ಚುನಾವಣಾ ಅಕ್ರಮದ ಮೂಲಕ ಸೋಲಿಸಲ್ಪಟ್ಟ ‘ಪ್ರಜಾಪ್ರಭುತ್ವದ ಪಿತ’
1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ
ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು
ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ ಉತ್ತರ
ಕ್ಷೇತ್ರ, ಅಂದಿನ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ದ್ವಿಸದಸ್ಯ ಕ್ಷೇತ್ರವಾಗಿತ್ತು.
ಅಂದರೆ ಆ ಕ್ಷೇತ್ರದಿಂದ ಓರ್ವ ಸಾಮಾನ್ಯ ವರ್ಗದ ಸದಸ್ಯ ಮತÀ್ತು ಓರ್ವ ಪರಿಶಿಷ್ಟಜಾತಿಯ
ಸದಸ್ಯ ಹೀಗೆ ಇಬ್ಬರೂ ಆಯ್ಕೆಯಾಗಬೇಕಿತ್ತು. ಈ ಪ್ರಕಾರ ಅಲ್ಲಿ ಚುನಾವಣೆ ಘೋಷಣೆಯಾಗಿ
11ಜನ ನಾಮಪತ್ರ ಸಲ್ಲಿಸಿ ಮೂವರು ನಾಮಪತ್ರ ವಾಪಸ್ ಪಡೆದು ಕಣದಲ್ಲಿ 8ಜನ ಅಭ್ಯರ್ಥಿಗಳು
ಉಳಿದರು. ಅಂದಹಾಗೆ ಆ 8ಜನ ಅಭ್ಯರ್ಥಿಗಳಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳೂ ಇದ್ದರು
ಮತ್ತು ಸಾಮಾನ್ಯ ಅಭ್ಯರ್ಥಿಗಳೂ ಇದ್ದರು ಮತ್ತು ಯಾಕೆ ಹೀಗೆ ಇಬ್ಬರನ್ನೂ ಒಟ್ಟಿಗೆ
ಮಾಡಲಾಗಿತ್ತೆಂದರೆ ಪರಿಶಿಷ್ಟರು, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಲು ಅವರೂ
ಅರ್ಹರಾದುದರಿಂದ ಸಾಮಾನ್ಯ ಕ್ಷೇತ್ರ ಮತ್ತು ಪರಿಶಿಷ್ಟರ ಕ್ಷೇತ್ರ ಹೀಗೆ ಎರಡನ್ನೂ
ಒಟ್ಟಿಗೆ ಮಿಶ್ರ ಮಾಡಲಾಗಿತ್ತು. ಅಂದಹಾಗೆ ಈ ಮಿಶ್ರ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ
ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಯೇ ಪಡೆದಿದ್ದರೆ ಸಾಮಾನ್ಯ ಅಭ್ಯರ್ಥಿಯಾಗಿ
ಪರಿಶಿಷ್ಟಜಾತಿಯ ಅಭ್ಯರ್ಥಿಯೇ ಆಯ್ಕೆಯಾಗಬಹುದಿತ್ತು ಮತ್ತು ಯಥಾಪ್ರಕಾರ ಮೀಸಲು
ಕ್ಷೇತ್ರದಿಂದಲೂ ಮತ್ತೋರ್ವ ಪರಿಶಿಷ್ಟ ಆಯ್ಕೆಯಾಗುತ್ತಿದ್ದ. ಅಕಸ್ಮಾತ್ ಮೊದಲ
ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿಯೇ ಇದ್ದರೆ ಸಹಜವಾಗಿ ಆತ ಸಾಮಾನ್ಯ ಕ್ಷೇತ್ರದ
ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದ ಮತ್ತು ಉಳಿದ ಪರಿಶಿಷ್ಟಜಾತಿಯ ಸ್ಥಾನಕ್ಕೆ
ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು
ಆಯ್ಕೆಯಾಗುತ್ತಿದ್ದರು. ಒಟ್ಟಾರೆ ದ್ವಿಸದಸ್ಯ ಸ್ಥಾನದ ಆಯ್ಕೆಯ ಈ ಪ್ರಕ್ರಿಯೆ
ಗೊಂದಲಮಯವಾಗೇನು ಇರಲಿಲ್ಲ.
