ತಿರಿ ಜನ ನಿಮ್ಮತ್ತ ಕಣ್ಣೆತ್ತಿಯೂ ನೋಡಲು ಇಚ್ಛಿಸುವುದಿಲ್ಲ. ಆದರೆ ಅದೇ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ನಗ್ನನಾಗಿ ಓಡುತ್ತಿದ್ದರೆ, ಉದ್ದನೆಯ ಕೂದಲು ಬಿಟ್ಟು ಜನರನ್ನು ಬೈಯುತ್ತಿದ್ದರೆ, ಚರಂಡಿಯ ಕೊಳಕು ನೀರು ಕುಡಿಯುತ್ತಿದ್ದರೆ ಜನ ಅವನ ಪಾದಕ್ಕೆರಗುತ್ತಾರೆ! ಅವನನ್ನು ಪೂಜಿಸಲಾರಂಭಿಸುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಗಾಂಧಿ ಭಾರತದಲ್ಲಿ ಮಹಾತ್ಮರಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ”.
   ಆಶ್ಚರ್ಯವಾಯಿತೇ ಅಂಬೇಡ್ಕರರ ವಿವರಣೆ? ಮುಂದುವರಿದು ಅವರು ಹೇಳುವುದ ಕೇಳಿ “ಇಂತಹದ್ದೇನಾದರೂ ಬೇರೇ ನಾಗರಿಕ ದೇಶಗಳಲ್ಲಿ ನಡೆದಿದ್ದರೆ ಜನ ಅಂತಹವರನ್ನು ನೋಡಿ ನಗುತ್ತಿದ್ದರು”. ಅಂದಹಾಗೆ ಗಾಂಧೀಜಿಯವರ ಇಂತಹ ಮಹಾತ್ಮತನಕ್ಕೆ ಜನ ಕೊಡುವ ವಿವರಣೆ ಅವರ ‘ಸತ್ಯ’ ಮತ್ತು ‘ಅಹಿಂಸೆ’. ಪ್ರಶ್ನೆಯೇನೆಂದರೆ ಇವು(ಸತ್ಯ ಮತ್ತು ಅಹಿಂಸೆ) ಗಾಂಧೀಜಿಯವರ ಒರಿಜಿನಲ್ ಸಿದ್ಧಾಂತಗಳೇ?  ಎಂಬುದು. ಇದಕ್ಕೆ ಅಂಬೇಡ್ಕರರು ಕೊಡುವ ವಿವರಣೆ ನೋಡಿ “ಸಾಮಾನ್ಯ ನೋಡುಗನೊಬ್ಬನಿಗೆ ಗಾಂಧೀಜಿಯವರ ಬೋಧನೆಗಳು ತುಂಬಾ ಸಿಹಿಯೆನಿಸಬಹುದು, ಅಪ್ಯಾಯವೆನಿಸಬಹುದು. ಸತ್ಯ ಮತ್ತು ಅಹಿಂಸೆ ಪವಿತ್ರ ತತ್ವಗಳು. ಆ ಕಾರಣದಿಂದ ಗಾಂಧಿ ಸತ್ಯ ಮತ್ತು ಅಹಿಂಸೆಗಳನ್ನು ತಾನು ಬೋಧಿಸುತ್ತೇನೆಂದು ಘೋಷಿಸಿಕೊಂಡಿರುವುದರಿಂದ ಮತ್ತು ಜನ ಅದನ್ನು ಬಹಳ ಇಷ್ಟ ಪಟ್ಟಿರುವುದರಿಂದ ಅವರು ಅವರ ಸುತ್ತ ಸಹಸ್ರ ಸಂಖ್ಯೆಯಲ್ಲಿ ಗುಂಪುಗೂಡುತ್ತಿದ್ದಾರೆ. ಆದರೆ ನನಗೆ ಅರ್ಥವಾಗದ್ದೆಂದರೆ ಜನ ಯಾಕೆ ಹೀಗೆ ಅಂತ? ಯಾಕೆಂದರೆ ಸಹಸ್ರ ವರ್ಷಗಳ ಹಿಂದೆ ಸತ್ಯ ಮತ್ತು ಅಹಿಂಸೆಯ ಈ ಸಂದೇಶಗಳನ್ನು ಇಡೀ ಜಗತ್ತಿಗೇ ನೀಡಿದ್ದು ಭಗವಾನ್ ಬುದ್ಧ ಎಂಬುದು ವಾಸ್ತವವಲ್ಲವೆ? ಈ ನಿಟ್ಟಿನಲ್ಲಿ ಈ ವಿಷಯದ ಬಗೆಗಿನ(ಸತ್ಯ ಮತ್ತು ಅಹಿಂಸೆ) ಮೂಲ ಕ್ರೆಡಿಟ್‍ಅನ್ನು ತಿಳಿಗೇಡಿ ಮೂರ್ಖರು ಅಥವಾ ಜನ್ಮತಃ ಬುದ್ಧಿಗೇಡಿಗಳನ್ನು ಹೊರತು ಪಡಿಸಿ ಮತ್ತ್ಯಾರೂ ಕೂಡ ಗಾಂಧಿಯವರಿಗೆ ನೀಡಲಾರರು. ಹಾಗೆ ಹೇಳುವುದಾದರೆ  ಮಾನವನ ನಾಗರೀಕತೆ ರಕ್ಷಿಸಲು ಸತ್ಯ ಮತ್ತು ಅಹಿಂಸೆ ಅತ್ಯಗತ್ಯ ಎಂಬ ಘೋಷಣೆಯಲ್ಲಿ  ಹೊಸದೇನು ಇಲ್ಲ ಮತ್ತು ನಾನು ಮೊದಲೇ ಹೇಳಿದಂತೆಯೇ ಈ ವಿಷಯಗಳನ್ನು ಸಹಸ್ರ ವರ್ಷಗಳ ಹಿಂದೆಯೇ ಬೋಧಿಸಿದ್ದು ಭಗವಾನ್ ಬುದ್ಧ. ಸತ್ಯ ಮತ್ತು ಅಹಿಂಸೆಯ ಪ್ರಯೋಗದಿಂದ ಒದಗಬಹುದಾದ ಜ್ವಲಂತ ಸಮಸ್ಯೆಗಳ ಬಗ್ಗೆ  ಗಾಂಧೀಜಿಯವರೇನಾದರೂ ಬೆಳಕು ಚೆಲ್ಲಿದ್ದಿದ್ದರೆ ಅವರ ಮಹಾತ್ಮತನಕ್ಕೆ ಮತ್ತಷ್ಟು ಹೊಳಪುಬರುತ್ತಿತ್ತು. ಜಗತ್ತು ಅವರಿಗೆ ಸದಾ ಕೃತಜ್ಞವಾಗಿರುತ್ತಿತ್ತು. ಜಗತ್ತು ಇಂದು ಎರಡು ಒಗಟುಗಳಿಗೆ ಪರಿಹಾರವನ್ನು ಕುತೂಹಲದಿಂದ ಕಾಯುತ್ತಿದೆ. ಅವುಗಳನ್ನು ಹೆಸರಿಸುವುದಾದರೆ ‘ಸತ್ಯ’ದಂಥಹ ಪವಿತ್ರ ತತ್ವವನ್ನು ಎತ್ತಿಹಿಡಿಯುವುದು ಹೇಗೆ ಮತ್ತು ಯಾವ ಸಂದರ್ಭದಲ್ಲಿ ‘ಹಿಂಸೆಯನ್ನು’ ಸರಿಯಾದ ಕ್ರಿಯೆ ಎಂದು ನಿರ್ಧರಿಸಬಹುದು? ಎಂಬುದು. ಅಂದಹಾಗೆ ಗಾಂಧಿ(ಸತ್ಯ ಮತ್ತು ಅಹಿಂಸೆಯ) ಇಂತಹ ಜಟಿಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆಯೇ?” ಅಂಬೇಡ್ಕರ್ ಕೇಳುತ್ತಾ ಹೋಗುತ್ತರೆ. ಹಾಗೆಯೇ ಅವುಗಳ ಮೂಲ ಪ್ರತಿಪಾದಕನಾದ ಭಗವಾನ್ ಬುದ್ಧ “ಸತ್ಯ ಮತ್ತು ಅಹಿಂಸೆಗೆ ನಮ್ಮ ನಿಲುವು ಆಶಾವಾದದ್ದಾಗಿರಬೇಕು” ಎಂದು ಹೇಳಿದ್ದನ್ನು ಕೂಡ ಅವರು ದಾಖಲಿಸುತ್ತಾರೆ. ಒಟ್ಟಾರೆ ಅಂಬೇಡ್ಕರರ ಪ್ರಕಾರ “ಸತ್ಯ ಮತ್ತು ಅಹಿಂಸೆಯ original patent (ಮೂಲ ಹಕ್ಕು) ಬುದ್ಧನಿಗೆ ಸಲ್ಲುತ್ತದೆ”.
   ಹಾಗಿದ್ದರೆ ಸತ್ಯ ಮತ್ತು ಅಹಿಂಸೆ ಬುದ್ಧನದ್ದು ಎಂದಾದರೆ ಗಾಂಧಿ ಏನು ಮಾಡಿದರು? ಇದಕ್ಕೆ ಅಂಬೇಡ್ಕರರು ಹೇಳುವುದ ನೋಡಿ “ಗಾಂಧೀಜಿಯವರ ಪ್ರವಚನಗಳನ್ನು, ಮತ್ತವರು ಬೋಧಿಸಿದ ಅಂಶಗಳನ್ನು ಗಂಭೀರವಾಗಿ ಅಧ್ಯಯನಮಾಡಿದರೆ ನಮಗೆ ಸಿಗುವ ಉತ್ತರವೆಂದರೆ ಅವರು ಬೇರೆಯವರ ಬಂಡವಾಳದಲ್ಲಿ ವ್ಯಾಪಾರ ಮಾಡುತ್ತಾರೆ” ಎಂಬುದು! (ಹೌದು, ಗಾಂಧೀಜಿಯವರು ಬುದ್ಧನ ಬೋಧನೆಯ ಬಂಡವಾಳದಲ್ಲಿ ಸತ್ಯ ಮತ್ತು ಅಹಿಂಸೆಯ ವ್ಯಾಪಾರ ಮಾಡಿದರು!) ಬೇರೆಯವರ ಬಂಡವಾಳದಲ್ಲಿ ವ್ಯಾಪಾರ ಮಾಡುವುದು? ಹಾಗಿದ್ದರೆ ಗಾಂಧೀಜಿಯವರದ್ದು ಎಂತಹ ವ್ಯಕ್ತಿತ್ವ? ಮುಂದುವರಿದು ಅಂಬೇಡ್ಕರರು ಹೇಳುವುದ ನೋಡಿ “when I seriously study Gandhi’s character, I became exceedingly convinced that cunningness is more evident in his character than seriousness or sincerity (ಗಾಂಧೀಜಿಯವರ ಗುಣವನ್ನು ನಾನು ಗಂಭಿರವಾಗಿ ಅಧ್ಯಯನ ಮಾಡಿದಾಗ ನನಗೆ ಪರಿಪೂರ್ಣವಾಗಿ ಅರಿವಿಗೆ ಬಂದದ್ದೆಂದರೆ ಅವರ ಗುಣದಲ್ಲಿ ವಿಷಯಗಂಭೀರತೆ ಅಥವಾ ಪ್ರಾಮಾಣಿಕತೆಗಿಂತ ಕಪಟತನವೇ ಹೆಚ್ಚಿದೆ ಎಂಬುದು). ನನಗನಿಸಿದಂತೆ ನನ್ನ ದೃಷ್ಟಿಯಲ್ಲಿ ಅವರ ಕ್ರಿಯೆಗಳನ್ನು ನಕಲಿ ನಾಣ್ಯಗಳಿಗೆ ಹೋಲಿಸಬಹುದು. ಅವರ ವಿನಯಶೀಲತೆಯನ್ನು ಇಂಗ್ಲೀಷ್ ಕಾದಂಬರಿ ‘ಡೇವಿಡ್ ಕಾಪರ್‍ಫೀಲ್ಡ್’ನಲ್ಲಿ ಕಂಡುಬರುವ politeness of urea heap (ಯೂರಿಯಾ ಬೆಳೆಯ ಕೃತಕವಿನಯಶೀಲತೆಗೆ) ಹೋಲಿಸಬಹುದು. ತಮ್ಮ ಸಹಜ ಧೂರ್ತ ಬುದ್ಧಿ ಮತ್ತು ಮೋಸಮಾಡುವ ಗುಣದಿಂದಾಗಿ ಅವರು ತಮ್ಮನ್ನು ತಾವೇ ಮಂಚೂಣಿಯಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಜ ಹೇಳಬೇಕೆಂದರೆ ತನ್ನ ಸಾಮಥ್ರ್ಯದಲ್ಲಿ ನಂಬಿಕೆಯಿರುವ ಯಾವುದೇ ವ್ಯಕ್ತಿ ಜೀವನದ ಸಹಜ ವಾಸ್ತವಗಳನ್ನು ನೇರವಾಗಿ ಮತ್ತು ಪೌರುಷತನದಿಂದ ಎದುರಿಸುತ್ತಾನೆ. ಅಂತಹ ವ್ಯಕ್ತಿಗೆ ತನ್ನ ಅಂಗಿಯ ತೋಳಿನ ಸಂದಿಯಲ್ಲಿ ಕತ್ತಿಯನ್ನು ಅಡಗಿಸಿಟ್ಟುಕೊಳ್ಳುವ ಅಗತ್ಯ ಕಂಡುಬರುವುದಿಲ್ಲ. ಇದು ಹೇಗೆಂದರೆ ನೆಪೋಲಿಯನ್ ಸದಾ ನೇರವಾಗಿ, ಮುಂದಿನಿಂದ ಧಾಳಿಮಾಡುತ್ತಿದ್ದ. ವಿಶ್ವಾಸಾಘಾತದಲ್ಲಿ ಆತನಿಗೆ ನಂಬಿಕೆಯಿರಲಿಲ್ಲ ಮತ್ತು ಆ ಕಾರಣದಿಂದ ಆತ ಎಂದಿಗೂ ಹಿಂದಿನಿಂದ ಧಾಳಿಮಾಡಿದವನಲ್ಲ. ಈ ನಿಟ್ಟಿನಲ್ಲಿ ವಿಶ್ವಾಸಾಘಾತುಕತನ ಮತ್ತು ವಂಚನೆ ದುರ್ಬಲ ಮನಸ್ಸಿನವರ ಆಯುಧಗಳು, ಗಾಂಧಿ ಸದಾ ಈ ಆಯುಧಗಳನ್ನು ಬಳಸಿದ್ದಾರೆ”.
    ವಂಚನೆ... ವಿಶ್ವಾಶಾಘಾತುಕತನ... ಯೂರಿಯಾ ಕೃತಕ ರಸಗೊಬ್ಬರಂದಂತಹ ಬೆಳೆಯ ಕೃತಕ ವಿನಯಶೀಲತೆ... ಹೀಗೆ ಸಾಗುತ್ತದೆ ಅಂಬೇಡ್ಕರರಿಂದ ಗಾಂಧಿಯವರ ಗುಣ ನಿರೂಪಣೆ. ಹಾಗಿದ್ದರೆ ಗಾಂಧಿಯವರು ಯಾರನ್ನು ವಂಚಿಸಿದರು? ಉದಾಹರಣೆಗೆ ದುಂಡುಮೇಜಿನ ಸಮ್ಮೇಳನದಂತಹ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ತತ್ಪರಿಣಾಮ ಮೂಡಿಬಂದ ಪೂನಾ ಒಪ್ಪಂದದ ಪ್ರಕರಣಗಳನ್ನು ಗಮನಿಸುವುದಾದರೆ ಗಾಂಧೀಜಿಯವರು ದುಂಡುಮೇಜಿನ ಸಭೆಯಲ್ಲಿ ತಾನೇ ಅಸ್ಪøಶ್ಯರ ನಿಜವಾದ ಪ್ರತಿನಿಧಿ ಎಂದು ಹೇಳಿದರು. ಆ ಮೂಲಕ ಅವರು ಇಬ್ಬರನ್ನು ಅಂದರೆ ಒಂದು ವ್ಯಕ್ತಿ ಮತ್ತು ಅವರ ಹಿಂದೆ ಇದ್ದ ಒಂದು ಸಮುದಾಯ ಈವರ್Àರನ್ನು ವಂಚಿಸುವ ಸಂಚು ನಡೆಸಿದರು. ವ್ಯಕ್ತಿ ಅಂದರೆ ಅಂಬೇಡ್ಕರ್. ಅಂದರೆ ತಾನೇ ನಿಜವಾದ  ಅಸ್ಪøಶ್ಯರ ಪ್ರತಿನಿಧಿ ಅಂದರೆ ಅಲ್ಲಿ ಅಂಬೇಡ್ಕರ್ ಅಪ್ರಸ್ತುತ ಎಂಬಂತೆ, ಇನ್ನು ಅಂಬೇಡ್ಕರ್ ಅಪ್ರಸ್ತುತವಾದರೆ ಅವರು ಎತ್ತುವ ಬೇಡಿಕೆಗಳು, ಹೇಳಿಕೆಗಳು ಅಪ್ರಸ್ತುತ! ತಾನು ಹೇಳಿದ್ದೇ ಸರಿ ಮತ್ತು ನನ್ನ ಹೇಳಿಕೆಗಳ ಪ್ರಕಾರ ಬ್ರಿಟಿಷ್ ಸರ್ಕಾರ ಅಸ್ಪøಶ್ಯರಿಗೆ ಏನನ್ನೂ ನೀಡಬಾರದು, ಮತ್ತು ಹಾಗೆ ನೀಡುವ ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಡಬೇಕು! (ಹಿಂದೂಗಳಿಗೆ ನೀಡಬೇಕು, ಇದಕ್ಕೆ ಈಗಿನ ಉದಾಹರಣೆಯೊಂದನ್ನು ನೀಡುವುದಾದರೆ ರಾಜ್ಯದಲ್ಲಿ ಹಿಂದೂಗಳ ವತಿಯಿಂದ ನಡೆಯುತ್ತಿರುವ ಸರ್ಕಾರಿ ಅನುದಾನಿತ ಲಕ್ಷಾಂತರ ಶಿಕ್ಷಣ ಸಂಸ್ಥೆಗಳಿವೆ. ನಿಮಗೆ ನೆನಪಿರಲಿ, ಈ ಸಂಸ್ಥೆಗಳು ತಾವು ನಡೆಸುತ್ತಿರುವ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಸಂವಿಧಾನಬದ್ಧ ಮೀಸಲಾತಿ ನೀಡಬೇಕು. ಆದರೆ ಮೋಸವೆಂದರೆ ಹಾಗೆ ಸಹಜ ರೋಸ್ಟರ್ ಪದ್ಧತಿಯ ಹುದ್ದೆಗಳ ಮೀಸಲಾತಿಯನ್ನು ಈ ಅನುದಾನಿತ ಹಿಂದೂ ಶಿಕ್ಷಣಸಂಸ್ಥೆಗಳು ಪರಿಶಿಷ್ಟರಿಗೆ ನೀಡಿಯೇ ಇಲ್ಲ! ಪ್ರಶ್ನೆಯೇನೆಂದರೆ ಅಂದು ಗಾಂಧಿಯವರು ಬ್ರಿಟಿಷರ ಮುಂದೆ ಹೇಳಿದ ಹಾಗೆ ಅಸ್ಪøಶ್ಯರಿಗೆ ಅನುಕೂಲ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಟ್ಟಿದ್ದರೆ? ಅಂಬೇಡ್ಕರ್ ಮೋಸವೆನ್ನುವುದು, ವಂಚನೆಯೆನ್ನುವುದು ಈ ಕಾರಣಕ್ಕೇನೆ!)
    ಹೀಗೆ ಒಂದು ಜನಾಂಗವನ್ನು ಸಾಮೂಹಿಕವಾಗಿ ವಂಚಿಸುವ ಗಾಂಧಿಯವರ ಹೇಳಿಕೆಯ ಪರಿಯೊಂದನ್ನು ಗಮನಿಸುವುದಾದರೆ, ಗಾಂಧಿಯವರು ಹೇಳಿದ್ದು “ಅಸ್ಪøಶ್ಯರಿಗೆ ಪ್ರತ್ಯೇಕ ಅನುಕೂಲ ನೀಡುವುದರಿಂದ ಹಿಂದೂಧರ್ಮದಲ್ಲಿ ಒಡಕು ಉಂಟಾಗುತ್ತದೆ”. ಇದು ಹೇಗೆಂದರೆ “ಹೌದಲ್ಲವೆ, ಗಾಂಧಿಯವರು ಹೇಳುವುದು? ಪ್ರತ್ಯೇಕ? ಇದರಿಂದ ಹಿಂದೂಧರ್ಮ ಒಡೆದುಹೋಗುತ್ತದೆಯಲ್ಲವೆ?” ಎಂದು ಎಲ್ಲರೂ ತಲೆದೂಗುವಂತೆ! ವಾಸ್ತವವೆಂದರೆ ಇಂತಹ ತಲೆದೂಗುವಿಕೆಯನ್ನೇ, ಕಸಿಯಲ್ಪಡುವ ಅಸ್ಪøಶ್ಯರ ಹಕ್ಕುಗಳ ಗಾಂಧಿಯವರ ಇಂತಹ ನಡೆಯನ್ನೆ ವಂಚನೆ, ವಿಶ್ವಾಸಾಘಾತುಕತನ, ಮೋಸಗೊಳಿಸುವ ಪ್ರಕ್ರಿಯೆ ಎಂದು ಅಂಬೇಡ್ಕರರು ಕರೆದದ್ದು.
