ಗಾಂಧೀಜಿಯವರಿಂದ ಜಾತಿಪದ್ಧತಿ ಸಮರ್ಥನೆ
-ರಘೋತ್ತಮ ಹೊ.ಬ
ಹಿಂದೆ 1936 ಜುಲೈ 2 ರಂದು ಪತ್ರ ಮುಖೇನ ಅಂಬೇಡ್ಕಕರಿಗೆ ಅಪರೂಪದ ಆಹ್ವಾನವೊಂದು ಬಂದಿತ್ತು. ಲಾಹೋರ್‍ನ “ಜಾತ್ ಪತ್ ತೋಡಕ್ ಮಂಡಲ್(ಜಾತಿ ನಿರ್ಮೂಲನಾ ಮಂಡಳಿ)”ಯವರು ಬರೆದಿದ್ದ ಪತ್ರವದು. ಆ ಪತ್ರದಲ್ಲಿ ಆ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಸಂತರಾಮ್ ಎಂಬುವವರು ಅಂಬೇಡ್ಕರರನ್ನುದ್ದೇಶಿಸಿ “ನೀವೊಬ್ಬ ಮಹಾನ್ ವಿಚಾರಶೀಲರು; ಜಾತಿಯ ಸಮಸ್ಯೆಯನ್ನು ನಿಮ್ಮಷ್ಟು ಆಳವಾಗಿ ಅಭ್ಯಾಸ ಮಾಡಿದವರು ಇನ್ನೊಬ್ಬರಿಲ್ಲವೆಂಬುದು ನನ್ನ ನಿಶ್ಚಿತ ಅಭಿಪ್ರಾಯ. ನಿಮ್ಮ ಲೇಖನಗಳಿಂದ ನಾನು ಹಾಗೂ ನಮ್ಮ ಮಂಡಳಿ ಸಾಕಷ್ಟು ಲಾಭ ಪಡೆದಿದ್ದೇವೆ. ಜಾತಿಗೆ ಆಧಾರವಾದ ಧಾರ್ಮಿಕ ಪರಿಕಲ್ಪನೆಗಳನ್ನು ನಾಶಗೊಳಿಸಿದಾಗ ಮಾತ್ರ ಜಾತಿಯನ್ನು ಭಂಗಿಸುವುದು ಸಾಧ್ಯ ಎಂದು ನೀವು ಹೇಳಿದ್ದೀರಿ. ಆದ್ದರಿಂದ ನಮ್ಮ ಮಂಡಳಿಯ ವಾರ್ಷಿಕ ಸಮ್ಮೇಳನಕ್ಕೆ ನೀವೆ ಅಧ್ಯಕ್ಷರಾಗಬೇಕೆಂಬುದು ನಮ್ಮ ಕಾರ್ಯಕಾರಿ ಸಮಿತಿಯ ಒಕ್ಕೊರಲಿನ ತೀರ್ಮಾನವಾಗಿದೆ. ನಮ್ಮ ಮಂಡಳಿಯ ಸಹಾಯಕ ಕಾರ್ಯದರ್ಶಿ ಶ್ರೀಇಂದ್ರಸಿಂಗ್‍ರವರು ನಮ್ಮ ಪರವಾಗಿ ನಿಮ್ಮನ್ನು ಅಧಿಕೃತವಾಗಿ ಮುಂಬಯಿಯಲ್ಲಿ ಕಂಡು ಆಹ್ವಾನಿಸಲು ಬರುತ್ತಿದ್ದಾರೆ”ಎಂದು ಬರೆದಿದ್ದರು.
ಒಟ್ಟಾರೆ, ಜಾತಿ ಪದ್ಧತಿಯ ನಿರ್ಮೂಲನೆಯ ಕುರಿತಾದ ಅಪರೂಪದ ಸಮ್ಮೇಳನವೊಂದಕ್ಕೆ ಅಧ್ಯಕ್ಷತೆ ವಹಿಸುವ ಕಾರ್ಯಕ್ಕೆ ಸವರ್ಣೀಯ ಸಂಸ್ಥೆಯೊಂದು ಅಂಬೇಡ್ಕರರನ್ನು ಆಹ್ವಾನಿಸಿತ್ತು.
ಅಂದಹಾಗೆ ಸವರ್ಣೀಯ ಸಂಸ್ಥೆಯ ಈ ಆಹ್ವಾನಕ್ಕೆ ಅಂಬೇಡ್ಕರರು ಮೊದಮೊದಲು ನಿರಾಕರಿಸಿದರಾದರೂ ಅದರ ಸದಸ್ಯರು ದೂರದ ಲಾಹೋರ್‍ನಿಂದ(ಇಂದಿನ ಪಾಕಿಸ್ತಾನದಲ್ಲಿರುವ) ಮುಂಬಯಿಗೇ ಬಂದು ಖುದ್ದು ಆಹ್ವಾನ ನೀಡಿದ್ದರಿಂದ ಅಂಬೇಡ್ಕರ್‍ರವರು ಒಪ್ಪಲೇಬೇಕಾಯಿತು. ಅಂತೆಯೇ ಜಾತಿನಿರ್ಮೂಲನೆ ಬಗೆಗಿನ ಬಹುಮುಮುಖ್ಯವಾದ ಆ ಸಮ್ಮೇಳನದಲ್ಲಿ ಅಧÀ್ಯಕ್ಷೀಯ ಭಾಷಣ ಅರ್ಥಪೂರ್ಣವಾಗಿರಬೇಕೆಂದು ಆಶಿಸಿದ ಅಂಬೇಡ್ಕರ್‍ರವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಸಿದ್ಧಪಡಿಸಿಕೊಂಡರು. ಹಾಗೆಯೇ ಸಮ್ಮೇಳನದಲ್ಲಿ ಅದನ್ನು ಹಂಚಬೇಕೆಂಬ ಉದ್ದೇಶದಿಂದ ಆ ಕಾಲದಲ್ಲಿ ಸ್ವತಃ ತಾವೇ ಅದನ್ನು ಮುದ್ರಿಸಿದರು!