ದ್ವಿಸದಸ್ಯ ಈ ಕ್ಷೇತ್ರದಲ್ಲಿ ಮತದಾನ
ಪ್ರಕ್ರಿಯೆ ಹೇಗಿತ್ತೆಂದರೆ ಕಣದಲ್ಲಿ ಅಭ್ಯರ್ಥಿಗಳು 8 ಮಂದಿ ಇದ್ದುದರಿಂದ ಪ್ರತೀ ಮತದಾನ
ಕೇಂದ್ರದಲ್ಲಿಯೂ ಪ್ರತೀ ಅಭ್ಯರ್ಥಿಗೆ ಒಂದರಂತೆ 8 ಮತ ಪಟ್ಟಿಗೆಗಳನ್ನು(ಬೂತ್‍ಗಳನ್ನು)
ಇಡಲಾಗಿತ್ತು. ಮತದಾರನಿಗೆ ಸಾಮಾನ್ಯ ಕ್ಷೇತ್ರಕ್ಕೊಂದು ಮತ್ತು ಮೀಸಲು ಕ್ಷೇತ್ರಕ್ಕೊಂದು
ಹೀಗೆ ಎರಡು ಬೇರೆ ಬೇರೆ ಬಣ್ಣದ ಮತ ಪತ್ರಗಳನ್ನು ನೀಡಲಾಗಿತ್ತು. ಸಾಮಾನ್ಯ ಕ್ಷೇತ್ರದ
ಮತಪತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲಾ ಎಂಟು ಅಭ್ಯರ್ಥಿಗಳ
ಹೆಸರು ಮತ್ತು ಚಿಹ್ನೆಗಳಿದ್ದವು. ಪರಿಶಿಷ್ಟರ ಮೀಸಲಿನ ಮತಪತ್ರದಲ್ಲಿ ಕೇವಲ ಪರಿಶಿಷ್ಟ
ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮಾತ್ರ ಇದ್ದವು. ಮತದಾರ ಆ ಎರಡೂ ಮತಪತ್ರಗಳನ್ನು
ಪಡೆದು ಎರಡರಲ್ಲೂ ತನಗೆ ಇಷ್ಟವಾದ ಅಭ್ಯರ್ಥಿಗಳ ಚಿಹ್ನೆಗಳಿಗೆ ಮುದ್ರೆಯೊತ್ತಿ ಸಹಿ
ಮಾಡಿ ಸಂಬಂಧಿಸಿದ ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಮಾತ್ರ ಹಾಕಬೇಕಿತ್ತು. ಈ
ಹಿನ್ನೆಲೆಯಲ್ಲಿ ಮತದಾರನೋರ್ವ ಅಭ್ಯರ್ಥಿಯೊಬ್ಬರಿಗೆ ತಾನು ನೀಡಿದ ಮತವನ್ನು, ಸಂಬಂಧಿತ
ಮತಪತ್ರವನ್ನು ಅದೇ ಅಭ್ಯರ್ಥಿಯ ಮತಪೆಟ್ಟಿಗೆಯಲ್ಲಿ ಹಾಕದೆ ಬೇರೆ ಅಭ್ಯರ್ಥಿಯ
ಮತಪೆಟ್ಟಿಗೆಗೆ ಹಾಕಿದರೆ ಅದು ಕುಲಗೆಟ್ಟ ಮತವಾಗುತ್ತಿತ್ತು. ಗಮನಾರ್ಹವೆಂದರೆ ಮತದಾರ
ತನಗೆ ನೀಡಲಾದ ಎರಡೂ ಮತಪತ್ರಗಳನ್ನು ತನ್ನಿಷ್ಟದ ಒಂದೇ ಅಭ್ಯರ್ಥಿಯ ಮತಪೆಟ್ಟಿಗೆಗೆ
ಹಾಕಿದರೂ ಅದರಲ್ಲಿ ಒಂದು ಮತ ಕುಲಗೆಡುತ್ತಿತ್ತು ಈ ನಿಟ್ಟಿನಲ್ಲಿ ಇದನ್ನು ‘ಹಾಗೆ
ಮಾಡುವುದು ಅಕ್ರಮ’ ಎಂದು ಅಂದಿನ ಜನಪ್ರತಿನಿಧಿ ಕಾಯಿದೆ ಸ್ಪಷ್ಟವಾಗೇ ಘೋಷಿಸಿತ್ತು.
ಇದಲ್ಲದೆ ಮತದಾರ ತನಗೆ ಕೇವಲ ಒಂದು ಓಟು ಹಾಕುವ ಮಾತ್ರ ಇಚ್ಚೆ ಇದೆ, ಇನ್ನೊಂದು ಓಟು
ಹಾಕುವ ಇಚ್ಚೆ ಇಲ್ಲ ಎಂದರೆ ಆತ ತನ್ನಿಷ್ಟದ ಆ ಒಂದು ಓಟನ್ನು ಮಾತ್ರ ಹಾಕಿ ಉಳಿದ ಒಂದು
ಮತಪತ್ರವನ್ನು ವಾಪಸ್ ಮತಗಟ್ಟೆಯ ಅಧಿಕಾರಿಗೆ ನೀಡುವ ಅವಕಾಶವೂ ದ್ವಿಸದಸ್ಯ ಆ
ಕ್ಷೇತ್ರದಲ್ಲಿ ಇತ್ತು.