      ಮುಂದುವರಿದು ಅಂಬೇಡ್ಕರರು ಗಾಂಧಿಯವರ ಇಂತಹ ವಂಚನೆಯ ಘಟನೆಗಳ ಮತ್ತಷ್ಟನ್ನು ದಾಖಲಿಸುತ್ತಾರೆ. ಅದೆಂದರೆ ಹಲವು ವರ್ಷಗಳ ಕಾಲ ಗಾಂಧಿ ತಾನು ಮಂದಗಾಮಿ ನಾಯಕ ಗೋಪಾಲ ಕೃಷ್ಣ ಗೋಖಲೆಯವರ ಅನುಯಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ ಇದ್ದಕ್ಕಿಂದಂತೆ ಅದೇ ಗಾಂಧಿ ಒಂದು ದಿನ ಕಾಂಗ್ರೆಸ್ ತೀವ್ರಗಾಮಿ ನಾಯಕ ಬಾಲಗಂಗಾಧರ ತಿಲಕ್‍ರನ್ನು ಹೊಗಳಲು ಆರಂಭಿಸಿದ್ದರು! ತದನಂತರ ಅವರು ತಿಲಕರನ್ನೂ ದ್ವೇಷಿಸಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸ್ವರಾಜ್ಯ ನಿಧಿಗಾಗಿ 10ಲಕ್ಷ ಸಂಗ್ರಹಿಸುವ ಜವಾಬ್ದಾರಿ ಒದಗಿಬಂತು, ಅಲ್ಲದೆ ತಾವು ದ್ವೇಷಿಸುತ್ತಿದ್ದ ಅದೇ ಬಾಲಗಂಗಾಧರ ತಿಲಕರ ಹೆಸರನ್ನು ಆ ಸಮಯದಲ್ಲಿ ಬಳಸದಿದ್ದರೆ 10ಲಕ್ಷ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂಬ ಗುಟ್ಟು ಕೂಡ ಅವರಿಗೆ ತಿಳಿದುಹೋಯಿತು! ತಡಮಾಡದೇ ಸಾಮಾನ್ಯ ಕ್ಷುಲ್ಲಕ ರಾಜಕಾರಣಿಯಂತೆ ಗಾಂಧಿಯವರು ಹಣದ ಆಸೆಗಾಗಿ ಆ ನಿಧಿಗೆ ‘ತಿಲಕ್ ಸ್ವರಾಜ್ಯ ನಿಧಿ’ ಎಂದು ಹೆಸರಿಟ್ಟರು! ಹಾಗೇ 10ಲಕ್ಷ ಸಂಗ್ರಹಿಸಿದರೂ ಕೂಡ! ಒಟ್ಟಾರೆ ಅಂಬೇಡ್ಕರರು ಉಲ್ಲೇಖಿಸುವ ಈ ದೃಷ್ಟಾಂತದಲ್ಲಿ ನಾವು ಗಾಂಧಿಯವರ ‘ವೇಷ ಬದಲಿಸುವ ವ್ಯಾಪಾರಿ ಬುದ್ಧಿ’ಯನ್ನು ಢಾಳಾಗಿ ಕಾಣಬಹುದು.
    ಇಲ್ಲಿ ಅಂಬೇಡ್ಕರರು ಉಲ್ಲೇಖಿಸುವ ಎರಡನೇ ಘಟನೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟಿದ್ದು. ಅಂಬೇಡ್ಕರರ ಭಾಷೆಯಲ್ಲೇ ಹೇಳುವುದಾದರೆ “ಗಾಂಧಿ ಕ್ರಿಶ್ಚಿಯನ್ ಧರ್ಮದ ಉಗ್ರ ವಿರೋಧಿಯಾಗಿದ್ದರೂ ‘ಪಾಶ್ಚಿಮಾತ್ಯ ಪ್ರಪಂಚವನ್ನು ಮೆಚ್ಚಿಸಲು’ ಆಗಾಗ ಬಿಕ್ಕಟ್ಟಿನ ಸಮಯದಲ್ಲಿ ಅವರು ಬೈಬಲ್‍ನ ಉಲ್ಲೇಖಗಳನ್ನು ಬಳಸುತ್ತಿದ್ದರು” ಎಂಬುದು! ಇನ್ನು ದುಂಡು ಮೇಜಿನ ಸಭೆಯ ಸಂದರ್ಭವೊಂದನ್ನೂ ಸ್ವತಃ ಅಂಬೇಡ್ಕರರೇ ಇಲ್ಲಿ ದಾಖಲಿಸುತ್ತಾರೆ. ಅದನ್ನು ಯಥಾವತ್ ನೀಡುವುದಾದರೆ “ದುಂಡುಮೇಜಿನ ಸಭೆಯ ಸಂದರ್ಭದಲ್ಲಿ ಅವರು(ಗಾಂಧಿ) ಜನತೆಗೆ ವಾಗ್ದಾನ ನೀಡಿದ್ದೇನೆಂದರೆ ಶೋಷಿತ ವರ್ಗಗಳು ಮಂಡಿಸುವ ಯಾವುದೇ ಬೇಡಿಕೆಗಳ ವಿರುದ್ಧವೂ ನಾನು ದನಿ ಎತ್ತುವುದಿಲ್ಲ ಎಂದು. ಆದರೆ ಶೋಷಿತ ವರ್ಗಗಳ ಜನರ ಪ್ರತಿನಿಧಿಗಳು ಬೇಡಿಕೆ ಮಂಡಿಸಿದ ತತಕ್ಷಣವೇ ಅದೇ ಗಾಂಧೀಜಿ ಜನತೆಗೆ ತಾನು ನೀಡಿದ ವಾಗ್ದಾನ ಮರೆತರು. ಇದನ್ನು ನಾನು  ಶೋಷಿತ ವರ್ಗಗಳಿಗೆ ಸೇರಿದ ಜನರಿಗೆ ಗಾಂಧಿ ಮಾಡಿದ ವಿಶ್ವಾಸ ದ್ರೋಹ ಎನ್ನುತ್ತೇನೆ. ಯಾಕೆಂದರೆ (ಅದೇ ದುಂಡುಮೇಜಿನ ಸಭೆಯ ಅದೇ ಸಮಯದಲ್ಲಿ) ಮುಸ್ಲೀಮರ ಬಳಿಗೆ ತೆರಳಿದ ಗಾಂಧಿ ಮುಸ್ಲೀಮರ ಬೇಡಿಕೆಗಳನ್ನು ನಾನು ಬೆಂಬಲಿಸುತ್ತೇನೆ. ಆದರೆ ಅದಕ್ಕೆ ಪ್ರತಿಯಾಗಿ ನೀವು(ಮುಸ್ಲೀಮರು) ದುರ್ಬಲ ವರ್ಗಗಳವರ ಪ್ರತಿನಿಧಿಗಳು ಮಂಡಿಸುವ ಬೇಡಿಕೆಗಳನ್ನು ವಿರೋಧಿಸಬೇಕು ಎಂದು ಹೇಳುತ್ತಾರೆ” ಎನ್ನುತ್ತಾ, ಅಂಬೇಡ್ಕರರು ಈ ಸಂದರ್ಭದಲ್ಲಿ Even a scoundrel would not have done this (ಒರ್ವ ದುಷ್ಟ ಕೂಡ ಹೀಗೆ ಮಾಡಲಾರ) ಎಂಬ ವಾಕ್ಯ ಬಳಕೆ ಮಾಡುತ್ತಾ Even a scoundrel would not have done this (ಈ ಪ್ರಕರಣ ಗಾಂಧಿಯವರ ವಿಶ್ವಾಸಾಘಾತುಕತನಕ್ಕೆ ಕೇವಲ ಒಂದು ನಿದರ್ಶನವಷ್ಟೆ) ಎನ್ನುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ.2, ಪು.68)
    ಖಂಡಿತ, ಅಂಬೇಡ್ಕರರ ವಾಕ್ಯ ಬಳಕೆ ಅತಿ ಎನಿಸಬಹುದು. ಆದರೆ “ಒಂದು ಜನಾಂಗದ (ಅಸ್ಪøಶ್ಯರ) ವಿರುದ್ಧ ಇನ್ನೊಂದು ಜನಾಂಗವನ್ನು(ಮುಸ್ಲೀಮರು) ಎತ್ತಿಕಟ್ಟಿದ್ದು ಮತ್ತು ನಾವು ನಿಮ್ಮನ್ನು ಬೆಂಬಲಿಸಬೇಕಾದರೆ ನೀವು ಅವರನ್ನು ವಿರೋಧಿಸಿಬೇಕು” ಎಂದು ಗಾಂಧಿ ಬ್ಲಾಕ್‍ಮೇಲ್ ಮಾಡಿದ್ದು ‘ಪ್ರಾಮಾಣಿಕತೆ’ಯ ಪ್ರಕ್ರಿಯೆಯಾಗುತ್ತದೆಯೇ? ಹಾಗೆಯೇ ಭಾರತದಲ್ಲಿ ತಾನು ಅಸ್ಪøಶ್ಯರ ಬೇಡಿಕೆಗಳ ವಿರುದ್ಧ ಮಾತನಾಡುವುದಿಲ್ಲ ಎಂಬ ಆಶ್ವಾಸನೆಯ ಮಾತುಗಳನ್ನಾಡಿ ತಮ್ಮ ಆ ಆಶ್ವಾಸನೆಗೆ ವಿರುದ್ಧವಾಗಿ ಅದೇ ಅಸ್ಪøಶ್ಯರ ಬೇಡಿಕೆಗಳ ವಿರುದ್ಧ ಗಾಂಧಿ ಮಾತನಾಡಿದ್ದು, ಪ್ರಬಲವಾಗಿ ವಿರೋಧಿಸಿದ್ದು ಅದು ಅವರ ಬಹಿರಂಗ ಸುಳ್ಳಿನ ಹೇಳಿಕೆಯಾಗುತ್ತದೆಯಲ್ಲವೆ? ಮತ್ತು ಹಾಗೇ ಅದು ಗಾಂಧಿ ಅಸ್ಪøಶ್ಯರಿಗೆ ಎಸಗಿದ ವಿಶ್ವಾಸಘಾತುಕತನಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆಯಲ್ಲವೆ?
     ಆಶ್ಚರ್ಯವೆಂದರೆ ದುಂಡುಮೇಜಿನ ಸಭೆಯಲ್ಲಿ ಅಸ್ಪøಶ್ಯರ ಬೇಡಿಕೆಗಳನ್ನು ವಿರೋಧಿಸಿ ಮುಸ್ಲೀಮರ ಬೇಡಿಕೆಗಳನ್ನು ಬೆಂಬಲಿಸುವ ಗಾಂಧಿ ಮತ್ತೊಂದು ಪ್ರಮುಖ ಸಂದರ್ಭದಲ್ಲಿ ಮುಸ್ಲೀಮರ ಬೇಡಿಕೆಗಳನ್ನೂ ವಿರೋಧಿಸುತ್ತಾರೆ! ಅಂಬೇಡ್ಕರರು ಪ್ರಸ್ತಾಪಿಸುವ ಆ ಘಟನೆಯ ಸಾರವನ್ನು ನೀಡುವುದಾದರೆ, ಹಿಂದೆ ಕಾಂಗ್ರೆಸ್ ಸಮಾವೇಶದ ಸಮಯವೊಂದರಲ್ಲಿ ಜವಹಾರಲಾಲ್ ನೆಹರೂರವರ ತಂದೆ  ಮೋತಿಲಾಲ್ ನೆಹರೂರವರು ತಯಾರಿಸಿದ್ದ ವರದಿಯೊಂದು ಮಂಡನೆಯಾಗಿತ್ತು. ಆ ವರದಿ ‘ನೆಹರೂ ಸಮಿತಿ ವರದಿ’ ಎಂದೇ ಪ್ರಸಿದ್ಧ. ಆ ಸಮಾವೇಶದಲ್ಲಿ ಆ ವರದಿ ಮಂಡನೆಯಾಗುತ್ತಲೇ ಆ ವರದಿಗೆ ಸಂಬಂಧಪಟ್ಟ ಕೆಲವು ತಿದ್ದುಪಡಿಗಳನ್ನು ಸ್ವತಃ ತಾವೇ ವಿರೋಧಿಸದ ಗಾಂಧಿ ತಮ್ಮ ಪರವಾಗಿ ಜಯಕರ್ ಎಂಬುವವರನ್ನು ಬಾಡಿಗೆಗೆ ಪಡೆದು ಛೂ ಬಿಡುತ್ತಾರೆ! ಅಂದಹಾಗೆ ಆ ತಿದ್ದುಪಡಿಗಳು ಯಾರಿಗೆ ಸಂಬಂಧಪಟ್ಟವಾಗಿದ್ದವೆಂದರೆ ಮುಸ್ಲೀಮರಿಗೆ! ಮತ್ತು ಆ ತಿದ್ದುಪಡಿಗಳನ್ನು ತನ್ನ ಸಮುದಾಯದ ಪರವಾಗಿ ಅಂಗೀಕರಿಸುವಂತೆ ಸ್ವತಃ ಅವುಗಳನ್ನು ಸಲಹೆಮಾಡಿದ್ದು ಅಂದಿನ ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ಮಹಮ್ಮದಾಲಿ ಜಿನ್ನಾ! ಹಾಗಿದ್ದರೆ ಯಾಕೆ ಗಾಂಧೀಜಿ ಅಂತಹ ತಿದ್ದುಪಡಿಗಳನ್ನು ವಿರೋಧಿಸಿದರು? ಖಂಡಿತ, ಆ ತಿದ್ದುಪಡಿಗಳ ಮೂಲಕ ಮುಸ್ಲೀಮರ ಹಲವು ಪ್ರಮುಖ ಬೇಡಿಕೆಗಳು ಈಡೇರುತ್ತಿತ್ತು! ಆದರೆ ಎಲ್ಲಿ ಮುಸ್ಲೀಮರಿಗೆ ಅವರ ಎಲ್ಲಾ ಹಕ್ಕುಗಳು ದೊರಕಿಬಿಡುತ್ತದೋ ಎಂದು ಯೋಚಿಸಿದ ಗಾಂಧೀಜಿಯವರು ತನ್ನ ಶಿಷ್ಯರನ್ನು ಅಂತಹ ಐತಿಹಾಸಿಕ ಮುಸ್ಲಿಂ ಪರವಾದ ತಿದ್ದುಪಡಿಗಳ ವಿರುದ್ಧ ಛೂ ಬಿಟ್ಟಿದ್ದರು ಮತ್ತು ಅವು ಬಿದ್ದುಹೋಗುವ ಹಾಗೆ ನೋಡಿಕೊಂಡರು! ಅಂದಹಾಗೆ ಅಂಬೇಡ್ಕರರ ಪ್ರಕಾರ ‘ನೆಹರೂ ಸಮಿತಿ ವರದಿ’ಗೆ ಸೂಚಿಸಿದ್ದ ಆ ತಿದ್ದುಪಡಿಗಳೇನಾದರೂ ಅಂದೇ ಅಂಗೀಕಾರಗೊಂಡಿದ್ದರೆ ಇಂದಿಗೂ ಉಗ್ರರೂಪದಲ್ಲಿರುವ ‘ಹಿಂದೂ-ಮುಸ್ಲಿಂ ದ್ವೇಷ’ ಅಂದೇ ಕೊನೆಯಾಗಿರುತ್ತಿತ್ತು! ಈ ನಿಟ್ಟಿನಲ್ಲಿ ಅಂಬೇಡ್ಕರರ ಆ ವಾಕ್ಯವನ್ನಿಲ್ಲಿ ಯಥಾವತ್ ದಾಖಲಿಸುವುದಾದರೆ Hindu-Moslem hostility is the result of deceitful action on the part of Gandhi (ಗಾಂಧಿಯವರ ಕಡೆಯಿಂದ ಆದ ಮೋಸಗಾರಿಕೆಯ ಕೃತ್ಯದ ಪರಿಣಾಮವೇ ಹಿಂದೂ-ಮುಸ್ಲಿಂ ದ್ವೇಷ). ಹಾಗೆ ಹೇಳುತ್ತಾ ಅಂಬೇಡ್ಕರರು “ಮುಸ್ಲೀಮರು ಮತ್ತು ಅಸ್ಪøಶ್ಯರ ಸ್ನೇಹಿತ ಎಂದು ಯಾರು ಪರಿಗಣಿಸಲ್ಪಟ್ಟಿದ್ದರೋ ಮತ್ತು ಅವರ ಏಳ್ಗೆಯಲ್ಲಿ ತಾನು ಚಾಂಪಿಯನ್ ಎಂದು ಯಾರು ಹೇಳಿಕೊಂಡಿದ್ದರೋ ಅದೇ ವ್ಯಕ್ತಿ ಆ ಸಮುದಾಯಗಳ ಜನರ ಮೂಲ ಆಶಯಕ್ಕೆ ವಿಶ್ವಾದ್ರೋಹವೆಸಗಿದರು. ಇದು ನಿಜಕ್ಕೂ ನನಗೆ ತೀವ್ರ ನೋವುಂಟುಮಾಡುವಂತಹದ್ದು. ಈ ಸಂದರ್ಭಕ್ಕೆ ತಕ್ಕಂತೆ ಹಳೆಯದೊಂದು ಗಾದೆ ಇದೆ, ‘ಬಗಲ್ ಮೇ ಚೂರಿ, ಮೂಹ್ ಮೇ ರಾಮ್’(ಬಾಯಲ್ಲಿ ದೇವರ ಹೇಸರು, ಕಂಕುಳಲ್ಲಿ ಕತ್ತಿ)’ ಈ ನಿಟ್ಟಿನಲ್ಲಿ ‘ಇಂತಹ ವ್ಯಕ್ತಿಯನ್ನು’ ನಾವು ‘ಮಹಾತ್ಮ’ ಎಂದು ಕರೆಯುವುದಾದರೆ ಖಂಡಿತ by all means call Gandhi a Mahatma.  ನನ್ನ ಪ್ರಕಾರ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿಯಷ್ಟೆ”.
       ಹೀಗೆ ಹೇಳುತ್ತಾ ಅಂಬೇಡ್ಕರರು Is Gandhi a Mahatma?  ಎಂಬ ತಮ್ಮ ಆ ಲೇಖನ ನಿಲ್ಲಿಸುತ್ತಾರೆ. ಹಾಗೆಯೇ “ಈ ಲೇಖನ ಬರೆದುಕೊಡಲು ಕೇಳಿದ ‘ಚಿತ್ರಾ’ ಎಂಬ ಪತ್ರಿಕೆಯ ಸಂಪಾದಕರು ಕೇಳಿದ್ದಕ್ಕಿಂತ ಹೆಚ್ಚಿನದ್ದನ್ನೆ ನಾನು ನೀಡಿದ್ದೇನೆ” ಎಂದು ಅವರು ತಿಳಿಸುತ್ತಾರೆ. ಅಲ್ಲದೆ Gandhi’s age can be called ‘Tamo Yug’ of India(ಗಾಂಧಿಯವರ ಯುಗವನ್ನು ಭಾರತದ ಇತಿಹಾಸದ ಕತ್ತಲೆಯುಗ ಎಂದು ಕರೆಯಬಹುದು) ಎಂದೂ ಕೂಡ ಅವರು ದನಿಸೇರಿಸುತ್ತಾರೆ. “ರಾಜಕಾರಣ ಇಂದು ತನ್ನ ಶೀಲ ಕಳೆದುಕೊಂಡು ಬೆತ್ತಲೆಯಾಗಿದೆ. ಈ ದಿಸೆಯಲ್ಲಿ ಭಾರತದ ರಾಜಕಾರಣದಲ್ಲಿ ವ್ಯಾಪಾರೀಕರಣವನ್ನು introduce  ಮಾಡಿದವರು ಮತ್ತು ರಾಜಕಾರಣದಲ್ಲಿರಬಹುದಾದ ನೈತಿಕತೆಯನ್ನು ನಾಶಮಾಡಿದವರಲ್ಲಿ ಪ್ರಮುಖ ಜವಾಬ್ದಾರರು ಗಾಂಧಿ” ಎನ್ನುತ್ತಾ, ಮಹಾತ್ಮರ ವಿರುದ್ಧದ ತನ್ನ ಈ ಹೋರಾಟ ಅಷ್ಟು ಸುಲಭದಲ್ಲ ಎಂಬುದನ್ನೂ ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಭಾರತದ ಜನಸಂಖ್ಯೆಯ ಬಹುತೇಕರು ಅನಾಗರೀಕ, ಅಶಿಕ್ಷಿತ ಮತ್ತು ಅರಿವಿಲ್ಲದವರು. ಇದು ಜನತೆಯ ತಪ್ಪಲ್ಲ. ಸಮಾಜದ ಅನುಕೂಲ ಪಡೆದ ಕೆಲವು ಜನ ಉದ್ದೇಶಪೂರ್ವಕವಾಗಿ ಜನಸಮೂಹವನ್ನು ತಿಳಿಗೇಡಿಗಳಂತೆ, ಅಶಿಕ್ಷಿತರಂತೆ ಇಟ್ಟಿದ್ದಾರೆ. ಪರಿಣಾಮ, (ಇಂತಹವರ ನಡುವೆ) ಕೇವಲ ವೈಚಾರಿಕತೆ ಮತ್ತು ತಾರ್ಕಿಕ ಬಲಗಳಿಂದಷ್ಟೆ ಮಹಾತ್ಮರ ವಿರುದ್ಧ ಹೋರಾಡುವುದು ದುಸ್ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಹೋರಾಟ ಬೌದ್ಧಿಕತೆ ಮತ್ತು ಮಾನಸಿಕ ವಿಲಕ್ಷಣತೆ ಹಾಗೂ ಪವಾಡಗಳ ನಡುವಿನದ್ದು” ಎನ್ನುತ್ತಾರೆ. ಆ ಮೂಲಕ ಅಂಬೇಡ್ಕರರು ತಾನು ಮಾಡುತ್ತಿರುವುದು ಎಂತಹ ಹೋರಾಟ ಎಂಬುದರ ಸೂಕ್ಷ್ಮತೆಯನ್ನು ತಿಳಿಸುತ್ತಾರೆ.
      ಹೌದು, ಅಂಬೇಡ್ಕರರ ಈ ಹೋರಾಟ ಮತ್ತು ಅಂತಹ ಹೋರಾಟದ ಮಾದರಿಯ ಈ ಲೇಖನ ಗಾಂಧೀಜಿಯವರ ನೈಜ ಮುಖವನ್ನು ಬಯಲಿಗೆಳೆಯುತ್ತದೆ. ಹಾಗಂತ ಅಂಬೇಡ್ಕರರೇನು ಗಾಂಧೀಜಿಯವರ ವೈಯಕ್ತಿಕ ವಿಷಯಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಮಹಾತ್ಮ ಎನಿಸಿಕೊಳ್ಳುವವರೊಬ್ಬ ಮುಸ್ಲೀಮರು ಮತ್ತು ಅಸ್ಪøಶ್ಯರು ಎಂಬ ಎರಡು ಬೃಹತ್ ಸಮುದಾಯಗಳನ್ನು ವಂಚಿಸಲು ನಡೆಸಿದ ಸಂಚು ಅದಕ್ಕಾಗಿ ಅವರು ಹಿಡಿದ ಅಡ್ಡದಾರಿಗಳು... ಹೇಳಿದ ಬಹಿರಂಗ ಸುಳ್ಳುಗಳು... ಖಂಡಿತ Is Gandhi a Mahatma?  ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡುತ್ತವೆ.