ಆದರೆ? ಜಾತಿಪದ್ಧತಿಯ ಬಗ್ಗೆ ಅಂಬೇಡ್ಕರರ ನಿಲುವುಗಳನ್ನು ಮತ್ತಷ್ಟು ತಿಳಿದುಕೊಂಡ ಜಾತಿನಿರ್ಮೂಲನೆ ಹೆಸರಿನ ಆ ಸವರ್ಣೀಯ ಹಿಂದೂಗಳ ಮಂಡಳಿ “ನಿಮ್ಮನ್ನು ಈ ರಾಜ್ಯಕ್ಕೆ ಬರಮಾಡಿಕೊಳ್ಳುವುದನ್ನು ಪಂಜಾಬ್‍ನ (ಈಗಿನ ಪಾಕಿಸ್ತಾನದಲ್ಲಿರುವ) ಸಮಸ್ತ ಹಿಂದೂಗಳು ವಿರೋಧಿಸಿದ್ದಾರೆ. ನಿಮ್ಮನ್ನು ಆಹ್ವಾನಿಸಿದ ಕಾರಣಕ್ಕಾಗಿ ನಮ್ಮ ಸಂಸ್ಥೆಯು ಎಲ್ಲಾ ಕಡೆಯಿಂದ ಹೀನಾಯವಾದ ಟೀಕೆಗೆ ಗುರಿಯಾಗಿದೆ”. ಎಂದು ಪತ್ರ ಬರೆಯಿತು!
ಅಂದಹಾಗೆ ಈ ಸಂದರ್ಭದಲ್ಲಿ ಅವರನ್ನು ನೋಡಲು ಮುಂಬಯಿಗೇ ಬಂದ ಮಂಡಳಿಯ ಪ್ರತಿನಿಧಿಯೊಬ್ಬರು ಅಂಬೇಡ್ಕರರು ತಮ್ಮ ಆ ಆಧ್ಯಕ್ಷೀಯ ಭಾಷಣದಲ್ಲಿ ಏನು ಬರೆದಿವರು ಎಂದು ತಿಳಿದುಕೊಳ್ಳಲು ಬಲು ಉತ್ಸುಕರಾಗಿದ್ದರು! ಅದಕ್ಕಾಗಿ ಭಾಷಣವನ್ನು ನಾವು ಲಾಹೋರ್‍ನಲ್ಲಿಯೇ ಮುದ್ರಿಸುವುವೆ ಎಂದು ಅಂಬೇಡ್ಕರರನ್ನು ಅವರು ಒತ್ತಾಯಿಸತೊಡಗಿದರು. ಅಂತಿಮವಾಗಿ ಅವರ ಉದ್ದೇಶ ಅರಿತು, ಅವರನ್ನು ನಿರಾಶೆಗಳೊಪಡಿಸಲು ಇಚ್ಚಿಸದ ಅಂಬೇಡ್ಕರರು ತಾವು ಸಿದ್ಧಪಡಿಸಿದ ಆ ಭಾಷಣದ ಒಂದು ಪ್ರತಿಯನ್ನು ಜಾತಿನಿರ್ಮೂಲನೆ ಮಂಡಳಿಯ ಆ ಪ್ರತಿನಿಧಿ(ಶ್ರೀ ಹರಭಗವಾನ್)ಗೆ ನೀಡಿದರು.
ಅಂಬೇಡ್ಕರರು ಬರೆದಿದ್ದ ಆ ಸುದೀರ್ಘ ಅಧ್ಯಕ್ಷೀಯ ಭಾಷಣದಲ್ಲಿ ಅಂತಹದ್ದೇನಿತ್ತು? ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ “ಜಾತಿ ಎಂಬುದು ನೀತಿಸಮ್ಮತವೋ ಅಲ್ಲವೋ ಎಂಬುದನ್ನು ವಿಚಾರಿಸುವ ಸ್ವಾತಂತ್ರ್ಯವೇ ಜನಸಾಮಾನ್ಯರಿಗಿಲ್ಲ. ಹೀಗಿರುವಾಗ ಅದನ್ನು ನಿರ್ಮೂಲನೆಗೊಳಿಸುವುದು ಹೇಗೆ? ಒಂದರ್ಥದಲ್ಲಿ ಜಾತಿ ಒಂದು ಅಭೇಧ್ಯವಾದ ಕೋಟೆಯಾಗಿದೆ. ಬುದ್ಧಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಅದರಲ್ಲೂ ಆ ಕೋಟೆಯ ಒಳಗಡೆ(ಅದರ ರಕ್ಷಣೆಗಾಗಿ) ಬುದ್ಧಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಅದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿ(ಜಾತಿಪದ್ಧತಿ)ಯನ್ನು ರಕ್ಷಿಸಿಕೊಳ್ಳಲು ನಿಂತ ಸೈನ್ಯವಾಗಿದೆ. ಹೀಗಾಗಿಯೇ ನಾನು ಹೇಳುತ್ತಿದ್ದೇನೆ ಹಿಂದೂಗಳಲ್ಲಿರುವ ಜಾತಿಪದ್ಧತಿಯನ್ನು ಹೊಡೆದಟ್ಟುವುದು ಅಸಾಧ್ಯ. ಜಾತಿಪದ್ಧತಿ ಎಂಬ ಈ ಕೋಟೆಯನ್ನು ಛಿದ್ರಮಾಡುವುದಕ್ಕೆ ಒಂದು ದೀರ್ಘ ಯುಗವೇ ಬೇಕಾಗುತ್ತದೆ. ಅಂದಹಾಗೆ ಅದು ಸಾಧ್ಯವಾಗಬೇಕಾದರೆ ಜಾತಿಪದ್ಧತಿಗೆ ಆಧಾರವಾಗಿರುವ ವೇದ ಮತ್ತು ಶಾಸ್ತ್ರಗಳನ್ನು ಸಿಡಿಮದ್ದಿಟ್ಟು ಹಾರಿಸಬೇಕೆಕು. ಶೃತಿ-ಸ್ಮøತಿಗಳ ಧರ್ಮವನ್ನು ನಾಶ ಮಾಡಬೇಕು. ಇದು ಬಿಟ್ಟು ಬೇರೆ ದಾರಿಯೇ ಇಲ್ಲ. ಈ ವಿಷಯದಲ್ಲಿ ಇದು ನನ್ನ ಖಚಿತ ಅಭಿಪ್ರಾಯ…”.