ಈ ಪ್ರಕಾರ ಅಂಬೇಡ್ಕರರು ಸ್ಪರ್ಧಿಸಿದ್ದ ಬಾಂಬೆ ನಗರ
ಉತ್ತರ ಆ ಕ್ಷೇತ್ರಕ್ಕೆ 1952 ಜನವರಿ 3 ರಂದು ಚುನಾವಣೆ ನಡೆದು ಜನವರಿ 7ರಂದು ಮತಎಣಿಕೆ
ಪ್ರಾರಂಭವಾಗಿ ಜನವರಿ 11ಕ್ಕೆ ಎಣಿಕೆ ಮುಕ್ತಾಯವಾಯಿತು. ಫಲಿತಾಂಶವನ್ನು ಕ್ರಮಸಂಖ್ಯೆ,
ಪಡೆದ ಮತಗಳು ಮತ್ತು ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಬಿದ್ದ ಬೇರೆ ಅಭ್ಯರ್ಥಿಗಳ
ಮತಗಳು ಅರ್ಥಾತ್ ಕುಲಗೆಟ್ಟ ಮತಗಳ ಪ್ರಕಾರ ಪಟ್ಟಿಮಾಡಿ ದಾಖಲಿಸುವುದಾದರೆ
ಅಭ್ಯರ್ಥಿ *ಪಡೆದ ಮತ @ ಕುಲಗೆಟ್ಟ ಮತ
1. ಡಾ.ಅಂಬೇಡ್ಕರ್ * 1,23,576 @ 2921
2. ಅಶೋಕ್ ಆರ್.ಮೆಹ್ತಾ * 1,39,741 @ 5,597
3. ಎಸ್.ಎ.ಡಾಂಗೆ * 96,755 @ 39,165
4. ಗೋಪಾಲ್ ವಿ.ದೇಶ್‍ಮುಖ್ * 40,786 @ 6,634
5. ವಿಠಲ್ ಬಿ.ಗಾಂಧಿ * 1,49,138 @ 10,881
6. ಕೇಶವ ಬಿ.ಜೋಶಿ * 15,195 @ 1,168
7. ನಾರಾಯಣ್ ಎಸ್.ಕಜ್ರೋಳ್ಕರ್ * 1,38,137 @ 6,892
8. ನೀಲಕಾಂತ್ ಬಿ.ಪಾರುಯೇಕರ್ * 12,560 @ 1,025
ಈ ಪಟ್ಟಿಯ ಪ್ರಕಾರ ಎರಡು ಸ್ಥಾನ ಇದ್ದ ಈ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರದಿಂದ
ಸಾಮಾನ್ಯ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ(1,49,138) ವಿಠಲ್ ಬಿ.ಗಾಂಧಿ
ಆಯ್ಕೆಯಾದರೆ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ನಾರಾಯಣ್ ಎಸ್.ಕಜ್ರೋಳ್ಕರ್ 1,38,137 ಮತ
ಪಡೆದು ಆಯ್ಕೆಯಾದರು. 1,23,576 ಮತ ಪಡೆದ ಅಂಬೇಡ್ಕರರು ಮೀಸಲು ಕ್ಷೇತ್ರದಲ್ಲಿ
ಕಾಂಗ್ರೆಸ್ ಅಭ್ಯರ್ಥಿ ಕಜ್ರೋಳ್ಕರ್ ವಿರುದ್ಧ 14,561 ಮತಗಳ ಅಂತರದಿಂದ ಸೋತರೆ ಸಾಮಾನ್ಯ
ಕ್ಷೇತ್ರದಲ್ಲಿ ಅಂಬೇಡ್ಕರರ ಎಸ್‍ಸಿಎಫ್(ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್) ಪಕ್ಷದ
ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ಆರ್.ಮೆಹ್ತಾ
1,39,741 ಮತ ಪಡೆದು ಅದೇ ಕಾಂಗ್ರೆಸ್‍ನ ವಿಠಲ್ ಬಿ.ಗಾಂಧಿಯವರ ಎದುರು 9,397 ಮತಗಳ
ಅಂತರದಿಂದ ಪರಾಭವಗೊಂಡಿದ್ದರು. ಅಂದಹಾಗೆ ಇಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟ ಕುಲಗೆಟ್ಟ
ಮತಗಳು? ಅಂಬೇಡ್ಕರರು ಸೋತಿದ್ದೇ ಅಥವಾ ಸೋಲಿಸಲ್ಪಟ್ಟಿದ್ದೇ ಕುಲಗೆಡಿಸಲ್ಪಟ್ಟ ಈ ಮತಗಳ
ಕಾರಣಕ್ಕಾಗಿ! ಸೋತ ನಂತರ ಸ್ವತಃ ಅಂಬೇಡ್ಕರರು ಈ ಸಂಬಂಧ 1952 ಏಪ್ರಿಲ್ 21ರಂದು
ಅಂದಿನ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಾರೆ ಮತ್ತು ತಮ್ಮ ಆ ದೂರಿನಲ್ಲಿ
ಬಾಬಾಸಾಹೇಬರು ಅತಿ ಹೆಚ್ಚು ಕುಲಗೆಟ್ಟ ಮತಗಳನ್ನು ‘ಪಡೆದ’ ಕಮ್ಯೂನಿಸ್ಟ್ ಪಕ್ಷದ ನಾಯಕ
ಶ್ರೀಪಾದ ಅಮೃತ ಡಾಂಗೆ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಾಲ್ ವಿ.ದೇಶ್‍ಮುಖ್, ಈ ಇಬ್ಬರೂ
ಅಭ್ಯರ್ಥಿಗಳು ನಡೆಸಿದ ಅಕ್ರಮಗಳನ್ನು ಹೂಡಿದ ವಾಮಮಾರ್ಗಗಳನ್ನು ಹೇಳುತ್ತಾ ಹೋಗುತ್ತಾರೆ.
(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.411).