Wednesday, 12 November 2014

ಕರ್ಣಾಟಕದ ಇತಿಹಾಸದಲ್ಲೂ ಬಂಗಾರದಯುಗದ ಕಥೆ ಬರೆದಿದ್ದ ಸಾಮ್ರಾಟ್ ಅಶೋಕ

                          -ರಘೋತ್ತಮ ಹೊ.ಬ


   ಕರುನಾಡಿನ  ಇತಿಹಾಸ ಅಥವಾ ಕರ್ನಾಟಕದ ಇತಿಹಾಸ ಎಂದರೆ ಅಲ್ಲಿ ಕದಂಬರು, ಗಂಗರು, ರಾಷ್ಟ್ರಕೂಟರು,  ಚಾಳುಕ್ಯರು, ಹೊಯ್ಸಳರು, ಟಿಪ್ಪು, ಹೈದರಾಲಿ ಮತ್ತು  ಮೈಸೂರಿನ ಒಡೆಯರು, ಇದಿಷ್ಟೆ ಇತಿಹಾಸಕಾರರು ಬೆಳಕುಚೆಲ್ಲುವುದು ಮತ್ತು ಅಂತಹ ಬೆಳಕುಚೆಲ್ಲುವಿಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತದೆ. ಉದಾಹರಣೆಗೆ ಕದಂಬರ ಮಯೂರಶರ್ಮನನ್ನು  ಹೊಗಳುವುದು, ಟಿಪ್ಪು-ಹೈದರಾಲಿ, ನಾಲ್ವಡಿ ಕೃಷ್ಣರಾಜ ಒಡೆಯರ್‍ರನ್ನು ತೆಗಳುವುದು  ಅಥವಾ ಅಂತಹ ಮಹತ್ವ ನೀಡದಿರುವುದು ಇತ್ಯಾದಿ. ಇಂತಹ ತಾರತಮ್ಯದ ನಡುವೆ   ಕರುನಾಡಿನ ಅಂತಹ ಇತಿಹಾಸದಲ್ಲಿ ಸಾಮ್ರಾಟ್ ಅಶೋಕನ ಹೆಸರನ್ನು ತಪ್ಪಿಯೂ ಹೇಳುವುದಿಲ್ಲ! ಅಶೋಕ ಈ ನಾಡಿನಲ್ಲಿ ತನ್ನ ರಾಜ್ಯ ವಿಸ್ತರಿಸಿದ್ದರ ಬಗ್ಗೆ, ತನ್ನ ಧರ್ಮ ಮತ್ತು ರಾಜಕೀಯ ಪ್ರಬಾವಳಿಯನ್ನು ಇಲ್ಲಿ ಬೀರಿದÀ್ದರ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲುವುದಿಲ್ಲ ಅಥವಾ ರ್ಕಾಟಕದ ಇತಿಹಾಸದ ಪಾಠಗಳ ಪುಟಗಳಲ್ಲಿ ಪಠ್ಯ ಇರುವುದಿಲ್ಲ!  ಯಾಕೆ?  ಉತ್ತರ ಸರಳ. ಅಶೋಕ ಪಸರಿಸಿದ್ದು ವೈದಿಕರಿಗೆ ಒಗ್ಗದ ಬೌದ್ಧಧರ್ಮವನ್ನು. ಹಾಗೆಯೇ ವೈದಿಕರಿಗೆ ಒಲ್ಲದ ಶಾಂತಿ , ಸಾಮರಸ್ಯವನ್ನು!
      
   ಹಾಗಿದ್ದರೆ ಕರುನಾಡಿನ ಇತಿಹಾಸದಲ್ಲಿ ಅಶೋಕನಿಗೆ ಸ್ಥಾನವಿರಬೇಕಲ್ಲವೆ? ಯಾವ ಸಾಮ್ರಾಟ ಉತ್ತರದ ಈಗಿನ ಅಪ್ಘನಿಸ್ತಾನದ ಹಿಂದೂಖುಷ್ ಪರ್ವತಶ್ರೇಣಿಯಿಂದ ದಕ್ಷಿಣದ ರಾಜ್ಯದ ತುಂಗಭದ್ರಾ ನದಿಯವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದನೋ  ಅಂತಹ ಸಾಮ್ರಾಟನ ಪರಿಚಯ ಅಥವಾ  ಕರುನಾಡಿನಲ್ಲಿನ ಆತನ ಕಂಪಿನ ಬಗ್ಗೆ ಅರಿವಿರಬೇಕಲ್ಲವೆ? ಅರಿವಿರಬೇಕು ಹಾಗೇ ಅಭಾರಿಯೂ ಆಗಿರಬೇಕು. ಯಾಕೆಂದರೆ ‘ಬ್ರಾಹ್ಮಿ’ ಲಿಪಿಯ ಮೂಲಕ, ಪ್ರಾಕೃತ ಭಾಷೆಯ ಮೂಲಕ ಇಡೀ ಭಾರತಕ್ಕೆ ತನ್ನ ಶಾಸನಗಳ ಮೂಲಕ ಅಕ್ಷರ ಪರಿಚಿಯಸಿದÀ ಪÀ್ರಥಮ ಸಾಮ್ರಾಟನೆಂದರೆ ಅದು  ಅಶೋಕ ಮಾತ್ರ.  ಒಂದರ್ಥದಲಿ ಅಶೋಕ ಇಡೀ ಭರತ ಖಂಡಕ್ಕೆ ಜನಸಾಮಾನ್ಯರೂ ಸೇರಿದಂತೆ ಅಕ್ಷರ ಕಲಿಸಿದ ಸಾಕ್ಷರತೆಯ ಸಾಮ್ರಾಟ. ಇದನ್ನು ಅತಿಶಯೋಕ್ತಿಗೆ  ಹೇಳುತ್ತಿಲ್ಲ ಸ್ವತಃ ಖ್ಯಾತ ಇತಿಹಾಸಕಾರ ವಿನ್ಸೆಂಟ್ ಸ್ಮಿತ್‍ರವರೇ “I think it likely that the percentage of literacy among the Buddhist population in Ashoka’s time was higher than it is now in many provinces of British India” ಎನ್ನುತ್ತಾರೆ. (ಆಧಾರ: ASOKA by Radhakumud Mookerji, Pp.102). ಇದರರ್ಥ ಬ್ರಿಟಿಷ್  ಕಾಲದ ಭಾರತಕ್ಕಿಂತಲೂ  ಅಶೋಕನ ಕಾಲದ ಭಾರತದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿತ್ತು ಎಂದು!
       
    ಅಂದಹಾಗೆ ಕರುನಾಡಲ್ಲಿ ಅಥವಾ ಇಂದಿನ ಕರ್ನಾಟಕದಲ್ಲಿ ಅಶೋಕನ ಪ್ರಬಾವಳಿ ಹೇಗಿತ್ತು?  ಉತ್ತರ ಹುಡುಕುವುದಾದರೆ ಅಥವಾ ಅಶೋಕನ ಕುರಿತ ಅತ್ಯಂತ ಮಹತ್ವದ ಅಂಶ ವಿವರಿಸುವುದಾದರೆ ಈ ದೇಶದಲ್ಲಿ “ದೇವನಾಂಪ್ರಿಯ ಅಶೋಕ” ಎಂಬ ಅಶೋಕನ ನಿಜ ನಾಮಧೇಯ ಇರುವ ಏಕೈಕ ಶಾಸನ ದೊರಕಿದ್ದು ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ! ಖಂಡಿತ, ಇದು ಆಶ್ಚರ್ಯವೆನಿಸಿದರೂ ಸತ್ಯ. ಯಾಕೆಂದರೆ ಇಡೀ ಭರತ ಉಪಖಂಡದಲ್ಲಿ  ದೊರೆತ ಎಲ್ಲಾ ಶಾಸನಗಳಲ್ಲೂ  ಬರೇ ‘ ದೇವನಾಂಪ್ರಿಯ’ ಎಂತಲೋ ಅಥವಾ ಬರೇ ‘ಪ್ರಿಯದರ್ಶಿ ರಾಜಾ’ ಎಂತಲೋ ಉಲ್ಲೇಖವಿರುತ್ತಿತ್ತು.  ಆದರೆ ರಾಯಚೂರು ಜಿಲ್ಲೆಯ ಮಸ್ಕಿ ಶಾಸನದಲ್ಲಿ ಪ್ರಾಕೃತ ಭಾಷೆಯಲ್ಲಿ ‘ದೇವನಾಂಪಿಯಸ ಅಸೋಕಸ’ (of his gracious majesty, asoka) (ibid. Pp.12) ಎಂದಿತ್ತು!.
     
   ಬರೀ ಮಸ್ಕಿಯಲ್ಲಷ್ಟೆ ಅಲ್ಲ ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ (ಅಶೋಕನ  ಕಾಲದಲ್ಲಿ ಅದನ್ನು ‘ಇಸಿಲ’ ಎಂದು ಕರೆಯಲಾಗುತ್ತಿತ್ತು) ಹಾಗೂ ಬ್ರಹ್ಮಗಿರಿ, ಹಾಗೆಯೇ ಗುಲ್ಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ಅಶೋಕನ ಶಾಸನಗಳು ದೊರೆತಿವೆ. infact ಇಡೀ ದೇಶದಾದ್ಯಂತ ದೊರೆತಿರುವ 18 ಕಿಬ್ಬಂಡೆ  ಶಾಸನಗಳಲ್ಲಿ  ಶೇ.50 ಅಂದರೆ 9 ಶಾಸನಗಳು ರಾಜ್ಯದಲ್ಲೇ ದೊರೆತಿವೆ!  ಅಂದರೆ ಅಶೋಕನು ಕರ್ನಾಟಕ ರಾಜ್ಯವಾಳಿರುವ  ಪರಿಯನ್ನು ಎಂಥವರಾದರೂ ಊಹಿಸಬಹುದು. ಅದರಲ್ಲೂ ಸನ್ನತಿ “ಅಶೋಕನ ವಯಕ್ತಿಕ ಆಸಕ್ತಿಯಿಂದಾಗಿ ಮೌರ್ಯ ಸಾಮ್ರಾಜ್ಯದ ಒಂದು ಪ್ರಧಾನ ಆಡಳಿತ ಮತ್ತು  ಧಾರ್ಮಿಕ ಕೇಂದ್ರವಾಗಿ  ಬೆಳೆಯಿತು”(ಆಧಾರ: ಷ.ಶೆಟ್ಟರ್‍ರವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’, ಪು.77). ಅಲ್ಲದೆ ಅಲ್ಲಿ(ಸನ್ನತಿ) ದೊರಕಿರುವ ಮಹಾಸ್ತೂಪ ಮತ್ತು ಹಲವು ವಿಹಾರಗಳ ಅವಶೇಷಗಳ ಆಧಾರದ ಮೇಲೆ ಹೇಳುವುದಾದರೆ ಅಶೋಕನ ಕಾಲದಲ್ಲಿ ಅಲ್ಲಿ  ಪ್ರಾರಂಭವಾದ  ಅಂತಹ ಧಾರ್ಮಿಕ ಚಟುವಟಿಕೆಗಳು ಮತ್ತೂ ಮುಂದುವರಿದು ಅದು ಬೃಹತ್ ಬೌದ್ಧಕೇಂದ್ರವಾಗಿ ಬೆಳೆಯಿತು.
  