ಮುಂದುವರಿದು ಅವರು “ವಿಧಿ ನಿಷೇಧಗಳೆ ಧರ್ಮವೆಂಬರ್ಥ ಬರುವಂತೆ ವೇದ ಸ್ಮøತಿಗಳಲ್ಲಿ ‘ಧರ್ಮ’ ಎಂಬ ಪದವನ್ನು ಬಳಸಲಾಗಿದೆ. ವೇದ ಸ್ಮøತಿಗಳ ಮೂಲಕ ಕಾನೂನು ಕ್ರಮಕ್ಕೆ ಒಳಪಡಿಸಿದ ವರ್ಗ(ವರ್ಣ) ನೀತಿಯನ್ನು ನಾನು ಧರ್ಮವೆಂದು ಒಪ್ಪಲಾರೆ. ಕಟ್ಟುನಿಟ್ಟಿನ ನಿಯಮಗಳೆ ಧರ್ಮವೆನ್ನುವುದಾದರೆ ಅದರಿಂದ ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ. ಗುಲಾಮಗಿರಿಗೆ ಒಳಪಟ್ಟು ಜನ ಹೊರಗಿನಿಂದ ಹೇರಲ್ಪಟ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ತತ್ವಗಳಿಗೆ ಬದಲಾಗಿ ಒತ್ತಾಯಪೂರ್ವಕವಾಗಿ ವಿಧಿಸಲ್ಪಟ್ಟ ಶಾಸನಗಳಿಗೆ ವಿಧೇಯರಾಗಬೇಕಾಗುತ್ತದೆ. ಈ ವಿಧಿ ನಿಷೇಧಗಳ ಅತ್ಯಂತ ದುಷ್ಟ ಅಂಶವೆಂದರೆ ಅವು ಎಲ್ಲಾ ಕಾಲಕ್ಕೂ ಪಾಲಿಸಲ್ಪಡಬೇಕೆನ್ನುವುದು. ಹಾಗೆಯೇ ಎಲ್ಲಾ ವರ್ಗಗಳಿಗೂ ಅವು ಸಮಾನವಾಗಿಲ್ಲದಿರುವುದು ಅಥವಾ ಹಾಗೆ ಅವು ಒಂದೊಂದು ವರ್ಗಕ್ಕೂ ಒಂದೊಂದು ಬಗೆಯಾಗಿರುವುದು. ಹಾಗೆಯೇ ಅವು ಸಾರ್ವಕಾಲಿಕ ಎಂದಿರುವುದರಿಂದ ಅಸಮಾನತೆಯೂ ಕೂಡ ಶಾಶ್ವತವಾಗಿದೆ. ಹೀಗಿರುವಾಗ ಇಂತಹ ಶಾಶ್ವತ ನಿಯಮ ಅಥವಾ ಅನಾಹುತಕಾರಿ ಶಾಸನಗಳನ್ನು ಜನ ಹೇಗೆ ಸಹಿಸಿಕೊಳ್ಳಬಲ್ಲರು? ಆ ಕಾರಣದಿಂದ ಇಂತಹ(ನಿಯಮಗಳ ಆಧಾರದ ಮೇಲಿನ) ಧರ್ಮವನ್ನು ನಾಶಗೊಳಿಸಬೇಕೆಂದು ಯಾವುದೇ ಅನುಮಾನವಿಲ್ಲದೆ ಹೇಳುತ್ತೇನೆ.”
ಖಂಡಿತ, ಜಾತಿಪದ್ಧತಿ ನಿರ್ಮೂಲನೆಗೊಳಿಸಬೇಕೆಂದು ಹೊರಟ ಯಾರಿಗೇ ಆಗಲಿ ಅಂಬೇಡ್ಕರರು ಅಂದು ನೀಡಿರುವ ಈ ವಿಶ್ಲೇಷಣೆ ಮತ್ತು ತೀರ್ಮಾನವೇ ಅಂತಿಮವಾಗುತ್ತದೆ. ಯಾಕೆಂದರೆ ಅಸಮಾನತೆಯ ಆಧಾರದ ಮನುಸ್ಮøತಿ ಮತ್ತು ಇತರ ಶೃತಿಗಳ ಮೇಲೆ ನಿಂತಿರುವ ಧರ್ಮವನ್ನು ನಾಶಗೊಳಿಸದೆ ಜಾತಿ ಪದ್ಧತಿ ಖಂಡಿತ ನಾಶವಾಗುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಸಮ್ಮೇಳನದ ಹೆಸರು “ಜಾತಿ ನಿರ್ಮೂಲನೆ” ಎಂದಿದ್ದರಿಂದ ಅಂಬೇಡ್ಕರರು ಅದನ್ನು ಹೇಗೆ ನಿರ್ಮೂಲನೆ ಮಾಡುವುದು ಎಂಬ ಸತ್ಯವನ್ನು ಅತ್ಯಂತ ಸರಳವಾಗಿ ಮತ್ತು ಸಹಜವಾಗಿ ದಾಖಲಿಸಿದ್ದಾರೆ ಮತ್ತು ಹಾಗೆಯೇ ದಾಖಲಿಸುತ್ತಾ ಅವರು “ಹಿಂದೂಗಳೇ, ಬಹುಶಃ ನಿಮ್ಮನ್ನುದ್ದೇಶಿಸಿ ಇದು ನನ್ನ ಕೊನೆಯ ಭಾಷಣ” ಎಂದು ಅತ್ಯಂತ ನಿರ್ಭಿಡೆಯಿಂದ ಹೇಳಿದ್ದಾರೆ.
