Saturday, 24 October 2015

ಒಳ್ಳೆಯ ದಿನಗಳೆಂದರೆ ದಲಿತ ಶಿಶುಗಳ ಹತ್ಯೆಯ ದಿನಗಳೇ?

-ರಘೋತ್ತಮ ಹೊ.ಬ

    ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಘಟನೆಗಳನ್ನು ಆಕಸ್ಮಿಕ ಎನ್ನಲು ಸಾಧ್ಯವಿಲ್ಲ. ದನದ ಮಾಂಸ ಇಟ್ಟುಕೊಂಡಿದ್ದಾರೆ ಎಂಬ ಗುಮಾನಿಯ ಕಾರಣಕ್ಕೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಜಿಲ್ಲೆಯಲ್ಲಿನ ದಾದ್ರಿ ಗ್ರಾಮದ ಮಹಮ್ಮದ್ ಇಖ್ಲಾಕರ ಹತ್ಯೆ, ಅದೇ ಮಾದರಿಯಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಹರ್ಯಾಣದಲ್ಲಿ ನೂಮಾನ್ ಎಂಬುವವರ ಹತ್ಯೆ, ಇನ್ನು ಬೀಫ್ ಪಾರ್ಟಿ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಪಕ್ಷೇತರ ಶಾಸಕ ಶೇಖ್ ಅಬ್ದುಲ್ ರಷೀದ್ ಮೇಲೆ ಹಲ್ಲೆ, ದೇವಸ್ಥಾನ ಪ್ರವೇಶಿಸಿದನು ಎಂಬ ಕಾರಣಕ್ಕೆ ದಲಿತನೋರ್ವನ ಸಜೀವ ದಹನ, ಪಾಕಿಸ್ತಾನಿ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿಯವರ ಪುಸ್ತಕ ಬಿಡುಗಡೆಯ ವೇಳೆ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿದ ಪ್ರಕರಣ, ಪಾಕ್ ಗಾಯಕ ಗುಲಾಂ ಆಲಿ ಸಂಗೀತ ಕಚೇರಿಗೆ ವಿರೋಧ, ಪಾಕ್ ಜತೆ ಕ್ರಿಕೆಟ್ ಸಂಬಂಧಕ್ಕೆ ಮಸಿ, ಬಹಿರಂಗಗೊಂಡ ಮೋಹನ್ ಭಾಗವತರ ಮೀಸಲಾತಿ ವಿರೋಧಿ ಧೋರಣೆ ಮತ್ತು ಈಗಿನ ಹರ್ಯಾಣದಲ್ಲಿನ ದಲಿತ ಶಿಶುಗಳ ಸಜೀವ ದಹನ ಪ್ರಕರಣ...
  
      ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೇಳುತ್ತಾ ಹೋದರೆ ಮನಸ್ಸು ಎಲ್ಲಿ ಮುರುಟಿಹೋಗುತ್ತದೆಯೋ ಎಂಬ ಆತಂಕ ಅಥವಾ ಈ ಎಲ್ಲ ಘಟನೆಗಳ ಪಟ್ಟಿ ನೋಡಿ ಸಾವಿನ ವ್ಯಾಪಾರಿ ವಂಶಸ್ಥರು ತಮ್ಮ ಉಪಟಳ ಇನ್ನಷ್ಟು ಹೆಚ್ಚುಮಾಡುವರು ಎಂಬ ಭಯ. ಖಂಡಿತ, ದೇಶ ಇಂದು ಅಸಹಿಷ್ಣುತೆಯಿಂದ ಬೇಯುತ್ತಿದೆ. ಅಸಹನೆ ತಾಂಡವವಾಡುತ್ತಿದೆ. ಮುಖ್ಯವಾಗಿ ಅದರ ಬಲಿಪಶುಗಳು ಮುಸ್ಲೀಮರು ಮತ್ತು ದಲಿತರು ಎಂಬುದಿಲ್ಲಿ ಗಮನಿಸಬೇಕಾದ ಅಂಶ. ನಿಜ, ಕಳೆದ 10 ವರ್ಷಗಳ ಹಿಂದೆ ಗುಜರಾತಿನ ಗೋಧ್ರಾದಲ್ಲಿ ಟ್ರೈನೊಂದು ಹೊತ್ತಿ ಉರಿದು ಕರಸೇವಕರು ಬಲಿಯಾದಾಗ, ಪ್ರತಿಹಿಂಸೆಯಾಗಿ ಸಹಸ್ರಾರು ಮುಸ್ಲೀಮರ ಹತ್ಯೆ ನಡೆದಾಗ, ನಕಲಿ ಎನ್‍ಕೌಂಟರ್ ಮೂಲಕ ಸೋಹ್ರಾಬುದ್ದೀನ್ ಶೇಖ್ ಹತ್ಯೆಯಾದಾಗ, ಅಲ್ಲಿಯ ಆಗಿನ ಗೃಹ ಸಚಿವ ಅಮಿತ್‍ಶಾ (ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಜೈಲುಪಾಲಾದಾಗ ದೇಶದ ಜನತೆಗೆ ಅವ್ಯಾವುದೂ ಮುಖ್ಯ ಸುದ್ದಿ ಎನಿಸಲೇ ಇಲ್ಲ. ಕಾರಣ ಗುಜರಾತ್ ಲಾಗಾಯ್ತಿನಿಂದಲೂ ಅದು ಅಸಹನೆ, ಅಸಮಾನತೆ ಪ್ರತಿಪಾದಿಸುವ ನಾಡು, 80ರ ದಶಕದಲ್ಲಿ ಅಲ್ಲಿ ನಡೆದಿರುವ ವಿಚ್ಛಿದ್ರಕಾರಿ ಮೀಸಲಾತಿ ವಿರೋಧಿ ಗಲಭೆ, ದಲಿತರ ನರಮೇಧ, ಅದರ ಗೋಧ್ರಾ ಸಂಬಂಧಿ ಘಟನೆಗಳನ್ನು ಸಹಜವೆಂಬಂತೆ ಪರಿಗಣಿಸಲು ಪ್ರೇರೇಪಣೆಯಾದದ್ದಂತೂ ನಿಜ. ಆದರೆ ‘ಅದೇ ಮಾದರಿ’ ದೆಹಲಿಯತ್ತ ಅದೂ ‘ಒಳ್ಳೆಯ ದಿನಗಳ’ ಭರವಸೆಯೊಂದಿಗೆ ಪಯಣ ಬೆಳೆಸಿತೆಂದರೆ ಬಹುಶಃ ಆ ‘ಒಳ್ಳೆಯು ದಿನಗಳು’ ಈ ಪರಿ ಕರಾಳ ರೂಪದಲ್ಲಿರುತ್ತದೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಅದು ನಡೆದುಹೋಗಿದೆ. ಕುರುಡು ಕೋಮುವಾದ ಕಾಲಿಗೆ ಬಿದ್ದವರ ‘ಅಪರಾಧಿಗಳೆಂಬಂತೆ’ ತುಳಿಯುತ್ತಾ ಸಾಗಿದೆ.