   ಇನ್ನು ಅಶೋಕನ ಕರ್ನಾಟಕದ ಸಾಮ್ರಾಜ್ಯದ ಬಗ್ಗೆ ಹೇಳುವುದಾದರೆ  ಸುವರ್ಣಗಿರಿಯನ್ನು ಆತ ತನ್ನ ದಖ್ಖಣದ (ಕರ್ನಾಟಕ-ಆಂಧ್ರ) ರಾಜಧಾನಿಯಾಗಿ ಮಾಡಿಕೊಂಡ. ಅಲ್ಲದೆ ಅದಕ್ಕೆ ಆಯಪುತ( ಆರ್ಯಪುತ್ರ)ನನ್ನು ನೇಮಕಮಾಡಿ ಆತನ ಸಹಾಯಕ್ಕೆ ‘ಮಹಾಮಾತ್ರ’ರನ್ನು ಕೂಡ ನೇಮಿಸಿದ. ಅಂದಹಾಗೆ ‘ಆರ್ಯಪುತ್ರ’ನೆಂಬುವವನು ಅಶೋಕನ ಸಮೀಪದ ಸಂಬಂಧಿ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ನಿಟ್ಟಿನಲಿ ಹೇಳುವುದಾದರೆ ಅಶೋಕನ ಸಾಮ್ರಾಜ್ಯ  ರಾಜ್ಯದ ತುಂಗಭದ್ರಾ ನದಿಯವರೆಗೆ ಇತ್ತು. ಹಾಗಿದ್ದರೆ ಅಲ್ಲಿಂದ ಕೆಳಗೆ  ದಕ್ಷಿಣಕ್ಕೆ  ಆ ಸಮಯದಲ್ಲಿ ಯಾರು ಆಳುತ್ತಿದ್ದರು? ಯಾವ ರಾಜ್ಯವಿತ್ತು? ಉತ್ತರ: ‘ಮಹಿಷ ಮಂಡಲ’ ಅಥವಾ ‘ಮಹಿಷೂರು’ ಅಥವಾ ಇಂದಿನ ‘ಮೈಸೂರು’! ಅಂದರೆ ‘ಮಹಿಷಾಸುರ’ ಅಂದಿನ ಮಹಿಷಮಂಡಲದ ಅರಸು ಎಂದಾಯಿತು. ಹಾಗೆಯೇ ‘ಮಹಿಷಮಂಡಲ’ಕ್ಕೆ (‘ಮಹಿಷ’ ಎಂದರೆ ‘ಎಮ್ಮೆ’ ಎಂದರ್ಥ) ಅಂದಿನ  ಸಾಮಂತರಾಗಿ  ದಕ್ಷಿಣದಲ್ಲಿ ‘ಎರುಮೈನಾಡು’ (ಎರುಮೈ= ಎಮ್ಮೆ=ಮಹಿಷ) ಇಂದಿನ ತಮಿಳುನಾಡು ಇತ್ತು. ಇದರರ್ಥ ‘ಮಹಿಷಾಸುರ’ ಅಶೋಕನ  ಬೌದ್ಧ ಸಾಮಂತ ಅರಸ! (ಖಂಡಿತ, ಇದರತ್ತ ಇತಿಹಾಸ ಬೆಳಕು ಚೆಲ್ಲಬೇಕು.   ಸುಮ್ಮನೇ ಆತನನ್ನು ರಾಕ್ಷಸ, ಚಾಮುಂಡಿ ಆತನನ್ನು ಕೊಂದಳು ಎಂದು  ಕಥೆ ಕಟ್ಟುವುದಲ್ಲ!)
  
  ಮೂರನೇ ಬೌದ್ಧ ಪರಿಷತ್‍ನಂತರ ಅಶೋಕ ತನ್ನ  ಧರ್ಮ ಪ್ರಸಾರಕರನ್ನು ಅನೇಕ ಕಡೆ ಕಳುಹಿಸುತ್ತಾನೆ. ಅದರಲ್ಲಿ  ವನವಾಸ(ಬನವಾಸಿ) ಮತ್ತು ಮಹಿಷಮಂಡಲಗಳೂ ಒಳಗೊಂಡಿದ್ದವು. ಬನವಾಸಿಗೆ ಥೇರ ರಖ್ಖಿತ ಮತ್ತು ಮಹಿಷಮಂಡಲಕ್ಕೆ ಮಹದೇವ ಎಂಬುವವರನ್ನು ಅಶೋಕ ಕಳುಹಿಸುತ್ತಾನೆ (Asoka, the Buddhist emperor of india by Vincent A smith . Pp.44). ಮಹಿಷಮಂಡಲಕ್ಕೆ ಅಂದು ಅಶೋಕ ಕಳುಹಿಸಿದ ಧರ್ಮಪ್ರಚಾರಕ ಮಹದೇವ ಇಂದಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಭಾಗದಲ್ಲಿ ಕಂಡುಬರುವ ಮಲೈ ಮಹದೇಶ್ವರ ಇರಬಹುದೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಖಂಡಿತ ಉದ್ಭವಿಸುತ್ತದೆ. ಯಾಕೆಂದರೆ ಜನಪದೀಯ ಸಾಹಿತ್ಯದಲ್ಲಿ ಮಹದೇಶ್ವರರನ್ನು ಈಗಲೂ “ಉತ್ತರದೇಶದಯ್ಯ” ಎನ್ನಲಾಗುತ್ತದೆ. ಅಂದರೆ ಮಹದೇಶ್ವರರು ಉತ್ತರಭಾರತದಿಂದ ಬಂದವರು ಎಂದರ್ಥ! ಅಲ್ಲದೆ  ಮಹದೇಶ್ವರನ ಭಕ್ತರ ‘ಬುರುಡೆ ಬೋಳಿಸುವ ಪದ್ಧತಿ’, ‘ಗುಡ್ಡನ ಬಿಡುವ ಪದ್ಧತಿ’, ‘ಭಿಕ್ಷೆ ಬೇಡುವ ಪದ್ಧತಿ’  ಇವೆಲ್ಲವೂ ಬೌದ್ಧಭಿಕ್ಕುಗಳ ರೀತಿಯೇ ಇದೆ. ಒಟ್ಟಾರೆ  ಈ ಆಧಾರದ ಮೇಲೆ ಅಶೋಕ ಅಂದು ಕಳುಹಿಸಿದ ಥೇರ(ಬೌದ್ಧ ಭಿಕ್ಕು) ಮಹದೇವನೆ ಇಂದಿನ ಮಲೈ ಮಹದೇಶ್ವರ ಎಂದು ನಿಸ್ಸಂಶಯವಾಗಿ ಹೇಳಬಹುದು.
   
 ಒಂದಂತು ನಿಜ, ಸಾಮ್ರಾಟ್ ಅಶೋಕ ಕರ್ನಾಟಕದ ಉದ್ದಗಲಕ್ಕೂ ತನ್ನ ಪ್ರಭಾವ ಬೀರಿದ್ದ. ಈ ಹಿನ್ನೆಲೆಯಲ್ಲಿ  ಪರ್ಷಿಯನ್ ಯಾತ್ರಿಕ ಫಾಹಿಯಾನ್ ಇಲ್ಲಿ ಕಂಡ ಮಹಿಶಾಸಕ (ಮೈಸೂರು?), ಚೀನಿ ಯಾತ್ರಿಕ ಹೂಯೆನ್ ತ್ಸಾಂಗ್ ಹೇಳುವ ‘ಕೊಂಕಣ ಪುರ’ ಮತ್ತು ಆತ ಅಲ್ಲಿ ಕಂಡ ಅಶೋಕ ಸ್ತೂಪ, ಬುದ್ಧ ಕರಂಡಕ, ಮೈತ್ರೇಯ ವಿಗ್ರಹ ಮತ್ತು ಹಲವಾರು ಸಂಘಾರಾಮಗಳು(ಭಿಕ್ಕುಗಳು ವಾಸಿಸುತ್ತಿದ್ದ ಪ್ರದೇಶ) ಮತ್ತು ಅಂತೆಯೇ  ಆ ಕಾಲದಲ್ಲಿ ಬನವಾಸಿ  ಪ್ರಸಿದ್ಧ ಬೌದ್ಧಕೇಂದ್ರವಾಗಿದ್ದದ್ದು, ಇವೆಲ್ಲವನ್ನು ನಾವು ಗಮನಿಸಬಹುದು. ದುರಂತವೆಂದರೆ ಬನವಾಸಿ ಎಂದಾಕ್ಷಣ ಅದನ್ನು ಕದಂಬರ ರಾಜಧಾನಿ ಎಂದಷ್ಟೆ ಹೇಳುತ್ತೇವೆ! ಹಾಗಿದ್ದರೆ ಅಶೋಕನಿಗೂ ಅದೇ ಬನವಾಸಿಗೂ (ಕರ್ನಾಟಕ) ಇದ್ದ ಸಂಬಂಧ? ಖಂಡಿತ, ಇತಿಹಾಸದಲ್ಲಿ ಇಂತಹದ್ದನ್ನೆಲ್ಲ ಉದ್ದೇಶಪೂರ್ವಕವಾಗಿಯೇ  ಮುಚ್ಚಿಡಲಾಗಿದೆ!
  
   ಒಂದಂತು ನಿಜ,  ಕರ್ನಾಟಕಕ್ಕೆ ಸಂಬಂಧಿಸಿದಂತೆ ಆತನ ಉತ್ತರ ಗಡಿ ಗುಲ್ಬರ್ಗ ಜಿಲ್ಲೆಯ ಸನ್ನತಿಯಾಗಿದ್ದರೆ , ದಕ್ಷಿಣದ ಗಡಿ ಚಿತ್ರದುರ್ಗ ಜಿಲ್ಲೆಯ  ಸಿದ್ದಾಪುರ- ಬ್ರಹ್ಮಗಿರಿಯಾಗಿತ್ತು. ಪಶ್ಚಿಮದ ಗಡಿ ಕೊಪ್ಪಳವಾಗಿದ್ದರೆ, ಪೂರ್ವ ಗಡಿ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯ ಯರ್ರಗುಡಿಯಾಗಿತ್ತು. 125ಕಿ.ಮೀ ವಿಸ್ತೀರ್ಣದ ತನ್ನ ಕರ್ನಾಟಕದ ಮಿತಿಯ ಈ ಕ್ಷೇತ್ರದಲ್ಲಿ ಅಶೋಕ 11 ಕಿಬ್ಬಂಡೆ ಶಾಸನಗಳಲ್ಲದೆ , ಹೆಬ್ಬಂಡೆ ಶಾನಗಳ ಒಂದು ಗುಚ್ಛವನ್ನು ಸಹ ಕೊರೆಯಿಸಿದ್ದನು(ಷ.ಶೆಟ್ಟರ್, ಪು.76). ಹಾಗೆಯೇ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ  ಬೌದ್ಧ ಪರಂಪರೆಯನ್ನನುಸರಿಸಿ  ಅಶೋಕನು  ಕರ್ನಾಟಕ-ಆಂಧ್ರದ ಎಲ್ಲಾ ಜನಾಂಗಗಳನ್ನು ‘ಅಂಧಕ’ ಎಂಬ ಹೆಸರಿನಿಂದ ಗುರುತಿಸಿದ. ಈ ಎಲ್ಲಾ ಆಧಾರಗಳ ಮೇಲೆ ಹೇಳುವುದಾದರೆ ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ಸಾಮ್ರಾಟ ಅಶೋಕ ಕರುನಾಡಲ್ಲೂ ತನ್ನ ಪ್ರಬಲ ಕಂಪು ಬೀರಿದ್ದ. ಆತ ಪ್ರಚುರ ಪಡಿಸಿದ ‘ಬ್ರಾಹ್ಮಿ’ ಲಿಪಿ ಮತ್ತು ಪ್ರಾಕೃತ ಭಾಷೆಯಿಂದ (ಷ.ಶೆಟ್ಟರ್, ಪು.75) ಕನ್ನಡವೂ ಒಳಗೊಂಡಂತೆ  ಈ ದೇಶದ ಹಲವು ಭಾಷೆಗಳು ಅಭಿವೃದ್ಧಿ ಹೊಂದಿದವು. ಅಜ್ಞಾನವೆಂದÀರೆ ನಾವು ನಮ್ಮ ಕರ್ನಾಟಕದ ಇತಿಹಾಸವೆಂದರೆ ಕೇವಲ ಕದಂಬ, ಗಂಗ,  ರಾಷ್ಟ್ರಕೂಟ, ಹೊಯ್ಸಳ, ಚಾಳುಕ್ಯ ಎಂದಷ್ಟೆ ಹೇಳುತ್ತೇವೆ! ಆದರೆ ಅದೇ ಇತಿಹಾಸದ ಪುಟಗಳಲ್ಲಿ ನಮ್ಮ ರಾಯಚೂರಿನ ಮಸ್ಕಿ ಶಾಸನದಿಂದ ಇಡೀ ವಿಶ್ವಕ್ಕೆ ಅಶೋಕ ಎಂದು ಪರಿಚಯಗೊಂಡ ‘ದೇವನಾಂಪ್ರಿಯ’ನ ಇತಿಹಾಸ?
     
 ಖಂಡಿತ, ಈ ನಿಟ್ಟಿನಲಿ ಇನ್ನು ಮುಂದಾದರೂ, “ಕರ್ಣಾಟಕದ ಇತಿಹಾಸದಲಿ ... ಬಂಗಾರದಯುಗದ ಕಥೆಯನ್ನು” ಹೇಳುವಾಗ ರಾಜ್ಯದ ಸುವರ್ಣಗಿರಿಯನ್ನು ತನ್ನ ದಕ್ಷಿಣದ ರಾಜಧಾನಿಯಾಗಿ ಮಾಡಿಕೊಂಡಿದ್ದ ಸಾಮ್ರಾಟ್ ಅಶೋಕನ ಹೆಸರು ಮೊದಲು ಪ್ರಸ್ತಾಪವಾಗಬೇಕು. “ಹಕ್ಕಬುಕ್ಕರು ಹರುಷದ ಮಳೆಯನ್ನು ಇಲ್ಲಿ ಚೆಲ್ಲು”ವುದಕ್ಕೂ ಮೊದಲೇ ಬೌದ್ಧ ಧರ್ಮದ ಕಂಪನ್ನು ಇಲ್ಲಿ ಹರಡಿದ್ದ ‘ದೇವನಾಂಪ್ರಿಯ’ನ ಹೆಸರಿಗೆ ಅಗ್ರ ಮಾನ್ಯತೆ ಸಿಗಬೇಕು.


Tuesday, 14 October 2014

Raghothama Hoba's writings:   ಅಂಬೇಡ್ಕರ್ ಪುನರ್‍ಸೃಷ್ಟಿಸಿದ ಬುದ್ಧ ಭಾರತ 1956 ಅಕ್ಟೋ...


  ಅಂಬೇಡ್ಕರ್ ಪುನರ್‍ಸೃಷ್ಟಿಸಿದ ಬುದ್ಧ ಭಾರತ


 1956 ಅಕ್ಟೋಬರ್ 14ರ ಬೆಳಿಗ್ಗೆ 9 ಗಂಟೆಗೆ ಕುಶೀನಗರದ ಹಿರಿಯ ಬೌದ್ಧಭಿಕ್ಕು ಆರ್ಯ ಚಂದ್ರಮಣಿ ಥೇರರವರು ಬಾಬಾಸಾಹೇಬ್ ಅಂಬೇಡ್ಕರರಿಗೆ ಮಹಾರಾಷ್ಟ್ರದ ನಾಗಪುರದ ಆ ವಿಶಾಲ ಜನಸಾಗರದ ನಡುವೆ ‘ಬುದ್ಧಂ ಶರಣಂ ಗಚ್ಚಾಮಿ... ಧಮ್ಮ ಶರಣಂ ಗಚ್ಛಾಮಿ... ಸಂಘಂ ಶರಣಂ ಗಚ್ಛಾಮಿ...’ ಎಂಬ ಮಂತ್ರ ಪಠಿಸುತ್ತಿದ್ದಂತೆ ಇತಿಹಾಸದ ನಿಂತುಹೋದ ಚಕ್ರವೊಂದು ಮತ್ತೆ ತಿರುಗಲಾರಂಭಿಸಿತು. ಹೌದು, ಅದು ಧಮ್ಮಚಕ್ರ. ಅರ್ಥಾತ್ ಬೌದ್ಧ ಧಮ್ಮಚಕ್ರ. ನೂರಾರು ವರುಷಗಳ ಕಾಲ ಭಾರತದ ಇತಿಹಾಸದಲ್ಲಿ ವೈಭವವನ್ನು ಕಂಡು ಅಷ್ಟೆ ನೂರಾರು ವರುಷಗಳು ಸ್ತಬ್ಧವಾಗಿದ್ದ ಬೌದ್ಧಧಮ್ಮ ಮತ್ತೆ ಅಂಬೇಡ್ಕರರ ಮೂಲಕ ಜನಮಾನಸದಲ್ಲಿ ನೆಲೆಸಲಾರಂಭಿಸಿತು. ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಬುದ್ಧಭಾರತವನ್ನು ಪ್ರಾಯೋಗಿಕ ನೆಲೆಯಲ್ಲಿ ಭಾರತದಲ್ಲಿ ಪುನರ್‍ಸೃಷ್ಟಿಸಿದ್ದರು. ಅದರ ಚಲನೆಗೆ ಮರುಚಾಲನೆ ನೀಡಿದ್ದರು.