ಅಂದಹಾಗೆ ಈ ಸಂದರ್ಭದಲ್ಲಿ ಅಂಬೇಡ್ಕರರು ಹಿಂದೂಗಳಿಗೆ ಕೆಲವು ಬುದ್ಧಿಯ ಮಾತು ಮತ್ತು ಪರಿಹಾರಗಳನ್ನು ಸೂಚಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು “ಹಿಂದೂಗಳು ತಮ್ಮ ಧರ್ಮವನ್ನು ಇದು ನಮ್ಮನ್ನು ಚೆನ್ನಾಗಿ ಬದುಕಲು ಉಳಿಯಗೊಡುವುದೆ ಎಂಬ ದೃಷ್ಟಿಯಲ್ಲಿ ಪರಿಶೀಲಿಸಬೇಕು”.
ಎರಡನೆಯದು “ಆನುವಂಶಿಕವಾಗಿ ತಮಗೆ ಬಂದ ಸಾಮಾಜಿಕ ಸಂಪ್ರದಾಯವನ್ನು ಅಖಂಡವಾಗಿ ರಕ್ಷಿಸಿಕೊಂಡು ಹೋಗಬೇಕೆ ಅಥವಾ ಉಪಯುಕ್ತವಾದ ಅಂಶವನ್ನು ಆಯ್ದುಕೊಂಡು ಮುಂದಿನ ಪೀಳಿಗೆಗೆ ಅದನ್ನಷ್ಟೆ ಉಳಿಸಿಕೊಡಬೇಕೆ ಎಂಬುದನ್ನು ಯೋಚಿಸಬೇಕು”.
ಮೂರನೆಯದು “ಹಿಂದೂಗಳು ತಮ್ಮ ಆದರ್ಶಗಳಿಗೆಲ್ಲ ಪ್ರಾಚೀನ ಕಾಲವನ್ನೆ ಪೂಜಿಸುತ್ತಿರಬೇಕೇ? ಅಥವಾ ಹಾಗೆ ಪೂಜಿಸುವುದನ್ನು ನಿಲ್ಲಿಸಬೇಕೆ? ಅದನ್ನು ಹಿಂದೂಗಳು ಪರಿಶೀಲಿಸತಕ್ಕದ್ದು”.
ನಾಲ್ಕನೆಯದು “ಅಚ್ಯುತವಾದುದು, ಶಾಶ್ವತವಾದುದು, ಸನಾತನವಾದುದು ಯಾವುದೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕಾಲ ಈಗ ಸನ್ನಿಹಿತವಾಗಿದೆ. ಹಿಂದೂಗಳು ಈ ಬಗ್ಗೆ ಯೋಚಿಸಬೇಕು”. ಎಲ್ಲವೂ ಪರಿವರ್ತನೆಯಾಗುತ್ತಲೇ ಇರುತ್ತದೆ. ವ್ಯಕ್ತಿಗಳಿಗೆ ಹೇಗೋ ಸಮಾಜಕ್ಕೂ ಹಾಗೆಯೇ. ಪರಿವರ್ತನೆ ಎಂಬುದು ಜಗದ ನಿಯಮ. ಬದಲಾಗುತ್ತಿರುವ ಸಮಾಜದಲ್ಲಿ ಹಳೆಯ ಮೌಲ್ಯಗಳು ವ್ಯತ್ಯಾಸಗೊಳ್ಳುತ್ತವೆ. ಮನುಷ್ಯರ ಕೃತ್ಯಗಳನ್ನು ಬೆಲೆ ಕಟ್ಟುವುದಷ್ಟಕ್ಕೆ ಮಾನದಂಡಗಳಿರುವುದು. ಪುನರ್‍ವಿಮರ್ಶೆಗೆ ಒಳಪಡಿಸಲೂ ಕೂಡ ನಾವು ಸಿದ್ಧರಾಗಿರಬೇಕು”. ಹೀಗೆ ಹೇಳುತ್ತಾ ಅಂಬೇಡ್ಕರರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮುಕ್ತಾಯಗೊಳಿಸಿರುತ್ತಾರೆ. ಅಂದಹಾಗೆ ಹಾಗೆ ಮುಕ್ತಾಯಗೊಳಿಸುವಾಗ ಅವರು “ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು” ಎಂಬ ಸಲಹೆಯನ್ನ ನೀಡುವುದನ್ನು ಮರೆಯುವುದಿಲ್ಲ. ಒಂದಂತು ನಿಜ ಜಾತಿಪದ್ಧತಿ ಹೇಗೆ ನಿರ್ಮೂಲನೆಗೊಳ್ಳಬೇಕು ಎಂದು ಕೊಳ್ಳುವವರಿಗೆ ಅಥವಾ ಆ ನಿಟ್ಟಿನಲಿ ಚಿಂತಿಸುವವರಿಗೆ ಅಂಬೇಡ್ಕರರು ಅಂದು ನೀಡಿರುವ ಆ ಪರಿಹಾರ ಮಾರ್ಗ ಮಹತ್ತರವಾಗಿ ಕಾಣುತ್ತದೆ. ದುರಂತವೆಂದರೆ ಅಂಬೇಡ್ಕರರು ಹೀಗೆ ಜಾತಿಪದ್ಧತಿ ನಿರ್ಮೂಲನೆ ಗೊಳಿಸಬೇಕೆಂದು ಸಲಹೆ ನೀಡುತ್ತಿದ್ದರೆ ಆ ಕಾಲದಲ್ಲಿ ಮಹಾತ್ಮರೆಂದು ಗುರುತಿಸಿಕೊಂಡಿದ್ದ ಗಾಂಧೀಜಿಯವರೇನು ಮಾಡಬೇಕಿತ್ತು? ಬೆಂಬಲಿಸಬೇಕಿತ್ತು ಅಥವಾ ಸುಮ್ಮನೆ ಇರಬೇಕಿತ್ತು ತಾನೆ?
ಊಹ್ಞೂಂ, ಬದಲಿಗೆ ವಿರೋಧೀಸಿ ‘ಹರಿಜನ’ ಎಂಬ ತಮ್ಮ ಅಂದಿನ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು!
