Sunday, 21 August 2016

ಅಂಬೇಡ್ಕರ್ ರೂಪಿಸಿದ ‘ಏಕರೂಪ ಹಿಂದೂ ಸಂಹಿತೆ’

 -ರಘೋತ್ತಮ ಹೊ.ಬ

 

     ‘ಏಕರೂಪ ನಾಗರಿಕ ಸಂಹಿತೆ’ ಹೀಗೊಂದು ಚರ್ಚೆ ದೇಶದೆಲ್ಲೆಡೆ ಪ್ರಾರಂಭವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ತನ್ನ ಅಜೆಂಡಾ ಜಾರಿಗಾಗಿ ಹೀಗೊಂದು ಚರ್ಚೆ ಹುಟ್ಟುಹಾಕಿದೆ. ಕಾನೂನು ಇಲಾಖೆಗೆ ಆ ಬಗ್ಗೆ ವರದಿ ನೀಡುವಂತೆ ಅದು ಕೇಳಿದೆ. ತರಾತುರಿ ನೋಡಿದರೆ ‘ಸಮಾನ’ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರದ ಈ ಬದ್ಧತೆ ನೆನೆಸಿಕೊಂಡರೇನೆ ಬಲ್ಲವರಿಗೆ ಅಚ್ಚರಿ ಎನಿಸದಿರದು. ಯಾಕೆಂದರೆ ಈಗ ‘ಏಕರೂಪ ನಾಗರಿಕ ಸಂಹಿತೆ’ ಜಾರಿ ತರ ಹೊರಟಿರುವ ಇದೇ ಮನಸ್ಸುಗಳೇ ಹಿಂದೆ ಅಂಬೇಡ್ಕರ್ ‘ಹಿಂದೂ ಸಂಹಿತೆ’ ರೂಪಿಸಲು ಹೊರಟಾಗ ಉಗ್ರವಾಗಿ ವಿರೋಧಿಸಿವೆ. ಆಶ್ಚರ್ಯವೆಂದರೆ ಈಗ ಇವರಿಗೆ ‘ಏಕರೂಪ ನಾಗರಿಕ ಸಂಹಿತೆ’ ಜಾರಿಯಾಗಬೇಕಾಗಿದೆ. ಅಂದರೆ ತಮ್ಮ ಮನೆಯ ಕೊಳೆ ಕಡೆ ತಕರಾರಿಲ್ಲ, ಅದು ಹಾಗೆಯೇ ಇರಲಿ ಎಂಬಂತೆ ಆದರೆ ಬೇರೆಯವರ ಮನೆ ಕಡೆ ಕಣ್ಣು! ಮತ್ತು ಇದೇ ಈ ಸಂಹಿತೆಯ ಗೊಂದಲ ಕೂಡ. ಈ ಹಿನ್ನೆಲೆಯಲ್ಲಿ ಅಂದರೆ ಏಕರೂಪ ನಾಗರಿಕ ಸಂಹಿತೆಯ ಚರ್ಚೆಯ ಈ ಹಿನ್ನೆಲೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್ ಅಂದು ರೂಪಿಸಿದ ಹಿಂದೂ ಸಂಹಿತೆ ಬಗ್ಗೆ ಸದ್ಯ ಚರ್ಚಿಸುವ ಅಗತ್ಯವಿದೆ.
     ಹಿಂದೂ ಸಂಹಿತೆ ಮಸೂದೆ ಅಥವ ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಅಂಬೇಡ್ಕರ್‍ರವರು ರಚಿಸಿದ ‘ಹಿಂದೂ ಕೋಡ್ ಬಿಲ್’ನಲ್ಲಿ ಅಂತಹದ್ದೇನಿತ್ತು? ಅದಕ್ಕೆ ಇಂದಿನ ಕರ್ಮಠ ಹಿಂದೂಗಳ ಅಂದಿನ ಪೂರ್ವಿಕರ ಅಭಿಪ್ರಾಯ? ಆದ ಗತಿ? ಈ ಹಿನ್ನೆಲೆಯಲ್ಲಿ ಅದರ ಸಾರ ದಾಖಲಿಸುವುದಾದರೆ, ಹಿಂದೂ ಸಂಹಿತೆ ಮಸೂದೆ ಮುಖ್ಯವಾಗಿ 7 ಅಂಶಗಳನ್ನು ಒಳಗೊಂಡಿತ್ತು. ಅವುಗಳೆಂದರೆ 1.ಆಸ್ತಿಯ ಹಂಚಿಕೆ. 2.ಆಸ್ತಿಗೆ ವಾರಸುದಾರರನ್ನು ಪಟ್ಟಿಮಾಡುವುದು. 3.ಜೀವನಾಂಶ. 4.ಮದುವೆ. 5.ವಿಚ್ಛೇಧನ. 6.ದತ್ತು ಸ್ವೀಕಾರ. 7.ಅಪ್ರಾಪ್ತ ವಯಸ್ಕರ ಮದುವೆ. ಇವೇ ಆ ಏಳು ಅಂಶಗಳು. ಅಂದಹಾಗೆ ಈ ಮಸೂದೆ ಹಿಂದೂಗಳಿಗಷ್ಟೆ ಸಂಬಂಧಿಸಿದ ಮಸೂದೆಯಾಗಿತ್ತು ಮತ್ತು ‘ಹಿಂದೂ’ ಎಂಬ ಆ ವ್ಯಾಪ್ತಿಯಲ್ಲಿ ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳನ್ನೂ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಅಂಬೇಡ್ಕರರು ಹಿಂದೂ ಸಂಹಿತೆ ಮಸೂದೆ ಎಂದೇ ಕರೆದಿದ್ದರು. ಹಾಗೆ ಯಾಕೆ ಹಿಂದೂಗಳಿಗೇ ಕಾನೂನು ರೂಪಿಸಬೇಕು ಎಂದು ವಿವರಿಸುತ್ತಾ ಅಂಬೇಡ್ಕರರು ಹೇಳುವುದು “ಹಿಂದೂ ಸಮಾಜ ಸದಾ ನಂಬಿರುವುದೆಂದರೆ ಕಾನೂನು ರೂಪಿಸುವ ಕೆಲಸ ಕೇವಲ ದೇವರದ್ದು ಅಥವ ಸ್ಮøತಿಯದ್ದಾಗಿದ್ದು ಅದನ್ನು ಬದಲಿಸುವ ಹಕ್ಕು ಹಿಂದೂ ಸಮಾಜಕ್ಕೆ ಇಲ್ಲ ಎಂಬುದು. ಈ ಕಾರಣಕ್ಕಾಗಿ ಹಲವು ತಲೆಮಾರುಗಳು ಕಳೆದಿದ್ದರೂ ಕೂಡ ಹಿಂದೂ ಸಮಾಜದಲ್ಲಿ ಕಾನೂನು ಬದಲಾಗದೆ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಹಿಂದೂ ಸಮಾಜ ತನ್ನ ಸಾಮಾಜಿಕ, ಆರ್ಥಿಕ ಮತ್ತು ಕಾನೂನಾತ್ಮಕ ಜೀವನವನ್ನು ಬದಲಿಸಿಕೊಳ್ಳುವುದು ತನ್ನ ಸ್ವಂತ ಜವಾಬ್ದಾರಿ ಮತ್ತು ತನ್ನ ಶಕ್ತಿಯದ್ದು ಎಂದು ಎಂದಿಗೂ ಒಪ್ಪಿಕೊಂಡೇ ಇಲ್ಲ. ಈ ಹಿನ್ನೆಲೆಯಲ್ಲಿ ಹಿಂದೂ ಸಂಹಿತೆ ಮಸೂದೆ ಮೂಲಕ ಹಿಂದೂ ಸಮಾಜ ಇಂತಹದ್ದೊಂದು ದೊಡ್ಡ ಹೆಜ್ಜೆ ಇಡುತ್ತಿರುವುದು ಇದೇ ಪ್ರಥಮ” (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.1, ಪು.41). ಖಂಡಿತ, ಅಂಬೇಡ್ಕರರು ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಲಿಕ್ಕೆ ಪ್ರಮುಖ ಕಾರಣ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತಚಿಂತನೆ ಎಂಬುದು ಅವರ ಈ ಮಸೂದೆಯ ಒಟ್ಟಾರೆ ವಿಶ್ಲೇಷಣೆಯಿಂದ ಅರಿವಾಗುತ್ತದೆ. 
     ಮಸೂದೆ, ಮೊದಲಿಗೆ ಅಂಬೇಡ್ಕರರು ಹೇಳುವುದು ಆಸ್ತಿಯ ವಾರಸುದಾರಿಕೆಯ ಬಗ್ಗೆ. ಆ ಕಾಲದಲ್ಲಿ ಬ್ರಿಟಿಷರ ಕಾಲದಲ್ಲಿ ಹಿಂದೂಗಳಲ್ಲಿ ಆಸ್ತಿಯ ಹಂಚಿಕೆ ಬಗ್ಗೆ ಎರಡು ವಿಧಾನಗಳಿತ್ತು. ಒಂದನೆಯದು ಮಿತಾಕ್ಷರ, ಎರಡನೆಯದು ದಯಾಭಾಗ ಮತ್ತು ಇದರಲ್ಲಿ ಹಿಂದೂಗಳು ಪ್ರಮುಖವಾಗಿ ಮಿತಾಕ್ಷರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮಿತಾಕ್ಷರದ ಈ ಪದ್ಧತಿಯಲ್ಲಿ ಆಸ್ತಿಯು ವ್ಯಕ್ತಿಯ ಸ್ವಂತ ಆಸ್ತಿಯಾಗಿರುತ್ತಿರಲಿಲ್ಲ. ಬದಲಿಗೆ ಅದು ತಂದೆ, ಮಗ, ಮೊಮ್ಮಗ ಮತ್ತು ಮರಿ ಮೊಮ್ಮಗ ಹೀಗೆ ನಾಲ್ವರು ಸಮಾನ ಪಾಲುದಾರರಿಗೆ ಸೇರಿರುತ್ತಿತ್ತು. (ತಂದೆ, ಮಗ, ಮೊಮ್ಮಗ, ಮರಿ ಮೊಮ್ಮಗ ಈ ಸರಣಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವೇ ಇಲ್ಲ ಎಂಬುದನ್ನು ಓದುಗರು ಗಮನಿಸಬೇಕು). ಆದರೆ ಅಂಬೇಡ್ಕರರು ಮಿತಾಕ್ಷರದ ಈ ಪದ್ಧತಿಯ ಬದಲಿಗೆ  ದಯಾಭಾಗ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದರು. ದಯಾಭಾಗ ಈ ಪದ್ಧತಿಯ ಪ್ರಕಾರ ವ್ಯಕ್ತಿಯ ಆಸ್ತಿಯು ಆತನ ಸ್ವಂತದ್ದಾಗಿದ್ದು ಮುಂದೆ ಅದು ಆತನ ಉತ್ತರಾಧಿಕಾರಿಗೆ ಸೇರುತ್ತಿತ್ತು. ಆ ಉತ್ತರಾಧಿಕಾರಿ ಅದನ್ನು ಮಾರಬಹುದಿತ್ತು, ಕೊಡುಗೆ ಅಥವ ವಿಲ್ ಮೂಲಕ ತನಗೆ ಬೇಕಾದವರಿಗೆ ಕೊಡಬಹುದಿತ್ತು.
      ಇನ್ನು ಎರಡನೆಯ ಅಂಶ ಅಂಬೇಡ್ಕರರು ಹೇಳಿದ್ದು ವ್ಯಕ್ತಿ ಸತ್ತ ನಂತರ ಆಸ್ತಿ ಯಾರಿಗೆ ಸೇರುತ್ತದೆ ಎಂಬುದನ್ನು. ಅಂದು ಜಾರಿಯಲ್ಲಿದ್ದ  ಮಿತಾಕ್ಷರ ಪದ್ಧತಿ ಪ್ರಕಾರ ವ್ಯಕ್ತಿ ಸತ್ತ ನಂತರ ಆತನ ಆಸ್ತಿ ಆತನ ಸಹಜಾತರು ಅಂದರೆ ಅಣ್ಣತಮ್ಮಂದರಿಗಿಂತ ಆತನ ಪಿತೃ ಸಂಬಂಧಿಗಳಿಗೆ ಹೋಗುತ್ತಿತ್ತು. ಅಂದರೆ ತಂದೆಯ ಸಂಬಂಧಿಗಳಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ದಯಾಭಾಗ ಪದ್ಧತಿ ಶಿಫಾರಸು ಮಾಡಲಾಗಿ ಆಸ್ತಿ ಆತನ ರಕ್ತ ಸಂಬಂಧಿಗಳಿಗೇ ಹೋಗುವಂತಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರರು ಆಸ್ತಿಯ ವಾರಸುದಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಒಂದು ಬದಲಾವಣೆ ತಂದರು. ಅದೆಂದರೆ ಅದುವರೆಗಿನ ನಿಯಮದಲ್ಲಿ ಕೇವಲ ಮಗನಷ್ಟೆ ವಾರಸುದಾರನಾಗಿರುತ್ತಿದ್ದ. ಆದರೆ ಅಂಬೇಡ್ಕರರು ಅಂತಹ ವಾರಸುದಾರಿಕೆಗೆ ಮಗಳು, ವಿಧವೆ, ಈಗಾಗಲೇ ಮರಣ ಹೊಂದಿರುವಂತಹ ಮಗನ ವಿಧವಾ ಪತ್ನಿ ಇವರೆಲ್ಲರನ್ನು ಮಗನಷ್ಟೆ ಸಮಾನ ವಾರಸುದಾರಿಕೆಗೆ ತಂದರು. ಆ ಮೂಲಕ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದರು. ಅಂದಹಾಗೆ ಅದು ಅದೆಷ್ಟು ಪಾಲು? ಅಂದರೆ ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಸಿಗುತ್ತದೆಯೋ ಅದರ ಅರ್ಧದಷ್ಟು ಮಗಳಿಗೆ. ಈ ಸಂದರ್ಭದಲ್ಲಿ ಆ ಹೆಣ್ಣು ಮಗಳು ಮದುವೆಯಾಗಿದ್ದರೆ ಅಥವ ಮದುವೆಯಾಗದಿದ್ದರೆ? ಖಂಡಿತ, ಅದ್ಯಾವುದೂ ಅಡ್ಡಿ ಬರದಂತೆ ಮಗನ ಅರ್ಧದಷ್ಟು ಆಕೆ ಪಡೆಯುವಂತಾಯಿತು.
     ಇನ್ನು ಈ ವಾರಸುದಾರಿಕೆಯಲ್ಲಿ, ಮೊದಲು ತಂದೆ ನಂತರ ತಾಯಿ ಎಂದಿತ್ತು. ಆದರೆ ಅಂಬೇಡ್ಕರರು ಮೊದಲು ತಾಯಿ ನಂತರ ತಂದೆ ಎಂದು ಬದಲಿಸಿದರು. ಈ ಸಂದರ್ಭದಲ್ಲಿ ಮಹಿಳೆಯರದೇ ಹೆಸರಿನಲ್ಲಿರುವ ಆಸ್ತಿ ಅಥವ ಸ್ತ್ರೀಧನಕ್ಕೆ ಸಂಬಂಧಿಸಿ ಅನೇಕ ವಾರಸುದಾರಿಕೆಯ ನಿಯಮಗಳಿದ್ದವು. ಅಂಬೇಡ್ಕರರು ಅವೆಲ್ಲವನ್ನು ಒಂದೇ ನಿಯಮದಡಿ ತಂದರು. ಹಾಗೆಯೇ ಹೇಗೆ ತಂದೆಯ ಆಸ್ತಿಯಲ್ಲಿ ಮಗಳಿಗೆ ಅರ್ಧದಷ್ಟು ಎಂದರೋ ಹಾಗೆಯೇ ಸ್ತ್ರೀಧನದಲ್ಲಿ ಮಗನಿಗೂ ಮಗಳ ಅರ್ಧದಷ್ಟು ಎಂದು ಬದಲಾವಣೆ ತಂದರು. ಅಂದಹಾಗೆ ಅದುವರೆವಿಗೆ ಇದ್ದ ನಿಯಮವೆಂದರೆ ಗಂಡ ತೀರಿಹೋದರೆ ಆಸ್ತಿ ಆಕೆಯ ಗಂಡನ ಸಂಬಂಧಿಕರಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ಅದನ್ನು ಆತನ ವಿಧವಾ ಪತ್ನಿಗಷ್ಟೆ ಎಂಬಂತೆ ಬದಲಾವಣೆ ತಂದರು. ಪತಿಯ ಸಂಬಂಧಿಕರಿಗೆ ಅದರಲ್ಲಿ ಯಾವುದೇ ಪಾಲೂ ಇಲ್ಲವೆಂಬ ನಿಯಮ ರೂಪಿಸಿದರು. ಈ ಸಮಯದಲ್ಲಿ ವರದಕ್ಷಿಣೆ ಬಗ್ಗೆಯೂ ಅಂಬೇಡ್ಕರರು ಒಂದು ನಿಯಮ ತಂದರು. ಅಂದರೆ ಅದನ್ನು ನಿಷೇಧಿಸಿದರು. ಆದರೂ ವರದಕ್ಷಿಣೆ, ಅದು ವಧುವಿನ ಆಸ್ತಿ. ಅದನ್ನು ಆಕೆಯ ಗಂಡನಾಗಲೀ ಆತನ ಸಂಬಂಧಿಕರಾಗಲೀ ಬಳಸುವಂತಿಲ್ಲ. ಬದಲಿಗೆ ಆಕೆಗೆ 18 ವರ್ಷ ತುಂಬಿದ ನಂತರ ಅದು ಆಕೆಯ ವಯಕ್ತಿಕ ಆಸ್ತಿಯಾಗುತ್ತದೆ ಎಂದರು. .
      ಇನ್ನು ಅದುವರೆಗೆ ಅಕಸ್ಮಾತ್ ಹೆಂಡತಿ ಗಂಡನಿಂದ ದೂರವಾಗಿ ಬದುಕುವಂತಾದರೆ ಆಕೆಗೆ ಜೀವನಾಂಶ ಸಿಗುತ್ತಿರಲಿಲ್ಲ. ಆದರೆ ಅಂಬೇಡ್ಕರರು ಜೀವನಾಂಶ ಸಿಗುವಂತೆ ಮಾಡಿದರು. ಅಲ್ಲದೆ ಅಂತಹ ಜೀವನಾಂಶದ ಸಂದರ್ಭವನ್ನು ಕೂಡ ಅವರು ಮಹಿಳೆಯ ಹಿತದೃಷ್ಟಿಯಿಂದ ಪಟ್ಟಿಮಾಡಿದರು. ಅವುಗಳೆಂದರೆ 1.ಆತ ಅಸಹನೀಯ ರೋಗದಿಂದ ನರಳುತ್ತಿದ್ದರೆ. 2.ಆತ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ. 3.ಆತ ಅತಿ ಕ್ರೂರನಾಗಿದ್ದರೆ. 4.ಆತ ಅವಳನ್ನು ಬಿಟ್ಟು ಎರಡು ವರ್ಷಗಳು ಮೀರಿ ದೂರ ಇದ್ದರೆ. 5.ಆತ ಬೇರೆ ಯಾವುದಾದರೂ ಧರ್ಮಕ್ಕೆ ಮತಾಂತರ ಹೊಂದಿದ್ದರೆ. 6.ಅಥವಾ ಇನ್ನಾವುದಾದರೂ ನ್ಯಾಯಬದ್ಧ ಕಾರಣಗಳು.
ಒಟ್ಟಾರೆ ಹೀಗೆ ಅಂಬೇಡ್ಕರರು ಮಹಿಳೆಗೆ ಕಾನೂನಾತ್ಮಕವಾಗಿ ಸ್ವಾತಂತ್ರ್ಯ ನೀಡಿದ್ದರು.
      ಇನ್ನು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದುವರೆವಿಗೂ ಹಿಂದೂ ಕಾನೂನಿನಲ್ಲಿ ಸಾಕ್ರಮೆಂಟ್ ಅಥವ ಧಾರ್ಮಿಕ ಮದುವೆಗಷ್ಟೆ ಮಾನ್ಯತೆ ಇತ್ತು. ಸಿವಿಲ್ ಮ್ಯಾರೇಜ್ ಅಥವ ನಾಗರಿಕ ಮದುವೆಗೆ ಯಾವುದೇ ಮಾನ್ಯತೆ ಇರಲಿಲ್ಲ. ಹಾಗೆಯೇ ಧಾರ್ಮಿಕ ಮದುವೆಯಲ್ಲಿ ಜಾತಿ, ಉಪಜಾತಿ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಅಂಬೇಡ್ಕರರು ರೂಪಿಸಿದ ಮದುವೆಯ ಆ ನಿಯಮದಲ್ಲಿ ಜಾತಿ ಮತ್ತು ಉಪಜಾತಿ ಕಡ್ಡಾಯ ನಮೂದಿಸುವುದನ್ನು ಕೈಬಿಟ್ಟರು. ಪ್ರಾಪ್ತ ವಯಸ್ಕರಿದ್ದರೆ ಸಾಕು ಅವರು ಯಾವುದೇ ಜಾತಿ ಉಪಜಾತಿ ಇರಲಿ ಮದುವೆ ಸಿಂಧು ಎಂಬ ನಿಯಮ ರೂಪಿಸಿದರು. ಅಂದಹಾಗೆ ಅದುವರೆವಿಗೂ ಇದ್ದ ಧಾರ್ಮಿಕ ಮದುವೆ ಪದ್ಧತಿಯಲ್ಲಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ. ಆದರೆ ಅಂಬೇಡ್ಕರರು ವಿಚ್ಛೇದನಕ್ಕೆ ಅವಕಾಶ ನೀಡಿದರು. ಅದಕ್ಕೆ ಅವರು ಏಳು ಕಾರಣಗಳನ್ನು ನೀಡಿದರು. ಅವುಗಳೆಂದರೆ 1.ಪತ್ನಿಯನ್ನು ಪರಿತ್ಯಜಿಸಿ ದೂರ ಇರುವುದು. 2.ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದು. 3.ಬೇರೊಬ್ಬರನ್ನು ಇಟ್ಟುಕೊಂಡಿರುವುದು. 4.ಗುಣಪಡಿಸಲಾಗದ ರೋಗದಿಂದ ನರಳುತ್ತಿರುವುದು. 5.ಕುಷ್ಟರೋಗದಿಂದ ನರಳುತ್ತಿರುವುದು. 6.ಅಂಟುರೋಗದಿಂದ ನರಳುತ್ತಿರುವುದು. 7.ಕ್ರೂರತೆ.