 ಅಂದಹಾಗೆ ತಾವು ಅಂದು ಬೌದ್ಧಧರ್ಮ ಸ್ವೀಕರಿಸಿದ ದಿನ ಅಂಬೇಡ್ಕರ್ ಏನು ಹೇಳಿದರು? ಭಾವಾವೇಶದಿಂದ ಅವರೇ ಹೇಳಿರುವ ಮಾತನ್ನು ಅಷ್ಟೇ ಭಾವಾವೇಶದಿಂದ ದಾಖಲಿಸುವುದಾದರೆ “ಹಿಂದೂಧರ್ಮವನ್ನು ತ್ಯಜಿಸುವ ಚಳುವಳಿಯನ್ನು ನಾನು 1935ರಲ್ಲಿ ಪ್ರಾರಂಭಿಸಿದೆ ಮತ್ತು ಅಂದಿನಿಂದ ನಾನು ಆ ಹೋರಾಟವನ್ನು ಮುಂದುವರಿಸುತ್ತಲೇ ಬಂದೆ. ಈ ಕಾರಣಕ್ಕಾಗಿ ಇಂದು ನಡೆದ ಮತಾಂತರ ನನಗೆ ಊಹಿಸಲಾರದಷ್ಟು ಸಂತಸ ಮತ್ತು ಅಗಾಧವಾದ ತೃಪ್ತಿ ನೀಡಿದೆ. ನರಕದಿಂದ ಬಿಡುಗಡೆ ಪಡೆದೆನೆಂಬ ಭಾವನೆ ನನ್ನಲ್ಲಿ ಮೂಡಿದೆ”.

 ಹೌದು, ‘ನರಕ’ ಅದು ಅಂಬೇಡ್ಕರ್ ಭಾವಾವೇಶದಿಂದಲೇ ಹೇಳಿದರೂ ವಾಸ್ತವದ ಪ್ರತಿಬಿಂಬವಾಗಿರುವ ‘ಹಿಂದೂಧರ್ಮ’ವೆಂಬ ‘ನರಕ’. ಯಾಕೆಂದರೆ ಅಂಬೇಡ್ಕರ್ 1935ರಲ್ಲೇ ‘ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯಲಾರೆ’ ಎಂದು ಗುಡುಗಿದ್ದರು. ಮಹಾಡ್ ಎಂಬ ಊರಿನ ಕೆರೆಯ ನೀರನ್ನು ಕುಡಿಯಲು ಸ್ವತಃ ಅವರೇ ಪ್ರಾರಂಭಿಸಿದ ಚಳುವಳಿಯಲ್ಲಿ ನೊಂದ ಅವರು ತನ್ನವರ ಮೇಲೆ ಧಾಳಿಗಳಾದಾಗ ರೋಷದಿಂದ ‘ಮನುಸ್ಮøತಿ’ ಸುಟ್ಟು ತನ್ನ ಆ ‘ಹಿಂದೂವಾಗಿ ಸಾಯಲಾರೆ’ ಎಂಬ ಆ ಗಜ ಗರ್ಜನೆ ಗರ್ಜಿಸಿದ್ದರು. ಬಹುಶಃ ಆ ಸಂದರ್ಭದಲ್ಲಿ ಬಹುತೇಕರು ಅಂಬೇಡ್ಕರರ ಆ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಿದ್ದರೆಂದೆನಿಸುತ್ತದೆ. ಆದರೆ ನುಡಿದುದ್ದನ್ನು ಸಾಧಿಸುವುದರಲ್ಲಿ ಗಟ್ಟಿಗರಾದ ಬಾಬಾಸಾಹೇಬರು ತನ್ನ ಜನರಿಗೆ 1930-31ರ ದುಂಡುಮೇಜಿನ ಪರಿಷತ್ತಿನ ಹೋರಾಟಗಳ ಮೂಲಕ ರಾಜಕೀಯ ಮೀಸಲಾತಿ ಕೊಡಿಸಿದ್ದರು. 1942ರಲ್ಲಿ ಸ್ವತಃ ತಾವೇ ಅಂದಿನ ಬ್ರಿಟಿಷ್ ವೈಸರಾಯ್‍ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ನಿಯುಕ್ತಿಗೊಂಡು ತಮ್ಮ ಪ್ರಥಮ ಸಾಧನೆಯೆಂಬಂತೆ ಪರಿಶಿಷ್ಟರಿಗೆ 8
1/2 ಪರ್‍ಸೆಂಟ್ ಉದ್ಯೋಗ ಮೀಸಲಾತಿ ಕೊಡಿಸಿದ್ದರು. ತದನಂತರ ಆ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಸ್ವಾತಂತ್ರೋತ್ತರದಲ್ಲಿ ಸಂವಿಧಾನಶಿಲ್ಪಿಯಾಗಿ ಭಾರತ ಸಂವಿಧಾನದಲ್ಲಿ ಅದನ್ನು ಉಳಿಸಿಕೊಟ್ಟಿದ್ದರು. ಒಟ್ಟಾರೆ ಈ ದೇಶದ ಅಸ್ಪøಶ್ಯತೆಯಿಂದ ನೊಂದ ಕೋಟ್ಯಾನುಕೋಟಿ ಸೋದರ/ಸೋದರಿಯರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಏನೇನು ಅನುಕೂಲಗಳು ಬೇಕೋ ಅದೆಲ್ಲವನ್ನು ಛಲಬಿಡದೆ ಗಳಸಿಕೊಟ್ಟು ಕಡೆಗಷ್ಟೇ ಅವರು ಹಿಂದುತ್ವದಿಂದ ಬಿಡುಗಡೆಗೊಂಡು ಬುದ್ಧನ ಕಡೆಗೆ ಚಲಿಸಿದ್ದು! ಈ ನಿಟ್ಟಿನಲ್ಲಿ ಹೇಳುವುದಾದರೆ ಅವರ ಒಟ್ಟಾರೆ ಪ್ರಕ್ರಿಯೆ ಯೋಜನಾಬದ್ಧವಾದದ್ದು. ಎಲ್ಲಿಯೂ ಕೂಡ ‘ಅನನುಕೂಲ ಸ್ಥಿತಿಗಳನ್ನು ತನ್ನವರಿಗೆ ಅನುಕೂಲಕರಮಾಡಿಕೊಡುವುದರಲ್ಲಿ’ ಅವರು ಹಿಂದೆ ಬೀಳಲಿಲ್ಲ. ತಮ್ಮ ಹೋರಾಟಕ್ಕೆ ತಾರ್ಕಿಕ ಜಯ ಪಡೆದ ನಂತರವಷ್ಟೆ ಅವರು ಬುದ್ಧನೆಡೆಗೆ ಅಧಿಕೃತವಾಗಿ ಬೆಸೆದದ್ದು.

ಹಾಗಿದ್ದರೆ ಅಂಬೇಡ್ಕರ್ ಬುದ್ಧನನ್ನೇ ಯಾಕೆ ಆಯ್ಕೆಮಾಡಿಕೊಂಡರು? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಅದಕ್ಕೆ ಅಂಬೇಡ್ಕರ್ ಅಂದೇ ಹೇಳುತ್ತಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು(ಅಸ್ಪøಶ್ಯರು)”. ಆ ನಾಗ ಜನಾಂಗದವರು ಬೌದ್ಧ ಮತಾವಲಂಬಿಗಳಾಗಿದ್ದರು. ಅಂತಹ ಚಾರಿತ್ರಿಕ ಹಿನ್ನೆಲೆಯ ಕಾರಣಕ್ಕಷ್ಟೆ ತಾನು ಬೌದ್ಧ ಧರ್ಮ ಸ್ವೀಕರಿಸಿದ್ದಾಗಿ ತಮ್ಮ ಬುದ್ಧನ ಒಲವಿಗೆ ಅಂಬೇಡ್ಕರರು ಸ್ಪಷ್ಟೀಕರಣ ನೀಡುತ್ತಾರೆ. ಹಾಗೆಯೇ ಅಂತಹ ಸ್ಪಷ್ಟೀಕರಣಕ್ಕೆ “ಭಾರತದ ನಿಜವಾದ ಇತಿಹಾಸ ಬೌದ್ಧತ್ವಕ್ಕೂ ಬ್ರಾಹ್ಮಣತ್ವಕ್ಕೂ ನಡೆದ ನಿರಂತರ ಕದನ” ಎಂದೂ ಕೂಡ ಅಂಬೇಡ್ಕರ್ ದನಿಗೂಡಿಸುತ್ತಾರೆ. ಅಂದಹಾಗೆ ಬ್ರಾಹ್ಮಣತ್ವದ  ಜತೆಗಿನ ಜಗಳದಲ್ಲಿ ಸೋತ ಮೂಲ ಬೌದ್ಧ ನಾಗ ಜನರೇ ಊರ ಆಚೆ ತಳ್ಳಲ್ಪಟ್ಟ ಅಸ್ಪøಶ್ಯರಾಗಿ ಸೃಷ್ಟಿಯಾದರು ಎಂದು ಕೂಡ ಅಂಬೇಡ್ಕರರು ಅಸ್ಪøಶ್ಯತೆಯ ಸೃಷ್ಟಿಗೂ ಕಾರಣ ಕೊಡುತ್ತಾರೆ. ಈ ನಿಟ್ಟಿನಲ್ಲಿ ತನ್ನ ಮೂಲ ಜನರು ಬೌದ್ಧಧರ್ಮೀಯರಾಗಿದ್ದ ಕಾರಣದಿಂದ  ತಾನು ಮಾಡುತ್ತಿರುವ ಈ ಮತಾಂತರ ಬೇರೆ ಧರ್ಮಕ್ಕೆ ಹೋಗುವ ಕ್ರಿಯೆಯಲ್ಲ ಬದಲಿಗೆ ‘ಸ್ವಂತ ಮನೆಗೆ ವಾಪಸ್ ಹೋಗುವ ಕ್ರಿಯೆ’ ಎಂದು ಅಂಬೇಡ್ಕರ್ ಅಪೂರ್ವ ಸ್ಪಷ್ಟೀಕರಣ ನೀಡುತ್ತಾರೆ. ತನ್ಮೂಲಕ ದಲಿತರು ಬೌದ್ಧರಾಗಲೇಬೇಕಾದ ಅನಿವಾರ್ಯತೆಗೆ ಇತಿಹಾಸದ ಕೊಂಡಿಯನ್ನು ಅವರು ಜೋಡಿಸುತ್ತಾರೆ.

 ಪ್ರಶ್ನೆ ಏನೆಂದರೆ ಅಂಬೇಡ್ಕರ್ ಜೋಡಿಸಿದ ಆ ಐತಿಹಾಸಿಕ ಜೋಡಣೆಗೆ ಭಾರತದ ಸಮಸ್ತ ದಲಿತರು ಸ್ಪಂಧಿಸಿದರೇ? ಖಂಡಿತ ಇಲ್ಲ. ಯಾಕೆಂದರೆ ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದ 15 ದಿನಗಳಲ್ಲೇ ಅಂದಿನ ಜವಾಹರಲಾಲ್ ನೇತೃತ್ವದ ಕೇಂದ್ರ ಕಾಂಗ್ರೆಸ್ ಸರ್ಕಾರ ಬೌದ್ಧಧರ್ಮದ ಕಡೆಗೆ ಒಲವು ತೋರುವ ದಲಿತರನ್ನು ಬೆದರಿಸಲು “ಬೌದ್ಧಧರ್ಮ ಸ್ವೀಕರಿಸಿದ  ದಲಿತರು (ಎಸ್‍ಸಿ/ಎಸ್‍ಟಿಗಳು) ಮೀಸಲಾತಿಯ ಫಲಾನುಭವವನ್ನು ಕಳೆದುಕೊಳ್ಳುವರು” ಎಂದು ಅಧಿಸೂಚನೆ ಹೊರಡಿಸಿತು!(Buddhism in india after ambedkar by D.C.Ahir. p.14).ತತ್ಪರಿಣಾಮ ಎಲ್ಲಿ ಮೀಸಲಾತಿ ಹೊರಟುಹೋಗುತ್ತದೆಯೋ ಎಂದು ಹೆದರಿದ ದೇಶದ ಬಹುತೇಕ ದಲಿತರು ಬೌದ್ಧರಾಗುವತ್ತ ಹಿಂಜರಿದರು. ಹಾಗೆಯೇ ತನ್ನ ಜನರು ಬೌದ್ಧರಾದರೆ ಮೀಸಲಾತಿ ಸೌಲಭ್ಯ ಕಳೆದುಕೊಳ್ಳುತ್ತಾರೆಂಬ ಅರಿವೂ ಸಹ ಅಂಬೇಡ್ಕರರಿಗಿತ್ತು. ಆದರೆ ಅದನ್ನು ಹೋರಾಡಿ ಮತ್ತೆ ಪಡೆಯುತ್ತೇನೆ ಎಂಬ ಮಾತನ್ನು ಸಹ ಮತಾಂತರದ ಸಂದರ್ಭದಲ್ಲಿ ಅವರು ನುಡಿದಿದ್ದರು. ಆದರೆ ಬಾಬಾಸಾಹೇಬರು ಮತಾಂತರವಾದ ಎರಡೇ ತಿಂಗಳಲ್ಲಿ(ಡಿಸೆಂಬರ್ 6, 1956) ನಿಧನರಾದರು. ಪರಿಣಾಮ ಆ ಸಂದರ್ಭದಲ್ಲಿ ಬೌದ್ಧರಾದರೂ ದಲಿತರು ಮೀಸಲಾತಿ ಉಳಿಸಿಕೊಳ್ಳುವ ಮಾತು ದೂರಉಳಿಯಿತು. ಅಂದಹಾಗೆ ಇದಾಗಿ ಹಲವರ್ಷಗಳ ನಂತರ ‘ದಲಿತರು ಬೌದ್ಧರಾದರೂ ಅವರ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ’ ಎಂಬ ಅಧಿಸೂಚನೆ ಹೊರಬೀಳಲು ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದೇ ಬರಬೇಕಾಯಿತು! 1989ರಲ್ಲಿ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್‍ರವರ ನೇತೃತ್ವದ ಕಾಂಗ್ರೆಸ್ಸೇತರ ಜನತಾದಳದ ಸರ್ಕಾರವೇ ಬೌದ್ಧದಲಿತರಿಗೂ ಮೀಸಲಾತಿಯನ್ನು ಮರುಕಲ್ಪಿಸಿಕೊಟ್ಟಿತು ಎಂಬುದು ಇಲ್ಲಿ ಕಾಕತಾಳೀಯವೆನಿಸಿದರೂ ಗಮನಿಸಬೇಕಾದ ವಿಚಾರ. ಒಟ್ಟಾರೆ 3-6-1990ರಲ್ಲಿ ರಾಷ್ಟ್ರಪತಿಗಳಿಂದ ಒಪ್ಪಿಗೆಪಡೆಯಲ್ಪಟ್ಟ, 4-6-1990ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ತಿದ್ದುಪಡಿ ಮಸೂದೆ-1990 ಬೌದ್ಧಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರೂ ಮೀಸಲಾತಿ ಪಡೆಯಲು ಅರ್ಹರು ಎಂಬುದನ್ನು ಸಾರಿ ಹೇಳಿತು. ಈ ದಿಸೆಯಲ್ಲಿ ಅಂಬೇಡ್ಕರರು ಮತಾಂತರಗೊಂಡ 34 ವರ್ಷಗಳ ನಂತರ ದಲಿತ ಬೌದ್ಧರಿಗೆ ಮೀಸಲಾತಿ ಮರುದೊರಕಿತು.

ಹೀಗಿದ್ದರೂ ಅಂದರೆ ದಲಿತರು ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರೂ ಅವರ ಮೀಸಲಾತಿಗೆ ಯಾವ ಧಕ್ಕೆಯೂ ಇಲ್ಲ ಎಂದು ತಿಳಿದಿದ್ದರೂ ಗೊಂದಲ ಅಲ್ಲಲ್ಲಿ ಇನ್ನೂ ಹಾಗೆಯೇ ಇದೆ. ಹಾಗೆ ಈ ಕಾರಣದಿಂದ ದಲಿತರಲ್ಲಿ ಇಂದು ಮೂರು ಮಾದರಿಯ ಬೌದ್ಧರು ಸೃಷ್ಟಿಯಾಗಿದ್ದಾರೆ. ಅವರಲ್ಲಿ ಮೊದಲನೆಯ ಮಾದರಿಯವರು ಸಂಪೂರ್ಣ ಬೌದ್ಧ ಮತಾವಲಂಬಿಗಳಾಗಿ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿ ಅಂಬೇಡ್ಕರ್ ಮಾರ್ಗದಲ್ಲಿ ಕ್ರಾಂತಿಕಾರಿ ಚಿಂತನೆಯ ಮೂಲಕ ಅಪ್ಪಟ ಬೌದ್ಧರಾಗಿರುವವರು. ಎರಡನೆಯ ಮಾದರಿಯವರು ಬೌದ್ಧಮತಾವಲಂಬಿಗಳಾಗಿಯೂ ಹಿಂದೂ ದೇವರು, ದೇವತೆಗಳನ್ನು ನಿರಾಕರಿಸಿಯೂ ಸಾಂಪ್ರದಾಯಿಕವಾಗಿ ಬುಡಕಟ್ಟು ಆಚರಣೆಗಳನ್ನು ಅಂದರೆ ಮಾರಮ್ಮ, ಎಲ್ಲಮ್ಮನ ಪೂಜಿಸುವುದು, ಹರಕೆ ಹೊರುವುದು, ಬೆಟ್ಟಗಳಿಗೆ ಪರಿಷೆ ಹೋಗುವುದು, ಇತ್ಯಾದಿ ಮಾಡುವವರು. ಇನ್ನು ಮೂರನೆಯ ಮಾದರಿಯವರು ಅಧಿಕೃತವಾಗಿ ಬೌದ್ಧರಾಗಿಲ್ಲದಿದ್ದರೂ ಹಿಂದೂ ದೇವಾನುದೇವತೆಗಳನ್ನು ನಿರಾಕರಿಸಿ, ಬುಡಕಟ್ಟು ಆಚರಣೆಗಳನ್ನು ಮುಂದುವರೆಸಿ ಬುದ್ಧ ಮತ್ತು ಅಂಬೇಡ್ಕರರನ್ನು ಜೊತೆಜೊತೆಯಾಗಿ ಪೂಜಿಸುವವರು. ಒಟ್ಟಾರೆ ಈ ನಿಟ್ಟಿನಲ್ಲಿ ಹೇಳುವುದಾದರೆ ‘ಮೂರನೆಯ ಮಾದರಿಯ ಬೌದ್ಧರೇ ಇಲ್ಲಿ ಬಹುಸಂಖ್ಯಾತರು’ ಎನ್ನಬಹುದು!