ಗಾಂಧೀಜಿಯವರ ಲೇಖನದ ಆಯ್ದ ಭಾಗಗಳು ಇಂತಿವೆ. “ಡಾ.ಅಂಬೇಡ್ಕರ್‍ರವರು ಹಿಂದೂ ಧರ್ಮಕ್ಕೆ ಒಂದು ಆಹ್ವಾನವಾಗಿದ್ದಾರೆ(ಚಾಲೆಂಜ್ ಆಗಿದ್ದಾರೆ!). ಹಿಂದೂ ಎಂದು ಘೋಷಿತರಾಗಿ, ಹಿಂದೂ ಪ್ರಭುವೊಬ್ಬನ(ಸಯ್ಯಾಜಿರಾವ್ ಗಾಯಕವಾಡ್) ನೆರವಿನಿಂದ ಶಿಕ್ಷಣ ಪಡೆದ ಈ ವ್ಯಕ್ತಿ ಸವರ್ಣ ಹಿಂದೂಗಳ ಬಗೆಗೆ ಅದೆಷ್ಟು ಅಸಹ್ಯ ಪಟ್ಟುಕೊಂಡಿದ್ದಾರೆಂದರೆ ಈಗ ಆತನು ಅವರನ್ನು ಮಾತ್ರವಲ್ಲದೆ ಅವರಿಗೂ ತನಗೂ ಸಮಾನವಾಗಿದ್ದ ಧರ್ಮವನ್ನೂ ಕೂಡ ತ್ಯಜಿಸಲು ನೀರ್ಧರಿಸಿದ್ದಾನೆ.(1935 ಅಕ್ಟೋಬರ್ 23 ರಂದು ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ ಅಂಬೇಡ್ಕರರು ‘ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ನಾನು ಹಿಂದೂವಾಗಿ ಖಂಡಿತ ಸಾಯಲಾರೆ’ ಎಂದು ಹೇಳಿರುವುದನ್ನು, ಹಾಗೆ ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದನ್ನು ಓದುಗರು ಗಮನಿಸಬಹುದು) ಆತನನ್ನು ಮತ್ತು ಆತನ ಜನರನ್ನು ಸವರ್ಣ ಹಿಂದೂಗಳು ನೆಡೆಸಿಕೊಂಡ ರೀತಿ ಅದಕ್ಕೆ ಕಾರಣ. ಧರ್ಮದ ಕೆಲವು ಪ್ರತಿಪಾದಕರ ಬಗ್ಗೆ ಉಂಟಾದ ಗೊಂದಲಗಳನ್ನು ಆತ ಆ ಧರ್ಮಕ್ಕೂ ಅನ್ವಯಿಸಿದ್ದಾನೆ”.
ಗಾಂಧಿಯವರು ಅಂಬೇಡ್ಕರರ ಬಗ್ಗೆ ಹೇಳಿದ್ದಿಷ್ಟು. ಅಂದಹಾಗೆ ಅವರ ಹೇಳಿಕೆಯಲ್ಲಿ ಒಂದು ಅಸೂಯೆಯ ಮಾತನ್ನು ಗಮನಿಸಬೇಕು! ಅದೇನೆಂದರೆ “ಹಿಂದೂ ಪ್ರಭುವೊಬ್ಬನ ನೆರವಿನಿಂದ ಶಿಕ್ಷಣ ಪಡೆದ ಈ ವ್ಯಕ್ತಿ” ಎಂಬ ಹೇಳಿಕೆ. ಈ ನಿಟ್ಟಿನಲಿ ಕೇಳುವುದೇನೆಂದರೆ ‘ಅಂಬೇಡ್ಕರ್ ಹಿಂದೂ, ಆದ್ದರಿಂದ ಅವರಿಗೆ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್‍ರು ನೆರವು ನೀಡಿದರೆ? ಅಥವಾ ಮಹಾರಾಜರೂ ಹಿಂದೂ, ನಾನು ಕೂಡ ಒಬ್ಬ ಹಿಂದೂ, ಆ ಕಾರಣದಿಂದ ಅವರಿಂದ ಶಿಕ್ಷಣಕ್ಕೆ ನೆರವು ಪಡೆದುಕೊಳ್ಳುತ್ತಿದ್ದೇನೆ’ ಎಂದು ಅಂಬೇಡ್ಕರ್ ನೆರವು ಪಡೆದುಕೊಂಡರೆ? ಗಾಂಧೀಜಿಯವರ ಹೇಳೀಕೆಯಲ್ಲಿನ ಅಸೂಯೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು!
ಮುಂದುವರಿದು ಗಾಂಧೀಜಿಯವರು “ತನ್ನ ಜೀವನಕ್ಕಿಂತಲೂ ಹೆಚ್ಚಾಗಿ ಧರ್ಮವನ್ನು ಪ್ರೀತಿಸುವ ಯಾವ ಹಿಂದೂವಾದರೂ ಅಂಬೇಡ್ಕರರ ಆ ದೋಷಾರೋಪಣೆಯನ್ನು ಒಪ್ಪಿಕೊಳ್ಳಲಾರನು. ಹಿಂದೂ ಧರ್ಮದ ಬಗ್ಗೆ ಈ ಬಗೆಯ ಜಿಗುಪ್ಸೆ ಹೊಂದಿರುವವರು ಅಂಬೇಡ್ಕರ್ ಅವರೊಬ್ಬರೇ ಅಲ್ಲ. ಇನ್ನು ಅನೇಕರಿದ್ದಾರೆ. ಆದರೆ ಅಂತಹ ಜನರಲ್ಲಿ ಅತ್ಯಂತ ಹಟಮಾರಿ ವ್ಯಕ್ತಿ ಅಂಬೇಡ್ಕರ್‍ರವರು. ರಾಜಿ ಮಾಡಿಕೊಳ್ಳಲು ದುಸ್ಸಾಧ್ಯವಾದ ವ್ಯಕ್ತಿ. ಆ ಮುಂದಾಳುಗಳ ಮಂಚೂಣಿಯಲ್ಲಿರುವವರು ಇವರೊಬ್ಬರೆ. ಅಂಬೇಡ್ಕರರು ಅಂತಹ ಮಂಚೂಣಿಯಲ್ಲಿದ್ದರೂ ಅವರು ಅತ್ಯಂತ ಚಿಕ್ಕದಾದ ಒಂದು ಅಲ್ಪಸಂಖ್ಯಾಂತ ವರ್ಗ(ದಲಿತ)ದ ಪ್ರತಿನಿಧಿಯಾಗಿದ್ದಾರೆ”(ಹರಿಜನ, 13 ಜುಲೈ 1936).
