Saturday, 24 October 2015

ಒಳ್ಳೆಯ ದಿನಗಳೆಂದರೆ ದಲಿತ ಶಿಶುಗಳ ಹತ್ಯೆಯ ದಿನಗಳೇ?

-ರಘೋತ್ತಮ ಹೊ.ಬ

    ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಘಟನೆಗಳನ್ನು ಆಕಸ್ಮಿಕ ಎನ್ನಲು ಸಾಧ್ಯವಿಲ್ಲ. ದನದ ಮಾಂಸ ಇಟ್ಟುಕೊಂಡಿದ್ದಾರೆ ಎಂಬ ಗುಮಾನಿಯ ಕಾರಣಕ್ಕೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯಲ್ಲಿನ ದಾದ್ರಿ ಗ್ರಾಮದ ಮಹಮ್ಮದ್ ಇಖ್ಲಾಕರ ಹತ್ಯೆ, ಅದೇ ಮಾದರಿಯಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಹರ್ಯಾಣದಲ್ಲಿ ನೂಮಾನ್ ಎಂಬುವವರ ಹತ್ಯೆ, ಇನ್ನು ಬೀಫ್ ಪಾರ್ಟಿ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಪಕ್ಷೇತರ ಶಾಸಕ ಶೇಖ್ ಅಬ್ದುಲ್ ರಷೀದ್ ಮೇಲೆ ಹಲ್ಲೆ, ದೇವಸ್ಥಾನ ಪ್ರವೇಶಿಸಿದನು ಎಂಬ ಕಾರಣಕ್ಕೆ ದಲಿತನೋರ್ವನ ಸಜೀವ ದಹನ, ಪಾಕಿಸ್ತಾನಿ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿಯವರ ಪುಸ್ತಕ ಬಿಡುಗಡೆಯ ವೇಳೆ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿದ ಪ್ರಕರಣ, ಪಾಕ್ ಗಾಯಕ ಗುಲಾಂ ಆಲಿ ಸಂಗೀತ ಕಚೇರಿಗೆ ವಿರೋಧ, ಪಾಕ್ ಜತೆ ಕ್ರಿಕೆಟ್ ಸಂಬಂಧಕ್ಕೆ ಮಸಿ, ಬಹಿರಂಗಗೊಂಡ ಮೋಹನ್ ಭಾಗವತರ ಮೀಸಲಾತಿ ವಿರೋಧಿ ಧೋರಣೆ ಮತ್ತು ಈಗಿನ ಹರ್ಯಾಣದಲ್ಲಿನ ದಲಿತ ಶಿಶುಗಳ ಸಜೀವ ದಹನ ಪ್ರಕರಣ...
  
      ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೇಳುತ್ತಾ ಹೋದರೆ ಮನಸ್ಸು ಎಲ್ಲಿ ಮುರುಟಿಹೋಗುತ್ತದೆಯೋ ಎಂಬ ಆತಂಕ ಅಥವಾ ಈ ಎಲ್ಲ ಘಟನೆಗಳ ಪಟ್ಟಿ ನೋಡಿ ಸಾವಿನ ವ್ಯಾಪಾರಿ ವಂಶಸ್ಥರು ತಮ್ಮ ಉಪಟಳ ಇನ್ನಷ್ಟು ಹೆಚ್ಚುಮಾಡುವರು ಎಂಬ ಭಯ. ಖಂಡಿತ, ದೇಶ ಇಂದು ಅಸಹಿಷ್ಣುತೆಯಿಂದ ಬೇಯುತ್ತಿದೆ. ಅಸಹನೆ ತಾಂಡವವಾಡುತ್ತಿದೆ. ಮುಖ್ಯವಾಗಿ ಅದರ ಬಲಿಪಶುಗಳು ಮುಸ್ಲೀಮರು ಮತ್ತು ದಲಿತರು ಎಂಬುದಿಲ್ಲಿ ಗಮನಿಸಬೇಕಾದ ಅಂಶ. ನಿಜ, ಕಳೆದ 10 ವರ್ಷಗಳ ಹಿಂದೆ ಗುಜರಾತಿನ ಗೋಧ್ರಾದಲ್ಲಿ ಟ್ರೈನೊಂದು ಹೊತ್ತಿ ಉರಿದು ಕರಸೇವಕರು ಬಲಿಯಾದಾಗ, ಪ್ರತಿಹಿಂಸೆಯಾಗಿ ಸಹಸ್ರಾರು ಮುಸ್ಲೀಮರ ಹತ್ಯೆ ನಡೆದಾಗ, ನಕಲಿ ಎನ್‍ಕೌಂಟರ್ ಮೂಲಕ ಸೋಹ್ರಾಬುದ್ದೀನ್ ಶೇಖ್ ಹತ್ಯೆಯಾದಾಗ, ಅಲ್ಲಿಯ ಆಗಿನ ಗೃಹ ಸಚಿವ ಅಮಿತ್‍ಶಾ (ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಜೈಲುಪಾಲಾದಾಗ ದೇಶದ ಜನತೆಗೆ ಅವ್ಯಾವುದೂ ಮುಖ್ಯ ಸುದ್ದಿ ಎನಿಸಲೇ ಇಲ್ಲ. ಕಾರಣ ಗುಜರಾತ್ ಲಾಗಾಯ್ತಿನಿಂದಲೂ ಅದು ಅಸಹನೆ, ಅಸಮಾನತೆ ಪ್ರತಿಪಾದಿಸುವ ನಾಡು, 80ರ ದಶಕದಲ್ಲಿ ಅಲ್ಲಿ ನಡೆದಿರುವ ವಿಚ್ಛಿದ್ರಕಾರಿ ಮೀಸಲಾತಿ ವಿರೋಧಿ ಗಲಭೆ, ದಲಿತರ ನರಮೇಧ, ಅದರ ಗೋಧ್ರಾ ಸಂಬಂಧಿ ಘಟನೆಗಳನ್ನು ಸಹಜವೆಂಬಂತೆ ಪರಿಗಣಿಸಲು ಪ್ರೇರೇಪಣೆಯಾದದ್ದಂತೂ ನಿಜ. ಆದರೆ ‘ಅದೇ ಮಾದರಿ’ ದೆಹಲಿಯತ್ತ ಅದೂ ‘ಒಳ್ಳೆಯ ದಿನಗಳ’ ಭರವಸೆಯೊಂದಿಗೆ ಪಯಣ ಬೆಳೆಸಿತೆಂದರೆ ಬಹುಶಃ ಆ ‘ಒಳ್ಳೆಯು ದಿನಗಳು’ ಈ ಪರಿ ಕರಾಳ ರೂಪದಲ್ಲಿರುತ್ತದೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಅದು ನಡೆದುಹೋಗಿದೆ. ಕುರುಡು ಕೋಮುವಾದ ಕಾಲಿಗೆ ಬಿದ್ದವರ ‘ಅಪರಾಧಿಗಳೆಂಬಂತೆ’ ತುಳಿಯುತ್ತಾ ಸಾಗಿದೆ.

       ಅಪರಾಧಿಗಳು, ಯಾಕೆಂದರೆ ಉತ್ತರಪ್ರದೇಶದ ದಾದ್ರಿಯ ಬಡ ಮುಸ್ಲಿಂ ಕುಟುಂಬಕ್ಕೆ ತಾನು ಫ್ರಿಜ್‍ನಲ್ಲಿ ಮಾಂಸ ಇಟ್ಟುಕೊಳ್ಳುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಸಜೀವ ದಹನಕ್ಕೊಳಗಾದ ದಲಿತನಿಗೆ ತಾನು ದೇವಸ್ಥಾನ ಪ್ರವೇಶಿಸುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಹಾಗೆಯೇ ಗಾಢ ನಿದ್ರೆಯಲ್ಲಿ ಮಲಗಿದ್ದಾಗ ಬೆಂಕಿ ಹಚ್ಚಿ ಸಾಯಿಸಲ್ಪಟ್ಟ ಹರ್ಯಾಣದ ಫರೀದಾಬಾದ್ ಜಿಲ್ಲೆಯ ಸೋನ್‍ಫೆಡ್ ಗ್ರಾಮದ ಹಸುಕಂದಗಳಾದ ವೈಭವ್ ಮತ್ತು ದಿವ್ಯ ಇಬ್ಬರಿಗೂ ತಾವು ಹುಟ್ಟಿದ್ದು ದಲಿತ ಕುಟುಂಬದಲ್ಲಿ ಮತ್ತು ಅದು ‘ಅಪರಾಧ’ ಎಂಬುವ್ಯಾವುದೂ ಗೊತ್ತಿರಲಿಕ್ಕಿಲ್ಲ. ಒಟ್ಟಾರೆ ಮೋದಿಯ ನಾಡಲ್ಲಿ ಯಾವುದು ಅಪರಾಧ, ಯಾವುದು ನಿರಪರಾಧ ಎಂಬುದಕ್ಕೆ ಹೊಸ ನೀತಿಸಂಹಿತೆಯನ್ನೇ ಹೊರಡಿಸಬೇಕಿದೆ.
ಅಲ್ಲೊಬ್ಬ ಹೇಳುತ್ತಾನೆ ‘ದನ ತಿನ್ನುವ ಮುಸಲ್ಮಾನರು ಪಾಕಿಸ್ಥಾನಕ್ಕೆ ಹೋಗಿ’, ಹಾಗಿದ್ದರೆ ದನ ತಿನ್ನುವ ದಲಿತರೆಲ್ಲಿಗೆ ಹೋಗಬೇಕು? ಅಸಹನೆಯ ಅತಿರೇಕ ಎನ್ನುವುದು ಇದನ್ನೇ. ಅಂದಹಾಗೆ ಈ ಎಲ್ಲ ಘಟನೆಗಳನ್ನು ಬಿಜೆಪಿಯ ಅಧ್ಯಕ್ಷ ಅಮಿತ್‍ಶಾ ಸಂಬಂಧಪಟ್ಟ ರಾಜ್ಯಗಳ ಹೊಣೆಗೆ ಕಟ್ಟಿದ್ದಾರೆ. ಆದರೆ ವಾಸ್ತವ? ಈ ಘಟನೆಗಳೆಲ್ಲದ್ದರ ಹಿಂದಿರುವ ‘ಸಾಮಾನ್ಯ’ ಕೈಗಳು, ಮನಸ್ಸುಗಳು ಮತ್ತು ಚಿಂತನೆಗಳು? ಎಲ್ಲವೂ ಒಂದೇ ಮೂಲದವು. ಸಂಶೋಧಕ ಕಲಬುರ್ಗಿಯವರ ಹತ್ಯೆಯನ್ನು ಇಲ್ಲಿ ಉಲ್ಲೇಖಿಸುವುದಾದರೆ, ಪ್ರಾರಂಭದಲ್ಲಿ ಎಲ್ಲರೂ ಬಲಪಂಥೀಯ ಸಂಘಟನೆಗಳತ್ತ ಬೊಟ್ಟುಮಾಡಿದಾಗ ಆಕ್ಷೇಪ ಎತ್ತಿದ ಪಂಥೀಯರು ‘ಸನಾತನ ಸಂಸ್ಥೆ’ ಎಂದು ಸ್ಪಷ್ಟ ಸುದ್ದಿ ಹೊರಬಿದ್ದಾಗ ಸಂಪೂರ್ಣ ಸ್ತಬ್ಧರಾದರು. ಒಟ್ಟಾರೆ ಒಂದರ ನಂತರ ಮತ್ತೊಂದು ಮರುಕಳೀಸುತ್ತಲೇ ಇವೆ ಪ್ರಕರಣಗಳು ಶಾಂತಿಯ ದಿವ್ಯ ರಾಷ್ಟ್ರಕ್ಕೆ ‘ಮಸಿ ಬಳಿಯಲು’.
    
     ಈ ನಡುವೆ ಮಾತು ಮಾತಿಗೂ ಮನದ ಮಾತು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲ ಅಸಹನೆಯ ಘಟನೆಗಳ ಬಗ್ಗೆ ಸೊಲ್ಲೆತ್ತುತ್ತಲೇ ಇಲ್ಲ. ಅದೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಚಾಟಿ ಬೀಸಿದ ನಂತರ ಪ್ರಧಾನಿ ‘ಹಿಂದೂ-ಮುಸ್ಲಿಂ ಒಗ್ಗಟ್ಟಿನ ಬಗ್ಗೆ’  ಭಾಷಣ ಮಾಡಿದರು! ಇನ್ನು ಬಿಹಾರದ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದಾಕ್ಷಣ ಮೀಸಲಾತಿ ಪರ ನಾವಿದ್ದೇವೆ ಎನ್ನುತ್ತಾ ದೂರದ ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದರು! ವಾಸ್ತವವೆಂದರೆ ಇಡೀ ದೇಶದ ಬದುಕಿಂದು ಅಸ್ತವ್ಯಸ್ತವಾಗಿದೆ. ದಿನಕ್ಕೊಂದು ವಸ್ತುಗಳ ಬೆಲೆ ಏರಿ ಜನ ಯಾತನೆ ಪಡುತ್ತಿದ್ದಾರೆ. ಪ್ರೋಟೀನ್ ಮೂಲವಾದ ದನದ ಮಾಂಸ ತಿನ್ನಲು ತಡೆಯೊಡ್ಡುವ ಆಡಳಿತದ ಮಂದಿ, ಹೋಗಲೀ ಸಸ್ಯಾಹಾರದಲ್ಲಾದರೂ ಪ್ರೋಟೀನ್ ಪಡೆಯೋಣವೆಂದರೆ ಪ್ರೋಟೀನ್ ಮೂಲದ ಬಹುಮುಖ್ಯ ಕಾಳು ತೊಗರಿ ಬೇಳೆಯ ಬೆಲೆ ಗಗನಕ್ಕೇರಿದೆ! ಹಾಗೆಯೇ ಕಪ್ಪುಹಣ ತಂದು ಮೋದಿ ಲಕ್ಷ ಕೊಡುವರೆಂದು ಕಾದಿದ್ದ ಮಂದಿ ಲಕ್ಷವಿರಲಿ ದಿನನಿತ್ಯದ ಜೀವನಕ್ಕೂ ಪರದಾಡುವಂತಾಗಿದೆ. ಇನ್ನು ರೈತರ ಆತ್ಮಹತ್ಯೆಯ ಕತೆಯಂತೂ ಹೇಳತೀರದು. ಈ ನಡುವೆ ಯದ್ವಾ ತದ್ವಾ ಏರುವ ಪೆಟ್ರೋಲ್, ಡೀಸೆಲ್ ಬೆಲೆಗಳು? ಹದಗೆಟ್ಟಿರುವ ಶಾಂತಿ-ಸುವ್ಯವಸ್ಥೆ? ಯಾಕೆಂದರೆ ಪೊಲೀಸ್ ವ್ಯವಸ್ಥೆ ಕೇಂದ್ರದ ನೇರ ನಿಯಂತ್ರಣದಲ್ಲಿರುವ ರಾಜದಾನಿ ದೆಹಲಿಯಲ್ಲಿ ಮಕ್ಕಳ ಮೇಲೆ ಸರಣಿ ಅತ್ಯಾಚಾರ ನಡೆಯುತ್ತಿದೆ. ಇನ್ನು ಮಧ್ಯಪ್ರದೇಶ ವೃತ್ತಿಪರ ಕೋರ್ಸುಗಳ ಪರೀಕ್ಷಾ(ವ್ಯಾಪಂ) ಹಗರಣ? ಈಗಾಗಲೇ ಘಟನೆ ಸಂಬಂಧ 40 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದರೆ ಹಗರಣದ ಗಂಭೀರತೆ ಏನೆಂಬುದು ಎಂಥವರಿಗೂ ಅರ್ಥವಾಗುತ್ತದೆ. ಅಂದಹಾಗೆ ಮಧ್ಯಪ್ರದೇಶ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿರುವ ಪ್ರಮುಖ ರಾಜ್ಯ ಎಂಬುದಿಲ್ಲಿ ಗಮನಾರ್ಹ.
   
     ದೇಶವಿಂದು ದಿಕ್ಕೆಟ್ಟು ನಿಂತಿದೆ. ‘ಒಳ್ಳೆಯ ದಿನಗಳು’ ಬಾರದಿದ್ದರೂ ಪರವಾಗಿಲ್ಲ ‘ಕೆಟ್ಟದಿನಗಳೇಕೆ?’ ಎಂದು ತನ್ನನ್ನು ತಾನು ಪ್ರಶ್ನಿಸುವಂತಾಗಿದೆ. ಗುಜರಾತ್ ಮಾದರಿ ಇದೇನಾ ಎಂದು ದೇಶದ ಜನ ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಹ್ಞಾಂ, ಗುಜರಾತ್ ಮಾದರಿ ಅದೆಷ್ಟು ಮೇರೆ ಮೀರಿದ್ದೆಂದರೆ, ಸಂವಿಧಾನ ವಿರೋದಿ ಎಂದರೆ ಹಾರ್ದಿಕ್ ಪಟೇಲ್ ಎಂಬ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ತನ್ನ ಸಮುದಾಯದ ಹೋರಾಟಗಾರರಿಗೆ ಕರೆಕೊಡುವುದೇನೆಂದರೆ “ರಾಜ್ಯ ಪೊಲೀಸರನ್ನೇ ಹತ್ಯೆ ಮಾಡಿ” ಎಂದು! ಈ ಹಿನ್ನೆಲೆಯಲ್ಲಿ ಈಗೀಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ ‘ಒಳ್ಳೆಯ ದಿನಗಳು’ ದೌರ್ಜನ್ಯಕೋರರಿಗೆ, ದಬ್ಬಾಳಿಕೆ ಮಾಡುವವರಿಗೆ, ಅಸಮಾನತೆ ಎಸಗುವವರಿಗೆ, ಸಹಿಷ್ಣುತೆ ಸಹಿಸದವರಿಗೆ. ‘ಕೆಟ್ಟ ದಿನಗಳು’ ದೌರ್ಜನ್ಯದಿಂದ ನೊಂದವರಿಗೆ, ದಬ್ಬಾಳಿಕೆ ಅನುಭವಿಸುತ್ತಿರುವವರಿಗೆ, ಸಮಾನತೆ ಬೇಡುವವರಿಗೆ, ಸಹಿಷ್ಣುತೆ ಬೇಕೆನ್ನುವವರಿಗೆ. ಇದರ ನಿಜದ ಅರ್ಥ ತಾರತಮ್ಯದ ಆಡಳಿತ. ಸದ್ಯ ದೇಶವಿಂದು ಅಂತಹ ತಾರತಮ್ಯದ ಕಪಿಮುಷ್ಟಿಯಲ್ಲಿದೆಯಲ್ಲ ಎಂಬುದೇ ದುರಂತ.