ಒಂದಂತು ನಿಜ, ದಲಿತರಲ್ಲಿ ಇಂದು ಅಂಬೇಡ್ಕರ್ ಕಂಡುಕೊಂಡ ಬುದ್ಧ ಮತ್ತು ಆತನ ಧಮ್ಮ ಹಾಸುಹೊಕ್ಕಾಗಿದೆ. ಅದು ಅಧಿಕೃತ ಸಂಘಟಿತ ರೂಪದಲ್ಲಿ ಇನ್ನು ಪರಿಪೂರ್ಣವಾಗಿ ಹೊರಹೊಮ್ಮಿಲ್ಲದಿರಬಹುದು ಆದರೆ ಅಂಬೇಡ್ಕರ್ ಎಂದಾಕ್ಷಣ ಬುದ್ಧ, ಬುದ್ಧ ಎಂದಾಕ್ಷಣ ಅಂಬೇಡ್ಕರ್ ಹೀಗೆ ಭಾವ ಬಂಧವಂತು ಮಾತ್ರ ಬೆಸೆದಿರುವುದಂತೂ ಸತ್ಯ. ಈ ಕಾರಣಕ್ಕಾಗಿಯೇ ಎಷ್ಟೋ ಸಂದರ್ಭಗಳಲ್ಲಿ ಅನ್ಯ ಜಾತಿಗಳವರಲ್ಲಿ ಬುದ್ಧನ ಧರ್ಮ ಎಂದರೆ ಅದು ದಲಿತರ ಧರ್ಮ ಎಂದೇ ಭಾವಿಸುವ ಪರಿಪಾಟ ಈಗಂತೂ ಕಾಮನ್ ಆಗಿಬಿಟ್ಟಿದೆಯೆಂದರೆ ಯಾವ ಪರಿ ಬೌದ್ಧಧರ್ಮ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನೆಲೆಕಂಡುಕೊಂಡಿದೆ ಎಂಬುದನ್ನು ಎಂತಹವರಾದರೂ ಊಹಿಸಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಅಂಬೇಡ್ಕರ್ ಅಂದು ಬಯಸಿದ ಬಿಡುಗಡೆಯ ಮಾರ್ಗದತ್ತ ದಲಿತರು ಸದ್ದಿಲ್ಲದೆ ಚಲಿಸುತ್ತಾರೆ ಎನ್ನುವುದು ಸ್ಪಷ್ಟ. ಯಾರಿಗ್ಗೊತ್ತು ಮುಂದೊಂದು ದಿನ ಮೀಸಲಾತಿ ಕೊನೆಗೊಂಡರೆ ದಲಿತರೆಲ್ಲ ಸಾರಾಸಗಟಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡರೂ ಅಚ್ಚರಿ ಇಲ್ಲ! ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಬೇಡ್ಕರ್ ಅಂದು ಚಿಂತಿಸಿದ, ಪಾಲಿಸಿದ ಬುದ್ಧನ ಭಾರತ ಖಂಡಿತ ಇಂದು ಪ್ರಾಯೋಗಿಕವಾಗಿ ಯಶಸ್ಸಿನ ಹಾದಿಯಲ್ಲಿದೆ. ಈ ದಿಸೆಯಲ್ಲಿ ಹೇಳುವುದಾದರೆ ದಲಿತರ ಧಮನಿಗಳಲ್ಲಿ ಬುದ್ಧರಕ್ತ ಶರವೇಗದಿಂದ ಪ್ರವಹಿಸುತ್ತಿದೆ ಮತ್ತು ಅಂತಹ ಪ್ರವಾಹದ ಹಿಂದೆ ಅಂಬೇಡ್ಕರರ ಅವಿರತ ಹೋರಾಟದ ಅಧಮ್ಯ ಶಕ್ತಿ ಇದೆ ಎಂದರೆ ಅದು ಅತಿಶಯೋಕ್ತಿಯೆನಿಸದು.    
                               -ರಘೋತ್ತಮ ಹೊ.ಬ


Tuesday, 23 September 2014

ಕಂಬಾಲಪಲ್ಲಿ: ಕಥೆ... ವ್ಯಥೆ...

                                -ರಘೋತ್ತಮ ಹೊ.ಬ

                   
   ಕಂಬಾಲಪಲ್ಲಿ; 14 ವರ್ಷಗಳ ಹಿಂದೆ 7 ಜನ ದಲಿತರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು... ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿತು... ತದನಂತರ ಈಗ (2014) ಆಗಸ್ಟ್ 20 ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಹಾಗಿದ್ದರೆ ಕಂಬಾಲಪಲ್ಲಿಯಲ್ಲಿ ಅಂದು (ಮಾರ್ಚ್, 11, 2000) 7ಜನ ದಲಿತರು ಸುಟ್ಟು ಬೂದಿಯಾದದ್ದು ಹೇಗೆ? ಘಟನೆಯನ್ನು ಹೇಗೆ ಹೇಳಬಹುದೆಂದರೆ, ಆ 7 ಜನ ದಲಿತರು ತಮ್ಮ ಮನೆಗಳೊಳಕ್ಕೆ ತಾವೇ ಹೋಗಿ ‘ಅದು ಹೇಗೋ’ ಹೊರಗಿನಿಂದ ಚಿಲಕ ಹಾಕಿಕೊಂಡು, ‘ಅದು ಹೇಗೋ’ ತಮ್ಮ ಮನೆಗಳಿಗೆ ಹೊರಗಿನಿಂದ ಹುಲ್ಲು ಕಸ ತುಂಬಿಕೊಂಡು, ‘ಅದು ಹೇಗೋ’ ಹೊರಗಿನಿಂದ ತಮ್ಮ ಮನೆಗಳಿಗೆ ಸೀಮೆ ಎಣ್ಣೆ ಪೆಟ್ರೋಲ್ ಸುರಿದುಕೊಂಡು, ‘ಅದು ಹೇಗೋ’ ಮನೆಯ ಒಳಗೇ ಇದ್ದ ಅಷ್ಟೂ ದಲಿತರು ಹೊರಗಡೆ ಬೆಂಕಿ ಕಡ್ಡಿ ಕೀರಿ ಬೆಂಕಿ ಹಚ್ಚಿಕೊಂಡು, ಕಿರುಚಾಡಿ ಅಮ್ಮಾ, ಅಯ್ಯೋ, ಕಾಪಾಡಿ ಎಂದು ಅತ್ತೂ ಕರೆದು ಅಸಹಾಯಕರಾಗಿ ಕೂಗಾಡಿ ವಿಧಿಯಿಲ್ಲದೆ ಬೆಂಕಿಗೆ ದೇಹವನ್ನೊಡ್ಡಿ ಸುಟ್ಟು ಕರಕಲಾದರು! ಇಲ್ಲಿ ‘ಅದು ಹೇಗೋ’ ಎಂಬ ಪ್ರಶ್ನೆ ಬರುತ್ತದಲ್ಲ, ಅದಕ್ಕೆ ಉತ್ತರ?

  ಕ್ಷಮಿಸಿ, ಕಂಬಾಲಪಲ್ಲಿಯ ಘಟನೆ ವಿವರಿಸೋಣವೆಂದರೆ ಲೇಖನಿಯಿಂದ ನೀಲಿ ಇಂಕು ಬರುತ್ತಿಲ್ಲ. ರಕ್ತ ತಾನಾಗೇ ಕುದಿದು ಬರುತ್ತಿದೆ. ಹಾಗೇ ನ್ಯಾಯ ದೊರಕದೆ ತಣ್ಣಗಾಗುತ್ತದೆ. ಆದರೂ ತಣ್ಣಗಾಗುವ ಮೊದಲು ದುರಂತವನ್ನು ದಾಖಲಿಸುತ್ತೇನೆ.

 1997ರ ಆಗಸ್ಟ್ ತಿಂಗಳ ಒಂದು ದಿನ ಕೋಲಾರದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ, ಆ ಗ್ರಾಮದಲ್ಲಿ ವಾಸವಿದ್ದ ರೆಡ್ಡಿ ಒಕ್ಕಲಿಗರು ಮತ್ತು ದಲಿತರು ಇಬ್ಬರಿಗೂ ಸೇರಿದ ಕೆಲವು ಕುರಿಗಳು ಕಳುವಾದವು. ಅಂದಹಾಗೆ ಈ ಸಂಬಂಧ ಪಂಚಾಯತಿ ನಡೆದು ವೆಂಕಟರಮಣಪ್ಪ, ಅಂಜನಪ್ಪ ಮತ್ತು ರಾವಣಪ್ಪ ಎಂಬ ಮೂವರು ದಲಿತರು ಕುರಿ ಕದ್ದಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು. ಹಾಗೆ ಈ ಸಂಬಂಧ ಪೋಲೀಸರಿಗೆ ದೂರು ನೀಡಲು ಸಹ ಪಂಚಾಯತಿ ನಿರ್ಧರಿಸಿತು. ಇದರಿಂದ ಬೆದರಿದ ದಲಿತರು ತಮ್ಮ ಕುಟುಂಬಗಳ ಸಮೇತ ಊರು ಬಿಟ್ಟು ಹೋದರು. ಆದರೂ ಕುರಿ ಕಳÀವಿನ ಈ ಸಂಬಂಧ ಕೇಸು ದಾಖಲಾಗಿ ತನಿಖೆ ನಡೆದು ಕುರಿ ಕದ್ದವರು ಅದೇ ಗ್ರಾಮದ ರೆಡ್ಡಿ ಸಮುದಾಯದ ಕೆ.ಎಂ.ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ರೆಡ್ದಪ್ಪ, ನಾರಾಯಣಸ್ವಾಮಿ, ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಎಂದು ಗುರುತಿಸಲಾಯಿತು. ಅಂತೆಯೇ ಇವರು ಕುರಿ ಕದ್ದು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಿದ್ದನ್ನು ಪೊಲೀಸರು ವಾಪಸ್ ತರಿಸಿ ದಲಿತರಿಗೆ ನೀಡಿದರು. ಅಂದಹಾಗೆ ಪೊಲೀಸರಿಗೆ ಇದನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡಿದವರು ಅದೇ ಕುರಿ ಕಳುವಿನ ಆರೋಪ ಹೊತ್ತು ಊರು ಬಿಟ್ಟಿದ್ದ ವೆಂಕಟರಮಣಪ್ಪ ಮತ್ತು ಆತನ ಇಬ್ಬರು ಸಹೋದರರು. ಒಂದರ್ಥದಲ್ಲಿ ಈ ಪ್ರಕರಣ ಕಂಬಾಲಪಲ್ಲಿ ಗ್ರಾಮದ ರೆಡ್ಡಿ ಜನಾಂಗದವರಿಗೆ ತೀವ್ರ ಮುಜುಗರ ಉಂಟುಮಾಡಿತ್ತು ಮತ್ತು ಈ ನಿಟ್ಟಿನಲ್ಲಿ ಹಾಗೆ ಕುರಿಕದ್ದು ಸಿಕ್ಕಿಬಿದ್ದ ಕೆ.ಎಂ.ಮದ್ದಿರೆಡ್ಡಿ ಮತ್ತು ಇತರರು ಪೊಲೀಸರಿಗೆ ಸಹಾಯ ಮಾಡಿದ ದಲಿತ ವೆಂಕಟರಮಣಪ್ಪನಿಗೊಂದು ಗತಿಕಾಣಿಸಲು ಹೊಂಚು ಹಾಕಿದರು ಮತ್ತು ಅಂತಹದ್ದೊಂದು ದಿನ ಬಂದಿಯೂ ಬಿಟ್ಟಿತು ಕೂಡ. ಯಾಕೆಂದರೆ ಗರ್ಭಿಣಿಯಾಗಿದ್ದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ 05-06-1998ರ ಬೆಳಿಗ್ಗೆ 10.30 ಕ್ಕೆ ದಲಿತ ವೆಂಕಟರಮಣಪ್ಪ ಊರಿಗೆ ಬಂದು ಇಳಿಯುತ್ತಲೇ ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 39 ಜನರು ವೆಂಕಟರಮಣಪ್ಪನ ಮನೆಯತ್ತ ಧಾವಿಸಿ ಅವನನ್ನು ಅಟ್ಟಾಡಿಸಿಕೊಂಡು ಹೋಗಿ ಅವನ ಹೆಂಡತಿ ಮತ್ತು ಕುಟುಂಬಸ್ಥರ ಎದುರೇ ಆತನನ್ನು ಕಲ್ಲು ಹೊಡೆದು ಸಾಯಿಸಿದರು. ಅಂತೆಯೇ ಹಾಗೆ ಸಾಯಿಸಲ್ಪಟ್ಟ ವೆಂಕಟರಮಣಪ್ಪನನ್ನು ಸುಮಾರು 50 ಸೈಜುಗಲ್ಲಿನಡಿ ಸಮಾಧಿ ಮಾಡಲಾಯಿತೆಂದರೆ ಘಟನೆಯ ಭೀಭತ್ಸತೆಯನ್ನು ಎಂಥವರಾದರೂ ಊಹಿಸಬಹುದು. ದುರಂತವೆಂದರೆ ಈ ಸಂಬಂಧ 41 ಜನರ ಬಂಧನವಾಗಿ ಎಲ್ಲರೂ ಜಾಮೀನಿನ ಮೂಲಕ ಹೊರಬಂದರು!
 
  ಅಂದಹಾಗೆ ಇದು ಇಲ್ಲಿಗೆ ನಿಂತಿದ್ದರೆ ಸರಿ ಹೋಗುತ್ತಿತ್ತು. ಆದರೆ ಘಟನೆ ನಡೆದ ಒಂದೂವರೆ ವರ್ಷದ ನಂತರ (ಡಿಸೆಂಬರ್, 99) ಚಿಕ್ಕಬಳ್ಳಾಪುರದ ಎ.ಸಿ.ಕಛೇರಿಯಲ್ಲಿ ದಲಿತರ ಕುಂದು-ಕೊರತೆಗಳ ಸಭೆಯೊಂದು ನಡೆದು ಆ ಸಭೆಯಲ್ಲಿ ಕಂಬಾಲಪಲ್ಲಿಯಲ್ಲಿ ಸವರ್ಣೀಯರಿಂದ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನ ಕಿರಿಯ ಸಹೋದರ ಶ್ರೀರಾಮಪ್ಪ ತನ್ನ ಸಹೋದರನ ಹತ್ಯೆಯ ನಂತರ ತಾನು ಊರು ಬಿಡುವಂತಾಗಿದ್ದು ತÀನಗೆ ಗ್ರಾಮಕ್ಕೆ ವಾಪಸ್ಸು ಹೋಗಲು ಎಲ್ಲಾ ರೀತಿಯ ಸಹಾಯಬೇಕೆಂದು ಸಭೆಗೆ ತಿಳಿಸಿದ. ಅಂತೆಯೇ ಈ ಸಂಬಂಧ ಸಭೆಯೊಂದು ನಡೆದು 08-01-2000 ರಂದು ಶ್ರೀರಾಮಪ್ಪ ಮತ್ತವನ ಸಹೋದರ ಅಂಜನಪ್ಪ, ತಂದೆ ವೆಂಕಟರಾಯಪ್ಪ ಮತ್ತು ತಾಯಿ ರಾಮಕ್ಕನವರನ್ನು ವಾಪಸ್ಸು ಊರಿಗೆ (ಕಂಬಾಲಪಲ್ಲಿಗೆ) ಕರೆತರಲಾಯಿತು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆಯೊಂದನ್ನು ಸಹ ನಡೆಸಲು ಕೂಡ ತಾಲ್ಲೂಕು ಆಡಳಿತ ತೀರ್ಮಾನಿಸಿತು. ಆದರೆ ಸಭೆಯನ್ನು ಗ್ರಾಮದಲ್ಲಿ ಎಲ್ಲಿ ನಡೆಸಬೇಕು ಅಂದರೆ ರೆಡ್ಡಿ ಒಕ್ಕಲಿಗರ ಬೀದಿಯಲ್ಲಿದ್ದ ದೇವಸ್ಥಾನದಲ್ಲೋ ಅಥವಾ ದಲಿತರ ಕೇರಿಯಲ್ಲಿದ್ದ ಅರಳೀಕಟ್ಟೆಯಲ್ಲೋ ಎಂಬ ಪ್ರಶ್ನೆ ಉದ್ಭವಿಸಿ ಸಭೆ ನಡೆಯಲಿಲ್ಲ. ಒಟ್ಟಾರೆ ಕಂಬಾಲಪಲ್ಲಿ ಉಧ್ವಿಗ್ನವಾಗೇ ಇತ್ತು.

  ಇಂತಹ ಉಧ್ವಿಗ್ನ ಸ್ಥಿತಿಯಲ್ಲಿ 10-03-2000 ಸಂಜೆ 6.00 ಗಂಟೆಗೆ ದಲಿತರಾದ ಶಂಕರಪ್ಪ ಮತ್ತು ಅವನ ಸ್ನೇಹಿತ ನರಸಿಂಹಪ್ಪ, ಅಸ್ವಸ್ಥರಾಗಿದ್ದ ತಮ್ಮ ತಂದೆಯವರಿಗಾಗಿ ಎಳನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಹಾಗೆ ಬರುತ್ತಿರುವಾಗ ಎದುರುಗಡೆ ಟಿವಿಎಸ್ ಮೊಪೆಡ್‍ನಲ್ಲಿ ಬರುತ್ತಿದ್ದ ಕೆ.ಎಂ.ವೆಂಕಟರೆಡ್ಡಿ ಬಿನ್ ಮದ್ದೀರೆಡ್ಡಿ, ರವಿ ಬಿನ್ ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಎಂಬಿಬ್ಬರು ರೆಡ್ಡಿ ಒಕ್ಕಲಿಗ ಹುಡುಗರು ಶಂಕರಪ್ಪ ಮತ್ತು ನರಸಿಂಹಪ್ಪನವರಿಗೆ ನೇರ ಗುದ್ದಿಸುವ ರೀತಿಯಲ್ಲಿ ಬಂದರು. ಈ ಸಮಯದಲ್ಲಿ ದಲಿತರು ಮತ್ತು ಆ ರೆಡ್ಡಿ ಒಕ್ಕಲಿಗ ಹುಡುಗರ ನಡುವೆ ತಗಾದೆ ಉಂಟಾಗಿ ಕ್ಷುಲ್ಲಕ ಜಗಳವೂ ಕೂಡ ಆಯಿತು ಮತ್ತು ಅದು ಅಲ್ಲಿಗೆ ಮುಗಿದುಹೋಗಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ಶಂಕರಪ್ಪ ಮತ್ತು ನರಸಿಂಹಪ್ಪ ಊರಿಗೆ ಬರುತ್ತಲೇ ಅವರನ್ನು ಸುತ್ತುವರೆದ ಕೆ.ಎಂ.ಮದ್ದಿರೆಡ್ಡಿ, ರವಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 11 ಜನರ ಗುಂಪು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿತು. ಅದಲ್ಲದೆ ಆ ವಿಚ್ಛಿದ್ರಕಾರಿ ಸವರ್ಣಿಯರ ಗುಂಪು ಪರಿಶಿಷ್ಟರ ಕಾಲೋನಿಯ ಮೇಲೆ ತೀವ್ರತರವಾಗಿ ಧಾಳಿ ನಡೆಸಿ ದಲಿತ ಕುಟುಂಬಸ್ಥರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತು. ಈ ಸಮಯದಲ್ಲಿ ತಕ್ಷಣ ದಲಿತರಾದ ಶಂಕರಪ್ಪ ಮತ್ತು ನರಸಿಂಹಪ್ಪ ಸಮೀಪದ ಯನಮಲಪಾಡಿ ಗ್ರಾಮಕ್ಕೆ ತೆರಳಿ ಫೋನ್ ಮೂಲಕ ಸಮೀಪದ ಕೆಂಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರಾದರೂ ಆ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ಭೇಟಿಕೊಟ್ಟದ್ದು ನೇರ ರೆಡ್ಡಿ ಒಕ್ಕಲಿಗರ ಮನೆಗಳಿಗೆ. ಮನೆ ಕಳೆದುಕೊಂಡಿದ್ದ, ಹಲ್ಲೆಗೊಳಗಾಗಿದ್ದ ದಲಿತರ ಕೇರಿಯತ್ತ ಆತ ಕಣ್ಣೆತ್ತಿಯೂ ನೋಡಲಿಲ್ಲ!

