ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ನೀರು ಕೊಡದ ಆ ಧರ್ಮದಲ್ಲಿ......
-ರಘೋತ್ತಮ ಹೊ.ಬ.
1. ಧರ್ಮಕ್ಕಾಗಿ ಮನುಷ್ಯನಲ್ಲ; ಮನುಷ್ಯನಿಗಾಗಿ ಧರ್ಮ.
2. ಮಾನವರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
3. ಸಂಘಟಿತರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
4. ಸಾಮಥ್ರ್ಯ ಗಳಿಸಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
5. ಸಮಾನತೆ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
6. ಸ್ವಾತಂತ್ರ್ಯ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
7. ನಿಮ್ಮ ಕೌಟುಂಬಿಕ ಜೀವನವನ್ನು ಸುಖಮಯಗೊಳಿಸಿಕೊಳ್ಳಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ. ದಲಿತರು ಯಾಕೆ ಮತಾಂತರ ಆಗಬೇಕು ಎಂಬುದಕ್ಕೆ ಅಂಬೇಡ್ಕರರು ಹೊರಡಿಸಿದ್ದ ಘೋಷಣೆಗಳಿವು. ಈ ಘೋಷಣೆಗಳು 1936 ಮೇ 30, 31ರಂದು ಮುಂಬೈನ ದಾದರ್‍ನಲ್ಲಿ ಅಂಬೇಡ್ಕರರು ತನ್ನವರನ್ನು ಮತಾಂತರಕ್ಕೆ ಅಣಿಗೊಳಿಸಲು ಆಯೋಜಿಸಿದ್ದ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿದ್ದವು. ಅಂಬೇಡ್ಕರರು ಈ ಸಮ್ಮೇಳನ ಆಯೋಜಿಸಲಿಕ್ಕೆ ಹಿನ್ನೆಲೆ 1935 ಅಕ್ಟೋಬರ್ 13ರಂದು “ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ, ಅದು ನನ್ನ ಕೈಲಿರಲಿಲ್ಲ. ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ” ಎಂದು ಘರ್ಜನೆ ಮೊಳಗಿಸಿದ್ದುದ್ದಾಗಿತ್ತು. ಅಂಬೇಡ್ಕರರು ಹೀಗೆ ಘರ್ಜನೆ ಮೊಳಗಿಸಲಿಕ್ಕೆ ಹಿಂದೂ ಧರ್ಮದಿಂದ ಅವರು ಆ ಸಮಯದಲ್ಲಿ ಸತತ 5 ವರ್ಷ ಅವಮಾನಕ್ಕೀಡಾಗಿದ್ದದ್ದು ಕಾರಣವಾಗಿತ್ತು. ಹೇಗೆಂದರೆ ನಾಸಿಕ್‍ನ ಕಾಳಾರಾಂ ದೇವಸ್ಥಾನದ ಪ್ರವೇಶ ಪಡೆಯಲು ಸತತ 5ವರ್ಷ ಹೋರಾಟ ನಡೆಸಿದ್ದ ಅಂಬೇಡ್ಕರರು ತಮ್ಮ ಆ ಹೋರಾಟದಲ್ಲಿ ವಿಫಲತೆ ಕಂಡಿದ್ದರು ಅರ್ಥಾತ್ ಹಿಂದೂಗಳಿಂದ ವೈಫಲ್ಯ ಕಂಡಿದ್ದರು, ಹಾಗೆಯೇ ಹಲ್ಲೆಗೊಳಗಾಗಿದ್ದರು.