ಅಂಬೇಡ್ಕರರ
ಆ ದೂರಿನ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದಾದರೆ, ಮೊದಲೇ ಹೇಳಿದ ಹಾಗೆ ಒಬ್ಬ ಮತದಾರ
ತನ್ನ ಎರಡೂ ಓಟುಗಳನ್ನು ಒಬ್ಬನೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕುವುದು ತಪ್ಪು, ಅದು
ಕುಲಗೆಡುತ್ತದೆ. ಆದರೆ ಆಶ್ಚರ್ಯವೆಂದರೆ ಹಾಗೆ ಮತಗಳನ್ನು ಕುಲಗೆಡಿಸಲೆಂದೇ ಮೇಲ್ಕಂಡ ಈ
ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಭರಪೂರ ಪ್ರಚಾರ ನಡೆಸಿದ್ದರು. ಹೀಗೆ ಮತಗಳನ್ನು
ಕುಲಗೆಡಿಸುವುದರಿಂದ ತಾವು ಗೆಲ್ಲಲಾಗುವುದಿಲ್ಲ ಎಂದು ಈ ಇಬ್ಬರೂ ಅಭ್ಯರ್ಥಿಗಳಿಗೂ
ಗೊತ್ತಿತ್ತು. ಆದರೆ ಅವರ ಅಂತಹ ನಡೆಯ ಒಟ್ಟಾರೆ ಉದ್ದೇಶ? ಅಂಬೇಡ್ಕರರನ್ನು
ಸೋಲಿಸುವುದಾಗಿತ್ತು!
ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 39,165
ಕುಲಗೆಟ್ಟ ಮತಗಳನ್ನು ಪಡೆದ ಕಮ್ಯೂನಿಸ್ಟ್ ನಾಯಕ ಎಸ್.ಎ.ಡಾಂಗೆ ಪ್ರಚಾರದ ಸಮಯದಲ್ಲಿ
ಹೊರಡಿಸಿದ್ದ ಒಂದು ಕರಪತ್ರದಲ್ಲಿ ಕಣದಲ್ಲಿರುವ ಪ್ರಚಂಡ ಅಭ್ಯರ್ಥಿ ತಾನಾಗಿದ್ದು
ಮತದಾರರು ‘ತಮ್ಮೆರಡು ಓಟುಗಳನ್ನು’ ನನಗೇ ನೀಡಬೇಕು ಎಂದು ಆಗ್ರಹಿಸಿದ್ದರು! ಅಲ್ಲದೆ ಅದೇ
ಡಾಂಗೆಯವರು ತಮ್ಮ ಪಕ್ಷ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಯುಗಾಂತರ’ ಎಂಬ ಮರಾಠಿ
ವಾರಪತ್ರಿಕೆಯಲ್ಲಿ ಹೊರಡಿಸಿದ್ದ ಜಾಹೀರಾತಿನಲ್ಲಿ ‘ಮತದಾರರು ತಮ್ಮ ಎರಡೂ ಓಟುಗಳನ್ನು’
ತಮ್ಮ ಒಂದೇ ಡಬ್ಬಕ್ಕೆ ಹಾಕಬೇಕು ಎಂದು ತಮ್ಮ ಗುರುತಾದ ‘ಇಂಜಿನ್’ ಚಿತ್ರ ಸಮೇತ
ಕೋರಿದ್ದರು! ಡಾಂಗೆಯವರ ಒಟ್ಟಾರೆ ಉದ್ದೇಶ ಸ್ಪಷ್ಟ ಇತ್ತು ಅಂದರೆ ಅದು ತನಗೆ
ಲಾಭವಾಗಬೇಕು ಎಂದಲ್ಲ, ಬದಲಿಗೆ ಅಂಬೇಡ್ಕರರಿಗೆ ನಷ್ಟವಾಗಬೇಕು ಎಂದು! ಈ ಸಂಬಂಧ
ಕರಪತ್ರವೊಂದರಲ್ಲಿ ಕುದ್ದು ಅಂಬೇಡ್ಕರರ ಹೆಸರನ್ನೇ ಉಲ್ಲೇಖಿಸಿದ್ದ ಸದರಿ ಡಾಂಗೆ
“ಪರಿಶಿಷ್ಟ ಜಾತಿಗೆ ಸೇರಿದ್ದ ಅಂಬೇಡ್ಕರರು ದ್ವಿಸದಸ್ಯ ಈ ಕ್ಷೇತ್ರದಲ್ಲಿ ಸಾಮಾನ್ಯ
ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೀಗೆ ಎರಡೂ ಸ್ಥಾನಗಳ ಅಭ್ಯರ್ಥಿಯಾಗುವ
ಅವಕಾಶ ಹೊಂದಿದ್ದಾರೆ. ಆದುದರಿಂದ ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು
ಪರಿಶಿಷ್ಟಜಾತಿಯ ಅಂಬೇಡ್ಕರರಿಗೆ ಓಟು ಕೊಟ್ಟರೆ ಅದು ಪರಿಶಿಷ್ಟರ ಮತ ಹಕ್ಕನ್ನು
ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಮತದಾರರು ತಮ್ಮ ಎರಡೂ ಮತಗಳನ್ನು ನನ್ನ ‘ಇಂಜಿನ್’
ಗುರುತಿಗೇ ನೀಡಿ”!
