'ಗಾಂಧಿ ನಿಜಕ್ಕೂ ಮಹಾತ್ಮರೇ?' ಎಂಬ ಅಂಬೇಡ್ಕರರ ಪ್ರಶ್ನೆ, ಮತ್ತವರ ಉತ್ತರ
-ರಘೋತ್ತಮ ಹೊ.ಬ
ಗಾಂಧಿ ನಿಜಕ್ಕೂ ಮಹಾತ್ಮರೇ? ಬಾಬಾಸಾಹೇಬ್ ಅಂಬೇಡ್ಕರರು ಕೇಳಿದ ನೇರ ಪ್ರಶ್ನೆ ಇದು
ಎನ್ನಬಹುದು. ಯಾಕೆಂದರೆ ಇಂತಹ ಪ್ರಶ್ನಾ ರೂಪದ Is Gandhi a Mahathma? ಎಂಬ
ಲೇಖನವನ್ನು ಬಾಬಾಸಾಹೇಬರು 1938ರಲ್ಲಿ ‘ಚಿತ್ರಾ’ ಎಂಬ ಮರಾಠಿ ಪತ್ರಿಕೆಗೆ ಆ ಪತ್ರಿಕೆಯ ಆ
ವರ್ಷದ ದೀಪಾವಳಿ ವಿಶೇಷಾಂಕಕ್ಕೆ ಬರೆದಿದ್ದಾರೆ ಮತ್ತು ಆ ಲೇಖನದ ಒರಿಜಿನಲ್ ಇಂಗ್ಲೀಷ್
ರೂಪ ಭಾರತ ಸರ್ಕಾರ ಈಚೆಗೆ ಪ್ರಕಟಿಸಿರುವ(2014) ‘ಅಂಬೇಡ್ಕರ್ ಬರಹಗಳು(ಇಂಗ್ಲೀಷ್),
ಸಂಪುಟ 17, ಭಾಗ 2’ ರಲ್ಲಿ ಮರು ಮುದ್ರಣ ಕೂಡ ಕಂಡಿದೆ. ಸತ್ಯವನ್ನು ಹೀಗೆ ಪೀಠಿಕೆಯಲ್ಲೇ
ಸ್ಪಷ್ಟಪಡಿಸಬೇಕಾಗಿದೆ. ಕಾರಣ ಕೆಲವರು ಇದನ್ನು ಪೂರ್ವಾಗ್ರಹಪೀಡಿತ ಅಥವಾ ಸ್ವಪ್ರೇರಿತ
ಎಂದು ಭಾವಿಸಿಬಿಡುವ ಅಪಾಯವಿದೆ.
ಹಾಗಿದ್ದರೆ ಅಂಬೇಡ್ಕರ್ ಏನು
ಹೇಳುತ್ತಾರೆ? ಮೊದಲಿಗೆ ಅವರು ಪ್ರಾರಂಭಿಸುವುದು Is Gandhi a Mahathma? I am
sick of this question ಅಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ? ಈ ಪ್ರಶ್ನೆಯೇ ನನಗೆ
ವಾಕರಿಕೆ ತರಿಸುತ್ತದೆ’ ಎಂದು. ಅಂಬೇಡ್ಕರರಿಗೇಕೆ ಈ ಪ್ರಶ್ನೆ ವಾಕರಿಕೆ ತರಿಸುತ್ತದೆ?
ಅವರು ಎರಡು ಕಾರಣಗಳನ್ನು ನೀಡುತ್ತಾರೆ. ಅದರಲ್ಲಿ ಮೊದಲನೆಯದು “ಕಾರಣ ಕೇಳುವ ಗುಣ ಮತ್ತು
ಬೌದ್ಧಿಕತೆ ಬದಲಿಗೆ ಮಹಾತ್ಮರು ಕುರುಡುನಂಬಿಕೆ ಬಿತ್ತುತ್ತಿದ್ದಾರೆ”. ಹಾಗೆಯೇ
ಎರಡನೆಯದು “ವಾಸ್ತವವಾಗಿ ಮಹಾತ್ಮ ಎಂಬ ಈ ಪದಕ್ಕೆ ಜನಸಾಮಾನ್ಯರು ತಿಳಿದುಕೊಂಡಿರುವ
ಅರ್ಥವಾದರೂ ಏನು?” ಎಂಬುದು.
ನಿಜ, ಅಂಬೇಡ್ಕರರ ಈ ಪ್ರಶ್ನೆಗಳು ಮತ್ತವರ
ವಿಶ್ಲೇಷಣೆಗಳು ಕೆಲವರಿಗೆ arrogant ಎನಿಸಬಹುದು. ಆದರೆ ಅಂಬೇಡ್ಕರರು ಗಾಂಧೀಜಿಯವರ
ಸಮಕಾಲೀನರು. ಸಮಕಾಲೀನರಿಗೆ ತಮ್ಮ ಕಾಲದ ವ್ಯಕ್ತಿಗಳನ್ನು ಪ್ರಶ್ನಿಸುವ, ವರ್ತನೆಗಳನ್ನು
ಆಕ್ಷೇಪಿಸುವ ಅರ್ಹತೆ ಇದ್ದೇ ಇರುತ್ತದೆ. ಅದರಲ್ಲೂ ಜ್ಞಾನದಲ್ಲಿ, ಶೈಕ್ಷಣಿಕ
ಅರ್ಹತೆಯಲ್ಲಿ ಅಂಬೇಡ್ಕರರು ಗಾಂಧೀಜಿಯವರಿಗಿಂತ ಉನ್ನತಮಟ್ಟದಲ್ಲಿದ್ದಾಗ ಇಂತಹ ‘ಮಹಾತ್ಮ’
ಎಂಬ ಟೈಟಲ್ಲನ್ನು ಪ್ರಶ್ನಿಸುವ ಸಹಜತೆ ಮತ್ತು ಸಾಮಥ್ರ್ಯ ಅವರಿಗೆ ಖಂಡಿತ
ಬಂದೇಬರುತ್ತದೆ. ಅಂದಹಾಗೆ ಆ ಕಾಲದ ಆ ಹೊತ್ತಿನ ಅಂಬೇಡ್ಕರರ ಅಂತಹ ಅನಿಸಿಕೆ, ವಿವರಣೆ ಈಗ
ಏಕೆ? ಅದು ಆ ಕಾಲದ ಆ ಸಂದರ್ಭದ್ದು ಎಂದು ಕೆಲವರು ಆಕ್ಷೇಪವ್ಯಕ್ತ್ತಪಡಿಸಬಹುದು
ವಿಶೇಷವಾಗಿ ಗಾಂಧಿವಾದಿಗಳು. ಆದರೆ ಇತಿಹಾಸದ ಪ್ರಶ್ನೆಗಳು, ಅದಕ್ಕೆ ಉತ್ತರ, ನಡೆದ
ಚರ್ಚೆ ನಮಗೆ ಬೆಳಕಾಗುತ್ತವೆ, ಸರಿ ತಪ್ಪುಗಳ ಪ್ರಕಲ್ಪನೆ ಮೂಡಿಸುತ್ತವೆ. ಮತ್ತೂ
ವಾಸ್ತವವೆಂದರೆ ‘ಗಾಂಧಿ ನಿಜಕ್ಕೂ ಮಹಾತ್ಮರೇ?’ ಎಂಬ ಈ ಪ್ರಶ್ನೆಯನ್ನು ಅಂಬೇಡ್ಕರರೇನು
ತಮಗೆ ತಾವೇ ಹಾಕಿಕೊಂಡದ್ದಲ್ಲ. ಆದರೆ ಆ ಕಾಲದ ವರ್ತಮಾನದ ಸುದ್ದಿ ಸೃಷ್ಟಿಯಂತೆ
ಗಾಂಧೀಜಿಯವರನ್ನು ಎಲ್ಲರೂ ಮಹಾತ್ಮ, ಮಹಾತ್ಮ ಎನ್ನತೊಡಗಿದಾಗ ಅಂದಿನ ಮಾಧ್ಯಮ ಲೋಕ,