        ಈ ಸಂದರ್ಭದಲ್ಲಿ ಮಹಿಳೆಯರಿಗೆ ಮದುವೆಯನ್ನೇ ರದ್ದುಗೊಳಿಸಿಕೊಳ್ಳುವ ನಿಯಮ ಕೂಡ ಅಂಬೇಡ್ಕರರು ಸೇರಿಸಿದರು. ಆ ಸಂದರ್ಭಗಳೆಂದರೆ, 1.ನಪುಂಸಕತ್ವ 2.ಸಪಿಂಡ 3.ಮಾನಸಿಕ ಅಸ್ವಸ್ಥತೆ 4.ಪೋಷಕರ ಬಲವಂತ. ಅಂದಹಾಗೆ ಅದುವರೆಗೆ ಬಹುಪತ್ನಿತ್ವ ಜಾರಿಯಲ್ಲಿತ್ತು. ಆದರೆ ಅಂಬೇಡ್ಕರರು ಏಕಪತ್ನಿತ್ವ ನಿಯಮವನ್ನು ವಿವಾಹ ಕಾನೂನಿಗೆ ಸೇರಿಸಿದರು. ಒಟ್ಟಾರೆ ಹೀಗೆ ಅಮೂಲಾಗ್ರ ಬದಲಾವಣೆಗಳನ್ನೊಳಗೊಂಡ ಹಿಂದೂ ಸಂಹಿತೆ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಅದು ಅಂಗೀಕಾರಗೊಂಡಿತೇ? ಖಂಡಿತ, ಆ ಕಥೆ ಹೇಳಿದರೆ ಅದೇ ಒಂದು ಮಹಾಕಾವ್ಯವಾಗುತ್ತದೆ. ಯಾಕೆಂದರೆ ಕರ್ಮಠ ಹಿಂದೂಗಳು ತಮ್ಮ ಧರ್ಮಕ್ಕೆ ಈ ಪರಿಯ ತಿದ್ದುಪಡಿಯನ್ನು ತರುವುದನ್ನು ಅದರಲ್ಲೂ ಅಸ್ಪøಶ್ಯನೊಬ್ಬ ತರುವುದನ್ನು ಸಹಿಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಈ ಹಿಂದೂ ಸಂಹಿತೆ ಮಸೂದೆಗೆ ಎದುರಾಗಿ ಅವರು ಸ್ಮøತಿ, ಶೃತಿ ಧರ್ಮಗಳ ಉಲ್ಲೇಖ ಮುಂದಿಡುತ್ತಾರೆ. ಉದಾಹರಣೆಗೆ ಶ್ರೀ ಸರ್ವತೆ ಎಂಬುವವರೊಬ್ಬರು ಹೇಳುತ್ತಾರೆ “ಹಿಂದೂ ಧರ್ಮ ಜಾತಿ ಆಧಾರದ ಮೇಲೆ ನಿಂತಿದೆ. ಒಂದು ವೇಳೆ ಮದುವೆಯೊಂದು ನಡೆಯಿತೆಂದರೆ ಅದು ಪವಿತ್ರ ಎಂದರ್ಥ ಅದನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ಇನ್ನು ಸನಾತನ ವೈದಿಕ ಧರ್ಮದ ಪ್ರಕಾರ ವಿಚ್ಛೇದನವಂತು ಸಾಧ್ಯವೇ ಇಲ್ಲ!”. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.2, ಪು.807). ಇನ್ನು ಶ್ರೀ ಶ್ಯಾಮನಂದನ್ ಸಹಾಯ್ ಎನ್ನುವವರು “ಬರೇ ಒಂದು ಸಮುದಾಯಕ್ಕೆ (ಹಿಂದೂ ಧರ್ಮ) ಏಕೆ ನೀವು ಅಂಟಿಕೊಂಡಿರುವಿರಿ? ಇಡೀ ದೇಶಕ್ಕೆ, ಎಲ್ಲ ಧರ್ಮಕ್ಕೆ ಇದನ್ನು ಅನ್ವಯಿಸಿ” (ಅದೇ ಕೃತಿ. ಪು.908) ಎನ್ನುತ್ತಾ ಈಗಿನ ಹಿಂದುತ್ವವಾದಿಗಳ ಪ್ರಶ್ನೆಯನ್ನು ಆಗಲೇ ಅಂಬೇಡ್ಕರರ ಮುಂದಿಡುತ್ತಾರೆ! ಅಂದಹಾಗೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಿರುವುದರ ಬಗ್ಗೆ ಶ್ರೀ.ಎಂ.ಎ..ಅಯ್ಯಂಗಾರ್‍ರವರು ಹೇಳುವುದು “ಹಿಂದೂ ವಿವಾಹ ಪದ್ಧತಿ, ವಿಚ್ಛೇಧನ ನೀಡದಿರುವುದು, ಹಾಗೆಯೇ ಕುಟುಂಬಕ್ಕೆ ಬಾಧ್ಯಸ್ಥರಲ್ಲದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡದಿರುವುದು, ಇತ್ಯಾದಿ... ಇವೆಲ್ಲ ಈ ದೇಶದ ಜನತೆಯ ನೈತಿಕ ಶಕ್ತಿಯ ಮೂಲಗಳಾಗಿವೆ! ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ನನ್ನ ಮಗಳು ಮದುವೆಯಾಗುತ್ತಾಳೆ ಎಂದಿಟ್ಟುಕೊಳ್ಳಿ. ಆಗ ನಾನು ನನ್ನ ಅಳಿಯನ ಮನೆಯಲ್ಲಿ ಉಳಿದುಕೊಳ್ಳಬೇಕೋ ಅಥವಾ ನನ್ನ ಮಗನ ಮನೆಯಲ್ಲಿ ಉಳಿದುಕೊಳ್ಳಬೇಕೋ? ಹೇಳಿ, ನೀವೇ ಹೇಳಿ” (ಅದೇ ಕೃತಿ. ಪು.939).
    ಖಂಡಿತ, ಹೀಗೆ ಸಾಗುವ ಆ ಚರ್ಚೆ ಅಂಬೇಡ್ಕರರ ಆ ಮಸೂದೆಗೆ ನ್ಯಾಯ ದೊರಕಿಸಿಕೊಟ್ಟಿತೆ? ಇಲ್ಲ. ಬದಲಿಗೆ ಅಂಬೇಡ್ಕರರು ತಮ್ಮ ಆ ಕಾನೂನು ಮಂತ್ರಿ ಪದವಿಗೇ ರಾಜೀನಾಮೆ ನೀಡುವಂತಹ ಪರಿಸ್ಥಿತಿ ತಂದೊಡ್ಡಿತು ಮತ್ತು ಅಂಬೇಡ್ಕರರು ರಾಜೀನಾಮೆ ನೀಡಿದರು ಕೂಡ. ಈ ಬಗ್ಗೆ 1951 ಅಕ್ಟೋಬರ್ 10 ರಂದು ತಮ್ಮ ರಾಜೀನಾಮೆ ಭಾಷಣದಲ್ಲಿ ಅಂಬೇಡ್ಕರರು ಹೇಳುವುದು “ಈ ಮಸೂದೆಯನ್ನು 1947 ಆಗಸ್ಟ್ 11 ರಂದು ಸದನದಲ್ಲಿ ಮಂಡಿಸಲಾಯಿತು. ನಾಲ್ಕು ವರ್ಷಗಳ ನಂತರ ಇದರ ಕೇವಲ 4 ಕಲಂಗಳನ್ನಷ್ಟೆ ಅಂಗೀಕರಿಸಿ ಅದನ್ನು ಕೊಲ್ಲಲಾಯಿತು. ಯಾರೂ ಅಳದೆ, ಯಾರೂ ಶೋಕರಾಗವನ್ನು ಹಾಡದೆ ಅದು(ಹಿಂದೂ ಸಂಹಿತೆ ಮಸೂದೆ) ಸತ್ತುಹೋಯಿತು!” ಈ ಸಂದರ್ಭದಲ್ಲಿ ಅಂಬೇಡ್ಕರರು ಈ ಬಗೆಗಿನ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಅಸಹಕಾರವನ್ನು ಸಹ ತಮ್ಮ ಆ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದರು. ಯಾಕೆಂದರೆ ಪ್ರಾರಂಭದಲ್ಲಿ ನೆಹರೂರವರು ಮಸೂದೆಯಲ್ಲಿ ಕೇವಲ ಮದುವೆ ಮತ್ತು ವಿಚ್ಛೇದನದ ಭಾಗವನ್ನಷ್ಟೆ ಕೈಗೆತ್ತಿಕೊಳ್ಳುವಂತೆ ಅಂಬೇಡ್ಕರರಿಗೆ ಸೂಚಿಸಿದ್ದರು. ಆದರೆ ತದನಂತರದ ಬೆಳವಣೀಗೆಯಲ್ಲಿ ಇಡೀ ಮಸೂದೆಯನ್ನೇ ಕೈಬಿಡುವಂತೆ ಸೂಚಿಸಿದರು! ಪರಿಣಾಮ ಅಂಬೇಡ್ಕರರಿಗೆ ಮಂತ್ರಿ ಪದವಿಗೆ ರಾಜೀನಾಮೆ ನೀಡದೆ ಬೇರೆ ದಾರಿಯೇ ಇರಲಿಲ್ಲ.
     ಒಟ್ಟಾರೆ ತಮ್ಮ ಕೈಕೊಡುತ್ತಿದ್ದ ಅನಾರೋಗ್ಯದ ನಡುವೆಯೂ ಅಂಬೇಡ್ಕರರು ಹಿಂದೂ ಸಂಹಿತೆ ಮಸೂದೆ ಅಂಗೀಕಾರಕ್ಕೆ ಅವಿರತ ಹೋರಾಡಿದರು. ಅವರೇ ಹೇಳಿಕೊಂಡಿರುವಂತೆ ಅದಕ್ಕಾಗಿ ಅವರು ಮಾನಸಿಕ ಕಿರುಕುಳ ಕೂಡ ಅನುಭವಿಸಬೇಕಾಯಿತು. (ಅದೇ ಕೃತಿ. ಪು.1324). ಅಂತಿಮವಾಗಿ 1955-56 ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ 4 ವರ್ಷಗಳ ನಂತರ ಮಸೂದೆ ಅಂಗೀಕಾರವಾಯಿತು. ಈ ಸಂದರ್ಭದಲ್ಲಿ ಈ ವರ್ಷ ಇಡೀ ದೇಶಕ್ಕೆ ನಂ.1 ಎಂಬ ಖ್ಯಾತಿಯೊಡನೆ ಐಎಎಸ್ ಪರೀಕ್ಷೆ ಪಾಸು ಮಾಡಿದ ಟೀನಾ ಡಾಬಿ ಎಂಬ ಶೋಷಿತ ಸಮುದಾಯದ ಹೆಣ್ಣುಮಗಳ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. ಟೀನಾ ಡಾಬಿ ಹೇಳುತ್ತಾರೆ “ಬಾಬಾಸಾಹೇಬ್ ಅಂಬೇಡ್ಕರರೇ ನನ್ನ ತಾತ ಮತ್ತು ಅವರೇ ನನಗೆ ಸ್ಫೂರ್ತಿ. ಅವರ ಮೀಸಲಾತಿ ನೀತಿ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ‘ಹಿಂದೂ ಸಂಹಿತೆ ಮಸೂದೆ’ಯಿಂದಷ್ಟೆ ನಾನು ಐಎಎಸ್ ಪಾಸು ಮಾಡಲು ಸಾಧ್ಯವಾಯಿತು”. ಖಂಡಿತ, ಟೀನಾ ಡಾಬಿಯವರ ಈ ಹೇಳಿಕೆ ಈ ದೇಶದ ಎಲ್ಲ ಮಹಿಳೆಯರ ಹೇಳಿಕೆಯಾಗಬೇಕು. ದುರಂತವೆಂದರೆ ಈ ದೇಶದ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ಅಂಬೇಡ್ಕರ್ ತಮಗೋಸ್ಕರ ಈ ಪರಿ ಹೋರಾಡಿರುವ ಸತ್ಯ ಅರಿವಿಗೆ ಬರುವುದಿಲ್ಲ. ಬದಲಿಗೆ ಯಥಾಪ್ರಕಾರ ಜಾತೀಯತೆಯ ಮನಸ್ಥಿತಿಯಲ್ಲಿ ಅಂಬೇಡ್ಕರರನ್ನು ವಿರೋಧಿಸ ನೋಡುತ್ತಾರೆ. ಈ ನಿಟ್ಟಿನಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ ಜಾರಿಮಾಡಲು ಉತ್ಸುಕವಾಗಿರುವ ಮನಸ್ಸುಗಳು ಆಗ ನಮ್ಮ ಪೂರ್ವಿಕರು ಅಂಬೇಡ್ಕರರ ಹಿಂದೂ ಸಂಹಿತೆ ಮಸೂದೆ ಜಾರಿಗೊಳ್ಳಲೇಕೆ ಅಡ್ಡಗಾಲಾಗಿದ್ದರು ಎಂಬುದನ್ನು ಯೋಚಿಸಿ ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ ಮತ್ತು ಆ ನಂತರವಷ್ಟೆ ಅವರು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ನಡೆಸಲು ಅರ್ಹರಾಗುತ್ತಾರೆ. ಇಲ್ಲದಿದ್ದರೆ ಏಕರೂಪ ನಾಗರಿಕ ಸಂಹಿತೆಯ ಈ ಚರ್ಚೆ ಹಿಂದೂ ಕಾನೂನನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ವ್ಯವಸ್ಥಿತ ಹುನ್ನಾರದ ಭಾಗವೆನ್ನದೆ ವಿಧಿಯಿಲ್ಲ.   
                                   

Thursday, 4 August 2016

ರಾಜಕಾರಣಕ್ಕಾಗಿ ಬೌದ್ಧಧರ್ಮ ಬಳಕೆ: ಬಿಜೆಪಿ ಷಡ್ಯಂತ್ರ ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು 

ಕಳೆದ ಏಪ್ರಿಲ್ ತಿಂಗಳಲ್ಲಿ ಬಿಹಾರದ ಸಾರನಾಥದಿಂದ ಬಿಜೆಪಿ ವತಿಯಿಂದ ಯಾತ್ರೆಯೊಂದು ಉದ್ಘಾಟನೆ ಆಗಿತ್ತು. ಹೆಸರು "ಧಮ್ಮ ಚೇತನಾ ಯಾತ್ರೆ". ಖಂಡಿತ ಅದು ಬೌದ್ಧ ಧರ್ಮದ ಯಾತ್ರೆಯಾಗಿತ್ತು. "ಮೋದಿ ಮಾಂಕ್ಸ್" ಅಥವಾ "ಮೋದಿ ಭಿಕ್ಕುಗಳು" ಎಂದು ಕರೆಯಲ್ಪಡುತ್ತಿದ್ದ ಹಿರಿಯ ಭಿಕ್ಕು ಧಮ್ಮ ವಿರಿಯೊ ಮುಂದಾಳತ್ವ ದ ಭಿಕ್ಕುಗಳ ಗುಂಪು ಈ ಯಾತ್ರೆಯ ನೇತೃತ್ವ ವಹಿಸಿತ್ತು. ಮೋದಿ ಸಾಧನೆಗಳನ್ನು ಹೊಗಳುವುದು, ಅಂಬೇಡ್ಕರ್ ಬಗ್ಗೆ ಮೋದಿಯ ಮಾತುಗಳನ್ನು ಪ್ರಚುರಪಡಿಸುವುದು ಉತ್ತರಪ್ರದೇಶದ ಉದ್ದಗಲಕ್ಕೂ ಹಾದುಹೋಗುತ್ತಿದ್ದ ಈ ಯಾತ್ರೆಯ ಉದ್ದೇಶ ವಾಗಿತ್ತು. ಅಂದರೆ ಹೆಸರು ಬೌದ್ಧ ಧರ್ಮ ಆದರೆ ಉದ್ದೇಶ ಬಿಜೆಪಿ ರಾಜಕೀಯ ಅಂದರೆ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ದಲಿತರ ಓಟಗಳನ್ನು ಸೆಳೆಯುವ ಬಿಜೆಪಿಯ ಚುನಾವಣಾ ರಾಜಕೀಯವದು!