  ಇದಿಷ್ಟು ಕಂಬಾಲಪಲ್ಲಿಯ ಏಳು ದಲಿತ ಜೀವಗಳು ಬೆಂಕಿಗೆ ಆಹುತಿಯಾಗುವ ಮುನ್ನ ದುರಂತದ ಹಿಂದಿನ ಕಥೆ. ಬಹುಶಃ ಈ ಕಥೆಯೇ ಹೇಳುತ್ತದೆ ಕಂಬಾಲಪಲ್ಲಿ ಉಧ್ವಿಗ್ನವಾಗಿತ್ತು ಇಂತಹ ದಹನಕ್ಕೆ ಪೂರ್ವ ತಯಾರಿಯಾಗಿತ್ತು ಎಂಬುದನ್ನು. ದುರಂತವೆಂದರೆ ಅಂದಿನ ಪೊಲೀಸ್ ವ್ಯವಸ್ಥೆ ಕಂಬಾಲಪಲ್ಲಿಯ ದಲಿತರ ಇಂತಹ ದುಃಖಕ್ಕೆ, ಆಪತ್ತಿನ ಪರಿಸ್ಥಿತಿಗೆ ಸಕಾಲಕ್ಕೆ ಸ್ಪಂಧಿಸಲೇ ಇಲ್ಲ. ಕಡೆ ಪಕ್ಷ ದಲಿತರ ಮೇಲೆ ಹಲ್ಲೆ ನಡೆದ ಆ ದಿನ (10-03-2000) ಸಂಜೆ ಮತ್ತು ಆ ರಾತ್ರಿ ಪೂರ ಪೊಲೀಸ್ ವ್ಯಾನ್ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೀಡುಬಿಟ್ಟಿದ್ದರೆ ಸಾಮೂಹಿಕ ದಲಿತ ದಹನವನ್ನು ಖಂಡಿತ ತಡೆಯಬಹುದಿತ್ತು.
 
  ಸ್ವಾಭಾವಿಕವಾಗಿ ಮಾರನೇ ದಿನ ಅಂದರೆ 11-03-2000 ರ ಬೆಳಿಗ್ಗೆ ನೊಂದ ಕಂಬಾಲಪಲ್ಲಿ ದಲಿತರು ಹಿಂದಿನ ದಿನ ತಮ್ಮ ಮೇಲೆ ಆದ ದಾಳಿಯ ಬಗ್ಗೆ ಚಿಂತಾಮಣಿಯ ಡಿ.ಎಸ್.ಎಸ್. ನಾಯಕ ಎನ್.ಶಿವಣ್ಣನವರಿಗೆ ಮಾಹಿತಿ ನೀಡಿದರು. ತಕ್ಷಣ ಎನ್.ಶಿವಣ್ಣನವರು ಕೋಲಾರ ಜಿಲ್ಲಾ ಎಸ್.ಪಿ.ಯವರನ್ನು ಸಂಪರ್ಕಿಸಿದರಾದರೂ ಅವರು ರಜೆಯಲ್ಲಿದ್ದ ಕಾರಣ ಎ.ಎಸ್.ಪಿ.ಯವರು ಎನ್.ಶಿವಣ್ಣನವರಿಗೆ ತಾವು ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾಗುವಂತೆ ತಿಳಿಸಿದರು. ಈ ನಡುವೆ ಕಂಬಾಲಪಲ್ಲಿಯ ದಲಿತ ಆ ಸಂತ್ರಸ್ತರು ಸರ್ಕಲ್ ಇನ್ಸ್‍ಪೆಕ್ಟರ್‍ರವರು ಬರುವವರೆಗೂ ಕಾಯದೆ ತಮ್ಮ ಊರಿನ ವ್ಯಾಪ್ತಿಯ ಕೆಂಚನಹಳ್ಳಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದರಾದರೂ ಮತ್ತದೇ ಅಲ್ಲಿನ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ದೂರು ಸ್ವೀಕರಿಸಲು ನಿರಾಕರಿಸಿದ! ಹಾಗೆಯೇ ತೀವ್ರವಾಗಿ ಗಾಯಗೊಂಡಿದ್ದ ಆ ದಲಿತ ಸಂತ್ರಸ್ತರನ್ನು ಆತ ಗೆಟೌಟ್ ಎಂದು ಹೋಗುವಂತೆ ಆದೇಶಿಸಿದ. ವಿಧಿಯಿಲ್ಲದೆ ಆ ಸಂತ್ರಸ್ತರು ಚಿಂತಾಮಣಿಯ ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾದರು. ಅಂತೆಯೇ ದೂರವಾಣಿ ಮೂಲಕ ತಮ್ಮ ಕಛೇರಿಗೆ ಆ ಸಬ್‍ಇನ್ಸ್‍ಪೆಕ್ಟರ್‍ರನ್ನು ಕರೆಸಿಕೊಂಡ ಸರ್ಕಲ್ ಇನ್ಸ್‍ಪೆಕ್ಟರ್ ಕಂಬಾಲಪಲ್ಲಿಯ ದಲಿತ ಸಂತ್ರಸ್ತರು ನೀಡಿದ್ದ ದೂರನ್ನು ಸಬ್‍ಇನ್ಸ್‍ಪೆಕ್ಟರ್‍ಗೆ ನೀಡಿ ದೂರನ್ನು ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. ಅಂದಹಾಗೆ 11-03-2000 ರ ಆ ದಿನ ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆಯಾಗಿತ್ತು. ಹಾಗೆಯೇ ಸಂಜೆ ಬಿ.ಕೆ.ಆರ್ ಎಂಬ ಖಾಸಗಿ ಬಸ್ ಹಿಡಿದು ಸಂತ್ರಸ್ತ ಆ ದಲಿತರು ಗ್ರಾಮದತ್ತ ನಡೆದರು....
     
  ನಡೆದ ದಹನ: ಈ ನಡುವೆ ಕಂಬಾಲಪಲ್ಲಿಯಲ್ಲಿ ರೆಡ್ಡಿಗಳಲ್ಲೂ ಎರಡು ಗುಂಪಾಗಿತ್ತು. ಒಂದು ಗುಂಪು ಆಂಜನೇಯರೆಡ್ಡಿ ಎಂಬುವವನದ್ದಾಗಿದ್ದರೆ, ಮತ್ತೊಂದು ಗುಂಪು ಬುಚನಾಗಾರಿ ಭೈರೆಡ್ಡಿ ಎಂಬುವವನದಾಗಿತ್ತು. ಆಂಜನೆಯರೆಡ್ಡಿ ದಲಿತರ ಪರವಿದ್ದು ಆತ ಅಂದಿನ ಚಿಂತಾಮಣಿ ಶಾಸಕ ಚೌಡರೆಡ್ಡಿಯವರ ಬೆಂಬಲಿಗನಾಗಿದ್ದ. ಹಾಗೆಯೇ ಬುಚನಾಗಾರಿ ಭೈರೆಡ್ಡಿ ಚಿಂತಾಮಣಿಯ ಮಾಜಿ ಶಾಸಕ, ದಲಿತರ ಬಗ್ಗೆ ಉಗ್ರ ವಿರೊಧಹೊಂದಿದ್ದ ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ.ಕೃಷ್ಣರೆಡ್ಡಿಯವರ ಬೆಂಬಲಿಗನಾಗಿದ್ದ. ಒಟ್ಟಾರೆ ಆಂಜನೇಯರೆಡ್ಡಿ ಮತ್ತು ಬುಚನಾಗಾರಿ ಭೈರೆಡ್ಡಿಯವರ ನಡುವೆ ವೈರತ್ವ ಕೂಡ ಹಾಗೆಯೇ ಇತ್ತು. ಇನ್ನು ಸದರಿ ಆಂಜನೇಯರೆಡ್ಡಿಗೆ ತಮ್ಮ ಮೇಲೆ ದಾಳಿ ನಡೆದ ಬಗ್ಗೆ ದಲಿತರು ಮಾಹಿತಿ ಕೂಡ ನೀಡಿದ್ದರು. ಹಾಗೆಯೇ ತನ್ನ ಬೆಂಬಲಿಗರಾದ ದಲಿತರ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಆಂಜನೇಯ ರೆಡ್ಡಿ, ಭೈರೆಡ್ಡಿ ಮತ್ತು ಆತನ ಬೆಂಬಲಿಗರನ್ನು ಅದಾಗಲೇ ಪ್ರಶ್ನಿಸಿದ್ದ ಕೂಡ. ಅಂದಹಾಗೆ ಈ ಸಮಯದಲ್ಲಿ ಅಂದರೆ ಆ ದಿನ ಆ ಸಂಜೆ ಬಿ.ಕೆ.ಆರ್ ಬಸ್ ಇಳಿದವರಲ್ಲಿ ದಲಿತರಾದ ಶ್ರೀರಾಮಪ್ಪ (ಮೊದಲೇ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನವರ ಸಹೋದರ), ಅಂಜನಪ್ಪ, ಶಂಕರಪ್ಪ, ಬಿ.ಕೆ.ಅಂಜನಪ್ಪ, ರಾವಣ ಮತ್ತು ಆಂಜನೇಯರೆಡ್ಡಿ ಇವರೆಲ್ಲರೂ ಇದ್ದರು. ಇವರೆಲ್ಲರೂ ಬಸ್ ಇಳಿಯುತ್ತಿದ್ದಂತೆ ಇವರಿಗಾಗಿ ಕಂಬಾಲಪಲ್ಲಿಯ ಆ ಗ್ರಾಮದಲ್ಲಿ ಅದಾಗಲೇ ಗುಂಪು ಸೇರಿದ್ದ ಭೈರೆಡ್ಡಿ ಮತ್ತವರ ಬೆಂಬಲಿಗರು ದಾಳಿ ನಡೆಸಿದರು. ದಲಿತರು ಹೆದರಿ ಓಡಿ ಹೋಗಿ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡು ಚಿಲಕ ಹಾಕಿಕೊಂಡರು. ಆದರೆ ಆಂಜನೇಯ ರೆಡ್ಡಿ ಹಾಗೆ ಮಾಡಲಿಲ್ಲ. ಬದಲಿಗೆ ಆತ ತನ್ನ ಪರ ಬೆಂಬಲಿಗ ಒಕ್ಕಲಿಗರ ಗುಂಪು ಕಟ್ಟಿಕೊಂಡು ಭೈರೆಡ್ಡಿಯ ವಿರುದ್ಧ ಗಲಾಟೆಗೆ ನಿಂತ ಮತ್ತು ಈ ಗಲಾಟೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಭೈರೆಡ್ಡಿಯ ಬೆಂಬಲಿಗ ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಜಗಳದಲ್ಲಿ ಕೊಲೆಯಾಗಿ ಹೋದ! ಈ ಕೊಲೆಯಾದದ್ದೇ ತಡ ಆಂಜನೇಯರೆಡ್ಡಿ ಮತ್ತು ಆತನ ಬೆಂಬಲಿಗರು ತಪ್ಪಿಸಿಕೊಂಡು ಓಡಿಹೋದರು. ಆದರೆ? ಅದಾಗಲೇ ದಲಿತರು ಹೆದರಿಕೆಯಿಂದ ಮನೆ ಸೇರಿಕೊಂಡು ಚಿಲಕ ಹಾಕಿಕೊಂಡಿದ್ದರಲ್ಲ? ಅಂತೆಯೇ ತಮ್ಮವನ ಸಾವಿಗೆ ಮೂಲ ಕಾರಣ ದಲಿತರೇ ಎಂದ ರೆಡ್ಡಿ ಒಕ್ಕಲಿಗರ ಆ ಉದ್ರಿಕ್ತ ಗುಂಪು ಮದ್ದಿರೆಡ್ಡಿ ಎಂಬುವವನ ನೇತೃತ್ವದಲ್ಲಿ ದಲಿತರ ಕೇರಿಯತ್ತ ನುಗ್ಗಿತು.

  ಅಂದಹಾಗೆ ಇದೇ ಮದ್ದಿರೆಡ್ಡಿ ಕುರಿ ಕಳುವಿನ ಪ್ರಕರಣದ ಪ್ರಮುಖ ಆರೋಪಿ. ಇದೇ ಮದ್ದಿರೆಡ್ಡಿ ದಲಿತ ವೆಂಕಟರಮಣಪ್ಪನ ಹತ್ಯೆ ಆರೋಪಿ. ಇದೇ ಮದ್ದಿರೆಡ್ಡಿಯ ಮಗ ವೆಂಕಟರೆಡ್ಡಿ ಹಿಂದಿನ ದಿನ ದಲಿತ ಶಂಕರಪ್ಪನ ಮೇಲೆ ಹಲ್ಲೆ ನಡೆಸಿದ ಆರೋಪಿ. ಇಂತಹ ಆರೋಪಿಗಳ ಗುಂಪು ದಲಿತ ಶಿಕ್ಷಕ ಅಂಜನಪ್ಪ ಮತ್ತು ದಿವಂಗತ ವೆಂಕಟರಮಣಪ್ಪನ ಸಹೋದರ ಶ್ರೀರಾಮಪ್ಪನ ಮನೆಯತ್ತ ಧಾವಿಸಿತು. ಯಾವ ಪರಿಯೆಂದರೆ ಮೂರು ಪ್ರಮುಖ ದಲಿತರ ಆ ಮನೆಗಳಿಗೆ ಹೊರಗಿನಿಂದ ಬೀಗ ಜಡಿಯಲಾಯಿತು ಮತ್ತು ಆ ಮೂವರು ದಲಿತರ ಮನೆಗಳಿಗೆ ಹುಲ್ಲನ್ನು ಹೊದೆಸಲಾಯಿತು. ಹಾಗೆಯೇ ಸವರ್ಣೀಯರ ಆ ಗುಂಪು ಸೀಮೆಎಣ್ಣೆ ಮತ್ತು ಪೆಟ್ರೋಲ್‍ನ್ನು ಆ ಮೂವರು ದಲಿತರ ಮನೆಗಳಿಗೆ ಸುರಿಯಿತು. ಒಂದು ಸಣ್ಣ ಬೆಂಕಿಕಡ್ಡಿಯನ್ನು ಗೀರಿ ಅತ್ತ ಎಸೆಯಿತು, ಗಹಗಹಿಸಿ ನಕ್ಕಿತ್ತು! ಆ ವಿಕೃತ ನಗುವಿಗೆ ಕ್ಷಣಮಾತ್ರದಲ್ಲಿ ಆ ಮೂರು ದಲಿತರ ಮನೆಗಳು ಭಸ್ಮ! ಹಾಗೆಯೇ ಆ ಮೂರು ಮನೆಗಳಿಂದ ಹೊರ ತಂದ ಏಳು ದಲಿತರ ಹೆಣಗಳು 1)ಶ್ರೀರಾಮಪ್ಪ(25), 2)ಅಂಜನಪ್ಪ(27), 3)ರಾಮಕ್ಕ(70), 4)ಸುಬ್ಬಕ್ಕ(45) 5)ಪಾಪಮ್ಮ(46), 6)ನರಸಿಂಹಯ್ಯ(25), 7)ಚಿಕ್ಕಪಾಪಣ್ಣ(40).
   
   ನ್ಯಾಯ-ಅನ್ಯಾಯದ ಕಥೆ:-ನಿಜ ಸತ್ತವರನ್ನು ವಾಪಸ್ಸು ತರಲು ಸಾಧ್ಯವಿಲ್ಲ. ಅವರ ಬದುಕನ್ನು ಮತ್ತೆಕಟ್ಟಲು ಸಾಧ್ಯವಿಲ್ಲ. ಆದರೆ ಬದುಕಿರುವ ಅವರ ಸಂಬಂಧಿಕರು ಕುಟುಂಬಸ್ಥರ ಅವರ ನೊಂದ ಶೋಷಿತ ಬಂಧುಗಳು? ಅವರನ್ನು ಬದುಕಿಸುವುದು ಬೇಡವೇ? ಖಂಡಿತ, ಅಂತಹ ಬದುಕು ದೊರೆಯುವುದು ಪಾಪಿಗಳಿಗೆ ಶಿಕ್ಷೆಯಾದಾಗ. ಹೊರಗಿನಿಂದ ಹುಲ್ಲು ತುರುಕಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದವರ ಕುತ್ತಿಗೆಗೆ ನೇಣು ಹಗ್ಗ ಬಿದ್ದಾಗ. ದುರಂತವೆಂದರೆ ಇದುವರೆಗೆ ಘಟನೆಯ ಹಳೆಯ ಕಥೆಯಾದರೆ ಇನ್ನು ಮುಂದೆ ಅದು ಬೇರೆಯದೇ ಕಥೆ! ನ್ಯಾಯ-ಅನ್ಯಾಯದ ವ್ಯಥೆ....