       ಅಪರಾಧಿಗಳು, ಯಾಕೆಂದರೆ ಉತ್ತರಪ್ರದೇಶದ ದಾದ್ರಿಯ ಬಡ ಮುಸ್ಲಿಂ ಕುಟುಂಬಕ್ಕೆ ತಾನು ಫ್ರಿಜ್‍ನಲ್ಲಿ ಮಾಂಸ ಇಟ್ಟುಕೊಳ್ಳುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಸಜೀವ ದಹನಕ್ಕೊಳಗಾದ ದಲಿತನಿಗೆ ತಾನು ದೇವಸ್ಥಾನ ಪ್ರವೇಶಿಸುವುದು ‘ಅಪರಾಧ’ ಎಂದು ಗೊತ್ತಿರಲಿಲ್ಲ! ಹಾಗೆಯೇ ಗಾಢ ನಿದ್ರೆಯಲ್ಲಿ ಮಲಗಿದ್ದಾಗ ಬೆಂಕಿ ಹಚ್ಚಿ ಸಾಯಿಸಲ್ಪಟ್ಟ ಹರ್ಯಾಣದ ಫರೀದಾಬಾದ್ ಜಿಲ್ಲೆಯ ಸೋನ್‍ಫೆಡ್ ಗ್ರಾಮದ ಹಸುಕಂದಗಳಾದ ವೈಭವ್ ಮತ್ತು ದಿವ್ಯ ಇಬ್ಬರಿಗೂ ತಾವು ಹುಟ್ಟಿದ್ದು ದಲಿತ ಕುಟುಂಬದಲ್ಲಿ ಮತ್ತು ಅದು ‘ಅಪರಾಧ’ ಎಂಬುವ್ಯಾವುದೂ ಗೊತ್ತಿರಲಿಕ್ಕಿಲ್ಲ. ಒಟ್ಟಾರೆ ಮೋದಿಯ ನಾಡಲ್ಲಿ ಯಾವುದು ಅಪರಾಧ, ಯಾವುದು ನಿರಪರಾಧ ಎಂಬುದಕ್ಕೆ ಹೊಸ ನೀತಿಸಂಹಿತೆಯನ್ನೇ ಹೊರಡಿಸಬೇಕಿದೆ.
ಅಲ್ಲೊಬ್ಬ ಹೇಳುತ್ತಾನೆ ‘ದನ ತಿನ್ನುವ ಮುಸಲ್ಮಾನರು ಪಾಕಿಸ್ಥಾನಕ್ಕೆ ಹೋಗಿ’, ಹಾಗಿದ್ದರೆ ದನ ತಿನ್ನುವ ದಲಿತರೆಲ್ಲಿಗೆ ಹೋಗಬೇಕು? ಅಸಹನೆಯ ಅತಿರೇಕ ಎನ್ನುವುದು ಇದನ್ನೇ. ಅಂದಹಾಗೆ ಈ ಎಲ್ಲ ಘಟನೆಗಳನ್ನು ಬಿಜೆಪಿಯ ಅಧ್ಯಕ್ಷ ಅಮಿತ್‍ಶಾ ಸಂಬಂಧಪಟ್ಟ ರಾಜ್ಯಗಳ ಹೊಣೆಗೆ ಕಟ್ಟಿದ್ದಾರೆ. ಆದರೆ ವಾಸ್ತವ? ಈ ಘಟನೆಗಳೆಲ್ಲದ್ದರ ಹಿಂದಿರುವ ‘ಸಾಮಾನ್ಯ’ ಕೈಗಳು, ಮನಸ್ಸುಗಳು ಮತ್ತು ಚಿಂತನೆಗಳು? ಎಲ್ಲವೂ ಒಂದೇ ಮೂಲದವು. ಸಂಶೋಧಕ ಕಲಬುರ್ಗಿಯವರ ಹತ್ಯೆಯನ್ನು ಇಲ್ಲಿ ಉಲ್ಲೇಖಿಸುವುದಾದರೆ, ಪ್ರಾರಂಭದಲ್ಲಿ ಎಲ್ಲರೂ ಬಲಪಂಥೀಯ ಸಂಘಟನೆಗಳತ್ತ ಬೊಟ್ಟುಮಾಡಿದಾಗ ಆಕ್ಷೇಪ ಎತ್ತಿದ ಪಂಥೀಯರು ‘ಸನಾತನ ಸಂಸ್ಥೆ’ ಎಂದು ಸ್ಪಷ್ಟ ಸುದ್ದಿ ಹೊರಬಿದ್ದಾಗ ಸಂಪೂರ್ಣ ಸ್ತಬ್ಧರಾದರು. ಒಟ್ಟಾರೆ ಒಂದರ ನಂತರ ಮತ್ತೊಂದು ಮರುಕಳೀಸುತ್ತಲೇ ಇವೆ ಪ್ರಕರಣಗಳು ಶಾಂತಿಯ ದಿವ್ಯ ರಾಷ್ಟ್ರಕ್ಕೆ ‘ಮಸಿ ಬಳಿಯಲು’.