ವಿಶೇಷವಾಗಿ ಪತ್ರಕರ್ತರು ಜಿಜ್ಞಾಸೆಗೊಳಗಾಗಿದ್ದರು ಮತ್ತು ಅಂತಹ ಜಿಜ್ಞಾಸೆಯ
ಪ್ರಶ್ನೆಯಲ್ಲಿಯೇ ‘ಚಿತ್ರಾ’ ಎಂಬ ಆ ಮರಾಠಿ ಪತ್ರಿಕೆಯ ಸಂಪಾದಕರು ಇದಕ್ಕೆ ಅಂಬೇಡ್ಕರರ
ಉತ್ತರ ಏನಿರಬಹುದು ಎಂದು ಕುತೂಹಲಗೊಂಡು ಮತ್ತು ಅಂತಹ ಕುತೂಹಲವನ್ನು ತಮ್ಮ ಪತ್ರಿಕೆಯ
ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸುವ ಉತ್ಸುಕತೆ ತೋರಿ ಸದರಿ ಈ ಸಂಬಂಧ ಲೇಖನವೊಂದನ್ನು
ಬರೆದುಕೊಂಡುವಂತೆ ಅವರು ಅಂಬೇಡ್ಕರರ ದುಂಬಾಲುಬಿದ್ದಿದ್ದರು. ಸಂಪಾದಕರ ಅಂತಹ
ಒತ್ತಡವನ್ನು ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಈ ಕಾರಣಕ್ಕಾಗಿ ನಾನು (ಗಾಂಧಿ ನಿಜಕ್ಕೂ
ಮಹಾತ್ಮರೇ?) ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ನಿರ್ಧರಿಸಿದ್ದೇನೆ”
ಎನ್ನುತ್ತಾ ಜನಸಾಮಾನ್ಯರು ‘ಮಹಾತ್ಮ’ ಎಂಬ ಈ ಪದಕ್ಕೆ ತಿಳಿದುಕೊಂಡಿರುವ ಅರ್ಥವಾದರೂ
ಏನು? ಎಂಬ ಪ್ರಶ್ನೆಗೆ ಉತ್ತರಿಸಲಾರಂಭಿಸುತ್ತಾರೆ.
ಅವರು
ಹೇಳುವುದೇನೆಂದರೆ “ಸಾಮಾನ್ಯ ಹಿಂದೂವೊಬ್ಬನ ಪ್ರಕಾರ ಹೇಳುವುದಾದರೆ ವ್ಯಕ್ತಿಯೋರ್ವ
ವiಹಾತ್ಮ ಪಟ್ಟಕ್ಕೆ ಅರ್ಹತೆ ಗಳಿಸಲು ಮೂರು ಅಂಶಗಳನ್ನು ಹೊಂದಿರಬೇಕು. ಅವು ಆತನ ಬಟ್ಟೆ,
ಆತನ ಗುಣ ಮತ್ತು ಆತನ ನಿರ್ದಿಷ್ಟ ಸಿದ್ಧಾಂತ. ಈ ಹಿನ್ನೆಲೆಯಲ್ಲಿ ಮಹಾತ್ಮರು ಯಾರು
ಎಂದು ತೀರ್ಮಾನಿಸಲು ಈ ಅಂಶಗಳನ್ನು ಆಧಾರವಾಗಿ ತೆಗೆದುಕೊಳ್ಳುವುದಾದರೆ ತಿಳಿಗೇಡಿ ಮತ್ತು
ತಮ್ಮ ಏಳಿಗೆಗಾಗಿ ಇತರರತ್ತ ನೋಡುವ ಅವಿದ್ಯಾವಂತ ಜನರ ದೃಷ್ಟಿಯಲ್ಲಿ ಖಂಡಿತ ಮೋಹನದಾಸ
ಕರಮಚಂದ ಗಾಂಧಿಯವರು ಮಹಾತ್ಮರಾಗುತ್ತಾರೆ. ಈ ರೀತಿ ವೇಷ ಬದಲಿಸಿ ಮಹಾತ್ಮರುಗಳಾಗುವುದು
ಭಾರತದಲ್ಲಿ ಯಾರಿಗೇ ಆಗಲಿ ಬಹಳ ಸುಲಭ. ಇದು ಹೇಗೆಂದರೆ ನೀವೊಂದು ವೇಳೆ ಅತಿವಿಶಿಷ್ಠವಾದ
ಶ್ರೇಷ್ಠ ಕೆಲಸವನ್ನು ಸಾಮಾನ್ಯ ವೇಷ ಧರಿಸಿ ಸಾಮಾನ್ಯ ಜೀವನ ನಡೆಸುತ್ತಾ
ಮಾಡಿದೆರೆಂದಿಟ್ಟುಕೊಳ್ಳಿ ಯಾರೂ ಕೂಡ ನಿಮ್ಮನ್ನು ಗಮನಿಸುವುದಿಲ್ಲ! ಆದರೆ ಅದೇ,
ವ್ಯಕ್ತಿಯೊಬ್ಬ ಸಾಮಾನ್ಯ ರೀತಿಯಲ್ಲಿ ವರ್ತಿಸದೆ ವಿಚಿತ್ರ ಹಾವಭಾವಗಳನ್ನು
ಪ್ರದರ್ಶಿಸುತ್ತಿದ್ದರೆ ಮತ್ತು ತನ್ನ ಗುಣದಲ್ಲಿ ಅಸಹಜತೆಯನ್ನು ತೋರಿಸುತ್ತಿದ್ದರೆ ಆತ
ಸಂತನಾಗುತ್ತಾನೆ, ಮಹಾತ್ಮನಾಗುತ್ತಾನೆ. ಒಟ್ಟಾರೆ ನೀವೊಂದು ಸೂಟ್ ಅಥವಾ ಸಾಮಾನ್ಯ
ಡ್ರೆಸ್ ಧರಿಸಿ ಏನಾದರೂ ಮಾಡುತ್ತಿರಿ ಜನ ನಿಮ್ಮತ್ತ ಕಣ್ಣೆತ್ತಿಯೂ ನೋಡಲು
ಇಚ್ಛಿಸುವುದಿಲ್ಲ. ಆದರೆ ಅದೇ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ನಗ್ನನಾಗಿ
ಓಡುತ್ತಿದ್ದರೆ, ಉದ್ದನೆಯ ಕೂದಲು ಬಿಟ್ಟು ಜನರನ್ನು ಬೈಯುತ್ತಿದ್ದರೆ, ಚರಂಡಿಯ ಕೊಳಕು
ನೀರು ಕುಡಿಯುತ್ತಿದ್ದರೆ ಜನ ಅವನ ಪಾದಕ್ಕೆರಗುತ್ತಾರೆ! ಅವನನ್ನು
ಪೂಜಿಸಲಾರಂಭಿಸುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಗಾಂಧಿ ಭಾರತದಲ್ಲಿ
ಮಹಾತ್ಮರಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ”.