ಇದಕ್ಕೆ ಕಾರಣ "ಹೇಗಿದ್ದರು ಬೌದ್ಧ ಧರ್ಮದ ಬಹುತೇಕ ಅನುಯಾಯಿಗಳು ಅಥವಾ ಅದರತ್ತ ಒಲವುಳ್ಳವರು ದಲಿತರು. ಆದ್ದರಿಂದ ಅವರ ನಡುವೆ ಧಮ್ಮ ಯಾತ್ರೆಯೆಂದರೆ, ಅದರಲ್ಲೂ ಬೌದ್ಧ ಭಿಕ್ಕುಗಳೇ ಅಂತಹ ಯಾತ್ರೆಯ ನೇತೃತ್ವ ವಹಿಸುತ್ತಾರೆಂದರೆ‌... ಆ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಅಂತಹ ಯಾತ್ರೆಯಲ್ಲಿ ಪಾಲ್ಗೊಂಡರೆ ದಲಿತರ ಓಟುಗಳನ್ನು ಬೌದ್ಧ ಧರ್ಮದ ಹೆಸರಲ್ಲಿ ಒಂದಷ್ಟಾದರೂ ಕೀಳಬಹುದು...!"
ಖಂಡಿತ, ಇಂತಹ ಉದ್ದೇಶ ಮತ್ತು ಈ "ಉದ್ದೇಶ" ದ ಬೌದ್ಧ ಯಾತ್ರೆ, ಮತ್ತು ಅದನ್ನು ಡಿಸೈನ್ ಮಾಡಿದ ಸಂಘಪರಿವಾರದ ಅಪಾಯಕಾರಿ ತಲೆ ಎಲ್ಲವನ್ನೂ ನೆನೆಸಿಕೊಂಡರೆ ಕೇವಲ ಕ್ರಿಮಿನಲ್ ಗಳು ಮಾತ್ರ ಇಂತಹದ್ದನ್ನು ಮಾಡಲು ಸಾಧ್ಯ ಎಂದು ಯಾರಿಗಾದರೂ ಅನಿಸದಿರದು. ಯಾಕೆಂದರೆ ಶಾಂತಿ ಧೂತ ಬುದ್ದನನ್ನೂ ಹಿಂದುತ್ವ ತನ್ನ ಅಪಾಯಕಾರಿ ರಾಜಕೀಯ ಕುಟಿಲತೆಗೆ ಬಳಸಿಕೊಳ್ಳುತ್ತದೆಂದರೆ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ಅದರ ನೀತಿ ಮೇರೆ ಮೀರಿರುವುದು ಎಂಥವರಿಗಾದರೂ ಸ್ಪಷ್ಟವಾಗುತ್ತದೆ. ಅಂದರೆ ಹೇಗಿದ್ದರೂ ಬುದ್ಧ ಎಂದರೆ ದಲಿತರಿಗೆ ಭಾವನಾತ್ಮಕ ನಂಟು. ಅಂತಹ ನಂಟನ್ನು ಹಿಂದುತ್ವದ ನೇತೃತ್ವದಲ್ಲಿ ಧಮ್ಮ ಯಾತ್ರೆಯೊಂದರ ಮೂಲಕ ಬೆಸೆದರೆ? ದಲಿತರ ಧಾರ್ಮಿಕ ಭಾವನೆಗಳನ್ನು ಹಿಂದುತ್ವದ ರಾಜಕೀಯಕ್ಕೆ ಬಳಸಿಕೊಂಡರೆ? ಹಿಂದುತ್ವವೂ ಭದ್ರವಾದಂಗಾಯ್ತು ದಲಿತರನ್ನೂ ಹಳ್ಳಕ್ಕೆ ಕೆಡವಿದಂಗಾಯ್ತು!

ಏಕೆಂದರೆ ಈಗಾಗಲೇ ಅಡ್ಚಾಣಿಯವರ ಅಯೋಧ್ಯೆ ಯ ರಾಮಮಂದಿರ ರಥಯಾತ್ರೆಯ ಮೂಲಕ ಹಿಂದೂಗಳನ್ನು ಭಾವನಾತ್ಮಕವಾಗಿ ಮುಸ್ಲಿಮರ ವಿರುದ್ದ ಕೆರಳಿಸಿ ದೇಶಾದ್ಯಂತ ಬಿಜೆಪಿ ತನ್ನ ಮರದ ಬೇರನ್ನು ಭದ್ರಪಡಿಸಿಕೊಂಡಿದೆ. ಎಟುಕದ್ದೆಂದರೆ "ದಲಿತ" ಎಂಬ ಆ ಗುಂಪಷ್ಟೆ. ಅಂದಹಾಗೆ ಅಂತಹ ಗುಂಪನ್ನು ಬೌದ್ಧ ಧಮ್ಮ ಚೇತನ ಯಾತ್ರೆಯ ಮೂಲಕ ಬೆಸೆದರೆ? ಮುಗಿದುಹೋಯಿತು! ಹಿಂದುತ್ವಕ್ಕೆ ಇನ್ನು ತಡೆ ಎನ್ನುವುದೇ ಇರುವುದಿಲ್ಲ. ಅದಕ್ಕೇ ಹೇಳಿದ್ದು ಇದು ಕ್ರಿಮಿನಲ್ ಐಡಿಯಾ ಎಂದು. ಯಾಕೆಂದರೆ ಒಮ್ಮೆ ಬೌದ್ಧ ಧರ್ಮದ ಹೆಸರಲ್ಲಿ ದಲಿತರು ಬಿಜೆಪಿಗೆ ಓಟು ಹಾಕಲು ಪ್ರಾರಂಭಿಸಿದರೆ ಮುಗಿದುಹೋಯಿತು ಬಿಜೆಪಿಯನ್ನು ಇನ್ನು ತಡೆಯುವವರು ಯಾರೂ ಇರುವುದಿಲ್ಲ. ಅಧಿಕಾರ ಅವರಿಗೆ ಪರ್ಮನೆಂಟ್ ಆಗಿ ಬರೆದುಕೊಟ್ಟಂತೆಯೇ.

ಈ ಸಂದರ್ಭದಲ್ಲಿ ಹಿಂದೂ ಧರ್ಮ ಬೇರೆ ಬೌದ್ಧ ಧರ್ಮ ಬೇರೆ, ಹಾಗೆಯೇ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುವುದನ್ನು ಹಿಂದುತ್ವ ವಿರೋಧಿಸುತ್ತದಲ್ಲ ಎಂಬ ಜಿಜ್ಞಾಸೆ ಅಥವಾ ಚಿಂತನೆ ಶೋಷಿತ ಬಂಧುಗಳಲ್ಲಿ ಮೂಡಬಹುದು. ಇದಕ್ಕೆ ಉತ್ತರ ಒಂದು ಪ್ರಶ್ನೆ ಆಗುತ್ತದೆ. ಅಂದರೆ ಯಾವುದು ಗ್ರೇಟ್ ಧರ್ಮ ಯಾ ರಾಜಕಾರಣ? ಎಂಬುದೇ ಆ ಪ್ರಶ್ನೆ. ಖಂಡಿತ ಸಂಘಪರಿವಾರಕ್ಕೆ ತಿಳಿದಿದೆ "ಗ್ರೇಟ್ ರಾಜಕಾರಣ" ಎಂದು. ಯಾಕೆಂದರೆ ಒಮ್ಮೆ ರಾಜಕೀಯ ಅಧಿಕಾರ ಪಡೆದರೆ ಅದರಲ್ಲಿ ತಮ್ಮ ಸ್ವಂತ ಧರ್ಮವನ್ನು ಪೋಷಿಸಬಹುದು , ಬೇರೆಯವರ ಧರ್ಮವನ್ನು ಹದ್ದುಬಸ್ತಿನಲ್ಲೂ ಇಡಬಹುದು ಎಂಬುದು. ಆ ಕಾರಣಕ್ಕೆ ಈಗಾಗಲೇ ಮುಸ್ಲಿಮರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಭಯೋತ್ಪಾದನೆಯ ಭೂತದ ಮೂಲಕ ನಿಯಂತ್ರಿಸುವಲ್ಲಿ ಹಿಂದುತ್ವ ತನ್ನ ಅಭಿಯಾನ ಚಾಲೂ ಇಟ್ಟಿದೆ. ಆದರೆ ನಿಯಂತ್ರಣಕ್ಕೆ ಸಿಗದದ್ದವರೆಂದರೆ ದಲಿತರು ಮತ್ತವರ ಅಂಬೇಡ್ಕರ್ ವಾದಿ ರಾಜಕಾರಣ. ಆ ಕಾರಣಕ್ಕೆ ಅಂಬೇಡ್ಕರ್ ವಾದವನ್ನು ಕಂಟ್ರೋಲ್ ಮಾಡಬೇಕೆಂದರೆ ಬೌದ್ಧ ಧರ್ಮವನ್ನು ಬಳಸಿಕೊಂಡರೆ ಹೇಗೆ? ಆಶ್ಚರ್ಯವೆಂದರೆ ಹಿಂದುತ್ವ ಈಗಾಗಲೇ ಅದರಲ್ಲಿ ಭಾಗಶಃ ಯಶಸ್ಸು ಕಂಡಿದೆ. ಉದಾಹರಣೆಗೆ ಹೇಳುವುದಾದರೆ ಮಹಾರಾಷ್ಟ್ರದ ಆರ್ ಪಿಐ ನಾಯಕ ಬೌದ್ಧ ಧರ್ಮಕ್ಕೆ ಸೇರಿದ ರಾಮದಾಸ್ ಅಥವಾಲೆ ರಾಜ್ಯಸಭಾ ಸದಸ್ಯನಾಗಿ ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿಯೂ ಆಗಿದ್ದಾನೆ. ಈ ನಿಟ್ಟಿನಲ್ಲಿ  ಈ ಅಥವಾಲೆ ಹೇಳುವುದು ಮಾಯಾವತಿ ಯಾಕೆ ಇನ್ನೂ ಬೌದ್ದ ಧರ್ಮಕ್ಕೆ  ಮತಾಂತರವಾಗಿಲ್ಲ? ಎಂದು! ಆದರೆ ವಾಸ್ತವವೆಂದರೆ ಮಾಯಾವತಿಯವರು ಈಗಾಗಲೇ ಬೌದ್ಧ ಧರ್ಮದ ಅನುಯಾಯಿ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಬೌದ್ಧ ಅನುಯಾಯಿ ಆಗಿರುವುದರಿಂದಲೇ ಉತ್ತರ ಪ್ರದೇಶದ ದಲಿತರು ಆ ಪರಿ ಬೌದ್ಧ ಧರ್ಮದೆಡೆ ಒಲವು ಹೊಂದಿರುವುದು ಮತ್ತು ಬಿಜೆಪಿ ಅದನ್ನು ಬಳಸಿಕೊಳ್ಳಲು ಹೊರಟಿರಯವುದು. ಒಟ್ಟಾರೆ ಅರ್ಥವಾಗುವುದು ರಾಮದಾಸ್ ಅಥವಾಲೆಯೂ ಕೂಡ ಬಿಜೆಪಿಯ ಇಂತಹ ಸಂಚಿನ ಅಂದರೆ ದಲಿತರನ್ನು ಸೆಳೆಯಲು ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿನ ಭಾಗವಾಗಿದ್ದಾರೆ ಎಂಬುದು.

ಆದರೆ ಸ್ವಾಗತಾರ್ಹವೆಂದರೆ ಹಿಂದುತ್ವದ ಈ ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿಗೆ ಉತ್ತರಪ್ರದೇಶದಲ್ಲಿ ಭಾರೀ ಹೊಡೆತ ಬಿದ್ದಿದೆ. ಯಾಕೆಂದರೆ ತನ್ನ ಧಮ್ಮ ಚೇತನಾ ಯಾತ್ರೆಯ ಸಮಾರೋಪವನ್ನು ಇದೇ ಜುಲೈ 31 ರಂದು ಆಗ್ರಾದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಆ ಸಮಾವೇಶದಲ್ಲಿ 50,000 ದಲಿತರನ್ನು ಸೇರಿಸುವ ಉದ್ದೇಶ ಹೊಂದಿತ್ತು ಮತ್ತು ಆ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ ಆ ಸಮಾವೇಶಕ್ಕೆ ಯಾವೊಬ್ಬ ದಲಿತನೂ ಬರುವ ಸಂಭವ ಕಾಣದೆ ಬಿಜೆಪಿ ಆ ಸಮಾವೇಶವನ್ನೆ ರದ್ದುಮಾಡಿದೆ. ಆ ಮೂಲಕ ತನ್ನ ಕೋಮುವಾದಿ ರಾಜಕಾರಣಕ್ಕೆ ಬೌದ್ಧ ಧರ್ಮ ಬಳಸಿಕೊಳ್ಳುವ ಅದರ ತಂತ್ರಕ್ಕೆ ಅದು ಭಾರೀ ಮುಖಭಂಗ ಅನುಭವಿಸಿದೆ! ಈ ದಿಸೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶದ ದಲಿತರು ಬಿಜೆಪಿಗೆ ಮುಟ್ಟಿನೋಡಿಕೊಳ್ಳುವ ಪೆಟ್ಟನ್ನೇ ಕೊಟ್ಟಿದ್ದಾರೆ. ಯಾಕೆಂದರೆ ಒಮ್ಮೆ ಬಿಜೆಪಿಯ ಈ ತಂತ್ರ ಯಶಸ್ಸು ಕಂಡಿದ್ದರೆ ದೇಶಾದ್ಯಂತ ಅದು ಇದನ್ನು ಅನ್ವಯಿಸುತ್ತಿತ್ತು ಮತ್ತು ಅದಕ್ಕೆ ಕನಿಷ್ಠ ಪಕ್ಷ ದಲಿತರಲ್ಲಿ ಶೇ.50 ಅಥವಾ ಒಟ್ಟು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡರೆ ಶೇ.10 ವೋಟ್ ಬ್ಯಾಂಕ್ ಪರ್ಮನೆಂಟಾಗಿ ಸಿಗುತ್ತಿತ್ತು! ಆದರೆ ಈಗ ಬಿಜೆಪಿಯ ಆ ತಂತ್ರವನ್ನು ಉತ್ತರ ಪ್ರದೇಶದ ದಲಿತರು ವಿಫಲಗೊಳಿಸಿರುವುದರಿಂದ  ಒಟ್ಟಾರೆ ದಲಿತ ರಾಜಕಾರಣಕ್ಕೂ ಒಂದು ಬೆಲೆ ಸಿಕ್ಕಿದೆ ಹಾಗೆ ಭವಿಷ್ಯದ ದೃಷ್ಟಿಯಿಂದ ತನ್ನನ್ನು ತಾತ್ಕಾಲಿಕವಾಗಿ ಬೆಂಬಲಿಸಿ ಭವಿಷ್ಯದಲ್ಲಿ ತನ್ನನ್ನು ಆಪೋಶನ ತೆಗೆದುಕೊಳ್ಳಬಹುದಾದ ಹಿಂದುತ್ವದಿಂದ ತಪ್ಪಿಸಿಕೊಂಡ ಶ್ರೇಯವೂ ಬೌದ್ಧ ಧರ್ಮಕ್ಕೆ ಸಿಕ್ಕಿದೆ.

ದಲಿತರು ಇಂದು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ತುರ್ತಿದೆ . ನಮ್ಮ ಸದ್ಯದ ಅಗತ್ಯ ಬೌದ್ಧ ಧರ್ಮವೋ ಯಾ ಸ್ವಾಭಿಮಾನಿ ಅಂಬೇಡ್ಕರ್-ಕಾನ್ಷೀರಾಂ-ಮಾಯಾವತಿ ಪ್ರಣೀತ ರಾಜಕಾರಣವೋ ಎಂಬುದನ್ನು ಅರಿಯಬೇಕಿದೆ. ದಲಿತರು ತಕ್ಷಣಕ್ಕೆ ಬೌದ್ಧ ಧರ್ಮ ಅಂದರೆ ಬಿಜೆಪಿ ಬಲೆ ಹಿಡಿದು ಕಾದು ಕುಳಿತಿದೆ ನುಂಗಲು! ಅಂಬೇಡ್ಕರ್ ವಾದಿ ರಾಜಕಾರಣ ಎಂದರೆ ಅಲ್ಲಿ ರಾಜಕಾರಣವೂ ಉಳಿಯುತ್ತದೆ ಹಾಗೆಯೇ ಆ ರಾಜಕೀಯ ಅಧಿಕಾರದಿಂದ ಉಳಿಸಕೊಳ್ಳಬಹುದಾದ ನಮ್ಮ ಸ್ವಧರ್ಮ ಅಂದರೆ ಬೌದ್ಧ ಧರ್ಮ ಕೂಡ ಉಳಿಯುತ್ತದೆ.