Thursday, 14 May 2015

  ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ

  ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ ಸಪಿಂಡ ವಿವಾಹ. ಅಂತಹ ವಿವಾಹ ಜಾತಿಯ ಉಗಮಕ್ಕೆ ಬೀಜ ಬಿತ್ತಿತು. ಆದರೆ ಅದರ ನಿರ್ಮೂಲನೆ? ಹಾಗೆ ಸೃಷ್ಟಿಯಾದ ಜಾತಿಗಳ ನಡುವೆ ವಿವಾಹದ ಮೂಲಕ ಸಾಧ್ಯವೆ? ಖಂಡಿತ ಸಾಧ್ಯವಿಲ್ಲ. ಆದರೆ ತಳ ಜಾತಿಗಳು ಆರ್ಥಿಕವಾಗಿ ಮೇಲೆ ಬಂದರೆ ಮತ್ತು ಹಾಗೆ ಮೇಲೆ ಬಂದು ಮೇಲ್ಮಟ್ಟದಲ್ಲಿ ಹಾಗೆಯೇ ಉಳಿದರೆ ಜಾತಿ ಭೀತಿ ಕಡಿಮೆಯಾಗುತ್ತದೆ. ಜಾತಿ ಭೀತಿ ಕಡಿಮೆಯಾಯಿತೆಂದರೆ ಜಾತಿ ನಿರ್ಮೂಲನೆಯಾಯಿತೆಂದೇ ಅರ್ಥ. ಮತ್ತು ಆ ಕಾರಣಕ್ಕಾಗಿ ಅಂದರೆ ತಳ ಸಮೂಹಗಳ ಆರ್ಥಿಕ ಸಮತೆಯ ಕಾರಣಕ್ಕಾಗಿ ಮೀಸಲಾತಿಗಿಂತ ವಿವಿಧ ಉದ್ಯೋಗಗಳ ಎಲ್ಲ ಕ್ಷೇತ್ರಗಳೂ ನೊಂದ ತಳ ಸಮುದಾಯಗಳಿಗೆ ತೆರೆಯಬೇಕು. ವ್ಯಾಪಾರ, ವ್ಯವಹಾರ, ಅಂಗಡಿ, ಮುಂಗಟ್ಟು, ಕಾರ್ಖಾನೆ ಹೀಗೆ ಎಲ್ಲ ಕ್ಷೇತ್ರಗಳಲ್ಲು ತಳ ಸಮುದಾಯಗಳು ತನ್ನ ಅಸ್ತಿತ್ವ ಸಾಧಿಸುವಂತಾಗಬೇಕು ಮತ್ತು ಅದಕ್ಕೆ ಸರ್ಕಾರಗಳು ಪ್ರೋತ್ಸಾಹಕ ವಾತಾವರಣ ಸೃಷ್ಟಿಸಬೇಕು. ಸರ್ಕಾರಗಳು ಅಂಬಾನಿ, ಅದಾನಿ, ನಾರಾಯಣಮೂರ್ತಿ, ಅಶೋಕ್ ಖೇಣಿ, ವಿಜಯ್ ಮಲ್ಯಗಳಿಗೆ ರಿಯಾಯಿತಿಗಳನ್ನು ನೀಡುವುದಲ್ಲ. ನಿಜವಾದ ರಿಯಾಯಿತಿ, ಎಕರೆಗೆ ಒಂದು ರೂಪಾಯಿಯಂತೆ ಭೂಮಿ ಗುತ್ತಿಗೆ, ಬ್ಯಾಂಕ್‍ಗಳಿಂದ ಭರಪೂರ ಖಾತರಿ ಪಡಿಸಿದ ಸಾಲ ನೀಡಬೇಕಾಗಿರುವುದು ತಳ ಸಮೂಹಗಳ ಜನರಿಗೆ. ಆಗ ತಳ ಸಮುದಾಯಗಳು ಆರ್ಥಿಕವಾಗಿ ಬಲಾಢ್ಯಗೊಳ್ಳುತ್ತವೆ.

 


ಹಾಗೆಯೇ ತಳ ಸಮುಧಾಯಗಳ ಜನರೂ ಅಷ್ಟೆ ಸಾಧ್ಯವಾದಷ್ಟು ಸ್ವಯಂ ಉದ್ಯೋಗದ ಕಡೆ ಗಮನಹರಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಖಾಸಗಿ ಅಂಗಡಿ, ಹೋಟೆಲ್ಲು, ಕಾರ್ಖಾನೆ ಇತ್ಯಾದಿಗಳನ್ನು ಸ್ಥಾಪಿಸುವ ಕಡೆ , ಸ್ಥಾಪಿಸಿ ನಡೆಸುವ ಕಡೆ ಗಮನಹರಿಸಬೇಕು. ದಾರಿ ಕಷ್ಟದ್ದಾಗಬಹುದು. ಆದರೆ ಮುಂದೆ ನಡೆಯುವಾಗ ಮುಳ್ಳುಕಂಟಿಗಳನ್ನು ಬದಿಗೆ ಸರಿಸುವಂತೆ ಪ್ರಯತ್ನ ಸಾಗಬೇಕು. ಒಂದು ತಲೆಮಾರು ಹೀಗೆ ಕಷ್ಟ ಪಟ್ಟರೆ ಖಂಡಿತ ತಳಸಮುದಾಯಗಳ ಮುಂದಿನ ತಲೆಮಾರು ಜಾತಿ ಭೀತಿಯಿಂದ ಬಚಾವ್ ಆಗುತ್ತವೆ. ಇದು ಸಾಧ್ಯವೇ ಎಂಬ ಪ್ರಶ್ನೆ ಬೇಡ. ಹಿಂದೆ ಅಮೆರಿಕಾದಲ್ಲಿಯೂ ಕೂಡ ‘ಬೀಳಿಯರಿಗೆ ಮಾತ್ರ ಹೊಟೆಲ್’ ಎಂಬ ಬೋರ್ಡುಗಳಿದ್ದವು. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ಕರಿಯರ ‘ಕರಿಯರಿಗೆ ಮಾತ್ರ ಹೊಟೆಲ್’ ಎಂದು ತಮ್ಮ ದೇ ಹೋಟೆಲ್ಲುಗಳನ್ನು ತೆರೆದರು. ಆಗ ಕರಿಯರಿಗೆ ಯಶಸ್ಸು ಸಿಕ್ಕಿತು. ಇಂದು ಅಮೆರಿಕಾದಲ್ಲಿ ಕರಿಯರು ಬಿಳಿಯರಷ್ಟೆ ಪ್ರಬಲವಾಗಿದ್ದಾರೆ. ಕರಿಯರು ನಾಶವಾಗಿಲ್ಲ, ಆದರೆ ಆರ್ಥಿಕ ಬೆಳವಣಿಗೆಯಿಂದಾಗಿ ಸಮಾನತೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಳ ಸಮೂಹಗಳು ಅಡಿ ಇಡಬೇಕಿದೆ.
                                             -ರಘೋತ್ತಮ ಹೊ.ಬ

Monday, 11 May 2015

ಚುನಾವಣಾ ಅಕ್ರಮದ ಮೂಲಕ ಸೋಲಿಸಲ್ಪಟ್ಟ ‘ಪ್ರಜಾಪ್ರಭುತ್ವದ ಪಿತ’


1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ ಉತ್ತರ ಕ್ಷೇತ್ರ, ಅಂದಿನ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅಂದರೆ ಆ ಕ್ಷೇತ್ರದಿಂದ ಓರ್ವ ಸಾಮಾನ್ಯ ವರ್ಗದ ಸದಸ್ಯ ಮತÀ್ತು ಓರ್ವ ಪರಿಶಿಷ್ಟಜಾತಿಯ ಸದಸ್ಯ ಹೀಗೆ ಇಬ್ಬರೂ ಆಯ್ಕೆಯಾಗಬೇಕಿತ್ತು. ಈ ಪ್ರಕಾರ ಅಲ್ಲಿ ಚುನಾವಣೆ ಘೋಷಣೆಯಾಗಿ 11ಜನ ನಾಮಪತ್ರ ಸಲ್ಲಿಸಿ ಮೂವರು ನಾಮಪತ್ರ ವಾಪಸ್ ಪಡೆದು ಕಣದಲ್ಲಿ 8ಜನ ಅಭ್ಯರ್ಥಿಗಳು ಉಳಿದರು. ಅಂದಹಾಗೆ ಆ 8ಜನ ಅಭ್ಯರ್ಥಿಗಳಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳೂ ಇದ್ದರು ಮತ್ತು ಸಾಮಾನ್ಯ ಅಭ್ಯರ್ಥಿಗಳೂ ಇದ್ದರು ಮತ್ತು ಯಾಕೆ ಹೀಗೆ ಇಬ್ಬರನ್ನೂ ಒಟ್ಟಿಗೆ ಮಾಡಲಾಗಿತ್ತೆಂದರೆ ಪರಿಶಿಷ್ಟರು, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಲು ಅವರೂ ಅರ್ಹರಾದುದರಿಂದ ಸಾಮಾನ್ಯ ಕ್ಷೇತ್ರ ಮತ್ತು ಪರಿಶಿಷ್ಟರ ಕ್ಷೇತ್ರ ಹೀಗೆ ಎರಡನ್ನೂ ಒಟ್ಟಿಗೆ ಮಿಶ್ರ ಮಾಡಲಾಗಿತ್ತು. ಅಂದಹಾಗೆ ಈ ಮಿಶ್ರ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಯೇ ಪಡೆದಿದ್ದರೆ ಸಾಮಾನ್ಯ ಅಭ್ಯರ್ಥಿಯಾಗಿ ಪರಿಶಿಷ್ಟಜಾತಿಯ ಅಭ್ಯರ್ಥಿಯೇ ಆಯ್ಕೆಯಾಗಬಹುದಿತ್ತು ಮತ್ತು ಯಥಾಪ್ರಕಾರ ಮೀಸಲು ಕ್ಷೇತ್ರದಿಂದಲೂ ಮತ್ತೋರ್ವ ಪರಿಶಿಷ್ಟ ಆಯ್ಕೆಯಾಗುತ್ತಿದ್ದ. ಅಕಸ್ಮಾತ್ ಮೊದಲ ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿಯೇ ಇದ್ದರೆ ಸಹಜವಾಗಿ ಆತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದ ಮತ್ತು ಉಳಿದ ಪರಿಶಿಷ್ಟಜಾತಿಯ ಸ್ಥಾನಕ್ಕೆ ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು ಆಯ್ಕೆಯಾಗುತ್ತಿದ್ದರು. ಒಟ್ಟಾರೆ ದ್ವಿಸದಸ್ಯ ಸ್ಥಾನದ ಆಯ್ಕೆಯ ಈ ಪ್ರಕ್ರಿಯೆ ಗೊಂದಲಮಯವಾಗೇನು ಇರಲಿಲ್ಲ.

ದ್ವಿಸದಸ್ಯ ಈ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಹೇಗಿತ್ತೆಂದರೆ ಕಣದಲ್ಲಿ ಅಭ್ಯರ್ಥಿಗಳು 8 ಮಂದಿ ಇದ್ದುದರಿಂದ ಪ್ರತೀ ಮತದಾನ ಕೇಂದ್ರದಲ್ಲಿಯೂ ಪ್ರತೀ ಅಭ್ಯರ್ಥಿಗೆ ಒಂದರಂತೆ 8 ಮತ ಪಟ್ಟಿಗೆಗಳನ್ನು(ಬೂತ್‍ಗಳನ್ನು) ಇಡಲಾಗಿತ್ತು. ಮತದಾರನಿಗೆ ಸಾಮಾನ್ಯ ಕ್ಷೇತ್ರಕ್ಕೊಂದು ಮತ್ತು ಮೀಸಲು ಕ್ಷೇತ್ರಕ್ಕೊಂದು ಹೀಗೆ ಎರಡು ಬೇರೆ ಬೇರೆ ಬಣ್ಣದ ಮತ ಪತ್ರಗಳನ್ನು ನೀಡಲಾಗಿತ್ತು. ಸಾಮಾನ್ಯ ಕ್ಷೇತ್ರದ ಮತಪತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲಾ ಎಂಟು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿದ್ದವು. ಪರಿಶಿಷ್ಟರ ಮೀಸಲಿನ ಮತಪತ್ರದಲ್ಲಿ ಕೇವಲ ಪರಿಶಿಷ್ಟ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮಾತ್ರ ಇದ್ದವು. ಮತದಾರ ಆ ಎರಡೂ ಮತಪತ್ರಗಳನ್ನು ಪಡೆದು ಎರಡರಲ್ಲೂ ತನಗೆ ಇಷ್ಟವಾದ ಅಭ್ಯರ್ಥಿಗಳ ಚಿಹ್ನೆಗಳಿಗೆ ಮುದ್ರೆಯೊತ್ತಿ ಸಹಿ ಮಾಡಿ ಸಂಬಂಧಿಸಿದ ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಮಾತ್ರ ಹಾಕಬೇಕಿತ್ತು. ಈ ಹಿನ್ನೆಲೆಯಲ್ಲಿ ಮತದಾರನೋರ್ವ ಅಭ್ಯರ್ಥಿಯೊಬ್ಬರಿಗೆ ತಾನು ನೀಡಿದ ಮತವನ್ನು, ಸಂಬಂಧಿತ ಮತಪತ್ರವನ್ನು ಅದೇ ಅಭ್ಯರ್ಥಿಯ ಮತಪೆಟ್ಟಿಗೆಯಲ್ಲಿ ಹಾಕದೆ ಬೇರೆ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೆ ಅದು ಕುಲಗೆಟ್ಟ ಮತವಾಗುತ್ತಿತ್ತು. ಗಮನಾರ್ಹವೆಂದರೆ ಮತದಾರ ತನಗೆ ನೀಡಲಾದ ಎರಡೂ ಮತಪತ್ರಗಳನ್ನು ತನ್ನಿಷ್ಟದ ಒಂದೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೂ ಅದರಲ್ಲಿ ಒಂದು ಮತ ಕುಲಗೆಡುತ್ತಿತ್ತು ಈ ನಿಟ್ಟಿನಲ್ಲಿ ಇದನ್ನು ‘ಹಾಗೆ ಮಾಡುವುದು ಅಕ್ರಮ’ ಎಂದು ಅಂದಿನ ಜನಪ್ರತಿನಿಧಿ ಕಾಯಿದೆ ಸ್ಪಷ್ಟವಾಗೇ ಘೋಷಿಸಿತ್ತು. ಇದಲ್ಲದೆ ಮತದಾರ ತನಗೆ ಕೇವಲ ಒಂದು ಓಟು ಹಾಕುವ ಮಾತ್ರ ಇಚ್ಚೆ ಇದೆ, ಇನ್ನೊಂದು ಓಟು ಹಾಕುವ ಇಚ್ಚೆ ಇಲ್ಲ ಎಂದರೆ ಆತ ತನ್ನಿಷ್ಟದ ಆ ಒಂದು ಓಟನ್ನು ಮಾತ್ರ ಹಾಕಿ ಉಳಿದ ಒಂದು ಮತಪತ್ರವನ್ನು ವಾಪಸ್ ಮತಗಟ್ಟೆಯ ಅಧಿಕಾರಿಗೆ ನೀಡುವ ಅವಕಾಶವೂ ದ್ವಿಸದಸ್ಯ ಆ ಕ್ಷೇತ್ರದಲ್ಲಿ ಇತ್ತು.

ಈ ಪ್ರಕಾರ ಅಂಬೇಡ್ಕರರು ಸ್ಪರ್ಧಿಸಿದ್ದ ಬಾಂಬೆ ನಗರ ಉತ್ತರ ಆ ಕ್ಷೇತ್ರಕ್ಕೆ 1952 ಜನವರಿ 3 ರಂದು ಚುನಾವಣೆ ನಡೆದು ಜನವರಿ 7ರಂದು ಮತಎಣಿಕೆ ಪ್ರಾರಂಭವಾಗಿ ಜನವರಿ 11ಕ್ಕೆ ಎಣಿಕೆ ಮುಕ್ತಾಯವಾಯಿತು. ಫಲಿತಾಂಶವನ್ನು ಕ್ರಮಸಂಖ್ಯೆ, ಪಡೆದ ಮತಗಳು ಮತ್ತು ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಬಿದ್ದ ಬೇರೆ ಅಭ್ಯರ್ಥಿಗಳ ಮತಗಳು ಅರ್ಥಾತ್ ಕುಲಗೆಟ್ಟ ಮತಗಳ ಪ್ರಕಾರ ಪಟ್ಟಿಮಾಡಿ ದಾಖಲಿಸುವುದಾದರೆ
ಅಭ್ಯರ್ಥಿ *ಪಡೆದ ಮತ @ ಕುಲಗೆಟ್ಟ ಮತ
1. ಡಾ.ಅಂಬೇಡ್ಕರ್ * 1,23,576 @ 2921
2. ಅಶೋಕ್ ಆರ್.ಮೆಹ್ತಾ * 1,39,741 @ 5,597
3. ಎಸ್.ಎ.ಡಾಂಗೆ * 96,755 @ 39,165
4. ಗೋಪಾಲ್ ವಿ.ದೇಶ್‍ಮುಖ್ * 40,786 @ 6,634
5. ವಿಠಲ್ ಬಿ.ಗಾಂಧಿ * 1,49,138 @ 10,881
6. ಕೇಶವ ಬಿ.ಜೋಶಿ * 15,195 @ 1,168
7. ನಾರಾಯಣ್ ಎಸ್.ಕಜ್ರೋಳ್ಕರ್ * 1,38,137 @ 6,892
8. ನೀಲಕಾಂತ್ ಬಿ.ಪಾರುಯೇಕರ್ * 12,560 @ 1,025