ಅಬ್ಬಾ! ಎಂತಹ ತಂತ್ರ! ಸಾಮಾನ್ಯ ಕ್ಷೇತ್ರ ಆಗಿದ್ದ ಆ
ಬಾಂಬೆ ಉತ್ತರ ಕ್ಷೇತ್ರದಿಂದ ಅಂಬೇಡ್ಕರ್ ಕೇವಲ ಪರಿಶಿಷ್ಟರ ಓಟುಗಳಿಂದ ಮಾತ್ರ
ಗೆಲ್ಲಬೇಕಂತೆ, ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಅಂಬೇಡ್ಕರರಿಗೆ ಮತ ಹಾಕಿದರೆ ಅದು
ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡಂತೆಯಂತೆ. ಆ ಕಾರಣಕ್ಕಾಗಿ ಮತದಾರ ಎರಡೂ ಓಟುಗಳನ್ನು
ಒಬ್ಬ ವ್ಯಕ್ತಿಯ ಡಬ್ಬಕ್ಕೇ ಹಾಕಿ ತನ್ನ ಮತವನ್ನು ಕುಲಗೆಡಿಸಿಕೊಳ್ಳಬೇಕಂತೆ! ಈ
ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಡಾಂಗೆಯವರು ತಮ್ಮ ಕುಯುಕ್ತಿಯ ಇಂಥ ನಡೆಯಿಂದ
ಮತದಾರರನ್ನು ಎಷ್ಟು ದಿಕ್ಕುತಪ್ಪಿಸುವುದು ಸಾಧ್ಯವೋ ಅಷ್ಟೂ ದಿಕ್ಕುತಪ್ಪಿಸಿದರು
ತನ್ಮೂಲಕ ಅಂಬೇಡ್ಕರರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು!
ಹೇಗೆಂದರೆ ಕುಲಗೆಟ್ಟ ಒಟ್ಟು ಮತಗಳು 74,333. ಅದರಲ್ಲಿ ಡಾಂಗೆಯವರ ಇಂತಹ ಅಪಪ್ರಚಾರದಿಂದ
ಬರೋಬ್ಬರಿ ಅವರೊಬ್ಬರಿಗೇ ಬಿದ್ದ ಕುಲಗೆಟ್ಟ ಮತಗಳೇ 39,165! ಅಂದಹಾಗೆ ಅಂಬೇಡ್ಕರ್
ಸೋತದ್ದು? 14,561 ಮತಗಳಿಂದ! ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ಸೋಲಿನ ಅಂತರಕ್ಕಿಂತ ಮೂರು
ಪಟ್ಟು ಹೆಚ್ಚು ಮತ ಕುಲಗೆಡಿಸುವಲ್ಲಿ ಡಾಂಗೆ ಯಶಸ್ವಿಯಾಗಿದ್ದರು. ಡಾಂಗೆಯವರ ಇಂತಹ ಹೀನ
ತಂತ್ರವನ್ನು ತಮ್ಮ ಆ ಚುನಾವಣಾ ದೂರಿನಲ್ಲಿ ಅಂಬೇಡ್ಕರರು ಸಾಕ್ಷಿ ಸಮೇತ, ಅಂದರೆ
ಕರಪತ್ರ ಪ್ರತಿ, ಪೇಪರ್ ಕಟಿಂಗ್‍ಗಳನ್ನು ಲಗತ್ತಿಸುವುದರ ಜೊತೆ ಕ್ರಮ ಕೈಗೊಳ್ಳಬೇಕೆಂದು
ಆಯೋಗಕ್ಕೆ ಅರುಹಿದ್ದರು.
ಮುಂದುವರಿದು ಅಂಬೇಡ್ಕರರು ಮತ್ತೋರ್ವ
ಅಭ್ಯರ್ಥಿಯ ಅಪಪ್ರಚಾರವನ್ನು ಸಾಕ್ಷಿ ಸಮೇತ ದಾಖಲಿಸಿದ್ದರು. ಅದು ಪಕ್ಷೇತರ ಅಭ್ಯರ್ಥಿ
ಹಿಂದುತ್ವವಾದಿ ಗೋಪಾಲ್ ವಿ.ದೇಶ್‍ಮುಖ್‍ರವರಿಗೆ ಸಂಬಂಧಿಸಿದ್ದು. ಸದರಿ ದೇಶ್‍ಮುಖ್
‘ವಿವಿಧ ವೃತ್ತಾ’ ಎಂಬ ಪತ್ರಿಕೆಯಲ್ಲಿ ಡಿಸೆಂಬರ್ 31, 1951ರಲ್ಲಿ ಹೊರಡಿಸಿದ್ದ
ಪತ್ರಿಕಾ ಹೇಳಿಕೆಯಲ್ಲಿ “ಬಾಂಬೆ ಉತ್ತರ ಕ್ಷೇತ್ರವು ದ್ವಿಸದಸ್ಯ ಸಾಮಾನ್ಯ
ಕ್ಷೇತ್ರವಾಗಿದ್ದು ಇಲ್ಲಿ ಎರಡೂ ಸ್ಥಾನಗಳನ್ನು ಪರಿಶಿಷ್ಟರೇ ಗೆಲ್ಲುವಂತಹ ತಂತ್ರವನ್ನು
ಅಂಬೇಡ್ಕರರು ರೂಪಿಸಿದ್ದಾರೆ. ಆ ಕಾರಣದಿಂದ ಮತದಾರರು ಅಂಬೇಡ್ಕರರ ಇಂತಹ ತಂತ್ರವನ್ನು
ಸೋಲಿಸಲು ತಮ್ಮ ಎರಡೂ ಓಟುಗಳನ್ನು ಅಂಬೇಡ್ಕರರನ್ನು ಹೊರತು ಪಡಿಸಿ ಇತರರಿಗೆ ನೀಡಿ. ಆ
ಮೂಲಕ ಪರಿಶಿಷ್ಟೇತರರೂ ಆಯ್ಕೆಯಾಗುವಂತೆ ಮಾಡಿ” ಎಂದಿದ್ದರು. ಮುಂದುವರಿದು ಅದೇ