ಎಲ್ಲರಿಗೂ ಇತಿಹಾಸ ತಿಳಿದಂತೆ ಬೌದ್ಧ ಧರ್ಮ ನಾಶವಾದದ್ದೆ ರಾಜಾಶ್ರಯ ಅಥವಾ ರಾಜಕೀಯ ಆಶ್ರಯ ತಪ್ಪಿದ್ದರಿಂದ. ಅಂದಹಾಗೆ ಹಿಂದುತ್ವ ಬೋಧಿಸುವ ರಾಜಕೀಯ ಪಕ್ಷ ಬಿಜೆಪಿ ಬೌದ್ಧ ಧರ್ಮ ಬೆಳೆಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಬೆಳೆಸುವುದಿರಲಿ ನಾವು ಬೌದ್ಧಧರ್ಮವನ್ನು ಶಾಶ್ವತವಾಗಿ ಹಿಂದುತ್ವಕ್ಕೆ ಕಳೆದುಕೊಳ್ಳಬೇಕಾದ ಅಪಾಯವಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಇಂತಹ ಷಡ್ಯಂತ್ರವನ್ನು ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು ಸ್ತುತ್ಯರ್ಹರು . ಇಡೀ ದೇಶದ ದಲಿತರೆಲ್ಲರೂ ಅವರ ಈ ಕಾರ್ಯವನ್ನು ಶ್ಲಾಘಿಸಿಬೇಕಿದೆ. ತನ್ಮೂಲಕ ಹಿಂದುತ್ವದ ಅಪಾಯದಿಂದ ತಮ್ಮನ್ನು ತಾವು ದಲಿತರು ಕಾಪಾಡಿಕೊಳ್ಳಬೇಕಿದೆ

-ರಘೋತ್ತಮ ಹೊಬ

Tuesday, 29 March 2016

ಶೂದ್ರರ ಅಸಂಘಟನೆಯೇ ಬ್ರಾಹ್ಮಣೇತರ ಚಳುವಳಿಯ ವೈಫಲ್ಯಕ್ಕೆ ಕಾರಣ.

ಕೆಲ ದಿನಗಳ ಹಿಂದೆ ಸ್ನೇಹಿತರೊಬ್ಬರಿಂದ ತಮಿಳುನಾಡಿನಲ್ಲಿ ಬ್ರಾಹ್ಮಣರನ್ನು ವಿರೋಧಿಸಿದ ಬ್ರಾಹ್ಮಣೇತರ ಪೆರಿಯಾರ್ ನೇತೃತ್ವದ ಚಳುವಳಿ ವಿಫಲವಾಯಿತು... ಅಲ್ಲಿ ಈಗ ಬಹುಸಂಖ್ಯೆಯ ದೇವಸ್ಥಾನಗಳಿವೆ ... ಅತಿಹೆಚ್ಚು ಮೌಢ್ಯಾಚರಣೆ ಇದೆ
  ಹೀಗೆ ಸಾಗಿತ್ತು ವಿಶ್ಲೇಷಣೆ. Well ಆ ವಿಶ್ಲೇಷಣೆಯ ಸಾರ ಮೌಲ್ಯಯುತವಾದದ್ದೆ. ಆದರೆ  ವಾಸ್ತವ? ಅದೆಂದರೆ ತಮಿಳುನಾಡಿನಲ್ಲೆ ಆಗಲೀ ಕೇರಳದಲ್ಲೆ ಆಗಲೀ ಇಂದು ಪೆರಿಯಾರರ ಮತ್ತು ನಾರಾಯಣ ಗುರುಗಳ ಚಳುವಳಿ ಬಲವಾಗಿ ಇಲ್ಲ ಅಥವ ವಿರುದ್ಧ ಮುಖಿಯಾಗಿಯೂ ಇರಬಹುದು. ಕಾರಣ ಅವರು ಮಂಡಿಸಿದ ಬ್ರಾಹ್ಮಣ ವಿರೋಧಿ  ಸಿದ್ಧಾಂತಗಳಲ್ಲ ಅಥವ ನಡೆಸಿದ ಬ್ರಾಹ್ಮಣ ವಿರೋಧಿ ಹೋರಾಟಗಳೂ ಅಲ್ಲ. ಸತ್ಯವೆಂದರೆ ಪೆರಿಯಾರ್ ಮತ್ತು ನಾರಾಯಣ ಗುರುಗಳ ಹೋರಾಟ ಸರಿಯಾದ ಮಾರ್ಗದಲ್ಲೆ ಇತ್ತು. ಆದರೆ ಅವರ ಅನುಯಾಯಿಗಳು? ವಿಶೇಷವಾಗಿ ಶೂದ್ರ ಸಮುದಾಯ? ಅದೊಂದು ಸೈದ್ಧಾಂತಿಕ ಸಮುದಾಯವಾಗಿ ಸಂಘಟಿತವಾಗಲೇ ಇಲ್ಲ. ಅಂದರೆ there is no takers for periyar's thought from shudras. ಅರ್ಥಾತ್ ಪೆರಿಯಾರ್ ನನ್ನವರು,  ಅವರು ಹೇಳಿದ ದೌರ್ಜನ್ಯದ ಇತಿಹಾಸ ನನ್ನದು ನನ್ನ ಶೋಷಣೆಯ ಭಾಗದ್ದು  ಎಂದು ಯಾವುದೇ ಶೂದ್ರ ಸಮುದಾಯ ಮುಂದೆ ಬರಲಿಲ್ಲ. ಬಲಿಜ ನಾಯ್ಡು ಸಮುದಾಯಕ್ಕೆ ಸೇರಿದ ಪೆರಿಯಾರರನ್ನು ತಮಿಳುನಾಡಿನ ಇತರೆ ಶೂದ್ರ ಸಮುದಾಯಗಳಾದ ತೇವರ್, ಗೌಂಡರ್, ಮೊದಲಿಯಾರ್, ನಾಡಾರ್, ನಾಯರ್ ಹೀಗೆ ಬೇರೆ ಯಾರೂ ಕೂಡ ತಮ್ಮದು ಎಂದು ಸ್ವೀಕರಿಸಲಿಲ್ಲ. ಪರಿಣಾಮ ಪೆರಿಯಾರರ ಹೋರಾಟ ಅವರ ಕಾಲದಲ್ಲೆ ಮಂಕಾಗುತ್ತಾ ಬಂತು.
ಆಶ್ಚರ್ಯವೆಂದರೆ ಪೆರಿಯಾರರ ದ್ರಾವಿಡ ಸಿದ್ಧಾಂತದಡಿಯಲ್ಲಿ ದ್ರಾವಿಡ ಪಕ್ಷಗಳು ಮತ್ತವರ ಶಿಷ್ಯಂದಿರು ಅಧಿಕಾರ ಪಡೆದರೂ ಪೆರಿಯಾರರ ಬ್ರಾಹ್ಮಣವಿರೋಧಿ ಮತ್ತು ದೈವತ್ವ ವಿರೋಧಿ ಸಿದ್ಧಾಂತ ಅನುಷ್ಠಾನ ಗೊಳಿಸಲಾಗಲೇ ಇಲ್ಲ ಬದಲಿಗೆ ದೂರದ ಕರ್ನಾಟಕದಿಂದ ಬ್ರಾಹ್ಮಣ ನಾಯಕತ್ವ ಆಮದು ಮಾಡಿಕೊಂಡ ದ್ರಾವಿಡಿಗರು ಪೆರಿಯಾರರ ಸಿದ್ಧಾಂತ ವಿಫಲಗೊಳಿಸುತ್ತಾ ಹೋದರು. ಮತ್ತೆ ಹೇಳುವುದಾದರೆ ಇದಕ್ಕೆ ಕಾರಣ ಶೂದ್ರ ಸಮುದಾಯಗಳ ಅಸಂಘಟನೆ.
   
ಇದಕ್ಕೆ ವಿರುದ್ಧವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಯಶಸ್ಸು ಕಂಡರು. ಪೆರಿಯಾರರಷ್ಟೆ ಅಂಬೇಡ್ಕರರು ಬ್ರಾಹ್ಮಣವಾದದ ವಿರುದ್ಧ ಹೋರಾಟ , ಕೃತಿಗಳನ್ನು ರಚಿಸಿದರಾದರೂ ರಾಷ್ಟ್ರ ಮಟ್ಟದಲ್ಲಿ ಚದುರಿದ ಶೋಷಿತ ಸಮುದಾಯಗಳನ್ನು ಒಂದು ಎಂಬಂತೆ ಸಂಘಟಿಸಿದರು. ಸಾಲದಕ್ಜೆ ಅವರೆಲ್ಲರನ್ನು ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ವರ್ಗಗಳು ಎಂದು ನಾಮಾಂಕಿತಗೊಳಿಸಿ ಅವರಿಗೆ ಶಾಸನಬದ್ಧ ಮೀಸಲಾತಿಯನ್ನು ಸಹ ಬಾಬಾಸಾಹೇಬರು ನೀಡಿದರು. ಇದೊಂದು ಸಮುದಾಯಗಳನ್ನು ಯಶಸ್ವಿ ಯಾಗಿ ಬೆಸೆಯುವ ಪ್ರಕ್ರಿಯೆಯಾಗಿ ನಡೆಯಿತು. ಹಾಗೆ ಪರಿಶಿಷ್ಟ ಜಾತಿ/ ವರ್ಗಗಳವರು ಅಷ್ಟೇ ರಾಜ್ಯ ರಾಜ್ಯಗಳ ಗಡಿ ಮೀರಿ ಜಾತಿ ಜಾತಿಗಳ ಗಡಿ ಮೀರಿ  ಅಂಬೇಡ್ಕರ್ ರನ್ನು ತನ್ನವರು ಎಂದು ಸ್ವೀಕರಿಸಿದರು. ಚರಿತ್ರೆಯಲ್ಲಿ ಇನ್ನೆಂದೂ ನಡೆದಿರದಂತಹ ಒಗ್ಗೂಡಿಸುವ ಪ್ರಕ್ರಿಯೆ ಭಾರತದಲ್ಲಿ ನಡೆಯಿತು. ಈ ನಿಟ್ಟಿನಲ್ಲಿ ಬಾಬಾಸಾಹೇಬರ Educate Agitate Organise (ಶಿಕ್ಷಣ ಪಡೆಯಿರಿ, ಹೋರಾಟ ಮಾಡಿರಿ ಮತ್ತು ಸಂಘಟಿತರಾಗಿ) ಮಂತ್ರ ಸಮುದಾಯಗಳನ್ನು ಒಗ್ಗೂಡಿಸುವ ಸಂಘಟಿಸುವ ಮೂಲಕ ಇಲ್ಲಿ ತನ್ನ ಕಾರ್ಯ ಸಾಧಿಸಿತ್ತು. ಹಾಗೆ ಒಗ್ಗೂಡುವುವಿಕೆಯ ಪರಿಣಾಮ ಭಾರತದಲ್ಲಿ ರಾಷ್ಟ್ರೀಯ ಸಮುದಾಯಗಳಾಗಿ 3 ಸಮುದಾಯಗಳು ಅಸ್ತಿತ್ವಕ್ಕೆ ಬಂದವು. ಅವುಗಳು ಮುಸ್ಲಿಮರು, ಬ್ರಾಹ್ಮಣರು ಮತ್ತು ಪರಿಶಿಷ್ಟ ಜಾತಿ/ವರ್ಗಗಳವರು(ದಲಿತರು).

ನಿಜ,  ಶೂದ್ರ ಸಮುದಾಯಗಳಿಗೆ ರಾಜಕೀಯ ಅಧಿಕಾರ ನಿರಂತರ ಸಿಗುತ್ತಿದೆ. ಅಭಿವೃದ್ಧಿಯು ನಡೆಯುತ್ತಿದೆ. ಆದರೆ ದುರಂತ ಸೈದ್ಧಾಂತಿಕ ಅವರ ನಿರಂತರ  ಬೆಂಬಲ ಬ್ರಾಹ್ಮಣಶಾಹಿಗೆ. ಅದಲ್ಲದೆ  ಹಾಗೆ ಹುಟ್ಟಿಕೊಂಡ ಬ್ರಾಹ್ಮಣೇತರ ಚಳುವಳಿಯನ್ನು ಅದರ ನೇತಾರರನ್ನು
ಸಂಘಪರಿವಾರ ವಶಪಡಿಸಿಕೊಂಡು ಅಂತಹ ವಿರೋಧ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳುತ್ತಿದೆ. ಅಥವ ಅಂತಹ ಸಮುದಾಯಗಳಿಗೆ ಹೋಲುವ  ಪುರಾಣದ ಕೆಲ ಋಷಿ ಮುನಿಗಳನ್ನು ತಗಲುಹಾಕಿ ಇನ್ನೆಂದಿಗೂ ಆ ಸಮುದಾಯಗಳು ತಲೆ ಎತ್ತದಂತೆ ಬ್ರಾಹ್ಮಣಶಾಹಿ ತನ್ನ ಪ್ರಯತ್ನ ಮುಂದುವರಿಸಿದೆ.
ಹಾಗೆ ಶೂದ್ರ ಸಮುದಾಯಗಳಿಗೂ ಅಷ್ಟೇ ಪುರಾಣದ ಋಷಿಮುನಿಗಳಷ್ಟೆ ಅವರಿಗೆ ಸ್ವರ್ಗ, ಪೆರಿಯಾರರತ್ತ ಅವರು ಕಣ್ಣೆತ್ತಿನೋಡುವುದಿರಲಿ ಅವರನ್ನು ಅಂತಹ ಇತರರನ್ನು ದಲಿತರು ಎಂದುಕೊಳ್ಳುವ ವರೆಗೆ ತನ್ಮೂಲಕ ತನಗೆ ಸ್ಫೂರ್ತಿಯಾಗುವಂತ ಮಾದರಿಗಳನ್ನು ನಿರಾಕರಿಸುವುದರೆಡೆಗೆ ಅವರು ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೆರಿಯಾರರ ಚಳುವಳಿಯ ವೈಫಲ್ಯಕ್ಕೆ ಪೆರಿಯಾರರತ್ತ ಬೊಟ್ಟುಮಾಡುವುದು ಖಂಡಿತ ಆ ಮಹಾನ್ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಾಗುತ್ತದೆ. ಹಾಗಲ್ಲದಿದ್ದರೆ ಕಾನ್ಷೀರಾಮ್ ಜೀ ಯಾಕೆ ಪೆರಿಯಾರ್, ನಾರಾಯಣ ಗುರು ನಮ್ಮ ಪೂರ್ವಿಕರು ಎನ್ನುತ್ತಿದ್ದರು? ಬಹುಜನ ಸಮಾಜ ಎನ್ನುತ್ತಿದ್ದರು? ಈ ಹಿನ್ನೆಲೆಯಲ್ಲಿ ಪೆರಿಯಾರರ ಚಳುವಳಿ ಮುಂದುವರಿಯದಿದ್ದಕ್ಕೆ ಪೆರಿಯಾರರ ಹೋರಾಟ, ಸಿದ್ಧಾಂತ ಕಾರಣವಲ್ಲ ಬದಲಿಗೆ ಶೂದ್ರ ಸಮುದಾಯಗಳ ಅಸಂಘಟನೆ ಕಾರಣ.
-ರಘೋತ್ತಮ ಹೊಬ


Saturday, 24 October 2015

ಒಳ್ಳೆಯ ದಿನಗಳೆಂದರೆ ದಲಿತ ಶಿಶುಗಳ ಹತ್ಯೆಯ ದಿನಗಳೇ?

-ರಘೋತ್ತಮ ಹೊ.ಬ

    ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಘಟನೆಗಳನ್ನು ಆಕಸ್ಮಿಕ ಎನ್ನಲು ಸಾಧ್ಯವಿಲ್ಲ. ದನದ ಮಾಂಸ ಇಟ್ಟುಕೊಂಡಿದ್ದಾರೆ ಎಂಬ ಗುಮಾನಿಯ ಕಾರಣಕ್ಕೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯಲ್ಲಿನ ದಾದ್ರಿ ಗ್ರಾಮದ ಮಹಮ್ಮದ್ ಇಖ್ಲಾಕರ ಹತ್ಯೆ, ಅದೇ ಮಾದರಿಯಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಹರ್ಯಾಣದಲ್ಲಿ ನೂಮಾನ್ ಎಂಬುವವರ ಹತ್ಯೆ, ಇನ್ನು ಬೀಫ್ ಪಾರ್ಟಿ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಪಕ್ಷೇತರ ಶಾಸಕ ಶೇಖ್ ಅಬ್ದುಲ್ ರಷೀದ್ ಮೇಲೆ ಹಲ್ಲೆ, ದೇವಸ್ಥಾನ ಪ್ರವೇಶಿಸಿದನು ಎಂಬ ಕಾರಣಕ್ಕೆ ದಲಿತನೋರ್ವನ ಸಜೀವ ದಹನ, ಪಾಕಿಸ್ತಾನಿ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿಯವರ ಪುಸ್ತಕ ಬಿಡುಗಡೆಯ ವೇಳೆ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿದ ಪ್ರಕರಣ, ಪಾಕ್ ಗಾಯಕ ಗುಲಾಂ ಆಲಿ ಸಂಗೀತ ಕಚೇರಿಗೆ ವಿರೋಧ, ಪಾಕ್ ಜತೆ ಕ್ರಿಕೆಟ್ ಸಂಬಂಧಕ್ಕೆ ಮಸಿ, ಬಹಿರಂಗಗೊಂಡ ಮೋಹನ್ ಭಾಗವತರ ಮೀಸಲಾತಿ ವಿರೋಧಿ ಧೋರಣೆ ಮತ್ತು ಈಗಿನ ಹರ್ಯಾಣದಲ್ಲಿನ ದಲಿತ ಶಿಶುಗಳ ಸಜೀವ ದಹನ ಪ್ರಕರಣ...
  
      ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೇಳುತ್ತಾ ಹೋದರೆ ಮನಸ್ಸು ಎಲ್ಲಿ ಮುರುಟಿಹೋಗುತ್ತದೆಯೋ ಎಂಬ ಆತಂಕ ಅಥವಾ ಈ ಎಲ್ಲ ಘಟನೆಗಳ ಪಟ್ಟಿ ನೋಡಿ ಸಾವಿನ ವ್ಯಾಪಾರಿ ವಂಶಸ್ಥರು ತಮ್ಮ ಉಪಟಳ ಇನ್ನಷ್ಟು ಹೆಚ್ಚುಮಾಡುವರು ಎಂಬ ಭಯ. ಖಂಡಿತ, ದೇಶ ಇಂದು ಅಸಹಿಷ್ಣುತೆಯಿಂದ ಬೇಯುತ್ತಿದೆ. ಅಸಹನೆ ತಾಂಡವವಾಡುತ್ತಿದೆ. ಮುಖ್ಯವಾಗಿ ಅದರ ಬಲಿಪಶುಗಳು ಮುಸ್ಲೀಮರು ಮತ್ತು ದಲಿತರು ಎಂಬುದಿಲ್ಲಿ ಗಮನಿಸಬೇಕಾದ ಅಂಶ. ನಿಜ, ಕಳೆದ 10 ವರ್ಷಗಳ ಹಿಂದೆ ಗುಜರಾತಿನ ಗೋಧ್ರಾದಲ್ಲಿ ಟ್ರೈನೊಂದು ಹೊತ್ತಿ ಉರಿದು ಕರಸೇವಕರು ಬಲಿಯಾದಾಗ, ಪ್ರತಿಹಿಂಸೆಯಾಗಿ ಸಹಸ್ರಾರು ಮುಸ್ಲೀಮರ ಹತ್ಯೆ ನಡೆದಾಗ, ನಕಲಿ ಎನ್‍ಕೌಂಟರ್ ಮೂಲಕ ಸೋಹ್ರಾಬುದ್ದೀನ್ ಶೇಖ್ ಹತ್ಯೆಯಾದಾಗ, ಅಲ್ಲಿಯ ಆಗಿನ ಗೃಹ ಸಚಿವ ಅಮಿತ್‍ಶಾ (ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಜೈಲುಪಾಲಾದಾಗ ದೇಶದ ಜನತೆಗೆ ಅವ್ಯಾವುದೂ ಮುಖ್ಯ ಸುದ್ದಿ ಎನಿಸಲೇ ಇಲ್ಲ. ಕಾರಣ ಗುಜರಾತ್ ಲಾಗಾಯ್ತಿನಿಂದಲೂ ಅದು ಅಸಹನೆ, ಅಸಮಾನತೆ ಪ್ರತಿಪಾದಿಸುವ ನಾಡು, 80ರ ದಶಕದಲ್ಲಿ ಅಲ್ಲಿ ನಡೆದಿರುವ ವಿಚ್ಛಿದ್ರಕಾರಿ ಮೀಸಲಾತಿ ವಿರೋಧಿ ಗಲಭೆ, ದಲಿತರ ನರಮೇಧ, ಅದರ ಗೋಧ್ರಾ ಸಂಬಂಧಿ ಘಟನೆಗಳನ್ನು ಸಹಜವೆಂಬಂತೆ ಪರಿಗಣಿಸಲು ಪ್ರೇರೇಪಣೆಯಾದದ್ದಂತೂ ನಿಜ. ಆದರೆ ‘ಅದೇ ಮಾದರಿ’ ದೆಹಲಿಯತ್ತ ಅದೂ ‘ಒಳ್ಳೆಯ ದಿನಗಳ’ ಭರವಸೆಯೊಂದಿಗೆ ಪಯಣ ಬೆಳೆಸಿತೆಂದರೆ ಬಹುಶಃ ಆ ‘ಒಳ್ಳೆಯು ದಿನಗಳು’ ಈ ಪರಿ ಕರಾಳ ರೂಪದಲ್ಲಿರುತ್ತದೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಅದು ನಡೆದುಹೋಗಿದೆ. ಕುರುಡು ಕೋಮುವಾದ ಕಾಲಿಗೆ ಬಿದ್ದವರ ‘ಅಪರಾಧಿಗಳೆಂಬಂತೆ’ ತುಳಿಯುತ್ತಾ ಸಾಗಿದೆ.

       ಅಪರಾಧಿಗಳು, ಯಾಕೆಂದರೆ ಉತ್ತರಪ್ರದೇಶದ ದಾದ್ರಿಯ ಬಡ ಮುಸ್ಲಿಂ ಕುಟುಂಬಕ್ಕೆ ತಾನು ಫ್ರಿಜ್‍ನಲ್ಲಿ ಮಾಂಸ ಇಟ್ಟುಕೊಳ್ಳುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಸಜೀವ ದಹನಕ್ಕೊಳಗಾದ ದಲಿತನಿಗೆ ತಾನು ದೇವಸ್ಥಾನ ಪ್ರವೇಶಿಸುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಹಾಗೆಯೇ ಗಾಢ ನಿದ್ರೆಯಲ್ಲಿ ಮಲಗಿದ್ದಾಗ ಬೆಂಕಿ ಹಚ್ಚಿ ಸಾಯಿಸಲ್ಪಟ್ಟ ಹರ್ಯಾಣದ ಫರೀದಾಬಾದ್ ಜಿಲ್ಲೆಯ ಸೋನ್‍ಫೆಡ್ ಗ್ರಾಮದ ಹಸುಕಂದಗಳಾದ ವೈಭವ್ ಮತ್ತು ದಿವ್ಯ ಇಬ್ಬರಿಗೂ ತಾವು ಹುಟ್ಟಿದ್ದು ದಲಿತ ಕುಟುಂಬದಲ್ಲಿ ಮತ್ತು ಅದು ‘ಅಪರಾಧ’ ಎಂಬುವ್ಯಾವುದೂ ಗೊತ್ತಿರಲಿಕ್ಕಿಲ್ಲ. ಒಟ್ಟಾರೆ ಮೋದಿಯ ನಾಡಲ್ಲಿ ಯಾವುದು ಅಪರಾಧ, ಯಾವುದು ನಿರಪರಾಧ ಎಂಬುದಕ್ಕೆ ಹೊಸ ನೀತಿಸಂಹಿತೆಯನ್ನೇ ಹೊರಡಿಸಬೇಕಿದೆ.
ಅಲ್ಲೊಬ್ಬ ಹೇಳುತ್ತಾನೆ ‘ದನ ತಿನ್ನುವ ಮುಸಲ್ಮಾನರು ಪಾಕಿಸ್ಥಾನಕ್ಕೆ ಹೋಗಿ’, ಹಾಗಿದ್ದರೆ ದನ ತಿನ್ನುವ ದಲಿತರೆಲ್ಲಿಗೆ ಹೋಗಬೇಕು? ಅಸಹನೆಯ ಅತಿರೇಕ ಎನ್ನುವುದು ಇದನ್ನೇ. ಅಂದಹಾಗೆ ಈ ಎಲ್ಲ ಘಟನೆಗಳನ್ನು ಬಿಜೆಪಿಯ ಅಧ್ಯಕ್ಷ ಅಮಿತ್‍ಶಾ ಸಂಬಂಧಪಟ್ಟ ರಾಜ್ಯಗಳ ಹೊಣೆಗೆ ಕಟ್ಟಿದ್ದಾರೆ. ಆದರೆ ವಾಸ್ತವ? ಈ ಘಟನೆಗಳೆಲ್ಲದ್ದರ ಹಿಂದಿರುವ ‘ಸಾಮಾನ್ಯ’ ಕೈಗಳು, ಮನಸ್ಸುಗಳು ಮತ್ತು ಚಿಂತನೆಗಳು? ಎಲ್ಲವೂ ಒಂದೇ ಮೂಲದವು. ಸಂಶೋಧಕ ಕಲಬುರ್ಗಿಯವರ ಹತ್ಯೆಯನ್ನು ಇಲ್ಲಿ ಉಲ್ಲೇಖಿಸುವುದಾದರೆ, ಪ್ರಾರಂಭದಲ್ಲಿ ಎಲ್ಲರೂ ಬಲಪಂಥೀಯ ಸಂಘಟನೆಗಳತ್ತ ಬೊಟ್ಟುಮಾಡಿದಾಗ ಆಕ್ಷೇಪ ಎತ್ತಿದ ಪಂಥೀಯರು ‘ಸನಾತನ ಸಂಸ್ಥೆ’ ಎಂದು ಸ್ಪಷ್ಟ ಸುದ್ದಿ ಹೊರಬಿದ್ದಾಗ ಸಂಪೂರ್ಣ ಸ್ತಬ್ಧರಾದರು. ಒಟ್ಟಾರೆ ಒಂದರ ನಂತರ ಮತ್ತೊಂದು ಮರುಕಳೀಸುತ್ತಲೇ ಇವೆ ಪ್ರಕರಣಗಳು ಶಾಂತಿಯ ದಿವ್ಯ ರಾಷ್ಟ್ರಕ್ಕೆ ‘ಮಸಿ ಬಳಿಯಲು’.
    
     ಈ ನಡುವೆ ಮಾತು ಮಾತಿಗೂ ಮನದ ಮಾತು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲ ಅಸಹನೆಯ ಘಟನೆಗಳ ಬಗ್ಗೆ ಸೊಲ್ಲೆತ್ತುತ್ತಲೇ ಇಲ್ಲ. ಅದೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಚಾಟಿ ಬೀಸಿದ ನಂತರ ಪ್ರಧಾನಿ ‘ಹಿಂದೂ-ಮುಸ್ಲಿಂ ಒಗ್ಗಟ್ಟಿನ ಬಗ್ಗೆ’  ಭಾಷಣ ಮಾಡಿದರು! ಇನ್ನು ಬಿಹಾರದ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದಾಕ್ಷಣ ಮೀಸಲಾತಿ ಪರ ನಾವಿದ್ದೇವೆ ಎನ್ನುತ್ತಾ ದೂರದ ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದರು! ವಾಸ್ತವವೆಂದರೆ ಇಡೀ ದೇಶದ ಬದುಕಿಂದು ಅಸ್ತವ್ಯಸ್ತವಾಗಿದೆ. ದಿನಕ್ಕೊಂದು ವಸ್ತುಗಳ ಬೆಲೆ ಏರಿ ಜನ ಯಾತನೆ ಪಡುತ್ತಿದ್ದಾರೆ. ಪ್ರೋಟೀನ್ ಮೂಲವಾದ ದನದ ಮಾಂಸ ತಿನ್ನಲು ತಡೆಯೊಡ್ಡುವ ಆಡಳಿತದ ಮಂದಿ, ಹೋಗಲೀ ಸಸ್ಯಾಹಾರದಲ್ಲಾದರೂ ಪ್ರೋಟೀನ್ ಪಡೆಯೋಣವೆಂದರೆ ಪ್ರೋಟೀನ್ ಮೂಲದ ಬಹುಮುಖ್ಯ ಕಾಳು ತೊಗರಿ ಬೇಳೆಯ ಬೆಲೆ ಗಗನಕ್ಕೇರಿದೆ! ಹಾಗೆಯೇ ಕಪ್ಪುಹಣ ತಂದು ಮೋದಿ ಲಕ್ಷ ಕೊಡುವರೆಂದು ಕಾದಿದ್ದ ಮಂದಿ ಲಕ್ಷವಿರಲಿ ದಿನನಿತ್ಯದ ಜೀವನಕ್ಕೂ ಪರದಾಡುವಂತಾಗಿದೆ. ಇನ್ನು ರೈತರ ಆತ್ಮಹತ್ಯೆಯ ಕತೆಯಂತೂ ಹೇಳತೀರದು. ಈ ನಡುವೆ ಯದ್ವಾ ತದ್ವಾ ಏರುವ ಪೆಟ್ರೋಲ್, ಡೀಸೆಲ್ ಬೆಲೆಗಳು? ಹದಗೆಟ್ಟಿರುವ ಶಾಂತಿ-ಸುವ್ಯವಸ್ಥೆ? ಯಾಕೆಂದರೆ ಪೊಲೀಸ್ ವ್ಯವಸ್ಥೆ ಕೇಂದ್ರದ ನೇರ ನಿಯಂತ್ರಣದಲ್ಲಿರುವ ರಾಜದಾನಿ ದೆಹಲಿಯಲ್ಲಿ ಮಕ್ಕಳ ಮೇಲೆ ಸರಣಿ ಅತ್ಯಾಚಾರ ನಡೆಯುತ್ತಿದೆ. ಇನ್ನು ಮಧ್ಯಪ್ರದೇಶ ವೃತ್ತಿಪರ ಕೋರ್ಸುಗಳ ಪರೀಕ್ಷಾ(ವ್ಯಾಪಂ) ಹಗರಣ? ಈಗಾಗಲೇ ಘಟನೆ ಸಂಬಂಧ 40 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದರೆ ಹಗರಣದ ಗಂಭೀರತೆ ಏನೆಂಬುದು ಎಂಥವರಿಗೂ ಅರ್ಥವಾಗುತ್ತದೆ. ಅಂದಹಾಗೆ ಮಧ್ಯಪ್ರದೇಶ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿರುವ ಪ್ರಮುಖ ರಾಜ್ಯ ಎಂಬುದಿಲ್ಲಿ ಗಮನಾರ್ಹ.
   
     ದೇಶವಿಂದು ದಿಕ್ಕೆಟ್ಟು ನಿಂತಿದೆ. ‘ಒಳ್ಳೆಯ ದಿನಗಳು’ ಬಾರದಿದ್ದರೂ ಪರವಾಗಿಲ್ಲ ‘ಕೆಟ್ಟದಿನಗಳೇಕೆ?’ ಎಂದು ತನ್ನನ್ನು ತಾನು ಪ್ರಶ್ನಿಸುವಂತಾಗಿದೆ. ಗುಜರಾತ್ ಮಾದರಿ ಇದೇನಾ ಎಂದು ದೇಶದ ಜನ ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಹ್ಞಾಂ, ಗುಜರಾತ್ ಮಾದರಿ ಅದೆಷ್ಟು ಮೇರೆ ಮೀರಿದ್ದೆಂದರೆ, ಸಂವಿಧಾನ ವಿರೋದಿ ಎಂದರೆ ಹಾರ್ದಿಕ್ ಪಟೇಲ್ ಎಂಬ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ತನ್ನ ಸಮುದಾಯದ ಹೋರಾಟಗಾರರಿಗೆ ಕರೆಕೊಡುವುದೇನೆಂದರೆ “ರಾಜ್ಯ ಪೊಲೀಸರನ್ನೇ ಹತ್ಯೆ ಮಾಡಿ” ಎಂದು! ಈ ಹಿನ್ನೆಲೆಯಲ್ಲಿ ಈಗೀಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ ‘ಒಳ್ಳೆಯ ದಿನಗಳು’ ದೌರ್ಜನ್ಯಕೋರರಿಗೆ, ದಬ್ಬಾಳಿಕೆ ಮಾಡುವವರಿಗೆ, ಅಸಮಾನತೆ ಎಸಗುವವರಿಗೆ, ಸಹಿಷ್ಣುತೆ ಸಹಿಸದವರಿಗೆ. ‘ಕೆಟ್ಟ ದಿನಗಳು’ ದೌರ್ಜನ್ಯದಿಂದ ನೊಂದವರಿಗೆ, ದಬ್ಬಾಳಿಕೆ ಅನುಭವಿಸುತ್ತಿರುವವರಿಗೆ, ಸಮಾನತೆ ಬೇಡುವವರಿಗೆ, ಸಹಿಷ್ಣುತೆ ಬೇಕೆನ್ನುವವರಿಗೆ. ಇದರ ನಿಜದ ಅರ್ಥ ತಾರತಮ್ಯದ ಆಡಳಿತ. ಸದ್ಯ ದೇಶವಿಂದು ಅಂತಹ ತಾರತಮ್ಯದ ಕಪಿಮುಷ್ಟಿಯಲ್ಲಿದೆಯಲ್ಲ ಎಂಬುದೇ ದುರಂತ.

Thursday, 14 May 2015

  ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ

  ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ ಸಪಿಂಡ ವಿವಾಹ. ಅಂತಹ ವಿವಾಹ ಜಾತಿಯ ಉಗಮಕ್ಕೆ ಬೀಜ ಬಿತ್ತಿತು. ಆದರೆ ಅದರ ನಿರ್ಮೂಲನೆ? ಹಾಗೆ ಸೃಷ್ಟಿಯಾದ ಜಾತಿಗಳ ನಡುವೆ ವಿವಾಹದ ಮೂಲಕ ಸಾಧ್ಯವೆ? ಖಂಡಿತ ಸಾಧ್ಯವಿಲ್ಲ. ಆದರೆ ತಳ ಜಾತಿಗಳು ಆರ್ಥಿಕವಾಗಿ ಮೇಲೆ ಬಂದರೆ ಮತ್ತು ಹಾಗೆ ಮೇಲೆ ಬಂದು ಮೇಲ್ಮಟ್ಟದಲ್ಲಿ ಹಾಗೆಯೇ ಉಳಿದರೆ ಜಾತಿ ಭೀತಿ ಕಡಿಮೆಯಾಗುತ್ತದೆ. ಜಾತಿ ಭೀತಿ ಕಡಿಮೆಯಾಯಿತೆಂದರೆ ಜಾತಿ ನಿರ್ಮೂಲನೆಯಾಯಿತೆಂದೇ ಅರ್ಥ. ಮತ್ತು ಆ ಕಾರಣಕ್ಕಾಗಿ ಅಂದರೆ ತಳ ಸಮೂಹಗಳ ಆರ್ಥಿಕ ಸಮತೆಯ ಕಾರಣಕ್ಕಾಗಿ ಮೀಸಲಾತಿಗಿಂತ ವಿವಿಧ ಉದ್ಯೋಗಗಳ ಎಲ್ಲ ಕ್ಷೇತ್ರಗಳೂ ನೊಂದ ತಳ ಸಮುದಾಯಗಳಿಗೆ ತೆರೆಯಬೇಕು. ವ್ಯಾಪಾರ, ವ್ಯವಹಾರ, ಅಂಗಡಿ, ಮುಂಗಟ್ಟು, ಕಾರ್ಖಾನೆ ಹೀಗೆ ಎಲ್ಲ ಕ್ಷೇತ್ರಗಳಲ್ಲು ತಳ ಸಮುದಾಯಗಳು ತನ್ನ ಅಸ್ತಿತ್ವ ಸಾಧಿಸುವಂತಾಗಬೇಕು ಮತ್ತು ಅದಕ್ಕೆ ಸರ್ಕಾರಗಳು ಪ್ರೋತ್ಸಾಹಕ ವಾತಾವರಣ ಸೃಷ್ಟಿಸಬೇಕು. ಸರ್ಕಾರಗಳು ಅಂಬಾನಿ, ಅದಾನಿ, ನಾರಾಯಣಮೂರ್ತಿ, ಅಶೋಕ್ ಖೇಣಿ, ವಿಜಯ್ ಮಲ್ಯಗಳಿಗೆ ರಿಯಾಯಿತಿಗಳನ್ನು ನೀಡುವುದಲ್ಲ. ನಿಜವಾದ ರಿಯಾಯಿತಿ, ಎಕರೆಗೆ ಒಂದು ರೂಪಾಯಿಯಂತೆ ಭೂಮಿ ಗುತ್ತಿಗೆ, ಬ್ಯಾಂಕ್‍ಗಳಿಂದ ಭರಪೂರ ಖಾತರಿ ಪಡಿಸಿದ ಸಾಲ ನೀಡಬೇಕಾಗಿರುವುದು ತಳ ಸಮೂಹಗಳ ಜನರಿಗೆ. ಆಗ ತಳ ಸಮುದಾಯಗಳು ಆರ್ಥಿಕವಾಗಿ ಬಲಾಢ್ಯಗೊಳ್ಳುತ್ತವೆ.