ಆಶ್ಚರ್ಯವಾಯಿತೇ
ಅಂಬೇಡ್ಕರರ ವಿವರಣೆ? ಮುಂದುವರಿದು ಅವರು ಹೇಳುವುದ ಕೇಳಿ “ಇಂತಹದ್ದೇನಾದರೂ ಬೇರೇ
ನಾಗರಿಕ ದೇಶಗಳಲ್ಲಿ ನಡೆದಿದ್ದರೆ ಜನ ಅಂತಹವರನ್ನು ನೋಡಿ ನಗುತ್ತಿದ್ದರು”. ಅಂದಹಾಗೆ
ಗಾಂಧೀಜಿಯವರ ಇಂತಹ ಮಹಾತ್ಮತನಕ್ಕೆ ಜನ ಕೊಡುವ ವಿವರಣೆ ಅವರ ‘ಸತ್ಯ’ ಮತ್ತು ‘ಅಹಿಂಸೆ’.
ಪ್ರಶ್ನೆಯೇನೆಂದರೆ ಇವು(ಸತ್ಯ ಮತ್ತು ಅಹಿಂಸೆ) ಗಾಂಧೀಜಿಯವರ ಒರಿಜಿನಲ್ ಸಿದ್ಧಾಂತಗಳೇ?
ಎಂಬುದು. ಇದಕ್ಕೆ ಅಂಬೇಡ್ಕರರು ಕೊಡುವ ವಿವರಣೆ ನೋಡಿ “ಸಾಮಾನ್ಯ ನೋಡುಗನೊಬ್ಬನಿಗೆ
ಗಾಂಧೀಜಿಯವರ ಬೋಧನೆಗಳು ತುಂಬಾ ಸಿಹಿಯೆನಿಸಬಹುದು, ಅಪ್ಯಾಯವೆನಿಸಬಹುದು. ಸತ್ಯ ಮತ್ತು
ಅಹಿಂಸೆ ಪವಿತ್ರ ತತ್ವಗಳು. ಆ ಕಾರಣದಿಂದ ಗಾಂಧಿ ಸತ್ಯ ಮತ್ತು ಅಹಿಂಸೆಗಳನ್ನು ತಾನು
ಬೋಧಿಸುತ್ತೇನೆಂದು ಘೋಷಿಸಿಕೊಂಡಿರುವುದರಿಂದ ಮತ್ತು ಜನ ಅದನ್ನು ಬಹಳ ಇಷ್ಟ
ಪಟ್ಟಿರುವುದರಿಂದ ಅವರು ಅವರ ಸುತ್ತ ಸಹಸ್ರ ಸಂಖ್ಯೆಯಲ್ಲಿ ಗುಂಪುಗೂಡುತ್ತಿದ್ದಾರೆ.
ಆದರೆ ನನಗೆ ಅರ್ಥವಾಗದ್ದೆಂದರೆ ಜನ ಯಾಕೆ ಹೀಗೆ ಅಂತ? ಯಾಕೆಂದರೆ ಸಹಸ್ರ ವರ್ಷಗಳ ಹಿಂದೆ
ಸತ್ಯ ಮತ್ತು ಅಹಿಂಸೆಯ ಈ ಸಂದೇಶಗಳನ್ನು ಇಡೀ ಜಗತ್ತಿಗೇ ನೀಡಿದ್ದು ಭಗವಾನ್ ಬುದ್ಧ
ಎಂಬುದು ವಾಸ್ತವವಲ್ಲವೆ? ಈ ನಿಟ್ಟಿನಲ್ಲಿ ಈ ವಿಷಯದ ಬಗೆಗಿನ(ಸತ್ಯ ಮತ್ತು ಅಹಿಂಸೆ) ಮೂಲ
ಕ್ರೆಡಿಟ್‍ಅನ್ನು ತಿಳಿಗೇಡಿ ಮೂರ್ಖರು ಅಥವಾ ಜನ್ಮತಃ ಬುದ್ಧಿಗೇಡಿಗಳನ್ನು ಹೊರತು
ಪಡಿಸಿ ಮತ್ತ್ಯಾರೂ ಕೂಡ ಗಾಂಧಿಯವರಿಗೆ ನೀಡಲಾರರು. ಹಾಗೆ ಹೇಳುವುದಾದರೆ ಮಾನವನ
ನಾಗರೀಕತೆ ರಕ್ಷಿಸಲು ಸತ್ಯ ಮತ್ತು ಅಹಿಂಸೆ ಅತ್ಯಗತ್ಯ ಎಂಬ ಘೋಷಣೆಯಲ್ಲಿ ಹೊಸದೇನು
ಇಲ್ಲ ಮತ್ತು ನಾನು ಮೊದಲೇ ಹೇಳಿದಂತೆಯೇ ಈ ವಿಷಯಗಳನ್ನು ಸಹಸ್ರ ವರ್ಷಗಳ ಹಿಂದೆಯೇ
ಬೋಧಿಸಿದ್ದು ಭಗವಾನ್ ಬುದ್ಧ. ಸತ್ಯ ಮತ್ತು ಅಹಿಂಸೆಯ ಪ್ರಯೋಗದಿಂದ ಒದಗಬಹುದಾದ ಜ್ವಲಂತ
ಸಮಸ್ಯೆಗಳ ಬಗ್ಗೆ ಗಾಂಧೀಜಿಯವರೇನಾದರೂ ಬೆಳಕು ಚೆಲ್ಲಿದ್ದಿದ್ದರೆ ಅವರ ಮಹಾತ್ಮತನಕ್ಕೆ
ಮತ್ತಷ್ಟು ಹೊಳಪುಬರುತ್ತಿತ್ತು. ಜಗತ್ತು ಅವರಿಗೆ ಸದಾ ಕೃತಜ್ಞವಾಗಿರುತ್ತಿತ್ತು.
ಜಗತ್ತು ಇಂದು ಎರಡು ಒಗಟುಗಳಿಗೆ ಪರಿಹಾರವನ್ನು ಕುತೂಹಲದಿಂದ ಕಾಯುತ್ತಿದೆ. ಅವುಗಳನ್ನು
ಹೆಸರಿಸುವುದಾದರೆ ‘ಸತ್ಯ’ದಂಥಹ ಪವಿತ್ರ ತತ್ವವನ್ನು ಎತ್ತಿಹಿಡಿಯುವುದು ಹೇಗೆ ಮತ್ತು
ಯಾವ ಸಂದರ್ಭದಲ್ಲಿ ‘ಹಿಂಸೆಯನ್ನು’ ಸರಿಯಾದ ಕ್ರಿಯೆ ಎಂದು ನಿರ್ಧರಿಸಬಹುದು? ಎಂಬುದು.
ಅಂದಹಾಗೆ ಗಾಂಧಿ(ಸತ್ಯ ಮತ್ತು ಅಹಿಂಸೆಯ) ಇಂತಹ ಜಟಿಲ ಪ್ರಶ್ನೆಗಳಿಗೆ
ಉತ್ತರಿಸಿದ್ದಾರೆಯೇ?” ಅಂಬೇಡ್ಕರ್ ಕೇಳುತ್ತಾ ಹೋಗುತ್ತರೆ. ಹಾಗೆಯೇ ಅವುಗಳ ಮೂಲ
ಪ್ರತಿಪಾದಕನಾದ ಭಗವಾನ್ ಬುದ್ಧ “ಸತ್ಯ ಮತ್ತು ಅಹಿಂಸೆಗೆ ನಮ್ಮ ನಿಲುವು
ಆಶಾವಾದದ್ದಾಗಿರಬೇಕು” ಎಂದು ಹೇಳಿದ್ದನ್ನು ಕೂಡ ಅವರು ದಾಖಲಿಸುತ್ತಾರೆ. ಒಟ್ಟಾರೆ
ಅಂಬೇಡ್ಕರರ ಪ್ರಕಾರ “ಸತ್ಯ ಮತ್ತು ಅಹಿಂಸೆಯ original patent (ಮೂಲ ಹಕ್ಕು)
ಬುದ್ಧನಿಗೆ ಸಲ್ಲುತ್ತದೆ”.