  ದಲಿತರ ಆ ಏಳು ಜನರ ದಹನವಾದಾಗ ಅಂದು ರಾಜ್ಯದಲ್ಲಿದ್ದುದು ಎಸ್.ಎಂ.ಕೃಷ್ಣರ ಸರ್ಕಾರ. ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣರು ಅಂದು ಅಧಿಕಾರದಲ್ಲಿದ್ದಕ್ಕೆ ಕಂಬಾಲಪಲ್ಲಿಯ ಒಕ್ಕಲಿಗ ರೆಡ್ಡಿ ಸಮುದಾಯದವರು ಅಷ್ಟೊಂದು ತೀವ್ರತೆಯ ಮಟ್ಟಕ್ಕೆ ತಲುಪಿದ್ದು ಎಂಬ ಆರೋಪವಿದೆ. ಆದರೆ ಇತಿಹಾಸ ಬಲ್ಲವರಿಗೆ ಅದರ ಅರಿವಿರುವವರಿಗೆ ಅದು ಬರಿಯ ಆರೋಪವಲ್ಲ, ಸತ್ಯವೆಂಬುದು ತಿಳಿದಿದೆ. ಯಾಕೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‍ರವರು ಹೇಳುವುದೇ “ಅಸ್ಪøಶ್ಯತೆ ಹಾಗೆಂದರೆ ಅದು ಅಧಿಕಾರಹೀನತೆ” ಎಂದು. ಅಂದರೆ ದಲಿತರಿಗೆ ಅಧಿಕಾರ ಇಲ್ಲದ್ದರಿಂದ ಅವರು ಅಸ್ಪøಶ್ಯರಾದರು ಎಂದು. ಹಾಗೆಯೇ ಅದೇ ರಾಜಕೀಯ ಅಧಿಕಾರ ಅಂದು ತನ್ನ ಕೈಯಲ್ಲಿ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಆ ಪರಿ ವ್ಯಗ್ರÀಗೊಂಡಿದ್ದು. ಈ ನಿಟ್ಟಿನಲ್ಲಿ ದಲಿತರ ದಹನವಾದಾಗ ಸಹಜವಾಗಿ ಘಟಾನುಘಟಿಗಳು ಅಲ್ಲಿ ಭೇಟಿ ನೀಡಿದ್ದರು .ಪರಿಹಾರವನ್ನೂ ಘೋಷಿಸಲಾಯಿತು. ಹಾಗೆ ಸರ್ಕಾರ ತಕ್ಷಣ ನ್ಯಾಯಾಂಗ ತನಿಖೆ ಕೂಡ ಘೋಷಿಸಿತು. ಆದರೆ ಘಟನೆಗೆ ಪರೋಕ್ಷ ಕಾರಣರಾದ ಕೆಂಚನಹಳ್ಳಿಯ ಎಸ್.ಐ. ವೆಂಕಟರಮಣಪ್ಪನ ಮೇಲೆ ಯಾವುದೇ ತನಿಖೆಯಾಗಲಿಲ್ಲ. ಒಕ್ಕಲಿಗ ರಾಜಕಾರಣಿಗಳ ಕೃಪೆ ಪಡೆದಿದ್ದರಿಂದ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧವೇ ನಡೆಯಲಿಲ್ಲ. ದುರಂತವೆಂದರೆ ಡಿ.ಎಸ್.ಎಸ್.ನ ಅಂದಿನ ಪದಾಧಿಕಾರಿಗಳು, ಘಟನಾ ಸ್ಥಳಕ್ಕೆ ಅಂದು ಭೇಟಿ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಶ್ರೀಮತಿ ಸೋನಿಯಾಗಾಂಧಿಯವರಿಗೆ ಮನವಿ ಸಲ್ಲಿಸಿ ಘಟನೆಯ ನೈತಿಕ ಹೊಣೆಯ ಆಧಾರದ ಮೇಲೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಕಿತ್ತೊಗೆಯಬೇಕೆಂದು ಕೋರಿಕೊಂಡರಾದರೂ ಸೋನಿಯಾ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರೆಡ್ಡಿ ಒಕ್ಕಲಿಗ ಸಮುದಾಯದವರು 22-03-2000ರಂದು ಚಿಂತಾಮಣಿ ಬಂದ್ ನಡೆಸಿ ಅಂಬೇಡ್ಕರ್ ವಿರುದ್ಧ ಮತ್ತು ಅಂದಿನ ಡಿ.ಎಸ್.ಎಸ್.ನವರ ವಿರುದ್ಧ ಘೋಷಣೆ ಮೊಳಗಿಸಿದರು!
ಇಂತಹದ್ದೆಲ್ಲಾ ದುರಂತಗಳ ಮದ್ಯೆ ಘಟನೆಯ ಬಗ್ಗೆ ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಲಾಯಿತು. ಆಶ್ಚರ್ಯಕರವೆಂದರೆ ಸಿ.ಬಿ.ಐ. ತನಿಖೆ ಪ್ರಾರಂಭವಾದ ತಕ್ಷಣ ನ್ಯಾಯಾಂಗ ತನಿಖೆ ಹಿಂತೆಗೆದುಕೊಳ್ಳಲಾಯಿತು. ಯಾಕೆ ಎಂದು ಯಾರು ಕೇಳಲೇ ಇಲ್ಲ! ನಿಜ ಹೇಳಬೇಕೆಂದರೆ ರಾಜೀವ್‍ಗಾಂಧಿ ಹತ್ಯೆ ಪ್ರಕರಣ, ಕರ್ನಾಟಕದಲ್ಲಿ ಬಿ.ಜೆ.ಪಿ ಎಂ.ಎಲ್.ಎ ಚಿತ್ತರಂಜನ್ ಹತ್ಯೆ ಪ್ರಕರಣ ಹೀಗೆ ಇನ್ನಿತರ ಪ್ರಕರಣಗಳಲ್ಲಿ ನ್ಯಾಯಾಂಗ ಮತ್ತು ಸಿ.ಬಿ.ಐ ಎರಡೂ ರೀತಿಯ ತನಿಖೆ ನಡೆದು ತಪ್ಪಿಸ್ಥರು ಶಿಕ್ಷೆಗೀಡಾದರು. ಆದರೆ ಕಂಬಾಲಪಲ್ಲಿಯಲ್ಲಿ ಮಾತ್ರ ನ್ಯಾಯಾಂಗ ತನಿಖೆ ಹಿಂಪಡೆಯಲಾಯಿತು! ಪರಿಣಾಮ 2006 ಡಿಸೆಂಬರ್ 4ರಂದು ತೀರ್ಪು ನೀಡಿದ ಕೋಲಾರ ಜಿಲ್ಲಾ ನ್ಯಾಯಾಲಯ ಪ್ರತಿಕೂಲ ಸಾಕ್ಷಿಯ ನೆಪವೊಡ್ಡಿ ಕಂಬಾಲಪಲ್ಲಿಯ ಎಲ್ಲಾ 32 ಆರೋಪಿಗಳನ್ನು ಕುಲಾಸೆಗೊಳಿಸಿತು. ಪ್ರತಿಕೂಲ ಸಾಕ್ಷಿ ಎಂದರೆ ಪೊಲೀಸರ ಎದುರು ‘ಇಂತಹವರೆ ಬೆಂಕಿ ಹಚ್ಚಿದವರು’ ಎಂದು ಹೇಳಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಎದುರು ಉಲ್ಟಾ ಹೊಡೆದರು! ಸಕಾಳ ಗಂಗಾಳಪ್ಪ ಎಂಬ ಸಾಕ್ಷಿಯ ಹೇಳಿಕೆಯನ್ನೇ ದಾಖಲಿಸುವುದಾದರೆ “ಜೀವ ಬೆದರಿಕೆಯಿಂದಾಗಿ ನಾವು ಸತ್ಯ ಹೇಳಲಿಲ್ಲ”! ಹಾಗೆಯೇ ಘಟನೆಯಲ್ಲಿ ತನ್ನ ಹೆಂಡತಿ ರಾಮಕ್ಕ, ಮಕ್ಕಳಾದ ಶ್ರೀರಾಮಪ್ಪ, ಆಂಜನೇಯ, ಮಗಳಾದ ಪಾಪಮ್ಮನವರನ್ನು ಕಳೆದುಕೊಂಡ ಎಂ.ವೆಂಕಟರಾಯಪ್ಪ ಹೇಳುವುದು “ನಾನೊಬ್ಬನೇ ತಾನೇ ಏನು ಮಾಡಲು ಸಾಧ್ಯ? ಎಲ್ಲಾ ಸಾಕ್ಷಿಗಳಿಗೂ ಅವರು ಹಣ ಕೊಟ್ಟಿದ್ದಾರೆ”. ಪರಿಣಾಮ ವೆಂಕಟರಾಯಪ್ಪ ನ್ಯಾಯಾಲಯದ ಎದುರು ಉಲ್ಟಾ ಸಾಕ್ಷಿ ಹೇಳಿದ್ದಾನೆ ಅಂತೆಯೇ ಆ 32 ಹಂತಕರ ಖುಲಾಸೆಯಾಗಿದೆ! ಹಾಗೆಯೇ ಖುಲಾಸೆಯಾದ ಆ ದಿನ (ಡಿಸೆಂಬರ್ 4, 2006) ಕಂಬಾಲಪಲ್ಲಿಯ ರೆಡ್ಡಿ ಜನರ ಮನೆಯಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಬಿಡುಗಡೆಗೊಂಡ ಆ ಆರೋಪಿಗಳಿಗೆ ಅಭಿನಂದನೆಯ ಸುರಿಮಳೆ!

  ದುರಂತವೆಂದರೆ ಈ ಸಂಬಂಧ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದಾಗ ಅದರ ತೀರ್ಪು ಕೂಡ ಮೊನ್ನೆ ಆಗಸ್ಟ್ 20 ರಂದು ಹೊರಬಿದ್ದಿದೆ. ಜಸ್ಟೀಸ್ ಕೆ.ಎನ್.ಫಣೀಂದ್ರ ಮತ್ತು ಮೊಹನ ಶಾಂತನಗೌಡರ್‍ರವರಿದ್ದ ಪೀಠ ಕೋಲಾರ ಜಿಲ್ಲೆಯ ಕೆಳಹಂತದ ನ್ಯಾಯಾಲಯ ಡಿಸೆಂಬರ್ 4, 2006 ರಂದು ಸಾಕ್ಷಿಯ ಕೊರತೆಯ ಆಧಾರದ ಮೇಲೆ ನೀಡಿದ್ದ ಕಂಬಾಲಪಲ್ಲಿ ತೀರ್ಪನ್ನು ಎತ್ತಿ ಹಿಡಿದಿದೆ. ಅಂದಹಾಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಎಸ್. ಚಂದ್ರಮೌಳಿಯ ಪ್ರಕಾರ ಹೇಳುವುದಾದರೆ “ಇಲ್ಲಿ 91 ಸಾಕ್ಷಿಗಳಲ್ಲಿ 56 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ತನಿಖಾಧಿಕಾರಿ ಮತ್ತು ಸಂಬಂಧಪಟ್ಟ ವೈದ್ಯರ ವಿಚಾರಣೆ ನಡೆದಿಲ್ಲ. ಹಾಗೆಯೇ ಗಾಯ ಪ್ರಮಾಣಪತ್ರದ ದಾಖಲೆಗಳನ್ನು ಪರಿಗಣಿಸಿಲ್ಲ. ಅದಲ್ಲದೆ ಪೊಲೀಸರ ಮುಂದೆ ಸತ್ಯ ಸಾಕ್ಷಿ ನುಡಿದಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಮುಂದೆ ತಮ್ಮ ಸಾಕ್ಷಿಗಳನ್ನು ವಿರುದ್ಧವಾಗಿ ಹೇಳಿದ್ದಾರೆ! ಅರ್ಥಾತ್ ಹಣ ಪಡೆದು ಬೆದರಿಕೆಗಳಿಗೊಳಗಾಗಿ ಸುಳ್ಳು ಹೇಳಿದ್ದಾರೆ ಮತ್ತು ಈ ಸಂದರ್ಭದಲ್ಲಿ ತನಿಖಾಧಿಕಾರಿಯಾಗಲಿ ಅಥವಾ ನ್ಯಾಯಾಲಯವಾಗಲಿ ಘಟನೆ (7 ದಲಿತರ ಜೀವಂತ ದಹನ) ನಡೆಯಲು ನಿಜಕ್ಕೂ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ. ಆ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ರಕ್ಷಿಸಲು ನ್ಯಾಯಾಲಯ ಈ ದಲಿತರ ದಹನದ ಈ ಘಟನೆಯನ್ನು ಮರುವಿಚಾರಣೆಗೆ ಒಳಪಡಿಸಬೇಕು” ಎಂದು ಕೇಳಿಕೊಂಡರು. ಆದರೆ ಎಸ್.ಪಿ.ಪಿ. ಯವರ ಈ ಮನವಿಗೆ ಹೈಕೋರ್ಟ್ ಪೀಠ ಸ್ಪಂಧಿಸಲಿಲ್ಲ. ಬದಲಿಗೆ “ಕೆಳಹಂತದ ನ್ಯಾಯಾಲಯ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿದೆ. ಘಟನೆಯ ಪಂಚನಾಮೆ, ಮಹಜರನ್ನು ಗಣನೆಗೆ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಪಿ.ಯವರ ಮನಸೋ ಇಚ್ಛೆಗೆ ತಕ್ಕಂತೆ ಹೆಚ್ಚಿನ ಸಾಕ್ಷಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಎಸ್.ಪಿ.ಪಿ.ಯವರ ಮನವಿಯನ್ನು ತಳ್ಳಿ ಹಾಕಿ ಕೋಲಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2006 ಡಿಸೆಂಬರ್ 4 ರಂದು ಕಂಬಾಲಪಲ್ಲಿಯ 32 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಈಗಿನ ತೀರ್ಪಿನಲ್ಲಿ ಹೈಕೋರ್ಟ್ ಎತ್ತಿಹಿಡಿದಿದೆ.

  ಈ ನಿಟ್ಟಿನಲ್ಲಿ ಇದು ನ್ಯಾಯವೇ? ಅಥವಾ ಘಟನೆ ನಮ್ಮ ಕಣ್ಣೆದುರೆ ನಡೆದರೂ ನಾವು ನೋಡುತ್ತಾ ಕೂರುವುದು ಇದು ಅನ್ಯಾಯವೇ? ಏನೂ ತಿಳಿಯುತ್ತಿಲ್ಲ. ಆದರೆ ದಲಿತರ ಜೀವ ಮತ್ತು ಜೀವನ ಇಂತಹ ನಿರಂತರ, ಅಂದರೆ ಮಹಾರಾಷ್ಟ್ರದ ಖೈರ್ಲಾಂಜಿ ಹತ್ಯಾಕಾಂಡ ತೀರ್ಪು, ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡ ತೀರ್ಪು ಮತ್ತು ಸದ್ಯದ ಕಂಬಾಲಪಲ್ಲಿ ತೀರ್ಪುಗಳ ಮೂಲಕ ಕಾಲಕಸವಾಗುತ್ತಿರುವುದು ನಿಶ್ಚಿತ. ಹಾಗೆಯೇ “ಇಂತಹ ತೀರ್ಪುಗಳ ವ್ಯವಸ್ಥೆಯ ಇಂತಹ ರಕ್ಷಣೆ” ದಲಿತರಿಗೆ ಯಾವ ಭರವಸೆಯನ್ನಾದರೂ ನೀಡುತ್ತದೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

   ಖಂಡಿತ, ಒಂದು ಆಶಾಕಿರಣ ಕಾಣುತ್ತದೆ. ಅದೆಂದರೆ ಕಂಬಾಲಪಲ್ಲಿ ಘಟನೆ ನಡೆದಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಒಕ್ಕಲಿಗರು. ಅವರ ಬಳಿ ರಾಜಕೀಯ ಅಧಿಕಾರ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಹಾಗೆ ‘ಬೆಂಕಿ ಹಚ್ಚಲು’ ಕಾರಣವಾಯಿತು. ಹಾಗೆಯೇ ಅಂತಹ ಅಧಿಕಾರ ಅವರ ಬಳಿ ನಿರಂತರ ಇದ್ದಿದ್ದರಿಂದಲೇ ಕಂಬಾಲಪಲ್ಲಿ ವಿಚಾರಣೆ ನಡೆಸುತ್ತಿದ್ದ ಕೋಲಾರದ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರೊರ್ವರನ್ನು ಎತ್ತಂಗಡಿ ಮಾಡಿಸಿ ಬೇರೆಯವರನ್ನು ಅಲ್ಲಿ ಹಾಕಿಸಿದ್ದು, ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನೇಮಕಗೊಂಡಿದ್ದ ಎಸ್.ಪಿ.ಪಿ.ಯವರನ್ನು ಹಿಂತೆಗೆದುಕೊಂಡಿದ್ದು.

  ಒಟ್ಟಾರೆ ದೌರ್ಜನ್ಯ, ರಾಜಕೀಯ ಅಧಿಕಾರ ಇಲ್ಲದವರಿಗೆ ನಡೆಯುತ್ತದೆ ಮತ್ತು ಅಂತಹ ಅಧಿಕಾರ ದೊರೆಯದಿದ್ದರೆ ದೌರ್ಜನ್ಯ ಒಂದಿಲ್ಲೊಂದು ರೂಪಗಳಲ್ಲಿ ತನ್ನ ರೌದ್ರಾವತಾರವನ್ನು ತೋರುತ್ತಲೇ ಇರುತ್ತದೆ. ಅದಕ್ಕೆ ಅಂಬೇಡ್ಕರ್ ಹೇಳಿದ್ದು “ರಾಜಕೀಯ ಅಧಿಕಾರ ಪ್ರಗತಿಯ ಹೆಬ್ಬಾಗಿಲು ತೆಗೆಯುವ ಬೀಗದ ಕೈ” ಎಂದು. ಅಂದಹಾಗೆ ಅಂತಹ ರಾಜ್ಯಾಧಿಕಾರದ ಬೀಗದ ಕೈ ರಕ್ಷಣೆಯ ಅಸ್ತ್ರ ಕೂಡ ಆಗುತ್ತದೆ. ಆಗಬಲ್ಲದು. ಈ ನಿಟ್ಟಿನಲ್ಲಿ ದಲಿತರು ಇನ್ನು ಮುಂದಾದರೂ ಅದನ್ನು ಪಡೆಯುವ ದಿಕ್ಕಿನಲ್ಲಿ ಚಿಂತಿಸಬೇಕಷ್ಟೆ.