 


ಹಾಗೆಯೇ ತಳ ಸಮುಧಾಯಗಳ ಜನರೂ ಅಷ್ಟೆ ಸಾಧ್ಯವಾದಷ್ಟು ಸ್ವಯಂ ಉದ್ಯೋಗದ ಕಡೆ ಗಮನಹರಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಖಾಸಗಿ ಅಂಗಡಿ, ಹೋಟೆಲ್ಲು, ಕಾರ್ಖಾನೆ ಇತ್ಯಾದಿಗಳನ್ನು ಸ್ಥಾಪಿಸುವ ಕಡೆ , ಸ್ಥಾಪಿಸಿ ನಡೆಸುವ ಕಡೆ ಗಮನಹರಿಸಬೇಕು. ದಾರಿ ಕಷ್ಟದ್ದಾಗಬಹುದು. ಆದರೆ ಮುಂದೆ ನಡೆಯುವಾಗ ಮುಳ್ಳುಕಂಟಿಗಳನ್ನು ಬದಿಗೆ ಸರಿಸುವಂತೆ ಪ್ರಯತ್ನ ಸಾಗಬೇಕು. ಒಂದು ತಲೆಮಾರು ಹೀಗೆ ಕಷ್ಟ ಪಟ್ಟರೆ ಖಂಡಿತ ತಳಸಮುದಾಯಗಳ ಮುಂದಿನ ತಲೆಮಾರು ಜಾತಿ ಭೀತಿಯಿಂದ ಬಚಾವ್ ಆಗುತ್ತವೆ. ಇದು ಸಾಧ್ಯವೇ ಎಂಬ ಪ್ರಶ್ನೆ ಬೇಡ. ಹಿಂದೆ ಅಮೆರಿಕಾದಲ್ಲಿಯೂ ಕೂಡ ‘ಬೀಳಿಯರಿಗೆ ಮಾತ್ರ ಹೊಟೆಲ್’ ಎಂಬ ಬೋರ್ಡುಗಳಿದ್ದವು. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ಕರಿಯರ ‘ಕರಿಯರಿಗೆ ಮಾತ್ರ ಹೊಟೆಲ್’ ಎಂದು ತಮ್ಮ ದೇ ಹೋಟೆಲ್ಲುಗಳನ್ನು ತೆರೆದರು. ಆಗ ಕರಿಯರಿಗೆ ಯಶಸ್ಸು ಸಿಕ್ಕಿತು. ಇಂದು ಅಮೆರಿಕಾದಲ್ಲಿ ಕರಿಯರು ಬಿಳಿಯರಷ್ಟೆ ಪ್ರಬಲವಾಗಿದ್ದಾರೆ. ಕರಿಯರು ನಾಶವಾಗಿಲ್ಲ, ಆದರೆ ಆರ್ಥಿಕ ಬೆಳವಣಿಗೆಯಿಂದಾಗಿ ಸಮಾನತೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಳ ಸಮೂಹಗಳು ಅಡಿ ಇಡಬೇಕಿದೆ.
                                             -ರಘೋತ್ತಮ ಹೊ.ಬ

Monday, 11 May 2015

ಚುನಾವಣಾ ಅಕ್ರಮದ ಮೂಲಕ ಸೋಲಿಸಲ್ಪಟ್ಟ ‘ಪ್ರಜಾಪ್ರಭುತ್ವದ ಪಿತ’


1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ ಉತ್ತರ ಕ್ಷೇತ್ರ, ಅಂದಿನ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅಂದರೆ ಆ ಕ್ಷೇತ್ರದಿಂದ ಓರ್ವ ಸಾಮಾನ್ಯ ವರ್ಗದ ಸದಸ್ಯ ಮತÀ್ತು ಓರ್ವ ಪರಿಶಿಷ್ಟಜಾತಿಯ ಸದಸ್ಯ ಹೀಗೆ ಇಬ್ಬರೂ ಆಯ್ಕೆಯಾಗಬೇಕಿತ್ತು. ಈ ಪ್ರಕಾರ ಅಲ್ಲಿ ಚುನಾವಣೆ ಘೋಷಣೆಯಾಗಿ 11ಜನ ನಾಮಪತ್ರ ಸಲ್ಲಿಸಿ ಮೂವರು ನಾಮಪತ್ರ ವಾಪಸ್ ಪಡೆದು ಕಣದಲ್ಲಿ 8ಜನ ಅಭ್ಯರ್ಥಿಗಳು ಉಳಿದರು. ಅಂದಹಾಗೆ ಆ 8ಜನ ಅಭ್ಯರ್ಥಿಗಳಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳೂ ಇದ್ದರು ಮತ್ತು ಸಾಮಾನ್ಯ ಅಭ್ಯರ್ಥಿಗಳೂ ಇದ್ದರು ಮತ್ತು ಯಾಕೆ ಹೀಗೆ ಇಬ್ಬರನ್ನೂ ಒಟ್ಟಿಗೆ ಮಾಡಲಾಗಿತ್ತೆಂದರೆ ಪರಿಶಿಷ್ಟರು, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಲು ಅವರೂ ಅರ್ಹರಾದುದರಿಂದ ಸಾಮಾನ್ಯ ಕ್ಷೇತ್ರ ಮತ್ತು ಪರಿಶಿಷ್ಟರ ಕ್ಷೇತ್ರ ಹೀಗೆ ಎರಡನ್ನೂ ಒಟ್ಟಿಗೆ ಮಿಶ್ರ ಮಾಡಲಾಗಿತ್ತು. ಅಂದಹಾಗೆ ಈ ಮಿಶ್ರ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಯೇ ಪಡೆದಿದ್ದರೆ ಸಾಮಾನ್ಯ ಅಭ್ಯರ್ಥಿಯಾಗಿ ಪರಿಶಿಷ್ಟಜಾತಿಯ ಅಭ್ಯರ್ಥಿಯೇ ಆಯ್ಕೆಯಾಗಬಹುದಿತ್ತು ಮತ್ತು ಯಥಾಪ್ರಕಾರ ಮೀಸಲು ಕ್ಷೇತ್ರದಿಂದಲೂ ಮತ್ತೋರ್ವ ಪರಿಶಿಷ್ಟ ಆಯ್ಕೆಯಾಗುತ್ತಿದ್ದ. ಅಕಸ್ಮಾತ್ ಮೊದಲ ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿಯೇ ಇದ್ದರೆ ಸಹಜವಾಗಿ ಆತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದ ಮತ್ತು ಉಳಿದ ಪರಿಶಿಷ್ಟಜಾತಿಯ ಸ್ಥಾನಕ್ಕೆ ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು ಆಯ್ಕೆಯಾಗುತ್ತಿದ್ದರು. ಒಟ್ಟಾರೆ ದ್ವಿಸದಸ್ಯ ಸ್ಥಾನದ ಆಯ್ಕೆಯ ಈ ಪ್ರಕ್ರಿಯೆ ಗೊಂದಲಮಯವಾಗೇನು ಇರಲಿಲ್ಲ.

ದ್ವಿಸದಸ್ಯ ಈ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಹೇಗಿತ್ತೆಂದರೆ ಕಣದಲ್ಲಿ ಅಭ್ಯರ್ಥಿಗಳು 8 ಮಂದಿ ಇದ್ದುದರಿಂದ ಪ್ರತೀ ಮತದಾನ ಕೇಂದ್ರದಲ್ಲಿಯೂ ಪ್ರತೀ ಅಭ್ಯರ್ಥಿಗೆ ಒಂದರಂತೆ 8 ಮತ ಪಟ್ಟಿಗೆಗಳನ್ನು(ಬೂತ್‍ಗಳನ್ನು) ಇಡಲಾಗಿತ್ತು. ಮತದಾರನಿಗೆ ಸಾಮಾನ್ಯ ಕ್ಷೇತ್ರಕ್ಕೊಂದು ಮತ್ತು ಮೀಸಲು ಕ್ಷೇತ್ರಕ್ಕೊಂದು ಹೀಗೆ ಎರಡು ಬೇರೆ ಬೇರೆ ಬಣ್ಣದ ಮತ ಪತ್ರಗಳನ್ನು ನೀಡಲಾಗಿತ್ತು. ಸಾಮಾನ್ಯ ಕ್ಷೇತ್ರದ ಮತಪತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲಾ ಎಂಟು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿದ್ದವು. ಪರಿಶಿಷ್ಟರ ಮೀಸಲಿನ ಮತಪತ್ರದಲ್ಲಿ ಕೇವಲ ಪರಿಶಿಷ್ಟ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮಾತ್ರ ಇದ್ದವು. ಮತದಾರ ಆ ಎರಡೂ ಮತಪತ್ರಗಳನ್ನು ಪಡೆದು ಎರಡರಲ್ಲೂ ತನಗೆ ಇಷ್ಟವಾದ ಅಭ್ಯರ್ಥಿಗಳ ಚಿಹ್ನೆಗಳಿಗೆ ಮುದ್ರೆಯೊತ್ತಿ ಸಹಿ ಮಾಡಿ ಸಂಬಂಧಿಸಿದ ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಮಾತ್ರ ಹಾಕಬೇಕಿತ್ತು. ಈ ಹಿನ್ನೆಲೆಯಲ್ಲಿ ಮತದಾರನೋರ್ವ ಅಭ್ಯರ್ಥಿಯೊಬ್ಬರಿಗೆ ತಾನು ನೀಡಿದ ಮತವನ್ನು, ಸಂಬಂಧಿತ ಮತಪತ್ರವನ್ನು ಅದೇ ಅಭ್ಯರ್ಥಿಯ ಮತಪೆಟ್ಟಿಗೆಯಲ್ಲಿ ಹಾಕದೆ ಬೇರೆ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೆ ಅದು ಕುಲಗೆಟ್ಟ ಮತವಾಗುತ್ತಿತ್ತು. ಗಮನಾರ್ಹವೆಂದರೆ ಮತದಾರ ತನಗೆ ನೀಡಲಾದ ಎರಡೂ ಮತಪತ್ರಗಳನ್ನು ತನ್ನಿಷ್ಟದ ಒಂದೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೂ ಅದರಲ್ಲಿ ಒಂದು ಮತ ಕುಲಗೆಡುತ್ತಿತ್ತು ಈ ನಿಟ್ಟಿನಲ್ಲಿ ಇದನ್ನು ‘ಹಾಗೆ ಮಾಡುವುದು ಅಕ್ರಮ’ ಎಂದು ಅಂದಿನ ಜನಪ್ರತಿನಿಧಿ ಕಾಯಿದೆ ಸ್ಪಷ್ಟವಾಗೇ ಘೋಷಿಸಿತ್ತು. ಇದಲ್ಲದೆ ಮತದಾರ ತನಗೆ ಕೇವಲ ಒಂದು ಓಟು ಹಾಕುವ ಮಾತ್ರ ಇಚ್ಚೆ ಇದೆ, ಇನ್ನೊಂದು ಓಟು ಹಾಕುವ ಇಚ್ಚೆ ಇಲ್ಲ ಎಂದರೆ ಆತ ತನ್ನಿಷ್ಟದ ಆ ಒಂದು ಓಟನ್ನು ಮಾತ್ರ ಹಾಕಿ ಉಳಿದ ಒಂದು ಮತಪತ್ರವನ್ನು ವಾಪಸ್ ಮತಗಟ್ಟೆಯ ಅಧಿಕಾರಿಗೆ ನೀಡುವ ಅವಕಾಶವೂ ದ್ವಿಸದಸ್ಯ ಆ ಕ್ಷೇತ್ರದಲ್ಲಿ ಇತ್ತು.

ಈ ಪ್ರಕಾರ ಅಂಬೇಡ್ಕರರು ಸ್ಪರ್ಧಿಸಿದ್ದ ಬಾಂಬೆ ನಗರ ಉತ್ತರ ಆ ಕ್ಷೇತ್ರಕ್ಕೆ 1952 ಜನವರಿ 3 ರಂದು ಚುನಾವಣೆ ನಡೆದು ಜನವರಿ 7ರಂದು ಮತಎಣಿಕೆ ಪ್ರಾರಂಭವಾಗಿ ಜನವರಿ 11ಕ್ಕೆ ಎಣಿಕೆ ಮುಕ್ತಾಯವಾಯಿತು. ಫಲಿತಾಂಶವನ್ನು ಕ್ರಮಸಂಖ್ಯೆ, ಪಡೆದ ಮತಗಳು ಮತ್ತು ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಬಿದ್ದ ಬೇರೆ ಅಭ್ಯರ್ಥಿಗಳ ಮತಗಳು ಅರ್ಥಾತ್ ಕುಲಗೆಟ್ಟ ಮತಗಳ ಪ್ರಕಾರ ಪಟ್ಟಿಮಾಡಿ ದಾಖಲಿಸುವುದಾದರೆ
ಅಭ್ಯರ್ಥಿ *ಪಡೆದ ಮತ @ ಕುಲಗೆಟ್ಟ ಮತ
1. ಡಾ.ಅಂಬೇಡ್ಕರ್ * 1,23,576 @ 2921
2. ಅಶೋಕ್ ಆರ್.ಮೆಹ್ತಾ * 1,39,741 @ 5,597
3. ಎಸ್.ಎ.ಡಾಂಗೆ * 96,755 @ 39,165
4. ಗೋಪಾಲ್ ವಿ.ದೇಶ್‍ಮುಖ್ * 40,786 @ 6,634
5. ವಿಠಲ್ ಬಿ.ಗಾಂಧಿ * 1,49,138 @ 10,881
6. ಕೇಶವ ಬಿ.ಜೋಶಿ * 15,195 @ 1,168
7. ನಾರಾಯಣ್ ಎಸ್.ಕಜ್ರೋಳ್ಕರ್ * 1,38,137 @ 6,892
8. ನೀಲಕಾಂತ್ ಬಿ.ಪಾರುಯೇಕರ್ * 12,560 @ 1,025

ಈ ಪಟ್ಟಿಯ ಪ್ರಕಾರ ಎರಡು ಸ್ಥಾನ ಇದ್ದ ಈ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ(1,49,138) ವಿಠಲ್ ಬಿ.ಗಾಂಧಿ ಆಯ್ಕೆಯಾದರೆ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ನಾರಾಯಣ್ ಎಸ್.ಕಜ್ರೋಳ್ಕರ್ 1,38,137 ಮತ ಪಡೆದು ಆಯ್ಕೆಯಾದರು. 1,23,576 ಮತ ಪಡೆದ ಅಂಬೇಡ್ಕರರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಜ್ರೋಳ್ಕರ್ ವಿರುದ್ಧ 14,561 ಮತಗಳ ಅಂತರದಿಂದ ಸೋತರೆ ಸಾಮಾನ್ಯ ಕ್ಷೇತ್ರದಲ್ಲಿ ಅಂಬೇಡ್ಕರರ ಎಸ್‍ಸಿಎಫ್(ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್) ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ಆರ್.ಮೆಹ್ತಾ 1,39,741 ಮತ ಪಡೆದು ಅದೇ ಕಾಂಗ್ರೆಸ್‍ನ ವಿಠಲ್ ಬಿ.ಗಾಂಧಿಯವರ ಎದುರು 9,397 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಂದಹಾಗೆ ಇಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟ ಕುಲಗೆಟ್ಟ ಮತಗಳು? ಅಂಬೇಡ್ಕರರು ಸೋತಿದ್ದೇ ಅಥವಾ ಸೋಲಿಸಲ್ಪಟ್ಟಿದ್ದೇ ಕುಲಗೆಡಿಸಲ್ಪಟ್ಟ ಈ ಮತಗಳ ಕಾರಣಕ್ಕಾಗಿ! ಸೋತ ನಂತರ ಸ್ವತಃ ಅಂಬೇಡ್ಕರರು ಈ ಸಂಬಂಧ 1952 ಏಪ್ರಿಲ್ 21ರಂದು ಅಂದಿನ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಾರೆ ಮತ್ತು ತಮ್ಮ ಆ ದೂರಿನಲ್ಲಿ ಬಾಬಾಸಾಹೇಬರು ಅತಿ ಹೆಚ್ಚು ಕುಲಗೆಟ್ಟ ಮತಗಳನ್ನು ‘ಪಡೆದ’ ಕಮ್ಯೂನಿಸ್ಟ್ ಪಕ್ಷದ ನಾಯಕ ಶ್ರೀಪಾದ ಅಮೃತ ಡಾಂಗೆ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಾಲ್ ವಿ.ದೇಶ್‍ಮುಖ್, ಈ ಇಬ್ಬರೂ ಅಭ್ಯರ್ಥಿಗಳು ನಡೆಸಿದ ಅಕ್ರಮಗಳನ್ನು ಹೂಡಿದ ವಾಮಮಾರ್ಗಗಳನ್ನು ಹೇಳುತ್ತಾ ಹೋಗುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.411).
ಅಂಬೇಡ್ಕರರ ಆ ದೂರಿನ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದಾದರೆ, ಮೊದಲೇ ಹೇಳಿದ ಹಾಗೆ ಒಬ್ಬ ಮತದಾರ ತನ್ನ ಎರಡೂ ಓಟುಗಳನ್ನು ಒಬ್ಬನೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕುವುದು ತಪ್ಪು, ಅದು ಕುಲಗೆಡುತ್ತದೆ. ಆದರೆ ಆಶ್ಚರ್ಯವೆಂದರೆ ಹಾಗೆ ಮತಗಳನ್ನು ಕುಲಗೆಡಿಸಲೆಂದೇ ಮೇಲ್ಕಂಡ ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಭರಪೂರ ಪ್ರಚಾರ ನಡೆಸಿದ್ದರು. ಹೀಗೆ ಮತಗಳನ್ನು ಕುಲಗೆಡಿಸುವುದರಿಂದ ತಾವು ಗೆಲ್ಲಲಾಗುವುದಿಲ್ಲ ಎಂದು ಈ ಇಬ್ಬರೂ ಅಭ್ಯರ್ಥಿಗಳಿಗೂ ಗೊತ್ತಿತ್ತು. ಆದರೆ ಅವರ ಅಂತಹ ನಡೆಯ ಒಟ್ಟಾರೆ ಉದ್ದೇಶ? ಅಂಬೇಡ್ಕರರನ್ನು ಸೋಲಿಸುವುದಾಗಿತ್ತು!
ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 39,165 ಕುಲಗೆಟ್ಟ ಮತಗಳನ್ನು ಪಡೆದ ಕಮ್ಯೂನಿಸ್ಟ್ ನಾಯಕ ಎಸ್.ಎ.ಡಾಂಗೆ ಪ್ರಚಾರದ ಸಮಯದಲ್ಲಿ ಹೊರಡಿಸಿದ್ದ ಒಂದು ಕರಪತ್ರದಲ್ಲಿ ಕಣದಲ್ಲಿರುವ ಪ್ರಚಂಡ ಅಭ್ಯರ್ಥಿ ತಾನಾಗಿದ್ದು ಮತದಾರರು ‘ತಮ್ಮೆರಡು ಓಟುಗಳನ್ನು’ ನನಗೇ ನೀಡಬೇಕು ಎಂದು ಆಗ್ರಹಿಸಿದ್ದರು! ಅಲ್ಲದೆ ಅದೇ ಡಾಂಗೆಯವರು ತಮ್ಮ ಪಕ್ಷ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಯುಗಾಂತರ’ ಎಂಬ ಮರಾಠಿ ವಾರಪತ್ರಿಕೆಯಲ್ಲಿ ಹೊರಡಿಸಿದ್ದ ಜಾಹೀರಾತಿನಲ್ಲಿ ‘ಮತದಾರರು ತಮ್ಮ ಎರಡೂ ಓಟುಗಳನ್ನು’ ತಮ್ಮ ಒಂದೇ ಡಬ್ಬಕ್ಕೆ ಹಾಕಬೇಕು ಎಂದು ತಮ್ಮ ಗುರುತಾದ ‘ಇಂಜಿನ್’ ಚಿತ್ರ ಸಮೇತ ಕೋರಿದ್ದರು! ಡಾಂಗೆಯವರ ಒಟ್ಟಾರೆ ಉದ್ದೇಶ ಸ್ಪಷ್ಟ ಇತ್ತು ಅಂದರೆ ಅದು ತನಗೆ ಲಾಭವಾಗಬೇಕು ಎಂದಲ್ಲ, ಬದಲಿಗೆ ಅಂಬೇಡ್ಕರರಿಗೆ ನಷ್ಟವಾಗಬೇಕು ಎಂದು! ಈ ಸಂಬಂಧ ಕರಪತ್ರವೊಂದರಲ್ಲಿ ಕುದ್ದು ಅಂಬೇಡ್ಕರರ ಹೆಸರನ್ನೇ ಉಲ್ಲೇಖಿಸಿದ್ದ ಸದರಿ ಡಾಂಗೆ “ಪರಿಶಿಷ್ಟ ಜಾತಿಗೆ ಸೇರಿದ್ದ ಅಂಬೇಡ್ಕರರು ದ್ವಿಸದಸ್ಯ ಈ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೀಗೆ ಎರಡೂ ಸ್ಥಾನಗಳ ಅಭ್ಯರ್ಥಿಯಾಗುವ ಅವಕಾಶ ಹೊಂದಿದ್ದಾರೆ. ಆದುದರಿಂದ ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಪರಿಶಿಷ್ಟಜಾತಿಯ ಅಂಬೇಡ್ಕರರಿಗೆ ಓಟು ಕೊಟ್ಟರೆ ಅದು ಪರಿಶಿಷ್ಟರ ಮತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಮತದಾರರು ತಮ್ಮ ಎರಡೂ ಮತಗಳನ್ನು ನನ್ನ ‘ಇಂಜಿನ್’ ಗುರುತಿಗೇ ನೀಡಿ”!