ಹಾಗಿದ್ದರೆ ಸತ್ಯ ಮತ್ತು ಅಹಿಂಸೆ
ಬುದ್ಧನದ್ದು ಎಂದಾದರೆ ಗಾಂಧಿ ಏನು ಮಾಡಿದರು? ಇದಕ್ಕೆ ಅಂಬೇಡ್ಕರರು ಹೇಳುವುದ ನೋಡಿ
“ಗಾಂಧೀಜಿಯವರ ಪ್ರವಚನಗಳನ್ನು, ಮತ್ತವರು ಬೋಧಿಸಿದ ಅಂಶಗಳನ್ನು ಗಂಭೀರವಾಗಿ
ಅಧ್ಯಯನಮಾಡಿದರೆ ನಮಗೆ ಸಿಗುವ ಉತ್ತರವೆಂದರೆ ಅವರು ಬೇರೆಯವರ ಬಂಡವಾಳದಲ್ಲಿ ವ್ಯಾಪಾರ
ಮಾಡುತ್ತಾರೆ” ಎಂಬುದು! (ಹೌದು, ಗಾಂಧೀಜಿಯವರು ಬುದ್ಧನ ಬೋಧನೆಯ ಬಂಡವಾಳದಲ್ಲಿ ಸತ್ಯ
ಮತ್ತು ಅಹಿಂಸೆಯ ವ್ಯಾಪಾರ ಮಾಡಿದರು!) ಬೇರೆಯವರ ಬಂಡವಾಳದಲ್ಲಿ ವ್ಯಾಪಾರ ಮಾಡುವುದು?
ಹಾಗಿದ್ದರೆ ಗಾಂಧೀಜಿಯವರದ್ದು ಎಂತಹ ವ್ಯಕ್ತಿತ್ವ? ಮುಂದುವರಿದು ಅಂಬೇಡ್ಕರರು ಹೇಳುವುದ
ನೋಡಿ “when I seriously study Gandhi’s character, I became exceedingly
convinced that cunningness is more evident in his character than
seriousness or sincerity (ಗಾಂಧೀಜಿಯವರ ಗುಣವನ್ನು ನಾನು ಗಂಭಿರವಾಗಿ ಅಧ್ಯಯನ
ಮಾಡಿದಾಗ ನನಗೆ ಪರಿಪೂರ್ಣವಾಗಿ ಅರಿವಿಗೆ ಬಂದದ್ದೆಂದರೆ ಅವರ ಗುಣದಲ್ಲಿ ವಿಷಯಗಂಭೀರತೆ
ಅಥವಾ ಪ್ರಾಮಾಣಿಕತೆಗಿಂತ ಕಪಟತನವೇ ಹೆಚ್ಚಿದೆ ಎಂಬುದು). ನನಗನಿಸಿದಂತೆ ನನ್ನ
ದೃಷ್ಟಿಯಲ್ಲಿ ಅವರ ಕ್ರಿಯೆಗಳನ್ನು ನಕಲಿ ನಾಣ್ಯಗಳಿಗೆ ಹೋಲಿಸಬಹುದು. ಅವರ
ವಿನಯಶೀಲತೆಯನ್ನು ಇಂಗ್ಲೀಷ್ ಕಾದಂಬರಿ ‘ಡೇವಿಡ್ ಕಾಪರ್‍ಫೀಲ್ಡ್’ನಲ್ಲಿ ಕಂಡುಬರುವ
politeness of urea heap (ಯೂರಿಯಾ ಬೆಳೆಯ ಕೃತಕವಿನಯಶೀಲತೆಗೆ) ಹೋಲಿಸಬಹುದು. ತಮ್ಮ
ಸಹಜ ಧೂರ್ತ ಬುದ್ಧಿ ಮತ್ತು ಮೋಸಮಾಡುವ ಗುಣದಿಂದಾಗಿ ಅವರು ತಮ್ಮನ್ನು ತಾವೇ
ಮಂಚೂಣಿಯಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಜ ಹೇಳಬೇಕೆಂದರೆ ತನ್ನ
ಸಾಮಥ್ರ್ಯದಲ್ಲಿ ನಂಬಿಕೆಯಿರುವ ಯಾವುದೇ ವ್ಯಕ್ತಿ ಜೀವನದ ಸಹಜ ವಾಸ್ತವಗಳನ್ನು ನೇರವಾಗಿ
ಮತ್ತು ಪೌರುಷತನದಿಂದ ಎದುರಿಸುತ್ತಾನೆ. ಅಂತಹ ವ್ಯಕ್ತಿಗೆ ತನ್ನ ಅಂಗಿಯ ತೋಳಿನ
ಸಂದಿಯಲ್ಲಿ ಕತ್ತಿಯನ್ನು ಅಡಗಿಸಿಟ್ಟುಕೊಳ್ಳುವ ಅಗತ್ಯ ಕಂಡುಬರುವುದಿಲ್ಲ. ಇದು
ಹೇಗೆಂದರೆ ನೆಪೋಲಿಯನ್ ಸದಾ ನೇರವಾಗಿ, ಮುಂದಿನಿಂದ ಧಾಳಿಮಾಡುತ್ತಿದ್ದ.
ವಿಶ್ವಾಸಾಘಾತದಲ್ಲಿ ಆತನಿಗೆ ನಂಬಿಕೆಯಿರಲಿಲ್ಲ ಮತ್ತು ಆ ಕಾರಣದಿಂದ ಆತ ಎಂದಿಗೂ
ಹಿಂದಿನಿಂದ ಧಾಳಿಮಾಡಿದವನಲ್ಲ. ಈ ನಿಟ್ಟಿನಲ್ಲಿ ವಿಶ್ವಾಸಾಘಾತುಕತನ ಮತ್ತು ವಂಚನೆ
ದುರ್ಬಲ ಮನಸ್ಸಿನವರ ಆಯುಧಗಳು, ಗಾಂಧಿ ಸದಾ ಈ ಆಯುಧಗಳನ್ನು ಬಳಸಿದ್ದಾರೆ”.
ವಂಚನೆ...
ವಿಶ್ವಾಶಾಘಾತುಕತನ... ಯೂರಿಯಾ ಕೃತಕ ರಸಗೊಬ್ಬರಂದಂತಹ ಬೆಳೆಯ ಕೃತಕ ವಿನಯಶೀಲತೆ...
ಹೀಗೆ ಸಾಗುತ್ತದೆ ಅಂಬೇಡ್ಕರರಿಂದ ಗಾಂಧಿಯವರ ಗುಣ ನಿರೂಪಣೆ. ಹಾಗಿದ್ದರೆ ಗಾಂಧಿಯವರು
ಯಾರನ್ನು ವಂಚಿಸಿದರು? ಉದಾಹರಣೆಗೆ ದುಂಡುಮೇಜಿನ ಸಮ್ಮೇಳನದಂತಹ ಅಂತರಾಷ್ಟ್ರೀಯ ಸಮ್ಮೇಳನ
ಮತ್ತು ತತ್ಪರಿಣಾಮ ಮೂಡಿಬಂದ ಪೂನಾ ಒಪ್ಪಂದದ ಪ್ರಕರಣಗಳನ್ನು ಗಮನಿಸುವುದಾದರೆ
ಗಾಂಧೀಜಿಯವರು ದುಂಡುಮೇಜಿನ ಸಭೆಯಲ್ಲಿ ತಾನೇ ಅಸ್ಪøಶ್ಯರ ನಿಜವಾದ ಪ್ರತಿನಿಧಿ ಎಂದು
ಹೇಳಿದರು. ಆ ಮೂಲಕ ಅವರು ಇಬ್ಬರನ್ನು ಅಂದರೆ ಒಂದು ವ್ಯಕ್ತಿ ಮತ್ತು ಅವರ ಹಿಂದೆ ಇದ್ದ
ಒಂದು ಸಮುದಾಯ ಈವರ್Àರನ್ನು ವಂಚಿಸುವ ಸಂಚು ನಡೆಸಿದರು. ವ್ಯಕ್ತಿ ಅಂದರೆ ಅಂಬೇಡ್ಕರ್.