ಬಾಬಾಸಾಹೇಬರು ಜೀವನದಲ್ಲಿ ಯಾವುದೇ ಹೋರಾಟವನ್ನು ತಮಾಷೆಗೆ ತೆಗೆದುಕೊಂಡವರಲ್ಲ. ಫಲಿತಾಂಶ ಬರಬೇಕು ಇಲ್ಲದಿದ್ದರೆ, ಏನು ಫಲಿತಾಂಶ ಬರಬೇಕು ಎಂಬುದನ್ನು ಅವರೇ ನಿರ್ಧರಿಸಿಬಿಡುತ್ತಿದ್ದರು. ನಾಸಿಕ್‍ನ ಕಾಳಾರಾಂ ದೇವಸ್ಥಾನ ಪ್ರವೇಶವನ್ನು ಅವರು ಅಕ್ಷರಶಃ ಬಯಸಿದ್ದರು, ಫಲ ಸಿಗಲಿಲ್ಲ. ಆದರೆ ಆ ಫಲಕ್ಕೆ ಅವರು ಹಿಂದೂ ಧರ್ಮ ತೊರೆಯುವ ಘರ್ಜನೆಯ ಮೆರುಗು ನೀಡಿದ್ದರು. ಸುಮ್ಮನೇ ಮೆರುಗು ನೀಡಿದರಾಯಿತೆ? ಕಾರ್ಯರೂಪಕ್ಕೆ ಬರುವುದು ಬೇಡವೆ? ಅದಕ್ಕೇ ಅಂಬೇಡ್ಕರರು ಆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಮ್ಮೇಳನ ಆಯೋಜಿಸಿದ್ದು ಮತ್ತು ಅದಕ್ಕೆ ಸ್ಫೂರ್ತಿ ಎಂಬಂತೆ ಈ ಘೋಷಣೆಗಳನ್ನು ಹೊತ್ತ ಫಲಕಗಳು.
ಅಂಬೇಡ್ಕರರ ಉಳಿದ ಘೋಷಣೆಗಳನ್ನು ದಾಖಲಿಸುವುದಾದರೆ
8. ನಿಮ್ಮನ್ನು ಮಾನವರಂತೆ ಕಾಣದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
9. ನಿಮ್ಮನ್ನು ದೇವಸ್ಥಾನಗಳನ್ನು ಪ್ರವೇಶಿಸಲಿಕ್ಕೆ ನಿರ್ಬಂಧಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
10. ನಿಮಗೆ ಕುಡಿಯುವ ನೀರನ್ನು ನಿರಾಕರಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
11. ನೀವು ಶಿಕ್ಷಣ ಪಡೆಯುವುದನ್ನು ಒಪ್ಪದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
12. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ಅವಮಾನಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
13. ನೀವು ಉದ್ಯೋಗ ಪಡೆಯಲಿಕ್ಕೆ ತಡೆಯೊಡ್ಡುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
ಹೀಗೆ ಕೇಳುತ್ತಾ ಹೋಗುತ್ತವೆ ಅಂಬೇಡ್ಕರರ ಆ ಪ್ರಶ್ನಾರೂಪದ ಆ ಘೋಷಣೆಗಳು. ಅಂಬೇಡ್ಕರರ ಈ ಪ್ರಶ್ನೆಗಳು ಅದು ಅಂದಿನ 1936ಕ್ಕೆ ಸೀಮಿತವೆಂಬಂತೆ ಕಾಣುತ್ತವೆಯೇ? ಖಂಡಿತ ಇಲ್ಲ. ಅವು ಈಗಲೂ ಪ್ರಸ್ತುತ, ಅಂತೆಯೇ ಅಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತವೆ. ಬೇಡ, ಅಂತಹ ಪ್ರಸ್ತುತತೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವುದು ಬೇಡ. ಬದಲಿಗೆ ಅಂಬೇಡ್ಕರರ ಅಂತಹ ಉಳಿದ ಘೋಷಣೆಗಳತ್ತ ಗಮನಹರಿಸುವುದಾದರೆ...
14. ಮನುಷ್ಯ ಮನುಷ್ಯರ ನಡುವೆ ಸಹಜ ಸಂಬಂಧವನ್ನು ನಿಷೇಧಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ಬಲಪ್ರದರ್ಶನ.
15. ಮಾನವತೆಗೆ ಮಾನ್ಯತೆ ನೀಡುವುದನ್ನು ಅಧರ್ಮವೆಂದು ಪರಿಗಣಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ರೋಗ.
16. ಅಪವಿತ್ರ ಪ್ರಾಣಿಗಳ ಸ್ಪರ್ಶವನ್ನು ಮಾನ್ಯಮಾಡುವ ಆದರೆ ಮಾನವರ ಸ್ಪರ್ಶವನ್ನು ನಿಷೇಧಿಸುವ ಧರ್ಮ ಅದೊಂದು ಧರ್ಮವೇ ಅಲ್ಲ, ಬದಲಿಗೆ ಅದೊಂದು ಮೂರ್ಖತನ.