ಗಾಂಧೀಜಿಯವರ ಮಾತುಗಳಲ್ಲಿ ಅಂಬೇಡ್ಕರರ ಬಗೆಗಿನ ಅವರ ‘ಭಾವನೆ’ಯನ್ನು ಮತ್ತು ಅಂಬೇಡ್ಕರರ ಕ್ರಿಯೆಗೆ ವಿರುದ್ಧವಾಗಿನ ಅವರ ತಂತ್ರವನ್ನು ಗಮನಿಸಬಹುದು. ತಂತ್ರವೇನೆಂದರೆ ಅಂಬೇಡ್ಕರರ ಸಮುದಾಯವನ್ನು ಒಂದು ಚಿಕ್ಕ ಸಮುದಾಯವೆನ್ನುವ ಮೂಲಕ ಅವರ ಹೇಳಿಕೆಯ ಮೌಲ್ಯವನ್ನು ಕುಗ್ಗಿಸುವುದು! ಅಂದಹಾಗೆ ಗಾಂಧಿಯವರು ಅಂಬೇಡ್ಕರರಲ್ಲಿ ಒಂದು ಸತ್ಯವನ್ನು ಗುರುತಿಸಿದ್ದಾರೆ. ಅದೇನೆಂದರೆ ಅದು “ಹಟಮಾರಿ ಧೋರಣೆ”. ಖಂಡಿತ, ಅಂತಹ ಹಟಮಾರಿ ಧೋರಣೆಯ ಕಾರಣಕ್ಕೆ ಅಂಬೇಡ್ಕರರು 20 ವರ್ಷಗಳ ಹಿಂದೆ ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ 1956ರಲ್ಲಿ ಹಿಂದೂ ಧರ್ಮ ತ್ಯಜಿಸಿ ಬೌದ್ಧಧರ್ಮ ಸ್ವೀಕರಿಸಿದ್ದು. ದುಖಃದ ವಿಷಯವೆಂದರೆ ಅಂಬೇಡ್ಕರರ ಈ ‘ಹಟಮಾರಿ, ಕ್ರಾಂತಿ ಕಾರಿ’ ಹೆಜ್ಜೆನೋಡಲು 1956ರಲ್ಲಿ ಗಾಂಧೀಜಿಯವರು ಬದುಕಿರಲಿಲ್ಲ.
ಮುಂದುವರಿದು ಗಾಂಧೀಜಿಯವರು “ಜಾತಿ ಪದ್ಧತಿಗೂ ಧರ್ಮಕ್ಕೂ ಸಂಬಧವೇ ಇಲ್ಲ. ಅದೊಂದು ರೂಡಿ,ü ಸಂಪ್ರದಾಯ ಅಷ್ಟೆ. ಹಾಗೆ ವರ್ಣ ಮತ್ತು ಆಶ್ರಮಗಳೂ ಜಾತಿಗೆ ಸಂಬಧಪಟ್ಟಿಲ್ಲ. ನಮ್ಮ ನಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸಿ ನಾವು ಪ್ರತಿಯೊಬ್ಬರು ಉಪಜೀವನ ನಡೆಸಬೇಕು ಎಂಬುದನ್ನು ವರ್ಣವ್ಯವಸ್ಥೆ ತಿಳಿಸುತ್ತದೆ. ವರ್ಣವ್ಯವಸ್ಥೆ ನಮ್ಮ ಕರ್ತವ್ಯಗಳನ್ನು ವ್ಯಾಖ್ಯೆ ಮಾಡಿ ತಿಳಿಸುತ್ತದೆಯೋ ಹೊರತು ಹಕ್ಕುಗಳನ್ನಲ್ಲ. ಮಾನವ ಕೋಟಿಯ ಕಲ್ಯಾಣಕ್ಕೆ ಅನುಕೂಲವಾದ ವೃತ್ತಿಯನ್ನೆ ಅದು ಹೇಳುತ್ತದೆ ಹೊರತು ಬೇರೆ ವೃತ್ತಿಯನ್ನಲ್ಲ. ವೃತ್ತಿಗಳಲ್ಲಿ ಉಚ್ಚ, ನೀಚ ಎಂಬ ಭೇದವಿಲ್ಲ. ಎಲ್ಲಾ ವೃತ್ತಿಗಳೂ ಒಳ್ಳೆಯವು, ನ್ಯಾಯಸಮ್ಮತವಾದವು ಮತ್ತು ಸ್ಥಾನಮಾನ ದೃಷ್ಟಿಯಿಂದ ಸಂಪೂರ್ಣ ಸಮಾನವಾದವು. ಬ್ರಾಹ್ಮಣನ ವೃತ್ತಿ ಮತ್ತು ಹಲಾಲುಕೋರನ ವೃತ್ತಿ ಎರಡೂ ಸಮಾನವಾದುವು. ಸಮರ್ಪಕವಾಗಿ ನೆರವೇರಿಸಿದಾಗ ದೇವರ ದೃಷ್ಟಿಯಿಂದ ಇವೆರಡೂ ವೃತ್ತಿಗಳಿಂದ ಬರತಕ್ಕ ಪುಣ್ಯವೂ ಸರಿಸಮಾನ!”