ಅಂದರೆ ತಾನೇ ನಿಜವಾದ ಅಸ್ಪøಶ್ಯರ ಪ್ರತಿನಿಧಿ ಅಂದರೆ ಅಲ್ಲಿ ಅಂಬೇಡ್ಕರ್ ಅಪ್ರಸ್ತುತ
ಎಂಬಂತೆ, ಇನ್ನು ಅಂಬೇಡ್ಕರ್ ಅಪ್ರಸ್ತುತವಾದರೆ ಅವರು ಎತ್ತುವ ಬೇಡಿಕೆಗಳು, ಹೇಳಿಕೆಗಳು
ಅಪ್ರಸ್ತುತ! ತಾನು ಹೇಳಿದ್ದೇ ಸರಿ ಮತ್ತು ನನ್ನ ಹೇಳಿಕೆಗಳ ಪ್ರಕಾರ ಬ್ರಿಟಿಷ್ ಸರ್ಕಾರ
ಅಸ್ಪøಶ್ಯರಿಗೆ ಏನನ್ನೂ ನೀಡಬಾರದು, ಮತ್ತು ಹಾಗೆ ನೀಡುವ ಜವಾಬ್ದಾರಿಯನ್ನು ಹಿಂದೂಗಳಿಗೆ
ಬಿಡಬೇಕು! (ಹಿಂದೂಗಳಿಗೆ ನೀಡಬೇಕು, ಇದಕ್ಕೆ ಈಗಿನ ಉದಾಹರಣೆಯೊಂದನ್ನು ನೀಡುವುದಾದರೆ
ರಾಜ್ಯದಲ್ಲಿ ಹಿಂದೂಗಳ ವತಿಯಿಂದ ನಡೆಯುತ್ತಿರುವ ಸರ್ಕಾರಿ ಅನುದಾನಿತ ಲಕ್ಷಾಂತರ ಶಿಕ್ಷಣ
ಸಂಸ್ಥೆಗಳಿವೆ. ನಿಮಗೆ ನೆನಪಿರಲಿ, ಈ ಸಂಸ್ಥೆಗಳು ತಾವು ನಡೆಸುತ್ತಿರುವ ಶಾಲೆಗಳಲ್ಲಿ,
ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಸಂವಿಧಾನಬದ್ಧ ಮೀಸಲಾತಿ ನೀಡಬೇಕು. ಆದರೆ ಮೋಸವೆಂದರೆ
ಹಾಗೆ ಸಹಜ ರೋಸ್ಟರ್ ಪದ್ಧತಿಯ ಹುದ್ದೆಗಳ ಮೀಸಲಾತಿಯನ್ನು ಈ ಅನುದಾನಿತ ಹಿಂದೂ
ಶಿಕ್ಷಣಸಂಸ್ಥೆಗಳು ಪರಿಶಿಷ್ಟರಿಗೆ ನೀಡಿಯೇ ಇಲ್ಲ! ಪ್ರಶ್ನೆಯೇನೆಂದರೆ ಅಂದು ಗಾಂಧಿಯವರು
ಬ್ರಿಟಿಷರ ಮುಂದೆ ಹೇಳಿದ ಹಾಗೆ ಅಸ್ಪøಶ್ಯರಿಗೆ ಅನುಕೂಲ ನೀಡುವ ಸಂಪೂರ್ಣ
ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಟ್ಟಿದ್ದರೆ? ಅಂಬೇಡ್ಕರ್ ಮೋಸವೆನ್ನುವುದು,
ವಂಚನೆಯೆನ್ನುವುದು ಈ ಕಾರಣಕ್ಕೇನೆ!)
ಹೀಗೆ ಒಂದು ಜನಾಂಗವನ್ನು
ಸಾಮೂಹಿಕವಾಗಿ ವಂಚಿಸುವ ಗಾಂಧಿಯವರ ಹೇಳಿಕೆಯ ಪರಿಯೊಂದನ್ನು ಗಮನಿಸುವುದಾದರೆ,
ಗಾಂಧಿಯವರು ಹೇಳಿದ್ದು “ಅಸ್ಪøಶ್ಯರಿಗೆ ಪ್ರತ್ಯೇಕ ಅನುಕೂಲ ನೀಡುವುದರಿಂದ
ಹಿಂದೂಧರ್ಮದಲ್ಲಿ ಒಡಕು ಉಂಟಾಗುತ್ತದೆ”. ಇದು ಹೇಗೆಂದರೆ “ಹೌದಲ್ಲವೆ, ಗಾಂಧಿಯವರು
ಹೇಳುವುದು? ಪ್ರತ್ಯೇಕ? ಇದರಿಂದ ಹಿಂದೂಧರ್ಮ ಒಡೆದುಹೋಗುತ್ತದೆಯಲ್ಲವೆ?” ಎಂದು ಎಲ್ಲರೂ
ತಲೆದೂಗುವಂತೆ! ವಾಸ್ತವವೆಂದರೆ ಇಂತಹ ತಲೆದೂಗುವಿಕೆಯನ್ನೇ, ಕಸಿಯಲ್ಪಡುವ ಅಸ್ಪøಶ್ಯರ
ಹಕ್ಕುಗಳ ಗಾಂಧಿಯವರ ಇಂತಹ ನಡೆಯನ್ನೆ ವಂಚನೆ, ವಿಶ್ವಾಸಾಘಾತುಕತನ, ಮೋಸಗೊಳಿಸುವ
ಪ್ರಕ್ರಿಯೆ ಎಂದು ಅಂಬೇಡ್ಕರರು ಕರೆದದ್ದು.