ಈ ಪಟ್ಟಿಯ ಪ್ರಕಾರ ಎರಡು ಸ್ಥಾನ ಇದ್ದ ಈ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ(1,49,138) ವಿಠಲ್ ಬಿ.ಗಾಂಧಿ ಆಯ್ಕೆಯಾದರೆ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ನಾರಾಯಣ್ ಎಸ್.ಕಜ್ರೋಳ್ಕರ್ 1,38,137 ಮತ ಪಡೆದು ಆಯ್ಕೆಯಾದರು. 1,23,576 ಮತ ಪಡೆದ ಅಂಬೇಡ್ಕರರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಜ್ರೋಳ್ಕರ್ ವಿರುದ್ಧ 14,561 ಮತಗಳ ಅಂತರದಿಂದ ಸೋತರೆ ಸಾಮಾನ್ಯ ಕ್ಷೇತ್ರದಲ್ಲಿ ಅಂಬೇಡ್ಕರರ ಎಸ್‍ಸಿಎಫ್(ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್) ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ಆರ್.ಮೆಹ್ತಾ 1,39,741 ಮತ ಪಡೆದು ಅದೇ ಕಾಂಗ್ರೆಸ್‍ನ ವಿಠಲ್ ಬಿ.ಗಾಂಧಿಯವರ ಎದುರು 9,397 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಂದಹಾಗೆ ಇಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟ ಕುಲಗೆಟ್ಟ ಮತಗಳು? ಅಂಬೇಡ್ಕರರು ಸೋತಿದ್ದೇ ಅಥವಾ ಸೋಲಿಸಲ್ಪಟ್ಟಿದ್ದೇ ಕುಲಗೆಡಿಸಲ್ಪಟ್ಟ ಈ ಮತಗಳ ಕಾರಣಕ್ಕಾಗಿ! ಸೋತ ನಂತರ ಸ್ವತಃ ಅಂಬೇಡ್ಕರರು ಈ ಸಂಬಂಧ 1952 ಏಪ್ರಿಲ್ 21ರಂದು ಅಂದಿನ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಾರೆ ಮತ್ತು ತಮ್ಮ ಆ ದೂರಿನಲ್ಲಿ ಬಾಬಾಸಾಹೇಬರು ಅತಿ ಹೆಚ್ಚು ಕುಲಗೆಟ್ಟ ಮತಗಳನ್ನು ‘ಪಡೆದ’ ಕಮ್ಯೂನಿಸ್ಟ್ ಪಕ್ಷದ ನಾಯಕ ಶ್ರೀಪಾದ ಅಮೃತ ಡಾಂಗೆ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಾಲ್ ವಿ.ದೇಶ್‍ಮುಖ್, ಈ ಇಬ್ಬರೂ ಅಭ್ಯರ್ಥಿಗಳು ನಡೆಸಿದ ಅಕ್ರಮಗಳನ್ನು ಹೂಡಿದ ವಾಮಮಾರ್ಗಗಳನ್ನು ಹೇಳುತ್ತಾ ಹೋಗುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.411).
ಅಂಬೇಡ್ಕರರ ಆ ದೂರಿನ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದಾದರೆ, ಮೊದಲೇ ಹೇಳಿದ ಹಾಗೆ ಒಬ್ಬ ಮತದಾರ ತನ್ನ ಎರಡೂ ಓಟುಗಳನ್ನು ಒಬ್ಬನೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕುವುದು ತಪ್ಪು, ಅದು ಕುಲಗೆಡುತ್ತದೆ. ಆದರೆ ಆಶ್ಚರ್ಯವೆಂದರೆ ಹಾಗೆ ಮತಗಳನ್ನು ಕುಲಗೆಡಿಸಲೆಂದೇ ಮೇಲ್ಕಂಡ ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಭರಪೂರ ಪ್ರಚಾರ ನಡೆಸಿದ್ದರು. ಹೀಗೆ ಮತಗಳನ್ನು ಕುಲಗೆಡಿಸುವುದರಿಂದ ತಾವು ಗೆಲ್ಲಲಾಗುವುದಿಲ್ಲ ಎಂದು ಈ ಇಬ್ಬರೂ ಅಭ್ಯರ್ಥಿಗಳಿಗೂ ಗೊತ್ತಿತ್ತು. ಆದರೆ ಅವರ ಅಂತಹ ನಡೆಯ ಒಟ್ಟಾರೆ ಉದ್ದೇಶ? ಅಂಬೇಡ್ಕರರನ್ನು ಸೋಲಿಸುವುದಾಗಿತ್ತು!
ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 39,165 ಕುಲಗೆಟ್ಟ ಮತಗಳನ್ನು ಪಡೆದ ಕಮ್ಯೂನಿಸ್ಟ್ ನಾಯಕ ಎಸ್.ಎ.ಡಾಂಗೆ ಪ್ರಚಾರದ ಸಮಯದಲ್ಲಿ ಹೊರಡಿಸಿದ್ದ ಒಂದು ಕರಪತ್ರದಲ್ಲಿ ಕಣದಲ್ಲಿರುವ ಪ್ರಚಂಡ ಅಭ್ಯರ್ಥಿ ತಾನಾಗಿದ್ದು ಮತದಾರರು ‘ತಮ್ಮೆರಡು ಓಟುಗಳನ್ನು’ ನನಗೇ ನೀಡಬೇಕು ಎಂದು ಆಗ್ರಹಿಸಿದ್ದರು! ಅಲ್ಲದೆ ಅದೇ ಡಾಂಗೆಯವರು ತಮ್ಮ ಪಕ್ಷ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಯುಗಾಂತರ’ ಎಂಬ ಮರಾಠಿ ವಾರಪತ್ರಿಕೆಯಲ್ಲಿ ಹೊರಡಿಸಿದ್ದ ಜಾಹೀರಾತಿನಲ್ಲಿ ‘ಮತದಾರರು ತಮ್ಮ ಎರಡೂ ಓಟುಗಳನ್ನು’ ತಮ್ಮ ಒಂದೇ ಡಬ್ಬಕ್ಕೆ ಹಾಕಬೇಕು ಎಂದು ತಮ್ಮ ಗುರುತಾದ ‘ಇಂಜಿನ್’ ಚಿತ್ರ ಸಮೇತ ಕೋರಿದ್ದರು! ಡಾಂಗೆಯವರ ಒಟ್ಟಾರೆ ಉದ್ದೇಶ ಸ್ಪಷ್ಟ ಇತ್ತು ಅಂದರೆ ಅದು ತನಗೆ ಲಾಭವಾಗಬೇಕು ಎಂದಲ್ಲ, ಬದಲಿಗೆ ಅಂಬೇಡ್ಕರರಿಗೆ ನಷ್ಟವಾಗಬೇಕು ಎಂದು! ಈ ಸಂಬಂಧ ಕರಪತ್ರವೊಂದರಲ್ಲಿ ಕುದ್ದು ಅಂಬೇಡ್ಕರರ ಹೆಸರನ್ನೇ ಉಲ್ಲೇಖಿಸಿದ್ದ ಸದರಿ ಡಾಂಗೆ “ಪರಿಶಿಷ್ಟ ಜಾತಿಗೆ ಸೇರಿದ್ದ ಅಂಬೇಡ್ಕರರು ದ್ವಿಸದಸ್ಯ ಈ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೀಗೆ ಎರಡೂ ಸ್ಥಾನಗಳ ಅಭ್ಯರ್ಥಿಯಾಗುವ ಅವಕಾಶ ಹೊಂದಿದ್ದಾರೆ. ಆದುದರಿಂದ ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಪರಿಶಿಷ್ಟಜಾತಿಯ ಅಂಬೇಡ್ಕರರಿಗೆ ಓಟು ಕೊಟ್ಟರೆ ಅದು ಪರಿಶಿಷ್ಟರ ಮತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಮತದಾರರು ತಮ್ಮ ಎರಡೂ ಮತಗಳನ್ನು ನನ್ನ ‘ಇಂಜಿನ್’ ಗುರುತಿಗೇ ನೀಡಿ”!

ಅಬ್ಬಾ! ಎಂತಹ ತಂತ್ರ! ಸಾಮಾನ್ಯ ಕ್ಷೇತ್ರ ಆಗಿದ್ದ ಆ ಬಾಂಬೆ ಉತ್ತರ ಕ್ಷೇತ್ರದಿಂದ ಅಂಬೇಡ್ಕರ್ ಕೇವಲ ಪರಿಶಿಷ್ಟರ ಓಟುಗಳಿಂದ ಮಾತ್ರ ಗೆಲ್ಲಬೇಕಂತೆ, ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಅಂಬೇಡ್ಕರರಿಗೆ ಮತ ಹಾಕಿದರೆ ಅದು ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡಂತೆಯಂತೆ. ಆ ಕಾರಣಕ್ಕಾಗಿ ಮತದಾರ ಎರಡೂ ಓಟುಗಳನ್ನು ಒಬ್ಬ ವ್ಯಕ್ತಿಯ ಡಬ್ಬಕ್ಕೇ ಹಾಕಿ ತನ್ನ ಮತವನ್ನು ಕುಲಗೆಡಿಸಿಕೊಳ್ಳಬೇಕಂತೆ! ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಡಾಂಗೆಯವರು ತಮ್ಮ ಕುಯುಕ್ತಿಯ ಇಂಥ ನಡೆಯಿಂದ ಮತದಾರರನ್ನು ಎಷ್ಟು ದಿಕ್ಕುತಪ್ಪಿಸುವುದು ಸಾಧ್ಯವೋ ಅಷ್ಟೂ ದಿಕ್ಕುತಪ್ಪಿಸಿದರು ತನ್ಮೂಲಕ ಅಂಬೇಡ್ಕರರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು! ಹೇಗೆಂದರೆ ಕುಲಗೆಟ್ಟ ಒಟ್ಟು ಮತಗಳು 74,333. ಅದರಲ್ಲಿ ಡಾಂಗೆಯವರ ಇಂತಹ ಅಪಪ್ರಚಾರದಿಂದ ಬರೋಬ್ಬರಿ ಅವರೊಬ್ಬರಿಗೇ ಬಿದ್ದ ಕುಲಗೆಟ್ಟ ಮತಗಳೇ 39,165! ಅಂದಹಾಗೆ ಅಂಬೇಡ್ಕರ್ ಸೋತದ್ದು? 14,561 ಮತಗಳಿಂದ! ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ಸೋಲಿನ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು ಮತ ಕುಲಗೆಡಿಸುವಲ್ಲಿ ಡಾಂಗೆ ಯಶಸ್ವಿಯಾಗಿದ್ದರು. ಡಾಂಗೆಯವರ ಇಂತಹ ಹೀನ ತಂತ್ರವನ್ನು ತಮ್ಮ ಆ ಚುನಾವಣಾ ದೂರಿನಲ್ಲಿ ಅಂಬೇಡ್ಕರರು ಸಾಕ್ಷಿ ಸಮೇತ, ಅಂದರೆ ಕರಪತ್ರ ಪ್ರತಿ, ಪೇಪರ್ ಕಟಿಂಗ್‍ಗಳನ್ನು ಲಗತ್ತಿಸುವುದರ ಜೊತೆ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಅರುಹಿದ್ದರು.

ಮುಂದುವರಿದು ಅಂಬೇಡ್ಕರರು ಮತ್ತೋರ್ವ ಅಭ್ಯರ್ಥಿಯ ಅಪಪ್ರಚಾರವನ್ನು ಸಾಕ್ಷಿ ಸಮೇತ ದಾಖಲಿಸಿದ್ದರು. ಅದು ಪಕ್ಷೇತರ ಅಭ್ಯರ್ಥಿ ಹಿಂದುತ್ವವಾದಿ ಗೋಪಾಲ್ ವಿ.ದೇಶ್‍ಮುಖ್‍ರವರಿಗೆ ಸಂಬಂಧಿಸಿದ್ದು. ಸದರಿ ದೇಶ್‍ಮುಖ್ ‘ವಿವಿಧ ವೃತ್ತಾ’ ಎಂಬ ಪತ್ರಿಕೆಯಲ್ಲಿ ಡಿಸೆಂಬರ್ 31, 1951ರಲ್ಲಿ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ “ಬಾಂಬೆ ಉತ್ತರ ಕ್ಷೇತ್ರವು ದ್ವಿಸದಸ್ಯ ಸಾಮಾನ್ಯ ಕ್ಷೇತ್ರವಾಗಿದ್ದು ಇಲ್ಲಿ ಎರಡೂ ಸ್ಥಾನಗಳನ್ನು ಪರಿಶಿಷ್ಟರೇ ಗೆಲ್ಲುವಂತಹ ತಂತ್ರವನ್ನು ಅಂಬೇಡ್ಕರರು ರೂಪಿಸಿದ್ದಾರೆ. ಆ ಕಾರಣದಿಂದ ಮತದಾರರು ಅಂಬೇಡ್ಕರರ ಇಂತಹ ತಂತ್ರವನ್ನು ಸೋಲಿಸಲು ತಮ್ಮ ಎರಡೂ ಓಟುಗಳನ್ನು ಅಂಬೇಡ್ಕರರನ್ನು ಹೊರತು ಪಡಿಸಿ ಇತರರಿಗೆ ನೀಡಿ. ಆ ಮೂಲಕ ಪರಿಶಿಷ್ಟೇತರರೂ ಆಯ್ಕೆಯಾಗುವಂತೆ ಮಾಡಿ” ಎಂದಿದ್ದರು. ಮುಂದುವರಿದು ಅದೇ ದೇಶ್‍ಮುಖ್ ಅದೇ ‘ವಿವಿಧ ವೃತ್ತಾ’ ಪತ್ರಿಕೆಯಲ್ಲಿ “ಮತದಾರನೋರ್ವ ಹಿಂದೂ ಅಭ್ಯರ್ಥಿಯ ಪೆಟ್ಟಿಗೆಯಲ್ಲಿ ಮಾತ್ರ ತನ್ನ ಎರಡೂ ಮತಗಳನ್ನು ಹಾಕಬೇಕು ಮತ್ತು ಅದು ಯಾವುದೇ ರೀತಿಯಲ್ಲೂ ಕಾನೂನಿಗೆ ವಿರುದ್ಧವಲ್ಲ” ಎಂಬ ಹೇಳಿಕೆ ನೀಡಿ ಕೋಮುಭಾವವನ್ನು ಬಹಿರಂಗವಾಗೇ ಬಡಿದೆಬ್ಬಿಸಿದ್ದರು! (ಇಲ್ಲಿ ದೇಶ್‍ಮುಖ್‍ರ ‘ಹಿಂದೂ ಅಭ್ಯರ್ಥಿಗೆ ಮಾತ್ರ’ ಎಂಬ ಪದವನ್ನು ಗಮನಿಸಬೇಕು! ಅಂದರೆ ಅಂಬೇಡ್ಕರರು ಒಟ್ಟಾರೆ ಪರಿಶಿಷ್ಟರು ಹಿಂದೂಗಳಲ್ಲ ಎಂಬುದು ಆ ಕಾಲದಲ್ಲೇ 1952ರಲ್ಲೇ ಸ್ಪಷ್ಟ.) ಈ ಸಂಬಂಧ ದೇಶ್‍ಮುಖ್‍ರ ಇಂತಹ ಕೋಮುಭಾವದ ಪತ್ರಿಕಾ ಹೇಳಿಕೆಯ ವರದಿಯ ತುಣುಕನ್ನೂ ಸಹ ಅಂಬೇಡ್ಕರರು ತಮ್ಮ ಆ ಚುನಾವಣಾ ತಕರಾರು ಅರ್ಜಿಯ ಜೊತೆ ಲಗತ್ತಿಸಿದ್ದರು.