ದೇಶ್‍ಮುಖ್ ಅದೇ ‘ವಿವಿಧ ವೃತ್ತಾ’ ಪತ್ರಿಕೆಯಲ್ಲಿ “ಮತದಾರನೋರ್ವ ಹಿಂದೂ ಅಭ್ಯರ್ಥಿಯ
ಪೆಟ್ಟಿಗೆಯಲ್ಲಿ ಮಾತ್ರ ತನ್ನ ಎರಡೂ ಮತಗಳನ್ನು ಹಾಕಬೇಕು ಮತ್ತು ಅದು ಯಾವುದೇ
ರೀತಿಯಲ್ಲೂ ಕಾನೂನಿಗೆ ವಿರುದ್ಧವಲ್ಲ” ಎಂಬ ಹೇಳಿಕೆ ನೀಡಿ ಕೋಮುಭಾವವನ್ನು ಬಹಿರಂಗವಾಗೇ
ಬಡಿದೆಬ್ಬಿಸಿದ್ದರು! (ಇಲ್ಲಿ ದೇಶ್‍ಮುಖ್‍ರ ‘ಹಿಂದೂ ಅಭ್ಯರ್ಥಿಗೆ ಮಾತ್ರ’ ಎಂಬ
ಪದವನ್ನು ಗಮನಿಸಬೇಕು! ಅಂದರೆ ಅಂಬೇಡ್ಕರರು ಒಟ್ಟಾರೆ ಪರಿಶಿಷ್ಟರು ಹಿಂದೂಗಳಲ್ಲ ಎಂಬುದು
ಆ ಕಾಲದಲ್ಲೇ 1952ರಲ್ಲೇ ಸ್ಪಷ್ಟ.) ಈ ಸಂಬಂಧ ದೇಶ್‍ಮುಖ್‍ರ ಇಂತಹ ಕೋಮುಭಾವದ ಪತ್ರಿಕಾ
ಹೇಳಿಕೆಯ ವರದಿಯ ತುಣುಕನ್ನೂ ಸಹ ಅಂಬೇಡ್ಕರರು ತಮ್ಮ ಆ ಚುನಾವಣಾ ತಕರಾರು ಅರ್ಜಿಯ ಜೊತೆ
ಲಗತ್ತಿಸಿದ್ದರು.
ಒಟ್ಟಾರೆ ಹೇಳುವುದಾದರೆ ಕಮ್ಯೂನಿಸ್ಟ್ ನಾಯಕ ಶ್ರೀಪಾದ
ಅಮೃತ ಡಾಂಗೆ, ಹಿಂದುತ್ವವಾದಿ ನಾಯಕ ಗೋಪಾಲ್ .ವಿ.ದೇಶ್‍ಮುಖ್ ಇಬ್ಬರೂ “ವಯಕ್ತಿಕವಾಗಿ
ಅವರಿಬ್ಬರಿಗು ಯಾವುದೇ ಲಾಭವಾಗದಿದ್ದರೂ ಅಂಬೇಡ್ಕರರ ಗೆಲುವಿನ ಸಂಭವವನ್ನು ತಪ್ಪಿಸುವ
ಏಕೈಕ ಉದ್ದೇಶ ಇಟ್ಟುಕೊಂಡು ಎರಡೂ ಓಟುಗಳನ್ನು ತಮಗೆ ಹಾಕಿ” ಎಂಬ ಚುನಾವಣಾ ಹೀನ ತಂತ್ರ
ಹೆಣೆದು, ಮತದಾರರನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾದರು. ಇದನ್ನು ಉಲ್ಲೇಖಿಸುತ್ತಾ
ಅಂಬೇಡ್ಕರರು ತಮ್ಮ ಆ ಚುನಾವಣಾ ದೂರಿನಲ್ಲಿ ಸದರಿ ಬಾಂಬೆ ಸಿಟಿ ಉತ್ತರ ಲೋಕಸಭಾ
ಕ್ಷೇತ್ರದ ಚುನಾವಣೆಯನ್ನು ಈ ಇಬ್ಬರು ಅಭ್ಯರ್ಥಿಗಳ ಇಂತಹ ಚುನಾವಣಾ ಅಕ್ರಮದ
ಹಿನ್ನೆಲೆಯಲ್ಲಿ ಅನೂರ್ಜಿತಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ಕೋರಿದರು. ಅಂತೆಯೇ
ಅಂಬೇಡ್ಕರರು ಸಲ್ಲಿಸಿದ ಆ ಚುನಾವಣಾ ದೂರಿನ ವಿಚಾರಣೆ ಶ್ರೀ ಎನ್.ಜೆ.ವಾಡಿಯಾ, ಶ್ರೀ
ಎಂ.ಕೆ.ಲಲ್ಕಾಕ, ಶ್ರೀ ಜಿ.ಪಿ.ಮುರುಡೇಶ್ವರ್ ರವರನ್ನೊಳಗೊಂಡ ಚುನಾವಣಾ
ಟ್ರಿಬ್ಯೂನಲ್‍ನಲ್ಲಿ ನಡೆಯುತ್ತದೆ ಮತ್ತು ಸ್ವತಃ ಅಂಬೇಡ್ಕರರೇ ಆ ಟ್ರಿಬ್ಯೂನಲ್ ಮುಂದೆ
ವಿಚಾರಣೆಗೆ ಹಾಜರಾಗಿ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(2)ರ ಅಡಿಯಲ್ಲಿ
ಚುನಾವಣೆಯಲ್ಲಿ ಮತದಾರರ ಮೇಲೆ ‘ಅಕ್ರಮ ಪ್ರಭಾವ’ ಬೀರಿದ ಆ ಇಬ್ಬರು ಅಭ್ಯರ್ಥಿಗಳ
ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ, ಸೆಕ್ಷನ್ 100ರ ಪ್ರಕಾರ “ಭಾರಿ ಅಕ್ರಮದ
ಆಧಾರದಲ್ಲಿ ಸದರಿ ಚುನಾವಣೆಯನ್ನು ರದ್ದುಪಡಿಸುವಂತೆ””ಪ್ರಬಲ ವಾದ ಮಂಡಿಸುತ್ತಾರೆ.