ಅಬ್ಬಾ! ಎಂತಹ ತಂತ್ರ! ಸಾಮಾನ್ಯ ಕ್ಷೇತ್ರ ಆಗಿದ್ದ ಆ ಬಾಂಬೆ ಉತ್ತರ ಕ್ಷೇತ್ರದಿಂದ ಅಂಬೇಡ್ಕರ್ ಕೇವಲ ಪರಿಶಿಷ್ಟರ ಓಟುಗಳಿಂದ ಮಾತ್ರ ಗೆಲ್ಲಬೇಕಂತೆ, ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಅಂಬೇಡ್ಕರರಿಗೆ ಮತ ಹಾಕಿದರೆ ಅದು ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡಂತೆಯಂತೆ. ಆ ಕಾರಣಕ್ಕಾಗಿ ಮತದಾರ ಎರಡೂ ಓಟುಗಳನ್ನು ಒಬ್ಬ ವ್ಯಕ್ತಿಯ ಡಬ್ಬಕ್ಕೇ ಹಾಕಿ ತನ್ನ ಮತವನ್ನು ಕುಲಗೆಡಿಸಿಕೊಳ್ಳಬೇಕಂತೆ! ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಡಾಂಗೆಯವರು ತಮ್ಮ ಕುಯುಕ್ತಿಯ ಇಂಥ ನಡೆಯಿಂದ ಮತದಾರರನ್ನು ಎಷ್ಟು ದಿಕ್ಕುತಪ್ಪಿಸುವುದು ಸಾಧ್ಯವೋ ಅಷ್ಟೂ ದಿಕ್ಕುತಪ್ಪಿಸಿದರು ತನ್ಮೂಲಕ ಅಂಬೇಡ್ಕರರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು! ಹೇಗೆಂದರೆ ಕುಲಗೆಟ್ಟ ಒಟ್ಟು ಮತಗಳು 74,333. ಅದರಲ್ಲಿ ಡಾಂಗೆಯವರ ಇಂತಹ ಅಪಪ್ರಚಾರದಿಂದ ಬರೋಬ್ಬರಿ ಅವರೊಬ್ಬರಿಗೇ ಬಿದ್ದ ಕುಲಗೆಟ್ಟ ಮತಗಳೇ 39,165! ಅಂದಹಾಗೆ ಅಂಬೇಡ್ಕರ್ ಸೋತದ್ದು? 14,561 ಮತಗಳಿಂದ! ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ಸೋಲಿನ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು ಮತ ಕುಲಗೆಡಿಸುವಲ್ಲಿ ಡಾಂಗೆ ಯಶಸ್ವಿಯಾಗಿದ್ದರು. ಡಾಂಗೆಯವರ ಇಂತಹ ಹೀನ ತಂತ್ರವನ್ನು ತಮ್ಮ ಆ ಚುನಾವಣಾ ದೂರಿನಲ್ಲಿ ಅಂಬೇಡ್ಕರರು ಸಾಕ್ಷಿ ಸಮೇತ, ಅಂದರೆ ಕರಪತ್ರ ಪ್ರತಿ, ಪೇಪರ್ ಕಟಿಂಗ್‍ಗಳನ್ನು ಲಗತ್ತಿಸುವುದರ ಜೊತೆ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಅರುಹಿದ್ದರು.

ಮುಂದುವರಿದು ಅಂಬೇಡ್ಕರರು ಮತ್ತೋರ್ವ ಅಭ್ಯರ್ಥಿಯ ಅಪಪ್ರಚಾರವನ್ನು ಸಾಕ್ಷಿ ಸಮೇತ ದಾಖಲಿಸಿದ್ದರು. ಅದು ಪಕ್ಷೇತರ ಅಭ್ಯರ್ಥಿ ಹಿಂದುತ್ವವಾದಿ ಗೋಪಾಲ್ ವಿ.ದೇಶ್‍ಮುಖ್‍ರವರಿಗೆ ಸಂಬಂಧಿಸಿದ್ದು. ಸದರಿ ದೇಶ್‍ಮುಖ್ ‘ವಿವಿಧ ವೃತ್ತಾ’ ಎಂಬ ಪತ್ರಿಕೆಯಲ್ಲಿ ಡಿಸೆಂಬರ್ 31, 1951ರಲ್ಲಿ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ “ಬಾಂಬೆ ಉತ್ತರ ಕ್ಷೇತ್ರವು ದ್ವಿಸದಸ್ಯ ಸಾಮಾನ್ಯ ಕ್ಷೇತ್ರವಾಗಿದ್ದು ಇಲ್ಲಿ ಎರಡೂ ಸ್ಥಾನಗಳನ್ನು ಪರಿಶಿಷ್ಟರೇ ಗೆಲ್ಲುವಂತಹ ತಂತ್ರವನ್ನು ಅಂಬೇಡ್ಕರರು ರೂಪಿಸಿದ್ದಾರೆ. ಆ ಕಾರಣದಿಂದ ಮತದಾರರು ಅಂಬೇಡ್ಕರರ ಇಂತಹ ತಂತ್ರವನ್ನು ಸೋಲಿಸಲು ತಮ್ಮ ಎರಡೂ ಓಟುಗಳನ್ನು ಅಂಬೇಡ್ಕರರನ್ನು ಹೊರತು ಪಡಿಸಿ ಇತರರಿಗೆ ನೀಡಿ. ಆ ಮೂಲಕ ಪರಿಶಿಷ್ಟೇತರರೂ ಆಯ್ಕೆಯಾಗುವಂತೆ ಮಾಡಿ” ಎಂದಿದ್ದರು. ಮುಂದುವರಿದು ಅದೇ ದೇಶ್‍ಮುಖ್ ಅದೇ ‘ವಿವಿಧ ವೃತ್ತಾ’ ಪತ್ರಿಕೆಯಲ್ಲಿ “ಮತದಾರನೋರ್ವ ಹಿಂದೂ ಅಭ್ಯರ್ಥಿಯ ಪೆಟ್ಟಿಗೆಯಲ್ಲಿ ಮಾತ್ರ ತನ್ನ ಎರಡೂ ಮತಗಳನ್ನು ಹಾಕಬೇಕು ಮತ್ತು ಅದು ಯಾವುದೇ ರೀತಿಯಲ್ಲೂ ಕಾನೂನಿಗೆ ವಿರುದ್ಧವಲ್ಲ” ಎಂಬ ಹೇಳಿಕೆ ನೀಡಿ ಕೋಮುಭಾವವನ್ನು ಬಹಿರಂಗವಾಗೇ ಬಡಿದೆಬ್ಬಿಸಿದ್ದರು! (ಇಲ್ಲಿ ದೇಶ್‍ಮುಖ್‍ರ ‘ಹಿಂದೂ ಅಭ್ಯರ್ಥಿಗೆ ಮಾತ್ರ’ ಎಂಬ ಪದವನ್ನು ಗಮನಿಸಬೇಕು! ಅಂದರೆ ಅಂಬೇಡ್ಕರರು ಒಟ್ಟಾರೆ ಪರಿಶಿಷ್ಟರು ಹಿಂದೂಗಳಲ್ಲ ಎಂಬುದು ಆ ಕಾಲದಲ್ಲೇ 1952ರಲ್ಲೇ ಸ್ಪಷ್ಟ.) ಈ ಸಂಬಂಧ ದೇಶ್‍ಮುಖ್‍ರ ಇಂತಹ ಕೋಮುಭಾವದ ಪತ್ರಿಕಾ ಹೇಳಿಕೆಯ ವರದಿಯ ತುಣುಕನ್ನೂ ಸಹ ಅಂಬೇಡ್ಕರರು ತಮ್ಮ ಆ ಚುನಾವಣಾ ತಕರಾರು ಅರ್ಜಿಯ ಜೊತೆ ಲಗತ್ತಿಸಿದ್ದರು.

ಒಟ್ಟಾರೆ ಹೇಳುವುದಾದರೆ ಕಮ್ಯೂನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆ, ಹಿಂದುತ್ವವಾದಿ ನಾಯಕ ಗೋಪಾಲ್ .ವಿ.ದೇಶ್‍ಮುಖ್ ಇಬ್ಬರೂ “ವಯಕ್ತಿಕವಾಗಿ ಅವರಿಬ್ಬರಿಗು ಯಾವುದೇ ಲಾಭವಾಗದಿದ್ದರೂ ಅಂಬೇಡ್ಕರರ ಗೆಲುವಿನ ಸಂಭವವನ್ನು ತಪ್ಪಿಸುವ ಏಕೈಕ ಉದ್ದೇಶ ಇಟ್ಟುಕೊಂಡು ಎರಡೂ ಓಟುಗಳನ್ನು ತಮಗೆ ಹಾಕಿ” ಎಂಬ ಚುನಾವಣಾ ಹೀನ ತಂತ್ರ ಹೆಣೆದು, ಮತದಾರರನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾದರು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ತಮ್ಮ ಆ ಚುನಾವಣಾ ದೂರಿನಲ್ಲಿ ಸದರಿ ಬಾಂಬೆ ಸಿಟಿ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಈ ಇಬ್ಬರು ಅಭ್ಯರ್ಥಿಗಳ ಇಂತಹ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಅನೂರ್ಜಿತಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ಕೋರಿದರು. ಅಂತೆಯೇ ಅಂಬೇಡ್ಕರರು ಸಲ್ಲಿಸಿದ ಆ ಚುನಾವಣಾ ದೂರಿನ ವಿಚಾರಣೆ ಶ್ರೀ ಎನ್.ಜೆ.ವಾಡಿಯಾ, ಶ್ರೀ ಎಂ.ಕೆ.ಲಲ್ಕಾಕ, ಶ್ರೀ ಜಿ.ಪಿ.ಮುರುಡೇಶ್ವರ್ ರವರನ್ನೊಳಗೊಂಡ ಚುನಾವಣಾ ಟ್ರಿಬ್ಯೂನಲ್‍ನಲ್ಲಿ ನಡೆಯುತ್ತದೆ ಮತ್ತು ಸ್ವತಃ ಅಂಬೇಡ್ಕರರೇ ಆ ಟ್ರಿಬ್ಯೂನಲ್ ಮುಂದೆ ವಿಚಾರಣೆಗೆ ಹಾಜರಾಗಿ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(2)ರ ಅಡಿಯಲ್ಲಿ ಚುನಾವಣೆಯಲ್ಲಿ ಮತದಾರರ ಮೇಲೆ ‘ಅಕ್ರಮ ಪ್ರಭಾವ’ ಬೀರಿದ ಆ ಇಬ್ಬರು ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ, ಸೆಕ್ಷನ್ 100ರ ಪ್ರಕಾರ “ಭಾರಿ ಅಕ್ರಮದ ಆಧಾರದಲ್ಲಿ ಸದರಿ ಚುನಾವಣೆಯನ್ನು ರದ್ದುಪಡಿಸುವಂತೆ””ಪ್ರಬಲ ವಾದ ಮಂಡಿಸುತ್ತಾರೆ. ಅಂದಹಾಗೆ ಜನಪ್ರತಿನಿಧಿ ಕಾಯ್ದೆ ಅಂದಿನ ನಿಯಮ 25(1)ರ ಪ್ರಕಾರವೇ ‘ಮತದಾರನೊಬ್ಬ ತನ್ನ ಎರಡೂ ಮತವನ್ನೂ ಒಂದೇ ಬ್ಯಾಲಟ್ ಬಾಕ್ಸ್‍ನಲ್ಲಿ ಹಾಕುವುದು ಕಾನೂನಿಗೆ ವಿರುದ್ಧ’. ಹೀಗಿರುವಾಗ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಕಾನೂನಿಗೆ ವಿರುದ್ಧವಾದ ಇಂತಹ ಕ್ರಿಯೆ ನಡೆಸಿ ಎಂದು ಮತದಾರರಿಗೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಗಳ ಮೂಲಕ ಆಗ್ರಹಿಸುತ್ತಾರೆ ಎಂದರೆ ಇದು ಚುನಾವಣಾ ಅಕ್ರಮದ ಉದ್ದೇಶಪೂರ್ವಕ ಆಚರಣೆಯಲ್ಲದೆ ಮತ್ತೇನು? ಮತ್ತು ಅದು ನ್ಯಾಯಬದ್ಧ ಚುನಾವಣೆ ಹೇಗಾಗುತ್ತದೆ? ಮುಂದುವರಿದು ಅಂಬೇಡ್ಕರರು “ನಾನು ನನ್ನ ಸ್ಥಾನವನ್ನು 13000 ಓಟುಗಳಿಂದ ಕಳೆದುಕೊಂಡೆ. ಡಾ.ದೇಶ್‍ಮುಖ್ ಮತ್ತು ಶ್ರೀ ಡಾಂಗೆ ಇಂತಹ ನೀಚ ತಂತ್ರಗೈಯದಿದ್ದರೆ ಕೇವಲ ಶ್ರೀ ಡಾಂಗೆಯವರು ಕುಲಗೆಡಿಸಿದ ಆ 39000 ಓಟುಗಳಲ್ಲೇ ಖಂಡಿತ ನಾನು ಬಹುಸಂಖ್ಯೆಯ ಓಟುಗಳನ್ನು ಪಡೆಯುತ್ತಿದ್ದೆ. (ಆ ಮೂಲಕ ಆಯ್ಕೆಯಾಗುತ್ತಿದ್ದೆ). ಈ ನಿಟ್ಟಿನಲ್ಲಿ ಮತದಾರರ ಮೇಲೆ ಹೀಗೆ ಶ್ರೀ ಡಾಂಗೆ ಮತ್ತು ಶ್ರೀ ದೇಶ್‍ಮುಖ್ ಅಕ್ರಮ ಪ್ರಭಾವ ಬೀರಿದ್ದಕ್ಕೆ ಸಾಕ್ಷಿಯಾಗಿ ಭಾರೀ ಸಂಖ್ಯೆಯ ಕುಲಗೆಟ್ಟ ಮತಗಳು(73,333) ನ್ಯಾಯಾಲಯದ ಮುಂದಿದೆ. ನ್ಯಾಯಾಲಯ ಈ ವ್ಯಾಪಕ ಅಕ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದರ ಆಧಾರದ ಮೇಲೆ ಬಾಂಬೆ ನಗರ ಉತ್ತರ ಆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಭ್ರಷ್ಟ ಆಚರಣೆಗಳು ನಡೆದಿರುವುದರಿಂದ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 100ರ ಅಡಿಯಲ್ಲಿ ಆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ನಿಖರ ವಾದ ಮಂಡಿಸುತ್ತಾರೆ.
ಅಂಬೇಡ್ಕರರ ಈ ವಾದಕ್ಕೇ ಜಯ ಸಿಕ್ಕಿತೆ? ಖಂಡಿತ ಇಲ್ಲ. ಎಲ್ಲ ಚುನಾವಣಾ ವಿಚಾರಣೆಗಳಂತೆ ಇದೂ ಕೂಡ ‘ಹಿಯರಿಂಗ್ ಮುಂದಕ್ಕೆ’ ಎಂಬಂತೆ ಮುಂದೆ ಹೋಯಿತು. ಅಂಬೇಡ್ಕರರಿಗೆ ನ್ಯಾಯ ಧಕ್ಕಲಿಲ್ಲ. ಆದರೆ ಸತ್ಯ? ಅಂದರೆ ಅಂಬೇಡ್ಕರರನ್ನು ಈ ದೇಶದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ತಂತ್ರಗೈದು ಸೋಲಿಸಿದ ಸತ್ಯ? ಅವರೇ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ರೂಪದಲ್ಲಿ ಸದ್ಯ ನಮ್ಮ ಮುಂದೆ ಇದೆ. ಖಂಡಿತ, ಹೆಂಡ, ಬಾಡು, ದುಡ್ಡಿಗೆ ಚುನಾವಣೆ ಗೆಲ್ಲುತ್ತಿರುವ ಈ ಕಾಲದಲ್ಲಿ, ಹಾಗೆಯೇ ವಿವಿಧ ಜಾತಿಗಳನ್ನು ಎತ್ತಿಕಟ್ಟಿ, ಅಭ್ಯರ್ಥಿಗಳ ಮೂಲಕ ನಾನಾ ಅಪಪ್ರಚಾರ ನಡೆಸುವ ಈ ಕಾಲದಲ್ಲಿ ಅಂಬೇಡ್ಕರರ ಅಂದಿನ ಸೋಲು ಕೂಡ ಅಂತಹ ‘ಕಾಲದ’ ಕಹಿ ವಾಸ್ತವವಾಗುತ್ತದೆ. ಯಾಕೆಂದರೆ ‘ವಿಕಿಪಿಡಿಯಾ ಅಂತರ್ಜಾಲ’ ತಾಣದಲ್ಲಿ ದಾಖಲಾಗಿರುವಂತೆ 1952ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯ ಅತಿ ಪ್ರಮುಖ ಸೋಲು ಡಾ.ಅಂಬೇಡ್ಕರರದ್ದು! ಇಲ್ಲಿ ಪ್ರತ್ಯೇಕ ಮತದಾನ ಪದ್ಧತಿಯ ಅನಿವಾರ್ಯತೆಯನ್ನು ಕೂಡ ದಾಖಲಿಸಬೇಕಾಗುತ್ತದೆ. 1932ರಲ್ಲಿ ಅಂಬೇಡ್ಕರರು ಒತ್ತಾಯಿಸಿದ ಈ ಮತದಾನ ಪದ್ಧತಿ ಜಾರಿಯಾಗಿದಿದ್ದರೆ 1952ರಲ್ಲಿ ಅವರು ಖಂಡಿತ ಸೋಲುತ್ತಿರಲಿಲ್ಲ. ಜಿ.ವಿ.ದೇಶ್‍ಮುಖ್‍ರಂಥ ಹಿಂದೂ ಕೋಮುವಾದಿ ಅದೆಷ್ಟೇ ಕೋಮು ಪ್ರಚೋದನೆ ನಡೆಸಿದ್ದರೂ ‘ಪ್ರತ್ಯೇಕ ಮತದಾನ’ದ ಪರಿಶಿಷ್ಟರೇ ಪರಿಶಿಷ್ಟರಿಗೆ ಮಾತ್ರ ಮತ ಹಾಕುವ ಆ ಪದ್ಧತಿಯಲ್ಲಿ ಬಾಬಾಸಾಹೇಬರು ಸ್ಪಷ್ಟವಾಗಿ ಆಯ್ಕೆಯಾಗಿರುತ್ತಿದ್ದರು. ಆದರೆ ಅಂಬೇಡ್ಕರರ ಆ ಮಹತ್ವದ ಬೇಡಿಕೆಯನ್ನು ಮಹಾತ್ಮ ಗಾಂಧಿ ‘ಅರ್ಥಮಾಡಿಕೊಂಡು’ ಜಾರಿಯಾಗದಂತೆ ತಡೆದರು. ಆ ಮೂಲಕ ಅಂಬೇಡ್ಕರರÀ ಸೋಲಿಗೆ 1932ರಲ್ಲೇ ಗಾಂಧಿ ಮುನ್ನುಡಿ ಬರೆದಿದ್ದರು. ಒಟ್ಟಾರೆ ಗಾಂಧಿಯವರ ಮುನ್ನುಡಿ ಮತ್ತು ಅದಕ್ಕೆ ಪೂರಕವಾಗಿ ಡಾಂಗೆ ಮತ್ತು ದೇಶ್‍ಮುಖ್‍ರ ಇಂತಹ ಚುನಾವಣಾ ಅಕ್ರಮದ ಬೆನ್ನುಡಿ ಈ ದೇಶದ ಜನರಿಗೆ ಓಟುಹಾಕುವ ಹಕ್ಕುಗಳಿಸಿಕೊಟ್ಟ ‘ಭಾರತದ ಪ್ರಜಾಪ್ರಭುತ್ವದ ಪಿತ’ ಅಂಬೇಡ್ಕರರ ಸೋಲಿಗೆ ಕಾರಣವಾದವು ಎಂಬುದು ಪ್ರಜಾಪ್ರಭುತ್ವದ ವ್ಯಂಗ್ಯವೆನಿಸಿದರೂ ಘಟಿಸಿರುವುದಂತೂ ಸತ್ಯ.