ಒಟ್ಟಾರೆ ಹೇಳುವುದಾದರೆ ಕಮ್ಯೂನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆ, ಹಿಂದುತ್ವವಾದಿ ನಾಯಕ ಗೋಪಾಲ್ .ವಿ.ದೇಶ್‍ಮುಖ್ ಇಬ್ಬರೂ “ವಯಕ್ತಿಕವಾಗಿ ಅವರಿಬ್ಬರಿಗು ಯಾವುದೇ ಲಾಭವಾಗದಿದ್ದರೂ ಅಂಬೇಡ್ಕರರ ಗೆಲುವಿನ ಸಂಭವವನ್ನು ತಪ್ಪಿಸುವ ಏಕೈಕ ಉದ್ದೇಶ ಇಟ್ಟುಕೊಂಡು ಎರಡೂ ಓಟುಗಳನ್ನು ತಮಗೆ ಹಾಕಿ” ಎಂಬ ಚುನಾವಣಾ ಹೀನ ತಂತ್ರ ಹೆಣೆದು, ಮತದಾರರನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾದರು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ತಮ್ಮ ಆ ಚುನಾವಣಾ ದೂರಿನಲ್ಲಿ ಸದರಿ ಬಾಂಬೆ ಸಿಟಿ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಈ ಇಬ್ಬರು ಅಭ್ಯರ್ಥಿಗಳ ಇಂತಹ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಅನೂರ್ಜಿತಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ಕೋರಿದರು. ಅಂತೆಯೇ ಅಂಬೇಡ್ಕರರು ಸಲ್ಲಿಸಿದ ಆ ಚುನಾವಣಾ ದೂರಿನ ವಿಚಾರಣೆ ಶ್ರೀ ಎನ್.ಜೆ.ವಾಡಿಯಾ, ಶ್ರೀ ಎಂ.ಕೆ.ಲಲ್ಕಾಕ, ಶ್ರೀ ಜಿ.ಪಿ.ಮುರುಡೇಶ್ವರ್ ರವರನ್ನೊಳಗೊಂಡ ಚುನಾವಣಾ ಟ್ರಿಬ್ಯೂನಲ್‍ನಲ್ಲಿ ನಡೆಯುತ್ತದೆ ಮತ್ತು ಸ್ವತಃ ಅಂಬೇಡ್ಕರರೇ ಆ ಟ್ರಿಬ್ಯೂನಲ್ ಮುಂದೆ ವಿಚಾರಣೆಗೆ ಹಾಜರಾಗಿ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(2)ರ ಅಡಿಯಲ್ಲಿ ಚುನಾವಣೆಯಲ್ಲಿ ಮತದಾರರ ಮೇಲೆ ‘ಅಕ್ರಮ ಪ್ರಭಾವ’ ಬೀರಿದ ಆ ಇಬ್ಬರು ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ, ಸೆಕ್ಷನ್ 100ರ ಪ್ರಕಾರ “ಭಾರಿ ಅಕ್ರಮದ ಆಧಾರದಲ್ಲಿ ಸದರಿ ಚುನಾವಣೆಯನ್ನು ರದ್ದುಪಡಿಸುವಂತೆ””ಪ್ರಬಲ ವಾದ ಮಂಡಿಸುತ್ತಾರೆ. ಅಂದಹಾಗೆ ಜನಪ್ರತಿನಿಧಿ ಕಾಯ್ದೆ ಅಂದಿನ ನಿಯಮ 25(1)ರ ಪ್ರಕಾರವೇ ‘ಮತದಾರನೊಬ್ಬ ತನ್ನ ಎರಡೂ ಮತವನ್ನೂ ಒಂದೇ ಬ್ಯಾಲಟ್ ಬಾಕ್ಸ್‍ನಲ್ಲಿ ಹಾಕುವುದು ಕಾನೂನಿಗೆ ವಿರುದ್ಧ’. ಹೀಗಿರುವಾಗ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಕಾನೂನಿಗೆ ವಿರುದ್ಧವಾದ ಇಂತಹ ಕ್ರಿಯೆ ನಡೆಸಿ ಎಂದು ಮತದಾರರಿಗೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಗಳ ಮೂಲಕ ಆಗ್ರಹಿಸುತ್ತಾರೆ ಎಂದರೆ ಇದು ಚುನಾವಣಾ ಅಕ್ರಮದ ಉದ್ದೇಶಪೂರ್ವಕ ಆಚರಣೆಯಲ್ಲದೆ ಮತ್ತೇನು? ಮತ್ತು ಅದು ನ್ಯಾಯಬದ್ಧ ಚುನಾವಣೆ ಹೇಗಾಗುತ್ತದೆ? ಮುಂದುವರಿದು ಅಂಬೇಡ್ಕರರು “ನಾನು ನನ್ನ ಸ್ಥಾನವನ್ನು 13000 ಓಟುಗಳಿಂದ ಕಳೆದುಕೊಂಡೆ. ಡಾ.ದೇಶ್‍ಮುಖ್ ಮತ್ತು ಶ್ರೀ ಡಾಂಗೆ ಇಂತಹ ನೀಚ ತಂತ್ರಗೈಯದಿದ್ದರೆ ಕೇವಲ ಶ್ರೀ ಡಾಂಗೆಯವರು ಕುಲಗೆಡಿಸಿದ ಆ 39000 ಓಟುಗಳಲ್ಲೇ ಖಂಡಿತ ನಾನು ಬಹುಸಂಖ್ಯೆಯ ಓಟುಗಳನ್ನು ಪಡೆಯುತ್ತಿದ್ದೆ. (ಆ ಮೂಲಕ ಆಯ್ಕೆಯಾಗುತ್ತಿದ್ದೆ). ಈ ನಿಟ್ಟಿನಲ್ಲಿ ಮತದಾರರ ಮೇಲೆ ಹೀಗೆ ಶ್ರೀ ಡಾಂಗೆ ಮತ್ತು ಶ್ರೀ ದೇಶ್‍ಮುಖ್ ಅಕ್ರಮ ಪ್ರಭಾವ ಬೀರಿದ್ದಕ್ಕೆ ಸಾಕ್ಷಿಯಾಗಿ ಭಾರೀ ಸಂಖ್ಯೆಯ ಕುಲಗೆಟ್ಟ ಮತಗಳು(73,333) ನ್ಯಾಯಾಲಯದ ಮುಂದಿದೆ. ನ್ಯಾಯಾಲಯ ಈ ವ್ಯಾಪಕ ಅಕ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದರ ಆಧಾರದ ಮೇಲೆ ಬಾಂಬೆ ನಗರ ಉತ್ತರ ಆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಭ್ರಷ್ಟ ಆಚರಣೆಗಳು ನಡೆದಿರುವುದರಿಂದ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 100ರ ಅಡಿಯಲ್ಲಿ ಆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ನಿಖರ ವಾದ ಮಂಡಿಸುತ್ತಾರೆ.
ಅಂಬೇಡ್ಕರರ ಈ ವಾದಕ್ಕೇ ಜಯ ಸಿಕ್ಕಿತೆ? ಖಂಡಿತ ಇಲ್ಲ. ಎಲ್ಲ ಚುನಾವಣಾ ವಿಚಾರಣೆಗಳಂತೆ ಇದೂ ಕೂಡ ‘ಹಿಯರಿಂಗ್ ಮುಂದಕ್ಕೆ’ ಎಂಬಂತೆ ಮುಂದೆ ಹೋಯಿತು. ಅಂಬೇಡ್ಕರರಿಗೆ ನ್ಯಾಯ ಧಕ್ಕಲಿಲ್ಲ. ಆದರೆ ಸತ್ಯ? ಅಂದರೆ ಅಂಬೇಡ್ಕರರನ್ನು ಈ ದೇಶದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ತಂತ್ರಗೈದು ಸೋಲಿಸಿದ ಸತ್ಯ? ಅವರೇ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ರೂಪದಲ್ಲಿ ಸದ್ಯ ನಮ್ಮ ಮುಂದೆ ಇದೆ. ಖಂಡಿತ, ಹೆಂಡ, ಬಾಡು, ದುಡ್ಡಿಗೆ ಚುನಾವಣೆ ಗೆಲ್ಲುತ್ತಿರುವ ಈ ಕಾಲದಲ್ಲಿ, ಹಾಗೆಯೇ ವಿವಿಧ ಜಾತಿಗಳನ್ನು ಎತ್ತಿಕಟ್ಟಿ, ಅಭ್ಯರ್ಥಿಗಳ ಮೂಲಕ ನಾನಾ ಅಪಪ್ರಚಾರ ನಡೆಸುವ ಈ ಕಾಲದಲ್ಲಿ ಅಂಬೇಡ್ಕರರ ಅಂದಿನ ಸೋಲು ಕೂಡ ಅಂತಹ ‘ಕಾಲದ’ ಕಹಿ ವಾಸ್ತವವಾಗುತ್ತದೆ. ಯಾಕೆಂದರೆ ‘ವಿಕಿಪಿಡಿಯಾ ಅಂತರ್ಜಾಲ’ ತಾಣದಲ್ಲಿ ದಾಖಲಾಗಿರುವಂತೆ 1952ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯ ಅತಿ ಪ್ರಮುಖ ಸೋಲು ಡಾ.ಅಂಬೇಡ್ಕರರದ್ದು! ಇಲ್ಲಿ ಪ್ರತ್ಯೇಕ ಮತದಾನ ಪದ್ಧತಿಯ ಅನಿವಾರ್ಯತೆಯನ್ನು ಕೂಡ ದಾಖಲಿಸಬೇಕಾಗುತ್ತದೆ. 1932ರಲ್ಲಿ ಅಂಬೇಡ್ಕರರು ಒತ್ತಾಯಿಸಿದ ಈ ಮತದಾನ ಪದ್ಧತಿ ಜಾರಿಯಾಗಿದಿದ್ದರೆ 1952ರಲ್ಲಿ ಅವರು ಖಂಡಿತ ಸೋಲುತ್ತಿರಲಿಲ್ಲ. ಜಿ.ವಿ.ದೇಶ್‍ಮುಖ್‍ರಂಥ ಹಿಂದೂ ಕೋಮುವಾದಿ ಅದೆಷ್ಟೇ ಕೋಮು ಪ್ರಚೋದನೆ ನಡೆಸಿದ್ದರೂ ‘ಪ್ರತ್ಯೇಕ ಮತದಾನ’ದ ಪರಿಶಿಷ್ಟರೇ ಪರಿಶಿಷ್ಟರಿಗೆ ಮಾತ್ರ ಮತ ಹಾಕುವ ಆ ಪದ್ಧತಿಯಲ್ಲಿ ಬಾಬಾಸಾಹೇಬರು ಸ್ಪಷ್ಟವಾಗಿ ಆಯ್ಕೆಯಾಗಿರುತ್ತಿದ್ದರು. ಆದರೆ ಅಂಬೇಡ್ಕರರ ಆ ಮಹತ್ವದ ಬೇಡಿಕೆಯನ್ನು ಮಹಾತ್ಮ ಗಾಂಧಿ ‘ಅರ್ಥಮಾಡಿಕೊಂಡು’ ಜಾರಿಯಾಗದಂತೆ ತಡೆದರು. ಆ ಮೂಲಕ ಅಂಬೇಡ್ಕರರÀ ಸೋಲಿಗೆ 1932ರಲ್ಲೇ ಗಾಂಧಿ ಮುನ್ನುಡಿ ಬರೆದಿದ್ದರು. ಒಟ್ಟಾರೆ ಗಾಂಧಿಯವರ ಮುನ್ನುಡಿ ಮತ್ತು ಅದಕ್ಕೆ ಪೂರಕವಾಗಿ ಡಾಂಗೆ ಮತ್ತು ದೇಶ್‍ಮುಖ್‍ರ ಇಂತಹ ಚುನಾವಣಾ ಅಕ್ರಮದ ಬೆನ್ನುಡಿ ಈ ದೇಶದ ಜನರಿಗೆ ಓಟುಹಾಕುವ ಹಕ್ಕುಗಳಿಸಿಕೊಟ್ಟ ‘ಭಾರತದ ಪ್ರಜಾಪ್ರಭುತ್ವದ ಪಿತ’ ಅಂಬೇಡ್ಕರರ ಸೋಲಿಗೆ ಕಾರಣವಾದವು ಎಂಬುದು ಪ್ರಜಾಪ್ರಭುತ್ವದ ವ್ಯಂಗ್ಯವೆನಿಸಿದರೂ ಘಟಿಸಿರುವುದಂತೂ ಸತ್ಯ.

-ರಘೋತ್ತಮ ಹೊ.ಬ

Monday, 4 May 2015

ಮನಸ್ಸು: ಬುದ್ಧನ ಬೋಧನೆಯ ಪ್ರಮುಖ ತಿರುಳು

-ರಘೋತ್ತಮ ಹೊ.ಬ

  ಒಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ ಮಾರನೇ ದಿನ ತನ್ನ ನಗರಕ್ಕೆ ಬರುವಂತೆ, ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ, ತಮ್ಮ ಬೋಧನೆ ಮತ್ತು ವ್ಯಕ್ತಿತ್ವದ ಶ್ರೇಷ್ಠತೆಯನ್ನು ತನ್ನ ಜನರ ಮುಂದೆ ಪ್ರದರ್ಶಿಸುವಂತೆ ಆತ ಬುದ್ಧರನ್ನು ಆಹ್ವಾನಿಸಿದ. ಹಾಗೆಯೇ ಆತನ ಆಹ್ವಾನಕ್ಕೆ ಸಮ್ಮತಿಸಿದ ಬುದ್ಧರು ಮಾರನೆಯ ದಿನ ತನ್ನ ಉಪಾಸಕರೊಡನೆ ಪ್ರಸೇನಜಿತನ ನಗರವನ್ನು ಪ್ರವೇಶಿಸಿದರು. ನಗರದ ನಾಲ್ಕು ಬೀದಿಗಳ ಮೂಲಕ ನಡೆದು ಅವರು ತಮಗೆ ನಿಗಧಿಪಡಿಸಿದ ಸ್ಥಳದಲ್ಲಿ ಕುಳಿತುಕೊಂಡರು ಮತ್ತು ವಿನಯಪೂರ್ವಕವಾಗಿ ಪ್ರಸೇನಜಿತ ನೀಡಿದ ಆತಿಥ್ಯ ಸ್ವೀಕರಿಸಿ ಬುದ್ಧರು ನಗರದ ನಾಲ್ಕು ಹೆದ್ದಾರಿಗಳು ಕೂಡುವ ಸ್ಥಳದಲ್ಲಿ ವಿಶಾಲ ಸಭಿಕರ ಮುಂದೆ ತಮ್ಮ ಬೋಧನೆ ಪ್ರಾರಂಭಿಸಿದರು.
   ಬುದ್ದರು ಹೀಗೆ ಬೋಧನೆ ನಡೆಸುತ್ತಿರಬೇಕಾದರೆ ಅಲ್ಲಿ ಇಬ್ಬರು ಶ್ರೀಮಂತರು ಉಪಸ್ಥಿತರಿದ್ದರು. ಅವರಲ್ಲಿ ಮೊದಲನೆಯವನು ಹೇಳಿದ “ಎಂತಹ ಶ್ರೇಷ್ಠ ಜ್ಞಾನ, ಅದರ ಅನ್ವಯದ ವ್ಯಾಪಕತೆ, ನಮ್ಮ ಅಂತರಂಗ ಪರಿಶೋಧಿಸುವ ಅದರ ಗುಣ ಇಂತಹದ್ದನ್ನು ಸಾರ್ವಜನಿಕವಾಗಿ ಬೋಧಿಸಲಾಗುತ್ತದೆಯೆಂದರೆ, ನಿಜಕ್ಕೂ ಇದು ರಾಜನ ಶ್ರೇಷ್ಠ ನಡವಳಿಕೆ”.
   ಇನ್ನು ಇದಕ್ಕೆ ವಿರುದ್ಧವಾಗಿ ಎರಡನೆಯ ಶ್ರೀಮಂತ ಹೇಳಿದ್ದು “ಇಂತಹ ಮನುಷ್ಯನನ್ನು (ಬುದ್ಧನನ್ನು) ಕರೆತಂದು ಬೋಧನೆ ನೀಡಿಸುತ್ತಿರುವ ರಾಜನ ಈ ನಡೆ ಎಂಥ ಅವಿವೇಕದ್ದು? ಹಾಗೆಯೇ ಆ ಬುದ್ಧನೂ ಅಷ್ಟೆ ಹಸುವಿನ ಹಿಂದೆ ಕರು ಅಡ್ಡಾಡುವಂತೆ, ಕುರಿಯಂತೆ ಅರಚುತ್ತಾ ರಾಜನ ಹಿಂದೆ ಹೋಗುತ್ತಿದ್ದಾನೆ”.
ಹೀಗೆ ಹೇಳುತ್ತಾ ಆ ಶ್ರೀಮಂತರಿಬ್ಬರು ಪರಸ್ಪರ ವಿದಾಯ ಹೇಳಿ ತಾವು ಉಳಿದುಕೊಂಡಿದ್ದ ವಸತಿಗೃಹಕ್ಕೆ ತೆರಳಿದರು. ಅದರಲ್ಲಿ ಮೊದಲನೆಯ ಶ್ರೀಮಂತ ಸ್ವಲ್ಪ ಮದ್ಯಪಾನ ಮಾಡಿ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡು ತನ್ನ ಸೇವಕರೊಡನೆ ವಸತಿಗೃಹದ ತನ್ನ ಕೋಣೆಯಲ್ಲಿ ಉಳಿದುಕೊಂಡ. ಆದರೆ ಅದಕ್ಕೆ ತದ್ವಿರುದ್ಧವಾಗಿ ಎರಡನೆಯ ಶ್ರೀಮಂತ ಒಳಗಿನ ಕೆಟ್ಟತನದಿಂದ ಪ್ರೇರೇಪಿಸಲ್ಪಟ್ಟು ಮತಿಮೀರಿ ಮದ್ಯಪಾನ ಮಾಡಿದ. ಹೇಗೆಂದರೆ ಆತನಿಗೇ ಪರಿವೇ ಇಲ್ಲದೆ ತನ್ನ ವಸತಿಗೃಹದ ಮುಂಭಾಗದ ರಸ್ತೆಯಲ್ಲೇ ಆತ ಮಲಗಿದ ಮತ್ತು  ಬೆಳಕುಹರಿಯುತ್ತಲೇ ಅವನದೇ ಸೇವಕರು ರಸ್ತೆಯಲ್ಲಿ ಮಲಗಿರುವುದು ಯಾರು ಎಂಬುದನ್ನು ಗುರುತಿಸದೇ ಕುದುರೆ ಗಾಡಿಯನ್ನು ಆತನ ಮೇಲೆ ಹರಿಸಿದರು. ಪರಿಣಾಮ ಆ ಶ್ರೀಮಂತ ಅಸುನೀಗಿದ.
ಆದರೆ ಮೊದಲನೆಯ ಶ್ರೀಮಂತ? ಆತ ದೂರದ ರಾಜ್ಯವೊಂದಕ್ಕೆ ತೆರಳುತ್ತಲೇ ಆತನ ಮುಂದೆ ಕುದುರೆಯೊಂದು ಬಂದು ಮೊಣಕಾಲೂರಿತು. ಆಶ್ಚರ್ಯವೆಂಬಂತೆ ಶ್ರೀಮಂತ ಆ ಕುದುರೆಯನ್ನೇರುತ್ತಲೇ ಅದು ಆತನನ್ನು ಆ ರಾಜ್ಯದ ಆಸ್ಥಾನಕ್ಕೆ ಹೊಯ್ದಿತ್ತು ಮತ್ತು ರಾಜಕುದುರೆ ಆರಿಸಿತರುವ ವ್ಯಕ್ತಿಗಾಗಿ ಕಾಯುತ್ತಿದ್ದ ಅಲ್ಲಿಯ ಜನರು ಕುದುರೆ ಹೀಗೆ ಶ್ರೀಮಂತನನ್ನು ಆರಿಸಿತರುತ್ತಿದ್ದಂತೆ ಆತನನ್ನು ಸಿಂಹಾಸನಕ್ಕೇರಿಸಿದರು. ಪರಿಣಾಮ ಆ ಶ್ರೀಮಂತ ಆ ರಾಜ್ಯದ ರಾಜನಾದ.
   ಹೀಗೆ ಇಂತಹ ವಿಚಿತ್ರ ಘಟನೆಗಳು ನಡೆದ ಕೆಲ ದಿನಗಳ ತರುವಾಯ ರಾಜನಾದ ಆ ಶ್ರೀಮಂತ ಒಮ್ಮೆ ಸ್ವತಃ ಬುದ್ಧನನ್ನು ತನ್ನ ರಾಜ್ಯಕ್ಕೆ ಉಪದೇಶನೀಡುವಂತೆ ಆಹ್ವಾನಿಸಿದ. ರಾಜನಾಗಿ ನೇಮಕಗೊಂಡ ಆ ಶ್ರೀಮಂತನ ಆಹ್ವಾನಕ್ಕೆ ಮನ್ನಿಸಿದ ಬುದ್ಧರು ಆತನ ರಾಜ್ಯಕ್ಕೆ ಆಗಮಿಸಿದರು ಮತ್ತು ಆತನ ಆತಿಥ್ಯ ಸ್ವೀಕರಿಸಿ ಆ ಶ್ರೀಮಂತನ ಎದÀುರೇ “ಹೇಗೆ ಕೆಟ್ಟ ಮನಸ್ಸನ್ನು ಹೊಂದಿದ್ದ ಒಬ್ಬ ಶ್ರೀಮಂತ ಸಾವು ಕಂಡ, ಒಳ್ಳೆಯ ಮನಸ್ಸು ಹೊಂದಿದ್ದ ಮತ್ತೊಬ್ಬ ಹೇಗೆ ಉನ್ನತ ಸ್ಥಾನಕ್ಕೇರಿದ” ಎಂಬುದನ್ನು ವಿವರಿಸುತ್ತಾ “ಮನಸ್ಸೇ ಎಲ್ಲದಕ್ಕೂ ಮೂಲ. ಮನಸ್ಸೇ ಗುರು, ಮನಸ್ಸೇ ಕಾರಣ. ಮನಸ್ಸಿನ ಮಧ್ಯೆ ಕೆಟ್ಟ ಆಲೋಚನೆ ಇದ್ದರೆ ಆಗ ಮೂಡಿ ಬರುವ ಪದಗಳು ಕೆಟ್ಟದ್ದಾಗಿರುತ್ತವೆ, ಕ್ರಿಯೆಗಳೂ ಕೆಟ್ಟದ್ದಾಗಿರುತ್ತವೆ ಮತ್ತು ಅಂತಹ ಪಾಪದ ಫಲವಾಗಿ ಮೂಡಿಬರುವ ದುಃಖ ಆ ಮನುಷ್ಯನನ್ನು ಹೇಗೆ ರಥದ ಚಕ್ರಗಳು ಆತನನ್ನು ಹಿಂಬಾಲಿಸುತ್ತವೋ ಹಾಗೆ ಹಿಂಬಾಲಿಸುತ್ತವೆ” ಎನ್ನುತ್ತಾ... “ಆದ್ದರಿಂದ ಮನಸ್ಸೇ ಎಲ್ಲದಕ್ಕೂ ಮೂಲ. ಇಂತಹದ್ದನ್ನು ಮಾಡು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಇಂತಹದ್ದನ್ನು ಯೋಚಿಸು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮೂಡಿ ಬರುವ ಪದಗಳು, ಮಾಡುವ ಕ್ರಿಯೆ ಎಲ್ಲವೂ ಒಳ್ಳೆಯದ್ದಾಗಿರುತ್ತವೆ ಮತ್ತು ಅಂತಹ ಒಳ್ಳೆಯ ನಡವಳಿಕೆಯ ಫಲವಾಗಿ ಮೂಡಿಬರುವ ಸಂತೋಷ ಆ ಮನುಷ್ಯನನ್ನು ಹೇಗೆ ವಸ್ತುವೊಂದನ್ನು ಆತನ ನೆರಳು ಹಿಂಬಾಲಿಸುತ್ತದೆಯೋ ಹಾಗೆ ಹಿಂಬಾಲಿಸುತ್ತದೆ”. ಬುದ್ಧ ಹೀಗೆ ಹೇಳುತ್ತಲೇ ರಾಜನ ಸ್ಥಾನಕ್ಕೆ ಏರಿದ ಆ ಶ್ರೀಮಂತ, ಆತನ ಮಂತ್ರಿಗಳು, ಆತನ ರಾಣಿ ಎಲ್ಲರೂ ಬುದ್ಧನ ಅನುಯಾಯಿಗಳಾಗುತ್ತಾರೆ. (ಆಧಾರ: ‘ಬುದ್ಧ ಅಂಡ್ ಹಿಸ್ ಧಮ್ಮ’, ಲೇಖಕರು: ಡಾ.ಅಂಬೇಡ್ಕರ್, ಪು.282)
  ಒಟ್ಟಾರೆ ಬುದ್ಧನ ಪ್ರಕಾರ ಜಗತ್ತಿನ್ನೆಲ್ಲ ದುಃಖಗಳಿಗೆ, ನೋವುಗಳಿಗೆ ಕಾರಣ ಮನುಷ್ಯನ ಮನಸ್ಸು. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಮೂಡಿಬಂದರೆ ಸಂತಸ ತಾನಾಗೇ ನಮ್ಮತ್ತ ಹರಿದುಬರುತ್ತದೆ. ಕೆಟ್ಟ ಆಲೋಚನೆ ಮೂಡಿಬಂದರೆ ದುಃಖ ತಾನಾಗೇ ಅಂತಹವರನ್ನು ಹಿಂಬಾಲಿಸುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರಸ್ತಾಪಿತವಾಗಿರುವ ಆ ಶ್ರೀಮಂತರಿಬ್ಬರ ದೃಷ್ಟಾಂತದಲ್ಲಿ ಬುದ್ಧನ ಬೋಧನೆಯ ಆ ಪ್ರಮುಖ ತಿರುಳು ನಮಗೆ ಸ್ಪಷ್ಟವಾಗುತ್ತದೆ, ಇಡೀ ಜಗತ್ತಿಗೇ ಸುಸ್ಪಷ್ಟವಾಗಿ ತಿಳಿಯುತ್ತದೆ.