ಅಂದಹಾಗೆ ಜನಪ್ರತಿನಿಧಿ ಕಾಯ್ದೆ ಅಂದಿನ ನಿಯಮ 25(1)ರ ಪ್ರಕಾರವೇ ‘ಮತದಾರನೊಬ್ಬ ತನ್ನ
ಎರಡೂ ಮತವನ್ನೂ ಒಂದೇ ಬ್ಯಾಲಟ್ ಬಾಕ್ಸ್‍ನಲ್ಲಿ ಹಾಕುವುದು ಕಾನೂನಿಗೆ ವಿರುದ್ಧ’.
ಹೀಗಿರುವಾಗ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಕಾನೂನಿಗೆ ವಿರುದ್ಧವಾದ ಇಂತಹ ಕ್ರಿಯೆ ನಡೆಸಿ
ಎಂದು ಮತದಾರರಿಗೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಗಳ ಮೂಲಕ ಆಗ್ರಹಿಸುತ್ತಾರೆ ಎಂದರೆ
ಇದು ಚುನಾವಣಾ ಅಕ್ರಮದ ಉದ್ದೇಶಪೂರ್ವಕ ಆಚರಣೆಯಲ್ಲದೆ ಮತ್ತೇನು? ಮತ್ತು ಅದು ನ್ಯಾಯಬದ್ಧ
ಚುನಾವಣೆ ಹೇಗಾಗುತ್ತದೆ? ಮುಂದುವರಿದು ಅಂಬೇಡ್ಕರರು “ನಾನು ನನ್ನ ಸ್ಥಾನವನ್ನು 13000
ಓಟುಗಳಿಂದ ಕಳೆದುಕೊಂಡೆ. ಡಾ.ದೇಶ್‍ಮುಖ್ ಮತ್ತು ಶ್ರೀ ಡಾಂಗೆ ಇಂತಹ ನೀಚ
ತಂತ್ರಗೈಯದಿದ್ದರೆ ಕೇವಲ ಶ್ರೀ ಡಾಂಗೆಯವರು ಕುಲಗೆಡಿಸಿದ ಆ 39000 ಓಟುಗಳಲ್ಲೇ ಖಂಡಿತ
ನಾನು ಬಹುಸಂಖ್ಯೆಯ ಓಟುಗಳನ್ನು ಪಡೆಯುತ್ತಿದ್ದೆ. (ಆ ಮೂಲಕ ಆಯ್ಕೆಯಾಗುತ್ತಿದ್ದೆ). ಈ
ನಿಟ್ಟಿನಲ್ಲಿ ಮತದಾರರ ಮೇಲೆ ಹೀಗೆ ಶ್ರೀ ಡಾಂಗೆ ಮತ್ತು ಶ್ರೀ ದೇಶ್‍ಮುಖ್ ಅಕ್ರಮ
ಪ್ರಭಾವ ಬೀರಿದ್ದಕ್ಕೆ ಸಾಕ್ಷಿಯಾಗಿ ಭಾರೀ ಸಂಖ್ಯೆಯ ಕುಲಗೆಟ್ಟ ಮತಗಳು(73,333)
ನ್ಯಾಯಾಲಯದ ಮುಂದಿದೆ. ನ್ಯಾಯಾಲಯ ಈ ವ್ಯಾಪಕ ಅಕ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು.
ಇದರ ಆಧಾರದ ಮೇಲೆ ಬಾಂಬೆ ನಗರ ಉತ್ತರ ಆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ
ಭ್ರಷ್ಟ ಆಚರಣೆಗಳು ನಡೆದಿರುವುದರಿಂದ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 100ರ ಅಡಿಯಲ್ಲಿ ಆ
ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ನಿಖರ
ವಾದ ಮಂಡಿಸುತ್ತಾರೆ.