ಮುಂದುವರಿದು ಅಂಬೇಡ್ಕರರು
ಗಾಂಧಿಯವರ ಇಂತಹ ವಂಚನೆಯ ಘಟನೆಗಳ ಮತ್ತಷ್ಟನ್ನು ದಾಖಲಿಸುತ್ತಾರೆ. ಅದೆಂದರೆ ಹಲವು
ವರ್ಷಗಳ ಕಾಲ ಗಾಂಧಿ ತಾನು ಮಂದಗಾಮಿ ನಾಯಕ ಗೋಪಾಲ ಕೃಷ್ಣ ಗೋಖಲೆಯವರ ಅನುಯಾಯಿ ಎಂದು
ಘೋಷಿಸಿಕೊಂಡಿದ್ದರು. ಆದರೆ ಇದ್ದಕ್ಕಿಂದಂತೆ ಅದೇ ಗಾಂಧಿ ಒಂದು ದಿನ ಕಾಂಗ್ರೆಸ್
ತೀವ್ರಗಾಮಿ ನಾಯಕ ಬಾಲಗಂಗಾಧರ ತಿಲಕ್‍ರನ್ನು ಹೊಗಳಲು ಆರಂಭಿಸಿದ್ದರು! ತದನಂತರ ಅವರು
ತಿಲಕರನ್ನೂ ದ್ವೇಷಿಸಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸ್ವರಾಜ್ಯ ನಿಧಿಗಾಗಿ
10ಲಕ್ಷ ಸಂಗ್ರಹಿಸುವ ಜವಾಬ್ದಾರಿ ಒದಗಿಬಂತು, ಅಲ್ಲದೆ ತಾವು ದ್ವೇಷಿಸುತ್ತಿದ್ದ ಅದೇ
ಬಾಲಗಂಗಾಧರ ತಿಲಕರ ಹೆಸರನ್ನು ಆ ಸಮಯದಲ್ಲಿ ಬಳಸದಿದ್ದರೆ 10ಲಕ್ಷ ಸಂಗ್ರಹಿಸಲು
ಸಾಧ್ಯವಾಗುವುದಿಲ್ಲ ಎಂಬ ಗುಟ್ಟು ಕೂಡ ಅವರಿಗೆ ತಿಳಿದುಹೋಯಿತು! ತಡಮಾಡದೇ ಸಾಮಾನ್ಯ
ಕ್ಷುಲ್ಲಕ ರಾಜಕಾರಣಿಯಂತೆ ಗಾಂಧಿಯವರು ಹಣದ ಆಸೆಗಾಗಿ ಆ ನಿಧಿಗೆ ‘ತಿಲಕ್ ಸ್ವರಾಜ್ಯ
ನಿಧಿ’ ಎಂದು ಹೆಸರಿಟ್ಟರು! ಹಾಗೇ 10ಲಕ್ಷ ಸಂಗ್ರಹಿಸಿದರೂ ಕೂಡ! ಒಟ್ಟಾರೆ ಅಂಬೇಡ್ಕರರು
ಉಲ್ಲೇಖಿಸುವ ಈ ದೃಷ್ಟಾಂತದಲ್ಲಿ ನಾವು ಗಾಂಧಿಯವರ ‘ವೇಷ ಬದಲಿಸುವ ವ್ಯಾಪಾರಿ
ಬುದ್ಧಿ’ಯನ್ನು ಢಾಳಾಗಿ ಕಾಣಬಹುದು.
ಇಲ್ಲಿ ಅಂಬೇಡ್ಕರರು ಉಲ್ಲೇಖಿಸುವ
ಎರಡನೇ ಘಟನೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟಿದ್ದು. ಅಂಬೇಡ್ಕರರ ಭಾಷೆಯಲ್ಲೇ
ಹೇಳುವುದಾದರೆ “ಗಾಂಧಿ ಕ್ರಿಶ್ಚಿಯನ್ ಧರ್ಮದ ಉಗ್ರ ವಿರೋಧಿಯಾಗಿದ್ದರೂ ‘ಪಾಶ್ಚಿಮಾತ್ಯ
ಪ್ರಪಂಚವನ್ನು ಮೆಚ್ಚಿಸಲು’ ಆಗಾಗ ಬಿಕ್ಕಟ್ಟಿನ ಸಮಯದಲ್ಲಿ ಅವರು ಬೈಬಲ್‍ನ
ಉಲ್ಲೇಖಗಳನ್ನು ಬಳಸುತ್ತಿದ್ದರು” ಎಂಬುದು! ಇನ್ನು ದುಂಡು ಮೇಜಿನ ಸಭೆಯ
ಸಂದರ್ಭವೊಂದನ್ನೂ ಸ್ವತಃ ಅಂಬೇಡ್ಕರರೇ ಇಲ್ಲಿ ದಾಖಲಿಸುತ್ತಾರೆ. ಅದನ್ನು ಯಥಾವತ್
ನೀಡುವುದಾದರೆ “ದುಂಡುಮೇಜಿನ ಸಭೆಯ ಸಂದರ್ಭದಲ್ಲಿ ಅವರು(ಗಾಂಧಿ) ಜನತೆಗೆ ವಾಗ್ದಾನ
ನೀಡಿದ್ದೇನೆಂದರೆ ಶೋಷಿತ ವರ್ಗಗಳು ಮಂಡಿಸುವ ಯಾವುದೇ ಬೇಡಿಕೆಗಳ ವಿರುದ್ಧವೂ ನಾನು ದನಿ
ಎತ್ತುವುದಿಲ್ಲ ಎಂದು. ಆದರೆ ಶೋಷಿತ ವರ್ಗಗಳ ಜನರ ಪ್ರತಿನಿಧಿಗಳು ಬೇಡಿಕೆ ಮಂಡಿಸಿದ
ತತಕ್ಷಣವೇ ಅದೇ ಗಾಂಧೀಜಿ ಜನತೆಗೆ ತಾನು ನೀಡಿದ ವಾಗ್ದಾನ ಮರೆತರು. ಇದನ್ನು ನಾನು
ಶೋಷಿತ ವರ್ಗಗಳಿಗೆ ಸೇರಿದ ಜನರಿಗೆ ಗಾಂಧಿ ಮಾಡಿದ ವಿಶ್ವಾಸ ದ್ರೋಹ ಎನ್ನುತ್ತೇನೆ.
ಯಾಕೆಂದರೆ (ಅದೇ ದುಂಡುಮೇಜಿನ ಸಭೆಯ ಅದೇ ಸಮಯದಲ್ಲಿ) ಮುಸ್ಲೀಮರ ಬಳಿಗೆ ತೆರಳಿದ ಗಾಂಧಿ
ಮುಸ್ಲೀಮರ ಬೇಡಿಕೆಗಳನ್ನು ನಾನು ಬೆಂಬಲಿಸುತ್ತೇನೆ. ಆದರೆ ಅದಕ್ಕೆ ಪ್ರತಿಯಾಗಿ
ನೀವು(ಮುಸ್ಲೀಮರು) ದುರ್ಬಲ ವರ್ಗಗಳವರ ಪ್ರತಿನಿಧಿಗಳು ಮಂಡಿಸುವ ಬೇಡಿಕೆಗಳನ್ನು
ವಿರೋಧಿಸಬೇಕು ಎಂದು ಹೇಳುತ್ತಾರೆ” ಎನ್ನುತ್ತಾ, ಅಂಬೇಡ್ಕರರು ಈ ಸಂದರ್ಭದಲ್ಲಿ Even a
scoundrel would not have done this (ಒರ್ವ ದುಷ್ಟ ಕೂಡ ಹೀಗೆ ಮಾಡಲಾರ) ಎಂಬ
ವಾಕ್ಯ ಬಳಕೆ ಮಾಡುತ್ತಾ Even a scoundrel would not have done this (ಈ ಪ್ರಕರಣ
ಗಾಂಧಿಯವರ ವಿಶ್ವಾಸಾಘಾತುಕತನಕ್ಕೆ ಕೇವಲ ಒಂದು ನಿದರ್ಶನವಷ್ಟೆ) ಎನ್ನುತ್ತಾರೆ.
(ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.17, ಭಾಗ.2, ಪು.68)
ಖಂಡಿತ,
ಅಂಬೇಡ್ಕರರ ವಾಕ್ಯ ಬಳಕೆ ಅತಿ ಎನಿಸಬಹುದು. ಆದರೆ “ಒಂದು ಜನಾಂಗದ (ಅಸ್ಪøಶ್ಯರ)
ವಿರುದ್ಧ ಇನ್ನೊಂದು ಜನಾಂಗವನ್ನು(ಮುಸ್ಲೀಮರು) ಎತ್ತಿಕಟ್ಟಿದ್ದು ಮತ್ತು ನಾವು
ನಿಮ್ಮನ್ನು ಬೆಂಬಲಿಸಬೇಕಾದರೆ ನೀವು ಅವರನ್ನು ವಿರೋಧಿಸಿಬೇಕು” ಎಂದು ಗಾಂಧಿ
ಬ್ಲಾಕ್‍ಮೇಲ್ ಮಾಡಿದ್ದು ‘ಪ್ರಾಮಾಣಿಕತೆ’ಯ ಪ್ರಕ್ರಿಯೆಯಾಗುತ್ತದೆಯೇ? ಹಾಗೆಯೇ
ಭಾರತದಲ್ಲಿ ತಾನು ಅಸ್ಪøಶ್ಯರ ಬೇಡಿಕೆಗಳ ವಿರುದ್ಧ ಮಾತನಾಡುವುದಿಲ್ಲ ಎಂಬ ಆಶ್ವಾಸನೆಯ
ಮಾತುಗಳನ್ನಾಡಿ ತಮ್ಮ ಆ ಆಶ್ವಾಸನೆಗೆ ವಿರುದ್ಧವಾಗಿ ಅದೇ ಅಸ್ಪøಶ್ಯರ ಬೇಡಿಕೆಗಳ
ವಿರುದ್ಧ ಗಾಂಧಿ ಮಾತನಾಡಿದ್ದು, ಪ್ರಬಲವಾಗಿ ವಿರೋಧಿಸಿದ್ದು ಅದು ಅವರ ಬಹಿರಂಗ ಸುಳ್ಳಿನ
ಹೇಳಿಕೆಯಾಗುತ್ತದೆಯಲ್ಲವೆ? ಮತ್ತು ಹಾಗೇ ಅದು ಗಾಂಧಿ ಅಸ್ಪøಶ್ಯರಿಗೆ ಎಸಗಿದ
ವಿಶ್ವಾಸಘಾತುಕತನಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆಯಲ್ಲವೆ?
ಆಶ್ಚರ್ಯವೆಂದರೆ ದುಂಡುಮೇಜಿನ ಸಭೆಯಲ್ಲಿ ಅಸ್ಪøಶ್ಯರ ಬೇಡಿಕೆಗಳನ್ನು ವಿರೋಧಿಸಿ
ಮುಸ್ಲೀಮರ ಬೇಡಿಕೆಗಳನ್ನು ಬೆಂಬಲಿಸುವ ಗಾಂಧಿ ಮತ್ತೊಂದು ಪ್ರಮುಖ ಸಂದರ್ಭದಲ್ಲಿ
ಮುಸ್ಲೀಮರ ಬೇಡಿಕೆಗಳನ್ನೂ ವಿರೋಧಿಸುತ್ತಾರೆ! ಅಂಬೇಡ್ಕರರು ಪ್ರಸ್ತಾಪಿಸುವ ಆ ಘಟನೆಯ
ಸಾರವನ್ನು ನೀಡುವುದಾದರೆ, ಹಿಂದೆ ಕಾಂಗ್ರೆಸ್ ಸಮಾವೇಶದ ಸಮಯವೊಂದರಲ್ಲಿ ಜವಹಾರಲಾಲ್
ನೆಹರೂರವರ ತಂದೆ ಮೋತಿಲಾಲ್ ನೆಹರೂರವರು ತಯಾರಿಸಿದ್ದ ವರದಿಯೊಂದು ಮಂಡನೆಯಾಗಿತ್ತು. ಆ
ವರದಿ ‘ನೆಹರೂ ಸಮಿತಿ ವರದಿ’ ಎಂದೇ ಪ್ರಸಿದ್ಧ. ಆ ಸಮಾವೇಶದಲ್ಲಿ ಆ ವರದಿ
ಮಂಡನೆಯಾಗುತ್ತಲೇ ಆ ವರದಿಗೆ ಸಂಬಂಧಪಟ್ಟ ಕೆಲವು ತಿದ್ದುಪಡಿಗಳನ್ನು ಸ್ವತಃ ತಾವೇ
ವಿರೋಧಿಸದ ಗಾಂಧಿ ತಮ್ಮ ಪರವಾಗಿ ಜಯಕರ್ ಎಂಬುವವರನ್ನು ಬಾಡಿಗೆಗೆ ಪಡೆದು ಛೂ
ಬಿಡುತ್ತಾರೆ! ಅಂದಹಾಗೆ ಆ ತಿದ್ದುಪಡಿಗಳು ಯಾರಿಗೆ ಸಂಬಂಧಪಟ್ಟವಾಗಿದ್ದವೆಂದರೆ
ಮುಸ್ಲೀಮರಿಗೆ! ಮತ್ತು ಆ ತಿದ್ದುಪಡಿಗಳನ್ನು ತನ್ನ ಸಮುದಾಯದ ಪರವಾಗಿ ಅಂಗೀಕರಿಸುವಂತೆ
ಸ್ವತಃ ಅವುಗಳನ್ನು ಸಲಹೆಮಾಡಿದ್ದು ಅಂದಿನ ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ
ಮಹಮ್ಮದಾಲಿ ಜಿನ್ನಾ! ಹಾಗಿದ್ದರೆ ಯಾಕೆ ಗಾಂಧೀಜಿ ಅಂತಹ ತಿದ್ದುಪಡಿಗಳನ್ನು
ವಿರೋಧಿಸಿದರು? ಖಂಡಿತ, ಆ ತಿದ್ದುಪಡಿಗಳ ಮೂಲಕ ಮುಸ್ಲೀಮರ ಹಲವು ಪ್ರಮುಖ ಬೇಡಿಕೆಗಳು
ಈಡೇರುತ್ತಿತ್ತು! ಆದರೆ ಎಲ್ಲಿ ಮುಸ್ಲೀಮರಿಗೆ ಅವರ ಎಲ್ಲಾ ಹಕ್ಕುಗಳು ದೊರಕಿಬಿಡುತ್ತದೋ
ಎಂದು ಯೋಚಿಸಿದ ಗಾಂಧೀಜಿಯವರು ತನ್ನ ಶಿಷ್ಯರನ್ನು ಅಂತಹ ಐತಿಹಾಸಿಕ ಮುಸ್ಲಿಂ ಪರವಾದ
ತಿದ್ದುಪಡಿಗಳ ವಿರುದ್ಧ ಛೂ ಬಿಟ್ಟಿದ್ದರು ಮತ್ತು ಅವು ಬಿದ್ದುಹೋಗುವ ಹಾಗೆ
ನೋಡಿಕೊಂಡರು! ಅಂದಹಾಗೆ ಅಂಬೇಡ್ಕರರ ಪ್ರಕಾರ ‘ನೆಹರೂ ಸಮಿತಿ ವರದಿ’ಗೆ ಸೂಚಿಸಿದ್ದ ಆ
ತಿದ್ದುಪಡಿಗಳೇನಾದರೂ ಅಂದೇ ಅಂಗೀಕಾರಗೊಂಡಿದ್ದರೆ ಇಂದಿಗೂ ಉಗ್ರರೂಪದಲ್ಲಿರುವ
‘ಹಿಂದೂ-ಮುಸ್ಲಿಂ ದ್ವೇಷ’ ಅಂದೇ ಕೊನೆಯಾಗಿರುತ್ತಿತ್ತು! ಈ ನಿಟ್ಟಿನಲ್ಲಿ ಅಂಬೇಡ್ಕರರ ಆ
ವಾಕ್ಯವನ್ನಿಲ್ಲಿ ಯಥಾವತ್ ದಾಖಲಿಸುವುದಾದರೆ Hindu-Moslem hostility is the
result of deceitful action on the part of Gandhi (ಗಾಂಧಿಯವರ ಕಡೆಯಿಂದ ಆದ
ಮೋಸಗಾರಿಕೆಯ ಕೃತ್ಯದ ಪರಿಣಾಮವೇ ಹಿಂದೂ-ಮುಸ್ಲಿಂ ದ್ವೇಷ). ಹಾಗೆ ಹೇಳುತ್ತಾ
ಅಂಬೇಡ್ಕರರು “ಮುಸ್ಲೀಮರು ಮತ್ತು ಅಸ್ಪøಶ್ಯರ ಸ್ನೇಹಿತ ಎಂದು ಯಾರು
ಪರಿಗಣಿಸಲ್ಪಟ್ಟಿದ್ದರೋ ಮತ್ತು ಅವರ ಏಳ್ಗೆಯಲ್ಲಿ ತಾನು ಚಾಂಪಿಯನ್ ಎಂದು ಯಾರು
ಹೇಳಿಕೊಂಡಿದ್ದರೋ ಅದೇ ವ್ಯಕ್ತಿ ಆ ಸಮುದಾಯಗಳ ಜನರ ಮೂಲ ಆಶಯಕ್ಕೆ
ವಿಶ್ವಾದ್ರೋಹವೆಸಗಿದರು. ಇದು ನಿಜಕ್ಕೂ ನನಗೆ ತೀವ್ರ ನೋವುಂಟುಮಾಡುವಂತಹದ್ದು. ಈ
ಸಂದರ್ಭಕ್ಕೆ ತಕ್ಕಂತೆ ಹಳೆಯದೊಂದು ಗಾದೆ ಇದೆ, ‘ಬಗಲ್ ಮೇ ಚೂರಿ, ಮೂಹ್ ಮೇ
ರಾಮ್’(ಬಾಯಲ್ಲಿ ದೇವರ ಹೇಸರು, ಕಂಕುಳಲ್ಲಿ ಕತ್ತಿ)’ ಈ ನಿಟ್ಟಿನಲ್ಲಿ ‘ಇಂತಹ
ವ್ಯಕ್ತಿಯನ್ನು’ ನಾವು ‘ಮಹಾತ್ಮ’ ಎಂದು ಕರೆಯುವುದಾದರೆ ಖಂಡಿತ by all means call
Gandhi a Mahatma. ನನ್ನ ಪ್ರಕಾರ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿಯಷ್ಟೆ”.