    
     ಈ ನಡುವೆ ಮಾತು ಮಾತಿಗೂ ಮನದ ಮಾತು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲ ಅಸಹನೆಯ ಘಟನೆಗಳ ಬಗ್ಗೆ ಸೊಲ್ಲೆತ್ತುತ್ತಲೇ ಇಲ್ಲ. ಅದೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಚಾಟಿ ಬೀಸಿದ ನಂತರ ಪ್ರಧಾನಿ ‘ಹಿಂದೂ-ಮುಸ್ಲಿಂ ಒಗ್ಗಟ್ಟಿನ ಬಗ್ಗೆ’  ಭಾಷಣ ಮಾಡಿದರು! ಇನ್ನು ಬಿಹಾರದ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದಾಕ್ಷಣ ಮೀಸಲಾತಿ ಪರ ನಾವಿದ್ದೇವೆ ಎನ್ನುತ್ತಾ ದೂರದ ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದರು! ವಾಸ್ತವವೆಂದರೆ ಇಡೀ ದೇಶದ ಬದುಕಿಂದು ಅಸ್ತವ್ಯಸ್ತವಾಗಿದೆ. ದಿನಕ್ಕೊಂದು ವಸ್ತುಗಳ ಬೆಲೆ ಏರಿ ಜನ ಯಾತನೆ ಪಡುತ್ತಿದ್ದಾರೆ. ಪ್ರೋಟೀನ್ ಮೂಲವಾದ ದನದ ಮಾಂಸ ತಿನ್ನಲು ತಡೆಯೊಡ್ಡುವ ಆಡಳಿತದ ಮಂದಿ, ಹೋಗಲೀ ಸಸ್ಯಾಹಾರದಲ್ಲಾದರೂ ಪ್ರೋಟೀನ್ ಪಡೆಯೋಣವೆಂದರೆ ಪ್ರೋಟೀನ್ ಮೂಲದ ಬಹುಮುಖ್ಯ ಕಾಳು ತೊಗರಿ ಬೇಳೆಯ ಬೆಲೆ ಗಗನಕ್ಕೇರಿದೆ! ಹಾಗೆಯೇ ಕಪ್ಪುಹಣ ತಂದು ಮೋದಿ ಲಕ್ಷ ಕೊಡುವರೆಂದು ಕಾದಿದ್ದ ಮಂದಿ ಲಕ್ಷವಿರಲಿ ದಿನನಿತ್ಯದ ಜೀವನಕ್ಕೂ ಪರದಾಡುವಂತಾಗಿದೆ. ಇನ್ನು ರೈತರ ಆತ್ಮಹತ್ಯೆಯ ಕತೆಯಂತೂ ಹೇಳತೀರದು. ಈ ನಡುವೆ ಯದ್ವಾ ತದ್ವಾ ಏರುವ ಪೆಟ್ರೋಲ್, ಡೀಸೆಲ್ ಬೆಲೆಗಳು? ಹದಗೆಟ್ಟಿರುವ ಶಾಂತಿ-ಸುವ್ಯವಸ್ಥೆ? ಯಾಕೆಂದರೆ ಪೊಲೀಸ್ ವ್ಯವಸ್ಥೆ ಕೇಂದ್ರದ ನೇರ ನಿಯಂತ್ರಣದಲ್ಲಿರುವ ರಾಜದಾನಿ ದೆಹಲಿಯಲ್ಲಿ ಮಕ್ಕಳ ಮೇಲೆ ಸರಣಿ ಅತ್ಯಾಚಾರ ನಡೆಯುತ್ತಿದೆ. ಇನ್ನು ಮಧ್ಯಪ್ರದೇಶ ವೃತ್ತಿಪರ ಕೋರ್ಸುಗಳ ಪರೀಕ್ಷಾ(ವ್ಯಾಪಂ) ಹಗರಣ? ಈಗಾಗಲೇ ಘಟನೆ ಸಂಬಂಧ 40 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದರೆ ಹಗರಣದ ಗಂಭೀರತೆ ಏನೆಂಬುದು ಎಂಥವರಿಗೂ ಅರ್ಥವಾಗುತ್ತದೆ. ಅಂದಹಾಗೆ ಮಧ್ಯಪ್ರದೇಶ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿರುವ ಪ್ರಮುಖ ರಾಜ್ಯ ಎಂಬುದಿಲ್ಲಿ ಗಮನಾರ್ಹ.