                   

Tuesday, 28 April 2015

ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ನೀರು ಕೊಡದ  ಆ ಧರ್ಮದಲ್ಲಿ......

                    -ರಘೋತ್ತಮ ಹೊ.ಬ.

1. ಧರ್ಮಕ್ಕಾಗಿ ಮನುಷ್ಯನಲ್ಲ; ಮನುಷ್ಯನಿಗಾಗಿ ಧರ್ಮ.
2. ಮಾನವರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
3. ಸಂಘಟಿತರಾಗಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
4. ಸಾಮಥ್ರ್ಯ ಗಳಿಸಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
5. ಸಮಾನತೆ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
6. ಸ್ವಾತಂತ್ರ್ಯ ಪಡೆಯಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
7. ನಿಮ್ಮ ಕೌಟುಂಬಿಕ ಜೀವನವನ್ನು ಸುಖಮಯಗೊಳಿಸಿಕೊಳ್ಳಬೇಕೆ? ನಿಮ್ಮಷ್ಟಕ್ಕೆ ನೀವೇ ಮತಾಂತರಗೊಳ್ಳಿ.
   ದಲಿತರು ಯಾಕೆ ಮತಾಂತರ ಆಗಬೇಕು ಎಂಬುದಕ್ಕೆ ಅಂಬೇಡ್ಕರರು ಹೊರಡಿಸಿದ್ದ ಘೋಷಣೆಗಳಿವು. ಈ ಘೋಷಣೆಗಳು 1936 ಮೇ 30, 31ರಂದು ಮುಂಬೈನ ದಾದರ್‍ನಲ್ಲಿ ಅಂಬೇಡ್ಕರರು ತನ್ನವರನ್ನು ಮತಾಂತರಕ್ಕೆ ಅಣಿಗೊಳಿಸಲು ಆಯೋಜಿಸಿದ್ದ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿದ್ದವು. ಅಂಬೇಡ್ಕರರು ಈ ಸಮ್ಮೇಳನ ಆಯೋಜಿಸಲಿಕ್ಕೆ ಹಿನ್ನೆಲೆ 1935 ಅಕ್ಟೋಬರ್ 13ರಂದು “ದುರದೃಷ್ಟವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ, ಅದು ನನ್ನ ಕೈಲಿರಲಿಲ್ಲ. ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ” ಎಂದು ಘರ್ಜನೆ ಮೊಳಗಿಸಿದ್ದುದ್ದಾಗಿತ್ತು. ಅಂಬೇಡ್ಕರರು ಹೀಗೆ ಘರ್ಜನೆ ಮೊಳಗಿಸಲಿಕ್ಕೆ ಹಿಂದೂ ಧರ್ಮದಿಂದ ಅವರು ಆ ಸಮಯದಲ್ಲಿ ಸತತ 5 ವರ್ಷ ಅವಮಾನಕ್ಕೀಡಾಗಿದ್ದದ್ದು ಕಾರಣವಾಗಿತ್ತು. ಹೇಗೆಂದರೆ ನಾಸಿಕ್‍ನ ಕಾಳಾರಾಂ ದೇವಸ್ಥಾನದ ಪ್ರವೇಶ ಪಡೆಯಲು ಸತತ 5ವರ್ಷ ಹೋರಾಟ ನಡೆಸಿದ್ದ ಅಂಬೇಡ್ಕರರು ತಮ್ಮ ಆ ಹೋರಾಟದಲ್ಲಿ ವಿಫಲತೆ ಕಂಡಿದ್ದರು ಅರ್ಥಾತ್ ಹಿಂದೂಗಳಿಂದ ವೈಫಲ್ಯ ಕಂಡಿದ್ದರು, ಹಾಗೆಯೇ ಹಲ್ಲೆಗೊಳಗಾಗಿದ್ದರು.
   ಬಾಬಾಸಾಹೇಬರು ಜೀವನದಲ್ಲಿ ಯಾವುದೇ ಹೋರಾಟವನ್ನು ತಮಾಷೆಗೆ ತೆಗೆದುಕೊಂಡವರಲ್ಲ. ಫಲಿತಾಂಶ ಬರಬೇಕು ಇಲ್ಲದಿದ್ದರೆ, ಏನು ಫಲಿತಾಂಶ ಬರಬೇಕು ಎಂಬುದನ್ನು ಅವರೇ ನಿರ್ಧರಿಸಿಬಿಡುತ್ತಿದ್ದರು. ನಾಸಿಕ್‍ನ ಕಾಳಾರಾಂ ದೇವಸ್ಥಾನ ಪ್ರವೇಶವನ್ನು ಅವರು ಅಕ್ಷರಶಃ ಬಯಸಿದ್ದರು, ಫಲ ಸಿಗಲಿಲ್ಲ. ಆದರೆ ಆ ಫಲಕ್ಕೆ ಅವರು ಹಿಂದೂ ಧರ್ಮ ತೊರೆಯುವ ಘರ್ಜನೆಯ ಮೆರುಗು ನೀಡಿದ್ದರು. ಸುಮ್ಮನೇ ಮೆರುಗು ನೀಡಿದರಾಯಿತೆ? ಕಾರ್ಯರೂಪಕ್ಕೆ ಬರುವುದು ಬೇಡವೆ? ಅದಕ್ಕೇ ಅಂಬೇಡ್ಕರರು ಆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಮ್ಮೇಳನ ಆಯೋಜಿಸಿದ್ದು ಮತ್ತು ಅದಕ್ಕೆ ಸ್ಫೂರ್ತಿ ಎಂಬಂತೆ ಈ ಘೋಷಣೆಗಳನ್ನು ಹೊತ್ತ ಫಲಕಗಳು.
     ಅಂಬೇಡ್ಕರರ ಉಳಿದ ಘೋಷಣೆಗಳನ್ನು ದಾಖಲಿಸುವುದಾದರೆ
8. ನಿಮ್ಮನ್ನು ಮಾನವರಂತೆ ಕಾಣದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
9. ನಿಮ್ಮನ್ನು ದೇವಸ್ಥಾನಗಳನ್ನು ಪ್ರವೇಶಿಸಲಿಕ್ಕೆ ನಿರ್ಬಂಧಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
10. ನಿಮಗೆ ಕುಡಿಯುವ ನೀರನ್ನು ನಿರಾಕರಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
11. ನೀವು ಶಿಕ್ಷಣ ಪಡೆಯುವುದನ್ನು ಒಪ್ಪದ ಆ ಧರ್ಮದಲ್ಲಿ ನೀವೇಕೆ ಇರುವಿರಿ?
12. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ಅವಮಾನಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
13. ನೀವು ಉದ್ಯೋಗ ಪಡೆಯಲಿಕ್ಕೆ ತಡೆಯೊಡ್ಡುವ ಆ ಧರ್ಮದಲ್ಲಿ ನೀವೇಕೆ ಇರುವಿರಿ?
    ಹೀಗೆ ಕೇಳುತ್ತಾ ಹೋಗುತ್ತವೆ ಅಂಬೇಡ್ಕರರ ಆ ಪ್ರಶ್ನಾರೂಪದ ಆ ಘೋಷಣೆಗಳು. ಅಂಬೇಡ್ಕರರ ಈ ಪ್ರಶ್ನೆಗಳು ಅದು ಅಂದಿನ 1936ಕ್ಕೆ ಸೀಮಿತವೆಂಬಂತೆ ಕಾಣುತ್ತವೆಯೇ? ಖಂಡಿತ ಇಲ್ಲ. ಅವು ಈಗಲೂ ಪ್ರಸ್ತುತ, ಅಂತೆಯೇ ಅಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತವೆ. ಬೇಡ, ಅಂತಹ ಪ್ರಸ್ತುತತೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವುದು ಬೇಡ. ಬದಲಿಗೆ ಅಂಬೇಡ್ಕರರ ಅಂತಹ ಉಳಿದ ಘೋಷಣೆಗಳತ್ತ ಗಮನಹರಿಸುವುದಾದರೆ...
14. ಮನುಷ್ಯ ಮನುಷ್ಯರ ನಡುವೆ ಸಹಜ ಸಂಬಂಧವನ್ನು ನಿಷೇಧಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ಬಲಪ್ರದರ್ಶನ.
15. ಮಾನವತೆಗೆ ಮಾನ್ಯತೆ ನೀಡುವುದನ್ನು ಅಧರ್ಮವೆಂದು ಪರಿಗಣಿಸುವ ಧರ್ಮ ಧರ್ಮವೇ ಅಲ್ಲ, ಬದಲಿಗೆ ಅದೊಂದು ರೋಗ.
16. ಅಪವಿತ್ರ ಪ್ರಾಣಿಗಳ ಸ್ಪರ್ಶವನ್ನು ಮಾನ್ಯಮಾಡುವ ಆದರೆ ಮಾನವರ ಸ್ಪರ್ಶವನ್ನು ನಿಷೇಧಿಸುವ ಧರ್ಮ ಅದೊಂದು ಧರ್ಮವೇ ಅಲ್ಲ, ಬದಲಿಗೆ ಅದೊಂದು ಮೂರ್ಖತನ.
17. ಒಂದು ವರ್ಗ ಶಿಕ್ಷಣ ಪಡೆಯದಂತೆ ಪ್ರತಿಬಂಧಿಸುವ, ಅದು ಐಶ್ವರ್ಯ ಪಡೆಯದಂತೆ, ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದದಂತೆ ನಿರ್ಬಂಧಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಮಾನವ ಜೀವನ ಅಪಹಾಸ್ಯ.
18. ಬಡವನನ್ನು ಬಡವನಂತೆಯೇ ಇರಲು, ಅಶಿಕ್ಷಿತನನ್ನು ಅಶಿಕ್ಷಿತನಂತೆಯೇ ಇರಲು ಒತ್ತಾಯಪಡಿಸುವ ಧರ್ಮ ಧರ್ಮವೇ ಅಲ್ಲ, ಅದೊಂದು ಶಿಕ್ಷೆ.
  ಸಾಕೆ? ಅಂಬೇಡ್ಕರರ ಅಂತಹ ಘೋಷಣಾ ರೂಪದ ವಾಖ್ಯೆ? ಅಥವಾ ಇದಕ್ಕಿಂತಲೂ ಹೆಚ್ಚು ಇನ್ನೇನಾದರೂ ಬೇಕೆ? ಖಂಡಿತ ಸಾಕೆನಿಸುತ್ತದೆ. ಧರ್ಮವೆಂದರೆ ಅದೇನು ಗೊಂಬೆಯಲ್ಲ, ಪ್ರಾಣಿಯಲ್ಲ, ಪಕ್ಷಿಯಲ್ಲ. ಗಿಡ-ಮರ, ರೆಂಬೆ-ಕೊಂಬೆ, ನವಿಲು-ಗುಬ್ಬಚ್ಚಿ ಯಾವುದೂ ಅಲ್ಲ. ಬದಲಿಗೆ ಅದೊಂದು ಹಿತಾಸಕ್ತಿಗಳನ್ನು ಹೊಂದಿರುವ ಮನುಷ್ಯರ ಸಮೂಹ. ಅಂತಹ ಮನುಷ್ಯರ ಸಮೂಹದ ಸಂಗದ ಬಗ್ಗೆ ಕಡೆಯದಾಗಿ ಹೇಳುವ ಅಂಬೇಡ್ಕರರ ಘೋಷಣೆಗಳನ್ನು ಕೇಳಿ.
19. ಯಾರು ದೇವರನ್ನು ಸರ್ವವ್ಯಾಪಿ ಎಂದು ಬೋಧಿಸುತ್ತಾರೆಯೋ ಮತ್ತು ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅಂತಹ ಜನರ ಜೊತೆ ಸೇರಬೇಡಿ.
20. ಯಾರು ಇರುವೆಗಳಿಗೆ ಸಕ್ಕರೆ ನೀಡಿ ಮನುಷ್ಯರಿಗೆ ಕುಡಿಯಲು ನೀರು ಕೊಡದೆ ನಿಷೇಧಿಸಿ ಅವರನ್ನು ಕೊಲ್ಲುತ್ತಾರೆಯೋ ಅವರು ಕಪಟಿಗಳು. ಖಂಡಿತ, ಅವರ ಜೊತೆ ಸೇರಬೇಡಿ. (ಅಂಬೇಡ್ಕರ್ ಬರಹಗಳು. ಇಂಗ್ಳಿಷ್.ಸಂ.17, ಭಾಗ.3, ಪು.113)
  ಬೇಸರವೆನಿಸುತ್ತಿದೆಯೇ ಮನಸ್ಸು ಕಳಾಹೀನವಾಗುತ್ತಿದೆಯೇ ಅಂಬೇಡ್ಕರರ ಈ ಘೋಷಣೆಗಳನ್ನು ಕೇಳಿ? ಅಥವಾ ಅಂಬೇಡ್ಕರರ ಈ ಘೋಷಣೆಗಳು ಸುಳ್ಳು ಎನಿಸುತ್ತಿವೆಯೇ? ಸುಳ್ಳೆನಿಸಿದರೆ ಅಂಬೇಡ್ಕರರ ಈ ಕಡೆಯ ಘೋಷಣೆಗೆ ಪೂರಕವಾಗಿ ಈಗಲೂ ನಡೆಯುತ್ತಿರುವ ಈ ಕೆಳಗಿನ ಒಂದು ಆಚರಣೆಯನ್ನು ಗಮನಿಸಿ. ಮೈಸೂರಿನಲ್ಲಿ ಒಂದು ಆಶ್ರಮವಿದೆ. ಆ ಆಶ್ರಮದ ಹೆಸರು, ಅದರ ಸ್ವಾಮೀಜಿ ಅದರ ಪ್ರಸ್ತಾಪ ಬೇಡ. ಆದರೆ ಆ ಆಶ್ರಮದಲ್ಲಿ ಒಂದು ಅತ್ಯಪರೂಪದ ವನವಿದೆ. ಅದು ಶುಕ ವನ. ಅಂದರೆ ಗಿಳಿಗಳ ವನ. ಆ ವನದಲ್ಲಿ ನಾನಾ ಬಗೆಯ ಗಿಳಿಗಳಿವೆ. ಅವಕ್ಕೆ ಥರಥರದ ಹಣ್ಣುಗಳು, ವಿಧವಿಧದ ವರ್ಣರಂಜಿತ ಪಂಜರಗಳು, ನೋಡಿಕೊಳ್ಳಲು ವೈದ್ಯರುಗಳು, ಸೇವಕರುಗಳು... ಒಟ್ಟಿನಲ್ಲಿ ಅಂಬೇಡ್ಕರರು ಹೇಳಿದ “ಇರುವೆಗಳಿಗೆ ಸಕ್ಕರೆ ಉಣಿಸುವವರು ದೃಷ್ಟಾಂತದಂತೆ” ಮೈಸೂರಿನ ಆ ಆಶ್ರಮದಲ್ಲಿ ಗಿಳಿಗಳಿಗೆ ರಾಜೋಪಚಾರ! ಅದೇ ಆಶ್ರಮದ ಅನತಿ ದೂರದಲ್ಲೇ ಸ್ಲಂಗಳಿವೆ! ಅಲ್ಲಿ ದಲಿತರಿದ್ದಾರೆ. ಅವರ ಪಾಡು? ಆಚರಣೆಗಳು? ಮೂಲಭೂತ ಸೌಕರ್ಯಗಳು? ವ್ಯಂಗ್ಯವೆಂದರೆ ಆಶ್ರಮ ಇರುವ ಹಾಲಿ ಆ ಜಾಗ ಕೂಡ ದಲಿತರದ್ದೆ!  ಹಿಂದೆ ಮೈಸೂರು ಮಹಾರಾಜರು ದಲಿತರಿಗೆ ನೀಡಿದ್ದ ಜಾಗ ಅದು. ಆದರೆ ದಲಿತರಿಗೆ ಬಿಡಿಗಾಸು ಬಿಸಾಕಿ ಅವರ ಜಮೀನಿನನ್ನು ಆಕ್ರಮಿಸಿಕೊಂಡು ಅಲ್ಲಿ ಆಶ್ರಮ ಕಟ್ಟಲಾಗಿದೆ! ಗಿಳಿಗಳಿಗೆ ರಾಜಾತಿಥ್ಯ ನಡೆಸಲಾಗುತ್ತಿದೆ! ಪ್ರಶ್ನೆಯೇನೆಂದರೆ ಆ ಜಮೀನಿನ ಮೂಲ ಮಾಲೀಕರಾದ ದಲಿತರ ಬದುಕು? ಆಶ್ರಮದಿಂದ ಅವರಿಗೆ ಉಪಚಾರ? ದಲಿತರ ಕಷ್ಟ ನಷ್ಟಗಳಿಗೆ ನೆರವು? ಅಸ್ಪøಶ್ಯತೆಯ ನೋವಿಗೆ ಮುಲಾಮು? ಖಂಡಿತ ಶೂನ್ಯ.
   ಅಂಬೇಡ್ಕರರು ಅಂದು ಹೇಳಿದ, ಪ್ರದರ್ಶನಕಿಟ್ಟಿದ್ದ ಘೋಷಣೆಗಳು ಬರೀ ಘೋಷಣೆಗಳಲ್ಲ, ಬದಲಿಗೆ ಭಾರತದ ಧಾರ್ಮಿಕ ಬದುಕಿನ ತೆರೆದ ಪುಟಗಳು ಮತ್ತು ಅಂತಹ ಪುಟಗಳ ಪುಸ್ತಕ ಬಿಸುಟು ಹೊರಬನ್ನಿ ಎಂದು ಅಂಬೇಡ್ಕರರು ಅಂದು ಕರೆನೀಡಿದ್ದೇ ಮತಾಂತರ. ಈ ನಿಟ್ಟಿನಲ್ಲಿ ದಲಿತರು ಯಾಕೆ ಮತಾಂತರವಾಗಬೇಕು ಎಂಬ ಪ್ರಶ್ನೆಗೆ ಅಂಬೇಡ್ಕರರ ಈ ಘೋಷಣೆಗಳು ಸ್ಪಷ್ಟ ಉತ್ತರವಾಗುತ್ತವೆ.