ಆಶ್ಚರ್ಯ! ಯಾವ ಶೃತಿ-ಸ್ಮøತಿ (ಮನುಸ್ಮøತಿ) ಆಧಾರಿತ ಧರ್ಮವನ್ನು ನಾಶಮಾಡಬೇಕೆಂದು ಅಂಬೇಡ್ಕರರು ಕರೆಕೊಡುತ್ತಾರೋ ಗಾಂಧೀಜಿ ಅದೇ ಮನುಸ್ಮøತಿ ಆಧರಿತ ವರ್ಣಾಶ್ರಮವನ್ನು ದೇವರ ದೃಷ್ಟಿಯಲ್ಲಿ ಸಮರ್ಥಿಸುತ್ತಾರೆ! ಅಂದಹಾಗೆ ಈ ಸಂದರ್ಭದಲ್ಲಿ ಗಾಂಧೀಜಿಯವರಿಂದ ಅವರ ಸ್ವಾತಂತ್ರ್ಯ ಹೋರಾಟವೆಂಬ ಇತಿಹಾಸವನ್ನು ಮೈನಸ್ ಮಾಡಿ ನೋಡಿದ್ದೇ ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರು ನಮ್ಮ ಉಡುಪಿಯ ಪೇಜಾವರ ಶ್ರೀಗಳ ಥರ ಕಂಡರೆ ಅತಿಶಯೋಕ್ತಿಯೇನಿಲ್ಲ!.
ಗಾಂಧಿಯವರಿಂದ ವರ್ಣಾಶ್ರಮಧರ್ಮ ಪದ್ದತಿಯನ್ನು ಸಮರ್ಥಿಸುವ ಇನ್ನಷ್ಟು ಸಮರ್ಥನೆಗಳನ್ನು ನೋಡಿ, “ಚೈತ್ಯ, ಜ್ಞಾನದೇವ, ತುಕಾರಾಮ್, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ, ರಾಜರಾಮ್ ಮೋಹನ್ ರಾಯ್, ಮಹರ್ಷಿ ದೇವೇಂದ್ರನಾಥ್ ಠಾಕೂರ್, ವಿವೇಕಾನಂದ ಮತ್ತು ಇನ್ನು ಅನೇಕಾನೇಕರು ಒಪ್ಪಿಕೊಂಡ ಧರ್ಮವು ಡಾ.ಅಂಬೇಡ್ಕರರು ಹೇಳುವಷ್ಟು ಗುಣಹೀನವಾಗಿದೆಯೇ? ಧರ್ಮದ ಬೆಲೆ ಕಟ್ಟುವುದು ಅದರ ಕನಿಷ್ಠ ಮಾದರಿಗಳಿಂದ ಅಲ್ಲ. ಆ ಧರ್ಮದಲ್ಲಿ ಉದಿಸಿದ ಅತ್ಯುತ್ತಮ ಮಾದರಿಗಳ ಮೂಲಕ. ಏಕೆಂದರೆ ಇಟ್ಟುಕೊಳ್ಳಬೇಕಾದ ಆದರ್ಶವೆಂದರೆ ಅದೊಂದೆ”(ಹರಿಜನ 18 ಜುಕಲೈ 1936). (ನೋಡಿ! ಹಿಂದೂ ಧರ್ಮವನ್ನು ಗಾಂಧೀಜಿಯವರು ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು!)
ಅಂದಹಾಗೆ ಗಾಂಧಿಯವರ ಈ ಲೇಖನಗಳಿಗೆ ಪ್ರತಿಯಾಗಿ ಲಾಹೋರ್‍ನ ಅದೇ “ಜಾತ್‍ಪತ್‍ತೋಡಕ್ ಮಂಡಲ್”ನ ಅಧ್ಯಕ್ಷರಾದ ಸಂತರಾಮ್‍ರವರು ಗಾಂಧೀಜಿಯವರ ಅದೇ ‘ಹರಿಜನ’ ಪತ್ರಿಕೆಗೆ ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಸಂತರಾಮ್‍ರವರು “ಅಸ್ಪøಶ್ಯವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ಡಾ.ಅಂಬೇಡ್ಕರ್ ಅವರಿಗೆ ಅಧ್ಯಕ್ಷರಾಗಲು ನಾವು ಆಹ್ವಾನಿಸಲಿಲ್ಲ. ನಾವು ಹಿಂದೂಗಳಲ್ಲಿ ಸ್ಪøಶ್ಯ ಅಸ್ಪøಶ್ಯ ಭೇದ ಪರಿಗಣಿಸುವುದಿಲ್ಲ. ಅಸ್ಪøಶ್ಯತೆ ಹಿಂದೂ ಧರ್ಮಕ್ಕೆ ಬಡಿದುಕೊಂಡ ಮಾನಸಿಕ ರೋಗವೆಂದು ನಿರ್ಧರಿಸಿರುವ ನಮ್ಮ ಅಭಿಪ್ರಾಯವು ಅಂಬೇಡ್ಕರರದ್ದೂ ಆದ್ದರಿಂದ ಹಾಗೂ ಹಿಂದೂಗಳ ಅವನತಿಗೆ ಜಾತಿಪದ್ಧತಿಯೇ ಕಾರಣವೆಂದು ಅಂಬೇಡ್ಕರರು ಅಭಿಪ್ರಾಯಪಟ್ಟಿದ್ದರಿಂದ ನಾವು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ತಮ್ಮ ಡಾಕ್ಟರೇಟ್ ಪ್ರಬಂಧಕ್ಕೂ ಜಾತಿಪದ್ಧತಿಯನ್ನು ಅಂಬೇಡ್ಕರರು ವಿಷಯವಾಗಿ ಆಯ್ಕೆ ಮಾಡಿಕೊಂಡವರು. ಆದ್ದರಿಂದ ಅವರು ಆ ವಿಷಯವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದಾರೆ. ಆದರೆ ಅಂಬೇಡ್ಕರರು ‘ಹಿಂದೂವಾಗಿ ಇದು ನಾನು ಮಾಡುವ ಅಂತಿಮ ಭಾಷಣ’ವೆಂದು ಘೋಷಿಸಿದರು. ಆ ಕಾರಣದಿಂದ ಸಮ್ಮೇಳನ ರದ್ದುಮಾಡಿದೆವು. ಹೀಗಿದ್ದರೂ ಅಂಬೇಡ್ಕರರ ಉಪನ್ಯಾಸವನ್ನು ನಾನು ಹೊಗಳದೆ ಇರಲಾರೆ. ನನಗೆ ತಿಳಿದ ಮಟ್ಟಿಗೆ ಅವರ ಉಪನ್ಯಾಸವು ಆ ವಿಷಯವಾಗಿ ಅತ್ಯಂತ ಪಾಂಡಿತ್ಯಪೂರ್ಣವಾದುದು. ಭಾರತದ ಪ್ರತಿಯೊಂದು ಭಾಷೆಯಲ್ಲಿಯೂ ಅದು ಅನುವಾದ ಯೋಗ್ಯವಾಗಿದೆ”.