   
     ದೇಶವಿಂದು ದಿಕ್ಕೆಟ್ಟು ನಿಂತಿದೆ. ‘ಒಳ್ಳೆಯ ದಿನಗಳು’ ಬಾರದಿದ್ದರೂ ಪರವಾಗಿಲ್ಲ ‘ಕೆಟ್ಟದಿನಗಳೇಕೆ?’ ಎಂದು ತನ್ನನ್ನು ತಾನು ಪ್ರಶ್ನಿಸುವಂತಾಗಿದೆ. ಗುಜರಾತ್ ಮಾದರಿ ಇದೇನಾ ಎಂದು ದೇಶದ ಜನ ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಹ್ಞಾಂ, ಗುಜರಾತ್ ಮಾದರಿ ಅದೆಷ್ಟು ಮೇರೆ ಮೀರಿದ್ದೆಂದರೆ, ಸಂವಿಧಾನ ವಿರೋದಿ ಎಂದರೆ ಹಾರ್ದಿಕ್ ಪಟೇಲ್ ಎಂಬ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ತನ್ನ ಸಮುದಾಯದ ಹೋರಾಟಗಾರರಿಗೆ ಕರೆಕೊಡುವುದೇನೆಂದರೆ “ರಾಜ್ಯ ಪೊಲೀಸರನ್ನೇ ಹತ್ಯೆ ಮಾಡಿ” ಎಂದು! ಈ ಹಿನ್ನೆಲೆಯಲ್ಲಿ ಈಗೀಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ ‘ಒಳ್ಳೆಯ ದಿನಗಳು’ ದೌರ್ಜನ್ಯಕೋರರಿಗೆ, ದಬ್ಬಾಳಿಕೆ ಮಾಡುವವರಿಗೆ, ಅಸಮಾನತೆ ಎಸಗುವವರಿಗೆ, ಸಹಿಷ್ಣುತೆ ಸಹಿಸದವರಿಗೆ. ‘ಕೆಟ್ಟ ದಿನಗಳು’ ದೌರ್ಜನ್ಯದಿಂದ ನೊಂದವರಿಗೆ, ದಬ್ಬಾಳಿಕೆ ಅನುಭವಿಸುತ್ತಿರುವವರಿಗೆ, ಸಮಾನತೆ ಬೇಡುವವರಿಗೆ, ಸಹಿಷ್ಣುತೆ ಬೇಕೆನ್ನುವವರಿಗೆ. ಇದರ ನಿಜದ ಅರ್ಥ ತಾರತಮ್ಯದ ಆಡಳಿತ. ಸದ್ಯ ದೇಶವಿಂದು ಅಂತಹ ತಾರತಮ್ಯದ ಕಪಿಮುಷ್ಟಿಯಲ್ಲಿದೆಯಲ್ಲ ಎಂಬುದೇ ದುರಂತ.