Wednesday, 15 April 2015

'ಗಾಂಧಿ ನಿಜಕ್ಕೂ ಮಹಾತ್ಮರೇ?' ಎಂಬ ಅಂಬೇಡ್ಕರರ ಪ್ರಶ್ನೆ, ಮತ್ತವರ ಉತ್ತರ

-ರಘೋತ್ತಮ ಹೊ.ಬ

  ಗಾಂಧಿ ನಿಜಕ್ಕೂ ಮಹಾತ್ಮರೇ? ಬಾಬಾಸಾಹೇಬ್ ಅಂಬೇಡ್ಕರರು ಕೇಳಿದ ನೇರ ಪ್ರಶ್ನೆ ಇದು ಎನ್ನಬಹುದು. ಯಾಕೆಂದರೆ ಇಂತಹ ಪ್ರಶ್ನಾ ರೂಪದ Is Gandhi a Mahathma? ಎಂಬ ಲೇಖನವನ್ನು ಬಾಬಾಸಾಹೇಬರು 1938ರಲ್ಲಿ ‘ಚಿತ್ರಾ’ ಎಂಬ ಮರಾಠಿ ಪತ್ರಿಕೆಗೆ ಆ ಪತ್ರಿಕೆಯ ಆ ವರ್ಷದ ದೀಪಾವಳಿ ವಿಶೇಷಾಂಕಕ್ಕೆ ಬರೆದಿದ್ದಾರೆ ಮತ್ತು ಆ ಲೇಖನದ ಒರಿಜಿನಲ್ ಇಂಗ್ಲೀಷ್ ರೂಪ ಭಾರತ ಸರ್ಕಾರ ಈಚೆಗೆ ಪ್ರಕಟಿಸಿರುವ(2014) ‘ಅಂಬೇಡ್ಕರ್ ಬರಹಗಳು(ಇಂಗ್ಲೀಷ್), ಸಂಪುಟ 17, ಭಾಗ 2’ ರಲ್ಲಿ ಮರು ಮುದ್ರಣ ಕೂಡ ಕಂಡಿದೆ. ಸತ್ಯವನ್ನು ಹೀಗೆ ಪೀಠಿಕೆಯಲ್ಲೇ ಸ್ಪಷ್ಟಪಡಿಸಬೇಕಾಗಿದೆ. ಕಾರಣ ಕೆಲವರು ಇದನ್ನು ಪೂರ್ವಾಗ್ರಹಪೀಡಿತ ಅಥವಾ ಸ್ವಪ್ರೇರಿತ ಎಂದು ಭಾವಿಸಿಬಿಡುವ ಅಪಾಯವಿದೆ.
      ಹಾಗಿದ್ದರೆ ಅಂಬೇಡ್ಕರ್ ಏನು ಹೇಳುತ್ತಾರೆ? ಮೊದಲಿಗೆ ಅವರು ಪ್ರಾರಂಭಿಸುವುದು  Is Gandhi a Mahathma?  I am sick of this question ಅಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ? ಈ ಪ್ರಶ್ನೆಯೇ ನನಗೆ ವಾಕರಿಕೆ ತರಿಸುತ್ತದೆ’ ಎಂದು.  ಅಂಬೇಡ್ಕರರಿಗೇಕೆ ಈ ಪ್ರಶ್ನೆ ವಾಕರಿಕೆ ತರಿಸುತ್ತದೆ? ಅವರು ಎರಡು ಕಾರಣಗಳನ್ನು ನೀಡುತ್ತಾರೆ. ಅದರಲ್ಲಿ ಮೊದಲನೆಯದು “ಕಾರಣ ಕೇಳುವ ಗುಣ ಮತ್ತು ಬೌದ್ಧಿಕತೆ ಬದಲಿಗೆ ಮಹಾತ್ಮರು ಕುರುಡುನಂಬಿಕೆ ಬಿತ್ತುತ್ತಿದ್ದಾರೆ”. ಹಾಗೆಯೇ ಎರಡನೆಯದು “ವಾಸ್ತವವಾಗಿ ಮಹಾತ್ಮ ಎಂಬ ಈ ಪದಕ್ಕೆ ಜನಸಾಮಾನ್ಯರು ತಿಳಿದುಕೊಂಡಿರುವ ಅರ್ಥವಾದರೂ ಏನು?” ಎಂಬುದು. 
 ನಿಜ, ಅಂಬೇಡ್ಕರರ ಈ ಪ್ರಶ್ನೆಗಳು ಮತ್ತವರ ವಿಶ್ಲೇಷಣೆಗಳು ಕೆಲವರಿಗೆ arrogant ಎನಿಸಬಹುದು. ಆದರೆ ಅಂಬೇಡ್ಕರರು ಗಾಂಧೀಜಿಯವರ ಸಮಕಾಲೀನರು. ಸಮಕಾಲೀನರಿಗೆ ತಮ್ಮ ಕಾಲದ ವ್ಯಕ್ತಿಗಳನ್ನು ಪ್ರಶ್ನಿಸುವ, ವರ್ತನೆಗಳನ್ನು ಆಕ್ಷೇಪಿಸುವ ಅರ್ಹತೆ ಇದ್ದೇ ಇರುತ್ತದೆ. ಅದರಲ್ಲೂ ಜ್ಞಾನದಲ್ಲಿ, ಶೈಕ್ಷಣಿಕ ಅರ್ಹತೆಯಲ್ಲಿ ಅಂಬೇಡ್ಕರರು ಗಾಂಧೀಜಿಯವರಿಗಿಂತ ಉನ್ನತಮಟ್ಟದಲ್ಲಿದ್ದಾಗ ಇಂತಹ ‘ಮಹಾತ್ಮ’ ಎಂಬ ಟೈಟಲ್ಲನ್ನು ಪ್ರಶ್ನಿಸುವ ಸಹಜತೆ ಮತ್ತು ಸಾಮಥ್ರ್ಯ ಅವರಿಗೆ ಖಂಡಿತ ಬಂದೇಬರುತ್ತದೆ. ಅಂದಹಾಗೆ ಆ ಕಾಲದ ಆ ಹೊತ್ತಿನ ಅಂಬೇಡ್ಕರರ ಅಂತಹ ಅನಿಸಿಕೆ, ವಿವರಣೆ ಈಗ ಏಕೆ? ಅದು ಆ ಕಾಲದ ಆ ಸಂದರ್ಭದ್ದು ಎಂದು ಕೆಲವರು ಆಕ್ಷೇಪವ್ಯಕ್ತ್ತಪಡಿಸಬಹುದು ವಿಶೇಷವಾಗಿ ಗಾಂಧಿವಾದಿಗಳು. ಆದರೆ ಇತಿಹಾಸದ ಪ್ರಶ್ನೆಗಳು, ಅದಕ್ಕೆ ಉತ್ತರ, ನಡೆದ ಚರ್ಚೆ ನಮಗೆ ಬೆಳಕಾಗುತ್ತವೆ, ಸರಿ ತಪ್ಪುಗಳ ಪ್ರಕಲ್ಪನೆ ಮೂಡಿಸುತ್ತವೆ. ಮತ್ತೂ ವಾಸ್ತವವೆಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ?’ ಎಂಬ ಈ ಪ್ರಶ್ನೆಯನ್ನು ಅಂಬೇಡ್ಕರರೇನು ತಮಗೆ ತಾವೇ ಹಾಕಿಕೊಂಡದ್ದಲ್ಲ. ಆದರೆ ಆ ಕಾಲದ ವರ್ತಮಾನದ ಸುದ್ದಿ ಸೃಷ್ಟಿಯಂತೆ ಗಾಂಧೀಜಿಯವರನ್ನು ಎಲ್ಲರೂ ಮಹಾತ್ಮ, ಮಹಾತ್ಮ ಎನ್ನತೊಡಗಿದಾಗ ಅಂದಿನ ಮಾಧ್ಯಮ ಲೋಕ, ವಿಶೇಷವಾಗಿ ಪತ್ರಕರ್ತರು ಜಿಜ್ಞಾಸೆಗೊಳಗಾಗಿದ್ದರು ಮತ್ತು ಅಂತಹ ಜಿಜ್ಞಾಸೆಯ ಪ್ರಶ್ನೆಯಲ್ಲಿಯೇ ‘ಚಿತ್ರಾ’ ಎಂಬ ಆ ಮರಾಠಿ ಪತ್ರಿಕೆಯ ಸಂಪಾದಕರು ಇದಕ್ಕೆ ಅಂಬೇಡ್ಕರರ ಉತ್ತರ ಏನಿರಬಹುದು ಎಂದು ಕುತೂಹಲಗೊಂಡು ಮತ್ತು ಅಂತಹ ಕುತೂಹಲವನ್ನು ತಮ್ಮ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸುವ ಉತ್ಸುಕತೆ ತೋರಿ ಸದರಿ ಈ ಸಂಬಂಧ ಲೇಖನವೊಂದನ್ನು ಬರೆದುಕೊಂಡುವಂತೆ ಅವರು ಅಂಬೇಡ್ಕರರ ದುಂಬಾಲುಬಿದ್ದಿದ್ದರು. ಸಂಪಾದಕರ ಅಂತಹ ಒತ್ತಡವನ್ನು ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಈ ಕಾರಣಕ್ಕಾಗಿ ನಾನು (ಗಾಂಧಿ ನಿಜಕ್ಕೂ ಮಹಾತ್ಮರೇ?) ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ನಿರ್ಧರಿಸಿದ್ದೇನೆ” ಎನ್ನುತ್ತಾ ಜನಸಾಮಾನ್ಯರು ‘ಮಹಾತ್ಮ’ ಎಂಬ ಈ ಪದಕ್ಕೆ ತಿಳಿದುಕೊಂಡಿರುವ ಅರ್ಥವಾದರೂ ಏನು? ಎಂಬ ಪ್ರಶ್ನೆಗೆ ಉತ್ತರಿಸಲಾರಂಭಿಸುತ್ತಾರೆ.
      ಅವರು ಹೇಳುವುದೇನೆಂದರೆ “ಸಾಮಾನ್ಯ ಹಿಂದೂವೊಬ್ಬನ ಪ್ರಕಾರ ಹೇಳುವುದಾದರೆ ವ್ಯಕ್ತಿಯೋರ್ವ ವiಹಾತ್ಮ ಪಟ್ಟಕ್ಕೆ ಅರ್ಹತೆ ಗಳಿಸಲು ಮೂರು ಅಂಶಗಳನ್ನು ಹೊಂದಿರಬೇಕು. ಅವು ಆತನ ಬಟ್ಟೆ, ಆತನ ಗುಣ ಮತ್ತು ಆತನ ನಿರ್ದಿಷ್ಟ ಸಿದ್ಧಾಂತ. ಈ ಹಿನ್ನೆಲೆಯಲ್ಲಿ ಮಹಾತ್ಮರು ಯಾರು ಎಂದು ತೀರ್ಮಾನಿಸಲು ಈ ಅಂಶಗಳನ್ನು ಆಧಾರವಾಗಿ ತೆಗೆದುಕೊಳ್ಳುವುದಾದರೆ ತಿಳಿಗೇಡಿ ಮತ್ತು ತಮ್ಮ ಏಳಿಗೆಗಾಗಿ ಇತರರತ್ತ ನೋಡುವ ಅವಿದ್ಯಾವಂತ ಜನರ ದೃಷ್ಟಿಯಲ್ಲಿ ಖಂಡಿತ ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮರಾಗುತ್ತಾರೆ. ಈ ರೀತಿ ವೇಷ ಬದಲಿಸಿ ಮಹಾತ್ಮರುಗಳಾಗುವುದು ಭಾರತದಲ್ಲಿ ಯಾರಿಗೇ ಆಗಲಿ ಬಹಳ ಸುಲಭ. ಇದು ಹೇಗೆಂದರೆ ನೀವೊಂದು ವೇಳೆ ಅತಿವಿಶಿಷ್ಠವಾದ ಶ್ರೇಷ್ಠ ಕೆಲಸವನ್ನು ಸಾಮಾನ್ಯ ವೇಷ ಧರಿಸಿ ಸಾಮಾನ್ಯ ಜೀವನ ನಡೆಸುತ್ತಾ ಮಾಡಿದೆರೆಂದಿಟ್ಟುಕೊಳ್ಳಿ ಯಾರೂ ಕೂಡ ನಿಮ್ಮನ್ನು ಗಮನಿಸುವುದಿಲ್ಲ! ಆದರೆ ಅದೇ, ವ್ಯಕ್ತಿಯೊಬ್ಬ ಸಾಮಾನ್ಯ ರೀತಿಯಲ್ಲಿ ವರ್ತಿಸದೆ ವಿಚಿತ್ರ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದರೆ ಮತ್ತು ತನ್ನ ಗುಣದಲ್ಲಿ ಅಸಹಜತೆಯನ್ನು ತೋರಿಸುತ್ತಿದ್ದರೆ ಆತ ಸಂತನಾಗುತ್ತಾನೆ, ಮಹಾತ್ಮನಾಗುತ್ತಾನೆ. ಒಟ್ಟಾರೆ ನೀವೊಂದು ಸೂಟ್ ಅಥವಾ ಸಾಮಾನ್ಯ ಡ್ರೆಸ್ ಧರಿಸಿ ಏನಾದರೂ ಮಾಡುತ್ತಿರಿ ಜನ ನಿಮ್ಮತ್ತ ಕಣ್ಣೆತ್ತಿಯೂ ನೋಡಲು ಇಚ್ಛಿಸುವುದಿಲ್ಲ. ಆದರೆ ಅದೇ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ನಗ್ನನಾಗಿ ಓಡುತ್ತಿದ್ದರೆ, ಉದ್ದನೆಯ ಕೂದಲು ಬಿಟ್ಟು ಜನರನ್ನು ಬೈಯುತ್ತಿದ್ದರೆ, ಚರಂಡಿಯ ಕೊಳಕು ನೀರು ಕುಡಿಯುತ್ತಿದ್ದರೆ ಜನ ಅವನ ಪಾದಕ್ಕೆರಗುತ್ತಾರೆ! ಅವನನ್ನು ಪೂಜಿಸಲಾರಂಭಿಸುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಗಾಂಧಿ ಭಾರತದಲ್ಲಿ ಮಹಾತ್ಮರಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ”.
   ಆಶ್ಚರ್ಯವಾಯಿತೇ ಅಂಬೇಡ್ಕರರ ವಿವರಣೆ? ಮುಂದುವರಿದು ಅವರು ಹೇಳುವುದ ಕೇಳಿ “ಇಂತಹದ್ದೇನಾದರೂ ಬೇರೇ ನಾಗರಿಕ ದೇಶಗಳಲ್ಲಿ ನಡೆದಿದ್ದರೆ ಜನ ಅಂತಹವರನ್ನು ನೋಡಿ ನಗುತ್ತಿದ್ದರು”. ಅಂದಹಾಗೆ ಗಾಂಧೀಜಿಯವರ ಇಂತಹ ಮಹಾತ್ಮತನಕ್ಕೆ ಜನ ಕೊಡುವ ವಿವರಣೆ ಅವರ ‘ಸತ್ಯ’ ಮತ್ತು ‘ಅಹಿಂಸೆ’. ಪ್ರಶ್ನೆಯೇನೆಂದರೆ ಇವು(ಸತ್ಯ ಮತ್ತು ಅಹಿಂಸೆ) ಗಾಂಧೀಜಿಯವರ ಒರಿಜಿನಲ್ ಸಿದ್ಧಾಂತಗಳೇ?  ಎಂಬುದು. ಇದಕ್ಕೆ ಅಂಬೇಡ್ಕರರು ಕೊಡುವ ವಿವರಣೆ ನೋಡಿ “ಸಾಮಾನ್ಯ ನೋಡುಗನೊಬ್ಬನಿಗೆ ಗಾಂಧೀಜಿಯವರ ಬೋಧನೆಗಳು ತುಂಬಾ ಸಿಹಿಯೆನಿಸಬಹುದು, ಅಪ್ಯಾಯವೆನಿಸಬಹುದು. ಸತ್ಯ ಮತ್ತು ಅಹಿಂಸೆ ಪವಿತ್ರ ತತ್ವಗಳು. ಆ ಕಾರಣದಿಂದ ಗಾಂಧಿ ಸತ್ಯ ಮತ್ತು ಅಹಿಂಸೆಗಳನ್ನು ತಾನು ಬೋಧಿಸುತ್ತೇನೆಂದು ಘೋಷಿಸಿಕೊಂಡಿರುವುದರಿಂದ ಮತ್ತು ಜನ ಅದನ್ನು ಬಹಳ ಇಷ್ಟ ಪಟ್ಟಿರುವುದರಿಂದ ಅವರು ಅವರ ಸುತ್ತ ಸಹಸ್ರ ಸಂಖ್ಯೆಯಲ್ಲಿ ಗುಂಪುಗೂಡುತ್ತಿದ್ದಾರೆ. ಆದರೆ ನನಗೆ ಅರ್ಥವಾಗದ್ದೆಂದರೆ ಜನ ಯಾಕೆ ಹೀಗೆ ಅಂತ? ಯಾಕೆಂದರೆ ಸಹಸ್ರ ವರ್ಷಗಳ ಹಿಂದೆ ಸತ್ಯ ಮತ್ತು ಅಹಿಂಸೆಯ ಈ ಸಂದೇಶಗಳನ್ನು ಇಡೀ ಜಗತ್ತಿಗೇ ನೀಡಿದ್ದು ಭಗವಾನ್ ಬುದ್ಧ ಎಂಬುದು ವಾಸ್ತವವಲ್ಲವೆ? ಈ ನಿಟ್ಟಿನಲ್ಲಿ ಈ ವಿಷಯದ ಬಗೆಗಿನ(ಸತ್ಯ ಮತ್ತು ಅಹಿಂಸೆ) ಮೂಲ ಕ್ರೆಡಿಟ್‍ಅನ್ನು ತಿಳಿಗೇಡಿ ಮೂರ್ಖರು ಅಥವಾ ಜನ್ಮತಃ ಬುದ್ಧಿಗೇಡಿಗಳನ್ನು ಹೊರತು ಪಡಿಸಿ ಮತ್ತ್ಯಾರೂ ಕೂಡ ಗಾಂಧಿಯವರಿಗೆ ನೀಡಲಾರರು. ಹಾಗೆ ಹೇಳುವುದಾದರೆ  ಮಾನವನ ನಾಗರೀಕತೆ ರಕ್ಷಿಸಲು ಸತ್ಯ ಮತ್ತು ಅಹಿಂಸೆ ಅತ್ಯಗತ್ಯ ಎಂಬ ಘೋಷಣೆಯಲ್ಲಿ  ಹೊಸದೇನು ಇಲ್ಲ ಮತ್ತು ನಾನು ಮೊದಲೇ ಹೇಳಿದಂತೆಯೇ ಈ ವಿಷಯಗಳನ್ನು ಸಹಸ್ರ ವರ್ಷಗಳ ಹಿಂದೆಯೇ ಬೋಧಿಸಿದ್ದು ಭಗವಾನ್ ಬುದ್ಧ. ಸತ್ಯ ಮತ್ತು ಅಹಿಂಸೆಯ ಪ್ರಯೋಗದಿಂದ ಒದಗಬಹುದಾದ ಜ್ವಲಂತ ಸಮಸ್ಯೆಗಳ ಬಗ್ಗೆ  ಗಾಂಧೀಜಿಯವರೇನಾದರೂ ಬೆಳಕು ಚೆಲ್ಲಿದ್ದಿದ್ದರೆ ಅವರ ಮಹಾತ್ಮತನಕ್ಕೆ ಮತ್ತಷ್ಟು ಹೊಳಪುಬರುತ್ತಿತ್ತು. ಜಗತ್ತು ಅವರಿಗೆ ಸದಾ ಕೃತಜ್ಞವಾಗಿರುತ್ತಿತ್ತು. ಜಗತ್ತು ಇಂದು ಎರಡು ಒಗಟುಗಳಿಗೆ ಪರಿಹಾರವನ್ನು ಕುತೂಹಲದಿಂದ ಕಾಯುತ್ತಿದೆ. ಅವುಗಳನ್ನು ಹೆಸರಿಸುವುದಾದರೆ ‘ಸತ್ಯ’ದಂಥಹ ಪವಿತ್ರ ತತ್ವವನ್ನು ಎತ್ತಿಹಿಡಿಯುವುದು ಹೇಗೆ ಮತ್ತು ಯಾವ ಸಂದರ್ಭದಲ್ಲಿ ‘ಹಿಂಸೆಯನ್ನು’ ಸರಿಯಾದ ಕ್ರಿಯೆ ಎಂದು ನಿರ್ಧರಿಸಬಹುದು? ಎಂಬುದು. ಅಂದಹಾಗೆ ಗಾಂಧಿ(ಸತ್ಯ ಮತ್ತು ಅಹಿಂಸೆಯ) ಇಂತಹ ಜಟಿಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆಯೇ?” ಅಂಬೇಡ್ಕರ್ ಕೇಳುತ್ತಾ ಹೋಗುತ್ತರೆ. ಹಾಗೆಯೇ ಅವುಗಳ ಮೂಲ ಪ್ರತಿಪಾದಕನಾದ ಭಗವಾನ್ ಬುದ್ಧ “ಸತ್ಯ ಮತ್ತು ಅಹಿಂಸೆಗೆ ನಮ್ಮ ನಿಲುವು ಆಶಾವಾದದ್ದಾಗಿರಬೇಕು” ಎಂದು ಹೇಳಿದ್ದನ್ನು ಕೂಡ ಅವರು ದಾಖಲಿಸುತ್ತಾರೆ. ಒಟ್ಟಾರೆ ಅಂಬೇಡ್ಕರರ ಪ್ರಕಾರ “ಸತ್ಯ ಮತ್ತು ಅಹಿಂಸೆಯ original patent (ಮೂಲ ಹಕ್ಕು) ಬುದ್ಧನಿಗೆ ಸಲ್ಲುತ್ತದೆ”.