ಹೀಗೆ ಹೇಳುತ್ತಾ ಅಂಬೇಡ್ಕರರು Is Gandhi a Mahatma? ಎಂಬ ತಮ್ಮ ಆ ಲೇಖನ
ನಿಲ್ಲಿಸುತ್ತಾರೆ. ಹಾಗೆಯೇ “ಈ ಲೇಖನ ಬರೆದುಕೊಡಲು ಕೇಳಿದ ‘ಚಿತ್ರಾ’ ಎಂಬ ಪತ್ರಿಕೆಯ
ಸಂಪಾದಕರು ಕೇಳಿದ್ದಕ್ಕಿಂತ ಹೆಚ್ಚಿನದ್ದನ್ನೆ ನಾನು ನೀಡಿದ್ದೇನೆ” ಎಂದು ಅವರು
ತಿಳಿಸುತ್ತಾರೆ. ಅಲ್ಲದೆ Gandhi’s age can be called ‘Tamo Yug’ of
India(ಗಾಂಧಿಯವರ ಯುಗವನ್ನು ಭಾರತದ ಇತಿಹಾಸದ ಕತ್ತಲೆಯುಗ ಎಂದು ಕರೆಯಬಹುದು) ಎಂದೂ ಕೂಡ
ಅವರು ದನಿಸೇರಿಸುತ್ತಾರೆ. “ರಾಜಕಾರಣ ಇಂದು ತನ್ನ ಶೀಲ ಕಳೆದುಕೊಂಡು ಬೆತ್ತಲೆಯಾಗಿದೆ. ಈ
ದಿಸೆಯಲ್ಲಿ ಭಾರತದ ರಾಜಕಾರಣದಲ್ಲಿ ವ್ಯಾಪಾರೀಕರಣವನ್ನು introduce ಮಾಡಿದವರು ಮತ್ತು
ರಾಜಕಾರಣದಲ್ಲಿರಬಹುದಾದ ನೈತಿಕತೆಯನ್ನು ನಾಶಮಾಡಿದವರಲ್ಲಿ ಪ್ರಮುಖ ಜವಾಬ್ದಾರರು
ಗಾಂಧಿ” ಎನ್ನುತ್ತಾ, ಮಹಾತ್ಮರ ವಿರುದ್ಧದ ತನ್ನ ಈ ಹೋರಾಟ ಅಷ್ಟು ಸುಲಭದಲ್ಲ ಎಂಬುದನ್ನೂ
ಪ್ರಸ್ತಾಪಿಸುತ್ತಾ ಅಂಬೇಡ್ಕರರು “ಭಾರತದ ಜನಸಂಖ್ಯೆಯ ಬಹುತೇಕರು ಅನಾಗರೀಕ, ಅಶಿಕ್ಷಿತ
ಮತ್ತು ಅರಿವಿಲ್ಲದವರು. ಇದು ಜನತೆಯ ತಪ್ಪಲ್ಲ. ಸಮಾಜದ ಅನುಕೂಲ ಪಡೆದ ಕೆಲವು ಜನ
ಉದ್ದೇಶಪೂರ್ವಕವಾಗಿ ಜನಸಮೂಹವನ್ನು ತಿಳಿಗೇಡಿಗಳಂತೆ, ಅಶಿಕ್ಷಿತರಂತೆ ಇಟ್ಟಿದ್ದಾರೆ.
ಪರಿಣಾಮ, (ಇಂತಹವರ ನಡುವೆ) ಕೇವಲ ವೈಚಾರಿಕತೆ ಮತ್ತು ತಾರ್ಕಿಕ ಬಲಗಳಿಂದಷ್ಟೆ ಮಹಾತ್ಮರ
ವಿರುದ್ಧ ಹೋರಾಡುವುದು ದುಸ್ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಹೋರಾಟ ಬೌದ್ಧಿಕತೆ ಮತ್ತು
ಮಾನಸಿಕ ವಿಲಕ್ಷಣತೆ ಹಾಗೂ ಪವಾಡಗಳ ನಡುವಿನದ್ದು” ಎನ್ನುತ್ತಾರೆ. ಆ ಮೂಲಕ ಅಂಬೇಡ್ಕರರು
ತಾನು ಮಾಡುತ್ತಿರುವುದು ಎಂತಹ ಹೋರಾಟ ಎಂಬುದರ ಸೂಕ್ಷ್ಮತೆಯನ್ನು ತಿಳಿಸುತ್ತಾರೆ.
ಹೌದು, ಅಂಬೇಡ್ಕರರ ಈ ಹೋರಾಟ ಮತ್ತು ಅಂತಹ ಹೋರಾಟದ ಮಾದರಿಯ ಈ ಲೇಖನ ಗಾಂಧೀಜಿಯವರ ನೈಜ
ಮುಖವನ್ನು ಬಯಲಿಗೆಳೆಯುತ್ತದೆ. ಹಾಗಂತ ಅಂಬೇಡ್ಕರರೇನು ಗಾಂಧೀಜಿಯವರ ವೈಯಕ್ತಿಕ
ವಿಷಯಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಮಹಾತ್ಮ ಎನಿಸಿಕೊಳ್ಳುವವರೊಬ್ಬ ಮುಸ್ಲೀಮರು
ಮತ್ತು ಅಸ್ಪøಶ್ಯರು ಎಂಬ ಎರಡು ಬೃಹತ್ ಸಮುದಾಯಗಳನ್ನು ವಂಚಿಸಲು ನಡೆಸಿದ ಸಂಚು
ಅದಕ್ಕಾಗಿ ಅವರು ಹಿಡಿದ ಅಡ್ಡದಾರಿಗಳು... ಹೇಳಿದ ಬಹಿರಂಗ ಸುಳ್ಳುಗಳು... ಖಂಡಿತ Is
Gandhi a Mahatma? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವಂತೆ ಮಾಡುತ್ತವೆ.