17. ಒಂದು ವರ್ಗ ಶಿಕ್ಷಣ ಪಡೆಯದಂತೆ ಪ್ರತಿಬಂಧಿಸುವ, ಅದು ಐಶ್ವರ್ಯ ಪಡೆಯದಂತೆ, ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದದಂತೆ ನಿರ್ಬಂಧಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಮಾನವ ಜೀವನ ಅಪಹಾಸ್ಯ.
18. ಬಡವನನ್ನು ಬಡವನಂತೆಯೇ ಇರಲು, ಅಶಿಕ್ಷಿತನನ್ನು ಅಶಿಕ್ಷಿತನಂತೆಯೇ ಇರಲು ಒತ್ತಾಯಪಡಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಶಿಕ್ಷೆ.
ಸಾಕೆ? ಅಂಬೇಡ್ಕರರ ಅಂತಹ ಘೋಷಣಾ ರೂಪದ ವಾಖ್ಯೆ? ಅಥವಾ ಇದಕ್ಕಿಂತಲೂ ಹೆಚ್ಚು ಇನ್ನೇನಾದರೂ ಬೇಕೆ? ಖಂಡಿತ ಸಾಕೆನಿಸುತ್ತದೆ. ಧರ್ಮವೆಂದರೆ ಅದೇನು ಗೊಂಬೆಯಲ್ಲ, ಪ್ರಾಣಿಯಲ್ಲ, ಪಕ್ಷಿಯಲ್ಲ. ಗಿಡ-ಮರ, ರೆಂಬೆ-ಕೊಂಬೆ, ನವಿಲು-ಗುಬ್ಬಚ್ಚಿ ಯಾವುದೂ ಅಲ್ಲ. ಬದಲಿಗೆ ಅದೊಂದು ಹಿತಾಸಕ್ತಿಗಳನ್ನು ಹೊಂದಿರುವ ಮನುಷ್ಯರ ಸಮೂಹ. ಅಂತಹ ಮನುಷ್ಯರ ಸಮೂಹದ ಸಂಗದ ಬಗ್ಗೆ ಕಡೆಯದಾಗಿ ಹೇಳುವ ಅಂಬೇಡ್ಕರರ ಘೋಷಣೆಗಳನ್ನು ಕೇಳಿ.
19. ಯಾರು ದೇವರನ್ನು ಸರ್ವವ್ಯಾಪಿ ಎಂದು ಬೋಧಿಸುತ್ತಾರೆಯೋ ಮತ್ತು ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅಂತಹ ಜನರ ಜೊತೆ ಸೇರಬೇಡಿ.
20. ಯಾರು ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ಕುಡಿಯಲು ನೀರು ಕೊಡದೆ ನಿಷೇಧಿಸಿ ಅವರನ್ನು ಕೊಲ್ಲುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅವರ ಜೊತೆ ಸೇರಬೇಡಿ. (ಅಂಬೇಡ್ಕರ್ ಬರಹಗಳು. ಇಂಗ್ಳಿಷ್.ಸಂ.17, ಭಾಗ.3, ಪು.113)