   ಹಾಗಿದ್ದರೆ ಸತ್ಯ ಮತ್ತು ಅಹಿಂಸೆ ಬುದ್ಧನದ್ದು ಎಂದಾದರೆ ಗಾಂಧಿ ಏನು ಮಾಡಿದರು? ಇದಕ್ಕೆ ಅಂಬೇಡ್ಕರರು ಹೇಳುವುದ ನೋಡಿ “ಗಾಂಧೀಜಿಯವರ ಪ್ರವಚನಗಳನ್ನು, ಮತ್ತವರು ಬೋಧಿಸಿದ ಅಂಶಗಳನ್ನು ಗಂಭೀರವಾಗಿ ಅಧ್ಯಯನಮಾಡಿದರೆ ನಮಗೆ ಸಿಗುವ ಉತ್ತರವೆಂದರೆ ಅವರು ಬೇರೆಯವರ ಬಂಡವಾಳದಲ್ಲಿ ವ್ಯಾಪಾರ ಮಾಡುತ್ತಾರೆ” ಎಂಬುದು! (ಹೌದು, ಗಾಂಧೀಜಿಯವರು ಬುದ್ಧನ ಬೋಧನೆಯ ಬಂಡವಾಳದಲ್ಲಿ ಸತ್ಯ ಮತ್ತು ಅಹಿಂಸೆಯ ವ್ಯಾಪಾರ ಮಾಡಿದರು!) ಬೇರೆಯವರ ಬಂಡವಾಳದಲ್ಲಿ ವ್ಯಾಪಾರ ಮಾಡುವುದು? ಹಾಗಿದ್ದರೆ ಗಾಂಧೀಜಿಯವರದ್ದು ಎಂತಹ ವ್ಯಕ್ತಿತ್ವ? ಮುಂದುವರಿದು ಅಂಬೇಡ್ಕರರು ಹೇಳುವುದ ನೋಡಿ “when I seriously study Gandhi’s character, I became exceedingly convinced that cunningness is more evident in his character than seriousness or sincerity (ಗಾಂಧೀಜಿಯವರ ಗುಣವನ್ನು ನಾನು ಗಂಭಿರವಾಗಿ ಅಧ್ಯಯನ ಮಾಡಿದಾಗ ನನಗೆ ಪರಿಪೂರ್ಣವಾಗಿ ಅರಿವಿಗೆ ಬಂದದ್ದೆಂದರೆ ಅವರ ಗುಣದಲ್ಲಿ ವಿಷಯಗಂಭೀರತೆ ಅಥವಾ ಪ್ರಾಮಾಣಿಕತೆಗಿಂತ ಕಪಟತನವೇ ಹೆಚ್ಚಿದೆ ಎಂಬುದು). ನನಗನಿಸಿದಂತೆ ನನ್ನ ದೃಷ್ಟಿಯಲ್ಲಿ ಅವರ ಕ್ರಿಯೆಗಳನ್ನು ನಕಲಿ ನಾಣ್ಯಗಳಿಗೆ ಹೋಲಿಸಬಹುದು. ಅವರ ವಿನಯಶೀಲತೆಯನ್ನು ಇಂಗ್ಲೀಷ್ ಕಾದಂಬರಿ ‘ಡೇವಿಡ್ ಕಾಪರ್‍ಫೀಲ್ಡ್’ನಲ್ಲಿ ಕಂಡುಬರುವ politeness of urea heap (ಯೂರಿಯಾ ಬೆಳೆಯ ಕೃತಕವಿನಯಶೀಲತೆಗೆ) ಹೋಲಿಸಬಹುದು. ತಮ್ಮ ಸಹಜ ಧೂರ್ತ ಬುದ್ಧಿ ಮತ್ತು ಮೋಸಮಾಡುವ ಗುಣದಿಂದಾಗಿ ಅವರು ತಮ್ಮನ್ನು ತಾವೇ ಮಂಚೂಣಿಯಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಜ ಹೇಳಬೇಕೆಂದರೆ ತನ್ನ ಸಾಮಥ್ರ್ಯದಲ್ಲಿ ನಂಬಿಕೆಯಿರುವ ಯಾವುದೇ ವ್ಯಕ್ತಿ ಜೀವನದ ಸಹಜ ವಾಸ್ತವಗಳನ್ನು ನೇರವಾಗಿ ಮತ್ತು ಪೌರುಷತನದಿಂದ ಎದುರಿಸುತ್ತಾನೆ. ಅಂತಹ ವ್ಯಕ್ತಿಗೆ ತನ್ನ ಅಂಗಿಯ ತೋಳಿನ ಸಂದಿಯಲ್ಲಿ ಕತ್ತಿಯನ್ನು ಅಡಗಿಸಿಟ್ಟುಕೊಳ್ಳುವ ಅಗತ್ಯ ಕಂಡುಬರುವುದಿಲ್ಲ. ಇದು ಹೇಗೆಂದರೆ ನೆಪೋಲಿಯನ್ ಸದಾ ನೇರವಾಗಿ, ಮುಂದಿನಿಂದ ಧಾಳಿಮಾಡುತ್ತಿದ್ದ. ವಿಶ್ವಾಸಾಘಾತದಲ್ಲಿ ಆತನಿಗೆ ನಂಬಿಕೆಯಿರಲಿಲ್ಲ ಮತ್ತು ಆ ಕಾರಣದಿಂದ ಆತ ಎಂದಿಗೂ ಹಿಂದಿನಿಂದ ಧಾಳಿಮಾಡಿದವನಲ್ಲ. ಈ ನಿಟ್ಟಿನಲ್ಲಿ ವಿಶ್ವಾಸಾಘಾತುಕತನ ಮತ್ತು ವಂಚನೆ ದುರ್ಬಲ ಮನಸ್ಸಿನವರ ಆಯುಧಗಳು, ಗಾಂಧಿ ಸದಾ ಈ ಆಯುಧಗಳನ್ನು ಬಳಸಿದ್ದಾರೆ”.
    ವಂಚನೆ... ವಿಶ್ವಾಶಾಘಾತುಕತನ... ಯೂರಿಯಾ ಕೃತಕ ರಸಗೊಬ್ಬರಂದಂತಹ ಬೆಳೆಯ ಕೃತಕ ವಿನಯಶೀಲತೆ... ಹೀಗೆ ಸಾಗುತ್ತದೆ ಅಂಬೇಡ್ಕರರಿಂದ ಗಾಂಧಿಯವರ ಗುಣ ನಿರೂಪಣೆ. ಹಾಗಿದ್ದರೆ ಗಾಂಧಿಯವರು ಯಾರನ್ನು ವಂಚಿಸಿದರು? ಉದಾಹರಣೆಗೆ ದುಂಡುಮೇಜಿನ ಸಮ್ಮೇಳನದಂತಹ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ತತ್ಪರಿಣಾಮ ಮೂಡಿಬಂದ ಪೂನಾ ಒಪ್ಪಂದದ ಪ್ರಕರಣಗಳನ್ನು ಗಮನಿಸುವುದಾದರೆ ಗಾಂಧೀಜಿಯವರು ದುಂಡುಮೇಜಿನ ಸಭೆಯಲ್ಲಿ ತಾನೇ ಅಸ್ಪøಶ್ಯರ ನಿಜವಾದ ಪ್ರತಿನಿಧಿ ಎಂದು ಹೇಳಿದರು. ಆ ಮೂಲಕ ಅವರು ಇಬ್ಬರನ್ನು ಅಂದರೆ ಒಂದು ವ್ಯಕ್ತಿ ಮತ್ತು ಅವರ ಹಿಂದೆ ಇದ್ದ ಒಂದು ಸಮುದಾಯ ಈವರ್Àರನ್ನು ವಂಚಿಸುವ ಸಂಚು ನಡೆಸಿದರು. ವ್ಯಕ್ತಿ ಅಂದರೆ ಅಂಬೇಡ್ಕರ್. ಅಂದರೆ ತಾನೇ ನಿಜವಾದ  ಅಸ್ಪøಶ್ಯರ ಪ್ರತಿನಿಧಿ ಅಂದರೆ ಅಲ್ಲಿ ಅಂಬೇಡ್ಕರ್ ಅಪ್ರಸ್ತುತ ಎಂಬಂತೆ, ಇನ್ನು ಅಂಬೇಡ್ಕರ್ ಅಪ್ರಸ್ತುತವಾದರೆ ಅವರು ಎತ್ತುವ ಬೇಡಿಕೆಗಳು, ಹೇಳಿಕೆಗಳು ಅಪ್ರಸ್ತುತ! ತಾನು ಹೇಳಿದ್ದೇ ಸರಿ ಮತ್ತು ನನ್ನ ಹೇಳಿಕೆಗಳ ಪ್ರಕಾರ ಬ್ರಿಟಿಷ್ ಸರ್ಕಾರ ಅಸ್ಪøಶ್ಯರಿಗೆ ಏನನ್ನೂ ನೀಡಬಾರದು, ಮತ್ತು ಹಾಗೆ ನೀಡುವ ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಡಬೇಕು! (ಹಿಂದೂಗಳಿಗೆ ನೀಡಬೇಕು, ಇದಕ್ಕೆ ಈಗಿನ ಉದಾಹರಣೆಯೊಂದನ್ನು ನೀಡುವುದಾದರೆ ರಾಜ್ಯದಲ್ಲಿ ಹಿಂದೂಗಳ ವತಿಯಿಂದ ನಡೆಯುತ್ತಿರುವ ಸರ್ಕಾರಿ ಅನುದಾನಿತ ಲಕ್ಷಾಂತರ ಶಿಕ್ಷಣ ಸಂಸ್ಥೆಗಳಿವೆ. ನಿಮಗೆ ನೆನಪಿರಲಿ, ಈ ಸಂಸ್ಥೆಗಳು ತಾವು ನಡೆಸುತ್ತಿರುವ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಸಂವಿಧಾನಬದ್ಧ ಮೀಸಲಾತಿ ನೀಡಬೇಕು. ಆದರೆ ಮೋಸವೆಂದರೆ ಹಾಗೆ ಸಹಜ ರೋಸ್ಟರ್ ಪದ್ಧತಿಯ ಹುದ್ದೆಗಳ ಮೀಸಲಾತಿಯನ್ನು ಈ ಅನುದಾನಿತ ಹಿಂದೂ ಶಿಕ್ಷಣಸಂಸ್ಥೆಗಳು ಪರಿಶಿಷ್ಟರಿಗೆ ನೀಡಿಯೇ ಇಲ್ಲ! ಪ್ರಶ್ನೆಯೇನೆಂದರೆ ಅಂದು ಗಾಂಧಿಯವರು ಬ್ರಿಟಿಷರ ಮುಂದೆ ಹೇಳಿದ ಹಾಗೆ ಅಸ್ಪøಶ್ಯರಿಗೆ ಅನುಕೂಲ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಟ್ಟಿದ್ದರೆ? ಅಂಬೇಡ್ಕರ್ ಮೋಸವೆನ್ನುವುದು, ವಂಚನೆಯೆನ್ನುವುದು ಈ ಕಾರಣಕ್ಕೇನೆ!)
    ಹೀಗೆ ಒಂದು ಜನಾಂಗವನ್ನು ಸಾಮೂಹಿಕವಾಗಿ ವಂಚಿಸುವ ಗಾಂಧಿಯವರ ಹೇಳಿಕೆಯ ಪರಿಯೊಂದನ್ನು ಗಮನಿಸುವುದಾದರೆ, ಗಾಂಧಿಯವರು ಹೇಳಿದ್ದು “ಅಸ್ಪøಶ್ಯರಿಗೆ ಪ್ರತ್ಯೇಕ ಅನುಕೂಲ ನೀಡುವುದರಿಂದ ಹಿಂದೂಧರ್ಮದಲ್ಲಿ ಒಡಕು ಉಂಟಾಗುತ್ತದೆ”. ಇದು ಹೇಗೆಂದರೆ “ಹೌದಲ್ಲವೆ, ಗಾಂಧಿಯವರು ಹೇಳುವುದು? ಪ್ರತ್ಯೇಕ? ಇದರಿಂದ ಹಿಂದೂಧರ್ಮ ಒಡೆದುಹೋಗುತ್ತದೆಯಲ್ಲವೆ?” ಎಂದು ಎಲ್ಲರೂ ತಲೆದೂಗುವಂತೆ! ವಾಸ್ತವವೆಂದರೆ ಇಂತಹ ತಲೆದೂಗುವಿಕೆಯನ್ನೇ, ಕಸಿಯಲ್ಪಡುವ ಅಸ್ಪøಶ್ಯರ ಹಕ್ಕುಗಳ ಗಾಂಧಿಯವರ ಇಂತಹ ನಡೆಯನ್ನೆ ವಂಚನೆ, ವಿಶ್ವಾಸಾಘಾತುಕತನ, ಮೋಸಗೊಳಿಸುವ ಪ್ರಕ್ರಿಯೆ ಎಂದು ಅಂಬೇಡ್ಕರರು ಕರೆದದ್ದು.
      ಮುಂದುವರಿದು ಅಂಬೇಡ್ಕರರು ಗಾಂಧಿಯವರ ಇಂತಹ ವಂಚನೆಯ ಘಟನೆಗಳ ಮತ್ತಷ್ಟನ್ನು ದಾಖಲಿಸುತ್ತಾರೆ. ಅದೆಂದರೆ ಹಲವು ವರ್ಷಗಳ ಕಾಲ ಗಾಂಧಿ ತಾನು ಮಂದಗಾಮಿ ನಾಯಕ ಗೋಪಾಲ ಕೃಷ್ಣ ಗೋಖಲೆಯವರ ಅನುಯಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ ಇದ್ದಕ್ಕಿಂದಂತೆ ಅದೇ ಗಾಂಧಿ ಒಂದು ದಿನ ಕಾಂಗ್ರೆಸ್ ತೀವ್ರಗಾಮಿ ನಾಯಕ ಬಾಲಗಂಗಾಧರ ತಿಲಕ್‍ರನ್ನು ಹೊಗಳಲು ಆರಂಭಿಸಿದ್ದರು! ತದನಂತರ ಅವರು ತಿಲಕರನ್ನೂ ದ್ವೇಷಿಸಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸ್ವರಾಜ್ಯ ನಿಧಿಗಾಗಿ 10ಲಕ್ಷ ಸಂಗ್ರಹಿಸುವ ಜವಾಬ್ದಾರಿ ಒದಗಿಬಂತು, ಅಲ್ಲದೆ ತಾವು ದ್ವೇಷಿಸುತ್ತಿದ್ದ ಅದೇ ಬಾಲಗಂಗಾಧರ ತಿಲಕರ ಹೆಸರನ್ನು ಆ ಸಮಯದಲ್ಲಿ ಬಳಸದಿದ್ದರೆ 10ಲಕ್ಷ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂಬ ಗುಟ್ಟು ಕೂಡ ಅವರಿಗೆ ತಿಳಿದುಹೋಯಿತು! ತಡಮಾಡದೇ ಸಾಮಾನ್ಯ ಕ್ಷುಲ್ಲಕ ರಾಜಕಾರಣಿಯಂತೆ ಗಾಂಧಿಯವರು ಹಣದ ಆಸೆಗಾಗಿ ಆ ನಿಧಿಗೆ ‘ತಿಲಕ್ ಸ್ವರಾಜ್ಯ ನಿಧಿ’ ಎಂದು ಹೆಸರಿಟ್ಟರು! ಹಾಗೇ 10ಲಕ್ಷ ಸಂಗ್ರಹಿಸಿದರೂ ಕೂಡ! ಒಟ್ಟಾರೆ ಅಂಬೇಡ್ಕರರು ಉಲ್ಲೇಖಿಸುವ ಈ ದೃಷ್ಟಾಂತದಲ್ಲಿ ನಾವು ಗಾಂಧಿಯವರ ‘ವೇಷ ಬದಲಿಸುವ ವ್ಯಾಪಾರಿ ಬುದ್ಧಿ’ಯನ್ನು ಢಾಳಾಗಿ ಕಾಣಬಹುದು.