ಅಂಬೇಡ್ಕರರ ಈ ವಾದಕ್ಕೇ ಜಯ ಸಿಕ್ಕಿತೆ? ಖಂಡಿತ
ಇಲ್ಲ. ಎಲ್ಲ ಚುನಾವಣಾ ವಿಚಾರಣೆಗಳಂತೆ ಇದೂ ಕೂಡ ‘ಹಿಯರಿಂಗ್ ಮುಂದಕ್ಕೆ’ ಎಂಬಂತೆ ಮುಂದೆ
ಹೋಯಿತು. ಅಂಬೇಡ್ಕರರಿಗೆ ನ್ಯಾಯ ಧಕ್ಕಲಿಲ್ಲ. ಆದರೆ ಸತ್ಯ? ಅಂದರೆ ಅಂಬೇಡ್ಕರರನ್ನು ಈ
ದೇಶದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ತಂತ್ರಗೈದು ಸೋಲಿಸಿದ ಸತ್ಯ? ಅವರೇ ಸಲ್ಲಿಸಿರುವ
ಚುನಾವಣಾ ತಕರಾರು ಅರ್ಜಿಯ ರೂಪದಲ್ಲಿ ಸದ್ಯ ನಮ್ಮ ಮುಂದೆ ಇದೆ. ಖಂಡಿತ, ಹೆಂಡ, ಬಾಡು,
ದುಡ್ಡಿಗೆ ಚುನಾವಣೆ ಗೆಲ್ಲುತ್ತಿರುವ ಈ ಕಾಲದಲ್ಲಿ, ಹಾಗೆಯೇ ವಿವಿಧ ಜಾತಿಗಳನ್ನು
ಎತ್ತಿಕಟ್ಟಿ, ಅಭ್ಯರ್ಥಿಗಳ ಮೂಲಕ ನಾನಾ ಅಪಪ್ರಚಾರ ನಡೆಸುವ ಈ ಕಾಲದಲ್ಲಿ ಅಂಬೇಡ್ಕರರ
ಅಂದಿನ ಸೋಲು ಕೂಡ ಅಂತಹ ‘ಕಾಲದ’ ಕಹಿ ವಾಸ್ತವವಾಗುತ್ತದೆ. ಯಾಕೆಂದರೆ ‘ವಿಕಿಪಿಡಿಯಾ
ಅಂತರ್ಜಾಲ’ ತಾಣದಲ್ಲಿ ದಾಖಲಾಗಿರುವಂತೆ 1952ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯ ಅತಿ
ಪ್ರಮುಖ ಸೋಲು ಡಾ.ಅಂಬೇಡ್ಕರರದ್ದು! ಇಲ್ಲಿ ಪ್ರತ್ಯೇಕ ಮತದಾನ ಪದ್ಧತಿಯ
ಅನಿವಾರ್ಯತೆಯನ್ನು ಕೂಡ ದಾಖಲಿಸಬೇಕಾಗುತ್ತದೆ. 1932ರಲ್ಲಿ ಅಂಬೇಡ್ಕರರು ಒತ್ತಾಯಿಸಿದ ಈ
ಮತದಾನ ಪದ್ಧತಿ ಜಾರಿಯಾಗಿದಿದ್ದರೆ 1952ರಲ್ಲಿ ಅವರು ಖಂಡಿತ ಸೋಲುತ್ತಿರಲಿಲ್ಲ.
ಜಿ.ವಿ.ದೇಶ್‍ಮುಖ್‍ರಂಥ ಹಿಂದೂ ಕೋಮುವಾದಿ ಅದೆಷ್ಟೇ ಕೋಮು ಪ್ರಚೋದನೆ ನಡೆಸಿದ್ದರೂ
‘ಪ್ರತ್ಯೇಕ ಮತದಾನ’ದ ಪರಿಶಿಷ್ಟರೇ ಪರಿಶಿಷ್ಟರಿಗೆ ಮಾತ್ರ ಮತ ಹಾಕುವ ಆ ಪದ್ಧತಿಯಲ್ಲಿ
ಬಾಬಾಸಾಹೇಬರು ಸ್ಪಷ್ಟವಾಗಿ ಆಯ್ಕೆಯಾಗಿರುತ್ತಿದ್ದರು. ಆದರೆ ಅಂಬೇಡ್ಕರರ ಆ ಮಹತ್ವದ
ಬೇಡಿಕೆಯನ್ನು ಮಹಾತ್ಮ ಗಾಂಧಿ ‘ಅರ್ಥಮಾಡಿಕೊಂಡು’ ಜಾರಿಯಾಗದಂತೆ ತಡೆದರು. ಆ ಮೂಲಕ
ಅಂಬೇಡ್ಕರರÀ ಸೋಲಿಗೆ 1932ರಲ್ಲೇ ಗಾಂಧಿ ಮುನ್ನುಡಿ ಬರೆದಿದ್ದರು. ಒಟ್ಟಾರೆ ಗಾಂಧಿಯವರ
ಮುನ್ನುಡಿ ಮತ್ತು ಅದಕ್ಕೆ ಪೂರಕವಾಗಿ ಡಾಂಗೆ ಮತ್ತು ದೇಶ್‍ಮುಖ್‍ರ ಇಂತಹ ಚುನಾವಣಾ
ಅಕ್ರಮದ ಬೆನ್ನುಡಿ ಈ ದೇಶದ ಜನರಿಗೆ ಓಟುಹಾಕುವ ಹಕ್ಕುಗಳಿಸಿಕೊಟ್ಟ ‘ಭಾರತದ
ಪ್ರಜಾಪ್ರಭುತ್ವದ ಪಿತ’ ಅಂಬೇಡ್ಕರರ ಸೋಲಿಗೆ ಕಾರಣವಾದವು ಎಂಬುದು ಪ್ರಜಾಪ್ರಭುತ್ವದ
ವ್ಯಂಗ್ಯವೆನಿಸಿದರೂ ಘಟಿಸಿರುವುದಂತೂ ಸತ್ಯ.
-ರಘೋತ್ತಮ ಹೊ.ಬ