ಬೇಸರವೆನಿಸುತ್ತಿದೆಯೇ ಮನಸ್ಸು ಕಳಾಹೀನವಾಗುತ್ತಿದೆಯೇ ಅಂಬೇಡ್ಕರರ ಈ ಘೋಷಣೆಗಳನ್ನು ಕೇಳಿ? ಅಥವಾ ಅಂಬೇಡ್ಕರರ ಈ ಘೋಷಣೆಗಳು ಸುಳ್ಳು ಎನಿಸುತ್ತಿವೆಯೇ? ಸುಳ್ಳೆನಿಸಿದರೆ ಅಂಬೇಡ್ಕರರ ಈ ಕಡೆಯ ಘೋಷಣೆಗೆ ಪೂರಕವಾಗಿ ಈಗಲೂ ನಡೆಯುತ್ತಿರುವ ಈ ಕೆಳಗಿನ ಒಂದು ಆಚರಣೆಯನ್ನು ಗಮನಿಸಿ. ಮೈಸೂರಿನಲ್ಲಿ ಒಂದು ಆಶ್ರಮವಿದೆ. ಆ ಆಶ್ರಮದ ಹೆಸರು, ಅದರ ಸ್ವಾಮೀಜಿ ಅದರ ಪ್ರಸ್ತಾಪ ಬೇಡ. ಆದರೆ ಆ ಆಶ್ರಮದಲ್ಲಿ ಒಂದು ಅತ್ಯಪರೂಪದ ವನವಿದೆ. ಅದು ಶುಕ ವನ. ಅಂದರೆ ಗಿಳಿಗಳ ವನ. ಆ ವನದಲ್ಲಿ ನಾನಾ ಬಗೆಯ ಗಿಳಿಗಳಿವೆ. ಅವಕ್ಕೆ ಥರಥರದ ಹಣ್ಣುಗಳು, ವಿಧವಿಧದ ವರ್ಣರಂಜಿತ ಪಂಜರಗಳು, ನೋಡಿಕೊಳ್ಳಲು ವೈದ್ಯರುಗಳು, ಸೇವಕರುಗಳು... ಒಟ್ಟಿನಲ್ಲಿ ಅಂಬೇಡ್ಕರರು ಹೇಳಿದ “ಇರುವೆಗಳಿಗೆ ಸಕ್ಕರೆ ಉಣಿಸುವವರು ದೃಷ್ಟಾಂತದಂತೆ” ಮೈಸೂರಿನ ಆ ಆಶ್ರಮದಲ್ಲಿ ಗಿಳಿಗಳಿಗೆ ರಾಜೋಪಚಾರ! ಅದೇ ಆಶ್ರಮದ ಅನತಿ ದೂರದಲ್ಲೇ ಸ್ಲಂಗಳಿವೆ! ಅಲ್ಲಿ ದಲಿತರಿದ್ದಾರೆ. ಅವರ ಪಾಡು? ಆಚರಣೆಗಳು? ಮೂಲಭೂತ ಸೌಕರ್ಯಗಳು? ವ್ಯಂಗ್ಯವೆಂದರೆ ಆಶ್ರಮ ಇರುವ ಹಾಲಿ ಆ ಜಾಗ ಕೂಡ ದಲಿತರದ್ದೆ! ಹಿಂದೆ ಮೈಸೂರು ಮಹಾರಾಜರು ದಲಿತರಿಗೆ ನೀಡಿದ್ದ ಜಾಗ ಅದು. ಆದರೆ ದಲಿತರಿಗೆ ಬಿಡಿಗಾಸು ಬಿಸಾಕಿ ಅವರ ಜಮೀನಿನನ್ನು ಆಕ್ರಮಿಸಿಕೊಂಡು ಅಲ್ಲಿ ಆಶ್ರಮ ಕಟ್ಟಲಾಗಿದೆ! ಗಿಳಿಗಳಿಗೆ ರಾಜಾತಿಥ್ಯ ನಡೆಸಲಾಗುತ್ತಿದೆ! ಪ್ರಶ್ನೆಯೇನೆಂದರೆ ಆ ಜಮೀನಿನ ಮೂಲ ಮಾಲೀಕರಾದ ದಲಿತರ ಬದುಕು? ಆಶ್ರಮದಿಂದ ಅವರಿಗೆ ಉಪಚಾರ? ದಲಿತರ ಕಷ್ಟ ನಷ್ಟಗಳಿಗೆ ನೆರವು? ಅಸ್ಪøಶ್ಯತೆಯ ನೋವಿಗೆ ಮುಲಾಮು? ಖಂಡಿತ ಶೂನ್ಯ.
ಅಂಬೇಡ್ಕರರು ಅಂದು ಹೇಳಿದ, ಪ್ರದರ್ಶನಕಿಟ್ಟಿದ್ದ ಘೋಷಣೆಗಳು ಬರೀ ಘೋಷಣೆಗಳಲ್ಲ, ಬದಲಿಗೆ ಭಾರತದ ಧಾರ್ಮಿಕ ಬದುಕಿನ ತೆರೆದ ಪುಟಗಳು ಮತ್ತು ಅಂತಹ ಪುಟಗಳ ಪುಸ್ತಕ ಬಿಸುಟು ಹೊರಬನ್ನಿ ಎಂದು ಅಂಬೇಡ್ಕರರು ಅಂದು ಕರೆನೀಡಿದ್ದೇ ಮತಾಂತರ. ಈ ನಿಟ್ಟಿನಲ್ಲಿ ದಲಿತರು ಯಾಕೆ ಮತಾಂತರವಾಗಬೇಕು ಎಂಬ ಪ್ರಶ್ನೆಗೆ ಅಂಬೇಡ್ಕರರ ಈ ಘೋಷಣೆಗಳು ಸ್ಪಷ್ಟ ಉತ್ತರವಾಗುತ್ತವೆ.
No comments:
Post a Comment