    ಇಲ್ಲಿ ಅಂಬೇಡ್ಕರರು ಉಲ್ಲೇಖಿಸುವ ಎರಡನೇ ಘಟನೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟಿದ್ದು. ಅಂಬೇಡ್ಕರರ ಭಾಷೆಯಲ್ಲೇ ಹೇಳುವುದಾದರೆ “ಗಾಂಧಿ ಕ್ರಿಶ್ಚಿಯನ್ ಧರ್ಮದ ಉಗ್ರ ವಿರೋಧಿಯಾಗಿದ್ದರೂ ‘ಪಾಶ್ಚಿಮಾತ್ಯ ಪ್ರಪಂಚವನ್ನು ಮೆಚ್ಚಿಸಲು’ ಆಗಾಗ ಬಿಕ್ಕಟ್ಟಿನ ಸಮಯದಲ್ಲಿ ಅವರು ಬೈಬಲ್‍ನ ಉಲ್ಲೇಖಗಳನ್ನು ಬಳಸುತ್ತಿದ್ದರು” ಎಂಬುದು! ಇನ್ನು ದುಂಡು ಮೇಜಿನ ಸಭೆಯ ಸಂದರ್ಭವೊಂದನ್ನೂ ಸ್ವತಃ ಅಂಬೇಡ್ಕರರೇ ಇಲ್ಲಿ ದಾಖಲಿಸುತ್ತಾರೆ. ಅದನ್ನು ಯಥಾವತ್ ನೀಡುವುದಾದರೆ “ದುಂಡುಮೇಜಿನ ಸಭೆಯ ಸಂದರ್ಭದಲ್ಲಿ ಅವರು(ಗಾಂಧಿ) ಜನತೆಗೆ ವಾಗ್ದಾನ ನೀಡಿದ್ದೇನೆಂದರೆ ಶೋಷಿತ ವರ್ಗಗಳು ಮಂಡಿಸುವ ಯಾವುದೇ ಬೇಡಿಕೆಗಳ ವಿರುದ್ಧವೂ ನಾನು ದನಿ ಎತ್ತುವುದಿಲ್ಲ ಎಂದು. ಆದರೆ ಶೋಷಿತ ವರ್ಗಗಳ ಜನರ ಪ್ರತಿನಿಧಿಗಳು ಬೇಡಿಕೆ ಮಂಡಿಸಿದ ತತಕ್ಷಣವೇ ಅದೇ ಗಾಂಧೀಜಿ ಜನತೆಗೆ ತಾನು ನೀಡಿದ ವಾಗ್ದಾನ ಮರೆತರು. ಇದನ್ನು ನಾನು  ಶೋಷಿತ ವರ್ಗಗಳಿಗೆ ಸೇರಿದ ಜನರಿಗೆ ಗಾಂಧಿ ಮಾಡಿದ ವಿಶ್ವಾಸ ದ್ರೋಹ ಎನ್ನುತ್ತೇನೆ. ಯಾಕೆಂದರೆ (ಅದೇ ದುಂಡುಮೇಜಿನ ಸಭೆಯ ಅದೇ ಸಮಯದಲ್ಲಿ) ಮುಸ್ಲೀಮರ ಬಳಿಗೆ ತೆರಳಿದ ಗಾಂಧಿ ಮುಸ್ಲೀಮರ ಬೇಡಿಕೆಗಳನ್ನು ನಾನು ಬೆಂಬಲಿಸುತ್ತೇನೆ. ಆದರೆ ಅದಕ್ಕೆ ಪ್ರತಿಯಾಗಿ ನೀವು(ಮುಸ್ಲೀಮರು) ದುರ್ಬಲ ವರ್ಗಗಳವರ ಪ್ರತಿನಿಧಿಗಳು ಮಂಡಿಸುವ ಬೇಡಿಕೆಗಳನ್ನು ವಿರೋಧಿಸಬೇಕು ಎಂದು ಹೇಳುತ್ತಾರೆ” ಎನ್ನುತ್ತಾ, ಅಂಬೇಡ್ಕರರು ಈ ಸಂದರ್ಭದಲ್ಲಿ Even a scoundrel would not have done this (ಒರ್ವ ದುಷ್ಟ ಕೂಡ ಹೀಗೆ ಮಾಡಲಾರ) ಎಂಬ ವಾಕ್ಯ ಬಳಕೆ ಮಾಡುತ್ತಾ Even a scoundrel would not have done this (ಈ ಪ್ರಕರಣ ಗಾಂಧಿಯವರ ವಿಶ್ವಾಸಾಘಾತುಕತನಕ್ಕೆ ಕೇವಲ ಒಂದು ನಿದರ್ಶನವಷ್ಟೆ) ಎನ್ನುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ.2, ಪು.68)
    ಖಂಡಿತ, ಅಂಬೇಡ್ಕರರ ವಾಕ್ಯ ಬಳಕೆ ಅತಿ ಎನಿಸಬಹುದು. ಆದರೆ “ಒಂದು ಜನಾಂಗದ (ಅಸ್ಪøಶ್ಯರ) ವಿರುದ್ಧ ಇನ್ನೊಂದು ಜನಾಂಗವನ್ನು(ಮುಸ್ಲೀಮರು) ಎತ್ತಿಕಟ್ಟಿದ್ದು ಮತ್ತು ನಾವು ನಿಮ್ಮನ್ನು ಬೆಂಬಲಿಸಬೇಕಾದರೆ ನೀವು ಅವರನ್ನು ವಿರೋಧಿಸಿಬೇಕು” ಎಂದು ಗಾಂಧಿ ಬ್ಲಾಕ್‍ಮೇಲ್ ಮಾಡಿದ್ದು ‘ಪ್ರಾಮಾಣಿಕತೆ’ಯ ಪ್ರಕ್ರಿಯೆಯಾಗುತ್ತದೆಯೇ? ಹಾಗೆಯೇ ಭಾರತದಲ್ಲಿ ತಾನು ಅಸ್ಪøಶ್ಯರ ಬೇಡಿಕೆಗಳ ವಿರುದ್ಧ ಮಾತನಾಡುವುದಿಲ್ಲ ಎಂಬ ಆಶ್ವಾಸನೆಯ ಮಾತುಗಳನ್ನಾಡಿ ತಮ್ಮ ಆ ಆಶ್ವಾಸನೆಗೆ ವಿರುದ್ಧವಾಗಿ ಅದೇ ಅಸ್ಪøಶ್ಯರ ಬೇಡಿಕೆಗಳ ವಿರುದ್ಧ ಗಾಂಧಿ ಮಾತನಾಡಿದ್ದು, ಪ್ರಬಲವಾಗಿ ವಿರೋಧಿಸಿದ್ದು ಅದು ಅವರ ಬಹಿರಂಗ ಸುಳ್ಳಿನ ಹೇಳಿಕೆಯಾಗುತ್ತದೆಯಲ್ಲವೆ? ಮತ್ತು ಹಾಗೇ ಅದು ಗಾಂಧಿ ಅಸ್ಪøಶ್ಯರಿಗೆ ಎಸಗಿದ ವಿಶ್ವಾಸಘಾತುಕತನಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆಯಲ್ಲವೆ?
     ಆಶ್ಚರ್ಯವೆಂದರೆ ದುಂಡುಮೇಜಿನ ಸಭೆಯಲ್ಲಿ ಅಸ್ಪøಶ್ಯರ ಬೇಡಿಕೆಗಳನ್ನು ವಿರೋಧಿಸಿ ಮುಸ್ಲೀಮರ ಬೇಡಿಕೆಗಳನ್ನು ಬೆಂಬಲಿಸುವ ಗಾಂಧಿ ಮತ್ತೊಂದು ಪ್ರಮುಖ ಸಂದರ್ಭದಲ್ಲಿ ಮುಸ್ಲೀಮರ ಬೇಡಿಕೆಗಳನ್ನೂ ವಿರೋಧಿಸುತ್ತಾರೆ! ಅಂಬೇಡ್ಕರರು ಪ್ರಸ್ತಾಪಿಸುವ ಆ ಘಟನೆಯ ಸಾರವನ್ನು ನೀಡುವುದಾದರೆ, ಹಿಂದೆ ಕಾಂಗ್ರೆಸ್ ಸಮಾವೇಶದ ಸಮಯವೊಂದರಲ್ಲಿ ಜವಹಾರಲಾಲ್ ನೆಹರೂರವರ ತಂದೆ  ಮೋತಿಲಾಲ್ ನೆಹರೂರವರು ತಯಾರಿಸಿದ್ದ ವರದಿಯೊಂದು ಮಂಡನೆಯಾಗಿತ್ತು. ಆ ವರದಿ ‘ನೆಹರೂ ಸಮಿತಿ ವರದಿ’ ಎಂದೇ ಪ್ರಸಿದ್ಧ. ಆ ಸಮಾವೇಶದಲ್ಲಿ ಆ ವರದಿ ಮಂಡನೆಯಾಗುತ್ತಲೇ ಆ ವರದಿಗೆ ಸಂಬಂಧಪಟ್ಟ ಕೆಲವು ತಿದ್ದುಪಡಿಗಳನ್ನು ಸ್ವತಃ ತಾವೇ ವಿರೋಧಿಸದ ಗಾಂಧಿ ತಮ್ಮ ಪರವಾಗಿ ಜಯಕರ್ ಎಂಬುವವರನ್ನು ಬಾಡಿಗೆಗೆ ಪಡೆದು ಛೂ ಬಿಡುತ್ತಾರೆ! ಅಂದಹಾಗೆ ಆ ತಿದ್ದುಪಡಿಗಳು ಯಾರಿಗೆ ಸಂಬಂಧಪಟ್ಟವಾಗಿದ್ದವೆಂದರೆ ಮುಸ್ಲೀಮರಿಗೆ! ಮತ್ತು ಆ ತಿದ್ದುಪಡಿಗಳನ್ನು ತನ್ನ ಸಮುದಾಯದ ಪರವಾಗಿ ಅಂಗೀಕರಿಸುವಂತೆ ಸ್ವತಃ ಅವುಗಳನ್ನು ಸಲಹೆಮಾಡಿದ್ದು ಅಂದಿನ ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ಮಹಮ್ಮದಾಲಿ ಜಿನ್ನಾ! ಹಾಗಿದ್ದರೆ ಯಾಕೆ ಗಾಂಧೀಜಿ ಅಂತಹ ತಿದ್ದುಪಡಿಗಳನ್ನು ವಿರೋಧಿಸಿದರು? ಖಂಡಿತ, ಆ ತಿದ್ದುಪಡಿಗಳ ಮೂಲಕ ಮುಸ್ಲೀಮರ ಹಲವು ಪ್ರಮುಖ ಬೇಡಿಕೆಗಳು ಈಡೇರುತ್ತಿತ್ತು! ಆದರೆ ಎಲ್ಲಿ ಮುಸ್ಲೀಮರಿಗೆ ಅವರ ಎಲ್ಲಾ ಹಕ್ಕುಗಳು ದೊರಕಿಬಿಡುತ್ತದೋ ಎಂದು ಯೋಚಿಸಿದ ಗಾಂಧೀಜಿಯವರು ತನ್ನ ಶಿಷ್ಯರನ್ನು ಅಂತಹ ಐತಿಹಾಸಿಕ ಮುಸ್ಲಿಂ ಪರವಾದ ತಿದ್ದುಪಡಿಗಳ ವಿರುದ್ಧ ಛೂ ಬಿಟ್ಟಿದ್ದರು ಮತ್ತು ಅವು ಬಿದ್ದುಹೋಗುವ ಹಾಗೆ ನೋಡಿಕೊಂಡರು! ಅಂದಹಾಗೆ ಅಂಬೇಡ್ಕರರ ಪ್ರಕಾರ ‘ನೆಹರೂ ಸಮಿತಿ ವರದಿ’ಗೆ ಸೂಚಿಸಿದ್ದ ಆ ತಿದ್ದುಪಡಿಗಳೇನಾದರೂ ಅಂದೇ ಅಂಗೀಕಾರಗೊಂಡಿದ್ದರೆ ಇಂದಿಗೂ ಉಗ್ರರೂಪದಲ್ಲಿರುವ ‘ಹಿಂದೂ-ಮುಸ್ಲಿಂ ದ್ವೇಷ’ ಅಂದೇ ಕೊನೆಯಾಗಿರುತ್ತಿತ್ತು! ಈ ನಿಟ್ಟಿನಲ್ಲಿ ಅಂಬೇಡ್ಕರರ ಆ ವಾಕ್ಯವನ್ನಿಲ್ಲಿ ಯಥಾವತ್ ದಾಖಲಿಸುವುದಾದರೆ Hindu-Moslem hostility is the result of deceitful action on the part of Gandhi (ಗಾಂಧಿಯವರ ಕಡೆಯಿಂದ ಆದ ಮೋಸಗಾರಿಕೆಯ ಕೃತ್ಯದ ಪರಿಣಾಮವೇ ಹಿಂದೂ-ಮುಸ್ಲಿಂ ದ್ವೇಷ). ಹಾಗೆ ಹೇಳುತ್ತಾ ಅಂಬೇಡ್ಕರರು “ಮುಸ್ಲೀಮರು ಮತ್ತು ಅಸ್ಪøಶ್ಯರ ಸ್ನೇಹಿತ ಎಂದು ಯಾರು ಪರಿಗಣಿಸಲ್ಪಟ್ಟಿದ್ದರೋ ಮತ್ತು ಅವರ ಏಳ್ಗೆಯಲ್ಲಿ ತಾನು ಚಾಂಪಿಯನ್ ಎಂದು ಯಾರು ಹೇಳಿಕೊಂಡಿದ್ದರೋ ಅದೇ ವ್ಯಕ್ತಿ ಆ ಸಮುದಾಯಗಳ ಜನರ ಮೂಲ ಆಶಯಕ್ಕೆ ವಿಶ್ವಾದ್ರೋಹವೆಸಗಿದರು. ಇದು ನಿಜಕ್ಕೂ ನನಗೆ ತೀವ್ರ ನೋವುಂಟುಮಾಡುವಂತಹದ್ದು. ಈ ಸಂದರ್ಭಕ್ಕೆ ತಕ್ಕಂತೆ ಹಳೆಯದೊಂದು ಗಾದೆ ಇದೆ, ‘ಬಗಲ್ ಮೇ ಚೂರಿ, ಮೂಹ್ ಮೇ ರಾಮ್’(ಬಾಯಲ್ಲಿ ದೇವರ ಹೇಸರು, ಕಂಕುಳಲ್ಲಿ ಕತ್ತಿ)’ ಈ ನಿಟ್ಟಿನಲ್ಲಿ ‘ಇಂತಹ ವ್ಯಕ್ತಿಯನ್ನು’ ನಾವು ‘ಮಹಾತ್ಮ’ ಎಂದು ಕರೆಯುವುದಾದರೆ ಖಂಡಿತ by all means call Gandhi a Mahatma.  ನನ್ನ ಪ್ರಕಾರ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿಯಷ್ಟೆ”.
       ಹೀಗೆ ಹೇಳುತ್ತಾ ಅಂಬೇಡ್ಕರರು Is Gandhi a Mahatma?  ಎಂಬ ತಮ್ಮ ಆ ಲೇಖನ ನಿಲ್ಲಿಸುತ್ತಾರೆ. ಹಾಗೆಯೇ “ಈ ಲೇಖನ ಬರೆದುಕೊಡಲು ಕೇಳಿದ ‘ಚಿತ್ರಾ’ ಎಂಬ ಪತ್ರಿಕೆಯ ಸಂಪಾದಕರು ಕೇಳಿದ್ದಕ್ಕಿಂತ ಹೆಚ್ಚಿನದ್ದನ್ನೆ ನಾನು ನೀಡಿದ್ದೇನೆ” ಎಂದು ಅವರು ತಿಳಿಸುತ್ತಾರೆ. ಅಲ್ಲದೆ Gandhi’s age can be called ‘Tamo Yug’ of India(ಗಾಂಧಿಯವರ ಯುಗವನ್ನು ಭಾರತದ ಇತಿಹಾಸದ ಕತ್ತಲೆಯುಗ ಎಂದು ಕರೆಯಬಹುದು) ಎಂದೂ ಕೂಡ ಅವರು ದನಿಸೇರಿಸುತ್ತಾರೆ. “ರಾಜಕಾರಣ ಇಂದು ತನ್ನ ಶೀಲ ಕಳೆದುಕೊಂಡು ಬೆತ್ತಲೆಯಾಗಿದೆ. ಈ ದಿಸೆಯಲ್ಲಿ ಭಾರತದ ರಾಜಕಾರಣದಲ್ಲಿ ವ್ಯಾಪಾರೀಕರಣವನ್ನು introduce  ಮಾಡಿದವರು ಮತ್ತು ರಾಜಕಾರಣದಲ್ಲಿರಬಹುದಾದ ನೈತಿಕತೆಯನ್ನು ನಾಶಮಾಡಿದವರಲ್ಲಿ ಪ್ರಮುಖ ಜವಾಬ್ದಾರರು ಗಾಂಧಿ” ಎನ್ನುತ್ತಾ, ಮಹಾತ್ಮರ ವಿರುದ್ಧದ ತನ್ನ ಈ ಹೋರಾಟ ಅಷ್ಟು ಸುಲಭದಲ್ಲ ಎಂಬುದನ್ನೂ ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಭಾರತದ ಜನಸಂಖ್ಯೆಯ ಬಹುತೇಕರು ಅನಾಗರೀಕ, ಅಶಿಕ್ಷಿತ ಮತ್ತು ಅರಿವಿಲ್ಲದವರು. ಇದು ಜನತೆಯ ತಪ್ಪಲ್ಲ. ಸಮಾಜದ ಅನುಕೂಲ ಪಡೆದ ಕೆಲವು ಜನ ಉದ್ದೇಶಪೂರ್ವಕವಾಗಿ ಜನಸಮೂಹವನ್ನು ತಿಳಿಗೇಡಿಗಳಂತೆ, ಅಶಿಕ್ಷಿತರಂತೆ ಇಟ್ಟಿದ್ದಾರೆ. ಪರಿಣಾಮ, (ಇಂತಹವರ ನಡುವೆ) ಕೇವಲ ವೈಚಾರಿಕತೆ ಮತ್ತು ತಾರ್ಕಿಕ ಬಲಗಳಿಂದಷ್ಟೆ ಮಹಾತ್ಮರ ವಿರುದ್ಧ ಹೋರಾಡುವುದು ದುಸ್ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಹೋರಾಟ ಬೌದ್ಧಿಕತೆ ಮತ್ತು ಮಾನಸಿಕ ವಿಲಕ್ಷಣತೆ ಹಾಗೂ ಪವಾಡಗಳ ನಡುವಿನದ್ದು” ಎನ್ನುತ್ತಾರೆ. ಆ ಮೂಲಕ ಅಂಬೇಡ್ಕರರು ತಾನು ಮಾಡುತ್ತಿರುವುದು ಎಂತಹ ಹೋರಾಟ ಎಂಬುದರ ಸೂಕ್ಷ್ಮತೆಯನ್ನು ತಿಳಿಸುತ್ತಾರೆ.
      ಹೌದು, ಅಂಬೇಡ್ಕರರ ಈ ಹೋರಾಟ ಮತ್ತು ಅಂತಹ ಹೋರಾಟದ ಮಾದರಿಯ ಈ ಲೇಖನ ಗಾಂಧೀಜಿಯವರ ನೈಜ ಮುಖವನ್ನು ಬಯಲಿಗೆಳೆಯುತ್ತದೆ. ಹಾಗಂತ ಅಂಬೇಡ್ಕರರೇನು ಗಾಂಧೀಜಿಯವರ ವೈಯಕ್ತಿಕ ವಿಷಯಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಮಹಾತ್ಮ ಎನಿಸಿಕೊಳ್ಳುವವರೊಬ್ಬ ಮುಸ್ಲೀಮರು ಮತ್ತು ಅಸ್ಪøಶ್ಯರು ಎಂಬ ಎರಡು ಬೃಹತ್ ಸಮುದಾಯಗಳನ್ನು ವಂಚಿಸಲು ನಡೆಸಿದ ಸಂಚು ಅದಕ್ಕಾಗಿ ಅವರು ಹಿಡಿದ ಅಡ್ಡದಾರಿಗಳು... ಹೇಳಿದ ಬಹಿರಂಗ ಸುಳ್ಳುಗಳು... ಖಂಡಿತ Is Gandhi a Mahatma?  ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡುತ್ತವೆ.