ಇಷ್ಟು ಸಾಕು, ಅಂಬೇಡ್ಕರರ ಜ್ಞಾನದ ಹೊಳಹಿನ ಬೆಳಕು ತಿಳಿಸಲು. ಸಂತರಾಮರು ಗಾಂಧಿಜಿಯವರಿಗೆ ಅದನ್ನು ಸರಿಯಾಗಿಯೇ ತಲುಪಿಸಿದ್ದಾರೆ! ಸಂತರಾಮರ ಈ ಪತ್ರಕ್ಕೆ ಗಾಂಧೀಜಿಯವರ ಪ್ರತಿಕ್ರಿಯೆಯು ಏನು ಗೊತ್ತೆ? “ಮಂಡಲ(ಜಾತ್‍ಪತ್‍ತೋಡಕ್ ಮಂಡಲ್)ದ ಪ್ರತಿನಿಧಿಯಾಗಿ ಮಾತನಾಡುವ ಸಂತರಾಮ್‍ರವರು ಡಾ.ಅಂಬೇಡ್ಕರರ ಮತ್ತು ಅವರ ಉಪನ್ಯಾಸವನ್ನು ಮೆಚ್ಚಿ ಹೊಗಳುತ್ತಿರುವುದರಿಂದ ಅವರ(ಸಂತರಾಮ್‍ರ) ನಿಲುವು ಅಸಮರ್ಥನೀಯ”! ಗಮನಿಸಿ ಅಂಬೇಡ್ಕರರ ಬಗ್ಗೆ ಗಾಂಧೀಜಿಯವರಿಗಿದ್ದ ಅಸಹನೆಯನ್ನು! ಸಂತರಾಮ್‍ರು ಅಂಬೇಡ್ಕರರನ್ನು ಹೊಗಳಿದ್ದೂ ಕೂಡ ಗಾಂಧೀಜಿಯವರಿಗೆ ಉರಿ ತರಿಸಿದೆ. ಅಂದಹಾಗೆ ಸಂತರಾಮ್‍ರು ಮುಂದುವರಿದು “ವರ್ಣವ್ಯವಸ್ಥೆ ನಿರ್ಮೂಲನೆಗೊಳಿಸದೆ ಅಸ್ಪøಶ್ಯತೆ ನಿರ್ಮೂಲನೆಗೆ ಪ್ರಯತ್ನಿಸುವುದೆಂದರೆ ರೋಗದ ಬಾಹ್ಯ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಿದಂತೆ. ಅಸ್ಪøಶ್ಯರಿಗೆ, ಶೂದ್ರರಿಗೆ ಸಮನಾದ ಸಾಮಾಜಿಕ ಸ್ಥಾನಮಾನ ನೀಡುವುದನ್ನು ಬ್ರಾಹ್ಮಣರು ಇಷ್ಟಪಡುವುದಿಲ್ಲ. ಆದ್ದರಿಂದ ಅಸ್ಪøಶ್ಯತೆಯ ನಿವಾರಣೆಗೆ ಧರ್ಮಶಾಸ್ತ್ರಗಳ ಸಹಾಯ ಪಡೆಯುವುದೆಂದರೆ ಕೆಸರಿನ ಕೊಳೆಯನ್ನು ಕೆಸರಿನಿಂದಲೇ ತೊಳೆದಂತೆ”! ಇದಕ್ಕೆ ಗಾಂಧೀಜಿಯವರು ಹೇಳಿದ್ದೇನು ಗೊತ್ತೆ? “ಕುರಾನನ್ನು ನಿರಾಕರಿಸಿ ಮುಸ್ಲೀಮನೊಬ್ಬ ಮುಸ್ಲೀಮನಾಗಬಲ್ಲನೆ? ಬೈಬಲ್ಲನ್ನು ನಿರಾಕರಿಸಿ ಕ್ರೈಸ್ತನೊಬ್ಬ ಕ್ರೈಸ್ತನಾಗಿ ಉಳಿಯಬಲ್ಲನೆ? ಹಾಗೆಯೇ ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ತಾವು ಹಿಂದೂಗಳೆಂದು ಹೇಗೆ ಕರೆದುಕೊಳ್ಳಬಲ್ಲರು?” ಎಂದು! ಒಟ್ಟಾರೆ ಗಾಂಧೀಜಿಯವರ ಪ್ರಕಾರ ವರ್ಣ ಮತ್ತು ಜಾತಿವ್ಯವಸ್ಥೆ ಬೈಬಲ್ ಮತ್ತು ಕುರಾನ್‍ಗೆ ಸಮ ಅಥವಾ ಪವಿತ್ರ!
ಈ ನಿಟ್ಟಿನಲಿ ಮಹಾತ್ಮ ಗಾಂಧಿಜಿಯವರಿಂದ ಜಾತಿ ಪದ್ಧತಿಯ ಸಮರ್ಥನೆ ಎಂಬ ವಿಷಯದ ಕುರಿತಂತೆ ತಿಳಿಯಲು ಇದಿಷ್ಟು ಮಾತ್ರ ಸಾಕೆನಿಸುತ್ತದೆ!