-ರಘೋತ್ತಮ ಹೊ.ಬ

Monday, 4 May 2015

ಮನಸ್ಸು: ಬುದ್ಧನ ಬೋಧನೆಯ ಪ್ರಮುಖ ತಿರುಳು

-ರಘೋತ್ತಮ ಹೊ.ಬ

  ಒಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ ಮಾರನೇ ದಿನ ತನ್ನ ನಗರಕ್ಕೆ ಬರುವಂತೆ, ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ, ತಮ್ಮ ಬೋಧನೆ ಮತ್ತು ವ್ಯಕ್ತಿತ್ವದ ಶ್ರೇಷ್ಠತೆಯನ್ನು ತನ್ನ ಜನರ ಮುಂದೆ ಪ್ರದರ್ಶಿಸುವಂತೆ ಆತ ಬುದ್ಧರನ್ನು ಆಹ್ವಾನಿಸಿದ. ಹಾಗೆಯೇ ಆತನ ಆಹ್ವಾನಕ್ಕೆ ಸಮ್ಮತಿಸಿದ ಬುದ್ಧರು ಮಾರನೆಯ ದಿನ ತನ್ನ ಉಪಾಸಕರೊಡನೆ ಪ್ರಸೇನಜಿತನ ನಗರವನ್ನು ಪ್ರವೇಶಿಸಿದರು. ನಗರದ ನಾಲ್ಕು ಬೀದಿಗಳ ಮೂಲಕ ನಡೆದು ಅವರು ತಮಗೆ ನಿಗಧಿಪಡಿಸಿದ ಸ್ಥಳದಲ್ಲಿ ಕುಳಿತುಕೊಂಡರು ಮತ್ತು ವಿನಯಪೂರ್ವಕವಾಗಿ ಪ್ರಸೇನಜಿತ ನೀಡಿದ ಆತಿಥ್ಯ ಸ್ವೀಕರಿಸಿ ಬುದ್ಧರು ನಗರದ ನಾಲ್ಕು ಹೆದ್ದಾರಿಗಳು ಕೂಡುವ ಸ್ಥಳದಲ್ಲಿ ವಿಶಾಲ ಸಭಿಕರ ಮುಂದೆ ತಮ್ಮ ಬೋಧನೆ ಪ್ರಾರಂಭಿಸಿದರು.
   ಬುದ್ದರು ಹೀಗೆ ಬೋಧನೆ ನಡೆಸುತ್ತಿರಬೇಕಾದರೆ ಅಲ್ಲಿ ಇಬ್ಬರು ಶ್ರೀಮಂತರು ಉಪಸ್ಥಿತರಿದ್ದರು. ಅವರಲ್ಲಿ ಮೊದಲನೆಯವನು ಹೇಳಿದ “ಎಂತಹ ಶ್ರೇಷ್ಠ ಜ್ಞಾನ, ಅದರ ಅನ್ವಯದ ವ್ಯಾಪಕತೆ, ನಮ್ಮ ಅಂತರಂಗ ಪರಿಶೋಧಿಸುವ ಅದರ ಗುಣ ಇಂತಹದ್ದನ್ನು ಸಾರ್ವಜನಿಕವಾಗಿ ಬೋಧಿಸಲಾಗುತ್ತದೆಯೆಂದರೆ, ನಿಜಕ್ಕೂ ಇದು ರಾಜನ ಶ್ರೇಷ್ಠ ನಡವಳಿಕೆ”.
   ಇನ್ನು ಇದಕ್ಕೆ ವಿರುದ್ಧವಾಗಿ ಎರಡನೆಯ ಶ್ರೀಮಂತ ಹೇಳಿದ್ದು “ಇಂತಹ ಮನುಷ್ಯನನ್ನು (ಬುದ್ಧನನ್ನು) ಕರೆತಂದು ಬೋಧನೆ ನೀಡಿಸುತ್ತಿರುವ ರಾಜನ ಈ ನಡೆ ಎಂಥ ಅವಿವೇಕದ್ದು? ಹಾಗೆಯೇ ಆ ಬುದ್ಧನೂ ಅಷ್ಟೆ ಹಸುವಿನ ಹಿಂದೆ ಕರು ಅಡ್ಡಾಡುವಂತೆ, ಕುರಿಯಂತೆ ಅರಚುತ್ತಾ ರಾಜನ ಹಿಂದೆ ಹೋಗುತ್ತಿದ್ದಾನೆ”.
ಹೀಗೆ ಹೇಳುತ್ತಾ ಆ ಶ್ರೀಮಂತರಿಬ್ಬರು ಪರಸ್ಪರ ವಿದಾಯ ಹೇಳಿ ತಾವು ಉಳಿದುಕೊಂಡಿದ್ದ ವಸತಿಗೃಹಕ್ಕೆ ತೆರಳಿದರು. ಅದರಲ್ಲಿ ಮೊದಲನೆಯ ಶ್ರೀಮಂತ ಸ್ವಲ್ಪ ಮದ್ಯಪಾನ ಮಾಡಿ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡು ತನ್ನ ಸೇವಕರೊಡನೆ ವಸತಿಗೃಹದ ತನ್ನ ಕೋಣೆಯಲ್ಲಿ ಉಳಿದುಕೊಂಡ. ಆದರೆ ಅದಕ್ಕೆ ತದ್ವಿರುದ್ಧವಾಗಿ ಎರಡನೆಯ ಶ್ರೀಮಂತ ಒಳಗಿನ ಕೆಟ್ಟತನದಿಂದ ಪ್ರೇರೇಪಿಸಲ್ಪಟ್ಟು ಮತಿಮೀರಿ ಮದ್ಯಪಾನ ಮಾಡಿದ. ಹೇಗೆಂದರೆ ಆತನಿಗೇ ಪರಿವೇ ಇಲ್ಲದೆ ತನ್ನ ವಸತಿಗೃಹದ ಮುಂಭಾಗದ ರಸ್ತೆಯಲ್ಲೇ ಆತ ಮಲಗಿದ ಮತ್ತು  ಬೆಳಕುಹರಿಯುತ್ತಲೇ ಅವನದೇ ಸೇವಕರು ರಸ್ತೆಯಲ್ಲಿ ಮಲಗಿರುವುದು ಯಾರು ಎಂಬುದನ್ನು ಗುರುತಿಸದೇ ಕುದುರೆ ಗಾಡಿಯನ್ನು ಆತನ ಮೇಲೆ ಹರಿಸಿದರು. ಪರಿಣಾಮ ಆ ಶ್ರೀಮಂತ ಅಸುನೀಗಿದ.
ಆದರೆ ಮೊದಲನೆಯ ಶ್ರೀಮಂತ? ಆತ ದೂರದ ರಾಜ್ಯವೊಂದಕ್ಕೆ ತೆರಳುತ್ತಲೇ ಆತನ ಮುಂದೆ ಕುದುರೆಯೊಂದು ಬಂದು ಮೊಣಕಾಲೂರಿತು. ಆಶ್ಚರ್ಯವೆಂಬಂತೆ ಶ್ರೀಮಂತ ಆ ಕುದುರೆಯನ್ನೇರುತ್ತಲೇ ಅದು ಆತನನ್ನು ಆ ರಾಜ್ಯದ ಆಸ್ಥಾನಕ್ಕೆ ಹೊಯ್ದಿತ್ತು ಮತ್ತು ರಾಜಕುದುರೆ ಆರಿಸಿತರುವ ವ್ಯಕ್ತಿಗಾಗಿ ಕಾಯುತ್ತಿದ್ದ ಅಲ್ಲಿಯ ಜನರು ಕುದುರೆ ಹೀಗೆ ಶ್ರೀಮಂತನನ್ನು ಆರಿಸಿತರುತ್ತಿದ್ದಂತೆ ಆತನನ್ನು ಸಿಂಹಾಸನಕ್ಕೇರಿಸಿದರು. ಪರಿಣಾಮ ಆ ಶ್ರೀಮಂತ ಆ ರಾಜ್ಯದ ರಾಜನಾದ.
   ಹೀಗೆ ಇಂತಹ ವಿಚಿತ್ರ ಘಟನೆಗಳು ನಡೆದ ಕೆಲ ದಿನಗಳ ತರುವಾಯ ರಾಜನಾದ ಆ ಶ್ರೀಮಂತ ಒಮ್ಮೆ ಸ್ವತಃ ಬುದ್ಧನನ್ನು ತನ್ನ ರಾಜ್ಯಕ್ಕೆ ಉಪದೇಶನೀಡುವಂತೆ ಆಹ್ವಾನಿಸಿದ. ರಾಜನಾಗಿ ನೇಮಕಗೊಂಡ ಆ ಶ್ರೀಮಂತನ ಆಹ್ವಾನಕ್ಕೆ ಮನ್ನಿಸಿದ ಬುದ್ಧರು ಆತನ ರಾಜ್ಯಕ್ಕೆ ಆಗಮಿಸಿದರು ಮತ್ತು ಆತನ ಆತಿಥ್ಯ ಸ್ವೀಕರಿಸಿ ಆ ಶ್ರೀಮಂತನ ಎದÀುರೇ “ಹೇಗೆ ಕೆಟ್ಟ ಮನಸ್ಸನ್ನು ಹೊಂದಿದ್ದ ಒಬ್ಬ ಶ್ರೀಮಂತ ಸಾವು ಕಂಡ, ಒಳ್ಳೆಯ ಮನಸ್ಸು ಹೊಂದಿದ್ದ ಮತ್ತೊಬ್ಬ ಹೇಗೆ ಉನ್ನತ ಸ್ಥಾನಕ್ಕೇರಿದ” ಎಂಬುದನ್ನು ವಿವರಿಸುತ್ತಾ “ಮನಸ್ಸೇ ಎಲ್ಲದಕ್ಕೂ ಮೂಲ. ಮನಸ್ಸೇ ಗುರು, ಮನಸ್ಸೇ ಕಾರಣ. ಮನಸ್ಸಿನ ಮಧ್ಯೆ ಕೆಟ್ಟ ಆಲೋಚನೆ ಇದ್ದರೆ ಆಗ ಮೂಡಿ ಬರುವ ಪದಗಳು ಕೆಟ್ಟದ್ದಾಗಿರುತ್ತವೆ, ಕ್ರಿಯೆಗಳೂ ಕೆಟ್ಟದ್ದಾಗಿರುತ್ತವೆ ಮತ್ತು ಅಂತಹ ಪಾಪದ ಫಲವಾಗಿ ಮೂಡಿಬರುವ ದುಃಖ ಆ ಮನುಷ್ಯನನ್ನು ಹೇಗೆ ರಥದ ಚಕ್ರಗಳು ಆತನನ್ನು ಹಿಂಬಾಲಿಸುತ್ತವೋ ಹಾಗೆ ಹಿಂಬಾಲಿಸುತ್ತವೆ” ಎನ್ನುತ್ತಾ... “ಆದ್ದರಿಂದ ಮನಸ್ಸೇ ಎಲ್ಲದಕ್ಕೂ ಮೂಲ. ಇಂತಹದ್ದನ್ನು ಮಾಡು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಇಂತಹದ್ದನ್ನು ಯೋಚಿಸು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮೂಡಿ ಬರುವ ಪದಗಳು, ಮಾಡುವ ಕ್ರಿಯೆ ಎಲ್ಲವೂ ಒಳ್ಳೆಯದ್ದಾಗಿರುತ್ತವೆ ಮತ್ತು ಅಂತಹ ಒಳ್ಳೆಯ ನಡವಳಿಕೆಯ ಫಲವಾಗಿ ಮೂಡಿಬರುವ ಸಂತೋಷ ಆ ಮನುಷ್ಯನನ್ನು ಹೇಗೆ ವಸ್ತುವೊಂದನ್ನು ಆತನ ನೆರಳು ಹಿಂಬಾಲಿಸುತ್ತದೆಯೋ ಹಾಗೆ ಹಿಂಬಾಲಿಸುತ್ತದೆ”. ಬುದ್ಧ ಹೀಗೆ ಹೇಳುತ್ತಲೇ ರಾಜನ ಸ್ಥಾನಕ್ಕೆ ಏರಿದ ಆ ಶ್ರೀಮಂತ, ಆತನ ಮಂತ್ರಿಗಳು, ಆತನ ರಾಣಿ ಎಲ್ಲರೂ ಬುದ್ಧನ ಅನುಯಾಯಿಗಳಾಗುತ್ತಾರೆ. (ಆಧಾರ: ‘ಬುದ್ಧ ಅಂಡ್ ಹಿಸ್ ಧಮ್ಮ’, ಲೇಖಕರು: ಡಾ.ಅಂಬೇಡ್ಕರ್, ಪು.282)
  ಒಟ್ಟಾರೆ ಬುದ್ಧನ ಪ್ರಕಾರ ಜಗತ್ತಿನ್ನೆಲ್ಲ ದುಃಖಗಳಿಗೆ, ನೋವುಗಳಿಗೆ ಕಾರಣ ಮನುಷ್ಯನ ಮನಸ್ಸು. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಮೂಡಿಬಂದರೆ ಸಂತಸ ತಾನಾಗೇ ನಮ್ಮತ್ತ ಹರಿದುಬರುತ್ತದೆ. ಕೆಟ್ಟ ಆಲೋಚನೆ ಮೂಡಿಬಂದರೆ ದುಃಖ ತಾನಾಗೇ ಅಂತಹವರನ್ನು ಹಿಂಬಾಲಿಸುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರಸ್ತಾಪಿತವಾಗಿರುವ ಆ ಶ್ರೀಮಂತರಿಬ್ಬರ ದೃಷ್ಟಾಂತದಲ್ಲಿ ಬುದ್ಧನ ಬೋಧನೆಯ ಆ ಪ್ರಮುಖ ತಿರುಳು ನಮಗೆ ಸ್ಪಷ್ಟವಾಗುತ್ತದೆ, ಇಡೀ ಜಗತ್ತಿಗೇ ಸುಸ್ಪಷ್ಟವಾಗಿ ತಿಳಿಯುತ್ತದೆ.